ಯುವ ಜನರೇ—ಯೆಹೋವನ ಹೃದಯವನ್ನು ಸಂತೋಷಪಡಿಸಿರಿ
1 ಒಬ್ಬನು ಯೌವನದ ಬಲ ಮತ್ತು ಉತ್ಸಾಹವನ್ನು ಸರಿಯಾದ ಮಾರ್ಗದಲ್ಲಿ ಉಪಯೋಗಿಸುವಾಗ, ಜೀವನವು ನಿಜವಾಗಿಯೂ ಹರ್ಷಭರಿತವಾಗಿರಬಲ್ಲದು. ವಿವೇಕಿಯಾದ ರಾಜ ಸೊಲೊಮೋನನು ಬರೆದದ್ದು: “ಯೌವನಸ್ಥನೇ, ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ.” (ಪ್ರಸಂ. 11:9) ಯುವ ಜನರಾದ ನೀವು ನಿಮ್ಮ ಕ್ರಿಯೆಗಳಿಗಾಗಿ ದೇವರಿಗೆ ಹೊಣೆಯಾಗಿದ್ದೀರಿ.
2 ನಿಮ್ಮ ಜೀವಿತವನ್ನು ನೀವು ಜೀವಿಸುವ ವಿಧವು ಕೇವಲ ನಿಮಗೆ ಮಾತ್ರವಲ್ಲ ನಿಮ್ಮ ಹೆತ್ತವರಿಗೂ ಕೂಡ ಒಂದು ವ್ಯತ್ಯಾಸವನ್ನು ಉಂಟುಮಾಡುತ್ತದೆ. ಜ್ಞಾನೋಕ್ತಿ 10:1 ಹೇಳುವುದು: “ಮಗನು ಜ್ಞಾನಿಯಾದರೆ ತಂದೆಗೆ ಸುಖ; ಅಜ್ಞಾನಿಯಾದರೆ ತಾಯಿಗೆ ದುಃಖ.” ಆದರೆ ಇನ್ನೂ ಹೆಚ್ಚು ಪ್ರಾಮುಖ್ಯವಾಗಿ, ನಿಮ್ಮ ಜೀವಿತವನ್ನು ನೀವು ಜೀವಿಸುವ ವಿಧವು ನಿಮ್ಮ ಸೃಷ್ಟಿಕರ್ತನಾದ, ಯೆಹೋವ ದೇವರ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ, ಜ್ಞಾನೋಕ್ತಿ 27:11 ರಲ್ಲಿ, “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು,” ಎಂದು ಯೆಹೋವನು ಎಳೆಯರನ್ನು ಕೂಡ ಉತ್ತೇಜಿಸುತ್ತಾನೆ. ಎಳೆಯರಾದ ನೀವು ಇಂದು ಯೆಹೋವನ ಹೃದಯವನ್ನು ಹೇಗೆ ಸಂತೋಷಪಡಿಸಬಲ್ಲಿರಿ? ಇದನ್ನು ಹಲವಾರು ರೀತಿಗಳಲ್ಲಿ ಸಾಧಿಸಬಹುದು.
3 ಸರಿಯಾದ ಮಾದರಿಯ ಮೂಲಕ: ಯುವ ಜನರಾದ ನೀವು, ದೇವರ ವಾಕ್ಯದಲ್ಲಿ ಮುಂತಿಳಿಸಲಾದ “ಕಠಿಣ ಕಾಲಗಳನ್ನು” ಅನುಭವಿಸುತ್ತೀರಿ. (2 ತಿಮೊ. 3:1) ಅವಿಶ್ವಾಸಿಗಳಾದ ಸಹಪಾಠಿಗಳಿಂದ ಮತ್ತು ನಿಮ್ಮ ಬೈಬಲಾಧಾರಿತ ದೃಷ್ಟಿಕೋನಗಳನ್ನು ಕಡೆಗಣಿಸಬಹುದಾದ ಶಿಕ್ಷಕರಿಂದ ಕೂಡ ಒತ್ತಡಕ್ಕೆ ನೀವು ಒಳಗಾಗಬಹುದು. ಉದಾಹರಣೆಗೆ, ಒಬ್ಬ ಶಿಕ್ಷಕರು ವಿಕಾಸವಾದದ ಸಿದ್ಧಾಂತವನ್ನು ನಿಜತ್ವದಂತೆ ಮತ್ತು ಬೈಬಲನ್ನು ಒಂದು ಕಟ್ಟುಕಥೆಯಂತೆ ಸಾದರಪಡಿಸಿದರು. ಹಾಗಿದ್ದರೂ, ಕ್ಲಾಸಿನಲ್ಲಿದ್ದ ಒಬ್ಬ ಯುವ ಪ್ರಚಾರಕನು ಬೈಬಲನ್ನು ನಿಷ್ಠೆಯಿಂದ ಸಮರ್ಥಿಸಿದನು. ಫಲಿತಾಂಶವಾಗಿ ಅನೇಕ ಬೈಬಲ್ ಅಧ್ಯಯನಗಳು ಆರಂಭಿಸಲ್ಪಟ್ಟವು. ಕೆಲವು ಆಸಕ್ತರು ಕೂಟಗಳಿಗೆ ಹಾಜರಾಗಲು ಪ್ರಾರಂಭಿಸಿದರು. ಯುವ ಸಹೋದರ ಸಹೋದರಿಯರಾದ ನಿಮ್ಮ ನಂಬಿಕೆಯು ಅದೈವಿಕ ಲೋಕವನ್ನು ಖಂಡಿಸುತ್ತದೆ ಮತ್ತು ಪ್ರಾಮಾಣಿಕ ಹೃದಯವುಳ್ಳವರನ್ನು ಸತ್ಯದ ಕಡೆಗೆ ಆಕರ್ಷಿಸುತ್ತದೆ.—ಇಬ್ರಿ. 11:7 ಹೋಲಿಸಿ.
4 ಯಾವುದು ಕೆಟ್ಟದ್ದಾಗಿದೆಯೊ ಅದಕ್ಕೆ ಅವರು ಒಳಗಾಗದಂತೆ, ಸಭೆಯಲ್ಲಿರುವ ನಿಮ್ಮ ಸಮಾನಸ್ಕಂಧರನ್ನು ನೀವು ಉತ್ತೇಜಿಸುತ್ತಿರೊ? ಶಾಲೆಯಲ್ಲಿ, ಮನೆಯಲ್ಲಿ, ಮತ್ತು ಸಭೆಯಲ್ಲಿ ಒಳ್ಳೆಯ ಮಾದರಿಯನ್ನು ಇಡುವ ಮೂಲಕ, ಇತರ ಯುವ ಪ್ರಚಾರಕರ ನಂಬಿಕೆಯನ್ನು ನೀವು ಬಲಪಡಿಸಸಾಧ್ಯವಿದೆ. (ರೋಮಾ. 1:12) ಇತರರಿಗಾಗಿ ಮಾದರಿಯನ್ನು ಇಡುವ ಮೂಲಕ ಯೆಹೋವನ ಹೃದಯವನ್ನು ಸಂತೋಷಪಡಿಸಿರಿ.
5 ಉಡಿಗೆ ಮತ್ತು ಕೇಶಶೈಲಿಯ ಮೂಲಕ: ಒಬ್ಬಾಕೆ ಯುವ ಸಹೋದರಿಯು ಆಕೆಯ ಸಭ್ಯವಾದ ಉಡುಪಿನ ಕಾರಣ ಪೀಡಿಸಲ್ಪಟ್ಟಳು ಮತ್ತು ಅಪಹಾಸ್ಯ ಮಾಡಲ್ಪಟ್ಟಳು ಮತ್ತು “ಅಸ್ಪೃಶ್ಯ” ಳೆಂದು ಹೆಸರಿಸಲ್ಪಟಳ್ಟು. ಲೋಕದ ಅದೈವಿಕ ಮಟ್ಟಗಳನ್ನು ಅನುವರ್ತಿಸುವಂತೆ ಇದು ಅವಳನ್ನು ಹೆದರಿಸಲಿಲ್ಲ. ಬದಲಾಗಿ, ಅವಳೊಬ್ಬಾಕೆ ಯೆಹೋವನ ಸಾಕ್ಷಿಯೆಂದು ಅವಳು ವಿವರಿಸಿದಳು ಮತ್ತು ಸಾಕ್ಷಿಗಳ ಉನ್ನತ ಮಟ್ಟವನ್ನೇ ಅವಳು ಕಾಪಾಡಿಕೊಂಡಳು. ನಿಮಗೆ ಅಂತಹ ಧೈರ್ಯವಿದೆಯೊ? ಸೈತಾನನ ಲೋಕವು ಅದರ ಯೋಚನಾ ರೀತಿಯಲ್ಲಿ ಮತ್ತು ನಡವಳಿಕೆಯಲ್ಲಿ ನಿಮ್ಮನ್ನು ರೂಪಿಸುವಂತೆ ನೀವು ಬಿಡುತ್ತೀರೊ? ಎಳೆಯರಾದ ನಿಮ್ಮಲ್ಲಿ ಅನೇಕರು ಯೆಹೋವನ ಬೋಧನೆಗಳನ್ನು ಆಲಿಸುತ್ತಾ ಮತ್ತು ಲೋಕದ ಹೊಲಸಾದ ಶೈಲಿಗಳನ್ನು, ಗೀಳುಗಳನ್ನು, ಮೂರ್ತಿಗಳನ್ನು, ಮತ್ತು ಬೋಧನೆಗಳನ್ನು ನಿರಾಕರಿಸುತ್ತಾ ಇರುವುದನ್ನು ಗಮನಿಸುವುದು ಎಂತಹ ಒಂದು ಆನಂದವಾಗಿದೆ. ನಿಜವಾಗಿಯೂ ಯೆಹೋವನ ಸಂಸ್ಥೆಯು ನಮಗೆ ಹೇಳಿರುವಂತೆ, ಲೋಕದಿಂದ ಹುಟ್ಟುವ ಆ ವಿಷಯಗಳು ದೆವ್ವಗಳ ಮೂಲಕ ಪ್ರಭಾವಿಸಲ್ಪಟ್ಟಿವೆ ಎಂದು ನಾವು ಗ್ರಹಿಸಬೇಕು!—1 ತಿಮೊ. 4:1.
6 ಮನೋರಂಜನೆ ಮತ್ತು ವಿನೋದದ ಆಯ್ಕೆಯ ಮೂಲಕ: ಸರಿಯಾದ ರೀತಿಯ ಮನೋರಂಜನೆ ಮತ್ತು ವಿನೋದವನ್ನು ವಿವೇಕದಿಂದ ಆರಿಸಲು ತಮ್ಮ ಮಕ್ಕಳಿಗೆ ಸಹಾಯ ಮಾಡುವುದರ ಅಗತ್ಯವನ್ನು ಹೆತ್ತವರು ಮನಸ್ಸಿನಲ್ಲಿ ಇಡಬೇಕು. ತಾನು ಬಹಳವಾಗಿ ಪ್ರೀತಿಸಲು ತೊಡಗಿದ್ದ ಒಂದು ಉತ್ತಮ ಕುಟುಂಬದ ಕುರಿತು ಒಬ್ಬ ಸಹೋದರನು ಅತಿಶಯವಾಗಿ ಮಾತಾಡಿದನು. ಆತ್ಮಿಕ ಮನಸ್ಸುಳ್ಳವರಾಗಿದ್ದು, ಕುಟುಂಬ ವಿನೋದದಲ್ಲಿಯೂ ಕೂಡ ಅನ್ವಯಿಸಲ್ಪಡುವ ಮಾರ್ಗದರ್ಶನವನ್ನು ಹೆತ್ತವರು ಒದಗಿಸುತ್ತಾರೆ. ಸಹೋದರನು ಗಮನಿಸಿದ್ದು: “ಅವರು ಒಟ್ಟಾಗಿ ವಿಷಯಗಳನ್ನು ಮಾಡುವ ಸಂಗತಿಯನ್ನು ನಾನು ಮೆಚ್ಚುತ್ತೇನೆ. ಮಕ್ಕಳು ಸೇವೆಗಾಗಿ ತಯಾರಿಸುವಂತೆ ಹೆತ್ತವರು ಸಹಾಯ ಮಾಡುತ್ತಾರೆ ಮಾತ್ರವಲ್ಲ, ವಿನೋದದ ಸಮಯ ಬಂದಾಗ, ದೂರ ನಡುಗೆ ಹೋಗುತ್ತಾ, ವಸ್ತು ಸಂಗ್ರಹಾಲಯಗಳನ್ನು ಸಂದರ್ಶಿಸುತ್ತಾ, ಯಾ ಕೇವಲ ಮನೆಯಲ್ಲಿದ್ದು ಆಡುತ್ತಾ ಇಲ್ಲವೆ ಕುಟುಂಬದ ಯೋಜನೆಗಳ ಮೇಲೆ ಕೆಲಸಮಾಡುತ್ತಾ ಅವರು ಆನಂದಿಸುತ್ತಾರೆ. ಪರಸ್ಪರವಾಗಿ ಮತ್ತು ಇತರರಿಗಾಗಿ ಇರುವ ಅವರ ಪ್ರೀತಿಯು, ಏನೇ ಆಗಲಿ ಭವಿಷ್ಯತ್ತಿನಲ್ಲಿ ಅವರು ಸತ್ಯದಲ್ಲಿ ನಡೆಯುವರು ಎಂಬ ಭರವಸೆಯ ಅನಿಸಿಕೆಯನ್ನು ನಿಮಗೆ ಕೊಡುತ್ತದೆ.”
7 ನಿಸ್ಸಂದೇಹವಾಗಿ, ಮನೋರಂಜನೆ ಮತ್ತು ವಿನೋದದಲ್ಲಿ ಇಡೀ ಕುಟುಂಬವು ತೊಡಗಲು ಸಾಧ್ಯವಾಗದ ಸಮಯಗಳು ಇವೆ. ಯುವ ಜನರಾದ ನೀವು ಈ ವಿಷಯವನ್ನು ಮತ್ತು ನಿಮ್ಮ ಬಿಡುವಿನ ಸಮಯದಲ್ಲಿ ಸ್ವಲ್ಪವನ್ನು ಹೇಗೆ ವ್ಯಯಿಸುವಿರಿ ಎಂಬುದನ್ನು ಆರಿಸುವುದರ ಗಂಭೀರತೆಯನ್ನು ಬಲ್ಲವರಾಗಿರಬೇಕು. ಸಾಧ್ಯವಾದಷ್ಟು ಜನರನ್ನು ತಪ್ಪುದಾರಿಗೆ ಎಳೆಯಲು ಸೈತಾನನು ನಿಶ್ಚಯಿಸಿಕೊಂಡಿದ್ದಾನೆ. ಅವನ ಕುಟಿಲ ಕ್ರಿಯೆಗಳಿಗೆ ಮತ್ತು ಮೋಸಕರ ಪ್ರೇರಣೆಗೆ ಎಳೆಯರು ಮತ್ತು ಅನುಭವವಿಲ್ಲದವರು ವಿಶೇಷವಾಗಿ ದುರ್ಬಲರಾಗಿರುತ್ತಾರೆ. (2 ಕೊರಿಂ. 11:3; ಎಫೆ. 6:11) ನೀವು ದಾರಿತಪ್ಪುವಂತೆ ಪ್ರೇರಿಸಲು ಮತ್ತು ಸ್ವಾರ್ಥ ಸುಖ ಹುಡುಕುವ ಮತ್ತು ಅನೀತಿಯ ಜೀವನವನ್ನು ಬೆನ್ನಟ್ಟುವಂತೆ ಮಾಡಲು ಸೈತಾನನು ಇಂದು ಹಲವಾರು ವಿಧಾನಗಳನ್ನು ಉಪಯೋಗಿಸುತ್ತಾನೆ.
8 ಪ್ರಾಪಂಚಿಕ ಮತ್ತು ಅನೈತಿಕ ಜೀವನ ಶೈಲಿಯನ್ನು ಪ್ರವರ್ತಿಸುವ ನಿಪುಣ ಆಕರ್ಷಕ, ದೂರದರ್ಶನವಾಗಿದೆ. ಚಲನಚಿತ್ರಗಳು ಮತ್ತು ವಿಡಿಯೊಗಳು ಕ್ರಮವಾಗಿ ಹಿಂಸೆಯನ್ನು ಮತ್ತು ಸ್ಪಷ್ಟವಾಗಿದ ಲೈಂಗಿಕತೆಯನ್ನು ಪ್ರದರ್ಶಿಸುತ್ತವೆ. ಜನಪ್ರಿಯ ಸಂಗೀತವು ಹೆಚ್ಚಾಗಿ ಕೇಳ್ಮಟ್ಟದ್ದೂ, ಅಶ್ಲೀಲವೂ ಆಗಿದೆ. ಸೈತಾನನ ಆಕರ್ಷಣೆಗಳು ಪಾಪರಹಿತವಾಗಿ ಕಾಣಬಹುದು, ಆದರೆ ತಪ್ಪಾದ ಯೋಚನೆ ಮತ್ತು ನಡವಳಿಕೆಯೊಳಗೆ ಸಾವಿರಾರು ಕ್ರೈಸ್ತ ಯುವಕರನ್ನು ಅವು ಬೀಳಿಸಿವೆ. ಅಂಥ ಒತ್ತಡಗಳನ್ನು ತಡೆಗಟ್ಟಲು, ನೀವು ನೀತಿಯನ್ನು ಹುರುಪಿನಿಂದ ಬೆನ್ನಟ್ಟಬೇಕು. (2 ತಿಮೊ. 2:22) ಮನೋರಂಜನೆ ಮತ್ತು ವಿನೋದದ ಸಂಬಂಧದಲ್ಲಿ ನಿಮ್ಮ ಯೋಚನೆ ಯಾ ನಡವಳಿಕೆಯಲ್ಲಿ ಹೊಂದಾಣಿಕೆಗಳು ಅಗತ್ಯವಿದ್ದರೆ, ಇವುಗಳನ್ನು ಹೇಗೆ ಮಾಡಸಾಧ್ಯವಿದೆ? ಕೀರ್ತನೆಗಾರನು ಉತ್ತರವನ್ನು ಕೊಡುತ್ತಾನೆ: “ನಾನು ಪೂರ್ಣಮನಸ್ಸಿನಿಂದ ನಿನ್ನನ್ನು ಹುಡುಕುತ್ತೇನೆ; ನಿನ್ನ ಆಜೆಗ್ಞಳಿಗೆ ತಪ್ಪಿಹೋಗದಂತೆ ನನ್ನನ್ನು ಕಾಯಿ.”—ಕೀರ್ತ. 119:10.
9 ಕ್ರೀಡೆ ಮತ್ತು ಮನೋರಂಜನಾ ತಾರೆಗಳನ್ನು ಅತಿಯಾಗಿ ಗೌರವಿಸುವುದು ಸಾಮಾನ್ಯ ವಿಷಯವಾಗಿದೆ. ಅಪರಿಪೂರ್ಣ ಮಾನವರನ್ನು ಅತಿಯಾಗಿ ಗೌರವಿಸುವುದರಿಂದ ದೂರವಾಗಿರಲು ಯೆಹೋವನ ಭಯವು ನಿಮಗೆ ಸಹಾಯವನ್ನು ನೀಡುವುದು. ಲೈಂಗಿಕ ಅನೈತಿಕತೆ ಕೂಡ ಇಂದು ಅನೇಕರಿಂದ ಅತಿಯಾಗಿ ಗೌರವಿಸಲ್ಪಟ್ಟಿದೆ. ಲಂಪಟ ಸಾಹಿತ್ಯ ಮತ್ತು ಭ್ರಷ್ಟಗೊಳಿಸುವ ಸಂಗೀತವನ್ನು ತ್ಯಜಿಸುವ ಮೂಲಕ ಈ ಪ್ರವೃತ್ತಿಯ ವಿರುದ್ಧ ನೀವು ಎಚ್ಚರವಾಗಿರಬಲ್ಲಿರಿ. ಸಂಗೀತದ ಕುರಿತು, ಇತ್ತೀಚೆಗೆ ನಮ್ಮ ಸಭಾ ಪುಸ್ತಕಾಭ್ಯಾಸದಲ್ಲಿ ಅಭ್ಯಾಸಿಸಲಾದ ಸ್ಕಿಪ್ಡ್ ಅಭ್ಯಾಸ ಲೇಖನಗಳ ಬ್ರೋಷರ್ ಗಮನಿಸಿದ್ದು: “ಸಂಗೀತವು ಒಂದು ದೈವಿಕ ಕೊಡುಗೆ. ಆದರೆ ಅನೇಕರಿಗೆ ಇದೊಂದು ಅನಾರೋಗ್ಯಕರವಾದ ಮುನ್ನೊಲವು. . . . ಸಂಗೀತವನ್ನು ಅದರ ಸ್ಥಾನದಲ್ಲಿಡುವುದನ್ನು ನಿಮ್ಮ ಗುರಿಯಾಗಿ ಮಾಡಿರಿ, ಮತ್ತು ಯೆಹೋವನ ಕೆಲಸವು ನಿಮ್ಮ ಮುಖ್ಯ ಚಿಂತೆಯಾಗಿರಲಿ. ನೀವು ಆರಿಸಿಕೊಳ್ಳುವ ಸಂಗೀತದ ವಿಷಯದಲ್ಲಿ ಆಯ್ಕೆ ಮಾಡುತ್ತಾ ಜೋಕೆ ವಹಿಸಿರಿ. ಹೀಗೆ ನೀವು ಈ ದೈವಿಕ ಕೊಡುಗೆಯನ್ನು ದುರುಪಯೋಗಿಸಲಿಕ್ಕಲ್ಲ, ಉಪಯೋಗಿಸಲು ಶಕ್ತರಾಗುವಿರಿ.”
10 ಕೆಟ್ಟತನದ ಕಡೆಗೆ ಸಂಪೂರ್ಣ ಹೇಸಿಗೆಯನ್ನು ಬೆಳೆಸಿಕೊಳ್ಳಿರಿ. (ಕೀರ್ತ. 97:10) ಕೆಟ್ಟದನ್ನು ಮಾಡುವಂತೆ ಶೋಧಿಸಲ್ಪಟ್ಟಾಗ, ವಿಷಯವನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ ಎಂಬುದನ್ನು ಯೋಚಿಸಿರಿ, ಮತ್ತು ಪರಿಣಾಮಗಳನ್ನು ಪರಿಗಣಿಸಿರಿ: ಬೇಡವಾದ ಗರ್ಭಧಾರಣೆಗಳು, ರತಿ ರವಾನಿತ ರೋಗಗಳು, ಭಾವನಾತ್ಮಕ ಧ್ವಂಸ, ಸ್ವಗೌರವದ ನಷ್ಟ, ಮತ್ತು ಸಭೆಯಲ್ಲಿ ಸುಯೋಗಗಳ ನಷ್ಟ. ದುಷ್ಟತನವನ್ನು ಪ್ರೋತ್ಸಾಹಿಸುವ ಟಿವಿ ಕಾರ್ಯಕ್ರಮಗಳಿಗೆ, ಚಲನಚಿತ್ರಗಳಿಗೆ, ವಿಡಿಯೊಗಳಿಗೆ, ಹಾಡುಗಳಿಗೆ, ಯಾ ಸಂಭಾಷಣೆಗಳಿಗೆ ನಿಮ್ಮನ್ನು ಬಯಲುಪಡಿಸಿಕೊಳ್ಳುವುದನ್ನು ತೊರೆಯಿರಿ. “ಮೂಢರು” ಎಂದು ಬೈಬಲ್ ವರ್ಗೀಕರಿಸುವವರೊಂದಿಗೆ ಸಹವಾಸ ಮಾಡುವುದನ್ನು ತೊರೆಯಿರಿ. (ಜ್ಞಾನೋ. 13:19) ಆರಿಸುವ ಸಾಮರ್ಥ್ಯವುಳ್ಳವರಾಗಿರ್ರಿ; ನಿಕಟವಾದ ಸಹವಾಸಕ್ಕೆ ಸಭೆಯಲ್ಲಿ ಯೆಹೋವನನ್ನು ಮತ್ತು ಆತನ ನೀತಿವಂತ ಮಟ್ಟಗಳನ್ನು ಪ್ರೀತಿಸುವವರನ್ನು ಆರಿಸಿರಿ.
11 ಹೌದು, ಯೆಹೋವನ ಹೃದಯವನ್ನು ನಿಜವಾಗಿಯೂ ಸಂತೋಷಪಡಿಸಲು ಬಯಸುವ ಯುವ ಜನರು, ಎಫೆಸ 5:15, 16 ರಲ್ಲಿ ಕಂಡುಬರುವ ಒಳ್ಳೆಯ ಬುದ್ಧಿವಾದವನ್ನು ಆಲಿಸುವರು: “ಆದಕಾರಣ ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ.” ಈ ಕಡೇ ದಿವಸಗಳಲ್ಲಿ ನಿಮ್ಮ ಪ್ರಗತಿಯನ್ನು “ಚೆನ್ನಾಗಿ ನೋಡಿಕೊಳ್ಳುವಂತೆ” ಯಾವುದು ನಿಮಗೆ ಸಹಾಯ ಮಾಡುವುದು?
12 ಆತ್ಮಿಕ ಅಗತ್ಯಗಳಿಗಾಗಿ ಚಿಂತಿಸುವುದು: ಮತ್ತಾಯ 5:3 (NW) ರಲ್ಲಿ ಯೇಸು ಹೇಳಿದ್ದು: “ತಮ್ಮ ಆತ್ಮಿಕ ಆವಶ್ಯಕತೆಗಳ ಪ್ರಜ್ಞೆಯುಳ್ಳವರು ಸಂತುಷ್ಟರು.” ನಿಮ್ಮ ಆತ್ಮಿಕ ಅಗತ್ಯದ ಕುರಿತು ಅರಿವುಳ್ಳವರಾಗಿರುವ ಮೂಲಕ ನೀವು ಕೂಡ ಸಂತೋಷಿಸಬಲ್ಲಿರಿ. ಆ ಅಗತ್ಯವನ್ನು ತುಂಬುವುದರ ಅರ್ಥವು, ಸುಸಮಾಚಾರವನ್ನು ಸಾರುವುದರಲ್ಲಿ ಒಂದು ಹುರುಪಿನ ಪಾಲು ಒಳಗೊಂಡಿದೆ ಯಾಕಂದರೆ, ನಾವು ಕಲಿಯುತ್ತಿರುವ ವಿಷಯಗಳಲ್ಲಿ ನಮ್ಮ ನಂಬಿಕೆಯನ್ನು ಇದು ಕಟ್ಟುತ್ತದೆ.—ರೋಮಾ. 10:17.
13 ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುವುದು ಯಾವಾಗಲೂ ಸುಲಭವಾದ ವಿಷಯವಲ್ಲ ಎಂದು ವೈಯಕ್ತಿಕ ಅನುಭವದಿಂದ ನಿಮಗೆ ಗೊತ್ತಿದೆ. ಇದರಲ್ಲಿ ಹೆಚ್ಚಿನ ಭಾಗವು ಸ್ಥೈರ್ಯದ ಕೊರತೆಯಿಂದಿರಬಹುದು. ಹೀಗೆ, ನಿಮ್ಮ ವತಿಯಿಂದ ದೃಢ ಸಂಕಲ್ಪದ ಅಗತ್ಯವಿದೆ. ಕ್ರಮವಾಗಿ ಶುಶ್ರೂಷೆಯಲ್ಲಿ ಭಾಗವಹಿಸುವ ಮೂಲಕ, ನಿಮ್ಮ ಸಾಕ್ಷಿನೀಡುವ ಕೌಶಲಗಳನ್ನು ನೀವು ಹೆಚ್ಚಿಸಿಕೊಳ್ಳುವಿರಿ ಮತ್ತು ಸಾರಲು ಇರುವ ನಿಮ್ಮ ಸಾಮರ್ಥ್ಯದಲ್ಲಿ ಭರವಸೆಯನ್ನು ಕಟ್ಟಿಕೊಳ್ಳುಏರಿ.
14 ಹಿರಿಯರು ಮತ್ತು ಕ್ರಮದ ಪಯನೀಯರರಂಥ ಹೆಚ್ಚು ಅನುಭವಸ್ಥ ಪ್ರಚಾರಕರೊಂದಿಗೆ ಕೆಲಸಮಾಡಲು ಏರ್ಪಾಡುಗಳನ್ನು ಮಾಡಿರಿ. ಅವರ ನಿರೂಪಣೆಗಳನ್ನು ಮತ್ತು ಬಾಗಿಲುಗಳಲ್ಲಿ ಆಕ್ಷೇಪಣೆಗಳನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಅತಿ ಶ್ರದ್ಧೆಯಿಂದ ಕೇಳಿರಿ. ರೀಸನಿಂಗ್ ಪುಸ್ತಕದ ಮತ್ತು ನಮ್ಮ ರಾಜ್ಯದ ಸೇವೆ ಯಲ್ಲಿ ಸಾದರಪಡಿಸಲಾದ ಸಲಹೆಗಳ ಒಳ್ಳೆಯ ಉಪಯೋಗವನ್ನು ಮಾಡಿರಿ. ನಿಮ್ಮ ಎಲ್ಲವನ್ನು ಯೆಹೋವನಿಗೆ ನೀವು ಕೊಡುತ್ತಾ ಇರುವ ಕಾರಣ ಶುಶ್ರೂಷೆಯಿಂದ ಇನ್ನೂ ಹೆಚ್ಚಿನ ಆನಂದವನ್ನು ನೀವು ಪಡೆಯುವಿರಿ.—ಅ. ಕೃತ್ಯಗಳು 20:35.
15 ಕೆಲವರು ಶಾಲೆಯಲ್ಲಿ ಸಾಕ್ಷಿನೀಡಲು ಇರುವ ಅವಕಾಶಗಳ ಲಾಭವನ್ನು ತೆಗೆದುಕೊಳ್ಳಶಕ್ತರಾಗಿದ್ದಾರೆ ಮತ್ತು ಶಿಷ್ಯರನ್ನಾಗಿ ಮಾಡುವುದರಲ್ಲಿ ಬಹಳ ಸಫಲರಾಗಿದ್ದಾರೆ. (ಮತ್ತಾ. 28:19, 20) ಒಬ್ಬ ಕ್ರೈಸ್ತ ಯುವಕನು ಹೇಳುತ್ತಾನೆ: “ಫ್ರೀ ಕ್ಲಾಸ್ ಪೀರಿಯಡ್ಗಳಲ್ಲಿ, ವಿಶೇಷವಾಗಿ ರಜಾ ಸಮಯದಲ್ಲಿ ಸಾಕ್ಷಿ ನೀಡಲು ಅನೇಕ ಅವಕಾಶಗಳು ನನಗೆ ಇದ್ದವು. ಇತರರು ನೋಡಬಹುದಾದ ರೀತಿಯಲ್ಲಿ ನನ್ನ ಮೇಜಿನ ಮೇಲೆ ನಾನು ಬೈಬಲ್ ಪ್ರಕಾಶನಗಳನ್ನು ಬಿಟ್ಟಾಗ, ಅನೇಕ ಆಸಕ್ತ ವಿದ್ಯಾರ್ಥಿಗಳು ನನ್ನನ್ನು ಸಮೀಪಿಸಿದರು.” ಕೊನೆಗೆ, ಅನೇಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೂಡ ಕ್ರೈಸ್ತ ಕೂಟಗಳನ್ನು ಹಾಜರಾಗಲು ಪ್ರಾರಂಭಿಸಿದರು. ವಾಸ್ತವದಲ್ಲಿ, ಶಿಕ್ಷಕಿಯು ಸಮರ್ಪಿತ ಸಾಕ್ಷಿಯಾಗುವ ಮಟ್ಟಿಗೆ ಪ್ರಗತಿಯನ್ನು ಮಾಡಿದ್ದಾಳೆ. ನಿಮ್ಮಂಥ ಯುವ ಆರಾಧಕರು ಆತನ ಹೆಸರಿಗೆ ಸ್ತುತಿಯನ್ನು ತಂದಾಗ, ಯೆಹೋವನು ಮಹತ್ತರವಾಗಿ ಹರ್ಷಿಸುತ್ತಾನೆ.
16 ನಿಮ್ಮ ಆತ್ಮಿಕ ಅಗತ್ಯವನ್ನು ತೃಪ್ತಿಗೊಳಿಸುವ ಇನ್ನೊಂದು ಮಾರ್ಗವು ವೈಯಕ್ತಿಕ ಅಭ್ಯಾಸದ ಮುಖಾಂತರವಾಗಿದೆ. ಯೆಹೋವನ ಹೃದಯವನ್ನು ಸಂತೋಷಪಡಿಸಲು, ನಾವು ಆತನ, ಆತನ ಉದ್ದೇಶಗಳ, ಮತ್ತು ನಮಗಾಗಿ ಆತನ ಆವಶ್ಯಕತೆಗಳ ಕುರಿತು ಜ್ಞಾನವನ್ನು ತೆಗೆದುಕೊಳ್ಳಬೇಕು. ವೈಯಕ್ತಿಕ ಅಭ್ಯಾಸಕ್ಕಾಗಿ ನೀವು ಸಮಯವನ್ನು ಬದಿಗಿಡುತ್ತೀರೊ? ಕ್ರಮವಾಗಿ ಊಟಮಾಡಲು ಸಮಯವನ್ನು ತೆಗೆದುಕೊಳ್ಳುವ ಪ್ರಕಾರ, ನೀವು ಕ್ರಮವಾಗಿ ಅಭ್ಯಾಸ ಮಾಡುತ್ತೀರೊ? (ಯೋಹಾ. 17:3) ದೇವಪ್ರಭುತ್ವ ಶುಶ್ರೂಷಾ ಶಾಲೆಗಾಗಿ ಇರುವ ಬೈಬಲ್ ಓದುವಿಕೆಯನ್ನು ಪ್ರಯತ್ನಿಸಿ ಓದುವ ಜೊತೆಗೆ ಬೈಬಲನ್ನು ಓದಲಿಕ್ಕಾಗಿ ಒಂದು ವೈಯಕ್ತಿಕ ವೇಳಾ ಪಟ್ಟಿ ನಿಮಗಿದೆಯೆ? ಎಲ್ಲಾ ಕೂಟಗಳಿಗೆ ನೀವು ಚೆನ್ನಾಗಿ ತಯಾರಿಸುತ್ತೀರೊ? ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀವು ಕ್ರಮವಾಗಿ ಓದುತ್ತೀರೊ? ವಿಶೇಷವಾಗಿ, ಪ್ರತಿಯೊಂದು ವಚನವನ್ನು ಜಾಗರೂಕತೆಯಿಂದ ನೋಡುತ್ತಾ, “ಯುವ ಜನರು ಪ್ರಶ್ನಿಸುತ್ತಾರೆ . . . ” ಎಂಬ ಶ್ರೇಣಿಯಲ್ಲಿ ಬರುವ ಪ್ರತಿಯೊಂದು ಲೇಖನವನ್ನು ಓದಲು ನೀವು ಸಮಯವನ್ನು ಬದಿಗಿಡುತ್ತೀರೊ? ನಿಮ್ಮ ಆತ್ಮಿಕ ಅಗತ್ಯಗಳಿಗಾಗಿ ವಿಶೇಷವಾಗಿ ಸೊಸೈಟಿಯು ರಚಿಸಿದ ಕ್ವೆಸ್ಚ್ಯನ್ಸ್ ಯಂಗ್ ಪೀಪಲ್ ಆ್ಯಸ್ಕ್—ಆನ್ಸರ್ಸ್ ದಟ್ ವರ್ಕ್ ಎಂಬ ಪುಸ್ತಕವನ್ನು ಮರೆಯಬೇಡಿರಿ. ಯೆಹೋವನ ಸಮೀಪಕ್ಕೆ ಬರಲು ತಮಗೆ ಈ ಪುಸ್ತಕವು ಹೇಗೆ ಸಹಾಯಮಾಡಿದೆ ಎಂಬುದನ್ನು ಹೇಳಲು, ಲೋಕದ ಎಲ್ಲೆಡೆಯೂ ಇರುವ ಕ್ರೈಸ್ತ ಯುವಕರು ಮತ್ತು ಅವರ ಹೆತ್ತವರು ನಮಗೆ ಬರೆದಿದ್ದಾರೆ.
17 ನೀವು ಬೈಬಲನ್ನು ಮತ್ತು ದೇವಪ್ರಭುತ್ವ ಬೈಬಲ್ ಅಭ್ಯಾಸ ಸಹಾಯಕಗಳನ್ನು ಓದುವಾಗ, ಅವುಗಳು ಯೆಹೋವನ ಕುರಿತು, ಆತನ ಯೋಚನೆ, ಮತ್ತು ಆತನ ಉದ್ದೇಶಗಳ ಕುರಿತು ನಿಮಗೆ ಹೇಳುತ್ತವೆ. ಈ ಮಾಹಿತಿಯು ನಿಮಗೆ ಹೇಗೆ ಸಹಾಯಕಾರಿಯಾಗಿರಬಲ್ಲದೆಂದು ಪರಿಗಣಿಸಿರಿ. ನೀವು ಏನನ್ನು ಓದುತ್ತಿರುವಿರೊ ಅದಕ್ಕೆ ನೀವು ಪೂರ್ವದಲ್ಲಿ ಓದಿದಂಥ ವಿಷಯಗಳನ್ನು ಸಂಬಂಧಿಸಿರಿ. ಇದು ಮನನವನ್ನು ಒಳಗೊಳ್ಳುತ್ತದೆ. ಮಾಹಿತಿಯು ಹೃದಯವನ್ನು ತಲುಪಿ ನಿಮ್ಮನ್ನು ಪ್ರಚೋದಿಸುವಂತೆ ಮನನವು ಅನುಮತಿಸುತ್ತದೆ.—ಕೀರ್ತ. 77:12.
18 ತಮ್ಮ ಆತ್ಮಿಕ ಅಗತ್ಯದ ಅರಿವಿರುವ ಎಳೆಯರು ಸಭಾ ಕೂಟಗಳನ್ನು ಹಾಜರಾಗುವುದನ್ನು ನೋಡಲು ನಾವು ಹರ್ಷಿಸುತ್ತೇವೆ. ಕ್ರೈಸ್ತ ಯುವ ಜನರಾದ ನೀವು ಕೂಟಗಳಲ್ಲಿ ಅರ್ಥಭರಿತ ಹೇಳಿಕೆಗಳನ್ನು ಕ್ರಮವಾಗಿ ನೀಡುವ ಮೂಲಕ ಇತರರನ್ನು ಉತ್ತೇಜಿಸಬಲ್ಲಿರಿ. ಪ್ರತಿಯೊಂದು ಕೂಟದಲ್ಲಿ ಕಡಿಮೆ ಪಕ್ಷ ಒಂದು ಹೇಳಿಕೆಯನ್ನಾದರೂ ನೀಡುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿರಿ. ಕೂಟಗಳ ಮುಂಚೆ ಮತ್ತು ಅನಂತರ, ಭಕ್ತಿವೃದ್ಧಿ ಮಾಡುವ ಸಹವಾಸದಲ್ಲಿ ಪಾಲ್ಗೊಳ್ಳುವ ಮೂಲಕ ಸಭೆಯಲ್ಲಿ ಎಲ್ಲಾ ವಯೋಮಿತಿಗಳ ಜನರೊಂದಿಗೆ ಆದರದ ಸಂಬಂಧಗಳನ್ನು ಬೆಳೆಸಿಕೊಳ್ಳಿರಿ. (ಇಬ್ರಿ. 10:24, 25) ಪ್ರತಿಯೊಂದು ಕೂಟದಲ್ಲಿ ಕಡಿಮೆ ಪಕ್ಷ ಒಬ್ಬ ವೃದ್ಧ ಸಹೋದರ ಯಾ ಸಹೋದರಿಯೊಂದಿಗೆ ಮಾತಾಡುವಂತೆ ತನ್ನ ಹೆತ್ತವರು ತನ್ನನ್ನು ಪ್ರೋತ್ಸಾಹಿಸಿದರು ಎಂದು ಒಬ್ಬ ಯುವ ಸಹೋದರನು ಹೇಳಿದನು. ಸಭೆಯ ವೃದ್ಧ ಸದಸ್ಯರೊಂದಿಗೆ ಸಹವಾಸ ಮಾಡಿದ ಮೂಲಕ ಅವನು ಪಡೆದ ಅನುಭವವನ್ನು ಅವನು ಇಂದು ಗಣ್ಯಮಾಡುತ್ತಾನೆ.
19 ಆತ್ಮಿಕ ಗುರಿಗಳನ್ನು ಬೆನ್ನಟ್ಟಿರಿ: ಅನೇಕ ಯುವ ಜನರ ಜೀವಿತಗಳು ಉದ್ದೇಶವನ್ನು ಮತ್ತು ನಿರ್ದೇಶನವನ್ನು ಹೊಂದಿಲ್ಲ ಎಂಬುದು ದುಃಖದ ಸಂಗತಿಯಾಗಿದೆ. ಹಾಗಿದ್ದರೂ, ದೇವಪ್ರಭುತ್ವ ಗುರಿಗಳನ್ನು ಇಟ್ಟು ಅವುಗಳನ್ನು ಸಫಲಪೂರ್ವಕವಾಗಿ ಸಾಧಿಸುವುದರಿಂದ ಬರುವ ಅನಿಸಿಕೆಯನ್ನು ಅನುಭವಿಸುವುದು ಒಳ್ಳೆಯದಲ್ಲವೊ? ದೈವಿಕ ಶಿಕ್ಷಣದ ಜ್ಞಾನೋದಯದೊಂದಿಗೆ ಬೆನ್ನಟ್ಟಲ್ಪಟ್ಟ ಈ ಗುರಿಗಳು, ಈಗ ವೈಯಕ್ತಿಕವಾಗಿ ತೃಪ್ತಿಕರವಾಗಿರುವವು ಮತ್ತು ಕಟ್ಟಕಡೆಗೆ ಅನಂತ ರಕ್ಷಣೆಗೆ ನಡೆಸುವವು.—ಪ್ರಸಂ. 12:1, 13.
20 ಗುರಿಗಳನ್ನು ಇಡುವಾಗ, ಅವುಗಳನ್ನು ಪ್ರಾರ್ಥನೆಯ ವಿಷಯವನ್ನಾಗಿ ಮಾಡಿರಿ. ನಿಮ್ಮ ಹೆತ್ತವರು ಮತ್ತು ಹಿರಿಯರೊಂದಿಗೆ ಮಾತಾಡಿರಿ. ನಿಮ್ಮನ್ನು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಪರೀಕ್ಷಿಸಿ, ಬೇರೆಯವರೊಂದಿಗೆ ಹೋಲಿಕೆಯನ್ನು ಮಾಡದೆ, ನೀವು ಏನನ್ನು ಸಾಧಿಸಲು ಶಕ್ತರೊ ಅದಕ್ಕನುಸಾರವಾಗಿ ವ್ಯಾವಹಾರಿಕ ಗುರಿಗಳನ್ನು ಇಡಿರಿ. ಪ್ರತಿಯೊಬ್ಬರು ಶಾರೀರಿಕ, ಮಾನಸಿಕ, ಭಾವನಾತ್ಮಕ, ಮತ್ತು ಆತ್ಮಿಕ ರಚನೆಯಲ್ಲಿ ಭಿನ್ನರಾಗಿದ್ದಾರೆ. ಆದುದರಿಂದ, ಬೇರೆಯೊಬ್ಬರು ಸಾಧಿಸಿದ ಎಲ್ಲವನ್ನು ಸಾಧಿಸಲು ಅಪೇಕ್ಷಿಸಬೇಡಿರಿ.
21 ನೀವು ಎಟಕಿಸಿಕೊಳ್ಳಸಾಧ್ಯವಿರುವ ಕೆಲವು ಗುರಿಗಳು ಯಾವುವು? ನೀವು ಇನ್ನೂ ಒಬ್ಬ ಪ್ರಚಾರಕರಾಗಿಲ್ಲದಿದ್ದರೆ ಯಾ ಇನ್ನೂ ದೀಕ್ಷಾಸ್ನಾನವನ್ನು ಪಡೆಯದೆ ಇರುವುದಾದರೆ, ಅದನ್ನು ಯಾಕೆ ನಿಮ್ಮ ಗುರಿಗಳನ್ನಾಗಿ ಮಾಡಬಾರದು? ನೀವು ಒಬ್ಬ ಪ್ರಚಾರಕರಾಗಿದ್ದರೆ, ಪ್ರತಿ ವಾರ ಶುಶ್ರೂಷೆಯಲ್ಲಿ ನಿರ್ದಿಷ್ಟ ಸಮಯವನ್ನು ವ್ಯಯಿಸುವುದನ್ನು ಒಂದು ಗುರಿಯನ್ನಾಗಿ ನೀವು ಮಾಡಬಲ್ಲಿರಿ. ಪುನಃ ಸಂದರ್ಶನಗಳಲ್ಲಿ ಒಬ್ಬ ಸಮರ್ಥ ಶಿಕ್ಷಕನಾಗುವ ಕಡೆಗೆ ಕಾರ್ಯನಡೆಸಿರಿ ಮತ್ತು ಒಂದು ಬೈಬಲ್ ಅಧ್ಯಯನವನ್ನು ನಡೆಸುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿರಿ. ನೀವು ಶಾಲೆಗೆ ಹೋಗುವ ಒಬ್ಬ ಸ್ನಾನಿತ ಯುವಕನಾಗಿದ್ದರೆ, ಬೇಸಿಗೆಯ ತಿಂಗಳುಗಳಲ್ಲಿ ಸಹಾಯಕ ಪಯನೀಯರ್ ಸೇವೆಯನ್ನು ನಿಮ್ಮ ಗುರಿಯನ್ನಾಗಿ ಮಾಡಬಾರದೇಕೆ? “ಕರ್ತನ ಸೇವೆಯಲ್ಲಿ ಮಾಡಲು ಧಾರಾಳವಿದೆ.”—1 ಕೊರಿಂ. 15:58, NW.
22 ಹೆತ್ತವರಿಂದ ನೆರವು ಪ್ರಾಮುಖ್ಯವಾದದ್ದು: ಜೀವವನ್ನು ಪಡೆಯವ ತಮ್ಮ ಪ್ರಯತ್ನಗಳಲ್ಲಿ ತಾವು ಒಬ್ಬಂಟಿಗರಾಗಿದ್ದೇವೆಂದು ಸಭೆಯಲ್ಲಿರುವ ಯುವ ಜನರು ಎಂದೂ ಭಾವಿಸಬಾರದು. ಪ್ರತಿದಿನದ ನಿರ್ಣಯಗಳನ್ನು ಮಾಡುವುದರಲ್ಲಿ ಮತ್ತು ಜೀವನದಲ್ಲಿನ ತಡೆಗಳನ್ನು ಜಯಿಸುವುದರಲ್ಲಿ ಈ ಎಳೆಯರಿಗೆ ನೆರವು ನೀಡಲು, ಯೆಹೋವನು ಆತನ ಸಂಸ್ಥೆಯ ಮುಖಾಂತರ ಬುದ್ಧಿವಾದವನ್ನು ಒದಗಿಸಿದ್ದಾನೆ. ನಿಸ್ಸಂದೇಹವಾಗಿ, ಸಮರ್ಪಿತ ಹೆತ್ತವರಿಗೆ ತಮ್ಮ ಮಕ್ಕಳು ಸರಿಯಾದ ನಿರ್ಣಯಗಳನ್ನು ಮಾಡುವಂತೆ ಸಹಾಯ ಮಾಡುವ ಪ್ರಥಮ ಜವಾಬ್ದಾರಿ ಇದೆ. ಒಂದನೆಯ ಕೊರಿಂಥ 11:3 ರಲ್ಲಿ ಗಂಡನನ್ನು ಮನೆವಾರ್ತೆಯ ತಲೆಯಂತೆ ಬೈಬಲ್ ಸೂಚಿಸುತ್ತದೆ. ಆದುದರಿಂದ, ಕ್ರೈಸ್ತ ಮನೆವಾರ್ತೆಯಲ್ಲಿ, ಅವನೊಂದಿಗೆ ಹೆಂಡತಿಯು ನಿಕಟವಾಗಿ ಕೆಲಸಮಾಡುವುದರ ಜೊತೆಗೆ, ತಂದೆಯು ಮಕ್ಕಳಿಗೆ ದೇವರ ಕಟ್ಟಳೆಗಳನ್ನು ಕಲಿಸುವುದರಲ್ಲಿ ನಾಯಕತ್ವವನ್ನು ವಹಿಸುತ್ತಾನೆ. (ಎಫೆ. 6:4) ಬಾಲ್ಯಾವಸ್ಥೆಯಲ್ಲಿ ಆರಂಭವಾಗುವ ನಿಷ್ಠೆಯ ತರಬೇತಿಯ ಮುಖಾಂತರ ಇದನ್ನು ಮಾಡಲಾಗುತ್ತದೆ. ಜೀವನದ ಪ್ರಥಮ ವರ್ಷದಲ್ಲಿ ಮಗುವಿನ ಮಿದುಳು ಗಾತ್ರದಲ್ಲಿ ಮೂರು ಪಟ್ಟು ಹೆಚ್ಚು ಆಗುವುದರಿಂದ, ಕಲಿಯಲು ಇರುವ ತಮ್ಮ ಮಗುವಿನ ಸಾಮರ್ಥ್ಯವನ್ನು ಹೆತ್ತವರು ಎಂದೂ ಕಡಮೆಯಾಗಿ ಎಣಿಸಬಾರದು. (2 ತಿಮೊ. 3:15) ಮಕ್ಕಳು ಬೆಳೆದಂತೆ, ಯೆಹೋವನನ್ನು ಪ್ರೀತಿಸುವಂತೆ ಮತ್ತು ಆತನೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಅವರು ಬೆಳೆಸುವಂತೆ ಹೆತ್ತವರು ಅವರಿಗೆ ಪ್ರಗತಿಪರವಾಗಿ ಕಲಿಸುವ ಅಗತ್ಯವಿದೆ.
23 ಹೆತ್ತವರಿಗೆ ಅನೇಕ ಬಾರಿ ತಮ್ಮ ಮಕ್ಕಳಿಗೆ ನೆರವನ್ನು ನೀಡಬಹುದಾದ ವ್ಯಾವಹಾರಿಕ ಮಾರ್ಗಗಳು ತೋರಿಸಲ್ಪಟ್ಟಿವೆ. ಆರಂಭಿಸಲು ಇರುವ ಒಂದು ಉತ್ತಮ ಅವಕಾಶವು ಹೆತ್ತವರ ಒಳ್ಳೆಯ ಮಾದರಿಯಾಗಿದೆ. ಅವರು ಏನನ್ನು ಮಾಡಬೇಕು ಯಾ ಮಾಡಬಾರದೆಂಬುದರ ಕುರಿತು ಅವರೊಂದಿಗೆ ಹೆಚ್ಚು ಸಮಯವನ್ನು ಮಾತಾಡುವುದರಲ್ಲಿ ವ್ಯಯಿಸುವುದಕ್ಕಿಂತ ನಿಮ್ಮ ಮಕ್ಕಳಿಗೆ ಆತ್ಮಿಕವಾಗಿ ಸಹಾಯ ಮಾಡುವುದರಲ್ಲಿ ಇದು ಹೆಚ್ಚನ್ನು ಮಾಡುವುದು. ಹೆತ್ತವರು ಸರಿಯಾದ ಮಾದರಿಯನ್ನು ಇಡುವುದರಲ್ಲಿ—ಆತ್ಮದ ಫಲಗಳನ್ನು ಮನೆಯಲ್ಲಿ, ನಿಮ್ಮ ಸಂಗಾತಿಯ ಕಡೆಗೆ ಮತ್ತು ನಿಮ್ಮ ಮಕ್ಕಳ ಕಡೆಗೆ ತೋರಿಸುವುದು ಒಳಗೊಂಡಿದೆ. (ಗಲಾ. 5:22, 23) ದೇವರ ಆತ್ಮವು ಒಳ್ಳೆಯದಕ್ಕಾಗಿ ಒಂದು ಶಕ್ತಿಶಾಲಿ ಪ್ರಭಾವವಾಗಿದೆ ಎಂದು ಅನೇಕರು ಅನುಭವದಿಂದ ಕಂಡಿದ್ದಾರೆ. ನಿಮ್ಮ ಮಕ್ಕಳ ಮನಸ್ಸು ಮತ್ತು ಹೃದಯಗಳನ್ನು ರೂಪಿಸಲು ಅದು ನಿಮಗೆ ಸಹಾಯ ಮಾಡಬಲ್ಲದು.
24 ವೈಯಕ್ತಿಕ ಅಭ್ಯಾಸ ರೂಢಿಗಳಲ್ಲಿ, ಕೂಟಗಳಿಗೆ ಹಾಜರಾಗುವುದರಲ್ಲಿ, ಕ್ಷೇತ್ರ ಶುಶ್ರೂಷೆಯಲ್ಲಿ ಕ್ರಮವಾದ ಭಾಗವಹಿಸುವಿಕೆಯಲ್ಲಿ ಕೂಡ ಹೆತ್ತವರಿಗೆ ಒಳ್ಳೆಯ ಮಾದರಿಯನ್ನು ಇಡುವ ಅಗತ್ಯವಿದೆ. ನೀವು ಮನೆಯಲ್ಲಿ ಸತ್ಯದ ಕುರಿತು ಉತ್ಸಾಹಪೂರ್ವಕವಾಗಿ ಮಾತಾಡಿ, ಶುಶ್ರೂಷೆಯಲ್ಲಿ ಹುರುಪಿನ ನಾಯಕತ್ವವನ್ನು ತೆಗೆದುಕೊಂಡು, ನಿಮ್ಮ ವೈಯಕ್ತಿಕ ಅಭ್ಯಾಸದ ಕುರಿತು ಸಕಾರಾತ್ಮಕವಾಗಿರುವುದಾದರೆ, ಆತ್ಮಿಕ ವಿಷಯಗಳಲ್ಲಿ ಯಥಾರ್ಥವಾದ ಆಸಕ್ತಿಯನ್ನು ನಿಮ್ಮ ಮಕ್ಕಳು ತೆಗೆದುಕೊಳ್ಳುವಂತೆ ಉತ್ತೇಜಿಸಲ್ಪಡುವರು.
25 ಆಲೋಚನಾಪರವಾಗಿ ತಯಾರಿಸಲ್ಪಟ್ಟಾಗ, ಒಂದು ಕ್ರಮವಾದ, ಅರ್ಥಭರಿತ ಕುಟುಂಬ ಬೈಬಲ್ ಅಭ್ಯಾಸವು, ಕುಟುಂಬವು ಒಟ್ಟಾಗಿ ಜೊತೆಗೂಡುವ ಒಂದು ಸಮಯವಾಗಿದ್ದು, ಅಭಿರುಚಿಯುಳ್ಳದ್ದೂ ಆನಂದಭರಿತವೂ ಆಗಿರಬಲ್ಲದು. ನಿಮ್ಮ ಮಕ್ಕಳ ಹೃದಯವನ್ನು ತಲಪಲು ಸಮಯವನ್ನು ತೆಗೆದುಕೊಳ್ಳಿರಿ. (ಜ್ಞಾನೋ. 23:15) ಅನೇಕ ಕುಟುಂಬಗಳು ಈ ಸಂದರ್ಭವನ್ನು ವಾರದ ಕಾವಲಿನಬುರುಜು ಅಭ್ಯಾಸವನ್ನು ತಯಾರಿಸಲಿಕ್ಕಾಗಿ ಉಪಯೋಗಿಸುತ್ತಾರಾದರೂ, ಆಗಿಂದಾಗ್ಗೆ ಕುಟುಂಬದ ಪ್ರತ್ಯೇಕವಾದ ಅಗತ್ಯವನ್ನು ಪರಿಗಣಿಸುವುದು ಪ್ರೋತ್ಸಾಹದಾಯಕವಾಗಿರಬಹುದು. ದೃಷ್ಟಿಕೋನ ಪ್ರಶ್ನೆಗಳನ್ನು ಕೇಳಿ ಕುಟುಂಬದ ಪ್ರತಿಯೊಬ್ಬ ಸದಸ್ಯನ ಹೇಳಿಕೆಗಳನ್ನು ಕೇಳುವುದು ಪ್ರಬೋಧಿಸುವಂಥದ್ದೂ, ಅಷ್ಟೇ ಅಲ್ಲದೆ ಉಲ್ಲಾಸಗೊಳಿಸುವಂಥದ್ದೂ ಆಗಿರುವುದು. ಕುಟುಂಬದ ಪ್ರತಿ ಸದಸ್ಯನನ್ನು ಪ್ರಯೋಜನಪಡಿಸುವ ಒಂದು ಅಭ್ಯಾಸವನ್ನು ನಡೆಸುವುದು ಕುಟುಂಬದ ತಲೆಗೆ ನಿಜವಾದ ಪಂಥಾಹ್ವಾನವಾಗಿದೆ. ಆದರೆ ಎಲ್ಲರೂ ಆತ್ಮಿಕವಾಗಿ ಬೆಳೆದಾಗ ಅದು ಎಷ್ಟು ಪ್ರತಿಫಲದಾಯಕವು! ಎಲ್ಲರನ್ನು ಒಳಪಡಿಸುವ ಮೂಲಕ, ಆನಂದದ ಆತ್ಮವು ನೆಲೆಸುವುದು.
26 ನಿಮ್ಮ ಪ್ರೀತಿಪರ, ವಿಶೇಷವಾದ ತರಬೇತಿಯು ನಿಮ್ಮ ಸಂತಾನದ ಜೀವಿತಗಳನ್ನು ರಕ್ಷಿಸುವುದಕ್ಕಾಗಿ ಈಗ ಪ್ರಾಮುಖ್ಯವಾಗಿದೆ. (ಜ್ಞಾನೋ. 22:6) ಇದನ್ನು ಮನಸ್ಸಿನಲ್ಲಿ ಇಡುವುದರೊಂದಿಗೆ, ನೀವೆಂದಿಗೂ ಮಾಡಬಹುದಾದ ಅತಿ ಮುಖ್ಯ ಕಲಿಸುವಿಕೆ ಇದಾಗಿರಬಹುದು ಎಂಬುದನ್ನು ತಿಳಿದುಕೊಳ್ಳಲು ಸುಲಭವಾಗಿದೆ. ಈ ವಿಶೇಷವಾದ ಹಾಗೂ ಪ್ರಾಮುಖ್ಯವಾದ ಕೆಲಸದಲ್ಲಿ ನೀವು ಒಬ್ಬಂಟಿಗರೆಂದು ಎಂದೂ ನೆನಸಬೇಡಿರಿ. ನಿಮ್ಮ ಕುಟುಂಬ ಜವಾಬ್ದಾರಿಗಳಿಗಾಗಿ ಚಿಂತಿಸುವುದರಲ್ಲಿ ಮಾರ್ಗದರ್ಶನಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳಲು ಕಲಿಯಿರಿ. ಅಷ್ಟು ಮಾತ್ರ ಅಲ್ಲ. ಹೆಚ್ಚಿನ ನೆರವನ್ನು ಕೊಡಬಲ್ಲ ಇತರರು ಇದ್ದಾರೆ.
27 ಸಹಾಯ ಮಾಡಲು ಇತರರು ಏನನ್ನು ಮಾಡಬಲ್ಲರು: ಹಿರಿಯರೇ, ರಾಜ್ಯ ಸಭಾಗೃಹವನ್ನು ಶುಚಿಮಾಡುವಲ್ಲಿ, ಅವರ ಹೆತ್ತವರೊಂದಿಗೆ ಯುವ ಜನರನ್ನು ಸೇರಿಸಲು ಎಚ್ಚರವಾಗಿರ್ರಿ. ಸಭಾ ಕೂಟಗಳಲ್ಲಿ ಮಕ್ಕಳನ್ನು ಉತ್ತೇಜಿಸಿರಿ. ಸೇವಾ ಕೂಟದ ಭಾಗಗಳಿರುವ ಹಿರಿಯರು ಮತ್ತು ಶುಶ್ರೂಷಾ ಸೇವಕರು, ಸಭಿಕರ ಭಾಗವಹಿಸುವಿಕೆಗಾಗಿ ಇರುವ ಭಾಗಗಳ ಸಮಯದಲ್ಲಿ ಎತ್ತಿದ ಮಕ್ಕಳ ಕೈಗಳ ಕಡೆಗೆ ಗಮನಕೊಡಬೇಕು. ಅವರ ಹೆತ್ತವರೊಂದಿಗೆ ಪ್ರತ್ಯಕ್ಷಾಭಿನಯಗಳಲ್ಲಿ ಆದರ್ಶ ಎಳೆಯರನ್ನು ಉಪಯೋಗಿಸಲು ಇರುವ ಅವಕಾಶಗಳಿಗಾಗಿ ನೋಡಿರಿ. ಕೆಲವರನ್ನು ಇಂಟರ್ವ್ಯೂ ಮಾಡಬಹುದು ಮತ್ತು ಸಂಕ್ಷಿಪ್ತ ಹೇಳಿಕೆಗಳನ್ನು ಅವರು ಮಾಡಬಹುದು.
28 ಅವರ ಪ್ರಯತ್ನಗಳನ್ನು ಸಾದಾ ಎಂದು ಭಾವಿಸಬೇಡಿ. ಯುವ ಜನರು ಸಭೆಗೆ ನಿಜವಾದ ಆಸ್ತಿಯಾಗಿ ಪರಿಣಮಿಸಿದ್ದಾರೆ. ಅವರ ಉತ್ತಮ ನಡವಳಿಕೆಯಿಂದ, ಅನೇಕರು ‘ನಮ್ಮ ರಕ್ಷಕನಾದ ದೇವರ ಉಪದೇಶವನ್ನು ಅಲಂಕರಿಸಿಕೊಳ್ಳುತ್ತಾ ಇದ್ದಾರೆ.’ (ತೀತ 2:6-10) ಸಣ್ಣ ಪ್ರಮಾಣದಲ್ಲಿಯೂ ಕೂಡ ಭಾಗವಹಿಸಿದ ಎಳೆಯರನ್ನು ಪ್ರಶಂಸಿಸುವ ಅಗತ್ಯದ ಕುರಿತು ಅರಿವುಳ್ಳವರಾಗಿರ್ರಿ. ಇದು ಅವರು ತಯಾರಿಸುವಂತೆ ಮತ್ತು ಭವಿಷ್ಯತ್ತಿನಲ್ಲಿ ಅದನ್ನು ಪುನಃ ಮಾಡುವಂತಹ ಆಶೆಯನ್ನು ಹೊಂದುವಂತೆ ಉತ್ತೇಜಿಸುವುದು. ಇಂತಹ ಆಸಕ್ತಿಯ ಬೆಲೆಕಟ್ಟಲು ಸಾಧ್ಯವಿಲ್ಲ; ಅದು ಅಮೂಲ್ಯವಾದದ್ದು. ಒಬ್ಬ ಹಿರಿಯ ಯಾ ಶುಶ್ರೂಷಾ ಸೇವಕನೋಪಾದಿ ನೀವು ಎಷ್ಟು ಬಾರಿ ಸಭೆಯಲ್ಲಿರುವ ಯುವ ಜನರನ್ನು ಸಮೀಪಿಸಿ ಕೂಟದಲ್ಲಿ ನೀಡಲಾದ ಒಂದು ಭಾಷಣ ಯಾ ನಿರೂಪಣೆಗಾಗಿ ಅವರನ್ನು ಪ್ರಶಂಸಿಸಿದ್ದೀರಿ?
29 ಪಯನೀಯರರೇ, ಸಹಾಯ ಮಾಡಲು ನೀವು ಏನನ್ನು ಮಾಡಬಲ್ಲಿರಿ? ಮಧ್ಯಾಹ್ನ ಮತ್ತು ವಾರಾಂತ್ಯಗಳಿಗಾಗಿ ನಿಮ್ಮ ಏರ್ಪಾಡಿನಲ್ಲಿ ಶಾಲಾ ಮಕ್ಕಳನ್ನು ಹೇಗೆ ಒಳಪಡಿಸುವುದೆಂದು ನೋಡಲು ನಿಮ್ಮ ವೇಳಾ ಪಟ್ಟಿಯನ್ನು ಪರಿಶೀಲಿಸಬಾರದೇಕೆ? ಪೂರ್ಣ ಸಮಯದ ಸೇವೆಯ ನಿಮ್ಮ ಆಯ್ಕೆಯ ಕುರಿತು ನೀವು ಸಕಾರಾತ್ಮಕವಾಗಿ ಮಾತಾಡುತ್ತೀರೊ? ನಿಮ್ಮ ಶುಶ್ರೂಷೆಯಲ್ಲಿ ನೀವು ಆನಂದವನ್ನು ಕಂಡುಕೊಳ್ಳುತ್ತೀರೆಂದು ನಿಮ್ಮ ಮುಖಭಾವದಿಂದ ನೀವು ತೋರಿಸುತ್ತಾ ಇದ್ದೀರೊ? ಅದನ್ನು ನೀವು ಇತರರಿಗೆ ವಿಶೇಷವಾಗಿ ಎಳೆಯರಿಗೆ ಮನಃಪೂರ್ವಕವಾಗಿ ಶಿಫಾರಸು ಮಾಡುತ್ತೀರೊ? ಮನೆಯಿಂದ ಮನೆಯ ಸೇವೆಯಲ್ಲಿ ಕೆಲಸಮಾಡುವಾಗ, ನಿಮ್ಮ ಮಾತು ಭಕ್ತಿವೃದ್ಧಿ ಮಾಡುವಂಥದ್ದೂ, ಸಕಾರಾತ್ಮಕವಾದದ್ದೂ ಆಗಿದೆಯೊ? ಹಾಗಿರುವಲ್ಲಿ, ಒಬ್ಬ ಪಯನೀಯರರೋಪಾದಿ ನೀವು ಕೂಡ ಈ ಬಹು ಪ್ರಾಮುಖ್ಯ ತರಬೇತಿ ಚಟುವಟಿಕೆಯಲ್ಲಿ ಭಾಗವಹಿಸುತ್ತಾ ಇದ್ದೀರಿ.
30 ಎಳೆಯರನ್ನು ತರಬೇತಿ ಮಾಡುವ ಈ ಪ್ರಾಮುಖ್ಯವಾದ ಕೆಲಸದ ಬಗ್ಗೆ ಸಭೆಯಲ್ಲಿ ಇರುವ ಎಲ್ಲರೂ ತೀವ್ರವಾಗಿ ಬಲ್ಲವರಾಗಿರಬೇಕು. ಅವರೊಂದಿಗೆ ಕ್ಷೇತ್ರ ಶುಶ್ರೂಷೆಯಲ್ಲಿ ಕೆಲಸ ಮಾಡಲು ನಿಶ್ಚಯವಾದ ಏರ್ಪಾಡುಗಳನ್ನು ನೀವು ಮಾಡಬಲ್ಲಿರೊ? ಮನೆಯಿಂದ ಮನೆಯ ಕೆಲಸಕ್ಕಾಗಿ ತಯಾರಿಸುವಲ್ಲಿ ಅವರೊಂದಿಗೆ ಒಂದು ನಿರೂಪಣೆಯನ್ನು ನೀವು ಅಭ್ಯಾಸಿಸಬಲ್ಲಿರೊ? ಶುಶ್ರೂಷೆಯಲ್ಲಿ ಒಟ್ಟಾಗಿ ಕೆಲಸಮಾಡುವಾಗ ಮುಂದಿನ ಆತ್ಮಿಕ ಚಟುವಟಿಕೆಗಳಿಗಾಗಿ ಉತ್ತೇಜಿಸಲು ಇರುವ ಅವಕಾಶಗಳಿಗೆ ನೀವು ಜಾಗರೂಕರಾಗಿದ್ದೀರೊ? ಒಂದು ಚಿಕ್ಕ ಹೇಳಿಕೆ ಕೂಡ, ಯುವ ವ್ಯಕ್ತಿಯ ಅನಂತ ಪ್ರಯೋಜನಕ್ಕಾಗಿ, ಬಹುಕಾಲದ ಆತ್ಮಿಕ ಗುರಿಗಳ ಕಡೆಗೆ ಸಕಾರಾತ್ಮಕ ಆಲೋಚನೆಗಳನ್ನು ಹುಟ್ಟಿಸಬಲ್ಲದೆಂದು ಪ್ರತಿಯೊಬ್ಬ ಪ್ರಚಾರಕನು ಬಲ್ಲವನಾಗಿರಬೇಕು.
31 ಯುವ ಜನರು ಸ್ವತಃ ತಮಗೆ ಸಹಾಯ ಮಾಡಿಕೊಳ್ಳಬಲ್ಲರು: ಯುವ ಜನರೇ, ಯೆಹೋವನ ಬೋಧನೆಗಳನ್ನು ಆಲಿಸುತ್ತಾ ಮತ್ತು ಲೋಕದಿಂದ ನೀಡಲ್ಪಟ್ಟ ವಿಷಯಗಳನ್ನು ನಿರಾಕರಿಸುತ್ತಾ ಇರುವಂತೆ ನಿಮ್ಮಲ್ಲಿ ಪ್ರತಿಯೊಬ್ಬರನ್ನು ನಾವು ಪ್ರೋತ್ಸಾಹಿಸುತ್ತೇವೆ. ನಿಮ್ಮ ನಡತೆ ಮತ್ತು ಆಂತರಿಕ ಅನಿಸಿಕೆಗಳನ್ನು ಪರೀಕ್ಷಿಸುವ ಮೂಲಕ ನಿಮ್ಮನ್ನು ಸತತವಾಗಿ ಶೋಧಿಸಿಕೊಳ್ಳಿರಿ. ಯೆಹೋವನ ಕಡೆಗೆ ನಿಮ್ಮ ಮನೋಭಾವನೆ ಏನಾಗಿದೆ ಮತ್ತು ಪ್ರತಿದಿನದ ಜೀವಿತದಲ್ಲಿ ಆತನು ನಿಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಸೈತಾನನ ವಿಚಾರಗಳ ಪ್ರಭಾವದ ವಿರುದ್ಧ ನೀವು ಕಠಿನವಾದ ಹೋರಾಟವನ್ನು ಮಾಡುತ್ತಿದ್ದೀರೊ? (1 ತಿಮೊ. 6:12) ಮಾನವರು ವಿಶೇಷವಾಗಿ ಯುವ ಜನರು, ತಮ್ಮ ಸಮಾನಸ್ಕಂಧರ ಮೆಚ್ಚಿಕೆಯನ್ನು ಸ್ವಾಭಾವಿಕವಾಗಿ ಬಯಸುವುದರಿಂದ, ಕೆಟ್ಟದನ್ನು ಮಾಡುವುದರಲ್ಲಿ ಸಮೂಹವನ್ನು ಹಿಂಬಾಲಿಸುವಂತೆ ನೀವು ಸೆಳೆಯಲ್ಪಡುವುದನ್ನು ಸ್ವತಃ ಕಂಡುಕೊಳ್ಳುತ್ತೀರೊ? (ವಿಮೋ. 23:2) ಲೋಕದ ರೀತಿಗಳಿಗೆ ಹೊಂದಿಕೊಳ್ಳಲು ಮಹಾ ಒತ್ತಡವಿದೆ ಎಂಬುದನ್ನು ಅಪೊಸ್ತಲ ಪೌಲನು ತಿಳಿದುಕೊಂಡನು.—ರೋಮಾಪುರ 7:21-23.
32 ಲೋಕದ ಪ್ರಭಾವವನ್ನು ಪ್ರತಿರೋಧಿಸಲು, ಲೌಕಿಕ ಸಮಾನಸ್ಕಂಧರ ಹೋಲಿಕೆಯಲ್ಲಿ ಭಿನ್ನವಾದ ಮಾರ್ಗವನ್ನು ತೆಗೆದುಕೊಳ್ಳಲು, ದೇವರ ಬೋಧನೆಗಳಿಗೆ ಕಿವಿಗೊಡಲು ಧೈರ್ಯದ ಅಗತ್ಯವಿದೆ. ಪ್ರಾಚೀನ ಕಾಲದ ಪುರುಷರು ಹೆಚ್ಚಿನ ಸಫಲತೆಯೊಂದಿಗೆ ಹಾಗೆ ಮಾಡಿದರು. ನೋಹನ ಧೈರ್ಯವನ್ನು ಪರಿಗಣಿಸಿರಿ. ಅವನ ನಂಬಿಕೆಯ ಮುಖಾಂತರ ಮತ್ತು ಅವನ ಸಮಯದ ತಪ್ಪಿತಸ್ಥರಿಂದ ಬೇರೆಯಾಗಿ ಇರುವ ಮೂಲಕ ಅವನು ಸಂಪೂರ್ಣ ಲೋಕವನ್ನು ಖಂಡಿಸಿದನು. (ಇಬ್ರಿ. 11:7) ಅದು ಪ್ರಯತ್ನಕ್ಕೆ ಅರ್ಹವಾದದರಿಂದ ಕಠಿನ ಹೋರಾಟವನ್ನು ನಡಿಸಿರಿ. ಸೈತಾನನ ಸಮೂಹವನ್ನು ಹಿಂಬಾಲಿಸುವ ಬಲಹೀನ, ಅದೃಢ, ಅಧೈರ್ಯವಂತರನ್ನು ಅನುಕರಿಸಬೇಡಿರಿ. ಅದಕ್ಕೆ ಪ್ರತಿಕೂಲವಾಗಿ, ಯೆಹೋವನ ದೃಷ್ಟಿಯಲ್ಲಿ ಅನುಗ್ರಹವನ್ನು ಕಂಡುಕೊಳ್ಳುವವರೊಂದಿಗೆ ಸಹವಾಸವನ್ನು ಹುಡುಕಿರಿ. (ಫಿಲಿ. 3:17) ದೇವರ ವಾಗ್ದಾತದ್ತ ಹೊಸ ಲೋಕದಲ್ಲಿ ನಿಮ್ಮೊಂದಿಗೆ ಒತ್ತಾಗಿ ನಡೆಯವಂಥ ಸಹವಾಸಿಗಳಿಂದ ನಿಮ್ಮನ್ನು ಸುತ್ತುವರಿಸಿಕೊಳ್ಳಿರಿ. (ಫಿಲಿ. 1:27) ಕೇವಲ ಒಂದೇ ಒಂದು ಮಾರ್ಗವು ನಿತ್ಯ ಜೀವನಕ್ಕೆ ನಡೆಸುತ್ತದೆ ಎಂಬುದನ್ನು ಮನಸ್ಸಿನಲ್ಲಿಡಿರಿ.—ಮತ್ತಾ. 7:13, 14.
33 ನಮ್ಮ ದೇವರಿಗೆ ಯುವ ಜನರು ಸ್ತುತಿ ಮತ್ತು ಘನತೆಯನ್ನು ತರುವುದನ್ನು ನೋಡುವುದರಲ್ಲಿ ನಾವು ಆನಂದವನ್ನು ಕಂಡುಕೊಳ್ಳುವುದಾದರೆ, ಇದು ಆತನಿಗೆ ಎಷ್ಟು ಆನಂದವನ್ನು ತರಬೇಕು! ಆತನ ಮಹಾ ಉದ್ದೇಶಗಳನ್ನು ಘೋಷಿಸುವುದರಲ್ಲಿ ಪೂರ್ಣ ಪಾಲನ್ನು ಯುವ ಜನರು ಹೊಂದಿರುವುದನ್ನು ನೋಡುವುದರಲ್ಲಿ ಯೆಹೋವನು ಸಂತೋಷವನ್ನು ಕಂಡುಕೊಳ್ಳುತ್ತಾನೆಂಬ ವಿಷಯದಲ್ಲಿ ಸಂಶಯವಿಲ್ಲ. ಅವರು ಆತನಿಂದ ಬಂದ “ಒಂದು ಸ್ವಾಸ್ತ್ಯ” ವಾಗಿದ್ದಾರೆ, ಮತ್ತು ಆತನು ಅವರಿಗಾಗಿ ಅತ್ಯುತ್ತಮವಾದದ್ದನ್ನೇ ಬಯಸುತ್ತಾನೆ. (ಕೀರ್ತ. 127:3-5; 128:3-6) ಆತನ ತಂದೆಯ ಅಭಿರುಚಿಯನ್ನು ಪ್ರತಿಬಿಂಬಿಸುತ್ತಾ, ಕ್ರಿಸ್ತ ಯೇಸುವು ಕೂಡ ಎಳೆಯ ಮಕ್ಕಳೊಂದಿಗೆ ಸಹವಾಸ ಮಾಡುವುದರಲ್ಲಿ ಹೆಚ್ಚಿನ ಆನಂದವನ್ನು ಕಂಡುಕೊಂಡನು, ಮತ್ತು ಯೆಹೋವನ ಆರಾಧನೆಯಲ್ಲಿ ಅವರನ್ನು ಉತ್ತೇಜಿಸಲು ಅವನು ಸಮಯವನ್ನು ತೆಗೆದುಕೊಂಡನು. ಅವರಿಗಾಗಿ ಕೋಮಲ ವಾತ್ಸಲ್ಯವನ್ನು ಅವನು ಪ್ರದರ್ಶಿಸಿದನು. (ಮಾರ್ಕ 9:36, 37; 10:13-16) ಯೆಹೋವನು ಮತ್ತು ಯೇಸು ಕ್ರಿಸ್ತನು ವೀಕ್ಷಿಸುವ ಅದೇ ರೀತಿಯಲ್ಲಿ ನೀವು ನಿಮ್ಮ ಯುವ ಜನರನ್ನು ವೀಕ್ಷಿಸುತ್ತೀರೊ? ಯೆಹೋವ ಮತ್ತು ದೇವದೂತರು ಅವರ ನಿಷ್ಠೆ ಮತ್ತು ಒಳ್ಳೆಯ ಮಾದರಿಯನ್ನು ಹೇಗೆ ವೀಕ್ಷಿಸುತ್ತಾರೆ ಎಂಬ ಅರಿವು ನಮ್ಮ ಯುವ ಜನರಿಗಿದೆಯೊ? ಆತ್ಮಿಕ ಗುರಿಗಳನ್ನು ಎಟಕಿಸಿಕೊಳ್ಳುವ ಮೂಲಕ ಯೆಹೋವನನ್ನು ಸಂತೋಷಪಡಿಸುವಂತೆ ಅವರು ಪ್ರಶಂಸಿಸಲ್ಪಡಬೇಕು ಮತ್ತು ಉತ್ತೇಜಿಸಲ್ಪಡಬೇಕು. ಯುವ ಜನರೇ, ನಿಮಗೆ ಈಗ ಮತ್ತು ಭವಿಷ್ಯತ್ತಿನಲ್ಲಿ ಆಶೀರ್ವಾದಗಳಾಗಿ ಫಲಿಸಬಹುದಾದ ಗುರಿಗಳನ್ನು ಬೆನ್ನಟ್ಟಿರಿ.