‘ದೇವರ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸಿರಿ’
‘ನೀನು ದೇವರ ದೃಷ್ಟಿಯಲ್ಲಿ ಯೋಗ್ಯನಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸಗಾರನೂ ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ಉಪದೇಶಿಸುವವನೂ ಆಗಿರು.’—2 ತಿಮೊಥೆಯ 2:15.
1, 2. (ಎ) ಕೆಲಸಗಾರರಿಗೆ ಏಕೆ ಉಪಕರಣಗಳ ಆವಶ್ಯಕತೆಯಿದೆ? (ಬಿ) ಕ್ರೈಸ್ತರು ಯಾವ ಕೆಲಸದಲ್ಲಿ ಒಳಗೂಡಿದ್ದಾರೆ, ಮತ್ತು ತಾವು ರಾಜ್ಯವನ್ನು ಪ್ರಥಮವಾಗಿ ಹುಡುಕುತ್ತೇವೆ ಎಂಬುದನ್ನು ಅವರು ಹೇಗೆ ತೋರಿಸುತ್ತಾರೆ?
ಕೆಲಸಗಾರರಿಗೆ ತಮ್ಮ ಕೆಲಸವನ್ನು ಮಾಡಲು ಉಪಕರಣಗಳ ಅಗತ್ಯವಿದೆ. ಆದರೆ ಕೇವಲ ಯಾವುದಾದರೊಂದು ಉಪಕರಣವನ್ನು ಹೊಂದಿರುವುದಷ್ಟೇ ಸಾಕಾಗದು. ಒಬ್ಬ ಕೆಲಸಗಾರನಿಗೆ ಸೂಕ್ತವಾದ ಉಪಕರಣದ ಆವಶ್ಯಕತೆಯಿದೆ ಮತ್ತು ಅವನು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು. ಉದಾಹರಣೆಗೆ, ಒಂದು ಚಿಕ್ಕ ಷೆಡ್ಡನ್ನು ಕಟ್ಟುವಾಗ ನೀವು ಎರಡು ಬೋರ್ಡುಗಳನ್ನು ಒಟ್ಟಿಗೆ ಜಡಿಯಲು ಬಯಸುವುದಾದರೆ, ನಿಮಗೆ ಕೇವಲ ಒಂದು ಸುತ್ತಿಗೆ ಹಾಗೂ ಕೆಲವು ಮೊಳೆಗಳಿಗಿಂತಲೂ ಹೆಚ್ಚಿನದ್ದರ ಆವಶ್ಯಕತೆಯಿದೆ. ಮೊಳೆಯನ್ನು ವಕ್ರಗೊಳಿಸದೇ ಹೇಗೆ ಮರಕ್ಕೆ ಜಡಿಯಬೇಕು ಎಂಬುದು ಸಹ ನಿಮಗೆ ಗೊತ್ತಿರಬೇಕು. ಒಂದು ಸುತ್ತಿಗೆಯನ್ನು ಹೇಗೆ ಉಪಯೋಗಿಸಬೇಕು ಎಂಬುದೇ ಗೊತ್ತಿರದೆ ಮೊಳೆಯೊಂದನ್ನು ಮರಕ್ಕೆ ಜಡಿಯಲು ಪ್ರಯತ್ನಿಸುವಲ್ಲಿ, ಆ ಕೆಲಸವು ತುಂಬ ಕಷ್ಟಕರವಾಗಿ ಮತ್ತು ಆಶಾಭಂಗದಾಯಕವಾಗಿ ಇರುವುದಂತೂ ಖಂಡಿತ. ಆದರೆ ಸರಿಯಾದ ರೀತಿಯಲ್ಲಿ ಬಳಸಲ್ಪಡುವ ಉಪಕರಣಗಳು, ಸಂತೃಪ್ತಿಕರವಾದ ಫಲಿತಾಂಶಗಳೊಂದಿಗೆ ನಮ್ಮ ಕೆಲಸಗಳನ್ನು ಪೂರೈಸುವಂತೆ ಸಹಾಯಮಾಡುವವು.
2 ಕ್ರೈಸ್ತರೋಪಾದಿ ನಮಗೆ ಒಂದು ಕೆಲಸವನ್ನು ಮಾಡಲಿಕ್ಕಿದೆ. ಇದು ಅತ್ಯಂತ ಪ್ರಾಮುಖ್ಯವಾದ ಕೆಲಸವಾಗಿದೆ. ‘ಪ್ರಥಮವಾಗಿ ರಾಜ್ಯವನ್ನು ಹುಡುಕುವಂತೆ’ ಯೇಸು ತನ್ನ ಹಿಂಬಾಲಕರನ್ನು ಉತ್ತೇಜಿಸಿದನು. (ಮತ್ತಾಯ 6:33, NW) ನಾವಿದನ್ನು ಹೇಗೆ ಮಾಡಬಲ್ಲೆವು? ಇದನ್ನು ಮಾಡುವ ಒಂದು ವಿಧವು, ರಾಜ್ಯ ಸಾರುವಿಕೆಯಲ್ಲಿ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹುರುಪುಳ್ಳವರಾಗಿರುವ ಮೂಲಕವೇ. ನಮ್ಮ ಶುಶ್ರೂಷೆಯನ್ನು ದೇವರ ವಾಕ್ಯದಲ್ಲಿ ದೃಢವಾಗಿ ಬೇರೂರಿಸುವುದು ರಾಜ್ಯವನ್ನು ಪ್ರಥಮವಾಗಿ ಹುಡುಕುವುದರ ಇನ್ನೊಂದು ವಿಧವಾಗಿದೆ. ಒಳ್ಳೇ ನಡತೆಯು ಮೂರನೇ ವಿಧವಾಗಿದೆ. (ಮತ್ತಾಯ 24:14; 28:19, 20; ಅ. ಕೃತ್ಯಗಳು 8:25; 1 ಪೇತ್ರ 2:12) ಈ ಕ್ರೈಸ್ತ ನೇಮಕದಲ್ಲಿ ಪರಿಣಾಮಕಾರಿಯಾಗಿ ಇರಬೇಕಾದರೆ ಮತ್ತು ಸಂತೋಷವನ್ನು ಪಡೆದುಕೊಳ್ಳಬೇಕಾದರೆ ನಮಗೆ ಸೂಕ್ತವಾದ ಉಪಕರಣಗಳು ಮತ್ತು ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವುದರ ಕುರಿತಾದ ಜ್ಞಾನದ ಆವಶ್ಯಕತೆಯಿದೆ. ಈ ವಿಷಯದಲ್ಲಿ, ಒಬ್ಬ ಕ್ರೈಸ್ತ ಕೆಲಸಗಾರನೋಪಾದಿ ಅಪೊಸ್ತಲ ಪೌಲನು ಎದ್ದುಕಾಣುವಂಥ ಒಂದು ಮಾದರಿಯನ್ನು ಇಟ್ಟನು, ಮತ್ತು ತನ್ನನ್ನು ಅನುಕರಿಸುವಂತೆ ಅವನು ಜೊತೆ ವಿಶ್ವಾಸಿಗಳನ್ನು ಉತ್ತೇಜಿಸಿದನು. (1 ಕೊರಿಂಥ 11:1; 15:10) ಹಾಗಾದರೆ, ನಮ್ಮ ಜೊತೆ ಕೆಲಸಗಾರನಾಗಿರುವ ಪೌಲನಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?
ಪೌಲನು ಹುರುಪಿನ ರಾಜ್ಯ ಘೋಷಕನಾಗಿದ್ದನು
3. ಅಪೊಸ್ತಲ ಪೌಲನು ರಾಜ್ಯದ ಹುರುಪುಳ್ಳ ಕೆಲಸಗಾರನಾಗಿದ್ದನು ಎಂದು ಏಕೆ ಹೇಳಸಾಧ್ಯವಿದೆ?
3 ಪೌಲನು ಯಾವ ರೀತಿಯ ಕೆಲಸಗಾರನಾಗಿದ್ದನು? ನಿಶ್ಚಯವಾಗಿಯೂ ಅವನು ಹುರುಪುಳ್ಳ ಒಬ್ಬ ವ್ಯಕ್ತಿಯಾಗಿದ್ದನು. ಪೌಲನು ಮೆಡಿಟರೇನಿಯನ್ ಪ್ರದೇಶದ ಸುತ್ತಲೂ ಇದ್ದ ವಿಶಾಲ ಕ್ಷೇತ್ರದಾದ್ಯಂತ ಸುವಾರ್ತೆಯನ್ನು ಹಬ್ಬಿಸುವ ಮೂಲಕ, ಸ್ವತಃ ತನ್ನನ್ನು ಸತತೋತ್ಸಾಹದಿಂದ ದುಡಿಸಿಕೊಂಡನು. ತಾನು ರಾಜ್ಯವನ್ನು ಹುರುಪಿನಿಂದ ಘೋಷಿಸುತ್ತಿರಲು ಕಾರಣವೇನು ಎಂಬುದನ್ನು ತಿಳಿಸುತ್ತಾ ಈ ಅವಿಶ್ರಾಂತ ಅಪೊಸ್ತಲನು ಹೇಳಿದ್ದು: “ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇಬೇಕೆಂಬ ನಿರ್ಬಂಧ ನನಗುಂಟು. ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ.” (1 ಕೊರಿಂಥ 9:16) ಕೇವಲ ತನ್ನ ಸ್ವಂತ ಜೀವವನ್ನು ಉಳಿಸಿಕೊಳ್ಳುವುದರಲ್ಲಿ ಮಾತ್ರ ಪೌಲನು ಆಸಕ್ತನಾಗಿದ್ದನೋ? ಇಲ್ಲ. ಅವನೊಬ್ಬ ಸ್ವಾರ್ಥಿಯಾಗಿರಲಿಲ್ಲ. ಅದಕ್ಕೆ ಬದಲಾಗಿ, ಇತರರು ಸಹ ಸುವಾರ್ತೆಯಿಂದ ಪ್ರಯೋಜನ ಪಡೆದುಕೊಳ್ಳಬೇಕೆಂಬುದು ಅವನ ಬಯಕೆಯಾಗಿತ್ತು. ಅವನು ಬರೆದುದು: “ನಾನು ಇತರರ ಸಂಗಡ ಸುವಾರ್ತೆಯ ಫಲದಲ್ಲಿ ಪಾಲುಗಾರನಾಗಬೇಕೆಂದು ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡುತ್ತೇನೆ.”—1 ಕೊರಿಂಥ 9:23.
4. ಕ್ರೈಸ್ತ ಕೆಲಸಗಾರರು ಯಾವ ಉಪಕರಣವನ್ನು ತುಂಬ ಅಮೂಲ್ಯವಾದದ್ದಾಗಿ ಪರಿಗಣಿಸುತ್ತಾರೆ?
4 ಅಪೊಸ್ತಲ ಪೌಲನು, ಕೇವಲ ತನ್ನ ವೈಯಕ್ತಿಕ ಕೌಶಲಗಳ ಮೇಲೆಯೇ ಸಂಪೂರ್ಣವಾಗಿ ಆತುಕೊಳ್ಳಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದ ಒಬ್ಬ ವಿನಯಶೀಲ ಕೆಲಸಗಾರನಾಗಿದ್ದನು. ಒಬ್ಬ ಬಡಗಿಗೆ ಹೇಗೆ ಒಂದು ಸುತ್ತಿಗೆಯ ಅಗತ್ಯವಿದೆಯೋ ಹಾಗೆಯೇ ತನ್ನ ಕೇಳುಗರ ಹೃದಯದೊಳಕ್ಕೆ ದೇವರ ಸತ್ಯವನ್ನು ಅಚ್ಚೊತ್ತಲಿಕ್ಕಾಗಿ ಪೌಲನಿಗೆ ಸೂಕ್ತವಾದ ಉಪಕರಣದ ಅಗತ್ಯವಿತ್ತು. ಪ್ರಧಾನವಾಗಿ ಅವನು ಯಾವ ಉಪಕರಣವನ್ನು ಉಪಯೋಗಿಸಿದನು? ದೇವರ ವಾಕ್ಯವಾಗಿರುವ ಪವಿತ್ರ ಶಾಸ್ತ್ರವನ್ನೇ. ತದ್ರೀತಿಯಲ್ಲಿ, ಶಿಷ್ಯರನ್ನಾಗಿ ಮಾಡಲು ನಮಗೆ ಸಹಾಯಮಾಡಲಿಕ್ಕಾಗಿ ನಾವು ಉಪಯೋಗಿಸುವ ಪ್ರಧಾನ ಉಪಕರಣವು ಇಡೀ ಬೈಬಲೇ ಆಗಿದೆ.
5. ನಾವು ಪರಿಣಾಮಕಾರಿ ಶುಶ್ರೂಷಕರಾಗಬೇಕಾದರೆ, ಶಾಸ್ತ್ರವಚನಗಳನ್ನು ಉದ್ಧರಿಸುವುದರೊಂದಿಗೆ ಇನ್ನೇನನ್ನು ಮಾಡುವ ಆವಶ್ಯಕತೆಯಿದೆ?
5 ದೇವರ ವಾಕ್ಯವನ್ನು ಸರಿಯಾದ ರೀತಿಯಲ್ಲಿ ಉಪದೇಶಿಸುವುದರಲ್ಲಿ, ಕೇವಲ ಶಾಸ್ತ್ರವಚನಗಳನ್ನು ಉದ್ಧರಿಸುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ ಎಂಬುದು ಪೌಲನಿಗೆ ತಿಳಿದಿತ್ತು. ಅವನು ‘ಒಡಂಬಡಿಸುವಿಕೆಯನ್ನು’ ಉಪಯೋಗಿಸಿದನು. (ಅ. ಕೃತ್ಯಗಳು 28:23) ಹೇಗೆ? ಅನೇಕರು ರಾಜ್ಯ ಸತ್ಯವನ್ನು ಸ್ವೀಕರಿಸುವಂತೆ ಒಡಂಬಡಿಸಲಿಕ್ಕಾಗಿ ಪೌಲನು ಯಶಸ್ವಿಕರವಾಗಿ ದೇವರ ಲಿಖಿತ ವಾಕ್ಯವನ್ನು ಉಪಯೋಗಿಸಿದನು. ಅವನು ಅವರೊಂದಿಗೆ ತರ್ಕಿಸಿದನು. ಎಫೆಸದಲ್ಲಿದ್ದ ಒಂದು ಸಭಾಮಂದಿರದಲ್ಲಿ ಪೌಲನು ಮೂರು ತಿಂಗಳುಗಳ ವರೆಗೆ “ದೇವರ ರಾಜ್ಯದ ವಿಷಯಗಳನ್ನು ಕುರಿತು ವಾದಿಸುತ್ತಾ ಜನರನ್ನು ಒಡಂಬಡಿಸುತ್ತಾ ಧೈರ್ಯದಿಂದ ಮಾತಾಡಿದನು.” ಆದರೆ “ಕೆಲವರು ತಮ್ಮ ಮನಸ್ಸುಗಳನ್ನು ಕಠಿಣಮಾಡಿಕೊಂಡು ಒಡಂಬಡದೆ” ಇದ್ದರೂ ಇತರರು ಕಿವಿಗೊಟ್ಟರು. ಎಫೆಸದಲ್ಲಿ ಪೌಲನು ನಡೆಸಿದ ಶುಶ್ರೂಷೆಯ ಫಲಿತಾಂಶವಾಗಿ, “ಕರ್ತನ [“ಯೆಹೋವನ,” NW] ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.”—ಅ. ಕೃತ್ಯಗಳು 19:8, 9, 20.
6, 7. ತನ್ನ ಶುಶ್ರೂಷೆಯನ್ನು ಪೌಲನು ಹೇಗೆ ಘನಪಡಿಸಿದನು, ಮತ್ತು ನಾವು ಸಹ ಅದನ್ನೇ ಹೇಗೆ ಮಾಡಬಲ್ಲೆವು?
6 ಹುರುಪಿನ ಒಬ್ಬ ರಾಜ್ಯ ಘೋಷಕನೋಪಾದಿ ಪೌಲನು ‘ತನ್ನ ಶುಶ್ರೂಷೆಯನ್ನು ಘನಪಡಿಸಿದನು.’ (ರೋಮಾಪುರ 11:13, NW) ಹೇಗೆ? ಅವನು ಸ್ವತಃ ತನ್ನನ್ನು ಮೇಲೇರಿಸಿಕೊಳ್ಳುವುದರಲ್ಲಿ ಆಸಕ್ತನಾಗಿರಲಿಲ್ಲ; ಅಥವಾ ತಾನು ದೇವರ ಜೊತೆ ಕೆಲಸಗಾರರಲ್ಲಿ ಒಬ್ಬನೆಂದು ಬಹಿರಂಗವಾಗಿ ಹೇಳಿಕೊಳ್ಳಲು ಅವನು ನಾಚಿಕೆಪಡಲಿಲ್ಲ. ಅದಕ್ಕೆ ಬದಲಾಗಿ, ಅವನು ತನ್ನ ಶುಶ್ರೂಷೆಯನ್ನು ಅತ್ಯಂತ ದೊಡ್ಡ ಗೌರವವಾಗಿ ಪರಿಗಣಿಸಿದನು. ಪೌಲನು ದೇವರ ವಾಕ್ಯವನ್ನು ತುಂಬ ಕೌಶಲದಿಂದ ಮತ್ತು ಪರಿಣಾಮಕಾರಿಯಾಗಿ ಉಪದೇಶಿಸಿದನು. ಅವನ ಫಲಭರಿತ ಚಟುವಟಿಕೆಯು, ಇತರರು ತಮ್ಮ ಶುಶ್ರೂಷೆಯನ್ನು ಇನ್ನೂ ಪೂರ್ಣ ರೀತಿಯಲ್ಲಿ ನೆರವೇರಿಸುವಂತೆ ಪ್ರಚೋದಿಸಲು ಸಹಾಯಮಾಡುತ್ತಾ ಅವರಿಗೆ ಉತ್ತೇಜನವನ್ನು ನೀಡಿತು. ಈ ರೀತಿಯಲ್ಲಿ ಸಹ ಅವನ ಶುಶ್ರೂಷೆಯು ಘನತೆಗೇರಿಸಲ್ಪಟ್ಟಿತು.
7 ಪೌಲನಂತೆ ನಾವು ಸಹ ದೇವರ ವಾಕ್ಯವನ್ನು ಅನೇಕ ಬಾರಿ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸುವ ಮೂಲಕ, ಶುಶ್ರೂಷಕರೋಪಾದಿ ನಮ್ಮ ಕೆಲಸವನ್ನು ಘನತೆಗೇರಿಸಬಲ್ಲೆವು. ನಮ್ಮ ಕ್ಷೇತ್ರ ಶುಶ್ರೂಷೆಯ ಎಲ್ಲಾ ರೂಪಗಳಲ್ಲಿ, ಸಾಧ್ಯವಿರುವಷ್ಟು ಜನರೊಂದಿಗೆ ನೇರವಾಗಿ ಶಾಸ್ತ್ರವಚನದಿಂದಲೇ ಯಾವುದಾದರೊಂದು ವಿಷಯವನ್ನು ಹಂಚಿಕೊಳ್ಳಬೇಕು ಎಂಬುದೇ ನಮ್ಮ ಗುರಿಯಾಗಿರಬೇಕು. ಒಡಂಬಡಿಸುವಂಥ ರೀತಿಯಲ್ಲಿ ನಾವು ಇದನ್ನು ಹೇಗೆ ಮಾಡಬಲ್ಲೆವು? ಮೂರು ಮುಖ್ಯ ವಿಧಗಳನ್ನು ಪರಿಗಣಿಸಿರಿ: (1) ದೇವರ ವಾಕ್ಯಕ್ಕಾಗಿ ಗೌರವವನ್ನು ಹುಟ್ಟಿಸುವಂಥ ರೀತಿಯಲ್ಲಿ ಅದರ ಕಡೆಗೆ ಗಮನವನ್ನು ಸೆಳೆಯಿರಿ. (2) ಬೈಬಲ್ ಏನು ಹೇಳುತ್ತದೋ ಅದನ್ನು ಜಾಣ್ಮೆಯಿಂದ ವಿವರಿಸಿರಿ ಮತ್ತು ಅದು ಹೇಗೆ ಅನ್ವಯವಾಗುತ್ತದೆ ಎಂಬುದನ್ನು ತೋರಿಸಿರಿ. (3) ಮನವೊಪ್ಪಿಸುವಂಥ ರೀತಿಯಲ್ಲಿ ಶಾಸ್ತ್ರವಚನಗಳನ್ನು ಉಪಯೋಗಿಸಿ ತರ್ಕಿಸಿರಿ.
8. ಇಂದು ರಾಜ್ಯದ ಕುರಿತು ಸಾರುವ ಕೆಲಸದಲ್ಲಿ ನಮಗೆ ಯಾವ ಉಪಕರಣಗಳು ಲಭ್ಯಗೊಳಿಸಲ್ಪಟ್ಟಿವೆ, ಮತ್ತು ನೀವು ಅವುಗಳನ್ನು ಹೇಗೆ ಉಪಯೋಗಿಸಿದ್ದೀರಿ?
8 ಪೌಲನ ಶುಶ್ರೂಷೆಯ ಸಮಯದಲ್ಲಿ ಲಭ್ಯವಿಲ್ಲದಿದ್ದ ಉಪಕರಣಗಳು ಆಧುನಿಕ ದಿನದ ರಾಜ್ಯ ಘೋಷಕರಿಗೆ ಒದಗಿಸಲ್ಪಟ್ಟಿವೆ. ಇವುಗಳಲ್ಲಿ ಪುಸ್ತಕಗಳು, ಪತ್ರಿಕೆಗಳು, ಬ್ರೋಷರ್ಗಳು, ಕರಪತ್ರಗಳು, ಟ್ರ್ಯಾಕ್ಟ್ಗಳು ಮತ್ತು ಆಡಿಯೋ ಹಾಗೂ ವಿಡಿಯೋ ರೆಕಾರ್ಡಿಂಗ್ಗಳು ಸೇರಿವೆ. ಕಳೆದ ಶತಮಾನದಲ್ಲಿ ಟೆಸ್ಟಿಮನಿ ಕಾರ್ಡ್ಗಳು, ಫೋನೋಗ್ರಾಫ್ಗಳು, ಧ್ವನಿವ್ಯವಸ್ಥೆಯಿದ್ದ ಕಾರ್ಗಳು ಮತ್ತು ರೇಡಿಯೋ ಪ್ರಸಾರಣಗಳು ಸಹ ಉಪಯೋಗಿಸಲ್ಪಟ್ಟವು. ಆದರೆ ನಮ್ಮ ಅತ್ಯುತ್ತಮ ಉಪಕರಣವು ಬೈಬಲ್ ಆಗಿದೆ ಮತ್ತು ಅತ್ಯಗತ್ಯವಾದ ಈ ಉಪಕರಣವನ್ನು ನಾವು ಸದುಪಯೋಗಿಸುವ ಮತ್ತು ಸರಿಯಾದ ರೀತಿಯಲ್ಲಿ ಬಳಸುವ ಆವಶ್ಯಕತೆಯಿದೆ ಎಂಬುದಂತೂ ನಿಶ್ಚಯ.
ನಮ್ಮ ಶುಶ್ರೂಷೆಯು ದೇವರ ವಾಕ್ಯದಲ್ಲಿ ಬೇರೂರಿರಬೇಕು
9, 10. ದೇವರ ವಾಕ್ಯದ ಉಪಯೋಗದ ಕುರಿತು ಪೌಲನು ತಿಮೊಥೆಯನಿಗೆ ನೀಡಿದ ಸಲಹೆಯಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?
9 ನಾವು ದೇವರ ವಾಕ್ಯವನ್ನು ಪರಿಣಾಮಕಾರಿಯಾದ ಉಪಕರಣವಾಗಿ ಹೇಗೆ ಉಪಯೋಗಿಸಸಾಧ್ಯವಿದೆ? ತನ್ನ ಜೊತೆ ಕೆಲಸಗಾರನಾಗಿದ್ದ ತಿಮೊಥೆಯನಿಗೆ ಪೌಲನು ತಿಳಿಸಿದಂಥ ಈ ಮಾತುಗಳಿಗೆ ಕಿವಿಗೊಡುವ ಮೂಲಕವೇ: ‘ನೀನು ದೇವರ ದೃಷ್ಟಿಯಲ್ಲಿ ಯೋಗ್ಯನಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸಗಾರನೂ ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ಉಪದೇಶಿಸುವವನೂ ಆಗಿರು.’ (2 ತಿಮೊಥೆಯ 2:15) ‘ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ಉಪದೇಶಿಸುವುದರಲ್ಲಿ’ ಏನು ಒಳಗೂಡಿದೆ?
10 ‘ಸರಿಯಾದ ರೀತಿಯಲ್ಲಿ ಉಪದೇಶಿಸುವುದು’ ಎಂದು ತರ್ಜುಮೆಮಾಡಲ್ಪಟ್ಟಿರುವ ಗ್ರೀಕ್ ಪದದ ಅಕ್ಷರಾರ್ಥವು, “ನೇರವಾಗಿ ಕತ್ತರಿಸುವುದು” ಅಥವಾ “ನೇರವಾದ ದಿಕ್ಕಿನಲ್ಲಿ ಒಂದು ಹಾದಿಯನ್ನು ಕಡಿಯುವುದು” ಎಂದಾಗಿದೆ. ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ, ಕೇವಲ ತಿಮೊಥೆಯನಿಗೆ ಪೌಲನು ನೀಡಿದ ಬುದ್ಧಿವಾದದಲ್ಲಿ ಮಾತ್ರ ಆ ಪದವನ್ನು ಬಳಸಲಾಗಿದೆ. ಒಂದು ಗದ್ದೆಯಲ್ಲಿ ನೇಗಿಲಿನಿಂದ ನೇರವಾಗಿ ಉಳುವುದನ್ನು ವರ್ಣಿಸಲು ಸಹ ಅದೇ ಪದವನ್ನು ಉಪಯೋಗಿಸಸಾಧ್ಯವಿದೆ. ತಾನು ಮಾಡಿದಂಥ ಒಂದು ನೇಗಿಲ ಸಾಲು ಅಂಕುಡೊಂಕಾದರೆ, ಒಬ್ಬ ಅನುಭವಸ್ಥ ರೈತನಿಗೆ ಮುಜುಗರವಾಗುವುದಂತೂ ಖಂಡಿತ. ತಿಮೊಥೆಯನು ‘ಅವಮಾನಕ್ಕೆ ಗುರಿಯಾಗದ ಕೆಲಸಗಾರ’ನಾಗಿರಬೇಕಾದರೆ, ಅವನು ದೇವರ ವಾಕ್ಯದ ಸತ್ಯ ಬೋಧನೆಗಳಿಂದ ಸ್ವಲ್ಪವೂ ವಿಚಲಿತನಾಗಬಾರದು ಎಂದು ಅವನಿಗೆ ನೆನಪು ಹುಟ್ಟಿಸಲಾಯಿತು. ತಿಮೊಥೆಯನ ವೈಯಕ್ತಿಕ ದೃಷ್ಟಿಕೋನಗಳು ಅವನ ಬೋಧನೆಯನ್ನು ಪ್ರಭಾವಿಸುವಂತೆ ಅವನು ಬಿಡಬಾರದಿತ್ತು. ಅವನು ತನ್ನ ಸಾರುವಿಕೆ ಹಾಗೂ ಬೋಧಿಸುವಿಕೆಯನ್ನು ಸಂಪೂರ್ಣವಾಗಿ ಶಾಸ್ತ್ರವಚನಗಳ ಮೇಲೇ ಕೇಂದ್ರೀಕರಿಸಬೇಕಾಗಿತ್ತು. (2 ತಿಮೊಥೆಯ 4:2-4) ಈ ರೀತಿಯಲ್ಲಿ ಪ್ರಾಮಾಣಿಕ ಹೃದಯದ ವ್ಯಕ್ತಿಗಳು, ಯಾವುದೇ ವಿಷಯದ ಬಗ್ಗೆ ಲೌಕಿಕ ತತ್ತ್ವಜ್ಞಾನವನ್ನು ಅಳವಡಿಸಿಕೊಳ್ಳಲಿಕ್ಕಲ್ಲ, ಬದಲಾಗಿ ಯೆಹೋವನ ದೃಷ್ಟಿಕೋನವನ್ನು ಪಡೆದುಕೊಳ್ಳುವಂತೆ ಮಾರ್ಗದರ್ಶಿಸಲ್ಪಡುತ್ತಿದ್ದರು. (ಕೊಲೊಸ್ಸೆ 2:4, 8) ಇಂದು ಸಹ ಇದು ನಿಜವಾಗಿದೆ.
ನಮ್ಮ ನಡತೆಯು ಒಳ್ಳೇದಾಗಿರಬೇಕು
11, 12. ನಾವು ದೇವರ ವಾಕ್ಯವನ್ನು ಸರಿಯಾದ ರೀತಿಯಲ್ಲಿ ಉಪದೇಶಿಸುವುದರ ಮೇಲೆ ನಮ್ಮ ನಡತೆಯು ಯಾವ ಪರಿಣಾಮವನ್ನು ಬೀರಬಲ್ಲದು?
11 ದೇವರ ವಾಕ್ಯದ ಸತ್ಯಗಳನ್ನು ಪ್ರಕಟಪಡಿಸುವ ಮೂಲಕ ಅದನ್ನು ಸರಿಯಾದ ರೀತಿಯಲ್ಲಿ ಉಪದೇಶಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ನಾವು ಮಾಡಬೇಕು. ನಮ್ಮ ನಡತೆಯೂ ಅದಕ್ಕನುಗುಣವಾಗಿರಬೇಕು. “ನಾವು ದೇವರ ಜೊತೆಕೆಲಸದವರು” ಆಗಿರುವುದರಿಂದ, ಕಪಟಿಗಳಾದ ಕೆಲಸಗಾರರಾಗಿರಬಾರದು. (1 ಕೊರಿಂಥ 3:9) ದೇವರ ವಾಕ್ಯವು ಹೇಳುವುದು: “ಹೀಗಿರಲಾಗಿ ಮತ್ತೊಬ್ಬನಿಗೆ ಉಪದೇಶಮಾಡುವ ನೀನು ನಿನಗೆ ಉಪದೇಶಮಾಡಿಕೊಳ್ಳದೆ ಇದ್ದೀಯೋ? ಕದಿಯಬಾರದೆಂದು ಬೋಧಿಸುವ ನೀನು ಕದಿಯುತ್ತೀಯೋ? ಹಾದರ ಮಾಡಬಾರದೆಂದು ಹೇಳುವ ನೀನು ಹಾದರ ಮಾಡುತ್ತೀಯೋ? ಮೂರ್ತಿಗಳಲ್ಲಿ ಅಸಹ್ಯಪಡುತ್ತಿರುವ ನೀನು ದೇವಸ್ಥಾನದಲ್ಲಿ ಕಳ್ಳತನ ಮಾಡುತ್ತೀಯೋ?” (ರೋಮಾಪುರ 2:21, 22) ಆದುದರಿಂದ, ದೇವರ ಆಧುನಿಕ ದಿನದ ಕೆಲಸಗಾರರೋಪಾದಿ ನಾವು ದೇವರ ವಾಕ್ಯವನ್ನು ಸರಿಯಾದ ರೀತಿಯಲ್ಲಿ ಉಪದೇಶಿಸುವ ಒಂದು ವಿಧವು, ಈ ಮುಂದಿನ ಬುದ್ಧಿವಾದಕ್ಕೆ ಕಿವಿಗೊಡುವ ಮೂಲಕವೇ ಆಗಿದೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”—ಜ್ಞಾನೋಕ್ತಿ 3:5, 6.
12 ದೇವರ ವಾಕ್ಯವನ್ನು ಸರಿಯಾದ ರೀತಿಯಲ್ಲಿ ಉಪದೇಶಿಸುವ ಮೂಲಕ ನಾವು ಯಾವ ಫಲಿತಾಂಶಗಳನ್ನು ನಿರೀಕ್ಷಿಸಸಾಧ್ಯವಿದೆ? ದೇವರ ಲಿಖಿತ ವಾಕ್ಯವು ಪ್ರಾಮಾಣಿಕ ಹೃದಯದ ವ್ಯಕ್ತಿಗಳ ಮೇಲೆ ಬೀರಸಾಧ್ಯವಿರುವ ಪ್ರಭಾವವನ್ನು ಪರಿಗಣಿಸಿರಿ.
ದೇವರ ವಾಕ್ಯಕ್ಕೆ ಮಾರ್ಪಡಿಸುವ ಶಕ್ತಿಯಿದೆ
13. ದೇವರ ವಾಕ್ಯದ ಅನ್ವಯವು ಒಬ್ಬ ವ್ಯಕ್ತಿಯಲ್ಲಿ ಏನನ್ನು ಉಂಟುಮಾಡಬಲ್ಲದು?
13 ದೇವರ ವಾಕ್ಯದಲ್ಲಿರುವ ಸಂದೇಶವು ಅಧಿಕಾರಯುತವಾದದ್ದಾಗಿ ಅಂಗೀಕರಿಸಲ್ಪಡುವಾಗ, ಅದು ಜನರು ತಮ್ಮ ಜೀವಿತಗಳಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸಹಾಯಮಾಡುವಂಥ ರೀತಿಯ ಬಲವತ್ತಾದ ಪ್ರಭಾವವನ್ನು ಬೀರುತ್ತದೆ. ಪೌಲನು ದೇವರ ವಾಕ್ಯವು ಕಾರ್ಯಪ್ರವೃತ್ತವಾಗಿರುವುದನ್ನು ನೋಡಿದ್ದನು ಮತ್ತು ಪುರಾತನ ಥೆಸಲೊನೀಕದಲ್ಲಿ ಕ್ರೈಸ್ತರಾಗಿ ಪರಿಣಮಿಸಿದಂಥ ಜನರ ಮೇಲೆ ಅದು ಬೀರಿದ್ದ ಸಕಾರಾತ್ಮಕ ಪ್ರಭಾವವನ್ನು ಕಣ್ಣಾರೆ ನೋಡಿದ್ದನು. ಆದುದರಿಂದಲೇ ಅವನು ಅವರಿಗೆ ಹೇಳಿದ್ದು: “ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ ಎಡೆಬಿಡದೆ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ಅದು ನಿಜವಾಗಿ ದೇವರ ವಾಕ್ಯವೇ; ಅದು ನಂಬುವವರಾದ ನಿಮ್ಮೊಳಗೆ ಬಲವಾಗಿ ಕೆಲಸ ನಡಿಸುತ್ತದೆ.” (1 ಥೆಸಲೊನೀಕ 2:13) ಆ ಕ್ರೈಸ್ತರ ಮತ್ತು ವಾಸ್ತವದಲ್ಲಿ ಕ್ರಿಸ್ತನ ಎಲ್ಲ ನಿಜ ಹಿಂಬಾಲಕರ ದೃಷ್ಟಿಯಲ್ಲಿ, ಮನುಷ್ಯನ ಕ್ಷುಲ್ಲಕ ತರ್ಕಶಕ್ತಿಯು ದೇವರ ಪರಮಶ್ರೇಷ್ಠ ವಿವೇಕಕ್ಕೆ ಖಂಡಿತವಾಗಿಯೂ ಸರಿಸಾಟಿಯಲ್ಲ. (ಯೆಶಾಯ 55:9) ಥೆಸಲೊನೀಕದವರು “ಬಹಳ ಹಿಂಸೆಯನ್ನು ಅನುಭವಿಸಬೇಕಾಗಿದ್ದರೂ ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ”ದರು ಮತ್ತು ಇತರ ವಿಶ್ವಾಸಿಗಳಿಗೆ ಮಾದರಿಗಳಾಗಿ ಪರಿಣಮಿಸಿದರು.—1 ಥೆಸಲೊನೀಕ 1:5-7.
14, 15. ದೇವರ ವಾಕ್ಯದ ಸಂದೇಶವು ಎಷ್ಟು ಪ್ರಬಲವಾದದ್ದಾಗಿದೆ, ಮತ್ತು ಏಕೆ?
14 ದೇವರ ಮಾತಿನ ಮೂಲನಾದ ಯೆಹೋವನು ಹೇಗೆ ಶಕ್ತಿಯುತನಾಗಿದ್ದಾನೋ ಹಾಗೆಯೇ ಆತನ ಮಾತು ಸಹ ಶಕ್ತಿಯುತವಾಗಿದೆ. ಅದು ‘ಜೀವಸ್ವರೂಪನಾದ ದೇವರಿಂದ,’ ಅಂದರೆ ಯಾರ ಅಪ್ಪಣೆಯಿಂದ ‘ಆಕಾಶವು ಉಂಟುಮಾಡಲ್ಪಟ್ಟಿತೋ’ ಆತನಿಂದ ಬಂದದ್ದಾಗಿದೆ, ಮತ್ತು ಆತನ ಮಾತು ಯಾವಾಗಲೂ ‘ಆತನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ಆತನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.’ (ಇಬ್ರಿಯ 3:12; ಕೀರ್ತನೆ 33:6; ಯೆಶಾಯ 55:11) ಒಬ್ಬ ಬೈಬಲ್ ವಿದ್ವಾಂಸನು ಹೇಳಿದ್ದು: “ದೇವರು ಎಂದಿಗೂ ತನ್ನ ಮಾತಿನಿಂದ ತನ್ನನ್ನು ಬೇರ್ಪಡಿಸಿಕೊಳ್ಳುವುದಿಲ್ಲ. ಅದು ಆತನಿಗೆ ಸಂಬಂಧಿಸದ ವಿಚಾರವೋ ಎಂಬಂತೆ ಅದರೊಂದಿಗಿನ ಸಂಬಂಧವನ್ನು ಆತನು ನಿರಾಕರಿಸುವುದಿಲ್ಲ. . . . ಆದುದರಿಂದ, ಅದು ಎಂದಿಗೂ ಒಂದು ಸತ್ತ ವಿಷಯವಲ್ಲ, ಅದು ನುಡಿಯಲ್ಪಟ್ಟ ನಂತರ ಏನಾಗುತ್ತದೊ ಅದರಿಂದ ಬಾಧಿಸಲ್ಪಡದಂಥದ್ದು ಆಗಿಲ್ಲ; ಏಕೆಂದರೆ ಅದು ಜೀವಸ್ವರೂಪನಾದ ದೇವರೊಂದಿಗಿನ ಒಂದು ಐಕ್ಯಬಂಧವಾಗಿದೆ.”
15 ದೇವರ ವಾಕ್ಯದಿಂದ ಬರುವಂಥ ಸಂದೇಶವು ಎಷ್ಟು ಪ್ರಬಲವಾದದ್ದಾಗಿದೆ? ಅದಕ್ಕೆ ಅಪಾರ ಶಕ್ತಿಯಿದೆ. ಸೂಕ್ತವಾಗಿಯೇ ಪೌಲನು ಬರೆದುದು: “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.”—ಇಬ್ರಿಯ 4:12.
16. ದೇವರ ವಾಕ್ಯವು ಒಬ್ಬ ವ್ಯಕ್ತಿಯನ್ನು ಎಷ್ಟು ಪೂರ್ಣವಾಗಿ ಬದಲಾಯಿಸಬಲ್ಲದು?
16 ದೇವರ ಲಿಖಿತ ವಾಕ್ಯದಲ್ಲಿರುವ ಸಂದೇಶವು ‘ಇಬ್ಬಾಯಿಕತ್ತಿಗಿಂತಲೂ ಹದವಾದದ್ದಾಗಿದೆ.’ ಹೀಗಿರುವುದರಿಂದ, ಅದಕ್ಕಿರುವ ಛೇದಿಸುವ ಸಾಮರ್ಥ್ಯವು ಯಾವುದೇ ಮಾನವ ಸಾಧನ ಅಥವಾ ಉಪಕರಣವನ್ನು ಮೀರಿಸುತ್ತದೆ. ದೇವರ ವಾಕ್ಯವು ಒಬ್ಬ ವ್ಯಕ್ತಿಯ ಅಂತರಿಂದ್ರಿಯಗಳನ್ನು ಭೇದಿಸಿಕೊಂಡು ಹೋಗುತ್ತದೆ ಮತ್ತು ಅವನು ಹೇಗೆ ಆಲೋಚಿಸುತ್ತಾನೆ ಹಾಗೂ ಏನನ್ನು ಪ್ರೀತಿಸುತ್ತಾನೆ ಎಂಬುದರ ಮೇಲೆ ಪ್ರಭಾವ ಬೀರುವ ಮೂಲಕ ಅವನನ್ನು ಆಂತರಿಕವಾಗಿಯೂ ಬದಲಾಯಿಸಬಲ್ಲದು ಮತ್ತು ಅವನನ್ನು ದೇವರಿಗೆ ಸ್ವೀಕಾರಾರ್ಹನಾದ ಕೆಲಸಗಾರನಾಗಿ ಮಾಡಬಲ್ಲದು. ಎಷ್ಟು ಪ್ರಬಲವಾದ ಉಪಕರಣವಿದು!
17. ದೇವರ ವಾಕ್ಯದ ಮಾರ್ಪಡಿಸುವ ಶಕ್ತಿಯ ಕುರಿತು ವಿವರಿಸಿರಿ.
17 ಒಬ್ಬ ವ್ಯಕ್ತಿಯು ತನ್ನ ಕುರಿತು ಏನೆಂದು ನೆನಸುತ್ತಾನೋ ಅಥವಾ ಇತರರು ಏನನ್ನು ನೋಡುವಂತೆ ಅನುಮತಿಸುತ್ತಾನೋ ಅದಕ್ಕೆ ಹೋಲಿಸುವಾಗ ನಿಜವಾಗಿಯೂ ಅವನು ಆಂತರ್ಯದಲ್ಲಿ ಏನಾಗಿದ್ದಾನೆ ಎಂಬುದನ್ನು ದೇವರ ವಾಕ್ಯವು ಬಯಲುಪಡಿಸುತ್ತದೆ. (1 ಸಮುವೇಲ 16:7) ಒಬ್ಬ ದುಷ್ಟ ವ್ಯಕ್ತಿಯು ಸಹ ಕೆಲವೊಮ್ಮೆ ಹಿತಚಿಂತನೆಯ ಅಥವಾ ಧಾರ್ಮಿಕ ಭಕ್ತಿಯ ಮುಖವಾಡದಿಂದ ತನ್ನ ಆಂತರ್ಯವನ್ನು ಮರೆಮಾಚಬಹುದು. ಕೆಟ್ಟ ಕಾರಣಗಳಿಗಾಗಿ ಕೆಡುಕರು ವೇಷಮರೆಸಿಕೊಳ್ಳುತ್ತಾರೆ. ಅಹಂಕಾರಿ ಜನರು ಇತರರ ಹೊಗಳಿಕೆಯನ್ನು ಪಡೆದುಕೊಳ್ಳಬೇಕೆಂದು ಮನಸ್ಸಿನಲ್ಲೇ ಹಾತೊರೆಯುತ್ತಿದ್ದರೂ, ನಮ್ರತೆಯ ಸೋಗನ್ನು ಹಾಕುತ್ತಾರೆ. ಆದರೂ, ನಿಜವಾಗಿಯೂ ಹೃದಯದಲ್ಲಿ ಏನಿದೆ ಎಂಬುದನ್ನು ಹೊರಪಡಿಸುವ ಮೂಲಕ ದೇವರ ವಾಕ್ಯವು, ಒಬ್ಬ ವ್ಯಕ್ತಿಯು ಹಳೇ ವ್ಯಕ್ತಿತ್ವವನ್ನು ತೆಗೆದುಹಾಕಿ, ‘ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿರುವ ನೂತನಸ್ವಭಾವವನ್ನು ಧರಿಸಿಕೊಳ್ಳುವಂತೆ’ ಶಕ್ತಿಯುತವಾದ ರೀತಿಯಲ್ಲಿ ಪ್ರಚೋದಿಸಬಲ್ಲದು. (ಎಫೆಸ 4:22-24) ದೇವರ ವಾಕ್ಯದ ಬೋಧನೆಗಳು, ಪುಕ್ಕಲುಸ್ವಭಾವದ ವ್ಯಕ್ತಿಗಳನ್ನೂ ಯೆಹೋವನ ಧೀರ ಸಾಕ್ಷಿಗಳಾಗುವಂತೆ ಮತ್ತು ಹುರುಪಿನ ರಾಜ್ಯ ಘೋಷಕರಾಗುವಂತೆ ಅವರ ಹೃದಯಗಳನ್ನು ಮಾರ್ಪಡಿಸಬಲ್ಲವು.—ಯೆರೆಮೀಯ 1:6-9.
18, 19. ಈ ಪ್ಯಾರಗ್ರಾಫ್ಗಳ ಅಥವಾ ಒಂದು ವೈಯಕ್ತಿಕ ಕ್ಷೇತ್ರ ಸೇವಾ ಅನುಭವದ ಮೇಲಾಧಾರಿಸಿ, ಶಾಸ್ತ್ರೀಯ ಸತ್ಯವು ಒಬ್ಬ ವ್ಯಕ್ತಿಯ ಮನೋಭಾವವನ್ನು ಹೇಗೆ ಬದಲಾಯಿಸಬಲ್ಲದು ಎಂಬುದನ್ನು ತೋರಿಸಿರಿ.
18 ದೇವರ ವಾಕ್ಯಕ್ಕಿರುವ ಮಾರ್ಪಡಿಸುವ ಶಕ್ತಿಯು ಎಲ್ಲೆಡೆಯೂ ಇರುವ ಜನರ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಉದಾಹರಣೆಗೆ, ಕ್ಯಂಬೋಡಿಯದ ಪೊನೊಮ್ ಪೆನ್ಹದ ರಾಜ್ಯ ಘೋಷಕರು, ತಿಂಗಳಿಗೆ ಎರಡು ಸಲ ಕಾಮ್ಪೊಂಗ್ ಚಾಮ್ ಪ್ರಾಂತದಲ್ಲಿ ಸಾರುತ್ತಿದ್ದರು. ಇತರ ಪಾಸ್ಟರ್ಗಳು ಯೆಹೋವನ ಸಾಕ್ಷಿಗಳ ವಿರುದ್ಧ ಮಾತಾಡುವುದನ್ನು ಕೇಳಿಸಿಕೊಂಡ ಬಳಿಕ, ಸ್ಥಳಿಕ ಪಾಸ್ಟರಳೊಬ್ಬಳು ಮುಂದಿನ ಸಲ ಈ ಪ್ರಾಂತಕ್ಕೆ ಸಾಕ್ಷಿಗಳು ಭೇಟಿ ನೀಡಿದಾಗ ಅವರನ್ನು ಭೇಟಿಯಾಗುವ ಏರ್ಪಾಡನ್ನು ಮಾಡಿದಳು. ಹಬ್ಬದ ದಿನಗಳನ್ನು ಆಚರಿಸುವುದರ ಕುರಿತು ಅವಳು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದಳು ಮತ್ತು ಸಾಕ್ಷಿಗಳು ಶಾಸ್ತ್ರವಚನಗಳಿಂದ ಅವಳೊಂದಿಗೆ ತರ್ಕಿಸಿದಾಗ ಅವರಿಗೆ ನಿಕಟವಾಗಿ ಗಮನಕೊಟ್ಟಳು. ತದನಂತರ ಅವಳು ಉದ್ಗರಿಸಿದ್ದು: “ನನ್ನ ಜೊತೆ ಪಾಸ್ಟರ್ಗಳು ನಿಮ್ಮ ಕುರಿತು ಹೇಳಿದ್ದು ನಿಜವಲ್ಲ ಎಂಬುದು ಈಗ ನನಗೆ ಗೊತ್ತಾಗಿದೆ! ನೀವು ಬೈಬಲನ್ನೇ ಉಪಯೋಗಿಸುವುದಿಲ್ಲ ಎಂದು ಅವರು ವಾದಿಸಿದರು, ಆದರೆ ಇವತ್ತು ಬೆಳಿಗ್ಗೆಯೆಲ್ಲಾ ನೀವು ಅದನ್ನೇ ಉಪಯೋಗಿಸಿದ್ದೀರಿ!”
19 ಈ ಸ್ತ್ರೀಯು ಸಾಕ್ಷಿಗಳೊಂದಿಗಿನ ತನ್ನ ಬೈಬಲ್ ಚರ್ಚೆಗಳನ್ನು ಮುಂದುವರಿಸಿದಳು ಮತ್ತು ಪಾಸ್ಟರ್ ಕೆಲಸದಿಂದ ಅವಳನ್ನು ತೆಗೆದುಹಾಕಲಾಗುವುದು ಎಂಬ ಬೆದರಿಕೆಗಳು ತನ್ನ ಚರ್ಚೆಯನ್ನು ನಿಲ್ಲಿಸುವಂತೆ ಅವಳು ಬಿಡಲಿಲ್ಲ. ಬಳಿಕ ಅವಳು ತನ್ನ ಈ ಶಾಸ್ತ್ರೀಯ ಚರ್ಚೆಗಳ ಕುರಿತು ಒಬ್ಬ ಗೆಳತಿಗೆ ತಿಳಿಸಿದಳು. ಈ ಗೆಳತಿಯು ಸಹ ಸಾಕ್ಷಿಗಳ ಸಹಾಯದಿಂದ ಬೈಬಲ್ ಅಧ್ಯಯನವನ್ನು ಮಾಡತೊಡಗಿದಳು. ತಾನು ಕಲಿಯುತ್ತಿದ್ದ ವಿಷಯಗಳ ಕುರಿತು ಈ ಸ್ನೇಹಿತೆಯು ಎಷ್ಟು ಹುರುಪನ್ನು ತೋರಿಸಲಾರಂಭಿಸಿದಳು ಎಂದರೆ, ಅವಳು ಹಾಜರಾಗುತ್ತಿದ್ದ ಚರ್ಚಿನ ಆರಾಧನಾ ಕೂಟವೊಂದರಲ್ಲಿ “ಬನ್ನಿರಿ, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನಮಾಡಿರಿ” ಎಂದು ಹೇಳುವಂತೆ ಅವಳು ಪ್ರಚೋದಿಸಲ್ಪಟ್ಟಳು! ಸ್ವಲ್ಪ ಸಮಯಾನಂತರ ಈ ಮಾಜಿ ಪಾಸ್ಟರ್ ಹಾಗೂ ಇತರರು ಸಹ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನವನ್ನು ಮಾಡತೊಡಗಿದರು.
20. ಘಾನದಲ್ಲಿರುವ ಒಬ್ಬ ಸ್ತ್ರೀಯ ಅನುಭವವು ದೇವರ ವಾಕ್ಯದ ಶಕ್ತಿಯನ್ನು ಹೇಗೆ ದೃಷ್ಟಾಂತಿಸುತ್ತದೆ?
20 ಘಾನದಲ್ಲಿರುವ ಒಬ್ಬ ಸ್ತ್ರೀಯಾದ ಪೌಲಿನಳ ವಿಷಯದಲ್ಲಿಯೂ ದೇವರ ವಾಕ್ಯದ ಶಕ್ತಿಯು ದೃಷ್ಟಾಂತಿಸಲ್ಪಟ್ಟಿದೆ. ಒಬ್ಬ ಪೂರ್ಣ ಸಮಯದ ರಾಜ್ಯ ಘೋಷಕಿಯು ಅವಳೊಂದಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದಿಂದ ಬೈಬಲ್ ಅಧ್ಯಯನ ನಡೆಸುತ್ತಿದ್ದಳು.a ಪೌಲಿನಳು ಬಹುಪತ್ನೀತ್ವವುಳ್ಳ ಒಂದು ವಿವಾಹದಲ್ಲಿ ಒಳಗೂಡಿದ್ದಳು ಮತ್ತು ತನ್ನ ಜೀವಿತದಲ್ಲಿ ಬದಲಾವಣೆಗಳನ್ನು ಮಾಡುವ ಆವಶ್ಯಕತೆಯನ್ನು ಮನಗಂಡಳು. ಆದರೆ ಅವಳ ಗಂಡನೂ ಅವಳ ಎಲ್ಲಾ ಸಂಬಂಧಿಕರೂ ಅವಳ ನಿಲುವಿಗೆ ಹಿಂಸಾತ್ಮಕ ರೀತಿಯಲ್ಲಿ ವಿರೋಧಿಸಿದರು. ಉಚ್ಚ ನ್ಯಾಯಾಲಯದ ನ್ಯಾಯಾಧೀಶನೂ ಚರ್ಚಿನ ಮುಖಂಡನೂ ಆಗಿದ್ದ ಅವಳ ಅಜ್ಜನು, ಮತ್ತಾಯ 19:4-6ನೆಯ ವಚನವನ್ನು ತಪ್ಪಾಗಿ ಅನ್ವಯಿಸುವ ಮೂಲಕ ಅವಳನ್ನು ತಡೆಯಲು ಪ್ರಯತ್ನಿಸಿದನು. ಆ ನ್ಯಾಯಾಧೀಶನು ಹೇಳಿದ್ದು ಸಕಾರಾತ್ಮಕವಾಗಿ ಕಂಡುಬಂದಿತಾದರೂ, ಸೈತಾನನು ಯೇಸು ಕ್ರಿಸ್ತನನ್ನು ಶೋಧನೆಗೊಳಪಡಿಸಲು ಪ್ರಯತ್ನಿಸಿದಾಗ ಅವನು ಶಾಸ್ತ್ರವಚನಗಳನ್ನು ತಿರುಚಿ ಹೇಳಿದಂತೆಯೇ ತನಗೂ ಮಾಡಲಾಗುತ್ತಿದೆ ಎಂಬುದನ್ನು ಪೌಲಿನಳು ಆ ಕೂಡಲೆ ಮನಗಂಡಳು. (ಮತ್ತಾಯ 4:5-7) ದೇವರು ಮಾನವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು, ಗಂಡು ಮತ್ತು ಹೆಣ್ಣುಗಳಾಗಿ ಅಲ್ಲ, ಹಾಗೂ ಮೂವರಲ್ಲ ಬದಲಾಗಿ ಇಬ್ಬರು ಸೇರಿ ಒಂದು ಶರೀರವಾಗುವರು ಎಂದು ಹೇಳುವ ಮೂಲಕ, ವಿವಾಹದ ವಿಷಯದಲ್ಲಿ ಯೇಸು ನುಡಿದಿದ್ದ ಸ್ಪಷ್ಟವಾದ ಹೇಳಿಕೆಯನ್ನು ಅವಳು ಜ್ಞಾಪಿಸಿಕೊಂಡಳು. ಅವಳು ತನ್ನ ನಿರ್ಧಾರಕ್ಕೆ ಬಲವಾಗಿ ಅಂಟಿಕೊಂಡಳು ಮತ್ತು ಕಟ್ಟಕಡೆಗೆ ಅವಳಿಗೆ ಬಹುಪತ್ನೀತ್ವದ ವಿವಾಹದಿಂದ ಸಾಂಪ್ರದಾಯಿಕ ವಿಚ್ಛೇದವು ಕೊಡಲ್ಪಟ್ಟಿತು. ಸ್ವಲ್ಪದರಲ್ಲೇ ಅವಳು ಸಂತೋಷಭರಿತ ದೀಕ್ಷಾಸ್ನಾತ ರಾಜ್ಯ ಘೋಷಕಿಯಾದಳು.
ದೇವರ ವಾಕ್ಯವನ್ನು ಸರಿಯಾದ ರೀತಿಯಲ್ಲಿ ಉಪದೇಶಿಸುತ್ತಾ ಇರಿ
21, 22. (ಎ) ರಾಜ್ಯ ಘೋಷಕರೋಪಾದಿ ನಾವು ಯಾವ ದೃಢನಿರ್ಧಾರವನ್ನು ಮಾಡಲು ಬಯಸುತ್ತೇವೆ? (ಬಿ) ಮುಂದಿನ ಲೇಖನದಲ್ಲಿ ನಾವು ಏನನ್ನು ಪರಿಗಣಿಸುವೆವು?
21 ಯೆಹೋವನ ಸಮೀಪಕ್ಕೆ ಬರಲಿಕ್ಕಾಗಿ ತಮ್ಮ ಜೀವಿತಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಇತರರಿಗೆ ಸಹಾಯಮಾಡುವುದರಲ್ಲಿ ನಮ್ಮ ಬಳಕೆಗಾಗಿ ದೇವರ ಲಿಖಿತ ವಾಕ್ಯವು ಖಂಡಿತವಾಗಿಯೂ ಪ್ರಬಲವಾದ ಉಪಕರಣವಾಗಿದೆ. (ಯಾಕೋಬ 4:8) ಒಳ್ಳೇ ಫಲಿತಾಂಶಗಳನ್ನು ಪಡೆದುಕೊಳ್ಳಲಿಕ್ಕಾಗಿ ನಿಪುಣ ಕೆಲಸಗಾರರು ಹೇಗೆ ಉಪಕರಣಗಳನ್ನು ಉಪಯೋಗಿಸುತ್ತಾರೋ ಹಾಗೆಯೇ, ರಾಜ್ಯದ ಘೋಷಕರೋಪಾದಿ ನಮ್ಮ ದೇವದತ್ತ ಕೆಲಸದಲ್ಲಿ ದೇವರ ವಾಕ್ಯವಾದ ಬೈಬಲನ್ನು ಕೌಶಲದಿಂದ ಉಪಯೋಗಿಸಲು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡುವುದೇ ನಮ್ಮ ದೃಢನಿರ್ಧಾರವಾಗಿರಲಿ.
22 ಶಿಷ್ಯರನ್ನಾಗಿ ಮಾಡುವ ನಮ್ಮ ಕೆಲಸದಲ್ಲಿ ಶಾಸ್ತ್ರವಚನಗಳನ್ನು ನಾವು ಹೇಗೆ ಪರಿಣಾಮಕಾರಿಯಾಗಿ ಉಪದೇಶಿಸಸಾಧ್ಯವಿದೆ? ಒಂದು ವಿಧವು, ಒಡಂಬಡಿಸುವ ಬೋಧಕರೋಪಾದಿ ನಮ್ಮ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವ ಮೂಲಕವೇ. ದಯವಿಟ್ಟು ನಿಮ್ಮ ಗಮನವನ್ನು ಮುಂದಿನ ಲೇಖನದ ಕಡೆಗೆ ಹರಿಸಿರಿ, ಏಕೆಂದರೆ ರಾಜ್ಯದ ಸಂದೇಶವನ್ನು ಇತರರಿಗೆ ಬೋಧಿಸುವ ಹಾಗೂ ಅಂಗೀಕರಿಸುವಂತೆ ಅವರಿಗೆ ಸಹಾಯಮಾಡುವ ವಿಧಗಳನ್ನು ಅದು ಸೂಚಿಸುತ್ತದೆ.
[ಪಾದಟಿಪ್ಪಣಿ]
a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
ನೀವು ಜ್ಞಾಪಿಸಿಕೊಳ್ಳಬಲ್ಲಿರೋ?
• ರಾಜ್ಯ ಘೋಷಕರಿಗೆ ಯಾವ ಉಪಕರಣಗಳು ಲಭ್ಯವಿವೆ?
• ಒಬ್ಬ ರಾಜ್ಯ ಕೆಲಸಗಾರನೋಪಾದಿ ಯಾವ ವಿಧಗಳಲ್ಲಿ ಪೌಲನು ಒಂದು ಮಾದರಿಯಾಗಿದ್ದನು?
• ದೇವರ ವಾಕ್ಯವನ್ನು ಸರಿಯಾದ ರೀತಿಯಲ್ಲಿ ಉಪದೇಶಿಸುವುದರಲ್ಲಿ ಏನು ಒಳಗೂಡಿದೆ?
• ಯೆಹೋವನ ಲಿಖಿತ ವಾಕ್ಯವು ಎಷ್ಟು ಪ್ರಬಲವಾದ ಉಪಕರಣವಾಗಿದೆ?
[ಪುಟ 10ರಲ್ಲಿರುವ ಚಿತ್ರಗಳು]
ರಾಜ್ಯ ಘೋಷಣೆಯ ಕೆಲಸದಲ್ಲಿ ಕ್ರೈಸ್ತರು ಉಪಯೋಗಿಸುವ ಕೆಲವು ಉಪಕರಣಗಳು