ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 10/15 ಪು. 12-17
  • ನಿಮ್ಮ ಹೃದಯಾಂತರಾಳದಿಂದ ಕ್ಷಮಿಸಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಹೃದಯಾಂತರಾಳದಿಂದ ಕ್ಷಮಿಸಿರಿ
  • ಕಾವಲಿನಬುರುಜು—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕ್ಷಮಾಪಣೆ ಅಗತ್ಯ—ಮತ್ತು ನಮಗೆ ತೋರಿಸಲ್ಪಟ್ಟಿದೆ
  • ಕ್ಷಮಿಸುವ ವಿಷಯದಲ್ಲಿ ನಾವು ಶ್ರಮಿಸಬೇಕಾಗಿದೆ
  • ರಾಜಿಮಾಡಿಕೊಳ್ಳಿರಿ—ಕ್ಷಮಿಸಿರಿ
  • ‘ಒಬ್ಬರಿಗೊಬ್ಬರು ಉದಾರವಾಗಿ ಕ್ಷಮಿಸುತ್ತಾ ಇರ್ರಿ’
    ಕಾವಲಿನಬುರುಜು—1997
  • ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಕ್ಷಮಿಸುವವರಾಗಿರುವುದು ಏಕೆ?
    ಕಾವಲಿನಬುರುಜು—1994
  • ಯೆಹೋವನು ಕ್ಷಮಿಸುವಂತೆ ನೀವು ಕ್ಷಮಿಸುತ್ತೀರೊ?
    ಕಾವಲಿನಬುರುಜು—1994
ಇನ್ನಷ್ಟು
ಕಾವಲಿನಬುರುಜು—1999
w99 10/15 ಪು. 12-17

ನಿಮ್ಮ ಹೃದಯಾಂತರಾಳದಿಂದ ಕ್ಷಮಿಸಿರಿ

“ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನಿಗೆ ಮನಃಪೂರ್ವಕವಾಗಿ ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು.”—ಮತ್ತಾಯ 18:35.

1, 2. (ಎ) ಒಬ್ಬ ಪ್ರಸಿದ್ಧ ಪಾಪಿಯು, ಯೇಸುವಿನ ಬಗ್ಗೆ ತನಗಿದ್ದ ಗಣ್ಯತೆಯನ್ನು ಹೇಗೆ ವ್ಯಕ್ತಪಡಿಸಿದಳು? (ಬಿ) ಇದಕ್ಕೆ ಉತ್ತರವಾಗಿ ಯೇಸು ಯಾವ ವಿಷಯವನ್ನು ಸ್ಪಷ್ಟಪಡಿಸಿದನು?

ಅವಳು ಒಬ್ಬ ವೇಶ್ಯೆಯಾಗಿದ್ದಿರಬಹುದು. ಒಬ್ಬ ಧಾರ್ಮಿಕ ವ್ಯಕ್ತಿಯ ಮನೆಯಲ್ಲಿ ನೀವು ನೋಡಲು ನಿರೀಕ್ಷಿಸುವಂತಹ ವ್ಯಕ್ತಿಯು ಅವಳಾಗಿರಲಿಲ್ಲ. ಅವಳು ಅಲ್ಲಿರುವುದನ್ನು ನೋಡಿ ಕೆಲವರಿಗೆ ಆಘಾತವಾಗಿದ್ದಲ್ಲಿ, ಅವಳು ಏನು ಮಾಡಿದಳೋ ಅದು ಇನ್ನೂ ಧಕ್ಕೆಯನ್ನು ಉಂಟುಮಾಡುವಂತಹ ಸಂಗತಿಯಾಗಿತ್ತು. ಅವಳು ಅತ್ಯುಚ್ಚ ನೈತಿಕ ಮಟ್ಟಗಳಿದ್ದ ಒಬ್ಬ ವ್ಯಕ್ತಿಯನ್ನು ಸಮೀಪಿಸಿ, ತನ್ನ ಕಣ್ಣೀರಿನಿಂದ ಅವನ ಪಾದಗಳನ್ನು ತೊಳೆದು, ತನ್ನ ಕೂದಲಿನಿಂದ ಪಾದಗಳನ್ನು ಒರಸಿ, ಅವನ ಕೆಲಸಗಳಿಗಾಗಿರುವ ತನ್ನ ಗಣ್ಯತೆಯನ್ನು ವ್ಯಕ್ತಪಡಿಸಿದಳು.

2 ಆ ವ್ಯಕ್ತಿಯು ಯೇಸುವೇ ಆಗಿದ್ದನು. ‘ಆ ಊರಿನ ದುರಾಚಾರಿ’ಯೆಂದು ಪ್ರಸಿದ್ಧಳಾಗಿದ್ದ ಈ ಸ್ತ್ರೀಯನ್ನು ನೋಡಿ ಅವನು ಅಸಹ್ಯಪಟ್ಟುಕೊಳ್ಳಲಿಲ್ಲ. ಆದರೆ ಯಾರು ಆ ಮನೆಯ ಯಜಮಾನನಾಗಿದ್ದನೋ ಆ ಫರಿಸಾಯನಾದ ಸೀಮೋನನು, ಅವಳು ಒಬ್ಬ ಪಾಪಿಯಾಗಿದ್ದದ್ದರಿಂದ ಚಿಂತಿತನಾಗಿದ್ದನು. ಆಗ, ಒಬ್ಬ ಸಾಹುಕಾರನಿಗೆ ಸಾಲವನ್ನು ಹಿಂದಿರುಗಿಸಬೇಕಾಗಿದ್ದ ಇಬ್ಬರು ಸಾಲಗಾರರ ಬಗ್ಗೆ ಹೇಳುವ ಮೂಲಕ ಯೇಸು ಇದಕ್ಕೆ ಪ್ರತ್ಯುತ್ತರಿಸಿದನು. ಒಬ್ಬನು ದೊಡ್ಡ ಮೊತ್ತದ ಸಾಲವನ್ನು, ಅಂದರೆ ಒಬ್ಬ ಜೀತದಾಳಿನ ಎರಡು ವರ್ಷಗಳ ಸಂಬಳದಷ್ಟು ಹಣವನ್ನು ಪಾವತಿಮಾಡಬೇಕಾಗಿತ್ತು. ಇನ್ನೊಬ್ಬನು ಈ ಸಾಲಗಾರನ ಹತ್ತನೇ ಒಂದು ಭಾಗದಷ್ಟು, ಅಂದರೆ ಮೂರು ತಿಂಗಳುಗಳ ಸಂಬಳಕ್ಕಿಂತಲೂ ಕಡಿಮೆ ಹಣವನ್ನು ಹಿಂದಿರುಗಿಸಬೇಕಾಗಿತ್ತು. ಇಬ್ಬರೂ ಸಾಲತೀರಿಸುವ ಸಾಮರ್ಥ್ಯವಿಲ್ಲದವರಾಗಿದ್ದರಿಂದ, ಆ ಸಾಹುಕಾರನು “ಆ ಇಬ್ಬರನ್ನೂ ಉದಾರ ಮನಸ್ಸಿನಿಂದ ಕ್ಷಮಿಸಿಬಿಟ್ಟನು” (NW). ಯಾರಿಗೆ ಹೆಚ್ಚಿನ ಮೊತ್ತವು ಕೊಡಲಿಕ್ಕಿತ್ತೋ ಅವನು ತನ್ನ ಒಡೆಯನಿಗೆ ಹೆಚ್ಚು ಪ್ರೀತಿಯನ್ನು ತೋರಿಸಲು ಕಾರಣವಿತ್ತು ಎಂಬುದು ಸ್ಪಷ್ಟ. ಆ ಸ್ತ್ರೀಯ ದಯಾಪರ ಕೃತ್ಯವನ್ನು ಈ ದೃಷ್ಟಾಂತದೊಂದಿಗೆ ತುಲನೆಮಾಡಿದ ಬಳಿಕ, ಯೇಸು ಈ ಮೂಲತತ್ವವನ್ನು ಅದಕ್ಕೆ ಕೂಡಿಸಿದನು: “ಯಾವನಿಗೆ ಸ್ವಲ್ಪ ಮಾತ್ರ ಕ್ಷಮಿಸಲ್ಪಟ್ಟದೆಯೋ ಅವನು ತೋರಿಸುವ ಪ್ರೀತಿಯು ಸ್ವಲ್ಪವೇ.” ತದನಂತರ ಅವನು ಅವಳಿಗೆ ಹೇಳಿದ್ದು: “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ.”—ಲೂಕ 7:36-48.

3. ನಮ್ಮ ಬಗ್ಗೆ ನಾವು ಏನನ್ನು ಪರಿಗಣಿಸುವ ಅಗತ್ಯವಿದೆ?

3 ‘ಒಂದುವೇಳೆ ನಾನೇ ಆ ಸ್ತ್ರೀಯಾಗಿದ್ದು, ಅಥವಾ ನಾನೇ ಅಂತಹ ಸನ್ನಿವೇಶದಲ್ಲಿದ್ದು, ನನಗೆ ಕರುಣೆಯು ತೋರಿಸಲ್ಪಡುತ್ತಿದ್ದಲ್ಲಿ, ಆಗ ನಾನು ನಿರ್ದಯವಾಗಿ ಇತರರನ್ನು ಕ್ಷಮಿಸದೆ ಇರುತ್ತಿದ್ದೆನೊ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿರಿ. ‘ಖಂಡಿತವಾಗಿಯೂ ಇಲ್ಲ!’ ಎಂದು ನೀವು ಉತ್ತರಿಸಬಹುದು. ಆದರೂ, ಕ್ಷಮಿಸುವ ಪ್ರವೃತ್ತಿ ನಿಮಗಿದೆ ಎಂಬುದನ್ನು ನೀವು ನಿಜವಾಗಿಯೂ ಒಪ್ಪಿಕೊಳ್ಳುತ್ತೀರೊ? ಕ್ಷಮಿಸುವುದು ನಿಮ್ಮ ಮನೋಧರ್ಮವಾಗಿದೆಯೊ? ನೀವು ಅನೇಕವೇಳೆ ಮನಃಪೂರ್ವಕವಾಗಿ ಕ್ಷಮಿಸಿದ್ದೀರೊ, ಮತ್ತು ನೀವು ಕ್ಷಮಿಸುವವರಾಗಿದ್ದೀರಿ ಎಂದು ಇತರರು ನಿಮ್ಮ ಬಗ್ಗೆ ಹೇಳುತ್ತಾರೋ? ನಮ್ಮಲ್ಲಿ ಪ್ರತಿಯೊಬ್ಬರೂ ಇದಕ್ಕೆ ನಮ್ಮ ಯಥಾರ್ಥವಾದ, ಆತ್ಮಶೋಧಕ ಗಮನವನ್ನು ಏಕೆ ಕೊಡಬೇಕು ಎಂಬುದನ್ನು ನಾವೀಗ ಪರಿಗಣಿಸೋಣ.

ಕ್ಷಮಾಪಣೆ ಅಗತ್ಯ—ಮತ್ತು ನಮಗೆ ತೋರಿಸಲ್ಪಟ್ಟಿದೆ

4. ನಮ್ಮ ಕುರಿತು ನಾವು ಯಾವ ವಾಸ್ತವಾಂಶವನ್ನು ಒಪ್ಪಿಕೊಳ್ಳತಕ್ಕದ್ದು?

4 ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿರುವಂತೆ, ನೀವು ಅಪರಿಪೂರ್ಣರಾಗಿದ್ದೀರಿ. ಒಂದುವೇಳೆ ನಿಮ್ಮನ್ನು ಹಾಗೆ ಪ್ರಶ್ನಿಸುವಲ್ಲಿ, 1 ಯೋಹಾನ 1:8ರಲ್ಲಿ ಕಂಡುಬರುವ ಮಾತುಗಳನ್ನು ನೀವು ಜ್ಞಾಪಿಸಿಕೊಂಡು ಅದನ್ನು ಒಪ್ಪಿಕೊಳ್ಳಲೂಬಹುದು: “ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತೇವೆ, ಮತ್ತು ಸತ್ಯವೆಂಬದು ನಮ್ಮಲ್ಲಿಲ್ಲ.” (ರೋಮಾಪುರ 3:23; 5:12) ಕೆಲವರ ಪಾಪಪೂರ್ಣ ಮನೋವೃತ್ತಿಯು ಗಂಭೀರವಾದ ತಲ್ಲಣಗೊಳಿಸುವ ಪಾಪಗಳಿಂದ ತೋರಿಬರಬಹುದು. ಆದರೆ ನೀವು ಅಂತಹ ಪಾಪಗಳನ್ನು ಮಾಡುವ ಮೂಲಕ ದೋಷಿಗಳಾಗಿರುವುದು ನಿಮಗೆ ಗೊತ್ತಿಲ್ಲದಿರುವುದಾದರೂ, ನೀವು ದೇವರ ಮಟ್ಟಗಳಿಗೆ ಅನುಸಾರವಾಗಿ ನಡೆಯದಿರುವಂತಹ ಅಥವಾ ನೀವು ಪಾಪಮಾಡಿರುವಂತಹ ಸಂದರ್ಭಗಳು ಬಹಳಷ್ಟಿವೆ ಎಂಬುದಂತೂ ಖಂಡಿತ. ಇದು ನಿಜವಲ್ಲವೊ?

5. ಯಾವುದಕ್ಕೋಸ್ಕರ ನಾವು ದೇವರಿಗೆ ಕೃತಜ್ಞರಾಗಿರಬೇಕು?

5 ಆದುದರಿಂದ, ನಿಮ್ಮ ಸನ್ನಿವೇಶವು ಅಪೊಸ್ತಲ ಪೌಲನ ವರ್ಣನೆಗೆ ಅನುರೂಪವಾಗಿರಬಹುದು: “ಅಪರಾಧಗಳನ್ನು ಮಾಡುವದರಿಂದಲೂ ಸುನ್ನತಿಯಿಲ್ಲದ ಶರೀರಭಾವದಿಂದಲೂ ಸತ್ತವರಾಗಿದ್ದ ನಿಮ್ಮನ್ನು ಸಹ ದೇವರು ಕ್ರಿಸ್ತನೊಂದಿಗೆ ಬದುಕಿಸಿದ್ದಾನೆ. ಆತನು ನಮ್ಮ ಅಪರಾಧಗಳನ್ನೆಲ್ಲಾ ಕ್ಷಮಿಸಿ”ದನು. (ಕೊಲೊಸ್ಸೆ 2:13; ಎಫೆಸ 2:1-3) ಆತನು ‘ನಮ್ಮ ಎಲ್ಲ ಅಪರಾಧಗಳನ್ನು ಕ್ಷಮಿಸಿ’ದನು ಎಂಬ ವಾಕ್ಸರಣಿಯನ್ನು ಗಮನಿಸಿರಿ. ಇದರಲ್ಲಿ ಸಾಕಷ್ಟು ವಿಷಯಗಳು ಅಡಕವಾಗಿವೆ. “ಯೆಹೋವನೇ, ನನ್ನ ಪಾಪವು ಬಹುಘೋರವಾಗಿದೆ; ಆದರೂ ನಿನ್ನ ಹೆಸರಿನ ನಿಮಿತ್ತ ಅದನ್ನು ಕ್ಷಮಿಸು” ಎಂದು ಬೇಡಿಕೊಂಡ ದಾವೀದನಂತೆ, ನಮ್ಮಲ್ಲಿ ಪ್ರತಿಯೊಬ್ಬರಿಗೂ ಬೇಡಿಕೊಳ್ಳಲು ಸಾಕಷ್ಟು ಕಾರಣವಿದೆ. (ಓರೆ ಅಕ್ಷರಗಳು ನಮ್ಮವು.)—ಕೀರ್ತನೆ 25:11.

6. ಯೆಹೋವನ ಕುರಿತು ಮತ್ತು ಕ್ಷಮೆಯ ಕುರಿತು ನಾವು ಹೇಗೆ ದೃಢನಿಶ್ಚಿತರಾಗಿರಸಾಧ್ಯವಿದೆ?

6 ನೀವಾಗಲಿ ಅಥವಾ ಬೇರೆ ಯಾರೇ ಆಗಲಿ ಕ್ಷಮೆಯನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ? ಯೆಹೋವ ದೇವರು ಕ್ಷಮಿಸುವ ಪ್ರವೃತ್ತಿಯುಳ್ಳವನಾಗಿದ್ದಾನೆ ಎಂಬುದೇ ಇದಕ್ಕೆ ಕೀಲಿ ಕೈಯಾಗಿದೆ. ಇದು ಆತನ ವ್ಯಕ್ತಿತ್ವದ ವಿಶಿಷ್ಟ ಗುಣವಾಗಿದೆ. (ವಿಮೋಚನಕಾಂಡ 34:6, 7; ಕೀರ್ತನೆ 86:5) ಪ್ರಾರ್ಥನೆಯಲ್ಲಿ ತನ್ನ ಕಡೆಗೆ ತಿರುಗಿ, ಕ್ಷಮಾಪಣೆಯನ್ನು ಯಾಚಿಸಿ, ನಮ್ಮನ್ನು ಕ್ಷಮಿಸು ಎಂದು ನಾವು ಬೇಡಿಕೊಳ್ಳುವಂತೆ ದೇವರು ನಮ್ಮಿಂದ ನಿರೀಕ್ಷಿಸುತ್ತಾನೆ ಎಂಬುದು ಗಮನಾರ್ಹ ಸಂಗತಿಯಾಗಿದೆ. (2 ಪೂರ್ವಕಾಲವೃತ್ತಾಂತ 6:21; ಕೀರ್ತನೆ 103:3, 10, 14) ಮತ್ತು ಅಂತಹ ಕ್ಷಮೆಯನ್ನು ಒದಗಿಸಲಿಕ್ಕಾಗಿ ಆತನು ಒಂದು ಕಾನೂನುಬದ್ಧ ಏರ್ಪಾಡನ್ನು ಮಾಡಿದ್ದಾನೆ. ಅದು ಯೇಸುವಿನ ವಿಮೋಚನಾ ಯಜ್ಞವೇ ಆಗಿದೆ.—ರೋಮಾಪುರ 3:24; 1 ಪೇತ್ರ 1:18, 19; 1 ಯೋಹಾನ 4:9, 14.

7. ಯಾವ ರೀತಿಯಲ್ಲಿ ನೀವು ಯೆಹೋವನನ್ನು ಅನುಕರಿಸಲು ಬಯಸತಕ್ಕದ್ದು?

7 ದೇವರು ಮನಃಪೂರ್ವಕವಾಗಿ ಕ್ಷಮಿಸುವುದನ್ನು ನೋಡುವಾಗ, ನೀವು ಸಹ ನಿಮ್ಮ ಜೊತೆಮಾನವರನ್ನು ಯಾವ ರೀತಿ ಉಪಚರಿಸುವ ಹಂಗಿನಲ್ಲಿದ್ದೀರಿ ಎಂಬುದನ್ನು ನೀವು ಗಮನಿಸತಕ್ಕದ್ದು. ಇದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾ ಪೌಲನು ಬರೆದುದು: “ಒಬ್ಬರಿಗೊಬ್ಬರು ದಯಾಪರರೂ, ಕೋಮಲವಾದ ಸಹಾನುಭೂತಿಯುಳ್ಳವರೂ ಆಗಿದ್ದು, ಕ್ರಿಸ್ತನ ಮೂಲಕ ದೇವರು ನಿಮ್ಮನ್ನು ಮನಃಪೂರ್ವಕವಾಗಿ ಕ್ಷಮಿಸಿದಂತೆ ನೀವು ಸಹ ಕ್ಷಮಿಸುವವರಾಗಿರಿ.” (ಎಫೆಸ 4:32, NW) ಪೌಲನು ತಿಳಿಸಿದ ಅಂಶದಲ್ಲಿ, ನಾವು ದೇವರ ಮಾದರಿಯನ್ನು ಅನುಕರಿಸುವುದು ಒಳಗೂಡಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ ಮುಂದಿನ ವಚನವು ಹೀಗೆ ಮುಂದುವರಿಯುತ್ತದೆ: “ಆದದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ.” (ಎಫೆಸ 5:1) ಈ ಎರಡೂ ವಿಷಯಗಳು ಒಂದಕ್ಕೊಂದು ಸಂಬಂಧಿಸಿರುವುದನ್ನು ನೀವು ಗಮನಿಸಿದಿರೊ? ಯೆಹೋವ ದೇವರು ನಮ್ಮನ್ನು ಕ್ಷಮಿಸಿದನು, ಆದುದರಿಂದ ನೀವು ಸಹ ಆತನನ್ನು ಅನುಕರಿಸಬೇಕು ಮತ್ತು ಇತರರ ಬಗ್ಗೆ “ಕೋಮಲವಾದ ಸಹಾನುಭೂತಿಯುಳ್ಳವರೂ . . . ಮನಃಪೂರ್ವಕವಾಗಿ ಕ್ಷಮಿಸು”ವವರೂ ಆಗಿರಬೇಕು ಎಂದು ಪೌಲನು ತರ್ಕಿಸುತ್ತಾನೆ. ಆದರೆ ಸ್ವತಃ ಹೀಗೆ ಕೇಳಿಕೊಳ್ಳಿರಿ: ‘ನಾನು ಹಾಗೆ ಮಾಡುತ್ತಿದ್ದೇನೋ? ಇದು ನನ್ನ ಸಹಜ ಪ್ರವೃತ್ತಿಯಾಗಿಲ್ಲದಿರುವಲ್ಲಿ, ಅದನ್ನು ಸರಿಪಡಿಸಲು ನಾನು ಪ್ರಯತ್ನಿಸುತ್ತಿದ್ದೇನೋ, ಕ್ಷಮಿಸುವವನಾಗಿರುವ ಮೂಲಕ ನಾನು ನಿಜವಾಗಿಯೂ ದೇವರನ್ನು ಅನುಕರಿಸಲು ಹೆಣಗಾಡುತ್ತಿದ್ದೇನೋ?’

ಕ್ಷಮಿಸುವ ವಿಷಯದಲ್ಲಿ ನಾವು ಶ್ರಮಿಸಬೇಕಾಗಿದೆ

8. ನಮ್ಮ ಸಭೆಯ ರಚನೆಯ ವಿಷಯದಲ್ಲಿ ನಾವು ಏನನ್ನು ಅರ್ಥಮಾಡಿಕೊಳ್ಳತಕ್ಕದ್ದು?

8 ಕ್ರೈಸ್ತ ಸಭೆಯಲ್ಲಿ, ನಾವು ಕ್ಷಮಿಸುವಂತಹ ದೈವಿಕ ಗುಣವನ್ನು ರೂಢಿಮಾಡಿಕೊಳ್ಳಬೇಕಾದ ಕೆಲವು ಸಂದರ್ಭಗಳಿವೆ ಎಂದು ಭಾವಿಸುವುದು ಆದರ್ಶಪ್ರಾಯವಾದದ್ದಾಗಿದೆ. ವಾಸ್ತವಿಕತೆಯು ಹೀಗಿರುವುದಿಲ್ಲ. ನಮ್ಮ ಕ್ರೈಸ್ತ ಸಹೋದರ ಸಹೋದರಿಯರು ಯೇಸು ತೋರಿಸಿದಂತಹ ಪ್ರೀತಿಯ ಮಾದರಿಯನ್ನು ಅನುಸರಿಸಲು ಹೆಣಗಾಡುತ್ತಿದ್ದಾರೆ ಎಂಬುದು ಒಪ್ಪತಕ್ಕ ಸಂಗತಿಯೇ. (ಯೋಹಾನ 13:35; 15:12, 13; ಗಲಾತ್ಯ 6:2) ಈ ದುಷ್ಟ ಲೋಕದಲ್ಲಿ ಸರ್ವಸಾಮಾನ್ಯವಾಗಿ ಕಂಡುಬರುವ ಆಲೋಚನಾ ರೀತಿ, ಮಾತಾಡುವ ರೀತಿ, ಮತ್ತು ವರ್ತಿಸುವ ರೀತಿಯನ್ನು ತೊರೆಯಲಿಕ್ಕಾಗಿ ಅವರು ಬಹಳ ಸಮಯದಿಂದಲೂ ಹೆಣಗಾಡಿದ್ದಾರೆ, ಮತ್ತು ಇನ್ನು ಕೂಡ ಹೆಣಗಾಡುತ್ತಿದ್ದಾರೆ. ನಿಜವಾಗಿಯೂ ಅವರು ಹೊಸ ವ್ಯಕ್ತಿತ್ವವನ್ನು ಪ್ರದರ್ಶಿಸಲು ಬಯಸುತ್ತಾರೆ. (ಕೊಲೊಸ್ಸೆ 3:9, 10) ಆದರೂ, ಭೂಮಿಯಾದ್ಯಂತ ಇರುವ ಸಭೆಗಳು ಮತ್ತು ಪ್ರತಿಯೊಂದು ಸ್ಥಳಿಕ ಸಭೆಯು ಅಪರಿಪೂರ್ಣ ಮಾನವರಿಂದ ರಚಿತವಾಗಿದೆ ಎಂಬ ವಾಸ್ತವಾಂಶವನ್ನು ನಾವು ಅಲಕ್ಷಿಸಸಾಧ್ಯವಿಲ್ಲ. ಸಾಮಾನ್ಯವಾಗಿ, ಈ ಹಿಂದೆ ಅವರು ಹೇಗಿದ್ದರೋ ಅದಕ್ಕೆ ಹೋಲಿಸುವಾಗ, ಈಗ ಅವರು ಅತ್ಯುತ್ತಮವಾಗಿದ್ದಾರೆ ಎಂಬುದಂತೂ ಖಂಡಿತ. ಆದರೆ ಅವರು ಇನ್ನೂ ಅಪರಿಪೂರ್ಣರಾಗಿದ್ದಾರೆ.

9, 10. ಸಹೋದರರ ಮಧ್ಯೆ ಸಮಸ್ಯೆಗಳು ಉದ್ಭವಿಸುವಾಗ, ನಾವೇಕೆ ಆಶ್ಚರ್ಯಚಕಿತರಾಗಬಾರದು?

9 ಸಭೆಯಲ್ಲಿ, ನಮ್ಮ ಸಹೋದರ ಸಹೋದರಿಯರ ನಡುವೆ ನಾವು ಅಪರಿಪೂರ್ಣತೆಯನ್ನು ನಿರೀಕ್ಷಿಸಸಾಧ್ಯವಿದೆ ಎಂದು ಬೈಬಲಿನಲ್ಲಿ ದೇವರು ಉದ್ದೇಶಪೂರ್ವಕವಾಗಿ ನಮಗೆ ಹೇಳುತ್ತಾನೆ. ಉದಾಹರಣೆಗೆ, ಕೊಲೊಸ್ಸೆ 3:13ರಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಮಾತುಗಳನ್ನು ಪರಿಗಣಿಸಿರಿ: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು [“ಯೆಹೋವನು,” NW] ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.”

10 ಅರ್ಥಗರ್ಭಿತವಾಗಿಯೇ, ದೇವರು ನಮ್ಮನ್ನು ಕ್ಷಮಿಸುವುದಕ್ಕೂ ನಾವು ಸಹ ಇತರರನ್ನು ಕ್ಷಮಿಸುವ ನಮ್ಮ ಕರ್ತವ್ಯ ಹಾಗೂ ಅಗತ್ಯಕ್ಕೂ ನಡುವೆ ಇರುವ ಸಂಬಂಧವನ್ನು ಬೈಬಲು ನಮಗೆ ಜ್ಞಾಪಕ ಹುಟ್ಟಿಸುತ್ತದೆ. ಇದು ಏಕೆ ತುಂಬ ಕಷ್ಟಕರವಾದದ್ದಾಗಿದೆ? ಏಕೆಂದರೆ ಒಬ್ಬರಿಗೆ ಇನ್ನೊಬ್ಬರ “ಮೇಲೆ ತಪ್ಪುಹೊರಿಸುವದಕ್ಕೆ ಕಾರಣ”ವಿರಬಹುದು ಎಂಬುದನ್ನು ಪೌಲನು ಒಪ್ಪಿಕೊಂಡನು. ಅಂತಹ ಕಾರಣಗಳು ಇರಸಾಧ್ಯವಿದೆ ಎಂಬುದನ್ನು ಅವನು ಅರ್ಥಮಾಡಿಕೊಂಡನು. ಪ್ರಥಮ ಶತಮಾನದಲ್ಲಿ, ‘ಯಾರಿಗೋಸ್ಕರ ಮಹಾಪದವಿಯು ಪರಲೋಕದಲ್ಲಿ ಸಿದ್ಧವಾಗಿತ್ತೋ’ ಆ ಕ್ರೈಸ್ತ “ದೇವಜನರ” ನಡುವೆಯೂ ಇಂತಹ ಕಾರಣಗಳು ಅಸ್ತಿತ್ವದಲ್ಲಿದ್ದಿರಬಹುದು. (ಕೊಲೊಸ್ಸೆ 1:2, 5) ಆದುದರಿಂದ, ಇಂದಿನ ಅಧಿಕಾಂಶ ಸತ್ಕ್ರೈಸ್ತರಿಗೆ, ತಾವು “ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ” ಆಗಿದ್ದೇವೆ ಎಂಬುದಕ್ಕೆ ಪವಿತ್ರಾತ್ಮದ ಯಾವುದೇ ಪುರಾವೆಯು ಇಲ್ಲದಿರುವ ಸಮಯದಲ್ಲಿ, ಸನ್ನಿವೇಶವು ಬೇರೆಯಾಗಿರುವುದೆಂದು ನಾವು ಊಹಿಸಿಕೊಳ್ಳಸಾಧ್ಯವಿದೆಯೊ? (ಕೊಲೊಸ್ಸೆ 3:12) ಹೀಗೆ, ನಮ್ಮ ಸಭೆಯಲ್ಲಿ ತಪ್ಪುಹೊರಿಸುವುದಕ್ಕೆ ಅನೇಕ ಕಾರಣಗಳು—ನಿಜವಾದ ಅಥವಾ ಊಹಿತ ತಪ್ಪುಗಳ ಬಗ್ಗೆ ನೋವಿನ ಅನಿಸಿಕೆಗಳು—ಇರುವಲ್ಲಿ, ಅಸಾಧಾರಣವಾದ ಯಾವುದೋ ಘಟನೆಯು ನಮ್ಮ ಸಭೆಯಲ್ಲಿ ನಡೆಯುತ್ತಿದೆ ಎಂಬ ತೀರ್ಮಾನಕ್ಕೆ ನಾವು ಬರಬಾರದು.

11. ಯಾವ ವಿಷಯದ ಬಗ್ಗೆ ಶಿಷ್ಯ ಯಾಕೋಬನು ನಮ್ಮನ್ನು ಎಚ್ಚರಿಸುತ್ತಾನೆ?

11 ನಮ್ಮ ಸಹೋದರರನ್ನು ಕ್ಷಮಿಸುವಂತೆ ಅಗತ್ಯಪಡಿಸುವ ಸನ್ನಿವೇಶಗಳನ್ನು ನಾವು ಕೆಲವೊಮ್ಮೆ ಎದುರಿಸಬಹುದು ಎಂಬುದನ್ನು ಯೇಸುವಿನ ಮಲತಮ್ಮನಾದ ಯಾಕೋಬನ ಮಾತುಗಳು ಸಹ ತೋರಿಸುತ್ತವೆ. “ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಯೋಗ್ಯವಾಗಿ ನಡೆದುಕೊಂಡು ಜ್ಞಾನದ ಲಕ್ಷಣವಾಗಿರುವ ಶಾಂತಗುಣದಿಂದ ಅದರ ಫಲವನ್ನು ತೋರಿಸಲಿ. ಆದರೆ ತೀಕ್ಷ್ಣವಾದ ಮತ್ಸರವೂ ಪಕ್ಷಭೇದವೂ ನಿಮ್ಮ ಹೃದಯದೊಳಗೆ ಇರುವಲ್ಲಿ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ.” (ಯಾಕೋಬ 3:13, 14) ಸತ್ಯ ಕ್ರೈಸ್ತರ ಹೃದಯಗಳಲ್ಲಿ ‘ತೀಕ್ಷ್ಣವಾದ ಮತ್ಸರ ಹಾಗೂ ಪಕ್ಷಭೇದವೊ?’ ಹೌದು, ಪ್ರಥಮ ಶತಮಾನದ ಸಭೆಯಲ್ಲಿ ಇಂತಹ ಗುಣಗಳು ಕಂಡುಬಂದಿದ್ದವು ಮತ್ತು ಇಂದು ಕೂಡ ಸಭೆಯಲ್ಲಿ ಇಂತಹ ಗುಣಗಳು ಕಂಡುಬರುವವು ಎಂಬುದನ್ನು ಯಾಕೋಬನ ಮಾತುಗಳು ಸ್ಪಷ್ಟವಾಗಿ ಸೂಚಿಸುತ್ತವೆ.

12. ಪುರಾತನ ಫಿಲಿಪ್ಪಿ ಸಭೆಯಲ್ಲಿ ಯಾವ ಸಮಸ್ಯೆಯು ಎದ್ದಿತು?

12 ಒಂದು ನೈಜ ಉದಾಹರಣೆಯು, ಇಬ್ಬರು ಅಭಿಷಿಕ್ತ ಕ್ರೈಸ್ತರನ್ನು ಒಳಗೂಡಿತ್ತು. ಪೌಲನೊಂದಿಗೆ ಪ್ರಯಾಸಪಟ್ಟು ಕೆಲಸಮಾಡಿದ ಸತ್ಕೀರ್ತಿ ಇವರಿಗಿತ್ತು. ಫಿಲಿಪ್ಪಿ ಸಭೆಯ ಸದಸ್ಯರಾಗಿದ್ದ ಯುವೊದ್ಯ ಹಾಗೂ ಸಂತುಕೆಯರ ಕುರಿತು ಓದಿರುವುದನ್ನು ನೀವು ಜ್ಞಾಪಿಸಿಕೊಳ್ಳಬಹುದು. ಆ ಸಂಗತಿಯನ್ನು ಸವಿವರವಾಗಿ ವರ್ಣಿಸದಿರುವುದಾದರೂ, ಅವರಿಬ್ಬರ ಮಧ್ಯೆ ಏನೋ ಸಮಸ್ಯೆಯಿತ್ತು ಎಂಬುದನ್ನು ಫಿಲಿಪ್ಪಿ 4:2, 3 ತೋರಿಸುತ್ತದೆ. ಇದು ಅವಿಚಾರದ ಒಂದು ನಿರ್ದಯ ನುಡಿಯಿಂದ, ಸಂಬಂಧಿಕನೊಬ್ಬನು ತನ್ನನ್ನು ಕಡೆಗಣಿಸಿದನೆಂದು ನೆನಸಿ, ಅಥವಾ ಸ್ಪರ್ಧಾತ್ಮಕ ಹೊಟ್ಟೆಕಿಚ್ಚಿನ ಯಾವುದೋ ರುಜುವಾತಿನಿಂದ ಈ ಸಮಸ್ಯೆಯು ಆರಂಭವಾಯಿತೊ? ಆ ಸಮಸ್ಯೆಯು ಯಾವುದೇ ರೀತಿಯದ್ದಾಗಿದ್ದರೂ, ಇದು ಎಷ್ಟು ಗಂಭೀರವಾಯಿತೆಂದರೆ, ಈ ಸುದ್ದಿಯು ರೋಮ್‌ನಲ್ಲಿದ್ದ ಪೌಲನ ಕಿವಿಗೂ ಬಿತ್ತು. ಈ ಇಬ್ಬರು ಆತ್ಮಿಕ ಸಹೋದರಿಯರ ನಡುವೆ ಮಾತುಕತೆಯೇ ನಿಂತುಹೋಗಿದ್ದಿರಬಹುದು, ಮತ್ತು ಕೂಟಗಳಲ್ಲಿ ಅವರು ಪರಸ್ಪರ ದೂರವಿದ್ದಿರಬಹುದು, ಅಥವಾ ತಮ್ಮ ಮಿತ್ರರೊಂದಿಗೆ ಒಬ್ಬರು ಇನ್ನೊಬ್ಬರ ಕುರಿತು ನಿಷ್ಠುರವಾಗಿ ಮಾತಾಡುವಂತೆ ಮಾಡಿದ್ದಿರಬಹುದು.

13. ಯುವೊದ್ಯ ಮತ್ತು ಸಂತುಕೆಯರ ಮಧ್ಯೆ ಇದ್ದ ಸಮಸ್ಯೆಯು ಹೇಗೆ ಬಗೆಹರಿಸಲ್ಪಟ್ಟಿತು, ಮತ್ತು ಇದು ನಮಗೆ ಯಾವ ಪಾಠವನ್ನು ಕಲಿಸುತ್ತದೆ?

13 ನಿಮ್ಮ ಸಭೆಯಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಸಂಭವಿಸಿದ, ಅಥವಾ ನೀವು ಸಹ ಒಳಗೂಡಿದ್ದ ಯಾವುದೋ ಒಂದು ಘಟನೆಯಂತೆ, ಈ ಮೇಲಿನ ವಿಷಯಗಳಲ್ಲಿ ಯಾವುದಾದರೂ ನಿಮಗೆ ಚಿರಪರಿಚಿತವಾಗಿ ಕಾಣುತ್ತದೋ? ಆ ರೀತಿಯ ಸಮಸ್ಯೆಯು ಇಂದು ಸಹ ಸ್ವಲ್ಪಮಟ್ಟಿಗೆ ಅಸ್ತಿತ್ವದಲ್ಲಿರಬಹುದು. ಹೀಗಿರುವಲ್ಲಿ, ನಾವೇನು ಮಾಡಸಾಧ್ಯವಿದೆ? ಆ ಪುರಾತನ ಉದಾಹರಣೆಯಲ್ಲಿ, “ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರ್ರಿ” ಎಂದು ಪೌಲನು ಆ ಇಬ್ಬರು ಸಮರ್ಪಿತ ಸಹೋದರಿಯರನ್ನು ಪ್ರೋತ್ಸಾಹಿಸಿದನು. ಈ ವಿಷಯವನ್ನು ಚರ್ಚಿಸಲು, ತಪ್ಪಭಿಪ್ರಾಯಗಳನ್ನು ಅಥವಾ ಭಿನ್ನತೆಗಳನ್ನು ಬಗೆಹರಿಸಲು, ಪರಸ್ಪರ ಮನಃಪೂರ್ವಕವಾಗಿ ಕ್ಷಮಿಸಲು, ಮತ್ತು ಯೆಹೋವನ ಕ್ಷಮಾಭಾವವನ್ನು ಅನುಕರಿಸಲು ಅವರಿಬ್ಬರೂ ಒಪ್ಪಿದ್ದಿರಬಹುದು. ಯುವೊದ್ಯ ಮತ್ತು ಸಂತುಕೆಯರು ನಿಜವಾಗಿಯೂ ಇದರಲ್ಲಿ ಸಫಲರಾದರು ಎಂಬುದರಲ್ಲಿ ಅನುಮಾನವೇ ಇಲ್ಲ, ತದ್ರೀತಿಯಲ್ಲಿ ನಾವು ಸಹ ಸಫಲರಾಗಸಾಧ್ಯವಿದೆ. ಅಂತಹ ಕ್ಷಮಿಸುವ ಮನೋಭಾವವನ್ನು ಅನುಕರಿಸಿ, ಇಂದು ಸಹ ಯಶಸ್ವಿಯನ್ನು ಪಡೆದುಕೊಳ್ಳಸಾಧ್ಯವಿದೆ.

ರಾಜಿಮಾಡಿಕೊಳ್ಳಿರಿ—ಕ್ಷಮಿಸಿರಿ

14. ವೈಯಕ್ತಿಕ ಮನಸ್ತಾಪಗಳನ್ನು ಹೇಗೆ ಅಲಕ್ಷಿಸಸಾಧ್ಯವಿದೆ, ಮತ್ತು ಹಾಗೆ ಮಾಡುವುದು ಏಕೆ ಅತ್ಯುತ್ತಮವಾದದ್ದಾಗಿದೆ?

14 ಇನ್ನೊಬ್ಬ ಕ್ರೈಸ್ತನೊಂದಿಗೆ ನಿಮಗೆ ಸಮಸ್ಯೆಯಿರುವಾಗ, ಅವನನ್ನು ಕ್ಷಮಿಸಲು ನಿಜವಾಗಿಯೂ ಯಾವುದರ ಅಗತ್ಯವಿದೆ? ಮುಚ್ಚುಮರೆಯಿಲ್ಲದೆ ಹೇಳುವಲ್ಲಿ, ಇದಕ್ಕಾಗಿ ಯಾವುದೇ ರೀತಿಯ ಸರಳ ವಿಧಾನವು ತಿಳಿಸಲ್ಪಟ್ಟಿಲ್ಲ, ಆದರೆ ಸಹಾಯಕರವಾದ ಉದಾಹರಣೆಗಳನ್ನು ಹಾಗೂ ವಾಸ್ತವಿಕವಾದ ಸಲಹೆಯನ್ನು ಬೈಬಲು ಕೊಡುತ್ತದೆ. ಅಂಗೀಕರಿಸಲು ಹಾಗೂ ಅನ್ವಯಿಸಲು ಕಷ್ಟಕರವಾಗಿರುವುದಾದರೂ, ಪ್ರಾಮುಖ್ಯವಾದ ಒಂದು ಶಿಫಾರಸ್ಸು ಏನೆಂದರೆ, ಆ ಸಂಗತಿಯನ್ನು ಮರೆತುಬಿಡುವುದು ಅಂದರೆ ಅದರ ಬಗ್ಗೆ ಗಮನಕೊಡದಿರುವುದೇ ಆಗಿದೆ. ಯುವೊದ್ಯ ಮತ್ತು ಸಂತುಕೆಯರ ಮಧ್ಯೆ ಇದ್ದಂತೆ ಈಗಲೂ ಕೆಲವೊಮ್ಮೆ ಸಮಸ್ಯೆಯು ಅಸ್ತಿತ್ವದಲ್ಲಿರುವಾಗ, ತಪ್ಪು ಮಾಡಿರುವುದು ನಾನಲ್ಲ ಎಂದು ಒಳಗೂಡಿರುವ ಇಬ್ಬರೂ ವ್ಯಕ್ತಿಗಳು ಭಾವಿಸುತ್ತಾರೆ. ಆದುದರಿಂದ, ಅಂತಹ ಒಂದು ಸನ್ನಿವೇಶದಲ್ಲಿ, ಇನ್ನೊಬ್ಬ ಕ್ರೈಸ್ತನೇ ಮುಖ್ಯವಾಗಿ ದೂಷಣಾರ್ಹನು ಅಥವಾ ಹೆಚ್ಚು ಹಾನಿಯನ್ನು ಮಾಡಿರುವುದು ಅವನೇ ಎಂದು ನೀವು ಆಲೋಚಿಸಬಹುದು. ಆದರೂ, ಕೇವಲ ಕ್ಷಮಿಸಿಬಿಡುವ ಮೂಲಕ ನೀವು ಸಂಗತಿಯನ್ನು ಮರೆತುಬಿಡಸಾಧ್ಯವಿದೆಯೊ? ಇನ್ನೊಬ್ಬ ಕ್ರೈಸ್ತನೇ ಹೆಚ್ಚು ತಪ್ಪನ್ನು ಮಾಡಿದ್ದಾನೆ ಅಥವಾ ಇಡೀ ತಪ್ಪಿಗೆ ಅವನೇ ಕಾರಣನಾಗಿದ್ದಾನೆ ಎಂದು ಒಂದುವೇಳೆ ನಿಮಗನಿಸುವಲ್ಲಿ, ಆಗ ಆ ಸಂಗತಿಯನ್ನು ಕ್ಷಮಿಸಿ, ಅದನ್ನು ಅಲ್ಲಿಗೇ ಕೊನೆಗೊಳಿಸುವ ಪ್ರಧಾನ ಸ್ಥಾನದಲ್ಲಿ ನೀವಿದ್ದೀರಿ ಎಂಬುದನ್ನು ನೀವು ಅರ್ಥಮಾಡಿಕೊಳ್ಳತಕ್ಕದ್ದು.

15, 16. (ಎ) ಮೀಕನು ಯೆಹೋವನನ್ನು ಯಾವ ಮಾತುಗಳಿಂದ ವರ್ಣಿಸಿದನು? (ಬಿ) ದೇವರು “ದ್ರೋಹವನ್ನು ಲಕ್ಷಿಸದವನು” ಎಂಬುದರ ಅರ್ಥವೇನು?

15 ಕ್ಷಮಿಸುವುದರಲ್ಲಿ ನಮಗೆ ಮಾದರಿಯಾಗಿರುವ ದೇವರಿಂದ ನಮ್ಮ ದೃಷ್ಟಿಯನ್ನು ಕದಲಿಸದಿರೋಣ. (ಎಫೆಸ 4:32–5:1) ತಪ್ಪುಗಳನ್ನು ಲಕ್ಷಿಸದೆ ಬಿಟ್ಟುಬಿಡುವ ಆತನ ಆದರ್ಶ ಮಾದರಿಯ ಕುರಿತು ಪ್ರವಾದಿಯಾದ ಮೀಕನು ಬರೆದುದು: “ನಿನಗೆ ಯಾವ ದೇವರು ಸಮಾನ? ನೀನು ನಿನ್ನ ಸ್ವಾಸ್ತ್ಯದವರಲ್ಲಿ ಉಳಿದವರ ಅಪರಾಧವನ್ನು ಕ್ಷಮಿಸುವವನೂ ಅವರ ದ್ರೋಹವನ್ನು ಲಕ್ಷಿಸದವನೂ ಆಗಿದ್ದೀ; ಹೌದು ನಮ್ಮ ದೇವರು ನಿತ್ಯವೂ ಕೋಪಿಸುವವನಲ್ಲ, ಕರುಣೆಯೇ ಆತನಿಗೆ ಇಷ್ಟ.”—ಮೀಕ 7:18.

16 ‘ದ್ರೋಹವನ್ನು ಲಕ್ಷಿಸದವನು’ ಎಂದು ಯೆಹೋವನನ್ನು ವರ್ಣಿಸುವಾಗ, ಆತನು ತಪ್ಪುಗಳನ್ನು ಜ್ಞಾಪಿಸಿಕೊಳ್ಳಲು ಅಸಮರ್ಥನಾಗಿದ್ದಾನೆ, ಅಂದರೆ ಒಂದು ರೀತಿಯ ವಿಶಿಷ್ಟ ಮರೆವು ಆತನಿಗಿದೆ ಎಂದು ಬೈಬಲು ಹೇಳುತ್ತಿಲ್ಲ. ಸಂಸೋನ ಹಾಗೂ ದಾವೀದನ ಉದಾಹರಣೆಗಳನ್ನು ಪರಿಗಣಿಸಿರಿ. ಅವರಿಬ್ಬರೂ ಗಂಭೀರವಾದ ತಪ್ಪುಗಳನ್ನು ಮಾಡಿದ್ದರು. ಬಹಳ ಸಮಯದ ನಂತರವೂ ದೇವರು ಅವರ ಪಾಪಗಳನ್ನು ಜ್ಞಾಪಿಸಿಕೊಳ್ಳಶಕ್ತನಾಗಿದ್ದನು; ಅವರ ಪಾಪಗಳಲ್ಲಿ ಕೆಲವು ನಮಗೂ ಗೊತ್ತಿವೆ, ಏಕೆಂದರೆ ಯೆಹೋವನು ಅವುಗಳನ್ನು ಬೈಬಲಿನಲ್ಲಿ ದಾಖಲಿಸಿದ್ದಾನೆ. ಆದರೂ, ಅವರಿಬ್ಬರನ್ನು ಅನುಕರಿಸಲು ಯೋಗ್ಯವಾದ ನಂಬಿಕೆಯ ಮಾದರಿಗಳೋಪಾದಿ ನಮ್ಮ ಮುಂದೆ ಪ್ರಸ್ತುತಪಡಿಸುವ ಮೂಲಕ, ನಮ್ಮ ಕ್ಷಮಿಸುವ ದೇವರು ಅವರಿಬ್ಬರಿಗೆ ಕರುಣೆಯನ್ನು ತೋರಿಸಿದನು.—ಇಬ್ರಿಯ 11:32; 12:1.

17. (ಎ) ಇತರರ ತಪ್ಪುಗಳನ್ನು ಅಥವಾ ಲೋಪದೋಷಗಳನ್ನು ಅಲಕ್ಷಿಸಲು ಯಾವ ರೀತಿಯ ಮನೋಭಾವವು ನಮಗೆ ಸಹಾಯ ಮಾಡಬಲ್ಲದು? (ಬಿ) ನಾವು ಹಾಗೆ ಮಾಡಲು ಪ್ರಯತ್ನಿಸುವಲ್ಲಿ, ಹೇಗೆ ಯೆಹೋವ ದೇವರನ್ನು ಅನುಕರಿಸುತ್ತಿರುವೆವು? (ಪಾದಟಿಪ್ಪಣಿಯನ್ನು ನೋಡಿರಿ.)

17 ಹೌದು, ದಾವೀದನು ಅನೇಕಾವರ್ತಿ ಯೆಹೋವನ ಬಳಿ ತನ್ನ ತಪ್ಪುಗಳನ್ನು ಕ್ಷಮಿಸುವಂತೆ ಬೇಡಿಕೊಂಡಾಗ, ಆತನು ಅವನ ತಪ್ಪುಗಳನ್ನು ‘ಅಲಕ್ಷಿಸಲು’a ಶಕ್ತನಾಗಿದ್ದನು. (2 ಸಮುವೇಲ 12:13; 24:10) ಅಪರಿಪೂರ್ಣ ಮಾನವರೋಪಾದಿ ನಮ್ಮ ಜೊತೆ ಸೇವಕರು ತೋರಿಸುವ ತಾತ್ಸಾರಭಾವವನ್ನು ಹಾಗೂ ಅಸಮಾಧಾನಗಳನ್ನು ಮನಃಪೂರ್ವಕವಾಗಿ ಅಲಕ್ಷಿಸುವ ಮೂಲಕ ನಾವು ದೇವರನ್ನು ಅನುಕರಿಸಬಲ್ಲೆವೊ? ಈಗ ತಾನೇ ಮೇಲೆ ಹಾರಲು ಆರಂಭಿಸುತ್ತಿರುವ ಒಂದು ಜೆಟ್‌ ವಿಮಾನದಲ್ಲಿ ನೀವಿದ್ದೀರಿ ಎಂದು ಊಹಿಸಿಕೊಳ್ಳಿ. ಹೊರಗೆ ನೋಡಿದಾಗ, ರನ್‌ವೇ ಬಳಿ ನಿಂತುಕೊಂಡಿರುವ ನಿಮ್ಮ ಪರಿಚಯಸ್ಥಳೊಬ್ಬಳು, ನಾಲಿಗೆಯನ್ನು ಹೊರಚಾಚಿ ನಿಮ್ಮನ್ನು ಅಣಕಿಸುತ್ತಿರುವುದು ನಿಮ್ಮ ದೃಷ್ಟಿಗೆ ಬೀಳುತ್ತದೆ. ಅವಳಿಗೆ ನಿಮ್ಮ ಮೇಲೆ ಕೋಪ ಬಂದಿತ್ತು ಎಂಬುದು ನಿಮಗೆ ಗೊತ್ತಿದೆ, ಮತ್ತು ಅವಳು ಉದ್ದೇಶಪೂರ್ವಕವಾಗಿ ಹಾಗೆ ಮಾಡಿರಬಹುದು ಎಂದು ನಿಮಗನಿಸುತ್ತದೆ. ಅಥವಾ ಅವಳು ನಿಮ್ಮ ಬಗ್ಗೆ ಯೋಚಿಸುತ್ತಿಲ್ಲದಿರಬಹುದು. ಏನೇ ಆಗಲಿ, ವಿಮಾನವು ಮೇಲೆ ಮೇಲೆ ಹೋದಂತೆಲ್ಲಾ, ಆ ಸ್ತ್ರೀ ನಿಮ್ಮಿಂದ ದೂರವಾಗಿ, ಕಡೆಗೆ ಒಂದು ಸಣ್ಣ ಚುಕ್ಕೆಯಂತೆ ಕಾಣುತ್ತಾಳೆ. ಒಂದೇ ತಾಸಿನೊಳಗೆ ನೀವು ನೂರಾರು ಕಿಲೊಮೀಟರುಗಳಷ್ಟು ದೂರದಲ್ಲಿರುತ್ತೀರಿ, ಮತ್ತು ಅವಳು ನಿಮ್ಮನ್ನು ಅಣಕಿಸಿದ್ದು ನಿಮಗೆ ಕಾಣಿಸದಷ್ಟು ದೂರವಾಗುತ್ತದೆ. ತದ್ರೀತಿಯಲ್ಲಿ, ಅನೇಕವೇಳೆ ನಾವು ಯೆಹೋವನಂತೆ ಇತರರ ತಪ್ಪುಗಳನ್ನು ಅಲಕ್ಷಿಸಲು ಪ್ರಯತ್ನಿಸುವಲ್ಲಿ, ಇತರರನ್ನು ಕ್ಷಮಿಸಲು ಇದು ನಮಗೆ ಸಹಾಯ ಮಾಡುವುದು. (ಜ್ಞಾನೋಕ್ತಿ 19:11) ಈಗಿನಿಂದ ಹತ್ತು ವರ್ಷಗಳಲ್ಲಿ ಅಥವಾ ಸಹಸ್ರವರ್ಷದಲ್ಲಿನ ಇನ್ನೂರು ವರ್ಷಗಳಲ್ಲಿ, ಈ ಅಪರಾಧವು ತುಂಬ ಕ್ಷುಲ್ಲಕವಾಗಿ ಕಾಣುವುದಿಲ್ಲವೊ? ಹಾಗಾದರೆ ಇತರರ ತಪ್ಪುಗಳನ್ನು ಏಕೆ ಅಲಕ್ಷಿಸಬಾರದು?

18. ಒಂದು ತಪ್ಪನ್ನು ಕ್ಷಮಿಸುವುದು ನಮ್ಮಿಂದ ಅಸಾಧ್ಯವೆಂದು ನಮಗೆ ಅನಿಸುವಲ್ಲಿ, ನಾವು ಯಾವ ಬುದ್ಧಿವಾದವನ್ನು ಅನ್ವಯಿಸಸಾಧ್ಯವಿದೆ?

18 ಯಾವುದೋ ಒಂದು ಸಂದರ್ಭದಲ್ಲಿ ನೀವು ಒಂದು ಘಟನೆಯ ಬಗ್ಗೆ ಪ್ರಾರ್ಥಿಸಿ, ಅದನ್ನು ಕ್ಷಮಿಸಲು ಪ್ರಯತ್ನಿಸಿದ್ದಿರಬಹುದಾದರೂ, ಆ ತಪ್ಪನ್ನು ಕ್ಷಮಿಸುವುದು ಅಸಾಧ್ಯ ಎಂಬ ಅನಿಸಿಕೆ ನಿಮಗಾಗುತ್ತದೆ. ಆಗ ಏನು ಮಾಡಬೇಕು? ಇಬ್ಬರ ಮಧ್ಯೆ ರಾಜಿಮಾಡಿಕೊಳ್ಳಲಿಕ್ಕಾಗಿ, ಆ ಇನ್ನೊಬ್ಬ ವ್ಯಕ್ತಿಯ ಬಳಿಗೆ ಹೋಗಿ, ಖಾಸಗಿಯಾಗಿ ಮನಸ್ತಾಪಗಳನ್ನು ಬಗೆಹರಿಸಲು ಪ್ರಯತ್ನಿಸುವಂತೆ ಯೇಸು ಉತ್ತೇಜಿಸಿದನು. “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.”—ಮತ್ತಾಯ 5:23, 24.

19. ನಮ್ಮ ಸಹೋದರರೊಂದಿಗೆ ರಾಜಿಮಾಡಿಕೊಳ್ಳಲು ಪ್ರಯತ್ನಿಸುವಾಗ, ನಮಗೆ ಯಾವ ಮನೋಭಾವವಿರಬೇಕು ಮತ್ತು ಯಾವ ಮನೋಭಾವವಿರಬಾರದು?

19 ಗಮನಾರ್ಹವಾಗಿಯೇ, ನೀವು ನಿಮ್ಮ ಸಹೋದರನ ಬಳಿಗೆ ಹೋಗಿ, ನೀವು ಮಾಡಿದ್ದು ಸರಿ ಮತ್ತು ಅವನು ಮಾಡಿದ್ದು ತಪ್ಪು ಎಂದು ಅವನಿಗೆ ಮನಗಾಣಿಸಿರಿ ಎಂಬುದಾಗಿ ಯೇಸು ಹೇಳಲಿಲ್ಲ. ಬಹುಶಃ ತಪ್ಪು ಅವನದ್ದೇ ಇರಬಹುದು. ಅಥವಾ ಇಬ್ಬರದ್ದೂ ತಪ್ಪಿರಬಹುದು. ಏನೇ ಆಗಲಿ, ಇನ್ನೊಬ್ಬ ವ್ಯಕ್ತಿಯು ಸೋಲನ್ನೊಪ್ಪಿಕೊಳ್ಳುವಂತೆ ಮಾಡುವುದು, ಅಥವಾ ಅವನು ನಿಮ್ಮ ಕಾಲಮೇಲೆ ಬೀಳುವಂತೆ ಮಾಡುವುದು ನಿಮ್ಮ ಗುರಿಯಾಗಿರಬಾರದು. ಈ ರೀತಿಯಲ್ಲಿ ನೀವು ಚರ್ಚೆಯನ್ನು ಆರಂಭಿಸುವಲ್ಲಿ, ಖಂಡಿತವಾಗಿಯೂ ನೀವು ಸೋಲನ್ನು ಅನುಭವಿಸುವಿರಿ. ನಿಜವಾದ ಅಥವಾ ಊಹಿಸಿಕೊಂಡ ತಪ್ಪಿನ ಪ್ರತಿಯೊಂದು ವಿವರವನ್ನು ಪುನರ್ವಿಮರ್ಶಿಸುವುದು ಸಹ ನಮ್ಮ ಗುರಿಯಾಗಿರಬಾರದು. ಕ್ರೈಸ್ತ ಪ್ರೀತಿಯ ಮನೋಭಾವವು ಒಳಗೂಡಿರುವ ಶಾಂತ ಚರ್ಚೆಯು, ಸಮಸ್ಯೆಯ ಕಾರಣವು ತಪ್ಪಭಿಪ್ರಾಯವೆಂದು ತಿಳಿಯಪಡಿಸುವಾಗ, ಆ ಸಮಸ್ಯೆಯನ್ನು ಬಗೆಹರಿಸಲು ನೀವಿಬ್ಬರೂ ಪ್ರಯತ್ನಿಸಸಾಧ್ಯವಿದೆ. ಆದರೆ, ಒಂದು ಚರ್ಚೆಯು ಯಾವುದೇ ರೀತಿಯ ಏಕಾಭಿಪ್ರಾಯಕ್ಕೆ ನಡಿಸುವುದಿಲ್ಲ ಎಂದಿಟ್ಟುಕೊಳ್ಳಿ, ಆಗ ಪೂರ್ತಿ ಏಕಾಭಿಪ್ರಾಯವು ಯಾವಾಗಲೂ ಬೇಕೇಬೇಕೋ? ನಾವಿಬ್ಬರೂ ಯಥಾರ್ಥಭಾವದಿಂದ ನಮ್ಮ ಕ್ಷಮಿಸುವ ದೇವರ ಸೇವೆಮಾಡಲು ಬಯಸುತ್ತೇವೆ ಎಂದು ಕಡಿಮೆಪಕ್ಷ ನೀವಿಬ್ಬರೂ ಒಪ್ಪಿಕೊಳ್ಳುವುದು ಉತ್ತಮವಾಗಿರುವುದಿಲ್ಲವೊ? ಆ ವಾಸ್ತವಿಕತೆಯನ್ನು ನೀವು ಎದುರಿಸುವಾಗ, “ನನ್ನನ್ನು ಕ್ಷಮಿಸು, ನನ್ನಿಂದ ತಪ್ಪಾಯಿತು, ನಮ್ಮ ಅಪರಿಪೂರ್ಣತೆಯಿಂದಾಗಿ ನಮ್ಮಲ್ಲಿ ಈ ಮನಸ್ತಾಪ ಉಂಟಾಯಿತು. ದಯವಿಟ್ಟು ಈ ವಿಷಯವನ್ನು ಸಂಪೂರ್ಣವಾಗಿ ಮರೆತುಬಿಡೋಣ” ಎಂದು ಇಬ್ಬರೂ ಮನಃಪೂರ್ವಕವಾಗಿ ಹೇಳಲು ಸುಲಭವಾಗಬಹುದು.

20. ಅಪೊಸ್ತಲರ ಉದಾಹರಣೆಯಿಂದ ನಾವು ಯಾವ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ?

20 ಅಪೊಸ್ತಲರ ಮಧ್ಯೆಯೂ ಮನಸ್ತಾಪಗಳಿದ್ದವು ಎಂಬುದನ್ನು ಜ್ಞಾಪಕದಲ್ಲಿಡಿರಿ. ಅವರಲ್ಲಿ ಕೆಲವರು ಮಹಾ ಪದವಿಯನ್ನು ಪಡೆದುಕೊಳ್ಳುವ ಆಕಾಂಕ್ಷೆಯನ್ನಿಟ್ಟುಕೊಂಡಿದ್ದರು. (ಮಾರ್ಕ 10:35-39; ಲೂಕ 9:46; 22:24-26) ಇದು ಉದ್ವೇಗವನ್ನು, ಅಂದರೆ ನೋವಿನ ಅನಿಸಿಕೆಗಳನ್ನು ಅಥವಾ ತೀವ್ರ ಅಸಮಾಧಾನವನ್ನು ಉಂಟುಮಾಡಿದ್ದಿರಬಹುದು. ಆದರೆ ಕಾಲಕ್ರಮೇಣ ಅವರು ಅಂತಹ ಭಿನ್ನತೆಗಳನ್ನು ಅಲಕ್ಷಿಸಿ, ಒಗ್ಗಟ್ಟಾಗಿ ಕೆಲಸಮಾಡಲು ಶಕ್ತರಾದರು. ಸಮಯಾನಂತರ ಅವರಲ್ಲಿ ಒಬ್ಬನು ಬರೆದುದು: “ಜೀವದಲ್ಲಿ ಸಂತೋಷಪಟ್ಟು ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನೂ ವಂಚನೆಯ ಮಾತುಗಳನ್ನಾಡದಂತೆ ತುಟಿಗಳನ್ನೂ ಬಿಗಿಹಿಡಿಯಲಿ. ಅವನು ಕೆಟ್ಟದ್ದನ್ನು ಬಿಟ್ಟು ಒಳ್ಳೇದನ್ನು ಮಾಡಲಿ; ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲಿ.”—1 ಪೇತ್ರ 3:10, 11.

21. ಕ್ಷಮಿಸುವುದರ ವಿಷಯದಲ್ಲಿ ಯೇಸು ಯಾವ ವಿಶಿಷ್ಟ ಸಲಹೆಯನ್ನು ಕೊಟ್ಟನು?

21 ಈ ಮುಂಚೆ ನಾವು ಚಕ್ರವೊಂದರ ಒಂದು ಪಾರ್ಶ್ವವನ್ನು ಮಾತ್ರ ಗಮನಿಸಿದೆವು: ಈ ಹಿಂದೆ ನಾವು ಮಾಡಿದ ಅನೇಕ ಪಾಪಗಳನ್ನು ದೇವರು ಕ್ಷಮಿಸಿದನು, ಆದುದರಿಂದ ನಾವು ಆತನನ್ನು ಅನುಕರಿಸಬೇಕು ಮತ್ತು ನಮ್ಮ ಸಹೋದರರನ್ನು ಕ್ಷಮಿಸಬೇಕು. (ಕೀರ್ತನೆ 103:12; ಯೆಶಾಯ 43:25) ಆದರೆ ಈ ಚಕ್ರಕ್ಕೆ ಇನ್ನೊಂದು ಪಾರ್ಶ್ವವಿದೆ. ಮಾದರಿ ಪ್ರಾರ್ಥನೆಯನ್ನು ಕಲಿಸಿದ ಬಳಿಕ ಯೇಸು ಹೇಳಿದ್ದು: “ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು.” ಒಂದು ವರ್ಷದ ಬಳಿಕ, ತನ್ನ ಶಿಷ್ಯರಿಗೆ ಪ್ರಾರ್ಥಿಸಲು ಕಲಿಸಿದಾಗ ಅವನು ಅದರ ಸಾರಾಂಶವನ್ನು ಪುನಃ ಹೇಳಿದನು: “ನಮಗೆ ತಪ್ಪುಮಾಡಿರುವ ಪ್ರತಿಯೊಬ್ಬನನ್ನು ನಾವು ಕ್ಷಮಿಸುತ್ತೇವಾದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು.” (ಮತ್ತಾಯ 6:12, 14; ಲೂಕ 11:4) ತದನಂತರ, ತಾನು ಮರಣಪಡುವ ಕೆಲವೇ ದಿನಗಳಿಗೆ ಮುಂಚೆ ಯೇಸು ಹೇಳಿದ್ದು: “ನೀವು ನಿಂತುಕೊಂಡು ಪ್ರಾರ್ಥನೆಮಾಡುವಾಗೆಲ್ಲಾ ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಅವನಿಗೆ ಕ್ಷಮಿಸಿರಿ; ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ನಿಮಗೆ ಕ್ಷಮಿಸಿಬಿಡುವನು.”—ಮಾರ್ಕ 11:25.

22, 23. ನಾವು ಮನಃಪೂರ್ವಕವಾಗಿ ಕ್ಷಮಿಸುವುದು, ನಮ್ಮ ಭವಿಷ್ಯತ್ತಿನ ಮೇಲೆ ಹೇಗೆ ಪರಿಣಾಮವನ್ನು ಬೀರಬಲ್ಲದು?

22 ಹೌದು, ನಾವು ದೇವರಿಂದ ಕ್ಷಮಾಪಣೆಯನ್ನು ಪಡೆದುಕೊಳ್ಳುತ್ತಾ ಇರುವ ನಮ್ಮ ಪ್ರತೀಕ್ಷೆಗಳು, ನಾವು ನಮ್ಮ ಸಹೋದರರನ್ನು ಮನಃಪೂರ್ವಕವಾಗಿ ಕ್ಷಮಿಸುವುದರ ಮೇಲೆ ಬಹಳಮಟ್ಟಿಗೆ ಹೊಂದಿಕೊಂಡಿವೆ. ಕ್ರೈಸ್ತರ ಮಧ್ಯೆ ಒಂದು ವೈಯಕ್ತಿಕ ಸಮಸ್ಯೆಯು ಉದ್ಭವಿಸುವಾಗ, ಸ್ವತಃ ಹೀಗೆ ಕೇಳಿಕೊಳ್ಳಿರಿ: ‘ಯಾವುದೋ ಒಂದು ಚಿಕ್ಕ ತಪ್ಪು, ಅಥವಾ ಕ್ಷುಲ್ಲಕ ಅಪರಾಧ, ಇಲ್ಲವೆ ಮಾನವ ಅಪರಿಪೂರ್ಣತೆಯ ತೋರ್ಪಡಿಸುವಿಕೆಯಿಂದಾಗಿ, ಒಬ್ಬ ಸಹೋದರ ಅಥವಾ ಸಹೋದರಿಯು ಮಾಡಿದ್ದೇ ತಪ್ಪು ಎಂದು ಸಾಧಿಸುವುದಕ್ಕಿಂತಲೂ, ದೇವರ ಕ್ಷಮಾಪಣೆಯನ್ನು ಪಡೆದುಕೊಳ್ಳುವುದು ಹೆಚ್ಚು ಪ್ರಾಮುಖ್ಯವಾದ ಸಂಗತಿಯಾಗಿರುವುದಿಲ್ಲವೊ?’ ಇದಕ್ಕೆ ಉತ್ತರವು ನಿಮಗೇ ಗೊತ್ತಿದೆ.

23 ಹಾಗಾದರೆ, ಒಂದು ಚಿಕ್ಕ ವೈಯಕ್ತಿಕ ತಪ್ಪು ಅಥವಾ ಸಮಸ್ಯೆಗಿಂತಲೂ ವಿಷಯವು ಹೆಚ್ಚು ಗಂಭೀರವಾಗಿರುವಲ್ಲಿ ಆಗೇನು? ಮತ್ತು ಮತ್ತಾಯ 18:15-18ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಸಲಹೆಯು ಯಾವಾಗ ಅನ್ವಯವಾಗುತ್ತದೆ? ಮುಂದಿನ ಲೇಖನದಲ್ಲಿ ನಾವು ಈ ವಿಷಯಗಳನ್ನು ಪರಿಗಣಿಸೋಣ.

[ಅಧ್ಯಯನ ಪ್ರಶ್ನೆಗಳು]

a ಒಬ್ಬ ವಿದ್ವಾಂಸನು ಹೇಳುವುದೇನೆಂದರೆ, ಮೀಕ 7:18ರಲ್ಲಿ ಉಪಯೋಗಿಸಲ್ಪಟ್ಟಿರುವ ಹೀಬ್ರು ರೂಪಕಾಲಂಕಾರವು, “ತಾನು ನೋಡಲು ಇಷ್ಟಪಡದಿರುವಂತಹ ಒಂದು ವಸ್ತುವನ್ನು ಕಣ್ಣೆತ್ತಿಯೂ ನೋಡದೆ ಮುಂದೆ ಸಾಗುವಂತಹ ಒಬ್ಬ ಪ್ರಯಾಣಿಕನ ನಡತೆಯಿಂದ ತೆಗೆದುಕೊಳ್ಳಲ್ಪಟ್ಟದ್ದಾಗಿದೆ. ದೇವರು ಪಾಪವನ್ನು ಗಮನಿಸುವುದಿಲ್ಲ ಅಥವಾ ಒಂದು ಘಟನೆಯನ್ನು ತುಂಬ ಕ್ಷುಲ್ಲಕವಾಗಿ ಕಾಣುತ್ತಾನೆ ಇಲ್ಲವೆ ಅದಕ್ಕೆ ಹೆಚ್ಚು ಪ್ರಮುಖತೆಯನ್ನು ಕೊಡುವುದಿಲ್ಲ ಎಂಬುದು ಇದರ ಅರ್ಥವಲ್ಲ. ಬದಲಾಗಿ, ಕೆಲವೊಂದು ಘಟನೆಗಳನ್ನು ಆತನು ಶಿಕ್ಷೆಗೆ ಅರ್ಹವಾದದ್ದಾಗಿ ಪರಿಗಣಿಸುವುದಿಲ್ಲ; ಆ ಪಾಪಕ್ಕೆ ಆತನು ಶಿಕ್ಷೆಯನ್ನು ಕೊಡುವುದಿಲ್ಲ, ಅದನ್ನು ಕ್ಷಮಿಸುತ್ತಾನೆ.”—ನ್ಯಾಯಸ್ಥಾಪಕರು 3:26; 1 ಸಮುವೇಲ 16:8.

ನಿಮಗೆ ನೆನಪಿದೆಯೊ?

◻ ಕ್ಷಮಿಸುವ ವಿಷಯದಲ್ಲಿ ಯೆಹೋವನು ಹೇಗೆ ನಮಗೆ ಒಂದು ಮಾದರಿಯನ್ನಿಡುತ್ತಾನೆ?

◻ ನಮ್ಮ ಸಭೆಯಲ್ಲಿರುವವರ ಕುರಿತು ನಾವು ಏನನ್ನು ಜ್ಞಾಪಕದಲ್ಲಿಟ್ಟುಕೊಳ್ಳತಕ್ಕದ್ದು?

◻ ಅಧಿಕಾಂಶ ಸಂದರ್ಭಗಳಲ್ಲಿ, ತಪ್ಪುಗಳು ಅಥವಾ ಅಪರಾಧಗಳ ಕುರಿತು ನಾವು ಏನು ಮಾಡಲು ಶಕ್ತರಾಗಿರಬೇಕು?

◻ ಅಗತ್ಯವಿರುವಲ್ಲಿ, ನಮ್ಮ ಸಹೋದರನೊಂದಿಗೆ ರಾಜಿಮಾಡಿಕೊಳ್ಳಲಿಕ್ಕಾಗಿ ನಾವು ಏನು ಮಾಡಸಾಧ್ಯವಿದೆ?

[ಪುಟ 15 ರಲ್ಲಿರುವ ಚಿತ್ರ]

ಒಬ್ಬ ಕ್ರೈಸ್ತಳೊಂದಿಗೆ ಮನಸ್ತಾಪ ಉಂಟಾದಾಗ, ಅದನ್ನು ಅಲಕ್ಷಿಸಲು ಪ್ರಯತ್ನಿಸಿರಿ; ಸಮಯ ಕಳೆದಂತೆ ಆ ಘಟನೆಯು ಸಹ ನೆನಪಿನಾಳದಿಂದ ಮರೆಯಾಗುತ್ತದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ