ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • re ಅಧ್ಯಾ. 35 ಪು. 251-258
  • ಮಹಾ ಬಾಬೆಲನ್ನು ಹತಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಹಾ ಬಾಬೆಲನ್ನು ಹತಿಸುವುದು
  • ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಎಂಟನೆಯ ಅರಸನು ಎಂದು ಯಾಕೆ ಕರೆಯಲ್ಪಡುತ್ತದೆ?
  • ಒಂದು ಗಳಿಗೆಯ ವರೆಗೆ ಹತ್ತು ರಾಜರುಗಳು
  • ಜಾರಸ್ತ್ರೀಯನ್ನು ಧ್ವಂಸಮಾಡುವುದು
  • ದೇವರ ಅಭಿಪ್ರಾಯವನ್ನು ನೆರವೇರಿಸುವುದು
  • ಎರಡು ಭಯಂಕರ ಮೃಗಗಳೊಂದಿಗೆ ಹೋರಾಡುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ದೇವರ ವೈರಿಗಳಿಗೆ ಏನಾಗುತ್ತೆ ಅಂತ ಪ್ರಕಟನೆಯಲ್ಲಿ ಹೇಳುತ್ತೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • “ಬೇಗನೆ ಸಂಭವಿಸ ಬೇಕಾಗಿರುವ ಸಂಗತಿಗಳನ್ನು” ಯೆಹೋವನು ಪ್ರಕಟಿಸಿದ್ದಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
re ಅಧ್ಯಾ. 35 ಪು. 251-258

ಅಧ್ಯಾಯ 35

ಮಹಾ ಬಾಬೆಲನ್ನು ಹತಿಸುವುದು

1. ಕಡುಗೆಂಪು ಬಣ್ಣದ ಕಾಡು ಮೃಗವನ್ನು ದೂತನು ಹೇಗೆ ವರ್ಣಿಸುತ್ತಾನೆ, ಮತ್ತು ಪ್ರಕಟನೆಯ ಸಂಕೇತಗಳನ್ನು ಅರ್ಥಮಾಡಿಕೊಳ್ಳಲು ಯಾವ ರೀತಿಯ ವಿವೇಕದ ಅಗತ್ಯವಿದೆ?

ಪ್ರಕಟನೆ 17:3ರ ಕಡುಗೆಂಪು ಬಣ್ಣದ ಕಾಡು ಮೃಗವನ್ನು ಇನ್ನೂ ಹೆಚ್ಚು ವಿವರಿಸುತ್ತಾ ದೇವದೂತನು ಯೋಹಾನನಿಗೆ ಹೀಗನ್ನುತ್ತಾನೆ: “ವಿವೇಕವಿರುವ ಬುದ್ಧಿಯು ಒಳಬರುವುದು ಇಲ್ಲಿಯೇ. ಆ ಏಳು ತಲೆಗಳು ಅಂದರೆ ಶಿಖರದಲ್ಲಿ ಆ ಸ್ತ್ರೀ ಕೂತಿರುವ ಏಳು ಬೆಟ್ಟಗಳು; ಮತ್ತು ಅಲ್ಲಿ ಏಳು ಮಂದಿ ಅರಸರು ಇದ್ದಾರೆ: ಐದು ಮಂದಿ ಬಿದ್ದುಹೋಗಿದ್ದಾರೆ, ಒಬ್ಬನು ಇದ್ದಾನೆ, ಮತ್ತೊಬ್ಬನು ಇನ್ನೂ ಬಂದಿಲ್ಲ, ಆದರೆ ಅವನು ಬಂದು ಸೇರಿದಾಗ ಸ್ವಲ್ಪಕಾಲ ಇರಬೇಕು.” (ಪ್ರಕಟನೆ 17:9, 10, NW) ದೇವದೂತನು ಇಲ್ಲಿ ಮೇಲಣ ವಿವೇಕವನ್ನು, ಪ್ರಕಟನೆಯಲ್ಲಿನ ಚಿಹ್ನೆಗಳ ತಿಳಿವಳಿಕೆಯನ್ನು ಕೊಡಸಾಧ್ಯವಿರುವ ಒಂದೇ ವಿವೇಕವನ್ನು ತಿಳಿಯಪಡಿಸುತ್ತಿದ್ದಾನೆ. (ಯಾಕೋಬ 3:17) ಈ ವಿವೇಕವು ನಾವು ಜೀವಿಸುವ ಸಮಯಗಳ ಗಂಭೀರತೆಯ ಸಂಬಂಧವಾಗಿ ಯೋಹಾನ ವರ್ಗ ಮತ್ತು ಅದರ ಸಂಗಾತಿಗಳಿಗೆ ಜ್ಞಾನೋದಯವನ್ನು ಉಂಟುಮಾಡುತ್ತದೆ. ಅದು ಅರ್ಪಿತ ಹೃದಯಗಳಲ್ಲಿ ಈಗ ಜಾರಿಗೊಳಿಸಲ್ಪಡಲಿರುವ ಯೆಹೋವನ ತೀರ್ಪುಗಳಿಗೆ ಗಣ್ಯತೆಯನ್ನು ಕಟ್ಟುತ್ತದೆ, ಮತ್ತು ಯೆಹೋವನೆಡೆಗೆ ಒಂದು ಹಿತಕರ ಭಯವನ್ನು ಮನಸ್ಸಿಗೆ ಹತ್ತಿಸುತ್ತದೆ. ಜ್ಞಾನೋಕ್ತಿ 9:10 ತಿಳಿಸುವಂತೆ: “ಯೆಹೋವನ ಭಯವೇ ಜ್ಞಾನಕ್ಕೆ (ವಿವೇಕ, NW) ಮೂಲವು, ಪರಿಶುದ್ಧನ ತಿಳುವಳಿಕೆಯೇ (ಜ್ಞಾನವೇ, NW) ವಿವೇಕವು (ತಿಳಿವಳಿಕೆ, NW).” ದೈವಿಕ ವಿವೇಕವು ನಮಗೆ ಕಾಡು ಮೃಗದ ಕುರಿತು ಏನನ್ನು ಅರುಹುತ್ತದೆ?

2. ಕಡುಗೆಂಪು ಬಣ್ಣದ ಕಾಡು ಮೃಗದ ಏಳು ತಲೆಗಳ ಅರ್ಥವೇನಾಗಿದೆ, ಮತ್ತು “ಐದು ಮಂದಿ ಬಿದ್ದು ಹೋಗಿದ್ದಾರೆ, ಒಬ್ಬನು ಇದ್ದಾನೆ” ಹೇಗೆ?

2 ಆ ಭಯಂಕರ ಕಾಡು ಮೃಗದ ಏಳು ತಲೆಗಳು ಏಳು “ಬೆಟ್ಟಗಳಿಗೆ” ಯಾ ಏಳು “ಅರಸರಿಗೆ” ಸೂಚಕವಾಗಿವೆ. ಎರಡು ಪದಗಳನ್ನೂ ಶಾಸ್ತ್ರೀಯವಾಗಿ ಸರಕಾರೀ ಶಕ್ತಿಗಳನ್ನು ಸೂಚಿಸಲು ಉಪಯೋಗಿಸಲಾಗುತ್ತದೆ. (ಯೆರೆಮೀಯ 51:24, 25; ದಾನಿಯೇಲ 2:34, 35, 44, 45) ಬೈಬಲಿನಲ್ಲಿ ದೇವರ ಜನರ ವ್ಯವಹಾರಗಳ ಮೇಲೆ ಪರಿಣಾಮ ಬೀರಿದ ಆರು ಲೋಕ ಶಕ್ತಿಗಳನ್ನು ತಿಳಿಸಲಾಗಿದೆ: ಐಗುಪ್ತ, ಅಶ್ಶೂರ್ಯ, ಬಾಬೆಲ್‌, ಮೇದ್ಯ-ಪಾರಸಿಯ, ಗ್ರೀಸ್‌ ಮತ್ತು ರೋಮ್‌. ಇವುಗಳ ಪೈಕಿ ಯೋಹಾನನು ಪ್ರಕಟನೆಯನ್ನು ಪಡೆದ ಸಮಯದ ತನಕ ಐದು ಈಗಾಗಲೇ ಬಂದು ಹೋಗಿದ್ದವು, ಆದರೆ ರೋಮ್‌ ಬಹುಮಟ್ಟಿಗೆ ಇನ್ನೂ ಒಂದು ಲೋಕ ಶಕ್ತಿಯಾಗಿತ್ತು. “ಐದು ಮಂದಿ ಬಿದ್ದುಹೋಗಿದ್ದಾರೆ, ಒಬ್ಬನು ಇದ್ದಾನೆ” ಎಂಬ ಮಾತುಗಳೊಂದಿಗೆ ಇದು ಉತ್ತಮವಾಗಿ ಸರಿದೂಗುತ್ತದೆ. ಆದರೆ ಸಕಾಲಕ್ಕೆ ಬರಲಿದ್ದ “ಮತ್ತೊಬ್ಬನ” ಕುರಿತೇನು?

3. (ಎ) ರೋಮನ್‌ ಸಾಮ್ರಾಜ್ಯವು ಹೇಗೆ ವಿಭಾಗಿಸಲ್ಪಟ್ಟಿತು? (ಬಿ) ಪಶ್ಚಿಮದಲ್ಲಿ ಯಾವೆಲ್ಲಾ ಬೆಳವಣಿಗೆಗಳು ಆದವು? (ಸಿ) ಪವಿತ್ರ ರೋಮನ್‌ ಸಾಮ್ರಾಜ್ಯವನ್ನು ಹೇಗೆ ದೃಷ್ಟಿಸಬೇಕು?

3 ರೋಮನ್‌ ಸಾಮ್ರಾಜ್ಯವು ಬಾಳಿತು ಮತ್ತು ಯೋಹಾನನ ದಿನಗಳ ಅನಂತರ ನೂರಾರು ವರ್ಷಗಳ ತನಕ ವಿಸ್ತರಿಸಿತು ಸಹ. ಸಾ. ಶ. 330 ರಲ್ಲಿ ಚಕ್ರವರ್ತಿ ಕಾನ್‌ಸ್ಟ್ಯಾಂಟೀನ್‌ ತನ್ನ ರಾಜಧಾನಿಯನ್ನು ರೋಮಿನಿಂದ ಬಜ್ಯಾನ್‌ಟೀಯಮ್‌ಗೆ ಸ್ಥಳಾಂತರಿಸಿದನು. ಅದಕ್ಕೆ ಅವನು ಅನಂತರ ಕಾನ್‌ಸ್ಟ್ಯಾಂಟಿನೋಪಲ್‌ ಎಂದು ಪುನಃ ನಾಮಕರಣ ಮಾಡಿದನು. ಸಾ. ಶ. 395 ರಲ್ಲಿ ರೋಮನ್‌ ಸಾಮ್ರಾಜ್ಯವು ಪೂರ್ವ ಮತ್ತು ಪಶ್ಚಿಮ ಭಾಗಗಳಾಗಿ ಒಡೆಯಿತು. ಸಾ. ಶ. 410 ರಲ್ಲಿ, ರೋಮ್‌ ತಾನೇ ವಿಸಿಗೋತ್‌ಗಳ (“ಕ್ರೈಸ್ತತ್ವ”ದ ಅರೀಯನ್‌ ಗುಂಪಿಗೆ ಮತಾಂತರಿಸಲ್ಪಟ್ಟ ಜರ್ಮನಿಯ ಒಂದು ಕುಲ) ಅಲಾರಿಕ್‌ ರಾಜನ ಹಸ್ತಗತವಾಯಿತು. ಜರ್ಮನಿಯ ಕುಲಗಳು (ಇವರೂ “ಕ್ರೈಸ್ತರು”) ಸ್ಪೆಯಿನನ್ನು ಮತ್ತು ಉತ್ತರ ಆಫ್ರಿಕದಲ್ಲಿನ ರೋಮಿನ ಬಹು ಅಂಶ ಪ್ರದೇಶವನ್ನು ಆಕ್ರಮಣ ಮಾಡಿ ಜಯಿಸಿದವು. ಯೂರೋಪಿನಲ್ಲಿ ಶತಮಾನಗಳ ಉತ್ಕ್ರಾಂತಿ, ಅವಿಶ್ರಾಂತಿ ಮತ್ತು ಹೊಂದಾಣಿಸುವಿಕೆ ಇತ್ತು. ಯಾರು 9 ನೆಯ ಶತಮಾನದಲ್ಲಿ ಪೋಪ್‌ ಲಿಯೋ III, ಮತ್ತು 13 ನೆಯ ಶತಮಾನದಲ್ಲಿ ಅಳಿಕ್ವೆ ನಡಿಸಿದ ಫ್ರೆಡರಿಕ್‌ II ರೊಂದಿಗೆ ಮೈತ್ರಿಸಂಧಾನವನ್ನು ರಚಿಸಿದನೋ, ಆ ಷಾರ್ಲ್‌ಮೇನ್‌ನಂತಹ ಪ್ರಮುಖ ಚಕ್ರವರ್ತಿಗಳು ಪಶ್ಚಿಮದಲ್ಲಿ ಎದ್ದರು. ಆದರೆ ಅವರ ರಾಜ್ಯವು ಪವಿತ್ರ ರೋಮನ್‌ ಸಾಮ್ರಾಜ್ಯವಾಗಿ ಹೆಸರಿಸಲ್ಪಟ್ಟರೂ, ಅದರ ಅಧಿಕಾರ ಕ್ಷೇತ್ರವು ಹಿಂದಣ ರೋಮನ್‌ ಸಾಮ್ರಾಜ್ಯವು ಉಚ್ಛಾಯ್ರ ಸ್ಥಿತಿಯಲ್ಲಿದ್ದಾಗಿನ ಕ್ಷೇತ್ರಕ್ಕಿಂತ ತೀರಾ ಚಿಕ್ಕದಾಗಿತ್ತು. ಅದು ಹೊಸ ಸಾಮ್ರಾಜ್ಯಕ್ಕಿಂತ ಹೆಚ್ಚಾಗಿ ಈ ಪುರಾತನ ಶಕ್ತಿಯ ಪುನಃ ಸ್ಥಾಪನೆ ಅಥವಾ ಮುಂದುವರಿಸುವಿಕೆಯಾಗಿತ್ತು.

4. ಪ್ರಾಚ್ಯ ಸಾಮ್ರಾಜ್ಯಕ್ಕೆ ಯಾವೆಲ್ಲಾ ಯಶಸ್ಸುಗಳು ಸಿಕ್ಕಿದವು, ಆದರೆ ಪುರಾತನ ರೋಮಿನ ಮೊದಲಿನ ಕ್ಷೇತ್ರವಾಗಿದ್ದ ಉತ್ತರ ಆಫ್ರಿಕ, ಸ್ಪೆಯಿನ್‌, ಮತ್ತು ಸಿರಿಯದ ಹೆಚ್ಚಿನ ಭಾಗಗಳಿಗೆ ಏನು ಸಂಭವಿಸಿತು?

4 ಕಾನ್‌ಸ್ಟ್ಯಾಂಟಿನೋಪಲ್‌ನಲ್ಲಿ ಕೇಂದ್ರೀಕೃತವಾದ ರೋಮಿನ ಪೂರ್ವ ಸಾಮ್ರಾಜ್ಯವು ಪಾಶ್ಚಾತ್ಯ ಸಾಮ್ರಾಜ್ಯದೊಂದಿಗೆ ಹೆಚ್ಚು ಕಡಿಮೆ ಆತಂಕದ ಸಂಬಂಧದಲ್ಲಿ ಬಾಳಿತು. ಪೌರಸ್ತ್ಯ ಚಕ್ರವರ್ತಿಯಾದ I ನೆಯ ಜಸಿನ್ಟಿಯನ್‌ ಉತ್ತರ ಆಫ್ರಿಕದ ಬಹುಭಾಗವನ್ನು ಪುನಃ ಜಯಿಸಶಕ್ತನಾದನು. ಮತ್ತು ಅವನು ಸ್ಪೆಯಿನ್‌ ಮತ್ತು ಇಟೆಲಿಯಲ್ಲಿಯೂ ಹಸ್ತಕ್ಷೇಪಮಾಡಿದನು. ಏಳನೆಯ ಶತಮಾನದಲ್ಲಿ II ನೆಯ ಜಸಿನ್ಟಿಯನ್‌ ಸ್ಲಾವ್‌ ಬಣದವರಿಂದ ಜಯಿಸಲಾದ ಮೆಕೆದೋನ್ಯದ ಕ್ಷೇತ್ರಗಳನ್ನು ಸಾಮ್ರಾಜ್ಯಕ್ಕಾಗಿ ಮರಳಿ ಪಡೆದನು. ಆದಾಗ್ಯೂ, ಎಂಟನೆಯ ಶತಮಾನದೊಳಗೆ ಉತ್ತರ ಆಫ್ರಿಕ, ಸ್ಪೆಯಿನ್‌ ಮತ್ತು ಸಿರಿಯದಲ್ಲಿನ ಪ್ರಾಚೀನ ರೋಮಿನ ಹಿಂದಿನ ಪ್ರದೇಶದ ಬಹುಭಾಗವು ಇಸ್ಲಾಮಿನ ಹೊಸ ಸಾಮ್ರಾಜ್ಯದ ಕೆಳಗೆ ಬಂದುಬಿಟ್ಟಿತು, ಮತ್ತು ಹೀಗೆ ಕಾನ್‌ಸ್ಟ್ಯಾಂಟಿನೋಪಲ್‌ ಮತ್ತು ರೋಮ್‌—ಇವೆರಡರ ಹತೋಟಿಯಿಂದ ತಪ್ಪಿ ಹೋಯಿತು.

5. ರೋಮ್‌ ನಗರವು ಸಾ. ಶ. 410 ರಲ್ಲಿ ಪತನಗೊಂಡರೂ, ರಾಜಕೀಯ ರೋಮನ್‌ ಸಾಮ್ರಾಜ್ಯದ ಎಲ್ಲಾ ಸುಳಿವುಗಳನ್ನು ಲೋಕರಂಗದಿಂದ ಅಳಿಸಿಬಿಡಲು ಇನ್ನೂ ಹೆಚ್ಚು ಶತಮಾನಗಳನ್ನು ತೆಗೆದುಕೊಂಡದ್ದು ಹೇಗೆ?

5 ಕಾನ್‌ಸ್ಟ್ಯಾಂಟಿನೋಪಲ್‌ ನಗರವು ತಾನೇ ತುಸು ದೀರ್ಘಕಾಲ ಬಾಳಿತು. ಅದು ಪರ್ಸಿಯನರಿಂದ, ಅರಬಿಗಳಿಂದ, ಬಲ್ಗಾರರಿಂದ ಮತ್ತು ರಷ್ಯನರಿಂದ ಪದೇ ಪದೇ ಬಂದ ಆಕ್ರಮಣಗಳನ್ನು ಪಾರಾಗಿ ಕೊನೆಗೆ 1203 ರಲ್ಲಿ ಮುಸ್ಲಿಮರೆದುರಲ್ಲ, ಬದಲಾಗಿ ಪಶ್ಚಿಮದಿಂದ ಬಂದ ಕ್ರುಸೇಡರೆದುರು ಪತನಗೊಂಡಿತು. ಆದರೂ, 1453 ರಲ್ಲಿ ಅದು ಮುಸ್ಲಿಮ್‌ ಆಟೊಮನ್‌ ರಾಜನಾದ II ನೆಯ ಮೆಹ್ಮೆಡ್‌ನ ಅಧಿಕಾರದ ಕೆಳಗೆ ಬಂತು, ಮತ್ತು ಬೇಗನೇ ಆಟೊಮನ್‌ನ ಯಾ ಟರ್ಕಿಶ್‌ ಸಾಮ್ರಾಜ್ಯದ ರಾಜಧಾನಿಯಾಯಿತು. ಹೀಗೆ, ರೋಮ್‌ ನಗರವು ಸಾ. ಶ. 410 ರಲ್ಲಿ ಪತನಗೊಂಡರೂ, ರಾಜಕೀಯ ರೋಮನ್‌ ಸಾಮ್ರಾಜ್ಯದ ಎಲ್ಲಾ ಕುರುಹುಗಳು ಲೋಕದೃಶ್ಯದಿಂದ ಗತಿಸಿ ಹೋಗಲು ಅನೇಕ ಶತಮಾನಗಳನ್ನು ತೆಗೆದುಕೊಂಡಿತು. ಮತ್ತು ಆಗಲೂ, ಅದರ ಪ್ರಭಾವವನ್ನು ರೋಮಿನ ಪೋಪನ ಹುದ್ದೆಯ ಮೇಲೆ ಮತ್ತು ಈಸರ್ನ್ಟ್‌ ಆರ್ತೊಡಾಕ್ಸ್‌ ಚರ್ಚುಗಳ ಮೇಲೆ ಆಧಾರಿತವಾದ ಧಾರ್ಮಿಕ ಸಾಮ್ರಾಜ್ಯಗಳಲ್ಲಿ ಇನ್ನೂ ಗ್ರಹಿಸಬಹುದಾಗಿತ್ತು.

6. ಯಾವ ಹೊಚ್ಚ ಹೊಸ ಸಾಮ್ರಾಜ್ಯಗಳು ವಿಕಸಿಸಿದವು, ಮತ್ತು ಅದರಲ್ಲಿ ಅತಿ ಯಶಸ್ವಿಯಾದ ಒಂದು ಯಾವುದು?

6 ಆದಾಗ್ಯೂ, 15 ನೆಯ ಶತಮಾನದೊಳಗೆ, ಕೆಲವು ದೇಶಗಳು ಪೂರ್ಣ ಹೊಸ ಸಾಮ್ರಾಜ್ಯಗಳನ್ನು ಕಟ್ಟುತ್ತಿದ್ದವು. ಈ ಕೆಲವು ಹೊಸ ಚಕ್ರಾಧಿಪತ್ಯ ಅಧಿಕಾರಗಳು ರೋಮಿನ ಪೂರ್ವ ವಸಾಹತುಗಳ ಪ್ರದೇಶದಲ್ಲಿ ಕಂಡುಬಂದು, ಅವರ ಸಾಮ್ರಾಜ್ಯಗಳು ರೋಮನ್‌ ಸಾಮ್ರಾಜ್ಯದ ಕೇವಲ ಮುಂದುವರಿಸುವಿಕೆಗಳಾಗಿರಲಿಲ್ಲ. ಪೋರ್ಚುಗಲ್‌, ಸ್ಪೆಯಿನ್‌, ಫ್ರಾನ್ಸ್‌ ಮತ್ತು ಹಾಲ್ಲಿಂಡ್‌ ಎಲ್ಲವೂ ಬಹುದೂರ ವ್ಯಾಪಿಸಿದ ಪ್ರಭುತ್ವಗಳ ಪೀಠಗಳಾದವು. ಆದರೆ ಬ್ರಿಟನ್‌ ಅತಿ ಯಶಸ್ವಿಯಾಗಿ, ‘ಸೂರ್ಯನು ಎಂದೂ ಅಸ್ತಮಿಸದ’ ಒಂದು ಬಲುದೊಡ್ಡ ಸಾಮ್ರಾಜ್ಯದ ಮೇಲೆ ಅಧ್ಯಕ್ಷತೆ ನಡೆಸಿತು. ಈ ಸಾಮ್ರಾಜ್ಯವು ಬೇರೆ ಬೇರೆ ಸಮಯಗಳಲ್ಲಿ ಉತ್ತರ ಅಮೆರಿಕ, ಆಫ್ರಿಕ, ಭಾರತ, ಮತ್ತು ಆಗ್ನೇಯ ಏಶ್ಯಾದ ಹೆಚ್ಚಿನ ಭಾಗಗಳಲ್ಲಿ ಮಾತ್ರವಲ್ಲದೆ ದಕ್ಷಿಣ ಪೆಸಿಫಿಕ್‌ನ ವೈಶಾಲ್ಯದ ಮೇಲೆ ಹರಡಿತು.

7. ಒಂದು ರೀತಿಯ ಉಭಯ ಶಕ್ತಿಯು ಹೇಗೆ ಅಸ್ತಿತ್ವಕ್ಕೆ ಬಂತು, ಮತ್ತು ಏಳನೆಯ ‘ತಲೆ’ ಯಾ ಲೋಕ ಶಕ್ತಿಯು ಎಷ್ಟು ಕಾಲದ ವರೆಗೆ ಮುಂದುವರಿಯುತ್ತದೆಂದು ಯೋಹಾನನು ಹೇಳುತ್ತಾನೆ?

7 ಹತ್ತೊಂಬತ್ತನೆಯ ಶತಮಾನದೊಳಗೆ ಉತ್ತರ ಅಮೆರಿಕದ ಕೆಲವು ವಸಾಹತುಗಳು ಸ್ವತಂತ್ರ ಅಮೆರಿಕವಾಗಿ ರಚಿಸಿಕೊಳ್ಳಲು, ಬ್ರಿಟನಿನಿಂದ ತಮ್ಮನ್ನು ಆಗಲೇ ಕಡಿದುಕೊಂಡಿದ್ದವು. ರಾಜಕೀಯವಾಗಿ, ಹೊಸ ರಾಷ್ಟ್ರ ಮತ್ತು ಹಿಂದಣ ಮಾತೃ ಭೂಮಿಯ ಮಧ್ಯೆ ಕೆಲವು ಘರ್ಷಣೆಗಳು ಮುಂದುವರಿದವು. ಹಾಗಿದ್ದರೂ, ಮೊದಲನೇ ಲೋಕಯುದ್ಧವು ಇವೆರಡೂ ದೇಶಗಳು ತಮ್ಮ ಸಾಮಾನ್ಯ ಅಭಿರುಚಿಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿತು ಮತ್ತು ಅವರ ನಡುವೆ ಒಂದು ವಿಶೇಷ ಸಂಬಂಧವು ರಚಿಸಲ್ಪಟ್ಟಿತು. ಹೀಗೆ, ಈಗ ಭೂಮಿಯ ಅತಿ ಸಮೃದ್ಧ ದೇಶವಾದ ಅಮೆರಿಕ, ಮತ್ತು ಈಗ ಲೋಕದ ಅತಿ ದೊಡ್ಡ ಸಾಮ್ರಾಜ್ಯದ ಪೀಠವಾದ ಗ್ರೇಟ್‌ ಬ್ರಿಟನ್‌ ಕೂಡಿದ ಒಂದು ರೀತಿಯ ಉಭಯ ಲೋಕ ಶಕ್ತಿಯು ಅಸ್ತಿತ್ವಕ್ಕೆ ಬಂತು. ಹಾಗಾದರೆ ಇಲ್ಲಿ ಲೋಕಾಂತ್ಯದ ಸಮಯದೊಳಗೆ ಮುಂದುವರಿಯುವ, ಮತ್ತು ಯೆಹೋವನ ಆಧುನಿಕ ದಿನದ ಸಾಕ್ಷಿಗಳು ಮೊದಲು ದೃಢವಾಗಿ ನೆಲೆಗೊಂಡ ಪ್ರದೇಶಗಳಲ್ಲಿ ಏಳನೆಯ ‘ತಲೆ’ ಯಾ ಲೋಕಶಕ್ತಿ ಇದೆ. ಆರನೆಯ ತಲೆಯ ದೀರ್ಘ ಆಳಿಕ್ವೆಯೊಂದಿಗೆ ಹೋಲಿಸುವಾಗ, ಏಳನೆಯದು ಕೇವಲ “ಸ್ವಲ್ಪಕಾಲ”, ದೇವರ ರಾಜ್ಯವು ಎಲ್ಲಾ ರಾಷ್ಟ್ರೀಯ ಅಸ್ತಿತ್ವಗಳನ್ನು ನಾಶಮಾಡುವ ವರೆಗೆ, ಉಳಿಯುತ್ತದೆ.

ಎಂಟನೆಯ ಅರಸನು ಎಂದು ಯಾಕೆ ಕರೆಯಲ್ಪಡುತ್ತದೆ?

8, 9. ಸಾಂಕೇತಿಕ ಕಡುಗೆಂಪು ಬಣ್ಣದ ಕಾಡು ಮೃಗವನ್ನು ದೇವದೂತನು ಏನೆಂದು ಕರೆಯುತ್ತಾನೆ, ಮತ್ತು ಅದು ಏಳರಿಂದ ಯಾವ ರೀತಿಯಲ್ಲಿ ಉಗಮಿಸುತ್ತದೆ?

8 ದೇವದೂತನು ಯೋಹಾನನಿಗೆ ಇನ್ನೂ ವಿವರಿಸುವುದು: “ಮೊದಲಿದ್ದು ಈಗ ಇಲ್ಲದಿರುವ ಆ ಕಾಡು ಮೃಗವು ಅದು ತಾನೇ ಎಂಟನೆಯ ಅರಸು, ಆದರೆ ಆ ಏಳರಿಂದ ಉಗಮಿಸುತ್ತದೆ ಮತ್ತು ನಾಶಕ್ಕೆ ಹೋಗಿಬಿಡುತ್ತದೆ.” (ಪ್ರಕಟನೆ 17:11, NW) ಸಾಂಕೇತಿಕ ಕಡುಗೆಂಪು ಬಣ್ಣದ ಕಾಡು ಮೃಗವು ಏಳು ತಲೆಗಳಿಂದ “ಉಗಮಿಸುತ್ತದೆ”, ಅಂದರೆ ಕಡುಗೆಂಪು ಬಣ್ಣದ ಕಾಡು ಮೃಗವು ಯಾವುದರ ವಿಗ್ರಹವಾಗಿದೆಯೋ ಆ “ಸಮುದ್ರದಿಂದ” ಬಂದ “ಕಾಡು ಮೃಗದ” ಆ ತಲೆಗಳಿಂದ ಅದು ಜನಿಸಿದೆ ಅಥವಾ ತನ್ನ ಜನನಕ್ಕೆ ಯಾ ಅದರ ಅಸ್ತಿತ್ವಕ್ಕೆ ಋಣಿಯಾಗಿದೆ. ಯಾವ ರೀತಿಯಲ್ಲಿ? ಒಳ್ಳೇದು, 1919 ರಲ್ಲಿ ಆ್ಯಂಗ್ಲೋ-ಅಮೆರಿಕನ್‌ ಶಕ್ತಿಯು ಪ್ರಬಲ ಸ್ಥಿತಿಯ ತಲೆಯಾಗಿತ್ತು. ಮೊದಲಿನ ಆರು ತಲೆಗಳು ಪತನಗೊಂಡಿದ್ದವು, ಮತ್ತು ಪ್ರಬಲ ಲೋಕ ಶಕ್ತಿಯ ಸ್ಥಾನವನ್ನು ಈ ಉಭಯ ತಲೆಗೆ ದಾಟಿಸಲಾಯಿತು ಮತ್ತು ಅದರಲ್ಲಿ ಈಗ ಕೇಂದ್ರೀಕೃತವಾಗಿತ್ತು. ಈ ಏಳನೆಯ ತಲೆ, ಲೋಕ ಶಕ್ತಿಗಳ ಸಾಲಿನ ಪ್ರಚಲಿತ ಪ್ರತಿನಿಧಿಯೋಪಾದಿ ಜನಾಂಗ ಸಂಘದ ಸ್ಥಾಪನೆಯಲ್ಲಿ ಪ್ರೇರಕ ಶಕ್ತಿಯಾಗಿತ್ತು ಮತ್ತು ಸಂಯುಕ್ತ ರಾಷ್ಟ್ರ ಸಂಘದ ಪ್ರಧಾನ ಪ್ರವರ್ತಕವಾಗಿ ಮತ್ತು ಆರ್ಥಿಕ ಬೆಂಬಲವಾಗಿ ಇನ್ನೂ ಇರುತ್ತದೆ. ಹೀಗೆ ಸಾಂಕೇತಿಕವಾಗಿ, ಕಡುಗೆಂಪು ಬಣ್ಣದ ಕಾಡು ಮೃಗವು—ಎಂಟನೆಯ ಅರಸು—ಮೂಲದ ಏಳು ತಲೆಗಳಿಂದ “ಉಗಮಿಸುತ್ತದೆ”. ಈ ವಿಧದಲ್ಲಿ ದೃಷ್ಟಿಸುವಾಗ, ಏಳರಿಂದ ಅದು ಉಗಮವಾಗಿತ್ತು ಎಂಬ ಹೇಳಿಕೆಯು, ಕುರಿಮರಿಯಂತೆ ಎರಡು ಕೊಂಬುಗಳಿದ್ದ ಕಾಡು ಮೃಗವು (ಆ್ಯಂಗ್ಲೋ-ಅಮೆರಿಕನ್‌ ಲೋಕ ಶಕ್ತಿ, ಆ ಮೂಲ ಕಾಡು ಮೃಗದ ಏಳನೆಯ ತಲೆ) ವಿಗ್ರಹವನ್ನು ಮಾಡಲು ಮತ್ತು ಅದಕ್ಕೆ ಜೀವಕೊಡಲು ಪ್ರೋತ್ಸಾಹಿಸಿತು ಎನ್ನುವ ಈ ಮೊದಲಿನ ಪ್ರಕಟನೆಯೊಂದಿಗೆ ಯೋಗ್ಯವಾಗಿ ಹೊಂದಿಕೊಳ್ಳುತ್ತದೆ.—ಪ್ರಕಟನೆ 13:1, 11, 14, 15.

9 ಇದಕ್ಕೆ ಕೂಡಿಸಿ, ಜನಾಂಗ ಸಂಘದ ಮೊತ್ತ ಮೊದಲಿನ ಸದಸ್ಯರಲ್ಲಿ, ಗ್ರೇಟ್‌ ಬ್ರಿಟನ್‌ನೊಂದಿಗೆ ಜತೆಗೂಡಿ, ಈ ಮುಂಚಿನ ಕೆಲವು ತಲೆಗಳ ಪೀಠಗಳಲ್ಲಿ ಆಳಿದ ಸರಕಾರಗಳು ಅಂದರೆ ಗ್ರೀಸ್‌, ಇರಾನ್‌ (ಪರ್ಸಿಯಾ) ಮತ್ತು ಇಟೆಲಿ (ರೋಮ್‌) ಒಳಗೂಡಿದ್ದವು. ಕಟ್ಟಕಡೆಗೆ ಈ ಹಿಂದಣ ಆರು ಲೋಕ ಶಕ್ತಿಗಳಿಂದ ನಿಯಂತ್ರಿಸಲ್ಪಟ್ಟ ಪ್ರದೇಶಗಳಲ್ಲಿ ಆಳಿಕ್ವೆ ನಡಿಸುವ ಸರಕಾರಗಳು ಕಾಡು ಮೃಗದ ವಿಗ್ರಹವನ್ನು ಬೆಂಬಲಿಸುವ ಸದಸ್ಯರಾದರು. ಈ ಅರ್ಥದಲ್ಲಿ ಕೂಡ, ಕಡುಗೆಂಪು ಬಣ್ಣದ ಕಾಡು ಮೃಗವು ಏಳು ಲೋಕಶಕ್ತಿಗಳಿಂದ ಉದ್ಭವಿಸಿದೆ ಎಂದು ಹೇಳಸಾಧ್ಯವಿದೆ.

10. (ಎ) ಕಡುಗೆಂಪು ಬಣ್ಣದ ಕಾಡು ಮೃಗವು “ತಾನೇ ಎಂಟನೆಯ ಅರಸು” ಎಂದು ಹೇಗೆ ಹೇಳಸಾಧ್ಯವಿದೆ? (ಬಿ) ಸೋವಿಯೆಟ್‌ ಧುರೀಣರೊಬ್ಬರು ಸಂಯುಕ್ತ ರಾಷ್ಟ್ರ ಸಂಘಕ್ಕೆ ಹೇಗೆ ಬೆಂಬಲವನ್ನು ವ್ಯಕ್ತಪಡಿಸಿದರು?

10 ಕಡುಗೆಂಪು ಬಣ್ಣದ ಕಾಡು ಮೃಗವು “ಅದು ತಾನೇ ಎಂಟನೆಯ ಅರಸು” ಕೂಡ ಆಗಿತ್ತೆಂಬುದನ್ನು ಗಮನಿಸಿರಿ. ಹೀಗೆ, ಇಂದು ಸಂಯುಕ್ತ ರಾಷ್ಟ್ರ ಸಂಘವು ಒಂದು ಲೋಕ ಸರಕಾರದಂತೆ ತೋರುವ ಹಾಗೆ ರಚಿಸಲ್ಪಟ್ಟಿದೆ. ಅಂತಾರಾಷ್ಟ್ರೀಯ ವ್ಯಾಜ್ಯ ವಿವಾದಗಳನ್ನು ನಿರ್ಣಯಿಸಲು ಕೊರಿಯ, ಸೀನಾಯಿ ಪರ್ಯಾಯ ದ್ವೀಪ, ಕೆಲವು ಆಫ್ರಿಕದ ದೇಶಗಳು ಮತ್ತು ಲೆಬನಾನ್‌ನಂತಹ ದೇಶಗಳ ಕ್ಷೇತ್ರದೊಳಗೆ ಸೈನ್ಯವನ್ನು ಕಳುಹಿಸಿ, ಒಮ್ಮೊಮ್ಮೆ ಅದು ಹಾಗೆಯೇ ಕ್ರಿಯೆಗೈದಿದೆ. ಆದರೆ ಅದು ಅರಸನ ಕೇವಲ ವಿಗ್ರಹ ಆಗಿದೆ. ಒಂದು ಧಾರ್ಮಿಕ ವಿಗ್ರಹದಂತೆ, ಅದನ್ನು ಅಸ್ತಿತ್ವದೊಳಗೆ ತಂದವರಿಂದ ಮತ್ತು ಅದನ್ನು ಆರಾಧಿಸುವವರಿಂದ ಅದಕ್ಕೆ ಏನನ್ನು ವಹಿಸಿಕೊಡಲಾಗುತ್ತದೋ ಅದರ ಹೊರತು ಬೇರೆ ಯಾವ ನಿಜವಾದ ಪ್ರಭಾವ ಯಾ ಅಧಿಕಾರ ಅದಕ್ಕೆ ಇಲ್ಲ. ಕೆಲವು ಸಂದರ್ಭಗಳಲ್ಲಿ, ಈ ಸಾಂಕೇತಿಕ ಕಾಡು ಮೃಗವು ನಿರ್ಬಲವಾಗಿ ತೋರುತ್ತದೆ; ಆದರೆ ಜನಾಂಗ ಸಂಘವನ್ನು ಅಧೋಲೋಕದೊಳಗೆ ಉರುಳಿಸಿದ ನಿರಂಕುಶತಾಭಿಮುಖವಾಗಿರುವ ಆಳಿಕ್ವೆಯ ಸದಸ್ಯರಿಂದ ಒಟ್ಟು ಪರಿತ್ಯಾಗದ ರೀತಿಯನ್ನು, ಅದು ಎಂದಿಗೂ ಅನುಭವಿಸಿಲ್ಲ. (ಪ್ರಕಟನೆ 17:8) ಬೇರೆ ಕ್ಷೇತ್ರಗಳಲ್ಲಿ ಮಹತ್ವದ ಭಿನ್ನಾಭಿಪ್ರಾಯಗಳನ್ನು ಹೊಂದಿರುವುದಾದರೂ, ಒಬ್ಬ ಪ್ರಮುಖ ಸೋವಿಯೆಟ್‌ ನಾಯಕನು 1987 ರಲ್ಲಿ ಸಂಯುಕ್ತ ರಾಷ್ಟ್ರ ಸಂಘಕ್ಕೆ ಬೆಂಬಲವನ್ನು ವ್ಯಕ್ತಪಡಿಸುವುದರಲ್ಲಿ ರೋಮಿನ ಪೋಪರೊಂದಿಗೆ ಜತೆಗೂಡಿದನು. ಸಂಯುಕ್ತ ರಾಷ್ಟ್ರ ಸಂಘದ ಮೇಲೆ ಆಧಾರಿತ “ಅಂತಾರಾಷ್ಟ್ರೀಯ ಭದ್ರತೆಯ ವ್ಯಾಪಕ ವ್ಯವಸ್ಥೆ”ಗೂ ಅವನು ಕರೆನೀಡಿದನು. ಯೋಹಾನನು ಬೇಗನೇ ಕಲಿಯುವಂತೆಯೇ, ಸಂಯುಕ್ತ ರಾಷ್ಟ್ರ ಸಂಘ ಗಣನೀಯವಾದ ಅಧಿಕಾರದೊಂದಿಗೆ ಕ್ರಿಯೆಗೈಯಲಿರುವ ಸಮಯ ಬರಲಿದೆ. ಅನಂತರ ಅದು ಅದರ ಸರದಿಯ ಪ್ರಕಾರ “ನಾಶಕ್ಕೆ ಹೋಗು” ವುದು.

ಒಂದು ಗಳಿಗೆಯ ವರೆಗೆ ಹತ್ತು ರಾಜರುಗಳು

11. ಸಾಂಕೇತಿಕ ಕಡುಗೆಂಪು ಬಣ್ಣದ ಕಾಡು ಮೃಗದ ಮೇಲಿರುವ ಹತ್ತು ಕೊಂಬುಗಳ ಕುರಿತು ಯೆಹೋವನ ದೂತನು ಏನನ್ನು ಹೇಳುತ್ತಾನೆ?

11 ಪ್ರಕಟನೆಯ ಹಿಂದಿನ ಅಧ್ಯಾಯದಲ್ಲಿ ಆರನೆಯ ಮತ್ತು ಏಳನೆಯ ದೂತರು ದೇವರ ಕೋಪದ ಪಾತ್ರೆಗಳನ್ನು ಹೊಯ್ದಿದ್ದರು. ಹೀಗೆ ಭೂರಾಜರು ಅರ್ಮಗೆದೋನಿನಲ್ಲಿ ದೇವರ ಯುದ್ಧಕ್ಕೆ ಕೂಡಿಸಲ್ಪಡುತ್ತಾರೆಂದೂ ಮತ್ತು ‘ಮಹಾ ಬಾಬೆಲು ದೇವರ ದೃಷ್ಟಿಯಲ್ಲಿ ಜ್ಞಾಪಿಸಲ್ಪಡುವದೆಂದೂ’ ನಮಗೆ ಸಲಹೆಯನ್ನೀಯಲಾಗಿದೆ. (ಪ್ರಕಟನೆ 16:1, 14, 19) ಇವುಗಳ ಮೇಲೆ ದೇವರ ತೀರ್ಪುಗಳು ಹೇಗೆ ಜಾರಿಗೊಳಿಸಲ್ಪಡುವವೆಂದು ಹೆಚ್ಚು ವಿವರವಾಗಿ ನಾವು ಈಗ ಕಲಿಯಲಿದ್ದೇವೆ. ಯೆಹೋವನ ದೂತನು ಯೋಹಾನನಿಗೆ ಪುನಃ ಮಾತಾಡುವಾಗ, ಕೇಳಿರಿ: “ಮತ್ತು ನೀನು ಕಂಡ ಆ ಹತ್ತು ಕೊಂಬುಗಳು ಅಂದರೆ ರಾಜ್ಯವೊಂದನ್ನು ಇನ್ನೂ ಹೊಂದದಿರುವ ಹತ್ತು ಅರಸರು, ಆದರೆ ಅವರು ಒಂದು ಗಳಿಗೆಯ ವರೆಗೆ ರಾಜರಂತೆ ಆಳುವ ಅಧಿಕಾರವನ್ನು ಕಾಡು ಮೃಗದೊಂದಿಗೆ ಹೊಂದುತ್ತಾರೆ. ಇವರಿಗೆ ಒಂದೇ ಅಭಿಪ್ರಾಯವಿದೆ, ಮತ್ತು ಹೀಗೆ ಅವರು ತಮ್ಮ ಶಕ್ತಿಯನ್ನೂ ಅಧಿಕಾರವನ್ನೂ ಕಾಡು ಮೃಗಕ್ಕೆ ಕೊಡುತ್ತಾರೆ. ಇವರು ಕುರಿಮರಿಯೊಂದಿಗೆ ಯುದ್ಧ ಮಾಡುವರು, ಆದರೆ ಆತನು ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವ ಕಾರಣ, ಕುರಿಮರಿಯು ಅವರನ್ನು ಜಯಿಸುವನು. ಅಲ್ಲದೆ, ಅವನೊಂದಿಗೆ ಕರೆಯಲ್ಪಟ್ಟವರೂ, ಆಯ್ದುಕೊಳ್ಳಲ್ಪಟ್ಟವರೂ, ನಂಬಿಗಸ್ತರೂ ಅಂತೆಯೇ ಮಾಡುವರು.”—ಪ್ರಕಟನೆ 17:12-14, NW.

12. (ಎ) ಹತ್ತು ಕೊಂಬುಗಳು ಏನನ್ನು ಸೂಚಿಸುತ್ತವೆ? (ಬಿ) ಸಾಂಕೇತಿಕ ಹತ್ತು ಕೊಂಬುಗಳು ‘ರಾಜ್ಯವನ್ನು ಇನ್ನೂ ಹೊಂದದಿರುವುದು’ ಹೇಗೆ? (ಸಿ) ಸಾಂಕೇತಿಕ ಹತ್ತು ಕೊಂಬುಗಳಿಗೆ ಈಗ ಒಂದು “ರಾಜ್ಯ” ಇರುವುದು ಹೇಗೆ, ಮತ್ತು ಎಷ್ಟು ಕಾಲದ ವರೆಗೆ?

12 ಹತ್ತು ಕೊಂಬುಗಳು ಲೋಕ ದೃಶ್ಯದಲ್ಲಿ ಪ್ರಚಲಿತದಲ್ಲಿ ಅಧಿಕಾರವನ್ನು ಹಿಡಿದಿರುವ ಮತ್ತು ಕಾಡು ಮೃಗದ ವಿಗ್ರಹಕ್ಕೆ ಬೆಂಬಲವನ್ನು ಕೊಡುವ ಎಲ್ಲಾ ರಾಜಕೀಯ ಶಕ್ತಿಗಳನ್ನು ಚಿತ್ರಿಸುತ್ತವೆ. ಈಗ ಅಸ್ತಿತ್ವದಲ್ಲಿರುವ ಅತಿ ಕೊಂಚ ದೇಶಗಳು ಯೋಹಾನನ ದಿನಗಳಲ್ಲಿ ಜ್ಞಾತವಾಗಿದ್ದವು. ಮತ್ತು ಅವುಗಳಲ್ಲಿ, ಐಗುಪ್ತ ಮತ್ತು ಪರ್ಸಿಯಾ (ಇರಾನ್‌) ಮುಂತಾದವುಗಳು, ಇಂದು ತೀರಾ ಭಿನ್ನ ರಾಜಕೀಯ ರಚನೆಯುಳ್ಳವುಗಳಾಗಿವೆ. ಆದಕಾರಣ, ಒಂದನೆಯ ಶತಮಾನದಲ್ಲಿ, ‘ಹತ್ತು ಕೊಂಬುಗಳು ರಾಜ್ಯವೊಂದನ್ನು ಇನ್ನೂ ಹೊಂದಿರ’ ಲಿಲ್ಲ. ಆದರೆ ಈಗ ಕರ್ತನ ದಿನದಲ್ಲಿ, ಅವರಿಗೆ “ಒಂದು ರಾಜ್ಯ” ಯಾ ರಾಜಕೀಯ ಅಧಿಕಾರ ಇದೆ. ಮಹಾ ವಸಾಹತು ಸಾಮ್ರಾಜ್ಯಗಳ ಕುಸಿತದೊಂದಿಗೆ, ನಿರ್ದಿಷ್ಟವಾಗಿ ಎರಡನೇ ಲೋಕ ಯುದ್ಧಾನಂತರ, ಅನೇಕ ಹೊಸ ರಾಷ್ಟ್ರಗಳು ಹುಟ್ಟಿವೆ. ಎಲ್ಲಾ ಲೌಕಿಕ ರಾಜಕೀಯ ಅಧಿಕಾರವನ್ನು ಅರ್ಮಗೆದೋನಿನಲ್ಲಿ ಯೆಹೋವನು ಅಂತ್ಯಗೊಳಿಸುವ ಮೊದಲು ಇವು ಹಾಗೂ ದೀರ್ಘಕಾಲದಿಂದಲೂ ಸ್ಥಾಪಿತವಾಗಿರುವ ಶಕ್ತಿಗಳು ಅಲ್ಪಾವಧಿಯ—ಕೇವಲ “ಒಂದೇ ಗಳಿಗೆ”ಯ—ತನಕ ಕಾಡು ಮೃಗದೊಂದಿಗೆ ಆಳತಕ್ಕದ್ದು.

13. ಹತ್ತು ಕೊಂಬುಗಳು ಯಾವ ರೀತಿಯಲ್ಲಿ “ಒಂದೇ ಅಭಿಪ್ರಾಯ” ವುಳ್ಳವುಗಳಾಗಿವೆ, ಮತ್ತು ಕುರಿಮರಿಯ ಕಡೆಗೆ ಯಾವ ಮನೋಭಾವವು ಇದನ್ನು ನಿಶ್ಚಿತಮಾಡುತ್ತದೆ?

13 ಇಂದು, ಈ ಹತ್ತು ಕೊಂಬುಗಳನ್ನು ಪ್ರೇರಿಸುವ ಅತಿ ಬಲಾಢ್ಯ ಶಕ್ತಿಗಳಲ್ಲಿ ರಾಷ್ಟ್ರೀಯತೆಯು ಒಂದಾಗಿದೆ. ದೇವರ ರಾಜ್ಯವನ್ನು ಸ್ವೀಕರಿಸುವ ಬದಲು ತಮ್ಮ ರಾಷ್ಟ್ರೀಯ ಸಾರ್ವಭೌಮತೆಯನ್ನು ಕಾಪಾಡಲು ಬಯಸುವುದರಲ್ಲಿ ಅವಕ್ಕೆ “ಒಂದೇ ಅಭಿಪ್ರಾಯವಿದೆ”. ಜನಾಂಗ ಸಂಘ ಮತ್ತು ಸಂಯುಕ್ತ ರಾಷ್ಟ್ರ ಸಂಘವನ್ನು ಮೊತ್ತ ಮೊದಲು ಅನುಮೋದಿಸುವುದರಲ್ಲಿ ಅವರ ಉದ್ದೇಶವು ಇದೇ ಆಗಿತ್ತು—ಲೋಕ ಶಾಂತಿಯನ್ನು ಸಂರಕ್ಷಿಸುವುದು ಮತ್ತು ಹೀಗೆ ತಮ್ಮ ಸ್ವಂತ ಅಸ್ತಿತ್ವವನ್ನು ಕಾಪಾಡುವುದು. ಇಂಥ ಒಂದು ಮನೋಭಾವವು ನಿಶ್ಚಿತಮಾಡುತ್ತದೇನಂದರೆ ಆ ಕೊಂಬುಗಳು ಕುರಿಮರಿಯನ್ನು, “ಕರ್ತರ ಕರ್ತನೂ ರಾಜಾಧಿರಾಜನೂ” ಆಗಿರುವವನನ್ನು ವಿರೋಧಿಸುವುವು, ಯಾಕಂದರೆ ಯೇಸು ಕ್ರಿಸ್ತನ ಕೈಕೆಳಗಿನ ತನ್ನ ರಾಜ್ಯವು ಶೀಘ್ರವೇ ಈ ಎಲ್ಲಾ ರಾಜ್ಯಗಳನ್ನು ಸ್ಥಾನಪಲ್ಲಟ ಮಾಡುವುದೆಂದು ಯೆಹೋವನು ಉದ್ದೇಶಿಸಿದ್ದಾನೆ.—ದಾನಿಯೇಲ 7:13, 14; ಮತ್ತಾಯ 24:30; 25:31-33, 46.

14. ಲೋಕದ ರಾಜರು ಕುರಿಮರಿಯೊಂದಿಗೆ ಯುದ್ಧಮಾಡುವುದಾದರೂ ಹೇಗೆ, ಮತ್ತು ಫಲಿತಾಂಶವೇನು?

14 ಈ ಲೋಕದ ಧುರೀಣರು ಯೇಸುವಿನ ವಿರುದ್ಧ ತಾನೇ ಏನನ್ನೂ ಮಾಡಲು ಶಕ್ತರಾಗಿಲ್ಲ, ನಿಜ. ಆತನು ಪರಲೋಕದಲ್ಲಿದ್ದಾನೆ, ಅವರ ನಿಲುಕಿನಿಂದ ಬಹುದೂರ. ಆದರೆ ಯೇಸುವಿನ ಸಹೋದರರು, ಸ್ತ್ರೀಯ ಸಂತಾನದವರಲ್ಲಿ ಉಳಿದವರು ಇನ್ನೂ ಭೂಮಿಯ ಮೇಲೆ ಇದ್ದಾರೆ ಮತ್ತು ಭೇದ್ಯರಾಗಿ ಇದ್ದಾರೆಂದು ತೋರುತ್ತದೆ. (ಪ್ರಕಟನೆ 12:17) ಈಗಾಗಲೇ ಅನೇಕ ಕೊಂಬುಗಳು ಅವರೆಡೆಗೆ ಕಡು ವೈರತ್ವವನ್ನು ಪ್ರದರ್ಶಿಸಿವೆ ಮತ್ತು ಈ ರೀತಿಯಲ್ಲಿ ಅವು ಕುರಿಮರಿಯೊಂದಿಗೆ ಯುದ್ಧ ಮಾಡಿವೆ. (ಮತ್ತಾಯ 25:40, 45) ಆದರೂ, “ಆ ಎಲ್ಲಾ ರಾಜ್ಯಗಳನ್ನು ಭಂಗಪಡಿಸಿ ನಿರ್ನಾಮ” ಮಾಡುವ ಸಮಯವು ದೇವರ ರಾಜ್ಯಕ್ಕೆ ಬೇಗನೆ ಬರುವುದು. (ದಾನಿಯೇಲ 2:44) ನಾವು ಬೇಗನೇ ನೋಡಲಿರುವಂತೆ, ಆಗ, ಭೂರಾಜರು ಯಜ್ಞದ ಕುರಿಮರಿಯೊಂದಿಗೆ ಕೊನೆಯ ಯುದ್ಧವನ್ನು ಮಾಡುವರು. (ಪ್ರಕಟನೆ 19:11-21) ಆದರೆ ಜನಾಂಗಗಳು ಎಂದಿಗೂ ಯಶಸ್ಸು ಪಡೆಯುವುದಿಲ್ಲವೆಂದು ಮನಗಾಣುವುದರ ಕುರಿತು ನಾವು ಇಲ್ಲಿ ಸಾಕಷ್ಟು ಕಲಿಯುತ್ತೇವೆ. ಅವರಲ್ಲಿ ಮತ್ತು ಸಂಯುಕ್ತ ರಾಷ್ಟ್ರದ ಕಡುಗೆಂಪು ಬಣ್ಣದ ಕಾಡು ಮೃಗದಲ್ಲಿ “ಒಂದೇ ಅಭಿಪ್ರಾಯ” ವಿರುವುದಾದರೂ, “ಕರ್ತರ ಕರ್ತನೂ ರಾಜಾಧಿರಾಜನೂ” ಆಗಿರುವಾತನನ್ನು, ಇಲ್ಲವೆ ಭೂಮಿಯ ಮೇಲೆ ಇನ್ನೂ ಇರುವ ಆತನ ಅಭಿಷಿಕ್ತ ಹಿಂಬಾಲಕರ ಸಹಿತ ಆತನೊಂದಿಗೆ “ಕರೆಯಲ್ಪಟ್ಟವರೂ ಆಯ್ದುಕೊಳ್ಳಲ್ಪಟ್ಟವರೂ, ನಂಬಿಗಸ್ತರೂ” ಆಗಿರುವವರನ್ನು ಅವರು ಸೋಲಿಸಶಕ್ತರಲ್ಲ. ಸೈತಾನನ ನೀಚ ದೋಷಾರೋಪಣೆಗಳ ಉತ್ತರವಾಗಿ ಸಮಗ್ರತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ಇವರು ಕೂಡ ಜಯಿಸುವರು.—ರೋಮಾಪುರ 8:37-39; ಪ್ರಕಟನೆ 12:10, 11.

ಜಾರಸ್ತ್ರೀಯನ್ನು ಧ್ವಂಸಮಾಡುವುದು

15. ಜಾರ ಸ್ತ್ರೀಯ ಕುರಿತು ಮತ್ತು ಹತ್ತು ಕೊಂಬುಗಳು ಮತ್ತು ಕಾಡು ಮೃಗವು ಅವಳೆಡೆಗೆ ತೋರಿಸುವ ಮನೋಭಾವದ ಮತ್ತು ಕ್ರಿಯೆಯ ಕುರಿತು ದೇವದೂತನು ಏನನ್ನುತ್ತಾನೆ?

15 ದೇವರ ಜನರು ಮಾತ್ರವೇ ಹತ್ತು ಕೊಂಬುಗಳ ವೈರತ್ವದ ಗುರಿಹಲಗೆಯಾಗಿ ಇರುವುದಿಲ್ಲ. ದೇವದೂತನು ಈಗ ಪುನಃ ಜಾರಸ್ತ್ರೀಯೆಡೆಗೆ ಯೋಹಾನನ ಗಮನವನ್ನು ಸೆಳೆಯುತ್ತಾನೆ: “ಮತ್ತು ಅವನು ನನಗೆ ಹೇಳುವುದು: ‘ಆ ಜಾರಸ್ತ್ರೀಯು ಕುಳಿತಿರುವ ನೀನು ನೋಡಿದ ಆ ನೀರುಗಳಂದರೆ ಜನರು, ಸಮೂಹಗಳು, ಜನಾಂಗಗಳು ಮತ್ತು ಭಾಷೆಗಳು. ಮತ್ತು ನೀನು ನೋಡಿದ ಹತ್ತು ಕೊಂಬುಗಳು ಮತ್ತು ಕಾಡು ಮೃಗವು, ಇವು ಜಾರಸ್ತ್ರೀಯನ್ನು ದ್ವೇಷಿಸಿ ಅವಳನ್ನು ಧ್ವಂಸಗೊಳಿಸಿ, ನಗ್ನಳಾಗಿ ಮಾಡಿ, ಆಕೆಯ ಮಾಂಸಲ ಭಾಗಗಳನ್ನು ತಿಂದು ಬಿಟ್ಟು ಆಕೆಯನ್ನು ಬೆಂಕಿಯಿಂದ ಪೂರ್ತಿ ಸುಟ್ಟುಬಿಡುವುವು’.”—ಪ್ರಕಟನೆ 17:15, 16, NW.

16. ರಾಜಕೀಯ ಸರಕಾರಗಳು ಅವಳ ವಿರುದ್ಧ ತಿರುಗಿ ಬೀಳುವಾಗ, ಮಹಾ ಬಾಬೆಲ್‌ ರಕ್ಷಣಾರ್ಥಕ ಬೆಂಬಲಕ್ಕಾಗಿ ಅವಳ ನೀರುಗಳ ಮೇಲೆ ಯಾಕೆ ಆತುಕೊಳ್ಳಸಾಧ್ಯವಿಲ್ಲ?

16 ಪ್ರಾಚೀನ ಬಾಬೆಲ್‌ ತನ್ನ ಜಲಾವೃತ ರಕ್ಷಣ ಸಾಲುಗಳ ಮೇಲೆ ಆತುಕೊಂಡಿದ್ದಂತೆಯೇ, ಮಹಾ ಬಾಬೆಲ್‌ ಇಂದು “ಪ್ರಜೆಗಳು ಮತ್ತು ಸಮೂಹಗಳು ಮತ್ತು ಜನಾಂಗಗಳು ಮತ್ತು ಭಾಷೆಗಳ” ಅವಳ ಬಲುದೊಡ್ಡ ಸದಸ್ಯತನದ ಮೇಲೆ ಆತುಕೊಳ್ಳುತ್ತಾಳೆ. ದೇವದೂತನು ಒಂದು ಆಘಾತಕರ ಬೆಳವಣಿಗೆಯನ್ನು ಹೇಳುವುದಕ್ಕೆ ಮುಂಚೆ ಯುಕ್ತವಾಗಿಯೇ ನಮ್ಮ ಗಮನವನ್ನು ಇವುಗಳೆಡೆಗೆ ಸೆಳೆಯುತ್ತಾನೆ: ಈ ಭೂಮಿಯ ರಾಜಕೀಯ ಸರಕಾರಗಳು ಮಹಾ ಬಾಬೆಲಿನ ಮೇಲೆ ಹಿಂಸಾತ್ಮಕ ರೀತಿಯಲ್ಲಿ ತಿರುಗಿ ಬೀಳುವುವು. ಈ ಎಲ್ಲಾ “ಪ್ರಜೆಗಳು ಮತ್ತು ಸಮೂಹಗಳು ಮತ್ತು ಜನಾಂಗಗಳು ಮತ್ತು ಭಾಷೆಗಳು” ಆಗ ಏನು ಮಾಡುವರು? ಯೂಫ್ರೇಟೀಸ್‌ ನದಿಯ ನೀರು ಒಣಗಿಹೋಗಲಿದೆ ಎಂದು ದೇವ ಜನರು ಈಗಾಗಲೇ ಮಹಾ ಬಾಬೆಲನ್ನು ಎಚ್ಚರಿಸುತ್ತಾ ಇದ್ದಾರೆ. (ಪ್ರಕಟನೆ 16:12) ಆ ನೀರುಗಳು ಕಟ್ಟಕಡೆಗೆ ಸಂಪೂರ್ಣವಾಗಿ ಬರಿದಾಗುವವು. ಅವಳ ಮಹಾ ಜರೂರಿಯ ಗಳಿಗೆಯಲ್ಲಿ ಅಸಹ್ಯಕರವಾದ ಹಳೇ ಜಾರಸ್ತ್ರೀಗೆ ಯಾವುದೇ ಪರಿಣಾಮಕಾರಿ ಬೆಂಬಲವನ್ನು ಅವರಿಗೆ ಕೊಡಲು ಸಾಧ್ಯವಾಗುವುದಿಲ್ಲ.—ಯೆಶಾಯ 44:27; ಯೆರೆಮೀಯ 50:38; 51:36, 37.

17. (ಎ) ಮಹಾ ಬಾಬೆಲಿನ ಸಂಪತ್ತು ಅವಳನ್ನು ಯಾಕೆ ರಕ್ಷಿಸುವುದಿಲ್ಲ? (ಬಿ) ಮಹಾ ಬಾಬೆಲಿನ ಅಂತ್ಯವು ಘನತೆಯದ್ದಾಗಿರುವುದಿಲ್ಲ ಹೇಗೆ? (ಸಿ) ಹತ್ತು ಕೊಂಬುಗಳ, ಅಥವಾ ವೈಯಕ್ತಿಕ ಜನಾಂಗಗಳ ಹೊರತಾಗಿ, ಮಹಾ ಬಾಬೆಲಿನ ವಿರುದ್ಧ ಕೋಪಾವೇಶದ ವರ್ತನೆಯಲ್ಲಿ ಇನ್ಯಾರು ಜತೆಗೂಡುವರು?

17 ಖಂಡಿತವಾಗಿಯೂ, ಮಹಾ ಬಾಬೆಲಿನ ಅಪಾರ ಐಹಿಕ ಸಂಪತ್ತು ಅವಳನ್ನು ರಕ್ಷಿಸದು. ಅದು ಅವಳ ನಾಶನವನ್ನು ಇನ್ನಷ್ಟು ತ್ವರೆಗೊಳಿಸಬಹುದು, ಕಾರಣ ದರ್ಶನವು ತೋರಿಸುತ್ತದೇನಂದರೆ ಕಾಡು ಮೃಗವು ಮತ್ತು ಹತ್ತು ಕೊಂಬುಗಳು ತಮ್ಮ ದ್ವೇಷವನ್ನು ಅವಳ ಮೇಲೆ ತೀರಿಸುವಾಗ, ಅವರು ಅವಳ ರಾಜ್ಯವೈಭವದ ವಸ್ತ್ರಗಳನ್ನು ಮತ್ತು ಅವಳ ಎಲ್ಲಾ ಆಭರಣಗಳನ್ನು ಸುಲಿದು ಬೆತ್ತಲೆ ಮಾಡುವರು. ಅವರು ಅವಳ ಐಶ್ವರ್ಯವನ್ನು ಸೂರೆಮಾಡುವರು. ಅವರು “ಅವಳನ್ನು . . . ನಗ್ನಳಾಗಿ ಮಾಡುವರು,” ಅವಳ ನೈಜ ಗುರುತನ್ನು ಲಜ್ಜಾಸ್ಪದವಾಗಿ ಬಹಿರಂಗಪಡಿಸುವರು. ಎಂಥ ವಿಧ್ವಂಸನ! ಅವಳ ಅಂತ್ಯವು ಸಹ ಘನತೆಯದ್ದಾಗಿರುವುದಿಲ್ಲ. ಅವರು ಅವಳನ್ನು ನಾಶಮಾಡುತ್ತಾರೆ, “ಅವಳ ಮಾಂಸಲ ಭಾಗವನ್ನು ತಿಂದು” ಬಿಡುತ್ತಾರೆ. ಅವಳನ್ನು ನಿರ್ಜೀವ ಅಸ್ಥಿಪಂಜರವಾಗಿ ಮಾಡುತ್ತಾರೆ. ಕಟ್ಟಕಡೆಗೆ, ಅವರು ಅವಳನ್ನು “ಬೆಂಕಿಯಿಂದ ಪೂರ್ತಿ ಸುಟ್ಟು” ಬಿಡುತ್ತಾರೆ. ಅವಳು ವ್ಯಾಧಿಯ ವಾಹಕಳೋ ಎಂಬಂತೆ ಸಭ್ಯ ಹುಗಿತ ಕೂಡ ಇಲ್ಲದೆ ಸುಡಲ್ಪಡುತ್ತಾಳೆ! ಮಹಾ ಜಾರಸ್ತ್ರೀಯನ್ನು ಹತ್ತು ಕೊಂಬುಗಳಿಂದ ಪ್ರತಿನಿಧಿಸಲ್ಪಟ್ಟ ಜನಾಂಗಗಳು ಮಾತ್ರವೇ ಅಲ್ಲ, “ಕಾಡು ಮೃಗ” ಅಂದರೆ ಸಂಯುಕ್ತ ರಾಷ್ಟ್ರವು ತಾನೇ ಈ ಕೋಪಾವೇಶದ ವರ್ತನೆಯಲ್ಲಿ ಅವರೊಂದಿಗೆ ಜತೆಗೂಡುವುದು. ಅದು ಸುಳ್ಳು ಧರ್ಮದ ನಾಶನಕ್ಕೆ ತನ್ನ ಒಪ್ಪಿಗೆಯನ್ನು ಕೊಡುವುದು. ಸಂಯುಕ್ತ ರಾಷ್ಟ್ರದೊಳಗಿನ 175 ಮತ್ತು ಅಧಿಕ ರಾಷ್ಟ್ರಗಳ ಬಹುಸಂಖ್ಯಾತರು ಈಗಾಗಲೇ ತಮ್ಮ ಮತಹಾಕುವ ನಮೂನೆಯಿಂದ ಧರ್ಮದ ಕಡೆಗೆ, ವಿಶೇಷವಾಗಿ ಕ್ರೈಸ್ತಪ್ರಪಂಚಕ್ಕೆ ದ್ವೇಷವನ್ನು ತೋರಿಸಿದ್ದಾರೆ.

18. (ಎ) ಜನಾಂಗಗಳು ಬಾಬೆಲಿನ ಧರ್ಮದ ವಿರುದ್ಧ ತಿರುಗಿ ಬೀಳುವುದರ ಯಾವ ಸಂಭಾವ್ಯವನ್ನು ನಾವು ಈಗಾಗಲೇ ನೋಡಿದ್ದೇವೆ? (ಬಿ) ಮಹಾ ಜಾರಸ್ತ್ರೀಯ ಮೇಲೆ ಬರುವ ಎಲ್ಲಾ ಕಡೆಯ ಆಕ್ರಮಣಕ್ಕೆ ಮೂಲ ಕಾರಣ ಯಾವುದು?

18 ಜನಾಂಗಗಳು ತಮ್ಮ ಹಿಂದಿನ ಪ್ರೇಯಸಿಯನ್ನು ಇಷ್ಟು ಉಗ್ರ ರೀತಿಯಲ್ಲಿ ಯಾಕೆ ಉಪಚರಿಸುವುವು? ನಾವು ಇತ್ತೇಚೆಗಿನ ಇತಿಹಾಸದಲ್ಲಿ ಬಾಬೆಲಿನ ಧರ್ಮದ ವಿರುದ್ಧ ಇಂಥ ತಿರುಗಿಬೀಳುವಿಕೆಗೆ ಇರುವ ಸಂಭಾವ್ಯವನ್ನು ನೋಡಿದ್ದೇವೆ. ಹಿಂದಣ ಸೋವಿಯೆಟ್‌ ಯೂನಿಯನ್‌ ಮತ್ತು ಚೀನಾ ಮುಂತಾದ ದೇಶಗಳಲ್ಲಿ ಅಧಿಕೃತ ಸರಕಾರೀ ವಿರೋಧವು ಧರ್ಮದ ಪ್ರಭಾವವನ್ನು ಪ್ರಚಂಡವಾಗಿ ಇಳಿಸಿದೆ. ಯೂರೋಪಿನ ಪ್ರಾಟೆಸ್ಟಂಟ್‌ ವಿಭಾಗಗಳಲ್ಲಿ ವ್ಯಾಪಕವಾಗಿರುವ ಔದಾಸೀನ್ಯ ಮತ್ತು ಸಂದೇಹ ಚರ್ಚುಗಳನ್ನು ಖಾಲಿಮಾಡಿದೆ, ಈ ಮೂಲಕ ಧರ್ಮವು ಕಾರ್ಯತಃ ಸತ್ತಿದೆ. ಬಲುದೊಡ್ಡ ಕ್ಯಾತೊಲಿಕ್‌ ಸಾಮ್ರಾಜ್ಯವು ದಂಗೆ ಮತ್ತು ಭಿನ್ನಾಭಿಪ್ರಾಯದಿಂದ ಒಡೆದು ಹೋಗಿದೆ, ಮತ್ತು ಇದನ್ನು ಸಂಚಾರೀ ಪೋಪರು ಕೂಡ ಶಾಂತಪಡಿಸಲು ಅಶಕ್ತರಾಗಿದ್ದಾರೆ. ಮಹಾ ಜಾರಸ್ತ್ರೀಯ ಮೇಲಿನ ದೇವರ ಬದಲಿಸಲಾಗದ ತೀರ್ಪುಗಳ ವ್ಯಕ್ತಪಡಿಸುವಿಕೆಯೋಪಾದಿ, ಮಹಾ ಬಾಬೆಲಿನ ಮೇಲೆ ಆಕ್ರಮಣವು ಎಲ್ಲಾ ಶಕ್ತಿಯನ್ನು ಪ್ರಯೋಗಿಸಿ ಬರುವುದೆನ್ನುವ ನಿಜತ್ವದ ದೃಶ್ಯವನ್ನು ನಾವಾದರೋ ಕಳೆದುಕೊಳ್ಳಬಾರದು.

ದೇವರ ಅಭಿಪ್ರಾಯವನ್ನು ನೆರವೇರಿಸುವುದು

19. (ಎ) ಮಹಾ ಜಾರ ಸ್ತ್ರೀಯ ವಿರುದ್ಧ ಯೆಹೋವನ ತೀರ್ಪುಗಳ ಜಾರಿಗೊಳಿಸುವಿಕೆಯನ್ನು, ಸಾ. ಶ. ಪೂ. 607 ರಲ್ಲಿ ಧರ್ಮಭ್ರಷ್ಟ ಯೆರೂಸಲೇಮಿನ ಮೇಲೆ ಆತನ ತೀರ್ಪಿನಿಂದ ಹೇಗೆ ನಿರೂಪಿಸಸಾಧ್ಯವಿದೆ? (ಬಿ) ಸಾ. ಶ. ಪೂ. 607ರ ಅನಂತರ ಯೆರೂಸಲೇಮಿನ ಹಾಳಾದ, ನಿರ್ಜನಾವಸ್ಥೆಯು ನಮ್ಮ ದಿನಗಳಿಗೆ ಏನನ್ನು ಮುನ್ಸೂಚಿಸಿತು?

19 ಯೆಹೋವನು ಈ ತೀರ್ಪನ್ನು ಹೇಗೆ ಜಾರಿಗೊಳಿಸುತ್ತಾನೆ? ಪ್ರಾಚೀನ ಸಮಯಗಳಲ್ಲಿ ತನ್ನ ಧರ್ಮಭ್ರಷ್ಟ ಜನರ ವಿರುದ್ಧ ಯೆಹೋವನ ಕ್ರಿಯೆಯಿಂದ ಇದನ್ನು ದೃಷ್ಟಾಂತಿಸಬಹುದು, ಅವರ ಕುರಿತು ಆತನು ಅಂದದ್ದು: “ಯೆರೂಸಲೇಮಿನ ಪ್ರವಾದಿಗಳಲ್ಲಿಯೂ ನಾನು ಅಸಹ್ಯವನ್ನು ನೋಡಿದ್ದೇನೆ; ಅವರು ವ್ಯಭಿಚಾರಮಾಡಿ ಮೋಸದಲ್ಲಿ ನಡೆದು ದುಷ್ಟರಲ್ಲಿ ಯಾವನೂ ತನ್ನ ದುಷ್ಟತನವನ್ನು ಬಿಡದಂತೆ ಅವರ ಕೈಗಳನ್ನು ಬಲಪಡಿಸುತ್ತಿದ್ದಾರೆ; ಅವರೆಲ್ಲರು ಸೊದೋಮಿನಂತೆ ಆ ಪುರನಿವಾಸಿಗಳು ಗೊಮೋರದ ಹಾಗೆ ನನಗೆ ಕಾಣುತ್ತಾರೆ.” (ಯೆರೆಮೀಯ 23:14) ಸಾ. ಶ. ಪೂ 607 ರಲ್ಲಿ, ಯೆಹೋವನು ಆತ್ಮಿಕ ವ್ಯಭಿಚಾರಿಣಿ ನಗರದ ‘ವಸ್ತ್ರಗಳನ್ನು ಸೆಳೆದು ಚಂದದ ಒಡವೆಗಳನ್ನು ಕಳಚಿಬಿಟ್ಟು ಮತ್ತು ಬಟ್ಟಬರಿದು ಮಾಡಿಬಿಡಲು’ ನೆಬೂಕದ್ನೆಚ್ಚರನನ್ನು ಉಪಯೋಗಿಸಿದನು. (ಯೆಹೆಜ್ಕೇಲ 23:4, 26, 29) ಆ ಸಮಯದ ಯೆರೂಸಲೇಮ್‌ ಇಂದು ಕ್ರೈಸ್ತಪ್ರಪಂಚದ ನಮೂನೆಯಾಗಿತ್ತು. ಮತ್ತು ಯೋಹಾನನು ಈ ಮೊದಲಿನ ದರ್ಶನಗಳಲ್ಲಿ ನೋಡಿದಂತೆಯೇ, ಯೆಹೋವನು ಕ್ರೈಸ್ತಪ್ರಪಂಚಕ್ಕೆ ಮತ್ತು ಮಿಥ್ಯಾ ಧರ್ಮದ ಮಿಕ್ಕವುಗಳಿಗೆ ತದ್ರೀತಿಯ ಶಿಕ್ಷೆಯನ್ನು ವಿಧಿಸುವನು. ಸಾ. ಶ. ಪೂ. 607ರ ಅನಂತರ ಯೆರೂಸಲೇಮಿನ ಹಾಳಾದ, ನಿರ್ಜನಾವಸ್ಥೆಯು, ಧಾರ್ಮಿಕ ಕ್ರೈಸ್ತಪ್ರಪಂಚವು ಅವಳ ಸಂಪತ್ತಿನಿಂದ ಕಸಿದುಕೊಳ್ಳಲ್ಪಟ್ಟ ಅನಂತರ ಮತ್ತು ಲಜ್ಜಾಸ್ಪದವಾಗಿ ಬಹಿರಂಗಪಡಿಸಲ್ಪಟ್ಟ ಅನಂತರ ಹೇಗೆ ತೋರುವಳೆಂಬುದನ್ನು ತೋರಿಸುತ್ತದೆ. ಮತ್ತು ಮಹಾ ಬಾಬೆಲಿನ ಉಳಿದ ಭಾಗವೂ, ಇದು ಸಂಭವಿಸುವಾಗ ಇದಕ್ಕಿಂತ ಉತ್ತಮವಾದ ಸ್ಥಿತಿಯಲ್ಲಿರದು.

20. (ಎ) ಯೆಹೋವನು ಪುನಃ ಒಮ್ಮೆ ತೀರ್ಪನ್ನು ಜಾರಿಗೊಳಿಸುವುದರಲ್ಲಿ ಮಾನವ ಅಧಿಪತಿಗಳನ್ನು ಉಪಯೋಗಿಸಲಿದ್ದಾನೆ ಎಂಬುದನ್ನು ಯೋಹಾನನು ಹೇಗೆ ತೋರಿಸುತ್ತಾನೆ? (ಬಿ) ದೇವರ “ಅಭಿಪ್ರಾಯ” ವೇನಾಗಿದೆ? (ಸಿ) ಜನಾಂಗಗಳು ತಮ್ಮ “ಒಂದೇ ಅಭಿಪ್ರಾಯವನ್ನು” ಯಾವ ರೀತಿಯಲ್ಲಿ ನೆರವೇರಿಸುವುವು, ಆದರೆ ಯಾರ ಅಭಿಪ್ರಾಯವು ನಿಜವಾಗಿಯೂ ನೆರವೇರಲಿರುವುದು?

20 ಪುನಃ ಒಮ್ಮೆ, ತೀರ್ಪನ್ನು ಜಾರಿಗೊಳಿಸುವುದರಲ್ಲಿ ಯೆಹೋವನು ಮಾನವ ಪ್ರಭುಗಳನ್ನು ಉಪಯೋಗಿಸುತ್ತಾನೆ. “ಏಕೆಂದರೆ ಅವರ ರಾಜ್ಯವನ್ನು ಕಾಡು ಮೃಗಕ್ಕೆ ಕೊಡುವ ಮೂಲಕ, ದೇವರ ಮಾತುಗಳು ನೆರವೇರಲ್ಪಡುವ ತನಕ, ಆತನ ಅಭಿಪ್ರಾಯವನ್ನು ನೆರವೇರಿಸಲು, ಅವರ ಒಂದೇ ಅಭಿಪ್ರಾಯವನ್ನು ಸಹ ನೆರವೇರಿಸಲು, ದೇವರು ಅವರ ಹೃದಯಗಳಲ್ಲಿ ಅದನ್ನು ಹಾಕಿದನು.” (ಪ್ರಕಟನೆ 17:17, NW) ದೇವರ “ಅಭಿಪ್ರಾಯ” ಏನು? ಮಹಾ ಬಾಬೆಲಿನ ಹಂತಕರು ಅವಳನ್ನು ಸಂಪೂರ್ಣವಾಗಿ ನಾಶಮಾಡಲಿಕ್ಕಾಗಿ, ಒಟ್ಟಾಗಲು ಏರ್ಪಡಿಸುವುದೇ. ನಿಜ, ಅವಳನ್ನು ಆಕ್ರಮಿಸುವುದರಲ್ಲಿ ಅಧಿಪತಿಗಳ ಧ್ಯೇಯವು ತಮ್ಮ ಸ್ವಂತ “ಒಂದೇ ಅಭಿಪ್ರಾಯ” ವನ್ನು ನೆರವೇರಿಸುವುದೇ ಆಗಿರುತ್ತದೆ. ಮಹಾ ಜಾರಸ್ತ್ರೀಯ ವಿರುದ್ಧ ಏಳುವುದು ತಮ್ಮ ರಾಷ್ಟ್ರೀಯ ಹಿತಾಭಿರುಚಿಯಾಗಿದೆ ಎಂದವರು ಭಾವಿಸುವರು. ತಮ್ಮ ಗಡಿಗಳೊಳಗೆ ವ್ಯವಸ್ಥಾಪಿತ ಧರ್ಮದ ಮುಂದುವರಿದ ಅಸ್ತಿತ್ವವು ತಮ್ಮ ಸಾರ್ವಭೌಮತೆಗೆ ಬೆದರಿಕೆಯಾಗಿದೆಯೆಂದು ಅವರು ದೃಷ್ಟಿಸಲೂ ಬಹುದು. ಆದರೆ ಯೆಹೋವನು ನಿಜವಾಗಿಯಾ ವಿಷಯಗಳನ್ನು ಕೌಶಲದಿಂದ ಚಲಾಯಿಸುವನು; ತನ್ನ ಪುರಾತನ ಕಾಲದ, ವ್ಯಭಿಚಾರಿಣಿಯಾಗಿರುವ ವೈರಿಯನ್ನು ಒಂದೇ ಪೆಟ್ಟಿನಿಂದ ನಾಶಮಾಡುವುದರಿಂದ ಆತನ ಅಭಿಪ್ರಾಯವನ್ನು ಅವರು ಜಾರಿಗೊಳಿಸುವರು!—ಯೆರೆಮೀಯ 7:8-11, 34ನ್ನು ಹೋಲಿಸಿರಿ.

21. ಮಹಾ ಬಾಬೆಲನ್ನು ನಾಶಮಾಡುವುದರಲ್ಲಿ ಕಡುಗೆಂಪು ಬಣ್ಣದ ಕಾಡು ಮೃಗವು ಉಪಯೋಗಿಸಲ್ಪಡುವುದರಿಂದ, ಜನಾಂಗಗಳು ಸಂಯುಕ್ತ ರಾಷ್ಟ್ರ ಸಂಘದ ಸಂಬಂಧದಲ್ಲಿ ಏನನ್ನು ಮಾಡುವುವು ಎಂದು ವ್ಯಕ್ತವಾಗುತ್ತದೆ?

21 ಹೌದು, ಮಹಾ ಬಾಬೆಲನ್ನು ನಾಶಮಾಡಲು ಜನಾಂಗಗಳು ಕಡುಗೆಂಪು ಬಣ್ಣದ ಕಾಡು ಮೃಗವನ್ನು—ಸಂಯುಕ್ತ ರಾಷ್ಟ್ರ ಸಂಘವನ್ನು—ಉಪಯೋಗಿಸುವುವು. ಅವರು ತಾವಾಗಿಯೆ ತಮ್ಮ ಸ್ವಂತ ಮುಂತೊಡಗುವಿಕೆಗನುಸಾರ ಕ್ರಿಯೆಗೈಯುವುದಿಲ್ಲ, ಯಾಕಂದರೆ ಯೆಹೋವನು “ಅವರ ರಾಜ್ಯವನ್ನು ಕಾಡುಮೃಗಕ್ಕೆ ಕೊಡುವ ಮೂಲಕ . . . ಅವರ ಒಂದೇ ಅಭಿಪ್ರಾಯವನ್ನು ಸಹ ನೆರವೇರಿಸಲು” ಅವರ ಹೃದಯಗಳಲ್ಲಿ ಅದನ್ನು ಹಾಕುವನು. ಸಮಯ ಬಂದಾಗ, ಸಂಯುಕ್ತ ರಾಷ್ಟ್ರ ಸಂಘವನ್ನು ಬಲಪಡಿಸುವ ಅಗತ್ಯತೆಯನ್ನು ಜನಾಂಗಗಳು ಸ್ಪಷ್ಟವಾಗಿ ಕಾಣುವುವು. ಅವರು ಅದಕ್ಕೆ ಶಕ್ತಿಯನ್ನು ಕೊಡುತ್ತಾರೊ ಎಂಬಂತೆ, ಅದು ಸುಳ್ಳು ಧರ್ಮದ ಮೇಲೆ ತಿರುಗಿಬೀಳುವಂತೆಯೂ, “ಮತ್ತು ದೇವರ ಮಾತುಗಳು ನೆರವೇರಲ್ಪಡುವ ತನಕ” ಅವಳ ವಿರುದ್ಧ ಯಶಸ್ವಿಯಾಗಿ ಹೋರಾಡುವಂತೆಯೂ, ತಮ್ಮಲ್ಲಿರುವ ಅಧಿಕಾರ ಮತ್ತು ಬಲವನ್ನು ಅದಕ್ಕೆ ಕೊಡುವರು. ಹೀಗೆ, ಪುರಾತನ ಜಾರಸ್ತ್ರೀಯು ಅವಳ ಸಂಪೂರ್ಣ ಅಂತ್ಯಕ್ಕೆ ಬರುವಳು. ಮತ್ತು ಅವಳ ತೊಲಗುವಿಕೆಯು ಒಳ್ಳೆಯದೇ!

22. (ಎ) ಪ್ರಕಟನೆ 17:18 ರಲ್ಲಿ ದೇವದೂತನು ತನ್ನ ಸಾಕ್ಷ್ಯವನ್ನು ಮುಕ್ತಾಯಗೊಳಿಸಿದ ರೀತಿಯಿಂದ ಏನು ಸೂಚಿತವಾಗಿದೆ? (ಬಿ) ರಹಸ್ಯದ ಬಿಚ್ಚುವಿಕೆಗೆ ಯೆಹೋವನ ಸಾಕ್ಷಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ?

22 ಸುಳ್ಳು ಧರ್ಮ ಲೋಕ ಸಾಮ್ರಾಜ್ಯದ ಮೇಲೆ ತೀರ್ಪಿನ ಯೆಹೋವನ ಜ್ಯಾರಿಗೊಳಿಸುವಿಕೆಯ ಖಚಿತ ಪಡಿಸುವ ಸಂಗತಿಯನ್ನು ಒತ್ತಿಹೇಳಲಿಕ್ಕೋ ಎಂಬಂತೆ ದೇವದೂತನು ತನ್ನ ಸಾಕ್ಷ್ಯವನ್ನು ಹೀಗನ್ನುತ್ತಾ ಸಮಾಪ್ತಿಗೊಳಿಸುತ್ತಾನೆ: “ಮತ್ತು ನೀನು ಕಂಡ ಆ ಸ್ತ್ರೀಯು ಅಂದರೆ ಭೂರಾಜರ ಮೇಲೆ ಒಂದು ರಾಜ್ಯವಿರುವ ಮಹಾನಗರಿ.” (ಪ್ರಕಟನೆ 17:18, NW) ಬೇಲ್ಶಚ್ಚರನ ಸಮಯದ ಬಾಬೆಲಿನಂತೆ, ಮಹಾ ಬಾಬೆಲ್‌ “ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿದ್ದಾಳೆ.” (ದಾನಿಯೇಲ 5:27; ದ ನ್ಯೂ ಇಂಗ್ಲಿಷ್‌ ಬೈಬಲ್‌) ಅವಳ ಮರಣದಂಡನೆಯು ಶೀಘ್ರವೂ, ಅಂತಿಮವೂ ಆಗಲಿರುವುದು. ಮತ್ತು ಮಹಾ ವೇಶ್ಯಾ ಸ್ತ್ರೀ ಮತ್ತು ಕಡುಗೆಂಪು ಬಣ್ಣದ ಕಾಡು ಮೃಗದ ರಹಸ್ಯದ ಪ್ರಕಟಿಸುವಿಕೆಗೆ ಯೆಹೋವನ ಸಾಕ್ಷಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ? ಸತ್ಯವನ್ನು ಪ್ರಾಮಾಣಿಕವಾಗಿ ಹುಡುಕುವವರಿಗೆ “ಇಂಪಾಗಿಯೂ ರಸವತ್ತಾಗಿಯೂ” ಉತ್ತರಿಸುತ್ತಾ ಇರುವಾಗ, ಅವರು ಯೆಹೋವನ ತೀರ್ಪಿನ ದಿನವನ್ನು ಪ್ರಚುರಪಡಿಸುವುದರಲ್ಲಿ ಶ್ರದ್ಧೆಯನ್ನು ತೋರಿಸುತ್ತಾರೆ. (ಕೊಲೊಸ್ಸೆ 4:5, 6; ಪ್ರಕಟನೆ 17:3, 7) ನಮ್ಮ ಮುಂದಿನ ಅಧ್ಯಾಯವು ತೋರಿಸುವಂತೆ, ಮಹಾ ಜಾರಸ್ತ್ರೀಯು ಹತಿಸಲ್ಪಡುವಾಗ ಪಾರಾಗಲು ಇಷ್ಟಪಡುವವರೆಲ್ಲರೂ ಕ್ರಿಯೆಗೈಯಲೇಬೇಕು, ಮತ್ತು ಚುರುಕಾಗಿ ಕಾರ್ಯವೆಸಗಲೇ ಬೇಕು!

[ಪುಟ 363 ರಲ್ಲಿರುವ ಚಿತ್ರಗಳು]

ಏಳು ಲೋಕ ಶಕ್ತಿಗಳ ಅನುಕ್ರಮ ಸರಣಿ

ಐಗುಪ್ತ

ಅಶ್ಶೂರ್ಯ

ಬಾಬೆಲ್‌

ಮೇದ್ಯ-ಪಾರಸೀಯ

ಗ್ರೀಸ್‌

ರೋಮ್‌

ಆ್ಯಂಗ್ಲೋ-ಅಮೆರಿಕ

[Picture on page 254]

“ಅದು ತಾನೇ ಎಂಟನೆಯ ಅರಸು”

[Picture on page 255]

ಕುರಿಮರಿಗೆ ಬೆನ್ನು ತೋರಿಸುತ್ತಾ “ಅವರು ತಮ್ಮ ಶಕ್ತಿಯನ್ನೂ ಅಧಿಕಾರವನ್ನೂ ಕಾಡು ಮೃಗಕ್ಕೆ ಕೊಡುತ್ತಾರೆ”

[Picture on page 257]

ಮಹಾ ಬಾಬೆಲಿನ ಪ್ರಮುಖ ಭಾಗದೋಪಾದಿ ಕ್ರೈಸ್ತಪ್ರಪಂಚವು ಪ್ರಾಚೀನ ಯೆರೂಸಲೇಮಿನ ಪೂರ್ತಿ ವಿನಾಶಕ್ಕೆ ಅನುರೂಪವಾಗುವುದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ