ಕ್ರೈಸ್ತ ಯುವಕರೇ ನಂಬಿಕೆಯಲ್ಲಿ ದೃಢರಾಗಿರ್ರಿ
“ಪ್ರತಿ ಯೊಬ್ಬನು ಹಾಜರಾಗಬೇಕು.” ಹಾಗೆಂದು ಪ್ರಕಟನೆ ಮಾಡಲ್ಪಟ್ಟಿತ್ತು. ಒಂದು ನಿರ್ದಿಷ್ಟ ಜಾಪಾನಿನ ಶಾಲೆಯಲ್ಲಿನ ಒಂದು ಸಾಮಾನ್ಯ ಸಮ್ಮೇಳದ ಸಭಾಂಗಣದಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಜರಿರಬೇಕಿತ್ತು. ಒಬ್ಬ ಯುವ ಕ್ರೈಸ್ತ ವಿದ್ಯಾರ್ಥಿಯು ಒಂದು ಶಾಲಾ ಸಂಗೀತದಲ್ಲಿ ಅಭಿವ್ಯಂಜಿಸಲಾದ ನಿರ್ದಿಷ್ಟ ವಿಚಾರವನ್ನು ಒಪ್ಪಲಾರದೆ ಹೋದನು. “ಒಳ್ಳೆದು,” ಅವನು ನೆನಸಿದ್ದು, “ಆ ಶಾಲಾ ಹಾಡು ನುಡಿಸಲ್ಪಡುವುದು. ಆದರೆ ನನಗೇನೂ ತೊಂದರೆ ಇರಲಾರದು. ನಾನು ಎಂದಿನಂತೆ ಹಿಂದುಗಡೆ ಬರೇ ಕೂತಿರುವೆ.”
ಆದರೆ ಆ ಯುವ ಯೆಹೋವನ ಸಾಕ್ಷಿಯು ಸಭಾಂಗಣವನ್ನು ಪ್ರವೇಶಿಸಿದಾಗ, ಆ ವಿಭಾಗದ ಶಿಕ್ಷಕ ಸದಸ್ಯರೆಲ್ಲಾ ಹಿಂದಿನ ಸಾಲಿನಲ್ಲಿ ಕೂತಿದ್ದರು. ಆದಕಾರಣ ಅವನಿಗೆ ಅವರ ಮುಂದೆ ಕೂತುಕೊಳ್ಳಬೇಕಾಯಿತು. ಇತರ ವಿದ್ಯಾರ್ಥಿಗಳು ಶಾಲಾ ಹಾಡಿಗಾಗಿ ಎದ್ದು ನಿಂತಾಗ, ಅವನು ಗೌರವಪೂರ್ವಕವಾಗಿ ಕೂತೇ ಇದ್ದನು. ಆದರೆ ಅಧ್ಯಾಪಕರು ಇದರಿಂದಾಗಿ ಕೋಪಗೊಂಡರು. ಅವನನ್ನು ಬಲಾತ್ಕಾರದಿಂದ ಎದ್ದು ನಿಲ್ಲಿಸಲು ಪ್ರಯತ್ನ ಮಾಡಿದರು. ಇಂಥ ಒಂದು ಪರಿಸ್ಥಿತಿಯಲ್ಲಿ ನೀವು ನಿಮ್ಮನ್ನು ಕಲ್ಪಿಸಿಕೊಳ್ಳಬಲ್ಲಿರೋ? ಹಾಗಿದ್ದಲ್ಲಿ ನೀವೇನು ಮಾಡುತ್ತಿರುತ್ತಿದ್ದಿರಿ?
ದೃಢವಾದ ನಂಬಿಕೆ ಬೇಕಾಗಿರುವ ಕಾರಣ
ಜನರು ಕ್ರೈಸ್ತರನ್ನು ಅವರಷ್ಟಕ್ಕೆ ಇರಲು ಮತ್ತು ಅವರ ಬೈಬಲ್-ಶಿಕ್ಷಿತ ಮನಸ್ಸಾಕ್ಷಿಗನುಸಾರ ಜೀವಿಸಲು ಬಿಡುತ್ತಿದ್ದಲ್ಲಿ ಒಳ್ಳೆಯದಿತ್ತು. ಆದರೆ ಹೆಚ್ಚಾಗಿ ಕ್ರೈಸ್ತರಿಗೆ ಒತ್ತಡಯುಕ್ತ ಪರಿಸ್ಥಿತಿಗಳನ್ನು ಎದುರಿಸಲಿಕ್ಕಿರುತ್ತದೆ. ಇದು ನಮ್ಮನ್ನು ಆಶ್ಚರ್ಯಪಡಿಸಬಾರದು ಯಾಕಂದರೆ ದೇವರ ಮಗನಾದ ಯೇಸು ಕ್ರಿಸ್ತನು ತಾನೇ ಹೇಳಿದ್ದು: “ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹಾ ಹಿಂಸೆ ಪಡಿಸುವರು.” (ಯೋಹಾನ 15:20) ಪೂರಾ ತರದ ಹಿಂಸೆಯು ಮಾತ್ರವಲ್ಲದೆ ಯೆಹೋವನ ಸೇವಕರು ಹಲವಾರು ತರದ ಇತರ ನಂಬಿಕೆಯ ಪರಿಶೋಧನೆಗಳನ್ನೂ ಎದುರಿಸುತ್ತಾರೆ.
ಶಾಲೆಯಲ್ಲಿ ಎದುರಾಗುವ ಶೋಧನೆಗಳನ್ನು ಎದುರಿಸಲು ಕ್ರೈಸ್ತ ಯುವಕರಿಗೆ ಹೆಚ್ಚಾಗಿ ಬಲವಾದ ನಂಬಿಕೆಯು ಬೇಕು. ದುರ್ಭಾಷೆಯನ್ನು ಉಪಯೋಗಿಸುವ ಅಥವಾ ದೇವರನ್ನು ಅಗೌರವಿಸುವ ಮನೋಭಾವವಿರುವ ಸಹಪಾಠಿಗಳ ಸಂಪರ್ಕಕ್ಕೆ ಅವರು ಹಾಕಲ್ಪಡಬಹುದು. ರಾಷ್ಟ್ರೀಯತೆಯ ಮೇಲೆ ಅತಿರೇಕ ಒತ್ತನ್ನು ಅವರು ಎದುರಿಸಬಹುದು, ಮತ್ತು ಕ್ಲಬ್ಗಳಲ್ಲಿ ಮತ್ತು ಶಾಲಾ ರಾಜಕೀಯಗಳಲ್ಲಿ ಮತ್ತು ಆತ್ಮಿಕತೆಗೆ ಹಾನಿಕಾರಕವಾದ ಇತರ ಚಟುವಟಿಕೆಗಳಲ್ಲಿ ಅವರು ಒತ್ತಡಕ್ಕೆ ಗುರಿಯಾಗಬಹುದು. ಯುವ ಕ್ರೈಸ್ತರು ರಾಜಿಮಾಡಿಕೊಳ್ಳುವಂತೆ ಅಧ್ಯಾಪಕರು ಅಥವಾ ಜೊತೆ ವಿದ್ಯಾರ್ಥಿಗಳು ಒತ್ತಡ ಹಾಕಲು ಪ್ರಯತ್ನಿಸಬಹುದು. ಅದರ್ದಿಂದ ತಮ್ಮ ನಿರೀಕ್ಷೆಯನ್ನು ಸ್ಪಷ್ಟವಾಗಿಗಿ ಪ್ರತಿವಾದಿಸಲು ಬೇಕಾದ ನಂಬಿಕೆಗಾಗಿ ಯೆಹೋವನಾತ್ಮದ ಮೇಲೆ ದೈವಿಕ ಯುವಕರು ಆತುಕೊಳ್ಳಲೇ ಬೇಕು.—ಮತ್ತಾಯ 10:19, 20; ಗಲಾತ್ಯ 5:22, 23.
‘ಪ್ರತಿವಾದಿಸಲು ಸಿದ್ಧರಾಗಿರ್ರಿ’
ಅಪೊಸ್ತಲ ಪೇತ್ರನ ಸೂಚನೆಯು ಯುವಕರಿಗೆ ಮತ್ತು ಪ್ರೌಢ ಕ್ರೈಸ್ತರಿಗೆ ಇಬ್ಬರಿಗೂ ಅತಿ ತಕ್ಕದ್ದಾಗಿದೆ. ಅವನಂದದ್ದು: “ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರ ಮುಂದೆ ಒಂದು ಪ್ರತಿವಾದವನ್ನು ಮಾಡಲು ಯಾವಾಗಲೂ ಸಿದ್ಧರಾಗಿರಿ; ಆದರೆ ಅದನ್ನು ಸೌಮ್ಯಭಾವದಿಂದಲೂ ಆಳವಾದ ಗೌರವದಿಂದಲೂ ಮಾಡಿರಿ.” (1 ಪೇತ್ರ 3:15, NW) ಅಂಥ ಒಂದು ಪ್ರತಿವಾದವನ್ನು ಮಾಡಲು ಸಿದ್ಧರಾಗಿರುವುದಕ್ಕೆ ಏನು ಬೇಕಾಗುತ್ತದೆ? ಮೊದಲನೆಯದಾಗಿ, ದೇವರ ವಾಕ್ಯವು ಏನು ಕಲಿಸುತ್ತದೆ ಎಂಬದನ್ನು ನೀವು ತಿಳುಕೊಂಡಿರಬೇಕು. ರಾಷ್ಟ್ರೀಯತೆ, ರಾಜಕೀಯ, ಮಾದಕೌಷಧದ ದುರುಪಯೋಗ ಅಥವಾ ನೈತಿಕತೆ ಇಂಥ ವಿಷಯಗಳ ಮೇಲೆ ಶಾಲೆಯಲ್ಲಿ ನಿಮ್ಮ ನಿಲುವನ್ನು ತಕ್ಕೊಳ್ಳಲು, ಆ ಕ್ರೈಸ್ತ ನಿಲುವಿಗೆ ಕಾರಣವನ್ನು ಮೊದಲು ನೀವು ಅರಿತವರಾಗಿರಬೇಕು ಮತ್ತು ಅದನ್ನು ಪ್ರಾಮಾಣಿಕತೆಯಿಂದ ನಂಬುವವರಾಗಿರಬೇಕು.
ದೃಷ್ಟಾಂತಕ್ಕಾಗಿ, ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ ಹೇಳಿದ್ದು: “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” (1 ಕೊರಿಂಥ 15:33) ಇದರೊಂದಿಗೆ ನೀವು ಸಹಮತದಲ್ಲಿದ್ದೀರೋ? ಪೌಲನು ಸೂಚಿಸಿದ ಪ್ರಕಾರ, ಸಹವಾಸದ ವಿಷಯದಲ್ಲಿ ಮೋಸಹೋಗುವುದು ಅತಿ ಸುಲಭ. ವ್ಯಕ್ತಿಯೊಬ್ಬನು ಸ್ನೇಹಪರನಾಗಿ ಮತ್ತು ಸರಿಬೀಳುವವನಾಗಿ ಕಾಣಬಹುದು. ಆದರೆ ಅವನು ಯೆಹೋವನ ಸೇವೆಗಾಗಿ ನಿಮಗಿರುವ ಗಮನದಲ್ಲಿ ಪಾಲಿಗನಾಗಿರದ್ದಲ್ಲಿ ಅಥವಾ ಬೈಬಲ್ ವಾಗ್ದಾನಗಳನ್ನು ಸಹಾ ನಂಬದಿದ್ದಲ್ಲಿ, ಅವನು ಕೆಟ್ಟ ಸಹವಾಸಿಯಾಗಿರುವನು. ಏಕೆ? ಏಕೆಂದರೆ ಅವನ ಜೀವನವು ಬೇರೆ ತತ್ವಗಳ ಮೇಲೆ ಆಧರಿಸಿದೆ ಮತ್ತು ಒಬ್ಬ ಕ್ರೈಸ್ತನಿಗೆ ಅತಿ ಮಹತ್ವದ ವಿಷಯಗಳು ಅವನಿಗೆ ಕೊಂಚವೂ ಮಹತ್ವದ್ದಾಗಿ ಇರಲಿಕ್ಕಿಲ್ಲ.
ಇದೇನೂ ಆಶ್ಚರ್ಯಕರವಲ್ಲ, ಯಾಕಂದರೆ ಯೇಸು ತನ್ನ ಹಿಂಬಾಲಕರ ಕುರಿತು ಅಂದದ್ದು: “ನಾನು ಲೋಕದವನ್ನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ.” (ಯೋಹಾನ 17:16) ಒಬ್ಬ ವ್ಯಕ್ತಿಯು ನಿಜ ಕ್ರೈಸ್ತನಾಗಿರುವುದೂ ಮತ್ತು ಅದೇ ಸಮಯದಲ್ಲಿ ಸೈತಾನನು ಯಾವುದರ ದೇವರೋ ಆ ಲೋಕದ ಒಂದು ಭಾಗವಾಗಿರುವುದೂ ಅಶಕ್ಯ. (2 ಕೊರಿಂಥ 4:4) ಲೋಕದಿಂದ ಈ ರೀತಿಯ ಪ್ರತ್ಯೇಕತೆಯು, ಇಂದು ಎಷ್ಟೋ ಜನರನ್ನು ಬಾಧಿಸುತ್ತಿರುವ ಭ್ರಷ್ಟತೆ ಮತ್ತು ಕ್ಲೇಶದಿಂದ ಒಬ್ಬ ಕೈಸ್ತನನ್ನು ಎಷ್ಟು ಚೆನ್ನಾಗಿ ರಕ್ಷಿಸುತ್ತದೆಂದು ನೀವು ಕಾಣುತ್ತಿರೋ? ಹಾಗಿದ್ದರೆ, ಕೆಲವು ಶಾಲಾ ಚಟುವಟಿಕೆಗಳಲ್ಲಿ ಸೇರಲು ಒಂದುವೇಳೆ ನಿಮಗಾಗದಿದ್ದರೂ, ನೀವು ನಿಮ್ಮ ಪ್ರತ್ಯೇಕತೆಯನ್ನು ಏಕೆ ಕಾಪಾಡಿಕೊಳ್ಳಬೇಕೆಂಬದನ್ನು ಗ್ರಹಿಸಶಕ್ತರಾಗುವಿರಿ.a
ನಂಬಿಕೆಯಲ್ಲಿ ದೃಢರಾಗಿರುವ ಮತ್ತು ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಡುವ ಮಹತ್ವವು ಒಬ್ಬಾಕೆ ಯುವ ಕ್ರೈಸ್ತ ಹುಡುಗಿಯಿಂದ ತೋರಿಸಲ್ಪಟ್ಟಿತು. (ಮತ್ತಾಯ 6:33) ಗ್ರೇಜುವೇಶನ್ ಪೂರ್ವಾಭಿನಯವು (ರಿಹರ್ಸಲ್) ಪ್ರಕಟಿಸಲ್ಪಟ್ಟಾಗ, ಆಕೆ ಹಾಜರಾಗಲು ಯೋಜಿಸಿದ್ದ ಯೆಹೋವನ ಸಾಕ್ಷಿಗಳ ಸರ್ಕಿಟ್ ಸಮ್ಮೇಳನವಿದ್ದ ಅದೇ ದಿನಕ್ಕಾಗಿ ಅದು ಏರ್ಪಡಿಸಲ್ಪಟ್ಟಿರುವುದನ್ನು ಆಕೆ ಕಂಡುಕೊಂಡಳು. ರಿಹರ್ಸಲ್ಗೆ ತಾನು ಏಕೆ ಗೈರು ಹಾಜರಾಗುವೆನೆಂದು ವಿವರಿಸುವ ಒಂದು ಗೌರವಯುಕ್ತ ಪತ್ರವನ್ನು ಬರೆದು, ಆಕೆ ತನ್ನ ಅಧ್ಯಾಪಕನಿಗೆ ಕ್ಲಾಸಿನ ಮುಂದೆ ಕೊಟ್ಟಳು. ಕ್ಲಾಸಿನ ನಂತರ ಅಧ್ಯಾಪಕನು ಅವಳನ್ನು ಕರೆದು, ರಿಹರ್ಸಲ್ಗೆ ಅವಳೇಕೆ ಹಾಜರಾಗುವುದಿಲ್ಲ ಎಂಬ ಕಾರಣವನ್ನು ಪುನಃ ವಿವರಿಸುವಂತೆ ಕೇಳಿದನು. ಹುಡುಗಿ ಹೇಳುವುದು: “ನನ್ನ ಮಾತುಗಳು ಅವೆಯೋ ಎಂದು ತಿಳಿಯಲು ಆತನು ಬಯಸಿದ್ದನು. ಅದು ನನ್ನ ಅನಿಸಿಕೆಯೋ ಅಥವಾ ಪತ್ರದಲ್ಲಿ ಕೇವಲ ನನ್ನ ತಾಯಿಯ ಮಾತುಗಳು ಅಡಕವಾಗಿದ್ದವೋ? ಆ ವಿಷಯದಲ್ಲಿ ನನ್ನ ವೈಯಕ್ತಿಕ ದೃಢಾಭಿಪ್ರಾಯವನ್ನು ಕಂಡವನಾಗಿ, ಅವನು ನನ್ನನ್ನು ವಿರೋಧಿಸಲಿಲ್ಲ.”
“ಕೇಳುವವರೆಲ್ಲರ ಮುಂದೆ ಪ್ರತಿವಾದ ಮಾಡಿರಿ”
ಕ್ರೈಸ್ತ ಯುವಕರು ತಮ್ಮ ಶಿಕ್ಷಕ ಸದಸ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ನಿಲುವನ್ನು ಒಂದು ಸಮಸ್ಯೆಯು ಉಂಟಾಗುವ ಮುಂಚೆಯೇ ತಿಳಿಸುವುದಾದರೆ, ಸಮಸ್ಯೆಗಳನ್ನು ಎದುರಿಸಬೇಕಾದಾಗ ಒತ್ತಡವು ಅಷ್ಟು ಹೆಚ್ಚಾಗದೇ ಇರುವುದನ್ನು ಕಾಣುವರು. ಜಾಪಾನಿನ ಒಬ್ಬಾಕೆ ಯುವ ಕ್ರೈಸ್ತ ಹುಡುಗಿ 11 ವರ್ಷ-ವಯಸ್ಸಿನವಳಿದ್ದಾಗ, ಅವಳ ಶಾಲೆಯು ಎಲ್ಲಾ ವಿದ್ಯಾರ್ಥಿಗಳನ್ನು ಕ್ರಿಸ್ಮಸ್ ಪಾರ್ಟಿಗೆ ಹಾಜರಾಗಲು ಅವಶ್ಯಪಡಿಸಿದ ಒಂದು ಸಂಗತಿಯನ್ನು ವಿವರಿಸಿದಳು. ದೊಡ್ಡ ಕ್ಲಾಸಿನಲ್ಲಿದ್ದ ವಿದ್ಯಾರ್ಥಿಗಳು ಅವಳನ್ನು ಭಾಗವಹಿಸುವಂತೆ ಒತ್ತಡ ಹಾಕಿದರು, ಆದರೆ ಅವಳು ಹಾಜರಾಗಲಿಲ್ಲ, ಅವಳ ಅಧ್ಯಾಪಕನಿಗೆ ಅವರ ನಿಲುವಿನ ತಿಳುವಳಿಕೆ ಇತ್ತು. ಏಕೆ? ಏಕೆಂದರೆ ಶಾಲಾ ವರ್ಷದ ಆರಂಭದ ಸುಮಾರಿಗೆ ಸಾಕ್ಷಿ ಮತ್ತು ಅವಳ ಹೆತ್ತವರು ಅವಳ ಟೀಚರನ್ನು ಭೇಟಿಯಾಗಿ ತಮ್ಮ ಕ್ರೈಸ್ತ ನಿಲುವಿನ ಹಲವಾರು ಮುಖಗಳನ್ನು ವಿವರಿಸಿ ಹೇಳಿದ್ದರು.
ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವಾಗ, ಕೆಲವು ಯುವ ಕ್ರೈಸ್ತರು ತಮ್ಮ ಸಹಪಾಠಿಗಳನ್ನು ಅಥವಾ ಅಧ್ಯಾಪಕರನ್ನು ಭೇಟಿಯಾಗುವ ವಿಷಯದಲ್ಲಿ ಭೀತರಾಗಿದ್ದಾರೆ. ನಿಮಗೂ ಹಾಗೆನಿಸುತ್ತದೋ? ಅನಿಸಿದ್ದಾದರೆ, ನೀವೇ ಮೊದಲ ಹೆಜ್ಜೆಯಿಟ್ಟು, ಮನೆಯಿಂದ ಮನೆಗೆ ನೀವು ಸಾರುವ ವಿಷಯವನ್ನು ಮತ್ತು ಅದರ ಕಾರಣವನ್ನು ನಿಮ್ಮ ಸಹಪಾಠಿಗಳಿಗೆ ಯಾಕೆ ತಿಳಿಸಬಾರದು? ಒಬ್ಬಾಕೆ 14 ವರ್ಷ-ವಯಸ್ಸಿನ ಯೆಹೋವನ ಸಾಕ್ಷಿ ವರದಿ ಮಾಡಿದ್ದು: “ಶಾಲೆಯಲ್ಲಿ ಪ್ರತಿಯೊಬ್ಬರೂ ಕ್ರೈಸ್ತಳಾದ ನನ್ನ ನಿಲುವೇನೆಂದು ತಿಳಿದಿರುತ್ತಾರೆ. ನಿಶ್ಚಯವಾಗಿ ಅವರಿಗೆಷ್ಟು ಚೆನ್ನಾಗಿ ತಿಳಿದಿದೆಯೆಂದರೆ ಶುಶ್ರೂಷೆಯಲ್ಲಿ ಭಾಗವಹಿಸುವಾಗ ಒಬ್ಬ ಸಹಪಾಠಿ ನನಗೆ ಸಿಕ್ಕಿದರೆ ನಾನು ಸಂಕೋಚಪಡುವುದಿಲ್ಲ. ಜತೆ ವಿದ್ಯಾರ್ಥಿಗಳು ಸಾಮಾನ್ಯವಾಗಿ ಕಿವಿಗೊಡುತ್ತಾರೆ, ಅನೇಕ ಸಾರಿ ಬೈಬಲ್ ಸಾಹಿತ್ಯವನ್ನು ಸ್ವೀಕರಿಸುತ್ತಾರೆ.” 12 ವರ್ಷ-ವಯಸ್ಸಿನ ಇನ್ನೊಬ್ಬನು ತಾನು ಶುಶ್ರೂಷೆಯಲ್ಲಿ ಭಾಗವಹಿಸುವಾಗ ತನ್ನ ಸಹಪಾಠಿಗಳನ್ನು ಭೇಟಿಯಾಗುವುದನ್ನು ಮುನ್ನೋಡುತ್ತೇನೆ ಎನ್ನುತ್ತಾನೆ. ಇದರಿಂದಾಗಿ ನಿರುತ್ಸಾಹಗೊಳ್ಳುವ ಬದಲಿಗೆ, ಅದು ಸಂಭವಿಸುವಾಗ ತಾನೇನನ್ನು ಹೇಳಲಿದ್ದಾನೋ ಅದನ್ನು ಅವನು ಕ್ರಮವಾಗಿ ರಿಹರ್ಸ್ ಮಾಡುತ್ತಾನೆ. ಹೀಗೆ, ತನ್ನ ನಂಬಿಕೆಗೆ ಯುಕ್ತ ಕಾರಣಗಳನ್ನು ಕೊಡಲು ಅವನು ಸಿದ್ಧನಾಗಿರುತ್ತಾನೆ.
ಅನೇಕ ಶಾಲೆಗಳಲ್ಲಿ ಶಾಲಾ-ನಂತರದ ಚಟುವಟಿಕೆಗಳು ಒಬ್ಬನ ಆಯ್ಕೆಯ ವಿಷಯಗಳೆಂದು ಹೇಳಲ್ಪಡುತ್ತವೆ. ಆದರೆ ಕಾರ್ಯತಃ ಆಚಾರದಲ್ಲಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು, ಅಂಥ ಚಟುವಟಿಕೆಗಳಲ್ಲಿ ಸೇರಲು ಬಹಳ ಒತ್ತಡವನ್ನು ಹಾಕುತ್ತಾರೆ. ಈ ಒತ್ತಡವನ್ನು ನಿಭಾಯಿಸಲು ಒಬ್ಬಾಕೆ 20 ವರ್ಷ-ವಯಸ್ಸಿನ ಕ್ರೈಸ್ತಳು ಒಂದು ಒಳ್ಳೆಯ ದಾರಿಯನ್ನು ಕಂಡುಕೊಂಡಳು. ಅವಳನ್ನುವುದು: “ಹೈಸ್ಕೂಲಿನ ಅವಧಿಯಲ್ಲಿಲ್ಲಾ ನಾನು ಆಕ್ಸಿಲರಿ ಪಯನೀಯರಳಾಗಿ ಸೇವೆ ಮಾಡಿದೆ. ನಾನು ನನ್ನ ಧಾರ್ಮಿಕ ಚಟುವಟಿಕೆಯಲ್ಲಿ ತೀರಾ ಮಗ್ನಳಾಗಿದ್ದರಿಂದ ಬೇರೆ ವಿಷಯಗಳಲ್ಲಿ ಭಾಗವಹಿಸಲು ನನಗೆ ಸಮಯವೇ ಇಲ್ಲವೆಂದು ಎಲ್ಲರಿಗೂ ತಿಳಿದಿತ್ತು.” ಈ ಸಾಕ್ಷಿಯ ಎಳೆಯ ಸಹೋದರಿಯು ಸಹಾ ಇದೇ ಮಾರ್ಗವನ್ನು ಹಿಂಬಾಲಿಸಿದಳು. ಕೆಲವು ಕ್ರೈಸ್ತ ಯುವಕರು ಶಾಲಾ ವರ್ಷಗಳಲ್ಲಿ ಆಕ್ಸಿಲರಿ ಪಯನೀಯರ ಸೇವೆ ಮಾಡುತ್ತಾ ಇದ್ದು ಶಾಲಾ ವಿದ್ಯಾಭ್ಯಾಸ ಮುಗಿದಾಗ, ಪೂರ್ಣ ಸಮಯದ ರಾಜ್ಯ ಘೋಷಕರಾಗಿ ಕ್ರಮದ ಪಯನೀಯರ ಸೇವೆಗೆ ನೇರವಾಗಿ ಇಳಿಯುತ್ತಾರೆ.
ನಿಮ್ಮ ಒಳ್ಳೇ ನಡತೆಯ ಮತ್ತು ನಿಮ್ಮ ಧೀರ ಸಾಕ್ಷಿಯ ಸತ್ಪರಿಣಾಮಗಳನ್ನು ಎಂದೂ ದುರ್ಲಕ್ಷಿಸಬೇಡಿರಿ. ಮೌನವಾಗಿ ಉಳಿಯುವ ಬದಲಿಗೆ, ಗೌರವಪೂರ್ವಕವಾಗಿ, ಆದರೆ ಧೈರ್ಯದಿಂದ ಮಾತಾಡುವ ಮೂಲಕ ನಿಮ್ಮ ದೃಢ ನಂಬಿಕೆಯನ್ನು ಯಾಕೆ ತೋರಿಸಬಾರದು? ಬಂಧಿವಾಸಿಯಾಗಿದ್ದ ಮತ್ತು ಸಿರಿಯಾದ ಸೇನಾನಿ ನಾಮಾನನ ಮನೆವಾರ್ತೆಗೆ ದಾಸಿಯಾಗಿ ತರಲ್ಪಟ್ಟ ಆ ಆ ಇಸ್ರಾಯೇಲ್ಯ ಹುಡುಗಿಯಿಂದಲೂ ಅದೇ ಮಾಡಲ್ಪಟ್ಟಿತ್ತು. (2 ಅರಸು 5:2-4) ಆ ಹುಡುಗಿಯ ಮುಂತೊಡಗುವಿಕೆಯಿಂದಾಗಿ ಯೆಹೋವನ ನಾಮವು ಸ್ತುತಿಸಲ್ಪಟ್ಟಿತು. ನೀವೂ ಅದೇ ರೀತಿಯ ನಂಬಿಕೆಯನ್ನು ತೋರಿಸಿದಲ್ಲಿ ದೇವರಿಗೆ ಗೌರವವನ್ನು ತರಬಲ್ಲಿರಿ ಮತ್ತು ಇತರರು ದೇವರ ನಾಮದ ಸ್ತುತಿಗಾರರಾಗುವಂತೆ ಪರಿಣಮಿಸಲು ನೆರವಾಗಬಲ್ಲಿರಿ.
ವಾಸ್ತವಾಂಶವೇನಂದರೆ, ನಾವು ನಮ್ಮ ನಂಬಿಕೆಯಲ್ಲಿ ರಾಜೀಮಾಡಿಕೊಳ್ಳಲು ಮತ್ತು ಆದರೂ ಕ್ರೈಸ್ತರಾಗಿ ಉಳಿಯಲು ಸಾಧ್ಯವಿಲ್ಲ. ಯೇಸುವು ಅಂದದ್ದು: “ಹಾಗಾದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನೆಂದು ಒಪ್ಪಿಕೊಳ್ಳುವನೋ, ನಾನು ಸಹ ಅವನನ್ನು ನನ್ನವನೆಂದು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು. ಆದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನಲ್ಲವೆಂದು ಹೇಳುವನೋ ಅವನನ್ನು ನಾನೂ ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು.” (ಮತ್ತಾಯ 10:32, 33) ಯೇಸುವಿನ ಒಬ್ಬ ಹಿಂಬಾಲಕನೋಪಾದಿ ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲುವುದು ಒಂದು ಗಂಭೀರ ಜವಾಬ್ದಾರಿಯಾಗಿದೆ, ಅದಲ್ಲವೇ?
ಸಹಾಯ ದೊರೆಯುತ್ತದೆ
ಯೆಹೋವನ ಸಾಕ್ಷಿಯಾಗಿ ದೃಢವಾದ ಸ್ಥಾನವನ್ನು ತಕ್ಕೊಳ್ಳಬೇಕಾದರೆ, ನಿಮಗೆ ಬಲವಾದ ನಂಬಿಕೆ ಬೇಕು. ಅದಕ್ಕಾಗಿ, ನೀವು ಶ್ರದ್ಧೆಯಿಂದ ಬೈಬಲನ್ನು ಅಭ್ಯಾಸಿಸಬೇಕು, ಕ್ರೈಸ್ತ ಕೂಟಗಳಿಗೆ ಹಾಜರಾಗಬೇಕು, ಕ್ಷೇತ್ರ ಶುಶ್ರೂಷೆಯಲ್ಲಿ ಪಾಲಿಗರಾಗಬೇಕು. ಇನ್ನೂ ಏನೋ ನ್ಯೂನತೆಯಿದೆ ಎಂದು ಮತ್ತೂ ನಿಮಗನಿಸಿದರೆ, ನೀವೇನು ಮಾಡಬಹುದು? ಶಿಷ್ಯ ಯಾಕೋಬನು ಅಂದ್ದು: “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ (ವಿವೇಕ, NW ) ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳುತ್ತಾ ಇರಲಿ, ಅದು ಅವನಿಗೆ ದೊರಕುವುದು; ಯಾಕಂದರೆ ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ.” (ಯಾಕೋಬ 1:5) ನಿಮ್ಮ ಸಮಸ್ಯೆಯ ಕುರಿತು ಪ್ರಾರ್ಥನೆಯಲ್ಲಿ ದೇವರಿಗೆ ಹೇಳಿರಿ; ಶೋಧನೆಗಳನ್ನು ಮತ್ತು ನಂಬಿಕೆಯ ಪರೀಕ್ಷೆಗಳನ್ನು ಎದುರಿಸುವಂತೆ ಆತನು ನಿಮ್ಮನ್ನು ಬಲಪಡಿಸಬಲ್ಲನು.
ಒಬ್ಬ ಯುವ ಕ್ರೈಸ್ತನು ಬೇರೇನು ಮಾಡಬಲ್ಲನು? ಜ್ಞಾನೋಕ್ತಿ ಪುಸ್ತಕವು ನಮಗೆ ಹೇಳುವುದು: “ಹೆತ್ತ ತಂದೆಯ ಮಾತಿಗೆ ಕಿವಿಗೊಡು. ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ.” (ಜ್ಞಾನೋಕ್ತಿ 23:22) ಅಪೊಸ್ತಲ ಪೌಲನು ಈ ಸೂಚನೆಯನ್ನು ಬೆಂಬಲಿಸಿದನು, ಯಾಕಂದರೆ ಅವನಂದದ್ದು: “ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆ ತಾಯಿಗಳ ಮಾತನ್ನು ಕೇಳಿರಿ; ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.” (ಕೊಲೊಸ್ಸೆ 3:20) ಕ್ರೈಸ್ತ ಹೆತ್ತವರು ನಿಮ್ಮನ್ನು ನಂಬಿಕೆಯಲ್ಲಿ ದೃಢರಾಗಿರುವಂತೆ ಸಹಾಯ ಮಾಡಬಲ್ಲರು. ಅವರ ಸಲಹೆಗಳಿಗೆ ಕಿವಿಗೊಡಿರಿ. ಅವರ ಸಹಾಯದೊಂದಿಗೆ, ವಿಚಾರಗಳಿಗಾಗಿ, ಸೂಚನೆಗಳಿಗಾಗಿ ಮತ್ತು ಅನುಭವಗಳಿಗಾಗಿ ಹುಡುಕುತ್ತಾ ಶಾಸ್ತ್ರ ವಚನಗಳನ್ನೂ ಬೈಬಲಾಧಾರಿತ ಪ್ರಕಾಶನಗಳನ್ನೂ ಪರಿಶೋಧಿಸಿರಿ. ನೀವೂ ನಿಮ್ಮ ಹೆತ್ತವರು ಇಬ್ಬರೂ ಇದರಲ್ಲಿ ಆನಂದಿಸುವಿರಿ, ಮತ್ತು ಇದು ನಿಮ್ಮ ಗಾಬರಿ ಯಾ ಹೆದರಿಕೆಯನ್ನು ಪರಿಹರಿಸಲು ಸಹಾಯ ಮಾಡುವುದು.—2 ತಿಮೊಥಿ 1:7.
ಕ್ರೈಸ್ತ ಸಭೆಯ ಮೂಲಕವಾಗಿ ಯೆಹೋವ ದೇವರು ಮಾಡಿರುವ ಒದಗಿಸುವಿಕೆಗಳ ಪೂರ್ಣ ಸದುಪಯೋಗವನ್ನು ಮಾಡಿರಿ. ಕೂಟಗಳಿಗಾಗಿ ಚೆನ್ನಾಗಿ ತಯಾರು ಮಾಡಿರಿ. ನಿಮಗೆ ಎದುರಾಗಿರುವಂಥಾ ವಿಷಯಗಳನ್ನು ಅನುಭವ ಮಾಡಿರುವ ನೇಮಿತ ಹಿರಿಯರೊಂದಿಗೆ ಮತ್ತು ಇತರರೊಂದಿಗೆ ಮಾತಾಡಿರಿ. ಸೊಲೊಮೋನನು ಅಂದದ್ದು: “ವಿವೇಕಿಯು ಕಿವಿಗೊಡುವನು ಮತ್ತು ಹೆಚ್ಚು ಉಪದೇಶವನ್ನು ಹೊಂದುವನು, ತಿಳುವಳಿಕೆಯುಳ್ಳವನು ನಿಪುಣ ಮಾರ್ಗದರ್ಶನೆಯನ್ನು ಗಳಿಸುವನು.” (ಜ್ಞಾನೋಕ್ತಿ 1:5, NW) ಹೀಗೆ ಈ ಹಿರೀ ಪುರುಷರಿಂದ ಕಲಿತುಕೊಳ್ಳಿರಿ. ನಿಮ್ಮಂಥ ಸಮಸ್ಯೆಗಳನ್ನು ಸಾಫಲ್ಯದಿಂದ ನಿಭಾಯಿಸುತ್ತಿರುವ ಕ್ರೈಸ್ತ ಯುವಕರಿಂದಲೂ ನೀವು ಕಲಿಯಬಹುದು.
ನಂಬಿಗಸ್ತಿಕೆಯು ಆಶೀರ್ವಾದಗಳನ್ನು ತರುತ್ತದೆ
ನಂಬಿಕೆಯಲ್ಲಿ ದೃಢರಾಗಿ ನಿಲ್ಲುವ ಮೂಲಕ, “ಸ್ಥಿರಚಿತ್ತರಾಗಿಯೂ ನಿಶ್ಚಲವಾಗಿಯೂ ಇರ್ರಿ, ಕರ್ತನ ಕೆಲಸದಲ್ಲಿ ಯಾವಾಗಲೂ ಮಾಡಲು ಯಥೇಷ್ಟವುಳ್ಳವರಾಗಿರಿ,” ಎಂಬ ಪೌಲನ ಸೂಚನೆಯನ್ನು ನೀವು ಅನ್ವಯಿಸುವವರಾಗುವಿರಿ. (1 ಕೊರಿಂಥ 15:58, NW) ನೀವು ಎದುರಿಸುವ ಸಮಸ್ಯೆಗಳನ್ನು ಯೆಹೋವನು ಬಲ್ಲನು ಮತ್ತು ಗ್ರಹಿಸಶಕ್ತನು. ತದ್ರೀತಿಯ ಸಮಸ್ಯೆಗಳನ್ನು ಎದುರಿಸಿದ್ದ ಅನೇಕರನ್ನು ಆತನು ಬಲಪಡಿಸಿರುತ್ತಾನೆ, ನಿಮ್ಮನ್ನೂ ಬಲಪಡಿಸುವನು. ದೇವರ ಮೇಲೆ ನೀವು ಆತುಕೊಂಡರೆ ಆತನು ನಿಮಗೆ ಬೆಂಬಲವಾಗಿರುವನು, ಯಾಕಂದರೆ ಕೀರ್ತನೆಗಾರನು ಹೇಳಿದ್ದು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು, ಆತನು ನಿನ್ನನ್ನು ಬಲಪಡಿಸುವನು. ಆತನು ನೀತಿವಂತರನ್ನೆಂದೂ ಕದಲಗೊಡಿಸನು.”—ಕೀರ್ತನೆ 55:22.
ಪೇತ್ರನು ಬರೆದದ್ದು: “ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ. ಆಗ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೇ ನಡವಳಿಕೆಯನ್ನು ಕುರಿತು ಬೈಯುವವರು ನಿಮ್ಮನ್ನು ನಿಂದಿಸುವುದಕ್ಕೆ ನಾಚಿಕೆಪಡುವರು.” (1 ಪೇತ್ರ 3:16) ದೇವರ ನೀತಿಯುಳ್ಳ ನಿಯಮಗಳ ಮತ್ತು ತತ್ವಗಳ ಸಂಬಂಧದಲ್ಲಿ ರಾಜಿಮಾಡಿಕೊಳ್ಳಲು ನೀವು ನಿರಾಕರಿಸಿದರೆ, ನಿಮಗೆ ಒಳ್ಳೇ ಮನಸ್ಸಾಕ್ಷಿ ಇರುವುದು, ಅದು ನಿಜವಾಗಿ ಯೆಹೋವನಿಂದ ಬಂದ ಆಶೀರ್ವಾದವಾಗಿದೆ. ಅದಲ್ಲದೆ, ಬಲಹೀನ ನಂಬಿಕೆಯುಳ್ಳವರಾಗಿರಬಹುದಾದ ಕ್ರೈಸ್ತ ಯುವ ಜನರಿಗೆ ನೀವು ಒಂದು ಒಳ್ಳೇ ಮಾದರಿಯನ್ನಿಡುವವರಾಗುವಿರಿ. (1 ತಿಮೊಥಿ 4:15, 16) ನಿಮ್ಮ ನಡವಳಿಕೆಯು ಅವರನ್ನು ನಂಬಿಕೆಯಲ್ಲಿ ದೃಢಗೊಳ್ಳುವಂತೆ ಪ್ರಯತ್ನ ಮಾಡಲು ಮತ್ತು ಹೀಗೆ ಪರೀಕ್ಷೆಗಳನ್ನು ತಾಳಿಕೊಳ್ಳಲು ಶಕ್ತರಾಗುವಂತೆ ಪ್ರೋತ್ಸಾಹನೆ ನೀಡಬಹುದು.
ನಿಮ್ಮ ಕ್ರೈಸ್ತ ನಿಲುವನ್ನು ಆರಂಭದಲ್ಲಿ ವಿರೋಧಿಸಿದವರಿಗೆ ಸಹಾ ನೀವು ಸಹಾಯ ಮಾಡಬಲ್ಲಿರಿ. ಆ ನಿರೀಕ್ಷೆ-ಪ್ರೇರಕ ಮಾತುಗಳನ್ನು ಜ್ಞಾಪಿಸಿಕೊಳ್ಳಿರಿ: “ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ. ಇದು ಸಫಲವೋ ಅದು ಸಫಲವೋ, ಒಂದುವೇಳೆ ಎರಡೂ ಚೆನ್ನಾಗುವುವೋ ನಿನಗೆ ತಿಳಿಯದು.” (ಪ್ರಸಂಗಿ 11:6) ನಿಮ್ಮ ನಂಬಿಗಸ್ತ ಕ್ರಿಯೆಗಳ ಮೂಲಕ ನೀವು ಬಿತ್ತುವ ಒಳ್ಳೇ ಬೀಜದಿಂದ ಯಾವ ಒಳ್ಳೇ ಫಲಿತಾಂಶ ಬರುವುದೋ ಯಾರಿಗೆ ಗೊತ್ತು?
ನೀವು ಕೊಯ್ಯಲಿರುವ ಅತ್ಯಂತ ಮಹಾ ಆಶೀರ್ವಾದಗಳಲ್ಲಿ ಒಂದು ಯೆಹೋವನೊಂದಿಗೆ ನಿಮಗೆ ಸಿಗುವ ಅನುಗ್ರಹದ ನಿಲುವೇ. ಕಟ್ಟಕಡೆಗೆ ನಂಬಿಕೆಯಲ್ಲಿ ದೃಢತೆಯು ನಿತ್ಯಜೀವದಲ್ಲಿ ಫಲಿಸುವುದು. (ಯೋಹಾನ 17:3; ಯಾಕೋಬ 1:12 ಹೋಲಿಸಿ.) ರಾಜಿಮಾಡುವ ಮೂಲಕ ಪರೀಕ್ಷೆಯಿಂದ ದೊರಕುವ ಯಾವುದೇ ತಾತ್ಕಾಲಿಕ ಉಪಶಮನವು ಈ ಬಹುಮಾನವನ್ನು ಕಳಕೊಳ್ಳಲು ಅರ್ಹವಾದದ್ದಲ್ಲ.
ಈ ಲೇಖನದ ಆರಂಭದಲ್ಲಿ ತಿಳಿಸಿದ ಆ ಯುವಕನ ಕುರಿತೇನು? ಒಳ್ಳೆದು, ಅವನು ತನ್ನ ವಿಷಮ ಪರೀಕ್ಷೆಯನ್ನು ತಾಳಿಕೊಂಡನು. ಶಾಲಾ ಸಮ್ಮೇಳವು ಮುಗಿದ ಮೇಲೆ, ತನ್ನ ಸ್ಥಾನವನ್ನು ಜಾಣ್ಮೆಯಿಂದ ಅಧ್ಯಾಪಕರಿಗೆ ವಿವರಿಸಲು ಪ್ರಯತ್ನಿಸಿದನು. ಅವನ ಮಾತುಗಳನ್ನು ಯಾರೂ ಕಿವಿಗೆ ಹಾಕಿಕೊಳ್ಳದಿದ್ದರೂ, ಯೆಹೋವನ ಹೃದಯವನ್ನು ಸಂತೋಷಪಡಿಸಿದ ತಿಳುವಳಿಕೆಯು ಅವನಿಗೆ ಸಂತೃಪ್ತಿಯನ್ನು ಕೊಟ್ಟಿತು. (ಜ್ಞಾನೋಕ್ತಿ 27:11) ತನ್ನ ಶಾಲಾಭ್ಯಾಸವನ್ನು ಪೂರ್ಣಗೊಳಿಸುವ ತನಕ ಅವನು ತನ್ನ ನಂಬಿಕೆಯ ಪ್ರತಿವಾದವನ್ನು ಮಾಡುತ್ತಾ ಮುಂದರಿದನು. ಅನಂತರ ಅವನು ಪಯನೀಯರನಾದನು. ನಿಮ್ಮ ನಂಬಿಗಸ್ತ ತಾಳ್ಮೆಯು ಸಹಾ ಅದೇ ರೀತಿ ಸಂತೋಷದ ಫಲಿತಾಂಶ ತರಲಿ. ನಂಬಿಕೆಯಲ್ಲಿ ದೃಢರೆಂದು ನೀವು ರುಜುಪಡಿಸಿದಲ್ಲಿ ಆ ಫಲಿತಾಂಶವು ನಿಮ್ಮದಾಗುವುದು. (w91 7/15)
[ಅಧ್ಯಯನ ಪ್ರಶ್ನೆಗಳು]
a ಇದರ ಮತ್ತು ಬೇರೆ ಬೈಬಲ್ ತತ್ವಗಳ ಚರ್ಚೆಗಾಗಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರಾಕ್ಟ್ ಸೊಸೈಟಿ ಆಫ್ ಇಂಡಿಯ ಇವರಿಂದ ಪ್ರಕಾಶಿತವಾದ, ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದಾಟ್ ವರ್ಕ್ ಪುಸ್ತಕವನ್ನು ನೋಡಿರಿ.
[ಪುಟ 22 ರಲ್ಲಿರುವ ಚೌಕ]
ಸಹಾಯವು ದೊರೆಯುತ್ತದೆ
▫ ನಿಮ್ಮ ದೇವ-ಭೀರು ಹೆತ್ತವರ ವಿವೇಕಕ್ಕೆ ಕಿವಿಗೊಡಿರಿ.
▫ ಕ್ರೈಸ್ತ ಸಭೆಯಲ್ಲಿ ಆತ್ಮಿಕ ಒದಗಿಸುವಿಕೆಗಳ ಸದುಪಯೋಗ ಮಾಡಿರಿ.
▫ ನಿಮ್ಮಂಥ ಸಮಸ್ಯೆಗಳು ಇದ್ದಿರಬಹುದಾದ ನೇಮಿತ ಹಿರಿಯರು ಮತ್ತು ಇತರರೊಂದಿಗೆ ಮಾತಾಡಿರಿ.
▫ ತದ್ರೀತಿಯ ಸಮಸ್ಯೆಗಳನ್ನು ಸಾಫಲ್ಯದಿಂದ ನಿಭಾಯಿಸುತ್ತಿರುವ ಬೇರೆ ಯುವ ಕ್ರೈಸ್ತರೊಂದಿಗೆ ಮಾತಾಡಿರಿ.