ಯೆಹೋವನು ನನ್ನ ಬಂಡೆಯಾಗಿದ್ದಾನೆ
ಎಮಾನ್ವೀಲ್ ಲೀಓನೂಡಾಕೀಸ್ ಹೇಳಿದಂತೆ
ನನ್ನ ತಾಯಿಯು ಕೋಪದಿಂದ ನನಗೆ ಹೀಗೆ ಹೇಳಿದರು: “ನೀನು ನಿನ್ನ ನಿರ್ಧಾರಕ್ಕೆ ಅಂಟಿಕೊಂಡು ನಿಲ್ಲುವುದಾದರೆ, ಈ ಮನೆಯನ್ನು ಬಿಟ್ಟು ಹೊರಹೋಗಬೇಕಾಗುತ್ತದೆ.” ನಾನು ದೇವರ ರಾಜ್ಯವನ್ನು ಪೂರ್ಣಸಮಯ ಪ್ರಚಾರಮಾಡಲು ನಿರ್ಧರಿಸಿದ್ದೆ. ಆದಾಗ್ಯೂ, ನನ್ನ ಪದೇ ಪದೇ ಜೈಲುವಾಸ ಶಿಕ್ಷೆಯು ಅವರ ಮೇಲೆ ಸಹಿಸಲಾರದ ಅವಮಾನವನ್ನು ಹೇರಿತು.
ನನ್ನ ಹೆತ್ತವರು ನಮ್ರರೂ ದೇವಭಯವುಳ್ಳವರೂ ಆಗಿದ್ದರು. ಇವರು ಗ್ರೀಸಿನ ಕ್ರೀಟ್ ದ್ವೀಪದ ಪಶ್ಚಿಮ ಭಾಗದಲ್ಲಿರುವ ಡೂಲೀಅನಾ ಹಳ್ಳಿಯಲ್ಲಿ ವಾಸಿಸುತ್ತಿದ್ದರು. 1908ರಲ್ಲಿ ನಾನು ಇದೇ ಹಳ್ಳಿಯಲ್ಲಿ ಜನಿಸಿದೆ. ನನ್ನ ಯೌವನ ಪ್ರಾಯದಿಂದಲೂ, ಇವರು ನನಗೆ ದೇವರಿಗೆ ಭಯಭಕ್ತಿ ತೋರಿಸುವುದನ್ನು ಮತ್ತು ಗೌರವಿಸುವುದನ್ನು ಕಲಿಸಿದರು. ನಾನು ದೇವರ ವಾಕ್ಯವನ್ನು ಪ್ರೀತಿಸಿದೆ, ಆದರೂ ಶಾಲಾಶಿಕ್ಷಕರ ಅಥವಾ ಗ್ರೀಕ್ ಸಂಪ್ರದಾಯಬದ್ಧ ವೈದಿಕರ ಕೈಗಳಲ್ಲಿ ಬೈಬಲನ್ನು ಎಂದೂ ನೋಡಿರಲಿಲ್ಲ.
ಸಿ.ಟಿ. ರಸಲ್‌ರ ಸ್ಟಡೀಸ್ ಇನ್ ದ ಸ್ಕ್ರಿಪ್‌ಚರ್ಸ್‌ನ ಆರು ಸಂಚಿಕೆಗಳನ್ನು ಮತ್ತು ಹಾರ್ಪ್ ಆಫ್ ಗಾಡ್ ಎಂಬ ಪುಸ್ತಕವನ್ನು ನೆರೆಮನೆಯವನು ಓದಿದ ನಂತರ, ಅದರಲ್ಲಿದ್ದ ಕಣ್ಣನ್ನು ತೆರೆಸುವ ಶಾಸ್ತ್ರೀಯ ವಿಷಯಗಳನ್ನು ನನ್ನೊಂದಿಗೆ ಉತ್ಸುಕತೆಯಿಂದ ಹಂಚಿಕೊಂಡನು. ಈ ಪುಸ್ತಕಗಳು ಈಗ ಯೆಹೋವನ ಸಾಕ್ಷಿಗಳೆಂದು ಕರೆಯಲ್ಪಡುವ ಬೈಬಲ್ ವಿದ್ಯಾರ್ಥಿಗಳಿಂದ ಪ್ರಕಾಶಿಸಲ್ಪಟ್ಟಿದ್ದವು. ನಾನು ಬೈಬಲನ್ನು ಮತ್ತು ಅಥೇನ್ಸ್‌ನಲ್ಲಿರುವ ವಾಚ್‌ಟವರ್ ಸೊಸೈಟಿಯ ಕಾರ್ಯಾಲಯದಿಂದ ಪುಸ್ತಕಗಳ ಪ್ರತಿಗಳನ್ನು ಪಡೆದುಕೊಂಡೆ. ಆ ನೆರೆಮನೆಯವನೊಂದಿಗೆ ರಾತ್ರಿ ಬಹಳ ಹೊತ್ತಿನ ವರೆಗೆ ಕುಳಿತು, ಯೆಹೋವನಿಗೆ ಪ್ರಾರ್ಥಿಸಿದ್ದು ಹಾಗೂ ಮೋಂಬತ್ತಿ ಬೆಳಕಿನಲ್ಲಿ ಈ ಪ್ರಕಾಶನಗಳ ಸಹಾಯದೊಂದಿಗೆ ಶಾಸ್ತ್ರವಚನಗಳಿಂದ ಆಳವಾದ ವಿಚಾರಗಳನ್ನು ಸೇದಿದ್ದು ನನಗೆ ಈಗಲೂ ನೆನಪಿದೆ.
ಹೊಸತಾಗಿ ಕಂಡುಕೊಂಡ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದಾಗ, ನಾನು 20 ವರ್ಷ ಪ್ರಾಯದವನಾಗಿದ್ದೆ ಮತ್ತು ಆಗ ನಾನು ಹತ್ತಿರದ ಹಳ್ಳಿಯಲ್ಲಿ ಶಾಲಾ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದೆ. ಬೇಗನೇ, ನಮ್ಮಲ್ಲಿ ನಾಲ್ವರು ಡೂಲೀಅನಾದಲ್ಲಿ ಬೈಬಲ್ ಅಭ್ಯಾಸವನ್ನು ನಡೆಸಲಿಕ್ಕಾಗಿ ಕ್ರಮದ ಕೂಟಗಳನ್ನು ಏರ್ಪಡಿಸುತ್ತಿದ್ದೆವು. ದೇವರ ರಾಜ್ಯವು ಮಾನವಕುಲದ ಏಕಮಾತ್ರ ನಿರೀಕ್ಷೆಯಾಗಿದೆಯೆಂಬುದನ್ನು ಜನರು ತಿಳಿದುಕೊಳ್ಳಲು ಸಹಾಯಮಾಡಲಿಕ್ಕಾಗಿ ನಾವು ಟ್ರ್ಯಾಕ್ಟ್‌ಗಳನ್ನು, ಪುಸ್ತಿಕೆಗಳನ್ನು, ಪುಸ್ತಕಗಳನ್ನು ಮತ್ತು ಬೈಬಲುಗಳನ್ನೂ ಹಂಚಿದೆವು.
1931ರಲ್ಲಿ, ಲೋಕವ್ಯಾಪಕವಾಗಿ ಸಾವಿರಾರು ವ್ಯಕ್ತಿಗಳು ಯೆಹೋವನ ಸಾಕ್ಷಿಗಳು ಎಂಬ ಬೈಬಲ್ ಆಧಾರಿತವಾದ ಹೆಸರನ್ನು ಸ್ವೀಕರಿಸಿದಾಗ ನಾವು ಸಹ ಅವರಲ್ಲಿ ಒಬ್ಬರಾಗಿದ್ದೆವು. (ಯೆಶಾಯ 43:10) ಮರುವರ್ಷವೇ, ನಾವು ಬಹಿರಂಗ ಪ್ರಕಟನೆಯಲ್ಲಿ ಭಾಗವಹಿಸಿದೆವು ಮತ್ತು ಅಧಿಕಾರಿಗಳಿಗೆ ನಮ್ಮ ಹೊಸ ಹೆಸರು ಮತ್ತು ಅದರ ಮಹತ್ವವನ್ನು ವಿವರಿಸಿದೆವು. ಇದರಲ್ಲಿ ಸಮಯೋಚಿತವಾದ ಪುಸ್ತಿಕೆಯನ್ನು ಪ್ರತಿಯೊಬ್ಬ ಪಾದ್ರಿಗೆ, ನ್ಯಾಯಾಧೀಶರಿಗೆ, ಪೊಲೀಸ್ ಅಧಿಕಾರಿಗೆ ಮತ್ತು ನಮ್ಮ ಕ್ಷೇತ್ರದಲ್ಲಿರುವ ವ್ಯಾಪಾರಸ್ಥರಿಗೆ ಹಂಚುವುದು ಸಹ ಒಳಗೊಂಡಿತು.
ನಿರೀಕ್ಷಿಸಿದಂತೆಯೇ, ಪಾದ್ರಿಗಳು ಹಿಂಸೆಯ ಅಲೆಯನ್ನು ಪ್ರೇರೇಪಿಸಿದರು. ನಾನು ಮೊದಲ ಬಾರಿಗೆ ಬಂಧಿಸಲ್ಪಟ್ಟಾಗ 20 ದಿನಗಳ ವರೆಗೆ ಸೆರೆಮನೆವಾಸದ ಶಿಕ್ಷೆಯನ್ನು ಪಡೆದೆ. ಬಿಡುಗಡೆಯಾದ ಸ್ವಲ್ಪ ಸಮಯದ ನಂತರ, ನಾನು ಪುನಃ ಬಂಧಿಸಲ್ಪಟ್ಟೆ ಮತ್ತು ಒಂದು ತಿಂಗಳಿನ ಸೆರೆಮನೆವಾಸದ ಶಿಕ್ಷೆಯನ್ನು ಪಡೆದೆ. ನಮ್ಮ ಸಾರುವ ಕೆಲಸವನ್ನು ನಿಲ್ಲಿಸಬೇಕೆಂದು ನ್ಯಾಯಾಧೀಶನೊಬ್ಬನು ನಮ್ಮನ್ನು ಒತ್ತಾಯಪಡಿಸಿದಾಗ, ನಾವು ಅಪೊಸ್ತಲರ ಕೃತ್ಯಗಳು 5:29ರ ಮಾತುಗಳಿಂದ ಅವರಿಗೆ ಹೀಗೆ ಉತ್ತರಿಸಿದೆವು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.” ನಂತರ, 1932ರಲ್ಲಿ ವಾಚ್‌ಟವರ್‌ನ ಪ್ರತಿನಿಧಿಯೊಬ್ಬನು ಡೂಲೀಅನಾದಲ್ಲಿರುವ ನಮ್ಮ ಚಿಕ್ಕ ಗುಂಪನ್ನು ಭೇಟಿಮಾಡಿದನು ಮತ್ತು ನಮ್ಮಲ್ಲಿ ನಾಲ್ವರೂ ದೀಕ್ಷಾಸ್ನಾನವನ್ನು ಪಡೆದುಕೊಂಡೆವು.
ಆತ್ಮಿಕ ಕುಟುಂಬವೊಂದನ್ನು ಕಂಡುಕೊಳ್ಳುವುದು
ಸಾರುವ ಕೆಲಸದಲ್ಲಿ ಹೆಚ್ಚನ್ನು ಮಾಡಬೇಕೆನ್ನುವ ನನ್ನ ಅಪೇಕ್ಷೆಯ ಕಾರಣದಿಂದ, ನಾನು ನನ್ನ ಶಿಕ್ಷಕ ಹುದ್ದೆಗೆ ರಾಜೀನಾಮೆಯನ್ನು ನೀಡಿದೆ. ಅದು ನನ್ನ ತಾಯಿಯ ತಾಳ್ಮೆಯನ್ನು ನಿಜವಾಗಿಯೂ ಪರೀಕ್ಷಿಸಿತು. ನಾನು ಮನೆಯನ್ನು ಬಿಟ್ಟುಹೋಗಬೇಕೆಂದು ನನ್ನನ್ನು ಅವರು ಒತ್ತಾಯಪಡಿಸಿದರು. ಅಥೇನ್ಸಿನಲ್ಲಿರುವ ವಾಚ್‌ಟವರ್ ಬ್ರಾಂಚ್ ಆಫೀಸಿನ ಒಪ್ಪಿಗೆಯೊಂದಿಗೆ, ಕ್ರೀಟ್‌ನ ಇರಕ್ಲೀಯಾನ್ ಪಟ್ಟಣದ ಉದಾರ ಮನೋಭಾವವುಳ್ಳ ಒಬ್ಬ ಕ್ರೈಸ್ತ ಸಹೋದರನು ನನ್ನನ್ನು ತನ್ನ ಮನೆಯಲ್ಲಿ ಸಂತೋಷದಿಂದ ಸೇರಿಸಿಕೊಂಡನು. ಹೀಗೆ 1933ರ ಆಗಸ್ಟ್ ತಿಂಗಳಿನಲ್ಲಿ, ನನ್ನ ಹಳ್ಳಿಯಲ್ಲಿದ್ದ ಸಹೋದರರು ಕೆಲವು ಆಸಕ್ತ ವ್ಯಕ್ತಿಗಳೊಂದಿಗೆ ನನ್ನನ್ನು ಬೀಳ್ಕೊಡಲು ಬಸ್ ನಿಲ್ದಾಣಕ್ಕೆ ಬಂದರು. ಇದು ಬಹಳ ಹೃದಯಸ್ಪರ್ಶಿ ಕ್ಷಣವಾಗಿತ್ತು ಮತ್ತು ನಾವೆಲ್ಲರೂ ಅತ್ತೆವು, ಯಾಕಂದರೆ ನಾವು ಒಬ್ಬರನ್ನೊಬ್ಬರು ಪುನಃ ಯಾವಾಗ ಕಾಣುವೆವೊ ಎಂಬುದರ ಖಾತ್ರಿಯು ನಮಗಿರಲಿಲ್ಲ.
ಇರಕ್ಲೀಯಾನ್‌ನಲ್ಲಿ, ನಾನು ಒಂದು ಪ್ರೀತಿಯುಳ್ಳ ಆತ್ಮಿಕ ಕುಟುಂಬದ ಭಾಗವಾದೆ. ನಾವು ಅಭ್ಯಾಸಕ್ಕಾಗಿ ಮತ್ತು ಆರಾಧನೆಗಾಗಿ ಕ್ರಮವಾಗಿ ಒಟ್ಟುಗೂಡುತ್ತಿರುವಾಗ ನಮ್ಮ ಜೊತೆ ಇನ್ನೂ ಮೂವರು ಕ್ರೈಸ್ತ ಸಹೋದರರು ಹಾಗೂ ಒಬ್ಬ ಸಹೋದರಿಯು ಇದ್ದರು. ನಾನು ಯೇಸುವಿನ ವಾಗ್ದಾನದ ನೆರವೇರಿಕೆಯನ್ನು ನೇರವಾಗಿ ಕಾಣಶಕ್ತನಾಗಿದ್ದೆ: “ಯಾವನು ನನ್ನ ನಿಮಿತ್ತವೂ ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟು ಬಿಟ್ಟಿರುವನೋ ಅವನಿಗೆ ಈಗಿನ ಕಾಲದಲ್ಲಿ ಮನೆ ಅಣ್ಣ ತಂಗಿ ತಾಯಿ ಮಕ್ಕಳು . . . ದೊರೆಯುವದು.” (ಮಾರ್ಕ 10:29, 30) ಆ ಪಟ್ಟಣದಲ್ಲಿ ಮತ್ತು ಹತ್ತಿರದ ಹಳ್ಳಿಗಳಲ್ಲಿ ಸಾರುವುದು ನನ್ನ ನೇಮಕವಾಗಿತ್ತು. ಪಟ್ಟಣವನ್ನು ಆವರಿಸಿದ ನಂತರ, ಇರಕ್ಲೀಯಾನ್ ಮತ್ತು ಲಾಸಥೀಯೊನ್ ಎಂಬ ಗ್ರಾಮೀಣ ವಿಭಾಗಗಳಲ್ಲಿ ಸಾರಲು ತೊಡಗಿದೆ.
ಏಕಾಂಗಿಯಾಗಿರುವ ಪಯನೀಯರ್
ನಾನು ಹಳ್ಳಿಯಿಂದ ಹಳ್ಳಿಗೆ ಅನೇಕ ತಾಸುಗಳನ್ನು ನಡೆಯುವುದರಲ್ಲಿ ಕಳೆದೆ. ಅಷ್ಟೇ ಅಲ್ಲ, ಸಾಹಿತ್ಯಗಳನ್ನು ರವಾನಿಸುವ ವ್ಯವಸ್ಥೆಯು ಅಪರೂಪವಾಗಿದ್ದ ಕಾರಣ, ತುಂಬ ಭಾರವಿರುವ ಮುದ್ರಿತ ಪುಸ್ತಕಗಳನ್ನು ಹೊತ್ತುಕೊಂಡು ಹೋಗಬೇಕಾಗುತ್ತಿತ್ತು. ನಿದ್ರಿಸಲು ಎಲ್ಲಿಯೂ ಸ್ಥಳವಿಲ್ಲದ ಕಾರಣ, ನಾನು ಹಳ್ಳಿಯಲ್ಲಿರುವ ಕಾಫಿಗೃಹಕ್ಕೆ ಹೋಗಿ ಕೊನೆಯ ಗಿರಾಕಿಯು ಸಾಮಾನ್ಯವಾಗಿ ಮಧ್ಯರಾತ್ರಿಯ ನಂತರ ಅಲ್ಲಿಂದ ಹೊರಟಾಗ, ಒಳಗೆ ಹೋಗಿ ಬೆಂಚ್‌ನ ಮೇಲೆ ನಿದ್ರಿಸುತ್ತಿದ್ದೆ ಮತ್ತು ಮಾಲಿಕನು ಪಾನೀಯಗಳನ್ನು ತಂದುಕೊಡುವ ಮೊದಲೇ ಮರುದಿನ ಬೆಳಗ್ಗೆ ಬಹಳ ಬೇಗ ಏಳುತ್ತಿದ್ದೆ. ಮತ್ತು ಆ ಬೆಂಚಿನಲ್ಲಿ ನನ್ನೊಂದಿಗೆ ಅಗಣಿತ ಸಂಖ್ಯೆಯಲ್ಲಿ ರಕ್ತವನ್ನು ಹೀರುವ ಚಿಗಟಗಳಿದ್ದವು.
ಜನರ ಪ್ರತಿಕ್ರಿಯೆಯು ಸಾಮಾನ್ಯವಾಗಿ ಉತ್ಸಾಹಶೂನ್ಯವಾಗಿತ್ತಾದರೂ, ನನ್ನ ಯೌವನಭರಿತ ಓಜಸ್ಸನ್ನು ಯೆಹೋವನಿಗೆ ಕೊಡಲು ನಾನು ಸಂತೋಷವುಳ್ಳವನಾಗಿದ್ದೆ. ಬೈಬಲಿನ ಸತ್ಯದಲ್ಲಿ ಆಸಕ್ತಿಯನ್ನು ತೋರಿಸಿದ ವ್ಯಕ್ತಿಯೊಬ್ಬನನ್ನು ನಾನು ಕಂಡುಕೊಂಡಾಗ, ಈ ಜೀವಸಂರಕ್ಷಕ ಶುಶ್ರೂಷೆಯಲ್ಲಿ ಮುಂದುವರಿಯುತ್ತಾ ಹೋಗುವುದಕ್ಕೆ ನನಗಿದ್ದ ದೃಢಸಂಕಲ್ಪವನ್ನು ಇದು ನವೀಕರಿಸಿತು. ನನ್ನ ಆತ್ಮಿಕ ಸಹೋದರರೊಂದಿಗಿನ ಸಹವಾಸವು ಸಹ ಚೈತನ್ಯದಾಯಕವಾಗಿತ್ತು. ನಾನು ಸಾರುತ್ತಿದ್ದ ಸ್ಥಳವು ಇರಕ್ಲೀಯಾನ್‌ನ ಪಟ್ಟಣದಿಂದ ಎಷ್ಟು ದೂರವಿದೆ ಎಂಬುದನ್ನು ಹೊಂದಿಕೊಂಡು, ಸುಮಾರು 20ರಿಂದ 50 ದಿನಗಳ ಅನಂತರ ಇವರನ್ನು ನಾನು ಭೇಟಿಯಾಗುತ್ತಿದ್ದೆ.
ಇರಕ್ಲೀಯಾನ್‌ನಲ್ಲಿರುವ ನನ್ನ ಕ್ರೈಸ್ತ ಸಹೋದರ ಸಹೋದರಿಯರು ತಮ್ಮ ಕ್ರಮದ ಕೂಟವನ್ನು ಅಂದು ಸಂಜೆ ನಡಿಸಲಿರುವರೆನ್ನುವ ವಿಚಾರವನ್ನು, ಅದೇ ದಿನದ ಮಧ್ಯಾಹ್ನದಂದು ನೆನಸಿಕೊಂಡಾಗ, ನಾನು ಏಕಾಂಗಿಯಾಗಿದ್ದೇನೆ ಎಂಬ ಅನಿಸಿಕೆಯಾದದ್ದು ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವರನ್ನು ನೋಡುವ ನನ್ನ ಅಪೇಕ್ಷೆಯು ಎಷ್ಟು ಬಲವಾಗಿತ್ತೆಂದರೆ ನನ್ನಿಂದ 25 ಕೀಲೋಮೀಟರಿಗಿಂತಲೂ ದೂರವಿರುವ ಅವರನ್ನು ಕಾಣಲು ನಾನು ನಡೆದುಕೊಂಡು ಹೋಗಲು ನಿರ್ಧರಿಸಿದೆ. ನಾನೆಂದೂ ಅಷ್ಟು ವೇಗವಾಗಿ ನಡೆದಿರಲಿಲ್ಲ. ಆ ಸಂಜೆ ಹಿತಕರವಾದ ಸಹವಾಸದಲ್ಲಿ ಆನಂದಿಸುವುದು ಮತ್ತು ನನ್ನ ಆತ್ಮಿಕ ಜ್ಞಾನನಿಧಿಯನ್ನು ಪುನಃ ತುಂಬಿಸುವುದು ಅದೆಷ್ಟು ಸಾಂತ್ವನದಾಯಕವಾಗಿತ್ತು!
ಸ್ವಲ್ಪ ಸಮಯದಲ್ಲಿ, ನನ್ನ ಪ್ರಯಾಸದ ಸಾರುವ ಕೆಲಸವು ಫಲವನ್ನು ಕೊಡಲು ಪ್ರಾರಂಭಿಸಿತು. ಅಪೊಸ್ತಲರ ದಿನಗಳಲ್ಲಿದ್ದಂತೆ, ‘ಕರ್ತನು [“ಯೆಹೋವನು,” NW] ರಕ್ಷಣೆಯ ಮಾರ್ಗದಲ್ಲಿರುವವರನ್ನು ದಿನಾಲು ಅವರ ಮಂಡಲಿಗೆ ಸೇರಿಸುತ್ತಿದ್ದನು.’ (ಅ. ಕೃತ್ಯಗಳು 2:47) ಕ್ರೀಟಿನಲ್ಲಿ ಯೆಹೋವನ ಆರಾಧಕರ ಸಂಖ್ಯೆಯು ಬೆಳೆಯುತ್ತಾ ಹೋಯಿತು. ಇತರರು ನನ್ನೊಂದಿಗೆ ಶುಶ್ರೂಷೆಯಲ್ಲಿ ಸೇರುತ್ತಿದ್ದಂತೆಯೇ, ನನಗೆ ಒಬ್ಬೊಂಟಿಗನಾಗಿರುವ ಅನಿಸಿಕೆ ಭಾಸವಾಗಲೇ ಇಲ್ಲ. ನಾವು ದೈಹಿಕ ಸಂಕಷ್ಟಗಳನ್ನು ಮತ್ತು ಭೀಕರ ವಿರೋಧವನ್ನು ಸಹಿಸಿದೆವು. ನಮ್ಮ ದಿನದ ಆಹಾರವು ಬ್ರೆಡ್ಡಿನ ಜೊತೆಗೆ ಮೊಟ್ಟೆ, ಆಲಿವ್ಸ್ ಕಾಯಿ ಅಥವಾ ತರಕಾರಿಗಳಾಗಿದ್ದವು. ಇವು ನಾವು ಯಾರಿಗೆ ಸಾರುತ್ತಿದ್ದೆವೋ ಅವರು ನಮ್ಮ ಸಾಹಿತ್ಯಕ್ಕೆ ಬದಲಿಯಾಗಿ ಕೊಡುತ್ತಿದ್ದ ವಸ್ತುಗಳಾಗಿದ್ದವು.
ಕ್ರೀಟಿನ ಆಗ್ನೇಯದಿಕ್ಕಿನ ಭಾಗದಲ್ಲಿರುವ ಈರಾಪೇಟ್ರಾ ಶಹರದಲ್ಲಿ, ಒಬ್ಬ ಬಟ್ಟೆ ವ್ಯಾಪಾರಿಯಾಗಿರುವ ಮೀನೋಸ್ ಕೋಕಿನಾಕಿಸ್ ಎಂಬವನಿಗೆ ನಾನು ಸಾಕ್ಷಿಯನ್ನು ಕೊಟ್ಟೆ. ಅವನೊಂದಿಗೆ ಒಂದು ಬೈಬಲ್ ಅಭ್ಯಾಸವನ್ನು ಪ್ರಾರಂಭಿಸಬೇಕೆಂಬ ನನ್ನ ಪಟ್ಟುಹಿಡಿದ ಪ್ರಯತ್ನಗಳ ಮಧ್ಯೆಯೂ, ಕಾರ್ಯಮಗ್ನ ಜೀವನಶೈಲಿಯ ಕಾರಣದಿಂದಾಗಿ ಅವನಲ್ಲಿ ಸ್ವಲ್ಪವೇ ಸಮಯವಿರುತ್ತಿತ್ತು. ಹೀಗಿದ್ದರೂ, ಅವನು ಕೊನೆಗೆ ತನ್ನ ಅಭ್ಯಾಸದಲ್ಲಿ ಉತ್ಸುಕತೆಯನ್ನು ತೋರಿಸಲು ನಿರ್ಧರಿಸಿದಾಗ, ತನ್ನ ಜೀವಿತದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿದನು. ಅವನು ಸುವಾರ್ತೆಯ ಅತಿ ಶ್ರದ್ಧೆಯ ಹಾಗೂ ಸಕ್ರಿಯ ಸೌವಾರ್ತಿಕನಾದನು. ಕೋಕಿನಾಕಿಸ್‌ನಲ್ಲಿದ್ದ 18ವರ್ಷ ವಯಸ್ಸಿನ ನೌಕರನಾಗಿರುವ ಎಮಾನ್ವೀಲ್ ಪಟೆರ್ಕೀಸ್‌ನು ಆ ಬದಲಾವಣೆಗಳಿಂದ ಪ್ರಭಾವಿತನಾದನು ಮತ್ತು ಅವನು ಬಲು ಬೇಗನೆ ಬೈಬಲ್ ಸಾಹಿತ್ಯವನ್ನು ಕೇಳಿದನು. ಎಮಾನ್ವೀಲ್ ಪಟೆರ್ಕೀಸನು ಏಕಪ್ರಕಾರದ ಪ್ರಗತಿಯನ್ನು ಮಾಡುವುದನ್ನು ಮತ್ತು ಕೊನೆಗೆ ಒಬ್ಬ ಮಿಷನೆರಿಯಾಗುವುದನ್ನು ನೋಡುವುದು ನನಗೆ ಎಷ್ಟು ಸಂತೋಷವನ್ನು ತಂದುಕೊಟ್ಟಿತು!a
ಈ ಮಧ್ಯೆ, ನನ್ನ ಹಳ್ಳಿಯಲ್ಲಿರುವ ಸಭೆಯು ಬೆಳೆಯುತ್ತಾ ಹೋಯಿತು ಮತ್ತು ಈಗ 14 ಪ್ರಚಾರಕರು ಅಲ್ಲಿದ್ದಾರೆ. ನನ್ನ ಸ್ವಂತ ಅಕ್ಕಳಾಗಿದ್ದ ಡೆಸ್ಪೀನಾಳು ಮತ್ತು ನನ್ನ ಹೆತ್ತವರು ಸತ್ಯವನ್ನು ಸ್ವೀಕರಿಸಿದ್ದಾರೆಂದು ಮತ್ತು ಈಗ ಯೆಹೋವನ ಸ್ನಾನಿತ ಆರಾಧಕರಲ್ಲೊಬ್ಬರಾಗಿದ್ದಾರೆಂದು ಅವಳ ಪತ್ರದ ಮೂಲಕ ತಿಳಿದುಬಂದ ಆ ದಿನವನ್ನು ನಾನು ಎಂದೂ ಮರೆಯಲಾರೆ!
ಹಿಂಸೆಯನ್ನು ಮತ್ತು ಗಡೀಪಾರನ್ನು ತಾಳಿಕೊಳ್ಳುವುದು
ಗ್ರೀಕ್ ಸಂಪ್ರದಾಯಬದ್ಧ ಚರ್ಚು ನಮ್ಮ ಸಾರುವ ಚಟುವಟಿಕೆಯನ್ನು ನಾಶಕಾರಿ ಮಿಡತೆಗಳ ವಿಪತ್ತಿನಂತೆ ವೀಕ್ಷಿಸಲು ಪ್ರಾರಂಭಿಸಿತು ಮತ್ತು ನಮ್ಮನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ದೃಢ ನಿಶ್ಚಯವನ್ನು ಮಾಡಿತು. ಮಾರ್ಚ್ 1938ರಲ್ಲಿ ನನ್ನನ್ನು ಸಾರ್ವಜನಿಕ ಫಿರ್ಯಾದಿಯ ಮುಂದೆ ತರಲಾಯಿತು ಮತ್ತು ತಕ್ಷಣ ಆ ಕ್ಷೇತ್ರವನ್ನು ಬಿಟ್ಟುಹೋಗುವಂತೆ ನನ್ನನ್ನು ಒತ್ತಾಯಪಡಿಸಿದರು. ನನ್ನ ಸಾರುವ ಚಟುವಟಿಕೆಯು ನಿಜವಾಗಿಯೂ ಪ್ರಯೋಜನದಾಯಕವಾಗಿದೆ ಎಂದು ಮತ್ತು ನಮ್ಮ ಕೆಲಸವು ಉಚ್ಚ ಅಧಿಕಾರಿಯಾಗಿರುವ ನಮ್ಮ ರಾಜನಾದ ಯೇಸುಕ್ರಿಸ್ತನಿಂದ ಆಜ್ಞಾಪಿಸಲ್ಪಟ್ಟಿರುವುದೆಂದು ನಾನು ಉತ್ತರಿಸಿದೆ.—ಮತ್ತಾಯ 28:19, 20; ಅ. ಕೃತ್ಯಗಳು 1:8.
ಮರುದಿನ, ನನ್ನನ್ನು ಸ್ಥಳೀಯ ಪೋಲಿಸ್ ಠಾಣೆಗೆ ಕರೆಯಲಾಯಿತು. ನಾನು ಸಮಾಜಕಂಟಕ ವ್ಯಕ್ತಿಯಾಗಿದ್ದೇನೆಂದು ತಿಳಿಸಲಾಯಿತು ಮತ್ತು ನನಗೆ ಅರ್ಮೊಗೊಸ್‌ನ ಈಜಿಯನ್ ದ್ವೀಪಕ್ಕೆ ಒಂದು ವರ್ಷದ ಗಡೀಪಾರು ಶಿಕ್ಷೆಯನ್ನು ವಿಧಿಸಲಾಯಿತು. ಕೆಲವು ದಿನಗಳ ನಂತರ, ಅವರು ನನಗೆ ಕೈಕೋಳಹಾಕಿ ಆ ದ್ವೀಪಕ್ಕೆ ದೋಣಿಯಲ್ಲಿ ಕರೆದೊಯ್ದರು. ಅರ್ಮೊಗೊಸಿನಲ್ಲಿ ಯೆಹೋವನ ಸಾಕ್ಷಿಗಳಾರೂ ಇರಲಿಲ್ಲ. ಆರು ತಿಂಗಳ ನಂತರ ಅದೇ ದ್ವೀಪಕ್ಕೆ ಇನ್ನೊಬ್ಬ ಸಾಕ್ಷಿಯು ಗಡೀಪಾರುಗೊಳಿಸಲ್ಪಟ್ಟಿದ್ದಾನೆಂಬ ವರ್ತಮಾನವನ್ನು ಕೇಳುವುದು ನನಗೆಷ್ಟು ಆಶ್ಚರ್ಯವನ್ನು ಉಂಟುಮಾಡಿದ್ದಿರಬೇಕು ಎಂಬುದನ್ನು ನೀವು ಊಹಿಸಿಕೊಳ್ಳಿರಿ! ಇವನು ಯಾರಾಗಿದ್ದಿರಬಹುದು? ಕ್ರೀಟಿನಲ್ಲಿದ್ದಾಗ ನನ್ನ ಬೈಬಲ್ ವಿದ್ಯಾರ್ಥಿಯಾಗಿರುವ ಮಿನೊಸ್ ಕೊಕಿನಾಕಿಸ್ ಎಂಬವನೇ. ಒಬ್ಬ ಆತ್ಮಿಕ ಒಡನಾಡಿಯನ್ನು ಹೊಂದುವುದಕ್ಕೆ ನಾನೆಷ್ಟು ಸಂತೋಷಿತನು! ಕೆಲವು ಸಮಯದ ನಂತರ, ಅವನಿಗೆ ಅರ್ಮೊಗೊಸ್‌ನ ನೀರಿನಲ್ಲಿ ದೀಕ್ಷಾಸ್ನಾನವನ್ನು ನೀಡುವ ಸುಯೋಗವು ನನ್ನದಾಯಿತು.b
ನಾನು ಕ್ರೀಟಿಗೆ ಹಿಂತಿರುಗಿದ ಸ್ವಲ್ಪ ಸಮಯದ ಬಳಿಕ, ನನ್ನನ್ನು ಬಂಧಿಸಲಾಯಿತು ಮತ್ತು ಆ ದ್ವೀಪದ ನಿಯಾಪಾಲಿಸ್ ಎಂಬ ಹೆಸರಿನ ಚಿಕ್ಕ ಪಟ್ಟಣಕ್ಕೆ ಆರು ತಿಂಗಳ ಮಟ್ಟಿಗೆ ನಾನು ಗಡೀಪಾರುಗೊಳಿಸಲ್ಪಟ್ಟೆ. ಆರು ತಿಂಗಳ ಗಡೀಪಾರಿನ ಶಿಕ್ಷೆಯು ಮುಗಿದ ನಂತರ, ನನ್ನನ್ನು ಬಂಧಿಸಲಾಯಿತು, ಹತ್ತು ದಿನಕ್ಕಾಗಿ ಸೆರೆಮನೆಯಲ್ಲಿ ಹಾಕಲಾಯಿತು ಮತ್ತು ನಂತರ ನಾಲ್ಕು ತಿಂಗಳುಗಳ ವರೆಗೆ, ಗಡೀಪಾರುಗೊಳಿಸಲ್ಪಟ್ಟ ಕಮ್ಯೂನಿಸ್ಟರಿಗಾಗಿ ಮೀಸಲಾಗಿರಿಸಿದ್ದ ದ್ವೀಪಕ್ಕೆ ನಾನು ಕಳುಹಿಸಲ್ಪಟ್ಟೆ. ಅಪೊಸ್ತಲ ಪೌಲನ ಮಾತುಗಳು ಅದೆಷ್ಟು ಸತ್ಯವೆಂಬುದನ್ನು ನಾನು ಮನಗಂಡೆ: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.”—2 ತಿಮೊಥೆಯ 3:12.
ವಿರೋಧದ ಮಧ್ಯೆಯೂ ಅಭಿವೃದ್ಧಿ
ಇಸವಿ 1940-44ರ ವರೆಗಿನ ವರ್ಷಗಳ ಅವಧಿಯಲ್ಲಿ ಜರ್ಮನರು ಗ್ರೀಸನ್ನು ಸ್ವಾಧೀನಪಡಿಸಿಕೊಂಡಾಗ, ನಮ್ಮ ಸಾರುವ ಚಟುವಟಿಕೆಯು ಬಹುತೇಕವಾಗಿ ನಿಲುಗಡೆಗೆ ಬಂತು. ಆದಾಗ್ಯೂ, ಗ್ರೀಸಿನಲ್ಲಿರುವ ಯೆಹೋವನ ಜನರು ತ್ವರಿತವಾಗಿ ತಮ್ಮನ್ನು ಸಂಘಟಿಸಿಕೊಂಡರು ಮತ್ತು ನಾವು ನಮ್ಮ ಸಾರುವ ಚಟುವಟಿಕೆಯನ್ನು ಹೊಸದಾಗಿ ಆರಂಭಿಸಿದೆವು. ಕಳೆದುಕೊಂಡ ಸಮಯವನ್ನು ಭರ್ತಿಮಾಡಲು ಪ್ರಯತ್ನಿಸುತ್ತಾ, ರಾಜ್ಯದ ಕೆಲಸದೊಂದಿಗೆ ಸಕ್ರಿಯವಾಗಿ ಮತ್ತು ಶ್ರದ್ಧೆಯಿಂದ ಮುಂದೊತ್ತಿದೆವು.
ನಿರೀಕ್ಷಿಸಿದಂತೆಯೇ, ಧಾರ್ಮಿಕ ವಿರೋಧವು ಪುನಃ ಒಮ್ಮೆ ಭುಗಿಲೆದ್ದಿತು. ಹೆಚ್ಚಾಗಿ, ಗ್ರೀಕ್ ಸಂಪ್ರದಾಯಬದ್ಧ ವೈದಿಕರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾ ತಮ್ಮ ಉದ್ದೇಶವನ್ನು ಸಾಧಿಸಿಕೊಳ್ಳುತ್ತಿದ್ದರು. ಒಂದು ಹಳ್ಳಿಯಲ್ಲಿ, ಪಾದ್ರಿಯು ನಮ್ಮ ವಿರುದ್ಧ ದೊಂಬಿಯೊಂದನ್ನು ಎಬ್ಬಿಸಿದನು. ಪಾದ್ರಿಯು ಸ್ವತಃ ನನ್ನನ್ನು ಹೊಡೆಯಲು ಆರಂಭಿಸಿದಂತೆ, ಅವನ ಮಗನು ಸಹ ಹಿಂದಿನಿಂದ ನನಗೆ ಹೊಡೆಯಲು ತೊಡಗಿದನು. ನಾನು ಸಂರಕ್ಷಣೆಗಾಗಿ ಹತ್ತಿರದ ಮನೆಗೆ ಧಾವಿಸಿದೆ. ಆದರೆ ನನ್ನ ಸಾರುವ ಒಡನಾಡಿಯನ್ನು ಹಳ್ಳಿಯ ಸಾರ್ವಜನಿಕ ಚೌಕಕ್ಕೆ ಎಳೆದುಕೊಂಡು ಹೋದರು. ಅಲ್ಲಿ, ದೊಂಬಿಗಾರರು ಅವನ ಸಾಹಿತ್ಯವನ್ನು ಹರಿದುಹಾಕಿದರು ಮತ್ತು ಒಬ್ಬ ಸ್ತ್ರೀಯು ಆಕೆಯ ಉಪ್ಪರಿಗೆಯಿಂದ ಹೀಗೆ ಕಿರುಚಿದಳು, “ಅವನನ್ನು ಕೊಲ್ಲಿರಿ!” ಕೊನೆಗೆ ಒಬ್ಬ ಡಾಕ್ಟರ್ ಮತ್ತು ಹಾದುಹೋಗುತ್ತಿದ್ದ ಪೊಲೀಸ್ ಸಿಪಾಯಿ ನಮ್ಮನ್ನು ಬಿಡಿಸಲು ಬಂದರು.
ಇದಾದ ನಂತರ, 1952ರಲ್ಲಿ ನಾನು ಪುನಃ ಒಮ್ಮೆ ಬಂಧಿಸಲ್ಪಟ್ಟೆ ಮತ್ತು ಕ್ರೀಟಿನ ಕ್ಯಾಸ್ಟಲೀ ಕೀಸೇಮೋಸ್ ಎಂಬಲ್ಲಿಗೆ ನಾಲ್ಕು ತಿಂಗಳ ಕಾಲ ದೇಶಭ್ರಷ್ಟನಾಗಿ ಕಳುಹಿಸಲ್ಪಟ್ಟೆ. ಇದಾದ ಕೂಡಲೆ, ಸಭೆಗಳನ್ನು ಭೇಟಿಯಾಗಿ ಅವರನ್ನು ಆತ್ಮಿಕವಾಗಿ ಬಲಪಡಿಸುವ ತರಬೇತಿಯನ್ನು ನಾನು ಪಡೆದೆ. ಈ ರೀತಿಯ ಸಂಚರಣ ಕೆಲಸದಲ್ಲಿ ಎರಡು ವರ್ಷಗಳನ್ನು ಕಳೆದಾದ ನಂತರ ನನ್ನ ಅಕ್ಕನ ಹೆಸರನ್ನೇ ಹೊಂದಿರುವ ಡೆಸ್ಪೀನಾ ಎಂಬ ಹೆಸರಿನ ನಂಬಿಗಸ್ತ ಕ್ರೈಸ್ತ ಸ್ತ್ರೀಯನ್ನು ನಾನು ಮದುವೆಯಾದೆ. ಅಂದಿನಿಂದ ಇಂದಿನ ವರೆಗೂ, ಅವಳು ಯೆಹೋವನ ನಿಷ್ಠಾವಂತ ಆರಾಧಕರಲ್ಲಿ ಒಬ್ಬಳಾಗಿದ್ದಾಳೆ. ನಮ್ಮ ಮದುವೆಯ ನಂತರ, ಕ್ರೀಟಿನ ಹನಿಯಾ ನಗರಕ್ಕೆ ವಿಶೇಷ ಪಯನೀಯರರಾಗಿ ಸೇವೆಸಲ್ಲಿಸುವ ನೇಮಕವು ನಮಗೆ ದೊರಕಿತು ಮತ್ತು ನಾನು ಈಗಲೂ ಅಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಬಹುಮಟ್ಟಿಗೆ 70 ವರ್ಷಗಳ ಪೂರ್ಣ ಸಮಯದ ಸೇವೆಯ ಅವಧಿಯಲ್ಲಿ, ನಾನು ಕ್ರೀಟನ್ನು—8,300 ಚದರ ಕಿಲೋಮೀಟರ್ ವ್ಯಾಪಿಸಿರುವ ಮತ್ತು ಸುಮಾರು 250 ಕಿಲೋಮೀಟರಿನಷ್ಟು ವಿಸ್ತಾರವಾಗಿರುವ ದ್ವೀಪವನ್ನು—ಬಹುತೇಕವಾಗಿ ಆವರಿಸಿದೆ. ಈ ದ್ವೀಪದಲ್ಲಿ 1930ಗಳಲ್ಲಿದ್ದ ಕೆಲವು ಸಾಕ್ಷಿಗಳು ಇಂದು 1,100ಕ್ಕಿಂತಲೂ ಹೆಚ್ಚಿನ ದೇವರ ರಾಜ್ಯದ ಸಕ್ರಿಯ ಪ್ರಚಾರಕರಾಗಿರುವುದನ್ನು ಕಾಣುವುದು ನನ್ನ ಮಹದಾನಂದಗಳಲ್ಲಿ ಒಂದಾಗಿದೆ. ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ ಮತ್ತು ಭವಿಷ್ಯತ್ತಿನ ಅದ್ಭುತಕರವಾದ ನಿರೀಕ್ಷೆಯನ್ನು ಇತರ ಅನೇಕರು ಪಡೆದುಕೊಳ್ಳುವಂತೆ ಸಹಾಯ ನೀಡುವುದರಲ್ಲಿ ಭಾಗಿಯಾಗುವ ಅವಕಾಶವನ್ನು ಕೊಟ್ಟದ್ದಕ್ಕಾಗಿ ಯೆಹೋವನಿಗೆ ನಾನು ಆಭಾರಿಯಾಗಿದ್ದೇನೆ.
“ನನ್ನ ವಿಮೋಚಕ”ನಾಗಿರುವ ಯೆಹೋವ
ಸತ್ಯ ದೇವರನ್ನು ತಿಳಿದುಕೊಳ್ಳಲು ಜನರಿಗೆ ಸಹಾಯಮಾಡುವುದಕ್ಕೆ ತಾಳ್ಮೆ ಮತ್ತು ಸಹನೆಯು ಬೇಕಾಗುತ್ತದೆಂದು ಅನುಭವವು ನನಗೆ ಕಲಿಸಿಕೊಟ್ಟಿದೆ. ತುಂಬ ಅಗತ್ಯವಿರುವ ಈ ಗುಣಗಳನ್ನು ಯೆಹೋವನು ಉದಾರವಾಗಿ ದಯಪಾಲಿಸುತ್ತಾನೆ. ನನ್ನ 67 ವರ್ಷಗಳ ಪೂರ್ಣಸಮಯದ ಸೇವೆಯಲ್ಲಿ, ನಾನು ಅಪೊಸ್ತಲ ಪೌಲನ ಮಾತುಗಳ ಮೇಲೆ ಪುನಃ ಪುನಃ ಚಿಂತನೆಯನ್ನು ಮಾಡುತ್ತೇನೆ: “ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗಮಾಡಿಕೊಳ್ಳುತ್ತೇವೆ. ನಾವು ಸಂಕಟಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳಲ್ಲಿಯೂ ಕಷ್ಟವಾದ ಕೆಲಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ಬಹು ತಾಳ್ಮೆಯನ್ನು ತೋರಿಸುತ್ತೇವೆ.” (2 ಕೊರಿಂಥ 6:4, 5) ವಿಶೇಷವಾಗಿ ನನ್ನ ಸೇವೆಯ ಆರಂಭದ ವರ್ಷಗಳಲ್ಲಿ, ನನ್ನ ಆರ್ಥಿಕ ಸ್ಥಿತಿಯು ಹೆಚ್ಚು ಕೆಟ್ಟದ್ದಾಗಿತ್ತು. ಹೀಗಿದ್ದರೂ, ಯೆಹೋವನು ನನ್ನನ್ನು ಮತ್ತು ನನ್ನ ಕುಟುಂಬವನ್ನು ಎಂದೂ ತೊರೆದುಬಿಡಲಿಲ್ಲ. ಆತನು ಕ್ರಮವಾದ ಹಾಗೂ ಶಕ್ತಿಭರಿತ ಸಹಾಯಕನಾಗಿ ಕಂಡುಬಂದಿದ್ದಾನೆ. (ಇಬ್ರಿಯ 13:5, 6) ತನ್ನ ಕುರಿಯನ್ನು ಹುಡುಕುವುದರಲ್ಲಿ ಮತ್ತು ನಮ್ಮ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ಆತನ ಪ್ರೀತಿಯುಳ್ಳ ಹಸ್ತವನ್ನು ಯಾವಾಗಲೂ ನಾವು ಕಂಡಿದ್ದೇವೆ.
ನಾನು ಹಿಂತಿರುಗಿ ನೋಡುವಾಗ, ಆತ್ಮಿಕ ಅರ್ಥದಲ್ಲಿ, ಅರಣ್ಯವು ಕಂಗೊಳಿಸುತ್ತಿದೆ ಮತ್ತು ನನ್ನ ಕೆಲಸವು ವ್ಯರ್ಥವಾಗಿ ಹೋಗಲಿಲ್ಲವೆಂಬ ದೃಢವಿಶ್ವಾಸವು ನನಗಿದೆ. ನಾನು ನನ್ನ ಯೌವನದ ಬಲವನ್ನು ಹೆಚ್ಚು ಉಪಯುಕ್ತವಾದ ವಿಧದಲ್ಲಿ ವ್ಯಯಿಸಿದ್ದೇನೆ. ಪೂರ್ಣಸಮಯದ ಶುಶ್ರೂಷೆಯ ನನ್ನ ವೃತ್ತಿಯು ಬೇರೆ ಯಾವುದೇ ಬೆನ್ನಟ್ಟುವಿಕೆಗಿಂತಲೂ ಹೆಚ್ಚು ಅರ್ಥಭರಿತವಾದದ್ದಾಗಿದೆ. ಈಗ ವೃದ್ಧನಾಗಿದ್ದರೂ, ‘ಯೌವನದಲ್ಲಿಯೇ ತಮ್ಮ ಸೃಷ್ಟಿಕರ್ತನನ್ನು ಸ್ಮರಿಸ’ಬೇಕೆನ್ನುವ ಉತ್ತೇಜನವನ್ನು ಯುವ ಜನರಿಗೆ ನಾನು ಸಂಪೂರ್ಣ ಹೃದಯದಿಂದ ಕೊಡಬಲ್ಲೆ.—ಪ್ರಸಂಗಿ 12:1.
ನನಗೆ 91 ವರ್ಷ ವಯಸ್ಸಾಗಿರುವುದಾದರೂ, ನಾನು ಈಗಲೂ ಪ್ರತಿ ತಿಂಗಳು ಸಾರುವ ಕೆಲಸದಲ್ಲಿ 120 ತಾಸಿಗಿಂತಲೂ ಹೆಚ್ಚು ಸಮಯವನ್ನು ವ್ಯಯಿಸಲು ಶಕ್ತನಿದ್ದೇನೆ. ಪ್ರತಿ ದಿನ, ನಾನು ಬೆಳಗ್ಗೆ 7:30ಕ್ಕೆ ಏಳುತ್ತೇನೆ ಮತ್ತು ಬೀದಿಗಳಲ್ಲಿ, ಅಂಗಡಿಗಳಲ್ಲಿ ಅಥವಾ ಪಾರ್ಕುಗಳಲ್ಲಿ ಜನರಿಗೆ ಸಾಕ್ಷಿಯನ್ನು ನೀಡುತ್ತೇನೆ. ಪ್ರತಿ ತಿಂಗಳು ನಾನು ಸರಾಸರಿ, 150 ಪತ್ರಿಕೆಗಳನ್ನು ನೀಡುತ್ತೇನೆ. ಕಿವಿಕೇಳುವ ಮತ್ತು ಜ್ಞಾಪಕಶಕ್ತಿಯ ಸಮಸ್ಯೆಗಳು ಜೀವಿತವನ್ನು ನನಗೆ ಹೆಚ್ಚು ಕಷ್ಟಕರವನ್ನಾಗಿ ಮಾಡುತ್ತವೆ. ಆದರೂ ನನ್ನ ಪ್ರೀತಿಯ ಆತ್ಮಿಕ ಸಹೋದರ ಮತ್ತು ಸಹೋದರಿಯರ, ಹೌದು, ನನ್ನ ವಿಶಾಲವಾದ ಆತ್ಮಿಕ ಕುಟುಂಬವು, ಮಾತ್ರವಲ್ಲದೆ ನನ್ನ ಇಬ್ಬರು ಹೆಣ್ಣುಮಕ್ಕಳ ಕುಟುಂಬದವರು ನನಗೆ ನಿಜವಾದ ಬೆಂಬಲವಾಗಿ ರುಜುವಾಗಿದ್ದಾರೆ.
ಎಲ್ಲಕ್ಕಿಂತಲೂ ಮಿಗಿಲಾಗಿ, ನಾನು ಯೆಹೋವನಲ್ಲಿ ನನ್ನ ಭರವಸೆಯನ್ನು ಇಡಲು ಕಲಿತಿದ್ದೇನೆ. ಎಲ್ಲ ಸಮಯಗಳಲ್ಲೂ, ಆತನು “ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕನೂ” ಆಗಿ ರುಜುವಾಗಿದ್ದಾನೆ.—ಕೀರ್ತನೆ 18:2.
[ಅಧ್ಯಯನ ಪ್ರಶ್ನೆಗಳು]
a ಎಮಾನ್ವೀಲ್ ಪಟೆರ್ಕೀಸನ ಜೀವನ ಕಥೆಗಾಗಿ ಕಾವಲಿನಬುರುಜು ನವೆಂಬರ್ 1, 1996ರ ಪುಟ 22-7ನ್ನು ನೋಡಿರಿ.
b ಮಿನೊಸ್ ಕೊಕಿನಾಕಿಸ್‌ನ್ನು ಒಳಗೊಂಡಿರುವ ಕಾನೂನುಬದ್ಧ ವಿಜಯಕ್ಕಾಗಿ ಕಾವಲಿನಬುರುಜು ಸೆಪ್ಟೆಂಬರ್ 1, 1993ರ ಪುಟಗಳು 27-31ನ್ನು ನೋಡಿರಿ. ಮಿನೊಸ್ ಕೊಕಿನಾಕಿಸ್ ಜನವರಿ 1999ರಲ್ಲಿ ಮೃತಪಟ್ಟರು.
[ಪುಟ 26,27 ರಲ್ಲಿರುವಚಿತ್ರಗಳು]
ಕೆಳಗೆ: ನನ್ನ ಹೆಂಡತಿಯೊಂದಿಗೆ; ಎಡಕ್ಕೆ: 1927ರಲ್ಲಿ; ಎದುರು ಪುಟ: ಗಡೀಪಾರು ಶಿಕ್ಷೆಯನ್ನು ಅನುಭವಿಸಿ ಹಿಂದಿರುಗಿದ ಸ್ವಲ್ಪ ಸಮಯದ ನಂತರ, ಅಕ್ರಪೊಲಿಸ್‌ನಲ್ಲಿ 1939ರಲ್ಲಿ ಮೀನೊಸ್ ಕೋಕಿನಾಕಿಸ್ (ಎಡಭಾಗದಲ್ಲಿ) ಮತ್ತು ಇನ್ನೊಬ್ಬ ಸಾಕ್ಷಿಯೊಂದಿಗೆ