ನೀವು ದೇವರ ವಾಕ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದೀರೊ?
1 ಯೇಸು ಕ್ರಿಸ್ತನು ಭೂಮಿಯ ಮೇಲೆ ಜೀವಿಸಿರುವವರಲ್ಲಿಯೇ ಅತ್ಯಂತ ಮಹಾನ್ ಬೋಧಕನಾಗಿದ್ದನು. ಅವನು ಜನರ ಹೃದಯಗಳನ್ನು ಸ್ಪರ್ಶಿಸಿದ, ಅವರ ಭಾವಗಳನ್ನು ಕಲಕಿದ, ಮತ್ತು ಒಳ್ಳೆಯ ಕೆಲಸಗಳನ್ನು ಆಚರಿಸಲು ಅವರನ್ನು ಪ್ರಚೋದಿಸಿದಂತಹ ಒಂದು ವಿಧದಲ್ಲಿ ಮಾತಾಡಿದನು. (ಮತ್ತಾ. 7:28, 29) ಅವನು ಯಾವಾಗಲೂ ತನ್ನ ಬೋಧನೆಗೆ ದೇವರ ವಾಕ್ಯವನ್ನು ಆಧಾರವಾಗಿ ಉಪಯೋಗಿಸಿದನು. (ಲೂಕ 24:44, 45) ಅವನು ತನಗೆ ತಿಳಿದಿದ್ದ ಮತ್ತು ಕಲಿಸಲು ಶಕ್ತನಾಗಿದ್ದ ಎಲ್ಲಾ ವಿಷಯಗಳಿಗಾಗಿ ಯೆಹೋವ ದೇವರಿಗೆ ಕೀರ್ತಿಯನ್ನು ಸಲ್ಲಿಸಿದನು. (ಯೋಹಾ. 7:16) ದೇವರ ವಾಕ್ಯವನ್ನು ಸರಿಯಾಗಿ ನಿರ್ವಹಿಸುವ ಮೂಲಕ ಯೇಸು ತನ್ನ ಹಿಂಬಾಲಕರಿಗೆ ಒಂದು ಅತ್ಯುತ್ಕೃಷ್ಟವಾದ ಮಾದರಿಯನ್ನಿಟ್ಟನು.—2 ತಿಮೊ. 2:15.
2 ದೇವರ ವಾಕ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ, ಅಪೊಸ್ತಲ ಪೌಲನೂ ಒಂದು ಎದ್ದುಕಾಣುವ ಮಾದರಿಯೋಪಾದಿ ಕಾರ್ಯನಡಿಸಿದನು. ಅವನು ಶಾಸ್ತ್ರವಚನಗಳನ್ನು ಇತರರಿಗೆ ಕೇವಲ ಓದಿ ಹೇಳುವುದಕ್ಕಿಂತ ಹೆಚ್ಚನ್ನು ಮಾಡಿದನು; ಯೇಸುವು ಕ್ರಿಸ್ತನಾಗಿದ್ದನೆಂದು ದೇವರ ವಾಕ್ಯದಿಂದ ರುಜುವಾತನ್ನು ಸಾದರಪಡಿಸುತ್ತಾ ಅವನು ಏನನ್ನು ಓದಿದನೊ ಅದನ್ನು ವಿವರಿಸಿ, ಅದರ ಕುರಿತಾಗಿ ತರ್ಕಿಸಿದನು. (ಅ. ಕೃ. 17:2-4) ತದ್ರೀತಿಯಲ್ಲಿ, ವಾಗ್ಮಿತೆಯ ಶಿಷ್ಯನಾದ ಅಪೊಲ್ಲೋಸನು “ಶಾಸ್ತ್ರಗಳಲ್ಲಿ ಪ್ರವೀಣ”ನಾಗಿದ್ದನು, ಮತ್ತು ಸತ್ಯದ ಒಂದು ಶಕ್ತಿಯುತವಾದ ಸಾದರಪಡಿಸುವಿಕೆಯನ್ನು ಮಾಡುವ ಮೂಲಕ ಅವುಗಳನ್ನು ಸರಿಯಾಗಿ ನಿರ್ವಹಿಸಿದನು.—ಅ. ಕೃ. 18:24, 28.
3 ದೇವರ ವಾಕ್ಯದ ಒಬ್ಬ ಶಿಕ್ಷಕರಾಗಿರಿ: ಬೈಬಲಿಗೆ ಸೂಚಿಸಿ, ಅದರಿಂದ ತರ್ಕಿಸುವ ಮೂಲಕ ಪ್ರಾಮಾಣಿಕ ಹೃದಯದ ಜನರಿಗೆ ಕಲಿಸುವುದರಲ್ಲಿ ಆಧುನಿಕ ದಿನದ ರಾಜ್ಯ ಘೋಷಕರು ಉತ್ಕೃಷ್ಟವಾದ ಯಶಸ್ಸನ್ನು ಅನುಭವಿಸಿದ್ದಾರೆ. ಒಂದು ಸಂದರ್ಭದಲ್ಲಿ, ಒಬ್ಬ ಸಹೋದರನು, ದುಷ್ಟರ ಮತ್ತು ನೀತಿವಂತರ ಅನಿವಾರ್ಯ ಪರಿಣಾಮದ ಕುರಿತಾಗಿ ಒಬ್ಬ ಪಾಸ್ಟರ್ ಮತ್ತು ಅವನ ಪ್ಯಾರಿಷಿನವರಲ್ಲಿ ಮೂವರೊಂದಿಗೆ ತರ್ಕಿಸಲು, ಸಂಬಂಧಿತ ವಚನಗಳೊಂದಿಗೆ ಯೆಹೆಜ್ಕೇಲ 18:4ನ್ನು ಉಪಯೋಗಿಸಲು ಶಕ್ತನಾದನು. ಫಲಿತಾಂಶವಾಗಿ, ಆ ಚರ್ಚಿನ ಕೆಲವು ಸದಸ್ಯರು ಅಭ್ಯಾಸಿಸಲು ಆರಂಭಿಸಿದರು, ಮತ್ತು ಅವರಲ್ಲಿ ಒಬ್ಬನು ಕಟ್ಟಕಡೆಗೆ ಸತ್ಯವನ್ನು ಸ್ವೀಕರಿಸಿದನು. ಇನ್ನೊಂದು ಸಂದರ್ಭದಲ್ಲಿ, ಒಬ್ಬ ಆಸಕ್ತ ವ್ಯಕ್ತಿಯ ವಿರೋಧಿ ಗಂಡನಿಗೆ, ಯೆಹೋವನ ಸಾಕ್ಷಿಗಳು ಕ್ರಿಸ್ಮಸ್ ಮತ್ತು ಜನ್ಮದಿನಗಳನ್ನು ಏಕೆ ಆಚರಿಸುವುದಿಲ್ಲವೆಂಬುದನ್ನು ವಿವರಿಸುವಂತೆ ಒಬ್ಬ ಸಹೋದರಿಯನ್ನು ಕೇಳಿಕೊಳ್ಳಲಾಯಿತು. ಅವಳು ರೀಸನಿಂಗ್ ಪುಸ್ತಕದಿಂದ ಶಾಸ್ತ್ರೀಯ ಉತ್ತರಗಳನ್ನು ನೇರವಾಗಿ ಓದಿಹೇಳಿದಾಗ, ಆ ಪುರುಷನು ತನ್ನ ಸಮ್ಮತಿಯನ್ನು ವ್ಯಕ್ತಪಡಿಸಿದನು. ಅವನ ಒಪ್ಪಿಗೆಯಿಂದಾಗಿ ಅವನ ಹೆಂಡತಿಯು ಎಷ್ಟು ಹರ್ಷಗೊಂಡಳೆಂದರೆ ಅವಳು ಹೇಳಿದ್ದು: “ನಾವು ನಿಮ್ಮ ಕೂಟಗಳಿಗೆ ಬರಲಿದ್ದೇವೆ.” ಮತ್ತು ಗಂಡನು ಅದಕ್ಕೆ ಒಪ್ಪಿಕೊಂಡನು!
4 ಲಭ್ಯವಿರುವ ಸಹಾಯವನ್ನು ಉಪಯೋಗಿಸಿಕೊಳ್ಳಿರಿ: ನಮ್ಮ ರಾಜ್ಯದ ಸೇವೆ ಮತ್ತು ಸೇವಾ ಕೂಟ ಕಾರ್ಯಕ್ರಮವು, ದೇವರ ವಾಕ್ಯದ ನಿರ್ವಹಣೆಯಲ್ಲಿ ನಮಗೆ ನೆರವು ನೀಡಲು ಉತ್ತಮ ನಿರ್ದೇಶನವನ್ನು ನೀಡುತ್ತದೆ. ನಮ್ಮ ಲಾಭಕ್ಕಾಗಿ ಪ್ರಕಾಶಿಸಲ್ಪಡುವ ಮತ್ತು ಪ್ರತ್ಯಕ್ಷಾಭಿನಯಿಸಲ್ಪಡುವ ಹಾಗೂ ತುಂಬ ಸಮಯೋಚಿತವೂ ಪರಿಣಾಮಕಾರಿಯೂ ಆಗಿ ಪರಿಣಮಿಸಿರುವ, ಸೂಚಿತ ನಿರೂಪಣೆಗಳ ವೈವಿಧ್ಯಕ್ಕಾಗಿ ಅನೇಕ ಪ್ರಚಾರಕರು ಗಣ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ರೀಸನಿಂಗ್ ಫ್ರಮ್ ದ ಸ್ಕ್ರಿಪ್ಚರ್ಸ್ ಪುಸ್ತಕದಲ್ಲಿ, ದೇವರ ವಾಕ್ಯದಲ್ಲಿ ಸಂಬೋಧಿಸಲ್ಪಟ್ಟಿರುವ 70ಕ್ಕಿಂತಲೂ ಹೆಚ್ಚಾದ ಪ್ರಮುಖ ವಿಷಯಗಳನ್ನು ಸರಿಯಾಗಿ ಪ್ರತಿಪಾದಿಸುವ ವಿಧದ ಕುರಿತಾಗಿ ಹೇರಳವಾದ ವಿಚಾರಗಳು ಅಡಕವಾಗಿವೆ. ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವು, ಹೊಸಬರು ತಿಳಿದುಕೊಳ್ಳಬೇಕಾದ ಎಲ್ಲಾ ಮೂಲಭೂತ ಬೈಬಲ್ ಬೋಧನೆಗಳ ಒಂದು ಸಂಕ್ಷಿಪ್ತ ಸಾರಾಂಶವನ್ನು ಒದಗಿಸುತ್ತದೆ. ದೇವಪ್ರಭುತ್ವ ಶುಶ್ರೂಷಾ ಶಾಲಾ ಮಾರ್ಗದರ್ಶಕ ಪುಸ್ತಕದಲ್ಲಿನ 24 ಮತ್ತು 25ನೆಯ ಅಭ್ಯಾಸಗಳು, ಕೌಶಲಭರಿತ ಶಿಕ್ಷಕರು ಶಾಸ್ತ್ರವಚನಗಳನ್ನು ಸರಿಯಾಗಿ ಪ್ರಸ್ತಾಪಿಸುವ, ಓದುವ ಮತ್ತು ಅನ್ವಯಿಸುವ ವಿಧವನ್ನು ನಮಗೆ ತೋರಿಸುತ್ತವೆ. ನಮಗೆ ಸುಲಭವಾಗಿ ಲಭ್ಯವಿರುವ ಈ ಎಲ್ಲಾ ಸಹಾಯದ ಸದುಪಯೋಗವನ್ನು ನಾವು ಮಾಡತಕ್ಕದ್ದು.
5 ನಾವು ದೇವರ ವಾಕ್ಯವನ್ನು ಸರಿಯಾಗಿ ನಿರ್ವಹಿಸುವಾಗ, ಅದು “ಸಜೀವವಾದದ್ದು, ಕಾರ್ಯಸಾಧಕವಾದದ್ದು,” ಮತ್ತು ನಾವು ಯಾರಿಗೆ ಸಾರುತ್ತೇವೊ ಅವರ “ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸ”ಬಲ್ಲದೆಂಬುದನ್ನು ಕಂಡುಕೊಳ್ಳುವೆವು. (ಇಬ್ರಿ. 4:12) ದೇವರ ವಾಕ್ಯದಿಂದ ನಾವು ಅನುಭವಿಸುವ ಯಶಸ್ಸು, ಸತ್ಯವನ್ನು ಇನ್ನೂ ಹೆಚ್ಚಿನ ಧೈರ್ಯದೊಂದಿಗೆ ಮಾತಾಡುವಂತೆ ನಮ್ಮನ್ನು ಪ್ರಚೋದಿಸುವುದು!—ಅ. ಕೃ. 4:31.