ಬೈಬಲಿನ ದೃಷ್ಟಿಕೋನ
ಕ್ಷಮಿಸುವುದು ಮತ್ತು ಮರೆಯುವುದು—ಹೇಗೆ ಸಾಧ್ಯ?
“ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ.”—ಯೆರೆಮೀಯ 31:34.
ಪ್ರವಾದಿಯಾದ ಯೆರೆಮೀಯನಿಂದ ದಾಖಲಿಸಲ್ಪಟ್ಟ ಆ ಮಾತುಗಳು, ಯೆಹೋವನ ಕರುಣೆಯ ಕುರಿತಾಗಿ ಗಮನಾರ್ಹವಾದ ಯಾವುದೋ ವಿಷಯವನ್ನು ಬಯಲುಮಾಡುತ್ತವೆ: ಆತನು ಕ್ಷಮಿಸುವಾಗ, ಮರೆಯುತ್ತಾನೆ. (ಯೆಶಾಯ 43:25) ಬೈಬಲು ಇನ್ನೂ ಹೇಳುವುದು: “ಯೆಹೋವನು ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆ ನೀವೂ ಕ್ಷಮಿಸಿರಿ.” (ಕೊಲೊಸ್ಸೆ 3:13, NW) ಆದುದರಿಂದ ಕ್ರೈಸ್ತರೋಪಾದಿ ನಾವು ಯೆಹೋವನ ಕ್ಷಮೆಯನ್ನು ಅನುಕರಿಸಬೇಕು.
ಆದರೂ, ಕೆಲವು ಪ್ರಮುಖ ಪ್ರಶ್ನೆಗಳು ಉದ್ಭವಿಸುತ್ತವೆ. ಯೆಹೋವನು ಕ್ಷಮಿಸುವಾಗ, ಆತನು ನಿಜವಾಗಿಯೂ ನಮ್ಮ ಪಾಪಗಳನ್ನು ಇನ್ನೆಂದಿಗೂ ಜ್ಞಾಪಿಸಿಕೊಳ್ಳುವುದಿಲ್ಲವೊ? ಮತ್ತು ನಾವು ಕ್ಷಮಿಸುವಾಗ, ಪುನಃ ಜ್ಞಾಪಿಸಿಕೊಳ್ಳಲು ಅಸಮರ್ಥರಾಗಿರುವ ಅರ್ಥದಲ್ಲಿ ನಾವದನ್ನು ಮರೆಯಬೇಕೊ? ಆ ರೀತಿಯಲ್ಲಿ ನಾವು ಮರೆಯುವ ಹೊರತು, ನಾವು ನಿಜವಾಗಿಯೂ ಕ್ಷಮಿಸಿಲ್ಲವೆಂದು ಹೇಳಸಾಧ್ಯವಿದೆಯೆ?
ಯೆಹೋವನು ಕ್ಷಮಿಸುವ ವಿಧ
ಅಸಮಾಧಾನದ ಭಾವನೆಯನ್ನು ಹೋಗಲಾಡಿಸುವುದು ಕ್ಷಮಿಸುವುದರಲ್ಲಿ ಒಳಗೂಡುತ್ತದೆ. ಯೆಹೋವನು ಕ್ಷಮಿಸುವಾಗ, ಆತನು ಪೂರ್ಣವಾಗಿ ಕ್ಷಮಿಸುತ್ತಾನೆ.a ಕೀರ್ತನೆಗಾರ ದಾವೀದನು ಬರೆದದ್ದು: “[ಯೆಹೋವನು] ಯಾವಾಗಲೂ ತಪ್ಪುಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ. ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ. ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ.”—ಕೀರ್ತನೆ 103:9, 12, 13.
ದೇವರ ಕ್ಷಮೆಯ ಪೂರ್ಣತೆಯು ಅ. ಕೃತ್ಯಗಳು 3:19ರಲ್ಲಿ ಇನ್ನೂ ಹೆಚ್ಚಾಗಿ ವಿವರಿಸಲ್ಪಡುತ್ತದೆ: “ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ.” ‘ಅಳಿಸಿಬಿಡುವ’ ಎಂಬ ಅಭಿವ್ಯಕ್ತಿಯು, ಗ್ರೀಕ್ ಕ್ರಿಯಾಪದವಾದ (ಎಕ್ಸಲೈಫೊ)ನಿಂದ ಬಂದದ್ದಾಗಿದ್ದು, “ಒರೆಸಿಬಿಡು, ತೊಡೆದುಹಾಕು” ಎಂಬರ್ಥವನ್ನು ಹೊಂದಿದೆ. (ಪ್ರಕಟನೆ 7:17; 21:4ನ್ನು ನೋಡಿರಿ.) ದ ನ್ಯೂ ಇಂಟರ್ನ್ಯಾಷನಲ್ ಡಿಕ್ಷನರಿ ಆಫ್ ನ್ಯೂ ಟೆಸ್ಟಮೆಂಟ್ ತಿಯಾಲಜಿ ವಿವರಿಸುವುದು: “ಇಲ್ಲಿ ಮತ್ತು ಬಹುಶಃ ಇನ್ನೆಲಿಯ್ಲಾದರೂ ಕ್ರಿಯಾಪದದಿಂದ ಅಭಿವ್ಯಕ್ತಿಸಲ್ಪಟ್ಟಿರುವ ಕಲ್ಪನೆಯು, ಬಹುಮಟ್ಟಿಗೆ ಪುನರುಪಯೋಗಕ್ಕಾಗಿ ([ಹೋಲಿಸಿರಿ] ‘ಸ್ಲೇಟನ್ನು ಸ್ವಚ್ಛವಾಗಿ ಒರೆಸುವುದು’) ಮೇಣದ ಬರೆವಣಿಗೆ ಹಲಗೆಯ ಮೇಲ್ಮೈಯನ್ನು ನಯಗೊಳಿಸುವುದಾಗಿರಬಹುದು.” ನಮ್ಮ ಪಾಪಗಳ ಕುರಿತಾಗಿ ನಾವು ಪಶ್ಚಾತ್ತಾಪಪಡುವಾಗ, ಯೆಹೋವನು ದಾಖಲೆಯನ್ನು ಸಂಪೂರ್ಣವಾಗಿ ಒರೆಸಿಬಿಡುತ್ತಾನೆ. ಆತನು ನಮ್ಮ ಪಾಪಗಳನ್ನು ಇನ್ನು ಮುಂದೆ ಜ್ಞಾಪಿಸಿಕೊಳ್ಳುವುದಿಲ್ಲವೆಂದು ಅದು ಅರ್ಥೈಸುತ್ತದೊ? ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಒಂದು ಉದಾಹರಣೆಯನ್ನು ನಾವು ಪರಿಗಣಿಸೋಣ.
ರಾಜ ದಾವೀದನು ಬತ್ಷೆಬೆಯೊಂದಿಗೆ ವ್ಯಭಿಚಾರವನ್ನು ಮಾಡಿದಾಗ ಮತ್ತು ತದನಂತರ ಅವಳ ಗಂಡನ ಮರಣಕ್ಕಾಗಿ ಏರ್ಪಡಿಸುವ ಮೂಲಕ ಅದನ್ನು ಗುಟ್ಟಾಗಿಡಲು ಪ್ರಯತ್ನಿಸಿದಾಗ, ದಾವೀದನನ್ನು ಗದರಿಸಲಿಕ್ಕಾಗಿ ಯೆಹೋವನು ಪ್ರವಾದಿಯಾದ ನಾತಾನನನ್ನು ಕಳುಹಿಸಿದನು. (2 ಸಮುವೇಲ 11:1-17; 12:1-12) ಯಾವ ಫಲಿತಾಂಶದೊಂದಿಗೆ? ದಾವೀದನು ಮನಃಪೂರ್ವಕವಾಗಿ ಪಶ್ಚಾತ್ತಾಪಪಟ್ಟನು ಮತ್ತು ಯೆಹೋವನು ಆತನನ್ನು ಕ್ಷಮಿಸಿದನು. (2 ಸಮುವೇಲ 12:13; ಕೀರ್ತನೆ 32:1-5) ದಾವೀದನ ಪಾಪಗಳನ್ನು ಯೆಹೋವನು ಮರೆತನೋ? ಖಂಡಿತವಾಗಿಯೂ ಇಲ್ಲ! ದಾವೀದನ ಮರಣಕ್ಕೆ ಸ್ವಲ್ಪ ಮುಂಚೆ, 2 ಸಮುವೇಲ (ಸಾ.ಶ.ಪೂ 1040ರ ಸುಮಾರಿಗೆ ಪೂರ್ಣಗೊಳಿಸಲ್ಪಟ್ಟ) ಪುಸ್ತಕದಲ್ಲಿ, ಬೈಬಲ್ ಬರಹಗಾರರಾದ ಗಾದ್ ಮತ್ತು ನಾತಾನರು ಅನಂತರ ಇಡೀ ಘಟನೆಯನ್ನು ದಾಖಲಿಸಿದರು.
ಆದುದರಿಂದ ದಾವೀದನ ಪಾಪಗಳ ದಾಖಲೆ, ಅಥವಾ ಸ್ಮರಣೆ, ಹಾಗೂ ಆತನ ಪಶ್ಚಾತ್ತಾಪ ಮತ್ತು ಯೆಹೋವನಿಂದ ಕೊಡಲ್ಪಟ್ಟ ಅನಂತರದ ಕ್ಷಮೆಯ ಕುರಿತಾದ ದಾಖಲೆಯು, ಇಂದಿನ ದಿನಗಳ ವರೆಗೆ ಬೈಬಲಿನ ವಾಚಕರ ಪ್ರಯೋಜನಕ್ಕಾಗಿ ಮಾನವ ಸ್ಮರಣೆಯಲ್ಲಿ ಉಳಿದಿದೆ. (ರೋಮಾಪುರ 15:4; 1 ಕೊರಿಂಥ 10:11) ವಾಸ್ತವದಲ್ಲಿ, “ಯೆಹೋವನ ಮಾತುಗಳು [ಬೈಬಲಿನಲ್ಲಿ ಒಳಗೊಂಡಿರುವಂತೆ] ಸದಾಕಾಲವೂ ಇರು”ವುದರಿಂದ, ದಾವೀದನ ಪಾಪಗಳ ದಾಖಲೆಯು ಎಂದಿಗೂ ಮರೆಯಲ್ಪಡುವುದಿಲ್ಲ!—1 ಪೇತ್ರ 1:25, NW.
ಹಾಗಾದರೆ, ನಮ್ಮ ಪಾಪಗಳ ಕುರಿತಾಗಿ ನಾವು ಮನಃಪೂರ್ವಕವಾಗಿ ಪಶ್ಚಾತ್ತಾಪಪಡುವಾಗ ಯೆಹೋವನು ಸ್ಲೇಟನ್ನು ಸ್ವಚ್ಛವಾಗಿ ಒರೆಸಿಬಿಡುತ್ತಾನೆಂದು ಹೇಗೆ ಹೇಳಸಾಧ್ಯವಿದೆ? “ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ” ಎಂಬ ಯೆಹೋವನ ಮಾತುಗಳನ್ನು ನಾವು ಹೇಗೆ ಗ್ರಹಿಸಸಾಧ್ಯವಿದೆ?—ಯೆರೆಮೀಯ 31:34.
ಯೆಹೋವನು ಮರೆಯುವ ವಿಧ
‘ನಾನು ಜ್ಞಾಪಿಸಿಕೊಳ್ಳುವೆ’ (ಸಖಾರ್ನ ಒಂದು ರೂಪ) ಎಂದು ನಿರೂಪಿಸುವ ಹೀಬ್ರು ಕ್ರಿಯಾಪದವು ಕೇವಲ ಗತ ವಿಷಯವನ್ನು ಪುನಃ ನೆನಪಿಸಿಕೊಳ್ಳುವುದನ್ನು ಅರ್ಥೈಸುವುದಿಲ್ಲ. ತಿಯಾಲಜಿಕಲ್ ವರ್ಲ್ಡ್ಬುಕ್ ಆಫ್ ದಿ ಓಲ್ಡ್ ಟೆಸ್ಟಮೆಂಟ್ಗನುಸಾರ, ಅದು “ಪ್ರಸ್ತಾಪಿಸು, ಪ್ರಕಟಿಸು, ನಮೂದಿಸು, ಘೋಷಿಸು, ಮೊರೆಯಿಡು, ಶಾಘ್ಲಿಸು, ದೂಷಿಸು, ನಿವೇದಿಸು” ಎಂದೂ ಅರ್ಥೈಸಬಲ್ಲದು. ತಿಯಾಲಜಿಕಲ್ ಡಿಕ್ಷನರಿ ಆಫ್ ದಿ ಓಲ್ಡ್ ಟೆಸ್ಟಮೆಂಟ್ ಕೂಡಿಸುವುದು: “ವಾಸ್ತವದಲ್ಲಿ, ತೀರ ಅನೇಕವೇಳೆ, [ಸಖಾರ್] ಒಂದು ಕ್ರಿಯೆಯನ್ನು ಸೂಚಿಸುತ್ತದೆ ಅಥವಾ ಕ್ರಿಯೆಯ ಕ್ರಿಯಾಪದಗಳೊಂದಿಗೆ ಸಂಯುಕ್ತವಾಗಿ ಕಂಡುಬರುತ್ತದೆ.” ಹೀಗೆ, ತನ್ನ ಮೊಂಡುತನದ ಜನರ ಕುರಿತು ತಾನು “ಇವರ ಅಪರಾಧವನ್ನು ಮನಸ್ಸಿಗೆ ತಂದುಕೊ”ಳ್ಳುವೆನೆಂದು ಯೆಹೋವನು ಹೇಳುವಾಗ, ಅವರ ಪಶ್ಚಾತ್ತಾಪದ ಕೊರತೆಗಾಗಿ ಅವರ ವಿರುದ್ಧವಾಗಿ ತಾನು ಕಾರ್ಯವೆಸಗುವೆನೆಂಬುದನ್ನು ಆತನು ಅರ್ಥೈಸಿದ್ದನು. (ಯೆರೆಮೀಯ 14:10) ಪ್ರತಿಯಾಗಿ, ಯೆಹೋವನು “ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ” ಎಂದು ಹೇಳುವಾಗ, ಒಮ್ಮೆ ಆತನು ನಮ್ಮ ತಪ್ಪುಗಳನ್ನು ಕ್ಷಮಿಸಿದ ಬಳಿಕ, ನಮ್ಮನ್ನು ದೂಷಿಸಲು, ಖಂಡಿಸಲು, ಅಥವಾ ಶಿಕ್ಷಿಸಲಿಕ್ಕಾಗಿ ತಾನು ಅವುಗಳನ್ನು ಪುನಃ ಗಮನಕ್ಕೆ ತರುವುದಿಲ್ಲವೆಂದು ಆತನು ನಮಗೆ ಆಶ್ವಾಸನೆ ಕೊಡುತ್ತಿದ್ದಾನೆ.
ಪ್ರವಾದಿಯಾದ ಯೆಹೆಜ್ಕೇಲನ ಮೂಲಕವಾಗಿ, ತಾನು ಯಾವ ಅರ್ಥದಲ್ಲಿ ಕ್ಷಮಿಸುವೆ ಮತ್ತು ಮರೆಯುವೆನೆಂದು ಯೆಹೋವನು ವಿವರಿಸಿದನು: “ನಾನು ದುಷ್ಟನಿಗೆ—ನೀನು ಸತ್ತೇ ಸಾಯುವಿ ಎಂದು ಹೇಳಲು ಅವನು ತನ್ನ ಪಾಪವನ್ನು ಬಿಟ್ಟು ನೀತಿನ್ಯಾಯಗಳನ್ನು ನಡಿಸುವ ಪಕ್ಷದಲ್ಲಿ, ಅಂದರೆ ಆ ದುಷ್ಟನು ಒತ್ತೆಯನ್ನು ಬಿಗಿಹಿಡಿಯದೆ ದೋಚಿಕೊಂಡದನ್ನು ಹಿಂದಕ್ಕೆ ಕೊಟ್ಟು ಜೀವಾಧಾರವಾದ ವಿಧಿಗಳನ್ನು ಅನುಸರಿಸಿ ಸಕಲದುಷ್ಕರ್ಮಗಳಿಗೂ ದೂರನಾಗಿರುವ ಪಕ್ಷದಲ್ಲಿ ಸಾಯನು, ಬಾಳೇ ಬಾಳುವನು. ಅವನು ಮಾಡಿದ ಯಾವ ಪಾಪವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು (ಅವನ ವಿರುದ್ಧ ನೆನಪಿಸಲ್ಪಡದು, NW); ನೀತಿನ್ಯಾಯಗಳನ್ನು ನಡಿಸುತ್ತಿದ್ದಾನಲ್ಲಾ; ಬಾಳೇ ಬಾಳುವನು.” (ಯೆಹೆಜ್ಕೇಲ 18:21, 22; 33:14-16) ಹೌದು, ಒಬ್ಬ ಪಶ್ಚಾತ್ತಾಪಿ ಪಾಪಿಯನ್ನು ಯೆಹೋವನು ಕ್ಷಮಿಸುವಾಗ, ಆತನು ಸ್ಲೇಟನ್ನು ಸ್ವಚ್ಛವಾಗಿ ಒರೆಸುತ್ತಾನೆ ಮತ್ತು ಭವಿಷ್ಯದಲ್ಲಿ ಎಂದಾದರೂ ಆ ಪಾಪಗಳಿಗಾಗಿ ಆ ವ್ಯಕ್ತಿಯ ವಿರುದ್ಧವಾಗಿ ಆತನು ಕಾರ್ಯವೆಸಗುವುದಿಲ್ಲವೆಂಬರ್ಥದಲ್ಲಿ ಮರೆಯುತ್ತಾನೆ.—ರೋಮಾಪುರ 4:7, 8.
ಅಪರಿಪೂರ್ಣರಾಗಿರುವುದರಿಂದ, ಯೆಹೋವನು ಕ್ಷಮಿಸುವ ಹಾಗೆ ನಾವು ಒಂದು ಪರಿಪೂರ್ಣ ಅರ್ಥದಲ್ಲಿ ಎಂದಿಗೂ ಕ್ಷಮಿಸಲಾರೆವು; ಆತನ ಆಲೋಚನೆಗಳು ಮತ್ತು ಮಾರ್ಗಗಳು ನಮ್ಮವುಗಳಿಗಿಂತ ಅಪಾರವಾಗಿ ಹೆಚ್ಚು ಮಹತ್ತರವಾದವುಗಳಾಗಿವೆ. (ಯೆಶಾಯ 55:8, 9) ಹಾಗಾದರೆ, ನಮ್ಮ ವಿರುದ್ಧವಾಗಿ ಇತರರು ಪಾಪ ಮಾಡುವಾಗ, ನಾವು ಸಮಂಜಸವಾಗಿ ಎಷ್ಟರ ಮಟ್ಟಿಗೆ ಕ್ಷಮಿಸಲು ಮತ್ತು ಮರೆಯಲು ನಿರೀಕ್ಷಿಸಲ್ಪಡಸಾಧ್ಯವಿದೆ?
ನಾವು ಕ್ಷಮಿಸುವ ಮತ್ತು ಮರೆಯಬಲ್ಲ ವಿಧ
‘ಒಬ್ಬರಿಗೊಬ್ಬರು ಉದಾರವಾಗಿ ಕ್ಷಮಿಸುವವರಾಗಿ’ ಇರಿ ಎಂದು ಎಫೆಸ 4:32, (NW) ಪ್ರಚೋದಿಸುತ್ತದೆ. ನಿಘಂಟುಕಾರನಾದ ಡಬ್ಲ್ಯೂ. ಇ. ವೈನ್ಗನುಸಾರ, ‘ಉದಾರವಾಗಿ ಕ್ಷಮಿಸುವುದು’ (ಖಾರಿಸೊಮೈ) ಎಂದು ನಿರೂಪಿಸಲ್ಪಟ್ಟಿರುವ ಗ್ರೀಕ್ ಪದದ ಅರ್ಥ, “ಯಾವ ಷರತ್ತೂ ಇಲ್ಲದೆ ಮೆಚ್ಚಿಕೆಯನ್ನು ಅನುಗ್ರಹಿಸುವುದು.” ನಮ್ಮ ವಿರುದ್ಧವಾಗಿ ನಡೆಸಲ್ಪಡುವ ಅಪರಾಧಗಳು ವಸ್ತುತಃ ಅಪ್ರಧಾನವಾಗಿರುವಾಗ, ಕ್ಷಮೆಯನ್ನು ಕೊಡುವುದರಲ್ಲಿ ಸ್ವಲ್ಪವೇ ಕ್ಲಿಷ್ಟತೆ ನಮಗಿರಬಹುದು. ನಾವು ಕೂಡ ಅಪರಿಪೂರ್ಣರಾಗಿದ್ದೇವೆಂಬುದನ್ನು ಮನಸ್ಸಿನಲ್ಲಿಡುವುದು, ಇತರರ ನ್ಯೂನತೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. (ಕೊಲೊಸ್ಸೆ 3:13) ನಾವು ಕ್ಷಮಿಸುವಾಗ, ನಮ್ಮ ಅಸಮಾಧಾನದ ಭಾವನೆಯನ್ನು ಹೋಗಲಾಡಿಸುತ್ತೇವೆ ಮತ್ತು ಅಪರಾಧಿಯೊಂದಿಗಿನ ನಮ್ಮ ಸಂಬಂಧವು ಶಾಶ್ವತವಾದ ಹಾನಿಯನ್ನು ಅನುಭವಿಸದಿರಬಹುದು. ಸಕಾಲದಲ್ಲಿ, ಅಂತಹ ಅಪ್ರಧಾನ ಅಪರಾಧದ ಯಾವುದೇ ನೆನಪು ಮಾಸಿಹೋಗುವುದು ಸಂಭವನೀಯ.
ಆದರೂ, ನಮಗೆ ತೀವ್ರವಾಗಿ ನೋವನ್ನುಂಟುಮಾಡುತ್ತಾ, ಹೆಚ್ಚು ಗಂಭೀರವಾದ ಒಂದು ರೀತಿಯಲ್ಲಿ, ನಮ್ಮ ವಿರುದ್ಧವಾಗಿ ಇತರರು ಪಾಪ ಮಾಡುವುದಾದರೆ ಆಗೇನು? ಅಗಮ್ಯಗಮನ, ಬಲಾತ್ಕಾರ ಸಂಭೋಗ, ಮತ್ತು ಕೊಲೆಯ ಪ್ರಯತ್ನ ಎಂಬಂತಹ ವಿಪರೀತವಾದ ವಿದ್ಯಮಾನಗಳಲ್ಲಿ, ಕ್ಷಮೆಯು ಅನೇಕ ವಿಭಿನ್ನ ಪರಿಗಣನೆಗಳನ್ನು ಒಳಗೂಡಬಹುದು. ಅಪರಾಧಿಯ ಕಡೆಯಿಂದ ಪಾಪದ ಒಪ್ಪಿಗೆ, ಪಶ್ಚಾತ್ತಾಪ, ಮತ್ತು ಕ್ಷಮಾಯಾಚನೆಯು ಇಲ್ಲದಿರುವಾಗ, ಇದು ನಿರ್ದಿಷ್ಟವಾಗಿ ಸತ್ಯವಾಗಿರಸಾಧ್ಯವಿದೆ.b (ಜ್ಞಾನೋಕ್ತಿ 28:13) ಪಶ್ಚಾತ್ತಾಪಪಡದ, ನಿಷ್ಕರುಣೆಯ ತಪ್ಪಿತಸ್ಥರನ್ನು ಸ್ವತಃ ಯೆಹೋವನು ಕ್ಷಮಿಸುವುದಿಲ್ಲ. (ಇಬ್ರಿಯ 6:4-6; 10:26) ನೋವು ಗಾಢವಾಗಿರುವಾಗ, ಏನು ಸಂಭವಿಸಿತೋ ಅದನ್ನು ಮನಸ್ಸಿನಿಂದ ಸಂಪೂರ್ಣವಾಗಿ ಮರೆತುಬಿಡುವುದರಲ್ಲಿ ನಾವು ಎಂದೂ ಯಶಸ್ವಿಯಾಗದಿರಬಹುದು. ಆದರೂ, ಬರಲಿರುವ ಹೊಸ ಲೋಕದಲ್ಲಿ “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು” ಎಂಬ ಆಶ್ವಾಸನೆಯಿಂದ ನಾವು ಸಾಂತ್ವನಗೊಳಿಸಲ್ಪಡಸಾಧ್ಯವಿದೆ. (ಯೆಶಾಯ 65:17; ಪ್ರಕಟನೆ 21:4) ಆಗ ನಾವು ಏನನ್ನೇ ಜ್ಞಾಪಿಸಿಕೊಳ್ಳುವುದಾದರೂ, ನಾವು ಈಗ ಅನುಭವಿಸಬಹುದಾದ ಗಾಢವಾದ ನೋವು ಅಥವಾ ವೇದನೆಯನ್ನು ಅದು ನಮಗೆ ಉಂಟುಮಾಡುವುದಿಲ್ಲ.
ಇತರ ಸಂದರ್ಭಗಳಲ್ಲಿ ಬಹುಶಃ ನಾವು ಕ್ಷಮಿಸಸಾಧ್ಯವಿರುವುದಕ್ಕೆ ಮೊದಲು ಅಪರಾಧಿಯೊಂದಿಗೆ ಮಾತಾಡುವ ಮೂಲಕ, ವಿಷಯಗಳನ್ನು ಸರಿಪಡಿಸಲಿಕ್ಕಾಗಿ ಕೆಲವು ಆರಂಭದ ಹೆಜ್ಜೆಗಳನ್ನು ನಾವು ತೆಗೆದುಕೊಳ್ಳುವ ಅಗತ್ಯವಿರಬಹುದು. (ಎಫೆಸ 4:26) ಈ ರೀತಿಯಲ್ಲಿ ಯಾವುದೇ ಅಪಾರ್ಥವನ್ನು ಬಗೆಹರಿಸಸಾಧ್ಯವಿದೆ, ಸೂಕ್ತವಾದ ಕ್ಷಮಾಯಾಚನೆಗಳನ್ನು ಮಾಡಸಾಧ್ಯವಿದೆ, ಮತ್ತು ಕ್ಷಮೆಯನ್ನು ವಿಸ್ತೃತಗೊಳಿಸಸಾಧ್ಯವಿದೆ. ಮರೆಯುವುದರ ಕುರಿತೇನು? ಏನು ಮಾಡಲ್ಪಟ್ಟಿತೋ ಅದನ್ನು ನಾವು ಸಂಪೂರ್ಣವಾಗಿ ಎಂದಿಗೂ ಮರೆಯದಿರಬಹುದಾದರೂ, ಅಪರಾಧಿಯ ವಿರುದ್ಧವಾಗಿ ನಾವು ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ ಅಥವಾ ಭವಿಷ್ಯತ್ತಿನಲ್ಲಿ ಎಂದಾದರೂ ಆ ವಿಷಯವನ್ನು ಪುನಃ ಗಮನಕ್ಕೆ ತರುವುದಿಲ್ಲ ಎಂಬರ್ಥದಲ್ಲಿ ನಾವದನ್ನು ಮರೆಯಬಲ್ಲೆವು. ನಾವು ಅದರ ಕುರಿತು ಹರಟುವುದಿಲ್ಲ, ಅಥವಾ ನಾವು ಅಪರಾಧಿಯನ್ನು ಸಂಪೂರ್ಣವಾಗಿ ದೂರಮಾಡುವುದಿಲ್ಲ. ಆದರೂ, ಅಪರಾಧಿಯೊಂದಿಗಿನ ನಮ್ಮ ಸಂಬಂಧವನ್ನು ಸರಿಪಡಿಸಲಿಕ್ಕಾಗಿ ಸ್ವಲ್ಪ ಸಮಯ ತಗಲಬಹುದು, ಮತ್ತು ಹಿಂದೆ ತೋರಿಸುತ್ತಿದ್ದಂತಹದ್ದೇ ಆಪತ್ತೆಯನ್ನು ನಾವು ಅನುಭೋಗಿಸದಿರಬಹುದು.
ಒಂದು ದೃಷ್ಟಾಂತವನ್ನು ಪರಿಗಣಿಸಿರಿ: ಗೂಢವಾದ ವೈಯಕ್ತಿಕ ವಿಷಯವೊಂದನ್ನು ನೀವು ವಿಶ್ವಾಸಪಾತ್ರನಾದ ಒಬ್ಬ ಸ್ನೇಹಿತನಿಗೆ ಹೇಳುತ್ತೀರೆಂದು ಭಾವಿಸಿಕೊಳ್ಳಿ, ಮತ್ತು ನಿಮಗೆ ಭಾರಿ ಪೇಚಾಟ ಅಥವಾ ನೋವನ್ನು ಉಂಟುಮಾಡುವಂತೆ, ಅವನು ಅದನ್ನು ಇತರರಿಗೆ ಬಹಿರಂಗಗೊಳಿಸಿದನೆಂದು ತದನಂತರ ನಿಮಗೆ ತಿಳಿಯುತ್ತದೆ. ವಿಷಯಗಳನ್ನು ಕೂಲಂಕಷವಾಗಿ ಮಾತಾಡಲು ನೀವು ಅವನನ್ನು ಸಮೀಪಿಸುತ್ತೀರಿ ಮತ್ತು ಅವನು ಅದಕ್ಕಾಗಿ ಬಹಳ ಮರುಗುತ್ತಾನೆ; ಅವನು ತಪ್ಪೊಪ್ಪಿಕೊಳ್ಳುತ್ತಾನೆ ಮತ್ತು ಕ್ಷಮೆಗಾಗಿ ಕೇಳಿಕೊಳ್ಳುತ್ತಾನೆ. ಅವನ ಮನಃಪೂರ್ವಕವಾದ ಕ್ಷಮೆಯಾಚನೆಯನ್ನು ಕೇಳಿ, ಅವನನ್ನು ಕ್ಷಮಿಸಲು ನಿಮ್ಮ ಹೃದಯವು ಪ್ರಚೋದಿಸಲ್ಪಡುತ್ತದೆ. ಸಂಭವಿಸಿದ ವಿಷಯವನ್ನು ನೀವು ಸುಲಭವಾಗಿ ಮರೆಯುತ್ತೀರೊ? ಬಹುಶಃ ಇಲ್ಲ; ಭವಿಷ್ಯದಲ್ಲಿ ಅವನನ್ನು ನಂಬಿ ಗುಟ್ಟನ್ನು ತಿಳಿಸುವುದರ ಕುರಿತು ನೀವು ಬಹಳ ಜಾಗರೂಕರಾಗಿರುವಿರೆಂಬುದು ನಿಸ್ಸಂಶಯ. ಆದರೂ ನೀವು ಅವನನ್ನು ಕ್ಷಮಿಸುತ್ತೀರಿ; ಅವನೊಂದಿಗೆ ಆ ವಿಷಯವನ್ನು ನೀವು ಸತತವಾಗಿ ಮತ್ತೆ ವಿಚಾರಿಸುವುದಿಲ್ಲ. ನೀವು ಅಸಮಾಧಾನಕ್ಕೆ ಎಡೆಗೊಡುವುದಿಲ್ಲ, ಅಥವಾ ಅದರ ಕುರಿತಾಗಿ ನೀವು ಇತರರೊಂದಿಗೆ ಹರಟುವುದಿಲ್ಲ. ನೀವು ಹಿಂದೆ ಅವನಿಗೆ ಆಪ್ತರಾಗಿದ್ದಷ್ಟು ಆಪ್ತವಾದ ಅನಿಸಿಕೆ ನಿಮಗಾಗದಿರಬಹುದು, ಆದರೆ ನೀವು ಇನ್ನೂ ಅವನನ್ನು ನಿಮ್ಮ ಕ್ರೈಸ್ತ ಸಹೋದರನಂತೆ ಪ್ರೀತಿಸುತ್ತೀರಿ.—ಜ್ಞಾನೋಕ್ತಿ 20:19ನ್ನು ಹೋಲಿಸಿರಿ.
ಆದರೂ, ವಿಷಯಗಳನ್ನು ಸರಿಪಡಿಸುವ ನಿಮ್ಮ ಪ್ರಯತ್ನಗಳ ಹೊರತಾಗಿಯೂ, ಅಪರಾಧಿಯು ತನ್ನ ತಪ್ಪನ್ನು ಒಪ್ಪಿಕೊಳ್ಳದೆ, ಕ್ಷಮೆಯಾಚಿಸದೆ ಇರುವುದಾದರೆ ಆಗೇನು? ಅಸಮಾಧಾನದ ಭಾವನೆಯನ್ನು ಹೋಗಲಾಡಿಸುವ ಅರ್ಥದಲ್ಲಿ ನೀವು ಕ್ಷಮಿಸಬಲ್ಲಿರೊ? ಇತರರನ್ನು ಕ್ಷಮಿಸುವುದು, ಅವರು ಏನನ್ನು ಮಾಡಿದ್ದಾರೋ ಅದನ್ನು ನಾವು ಮನ್ನಿಸುತ್ತೇವೆ ಅಥವಾ ನಿಕೃಷ್ಟವಾಗಿ ಎಣಿಸುತ್ತೇವೆಂದು ಅರ್ಥೈಸುವುದಿಲ್ಲ. ಅಸಮಾಧಾನವು ಹೊರಲು ಭಾರವಾದ ಒಂದು ಹೊರೆಯಾಗಿದೆ; ಇದು ನಮ್ಮ ಶಾಂತಿಯನ್ನು ಕಸಿದುಕೊಳ್ಳುತ್ತಾ, ನಮ್ಮ ಆಲೋಚನೆಗಳನ್ನು ಹಾಳುಮಾಡಬಲ್ಲದು. ಎಂದಿಗೂ ಬರದ ಒಂದು ಕ್ಷಮೆಯಾಚನೆಗಾಗಿ ಕಾಯುವುದು, ನಾವು ಹೆಚ್ಚೆಚ್ಚಾಗಿ ಆಶಾಭಂಗಗೊಳ್ಳುವಂತೆ ಮಾಡಬಹುದು. ಕಾರ್ಯತಃ ಅಪರಾಧ ಮಾಡುವ ವ್ಯಕ್ತಿಯು ನಮ್ಮ ಮನೋಭಾವಗಳನ್ನು ನಿಯಂತ್ರಿಸುವಂತೆ ನಾವು ಅನುಮತಿಸುತ್ತೇವೆ. ಹೀಗೆ, ಅಸಮಾಧಾನದಿಂದ ಅಪಕರ್ಷಿಸಲ್ಪಡದೆ ನಮ್ಮ ಜೀವಿತವನ್ನು ಮುಂದುವರಿಸುವಂತೆ ಅವರ ಪ್ರಯೋಜನಕ್ಕಾಗಿ ಮಾತ್ರವಲ್ಲ, ನಮ್ಮ ಸ್ವಂತ ಪ್ರಯೋಜನಕ್ಕಾಗಿ, ನಾವು ಇತರರನ್ನು ಕ್ಷಮಿಸುವ, ಅಥವಾ ಅಸಮಾಧಾನದ ಭಾವನೆಯನ್ನು ಹೋಗಲಾಡಿಸುವ ಅಗತ್ಯವಿದೆ.
ಇತರರನ್ನು ಕ್ಷಮಿಸುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ಆದರೆ ಮನಃಪೂರ್ವಕವಾದ ಪಶ್ಚಾತ್ತಾಪವಿರುವಲ್ಲಿ, ನಾವು ಯೆಹೋವನ ಕ್ಷಮೆಯನ್ನು ಅನುಕರಿಸಲು ಪ್ರಯತ್ನಿಸಬಲ್ಲೆವು. ಆತನು ಪಶ್ಚಾತ್ತಾಪಿ ತಪ್ಪಿತಸ್ಥರನ್ನು ಕ್ಷಮಿಸುವಾಗ, ಆತನು ಅಸಮಾಧಾನದ ಭಾವನೆಯನ್ನು ಹೋಗಲಾಡಿಸುತ್ತಾನೆ—ಸ್ಲೇಟನ್ನು ಸ್ವಚ್ಛವಾಗಿ ಒರೆಸಿಬಿಡುತ್ತಾನೆ ಮತ್ತು ಭವಿಷ್ಯದಲ್ಲಿ ಅವರ ವಿರುದ್ಧವಾಗಿ ಆ ಪಾಪಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಮರೆಯುತ್ತಾನೆ. ಅಪರಾಧಿಯು ಪಶ್ಚಾತ್ತಾಪಪಡುವಾಗ, ನಾವು ಕೂಡ ನಮ್ಮ ಅಸಮಾಧಾನದ ಭಾವನೆಯನ್ನು ಹೋಗಲಾಡಿಸಬಲ್ಲೆವು. ಆದರೂ, ನಾವು ಕ್ಷಮಿಸಲು ಬದ್ಧರಾಗಿ ಮಾಡಲ್ಪಡದಿರುವ ಸಂದರ್ಭಗಳೂ ಇರಬಹುದು. ಅನ್ಯಾಯದ ಅಥವಾ ಕ್ರೂರ ವ್ಯವಹಾರದಲ್ಲಿ ವಿಪರೀತವಾದ ವಿದ್ಯಮಾನಗಳಿಗೆ ಆಹುತಿಯಾದವನು, ಪಶ್ಚಾತ್ತಾಪಪಡದ ತಪ್ಪಿತಸ್ಥನನ್ನು ಕ್ಷಮಿಸುವಂತೆ ಒತ್ತಾಯಿಸಲ್ಪಡಬಾರದು. (ಕೀರ್ತನೆ 139:21, 22ನ್ನು ಹೋಲಿಸಿರಿ.) ಆದರೆ ಅಧಿಕಾಂಶ ವಿದ್ಯಮಾನಗಳಲ್ಲಿ ಇತರರು ನಮ್ಮ ವಿರುದ್ಧವಾಗಿ ಪಾಪ ಮಾಡುವಾಗ, ಅಸಮಾಧಾನದ ಭಾವನೆಯನ್ನು ಹೋಗಲಾಡಿಸುವ ಅರ್ಥದಲ್ಲಿ ನಾವು ಕ್ಷಮಿಸಬಲ್ಲೆವು, ಮತ್ತು ಭವಿಷ್ಯದಲ್ಲಿ ಎಂದಾದರೂ ನಮ್ಮ ಸಹೋದರನಿಗೆ ವಿರುದ್ಧವಾಗಿ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳದಿರುವ ಅರ್ಥದಲ್ಲಿ ನಾವದನ್ನು ಮರೆಯಬಲ್ಲೆವು.
[ಅಧ್ಯಯನ ಪ್ರಶ್ನೆಗಳು]
a 1994, ಮಾರ್ಚ್ 8ರ ಎಚ್ಚರ! ಸಂಚಿಕೆಯ, 14-15ನೆಯ ಪುಟಗಳಲ್ಲಿರುವ, “ಬೈಬಲಿನ ದೃಷ್ಟಿಕೋನ: ದೇವರ ಕ್ಷಮಾಪಣೆಯು ಎಷ್ಟು ಸಮಗ್ರವಾಗಿದೆ?” ಎಂಬ ಲೇಖನವನ್ನು ನೋಡಿರಿ.
b ಶಾಸ್ತ್ರಗಳ ಒಳನೋಟ (ಇಂಗ್ಲಿಷ್), 1ನೆಯ ಸಂಪುಟದ 862ನೆಯ ಪುಟವು ಹೇಳುವುದು: “ದುರುದ್ದೇಶದ, ಪಶ್ಚಾತ್ತಾಪಪಡದಿರುವುದರೊಂದಿಗೆ ಉದ್ದೇಶಪೂರ್ವಕವಾದ ಪಾಪವನ್ನು ಅಭ್ಯಾಸಿಸುವವರನ್ನು, ಕ್ಷಮಿಸುವಂತೆ ಕ್ರೈಸ್ತರಿಗೆ ಅವಶ್ಯಪಡಿಸಲಾಗುವದಿಲ್ಲ. ಅಂತಹವರು ದೇವರ ವೈರಿಗಳಾಗಿ ಪರಿಣಮಿಸುತ್ತಾರೆ.”—ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಇನ್ಕ್.ರಿಂದ ಪ್ರಕಾಶಿತ.
[ಪುಟ 25 ರಲ್ಲಿರುವ ಚಿತ್ರ]
ಯೋಸೇಫ ಮತ್ತು ಅವನ ಸಹೋದರರು