ಯುವ ಜನರು ಪ್ರಶ್ನಿಸುವುದು . . .
ನಾನು ಒಂದು ಸುಸಮಯವನ್ನು ಹೇಗೆ ಅನುಭವಿಸಬಲ್ಲೆ?
“ವಿನೋದಕರವಾಗಿರುವ ಅನೇಕ ಸಂಗತಿಗಳನ್ನು ಮಾಡುವ ಅವಕಾಶ ನಮಗೆ ಖಂಡಿತವಾಗಿಯೂ ಸಿಗುತ್ತದೆಂದು ನನಗನಿಸುತ್ತದೆ. ನಮ್ಮ ಸಭೆಯಲ್ಲಿ ಒಟ್ಟಿಗೆ ಸೇರಿಬರಲು ನಾವು ನಿಜವಾದ ಪ್ರಯತ್ನವನ್ನು ಮಾಡುತ್ತೇವೆ. ಹಿತಕರವಾಗಿರುವ ವಿನೋದವನ್ನು ಅನುಭವಿಸಲು ನಮಗೆ ಸಿಗುತ್ತದೆ. ಲೋಕದಲ್ಲಿನ ಹೆಚ್ಚಿನ ಮಕ್ಕಳು ಹಿತಕರವಾದ ವಿನೋದವನ್ನು ಅನುಭವಿಸುವುದಿಲ್ಲ.”—ಜೆನಿಫರ್.
ಮನೋರಂಜನೆ—ಆಗಿಂದಾಗ್ಗೆ ಅದರ ಅಗತ್ಯ ಎಲ್ಲರಿಗೂ ಇರುತ್ತದೆ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದೇನೆಂದರೆ, ಮನೋರಂಜನೆಯು “ವ್ಯಕ್ತಿಯೊಬ್ಬನ ಮಾನಸಿಕ ಹಾಗೂ ಶಾರೀರಿಕ ಆರೋಗ್ಯಕ್ಕೆ ಒಂದು ಮಹತ್ವಪೂರ್ಣ ದೇಣಿಗೆ”ಯನ್ನೂ ಮಾಡಬಹುದು. ಅಷ್ಟೇಕೆ, “ನಗುವ ಸಮಯ” ಅಂದರೆ, ಸ್ವತಃ ಆನಂದಪಟ್ಟುಕೊಳ್ಳುವ ಸಮಯವೊಂದಿದೆ ಎಂದು ಬೈಬಲ್ ತಾನೇ ಹೇಳುತ್ತದೆ!—ಪ್ರಸಂಗಿ 3:1, 4.a
“ರಿಕ್ರಿಯೇಷನ್” ಎಂಬ ಇಂಗ್ಲಿಷ್ ಪದವು, “ಹೊಸದಾಗಿ ಸೃಷ್ಟಿಸಲು, ಪುನಃಸ್ಥಾಪಿಸಲು, ಉಲ್ಲಾಸಗೊಳಿಸಲು” ಎಂಬುದನ್ನು ಅರ್ಥೈಸುವ ಒಂದು ಲ್ಯಾಟಿನ್ ಪದದಿಂದ ತೆಗೆಯಲ್ಪಟ್ಟಿದೆ. (ವೆಬ್ಸ್ಟರ್ಸ್ ನ್ಯೂ ಕಾಲೆಜಿಯೇಟ್ ಡಿಕ್ಷನರಿ) ವಿಷಾದಕರವಾಗಿ, ಯೌವನಸ್ಥರು “ವಿನೋದ”ಕ್ಕಾಗಿ ಮಾಡುವ—ಉದ್ರೇಕದ ಪಾರ್ಟಿಗಳನ್ನು ನಡೆಸುವುದು ಅಥವಾ ಅಮಲೌಷಧ ಮತ್ತು ಮದ್ಯದ ದುರುಪಯೋಗದಲ್ಲಿ ತೊಡಗುವುದು ಇಲ್ಲವೆ ನಿಷಿದ್ಧ ಕಾಮಗಳಂತಹ—ಅನೇಕ ವಿಷಯಗಳು, ನಿಜವಾಗಿಯೂ ಉಲ್ಲಾಸಪಡಿಸುವಂತಹವುಗಳು ಆಗಿರುವುದೇ ಇಲ್ಲ, ಬದಲಿಗೆ ವಿನಾಶಕಾರಿಯಾಗಿವೆ. ಆದುದರಿಂದ ಆನಂದದಾಯಕವೂ ಹಿತಕರವೂ ಆದ ಮನೋರಂಜನಾತ್ಮಕ ಚಟುವಟಿಕೆಗಳನ್ನು ಕಂಡುಕೊಳ್ಳುವುದು ಒಂದು ನಿಜವಾದ ಪಂಥಾಹ್ವಾನವಾಗಿರಸಾಧ್ಯವಿದೆ. ಆದರೆ ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ಜೆನಿಫರ್ ಸೂಚಿಸುವಂತೆ, ಅದನ್ನು ಮಾಡಸಾಧ್ಯವಿದೆ!
ವಿಷಯಗಳನ್ನು ಒಟ್ಟಿಗೆ ಮಾಡುವುದು
ಇತ್ತೀಚೆಗೆ ಎಚ್ಚರ! ಪತ್ರಿಕೆಯು, ಈ ವಿಷಯದ ಸಂಬಂಧದಲ್ಲಿ ಅನೇಕ ಯೌವನಸ್ಥರನ್ನು ಇಂಟರ್ವ್ಯೂ ಮಾಡಿತು. ಇತರ ಯೌವನಸ್ಥರೊಂದಿಗೆ ಒಟ್ಟು ಸೇರುವುದನ್ನು ತಾವು ಆನಂದಿಸುತ್ತೇವೆಂದು ಹೆಚ್ಚಿನವರು ಹೇಳಿದರು. ನಿಮಗೂ ಹಾಗೆಯೇ ಅನಿಸುತ್ತದೊ—ಆದರೆ ಅನೇಕ ವೇಳೆ ಒಂದು ಆಮಂತ್ರಣವಿರದವರಾಗಿ ನಿಮ್ಮನ್ನು ಕಂಡುಕೊಳ್ಳುತ್ತೀರೊ? ಹಾಗಿರುವಲ್ಲಿ, ಆರಂಭದ ಹೆಜ್ಜೆಯನ್ನು ಏಕೆ ತೆಗೆದುಕೊಳ್ಳಬಾರದು? ದೃಷ್ಟಾಂತಕ್ಕಾಗಿ ಲೀ ಎಂಬ ಹೆಸರಿನ, ದಕ್ಷಿಣ ಆಫ್ರಿಕದ ಹುಡುಗಿಯೊಬ್ಬಳು ಹೇಳುವುದು: “ನಿರ್ದಿಷ್ಟವಾದೊಂದು ಚಲನ ಚಿತ್ರವನ್ನು ನೋಡುವುದರ ಕುರಿತು ನಾನು ಉತ್ಸುಕಳಾಗಿರುವುದಾದರೆ, ನನ್ನ ಮಿತ್ರರಲ್ಲಿ ಒಬ್ಬಳಿಗೆ ನಾನು ಫೋನ್ಮಾಡುತ್ತೇನೆ, ಮತ್ತು ಈ ಮಾತನ್ನು ನಾವು ನಮ್ಮ ಇತರ ಮಿತ್ರರಿಗೆ ಹಬ್ಬಿಸುತ್ತೇವೆ.” ಸಾಮಾನ್ಯವಾಗಿ ಅವರು ಚಲನ ಚಿತ್ರದ ಮೊದಲಿನ ಪ್ರದರ್ಶನಕ್ಕೆ ಹಾಜರಾಗುತ್ತಾರೆ. ಅನಂತರ, ಅವರನ್ನು ಅವರ ಹೆತ್ತವರು ಕರೆದುಕೊಂಡು ಹೋಗುತ್ತಾರೆ, ಮತ್ತು ಒಟ್ಟಿಗೆ ಅವರೊಂದು ಸ್ಥಳೀಯ ಹೋಟೆಲಿನಲ್ಲಿ ಊಟಮಾಡುತ್ತಾರೆ.
ಕ್ರೀಡಾ ಚಟುವಟಿಕೆಗಳು ಸಹ ಆರೋಗ್ಯಪೂರ್ಣ ವ್ಯಾಯಾಮ ಹಾಗೂ ಹಿತಕರವಾದ ಸಾಹಚರ್ಯಕ್ಕೆ ಅವಕಾಶಗಳನ್ನು ಪ್ರಸ್ತುತಪಡಿಸುತ್ತವೆ. (1 ತಿಮೊಥೆಯ 4:8) ಯುವ ರೊಲೀನ್ ಹೇಳುವುದು: “ನಾನು ಎಲ್ಲಿಗೆ ಹೋಗಬಯಸುತ್ತೇನೆ ಎಂಬುದನ್ನು ನಾನು ಮೊದಲು ನನ್ನ ಕುಟುಂಬದವರೊಂದಿಗೆ ಚರ್ಚಿಸುತ್ತೇನೆ, ಅನಂತರ ನಮ್ಮನ್ನು ಜೊತೆಗೂಡುವಂತೆ ನಾವೊಂದು ಚಿಕ್ಕ ಗುಂಪನ್ನು ಆಮಂತ್ರಿಸುತ್ತೇವೆ.” ನಿಶ್ಚಯವಾಗಿಯೂ, ಕ್ರೈಸ್ತ ಯೌವನಸ್ಥರು ಇತರರೊಂದಿಗೆ ತಾವು ಭಾಗವಹಿಸಬಲ್ಲ ಹಿತಕರವಾದ ಕ್ರೀಡೆಗಳ ಒಂದು ಪರಿಣಾಮಕಾರಕ ಶ್ರೇಣಿಯನ್ನು ಕಂಡುಕೊಂಡಿದ್ದಾರೆ: ಸ್ಕೇಟಿಂಗ್, ಸೈಕಲ್ ಸವಾರಿ, ಜಾಗಿಂಗ್, ಮತ್ತು ಟೆನ್ನಿಸ್, ಬೇಸ್ಬಾಲ್, ಕಾಲ್ಚೆಂಡಾಟ, ಮತ್ತು ವಾಲಿಬಾಲ್ ಆಡುವುದು—ಕೇವಲ ಹೆಸರಿಸಲಿಕ್ಕಾಗಿರುವ ಕೆಲವೊಂದು ಕ್ರೀಡೆಗಳು.
ನಿಶ್ಚಯವಾಗಿಯೂ, ಒಂದು ಸುಸಮಯವನ್ನು ಅನುಭವಿಸಲಿಕ್ಕಾಗಿ ನೀವು ಬಹಳಷ್ಟು ಹಣವನ್ನು ವ್ಯಯಿಸುವ ಅಥವಾ ಆಡಂಬರದ ಸಜ್ಜಿಗಾಗಿ ಹಣವನ್ನು ವಿನಿಯೋಗಿಸಬೇಕಾಗಿರುವುದಿಲ್ಲ. “ನನ್ನ ಹೆತ್ತವರು, ಮಿತ್ರರು, ಮತ್ತು ನಾನು ಹತ್ತಿರದ ಪರ್ವತಗಳು ಮತ್ತು ಅರಣ್ಯ ಕ್ಷೇತ್ರಗಳಲ್ಲಿ ಸುತ್ತಾಡುತ್ತಾ ಅನೇಕ ಉಲ್ಲಾಸಕರ ತಾಸುಗಳನ್ನು ವ್ಯಯಿಸಿದ್ದೇವೆ,” ಎಂಬುದಾಗಿ ಒಬ್ಬ ಹದಿವಯಸ್ಕ ಕ್ರೈಸ್ತ ಹುಡುಗಿಯು ಹೇಳುತ್ತಾಳೆ. “ಒಳ್ಳೆಯ ಮಿತ್ರರೊಂದಿಗೆ ನಿರ್ಮಲವಾದ ಗಾಳಿಯಲ್ಲಿ ಹೊರಗಿರುವುದು ತಾನೇ ಎಷ್ಟೊಂದು ಆನಂದದಾಯಕವಾಗಿದೆ!”
ಆತ್ಮೋನ್ನತಿಮಾಡುವ ಸಾಮಾಜಿಕ ನೆರವಿಗಳು
ಹಾಗಿದ್ದರೂ, ಅನೇಕ ಯೌವನಸ್ಥರಿಗೆ, ವಿನೋದವು ಸಾಮಾಜಿಕ ನೆರವಿಗಳಿಗೆ ಹಾಜರಾಗುವುದನ್ನು ಅರ್ಥೈಸುತ್ತದೆ. “ಮಿತ್ರರನ್ನು ಮನೆಗೆ ಊಟಮಾಡಲಿಕ್ಕಾಗಿ ಮತ್ತು ಸಂಗೀತವನ್ನು ಆಲಿಸಲಿಕ್ಕಾಗಿ ಕರೆಯುವುದರಲ್ಲಿ ನಾವು ಆನಂದಿಸುತ್ತೇವೆ,” ಎಂಬುದಾಗಿ ಯುವ ಅವೇಡ ಹೇಳುತ್ತಾಳೆ. ಕ್ರೈಸ್ತರಲ್ಲಿ ಸಾಮಾಜಿಕ ನೆರವಿಗಳಿಗೆ ಅವುಗಳ ಸ್ಥಾನವುಂಟು. ಸ್ವತಃ ಯೇಸು ಕ್ರಿಸ್ತನೇ ವಿಶೇಷ ಭೋಜನಗಳಿಗೆ, ವಿವಾಹ ಮಹೋತ್ಸವಗಳಿಗೆ, ಮತ್ತು ಇತರ ಸಾಮಾಜಿಕ ನೆರವಿಗಳಿಗೆ ಹಾಜರಾದನು. (ಲೂಕ 5:27-29; ಯೋಹಾನ 2:1-10) ತದ್ರೀತಿಯಲ್ಲಿ ಆದಿ ಕ್ರೈಸ್ತರು, ಭೋಜನಗಳು ಮತ್ತು ಆತ್ಮೋನ್ನತಿಮಾಡುವ ಸಾಹಚರ್ಯಕ್ಕಾಗಿ ತಾವು ಒಟ್ಟುಗೂಡಿದಂತಹ ಸಂದರ್ಭಗಳಲ್ಲಿ ಆನಂದಿಸಿದರು.—ಯೂದ 12ನ್ನು ಹೋಲಿಸಿರಿ.
ಒಂದು ನೆರವಿಗೆ ಆತಿಥೇಯರಾಗಿರಲು ನಿಮ್ಮ ಹೆತ್ತವರು ನಿಮ್ಮನ್ನು ಅನುಮತಿಸುವುದಾದರೆ, ಸಮಸ್ಯೆಗಳನ್ನು ದೂರವಿರಿಸಲು ಮತ್ತು ಪ್ರತಿಯೊಬ್ಬರಿಗಾಗಿ ಒಂದು ಸುಸಮಯವನ್ನು ಖಚಿತಪಡಿಸಿಕೊಳ್ಳಲು ನೀವು ಏನು ಮಾಡಬಲ್ಲಿರಿ? ಜಾಗರೂಕವಾದ ಯೋಜನೆಯು ಕೀಲಿ ಕೈಯಾಗಿದೆ. (ಜ್ಞಾನೋಕ್ತಿ 21:5) ದೃಷ್ಟಾಂತಕ್ಕೆ: ನಿಮ್ಮ ಮಿತ್ರರಲ್ಲಿ, ಯೋಗ್ಯವಾಗಿ ಮೇಲ್ವಿಚಾರಣೆಮಾಡಲು ಸಾಧ್ಯವಿದ್ದಷ್ಟು ಮಿತ್ರರನ್ನು ಮಾತ್ರ ಆಮಂತ್ರಿಸುವುದು ವಿವೇಕಯುತವಾಗಿರುವುದು. ಚಿಕ್ಕ ನೆರವಿಗಳು “ವಿಲಾಸಕೂಟಗಳು” ಅಥವಾ “ಉದ್ರೇಕದ ಗೋಷ್ಠಿ”ಗಳಾಗಿ ಬದಲಾಗುವ ಸಾಧ್ಯತೆಯು ಕಡಮೆಯಾಗಿರುತ್ತದೆ.—ಗಲಾತ್ಯ 5:21; ಬಾಯಿಂಗ್ಟನ್.
ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತರು, “ಅಕ್ರಮವಾಗಿ ನಡೆಯು”ವವರೊಂದಿಗೆ ಸಹವಸಿಸುವುದನ್ನು ತೊರೆಯಬೇಕೆಂದು ಎಚ್ಚರಿಸಲ್ಪಟ್ಟರು. (2 ಥೆಸಲೊನೀಕ 3:11-15) ಮತ್ತು ಇಂದು, ಒಂದು ನೆರವಿಯನ್ನು ಹಾಳುಮಾಡುವ ನಿಶ್ಚಿತ ವಿಧವು, ರೌಡಿಗಳೂ ನಿಯಂತ್ರಿಸಲಸಾಧ್ಯವಾದವರೂ ಎಂಬುದಾಗಿ ಖ್ಯಾತರಾಗಿರುವ ಯೌವನಸ್ಥರನ್ನು ಆಮಂತ್ರಿಸುವುದಾಗಿದೆ. ಯಾರನ್ನು ಆಮಂತ್ರಿಸುವಿರೆಂಬುದರ ಕುರಿತು ನೀವು ಜಾಗರೂಕರಾಗಿರಲು ಬಯಸುವಿರಾದರೂ, ಮಿತ್ರರ ಅದೇ ವೃತ್ತಕ್ಕೆ ನಿಮ್ಮನ್ನು ಸೀಮಿತಪಡಿಸಿಕೊಳ್ಳಬೇಡಿರಿ. “ವಿಸ್ತರಿಸಿರಿ” (NW) ಮತ್ತು ಸಭೆಯಲ್ಲಿರುವ ಇನ್ನಿತರರ—ವೃದ್ಧರನ್ನೂ ಸೇರಿಸಿ—ಪರಿಚಯಮಾಡಿಕೊಳ್ಳಿರಿ.—2 ಕೊರಿಂಥ 6:13.
ನೀವು ಅಲ್ಪಾಹಾರಗಳನ್ನು ಒದಗಿಸುವಿರೊ? ಹಾಗಿರುವಲ್ಲಿ, ನಿಮ್ಮ ಅತಿಥಿಗಳು ಒಂದು ಆಹ್ಲಾದಕರ ಸಮಯವನ್ನು ಅನುಭವಿಸುವುದಕ್ಕಾಗಿ ಅವು ಅದ್ಧುರಿಯ ಇಲ್ಲವೆ ದುಬಾರಿಯ ವಿಷಯಗಳಾಗಿರಬೇಕಾಗಿಲ್ಲ. (ಲೂಕ 10:38-42) “ಕೆಲವೊಮ್ಮೆ ನಾವು ಪಿಟ್ಸಾ ರಾತ್ರಿಯನ್ನು ಆಚರಿಸುತ್ತೇವೆ,” ಎಂದು ದಕ್ಷಿಣ ಆಫ್ರಿಕದ ಹುಡುಗಿ, ಸಾಂಚೆ ಹೇಳುತ್ತಾಳೆ. ಆಹಾರದ ಕೆಲವು ಐಟಮ್ಗಳನ್ನು ತರಲು ಅತಿಥಿಗಳು ಅನೇಕ ವೇಳೆ ಇಚ್ಛುಕರಾಗಿರುವರು.
ಒಂದು ನೆರವಿಯಲ್ಲಿ—ಕೇವಲ ಟಿವಿಯನ್ನು ವೀಕ್ಷಿಸುವುದು, ಸಂಗೀತವನ್ನು ಆಲಿಸುವುದು, ಅಥವಾ ಸಂಭಾಷಿಸುವುದನ್ನು ಹೊರತುಪಡಿಸಿ—ನೀವು ಮಾಡಸಾಧ್ಯವಿರುವ ಕೆಲವು ವಿಷಯಗಳಾವುವು? “ನಾವು ಸಾಮಾನ್ಯವಾಗಿ ಸಾಯಂಕಾಲವನ್ನು ಮುಂಚಿತವಾಗಿಯೇ ಯೋಜಿಸುತ್ತೇವೆ,” ಎಂಬುದಾಗಿ ಸಾಂಚೆ ಹೇಳುತ್ತಾಳೆ. “ನಾವು ಆಟಗಳನ್ನು ಆಡಿದ್ದೇವೆ ಇಲ್ಲವೆ ನಾವು ಒಟ್ಟಿಗೆ ಹಾಡುಗಳನ್ನು ಹಾಡಸಾಧ್ಯವಾಗುವಂತೆ ಯಾರಾದರೊಬ್ಬರು ಪಿಯಾನೊ ನುಡಿಸುವಂತೆ ಏರ್ಪಡಿಸಿದ್ದೇವೆ.” ಮಾಸ್ಯನೆ ಎಂಬ ಹೆಸರಿನ ಒಬ್ಬ ಆಫ್ರಿಕನ್ ಯೌವನಸ್ಥನು ಹೇಳುವುದು: “ನಾವು ಕೆಲವೊಮ್ಮೆ ಇಸ್ಪೀಟಾಟ, ಡ್ರಾಫ್ಟ್ಸ್ [ಚೆಕರ್ಸ್], ಮತ್ತು ಚೆಸ್ ಆಟಗಳನ್ನು ಆಡುತ್ತೇವೆ.”
ಈ ಮುಂಚೆ ಉಲ್ಲೇಖಿಸಲ್ಪಟ್ಟ ಜೆನಿಫರ್ ಎಚ್ಚರ! ಪತ್ರಿಕೆಗೆ ಹೇಳಿದ್ದು: “ಬೈಬಲ್ ಆಟಗಳನ್ನು ಆಡಲು ನಮ್ಮನ್ನು ತಮ್ಮಲ್ಲಿಗೆ ಆಮಂತ್ರಿಸುವ ಒಬ್ಬ ಹಿರಿಯರು ನಮ್ಮ ಸಭೆಯಲ್ಲಿದ್ದಾರೆ. ಚೆನ್ನಾಗಿ ಆಡುವ ಸಲುವಾಗಿ ನಿಮಗೆ ಒಳ್ಳೆಯ ಬೈಬಲ್ ಜ್ಞಾನವಿರಬೇಕಾಗಿದೆ.” ಎಚ್ಚರ! ಪತ್ರಿಕೆಯ ಪ್ರತಿನಿಧಿಯು ಇತರ ಯೌವನಸ್ಥರನ್ನು ಹೀಗೆ ಕೇಳಿದನು: “ಬೈಬಲ್ ಆಟಗಳನ್ನು ಆಡುವುದು ಅಸಮಂಜಸವಾದದ್ದೆಂದು ನಿಮಗನಿಸುವುದಿಲ್ಲವೊ?” ಅವರು “ಇಲ್ಲ!” ಎಂಬ ಉತ್ತರವನ್ನು ಕಾರ್ಯತಃ ಕೂಗಿಹೇಳಿದರು.
“ಅದು ಪ್ರಚೋದಿಸುವಂತಹದ್ದಾಗಿದೆ,” ಎಂದು ಒಬ್ಬ ಹದಿವಯಸ್ಕ ಹುಡುಗಿಯು ಹೇಳಿದಳು. “ಅದು ವಿನೋದಕರ!” ಎಂದಳು ಇನ್ನೊಬ್ಬಳು. ಬೈಬಲ್ ಆಟಗಳು ವಿನೋದಕ್ಕಾಗಿ ಆಡಲ್ಪಡುವಾಗ, ಮತ್ತು ಸ್ಪರ್ಧೆಯ ಆತ್ಮವನ್ನು ನಿಯಂತ್ರಣದಲ್ಲಿಡುವಾಗ, ಅವು ಆಹ್ಲಾದಕರವೂ ಶೈಕ್ಷಣಿಕವೂ ಆಗಿರಬಲ್ಲವು!—1972, ಜೂನ್ 22ರ ಅವೇಕ್! ಪತ್ರಿಕೆಯ ಸಂಚಿಕೆಯಲ್ಲಿ “ಒಟ್ಟುಗೂಡುವಿಕೆಗಳನ್ನು ಆನಂದದಾಯಕವಾಗಿ ಆದರೂ ಪ್ರಯೋಜನಕರವಾಗಿ ಮಾಡುವುದು” ಎಂಬ ಲೇಖನವನ್ನು ನೋಡಿರಿ.
ಕುಟುಂಬ ವಿನೋದ
ಬೈಬಲ್ ಸಮಯಗಳಲ್ಲಿ ಕುಟುಂಬಗಳಿಗೆ ಕೆಲವು ಬಗೆಯ ಮನೋರಂಜನೆಯನ್ನು ಒಟ್ಟಿಗೆ ಆನಂದಿಸುವುದು ಅಸಾಮಾನ್ಯವಾದದ್ದಾಗಿರಲಿಲ್ಲ. (ಲೂಕ 15:25) ಹಾಗಿದ್ದರೂ, ದ ಕಿಡ್ಸ್ ಬುಕ್ ಅಬೌಟ್ ಪೇರೆಂಟ್ಸ್ ಎಂಬ ಪುಸ್ತಕದ ಎಳೆಯ ಗ್ರಂಥಕರ್ತರು ಗಮನಿಸುವುದೇನೆಂದರೆ, “ಈ ದಿನಗಳಲ್ಲಿ ಹೆತ್ತವರು ಮತ್ತು ಮಕ್ಕಳು ಎಷ್ಟು ಕಾರ್ಯಮಗ್ನರಾಗಿರುತ್ತಾರೆಂದರೆ, ಚಟುವಟಿಕೆಗಳನ್ನು ಯೋಜಿಸಲು ಯಾರಿಗೂ ಸಮಯವಿರುವುದಿಲ್ಲ . . . ಕೇವಲ ವಿನೋದವಾಗಿರುವ ಚಟುವಟಿಕೆಗಳನ್ನು ಮಾಡುತ್ತಾ, ಪ್ರತಿ ವಾರ ಒಟ್ಟಿಗೆ ಒಂದಿಷ್ಟು ಸಮಯವನ್ನು ವ್ಯಯಿಸಲು ಖಚಿತಪಡಿಸಿಕೊಳ್ಳುವುದು ಹೆತ್ತವರಿಗೂ ಮಕ್ಕಳಿಗೂ ಪ್ರಾಮುಖ್ಯವಾದದ್ದಾಗಿದೆಯೆಂದು ನಾವು ನೆನಸುತ್ತೇವೆ.”
“ಶುಕ್ರವಾರವು ನಮ್ಮ ಕುಟುಂಬ ದಿನವಾಗಿದೆ,” ಎಂದು ಪಾಕಿ ಎಂಬ ಹೆಸರಿನ ಒಬ್ಬ ಆಫ್ರಿಕನ್ ಯೌವನಸ್ಥನು ಹೇಳುತ್ತಾನೆ. “ನಾವು ಸಾಮಾನ್ಯವಾಗಿ ಆಟಗಳನ್ನು ಒಟ್ಟಿಗೆ ಆಡುತ್ತೇವೆ.” ಮತ್ತು ನಾವು ನಿಮ್ಮ ರಕ್ತಸಂಬಂಧಿಕರನ್ನು ಮರೆಯದಿರೋಣ. ಯುವ ಬ್ರಾನ್ವಿನ್ ಹೇಳುವುದು: “ನನ್ನ ಚಿಕ್ಕ ತಂಗಿಯೊಂದಿಗೆ ಚಿತ್ರ ಬರೆಯುವುದು ಮತ್ತು ಇತರ ಕಲಾತ್ಮಕ ವಿಷಯಗಳನ್ನು ಮಾಡುವುದನ್ನು ನಾನು ಆನಂದಿಸುತ್ತೇನೆ.” ನೀವು ಆರಂಭದ ಹೆಜ್ಜೆಯನ್ನು ತೆಗೆದುಕೊಂಡು, ನಿಮ್ಮ ಕುಟುಂಬದೊಂದಿಗೆ ಮಾಡಲಿಕ್ಕಾಗಿ ಯಾವುದಾದರೂ ವಿನೋದದ ಚಟುವಟಿಕೆಯನ್ನು ಸೂಚಿಸಸಾಧ್ಯವಿದೆಯೊ?
ನೀವು ಒಬ್ಬಂಟಿಗರಾಗಿರುವಾಗ
ನೀವು ಒಬ್ಬಂಟಿಗರಾಗಿರುವುದಾದರೆ ಆಗೇನು? ನೀವು ಬೇಸರಗೊಂಡು, ಒಂಟಿಯಾಗಿರಬೇಕೆಂಬುದನ್ನು ಅದು ಅರ್ಥೈಸುವುದಿಲ್ಲ. ಅಂತಹ ಸಮಯಾವಧಿಗಳನ್ನು ಉಪಯೋಗಿಸಲಿಕ್ಕಾಗಿ ಅನೇಕ ಉತ್ಪನ್ನಕರ, ಆನಂದದಾಯಕ ವಿಧಗಳಿವೆ. ಉದಾಹರಣೆಗೆ ಹವ್ಯಾಸಗಳು. ಬೈಬಲ್ ಸಮಯಗಳಂದಿನಿಂದ, ಪುರುಷರು ಮತ್ತು ಸ್ತ್ರೀಯರು ಸಂಗೀತದ ಅಧ್ಯಯನವನ್ನು ಸಮೃದ್ಧಗೊಳಿಸುವ ವಿಷಯವಾಗಿ ಕಂಡುಕೊಂಡಿದ್ದಾರೆ. (ಆದಿಕಾಂಡ 4:21; 1 ಸಮುವೇಲ 16:16, 18) “ನಾನು ಪಿಯಾನೊ ನುಡಿಸುತ್ತೇನೆ,” ಎಂದು ರೇಚಲ್ ಹೇಳುತ್ತಾಳೆ. “ನೀವು ಬೇಸರಗೊಂಡಾಗ ಮಾಡಸಾಧ್ಯವಿರುವ ವಿಷಯವು ಅದಾಗಿದೆ.” ನಿಮಗೆ ಸಂಗೀತದ ಕಡೆಗೆ ಒಲವಿರದಿದ್ದಲ್ಲಿ, ನೀವು ಹೊಲಿಗೆಯ ಕೆಲಸದಲ್ಲಿ, ತೋಟಗಾರಿಕೆಯಲ್ಲಿ, ಅಂಚೆಚೀಟಿಯ ಶೇಖರಣೆಯಲ್ಲಿ, ಅಥವಾ ವಿದೇಶೀ ಭಾಷೆಯೊಂದನ್ನು ಕಲಿಯುವುದರಲ್ಲಿ ಆನಂದಿಸಬಹುದು. ಲಾಭಾಂಶವಾಗಿ, ತದನಂತರದ ವರ್ಷಗಳಲ್ಲಿ ಪ್ರಯೋಜನಕರವಾಗಿ ಪರಿಣಮಿಸಲಿರುವ ಕೆಲವು ಕೌಶಲಗಳನ್ನೂ ನೀವು ವಿಕಸಿಸಿಕೊಳ್ಳಬಹುದು.
ಇಸಾಕರಂತಹ ನಂಬಿಕೆಯ ಪುರುಷರು, ಮನನಕ್ಕಾಗಿ ಏಕಾಂತತೆಯ ಅವಧಿಗಳನ್ನು ಕೋರಿದರೆಂದು ಬೈಬಲ್ ನಮಗೆ ಹೇಳುತ್ತದೆ. (ಆದಿಕಾಂಡ 24:63) ಹಾನ್ಸ್ ಎಂಬ ಹೆಸರಿನ ಒಬ್ಬ ಯುವ ಆಸ್ಟ್ರಿಯನ್ ಪುರುಷನು ಹೇಳುವುದು: “ಆಗಾಗ, ನಾನು ತೋಟದಲ್ಲಿರುವ ಒಂದು ಶಾಂತವಾದ ಸ್ಥಳಕ್ಕೆ ಹೋಗಿ, ಸೂರ್ಯಾಸ್ತಮಾನವನ್ನು ವೀಕ್ಷಿಸಲು ಕುಳಿತುಕೊಳ್ಳುತ್ತೇನೆ. ಇದು ನನಗೆ ಬಹಳಷ್ಟು ಆನಂದವನ್ನು ತರುತ್ತದೆ ಮತ್ತು ನನ್ನ ದೇವರಾದ ಯೆಹೋವನಿಗೆ ಹೆಚ್ಚು ಆಪ್ತನಾಗಿರುವಂತೆ ಭಾವಿಸಲು ನನಗೆ ಸಹಾಯಮಾಡುತ್ತದೆ.”
ಯೆಹೋವನ ಸೇವೆಯಲ್ಲಿ “ಆನಂದ”
ಯೆಹೋವ ದೇವರ ಸೇವೆಮಾಡುವುದರಲ್ಲಿ ಕ್ರಿಸ್ತನು “ಆನಂದ”ವನ್ನು ಕಂಡುಕೊಳ್ಳುವನೆಂದು ಬೈಬಲ್ ಪ್ರವಾದಿಸಿತು. (ಯೆಶಾಯ 11:3, NW) ಮತ್ತು ದೇವರಿಗೆ ಮಾಡುವ ಪವಿತ್ರ ಸೇವೆಯು ನಿಜವಾಗಿಯೂ ಮನೋರಂಜನೆಯಲ್ಲದಿದ್ದರೂ, ಅದು ಚೈತನ್ಯದಾಯಕವೂ ತೃಪ್ತಿಕರವೂ ಆಗಿರಬಲ್ಲದು.—ಮತ್ತಾಯ 11:28-30.
ಈ ಮುಂಚೆ ಉಲ್ಲೇಖಿಸಲ್ಪಟ್ಟ ಹಾನ್ಸ್, ಇನ್ನೊಂದು ಆನಂದದಾಯಕ ಅನುಭವವನ್ನು ಜ್ಞಾಪಿಸಿಕೊಳ್ಳುತ್ತಾನೆ. ಅವನು ಹೇಳುವುದು: “[ಆರಾಧನೆಗಾಗಿ] ಒಂದು ಸಮ್ಮೇಳನ ಸಭಾಗೃಹದ ನಿರ್ಮಾಣ ನಿವೇಶನದಲ್ಲಿ ಕೆಲಸಮಾಡುತ್ತಾ ನಾವು ಕಳೆದ ಆ ವಾರಾಂತ್ಯಗಳನ್ನು ಜ್ಞಾಪಿಸಿಕೊಳ್ಳುವುದನ್ನು ನನ್ನ ಮಿತ್ರರು ಮತ್ತು ನಾನು ಇಷ್ಟಪಡುತ್ತೇವೆ. ಒಟ್ಟಿಗೆ ಕೆಲಸಮಾಡುವ ವಿಧವನ್ನು ನಾವು ಕಲಿತೆವು, ಮತ್ತು ನಾವು ಒಬ್ಬರನ್ನೊಬ್ಬರು ಹೆಚ್ಚು ಉತ್ತಮವಾಗಿ ತಿಳಿದುಕೊಂಡೆವು. ಹಿನ್ನೋಟ ಬೀರುವಾಗ, ವಿನೋದಕರವೂ ಆಗಿದ್ದ ಯಾವುದೊ ಸಾರ್ಥಕವಾದ ವಿಷಯವನ್ನು ನಾವು ಮಾಡಿದೆವೆಂಬ ತೃಪ್ತಿದಾಯಕ ಅನಿಸಿಕೆ ನಮಗಿದೆ.”
ಈ ಕ್ರೈಸ್ತ ಯೌವನಸ್ಥರ ಸಾಕ್ಷ್ಯವು, ಒಂದು ನಿಜಾಂಶವನ್ನು ಎದ್ದುಕಾಣುವಂತಹ ರೀತಿಯಲ್ಲಿ ಸ್ಪಷ್ಟಗೊಳಿಸುತ್ತದೆ: ಒಂದು ಸುಸಮಯವನ್ನು ಅನುಭವಿಸುವುದನ್ನು ನೀವು ತಪ್ಪಿಸಿಕೊಳ್ಳಬೇಕಾಗಿರುವುದಿಲ್ಲ. ಬೈಬಲ್ ಮೂಲತತ್ವಗಳನ್ನು ಅನುಸರಿಸಿರಿ. ಕಾಲ್ಪನಿಕರಾಗಿರಿ! ಹಿತಕರವಾದ ಆರಂಭದ ಹೆಜ್ಜೆಗಳನ್ನು ತೆಗೆದುಕೊಳ್ಳಿರಿ! ನಿಮ್ಮನ್ನು ಕೆಡವಿಹಾಕದೆ, ನಿಮ್ಮ ಆತ್ಮೋನ್ನತಿಮಾಡುವ ವಿಧಗಳಲ್ಲಿ ನೀವು ಸ್ವತಃ ಆನಂದಿಸಬಲ್ಲಿರಿ ಎಂಬುದನ್ನು ನೀವು ಕಂಡುಕೊಳ್ಳುವಿರಿ.
[ಪಾದಟಿಪ್ಪಣಿ]
a 1996, ಆಗಸ್ಟ್ 8ರ ನಮ್ಮ ಸಂಚಿಕೆಯಲ್ಲಿ, “ಯುವ ಜನರು ಪ್ರಶ್ನಿಸುವುದು . . . ಇತರ ಯೌವನಸ್ಥರು ಏಕೆ ಎಲ್ಲಾ ವಿನೋದವನ್ನು ಅನುಭವಿಸುತ್ತಾರೆ?” ಎಂಬ ಲೇಖನವನ್ನು ನೋಡಿರಿ.
[ಪುಟ 34 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಒಳ್ಳೆಯ ಮಿತ್ರರೊಂದಿಗೆ ನಿರ್ಮಲವಾದ ಗಾಳಿಯಲ್ಲಿ ಹೊರಗಿರುವುದು ತಾನೇ ಎಷ್ಟೊಂದು ಆನಂದದಾಯಕವಾಗಿದೆ!”
[ಪುಟ 35 ರಲ್ಲಿರುವ ಚಿತ್ರ]
ಮಿತ್ರರೊಂದಿಗೆ ಒಂದು ಸುಸಮಯವನ್ನು ಅನುಭವಿಸಲು, ನೀವು ಬಹಳಷ್ಟು ಹಣವನ್ನು ವ್ಯಯಿಸಬೇಕಾಗಿಲ್ಲ