ನಿಮ್ಮ ಸೃಷ್ಟಿಕರ್ತ—ಆತನು ಎಂಥವನೆಂಬುದನ್ನು ತಿಳಿದುಕೊಳ್ಳಿರಿ
“ನನ್ನ ಸರ್ವೋತ್ತಮತ್ವವನ್ನು ನಿನ್ನೆದುರಾಗಿ ದಾಟಿಹೋಗುವಂತೆ ಮಾಡುವೆನು; ಯೆಹೋವನ ನಾಮದ ಮಹತ್ವವನ್ನು ನಿನ್ನೆದುರಾಗಿ ಪ್ರಕಟಿಸುವೆನು.”—ವಿಮೋಚನಕಾಂಡ 33:19.
1. ಸೃಷ್ಟಿಕರ್ತನು ಏಕೆ ಗೌರವಾರ್ಹನಾಗಿದ್ದಾನೆ?
ಬೈಬಲಿನ ಕೊನೆಯ ಪುಸ್ತಕದ ಬರಹಗಾರನಾದ ಅಪೊಸ್ತಲ ಯೋಹಾನನು, ಸೃಷ್ಟಿಕರ್ತನ ಕುರಿತು ಅಗಾಧವಾದ ಈ ಹೇಳಿಕೆಯನ್ನು ದಾಖಲಿಸಿದನು: “ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” (ಪ್ರಕಟನೆ 4:11) ಹಿಂದಿನ ಲೇಖನವು ರುಜುಪಡಿಸಿರುವಂತೆ, ಎಲ್ಲ ವಸ್ತುಗಳ ಸೃಷ್ಟಿಕರ್ತನೊಬ್ಬನು ಇದ್ದಾನೆಂದು ನಂಬಲು ಆಧುನಿಕ ವಿಜ್ಞಾನದ ಕಂಡುಹಿಡಿತಗಳು ಕಾರಣಗಳನ್ನು ಕೂಡಿಸುತ್ತವೆ.
2, 3. (ಎ) ಸೃಷ್ಟಿಕರ್ತನ ಕುರಿತು ಜನರು ಏನನ್ನು ಕಲಿಯಬೇಕಾಗಿದೆ? (ಬಿ) ಸೃಷ್ಟಿಕರ್ತನನ್ನು ವೈಯಕ್ತಿಕವಾಗಿ ಸಂಧಿಸುವುದು ಏಕೆ ನ್ಯಾಯಸಮ್ಮತವಲ್ಲ?
2 ಸೃಷ್ಟಿಕರ್ತನೊಬ್ಬನು ಅಸ್ತಿತ್ವದಲ್ಲಿದ್ದಾನೆಂಬುದನ್ನು ಅಂಗೀಕರಿಸುವುದು ಎಷ್ಟು ಪ್ರಾಮುಖ್ಯವೋ, ಆತನು ಎಂಥವನೆಂಬುದನ್ನು, ಅಂದರೆ ಜನರನ್ನು ಆತನ ಕಡೆಗೆ ಆಕರ್ಷಿಸುವ ವ್ಯಕ್ತಿತ್ವ ಹಾಗೂ ಮಾರ್ಗಗಳಿರುವ ಒಬ್ಬ ನಿಜವಾದ ವ್ಯಕ್ತಿಯೆಂದು ತಿಳಿದುಕೊಳ್ಳುವುದೂ ಅಷ್ಟೇ ಪ್ರಾಮುಖ್ಯವಾಗಿದೆ. ನೀವು ಅದನ್ನು ತಕ್ಕಮಟ್ಟಿಗೆ ಮಾಡಿದ್ದರೂ, ಆತನನ್ನು ಇನ್ನೂ ಉತ್ತಮವಾಗಿ ತಿಳಿದುಕೊಳ್ಳುವುದು ಪ್ರಯೋಜನಕರವಾಗಿರಲಾರದೊ? ಇದಕ್ಕಾಗಿ, ನಾವು ಬೇರೆ ಜನರನ್ನು ಸಂಧಿಸುವ ರೀತಿಯಲ್ಲಿ ದೇವರನ್ನು ವೈಯಕ್ತಿಕವಾಗಿ ಸಂಧಿಸುವ ಅಗತ್ಯವಿಲ್ಲ.
3 ಯೆಹೋವನು ನಕ್ಷತ್ರಗಳ ಮೂಲನೂ ಹೌದು. ಆ ನಕ್ಷತ್ರಗಳಲ್ಲಿ ನಮ್ಮ ಸೂರ್ಯ ಕೇವಲ ಒಂದು ಮಧ್ಯಮ ಗಾತ್ರದ ನಕ್ಷತ್ರವಾಗಿದೆ. ಸೂರ್ಯನ ಸಮೀಪಕ್ಕೆ ಹೋಗಲು ಪ್ರಯತ್ನಿಸುವುದರ ಕುರಿತು ನೀವು ಎಂದಾದರೂ ಯೋಚಿಸುವಿರೊ? ಖಂಡಿತವಾಗಿಯೂ ಇಲ್ಲ! ಹೆಚ್ಚಿನ ಜನರು ಅದನ್ನು ನೇರವಾಗಿ ನೋಡುವುದರ ಕುರಿತು ಇಲ್ಲವೆ ದೀರ್ಘ ಸಮಯದ ವರೆಗೆ ತಮ್ಮ ತ್ವಚೆಯನ್ನು ಅದರ ಶಕ್ತಿಶಾಲಿ ಕಿರಣಗಳಿಗೆ ಒಡ್ಡುವುದರ ಕುರಿತು ತುಂಬ ಜಾಗರೂಕರಾಗಿದ್ದಾರೆ. ಅದರ ತಾಪಮಾನವು 1,50,00,000 ಡಿಗ್ರಿ ಸೆಲ್ಸಿಯಸ್ (27,000,000 ಡಿಗ್ರಿ ಎಫ್.) ಆಗಿದೆ. ಪ್ರತಿಯೊಂದು ಸೆಕೆಂಡಿಗೆ ಈ ಥರ್ಮೋನ್ಯೂಕ್ಲಿಯರ್ (ಉಷ್ಣಬೈಜಿಕ) ಕುಲುಮೆಯು, ಸುಮಾರು ನಲ್ವತ್ತು ಲಕ್ಷ ಟನ್ನುಗಳಷ್ಟು ದ್ರವ್ಯರಾಶಿಯನ್ನು ಶಕ್ತಿಯಾಗಿ ಮಾರ್ಪಡಿಸುತ್ತದೆ. ಅದರಲ್ಲಿ ಲವಲೇಶ ಮಾತ್ರ ಭೂಮಿಗೆ ಶಾಖ ಹಾಗೂ ಬೆಳಕಿನ ರೂಪದಲ್ಲಿ ಸೇರುತ್ತದೆ. ಇಲ್ಲಿರುವ ಎಲ್ಲ ಜೀವಿಗಳನ್ನು ಅಷ್ಟೇ ಪ್ರಮಾಣವು ಪೋಷಿಸುತ್ತದೆ. ಆ ಮೂಲಭೂತ ನಿಜಾಂಶಗಳು, ಸೃಷ್ಟಿಕರ್ತನ ಭಯಚಕಿತಗೊಳಿಸುವ ಶಕ್ತಿಯ ಕುರಿತು ನಮ್ಮನ್ನು ಪ್ರಭಾವಿಸಬೇಕು. “[ಸೃಷ್ಟಿಕರ್ತನು] ಅತಿ ಬಲಾಢ್ಯನೂ ಮಹಾಶಕ್ತನೂ” ಆಗಿದ್ದಾನೆಂದು ಯೆಶಾಯನು ಸೂಕ್ತವಾಗಿಯೇ ಬರೆಯಲು ಕಾರಣವಿತ್ತು.—ಯೆಶಾಯ 40:26.
4. ಮೋಶೆಯು ಏನನ್ನು ಕೇಳಿಕೊಂಡನು, ಮತ್ತು ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?
4 ಆದರೂ, ಸಾ.ಶ.ಪೂ. 1513ರಲ್ಲಿ ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟುಬಂದ ಕೆಲವು ತಿಂಗಳುಗಳ ನಂತರ, “ನಿನ್ನ ಮಹಿಮೆಯನ್ನು ದಯಮಾಡಿ ನನಗೆ ತೋರಿಸು” ಎಂದು ಮೋಶೆಯು ಸೃಷ್ಟಿಕರ್ತನಲ್ಲಿ ಬೇಡಿಕೊಂಡನು ಎಂಬುದು ನಿಮಗೆ ಗೊತ್ತಿತ್ತೊ? (ವಿಮೋಚನಕಾಂಡ 33:18) ದೇವರು ಸೂರ್ಯನ ಉಗಮನೂ ಆಗಿರುವುದರಿಂದ, “ನೀನು ನನ್ನ ಮುಖವನ್ನು ನೋಡುವದಕ್ಕಾಗದು; ಮನುಷ್ಯರಲ್ಲಿ ಯಾವನೂ ನನ್ನನ್ನು ನೋಡಿ ಜೀವಿಸಲಾರನು” ಎಂಬುದಾಗಿ ಆತನು ಮೋಶೆಗೆ ಏಕೆ ಹೇಳಿದನೆಂದು ನೀವು ತಿಳಿದುಕೊಳ್ಳಬಹುದು. ಆದರೆ, ಆತನು “ದಾಟಿಹೋಗು”ವಾಗ ಸೀನಾಯಿ ಬೆಟ್ಟದ ಮರೆಯಲ್ಲಿ ನಿಂತು ನೋಡುವಂತೆ ಸೃಷ್ಟಿಕರ್ತನು ಮೋಶೆಗೆ ಅನುಮತಿಯಿತ್ತನು. ಸಾಂಕೇತಿಕವಾಗಿ ಹೇಳುವುದಾದರೆ, ಮೋಶೆಯು ದೇವರ “ಹಿಂಭಾಗವನ್ನು,” ಅಂದರೆ ಸೃಷ್ಟಿಕರ್ತನ ಮಹಿಮೆ ಇಲ್ಲವೆ ಸಾನ್ನಿಧ್ಯದ ಬೆಳಕನ್ನು ಮಾತ್ರ ನೋಡಸಾಧ್ಯವಿತ್ತು.—ವಿಮೋಚನಕಾಂಡ 33:20-23; ಯೋಹಾನ 1:18.
5. ಯಾವ ವಿಧದಲ್ಲಿ ಸೃಷ್ಟಿಕರ್ತನು ಮೋಶೆಯ ವಿನಂತಿಯನ್ನು ಪೂರೈಸಿದನು, ಇದರಿಂದ ಏನು ರುಜುವಾಯಿತು?
5 ಸೃಷ್ಟಿಕರ್ತನನ್ನು ಉತ್ತಮವಾಗಿ ತಿಳಿದುಕೊಳ್ಳಲು ಮೋಶೆಗಿದ್ದ ಬಯಕೆಯು ಪೂರ್ತಿಯಾಗದೆ ಹೋಗಲಿಲ್ಲ. ದೇವರು ಮೋಶೆಯ ಮುಂದೆ ದಾಟಿಹೋಗುತ್ತಾ ಒಬ್ಬ ಸ್ವರ್ಗದೂತನ ಮೂಲಕ ನುಡಿದದ್ದು: “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು; ಆದರೂ [ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು.” (ವಿಮೋಚನಕಾಂಡ 34:6, 7) ಸೃಷ್ಟಿಕರ್ತನನ್ನು ಉತ್ತಮವಾಗಿ ತಿಳಿದುಕೊಳ್ಳುವುದರಲ್ಲಿ, ಒಂದು ಶಾರೀರಿಕ ಆಕಾರವನ್ನು ನೋಡುವುದಲ್ಲ, ಬದಲಿಗೆ ಆತನು ಎಂಥವನು, ಆತನ ವ್ಯಕ್ತಿತ್ವ ಹಾಗೂ ಗುಣವೈಶಿಷ್ಟ್ಯಗಳು ಏನಾಗಿವೆ ಎಂಬುದನ್ನು ಪೂರ್ಣವಾಗಿ ಗ್ರಹಿಸಿಕೊಳ್ಳುವುದು ಸೇರಿದೆ.
6. ಯಾವ ರೀತಿಯಲ್ಲಿ ನಮ್ಮ ಸೋಂಕು ರಕ್ಷಾ ವ್ಯವಸ್ಥೆಯು ಒಂದು ಅದ್ಭುತವಾಗಿದೆ?
6 ಇದನ್ನು ಮಾಡುವ ಒಂದು ವಿಧವು, ದೇವರು ಸೃಷ್ಟಿಸಿರುವ ವಿಷಯಗಳಿಂದ ಆತನ ಗುಣಗಳನ್ನು ವಿವೇಚಿಸುವುದೇ ಆಗಿದೆ. ನಿಮ್ಮ ಸೋಂಕು ರಕ್ಷಾವ್ಯವಸ್ಥೆಯನ್ನು ಪರಿಗಣಿಸಿರಿ. ಸೋಂಕು ರಕ್ಷಣೆಯ ಕುರಿತಾದ ಒಂದು ಸಂಚಿಕೆಯಲ್ಲಿ, ಸೈಎನ್ಟಿಫಿಕ್ ಅಮೆರಿಕನ್ ಹೇಳುವುದು: “ಜನನದ ಮೊದಲಿನಿಂದ ಹಿಡಿದು ಮರಣದ ವರೆಗೆ, ಸೋಂಕು ರಕ್ಷಾವ್ಯವಸ್ಥೆಯು ನಿರಂತರವಾಗಿ ಸಕ್ರಿಯವಾದ ಸ್ಥಿತಿಯಲ್ಲಿರುತ್ತದೆ. ಅಣುಗಳ ಮತ್ತು ಕೋಶಗಳ ವೈವಿಧ್ಯಮಯ ರಚನೆಯು . . . ನಮ್ಮನ್ನು ಪರೋಪಜೀವಿಗಳು ಹಾಗೂ ರೋಗಕಾರಕಗಳಿಂದ ರಕ್ಷಿಸುತ್ತದೆ. ಈ ಆತ್ಮ ರಕ್ಷಣೆಗಳಿಲ್ಲದೆ ಮನುಷ್ಯರು ಬದುಕಲು ಸಾಧ್ಯವಿಲ್ಲ.” ಆ ವ್ಯವಸ್ಥೆಯ ಮೂಲವು ಯಾವುದು? ಆ ಪತ್ರಿಕೆಯ ಒಂದು ಲೇಖನವು ಹೇಳಿದ್ದು: “ದೇಹವನ್ನು ಸೂಕ್ಷ್ಮಜೀವಿಗಳಿಂದ ಮತ್ತು ವಿಷಾಣುಗಳಿಂದ ರಕ್ಷಿಸುವ, ಕುಶಲವಾಗಿ ಪರಸ್ಪರ ಕಾರ್ಯಮಾಡುವ ಕೋಶಗಳ ಅದ್ಭುತಕರ ರಚನೆಯು, ಗರ್ಭಧಾರಣೆಯಾದ ಒಂಬತ್ತು ವಾರಗಳಲ್ಲಿ ಕಾಣಿಸಿಕೊಳ್ಳುವ ಕೆಲವೊಂದು ಪೂರ್ವಗಾಮಿ ಕೋಶಗಳಿಂದ ಬರುತ್ತದೆ.” ಗರ್ಭವತಿ ಸ್ತ್ರೀಯು ಒಂದಿಷ್ಟು ಸೋಂಕು ರಕ್ಷಣೆಯನ್ನು ತನ್ನ ಭ್ರೂಣಕ್ಕೆ ಸಾಗಿಸುತ್ತಾಳೆ. ತದನಂತರ, ತನ್ನ ಎದೆಹಾಲಿನ ಮೂಲಕ, ಅವಳು ಮಗುವಿಗೆ ಸೋಂಕು ರಕ್ಷಾ ಕೋಶಗಳನ್ನು ಮತ್ತು ಪ್ರಯೋಜನಕಾರಿ ರಸಾಯನಗಳನ್ನೂ ಒದಗಿಸುತ್ತಾಳೆ.
7. ನಮ್ಮ ಸೋಂಕು ರಕ್ಷಾ ವ್ಯವಸ್ಥೆಯ ಕುರಿತು ನಾವು ಏನನ್ನು ಪರಿಗಣಿಸಬಹುದು, ಇದು ಯಾವ ತೀರ್ಮಾನಕ್ಕೆ ನಡೆಸುವುದು?
7 ನಿಮ್ಮ ಸೋಂಕು ರಕ್ಷಾ ವ್ಯವಸ್ಥೆಯು, ಆಧುನಿಕ ವೈದ್ಯಕೀಯ ಕ್ಷೇತ್ರವು ಒದಗಿಸಬಲ್ಲ ಯಾವುದಕ್ಕಿಂತಲೂ ತುಂಬ ಮಿಗಿಲಾಗಿದೆ ಎಂದು ತೀರ್ಮಾನಿಸಲು ನಿಮಗೆ ಸಕಾರಣವಿದೆ. ಆದಕಾರಣ, ನಿಮ್ಮನ್ನೇ ಕೇಳಿಕೊಳ್ಳಿ, ‘ಅದು ತನ್ನ ಮೂಲಕರ್ತೃ ಹಾಗೂ ಒದಗಿಸುವಾತನ ಕುರಿತು ಏನನ್ನು ತಿಳಿಸುತ್ತದೆ?’ ‘ಗರ್ಭಧಾರಣೆಯ ಒಂಬತ್ತು ವಾರಗಳಲ್ಲಿ ಕಾಣಿಸಿಕೊಳ್ಳುವ’ ಮತ್ತು ಒಂದು ನವಜನಿತ ಶಿಶುವನ್ನು ಸಂರಕ್ಷಿಸಲು ಸಿದ್ಧವಾಗಿರುವ ಈ ವ್ಯವಸ್ಥೆಯು, ವಿವೇಕ ಹಾಗೂ ಮುಂದಾಲೋಚನೆಯನ್ನು ಪ್ರತಿಬಿಂಬಿಸುತ್ತದೆ. ಆದರೆ, ಈ ವ್ಯವಸ್ಥೆಯಿಂದ ನಾವು ಸೃಷ್ಟಿಕರ್ತನ ಕುರಿತು ಇನ್ನೂ ಹೆಚ್ಚನ್ನು ವಿವೇಚಿಸಬಲ್ಲೆವೊ? ಬಡವರಿಗೆ ವೈದ್ಯಕೀಯ ಆರೈಕೆಯನ್ನು ಒದಗಿಸಲು ತಮ್ಮ ಜೀವಿತವನ್ನೇ ಅರ್ಪಿಸಿದ ಆ್ಯಲ್ಬರ್ಟ್ ಸ್ವೀಟ್ಸರ್ ಮತ್ತು ಇತರರ ಕುರಿತು, ನಮ್ಮಲ್ಲಿ ಹೆಚ್ಚಿನವರು ಏನೆಂದು ತೀರ್ಮಾನಿಸುತ್ತೇವೆ? ಇಂತಹ ಸಹಾನುಭೂತಿಯುಳ್ಳ ಮಾನವರು, ಒಳ್ಳೆಯ ಗುಣಗಳನ್ನು ಹೊಂದಿರುವವರೆಂದು ನಾವು ಸಾಮಾನ್ಯವಾಗಿ ಹೇಳುತ್ತೇವೆ. ತದ್ರೀತಿಯಲ್ಲಿ, ಶ್ರೀಮಂತರಿಗೂ ಬಡವರಿಗೂ ಏಕಪ್ರಕಾರವಾಗಿ ಒಂದು ಸೋಂಕು ರಕ್ಷಾವ್ಯವಸ್ಥೆಯನ್ನು ಒದಗಿಸುವ ಸೃಷ್ಟಿಕರ್ತನ ಕುರಿತು ನಾವು ಯಾವ ತೀರ್ಮಾನವನ್ನು ಮಾಡಸಾಧ್ಯವಿದೆ? ಆತನು ಪ್ರೀತಿಪರನೂ, ನಿಷ್ಪಕ್ಷಪಾತಿಯೂ, ಸಹಾನುಭೂತಿಯುಳ್ಳವನೂ, ನ್ಯಾಯವಂತನೂ ಆಗಿದ್ದಾನೆ. ಸೃಷ್ಟಿಕರ್ತನ ಕುರಿತು ಮೋಶೆಯು ಕೇಳಿಸಿಕೊಂಡ ವಿವರಣೆಗೆ ಇದು ಸಮಂಜಸವಾಗಿಲ್ಲವೊ?
ಆತನು ಎಂಥವನೆಂಬುದನ್ನು ಪ್ರಕಟಪಡಿಸುತ್ತಾನೆ
8. ಯಾವ ವಿಶೇಷವಾದ ವಿಧದಲ್ಲಿ ಯೆಹೋವನು ನಮಗೆ ತನ್ನನ್ನು ಪ್ರಕಟಪಡಿಸಿಕೊಳ್ಳುತ್ತಾನೆ?
8 ನಮ್ಮ ಸೃಷ್ಟಿಕರ್ತನನ್ನು ಉತ್ತಮವಾಗಿ ತಿಳಿದುಕೊಳ್ಳುವ ಮತ್ತೊಂದು ವಿಧವು, ಬೈಬಲಿನ ಮೂಲಕವೇ. ಇದು ಬಹಳ ಪ್ರಾಮುಖ್ಯವಾಗಿದೆ ಏಕೆಂದರೆ, ಆತನ ಕುರಿತು ವಿಜ್ಞಾನವೂ ವಿಶ್ವವೂ ಪ್ರಕಟಿಸಲು ಸಾಧ್ಯವೇ ಇರದ ವಿಷಯಗಳು, ಮತ್ತು ಬೈಬಲು ಮಾತ್ರ ಸ್ಪಷ್ಟವಾಗಿ ತಿಳಿಯಪಡಿಸುವ ಇತರ ವಿಷಯಗಳು ಅದರಲ್ಲಿ ಅಡಕವಾಗಿವೆ. ಈ ವಿಷಯದ ಒಂದು ಉದಾಹರಣೆಯು, ಸೃಷ್ಟಿಕರ್ತನ ವೈಯಕ್ತಿಕ ಹೆಸರಿಗೆ ಸಂಬಂಧಿಸಿದೆ. ಬೈಬಲು ಮಾತ್ರ ಸೃಷ್ಟಿಕರ್ತನ ಹೆಸರು ಮತ್ತು ಅದರ ಮಹತ್ವವನ್ನು ಪ್ರಕಟಪಡಿಸುತ್ತದೆ. ಬೈಬಲಿನ ಹೀಬ್ರು ಹಸ್ತಪ್ರತಿಗಳಲ್ಲಿ, ಆತನ ಹೆಸರು ಇಂಗ್ಲಿಷ್ನಲ್ಲಿ ವೈಏಚ್ಡಬ್ಲ್ಯೂಏಚ್ (YHWH) ಅಥವಾ ಜೆಏಚ್ವಿಚ್ (JHVH) ಎಂಬುದಾಗಿ ಲಿಪ್ಯಂತರ ಮಾಡಬಹುದಾದ ನಾಲ್ಕು ವ್ಯಂಜನಗಳ ರೂಪದಲ್ಲಿ ಸುಮಾರು 7,000 ಬಾರಿ ಕಾಣಿಸಿಕೊಳ್ಳುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ಇದನ್ನು ಸಾಮಾನ್ಯವಾಗಿ ಜೆಹೋವ ಎಂಬುದಾಗಿ ಉಚ್ಚರಿಸಲಾಗುತ್ತದೆ.—ವಿಮೋಚನಕಾಂಡ 3:15; 6:3.
9. ಸೃಷ್ಟಿಕರ್ತನ ವೈಯಕ್ತಿಕ ಹೆಸರಿನ ಅರ್ಥವೇನು, ಮತ್ತು ಇದರಿಂದ ನಾವು ಏನನ್ನು ತೀರ್ಮಾನಿಸಬಹುದು?
9 ಸೃಷ್ಟಿಕರ್ತನನ್ನು ಉತ್ತಮವಾಗಿ ತಿಳಿದುಕೊಳ್ಳಲು, ಆತನು ಕೇವಲ ಒಬ್ಬ ಅಮೂರ್ತ “ಮೂಲ ಕಾರಣನು” ಇಲ್ಲವೆ ಅಸ್ಪಷ್ಟವಾದ “ಇರುವಾತನು” ಆಗಿಲ್ಲವೆಂಬುದನ್ನು ನಾವು ತಿಳಿದುಕೊಳ್ಳಬೇಕು. ಆತನ ವೈಯಕ್ತಿಕ ಹೆಸರು ಇದನ್ನು ತೋರಿಸುತ್ತದೆ. ಅದು “ಆಗಲು” ಇಲ್ಲವೆ “ಪರಿಣಮಿಸಲು” ಎಂಬ ಅರ್ಥನೀಡುವ ಹೀಬ್ರು ಕ್ರಿಯಾಪದದ ಒಂದು ರೂಪವಾಗಿದೆ.a (ಹೋಲಿಸಿ ಆದಿಕಾಂಡ 27:29; ಪ್ರಸಂಗಿ 11:3.) ದೇವರ ಹೆಸರಿನ ಅರ್ಥ “ಆತನು ಆಗಿಸುತ್ತಾನೆ” ಎಂದಾಗಿದ್ದು, ಆತನು ಉದ್ದೇಶಿಸುತ್ತಾನೆ ಮತ್ತು ಕ್ರಿಯೆಗೈಯುತ್ತಾನೆಂಬುದನ್ನು ಅದು ಒತ್ತಿಹೇಳುತ್ತದೆ. ಆತನ ಹೆಸರನ್ನು ಅರಿತು, ಅದನ್ನು ಉಪಯೋಗಿಸುವ ಮೂಲಕ, ಆತನು ವಾಗ್ದಾನಗಳನ್ನು ನೆರವೇರಿಸುತ್ತಾನೆಂದು ಮತ್ತು ತನ್ನ ಉದ್ದೇಶವನ್ನು ಪೂರ್ತಿಗೊಳಿಸುತ್ತಾನೆಂದು ನಾವು ತಿಳಿದುಕೊಳ್ಳಬಲ್ಲೆವು.
10. ಆದಿಕಾಂಡದ ದಾಖಲೆಯಿಂದ ನಾವು ಯಾವ ಪ್ರಾಮುಖ್ಯವಾದ ಒಳನೋಟವನ್ನು ಪಡೆದುಕೊಳ್ಳಸಾಧ್ಯವಿದೆ?
10 ದೇವರ ಉದ್ದೇಶಗಳು ಹಾಗೂ ವ್ಯಕ್ತಿತ್ವದ ಕುರಿತಾದ ಜ್ಞಾನದ ಮೂಲವು ಬೈಬಲ್ ಆಗಿದೆ. ಒಂದು ಕಾಲದಲ್ಲಿ ಮಾನವಕುಲವು ದೇವರೊಂದಿಗೆ ಸಮಾಧಾನದಿಂದಿದ್ದು, ದೀರ್ಘವಾದ ಹಾಗೂ ಅರ್ಥಭರಿತ ಜೀವಿತದ ಪ್ರತೀಕ್ಷೆಯನ್ನು ಹೊಂದಿತ್ತು ಎಂಬುದಾಗಿ ಆದಿಕಾಂಡದ ದಾಖಲೆಯು ಪ್ರಕಟಿಸುತ್ತದೆ. (ಆದಿಕಾಂಡ 1:28; 2:7-9) ತನ್ನ ಹೆಸರಿನ ಮಹತ್ವಕ್ಕೆ ಸಮಂಜಸವಾಗಿ, ಮಾನವರು ದೀರ್ಘ ಸಮಯದಿಂದ ಅನುಭವಿಸಿರುವ ಕಷ್ಟ ಹಾಗೂ ನಿರಾಶೆಯನ್ನು ಯೆಹೋವನು ಕೊನೆಗೊಳಿಸುವನು ಎಂಬ ವಿಷಯದಲ್ಲಿ ನಾವು ನಿಶ್ಚಯವಾಗಿರಬಲ್ಲೆವು. ನಾವು ಆತನ ಉದ್ದೇಶದ ನೆರವೇರಿಕೆಯ ಕುರಿತು ಹೀಗೆ ಓದುತ್ತೇವೆ: “ಜಗತ್ತು ವ್ಯರ್ಥತ್ವಕ್ಕೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ. ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನಂದರೆ ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ.”—ರೋಮಾಪುರ 8:20, 21.
11. ನಾವು ಬೈಬಲ್ ವೃತ್ತಾಂತಗಳನ್ನು ಏಕೆ ಪರಿಗಣಿಸಬೇಕು, ಮತ್ತು ಅಂತಹ ಒಂದು ವೃತ್ತಾಂತದ ವಿವರಗಳಾವುವು?
11 ಪ್ರಾಚೀನ ಇಸ್ರಾಯೇಲಿನೊಂದಿಗೆ ವ್ಯವಹರಿಸುವಾಗ, ಸೃಷ್ಟಿಕರ್ತನ ಕ್ರಿಯೆಗಳು ಹಾಗೂ ಪ್ರತಿಕ್ರಿಯೆಗಳನ್ನು ಬೈಬಲು ಪ್ರಕಟಪಡಿಸುವ ಮೂಲಕವೂ, ಆತನನ್ನು ಉತ್ತಮವಾಗಿ ತಿಳಿದುಕೊಳ್ಳುವಂತೆ ಅದು ನಮಗೆ ಸಹಾಯ ಮಾಡಬಲ್ಲದು. ಎಲೀಷನನ್ನು ಮತ್ತು ಇಸ್ರಾಯೇಲ್ಯರ ಶತ್ರುಗಳಾದ ಸಿರಿಯನರ ಸೇನಾಪತಿ ನಾಮಾನನನ್ನು ಒಳಗೊಂಡ ಒಂದು ಉದಾಹರಣೆಯನ್ನು ಪರಿಗಣಿಸಿರಿ. ಈ ವೃತ್ತಾಂತವನ್ನು ನೀವು 2 ಅರಸು 5ನೆಯ ಅಧ್ಯಾಯದಲ್ಲಿ ಓದುವುದಾದರೆ, ಇಸ್ರಾಯೇಲಿನಲ್ಲಿರುವ ಎಲೀಷನ ಸಹಾಯದಿಂದ ನಾಮಾನನ ಕುಷ್ಠರೋಗವು ವಾಸಿಯಾಗಬಹುದೆಂದು ಸೆರೆಯಲ್ಲಿದ್ದ ಒಬ್ಬ ಇಸ್ರಾಯೇಲ್ಯ ಹುಡುಗಿಯು ಹೇಳುವುದನ್ನು ನಾವು ನೋಡುತ್ತೇವೆ. ಎಲೀಷನು ನಾಮಾನನ ಮೇಲೆ ಕೈ ಆಡಿಸುತ್ತಾ, ಮಂತ್ರಗಳನ್ನು ಪಠಿಸುವನೆಂದು ಅವನು ನೆನಸಿದನು. ಆದರೆ ಆ ಸಿರಿಯದವನು ಯೊರ್ದನ್ ನದಿಯಲ್ಲಿ ಸ್ನಾನಮಾಡುವಂತೆ ಎಲೀಷನು ಹೇಳಿದನು. ನಾಮಾನನು ಅದಕ್ಕೆ ಸಮ್ಮತಿಸುವಂತೆ ಅವನ ಸೇವಕರು ಅವನನ್ನು ಮನಗಾಣಿಸಬೇಕಾದರೂ, ಅದಕ್ಕೆ ಕಿವಿಗೊಟ್ಟಾಗ ಅವನು ಗುಣಹೊಂದಿದನು. ನಾಮಾನನು ಅಮೂಲ್ಯವಾದ ಕಾಣಿಕೆಗಳನ್ನು ನೀಡಿದರೂ ಎಲೀಷನು ಅವುಗಳನ್ನು ನಿರಾಕರಿಸಿಬಿಟ್ಟನು. ಆದರೆ, ಎಲೀಷನ ಜೊತೆಗಾರನು ಸುಳ್ಳು ಹೇಳಿ ಕೆಲವೊಂದು ಅಮೂಲ್ಯ ವಸ್ತುಗಳನ್ನು ಪಡೆದುಕೊಂಡನು. ಅವನ ಅಪ್ರಾಮಾಣಿಕತೆಯಿಂದ ಅವನಿಗೆ ಕುಷ್ಠವು ತಗುಲಿತು. ಅದೊಂದು ಮಾನವ ಸ್ವಭಾವದ ರೋಚಕ ವೃತ್ತಾಂತವಾಗಿದ್ದು, ಅದರಿಂದ ನಾವು ಪಾಠವನ್ನು ಕಲಿತುಕೊಳ್ಳಬಹುದಾಗಿದೆ.
12. ಎಲೀಷ ಮತ್ತು ನಾಮಾನರ ವೃತ್ತಾಂತದಿಂದ, ನಾವು ಸೃಷ್ಟಿಕರ್ತನ ಕುರಿತು ಯಾವ ತೀರ್ಮಾನಕ್ಕೆ ಬರಬಹುದು?
12 ಒಂದು ಮನಸೆಳೆಯುವ ರೀತಿಯಲ್ಲಿ ಈ ವೃತ್ತಾಂತವು ಏನನ್ನು ತೋರಿಸುತ್ತದೆಂದರೆ, ಇಂದಿನ ಅನೇಕ ಸಂಸ್ಕೃತಿಗಳಲ್ಲಿ ಸಾಧಾರಣವಾಗಿರುವುದಕ್ಕೆ ವ್ಯತಿರಿಕ್ತವಾಗಿ, ಈ ವಿಶ್ವದ ಮಹಾನ್ ಸೃಷ್ಟಿಕರ್ತನು ಅಷ್ಟೊಂದು ಉನ್ನತಸ್ಥಾನದಲ್ಲಿದ್ದರೂ ಒಬ್ಬ ಚಿಕ್ಕ ಹುಡುಗಿಯನ್ನು ಅನುಗ್ರಹದಿಂದ ಕಾಣಲು ಹಿಂಜರಿಯಲಿಲ್ಲ. ಸೃಷ್ಟಿಕರ್ತನು ಒಂದೇ ಕುಲ ಇಲ್ಲವೆ ರಾಷ್ಟ್ರಕ್ಕೆ ಅನುಗ್ರಹ ತೋರಿಸುವುದಿಲ್ಲ ಎಂಬುದನ್ನು ಇದು ರುಜುಪಡಿಸುತ್ತದೆ. (ಅ. ಕೃತ್ಯಗಳು 10:34, 35) ಗತಕಾಲದ ಮತ್ತು ಪ್ರಸ್ತುತ ಸಮಯಗಳ ಕೆಲವು “ಚಿಕಿತ್ಸಕರು” ಸಾಮಾನ್ಯವಾಗಿ ಬಳಸುವ ಕೈಚಳಕದ ಮಾಟಗಾರಿಕೆಯ ಬದಲು, ಸೃಷ್ಟಿಕರ್ತನು ಅದ್ಭುತವಾದ ವಿವೇಕವನ್ನು ಪ್ರದರ್ಶಿಸಿದನು. ಕುಷ್ಠರೋಗವನ್ನು ಹೇಗೆ ಗುಣಪಡಿಸಬೇಕೆಂದು ಆತನಿಗೆ ಗೊತ್ತಿತ್ತು. ವಂಚನೆಯು ಯಶಸ್ಸು ಗಳಿಸದಂತೆ ನೋಡಿಕೊಳ್ಳುವುದರಲ್ಲೂ ಆತನು ಒಳನೋಟ ಹಾಗೂ ನ್ಯಾಯವನ್ನು ಪ್ರದರ್ಶಿಸಿದನು. ಇದು ಮೋಶೆಯು ಕೇಳಿಸಿಕೊಂಡ ಯೆಹೋವನ ವ್ಯಕ್ತಿತ್ವದ ವರ್ಣನೆಗೆ ಸಮಂಜಸವಾಗಿಲ್ಲವೊ? ಈ ಬೈಬಲ್ ವೃತ್ತಾಂತವು ಸಂಕ್ಷಿಪ್ತವಾಗಿದ್ದರೂ, ನಮ್ಮ ಸೃಷ್ಟಿಕರ್ತನು ಎಂಥವನು ಎಂಬುದರ ಕುರಿತು ನಾವು ಇದರಿಂದ ಬಹಳಷ್ಟನ್ನು ತಿಳಿದುಕೊಳ್ಳಬಹುದು.—ಕೀರ್ತನೆ 33:5; 37:28.
13. ಬೈಬಲ್ ವೃತ್ತಾಂತಗಳಿಂದ ನಾವು ಅಮೂಲ್ಯವಾದ ಪಾಠಗಳನ್ನು ಹೇಗೆ ಕಲಿಯಬಲ್ಲೆವೆಂಬುದನ್ನು ದೃಷ್ಟಾಂತಿಸಿರಿ.
13 ಇಸ್ರಾಯೇಲಿನ ಕೃತಘ್ನ ಕ್ರಿಯೆಗಳು ಮತ್ತು ದೇವರು ಅವುಗಳಿಗೆ ಪ್ರತಿಕ್ರಿಯಿಸಿದ ರೀತಿಯ ಕುರಿತಾದ ಇತರ ವೃತ್ತಾಂತಗಳಿಂದ, ಯೆಹೋವನು ನಿಜವಾಗಿಯೂ ಚಿಂತಿಸುವವನಾಗಿದ್ದಾನೆಂಬುದು ತಿಳಿದುಬರುತ್ತದೆ. ಇಸ್ರಾಯೇಲ್ಯರು ಆತನನ್ನು ಮತ್ತೆ ಮತ್ತೆ ಪರೀಕ್ಷೆಗೊಳಪಡಿಸಿದಾಗ, ಆತನು ಬಹಳ ವೇದನೆಯನ್ನು ಅನುಭವಿಸಿದನು ಎಂದು ಬೈಬಲ್ ಹೇಳುತ್ತದೆ. (ಕೀರ್ತನೆ 78:40, 41) ಹೀಗೆ, ಸೃಷ್ಟಿಕರ್ತನಿಗೆ ಭಾವನೆಗಳಿದ್ದು, ಆತನು ಮನುಷ್ಯರು ಮಾಡುವ ವಿಷಯಗಳಲ್ಲಿ ಆಸ್ಥೆ ವಹಿಸುತ್ತಾನೆಂದು ತಿಳಿದುಬರುತ್ತದೆ. ಮತ್ತು ಸುಪ್ರಸಿದ್ಧ ವ್ಯಕ್ತಿಗಳ ವೃತ್ತಾಂತಗಳಿಂದಲೂ ಬಹಳಷ್ಟನ್ನು ಕಲಿಯಲಿಕ್ಕಿದೆ. ದಾವೀದನನ್ನು ಇಸ್ರಾಯೇಲಿನ ರಾಜನಾಗಿ ಆರಿಸಿದಾಗ, ದೇವರು ಸಮುವೇಲನಿಗೆ ಹೇಳಿದ್ದು: “ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.” (1 ಸಮುವೇಲ 16:7) ಹೌದು, ಸೃಷ್ಟಿಕರ್ತನು ಕೇವಲ ಬಾಹ್ಯ ತೋರಿಕೆಗಳನ್ನು ನೋಡದೆ, ನಮ್ಮ ಅಂತರಂಗವನ್ನು ನೋಡುವವನಾಗಿದ್ದಾನೆ. ಇದು ಎಷ್ಟು ತೃಪ್ತಿದಾಯಕ ಸಂಗತಿಯಾಗಿದೆ!
14. ಹೀಬ್ರು ಶಾಸ್ತ್ರಗಳನ್ನು ನಾವು ಓದುತ್ತಾ ಮುಂದುವರಿದಂತೆ, ಯಾವ ಪ್ರಯೋಜನಕರ ವಿಷಯವನ್ನು ಮಾಡಬಲ್ಲೆವು?
14 ಬೈಬಲಿನ ಮೂವತ್ತೊಂಬತ್ತು ಪುಸ್ತಕಗಳು ಯೇಸುವಿನ ಜನನದ ಮುಂಚೆ ಬರೆಯಲ್ಪಟ್ಟಿದ್ದು, ಅವುಗಳನ್ನು ನಾವು ಓದುವಂತೆ ಅಗತ್ಯಪಡಿಸುತ್ತದೆ. ಈ ಓದುವಿಕೆಯು ಕೇವಲ ಬೈಬಲ್ ವೃತ್ತಾಂತಗಳನ್ನು ಇಲ್ಲವೆ ಇತಿಹಾಸವನ್ನು ಕಲಿಯಲಿಕ್ಕಾಗಿ ಇರಬಾರದು. ನಮ್ಮ ಸೃಷ್ಟಿಕರ್ತನು ಎಂಥವನೆಂದು ನಾವು ನಿಜವಾಗಿಯೂ ತಿಳಿದುಕೊಳ್ಳಲು ಬಯಸುವುದಾದರೆ, ಆ ವೃತ್ತಾಂತಗಳ ಕುರಿತು ನಾವು ಮನನ ಮಾಡಿ, ಬಹುಶಃ ಹೀಗೆ ಆಲೋಚಿಸಬಹುದು, ‘ಈ ವೃತ್ತಾಂತವು ಆತನ ವ್ಯಕ್ತಿತ್ವದ ಕುರಿತು ಏನನ್ನು ಪ್ರಕಟಪಡಿಸುತ್ತದೆ? ಆತನ ಯಾವ ಗುಣಗಳು ಸ್ಪಷ್ಟವಾಗಿ ತೋರಿಬರುತ್ತವೆ?’b ಹೀಗೆ ಮಾಡುವುದರಿಂದ, ಬೈಬಲು ದೈವಿಕ ಮೂಲದ್ದೆಂದು ಸಂದೇಹವಾದಿಗಳು ಸಹ ಗ್ರಹಿಸಿ, ಅದರ ಪ್ರೀತಿಪರ ಗ್ರಂಥಕರ್ತನನ್ನು ಉತ್ತಮವಾಗಿ ತಿಳಿದುಕೊಳ್ಳುವುದಕ್ಕೆ ಇದೊಂದು ಆಧಾರವಾಗಿರುವುದು.
ಸೃಷ್ಟಿಕರ್ತನನ್ನು ತಿಳಿದುಕೊಳ್ಳುವಂತೆ ಒಬ್ಬ ಮಹಾ ಬೋಧಕನು ನಮಗೆ ಸಹಾಯಮಾಡುತ್ತಾನೆ
15. ಯೇಸುವಿನ ಕ್ರಿಯೆಗಳು ಮತ್ತು ಬೋಧನೆಗಳು ಏಕೆ ಬೋಧಪ್ರದವಾಗಿರಬೇಕು?
15 ಸೃಷ್ಟಿಕರ್ತನ ಅಸ್ತಿತ್ವವನ್ನು ಸಂದೇಹಿಸುವ ಇಲ್ಲವೆ ದೇವರ ವಿಷಯದಲ್ಲಿ ಅಸ್ಪಷ್ಟ ನೋಟವಿರುವ ಜನರಿಗೆ ಬೈಬಲಿನ ಕುರಿತು ಕೊಂಚವೇ ತಿಳಿದಿರಬಹುದು. ಮೋಶೆಯು ಮತ್ತಾಯನ ಮುಂಚೆ ಜೀವಿಸಿದನೊ ಅಥವಾ ನಂತರವೊ ಎಂಬುದು ಗೊತ್ತಿರದ ಮತ್ತು ಯೇಸುವಿನ ಕೃತ್ಯಗಳು ಇಲ್ಲವೆ ಬೋಧನೆಗಳ ಕುರಿತು ಏನನ್ನೂ ತಿಳಿದಿರದ ಜನರನ್ನು ನೀವು ಭೇಟಿಯಾಗಿರಬಹುದು. ಇದು ಬಹಳ ವಿಷಾದಕರ ಸ್ಥಿತಿಯಾಗಿದೆ, ಏಕೆಂದರೆ ಮಹಾ ಬೋಧಕನಾದ ಯೇಸುವಿನಿಂದ ಒಬ್ಬನು ಸೃಷ್ಟಿಕರ್ತನ ಕುರಿತು ಬಹಳಷ್ಟು ತಿಳಿದುಕೊಳ್ಳಸಾಧ್ಯವಿದೆ. ದೇವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದ ಕಾರಣ, ನಮ್ಮ ಸೃಷ್ಟಿಕರ್ತನು ಎಂಥವನೆಂದು ಅವನು ತಿಳಿಸಸಾಧ್ಯವಿತ್ತು. (ಯೋಹಾನ 1:18; 2 ಕೊರಿಂಥ 4:6; ಇಬ್ರಿಯ 1:3) ಮತ್ತು ಅವನು ಅದನ್ನೇ ಮಾಡಿದನು. ವಾಸ್ತವವಾಗಿ ಅವನೊಮ್ಮೆ ಹೇಳಿದ್ದು: “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.”—ಯೋಹಾನ 14:9.
16. ಸಮಾರ್ಯದ ಸ್ತ್ರೀಯೊಂದಿಗೆ ಯೇಸುವಿನ ಸಂಭಾಷಣೆಯು ಏನನ್ನು ದೃಷ್ಟಾಂತಿಸುತ್ತದೆ?
16 ಈ ಉದಾಹರಣೆಯನ್ನು ಪರಿಗಣಿಸಿರಿ. ಒಮ್ಮೆ ಅವನು ಪ್ರಯಾಣದಿಂದ ದಣಿದುಹೋಗಿದ್ದಾಗ, ಸೈಕರ್ನ ಬಳಿ ಒಬ್ಬ ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡಿದನು. “ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ” ಅಗತ್ಯದ ಮೇಲೆ ಕೇಂದ್ರೀಕರಿಸುತ್ತಾ, ಅವನು ಅಗಾಧವಾದ ಸತ್ಯಗಳನ್ನು ಹಂಚಿಕೊಂಡನು. ಆ ಕಾಲದ ಯೆಹೂದ್ಯರು ಸಮಾರ್ಯದವರನ್ನು ದೂರವಿಡುತ್ತಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಎಲೀಷ ಹಾಗೂ ನಾಮಾನರನ್ನು ಒಳಗೊಂಡ ಘಟನೆಯಿಂದ ನಾವು ಗಮನಿಸಿದಂತೆ, ಎಲ್ಲ ರಾಷ್ಟ್ರಗಳ ಪ್ರಾಮಾಣಿಕ ಸ್ತ್ರೀಪುರುಷರನ್ನು ಸ್ವೀಕರಿಸುವ ಯೆಹೋವನ ಸ್ವಇಚ್ಛೆಯನ್ನು ಯೇಸು ಪ್ರತಿಬಿಂಬಿಸಿದನು. ಇಂದು ಲೋಕದಲ್ಲಿ ವ್ಯಾಪಕವಾಗಿರುವ ಸಂಕುಚಿತ ಮನಸ್ಸಿನ ಧಾರ್ಮಿಕ ವೈಷಮ್ಯವನ್ನು ಯೆಹೋವನು ತೋರಿಸುವುದಿಲ್ಲ ಅಥವಾ ಅದನ್ನು ಸಮ್ಮತಿಸುವುದಿಲ್ಲ ಎಂಬ ಆಶ್ವಾಸನೆಯನ್ನು ಇದು ನಮಗೆ ನೀಡಬೇಕು. ಯೇಸು ಒಬ್ಬ ಸ್ತ್ರೀಗೆ, ಮತ್ತು ಈ ಸಂದರ್ಭದಲ್ಲಿ ತನ್ನ ಗಂಡನಾಗಿರದ ಪುರುಷನೊಂದಿಗೆ ಜೀವಿಸುತ್ತಿದ್ದ ಸ್ತ್ರೀಗೂ ವಿಷಯಗಳನ್ನು ಕಲಿಸಿಕೊಡಲು ಸಿದ್ಧನಾಗಿದ್ದನೆಂಬ ವಿಷಯವನ್ನು ನಾವು ಜ್ಞಾಪಕದಲ್ಲಿಟ್ಟುಕೊಳ್ಳಬಹುದು. ಅವಳನ್ನು ಖಂಡಿಸುವ ಬದಲಿಗೆ, ಯೇಸು ಅವಳಿಗೆ ಸಹಾಯ ಮಾಡುವ ವಿಧದಲ್ಲಿ ಅಂದರೆ ಮರ್ಯಾದೆಯಿಂದ ಉಪಚರಿಸಿದನು. ತರುವಾಯ, ಇತರ ಸಮಾರ್ಯದವರು ಯೇಸುವಿಗೆ ಕಿವಿಗೊಟ್ಟು ತೀರ್ಮಾನಿಸಿದ್ದು: “ಈತನು ಲೋಕರಕ್ಷಕನೇ ಹೌದೆಂದು ತಿಳುಕೊಂಡಿದ್ದೇವೆ.”—ಯೋಹಾನ 4:2-30, 39-42; 1 ಅರಸು 8:41-43; ಮತ್ತಾಯ 9:10-13.
17. ಲಾಜರನ ಪುನರುತ್ಥಾನದ ವೃತ್ತಾಂತವು ಯಾವ ವಿಷಯವನ್ನು ಸೂಚಿಸುತ್ತದೆ?
17 ಯೇಸುವಿನ ಕ್ರಿಯೆಗಳು ಹಾಗೂ ಬೋಧನೆಗಳೊಂದಿಗೆ ಚಿರಪರಿಚಿತರಾಗುವ ಮೂಲಕ, ನಾವು ಹೇಗೆ ಸೃಷ್ಟಿಕರ್ತನ ಕುರಿತು ಕಲಿತುಕೊಳ್ಳಸಾಧ್ಯವಿದೆ ಎಂಬುದರ ಬಗ್ಗೆ ಇನ್ನೊಂದು ದೃಷ್ಟಾಂತವನ್ನು ಪರಿಗಣಿಸೋಣ. ಯೇಸುವಿನ ಸ್ನೇಹಿತನಾದ ಲಾಜರನು ಮೃತಪಟ್ಟ ಸಮಯವನ್ನು ಜ್ಞಾಪಿಸಿಕೊಳ್ಳಿರಿ. ಸತ್ತವರನ್ನು ಜೀವಂತಗೊಳಿಸುವ ತನ್ನ ಶಕ್ತಿಯನ್ನು ಯೇಸು ಈ ಮೊದಲು ರುಜುಪಡಿಸಿದ್ದನು. (ಲೂಕ 7:11-17; 8:40-56) ಆದರೂ ಲಾಜರನ ಸಹೋದರಿಯಾದ ಮರಿಯಳು ದುಃಖಿಸುತ್ತಿರುವುದನ್ನು ನೋಡಿದ ಯೇಸು, ಹೇಗೆ ಪ್ರತಿಕ್ರಿಯಿಸಿದನು? ಯೇಸು “ಆತ್ಮದಲ್ಲಿ ನೊಂದುಕೊಂಡು ತತ್ತರಿಸಿ”ಹೋದನು. ಅವನು ಉದಾಸೀನನಾಗಿಯೊ ತಟಸ್ಥನಾಗಿಯೊ ಇರದೆ, “ಕಣ್ಣೀರು ಬಿಟ್ಟನು.” (ಯೋಹಾನ 11:33-35) ಇದು ಕೇವಲ ಭಾವನೆಯ ಪ್ರದರ್ಶನವಾಗಿರಲಿಲ್ಲ. ಯೇಸು ಸಕಾರಾತ್ಮಕ ಕ್ರಿಯೆಯನ್ನು ಮಾಡುವಂತೆ, ಅಂದರೆ ಲಾಜನರನ್ನು ಪುನರುತ್ಥಾನಗೊಳಿಸುವಂತೆ ಪ್ರೇರೇಪಿಸಲ್ಪಟ್ಟನು. ಸೃಷ್ಟಿಕರ್ತನ ಭಾವನೆಗಳು ಹಾಗೂ ಕ್ರಿಯೆಗಳನ್ನು ಅಪೊಸ್ತಲರು ಗಣ್ಯಮಾಡುವಂತೆ ಇದು ಹೇಗೆ ಸಹಾಯ ಮಾಡಿತೆಂಬುದನ್ನು ನೀವು ಊಹಿಸಿಕೊಳ್ಳಬಹುದು. ಸೃಷ್ಟಿಕರ್ತನ ವ್ಯಕ್ತಿತ್ವ ಹಾಗೂ ಮಾರ್ಗಗಳನ್ನು ತಿಳಿದುಕೊಳ್ಳುವಂತೆ ಇದು ನಮಗೂ ಇತರರಿಗೂ ಸಹಾಯ ಮಾಡತಕ್ಕದ್ದು.
18. ಬೈಬಲನ್ನು ಅಭ್ಯಸಿಸುವುದರ ಬಗ್ಗೆ ಜನರಿಗೆ ಹೇಗನಿಸಬೇಕು?
18 ಬೈಬಲನ್ನು ಅಭ್ಯಸಿಸಿ, ನಮ್ಮ ಸೃಷ್ಟಿಕರ್ತನ ಕುರಿತು ಹೆಚ್ಚನ್ನು ಕಲಿತುಕೊಳ್ಳುವ ವಿಷಯದಲ್ಲಿ ಲಜ್ಜಿತರಾಗುವ ಕಾರಣವಿಲ್ಲ. ಬೈಬಲು ಹಳೆಯ ಕಾಲದ ಗ್ರಂಥವಲ್ಲ. ಅದನ್ನು ಅಭ್ಯಸಿಸಿ, ಯೇಸುವಿನ ನಿಕಟ ಒಡನಾಡಿಯಾದವನು ಯೋಹಾನನಾಗಿದ್ದನು. ಅವನು ತದನಂತರ ಬರೆದುದು: “ದೇವರ ಮಗನು ಬಂದು ನಾವು ಸತ್ಯವಾಗಿರುವಾತನನ್ನು ಅರಿತುಕೊಳ್ಳುವ ಹಾಗೆ ನಮಗೆ ವಿವೇಕವನ್ನು ಕೊಟ್ಟಿದ್ದಾನೆಂಬದು ನಮಗೆ ಗೊತ್ತದೆ. ಮತ್ತು ನಾವು ದೇವರ ಮಗನಾದ ಯೇಸು ಕ್ರಿಸ್ತನಲ್ಲಿ ಇರುವವರಾಗಿ ಸತ್ಯವಾಗಿರುವಾತನಲ್ಲಿದ್ದೇವೆ. ಆತನು ಸತ್ಯದೇವರೂ ನಿತ್ಯಜೀವವೂ ಆಗಿದ್ದಾನೆ.” (1 ಯೋಹಾನ 5:20) “ಸತ್ಯದೇವರ” ಜ್ಞಾನವನ್ನು ಪಡೆದುಕೊಳ್ಳಲು “ವಿವೇಕವನ್ನು” ಉಪಯೋಗಿಸುವುದು, “ನಿತ್ಯಜೀವ”ಕ್ಕೆ ನಡೆಸಬಲ್ಲದು ಎಂಬುದನ್ನು ಗಮನಿಸಿರಿ.
ಆತನ ಕುರಿತು ಕಲಿಯುವಂತೆ ಇತರರಿಗೆ ನೀವು ಹೇಗೆ ಸಹಾಯ ಮಾಡಬಲ್ಲಿರಿ?
19. ಸಂದೇಹವಾದಿಗಳಿಗೆ ಸಹಾಯ ನೀಡಲು ಯಾವ ಹೆಜ್ಜೆಗಳು ತೆಗೆದುಕೊಳ್ಳಲ್ಪಟ್ಟಿವೆ?
19 ನಮ್ಮ ಕುರಿತು ಚಿಂತಿಸುವ ಒಬ್ಬ ಸಹಾನುಭೂತಿಯುಳ್ಳ ಸೃಷ್ಟಿಕರ್ತನು ಇದ್ದಾನೆಂದು ನಂಬಲು ಮತ್ತು ಆತನು ಎಂಥವನೆಂಬುದನ್ನು ಗಣ್ಯಮಾಡಲು ಕೆಲವರಿಗೆ ಬಹಳಷ್ಟು ಪುರಾವೆಯ ಅಗತ್ಯವಿರುತ್ತದೆ. ಸೃಷ್ಟಿಕರ್ತನ ಕುರಿತು ಸಂದೇಹಿಗಳಾಗಿರುವ ಮತ್ತು ಬೈಬಲಿನಲ್ಲಿ ಆತನ ಕುರಿತಿರುವ ನೋಟಕ್ಕೆ ಯಾರ ನೋಟವು ಸರಿಹೊಂದುವುದಿಲ್ಲವೊ, ಅಂತಹ ಕೋಟಿಗಟ್ಟಲೆ ಜನರು ಇನ್ನೂ ಇದ್ದಾರೆ. ನೀವು ಅವರಿಗೆ ಹೇಗೆ ಸಹಾಯ ಮಾಡಬಲ್ಲಿರಿ? ಯೆಹೋವನ ಸಾಕ್ಷಿಗಳ 1998/99ರ ಜಿಲ್ಲಾ ಹಾಗೂ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ, ನಿಮ್ಮ ಕುರಿತು ಚಿಂತಿಸುವ ಒಬ್ಬ ಸೃಷ್ಟಿಕರ್ತನು ಇದ್ದಾನೊ? (ಇಂಗ್ಲಿಷ್) ಎಂಬ ಪುಸ್ತಕವು, ಒಂದು ಪ್ರಭಾವಕಾರಿ ಹೊಸ ಸಾಧನವಾಗಿ ಅನೇಕ ಭಾಷೆಗಳಲ್ಲಿ ಬಿಡುಗಡೆಗೊಳಿಸಲ್ಪಟ್ಟಿತು.
20, 21. (ಎ) ಸೃಷ್ಟಿಕರ್ತನು ಪುಸ್ತಕವನ್ನು ಯಶಸ್ವಿಕರವಾಗಿ ಹೇಗೆ ಉಪಯೋಗಿಸಸಾಧ್ಯವಿದೆ? (ಬಿ) ಸೃಷ್ಟಿಕರ್ತನು ಪುಸ್ತಕವು ಈಗಾಗಲೇ ಪರಿಣಾಮಕಾರಿಯಾಗಿರುವುದರ ಅನುಭವಗಳನ್ನು ತಿಳಿಸಿರಿ.
20 ನಮ್ಮ ಸೃಷ್ಟಿಕರ್ತನಲ್ಲಿ ನಿಮ್ಮ ನಂಬಿಕೆಯನ್ನು ಮತ್ತು ಆತನ ವ್ಯಕ್ತಿತ್ವ ಹಾಗೂ ಮಾರ್ಗಗಳಿಗಾಗಿ ನಿಮ್ಮ ಗಣ್ಯತೆಯನ್ನು ಹೆಚ್ಚಿಸುವ ಪುಸ್ತಕವು ಇದಾಗಿದೆ. ಹೀಗೆಂದು ನಿಶ್ಚಿತವಾಗಿ ಏಕೆ ಹೇಳಬಹುದು? ಏಕೆಂದರೆ, ಇಂತಹ ಗುರಿಗಳನ್ನೇ ಮನಸ್ಸಿನಲ್ಲಿಟ್ಟುಕೊಂಡು, ನಿಮ್ಮ ಕುರಿತು ಚಿಂತಿಸುವ ಒಬ್ಬ ಸೃಷ್ಟಿಕರ್ತನು ಇದ್ದಾನೊ? ಎಂಬ ಪುಸ್ತಕವು ವಿಶೇಷವಾಗಿ ತಯಾರಿಸಲಾಗಿದೆ. “ಯಾವುದು ನಿಮ್ಮ ಜೀವಿತಕ್ಕೆ ಅರ್ಥವನ್ನು ಕೂಡಿಸಬಲ್ಲದು?” ಎಂಬ ವಿಷಯವು ಪುಸ್ತಕದಾದ್ಯಂತ ಹರಡಿರುವ ಮುಖ್ಯ ವಿಷಯವಾಗಿದೆ. ಸುಶಿಕ್ಷಿತ ಜನರು ಕೂಡ ಅದನ್ನು ಆಕರ್ಷಕವಾಗಿ ಕಂಡುಕೊಳ್ಳುವ ರೀತಿಯಲ್ಲಿ ಅದರ ವಿಷಯಗಳು ಪ್ರಸ್ತುತಗೊಳಿಸಲ್ಪಟ್ಟಿವೆ. ಆದರೂ, ನಾವೆಲ್ಲರೂ ಹಾತೊರೆಯುವ ವಿಷಯಗಳನ್ನು ಅದು ಚರ್ಚಿಸುತ್ತದೆ. ಸೃಷ್ಟಿಕರ್ತನ ಅಸ್ತಿತ್ವವನ್ನು ಸಂದೇಹಿಸುವ ವಾಚಕರಿಗೆ ಅದರಲ್ಲಿ ಆಕರ್ಷಕ ಹಾಗೂ ಪ್ರೇರಿಸುವ ವಿಷಯವಿದೆ. ವಾಚಕನು ಸೃಷ್ಟಿಕರ್ತನಲ್ಲಿ ನಂಬುತ್ತಾನೆಂಬ ವಿಷಯವನ್ನು ಪುಸ್ತಕವು ಭಾವಿಸಿಕೊಳ್ಳುವುದಿಲ್ಲ. ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು ಹಾಗೂ ಪರಿಕಲ್ಪನೆಗಳನ್ನು ನಿರ್ವಹಿಸಿರುವ ರೀತಿಯಿಂದ ಸಂದೇಹವಾದಿಗಳು ಆಕರ್ಷಿಸಲ್ಪಡುವರು. ದೇವರಲ್ಲಿ ನಂಬಿಕೆಯಿಡುವವರ ವಿಶ್ವಾಸವನ್ನು ಇಂತಹ ನಿಜಾಂಶಗಳು ಬಲಪಡಿಸುವವು.
21 ಈ ಹೊಸ ಪುಸ್ತಕವನ್ನು ಅಭ್ಯಸಿಸುವಾಗ, ವಾಚಕರು ದೇವರನ್ನು ಉತ್ತಮವಾಗಿ ತಿಳಿದುಕೊಳ್ಳುವಂತೆ ಸಹಾಯ ಮಾಡಲು ದೇವರ ವ್ಯಕ್ತಿತ್ವದ ಕೆಲವು ಅಂಶಗಳನ್ನು ಎತ್ತಿತೋರಿಸುವ ವಿಧದಲ್ಲಿ, ಬೈಬಲ್ ಇತಿಹಾಸದ ಸಾರಾಂಶವನ್ನು ಪುಸ್ತಕದ ಭಾಗಗಳು ಪ್ರಸ್ತುತ ಪಡಿಸುತ್ತವೆ ಎಂಬುದನ್ನು ಕಂಡುಕೊಳ್ಳಸಾಧ್ಯವಿದೆ. ಅದನ್ನು ಈಗಾಗಲೇ ಓದಿರುವ ಅನೇಕರು, ತಮ್ಮ ವಿಷಯದಲ್ಲಿ ಅದು ಹೇಗೆ ಸತ್ಯವಾಗಿದೆ ಎಂಬುದನ್ನು ಹೇಳಿದ್ದಾರೆ. (25-6ನೆಯ ಪುಟಗಳಲ್ಲಿರುವ ಮುಂದಿನ ಲೇಖನವನ್ನು ನೋಡಿರಿ.) ನೀವೂ ಆ ಪುಸ್ತಕದೊಂದಿಗೆ ಪರಿಚಿತರಾಗಿ, ಇತರರು ಸೃಷ್ಟಿಕರ್ತನನ್ನು ಉತ್ತಮವಾಗಿ ತಿಳಿದುಕೊಳ್ಳುವಂತೆ ಸಹಾಯಮಾಡಲು ಅದನ್ನು ಉಪಯೋಗಿಸುವಾಗ, ಅದು ನಿಮ್ಮ ವಿಷಯದಲ್ಲೂ ಸತ್ಯವಾಗಿರಲಿ.
[ಅಧ್ಯಯನ ಪ್ರಶ್ನೆಗಳು]
a ಜೆಸುಯಿಟ್ ಪಂಡಿತರಾದ ಎಮ್. ಜೆ. ಗ್ರಂಥೇನರ್ ದ ಕ್ಯಾತೊಲಿಕ್ ಬಿಬ್ಲಿಕಲ್ ಕ್ವಾಟರ್ಲಿ ಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದಾಗ, ಈ ಕ್ರಿಯಾಪದಕ್ಕೆ ಸಂಬಂಧಿಸಿದ ಮತ್ತೊಂದು ಕ್ರಿಯಾಪದದ ವಿಷಯದಲ್ಲಿ ಏನನ್ನು ಹೇಳಿದರೊ ಅದನ್ನೇ ಇದಕ್ಕೆ ಅನ್ವಯಿಸುತ್ತಾ ಹೇಳಿದ್ದೇನೆಂದರೆ, ಇದು “ಅಮೂರ್ತವಾಗಿರುವ ಯೋಚನೆಯನ್ನು ಎಂದೂ ಹೊಂದಿರದೆ, ಗೋಚರವಾಗಿರುವ ಇಲ್ಲವೆ ಗೋಚರವಾಗಲಿರುವ, ಅಂದರೆ ತನ್ನನ್ನು ಮೂರ್ತ ರೂಪದಲ್ಲಿ ಪ್ರದರ್ಶಿಸುವ ಅರ್ಥವನ್ನು ನೀಡುತ್ತದೆ.”
b ಹೆತ್ತವರು ತಮ್ಮ ಮಕ್ಕಳಿಗೆ ಬೈಬಲ್ ವೃತ್ತಾಂತಗಳನ್ನು ಕಥೆಯಾಗಿ ಹೇಳುವಾಗ, ಇಂತಹ ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಮಕ್ಕಳಿಗೆ ಸಹಾಯ ನೀಡಬಲ್ಲರು. ಹೀಗೆ, ಯುವ ಜನರು ದೇವರೊಂದಿಗೆ ಚಿರಪರಿಚಿತರಾಗಿ, ಆತನ ವಾಕ್ಯದ ಕುರಿತು ಮನನ ಮಾಡಲು ಕಲಿತುಕೊಳ್ಳುವರು.
ನೀವು ಗಮನಿಸಿದಿರೊ?
◻ ಸೀನಾಯಿ ಬೆಟ್ಟದ ಮೇಲೆ ಮೋಶೆಯು ಯೆಹೋವನೊಂದಿಗೆ ಹೇಗೆ ಚಿರಪರಿಚಿತನಾದನು?
◻ ದೇವರು ಎಂಥವನೆಂದು ತಿಳಿದುಕೊಳ್ಳಲು ಬೈಬಲಿನ ಅಧ್ಯಯನವು ಒಂದು ಸಹಾಯಕವಾಗಿದೆ ಏಕೆ?
◻ ನಾವು ಬೈಬಲನ್ನು ಓದಿದಂತೆ, ಸೃಷ್ಟಿಕರ್ತನ ಸಮೀಪಕ್ಕೆ ಬರಲು ನಾವೇನನ್ನು ಮಾಡಸಾಧ್ಯವಿದೆ?
◻ ಸೃಷ್ಟಿಕರ್ತನು ಪುಸ್ತಕವನ್ನು ಯಾವ ರೀತಿಯಲ್ಲಿ ಉಪಯೋಗಿಸಬೇಕೆಂದು ನೀವು ಯೋಜಿಸುತ್ತೀರಿ?
[ಪುಟ 20 ರಲ್ಲಿರುವ ಚಿತ್ರ]
ನಮ್ಮ ಸೋಂಕು ರಕ್ಷಾವ್ಯವಸ್ಥೆಯು ನಮ್ಮ ಸೃಷ್ಟಿಕರ್ತನ ಕುರಿತು ಏನು ತಿಳಿಸುತ್ತದೆ?
[ಪುಟ 21 ರಲ್ಲಿರುವ ಚಿತ್ರ]
ಮೃತ ಸಮುದ್ರದ ಸುರುಳಿಗಳ ಒಂದು ಭಾಗದಲ್ಲಿ, ಚತುರಕ್ಷರಿಯು (ಹೀಬ್ರು ಭಾಷೆಯಲ್ಲಿ ದೇವರ ಹೆಸರು) ಎತ್ತಿತೋರಿಸಲ್ಪಟ್ಟಿದೆ
[ಕೃಪೆ]
Courtesy of the Shrine of the Book, Israel Museum, Jerusalem
[ಪುಟ 23 ರಲ್ಲಿರುವ ಚಿತ್ರ]
ಮರಿಯಳ ದುಃಖಕ್ಕೆ ಯೇಸು ತೋರಿಸಿದ ಪ್ರತಿಕ್ರಿಯೆಯಿಂದ ನಾವು ಏನನ್ನು ಕಲಿಯಬಲ್ಲೆವು?