ಯೆಹೋವನು ತನ್ನ ಕೆಲಸವನ್ನು ಜಯಪ್ರದ ಮಾಡುವ ವಿಧ
ಇತ್ತೀಚಿನ ದಶಕಗಳಲ್ಲಿ ಯೆಹೋವನ ಸಾಕ್ಷಿಗಳು ಅಸಾಧಾರಣ ಬೆಳವಣಿಗೆಯನ್ನು ಅನುಭವಿಸಿದ್ದಾರೆ. ಕಳೆದ ಕೇವಲ ಹತ್ತು ವರುಷಗಳಲ್ಲಿ ಅವರ ಸಭೆಗಳು 42,600ರಿಂದ 212 ದೇಶಗಳಲ್ಲಿ 60,192ಕ್ಕೆ ಏರಿದೆ. ಈ ಕಾರಣದಿಂದ ಕೆಲವರು, “ಸಾಕ್ಷಿಗಳ ಕೆಲಸಕ್ಕೆ ಹಣದ ಪೋಷಣೆ ಹೇಗೆ ದೊರೆಯುತ್ತದೆ?” ಎಂದು ಕೇಳಿದ್ದಾರೆ. ವಾಚ್ಟವರ್ ಸೊಸೈಟಿಯು ಈ ಪ್ರಶ್ನೆಯನ್ನೂ ಇತರ ಸಂಬಂಧಿತ ಪ್ರಶ್ನೆಗಳನ್ನೂ ಉತ್ತರಿಸಲು ಸಂತೋಷಿಸುತ್ತದೆ.
ಯೆಹೋವನ ಸಾಕ್ಷಿಗಳು ದಶಮಾಂಶ ಕೊಡುವುದನ್ನು ಅಭ್ಯಸಿಸುತ್ತಾರೆಯೆ?
ಇಲ್ಲ. ಪುರಾತನದ ಇಸ್ರಾಯೇಲಿನಲ್ಲಿ ಮೋಶೆಯ ಧರ್ಮಶಾಸ್ತ್ರದ ಕೆಳಗೆ ದೇವಾಲಯದ ಕೆಲಸಗಾರರಾದ ಲೇವಿಯರನ್ನೂ ಯಾಜಕರನ್ನೂ ಪೋಷಿಸಲಿಕ್ಕಾಗಿ ದಶಮಾಂಶವನ್ನು ಕೊಡಬೇಕೆಂಬ ಆಜ್ಞೆಯಿತ್ತು. (ಅರಣ್ಯಕಾಂಡ 18:21, 24-29) ಈ ಕೆಲಸಗಾರರಿಗೆ ಕೆಲವು ಪಟ್ಟಣಗಳಲ್ಲದೆ ಗೋತ್ರ ಜವಿನು ಇರಲಿಲ್ಲವಾದುದರಿಂದ ಈ ವಿಶೇಷ ಪೋಷಣೆ ಅಗತ್ಯವಿತ್ತು. ಇದಲ್ಲದೆ, ವಿಶೇಷ ಯೋಜನೆಗಳಿಗೆ ಅಂದರೆ ಸಾಕ್ಷಿ ಗುಡಾರ ಮತ್ತು ಆ ಬಳಿಕ, ದೇವಾಲಯದ ಯೋಜನೆಗಳಂಥ ಸಂಗತಿಗಳಿಗೆ ನಂಬಿಗಸ್ತ ಇಸ್ರಾಯೆಲ್ಯರು ಸ್ವಂತ ಇಷ್ಟದ ವಂತಿಗೆಗಳನ್ನು ಕೊಡಲು ಸ್ವತಂತ್ರರಾಗಿದ್ದರು.—ವಿಮೋಚನಕಾಂಡ 25:1-8; 1 ಪೂರ್ವಕಾಲವೃತ್ತಾಂತ 29:3-7.
ಆದರೂ ಯೇಸು ಸತ್ತಾಗ, ಅವನು “ಆಜ್ಞಾರೂಪಗಳನ್ನು ಕೆಡಿಸಿ”ಬಿಟ್ಟನೆಂದು ಬೈಬಲು ಹೇಳುತ್ತದೆ. ಇನ್ನೊಂದು ಅರ್ಥದಲ್ಲಿ, ದೇವರ ದೃಷ್ಟಿಯಲ್ಲಿ ಧರ್ಮಶಾಸ್ತ್ರವು ಯೆಹೂದ್ಯರ ಮೇಲಾಗಲಿ ಕ್ರೈಸ್ತರ ಮೇಲಾಗಲಿ ಬಂಧಕವಾಗಿರುವುದಿಲ್ಲ. ಹೀಗೆ, ದೇವಾಲಯದಲ್ಲಿ ಮಾಡಬೇಕಾಗಿದ್ದ ಕ್ರಮದ ಯಜ್ಞಗಳಂಥ ಧರ್ಮಶಾಸ್ತ್ರದ ಇತರ ಸಂಗತಿಗಳಂತೆಯೆ ದಶಮಾಂಶದ ಕೊಡುವಿಕೆಯೂ ಕ್ರೈಸ್ತರಿಂದ ಕೇಳಲ್ಪಡುವುದಿಲ್ಲ.
ಕ್ರೈಸ್ತರ ಮಧ್ಯೆ, ದಾನವು ನಿಯಮದಿಂದಲ್ಲ, ಪ್ರೀತಿಯಿಂದ ಪ್ರಚೋದಿಸಲ್ಪಡುತ್ತದೆ. ಯೂದಾಯದ ಕೊರತೆಯಲ್ಲಿದ್ದ ಕ್ರೈಸ್ತರಿಗೆ ಸಂಗ್ರಹಣವನ್ನು ಸಂಘಟಿಸಿದಾಗ ಅಪೊಸ್ತಲ ಪೌಲನು ಒಂದು ಮೂಲಸೂತ್ರವನ್ನು ವಿವರಿಸಿದನು. ಅವನು ಹೇಳಿದ್ದು: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು. ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂಥ 9:7) ಈ ಇಷ್ಟಪೂರ್ವಕ ಕೊಡುಗೆಯ ಶಾಸ್ತ್ರಾಧಾರಿತ ವಿಧಾನವನ್ನು ಯೆಹೋವನ ಸಾಕ್ಷಿಗಳು ಆಚರಿಸುತ್ತಾರೆ.
ಊಟ ಕೊಟ್ಟು ನಿಧಿ ಸಂಗ್ರಹಿಸುವುದು, ಸಂಗ್ರಹಣ ಲಕೋಟೆಗಳು, ನಿಧಿಗಾಗಿ ಬೇಡಿಕೆ, ಮತಿತ್ತರ ರೀತಿಯ ನಿಧಿಸಂಗ್ರಹಗಳನ್ನು ನೀವು ಮಾಡುತ್ತೀರೊ?
ಇಲ್ಲ. ನಿಜಕ್ರೈಸ್ತರಿಗೆ ಬಹುಮಾನಗಳನ್ನು ಕಣ್ಣೆದುರು ತೂಗಹಾಕಿ ಅಥವಾ ಲಂಚಕೊಟ್ಟು ಹಣ ಕೊಡುವಂತೆ ಬಲಾತ್ಕಾರ ಮಾಡುವ ಅಗತ್ಯವಿಲ್ಲ. ಬಿಂಗೊ, ಬಜಾರ್, ರ್ಯಾಫ್ಲ್, ಕಾರ್ನಿವಲ್, ಪೀಠಾವರಣದ ಬಾಡಿಗೆ ಯಾ ಸಂಗ್ರಹ ತಟ್ಟೆಗಳ ದಾಟಿಸುವಿಕೆಯು, ಅವರು ತಮ್ಮ ಜನರಿಗೆ ಆತ್ಮಿಕಾಹಾರವನ್ನು ಕೊಟ್ಟಿಲ್ಲವೆಂದೂ ಮತ್ತು ಈ ಕಾರಣದಿಂದ ದೇವರಾತ್ಮ ಅವರ ಚರ್ಚ್ಸದಸ್ಯರು ಸಲೀಸಾಗಿ ಹಣ ಸಹಾಯ ಮಾಡುವಂತೆ ಪ್ರೇರಿಸುವುದಿಲ್ಲವೆಂದೂ ತೋರಿಸುತ್ತದೆ. ಹಳೆಯ ಪದ್ಧತಿಯಾದ ದಶಮಾಂಶ ಕೊಡುವವರ ವಿಷಯವೂ ಇದನ್ನೇ ಹೇಳಸಾಧ್ಯವಿದೆ.—ಮತ್ತಾಯ 10:8.
ಹೊಸ ರಾಜ್ಯ ಸಭಾಗೃಹ, ಬ್ರಾಂಚ್ ಆಫೀಸು, ಬ್ರೂಕ್ಲಿನ್ ಪ್ರಧಾನ ಕಚೇರಿ ಮತ್ತು ನ್ಯೂ ಯಾರ್ಕಿನ ಪ್ಯಾಟರ್ಸನ್ನಲ್ಲಿ ನಡೆಯುವ ಕಟ್ಟಡ ಯೋಜನೆಗಳಿಗೆ ನೀವು ಹೇಗೆ ಹಣ ಒದಗಿಸುತ್ತೀರಿ?
ಯೆಹೋವನು ತನ್ನ ಜನರ ಮೇಲೆ ಪವಿತ್ರಾತ್ಮವನ್ನು ಸುರಿಸುವುದರಿಂದ ಅದು, “ಅವರು ಒಳ್ಳೆಯದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ದಾನಧರ್ಮಗಳನ್ನು ಮಾಡುವವರೂ ಪರೋಪಕಾರ ಮಾಡುವವರೂ ಆಗಿದ್ದು ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟು”ಕೊಳ್ಳುವವರಾಗುವಂತೆ ಸಾಧ್ಯ ಮಾಡುತ್ತದೆ. (1 ತಿಮೊಥಿ 6:18, 19) ಇದು, ಯೆಹೋವನ ಸಾಕ್ಷಿಗಳು ಪ್ರತಿಯೊಂದು ವಿಧದಲ್ಲಿ ರಾಜ್ಯ ಕೆಲಸವನ್ನು ಬೆಂಬಲಿಸುವಂತೆ ಪ್ರಚೋದಿಸುತ್ತದೆ.
ಉದಾಹರಣೆಗೆ, 1989ರಲ್ಲಿ, 212 ದೇಶಗಳ 37,87,188 ಸಾಕ್ಷಿಗಳು, 835,426,538 ತಾಸುಗಳನ್ನು ದೇವರ ವಾಕ್ಯವನ್ನು ಇತರರಿಗೆ ಕಲಿಸುವುದರಲ್ಲಿ ಕಳೆದರು. ಮತ್ತು ಅವರು, 34,19,745 ಕ್ರಮದ ಬೈಬಲ್ ಅಧ್ಯಯನಗಳನ್ನು ನಡೆಸಿದರು. ಈ ಕೆಲಸದಲ್ಲಿ ತಗಲುವ ಖರ್ಚನ್ನು ಅದನ್ನು ಮಾಡುವವರೇ ಹೊತ್ತರು. ಈ ಪ್ರೀತಿಯ ಶ್ರಮಕ್ಕೆ ಯೆಹೋವನು 263,855 ಹೊಸ ಸ್ನಾನಿತ ಸಾಕ್ಷಿಗಳನ್ನು ಕೊಟ್ಟು ಪ್ರತಿಫಲ ನೀಡಿದನು.
ಇದೇ ರೀತಿಯ ದಾನ ಮನೋಭಾವ, ಸಾಕ್ಷಿಗಳು ಮತ್ತು ಆಸಕ್ತರು ಆರ್ಥಿಕ ರೀತಿಯಲ್ಲಿ ಬೆಂಬಲ ನೀಡುವಂತೆ ಪ್ರೇರೇಪಿಸುತ್ತದೆ. ತಮ್ಮ ಸ್ಥಳೀಕ ಸಭೆಗಳ ಖರ್ಚನ್ನು ಅವರೇ ವಹಿಸುವುದು ಮಾತ್ರವಲ್ಲ, ರಾಜ್ಯ ಸಭಾಗೃಹ, ಎಸೆಂಬ್ಲಿ ಹಾಲ್ಗಳನ್ನು ರಿಪೇರಿ ಯಾ ವಿಸ್ತರಣ ಯಾ ಹೊಸ ಹಾಲ್ನ ಕಟ್ಟುವಿಕೆಯಂಥ ಅವಶ್ಯವಿರುವ ಕಟ್ಟಡಗಳ ಕೆಲಸವನ್ನೂ ಅವರು ಬೆಂಬಲಿಸುತ್ತಾರೆ. ಪ್ರತಿ ವರ್ಷ ತೀವ್ರಗತಿಯ ಬೆಳವಣಿಗೆಯ ಕಾರಣ ಅನೇಕಾನೇಕ ರಾಜ್ಯ ಸಭಾಗೃಹಗಳನ್ನು ಕಟ್ಟಬೇಕಾಗುತ್ತದೆ. ಮತ್ತು ಇವುಗಳಲ್ಲಿ ಕೆಲವು ನೂರಾರು ಸಾವಿರ ಡಾಲರ್ ಖರ್ಚು ತಗಲುವಂಥವುಗಳು. ಇವುಗಳ ಖರ್ಚನ್ನು ಸ್ಥಳೀಕ ಸಾಕ್ಷಿಗಳು ತಮ್ಮ ಹಣಸಹಾಯ ಮತ್ತು ಶ್ರಮದ ಮೂಲಕ ವಹಿಸುತ್ತಾರೆ.
ಇದಲ್ಲದೆ, ಅನೇಕ ದೇಶಗಳಲ್ಲಿ, ಬೆಳೆಯುತ್ತಿರುವ ಸಂಘಗಳ ಹೆಚ್ಚುತ್ತಿರುವ ಸಿಬ್ಬಂದಿ ಮತ್ತು ಸೌಕರ್ಯಗಳ ಅನುಕೂಲಕ್ಕೆ, ಬ್ರಾಂಚ್ ಪ್ರಿಂಟಿಂಗ್ ಮತ್ತು ಆಫೀಸು ಸೌಕರ್ಯ ಮತ್ತು ನಿವಾಸ ಸ್ಥಳಗಳನ್ನು ವಿಸ್ತರಿಸಬೇಕಾಗಿದೆ ಯಾ ಹೊಸ ಕಟ್ಟಡಗಳನ್ನು ಕಟ್ಟಬೇಕಾಗಿದೆ. ಬ್ರೂಕ್ಲಿನ್ ಮತ್ತು ಪ್ಯಾಟರ್ಸನ್ನಲ್ಲಿ ನಡೆಯುವ ನವೀಕರಣದ ಕೆಲಸಗಳನ್ನೂ ಸ್ವಂತ ಇಷ್ಟದ ಹಣಸಹಾಯ ಮತ್ತು ಶ್ರಮದಾನದಿಂದ ಮಾಡಲಾಗುತ್ತದೆ. ಸಾಧ್ಯವಿರುವಲ್ಲಿ ಸ್ಥಳೀಕ ಸಾಕ್ಷಿಗಳು ಹಣಸಹಾಯ ನೀಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ, ಬ್ರಾಂಚ್ಗಳು ಆರ್ಥಿಕ ಹಾಗೂ ನಿಪುಣ ಕೆಲಸಗಾರರ ಸಹಾಯವನ್ನು ಇತರ ದೇಶಗಳಿಂದ ಪಡೆಯುವಂತೆ ವಾಚ್ಟವರ್ ಸೊಸೈಟಿ ಏರ್ಪಡಿಸುತ್ತದೆ. ಹೀಗೆ, ಸೊಸೈಟಿಯ ಮೇಲ್ವಿಚಾರಣೆಯಲ್ಲಿ, “ಸಮಾನತ್ವ”ವಿರುವಂತೆ ನೋಡಲಾಗುತ್ತದೆ.— 2 ಕೊರಿಂಥ 8:14.
ಇತರ ಧರ್ಮಪಂಗಡಗಳು ಮಾಡುವಂತೆ, ನೀವೇಕೆ ಆಸ್ಪತ್ರೆ ಯಾ ಚಿಕಿತ್ಸಾಲಯಗಳನ್ನು ನಡೆಸುವುದಿಲ್ಲ, ಮತ್ತು ನೆರವಿನ ಕಾಮಗಾರಿ ಮತಿತ್ತರ ಸಮಾಜ ಸೇವೆಯಲ್ಲಿ ಭಾಗವಹಿಸುವುದಿಲ್ಲ?
ಯುದ್ಧ ಯಾ ನೈಸರ್ಗಿಕ ವಿಪತ್ತುಗಳ ಸಮಯ ಸಾಧ್ಯವಿರುವಲ್ಲಿ ಯೆಹೋವನ ಸಾಕ್ಷಿಗಳು ಬೇಗನೆ ಪ್ರತಿವರ್ತನೆ ತೋರಿಸುತ್ತಾರೆ. ವಾಸ್ತವವೇನಂದರೆ, ಆಹಾರ, ಬಟ್ಟೆ ಮತ್ತು ಪುನರ್ರಚನೆಗೆ ಸಹಾಯ ಮಾಡಲು ಸ್ವಯಂಸೇವಕರನ್ನು ಒದಗಿಸುವುದರಲ್ಲಿ ಅವರು ಅನೇಕ ವೇಳೆ ಮೊದಲಿಗರು. ಆದರೆ, ಜೀವರಕ್ಷಣೆಗಾಗಿರುವ ಅಗ್ನಿಶಾಮಕ ದಳ ಮತ್ತು ಪೋಲೀಸ್ ದಳವನ್ನು ಅವರು ಹೇಗೆ ನಡೆಸುವುದಿಲ್ಲವೊ ಅದೇ ರೀತಿ ಅವರು ಆಸ್ಪತ್ರೆ ಯಾ ಚಿಕಿತ್ಸಾಲಯಗಳನ್ನು ನಡೆಸುವುದಿಲ್ಲ.
ಅವರು ಸುವಾರ್ತೆಯ ಸಮರ್ಪಿತ ಶುಶ್ರೂಷಕರು ಮತ್ತು ಅಂತ್ಯ ಬರುವ ಮೊದಲು ದೇವರ ರಾಜ್ಯದ ಸುವಾರ್ತೆಯನ್ನು ಸಾರಿ ಕಲಿಸುವುದೇ ಅವರ ಜವಾಬ್ದಾರಿ. (ಮತ್ತಾಯ 24:14) ಯೇಸು ಹೇಳಿದಂತೆ, ಬೆಳೆ ಬಹಳ, ಶ್ರಮಿಕರು ಕೊಂಚ. ಈ ಸರ್ವ ಪ್ರಾಮುಖ್ಯ ಕೆಲಸವನ್ನು ಅಸಡ್ಡೆ ಮಾಡಿ, ಎಷ್ಟೇ ಸ್ತುತ್ಯರ್ಹವಾದ ಬೇರೆ ಚಟುವಟಿಕೆಗಳನ್ನು ಮಾಡುವುದೂ ಅಕ್ಷಮ್ಯವಾಗಿರುವುದು.—ಮತ್ತಾಯ 9:37, 38.
ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಡಾಕ್ಟರ್, ನರ್ಸ್ ಮತ್ತು ಆಸ್ಪತ್ರೆಗಳ ಸಿಬ್ಬಂದಿಗಳಾಗಿದ್ದಾರೆ. ಆದರೆ ಇದು, ಅವರ ಪ್ರಧಾನ ಕೆಲಸವಾದ ಕ್ರೈಸ್ತ ಶುಶ್ರೂಷೆಗೆ ದ್ವಿತೀಯವೆಂಬಂತೆ ಅವರು ವೀಕ್ಷಿಸುತ್ತಾರೆ.
ವಾಚ್ಟವರ್ ಸೊಸೈಟಿಯ ಆಫೀಸರ್ಗಳು ಯಾ ಸದಸ್ಯರಲ್ಲಿ ಯಾರಾದರೂ ನಿಮ್ಮ ವಿಸ್ತಾರವಾದ ಮುದ್ರಣ ಚಟುವಟಿಕೆಯಿಂದಾಗಿ ಹಣ ಮಾಡುವುದುಂಟೆ?
ಇಲ್ಲವೇ ಇಲ್ಲ! ಕಾನೂನಿನಂತೆ, ಸೊಸೈಟಿ ಒಂದು ನಾನ್ಪ್ರಾಫಿಟ್ ಸಂಘ. ಅದರಲ್ಲಿ ಬಂಡವಾಳದಾರರು, ಲಾಭಾಂಶವಿಲ್ಲ. ಸಂಬಳವೂ ಇಲ್ಲ. ಪ್ರಧಾನ ಕಚೇರಿಯ ಪ್ರತಿಯೊಬ್ಬ ಶುಶ್ರೂಷಕನು, ಸೊಸೈಟಿಯ ಅಧ್ಯಕ್ಷ ಮತ್ತು ಡೈರೆಕ್ಟರುಗಳು ಸೇರಿ, ಶಾಸನಬದ್ಧವಾದ ಬಡತನದ ಪ್ರತಿಜ್ಞೆ ಮಾಡಿದ್ದಾರೆ. ಅವರಿಗೆ ಆಹಾರ, ವಸತಿ, ಅಗತ್ಯವಿರುವ ವೈದ್ಯಕೀಯ ಸಹಾಯ ಮತ್ತು ವೆಚ್ಚಭರ್ತಿಗಾಗಿ ಚಿಕ್ಕ ಮೊತ್ತದ ಹಣ ದೊರೆಯುತ್ತದೆ. ಸೊಸೈಟಿಯ ಕೆಲಸಕ್ಕಾಗಿ ಒಬ್ಬ ಸಾಕ್ಷಿ ಪ್ರಯಾಣಿಸುವಲ್ಲಿ ಸಾಧಾರಣವಾಗಿ ಆ ಖರ್ಚನ್ನು ಸೊಸೈಟಿ ನೋಡಿಕೊಳ್ಳುತ್ತದೆ.
ಇದಲ್ಲದೆ, ನಮ್ಮ ಶುಶ್ರೂಷಕರು ಲೋಕದಲ್ಲಿ ಎಲ್ಲಿಯೂ ವಿವಾಹ, ದೀಕ್ಷಾಸ್ನಾನ ಯಾ ಶವಸಂಸ್ಕಾರಗಳಿಗೆ ಹಣ ತಕ್ಕೊಳ್ಳುವುದಿಲ್ಲ. ಸಾರ್ವಜನಿಕ ಭಾಷಣ ಮತ್ತು ಸಮ್ಮೇಳನಗಳಲ್ಲಿ ಪ್ರವೇಶ ಧನವಾಗಲಿ ಹಣಸಂಗ್ರಹವಾಗಲಿ ಇರುವುದಿಲ್ಲ.
ಹಣದ ಪೇಟ್ಲನ್ನು ದಾಟಿಸುವುದೇ ಇಲ್ಲವಾದರೆ ಸ್ಥಳೀಕ ಸಭೆಗಳು ತಮ್ಮ ಖರ್ಚಿಗಾಗಿ ವಂತಿಗೆಯನ್ನು ಪಡೆಯುವುದು ಹೇಗೆ?
ರಾಜ್ಯ ಸಭಾಗೃಹಗಳಲ್ಲಿ ವಂತಿಗೆಯ ಪೆಟ್ಟಿಗೆಗಳಿವೆ. ಬಯಸುವಲ್ಲಿ ವ್ಯಕ್ತಿಗಳು ಸ್ವಂತ ಇಷ್ಟದ ವಂತಿಗೆ ನೀಡಬಹುದು. (2 ಅರಸು 12:9) ದೊಡ್ಡ ಮೊತ್ತದ್ದಾಗಲಿ ಚಿಕ್ಕದಾಗಲಿ, ಎಲ್ಲ ವಂತಿಗೆಗಳನ್ನು ಗಣ್ಯಮಾಡಲಾಗುತ್ತದೆ. (ಮಾರ್ಕ 12:42-44) ತಿಂಗಳಿಗೊಮ್ಮೆ, ಸಭೆಯ ಲೆಕ್ಕ ಪತ್ರಗಳನ್ನು ನೋಡಿಕೊಳ್ಳುವ ಶುಶ್ರೂಷಕನು, ದೊರೆತಿರುವ ಒಟ್ಟು ಹಣ, ಖರ್ಚು ಮತ್ತು ಲೋಕವ್ಯಾಪಕವಾದ ಸಾರುವ ಕೆಲಸ ಮತ್ತು ಇತರ ಯೋಜನೆಗಳಿಗಾಗಿ ವಾಚ್ಟವರ್ ಸೊಸೈಟಿಗೆ ಕಳುಹಿಸಿರುವ ವಂತಿಗೆಗಳ ಒಂದು ಸಂಕ್ಷಿಪ್ತ ಲೆಕ್ಕವನ್ನು ಓದುತ್ತಾನೆ.
ವ್ಯಕ್ತಿಗಳಿಗೆ ಈ ಏರ್ಪಾಡು ಗೊತ್ತಾದಾಗ ಅವರ “ಸಂಪಾದನೆ”ಗೆ ಅನುಸಾರ, ಇಷ್ಟವಿರುವಲ್ಲಿ ಅವರು ಇದರಲ್ಲಿ ಭಾಗವಹಿಸಲು ಸ್ವತಂತ್ರರು. (1 ಕೊರಿಂಥ 16:2) ಲೋಕವ್ಯಾಪಕವಾಗಿ, 63,000 ಕ್ಕೂ ಹೆಚ್ಚು ಸಭೆಗಳಲ್ಲಿ ಪ್ರತಿಯೊಂದರಲ್ಲಿ ಈ ಪದ್ಧತಿಯಿದೆ.
ಪಂಚಾಶತ್ತಮದ ಸಮಯದಲ್ಲಿ ಆದಿ ಕ್ರೈಸ್ತರು ಎಲ್ಲ ಸೊತ್ತುಗಳು ಸರ್ವರಿಗೆ ಸೇರಿದ್ದೆಂದು ಎಣಿಸಿದರು. ಯೆಹೋವನ ಸಾಕ್ಷಿಗಳೂ ಹೀಗೆ ಮಾಡುತ್ತಾರೆಯೆ?
ಸಾ.ಶ. 33ರ ಪಂಚಾಶತ್ತಮದ ಬಳಿಕ ಒಂದು ತುರ್ತು ಪರಿಸ್ಥಿತಿ ಎದ್ದು ಬಂತು. ಇತ್ತೀಚೆಗೆ ಕ್ರೈಸ್ತತ್ವಕ್ಕೆ ಪರಿವರ್ತಿತರಾಗಿದ್ದ ದೂರ ದೇಶಗಳ ಯೆಹೂದ್ಯರು ಹೆಚ್ಚಿನ ಆತ್ಮಿಕ ಜ್ಞಾನ ಪಡೆಯಲಿಕ್ಕಾಗಿ ಯೆರೂಸಲೇಮಿನಲ್ಲಿ ಉಳಿದರು. ಅವರಿಗೆ ಆಗ ತಾತ್ಕಾಲಿಕ ಊಟ, ವಸತಿಯ ಅಗತ್ಯ ಬಿತ್ತು. ಆಗ ಸ್ಥಳೀಕ ಕ್ರೈಸ್ತರು ಇಷ್ಟಪೂರ್ವಕವಾಗಿ ಸೊತ್ತುಗಳನ್ನು ಮಾರಾಟ ಮಾಡಿ ಹೆಚ್ಚಿನ ಸಹವಾಸಕ್ಕಾಗಿ ಒದಗಿಸಲು ಬಂದ ಹಣದಲ್ಲಿ ಸಹಭಾಗಿಗಳಾದರು. (ಅಪೊಸ್ತಲರ ಕೃತ್ಯ 2:1, 38-47; 4:32-37) ಮಾರಲು ಯಾ ವಂತಿಗೆ ಕೊಡಲು ಯಾರನ್ನೂ ನಿರ್ಬಂಧಿಸಲಾಗಲಿಲ್ಲ. (ಅಪೊಸ್ತಲರ ಕೃತ್ಯ 5:1-4) ಕೆಲವರು ಊಹಿಸುವಂತೆ, ಈ ಸಹಭಾಗಿತ್ವವು ಸಮತಾವಾದವಲ್ಲ. ಇದೊಂದು ಕೇವಲ ತಾತ್ಕಾಲಿಕ ಏರ್ಪಾಡಾಗಿತ್ತು. ಕ್ರೈಸ್ತರು ತಮ್ಮ ತಮ್ಮ ಮನೆಗಳಿಗೆ ಹಿಂದೆರಳಿದಾಗ ಇದು ನಿಂತು ಹೋಯಿತು.
ಪ್ರಾಪಂಚಿಕ ಕೊಡುಗೆಯಿಂದ ಪಾಪಕ್ಕೆ ಪ್ರಾಯಶ್ಚಿತ್ತ ದೊರೆಯುತ್ತದೆಂದು ನೀವು ಬೋಧಿಸುತ್ತೀರೊ?
ಇಲ್ಲವೇ ಇಲ್ಲ! ಬೈಬಲು ಹೇಳುವುದು: “ನಿಮ್ಮ ಹಿರಿಯರು ಕಲಿಸಿಕೊಟ್ಟ ವ್ಯರ್ಥವಾದ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ಬೆಳ್ಳಿ ಭಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ. ಪೂರ್ಣಾಂಗವಾದ ನಿಷ್ಕಳಂಕ ಯಜ್ಞದ ಕುರಿಯ ರಕ್ತದಿಂದಲೇ ಎಂದು ಬಲ್ಲಿರಲ್ಲವೇ.”—1 ಪೇತ್ರ 1:18, 19.
ಯೆಹೋವನ ಸಾಕ್ಷಿಗಳು ರಕ್ಷಣೆಗಾಗಿ ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯಿಡುತ್ತಾರೆ. ರಕ್ಷಣೆ ದೊರೆಯುವುದನ್ನು ನಿರೀಕ್ಷಿಸಿ ಅವರು ಸ್ವಂತ ಇಷ್ಟದ ವಂತಿಗೆಗಳನ್ನು ಕೊಡುವುದಿಲ್ಲ. ಆದರೂ, ದೇವರ ನೀತಿಯ ಲೋಕದ ಸುವಾರ್ತೆಯನ್ನು ಸಾರಲು ತುಂಬ ಹಣ ಬೇಕೆಂದು ಅವರು ತಿಳಿದಿದ್ದಾರೆ. (2 ಪೇತ್ರ 3:13) ಮತ್ತು ಈ ಸಾರುವಿಕೆ ಮಾಡಲು ವಂತಿಗೆ ಕೊಡುವುದು ಯೆಹೋವನು ಅವರಿಗೆ ಕೊಟ್ಟಿರುವ ಸುಯೋಗವೆಂದು ಅವರ ಅನಿಸಿಕೆ.
ತನ್ನ ಮಗನಾದ ಸೊಲೊಮೋನನು ಕಟ್ಟಲಿಕ್ಕಿದ್ದ ಯೆಹೋವನ ದೇವಾಲಯಕ್ಕಾಗಿ ಒಂದು ದೊಡ್ಡ ವಂತಿಗೆಯನ್ನು ಕೊಟ್ಟಾಗ ರಾಜ ದಾವೀದನು ಪ್ರಾರ್ಥಿಸಿದ್ದು: “ಯೆಹೋವಾ, ಮಹಿಮಪ್ರತಾಪವೈಭವ ಪರಾಕ್ರಮ ಪ್ರಭಾವಗಳು ನಿನ್ನವು; ಭೂಮ್ಯಾಕಾಶಗಳಲ್ಲಿರುವದೆಲ್ಲಾ ನಿನ್ನದೇ. . . ನಾವು ಈ ಪ್ರಕಾರ ಸ್ವೇಚ್ಛೆಯಿಂದ ಕಾಣಿಕೆಗಳನ್ನು ಸಮರ್ಪಿಸಲು ಶಕ್ತಿ ಹೊಂದಿದ್ದಕ್ಕೆ ನಾನಾಗಲಿ ನನ್ನ ಪ್ರಜೆಗಳಾಗಲಿ ಎಷ್ಟರವರು? ಸಮಸ್ತವು ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು.”—1 ಪೂರ್ವಕಾಲವೃತ್ತಾಂತ 29:11, 14.
ಇಂದು, ಯೆಹೋವನ ಸಾಕ್ಷಿಗಳ ಮತ್ತು ಇತರ ನೀತಿಪ್ರವೃತ್ತಿಯ ಜನರ ಅನಿಸಿಕೆಯೂ ದಾವೀದನಂತೆಯೆ ಇದೆ. ಯೆಹೋವನನ್ನು ಸ್ತುತಿಸುವ ಕೆಲಸದ ಬೆಂಬಲಕ್ಕಾಗಿ ಕಾಣಿಕೆ ಕೊಡುವ ಸುಯೋಗಕ್ಕಾಗಿ ಅವರು ಸಂತೋಷವುಳ್ಳವರಾಗಿದ್ದಾರೆ. ಆತನ ಸೇವೆಗೆ ಅವರು ಕೊಡುವುದೆಲ್ಲ ಆತನಿಂದಲೆ ಬಂದಿದೆಯೆಂದು ಅವರು ಒಪ್ಪುತ್ತಾರೆ. ಈ ಕೊಡುಗೆಯ ಆತ್ಮವನ್ನು ಆತನು ಆಶೀರ್ವದಿಸುತ್ತಾನೆ ಮತ್ತು ಹೀಗೆ ಆತನು ತನ್ನ ಕೆಲಸವನ್ನು ಜಯಪ್ರದ ಮಾಡುತ್ತಾನೆ. (w90 12/1)
[ಪುಟ 30 ರಲ್ಲಿರುವ ಚೌಕ]
ಕೆಲವರು ರಾಜ್ಯ ಕೆಲಸಕ್ಕೆ ವಂತಿಗೆ ನೀಡುವ ವಿಧ
▫ ದಾನಗಳು: ಸ್ವಂತ ಇಷ್ಟದಿಂದ ಮಾಡುವ ಹಣದಾನವನ್ನು ನೇರವಾಗಿ Watch Tower Bible and Tract Society of India” H-58 Old Khandala Road., Lonavla 410 401, Mah., ಯಾ ಈ ಪತ್ರಿಕೆಯ ಪ್ರಕಾಶಕರಿಗೆ ಕಳುಹಿಸಬಹುದು. ಇಂಥ ವಂತಿಗೆಗಳೊಂದಿಗೆ, ಇದು ನೇರವಾಗಿ ಮಾಡಿರುವ ದಾನ ಎಂದು ಹೇಳುವ ಒಂದು ಕಿರಿದಾದ ಪತ್ರವನ್ನು ಕಳುಹಿಸಬೇಕು.
▫ ಷರತ್ತಿರುವ ದಾನದ ಏರ್ಪಾಡು: ವಾಚ್ಟವರ್ ಸೊಸೈಟಿ ಟ್ರಸ್ಟಿನಲ್ಲಿ ಇಟ್ಟುಕೊಳ್ಳುವಂತೆ ಹಣವನ್ನು ಕೊಡಬಹುದು. ಸ್ವಂತ ಆವಶ್ಯಕತೆ ಇರುವಾಗ ಅದನ್ನು ದಾನಿಗೆ ಹಿಂದೆ ಕೊಡುವ ಷರತ್ತು ಅದರಲ್ಲಿರಬಹುದು.
▫ ವಿಮೆ: ಜೀವವಿಮಾ ಪಾಲಿಸಿ ಯಾ ನಿವೃತ್ತಿ ಯಾ ಪೆನ್ಶನ್ ಯೋಜನೆಯಲ್ಲಿ ವಾಚ್ಟವರ್ ಸೊಸೈಟಿಯನ್ನು ಫಲಾನುಭವಿಯಾಗಿ ಮಾಡಬಹುದು. ಇಂಥ ಏರ್ಪಾಡನ್ನು ಸೊಸೈಟಿಗೆ ತಿಳಿಸಬೇಕು.
▫ ಟ್ರಸ್ಟ್ಗಳು: ಬ್ಯಾಂಕಿನ ಉಳಿತಾಯವನ್ನು ಸೊಸೈಟಿಗಾಗಿ ಟ್ರಸ್ಟಿನಲ್ಲಿ ಇಡಬಹುದು. ಹೀಗೆ ಮಾಡುವಲ್ಲಿ ದಯವಿಟ್ಟು ಸೊಸೈಟಿಗೆ ತಿಳಿಸಿರಿ. ಸ್ಟಾಕ್, ಬಾಂಡ್ ಮತ್ತು ಸೊತ್ತುಗಳನ್ನೂ ಈ ಏರ್ಪಾಡಿನಲ್ಲಿ, ದಾನಿಯ ಜೀವಮಾನಕಾಲ ದಾನಿ ಪ್ರಯೋಜನ ಪಡೆಯುವಂತೆ ಇಡಬಹುದು. ಈ ವಿಧಾನ, ಉಯಿಲನ್ನು ಪ್ರೊಬೇಟ್ ಮಾಡುವ ಖರ್ಚು ಮತ್ತು ಅನಿಶ್ಚಿತತೆಯನ್ನು ತೊಲಗಿಸುವುದಲ್ಲದೆ ಮರಣಹೊಂದುವಲ್ಲಿ ಸೊಸೈಟಿ ಸೊತ್ತನ್ನು ಪಡೆಯುವ ಖಾತರಿ ಕೊಡುತ್ತದೆ.
▫ ಉಯಿಲುಗಳು: ಸೊತ್ತು ಯಾ ಹಣವನ್ನು ವಾಚ್ಟವರ್ ಸೊಸೈಟಿಗೆ, ಶಾಸನಬದ್ಧವಾದ ಇಷ್ಟಪತ್ರವನ್ನು ಮಾಡಿ ಬಿಡಬಹುದು. ಇದರ ಒಂದು ಪ್ರತಿಯನ್ನು ಸೊಸೈಟಿಗೆ ಕಳುಹಿಸಬೇಕು.
ಇದರ ಕುರಿತ ಹೆಚ್ಚಿನ ಮಾಹಿತಿ ಮತ್ತು ಸಲಹೆಗೆ Watch Tower Bible and Tract Society of India, H-58 Old Khandala Road., Lonavla 410 401, Mah., ಯಾ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ.
[ಪುಟ 31 ರಲ್ಲಿರುವ ಚಿತ್ರ]
ನ್ಯೂ ಯಾರ್ಕಿನ ಪ್ಯಾಟರ್ಸನ್ನಲ್ಲಿ ಕಟ್ಟಲ್ಪಡುತ್ತಿರುವ ಯೆಹೋವನ ಸಾಕ್ಷಿಗಳ ಬೈಬಲ್ ವಿದ್ಯಾ ಕೇಂದ್ರದ ಒಂದು ಭಾಗ
[ಪುಟ 32 ರಲ್ಲಿರುವ ಚಿತ್ರಗಳು]
ಯೆಹೋವನು ಇಷ್ಟದಿಂದ ಕಾಣಿಕೆ ಕೊಡುವ ತನ್ನ ಜನರ ಕಟ್ಟುವ ಕೆಲಸಗಳನ್ನು ಜಯಪ್ರದ ಮಾಡುತ್ತಾನೆ.