ಯೆಹೋವನು, ‘ಕ್ಷಮಿಸಲು ಸಿದ್ಧನಾಗಿರುವ’ ದೇವರು
“ಯೆಹೋವನೇ ನೀನು ಒಳ್ಳೆಯವನೂ ಕ್ಷಮಿಸಲು ಸಿದ್ಧನೂ ಆಗಿದ್ದೀ.”—ಕೀರ್ತನೆ 86:5, NW.
1. ರಾಜನಾದ ದಾವೀದನು ಯಾವ ಭಾರವಾದ ಹೊರೆಯನ್ನು ಒಯ್ದನು, ಮತ್ತು ಅವನು ತನ್ನ ಕಳವಳಗೊಂಡ ಹೃದಯಕ್ಕೆ ಸಾಂತ್ವನವನ್ನು ಪಡೆದುಕೊಂಡದ್ದು ಹೇಗೆ?
ಅಪರಾಧಿಭಾವದ ಮನಸ್ಸಾಕ್ಷಿಯೊಂದರ ಹೊರೆಯು ಎಷ್ಟು ಭಾರವಾಗಿರಬಲ್ಲದೆಂಬುದು ಪ್ರಾಚೀನ ಇಸ್ರಾಯೇಲಿನ ರಾಜ ದಾವೀದನಿಗೆ ತಿಳಿದಿತ್ತು. ಅವನು ಬರೆದುದು: “ನನ್ನ ಅಪರಾಧಗಳು ನನ್ನನ್ನು ಮುಣುಗಿಸಿಬಿಟ್ಟವೆ; ಅವು ಹೊರಲಾರದಷ್ಟು ಭಾರವಾದ ಹೊರೆಯಂತೆ ನನ್ನನ್ನು ಅದುಮಿಬಿಟ್ಟವೆ. ನನಗೆ ಜೋಮುಹಿಡಿದಂತಿದೆ; ಬಹಳ ಮನಗುಂದಿದವನಾದೆನು. ಹೃದಯದ ಸಂಕಟದ ದೆಸೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ.” (ಕೀರ್ತನೆ 38:4, 8) ಆದಾಗಲೂ, ದಾವೀದನು ತನ್ನ ಕಳವಳಗೊಂಡ ಹೃದಯಕ್ಕಾಗಿ ಸಾಂತ್ವನವನ್ನು ಕಂಡುಕೊಂಡನು. ಯೆಹೋವನು ಪಾಪವನ್ನು ದ್ವೇಷಿಸುತ್ತಾನಾದರೂ, ಆತನು ಪಾಪಿಯನ್ನು—ಅವನು ನಿಜವಾಗಿಯೂ ಪಶ್ಚಾತ್ತಾಪಿಯಾಗಿದ್ದು, ತನ್ನ ಪಾಪಪೂರ್ಣ ಮಾರ್ಗಕ್ರಮವನ್ನು ತಿರಸ್ಕರಿಸುವಲ್ಲಿ—ದ್ವೇಷಿಸುವುದಿಲ್ಲವೆಂಬುದು ಅವನಿಗೆ ತಿಳಿದಿತ್ತು. (ಕೀರ್ತನೆ 32:5; 103:3) ಪಶ್ಚಾತ್ತಾಪಿಗಳಿಗೆ ಕರುಣೆಯನ್ನು ತೋರಿಸುವ ವಿಷಯದಲ್ಲಿ ಯೆಹೋವನ ಸಿದ್ಧಮನಸ್ಸಿನ ಕುರಿತಾಗಿ ಪೂರ್ಣ ನಂಬಿಕೆಯೊಂದಿಗೆ ದಾವೀದನು ಹೇಳಿದ್ದು: “ಯೆಹೋವನೇ ನೀನು ಒಳ್ಳೆಯವನೂ ಕ್ಷಮಿಸಲು ಸಿದ್ಧನೂ ಆಗಿದ್ದಿ.”—ಕೀರ್ತನೆ 86:5, NW.
2, 3. (ಎ) ನಾವು ಪಾಪಮಾಡುವಾಗ, ಫಲಸ್ವರೂಪವಾಗಿ ನಾವು ಯಾವ ಹೊರೆಯನ್ನು ಒಯ್ಯಬಹುದು, ಮತ್ತು ಇದು ಏಕೆ ಪ್ರಯೋಜನಕರವಾದದ್ದಾಗಿದೆ? (ಬಿ) ಅಪರಾಧಿಭಾವದಿಂದ “ಭಾವಪರವಶ”ರಾಗುವುದರಲ್ಲಿ ಯಾವ ಅಪಾಯವಿದೆ? (ಸಿ) ಕ್ಷಮಿಸಲಿಕ್ಕಾಗಿ ಯೆಹೋವನಿಗಿರುವ ಸಿದ್ಧಮನಸ್ಸಿನ ಕುರಿತಾಗಿ ಬೈಬಲ್ ನಮಗೆ ಯಾವ ಆಶ್ವಾಸನೆಯನ್ನು ಕೊಡುತ್ತದೆ?
2 ನಾವು ಪಾಪಮಾಡುವಾಗ, ಅದರ ಫಲಿತಾಂಶವಾಗಿ ನಾವು ಕೂಡ ಒಂದು ಯಾತನಾಭರಿತ ಮನಸ್ಸಾಕ್ಷಿಯ ಜಜ್ಜುವ ಹೊರೆಯನ್ನು ಹೊತ್ತುಕೊಳ್ಳಬಹುದು. ತೀಕ್ಷ್ಣ ಪರಿತಾಪದ ಈ ಅನಿಸಿಕೆಯು ಸಹಜವಾಗಿದೆ, ಪ್ರಯೋಜನಕರವೂ ಹೌದು. ನಾವು ನಮ್ಮ ತಪ್ಪುಗಳನ್ನು ತಿದ್ದಲು ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ಅದು ನಮ್ಮನ್ನು ಪ್ರಚೋದಿಸಬಲ್ಲದು. ಕೆಲವು ಕ್ರೈಸ್ತರಾದರೊ, ಅಪರಾಧಿಭಾವದಿಂದ ಭಾವಪರವಶರಾಗಿದ್ದಾರೆ. ತಾವು ಎಷ್ಟೇ ಪಶ್ಚಾತ್ತಾಪಪಡಲಿ, ದೇವರು ತಮ್ಮನ್ನು ಪೂರ್ಣವಾಗಿ ಕ್ಷಮಿಸದಿರುವನೆಂದು ಅವರ ಆತ್ಮದೂಷಿತ ಹೃದಯವು ಒತ್ತಿಹೇಳಬಹುದು. ಒಬ್ಬ ಸಹೋದರಿಯು, ತಾನು ಮಾಡಿದ ಒಂದು ತಪ್ಪನ್ನು ನೆನಪಿಸಿಕೊಳ್ಳುತ್ತಾ, “ಯೆಹೋವನು ನಿಮ್ಮನ್ನು ಇನ್ನು ಮುಂದೆ ಪ್ರೀತಿಸದಿರಬಹುದು ಎಂಬ ಯೋಚನೆಯು ಒಂದು ಘೋರ ಅನಿಸಿಕೆಯಾಗಿದೆ” ಎಂದು ಹೇಳಿದಳು. ಅವಳು ಪಶ್ಚಾತ್ತಾಪಪಟ್ಟು, ಸಭಾ ಹಿರಿಯರಿಂದ ಸಹಾಯಕಾರಿ ಸಲಹೆಯನ್ನು ಅಂಗೀಕರಿಸಿದ ಬಳಿಕವೂ, ದೇವರ ಕ್ಷಮೆಗೆ ಅಯೋಗ್ಯಳಾಗಿರುವ ಅನಿಸಿಕೆ ಅವಳಿಗಿತ್ತು. ಅವಳು ವಿವರಿಸುವುದು: “ನಾನು ಯೆಹೋವನ ಹತ್ತಿರ ಆತನ ಕ್ಷಮೆಗಾಗಿ ಬೇಡದೆ ಒಂದು ದಿನವೂ ಕಳೆಯುವುದಿಲ್ಲ.” ನಾವು ಅಪರಾಧಿಭಾವದಿಂದ ‘ಮುಳುಗಿಹೋಗು’ವಲ್ಲಿ, ನಾವು ಯೆಹೋವನಿಗೆ ಸೇವೆಸಲ್ಲಿಸಲು ಯೋಗ್ಯರಲ್ಲವೆಂದು ಭಾವಿಸುವಂತೆ, ನಾವು ಆ ಪ್ರಯತ್ನವನ್ನು ಬಿಡುವಂತೆ ಮಾಡಲು ಸೈತಾನನು ಪ್ರಯತ್ನಿಸಬಹುದು.—2 ಕೊರಿಂಥ 2:5-7, 11.
3 ಆದರೆ ನಿಶ್ಚಯವಾಗಿಯೂ ಯೆಹೋವನು ಸಂಗತಿಗಳನ್ನು ಆ ವಿಧದಲ್ಲಿ ವೀಕ್ಷಿಸುವುದಿಲ್ಲ! ನಾವು ಪ್ರಾಮಾಣಿಕವಾದ ಹೃತ್ಪೂರ್ವಕ ಪಶ್ಚಾತ್ತಾಪವನ್ನು ತೋರಿಸುವಾಗ, ಯೆಹೋವನು ಕ್ಷಮಿಸಲು ಬಯಸುತ್ತಾನೆ, ಅದಕ್ಕಾಗಿ ಸಿದ್ಧನೂ ಆಗಿದ್ದಾನೆಂದು ಆತನ ವಾಕ್ಯವು ನಮಗೆ ಆಶ್ವಾಸನೆ ನೀಡುತ್ತದೆ. (ಜ್ಞಾನೋಕ್ತಿ 28:13) ಆದುದರಿಂದ, ದೇವರ ಕ್ಷಮೆಯು ನಿಮಗೆ ಎಂದಾದರೂ ಅಪ್ರಾಪ್ಯವೆಂದು ತೋರಿಬಂದಿದ್ದಲ್ಲಿ, ಪ್ರಾಯಶಃ ಅಗತ್ಯವಿರುವ ಸಂಗತಿಯೇನೆಂದರೆ, ಏಕೆ ಮತ್ತು ಹೇಗೆ ಆತನು ಕ್ಷಮಿಸುತ್ತಾನೆಂಬುದರ ಕುರಿತಾಗಿ ಹೆಚ್ಚು ಉತ್ತಮವಾದ ತಿಳಿವಳಿಕೆಯೇ.
ಯೆಹೋವನು “ಕ್ಷಮಿಸಲು ಸಿದ್ಧ”ನಾಗಿರುವುದೇಕೆ?
4. ನಮ್ಮ ಪ್ರಕೃತಿಯ ಕುರಿತಾಗಿ ಯೆಹೋವನು ಏನನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾನೆ, ಮತ್ತು ಇದು ಆತನು ನಮ್ಮನ್ನು ಉಪಚರಿಸುವ ವಿಧವನ್ನು ಹೇಗೆ ಪ್ರಭಾವಿಸುತ್ತದೆ?
4 ನಾವು ಓದುವುದು: “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ. ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ.” ಯೆಹೋವನು ಕರುಣೆಯನ್ನು ತೋರಿಸುವ ಪ್ರವೃತ್ತಿಯುಳ್ಳವನಾಗಿರುವುದೇಕೆ? ಮುಂದಿನ ವಚನವು ಉತ್ತರಿಸುವುದು: “ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:12-14) ಹೌದು, ನಾವು ಧೂಳಿನ ಜೀವಿಗಳಾಗಿದ್ದೇವೆ, ಅಪರಿಪೂರ್ಣತೆಯ ಪರಿಣಾಮವಾಗಿ ದೌರ್ಬಲ್ಯಗಳು ಅಥವಾ ಬಲಹೀನತೆಗಳನ್ನು ಹೊಂದಿದ್ದೇವೆಂಬುದನ್ನು ಯೆಹೋವನು ಮರೆತುಬಿಡುವುದಿಲ್ಲ. ಆತನು “ನಮ್ಮ ಪ್ರಕೃತಿಯನ್ನು” ಬಲ್ಲನು ಎಂಬ ಅಭಿವ್ಯಕ್ತಿಯು, ಬೈಬಲು ಯೆಹೋವನನ್ನು ಒಬ್ಬ ಕುಂಬಾರನಿಗೆ ಮತ್ತು ನಮ್ಮನ್ನು ಅವನು ತಯಾರಿಸುವ ಪಾತ್ರೆಗಳಿಗೆ ಹೋಲಿಸುವುದನ್ನು ಜ್ಞಾಪಕಹುಟ್ಟಿಸುತ್ತದೆ.a (ಯೆರೆಮೀಯ 18:2-6) ಒಬ್ಬ ಕುಂಬಾರನು ತನ್ನ ಮಣ್ಣಿನ ಪಾತ್ರೆಗಳ ಸ್ವರೂಪವನ್ನು ಯಾವಾಗಲೂ ಗಮನದಲ್ಲಿಟ್ಟುಕೊಂಡವನಾಗಿ, ಅವುಗಳನ್ನು ದೃಢವಾಗಿ ಆದರೂ ಸೂಕ್ಷ್ಮವಾಗಿ ನಿರ್ವಹಿಸುತ್ತಾನೆ. ಅಂತೆಯೇ, ಮಹಾ ಕುಂಬಾರನಾದ ಯೆಹೋವನು, ನಮ್ಮ ಪಾಪಪೂರ್ಣ ಪ್ರಕೃತಿಯ ದೌರ್ಬಲ್ಯಕ್ಕನುಸಾರ, ನಮ್ಮೊಂದಿಗಿನ ತನ್ನ ವ್ಯವಹಾರಗಳನ್ನು ಮೆಲುಪುಮಾಡುತ್ತಾನೆ.—2 ಕೊರಿಂಥ 4:7ನ್ನು ಹೋಲಿಸಿರಿ.
5. ರೋಮಾಪುರ ಪುಸ್ತಕವು, ನಮ್ಮ ಪತಿತ ಶರೀರದ ಮೇಲಿನ ಪಾಪದ ಪ್ರಭಾವಶಾಲಿ ಬಿಗಿಹಿಡಿತವನ್ನು ಹೇಗೆ ವರ್ಣಿಸುತ್ತದೆ?
5 ಪಾಪವು ಎಷ್ಟು ಪ್ರಬಲವಾಗಿದೆಯೆಂಬುದನ್ನು ಯೆಹೋವನು ಅರ್ಥಮಾಡಿಕೊಳ್ಳುತ್ತಾನೆ. ಮನುಷ್ಯನನ್ನು ತನ್ನ ಮಾರಕ ಬಿಗಿಹಿಡಿತದಲ್ಲಿರಿಸಿಕೊಂಡಿರುವ ಒಂದು ಪ್ರಬಲ ಶಕ್ತಿಯಾಗಿ ಶಾಸ್ತ್ರಗಳು ಪಾಪವನ್ನು ವರ್ಣಿಸುತ್ತವೆ. ಪಾಪದ ಹಿಡಿತವು ಎಷ್ಟು ಬಲವಾದದ್ದಾಗಿದೆ? ರೋಮಾಪುರ ಪುಸ್ತಕದಲ್ಲಿ, ಪ್ರೇರಿತ ಅಪೊಸ್ತಲ ಪೌಲನು ಇದನ್ನು ಕಣ್ಣಿಗೆ ಕಟ್ಟುವಂತಹ ರೀತಿಯ ಪದಗಳಲ್ಲಿ ವರ್ಣಿಸುತ್ತಾನೆ: ಸೈನಿಕರು ತಮ್ಮ ಸೇನಾಧಿಪತಿಯ ಅಧೀನದಲ್ಲಿರುವಂತೆ ನಾವು “ಪಾಪಕ್ಕೆ ಒಳಬಿದ್ದ”ವರಾಗಿದ್ದೇವೆ (ರೋಮಾಪುರ 3:9); ಅದು ಮಾನವಕುಲದ ಮೇಲೆ ಒಬ್ಬ ರಾಜನೋಪಾದಿ ‘ಅಧಿಕಾರವನ್ನು ನಡಿಸಿದೆ’ (ರೋಮಾಪುರ 5:21); ಅದು ನಮ್ಮೊಳಗೆ “ನೆಲೆಗೊಂಡಿ”ದೆ ಅಥವಾ ‘ವಾಸಿಸುತ್ತಿದೆ’ (NW) (ರೋಮಾಪುರ 7:17, 20); ಅದರ “ನಿಯಮ”ವು ಸತತವಾಗಿ ನಮ್ಮಲ್ಲಿ ಕಾರ್ಯವೆಸಗುತ್ತದೆ, ಕಾರ್ಯತಃ ನಮ್ಮ ಮಾರ್ಗಕ್ರಮವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. (ರೋಮಾಪುರ 7:23, 25) ನಮ್ಮ ಪತಿತ ಶರೀರದ ಮೇಲಿರುವ ಪಾಪದ ಪ್ರಬಲವಾದ ಹಿಡಿತವನ್ನು ನಿರೋಧಿಸಲು ನಮಗೆಷ್ಟು ಕಷ್ಟಕರವಾದ ಹೋರಾಟವಿದೆ!—ರೋಮಾಪುರ 7:21, 24.
6. ಒಂದು ಪಶ್ಚಾತ್ತಾಪಸೂಚಕ ಹೃದಯದಿಂದ ತನ್ನ ಕರುಣೆಯನ್ನು ಕೋರುವವರನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ?
6 ಹೀಗಿರುವುದರಿಂದ, ನಮ್ಮ ಹೃದಯಗಳು ಆತನಿಗೆ ಎಷ್ಟನ್ನೇ ಕೊಡಲು ಬಯಸಬಹುದಾದರೂ, ಪರಿಪೂರ್ಣ ವಿಧೇಯತೆಯನ್ನು ತೋರಿಸುವುದು ನಮ್ಮಿಂದ ಸಾಧ್ಯವಿಲ್ಲವೆಂದು ನಮ್ಮ ಕರುಣಾಮಯಿ ದೇವರಿಗೆ ತಿಳಿದಿದೆ. (1 ಅರಸುಗಳು 8:46) ಒಂದು ಪಶ್ಚಾತ್ತಾಪಸೂಚಕ ಹೃದಯದೊಂದಿಗೆ ನಾವು ಆತನ ಪಿತೃಸದೃಶ ಕರುಣೆಯನ್ನು ಕೋರುವಾಗ, ತಾನು ಕ್ಷಮೆಯನ್ನು ನೀಡುವೆನೆಂದು ಆತನು ನಮಗೆ ಪ್ರೀತಿಪೂರ್ವಕವಾಗಿ ಆಶ್ವಾಸನೆ ನೀಡುತ್ತಾನೆ. ಕೀರ್ತನೆಗಾರನಾದ ದಾವೀದನು ಹೇಳಿದ್ದು: “ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟಯಜ್ಞ; ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.” (ಕೀರ್ತನೆ 51:17) ಅಪರಾಧಿಭಾವದ ಹೊರೆಯಿಂದ ಜಜ್ಜಿಹೋದ ಹೃದಯವನ್ನು ಯೆಹೋವನು ಎಂದೂ ತಿರಸ್ಕರಿಸನು. ಕ್ಷಮಿಸಲಿಕ್ಕಾಗಿರುವ ಯೆಹೋವನ ಸಿದ್ಧಮನಸ್ಸನ್ನು ಅದು ಎಷ್ಟು ಸುಂದರವಾಗಿ ವರ್ಣಿಸುತ್ತದೆ!
7. ನಾವು ದೇವರ ಕರುಣೆಯನ್ನು ಮಾಮೂಲಾಗಿ ಭಾವಿಸಲಾರೆವೇಕೆ?
7 ಆದರೆ, ನಾವು ನಮ್ಮ ಪಾಪಪೂರ್ಣ ಪ್ರವೃತ್ತಿಯನ್ನು ಪಾಪಕ್ಕಾಗಿ ಒಂದು ನೆವವಾಗಿ ಉಪಯೋಗಿಸುತ್ತಾ, ದೇವರ ಕರುಣೆಯನ್ನು ಮಾಮೂಲಾಗಿ ಭಾವಿಸಸಾಧ್ಯವಿದೆಯೆಂಬುದನ್ನು ಇದು ಅರ್ಥೈಸುತ್ತದೊ? ಖಂಡಿತವಾಗಿಯೂ ಇಲ್ಲ! ಯೆಹೋವನು ಬರಿಯ ಭಾವೋದ್ವೇಗದಿಂದ ಮಾರ್ಗದರ್ಶಿಸಲ್ಪಡುವುದಿಲ್ಲ. ಆತನ ಕರುಣೆಗೆ ಮಿತಿಗಳಿವೆ. ಯಾವುದೇ ಪಶ್ಚಾತ್ತಾಪವಿಲ್ಲದೆ, ದ್ವೇಷಭರಿತ, ಉದ್ದೇಶಪೂರ್ವಕ ಪಾಪವನ್ನು ಕಠಿನ ಹೃದಯದಿಂದ ಆಚರಿಸುವವರನ್ನು ಆತನು ನಿಶ್ಚಯವಾಗಿಯೂ ಕ್ಷಮಿಸನು. (ಇಬ್ರಿಯ 10:26-31) ಇನ್ನೊಂದು ಬದಿಯಲ್ಲಿ, “ಜಜ್ಜಿಹೋದ” ಹೃದಯವೊಂದನ್ನು ಆತನು ನೋಡುವಾಗ, ಆತನು “ಕ್ಷಮಿಸಲು ಸಿದ್ಧ”ನಾಗಿರುತ್ತಾನೆ. (ಜ್ಞಾನೋಕ್ತಿ 17:3) ದೈವಿಕ ಕ್ಷಮೆಯ ಸಂಪೂರ್ಣತೆಯನ್ನು ವರ್ಣಿಸಲು ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವ ಭಾವಗರ್ಭಿತ ಭಾಷೆಯಲ್ಲಿ ಕೆಲವನ್ನು ನಾವು ಪರಿಗಣಿಸೋಣ.
ಯೆಹೋವನು ಎಷ್ಟು ಸಂಪೂರ್ಣವಾಗಿ ಕ್ಷಮಿಸುತ್ತಾನೆ?
8. ಯೆಹೋವನು ನಮ್ಮ ಪಾಪಗಳನ್ನು ಪರಿಹರಿಸುವಾಗ ಆತನು ಕಾರ್ಯತಃ ಏನು ಮಾಡುತ್ತಾನೆ, ಮತ್ತು ಇದು ನಮ್ಮ ಮೇಲೆ ಯಾವ ಪರಿಣಾಮವನ್ನು ಬೀರಬೇಕು?
8 ಪಶ್ಚಾತ್ತಾಪಿ ರಾಜ ದಾವೀದನು ಹೇಳಿದ್ದು: “ಯೆಹೋವನ ಸನ್ನಿಧಿಯಲ್ಲಿ ನನ್ನ ದ್ರೋಹವನ್ನು ಒಪ್ಪಿಸಿಕೊಳ್ಳುವೆನು ಅಂದುಕೊಂಡು ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟಿ [“ಮನ್ನಿಸಿದ್ದೀ,” NW].” (ಕೀರ್ತನೆ 32:5) “ಮನ್ನಿಸಿದ್ದೀ” ಎಂಬ ಆ ಅಭಿವ್ಯಕ್ತಿಯು, “ಮೇಲೆತ್ತು,” “ಹೊತ್ತುಕೊ, ಒಯ್ಯಿ” ಎಂಬ ಮೂಲಾರ್ಥವುಳ್ಳ ಒಂದು ಹೀಬ್ರು ಪದದ ಭಾಷಾಂತರವಾಗಿದೆ. ಇಲ್ಲಿ ಅದರ ಉಪಯೋಗವು, ‘ಅಪರಾಧಿಭಾವ, ಪಾಪ, ಉಲ್ಲಂಘನೆಯನ್ನು ತೆಗೆದುಹಾಕು’ವುದನ್ನು ಸೂಚಿಸುತ್ತದೆ. ಹಾಗಾದರೆ, ಯೆಹೋವನು ದಾವೀದನ ಪಾಪಗಳನ್ನು ಮೇಲಕ್ಕೆತ್ತಿದನು ಮತ್ತು ಅವುಗಳನ್ನು ದೂರ ಒಯ್ದನು. (ಯಾಜಕಕಾಂಡ 16:20-22ನ್ನು ಹೋಲಿಸಿರಿ.) ನಿಸ್ಸಂದೇಹವಾಗಿ, ಇದು ದಾವೀದನು ಒಯ್ಯುತ್ತಿದ್ದ ಅಪರಾಧಿ ಅನಿಸಿಕೆಗಳನ್ನು ಶಮನಗೊಳಿಸಿತು. (ಕೀರ್ತನೆ 32:3ನ್ನು ಹೋಲಿಸಿರಿ.) ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿನ ಅವರ ನಂಬಿಕೆಯ ಆಧಾರದ ಮೇಲೆ ಆತನ ಕ್ಷಮೆಯನ್ನು ಕೋರುವವರ ಪಾಪಗಳನ್ನು ಮನ್ನಿಸುವ ದೇವರಲ್ಲಿ ನಮಗೂ ಪೂರ್ಣ ಭರವಸೆಯಿರಸಾಧ್ಯವಿದೆ. (ಮತ್ತಾಯ 20:28; ಹೋಲಿಸಿರಿ ಯೆಶಾಯ 53:12.) ಹೀಗೆ, ಯಾರ ಪಾಪಗಳನ್ನು ಯೆಹೋವನು ಎತ್ತಿ ಒಯ್ಯುತ್ತಾನೊ ಅಂತಹವರು, ಗತ ಪಾಪಗಳಿಗಾಗಿರುವ ಅಪರಾಧಿ ಅನಿಸಿಕೆಗಳ ಹೊರೆಯನ್ನು ಒಯ್ಯುತ್ತಾ ಮುಂದುವರಿಯುವ ಅಗತ್ಯವಿಲ್ಲ.
9. ‘ನಮ್ಮ ಸಾಲಗಳನ್ನು ಕ್ಷಮಿಸು’ ಎಂಬ ಯೇಸುವಿನ ಮಾತುಗಳ ಅರ್ಥವೇನು?
9 ಯೆಹೋವನು ಹೇಗೆ ಕ್ಷಮಿಸುತ್ತಾನೆಂಬುದನ್ನು ದೃಷ್ಟಾಂತಿಸಲಿಕ್ಕಾಗಿ, ಸಾಲಕೊಡುವವರು ಮತ್ತು ಸಾಲಗಾರರ ಸಂಬಂಧವನ್ನು ಯೇಸು ಉಪಯೋಗಿಸಿದನು. ಉದಾಹರಣೆಗಾಗಿ, ನಾವು ಹೀಗೆ ಪ್ರಾರ್ಥಿಸುವಂತೆ ಯೇಸು ನಮ್ಮನ್ನು ಪ್ರೇರಿಸಿದನು: “ನಮ್ಮ ತಪ್ಪುಗಳನ್ನು [“ಸಾಲಗಳನ್ನು,” NW] ಕ್ಷಮಿಸು.” (ಮತ್ತಾಯ 6:12) ಹೀಗೆ ಯೇಸು “ಪಾಪಗಳನ್ನು,” “ಸಾಲ”ಗಳಿಗೆ ಹೋಲಿಸಿದನು. (ಲೂಕ 11:4) ನಾವು ಪಾಪಮಾಡುವಾಗ, ನಾವು ಯೆಹೋವನಿಗೆ “ಸಾಲಗಾರರು” (NW) ಆಗಿ ಪರಿಣಮಿಸುತ್ತೇವೆ. “ಕ್ಷಮಿಸು” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಕ್ರಿಯಾಪದವು, “ಒಂದು ಸಾಲವನ್ನು ಕೊಡಲು ಕೇಳದಿರುವ ಮೂಲಕ ಅದನ್ನು ಬಿಟ್ಟುಬಿಡುವುದನ್ನು” ಅರ್ಥೈಸಸಾಧ್ಯವಿದೆ. ಯೆಹೋವನು ಕ್ಷಮಿಸುವಾಗ, ಒಂದರ್ಥದಲ್ಲಿ ಆತನು ನಮ್ಮ ಲೆಕ್ಕಕ್ಕೆ ಸೇರಿಸಲ್ಪಡುತ್ತಿದ್ದ ಸಾಲವನ್ನು ರದ್ದುಗೊಳಿಸುತ್ತಾನೆ. ಈ ರೀತಿಯಲ್ಲಿ ಪಶ್ಚಾತ್ತಾಪಿ ಪಾಪಿಗಳು ಸಾಂತ್ವನವನ್ನು ಪಡೆಯಬಲ್ಲರು. ಯೆಹೋವನು, ತಾನು ರದ್ದುಗೊಳಿಸಿರುವ ಒಂದು ಸಾಲಕ್ಕಾಗಿ ಎಂದೂ ಸಂದಾಯವನ್ನು ಕೇಳನು!—ಕೀರ್ತನೆ 32:1, 2; ಹೋಲಿಸಿ ಮತ್ತಾಯ 18:23-35.
10, 11. (ಎ) ಅ. ಕೃತ್ಯಗಳು 3:19ರಲ್ಲಿ ಕಂಡುಬರುವ ‘ಅಳಿಸಿಬಿಡು’ ಎಂಬ ವಾಕ್ಸರಣಿಯಿಂದ ವ್ಯಕ್ತಪಡಿಸಲ್ಪಡುವ ಚಿತ್ರಣ ಯಾವುದು? (ಬಿ) ಯೆಹೋವನ ಕ್ಷಮೆಯ ಸಂಪೂರ್ಣತೆಯು ಹೇಗೆ ದೃಷ್ಟಾಂತಿಸಲ್ಪಟ್ಟಿದೆ?
10 ಅ. ಕೃತ್ಯಗಳು 3:19ರಲ್ಲಿ, ದೇವರ ಕ್ಷಮೆಯನ್ನು ವರ್ಣಿಸಲು ಬೈಬಲು ಇನ್ನೊಂದು ಸ್ಫುಟವಾದ ರೂಪಕವನ್ನು ಬಳಸುತ್ತದೆ: “ಆದದರಿಂದ ದೇವರು ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ.” “ಅಳಿಸಿಬಿಡು” ಎಂಬ ವಾಕ್ಸರಣಿಯು, ರೂಪಕಾಲಂಕಾರವಾಗಿ ಉಪಯೋಗಿಸಲ್ಪಟ್ಟಾಗ, “ಒರೆಸಿಬಿಡು, ತೊಡೆದುಹಾಕು, ರದ್ದುಗೊಳಿಸು ಅಥವಾ ನಾಶಮಾಡು” ಎಂಬುದನ್ನು ಅರ್ಥೈಸಸಾಧ್ಯವಿರುವ ಒಂದು ಗ್ರೀಕ್ ಕ್ರಿಯಾಪದವನ್ನು ಭಾಷಾಂತರಿಸುತ್ತದೆ. ಕೆಲವು ವಿದ್ವಾಂಸರಿಗನುಸಾರ, ವ್ಯಕ್ತಪಡಿಸಲ್ಪಟ್ಟಿರುವ ವಿಚಾರವು, ಕೈಬರಹವನ್ನು ಅಳಿಸಿಹಾಕುವಂತಿದೆ. ಇದು ಹೇಗೆ ಸಾಧ್ಯವಾಗಿತ್ತು? ಪುರಾತನ ಸಮಯಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸಲ್ಪಡುತ್ತಿದ್ದ ಶಾಯಿಯು, ಇಂಗಾಲ, ಗೋಂದು, ಮತ್ತು ನೀರು ಸೇರಿದ್ದ ಒಂದು ಮಿಶ್ರಣದಿಂದ ತಯಾರಿಸಲ್ಪಡುತ್ತಿತ್ತು. ಅಂತಹ ಶಾಯಿಯಿಂದ ಬರೆದ ನಂತರ, ಕೂಡಲೆ ಒಬ್ಬ ವ್ಯಕ್ತಿಯು ಒಂದು ಒದ್ದೆಯಾದ ಸ್ಪಂಜನ್ನು ತೆಗೆದುಕೊಂಡು ಆ ಬರಹವನ್ನು ಅಳಿಸಿಬಿಡಸಾಧ್ಯವಿತ್ತು.
11 ಅಲ್ಲಿ, ಯೆಹೋವನ ಕ್ಷಮೆಯ ಸಂಪೂರ್ಣತೆಯ ಒಂದು ಸುಂದರ ವರ್ಣನೆಯಿದೆ. ಆತನು ನಮ್ಮ ಪಾಪಗಳನ್ನು ಕ್ಷಮಿಸುವಾಗ, ಆತನು ಒಂದು ಸ್ಪಂಜನ್ನು ತೆಗೆದುಕೊಂಡು ಅವುಗಳನ್ನು ಅಳಿಸಿಬಿಟ್ಟಂತಿದೆ. ಭವಿಷ್ಯತ್ತಿನಲ್ಲಿ ಆತನು ಅಂತಹ ಪಾಪಗಳನ್ನು ನಮ್ಮ ವಿರುದ್ಧ ಎತ್ತಿಹಿಡಿಯುವನೆಂಬ ಭಯ ನಮಗಿರುವ ಅಗತ್ಯವಿಲ್ಲ, ಯಾಕಂದರೆ ಯೆಹೋವನ ಕರುಣೆಯ ವಿಷಯದಲ್ಲಿ ನಿಜವಾಗಿಯೂ ಗಮನಾರ್ಹವಾಗಿರುವ ಇನ್ನೊಂದು ಸಂಗತಿಯನ್ನು ಬೈಬಲ್ ಪ್ರಕಟಪಡಿಸುತ್ತದೆ: ಆತನು ಕ್ಷಮಿಸುವಾಗ, ಮರೆತುಬಿಡುತ್ತಾನೆ!
“ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ”
12. ಯೆಹೋವನು ನಮ್ಮ ಪಾಪಗಳನ್ನು ಮರೆತುಬಿಡುತ್ತಾನೆಂದು ಬೈಬಲ್ ಹೇಳುವಾಗ, ಆತನು ಅವುಗಳನ್ನು ಜ್ಞಾಪಿಸಿಕೊಳ್ಳಲು ಅಶಕ್ತನೆಂದು ಅದರ ಅರ್ಥವೊ, ಮತ್ತು ನೀವು ಹಾಗೇಕೆ ಉತ್ತರಿಸುತ್ತೀರಿ?
12 ಪ್ರವಾದಿಯಾದ ಯೆರೆಮೀಯನ ಮೂಲಕ, ಹೊಸ ಒಡಂಬಡಿಕೆಯಲ್ಲಿರುವವರ ಕುರಿತಾಗಿ ಯೆಹೋವನು ವಾಗ್ದಾನಿಸಿದ್ದು: “ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ.” (ಯೆರೆಮೀಯ 31:34) ಯೆಹೋವನು ಕ್ಷಮಿಸುವಾಗ ಆತನು ಇನ್ನು ಮುಂದೆ ಪಾಪಗಳನ್ನು ಜ್ಞಾಪಿಸಿಕೊಳ್ಳಲು ಅಶಕ್ತನಾಗಿದ್ದಾನೆಂಬುದನ್ನು ಇದು ಅರ್ಥೈಸುತ್ತದೊ? ವಿಷಯವು ಹಾಗಿರಸಾಧ್ಯವಿಲ್ಲ. ದಾವೀದನನ್ನು ಸೇರಿಸಿ, ಯೆಹೋವನು ಕ್ಷಮಿಸಿದಂತಹ ಅನೇಕ ವ್ಯಕ್ತಿಗಳ ಪಾಪಗಳ ಕುರಿತಾಗಿ ಬೈಬಲ್ ನಮಗೆ ತಿಳಿಸುತ್ತದೆ. (2 ಸಮುವೇಲ 11:1-17; 12:1-13) ಅವರು ಮಾಡಿದಂತಹ ಪಾಪಗಳ ಕುರಿತಾಗಿ ಯೆಹೋವನಿಗೆ ಇನ್ನೂ ಅರಿವಿದೆಯೆಂಬುದು ಸ್ಫುಟವಾಗಿದೆ, ಮತ್ತು ನಾವೂ ಅರಿವುಳ್ಳವರಾಗಿರಬೇಕು. ಅವರ ಪಾಪಗಳ ಹಾಗೂ ಅವರ ಪಶ್ಚಾತ್ತಾಪ ಮತ್ತು ಅವರು ದೇವರಿಂದ ಕ್ಷಮಿಸಲ್ಪಟ್ಟದ್ದರ ಕುರಿತಾದ ದಾಖಲೆಯು, ನಮ್ಮ ಪ್ರಯೋಜನಕ್ಕಾಗಿ ಸಂರಕ್ಷಿಸಿಡಲ್ಪಟ್ಟಿದೆ. (ರೋಮಾಪುರ 15:4) ಹಾಗಾದರೆ, ತಾನು ಯಾರನ್ನು ಕ್ಷಮಿಸುತ್ತಾನೋ ಅವರ ಪಾಪಗಳನ್ನು ಯೆಹೋವನು ‘ನೆನಪಿಗೆ ತರು’ವುದಿಲ್ಲ ಎಂದು ಬೈಬಲು ಹೇಳುವಾಗ, ಅದರ ಅರ್ಥವೇನು?
13. (ಎ) ‘ನನ್ನ ನೆನಪಿಗೆ ತರು’ ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರೂ ಕ್ರಿಯಾಪದದ ಅರ್ಥದಲ್ಲಿ ಏನು ಸೇರಿಸಲ್ಪಟ್ಟಿದೆ? (ಬಿ) “ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ” ಎಂದು ಯೆಹೋವನು ಹೇಳುವಾಗ, ಆತನು ನಮಗೆ ಯಾವ ಆಶ್ವಾಸನೆಯನ್ನು ಕೊಡುತ್ತಿದ್ದಾನೆ?
13 ‘ನನ್ನ ನೆನಪಿಗೆ ತರು’ ಎಂದು ಭಾಷಾಂತರಿಸಲ್ಪಡುವ ಹೀಬ್ರು ಕ್ರಿಯಾಪದವು, ಗತಕಾಲವನ್ನು ಜ್ಞಾಪಕಕ್ಕೆ ತರುವುದಕ್ಕಿಂತ ಹೆಚ್ಚನ್ನು ಅರ್ಥೈಸುತ್ತದೆ. ಹಳೇ ಒಡಂಬಡಿಕೆಯ ದೇವತಾಶಾಸ್ತ್ರ ಸಂಬಂಧವಾದ ಪದಪುಸ್ತಕ (ಇಂಗ್ಲಿಷ್)ಕ್ಕನುಸಾರ, ಅದು “ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳುವುದರ ಹೆಚ್ಚಿನ ಅರ್ಥವನ್ನು” ಒಳಗೊಳ್ಳುತ್ತದೆ. ಹೀಗೆ, ಈ ಅರ್ಥದಲ್ಲಿ, ಪಾಪವನ್ನು ‘ನೆನಪಿಗೆ ತರು’ವುದು, ಪಾಪಿಗಳ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವುದನ್ನು ಒಳಗೂಡಿಸುತ್ತದೆ. “ದೇವರು [ಯೆಹೋವನು] ಅವರ ಅಧರ್ಮವನ್ನು ಜ್ಞಾಪಕಕ್ಕೆ ತಂದು”ಕೊಳ್ಳುವನು ಎಂದು ಪ್ರವಾದಿಯಾದ ಹೋಶೇಯನು ದಾರಿತಪ್ಪಿದ ಇಸ್ರಾಯೇಲ್ಯರ ಕುರಿತಾಗಿ ಹೇಳಿದಾಗ, ಅವರ ಪಶ್ಚಾತ್ತಾಪದ ಕೊರತೆಯಿಂದಾಗಿ ಯೆಹೋವನು ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವನೆಂಬುದನ್ನು ಆ ಪ್ರವಾದಿಯು ಅರ್ಥೈಸಿದನು. ಹೀಗಿರುವುದರಿಂದ ಆ ವಚನದ ಉಳಿದ ಭಾಗವು ಕೂಡಿಸುವುದು: “ಅವರ ಪಾಪಗಳಿಗೆ ಪ್ರತಿದಂಡನೆಮಾಡುವನು.” (ಹೋಶೇಯ 9:9) ಇನ್ನೊಂದು ಬದಿಯಲ್ಲಿ, “ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ” ಎಂದು ಯೆಹೋವನು ಹೇಳುವಾಗ, ಆತನು ಒಬ್ಬ ಪಶ್ಚಾತ್ತಾಪಿ ಪಾಪಿಯನ್ನು ಕ್ಷಮಿಸಿದ ಬಳಿಕ, ಭವಿಷ್ಯತ್ತಿನ ಯಾವುದೊ ಸಮಯದಲ್ಲಿ ಆ ಪಾಪಗಳಿಗಾಗಿ ಅವನ ವಿರುದ್ಧ ತಾನು ಕ್ರಿಯೆಗೈಯುವುದಿಲ್ಲವೆಂದು ಆತನು ನಮಗೆ ಆಶ್ವಾಸನೆ ನೀಡುತ್ತಾನೆ. (ಯೆಹೆಜ್ಕೇಲ 18:21, 22) ಹೀಗೆ ಆತನು ನಮ್ಮನ್ನು ಪುನಃ ಪುನಃ ಆಪಾದಿಸಲು ಅಥವಾ ಶಿಕ್ಷಿಸಲಿಕ್ಕಾಗಿ, ನಮ್ಮ ಪಾಪಗಳನ್ನು ಪದೇ ಪದೇ ನಮ್ಮ ಜ್ಞಾಪಕಕ್ಕೆ ತರುವುದಿಲ್ಲವೆಂಬ ಅರ್ಥದಲ್ಲಿ ಆತನು ಮರೆತುಬಿಡುತ್ತಾನೆ. ಈ ರೀತಿಯಲ್ಲಿ ಯೆಹೋವನು, ಇತರರೊಂದಿಗಿನ ನಮ್ಮ ವ್ಯವಹಾರದಲ್ಲಿ ಅನುಕರಿಸಲಿಕ್ಕಾಗಿ ಒಂದು ಅತ್ಯುತ್ಕೃಷ್ಟವಾದ ಮಾದರಿಯನ್ನಿಡುತ್ತಾನೆ. ಭಿನ್ನಾಭಿಪ್ರಾಯಗಳು ಏಳುವಾಗ, ನೀವು ಈ ಹಿಂದೆ ಕ್ಷಮಿಸಲು ಒಪ್ಪಿದಂತಹ ಗತಕಾಲದ ತಪ್ಪುಗಳನ್ನು ನೆನಪಿಸಿಕೊಳ್ಳದೆ ಇರುವುದು ಉತ್ತಮ.
ನಮ್ಮ ಪಾಪಗಳ ಪರಿಣಾಮಗಳ ಕುರಿತಾಗಿ ಏನು?
14. ಕ್ಷಮೆಯು, ಒಬ್ಬ ಪಶ್ಚಾತ್ತಾಪಿ ಪಾಪಿಯು ತನ್ನ ತಪ್ಪಾದ ಮಾರ್ಗಕ್ರಮದ ಎಲ್ಲ ಪರಿಣಾಮಗಳಿಂದ ವಿಮುಕ್ತನಾಗಿದ್ದಾನೆಂಬುದನ್ನು ಅರ್ಥೈಸುವುದಿಲ್ಲವೇಕೆ?
14 ಕ್ಷಮಿಸಲಿಕ್ಕಾಗಿರುವ ಯೆಹೋವನ ಸಿದ್ಧಮನಸ್ಸು, ಒಬ್ಬ ಪಶ್ಚಾತ್ತಾಪಿ ಪಾಪಿಯು ತನ್ನ ತಪ್ಪಾದ ಮಾರ್ಗಕ್ರಮದ ಎಲ್ಲ ಪರಿಣಾಮಗಳಿಂದ ವಿಮುಕ್ತನಾಗಿದ್ದಾನೆಂಬುದನ್ನು ಅರ್ಥೈಸುತ್ತದೊ? ಇಲ್ಲ. ಶಿಕ್ಷೆಯ ಭಯವಿಲ್ಲದೆ ನಾವು ಪಾಪಮಾಡಲಾರೆವು. ಪೌಲನು ಬರೆದುದು: “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.” (ಗಲಾತ್ಯ 6:7) ನಮ್ಮ ಕೃತ್ಯ ಅಥವಾ ಸಮಸ್ಯೆಗಳ ನಿರ್ದಿಷ್ಟ ಪರಿಣಾಮಗಳನ್ನು ನಾವು ಎದುರಿಸಬಹುದು, ಆದರೆ ಕ್ಷಮೆಯನ್ನು ನೀಡಿದ ಬಳಿಕ, ಕಷ್ಟಗಳು ನಮ್ಮ ಮೇಲೆ ಬಂದೆರಗುವಂತೆ ಯೆಹೋವನು ಮಾಡುವುದಿಲ್ಲ. ತೊಂದರೆಗಳು ಏಳುವಾಗ, ಒಬ್ಬ ಕ್ರೈಸ್ತನಿಗೆ, ‘ಯೆಹೋವನು ನನ್ನ ಗತಕಾಲದ ಪಾಪಗಳಿಗಾಗಿ ನನ್ನನ್ನು ಶಿಕ್ಷಿಸುತ್ತಿರಬಹುದು’ ಎಂಬ ಅನಿಸಿಕೆ ಉಂಟಾಗಬಾರದು. (ಯಾಕೋಬ 1:13ನ್ನು ಹೋಲಿಸಿ.) ಇನ್ನೊಂದು ಬದಿಯಲ್ಲಿ, ನಮ್ಮ ತಪ್ಪು ಕೃತ್ಯಗಳ ಎಲ್ಲ ಪರಿಣಾಮಗಳಿಂದ ಯೆಹೋವನು ನಮ್ಮನ್ನು ಕಾಪಾಡುವುದಿಲ್ಲ. ವಿವಾಹ ವಿಚ್ಛೇದ, ಅನಪೇಕ್ಷಿತ ಗರ್ಭಾವಸ್ಥೆ, ರತಿ ರವಾನಿತ ರೋಗ, ಭರವಸೆ ಮತ್ತು ಗೌರವದ ನಷ್ಟ—ಇವೆಲ್ಲವೂ, ಪಾಪದ ದುಃಖಕರ ಪರಿಣಾಮಗಳಾಗಿರಬಹುದು, ಮತ್ತು ಯೆಹೋವನು ನಮ್ಮನ್ನು ಅವುಗಳಿಂದ ರಕ್ಷಿಸದಿರುವನು. ಬತ್ಷೆಬೆ ಮತ್ತು ಊರೀಯರ ಸಂಬಂಧದಲ್ಲಿನ ದಾವೀದನ ಪಾಪಗಳಿಗಾಗಿ ಯೆಹೋವನು ಅವನನ್ನು ಕ್ಷಮಿಸಿದರೂ, ಹಿಂಬಾಲಿಸಿದಂತಹ ವಿಪತ್ಕಾರಕ ಪರಿಣಾಮಗಳಿಂದ ಆತನು ದಾವೀದನನ್ನು ಸಂರಕ್ಷಿಸಲಿಲ್ಲವೆಂಬುದನ್ನು ಜ್ಞಾಪಿಸಿಕೊಳ್ಳಿರಿ.—2 ಸಮುವೇಲ 12:9-14.
15, 16. ಯಾಜಕಕಾಂಡ 6:1-7ರಲ್ಲಿ ದಾಖಲಿಸಲ್ಪಟ್ಟಿರುವ ನಿಯಮವು, ಬಲಿಯಾದ ವ್ಯಕ್ತಿಗೆ ಮತ್ತು ತಪ್ಪುಮಾಡಿದವನಿಗೆ, ಇಬ್ಬರಿಗೂ ಹೇಗೆ ಪ್ರಯೋಜನಕರವಾಗಿತ್ತು?
15 ನಮ್ಮ ಪಾಪಗಳಿಗೆ ಇತರ ಪರಿಣಾಮಗಳೂ ಇರಬಹುದು. ಉದಾಹರಣೆಗಾಗಿ, ಯಾಜಕಕಾಂಡ ಅಧ್ಯಾಯ 6ರಲ್ಲಿರುವ ವೃತ್ತಾಂತವನ್ನು ಪರಿಗಣಿಸಿರಿ. ಒಬ್ಬ ವ್ಯಕ್ತಿಯು, ಕಳ್ಳತನ, ಸುಲುಕೊಳ್ಳುವಿಕೆ ಅಥವಾ ಮೋಸದ ಮೂಲಕ ಒಬ್ಬ ಜೊತೆ ಇಸ್ರಾಯೇಲ್ಯನ ಸಾಮಾನುಗಳನ್ನು ವಶಕ್ಕೆ ತೆಗೆದುಕೊಳ್ಳುವ ಒಂದು ಗಂಭೀರ ತಪ್ಪನ್ನು ಮಾಡುವ ಸನ್ನಿವೇಶವನ್ನು ಮೋಶೆಯ ಧರ್ಮಶಾಸ್ತ್ರವು ಇಲ್ಲಿ ಸಂಬೋಧಿಸುತ್ತದೆ. ಪಾಪಿಯು ತಾನು ಅಪರಾಧಿಯಾಗಿದ್ದೇನೆಂಬುದನ್ನು ಅನಂತರ ನಿರಾಕರಿಸುತ್ತಾನೆ. ಸುಳ್ಳು ಶಪಥಮಾಡುವಷ್ಟರ ವರೆಗೆ ಅವನು ಇದನ್ನು ಹೇಳುವ ಧೈರ್ಯ ಮಾಡುತ್ತಾನೆ. ಇದು ಯಾವುದೇ ಪಕ್ಷದಲ್ಲಿ ರುಜುವಾತಿಲ್ಲದ ಒಂದು ವಿವಾದವನ್ನು ಒಳಗೂಡಿಸುವ ವಿದ್ಯಮಾನದ ಸನ್ನಿವೇಶವಾಗಿದೆ. ಆದಾಗಲೂ, ತದನಂತರ, ತಪ್ಪುಮಾಡಿದವನ ಮನಸ್ಸಾಕ್ಷಿಯು ನೊಂದು, ಅವನು ತನ್ನ ಪಾಪವನ್ನು ಅರಿಕೆಮಾಡಿಕೊಳ್ಳುತ್ತಾನೆ. ದೇವರ ಕ್ಷಮೆಯನ್ನು ಪಡೆಯಲು, ಅವನು ಇನ್ನೂ ಮೂರು ವಿಷಯಗಳನ್ನು ಮಾಡಬೇಕು: ಅವನು ಏನನ್ನು ತೆಗೆದುಕೊಂಡಿದ್ದಾನೋ ಅದನ್ನು ಮರಳಿಕೊಡಬೇಕು, ನಷ್ಟಕ್ಕೆ ಬಲಿಯಾದವನಿಗೆ 20 ಪ್ರತಿಶತ ದಂಡ ತೆರಬೇಕು, ಮತ್ತು ದೋಷ ಪರಿಹಾರಕ ಯಜ್ಞವಾಗಿ ಒಂದು ಟಗರನ್ನು ಅರ್ಪಿಸಬೇಕು. ಅನಂತರ ಧರ್ಮಶಾಸ್ತ್ರವು ಹೇಳುವುದು: “ಯಾಜಕನು ಅವನಿಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಿದಾಗ ಅವನು ಯಾವ ವಿಷಯದಲ್ಲಿ ಅಪರಾಧಕ್ಕೆ ಒಳಗಾಗಿದ್ದನೋ ಆ ವಿಷಯದಲ್ಲಿ ಅವನಿಗೆ ಕ್ಷಮೆಯಾಗುವದು.”—ಯಾಜಕಕಾಂಡ 6:1-7; ಹೋಲಿಸಿ ಮತ್ತಾಯ 5:23, 24.
16 ಈ ಧರ್ಮಶಾಸ್ತ್ರವು ದೇವರಿಂದ ಬಂದ ಒಂದು ಕರುಣಾಭರಿತ ಒದಗಿಸುವಿಕೆಯಾಗಿತ್ತು. ಅದು, ಯಾರ ಆಸ್ತಿಯು ಹಿಂದಿರುಗಿಸಲ್ಪಟ್ಟಿತೊ ಮತ್ತು ತಪ್ಪುಮಾಡಿದವನು ಕೊನೆಗೆ ತನ್ನ ಪಾಪವನ್ನು ಒಪ್ಪಿಕೊಂಡಾಗ ಯಾರು ನಿಸ್ಸಂದೇಹವಾಗಿ ಹೆಚ್ಚಾದ ಉಪಶಮನವನ್ನು ಅನುಭವಿಸಿದನೊ ಆ ವ್ಯಕ್ತಿಗೆ ಇದು ಪ್ರಯೋಜನಕರವಾಗಿತ್ತು. ಅದೇ ಸಮಯದಲ್ಲಿ, ಯಾರ ಮನಸ್ಸಾಕ್ಷಿಯು ಅವನು ಕೊನೆಗೆ ತನ್ನ ಅಪರಾಧವನ್ನು ಒಪ್ಪಿಕೊಂಡು, ತನ್ನ ತಪ್ಪನ್ನು ತಿದ್ದಿಕೊಳ್ಳುವಂತೆ ಪ್ರಚೋದಿಸಿತೊ ಆ ವ್ಯಕ್ತಿಗೂ ಆ ಧರ್ಮಶಾಸ್ತ್ರವು ಪ್ರಯೋಜನವನ್ನು ತಂದಿತು. ಅವನು ಹಾಗೆ ಮಾಡಲು ನಿರಾಕರಿಸುತ್ತಿದ್ದಲ್ಲಿ, ಖಂಡಿತವಾಗಿಯೂ ಅವನಿಗೆ ದೇವರಿಂದ ಯಾವ ಕ್ಷಮೆಯೂ ಇರುತ್ತಿರಲಿಲ್ಲ.
17. ಇತರರು ನಮ್ಮ ಪಾಪಗಳಿಂದ ನೋಯಿಸಲ್ಪಟ್ಟಾಗ, ನಾವೇನನ್ನು ಮಾಡುವಂತೆ ಯೆಹೋವನು ನಿರೀಕ್ಷಿಸುತ್ತಾನೆ?
17 ನಾವು ಮೋಶೆಯ ಧರ್ಮಶಾಸ್ತ್ರದ ಕೆಳಗೆ ಇಲ್ಲದಿರುವುದಾದರೂ, ಅದು ನಮಗೆ ಕ್ಷಮೆಯ ಕುರಿತಾದ ಯೆಹೋವನ ದೃಷ್ಟಿಕೋನವನ್ನು ಸೇರಿಸಿ, ಆತನ ಸಿದ್ಧಮನಸ್ಸಿನ ಕುರಿತಾಗಿ ಅಮೂಲ್ಯವಾದ ಒಳನೋಟವನ್ನು ಕೊಡುತ್ತದೆ. (ಕೊಲೊಸ್ಸೆ 2:13, 14) ಇತರರು ನಮ್ಮ ಪಾಪಗಳಿಂದ ನೋಯಿಸಲ್ಪಡುವಾಗ ಅಥವಾ ಅವುಗಳಿಗೆ ಬಲಿಯಾಗುವಾಗ, ‘ತಪ್ಪಾದದ್ದನ್ನು ಸರಿಪಡಿಸಲು’ (NW) ನಮ್ಮಿಂದ ಸಾಧ್ಯವಾದದ್ದನ್ನು ನಾವು ಮಾಡುವಾಗ, ಯೆಹೋವನಿಗೆ ಸಂತೋಷವಾಗುತ್ತದೆ. (2 ಕೊರಿಂಥ 7:11) ಇದು, ನಮ್ಮ ಪಾಪವನ್ನು ಅಂಗೀಕರಿಸುವುದು, ನಮ್ಮ ಅಪರಾಧವನ್ನು ಒಪ್ಪಿಕೊಳ್ಳುವುದು ಮತ್ತು ಬಲಿಯಾದ ವ್ಯಕ್ತಿಯ ಬಳಿ ಕ್ಷಮೆಯಾಚಿಸುವುದನ್ನೂ ಒಳಗೂಡುತ್ತದೆ. ಆಗ ನಾವು ಯೇಸುವಿನ ಯಜ್ಞದ ಆಧಾರದ ಮೇಲೆ ಯೆಹೋವನಿಗೆ ಮೊರೆಯಿಡಬಲ್ಲೆವು ಮತ್ತು ಒಂದು ಶುದ್ಧ ಮನಸ್ಸಾಕ್ಷಿಯ ಉಪಶಮನವನ್ನು ಹಾಗೂ ನಾವು ಯೆಹೋವನಿಂದ ಕ್ಷಮಿಸಲ್ಪಟ್ಟಿದ್ದೇವೆಂಬ ಆಶ್ವಾಸನೆಯನ್ನು ಅನುಭವಿಸಬಲ್ಲೆವು.—ಇಬ್ರಿಯ 10:21, 22.
18. ಯೆಹೋವನ ಕ್ಷಮೆಯೊಂದಿಗೆ ಯಾವ ಶಿಸ್ತು ಜೊತೆಗೂಡಬಹುದು?
18 ಯಾವುದೇ ಪ್ರೀತಿಪರ ಹೆತ್ತವನಂತೆ, ಯೆಹೋವನು ಒಂದಿಷ್ಟು ಶಿಸ್ತಿನೊಂದಿಗೆ ಕ್ಷಮೆಯನ್ನು ನೀಡಿಯಾನು. (ಜ್ಞಾನೋಕ್ತಿ 3:11, 12) ಒಬ್ಬ ಪಶ್ಚಾತ್ತಾಪಿ ಕ್ರೈಸ್ತನು, ಒಬ್ಬ ಹಿರಿಯನು, ಒಬ್ಬ ಶುಶ್ರೂಷಾ ಸೇವಕನು, ಅಥವಾ ಒಬ್ಬ ಪಯನೀಯರನೋಪಾದಿ ಸೇವೆಸಲ್ಲಿಸುವ ತನ್ನ ಸುಯೋಗವನ್ನು ಬಿಟ್ಟುಕೊಡಬೇಕಾದೀತು. ಅವನಿಗೆ ಅಮೂಲ್ಯವಾಗಿದ್ದಂತಹ ಸುಯೋಗಗಳನ್ನು ಸ್ವಲ್ಪ ಸಮಯಾವಧಿಯ ವರೆಗೆ ಕಳೆದುಕೊಳ್ಳುವುದು ಅವನಿಗೆ ವೇದನಾಭರಿತವಾದದ್ದಾಗಿರಬಹುದು. ಆದಾಗಲೂ, ಅಂತಹ ಶಿಸ್ತು, ಅವನು ಯೆಹೋವನ ಅನುಗ್ರಹವನ್ನು ಕಳೆದುಕೊಂಡಿದ್ದಾನೆ ಅಥವಾ ಯೆಹೋವನು ಕ್ಷಮೆಯನ್ನು ತಡೆದುಹಿಡಿದಿದ್ದಾನೆ ಎಂಬುದನ್ನು ಅರ್ಥೈಸುವುದಿಲ್ಲ. ಇದಕ್ಕೆ ಕೂಡಿಸಿ, ಯೆಹೋವನಿಂದ ಬರುವ ಶಿಸ್ತು, ನಮ್ಮ ವಿಷಯದಲ್ಲಿ ಆತನಿಗಿರುವ ಪ್ರೀತಿಯ ರುಜುವಾತಾಗಿದೆ ಎಂಬುದನ್ನು ನಾವು ಜ್ಞಾಪಕದಲ್ಲಿಡಬೇಕು. ಅದನ್ನು ಅಂಗೀಕರಿಸುವುದು ಮತ್ತು ಅನ್ವಯಿಸಿಕೊಳ್ಳುವುದು ನಮಗೆ ಉಪಯುಕ್ತವಾಗಿದೆ ಮತ್ತು ನಮ್ಮನ್ನು ನಿತ್ಯ ಜೀವಕ್ಕೆ ನಡಿಸಬಲ್ಲದು.—ಇಬ್ರಿಯ 12:5-11.
19, 20. (ಎ) ನೀವು ತಪ್ಪುಗಳನ್ನು ಮಾಡಿರುವಲ್ಲಿ, ನೀವು ಯೆಹೋವನ ಕರುಣೆಯ ನಿಲುಕಿನಾಚೆ ಇದ್ದೀರೆಂದು ನಿಮಗೆ ಏಕೆ ಅನಿಸಬಾರದು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
19 ‘ಕ್ಷಮಿಸಲು ಸಿದ್ಧ’ನಾಗಿರುವ ಒಬ್ಬ ದೇವರನ್ನು ನಾವು ಸೇವಿಸುತ್ತಿದ್ದೇವೆಂಬುದನ್ನು ತಿಳಿದಿರುವುದು ಎಷ್ಟು ಚೈತನ್ಯದಾಯಕವಾಗಿದೆ! ಯೆಹೋವನು ನಮ್ಮ ಪಾಪಗಳು ಮತ್ತು ತಪ್ಪುಗಳಿಗಿಂತಲೂ ಹೆಚ್ಚನ್ನು ನೋಡುತ್ತಾನೆ. (ಕೀರ್ತನೆ 130:3, 4) ನಮ್ಮ ಹೃದಯಗಳಲ್ಲಿ ಏನಿದೆಯೆಂಬುದು ಆತನಿಗೆ ತಿಳಿದಿದೆ. ಗತಕಾಲದ ತಪ್ಪುಗಳ ಕಾರಣದಿಂದ, ನಿಮ್ಮ ಹೃದಯವು ಜಜ್ಜಿಹೋಗಿದೆಯೆಂದು ನಿಮಗೆ ಅನಿಸುವಲ್ಲಿ, ನೀವು ಯೆಹೋವನ ಕರುಣೆಯ ನಿಲುಕಿನಾಚೆ ಇದ್ದೀರೆಂದು ತೀರ್ಮಾನಿಸಬೇಡಿರಿ. ನೀವು ಯಾವುದೇ ತಪ್ಪುಗಳನ್ನು ಮಾಡಿರಬಹುದಾದರೂ, ನೀವು ನಿಜವಾಗಿ ಪಶ್ಚಾತ್ತಾಪಪಟ್ಟಿರುವಲ್ಲಿ, ತಪ್ಪನ್ನು ಸರಿಪಡಿಸಲು ಹೆಜ್ಜೆಗಳನ್ನು ತೆಗೆದುಕೊಂಡಿರುವಲ್ಲಿ, ಮತ್ತು ಯೇಸುವಿನ ಸುರಿಸಲ್ಪಟ್ಟ ರಕ್ತದ ಆಧಾರದ ಮೇಲೆ ಯೆಹೋವನ ಕ್ಷಮೆಗಾಗಿ ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸಿರುವಲ್ಲಿ, 1 ಯೋಹಾನ 1:9ರ ಮಾತುಗಳು ನಿಮಗೆ ಅನ್ವಯಿಸುತ್ತವೆಂಬ ಪೂರ್ಣ ಭರವಸೆ ನಿಮಗಿರಬಲ್ಲದು: “ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು.”
20 ನಮ್ಮ ಪರಸ್ಪರ ವ್ಯವಹಾರಗಳಲ್ಲಿ ಯೆಹೋವನ ಕ್ಷಮೆಯನ್ನು ಅನುಕರಿಸುವಂತೆ ಬೈಬಲು ನಮ್ಮನ್ನು ಉತ್ತೇಜಿಸುತ್ತದೆ. ಆದಾಗಲೂ, ಇತರರು ನಮ್ಮ ವಿರುದ್ಧ ಪಾಪಗೈಯುವಾಗ ನಾವು ಎಷ್ಟರ ಮಟ್ಟಿಗೆ ಕ್ಷಮಿಸಿ ಮರೆತುಬಿಡುವಂತೆ ನಿರೀಕ್ಷಿಸಲ್ಪಡಸಾಧ್ಯವಿದೆ? ಇದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.
[ಅಧ್ಯಯನ ಪ್ರಶ್ನೆಗಳು]
a ಆಸಕ್ತಿಕರವಾಗಿ, “ನಮ್ಮ ಪ್ರಕೃತಿ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರೂ ಪದವು, ಒಬ್ಬ ಕುಂಬಾರನಿಂದ ತಯಾರಿಸಲ್ಪಟ್ಟ ಮಣ್ಣಿನ ಪಾತ್ರೆಗಳ ಸಂಬಂಧದಲ್ಲಿ ಉಪಯೋಗಿಸಲ್ಪಡುತ್ತದೆ.—ಯೆಶಾಯ 29:16.
ನೀವು ಹೇಗೆ ಉತ್ತರಿಸುವಿರಿ?
◻ ಯೆಹೋವನು ‘ಕ್ಷಮಿಸಲು ಸಿದ್ಧ’ನಾಗಿರುವುದೇಕೆ?
◻ ಯೆಹೋವನ ಕ್ಷಮೆಯ ಸಂಪೂರ್ಣತೆಯನ್ನು ಬೈಬಲ್ ಹೇಗೆ ವರ್ಣಿಸುತ್ತದೆ?
◻ ಯೆಹೋವನು ಕ್ಷಮಿಸುವಾಗ, ಆತನು ಯಾವ ಅರ್ಥದಲ್ಲಿ ಮರೆತುಬಿಡುತ್ತಾನೆ?
◻ ಇತರರು ನಮ್ಮ ಪಾಪಗಳಿಂದ ನೋಯಿಸಲ್ಪಟ್ಟಿರುವಾಗ, ನಾವೇನನ್ನು ಮಾಡುವಂತೆ ಯೆಹೋವನು ನಿರೀಕ್ಷಿಸುತ್ತಾನೆ?
[ಪುಟ 12 ರಲ್ಲಿರುವ ಚಿತ್ರ]
ಇತರರು ನಮ್ಮ ಪಾಪಗಳಿಂದ ನೋಯಿಸಲ್ಪಟ್ಟಾಗ, ನಾವು ತಿದ್ದುಪಾಟುಗಳನ್ನು ಮಾಡುವಂತೆ ಯೆಹೋವನು ನಿರೀಕ್ಷಿಸುತ್ತಾನೆ