ಬೇರೆ ಕುರಿಗಳು ಮತ್ತು ಹೊಸ ಒಡಂಬಡಿಕೆ
“ಅನ್ಯದೇಶೀಯರಲ್ಲಿ [“ವಿದೇಶೀಯರಲ್ಲಿ,” NW] ಯಾರು . . . ಸಬ್ಬತ್ ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ ನನ್ನ ಒಡಂಬಡಿಕೆಯನ್ನು ಭದ್ರವಾಗಿ ಹಿಡಿಯುತ್ತಾರೋ ಅವರೆಲ್ಲರನ್ನೂ ನಾನು ನನ್ನ ಪವಿತ್ರಪರ್ವತಕ್ಕೆ [“ಬರಮಾಡುವೆನು,” NW].—ಯೆಶಾಯ 56:6, 7.
1. (ಎ) ಯೋಹಾನನ ದರ್ಶನಕ್ಕನುಸಾರ, ಯೆಹೋವನ ನ್ಯಾಯತೀರ್ಪಿನ ಗಾಳಿಗಳು ತಡೆದುಹಿಡಿಯಲ್ಪಟ್ಟಿರುವುದರಿಂದ ಏನು ಪೂರೈಸಲ್ಪಡುತ್ತದೆ? (ಬಿ) ಯೋಹಾನನು ಯಾವ ಗಮನಾರ್ಹವಾದ ಸಮೂಹವನ್ನು ನೋಡಿದನು?
ಪ್ರಕಟನೆ ಪುಸ್ತಕದಲ್ಲಿನ ನಾಲ್ಕನೆಯ ದರ್ಶನದಲ್ಲಿ, ಅಪೊಸ್ತಲ ಯೋಹಾನನು, “ದೇವರ ಇಸ್ರಾಯೇಲ್”ನ (NW) ಎಲ್ಲ ಸದಸ್ಯರ ಮುದ್ರೆಯೊತ್ತುವಿಕೆಯು ಪೂರ್ಣಗೊಳ್ಳುತ್ತಿದ್ದಾಗ, ಯೆಹೋವನ ನ್ಯಾಯತೀರ್ಪಿನ ವಿನಾಶಕಾರಿ ಗಾಳಿಗಳು ಹಿಂದೆ ತಡೆದುಹಿಡಿಯಲ್ಪಟ್ಟದ್ದನ್ನು ಕಂಡನು. ಅಬ್ರಹಾಮನ ಸಂತತಿಯ ಪ್ರಧಾನ ಭಾಗವಾಗಿರುವ ಯೇಸುವಿನ ಮುಖಾಂತರ ಆಶೀರ್ವದಿಸಲ್ಪಡುವವರಲ್ಲಿ ಇವರು ಮೊದಲಿಗರಾಗಿದ್ದಾರೆ. (ಗಲಾತ್ಯ 6:16; ಆದಿಕಾಂಡ 22:18; ಪ್ರಕಟನೆ 7:1-4) ಅದೇ ದರ್ಶನದಲ್ಲಿ ಯೋಹಾನನು, “ಸಕಲ ಜನಾಂಗ, ಕುಲ, ಪ್ರಜೆಗಳವರಿಂದ ಮತ್ತು ಭಾಷೆಗಳಿಂದ ಹೊರಬಂದ, . . . ಯಾವನಿಂದಲೂ ಎಣಿಸಲಾಗದಂಥ ಮಹಾ ಸಮೂಹ”ವನ್ನು ನೋಡಿದನು. “ಅವರು ಮಹಾ ಶಬ್ದದಿಂದ ಕೂಗುವುದನ್ನು ಮುಂದರಿಸುತ್ತಾ, ಹೇಳುವುದು: ‘ಸಿಂಹಾಸನಾಸೀನನಾದಾತನಾದ ನಮ್ಮ ದೇವರಿಗೆ ಮತ್ತು ಕುರಿಮರಿಗೆ ನಮ್ಮ ರಕ್ಷಣೆಗಾಗಿ ನಾವು ಋಣಿಗಳು’.” (ಪ್ರಕಟನೆ 7:9, 10, NW) “ಕುರಿಮರಿಗೆ ನಮ್ಮ ರಕ್ಷಣೆಗಾಗಿ ನಾವು ಋಣಿಗಳು” ಎಂದು ಹೇಳುವ ಮೂಲಕ, ತಾವೂ ಅಬ್ರಹಾಮನ ಸಂತತಿಯ ಮೂಲಕ ಆಶೀರ್ವದಿಸಲ್ಪಟ್ಟಿದ್ದೇವೆಂಬುದನ್ನು ಮಹಾ ಸಮೂಹದವರು ತೋರಿಸುತ್ತಾರೆ.
2. ಮಹಾ ಸಮೂಹವು ತೋರಿಬಂದದ್ದು ಯಾವಾಗ, ಮತ್ತು ಅದು ಹೇಗೆ ಗುರುತಿಸಲ್ಪಡುತ್ತದೆ?
2 ಈ ಮಹಾ ಸಮೂಹವನ್ನು ಹಿಂದೆ 1935ರಲ್ಲಿ ಗುರುತಿಸಲಾಯಿತು, ಮತ್ತು ಇಂದು ಅದರ ಸಂಖ್ಯೆ 50 ಲಕ್ಷಕ್ಕಿಂತಲೂ ಹೆಚ್ಚಾಗಿದೆ. ಮಹಾ ಸಂಕಟವನ್ನು ಪಾರಾಗಲು ಗುರುತಿಸಲ್ಪಟ್ಟಿರುವ ಅದರ ಸದಸ್ಯರು “ಆಡು”ಗಳಿಂದ “ಕುರಿ”ಗಳನ್ನು ಯೇಸು ವಿಭಾಗಿಸುವಾಗ ನಿತ್ಯಜೀವಕ್ಕಾಗಿ ಪ್ರತ್ಯೇಕಿಸಲ್ಪಡುವರು. ಮಹಾ ಸಮೂಹದ ಕ್ರೈಸ್ತರು, ಕುರಿಹಟ್ಟಿಗಳ ಕುರಿತಾದ ಯೇಸುವಿನ ದೃಷ್ಟಾಂತದಲ್ಲಿನ “ಬೇರೆ ಕುರಿಗಳ” ಮಧ್ಯದಲ್ಲಿದ್ದಾರೆ. ಅವರು ಒಂದು ಪ್ರಮೋದವನವಾದ ಭೂಮಿಯಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯನ್ನಿಟ್ಟಿರುತ್ತಾರೆ.—ಮತ್ತಾಯ 25:31-46; ಯೋಹಾನ 10:16; ಪ್ರಕಟನೆ 21:3, 4.
3. ಹೊಸ ಒಡಂಬಡಿಕೆಯ ಸಂಬಂಧದಲ್ಲಿ ಅಭಿಷಿಕ್ತ ಕ್ರೈಸ್ತರು ಮತ್ತು ಬೇರೆ ಕುರಿಗಳು ಹೇಗೆ ಭಿನ್ನರಾಗಿದ್ದಾರೆ?
3 1,44,000 ಮಂದಿಗೆ, ಅಬ್ರಹಾಮ ಸಂಬಂಧಿತ ಒಡಂಬಡಿಕೆಯ ಆಶೀರ್ವಾದವು ಹೊಸ ಒಡಂಬಡಿಕೆಯ ಮೂಲಕ ನೀಡಲ್ಪಡುತ್ತದೆ. ಈ ಒಡಂಬಡಿಕೆಯಲ್ಲಿ ಭಾಗಿಗಳೋಪಾದಿ, ಅವರು “ಕೃಪಾಧೀನ”ರು ಮತ್ತು “ಕ್ರಿಸ್ತನ ನಿಯಮಕ್ಕೊಳಗಾದ”ವರು ಆಗಿದ್ದಾರೆ. (ರೋಮಾಪುರ 6:15; 1 ಕೊರಿಂಥ 9:21) ಹೀಗಿರುವುದರಿಂದ, ದೇವರ ಇಸ್ರಾಯೇಲಿನ 1,44,000 ಮಂದಿ ಮಾತ್ರ ಯೇಸುವಿನ ಮರಣದ ಜ್ಞಾಪಕದ ಸಮಯದಲ್ಲಿ ಕುರುಹುಗಳಲ್ಲಿ ಯೋಗ್ಯವಾಗಿ ಪಾಲ್ಗೊಂಡಿದ್ದಾರೆ, ಮತ್ತು ಕೇವಲ ಅವರೊಂದಿಗೆ ಯೇಸು ಒಂದು ರಾಜ್ಯಕ್ಕಾಗಿ ತನ್ನ ಒಡಂಬಡಿಕೆಯನ್ನು ಮಾಡಿದನು. (ಲೂಕ 22:19, 20, 29) ಮಹಾ ಸಮೂಹದ ಸದಸ್ಯರು ಹೊಸ ಒಡಂಬಡಿಕೆಯಲ್ಲಿ ಭಾಗಿಗಳಾಗಿರುವುದಿಲ್ಲ. ಆದರೆ, ಅವರು ದೇವರ ಇಸ್ರಾಯೇಲಿನೊಂದಿಗೆ ಸಹವಾಸಿಸುತ್ತಾರೆ ಮತ್ತು ಅವರ “ದೇಶ”ದಲ್ಲಿ (NW) ಅವರೊಂದಿಗೆ ವಾಸಿಸುತ್ತಾರೆ. (ಯೆಶಾಯ 66:8) ಆದುದರಿಂದ ಅವರು ಕೂಡ ಯೆಹೋವನ ಅಪಾತ್ರ ದಯೆಯ ಅಧೀನಕ್ಕೆ ಮತ್ತು ಕ್ರಿಸ್ತನ ಕಡೆಗಿನ ಧರ್ಮಶಾಸ್ತ್ರದ ಅಧೀನದಲ್ಲಿ ಬರುತ್ತಾರೆಂದು ಹೇಳುವುದು ಯುಕ್ತವಾಗಿದೆ. ಅವರು ಹೊಸ ಒಡಂಬಡಿಕೆಯಲ್ಲಿ ಭಾಗಿಗಳಾಗಿರದಿದ್ದರೂ, ಅದರ ಫಲಾನುಭವಿಗಳಾಗಿದ್ದಾರೆ.
‘ವಿದೇಶೀಯರು’ ಮತ್ತು “ದೇವರ ಇಸ್ರಾಯೇಲ್”
4, 5. (ಎ) ಯೆಶಾಯನಿಗನುಸಾರ, ಯಾವ ಗುಂಪು ಯೆಹೋವನಿಗೆ ಸೇವೆ ಸಲ್ಲಿಸುವುದು? (ಬಿ) ಯೆಶಾಯ 56:6, 7 ಮಹಾ ಸಮೂಹದವರಲ್ಲಿ ಹೇಗೆ ನೆರವೇರಿದೆ?
4 ಪ್ರವಾದಿಯಾದ ಯೆಶಾಯನು ಬರೆದುದು: “ಅನ್ಯದೇಶೀಯರಲ್ಲಿ [“ವಿದೇಶೀಯರಲ್ಲಿ,” NW] ಯಾರು ಯೆಹೋವನೆಂಬ ನನ್ನನ್ನು ಅವಲಂಬಿಸಿ ಸೇವಿಸಿ ನನ್ನ ನಾಮವನ್ನು ಪ್ರೀತಿಸಿ ನನಗೆ ದಾಸರಾಗಿ ಸಬ್ಬತ್ ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ ನನ್ನ ಒಡಂಬಡಿಕೆಯನ್ನು ಭದ್ರವಾಗಿ ಹಿಡಿಯುತ್ತಾರೋ ಅವರೆಲ್ಲರನ್ನೂ ನಾನು ನನ್ನ ಪವಿತ್ರಪರ್ವತಕ್ಕೆ ಬರಮಾಡಿ ನನ್ನ ಪ್ರಾರ್ಥನಾಲಯದಲ್ಲಿ ಉಲ್ಲಾಸಗೊಳಿಸುವೆನು; ನನ್ನ ಯಜ್ಞವೇದಿಯಲ್ಲಿ ಅವರು ಅರ್ಪಿಸುವ ಸರ್ವಾಂಗಹೋಮಗಳೂ ಯಜ್ಞಗಳೂ ನನಗೆ ಮೆಚ್ಚಿಕೆಯಾಗುವವು.” (ಯೆಶಾಯ 56:6, 7) ಇದು ಇಸ್ರಾಯೇಲಿನಲ್ಲಿ, ‘ವಿದೇಶೀಯರು,’ ಇಸ್ರಾಯೇಲ್ಯೇತರರು ಯೆಹೋವನ ಹೆಸರನ್ನು ಪ್ರೀತಿಸುತ್ತಾ, ಧರ್ಮಶಾಸ್ತ್ರದೊಡಂಬಡಿಕೆಯ ಷರತ್ತುಗಳಿಗೆ ವಿಧೇಯರಾಗುತ್ತಾ, ಸಬ್ಬತ್ತನ್ನು ಆಚರಿಸುತ್ತಾ, ಮತ್ತು ದೇವರ ‘ಪ್ರಾರ್ಥನಾಲಯ’ವಾಗಿರುವ ದೇವಾಲಯದಲ್ಲಿ ಯಜ್ಞಗಳನ್ನು ಅರ್ಪಿಸುತ್ತಾ ಆತನನ್ನು ಆರಾಧಿಸುವರೆಂಬುದನ್ನು ಅರ್ಥೈಸಿತು.—ಮತ್ತಾಯ 21:13.
5 ನಮ್ಮ ದಿನದಲ್ಲಿ, ‘ಯೆಹೋವನನ್ನು ಅವಲಂಬಿಸಿರುವ ವಿದೇಶೀಯರು’ ಮಹಾ ಸಮೂಹದವರಾಗಿದ್ದಾರೆ. ಇವರು ದೇವರ ಇಸ್ರಾಯೇಲಿನೊಂದಿಗೆ ಜೊತೆಗೂಡಿ ಯೆಹೋವನಿಗೆ ಸೇವೆ ಸಲ್ಲಿಸುತ್ತಾರೆ. (ಜೆಕರ್ಯ 8:23) ಅವರು ದೇವರ ಇಸ್ರಾಯೇಲಿನಂತೆಯೇ ಸ್ವೀಕಾರಯೋಗ್ಯವಾದ ಯಜ್ಞಗಳನ್ನು ಅರ್ಪಿಸುತ್ತಾರೆ. (ಇಬ್ರಿಯ 13:15, 16) ಅವರು ದೇವರ ‘ಪ್ರಾರ್ಥನಾಲಯ’ವಾದ ಆತನ ಆತ್ಮಿಕ ದೇವಾಲಯದಲ್ಲಿ ಆರಾಧಿಸುತ್ತಾರೆ. (ಪ್ರಕಟನೆ 7:15ನ್ನು ಹೋಲಿಸಿರಿ.) ಅವರು ವಾರದ ಸಬ್ಬತ್ತನ್ನು ಆಚರಿಸುತ್ತಾರೊ? ಹೀಗೆ ಮಾಡುವಂತೆ ಅಭಿಷಿಕ್ತರಾಗಲಿ, ಬೇರೆ ಕುರಿಗಳಾಗಲಿ ಆಜ್ಞಾಪಿಸಲ್ಪಟ್ಟಿಲ್ಲ. (ಕೊಲೊಸ್ಸೆ 2:16, 17) ಆದರೂ, ಪೌಲನು ಅಭಿಷಿಕ್ತ ಇಬ್ರಿಯ ಕ್ರೈಸ್ತರಿಗೆ ಹೇಳಿದ್ದು: “ದೇವರ ಜನರು ಅನುಭವಿಸುವದಕ್ಕಿರುವ ಸಬ್ಬತ್ತೆಂಬ ವಿಶ್ರಾಂತಿಯು ಇನ್ನೂ ಉಂಟು. ಹೇಗಂದರೆ ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರಮಿಸಿಕೊಂಡನೋ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನ್ನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ.” (ಇಬ್ರಿಯ 4:9, 10) ಆ ಇಬ್ರಿಯರು, ‘ದೇವರ ನೀತಿಗೆ’ ತಮ್ಮನ್ನು ಅಧೀನಪಡಿಸಿಕೊಂಡು, ಧರ್ಮಶಾಸ್ತ್ರದ ಕೆಲಸಗಳ ಮೂಲಕ ತಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುವುದರಿಂದ ವಿಶ್ರಮಿಸಿದಾಗ ಈ ‘ಸಬ್ಬತ್ ವಿಶ್ರಾಂತಿ’ಯೊಳಗೆ ಪ್ರವೇಶಿಸಿದರು. (ರೋಮಾಪುರ 10:3, 4) ಅಭಿಷಿಕ್ತ ಅನ್ಯಜಾತಿಯ ಕ್ರೈಸ್ತರು, ತಮ್ಮನ್ನು ಯೆಹೋವನ ನೀತಿಗೆ ಅಧೀನಪಡಿಸಿಕೊಳ್ಳುವ ಮೂಲಕ ಅದೇ ರೀತಿಯ ವಿಶ್ರಾಂತಿಯನ್ನು ಅನುಭವಿಸುತ್ತಾರೆ. ಮಹಾ ಸಮೂಹವು ಆ ವಿಶ್ರಾಂತಿಯಲ್ಲಿ ಅವರೊಂದಿಗೆ ಜೊತೆಗೂಡುತ್ತದೆ.
6. ಇಂದು ಬೇರೆ ಕುರಿಗಳು ತಮ್ಮನ್ನು ಹೊಸ ಒಡಂಬಡಿಕೆಗೆ ಹೇಗೆ ಅಧೀನಪಡಿಸಿಕೊಳ್ಳುತ್ತವೆ?
6 ಇನ್ನೂ ಹೆಚ್ಚಾಗಿ, ಪ್ರಾಚೀನ ಸಮಯದ ವಿದೇಶೀಯರು ಧರ್ಮಶಾಸ್ತ್ರದ ಒಡಂಬಡಿಕೆಯ ಅಧೀನದಲ್ಲಿ ತಮ್ಮನ್ನು ಇರಿಸಿಕೊಂಡಂತೆಯೇ, ಬೇರೆ ಕುರಿಗಳು ತಮ್ಮನ್ನು ಹೊಸ ಒಡಂಬಡಿಕೆಯ ಅಧೀನದಲ್ಲಿರಿಸಿಕೊಳ್ಳುತ್ತವೆ. ಯಾವ ವಿಧದಲ್ಲಿ? ಅದರಲ್ಲಿ ಭಾಗಿಗಳಾಗುವ ಮೂಲಕವಲ್ಲ, ಬದಲಾಗಿ ಅದರೊಂದಿಗೆ ಸಂಬಂಧಿಸಿರುವ ನಿಯಮಗಳಿಗೆ ಅಧೀನರಾಗುವ ಮೂಲಕ ಮತ್ತು ಅದರ ಏರ್ಪಾಡುಗಳಿಂದ ಪ್ರಯೋಜನ ಪಡೆದುಕೊಳ್ಳುವ ಮೂಲಕ. (ಯೆರೆಮೀಯ 31:33, 34ನ್ನು ಹೋಲಿಸಿರಿ.) ತಮ್ಮ ಅಭಿಷಿಕ್ತ ಸಂಗಾತಿಗಳಂತೆ, ಬೇರೆ ಕುರಿಗಳ ‘ಹೃದಯದಲ್ಲಿ’ ಯೆಹೋವನ ಧರ್ಮಶಾಸ್ತ್ರವು ಬರೆಯಲ್ಪಟ್ಟಿದೆ. ಅವರು ಯೆಹೋವನ ಆಜ್ಞೆಗಳನ್ನು ಮತ್ತು ಮೂಲತತ್ವಗಳನ್ನು ಗಾಢವಾಗಿ ಪ್ರೀತಿಸುತ್ತಾರೆ ಮತ್ತು ಅವುಗಳಿಗೆ ವಿಧೇಯರಾಗುತ್ತಾರೆ. (ಕೀರ್ತನೆ 37:31; 119:97) ಅಭಿಷಿಕ್ತ ಕ್ರೈಸ್ತರಂತೆ ಅವರು ಯೆಹೋವನನ್ನು ತಿಳಿದುಕೊಂಡಿದ್ದಾರೆ. (ಯೋಹಾನ 17:3) ಸುನ್ನತಿಯ ಕುರಿತಾಗಿ ಏನು? ಹೊಸ ಒಡಂಬಡಿಕೆಯು ರಚಿಸಲ್ಪಡುವ ಸುಮಾರು 1,500 ವರ್ಷಗಳ ಮುಂಚೆ, ಮೋಶೆಯು ಇಸ್ರಾಯೇಲ್ಯರಿಗೆ ಪ್ರೇರಿಸಿದ್ದು: “ನಿಮ್ಮ ಹೃದಯದಲ್ಲೇ ಸುನ್ನತಿಮಾಡಿಕೊಳ್ಳಿರಿ.” (ಧರ್ಮೋಪದೇಶಕಾಂಡ 10:16; ಯೆರೆಮೀಯ 4:4) ಕಡ್ಡಾಯವಾದ ಮಾಂಸಿಕ ಸುನ್ನತಿಯು ಧರ್ಮಶಾಸ್ತ್ರದೊಂದಿಗೆ ದಾಟಿಹೋದರೂ, ಅಭಿಷಿಕ್ತರು ಮತ್ತು ಬೇರೆ ಕುರಿಗಳು, ತಮ್ಮ ಹೃದಯಗಳ “ಸುನ್ನತಿಯನ್ನು” ಮಾಡಿಕೊಳ್ಳಲೇಬೇಕು. (ಕೊಲೊಸ್ಸೆ 2:11) ಕೊನೆಯದಾಗಿ, ಯೆಹೋವನು ಬೇರೆ ಕುರಿಗಳ ತಪ್ಪನ್ನು, ಯೇಸುವಿನ ಸುರಿಸಲ್ಪಟ್ಟ “ಒಡಂಬಡಿಕೆಯ ರಕ್ತ”ದ ಆಧಾರದ ಮೇಲೆ ಕ್ಷಮಿಸುತ್ತಾನೆ. (ಮತ್ತಾಯ 26:28; 1 ಯೋಹಾನ 1:9; 2:2) 1,44,000 ಮಂದಿಯಂತೆ ದೇವರು ಅವರನ್ನು ಆತ್ಮಿಕ ಪುತ್ರರೋಪಾದಿ ದತ್ತುತೆಗೆದುಕೊಳ್ಳುವುದಿಲ್ಲ. ಆದರೆ ಅಬ್ರಹಾಮನು ದೇವರ ಸ್ನೇಹಿತನೋಪಾದಿ ನೀತಿವಂತನೆಂದು ಘೋಷಿಸಲ್ಪಟ್ಟಿರುವ ಅರ್ಥದಲ್ಲಿಯೇ, ಬೇರೆ ಕುರಿಗಳನ್ನು ಆತನು ನೀತಿವಂತರೆಂದು ಘೋಷಿಸುತ್ತಾನೆ.—ಮತ್ತಾಯ 25:46; ರೋಮಾಪುರ 4:2, 3; ಯಾಕೋಬ 2:23.
7. ಅಬ್ರಹಾಮನಂತೆ ನೀತಿವಂತರೆಂದು ಘೋಷಿಸಲ್ಪಟ್ಟಿರುವ ಬೇರೆ ಕುರಿಗಳಿಗೆ ಯಾವ ಪ್ರತೀಕ್ಷೆಯು ತೆರೆಯುತ್ತದೆ?
7 1,44,000 ಮಂದಿಗೆ, ನೀತಿವಂತರೆಂದು ಘೋಷಿಸಲ್ಪಡುವುದು, ಸ್ವರ್ಗೀಯ ರಾಜ್ಯದಲ್ಲಿ ಯೇಸುವಿನೊಂದಿಗೆ ಆಳುವ ನಿರೀಕ್ಷೆಯನ್ನು ಪಡೆದುಕೊಳ್ಳಲು ಮಾರ್ಗವನ್ನು ತೆರೆಯುತ್ತದೆ. (ರೋಮಾಪುರ 8:16, 17; ಗಲಾತ್ಯ 2:16) ಬೇರೆ ಕುರಿಗಳಿಗೆ, ದೇವರ ಸ್ನೇಹಿತರೋಪಾದಿ ನೀತಿವಂತರೆಂದು ಘೋಷಿಸಲ್ಪಡುವುದು, ಪ್ರಮೋದವನ ಭೂಮಿಯಲ್ಲಿ ಮಹಾ ಸಮೂಹದ ಭಾಗವಾಗಿ ಅರ್ಮಗೆದೋನನ್ನು ಪಾರಾಗುವ ಮೂಲಕ ಇಲ್ಲವೇ ‘ನೀತಿವಂತರ ಪುನರುತ್ಥಾನ’ದ ಮೂಲಕ ನಿತ್ಯಜೀವದ ನಿರೀಕ್ಷೆಯನ್ನು ಅಂಗೀಕರಿಸುವಂತೆ ಅವರನ್ನು ಅನುಮತಿಸುತ್ತದೆ. (ಅ. ಕೃತ್ಯಗಳು 24:15) ಅಂತಹ ಒಂದು ನಿರೀಕ್ಷೆಯಿರುವುದು ಮತ್ತು ವಿಶ್ವದ ಪರಮಾಧಿಕಾರಿಯ ಒಬ್ಬ ಸ್ನೇಹಿತನಾಗಿರುವುದು, “[ಆತನ] ಗುಡಾರದಲ್ಲಿ ಒಬ್ಬ ಅತಿಥಿ” (NW)ಯಾಗಿರುವುದು ಎಂತಹ ಒಂದು ಸುಯೋಗವಾಗಿದೆ! (ಕೀರ್ತನೆ 15:1, 2) ಹೌದು, ಅಭಿಷಿಕ್ತರು ಹಾಗೂ ಬೇರೆ ಕುರಿಗಳು, ಅಬ್ರಹಾಮನ ಸಂತತಿಯಾದ ಯೇಸುವಿನ ಮೂಲಕ ಅದ್ಭುತಕರವಾದ ವಿಧದಲ್ಲಿ ಆಶೀರ್ವದಿಸಲ್ಪಟ್ಟಿವೆ.
ಹೆಚ್ಚು ಶ್ರೇಷ್ಠವಾದ ದೋಷಪರಿಹಾರಕ ದಿನ
8. ಧರ್ಮಶಾಸ್ತ್ರದ ಕೆಳಗಿನ ದೋಷಪರಿಹಾರಕ ದಿನದ ಯಜ್ಞಗಳಿಂದ ಏನು ಮುನ್ಚಿತ್ರಿಸಲ್ಪಟ್ಟಿತು?
8 ಹೊಸ ಒಡಂಬಡಿಕೆಯ ಕುರಿತು ಚರ್ಚಿಸುವಾಗ, ಪೌಲನು ತನ್ನ ವಾಚಕರಿಗೆ ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗಿದ್ದ ವಾರ್ಷಿಕ ದೋಷಪರಿಹಾರಕ ದಿನದ ನೆನಪುಹುಟ್ಟಿಸಿದನು. ಆ ದಿನದಂದು, ಪ್ರತ್ಯೇಕವಾದ ಯಜ್ಞಗಳು ಅರ್ಪಿಸಲ್ಪಟ್ಟವು—ಒಂದು ಲೇವಿ ಯಾಜಕೀಯ ಗೋತ್ರಕ್ಕಾಗಿ ಮತ್ತು ಇನ್ನೊಂದು ಯಾಜಕರಲ್ಲದ 12 ಗೋತ್ರಗಳಿಗಾಗಿ. ಇದು, ಸ್ವರ್ಗೀಯ ನಿರೀಕ್ಷೆಯುಳ್ಳ 1,44,000 ಮಂದಿ ಮತ್ತು ಭೂನಿರೀಕ್ಷೆಯುಳ್ಳ ಲಕ್ಷಾಂತರ ಮಂದಿಗೆ ಪ್ರಯೋಜನವನ್ನು ತರುವ ಯೇಸುವಿನ ಮಹಾ ಯಜ್ಞವನ್ನು ಮುನ್ಚಿತ್ರಿಸುತ್ತದೆಂದು ಬಹು ಸಮಯದಿಂದ ವಿವರಿಸಲಾಗಿದೆ.a ದೋಷಪರಿಹಾರಕ ದಿನದ ನೆರವೇರಿಕೆಯಲ್ಲಿ, ಯೇಸುವಿನ ಯಜ್ಞದ ಪ್ರಯೋಜನಗಳು ಹೊಸ ಒಡಂಬಡಿಕೆಯ ಕೆಳಗಿನ ಹೆಚ್ಚು ಶ್ರೇಷ್ಠವಾದ ದೋಷಪರಿಹಾರಕ ದಿನದ ಮೂಲಕ ಕೊಡಲ್ಪಡುವವು ಎಂಬುದನ್ನು ಪೌಲನು ತೋರಿಸಿದನು. ಈ ಶ್ರೇಷ್ಠವಾದ ದಿನದ ಮಹಾ ಯಾಜಕನೋಪಾದಿ, ಮಾನವರಿಗಾಗಿ “ನಿತ್ಯವಿಮೋಚನೆಯನ್ನು” ಸಂಪಾದಿಸಲಿಕ್ಕೋಸ್ಕರ ಯೇಸು ತನ್ನ ಪರಿಪೂರ್ಣ ಜೀವವನ್ನು ಒಂದು ದೋಷಪರಿಹಾರಕ ಯಜ್ಞವಾಗಿ ಅರ್ಪಿಸಿದನು.—ಇಬ್ರಿಯ 9:11-24.
9. ಹೊಸ ಒಡಂಬಡಿಕೆಯಲ್ಲಿರುವುದರಿಂದ, ಇಬ್ರಿಯ ಅಭಿಷಿಕ್ತ ಕ್ರೈಸ್ತರು ಏನನ್ನು ಸ್ವೀಕರಿಸಲು ಸಾಧ್ಯವಿತ್ತು?
9 ಪ್ರಥಮ ಶತಮಾನದ ಅನೇಕ ಇಬ್ರಿಯ ಕ್ರೈಸ್ತರು ಇನ್ನೂ “[ಮೋಶೆಯ] ಧರ್ಮಶಾಸ್ತ್ರದಲ್ಲಿ ಅಭಿಮಾನಿಗಳಾಗಿ”ದ್ದರು. (ಅ. ಕೃತ್ಯಗಳು 21:20) ಹೀಗಿರುವುದರಿಂದ, ಪೌಲನು ತಕ್ಕದ್ದಾಗಿಯೇ ಅವರಿಗೆ ಜ್ಞಾಪಕಹುಟ್ಟಿಸಿದ್ದು: “[ಯೇಸು] ಒಂದು ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ. ಮೊದಲನೆಯ ಒಡಂಬಡಿಕೆಯ ಕಾಲದಲ್ಲಿ ನಡೆದ ಅಕ್ರಮಗಳ ಪರಿಹಾರಕ್ಕಾಗಿ ಆತನು ಮರಣವನ್ನು ಅನುಭವಿಸಿದ್ದರಿಂದ ದೇವರಿಂದ ಕರೆಯಿಸಿಕೊಂಡವರು ವಾಗ್ದಾನವಾಗಿದ್ದ ನಿತ್ಯಬಾಧ್ಯತೆಯನ್ನು ಹೊಂದುವದಕ್ಕೆ ಆತನ ಮೂಲಕ ಮಾರ್ಗವಾಯಿತು.” (ಇಬ್ರಿಯ 9:15) ಹೊಸ ಒಡಂಬಡಿಕೆಯು, ಇಬ್ರಿಯ ಕ್ರೈಸ್ತರ ಪಾಪಪೂರ್ಣತೆಯನ್ನು ಬಹಿರಂಗಗೊಳಿಸಿದ ಹಳೆಯ ಒಡಂಬಡಿಕೆಯಿಂದ ಅವರನ್ನು ಬಿಡುಗಡೆಗೊಳಿಸಿತು. ಹೊಸ ಒಡಂಬಡಿಕೆಯಿಂದಾಗಿ, ಅವರು ‘ನಿತ್ಯ [ಸ್ವರ್ಗೀಯ] ಬಾಧ್ಯತೆಯ ವಾಗ್ದಾನವನ್ನು’ ಸ್ವೀಕರಿಸಲು ಸಾಧ್ಯವಿತ್ತು.
10. ಅಭಿಷಿಕ್ತರೂ ಬೇರೆ ಕುರಿಗಳೂ ಯಾವುದಕ್ಕಾಗಿ ದೇವರಿಗೆ ಉಪಕಾರ ಹೇಳುತ್ತಾರೆ?
10 “ಮಗನನ್ನು ನಂಬುವ” “ಎಲ್ಲರೂ” ಪ್ರಾಯಶ್ಚಿತ್ತ ಯಜ್ಞದಿಂದ ಪ್ರಯೋಜನವನ್ನು ಪಡೆದುಕೊಳ್ಳುವರು. (ಯೋಹಾನ 3:16, 36) ಪೌಲನು ಹೇಳಿದ್ದು: “ಕ್ರಿಸ್ತನು ಸಹ ಬಹುಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತನಾದನು, ಮತ್ತು ತನ್ನನ್ನು [“ಶ್ರದ್ಧೆಯಿಂದ,” NW] ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನುಂಟುಮಾಡುವದಕ್ಕೋಸ್ಕರ ಪಾಪಸಂಬಂಧವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.” (ಇಬ್ರಿಯ 9:27) ಇಂದು ಯೇಸುವನ್ನು ಶ್ರದ್ಧೆಯಿಂದ ನಿರೀಕ್ಷಿಸುವವರಲ್ಲಿ, ದೇವರ ಇಸ್ರಾಯೇಲಿನ ಬದುಕಿ ಉಳಿದಿರುವ ಅಭಿಷಿಕ್ತ ಕ್ರೈಸ್ತರು ಮತ್ತು ಮಹಾ ಸಮೂಹವನ್ನು ರಚಿಸುತ್ತಿರುವ ಲಕ್ಷಾಂತರ ಮಂದಿ—ಇವರಿಗೂ ನಿತ್ಯವಾದ ಬಾಧ್ಯತೆಯಿದೆ—ಸೇರಿರುತ್ತಾರೆ. ಎರಡೂ ವರ್ಗದವರು, ಹೊಸ ಒಡಂಬಡಿಕೆಗಾಗಿ ಮತ್ತು ಅದರೊಂದಿಗೆ ಜೊತೆಗೂಡಿರುವ ಜೀವದಾಯಕ ಆಶೀರ್ವಾದಗಳು ಹಾಗೂ ಹೆಚ್ಚು ಶ್ರೇಷ್ಠವಾದ ದೋಷಪರಿಹಾರಕ ದಿನ ಮತ್ತು ಸ್ವರ್ಗೀಯ ಅತಿ ಪವಿತ್ರ ಸ್ಥಾನದಲ್ಲಿ ಮಹಾ ಯಾಜಕನಾದ ಯೇಸುವಿನ ಶುಶ್ರೂಷೆಗಾಗಿ ದೇವರಿಗೆ ಉಪಕಾರ ಹೇಳುತ್ತಾರೆ.
ಪವಿತ್ರ ಸೇವೆಯಲ್ಲಿ ಕಾರ್ಯಮಗ್ನರು
11. ಯೇಸುವಿನ ಯಜ್ಞದ ಮೂಲಕ ಶುದ್ಧಗೊಳಿಸಲ್ಪಟ್ಟಿರುವ ಮನಸ್ಸಾಕ್ಷಿಗಳೊಂದಿಗೆ, ಅಭಿಷಿಕ್ತರೂ ಬೇರೆ ಕುರಿಗಳೂ ಸಂತೋಷದಿಂದ ಏನು ಮಾಡುತ್ತಾರೆ?
11 ಇಬ್ರಿಯರಿಗೆ ಬರೆದ ಪತ್ರದಲ್ಲಿ ಪೌಲನು, ಹಳೆಯ ಒಡಂಬಡಿಕೆಯ ಕೆಳಗಿದ್ದ ಪಾಪಾರ್ಪಣೆಗಳಿಗೆ ಹೋಲಿಸುವಾಗ ಹೊಸ ಒಡಂಬಡಿಕೆಯಲ್ಲಿನ ಯೇಸುವಿನ ಯಜ್ಞದ ಹೆಚ್ಚು ಶ್ರೇಷ್ಠವಾದ ಮೌಲ್ಯವನ್ನು ಒತ್ತಿಹೇಳಿದನು. (ಇಬ್ರಿಯ 9:13-15) ಯೇಸುವಿನ ಉತ್ತಮ ಯಜ್ಞವು “ನಮ್ಮನ್ನು ನಿರ್ಜೀವಕರ್ಮಗಳಿಂದ ಬಿಡಿಸಿ ನಾವು ಜೀವವುಳ್ಳ ದೇವರನ್ನು ಆರಾಧಿಸುವವರಾಗುವಂತೆ ನಮ್ಮ ಮನಸ್ಸನ್ನು [“ಮನಸ್ಸಾಕ್ಷಿಗಳನ್ನು,” NW] ಶುದ್ಧೀಕರಿ”ಸಲು ಶಕ್ತವಾಗಿದೆ. ಇಬ್ರಿಯ ಕ್ರೈಸ್ತರಿಗೆ, ‘ನಿರ್ಜೀವಕರ್ಮಗಳು,’ ‘ಮೊದಲನೆಯ [“ಹಿಂದಿನ,” NW] ಒಡಂಬಡಿಕೆಯ ಕಾಲದಲ್ಲಿ ನಡೆದ ಅಕ್ರಮಗಳನ್ನು’ ಒಳಗೊಂಡಿದ್ದವು. ಇಂದು ಕ್ರೈಸ್ತರಿಗಾಗಿ ಅವು, ನಿಜವಾದ ಪಶ್ಚಾತ್ತಾಪವಿದ್ದಂತಹ ಮತ್ತು ದೇವರು ಕ್ಷಮಿಸಿರುವಂತಹ ಗತಕಾಲದ ಪಾಪಗಳನ್ನು ಒಳಗೊಂಡಿರುತ್ತವೆ. (1 ಕೊರಿಂಥ 6:9-11) ಶುದ್ಧಗೊಳಿಸಲ್ಪಟ್ಟ ಮನಸ್ಸಾಕ್ಷಿಗಳೊಂದಿಗೆ ಅಭಿಷಿಕ್ತ ಕ್ರೈಸ್ತರು, “ಜೀವವುಳ್ಳ ದೇವರಿಗೆ ಪವಿತ್ರ ಸೇವೆಯನ್ನು” ಸಲ್ಲಿಸುತ್ತಾರೆ. ಮತ್ತು ಮಹಾ ಸಮೂಹವೂ ಹಾಗೆಯೇ ಮಾಡುತ್ತದೆ. “ಕುರಿಮರಿಯ ರಕ್ತ”ದ (NW) ಮೂಲಕ ತಮ್ಮ ಮನಸ್ಸಾಕ್ಷಿಗಳನ್ನು ಶುದ್ಧಗೊಳಿಸಿದವರಾಗಿ, ಅವರು ದೇವರ ಮಹಾ ಆತ್ಮಿಕ ದೇವಾಲಯದಲ್ಲಿ “ಹಗಲಿರುಳು ಆತನಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಾರೆ.”—ಪ್ರಕಟನೆ 7:14, 15, NW.
12. ನಮಗೆ “ನಂಬಿಕೆಯ ಪೂರ್ಣ ಭರವಸೆ” ಇದೆಯೆಂಬುದನ್ನು ನಾವು ಹೇಗೆ ತೋರಿಸುತ್ತೇವೆ?
12 ಇದಕ್ಕೆ ಕೂಡಿಸಿ, ಪೌಲನು ಹೇಳಿದ್ದು: “ನಿರಪರಾಧಿಯೆಂದು ನಮ್ಮ ಮನಸ್ಸು ನಮಗೆ ಸಾಕ್ಷಿಹೇಳದಂತೆ ನಾವು ಹೃದಯವನ್ನು ಪ್ರೋಕ್ಷಿಸಿಕೊಂಡು ದೇಹವನ್ನು ತಿಳಿನೀರಿನಿಂದ ತೊಳೆದುಕೊಂಡು ಪರಿಪೂರ್ಣವಾದ ನಂಬಿಕೆಯುಳ್ಳವರಾಗಿಯೂ ಯಥಾರ್ಥಹೃದಯವುಳ್ಳವರಾಗಿಯೂ ದೇವರ ಬಳಿಗೆ ಬರೋಣ.” (ಇಬ್ರಿಯ 10:22) “ನಂಬಿಕೆಯ ಪೂರ್ಣ ಭರವಸೆ” (NW) ನಮಗಿದೆಯೆಂದು ನಾವು ಹೇಗೆ ತೋರಿಸಬಲ್ಲೆವು? ಪೌಲನು ಇಬ್ರಿಯ ಕ್ರೈಸ್ತರನ್ನು ಪ್ರೇರಿಸಿದ್ದು: “ನಮ್ಮ ನಿರೀಕ್ಷೆಯನ್ನು ಕುರಿತು ನಾವು ಮಾಡಿದ ಪ್ರತಿಜ್ಞೆಯನ್ನು ನಿಶ್ಚಂಚಲವಾಗಿ ಪರಿಗ್ರಹಿಸೋಣ; ವಾಗ್ದಾನಮಾಡಿದಾತನು ನಂಬಿಗಸ್ತನು. ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟು ಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.” (ಇಬ್ರಿಯ 10:23-25) ನಮ್ಮ ನಂಬಿಕೆಯು ಜೀವಂತವಾಗಿರುವಲ್ಲಿ, ನಾವು ಕೂಡ ‘ಸಭೆಯಾಗಿ ಕೂಡಿಕೊಳ್ಳುವದನ್ನು ಬಿಟ್ಟು ಬಿಡದಿರುವೆವು.’ ಪ್ರೀತಿಸಲು ಮತ್ತು ಸತ್ಕಾರ್ಯಗಳನ್ನು ಮಾಡಲು ನಮ್ಮ ಸಹೋದರರನ್ನು ಪ್ರೇರೇಪಿಸಲು ಮತ್ತು ಅವರಿಂದ ಪ್ರೇರೇಪಿಸಲ್ಪಡಲು ಹಾಗೂ ನಮ್ಮ ನಿರೀಕ್ಷೆಯನ್ನು—ಅದು ಭೌಮಿಕವಾಗಿರಲಿ ಇಲ್ಲವೇ ಸ್ವರ್ಗೀಯದ್ದಾಗಿರಲಿ—ಬಹಿರಂಗವಾಗಿ ಪ್ರಕಟಿಸುವ ಅತ್ಯಾವಶ್ಯಕ ಕೆಲಸಕ್ಕಾಗಿ ಬಲಪಡಿಸಲ್ಪಡಲು ನಾವು ಹರ್ಷಿಸುವೆವು.—ಯೋಹಾನ 13:35.
“ನಿತ್ಯ ಒಡಂಬಡಿಕೆ”
13, 14. ಹೊಸ ಒಡಂಬಡಿಕೆಯು ಯಾವ ವಿಧಗಳಲ್ಲಿ ನಿತ್ಯವಾಗಿದೆ?
13 1,44,000 ಮಂದಿಯಲ್ಲಿ ಕೊನೆಯವರಿಗೆ ತಮ್ಮ ಸ್ವರ್ಗೀಯ ನಿರೀಕ್ಷೆಯು ನೆರವೇರಿದಾಗ ಏನು ಸಂಭವಿಸುತ್ತದೆ? ಹೊಸ ಒಡಂಬಡಿಕೆಯು ಅನ್ವಯವಾಗುವುದು ನಿಲ್ಲುವುದೊ? ಆ ಸಮಯದಲ್ಲಿ, ಭೂಮಿಯ ಮೇಲೆ ದೇವರ ಇಸ್ರಾಯೇಲಿನ ಯಾವ ಸದಸ್ಯನೂ ಉಳಿದಿರುವುದಿಲ್ಲ. ಆ ಒಡಂಬಡಿಕೆಯಲ್ಲಿ ಭಾಗಿಗಳಾಗಿರುವವರೆಲ್ಲರೂ ಯೇಸುವಿನೊಂದಿಗೆ “[ಅವನ] ತಂದೆಯ ರಾಜ್ಯದಲ್ಲಿ” ಇರುವರು. (ಮತ್ತಾಯ 26:29) ಆದರೆ ಇಬ್ರಿಯರಿಗೆ ಪೌಲನು ತನ್ನ ಪತ್ರದಲ್ಲಿ ಬರೆದ ಮಾತುಗಳನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ: “ಶಾಂತಿಯ ದೇವರು . . . ಒಂದು ನಿತ್ಯ ಒಡಂಬಡಿಕೆಯ ರಕ್ತದಿಂದ, ಕುರಿಗಳ ಮಹಾ ಕುರಿಪಾಲಕನನ್ನು ಸತ್ತವರೊಳಗಿಂದ ಎಬ್ಬಿಸಿದನು.” (ಇಬ್ರಿಯ 13:20, NW; ಯೆಶಾಯ 55:3) ಹೊಸ ಒಡಂಬಡಿಕೆಯು ಯಾವ ಅರ್ಥದಲ್ಲಿ ನಿತ್ಯದ್ದಾಗಿದೆ?
14 ಮೊದಲನೆಯದಾಗಿ, ಧರ್ಮಶಾಸ್ತ್ರದೊಡಂಬಡಿಕೆಗೆ ಅಸದೃಶವಾಗಿ ಅದು ಎಂದಿಗೂ ಸ್ಥಾನಪಲ್ಲಟಗೊಳಿಸಲ್ಪಡದು. ಎರಡನೆಯದಾಗಿ, ಯೇಸುವಿನ ಅರಸುತನದಂತೆ, ಇದರ ಕಾರ್ಯಾಚರಣೆಯ ಫಲಿತಾಂಶಗಳು ಶಾಶ್ವತವಾದದ್ದಾಗಿರುವುದು. (ಲೂಕ 1:33ನ್ನು 1 ಕೊರಿಂಥ 15:27, 28ರೊಂದಿಗೆ ಹೋಲಿಸಿರಿ.) ಸ್ವರ್ಗೀಯ ರಾಜ್ಯಕ್ಕೆ ಯೆಹೋವನ ಉದ್ದೇಶಗಳಲ್ಲಿ ಒಂದು ನಿತ್ಯ ಸ್ಥಾನವಿದೆ. (ಪ್ರಕಟನೆ 22:5) ಮತ್ತು ಮೂರನೆಯದಾಗಿ, ಬೇರೆ ಕುರಿಗಳು, ಹೊಸ ಒಡಂಬಡಿಕೆಯ ಏರ್ಪಾಡಿನಿಂದ ಪ್ರಯೋಜನ ಪಡೆದುಕೊಳ್ಳುತ್ತಾ ಇರುವವು. ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆಯ ಸಮಯದಲ್ಲಿ ನಂಬಿಗಸ್ತ ಮಾನವರು ಈಗ ಮಾಡುತ್ತಿರುವಂತೆ “[ಯೆಹೋವನ] ಆಲಯದಲ್ಲಿ ಹಗಲಿರುಳು ಪವಿತ್ರ ಸೇವೆಯನ್ನು ಸಲ್ಲಿಸುತ್ತಾ” ಇರುವರು. ಯೇಸುವಿನ “ಒಡಂಬಡಿಕೆಯ ರಕ್ತ”ದ ಆಧಾರದ ಮೇಲೆ ಕ್ಷಮಿಸಲ್ಪಟ್ಟಿರುವ ಅವರ ಗತಕಾಲದ ಪಾಪಗಳನ್ನು ಯೆಹೋವನು ಪುನಃ ಗಮನಕ್ಕೆ ತರುವುದಿಲ್ಲ. ಅವರು ಯೆಹೋವನ ಸ್ನೇಹಿತರೋಪಾದಿ ಒಂದು ನೀತಿವಂತ ನಿಲುವನ್ನು ಅನುಭವಿಸುವುದನ್ನು ಮುಂದುವರಿಸುವರು, ಮತ್ತು ಆತನ ನಿಯಮವು ಇನ್ನೂ ಅವರ ಹೃದಯಗಳಲ್ಲಿ ಬರೆಯಲ್ಪಟ್ಟಿರುವುದು.
15. ಹೊಸ ಲೋಕದಲ್ಲಿ ಯೆಹೋವನಿಗೆ ಭೂಮಿಯ ಮೇಲಿರುವ ತನ್ನ ಆರಾಧಕರೊಂದಿಗಿರುವ ಸಂಬಂಧವನ್ನು ವರ್ಣಿಸಿರಿ.
15 ಯೆಹೋವನು ಆಗ ಈ ಮಾನವ ಸೇವಕರ ಕುರಿತಾಗಿ, ‘ನಾನು ಅವರಿಗೆ ದೇವರು, ಅವರು ನನಗೆ ಪ್ರಜೆ’ ಎಂದು ಹೇಳಲು ಶಕ್ತನಾಗಿರುವನೊ? ಹೌದು. “ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು.” (ಓರೆಅಕ್ಷರಗಳು ನಮ್ಮವು.) (ಪ್ರಕಟನೆ 21:3) ಅವರು ಯೇಸು ಕ್ರಿಸ್ತನ ಸ್ವರ್ಗೀಯ ವಧುವಾದ “ಪ್ರಿಯ ನಗರ”ದ (NW) ಭೂಪ್ರತಿನಿಧಿಗಳಾಗಿರುವ “ಪವಿತ್ರ ಜನರ ಶಿಬಿರ” (NW)ವಾಗಿ ಪರಿಣಮಿಸುವರು. (ಪ್ರಕಟನೆ 14:1; 20:9; 21:2) ಇದೆಲ್ಲವೂ ಯೇಸುವಿನ ಸುರಿಸಲ್ಪಟ್ಟ “ಒಡಂಬಡಿಕೆಯ ರಕ್ತ”ದಲ್ಲಿನ ಅವರ ನಂಬಿಕೆ, ಹಾಗೂ ಭೂಮಿಯ ಮೇಲಿದ್ದಾಗ ದೇವರ ಇಸ್ರಾಯೇಲ್ ಆಗಿದ್ದ ಸ್ವರ್ಗೀಯ ರಾಜರು ಮತ್ತು ಯಾಜಕರಿಗೆ ಅವರು ತೋರಿಸಿದ ಅಧೀನತೆಯ ಕಾರಣದಿಂದಾಗಿ ಸಾಧ್ಯವಾಗುವುದು.—ಪ್ರಕಟನೆ 5:10.
16. (ಎ) ಭೂಮಿಯ ಮೇಲೆ ಪುನರುತ್ಥಾನಗೊಳಿಸಲ್ಪಟ್ಟವರಿಗೆ ಯಾವ ಸಾಧ್ಯತೆಗಳು ಕಾದಿರುತ್ತವೆ? (ಬಿ) ಸಾವಿರ ವರ್ಷಗಳ ಅಂತ್ಯದಲ್ಲಿ ಯಾವ ಆಶೀರ್ವಾದಗಳು ಬರುವವು?
16 ಭೂಮಿಯ ಮೇಲೆ ಪುನರುತ್ಥಾನಗೊಳಿಸಲ್ಪಡುವ ಮೃತರ ಕುರಿತಾಗಿ ಏನು? (ಯೋಹಾನ 5:28, 29) ಅವರು ಕೂಡ ಅಬ್ರಹಾಮನ ಸಂತತಿಯಾದ ಯೇಸುವಿನ ಮೂಲಕ ‘ಆಶೀರ್ವದಿಸಲ್ಪಡಲು’ ಆಮಂತ್ರಿಸಲ್ಪಡುವರು. (ಆದಿಕಾಂಡ 22:18) ಅವರು ಕೂಡ ಯೆಹೋವನ ನಾಮವನ್ನು ಪ್ರೀತಿಸಿ, ಆತನ ಸೇವೆಯನ್ನು ಮಾಡಿ, ಸ್ವೀಕಾರಯೋಗ್ಯ ಯಜ್ಞಗಳನ್ನು ಅರ್ಪಿಸಿ ಮತ್ತು ಆತನ ಪ್ರಾರ್ಥನಾಲಯದಲ್ಲಿ ಪವಿತ್ರ ಸೇವೆಯನ್ನು ಸಲ್ಲಿಸಲೇಬೇಕಾಗುವುದು. ಹಾಗೆ ಮಾಡುವವರು ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸುವರು. (ಯೆಶಾಯ 56:6, 7) ಸಾವಿರ ವರ್ಷಗಳ ಅಂತ್ಯದೊಳಗೆ, ಎಲ್ಲ ನಂಬಿಗಸ್ತ ವ್ಯಕ್ತಿಗಳು ಯೇಸು ಕ್ರಿಸ್ತನ ಮತ್ತು ಅವನ 1,44,000 ಜೊತೆ ಯಾಜಕರ ಸೇವೆಯ ಮೂಲಕ ಮಾನವ ಪರಿಪೂರ್ಣತೆಗೆ ತರಲ್ಪಟ್ಟಿರುವರು. ಅವರು ದೇವರ ಸ್ನೇಹಿತರೋಪಾದಿ ಕೇವಲ ನೀತಿವಂತರಾಗಿ ಘೋಷಿಸಲ್ಪಡುವುದಿಲ್ಲ, ಅವರು ನೀತಿವಂತರೇ ಆಗಿರುವರು. ಆದಾಮನಿಂದ ಬಾಧ್ಯತೆಯಾಗಿ ಪಡೆದುಕೊಂಡಿರುವ ಪಾಪ ಮತ್ತು ಮರಣದಿಂದ ಸಂಪೂರ್ಣವಾಗಿ ಮುಕ್ತರಾಗಿರುತ್ತಾ, ಅವರು ‘ಜೀವಿತರಾಗಿ ಏಳು’ವರು. (ಪ್ರಕಟನೆ 20:5; 22:2) ಅದೆಂಥ ಒಂದು ಆಶೀರ್ವಾದವಾಗಿರುವುದು! ನಮ್ಮ ಇಂದಿನ ಯಥಾದೃಷ್ಟಿಯಿಂದ, ಯೇಸುವಿನ ಮತ್ತು 1,44,000 ಮಂದಿಯ ಯಾಜಕೀಯ ಕೆಲಸವು ಆಗ ಪೂರೈಸಲ್ಪಟ್ಟಿರುವುದೆಂದು ತೋರುತ್ತದೆ. ಹೆಚ್ಚು ಶ್ರೇಷ್ಠವಾದ ದೋಷಪರಿಹಾರಕ ದಿನದ ಆಶೀರ್ವಾದಗಳು ಪೂರ್ಣವಾಗಿ ಅನ್ವಯಿಸಲ್ಪಟ್ಟಿರುವುದು. ಇದಲ್ಲದೆ, ಯೇಸು “ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡು”ವನು. (1 ಕೊರಿಂಥ 15:24) ಮಾನವಕುಲಕ್ಕಾಗಿ ಒಂದು ಕೊನೆಯ ಪರೀಕ್ಷೆಯಿರುವುದು ಮತ್ತು ಅನಂತರ ಸೈತಾನನೂ ಅವನ ದೆವ್ವಗಳೂ ಸದಾಕಾಲಕ್ಕೂ ನಾಶಗೊಳಿಸಲ್ಪಡುವರು.—ಪ್ರಕಟನೆ 20:7, 10.
17. ನಮ್ಮ ಮುಂದಿರುವ ಆನಂದದ ನೋಟದಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರು ಏನನ್ನು ಮಾಡಲು ದೃಢಚಿತ್ತವುಳ್ಳವರಾಗಿರಬೇಕು?
17 ಆಗ ಆರಂಭಗೊಳ್ಳುವ ಆ ರೋಮಾಂಚನೀಯ ಶಕದಲ್ಲಿ “ನಿತ್ಯ ಒಡಂಬಡಿಕೆ”ಯು ಯಾವುದೇ ಪಾತ್ರವನ್ನು ವಹಿಸುತ್ತಿರುವಲ್ಲಿ, ಅದೇನಾಗಿರುವುದು? ಅದನ್ನು ಹೇಳುವುದು ನಮ್ಮ ಕೆಲಸವಲ್ಲ. ಇಷ್ಟರ ವರೆಗೆ ಯೆಹೋವನು ಏನನ್ನು ಪ್ರಕಟಪಡಿಸಿದ್ದಾನೊ ಅದು ನಮಗೆ ಸದ್ಯಕ್ಕೆ ಸಾಕು. ಅದು ನಮ್ಮನ್ನು ವಿಸ್ಮಿತಗೊಳಿಸುತ್ತದೆ. ಸ್ವಲ್ಪ ಯೋಚಿಸಿರಿ—‘ನೂತನಾಕಾಶಮಂಡಲ ನೂತನಭೂಮಂಡಲ’ದ ಭಾಗದೋಪಾದಿ ನಿತ್ಯಜೀವ! (2 ಪೇತ್ರ 3:13) ಆ ವಾಗ್ದಾನವನ್ನು ಬಾಧ್ಯತೆಯಾಗಿ ಪಡೆದುಕೊಳ್ಳುವ ನಮ್ಮ ಬಯಕೆಯನ್ನು ಯಾವುದೂ ದುರ್ಬಲಗೊಳಿಸದಿರಲಿ. ದೃಢರಾಗಿ ನಿಲ್ಲುವುದು ಸುಲಭವಾಗಿರದಿರಬಹುದು. ಪೌಲನು ಹೇಳಿದ್ದು: “ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆ ಬೇಕು.” (ಇಬ್ರಿಯ 10:36) ಜಯಿಸಬೇಕಾದ ಯಾವುದೇ ಸಮಸ್ಯೆಯು, ಗೆಲ್ಲಬೇಕಾದಂತಹ ಯಾವುದೇ ವಿರೋಧವು, ನಮ್ಮ ಮುಂದೆ ಕಾದಿರುವ ಆನಂದದ ಮುಂದೆ ನಿಕೃಷ್ಟವೆಂಬುದನ್ನು ನೆನಪಿನಲ್ಲಿಡಿರಿ. (2 ಕೊರಿಂಥ 4:17) ಈ ಕಾರಣದಿಂದ, ನಮ್ಮಲ್ಲಿ ಯಾರೊಬ್ಬರೂ “ಹಿಂದೆಗೆದವರಾಗಿ ನಾಶವಾಗುವವ”ರಾಗಿರದಿರೋಣ. ಬದಲಿಗೆ, “ಪ್ರಾಣವನ್ನು ಬದುಕಿ ಉಳಿಸಲಿಕ್ಕಾಗಿ ನಂಬಿಕೆಯುಳ್ಳ” (NW)ವರಾಗಿರೋಣ. (ಇಬ್ರಿಯ 10:39) ನಮಗೆಲ್ಲರಿಗೂ ಒಡಂಬಡಿಕೆಗಳ ದೇವರಾದ ಯೆಹೋವನಲ್ಲಿ ಪೂರ್ಣವಾದ ಭರವಸೆಯಿರಲಿ. ಇದು ನಮ್ಮಲ್ಲಿ ಪ್ರತಿಯೊಬ್ಬರಿಗೂ ನಿತ್ಯ ಆಶೀರ್ವಾದವನ್ನು ತರುವುದು.
[ಪುಟ 21 ರಲ್ಲಿರುವ ಚೌಕ]
ದೇವಾಲಯದಲ್ಲಿ ಪವಿತ್ರ ಸೇವೆ
ಮಹಾ ಸಮೂಹವು ಅಭಿಷಿಕ್ತ ಕ್ರೈಸ್ತರೊಂದಿಗೆ ಯೆಹೋವನ ಮಹಾ ಆತ್ಮಿಕ ದೇವಾಲಯದ ಭೂ ಅಂಗಳದಲ್ಲಿ ಆರಾಧಿಸುತ್ತದೆ. (ಪ್ರಕಟನೆ 7:14, 15; 11:2) ಅವರು ಅನ್ಯಜಾತಿಯವರ ಒಂದು ಪ್ರತ್ಯೇಕ ಅಂಗಣದಲ್ಲಿದ್ದಾರೆಂಬುದನ್ನು ತೀರ್ಮಾನಿಸಲು ಯಾವುದೇ ಕಾರಣವಿಲ್ಲ. ಯೇಸು ಭೂಮಿಯಲ್ಲಿದ್ದಾಗ, ದೇವಾಲಯದಲ್ಲಿ ಅನ್ಯಜಾತಿಯವರ ಒಂದು ಅಂಗಣವಿತ್ತು. ಆದಾಗಲೂ, ಸೊಲೊಮೋನನ ಮತ್ತು ಯೆಹೆಜ್ಕೇಲನ ದೇವಾಲಯಗಳ ದೈವಿಕವಾಗಿ ಪ್ರೇರಿತವಾದ ಯೋಜನೆಗಳಲ್ಲಿ, ಅನ್ಯಜಾತಿಯವರಿಗಾಗಿ ಒಂದು ಅಂಗಣದ ಏರ್ಪಾಡು ಇರಲಿಲ್ಲ. ಸೊಲೊಮೋನನ ದೇವಾಲಯದಲ್ಲಿ, ಇಸ್ರಾಯೇಲ್ಯರು ಮತ್ತು ಯೆಹೂದ್ಯ ಮತಾವಲಂಬಿಗಳು, ಸ್ತ್ರೀಯರು ಮತ್ತು ಪುರುಷರು ಜೊತೆಯಾಗಿ ಆರಾಧಿಸುತ್ತಿದ್ದಂತಹ ಒಂದು ಹೊರಗಣ ಅಂಗಳವಿತ್ತು. ಇದು, ಯೋಹಾನನು ಎಲ್ಲಿ ಮಹಾ ಸಮೂಹವು ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವುದನ್ನು ಕಂಡನೋ ಆ ಆತ್ಮಿಕ ದೇವಾಲಯದ ಭೂ ಅಂಗಣದ ಪ್ರವಾದನಾತ್ಮಕ ನಮೂನೆಯಾಗಿದೆ.
ಆದರೆ, ಎಲ್ಲಿ ಮಹಾ ವೇದಿಯಿತ್ತೊ ಆ ಒಳಗಣ ಅಂಗಳವನ್ನು ಕೇವಲ ಯಾಜಕರು ಮತ್ತು ಲೇವಿಯರು ಪ್ರವೇಶಿಸಸಾಧ್ಯವಿತ್ತು; ಪವಿತ್ರಸ್ಥಾನವನ್ನು ಕೇವಲ ಯಾಜಕರು ಪ್ರವೇಶಿಸಸಾಧ್ಯವಿತ್ತು ಮತ್ತು ಅತಿ ಪವಿತ್ರ ಸ್ಥಾನವನ್ನು ಕೇವಲ ಮಹಾ ಯಾಜಕನು ಪ್ರವೇಶಿಸಸಾಧ್ಯವಿತ್ತು. ಒಳಗಣ ಅಂಗಳ ಮತ್ತು ಪವಿತ್ರ ಸ್ಥಾನವು, ಭೂಮಿಯಲ್ಲಿರುವ ಅಭಿಷಿಕ್ತ ಕ್ರೈಸ್ತರ ಅದ್ವಿತೀಯ ಆತ್ಮಿಕ ಸ್ಥಿತಿಯನ್ನು ಮುನ್ಚಿತ್ರಿಸುತ್ತದೆಂದು ತಿಳಿದುಕೊಳ್ಳಲಾಗುತ್ತದೆ. ಮತ್ತು ಅತಿ ಪವಿತ್ರ ಸ್ಥಾನವು ಸ್ವತಃ ಸ್ವರ್ಗವನ್ನು ಚಿತ್ರಿಸುತ್ತದೆ. ಅಲ್ಲಿಯೇ ಅಭಿಷಿಕ್ತ ಕ್ರೈಸ್ತರು ತಮ್ಮ ಸ್ವರ್ಗೀಯ ಮಹಾ ಯಾಜಕನೊಂದಿಗೆ ಅಮರ ಜೀವನವನ್ನು ಪಡೆದುಕೊಳ್ಳುತ್ತಾರೆ.—ಇಬ್ರಿಯ 10:19, 20.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ, ಒಂದು ಹೊಸ ಲೋಕದೊಳಗೆ ಪಾರಾಗುವಿಕೆ (ಇಂಗ್ಲಿಷ್) ಎಂಬ ಪುಸ್ತಕದ ಅಧ್ಯಾಯ 13ನ್ನು ನೋಡಿರಿ.
ನಿಮಗೆ ಅರ್ಥವಾಯಿತೊ?
◻ ಅಭಿಷಿಕ್ತ ಕ್ರೈಸ್ತರಲ್ಲದೆ, ಯಾರು ಅಬ್ರಹಾಮನ ಸಂತತಿಯ ಮೂಲಕ ಆಶೀರ್ವದಿಸಲ್ಪಡುತ್ತಿದ್ದಾರೆ?
◻ ಹೊಸ ಒಡಂಬಡಿಕೆಯ ಮೂಲಕ ಆಶೀರ್ವದಿಸಲ್ಪಡುವುದರಲ್ಲಿ, ಬೇರೆ ಕುರಿಗಳು ಹಳೆಯ ಒಡಂಬಡಿಕೆಯ ಕೆಳಗಿರುವ ಯೆಹೂದ್ಯ ಮತಾವಲಂಬಿಗಳಂತೆ ಇರುವುದು ಹೇಗೆ?
◻ ಬೇರೆ ಕುರಿಗಳು ಹೆಚ್ಚು ಶ್ರೇಷ್ಠವಾದ ದೋಷಪರಿಹಾರಕ ದಿನದ ಏರ್ಪಾಡಿನ ಮೂಲಕ ಹೇಗೆ ಆಶೀರ್ವದಿಸಲ್ಪಡುತ್ತಾರೆ?
◻ ಪೌಲನು ಹೊಸ ಒಡಂಬಡಿಕೆಯನ್ನು “ನಿತ್ಯ ಒಡಂಬಡಿಕೆ” ಎಂದು ಏಕೆ ಕರೆದನು?
[ಪುಟ 23 ರಲ್ಲಿರುವ ಚಿತ್ರ]
ನಮ್ಮ ಮುಂದಿರುವ ಆನಂದದ ನೋಟದಲ್ಲಿ, ನಾವು “ಪ್ರಾಣವನ್ನು ಬದುಕಿ ಉಳಿಸಲಿಕ್ಕಾಗಿ ನಂಬಿಕೆಯುಳ್ಳ”ವರಾಗಿರೋಣ