ನಿಜ ಶಾಂತಿಯನ್ನು ಹುಡುಕಿ, ಅದನ್ನು ಬೆನ್ನಟ್ಟಿರಿ!
“ಜೀವದಲ್ಲಿ ಸಂತೋಷಪಟ್ಟು ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು . . . ಕೆಟ್ಟದ್ದನ್ನು ಬಿಟ್ಟು ಒಳ್ಳೇದನ್ನು ಮಾಡಲಿ; ಸಮಾಧಾನ [“ಶಾಂತಿ,” NW]ವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲಿ.” —1 ಪೇತ್ರ 3:10, 11.
1. ಯೆಶಾಯನ ಯಾವ ಪ್ರಸಿದ್ಧ ಮಾತುಗಳು, ನಿಶ್ಚಯವಾಗಿಯೂ ಖಂಡಿತವಾದ ಯಶಸ್ಸನ್ನು ಗಳಿಸುವವು?
“ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” (ಯೆಶಾಯ 2:4) ನ್ಯೂ ಯಾರ್ಕ್ ನಗರದಲ್ಲಿರುವ ವಿಶ್ವ ಸಂಸ್ಥೆಯ ಲೋಕ ಮುಖ್ಯಕಾರ್ಯಾಲಯದ ಬಳಿ, ಈ ಪ್ರಸಿದ್ಧ ವಚನವು ಪ್ರದರ್ಶಿಸಲ್ಪಟ್ಟಿರುವುದಾದರೂ, ಈ ಲೋಕ ಸಂಸ್ಥೆಯು ಆ ಮಾತುಗಳನ್ನು ನೆರವೇರಿಸಿದೆ ಎಂದು ಖಂಡಿತವಾಗಿಯೂ ಹೇಳಸಾಧ್ಯವಿಲ್ಲ. ಹಾಗಿದ್ದರೂ, ಯೆಹೋವ ದೇವರ ತಪ್ಪದ ಮಾತಿನ ಒಂದು ಭಾಗದೋಪಾದಿ, ಆ ಪ್ರಕಟನೆಗೆ ಫಲಿತಾಂಶಗಳು ಇಲ್ಲದೆ ಇರದು.—ಯೆಶಾಯ 55:10, 11.
2. ಯೆಶಾಯ 2:2, 3ಕ್ಕನುಸಾರ “ಅಂತ್ಯಕಾಲದಲ್ಲಿ” ಏನು ಸಂಭವಿಸಬೇಕು?
2 ಯೆಶಾಯ 2:4ರಲ್ಲಿ ಕಂಡುಕೊಳ್ಳಲ್ಪಡುವ ಮಾತುಗಳು ನಿಜವಾಗಿಯೂ ಒಂದು ಅದ್ಭುತಕರವಾದ ಪ್ರವಾದನೆ—ನಿಜ ಶಾಂತಿಯ ಕುರಿತಾದ ಒಂದು ಪ್ರವಾದನೆ—ಯ ಭಾಗವಾಗಿವೆ, ಮತ್ತು ಅವು ನಮ್ಮ ಸಮಯದಲ್ಲೇ ನೆರವೇರುತ್ತಾ ಇವೆ. ಇನ್ನು ಮುಂದೆ ಯುದ್ಧಗಳಾಗಲಿ, ಯುದ್ಧದ ಆಯುಧಗಳಾಗಲಿ ಇರುವುದಿಲ್ಲವೆಂಬ ರೋಮಾಂಚಕ ಪ್ರತೀಕ್ಷೆಗಳನ್ನು ಘೋಷಿಸುವ ಮೊದಲು, ಪ್ರವಾದನೆಯು ಹೇಳುವುದು: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು. ಹೊರಟುಬಂದ ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು. ಏಕಂದರೆ ಚೀಯೋನಿನಿಂದ ಧರ್ಮೋಪದೇಶವೂ ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವವು.”—ಯೆಶಾಯ 2:2, 3.
ಜನರು ಶಾಂತಿಶೀಲರಾಗಬಲ್ಲರು
3. ವ್ಯಕ್ತಿಯೊಬ್ಬನು ಜಗಳಗಂಟನಾಗಿರುವ ಪ್ರವೃತ್ತಿಯಿಂದ ಶಾಂತಿಪೂರ್ಣನಾಗಿ ಹೇಗೆ ಬದಲಾಗಬಲ್ಲನು?
3 ಜನರು ಒಂದು ಶಾಂತಿಪೂರ್ಣ ಮಾರ್ಗಕ್ರಮವನ್ನು ಬೆನ್ನಟ್ಟಲು ಸಾಧ್ಯವಾಗುವ ಮೊದಲು, ಅವರು ಯೆಹೋವನ ಮಾರ್ಗಗಳ ಕುರಿತು ಶಿಕ್ಷಿಸಲ್ಪಡಬೇಕೆಂಬುದನ್ನು ಗಮನಿಸಿರಿ. ಯೆಹೋವನ ಬೋಧನೆಗೆ ತೋರಿಸಲ್ಪಡುವ ವಿಧೇಯ ಪ್ರತಿಕ್ರಿಯೆಯು, ಒಬ್ಬ ವ್ಯಕ್ತಿಯ ಆಲೋಚಿಸುವ ಮತ್ತು ಕ್ರಿಯೆಗೈಯುವ ವಿಧವನ್ನು ಬದಲಾಯಿಸಬಲ್ಲದು, ಆ ಕಾರಣ, ಜಗಳಗಂಟನಾಗಿದ್ದವನು ಶಾಂತಿಶೀಲನಾಗುತ್ತಾನೆ. ಈ ರೂಪಾಂತರವು ಹೇಗೆ ಸಾಧಿಸಲ್ಪಡುತ್ತದೆ? ರೋಮಾಪುರ 12:2 ಹೇಳುವುದು: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ [“ಮನಸ್ಸನ್ನು ಪರಿವರ್ತಿಸು,” NW] ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” ನಾವು ಮನಸ್ಸನ್ನು ಪರಿವರ್ತಿಸುತ್ತೇವೆ, ಇಲ್ಲವೆ ದೇವರ ವಾಕ್ಯದಿಂದ ತೆಗೆಯಲ್ಪಟ್ಟ ತತ್ವಗಳು ಮತ್ತು ನೀತಿ ಬೋಧೆಗಳನ್ನು ಮನಸ್ಸಿನಲ್ಲಿ ತುಂಬುವ ಮೂಲಕ, ಒಂದು ಭಿನ್ನವಾದ ದಿಕ್ಕಿನ ಕಡೆಗೆ ಅದನ್ನು ಪ್ರಚೋದಿಸುತ್ತೇವೆ. ಬೈಬಲಿನ ಕ್ರಮವಾದ ಅಧ್ಯಯನವು, ಈ ಬದಲಾವಣೆಯನ್ನು ಮಾಡುವಂತೆ ನಮಗೆ ಸಹಾಯಮಾಡುತ್ತದೆ ಮತ್ತು ನಮಗಾಗಿ ಯೆಹೋವನ ಚಿತ್ತವು ಏನಾಗಿದೆ ಎಂದು ಸ್ವತಃ ದೃಢಪಡಿಸಿಕೊಳ್ಳಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ; ಇದರಿಂದಾಗಿ ನಾವು ಹೋಗಬೇಕಾದ ಮಾರ್ಗವನ್ನು ನಾವು ಸ್ಪಷ್ಟವಾಗಿ ನೋಡಬಲ್ಲೆವು.—ಕೀರ್ತನೆ 119:105.
4. ಒಬ್ಬನು ಶಾಂತಿಶೀಲ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುವುದು ಹೇಗೆ?
4 ಬೈಬಲ್ ಸತ್ಯವು ನಮ್ಮ ಯೋಚನಾ ನಮೂನೆಯನ್ನು ಮಾತ್ರವಲ್ಲ, ನಮ್ಮ ಕ್ರಿಯೆಗಳನ್ನೂ ವ್ಯಕ್ತಿತ್ವವನ್ನೂ ರೂಪಾಂತರಿಸುತ್ತದೆ. ಅಪೊಸ್ತಲ ಪೌಲನು ಪ್ರೇರೇಪಿಸಿದ್ದನ್ನು ಮಾಡುವಂತೆ ಅದು ನಮಗೆ ಸಹಾಯಮಾಡುತ್ತದೆ: “ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದು. ನೀವು ನಿಮ್ಮ ಅಂತರ್ಯದಲ್ಲಿ ಹೊಸಬರಾಗಿ ನೂತನಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.” (ಎಫೆಸ 4:22-24) ಮನಸ್ಸನ್ನು ಪ್ರೇರಿಸುವ ಶಕ್ತಿಯು ಆಂತರಿಕವಾದದ್ದು. ಮನಸ್ಸು ರೂಪಾಂತರಗೊಂಡು, ಯೆಹೋವ ಮತ್ತು ಆತನ ನಿಯಮಗಳಿಗಾಗಿರುವ ನಮ್ಮ ಪ್ರೀತಿಯು ಹೆಚ್ಚಾದಂತೆ ಶಕ್ತಿಶಾಲಿಯಾಗುತ್ತದೆ, ಮತ್ತು ಅದು ನಮ್ಮನ್ನು ಆತ್ಮಿಕ ಹಾಗೂ ಶಾಂತಿಶೀಲ ಜನರನ್ನಾಗಿ ಮಾಡುತ್ತದೆ.
5. ಯೇಸು ತನ್ನ ಶಿಷ್ಯರಿಗೆ ಕೊಟ್ಟ “ಹೊಸ ಆಜ್ಞೆ”ಯು, ಅವರೊಳಗಿರುವ ಶಾಂತಿಗೆ ಹೇಗೆ ನೆರವುನೀಡುತ್ತದೆ?
5 ಈ ರೂಪಾಂತರಕ್ಕಾಗಿರುವ ಅಗತ್ಯವು, ಯೇಸು ತನ್ನ ಶಿಷ್ಯರೊಂದಿಗೆ ಕಳೆದ ತನ್ನ ಕೊನೆಯ ತಾಸುಗಳ ಅವಧಿಯಲ್ಲಿ ಅವರಿಗೆ ಕೊಟ್ಟ ಉಪದೇಶದಿಂದ ಕಂಡುಬರುತ್ತದೆ: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:34, 35) ಈ ಕ್ರಿಸ್ತಸದೃಶ, ನಿಸ್ವಾರ್ಥ ಪ್ರೀತಿಯು ಶಿಷ್ಯರನ್ನು ಪರಿಪೂರ್ಣ ಐಕ್ಯದಲ್ಲಿ ಬಂಧಿಸುತ್ತದೆ. (ಕೊಲೊಸ್ಸೆ 3:14) ಈ “ಹೊಸ ಆಜ್ಞೆ”ಯನ್ನು ಸ್ವೀಕರಿಸಿ, ಅದಕ್ಕನುಸಾರವಾಗಿ ಜೀವಿಸಲು ಸಿದ್ಧಮನಸ್ಕರಾಗಿರುವವರು ಮಾತ್ರ, ದೇವರು ವಾಗ್ದಾನಿಸುವ ಶಾಂತಿಯನ್ನು ಅನುಭವಿಸುವರು. ಇಂದು, ಇದನ್ನು ಮಾಡುವಂತಹ ಜನರು ಯಾರಾದರೂ ಇದ್ದಾರೊ?
6. ಲೋಕದ ಜನರಿಗೆ ವೈದೃಶ್ಯವಾಗಿ ಯೆಹೋವನ ಸಾಕ್ಷಿಗಳು ಶಾಂತಿಯನ್ನು ಏಕೆ ಅನುಭವಿಸುತ್ತಾರೆ?
6 ಯೆಹೋವನ ಸಾಕ್ಷಿಗಳು ತಮ್ಮ ಲೋಕವ್ಯಾಪಕ ಸಹೋದರತ್ವದಲ್ಲಿ ಪ್ರೀತಿಯನ್ನು ತೋರಿಸಲು ಪ್ರಯತ್ನಿಸುತ್ತಾರೆ. ಅವರು ಲೋಕದ ಸಕಲ ರಾಷ್ಟ್ರಗಳಿಂದ ಒಟ್ಟುಗೂಡಿಸಲ್ಪಟ್ಟಿರುವುದಾದರೂ, ಅವರು—ತೀವ್ರವಾದ ರಾಜಕೀಯ ಹಾಗೂ ಧಾರ್ಮಿಕ ಒತ್ತಡಕ್ಕೆ ಅಧೀನಗೊಳಿಸಲ್ಪಟ್ಟಾಗಲೂ—ಈ ಲೋಕದ ವಾಗ್ವಾದಗಳಲ್ಲಿ ಒಳಗೊಳ್ಳುವುದಿಲ್ಲ. ಐಕ್ಯ ಜನರೋಪಾದಿ, ಅವರು ಯೆಹೋವನಿಂದ ಬೋಧಿಸಲ್ಪಡುತ್ತಾರೆ ಮತ್ತು ಅವರು ಶಾಂತಿಯನ್ನು ಅನುಭವಿಸುತ್ತಾರೆ. (ಯೆಶಾಯ 54:13) ಅವರು ರಾಜಕೀಯ ಕಲಹಗಳಲ್ಲಿ ತಟಸ್ಥರಾಗಿ ಉಳಿಯುತ್ತಾರೆ ಮತ್ತು ಯುದ್ಧಗಳಲ್ಲಿ ಭಾಗವಹಿಸುವುದಿಲ್ಲ. ಈ ಹಿಂದೆ ಹಿಂಸಾತ್ಮಕರಾಗಿದ್ದ ಕೆಲವರು ಆ ರೀತಿಯ ಜೀವನಶೈಲಿಯನ್ನು ತ್ಯಜಿಸಿಬಿಟ್ಟಿದ್ದಾರೆ. ಅವರು ಕ್ರಿಸ್ತ ಯೇಸುವಿನ ಮಾದರಿಯನ್ನು ಅನುಸರಿಸುತ್ತಾ, ಶಾಂತಿಪ್ರಿಯ ಕ್ರೈಸ್ತರಾಗಿದ್ದಾರೆ. ಮತ್ತು ಅವರು ಮನಃಪೂರ್ವಕವಾಗಿ ಪೇತ್ರನ ಬುದ್ಧಿವಾದವನ್ನು ಅನುಸರಿಸುತ್ತಾರೆ: “ಜೀವದಲ್ಲಿ ಸಂತೋಷಪಟ್ಟು ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನೂ ವಂಚನೆಯ ಮಾತುಗಳನ್ನಾಡದಂತೆ ತುಟಿಗಳನ್ನೂ ಬಿಗಿಹಿಡಿಯಲಿ. ಅವನು ಕೆಟ್ಟದ್ದನ್ನು ಬಿಟ್ಟು ಒಳ್ಳೇದನ್ನು ಮಾಡಲಿ; ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲಿ.”—1 ಪೇತ್ರ 3:10, 11; ಎಫೆಸ 4:3.
ಶಾಂತಿಯನ್ನು ಬೆನ್ನಟ್ಟುತ್ತಿರುವವರು
7, 8. ಯುದ್ಧಾಭ್ಯಾಸವನ್ನು ಬಿಟ್ಟುಬಿಟ್ಟು, ನಿಜ ಶಾಂತಿಯನ್ನು ಹುಡುಕುವವರಾದ ಜನರ ಉದಾಹರಣೆಗಳನ್ನು ತಿಳಿಸಿರಿ. (ನೀವು ಪರಿಚಿತರಾಗಿರಬಹುದಾದ ಇತರ ಉದಾಹರಣೆಗಳನ್ನು ತಿಳಿಸಿರಿ.)
7 ಉದಾಹರಣೆಗೆ, ಭಯೋತ್ಪಾದಕರ ವಿರುದ್ಧ ಕಾರ್ಯನಡೆಸಲು ಒಂದು ವಿಶೇಷ ತರಬೇತು ಪಡೆದ ತಂಡದಲ್ಲಿನ ಮಾಜಿ ಅಧಿಕಾರಿ, ರಾಮೀ ಓವೆಡ್ ಇದ್ದಾನೆ. ತನ್ನ ವೈರಿಗಳನ್ನು ಕೊಲ್ಲುವ ತರಬೇತಿಯನ್ನು ಅವನು ಪಡೆದಿದ್ದನು. ತನ್ನ ಇಸ್ರಾಯೇಲಿ ರಾಷ್ಟ್ರೀಯವಾದದಲ್ಲಿ ಅವನು ಉತ್ಸಾಹಪೂರಿತನಾಗಿ ನಂಬಿದನು. ಆದರೆ ಇದು, ತಾನು ಪ್ರೀತಿಸಿದ ಸ್ತ್ರೀಯನ್ನು—ಅವಳು ಏಷಿಯದವಳು, ಒಬ್ಬ ಅನ್ಯಳಾಗಿದ್ದ ಕಾರಣಮಾತ್ರಕ್ಕಾಗಿ—ಮದುವೆಯಾಗಬಾರದೆಂದು ರಬ್ಬಿಗಳು ಬಯಸಿದ ವಿಷಯವನ್ನು ಅವನು ಕಂಡುಕೊಂಡ ದಿನದ ವರೆಗೆ ಮಾತ್ರ. ಅವನು ಸತ್ಯಕ್ಕಾಗಿ ಬೈಬಲಿನಲ್ಲಿ ಹುಡುಕತೊಡಗಿದನು. ನಂತರ ಅವನು ಯೆಹೋವನ ಸಾಕ್ಷಿಗಳ ಸಂಪರ್ಕದಲ್ಲಿ ಬಂದನು. ತಾನು ಇನ್ನು ಮುಂದೆ ಒಬ್ಬ ಮತಭ್ರಾಂತ ರಾಷ್ಟ್ರೀಯವಾದಿ ಆಗಿರಸಾಧ್ಯವಿಲ್ಲ ಎಂಬ ವಿಷಯವು, ಸಾಕ್ಷಿಗಳೊಂದಿಗಿನ ತನ್ನ ಬೈಬಲ್ ಅಧ್ಯಯನದಿಂದ ಅವನಿಗೆ ಮನವರಿಕೆಯಾಯಿತು. ಕ್ರೈಸ್ತೋಚಿತ ಪ್ರೀತಿಯು, ಯುದ್ಧ ಹಾಗೂ ಆಯುಧಗಳನ್ನು ತ್ಯಜಿಸಿಬಿಡುವುದನ್ನು ಮತ್ತು ಪ್ರತಿಯೊಂದು ಕುಲದ ಜನರನ್ನು ಪ್ರೀತಿಸಲು ಕಲಿಯುವುದನ್ನು ಅರ್ಥೈಸಿತು. “ನನ್ನ ಸಹೋದರ ರಾಮೀ” ಎಂಬ ಮಾತುಗಳಿಂದ ಆರಂಭವಾದ ಒಂದು ದಯಾಪರ ಪತ್ರವನ್ನು ಅವನು ಪಡೆದಾಗ, ಅವನೆಷ್ಟು ಆಶ್ಚರ್ಯಚಕಿತನಾದನು! ಅದರಲ್ಲಿ ಅಸಾಧಾರಣವಾದ ಯಾವ ಸಂಗತಿಯು ಅಡಕವಾಗಿತ್ತು? ಪತ್ರವನ್ನು ಬರೆದವಳು ಪ್ಯಾಲೆಸ್ಟೀನ್ನ ಒಬ್ಬ ಸಾಕ್ಷಿಯಾಗಿದ್ದಳು. “ಅದು ನಂಬಲಸಾಧ್ಯವಾದದ್ದೆಂದು ನಾನು ನೆನಸಿದೆ, ಏಕೆಂದರೆ ಪ್ಯಾಲೆಸ್ಟೀನ್ನ ಜನರು ನನ್ನ ವೈರಿಗಳಾಗಿದ್ದರು, ಮತ್ತು ಇಲ್ಲಿ ಪ್ಯಾಲೆಸ್ಟೀನ್ನ ಒಬ್ಬ ವ್ಯಕ್ತಿಯು ನನ್ನನ್ನು ‘ನನ್ನ ಸಹೋದರ’ ಎಂದು ಸಂಬೋಧಿಸುತ್ತಿದ್ದಳು” ಎಂದು ರಾಮೀ ಹೇಳುತ್ತಾನೆ. ಈಗ ರಾಮೀ ಮತ್ತು ಅವನ ಹೆಂಡತಿ, ದೇವರ ಮಾರ್ಗದಲ್ಲಿ ನಿಜ ಶಾಂತಿಯನ್ನು ಬೆನ್ನಟ್ಟುತ್ತಿದ್ದಾರೆ.
8 ಮತ್ತೊಂದು ಉದಾಹರಣೆ, ಗೇಆರ್ಗ್ ರಾಯ್ಟೆರ್ನದು. ಇವನು, IIನೆಯ ಜಾಗತಿಕ ಯುದ್ಧದ ಸಮಯದಲ್ಲಿ ರಷ್ಯಾ ದೇಶವನ್ನು ಆಕ್ರಮಿಸಿದ ಜರ್ಮನ್ ಸೇನೆಯಲ್ಲಿ ಸೇವೆಸಲ್ಲಿಸಿದನು. ಬೇಗನೆ ಅವನು, ಲೋಕ ಪ್ರಭುತ್ವಕ್ಕಾಗಿದ್ದ ಹಿಟ್ಲರನ ಘನೋದ್ದೇಶದ ಒಳಸಂಚಿನಿಂದ ಭ್ರಮನಿರಸನಗೊಂಡನು. ಅವನು ಯುದ್ಧದಿಂದ ಮನೆಗೆ ಹಿಂದಿರುಗಿದ ತರುವಾಯ, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಸಿಸಲು ತೊಡಗಿದನು. ಅವನು ಬರೆದುದು: “ಕಟ್ಟಕಡೆಗೆ, ನಾನು ವಿಷಯಗಳನ್ನು ಸ್ಪಷ್ಟವಾಗಿ ಗ್ರಹಿಸಲಾರಂಭಿಸಿದೆ. ಈ ಎಲ್ಲ ರಕ್ತಪಾತಕ್ಕೆ ದೇವರು ಹೊಣೆಗಾರನಲ್ಲ ಎಂದು ನಾನು ಗ್ರಹಿಸಿದೆ . . . ವಿಧೇಯ ಮಾನವಜಾತಿಗಾಗಿ ನಿತ್ಯ ಆಶೀರ್ವಾದಗಳೊಂದಿಗೆ ಒಂದು ಭೂವ್ಯಾಪಕ ಪ್ರಮೋದವನವನ್ನು ಸ್ಥಾಪಿಸುವುದು ಆತನ ಉದ್ದೇಶವಾಗಿತ್ತೆಂದು ನಾನು ತಿಳಿದುಕೊಂಡೆ. . . . ಹಿಟ್ಲರನು ತನ್ನ ‘ಸಾವಿರ ವರ್ಷದ ಆಳಿಕೆ’ಯ ಕುರಿತು ಜಂಬಕೊಚ್ಚಿದ್ದನು, ಆದರೆ ಕೇವಲ 12 ವರ್ಷಗಳ ಕಾಲ ಆಳಿದ—ಮತ್ತು ಎಂತಹ ಕರಾಳ ಪರಿಣಾಮದೊಂದಿಗೆ! ಭೂಮಿಯ ಮೇಲೆ ಒಂದು ಸಾವಿರ ವರ್ಷದ ಆಳಿಕೆಯನ್ನು ಸ್ಥಾಪಿಸಲು ಸಾಧ್ಯವಿರುವವನು ಮತ್ತು ಸ್ಥಾಪಿಸುವವನು . . . ಹಿಟ್ಲರನಲ್ಲ ಬದಲಿಗೆ ಕ್ರಿಸ್ತನು.” ಈಗ ಸುಮಾರು 50 ವರ್ಷಗಳಿಂದ, ಗೇಆರ್ಗ್ ಪೂರ್ಣ ಸಮಯದ ಶುಶ್ರೂಷೆಯಲ್ಲಿ ನಿಜ ಶಾಂತಿಯ ಪ್ರತಿನಿಧಿಯಾಗಿ ಸೇವೆಸಲ್ಲಿಸುತ್ತಿದ್ದಾನೆ.
9. ನಾಸಿ ಜರ್ಮನಿಯಲ್ಲಿನ ಯೆಹೋವನ ಸಾಕ್ಷಿಗಳ ಅನುಭವವು, ಅವರು ಧೈರ್ಯವಂತರಾದರೂ ಶಾಂತಿಶೀಲರೆಂದು ಹೇಗೆ ರುಜುಪಡಿಸುತ್ತದೆ?
9 ನಾಸಿ ಆಳಿಕೆಯ ಸಮಯದಲ್ಲಿ, ಜರ್ಮನಿಯಲ್ಲಿನ ಯೆಹೋವನ ಸಾಕ್ಷಿಗಳ ಸಮಗ್ರತೆ ಹಾಗೂ ತಟಸ್ಥತೆಯು, 50ಕ್ಕಿಂತಲೂ ಹೆಚ್ಚು ವರ್ಷಗಳ ನಂತರ, ಈಗಲೂ ದೇವರು ಹಾಗೂ ಶಾಂತಿಗಾಗಿರುವ ಅವರ ಪ್ರೀತಿಗೆ ಒಂದು ಸಾಕ್ಷ್ಯವಾಗಿರಲು ಮುಂದುವರಿದಿದೆ. ವಾಷಿಂಗ್ಟನ್ ಡಿ.ಸಿ.ಯಲ್ಲಿರುವ, ಯುನೈಟೆಡ್ ಸ್ಟೇಟ್ಸ್ ಹಾಲೊಕಾಸ್ಟ್ ಮೆಮೋರಿಯಲ್ ಮ್ಯೂಸಿಯಮ್ ಅವರಿಂದ ಪ್ರಕಾಶಿಸಲ್ಪಟ್ಟ ಒಂದು ಪುಸ್ತಿಕೆ ಹೇಳುವುದು: “ನಾಸಿ ಆಳಿಕೆಯ ಕೆಳಗೆ ಯೆಹೋವನ ಸಾಕ್ಷಿಗಳು ತೀವ್ರವಾದ ಹಿಂಸೆಯನ್ನು ಸಹಿಸಿಕೊಂಡರು. . . . ಚಿತ್ರಹಿಂಸೆ, ಶಿಬಿರಕೂಟಗಳಲ್ಲಿ ದುರುಪಚಾರ, ಮತ್ತು ಕೆಲವೊಮ್ಮೆ ಮರಣದಂಡನೆಯ ಎದುರಿನಲ್ಲಿ, [ತಮ್ಮ ಧರ್ಮವನ್ನು ತ್ಯಜಿಸಲು] ನಿರಾಕರಿಸುವ ವಿಷಯದಲ್ಲಿ ಹೆಚ್ಚಿನವರು ಪ್ರದರ್ಶಿಸಿದ ಧೈರ್ಯವು, ಸಮಕಾಲೀನರಲ್ಲಿ ಅನೇಕರ ಗೌರವವನ್ನು ಗಳಿಸಿತು.” ಅದು ಮತ್ತೂ ಕೂಡಿಸುವುದು: “ಶಿಬಿರಗಳಿಂದ ಬಿಡುಗಡೆ ಹೊಂದಿದ ಸಮಯದಲ್ಲಿ, ಯೆಹೋವನ ಸಾಕ್ಷಿಗಳು ಶಿಬಿರದಲ್ಲಿ ಬದುಕಿ ಉಳಿದ ಜನರೊಂದಿಗೆ ಬೆರೆಯುತ್ತಾ, ಅವರನ್ನು ಪರಿವರ್ತಿಸುತ್ತಾ, ತಮ್ಮ ಕೆಲಸವನ್ನು ಮುಂದುವರಿಸಿದರು.”
ಹೆಚ್ಚು ಮಹತ್ತರವಾದ ಒಂದು ಬದಲಾವಣೆ
10. (ಎ) ನಿಜ ಶಾಂತಿಯು ಬರಬೇಕಾದಲ್ಲಿ, ಯಾವ ಮಹಾ ಬದಲಾವಣೆಯು ಅಗತ್ಯ? (ಬಿ) ಇದು ದಾನಿಯೇಲನ ಪುಸ್ತಕದಲ್ಲಿ ಹೇಗೆ ಚಿತ್ರಿಸಲ್ಪಟ್ಟಿತ್ತು?
10 ಇದು, ಕ್ರೈಸ್ತ ತಾಟಸ್ಥ್ಯದಲ್ಲಿ ನಂಬಿಕೆಯನ್ನು ಇಡುವಂತೆ ಲೋಕದ ಜನಸಂಖ್ಯೆಯ ಒಂದು ದೊಡ್ಡ ಭಾಗವನ್ನು ಪರಿವರ್ತಿಸುವ ಮೂಲಕ, ಇಡೀ ಲೋಕಕ್ಕೆ ಶಾಂತಿಯನ್ನು ತಾವು ತರಬಲ್ಲರೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆಂಬುದನ್ನು ಅರ್ಥೈಸುತ್ತದೊ? ಇಲ್ಲ! ಭೂಮಿಗೆ ಶಾಂತಿಯು ಪುನಃಸ್ಸ್ಥಾಪಿಸಲ್ಪಡಬೇಕಾದರೆ, ಹೆಚ್ಚು ಮಹತ್ತರವಾದ ಬದಲಾವಣೆಯು ಅಗತ್ಯ. ಅದು ಏನಾಗಿದೆ? ವಿಭಾಜಕ, ದುರ್ಭರ, ಹಾಗೂ ಹಿಂಸಾತ್ಮಕ ಮಾನವ ಆಳಿಕೆಯು, ಯಾವುದಕ್ಕಾಗಿ ಪ್ರಾರ್ಥಿಸುವಂತೆ ಯೇಸು ತನ್ನ ಶಿಷ್ಯರಿಗೆ ಕಲಿಸಿದನೊ ಆ ದೇವರ ರಾಜ್ಯದ ಮುಖಾಂತರ ಬರುವ ಆಳಿಕೆಗೆ ದಾರಿ ಬಿಟ್ಟುಕೊಡಬೇಕು. (ಮತ್ತಾಯ 6:9, 10) ಆದರೆ ಅದು ಹೇಗೆ ಸಂಭವಿಸುವುದು? ದೈವಿಕವಾಗಿ ಪ್ರೇರಿತವಾದ ಒಂದು ಕನಸಿನಲ್ಲಿ, ಪ್ರವಾದಿಯಾದ ದಾನಿಯೇಲನು ತಿಳಿದುಕೊಂಡದ್ದೇನೆಂದರೆ, ಕಡೇ ದಿವಸಗಳಲ್ಲಿ—‘ಮಾನವ ಕೈಗಳಿಂದ ಒಡೆಯಲ್ಪಡದ’—ಒಂದು ದೊಡ್ಡ ಬಂಡೆಯಂತಿರುವ ದೇವರ ರಾಜ್ಯವು, ಭೂಮಿಯ ಮೇಲೆ ಮಾನವಜಾತಿಯ ರಾಜಕೀಯ ಪ್ರಭುತ್ವಗಳನ್ನು ಪ್ರತಿನಿಧಿಸುವ ಒಂದು ಬೃಹದಾಕಾರದ ಪ್ರತಿಮೆಯನ್ನು ನುಚ್ಚುನೂರುಮಾಡುವುದು. ನಂತರ ಅವನು ಘೋಷಿಸಿದ್ದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:31-44.
11. ಶಾಂತಿಗಾಗಿ ಅಗತ್ಯವಾಗಿರುವ ಬದಲಾವಣೆಯನ್ನು ಯೆಹೋವನು ಯಾವ ಮಾಧ್ಯಮದ ಮೂಲಕ ತರುವನು?
11 ಲೋಕದ ಪರಿಸ್ಥಿತಿಯಲ್ಲಿ ಈ ವಿಪರೀತವಾದ ಬದಲಾವಣೆಯು ಏಕೆ ಸಂಭವಿಸುವುದು? ಏಕೆಂದರೆ, ಭೂಮಿಯನ್ನು ಮಲಿನಗೊಳಿಸಿ, ಅದನ್ನು ಹಾಳುಮಾಡುತ್ತಿರುವವರೆಲ್ಲರನ್ನು ಅದರಿಂದ ತೆಗೆದುಹಾಕುವ ವಾಗ್ದಾನವನ್ನು ಯೆಹೋವನು ಮಾಡಿದ್ದಾನೆ. (ಪ್ರಕಟನೆ 11:18) ಈ ರೂಪಾಂತರವು, ಸೈತಾನನು ಮತ್ತು ಅವನ ದುಷ್ಟ ಲೋಕದ ವಿರುದ್ಧ ಯೆಹೋವನ ನೀತಿಯ ಯುದ್ಧದಲ್ಲಿ ಸಂಭವಿಸುವುದು. ನಾವು ಪ್ರಕಟನೆ 16:14, 16ರಲ್ಲಿ (NW) ಓದುವುದು: “ಇವು [ಅಂದರೆ, ಅಶುದ್ಧವಾದ ಪ್ರೇರಿತ ಅಭಿವ್ಯಕ್ತಿಗಳು] ವಾಸ್ತವದಲ್ಲಿ ದೆವ್ವಗಳಿಂದ ಪ್ರೇರಿಸಲ್ಪಟ್ಟ ಅಭಿವ್ಯಕ್ತಿಗಳು ಮತ್ತು ಮಹತ್ಕಾರ್ಯಗಳನ್ನು ಮಾಡುತ್ತವೆ, ಮತ್ತು ಇವು ಸರ್ವಶಕ್ತ ದೇವರ ಮಹಾ ದಿನದ ಯುದ್ಧಕ್ಕೆ ಅವರನ್ನು ಒಟ್ಟುಗೂಡಿಸಲು, ಇಡೀ ನಿವಾಸಿತ ಭೂಮಿಯ ರಾಜರ [ರಾಜಕೀಯ ಅಧಿಪತಿಗಳ] ಬಳಿಗೆ ಹೋಗುತ್ತವೆ. ಮತ್ತು ಅವು ಇಬ್ರಿಯ ಭಾಷೆಯಲ್ಲಿ ಹರ್ಮಗೆದೋನ್ ಎಂಬ ಹೆಸರುಳ್ಳ ಸ್ಥಳಕ್ಕೆ ಅವರನ್ನು ಕೂಡಿಸಿದವು.”
12. ಅರ್ಮಗೆದೋನ್ ಯಾವುದರಂತಿರುವುದು?
12 ಅರ್ಮಗೆದೋನ್ ಯಾವುದರಂತಿರುವುದು? ಅದೊಂದು ನ್ಯೂಕ್ಲಿಯರ್ ಭೀಕರ ಘಟನೆ ಅಥವಾ ಮಾನವರಿಂದ ಕೆರಳಿಸಲ್ಪಟ್ಟ ಒಂದು ವಿಪತ್ತಾಗಿರದು. ಇಲ್ಲ, ಅದು ಎಲ್ಲ ಮಾನವ ಯುದ್ಧಗಳನ್ನು ಕೊನೆಗೊಳಿಸಲು ಮತ್ತು ಅಂತಹ ಯುದ್ಧಗಳನ್ನು ಪ್ರವರ್ಧಿಸುವ ಸಕಲರನ್ನೂ ನಿರ್ಮೂಲಮಾಡಲಿಕ್ಕಾಗಿರುವ ದೇವರ ಯುದ್ಧವಾಗಿದೆ. ಅದು ಶಾಂತಿಪ್ರಿಯರಿಗಾಗಿ ನಿಜ ಶಾಂತಿಯನ್ನು ತರಲಿರುವ ದೇವರ ಯುದ್ಧವಾಗಿದೆ. ಹೌದು, ಯೆಹೋವನು ಉದ್ದೇಶಿಸಿರುವಂತೆ, ಅರ್ಮಗೆದೋನ್ ಬರುತ್ತಿದೆ. ಅದು ತಡಮಾಡದು. ಆತನ ಪ್ರವಾದಿಯಾದ ಹಬಕ್ಕೂಕನು ಹೀಗೆ ಬರೆಯಲು ಪ್ರೇರೇಪಿಸಲ್ಪಟ್ಟನು: “ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತ್ವರೆಪಡುತ್ತದೆ, ಮೋಸಮಾಡದು; ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು.” (ಹಬಕ್ಕೂಕ 2:3) ನಮ್ಮ ಮಾನವ ಭಾವನೆಗಳಿಂದಾಗಿ ಅದು ತಡವಾಗಿರುವಂತೆ ತೋರಬಹುದಾದರೂ, ಯೆಹೋವನು ತನ್ನ ವೇಳಾಪಟ್ಟಿಗೆ ಸರಿಯಾಗಿ ವರ್ತಿಸುತ್ತಾನೆ. ಯೆಹೋವನು ಪೂರ್ವನಿರ್ಧರಿಸಿರುವ ಸಮಯದಲ್ಲಿ ಅರ್ಮಗೆದೋನ್ ಎರಗುವುದು.
13. ದೇವರು ನಿಜವಾದ ದೋಷಿಯಾದ, ಪಿಶಾಚನಾದ ಸೈತಾನನೊಂದಿಗೆ ಹೇಗೆ ವ್ಯವಹರಿಸುವನು?
13 ಈ ನಿರ್ಣಾಯಕ ಕ್ರಿಯೆಯು, ನಿಜ ಶಾಂತಿಗಾಗಿ ಮಾರ್ಗವನ್ನು ಸುಗಮಗೊಳಿಸುವುದು! ಆದರೆ ನಿಜ ಶಾಂತಿಯು ದೃಢವಾಗಿ ಸ್ಥಾಪಿಸಲ್ಪಡಬೇಕಾದರೆ, ಬೇರೆ ಯಾವುದೊ ವಿಷಯವು ಮಾಡಲ್ಪಡಬೇಕು—ವಿಭಜನೆ, ದ್ವೇಷ, ಮತ್ತು ವ್ಯಾಜ್ಯವನ್ನು ಉಂಟುಮಾಡುವ ವ್ಯಕ್ತಿಯನ್ನು ತೆಗೆದುಹಾಕಬೇಕು. ಅದೇ ಸಂಗತಿಯು ಮುಂದೆ ಸಂಭವಿಸುವುದೆಂದು ಬೈಬಲ್ ಪ್ರವಾದಿಸುತ್ತದೆ—ಯುದ್ಧವನ್ನು ಉತ್ತೇಜಿಸುವವನೂ ಸುಳ್ಳಿನ ಪಿತನೂ ಆದ ಸೈತಾನನು ಬಂಧಿಸಲ್ಪಡುವನು. ಪ್ರಕಟನೆ 20:1-3ರಲ್ಲಿ (NW) ದಾಖಲಿಸಲ್ಪಟ್ಟಂತೆ, ಒಂದು ಪ್ರವಾದನಾತ್ಮಕ ದರ್ಶನದಲ್ಲಿ ಅಪೊಸ್ತಲ ಯೋಹಾನನು ಈ ಘಟನೆಯನ್ನು ನೋಡಿದನು: “ಮತ್ತು ಒಬ್ಬ ದೇವದೂತನು ತನ್ನ ಕೈಯಲ್ಲಿ ಅಧೋಲೋಕದ ಬೀಗದ ಕೈ ಮತ್ತು ದೊಡ್ಡ ಸರಪಣಿಯೊಂದಿಗೆ ಪರಲೋಕದಿಂದ ಇಳಿದು ಬರುವುದನ್ನು ನಾನು ಕಂಡೆನು. ಮತ್ತು ಅವನು, ಯಾರು ಪಿಶಾಚನೂ ಸೈತಾನನೂ ಆಗಿದ್ದಾನೋ, ಆ ಪುರಾತನವಾದ ಘಟಸರ್ಪವನ್ನು ವಶಕ್ಕೆ ತೆಗೆದುಕೊಂಡು ಅವನನ್ನು ಸಾವಿರ ವರುಷ ಬಂಧನದಲ್ಲಿಟ್ಟನು. ಮತ್ತು ಆ ಸಾವಿರ ವರುಷ ತೀರುವ ತನಕ ಸೈತಾನನು ಇನ್ನೂ ಜನಾಂಗಗಳನ್ನು ಮರುಳುಗೊಳಿಸಲು ಆಗದಂತೆ ದೇವದೂತನು ಅವನನ್ನು ಅಧೋಲೋಕಕ್ಕೆ ದೊಬ್ಬಿ ಅದನ್ನು ಮುಚ್ಚಿ ಅದಕ್ಕೆ ಮುದ್ರೆ ಹಾಕಿದನು.”
14. ಸೈತಾನನ ವಿರುದ್ಧ ಯೆಹೋವನ ವಿಜಯೋತ್ಸವದ ಕ್ರಿಯೆಯನ್ನು ಹೇಗೆ ವರ್ಣಿಸಬಹುದು?
14 ಇದೊಂದು ಕನಸಲ್ಲ; ಇದು ದೇವರ ವಾಗ್ದಾನವಾಗಿದೆ. ಮತ್ತು ಬೈಬಲ್ ಹೇಳುವುದು: “ದೇವರು ಸುಳ್ಳಾಡಸಾಧ್ಯವಿಲ್ಲ.” (ಇಬ್ರಿಯ 6:18, NW) ಹೀಗೆ, ಯೆಹೋವನು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಹೀಗೆ ಹೇಳಸಾಧ್ಯವಿತ್ತು: “ನಾನು ಲೋಕದಲ್ಲಿ ಪ್ರೀತಿನೀತಿನ್ಯಾಯಗಳನ್ನು ತೋರ್ಪಡಿಸುವ ಯೆಹೋವನಾಗಿರುವೆನು . . . ಪ್ರೀತಿನೀತಿನ್ಯಾಯಗಳೇ ನನಗೆ ಆನಂದವೆಂದು ಯೆಹೋವನು ಅನ್ನುತ್ತಾನೆ.” (ಯೆರೆಮೀಯ 9:24) ಯೆಹೋವನು ನ್ಯಾಯನೀತಿಗನುಸಾರ ಕ್ರಿಯೆಗೈಯುತ್ತಾನೆ, ಮತ್ತು ಭೂಮಿಗೆ ಆತನು ತರಲಿರುವ ಶಾಂತಿಯಲ್ಲಿ ಆತನು ಹರ್ಷಿಸುತ್ತಾನೆ.
ಶಾಂತಿಯ ಪ್ರಭುವಿನಿಂದ ಆಳಿಕೆ
15, 16. (ಎ) ರಾಜನಾಗಿ ಆಳುವಂತೆ ಯಾರು ಯೆಹೋವನಿಂದ ಆರಿಸಿತೆಗೆಯಲ್ಪಟ್ಟಿದ್ದಾನೆ? (ಬಿ) ಆ ಆಳಿಕೆಯು ಹೇಗೆ ವರ್ಣಿಸಲ್ಪಟ್ಟಿದೆ, ಮತ್ತು ಅದರಲ್ಲಿ ಯಾರು ಪಾಲ್ಗೊಳ್ಳುವರು?
15 ತನ್ನ ರಾಜ್ಯದೇರ್ಪಾಡಿನ ಕೆಳಗೆ ಜೀವಿಸುತ್ತಿರುವವರೆಲ್ಲರಿಗೂ ನಿಜ ಶಾಂತಿಯು ಬರುವುದೆಂಬುದನ್ನು ಖಚಿತಪಡಿಸಲು, ಯೆಹೋವನು ಆಳಿಕೆಯನ್ನು ಶಾಂತಿಯ ನಿಜ ಪ್ರಭುವಾದ ಯೇಸು ಕ್ರಿಸ್ತನಿಗೆ ಕೊಟ್ಟಿದ್ದಾನೆ. ಇದು ಯೆಶಾಯ 9:6, 7ರಲ್ಲಿ ಮುಂತಿಳಿಸಿದಂತಿದೆ: “ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು; ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನ [“ಶಾಂತಿ,” NW]ದ ಪ್ರಭು ಎಂಬವು ಅವನ ಹೆಸರು. ಅವನ ಮುಖಾಂತರ . . . ಆಡಳಿತವು ಅಭಿವೃದ್ಧಿಯಾಗುವದು, . . . ನಿತ್ಯ ಸಮಾಧಾನ [“ಶಾಂತಿ,” NW]ವಿರುವದು, . . . ಸೇನಾಧೀಶ್ವರನಾದ ಯೆಹೋವನ ಆಗ್ರಹವು ಇದನ್ನು ನೆರವೇರಿಸುವದು.” ಮೆಸ್ಸೀಯನ ಶಾಂತಿಪೂರ್ಣ ಆಳಿಕೆಯ ಕುರಿತಾಗಿ ಕೀರ್ತನೆಗಾರನೂ ಪ್ರವಾದನಾತ್ಮಕವಾಗಿ ಬರೆದುದು: “ಅವನ ದಿವಸಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವ ವರೆಗೂ ಪರಿಪೂರ್ಣಸೌಭಾಗ್ಯ [“ಶಾಂತಿ,” NW]ವಿರಲಿ.”—ಕೀರ್ತನೆ 72:7.
16 ಇನ್ನೂ ಹೆಚ್ಚಾಗಿ, ಕ್ರಿಸ್ತನ 1,44,000 ಆತ್ಮಾಭಿಷಿಕ್ತ ಸಹೋದರರು ಅವನೊಂದಿಗೆ ಸ್ವರ್ಗದಲ್ಲಿ ಆಳಲಿದ್ದಾರೆ. ಇವರು ಕ್ರಿಸ್ತನೊಂದಿಗೆ ಸಹಬಾಧ್ಯಸ್ಥರಾಗಿದ್ದಾರೆ. ಇವರ ಕುರಿತು ಪೌಲನು ಬರೆದುದು: “ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುವನು. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.” (ರೋಮಾಪುರ 16:20) ಹೌದು, ಯುದ್ಧವನ್ನು ಹರಡುವವನಾದ ಪಿಶಾಚನಾದ ಸೈತಾನನ ಮೇಲೆ ಕ್ರಿಸ್ತನ ವಿಜಯದಲ್ಲಿ ಇವರು ಸ್ವರ್ಗದಿಂದ ಪಾಲಿಗರಾಗುವರು!
17. ನಿಜ ಶಾಂತಿಯನ್ನು ಬಾಧ್ಯತೆಯಾಗಿ ಪಡೆದುಕೊಳ್ಳಲು ನಾವು ಏನು ಮಾಡಬೇಕು?
17 ಆದುದರಿಂದ ಈಗ ಪ್ರಶ್ನೆಯೇನೆಂದರೆ, ನಿಜ ಶಾಂತಿಯನ್ನು ಬಾಧ್ಯತೆಯಾಗಿ ಪಡೆದುಕೊಳ್ಳಲು ನೀವೇನು ಮಾಡಬೇಕು? ನಿಜ ಶಾಂತಿಯು, ದೇವರ ವಿಧದಲ್ಲಿ ಮಾತ್ರ ಬರಸಾಧ್ಯ ಮತ್ತು ಅದನ್ನು ಪಡೆದುಕೊಳ್ಳಲು ನೀವು ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. ನೀವು ಶಾಂತಿಯ ಪ್ರಭುವನ್ನು ಸ್ವೀಕರಿಸಿ, ಅವನ ಕಡೆಗೆ ತಿರುಗಿಕೊಳ್ಳಬೇಕು. ಇದರ ಅರ್ಥ, ನೀವು ಕ್ರಿಸ್ತನನ್ನು ಪಾಪಪೂರ್ಣ ಮಾನವಜಾತಿಯ ವಿಮೋಚಕ ಹಾಗೂ ಉದ್ಧಾರಕನ ಪಾತ್ರದಲ್ಲಿ ಸ್ವೀಕರಿಸಬೇಕು. ಸ್ವತಃ ಯೇಸು ಈ ಪ್ರಸಿದ್ಧ ಮಾತುಗಳನ್ನಾಡಿದನು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ನಿಜ ಶಾಂತಿ ಮತ್ತು ರಕ್ಷಣೆಯನ್ನು ತರುವ ದೇವರ ಪ್ರತಿನಿಧಿಯೋಪಾದಿ, ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯನ್ನಿಡಲು ನೀವು ಸಿದ್ಧಮನಸ್ಕರೊ? ಶಾಂತಿಯನ್ನು ಸ್ಥಾಪಿಸಿ, ಅದರ ಖಾತ್ರಿಯನ್ನು ಕೊಡಬಲ್ಲ ಮತ್ತೊಂದು ಹೆಸರು ಸ್ವರ್ಗದ ಕೆಳಗಿರುವುದಿಲ್ಲ. (ಫಿಲಿಪ್ಪಿ 2:8-11) ಏಕೆ? ಏಕೆಂದರೆ ಯೇಸು ದೇವರಿಂದ ಆರಿಸಿತೆಗೆಯಲ್ಪಟ್ಟವನು. ಅವನು ಭೂಮಿಯ ಮೇಲೆ ಜೀವಿಸಿದವರಲ್ಲಿಯೇ ಶಾಂತಿಯ ಅತ್ಯಂತ ಮಹಾನ್ ಸಂದೇಶವಾಹಕನಾಗಿದ್ದಾನೆ. ನೀವು ಯೇಸುವಿಗೆ ಕಿವಿಗೊಟ್ಟು, ಅವನ ಮಾದರಿಯನ್ನು ಅನುಸರಿಸುವಿರೊ?
18. ಯೋಹಾನ 17:3ರಲ್ಲಿ ದಾಖಲಾಗಿರುವ ಯೇಸುವಿನ ಮಾತುಗಳಿಗೆ ಪ್ರತಿಕ್ರಿಯಿಸುತ್ತಾ, ನಾವು ಏನು ಮಾಡಬೇಕು?
18 ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ರಾಜ್ಯ ಸಭಾಗೃಹದಲ್ಲಿ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಮೂಲಕ, ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವ ಸಮಯವು ಇದೇ ಆಗಿದೆ. ಈ ಶೈಕ್ಷಣಿಕ ಕೂಟಗಳು, ಇತರರೊಂದಿಗೆ ನಿಮ್ಮ ಜ್ಞಾನ ಮತ್ತು ನಿರೀಕ್ಷೆಯನ್ನು ಹಂಚಿಕೊಳ್ಳುವಂತೆ ನಿಮ್ಮನ್ನು ಪ್ರಚೋದಿಸುವವು. ನೀವು ಸಹ ದೇವರ ಶಾಂತಿಯ ಒಬ್ಬ ಪ್ರತಿನಿಧಿಯಾಗಬಲ್ಲಿರಿ. ಯೆಹೋವ ದೇವರಲ್ಲಿ ಭರವಸೆಯಿಡುವ ಮೂಲಕ ನೀವು ಈಗ ಶಾಂತಿಯನ್ನು ಅನುಭವಿಸಬಲ್ಲಿರಿ. ಅದು ನ್ಯೂ ಇಂಟರ್ನ್ಯಾಷನಲ್ ವರ್ಷನ್ಗನುಸಾರ, ಯೆಶಾಯ 26:3ರಲ್ಲಿ ಹೇಳಲಾದಂತಿದೆ: “ಯಾರ ಮನಸ್ಸು ಸ್ಥಿರಚಿತ್ತವಾಗಿದೆಯೊ ಅವನನ್ನು ನೀನು ಪರಿಪೂರ್ಣ ಶಾಂತಿಯಲ್ಲಿಡುವಿ, ಏಕೆಂದರೆ ಅವನು ನಿನ್ನಲ್ಲಿ ಭರವಸವಿಡುತ್ತಾನೆ.” ನೀವು ಯಾರಲ್ಲಿ ಭರವಸವಿಡಬೇಕು? “ಯೆಹೋವನಲ್ಲಿ ಸದಾ ಭರವಸವಿಡಿರಿ; ಯಾಹುಯೆಹೋವನು ಶಾಶ್ವತವಾಗಿ ಆಶ್ರಯಗಿರಿಯಾಗಿದ್ದಾನೆ.”—ಯೆಶಾಯ 26:4.
19, 20. ಇಂದು ಶಾಂತಿಯನ್ನು ಹುಡುಕಿ, ಅದನ್ನು ಬೆನ್ನಟ್ಟುವವರಿಗೆ ಏನು ಕಾದಿದೆ?
19 ದೇವರ ಶಾಂತಿಪೂರ್ಣ ಹೊಸ ಲೋಕದಲ್ಲಿ ನಿತ್ಯಜೀವವನ್ನು ಪಡೆದುಕೊಳ್ಳಲಿಕ್ಕಾಗಿ ಈಗ ನಿಮ್ಮ ನಿಲುವನ್ನು ತೆಗೆದುಕೊಳ್ಳಿರಿ. ಪ್ರಕಟನೆ 21:3, 4ರಲ್ಲಿ, ದೇವರ ವಾಕ್ಯವು ನಮಗೆ ಆಶ್ವಾಸನೆ ನೀಡುವುದು: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” ನೀವು ಹಾತೊರೆಯುವಂತಹ ಶಾಂತಿಪೂರ್ಣ ಭವಿಷ್ಯತ್ತು ಅದೇ ಆಗಿರುವುದಿಲ್ಲವೊ?
20 ಹಾಗಾದರೆ ದೇವರು ವಾಗ್ದಾನಿಸಿರುವ ವಿಷಯವನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು. ಒಳ್ಳೇ ನಡತೆಯುಳ್ಳವನನ್ನು ನೋಡು, ಯಥಾರ್ಥನನ್ನು ಲಕ್ಷಿಸು; ಆ ಮನುಷ್ಯನ ಭವಿಷ್ಯತ್ತು ಶಾಂತಿಪೂರ್ಣವಾಗಿರುವುದು.” (ಕೀರ್ತನೆ 37:11, 37, NW) ಆ ಸಂತೋಷದ ದಿನವು ಬರುವಾಗ, ನಾವು ಕೃತಜ್ಞತೆಯಿಂದ ಹೀಗೆ ಹೇಳುವಂತಾಗಲಿ, “ಕಟ್ಟಕಡೆಗೆ ನಿಜ ಶಾಂತಿ! ನಿಜ ಶಾಂತಿಯ ಮೂಲನಾದ ಯೆಹೋವ ದೇವರಿಗೆ ಉಪಕಾರಗಳು!”
ನೀವು ವಿವರಿಸಬಲ್ಲಿರೊ?
◻ ಯಾವುದು ಒಬ್ಬನಿಗೆ ಆಲೋಚನೆ ಹಾಗೂ ಕ್ರಿಯೆಯಲ್ಲಿ ಬದಲಾವಣೆಗಳನ್ನು ಮಾಡುವಂತೆ ಸಹಾಯ ಮಾಡಬಲ್ಲದು?
◻ ನಿಜ ಶಾಂತಿಗಾಗಿರುವ ತಮ್ಮ ಪ್ರೀತಿಯನ್ನು ಯೆಹೋವನ ಸಾಕ್ಷಿಗಳು, ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಹೇಗೆ ಪ್ರದರ್ಶಿಸಿದ್ದಾರೆ?
◻ ದ್ವೇಷ ಹಾಗೂ ಯುದ್ಧವನ್ನು ಪ್ರವರ್ಧಿಸುವವರೆಲ್ಲರೊಂದಿಗೆ ಯೆಹೋವನು ಹೇಗೆ ವ್ಯವಹರಿಸುವನು?
◻ ಶಾಂತಿಯ ಪ್ರಭುವಿನ ಆಳಿಕೆಯು ಮಾನವಜಾತಿಗಾಗಿ ಏನನ್ನು ಮಾಡುವುದು?
[ಪುಟ 14 ರಲ್ಲಿರುವ ಚಿತ್ರ]
ಯೆಶಾಯನ ಮಾತುಗಳು ಯುಎನ್ನ ಮೂಲಕವಲ್ಲ, ಬದಲಿಗೆ ಯೆಹೋವನ ಬೋಧನೆಗೆ ಪ್ರತಿಕ್ರಿಯಿಸುವವರ ಮೂಲಕ ನೆರವೇರುತ್ತವೆ
[ಪುಟ 15 ರಲ್ಲಿರುವ ಚಿತ್ರ]
ಈ ಇಬ್ಬರು ಪುರುಷರು ಶಾಂತಿಯನ್ನು ಬೆನ್ನಟ್ಟಲು ಬದಲಾವಣೆಗಳನ್ನು ಮಾಡಿದರು
ರಾಮೀ ಓವೆಡ್
ಗೇಆರ್ಗ್ ರಾಯ್ಟೆರ್
[ಪುಟ 16 ರಲ್ಲಿರುವ ಚಿತ್ರ]
ಶಾಂತಿಯ ಪ್ರಭುವಿನ ಆಳಿಕೆಯಲ್ಲಿ, ನಿಜ ಶಾಂತಿಯು ಪ್ರಚಲಿತವಾಗಿರುವುದು