‘ಮುನ್ನಡಿಯಿಟ್ಟ’ 50ಕ್ಕೂ ಹೆಚ್ಚಿನ ವರುಷಗಳು
ಎಮಾನ್ವೀಲ್ ಪಟೆರ್ಕೀಸ್ ಅವರಿಂದ ಹೇಳಲ್ಪಟ್ಟಂತೆ
ಹತ್ತೊಂಬತ್ತು ಶತಮಾನಗಳ ಹಿಂದೆ ಅಪೊಸ್ತಲ ಪೌಲನು ಅಸಾಮಾನ್ಯವಾದ ಒಂದು ಆಮಂತ್ರಣವನ್ನು ಪಡೆದುಕೊಂಡನು: “ಮಕೆದೋನ್ಯಕ್ಕೆ ಮುನ್ನಡಿಯಿಟ್ಟು, ನಮಗೆ ಸಹಾಯಮಾಡು.” ಪೌಲನು “ಸುವಾರ್ತೆಯನ್ನು ಪ್ರಕಟಿಸಲಿ”ಕ್ಕಿರುವ ಈ ಹೊಸ ಅವಕಾಶವನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸಿದನು. (ಅ. ಕೃತ್ಯಗಳು 16:9, 10, NW) ನಾನು ಪಡೆದ ಆಮಂತ್ರಣವು ಅಷ್ಟೊಂದು ಹಿಂದಿನ ವರುಷಗಳಿಗೆ ಹೋಗದಿದ್ದರೂ, 50ಕ್ಕಿಂತಲೂ ಹೆಚ್ಚು ವರುಷಗಳ ಹಿಂದೆ ಯೆಶಾಯ 6:8ರ, “ಇಗೋ ನಾನಿದ್ದೇನೆ, ನನ್ನನ್ನು ಕಳುಹಿಸು” ಎಂಬ ಹುಮ್ಮಸ್ಸಿನಲ್ಲಿ ಹೊಸ ಟೆರಿಟೊರಿಗಳೊಳಗೆ ‘ಮುನ್ನಡಿಯಿಡಲು’ ನಾನು ಸಮ್ಮತಿಸಿದೆ. ನನ್ನ ಹಲವಾರು ಪ್ರಯಾಣಗಳು ನನಗೆ ಸಾರ್ವಕಾಲಿಕ ಪ್ರವಾಸಿಗ ಎಂಬ ಅಡ್ಡಹೆಸರನ್ನು ಸಂಪಾದಿಸಿಕೊಟ್ಟವು, ಆದರೆ ನನ್ನ ಚಟುವಟಿಕೆಗಳು ಪ್ರವಾಸೋದ್ಯಮಕ್ಕೆ ಹೋಲಿಕೆಯನ್ನು ಪಡೆದಿರಲಿಲ್ಲ. ಒಂದಕ್ಕಿಂತ ಹೆಚ್ಚು ಬಾರಿ, ನಾನು ನನ್ನ ಹೋಟೆಲ್ ರೂಮನ್ನು ತಲಪಿದಾಗ, ಯೆಹೋವನ ಸಂರಕ್ಷಣೆಗಾಗಿ ನಾನು ಮೊಣಕಾಲೂರಿ ಆತನಿಗೆ ಉಪಕಾರವನ್ನು ಹೇಳಿದೆ.
ನಾನು 1916, ಜನವರಿ 16ರಂದು, ಕ್ರೀಟ್ನ ಯೆರಾಪೆಟ್ರದಲ್ಲಿ ತುಂಬ ಧಾರ್ಮಿಕ ಸಂಪ್ರದಾಯಬದ್ಧವಾಗಿದ್ದ ಒಂದು ಕುಟುಂಬದಲ್ಲಿ ಜನಿಸಿದೆ. ನಾನು ಹಸುಳೆಯಾಗಿದ್ದ ಸಮಯದಂದಿನಿಂದ ಅಮ್ಮ, ನನ್ನನ್ನು ಮತ್ತು ನನ್ನ ಮೂವರು ಸಹೋದರಿಯರನ್ನು ಆದಿತ್ಯವಾರದಂದು ಚರ್ಚಿಗೆ ಕರೆದುಕೊಂಡುಹೋಗುತ್ತಿದ್ದರು. ನನ್ನ ತಂದೆಯಾದರೋ, ಮನೆಯಲ್ಲಿ ಉಳಿದುಕೊಂಡು, ಬೈಬಲನ್ನು ಓದಲು ಇಷ್ಟಪಟ್ಟರು. ಒಬ್ಬ ಪ್ರಾಮಾಣಿಕ, ಸದ್ಗುಣಿ, ಮತ್ತು ಕರುಣಾಮಯಿ ಮನುಷ್ಯರಾದ ನನ್ನ ತಂದೆಯನ್ನು ನಾನು ಪ್ರೀತ್ಯಾದರಗಳಿಂದ ನೋಡಿದೆ—ಮತ್ತು ನಾನು ಒಂಬತ್ತು ವರ್ಷ ಪ್ರಾಯದವನಾಗಿದ್ದಾಗ ಆದ ಅವರ ಮರಣವು, ನನ್ನನ್ನು ಆಳವಾಗಿ ಬಾಧಿಸಿತು.
ನಾನು ಐದು ವರ್ಷ ಪ್ರಾಯದವನಾಗಿದ್ದಾಗ, ಶಾಲೆಯಲ್ಲಿ ಹೀಗೆ ಹೇಳಿದ ಒಂದು ಪಾಠವನ್ನು ಓದಿದ ಜ್ಞಾಪಕ ನನಗಿದೆ: “ನಮ್ಮ ಸುತ್ತಮುತ್ತಲಿರುವ ಪ್ರತಿಯೊಂದು ವಿಷಯವು ದೇವರ ಅಸ್ತಿತ್ವವನ್ನು ಘೋಷಿಸುತ್ತದೆ.” ನಾನು ಬೆಳೆದಂತೆ, ಇದರ ಕುರಿತಾಗಿ ನಾನು ಸಂಪೂರ್ಣವಾಗಿ ಮನಗಾಣಿಸಲ್ಪಟ್ಟೆ. ಹೀಗೆ, 11 ವರ್ಷ ಪ್ರಾಯದಲ್ಲಿ, ನಾನು ಕೀರ್ತನೆ 104:24ನ್ನು ಮುಖ್ಯವಿಷಯವಾಗಿಟ್ಟು, ಒಂದು ಪ್ರಬಂಧವನ್ನು ಬರೆಯಲು ಆರಿಸಿಕೊಂಡೆ: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.” ನಿಸರ್ಗದ ಅದ್ಭುತಗಳಿಂದ, ತಾಯಿಮರದ ನೆರಳಿನಿಂದ ದೂರಕ್ಕೆ ಗಾಳಿಯ ಮೂಲಕ ಅವು ಒಯ್ಯಲ್ಪಡುವಂತೆ, ಚಿಕ್ಕ ರೆಕ್ಕೆಗಳಿಂದ ಸಜ್ಜುಗೊಳಿಸಲ್ಪಟ್ಟಿರುವ ಬೀಜಗಳಂಥ ಅತಿ ಸರಳವಾದ ವಿಷಯಗಳಿಂದಲೂ ನಾನು ಮೋಹಗೊಳಿಸಲ್ಪಟ್ಟೆ. ನಾನು ನನ್ನ ಪ್ರಬಂಧವನ್ನು ಕೊಟ್ಟ ಒಂದು ವಾರದ ಬಳಿಕ, ನನ್ನ ಶಿಕ್ಷಕನು ಅದನ್ನು ಇಡೀ ತರಗತಿಗೆ ಮತ್ತು ನಂತರ ಇಡೀ ಶಾಲೆಗೆ ಓದಿಹೇಳಿದನು. ಆ ಸಮಯದಲ್ಲಿ, ಶಿಕ್ಷಕರು ಕಮ್ಯೂನಿಸ್ಟ್ ವಿಚಾರಗಳ ವಿರುದ್ಧ ಹೋರಾಡುತ್ತಿದ್ದರು ಮತ್ತು ದೇವರ ಅಸ್ತಿತ್ವದ ಕುರಿತಾದ ನನ್ನ ಸಮರ್ಥನೆಯನ್ನು ಕೇಳಿಸಿಕೊಳ್ಳಲು ಹರ್ಷಗೊಂಡಿದ್ದರು. ನಾನಾದರೋ, ಕೇವಲ ಸೃಷ್ಟಿಕರ್ತನಲ್ಲಿನ ನನ್ನ ನಂಬಿಕೆಯನ್ನು ವ್ಯಕ್ತಪಡಿಸಲು ಹರ್ಷಗೊಂಡಿದ್ದೆ.
ನನ್ನ ಪ್ರಶ್ನೆಗಳಿಗೆ ಉತ್ತರಗಳು
1930ಗಳ ಆರಂಭದಲ್ಲಿ ಯೆಹೋವನ ಸಾಕ್ಷಿಗಳೊಂದಿಗಿನ ನನ್ನ ಪ್ರಥಮ ಸಂಧಿಸುವಿಕೆಯು, ನನ್ನ ಸ್ಮರಣೆಯಲ್ಲಿ ಇನ್ನೂ ಕಣ್ಣಿಗೆ ಕಟ್ಟುವಂತಿದೆ. ಎಮಾನ್ವೀಲ್ ಲೀಆ್ಯನೂಡಾಕೇಸ್ ಕ್ರೀಟ್ನ ಎಲ್ಲ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಸಾರುತ್ತಿದ್ದನು. ನಾನು ಅವನಿಂದ ಹಲವಾರು ಪುಸ್ತಿಕೆಗಳನ್ನು ಸ್ವೀಕರಿಸಿದೆನಾದರೂ, ಮೃತರು ಎಲ್ಲಿದ್ದಾರೆ? (ಇಂಗ್ಲಿಷ್) ಎಂಬ ಶೀರ್ಷಿಕೆಯುಳ್ಳ ಒಂದು ಪುಸ್ತಿಕೆಯು ನಿಜವಾಗಿಯೂ ನನ್ನ ಕಣ್ಸೆಳೆಯಿತು. ನನಗೆ ಮರಣದ ಕುರಿತು ಎಷ್ಟು ಬೀಭತ್ಸ ಹೆದರಿಕೆಯಿತ್ತೆಂದರೆ, ನಾನು ನನ್ನ ತಂದೆಯವರು ಸತ್ತಿದ್ದ ಕೋಣೆಯೊಳಗೂ ಪ್ರವೇಶಿಸುತ್ತಿರಲಿಲ್ಲ. ನಾನು ಈ ಪುಸ್ತಿಕೆಯನ್ನು ಮತ್ತೆ ಮತ್ತೆ ಓದಿದ ಹಾಗೆ ಮತ್ತು ಮೃತರ ಸ್ಥಿತಿಯ ಕುರಿತು ಬೈಬಲ್ ಏನನ್ನು ಕಲಿಸುತ್ತದೋ ಅದನ್ನು ಕಲಿತ ಹಾಗೆ, ನನ್ನ ಮೂಢನಂಬಿಕೆಯ ಭಯವು ಕಣ್ಮರೆಯಾದ ಅನಿಸಿಕೆ ನನಗಾಯಿತು.
ವರ್ಷಕ್ಕೊಮ್ಮೆ, ಬೇಸಗೆ ಕಾಲದಲ್ಲಿ, ಸಾಕ್ಷಿಗಳು ನಮ್ಮ ಪಟ್ಟಣಕ್ಕೆ ಭೇಟಿಕೊಟ್ಟು, ಓದಲಿಕ್ಕಾಗಿ ನನಗೆ ಹೆಚ್ಚು ಸಾಹಿತ್ಯವನ್ನು ತಂದುಕೊಟ್ಟರು. ಕ್ರಮೇಣವಾಗಿ ಶಾಸ್ತ್ರಗಳ ಕುರಿತಾದ ನನ್ನ ತಿಳಿವಳಿಕೆಯು ವರ್ಧಿಸಿತಾದರೂ, ನಾನು ಆರ್ತೊಡಾಕ್ಸ್ ಚರ್ಚಿಗೆ ಹಾಜರಾಗುವುದನ್ನು ಮುಂದುವರಿಸಿದೆ. ಹಾಗಿದ್ದರೂ, ಬಿಡುಗಡೆ (ಇಂಗ್ಲಿಷ್) ಎಂಬ ಪುಸ್ತಕವು ಉತ್ಕಟ ಸಮಯವನ್ನು ಗುರುತಿಸಿತು. ಅದು ಸ್ಫುಟವಾಗಿ ಯೆಹೋವನ ಮತ್ತು ಸೈತಾನನ ಸಂಸ್ಥೆಯ ನಡುವಿನ ಭಿನ್ನತೆಯನ್ನು ತೋರಿಸಿತು. ಆ ಸಮಯದಿಂದ, ಬೈಬಲ್ ಮತ್ತು ನಾನು ಪಡೆದುಕೊಳ್ಳಸಾಧ್ಯವಿದ್ದಂಥ ವಾಚ್ ಟವರ್ ಸೊಸೈಟಿಯ ಯಾವುದೇ ಸಾಹಿತ್ಯವನ್ನು ನಾನು ಹೆಚ್ಚು ಕ್ರಮವಾಗಿ ಓದಲು ಪ್ರಾರಂಭಿಸಿದೆ. ಗ್ರೀಸ್ನಲ್ಲಿ ಯೆಹೋವನ ಸಾಕ್ಷಿಗಳು ನಿಷೇಧದ ಕೆಳಗಿದ್ದುದರಿಂದ, ನಾನು ರಾತ್ರಿಯ ಸಮಯದಲ್ಲಿ ಗೋಪ್ಯವಾಗಿ ಅಭ್ಯಾಸಮಾಡಿದೆ. ಆದರೂ, ನಾನು ಏನನ್ನು ಕಲಿಯುತ್ತಿದ್ದೆನೋ ಅದರ ವಿಷಯವಾಗಿ ನಾನು ಎಷ್ಟೊಂದು ಉತ್ಸಾಹಿಯಾಗಿದ್ದೆನೆಂದರೆ, ಅದರ ಕುರಿತಾಗಿ ಪ್ರತಿಯೊಬ್ಬರೊಂದಿಗೆ ಮಾತಾಡುವುದರಿಂದ ನನ್ನನ್ನೇ ಪ್ರತಿಬಂಧಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಬೇಗನೆ ಪೊಲೀಸರು ಸಾಹಿತ್ಯಕ್ಕಾದ ಅನ್ವೇಷಣೆಯಲ್ಲಿ ಹಗಲೂರಾತ್ರಿ ಯಾವುದೇ ಸಮಯದಲ್ಲಿ ಕ್ರಮವಾಗಿ ನನ್ನನ್ನು ಭೇಟಿಮಾಡುತ್ತಾ, ನನ್ನ ಮೇಲೆ ಕಣ್ಣಿಡಲು ಪ್ರಾರಂಭಿಸಿದರು.
1936ರಲ್ಲಿ, ಇರಾಕ್ಲಿಯಾನ್ನಲ್ಲಿನ 120 ಕಿಲೊಮೀಟರ್ಗಳಷ್ಟು ದೂರದಲ್ಲಿ, ಪ್ರಥಮ ಬಾರಿಗೆ ನಾನು ಕೂಟವೊಂದಕ್ಕೆ ಹಾಜರಾದೆ. ಸಾಕ್ಷಿಗಳನ್ನು ಸಂಧಿಸಲು ನಾನು ಬಹಳ ಸಂತೋಷಿತನಾಗಿದ್ದೆ. ಅವರಲ್ಲಿ ಹೆಚ್ಚಿನವರು ಸಭ್ಯ ಪುರುಷರು, ಅಧಿಕಾಂಶ ಜನರು ಬೇಸಾಯಗಾರರಾದರೂ, ಇದೇ ಸತ್ಯವಾಗಿದೆಯೆಂಬುದನ್ನು ಅವರು ನನಗೆ ಮನಗಾಣಿಸಿದರು. ಆ ಸ್ಥಳದಲ್ಲಿಯೇ ಯೆಹೋವನಿಗೆ ನನ್ನ ಸಮರ್ಪಣೆಯು ಮಾಡಲ್ಪಟ್ಟಿತು.
ನನ್ನ ದೀಕ್ಷಾಸ್ನಾನವು ನಾನು ಎಂದೂ ಮರೆಯಲಾರದಂಥ ಒಂದು ಘಟನೆಯಾಗಿದೆ. 1938ರ ಒಂದು ರಾತ್ರಿ, ನನ್ನ ಬೈಬಲ್ ವಿದ್ಯಾರ್ಥಿಗಳಲ್ಲಿ ಇಬ್ಬರು ಮತ್ತು ನಾನು, ಸಹೋದರ ಲೀಆ್ಯನೂಡಾಕೇಸ್ನಿಂದ, ಸಂಪೂರ್ಣ ಅಂಧಕಾರದಲ್ಲಿ ಕಡಲದಂಡೆಗೆ ಕರೆದೊಯ್ಯಲ್ಪಟ್ಟೆವು. ಪ್ರಾರ್ಥನೆಯೊಂದನ್ನು ಮಾಡಿದ ಅನಂತರ, ಅವನು ನಮ್ಮನ್ನು ನೀರಿನೊಳಗೆ ಮುಳುಗಿಸಿದನು.
ಬಂಧನದ ಕೆಳಗೆ
ಅತಿಮಿತವಾಗಿ ಹೇಳುವುದಾದರೆ, ನಾನು ಸಾರಲಿಕ್ಕಾಗಿ ಹೊರಹೋದ ಪ್ರಥಮ ಬಾರಿಯೇ ವಿಶೇಷ ಘಟನೆಗಳುಳ್ಳ ಒಂದು ಸಂಗತಿಯಾಗಿತ್ತು. ಒಬ್ಬ ಪಾದ್ರಿಯಾಗಿದ್ದ ನನ್ನ ಶಾಲೆಯ ಹಳೇ ಮಿತ್ರನೊಬ್ಬನನ್ನು ನಾನು ಸಂಧಿಸಿದೆ, ಮತ್ತು ನಾವು ಒಟ್ಟಿಗೆ ಒಂದು ಅತ್ಯುತ್ಕೃಷ್ಟವಾದ ಚರ್ಚೆಯನ್ನು ಮಾಡಿದೆವು. ಆದರೆ ಅನಂತರ ಅವನು, ಬಿಷಪ್ನ ಆಜ್ಞೆಗೆ ಹೊಂದಿಕೆಯಲ್ಲಿ ನನ್ನನ್ನು ಬಂಧಿಸಲೇಬೇಕಾಗಿತ್ತೆಂಬುದನ್ನು ವಿವರಿಸಿದನು. ಪಕ್ಕದ ಹಳ್ಳಿಯಿಂದ ಪೊಲೀಸರ ಆಗಮನಕ್ಕಾಗಿ ನಾವು ಮೇಯರ್ನ ಕಚೇರಿಯಲ್ಲಿ ಕಾದಂತೆ ಹೊರಗಡೆ ಗುಂಪೊಂದು ಒಟ್ಟುಗೂಡಿತು. ಆದುದರಿಂದ ನಾನು ಕಚೇರಿಯಲ್ಲಿದ್ದ ಗ್ರೀಕ್ ಭಾಷೆಯ ಒಂದು ಹೊಸ ಒಡಂಬಡಿಕೆಯನ್ನು ತೆಗೆದುಕೊಂಡು, ಮತ್ತಾಯ 24ನೇ ಅಧ್ಯಾಯದ ಮೇಲಾಧಾರಿತವಾದ ಒಂದು ಭಾಷಣವನ್ನು ಅವರಿಗೆ ಕೊಡಲು ಆರಂಭಿಸಿದೆ. ಮೊದಲಿಗೆ, ಜನರಿಗೆ ಕೇಳಿಸಿಕೊಳ್ಳಲು ಇಷ್ಟವಿಲ್ಲದಿದ್ದರೂ, ಪಾದ್ರಿಯು ಮಧ್ಯೆ ಪ್ರವೇಶಿಸಿದನು. “ಅವನನ್ನು ಮಾತಾಡಲು ಅನುಮತಿಸಿರಿ” ಎಂದು ಅವನು ಹೇಳಿದನು. “ಅದು ನಮ್ಮ ಬೈಬಲ್ ಆಗಿದೆ.” ನಾನು ಒಂದೂವರೆ ತಾಸಿನ ವರೆಗೆ ಮಾತಾಡಲು ಶಕ್ತನಾದೆ. ಹೀಗೆ, ನನ್ನ ಶುಶ್ರೂಷೆಯಲ್ಲಿನ ಪ್ರಥಮ ದಿನವು, ನನ್ನ ಪ್ರಥಮ ಬಹಿರಂಗ ಭಾಷಣಕ್ಕಾಗಿದ್ದ ಒಂದು ಸಂದರ್ಭವೂ ಆಗಿತ್ತು. ನಾನು ಮುಗಿಸಿದಾಗ ಪೊಲೀಸರು ಇನ್ನೂ ಆಗಮಿಸಿರದಿದ್ದ ಕಾರಣ, ಮೇಯರ್ ಮತ್ತು ಆ ಪಾದ್ರಿಯು, ನಾನು ಪಟ್ಟಣವನ್ನು ಬಿಟ್ಟುಹೋಗುವಂತೆ ಒತ್ತಾಯಮಾಡಲು ಪುರುಷರ ಒಂದು ಗುಂಪನ್ನು ಚಿತಾಯಿಸಲು ನಿರ್ಧರಿಸಿದರು. ರಸ್ತೆಯ ಪ್ರಥಮ ತಿರುವಿನಲ್ಲಿ, ಅವರು ಎಸೆದಂತಹ ಕಲ್ಲುಗಳಿಂದ ತಪ್ಪಿಸಿಕೊಳ್ಳಸಾಧ್ಯವಾಗುವಂತೆ ನಾನು ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಓಡಲು ಪ್ರಾರಂಭಿಸಿದೆ.
ಮರುದಿನ, ಬಿಷಪ್ನೊಂದಿಗೆ ಜತೆಗೂಡಿದ ಇಬ್ಬರು ಪೊಲೀಸರು, ನನ್ನನ್ನು ಕೆಲಸದ ಸ್ಥಳದಲ್ಲಿ ಬಂಧಿಸಿದರು. ಪೊಲೀಸ್ ಠಾಣೆಯಲ್ಲಿ ನಾನು ಅವರಿಗೆ ಬೈಬಲಿನಿಂದ ಸಾಕ್ಷಿನೀಡಲು ಶಕ್ತನಾದೆನಾದರೂ, ನನ್ನ ಬೈಬಲ್ ಸಾಹಿತ್ಯಕ್ಕೆ ಕಾನೂನಿಂದ ಕೇಳಿಕೊಳ್ಳಲ್ಪಟ್ಟ ಬಿಷಪ್ನ ಮುದ್ರೆಯು ಇರಲಿಲ್ಲವಾದುದರಿಂದ, ಮತಾಂತರಿಸುವುದಕ್ಕಾಗಿ ಮತ್ತು ಅನಧಿಕೃತ ಸಾಹಿತ್ಯವನ್ನು ವಿತರಿಸುವುದಕ್ಕಾಗಿ ನಾನು ಆಪಾದಿಸಲ್ಪಟ್ಟೆ. ಇತ್ಯರ್ಥವಾಗದ ವಿಚಾರಣೆಯ ಮೇಲೆ ನಾನು ಬಿಡುಗಡೆಗೊಳಿಸಲ್ಪಟ್ಟೆ.
ನನ್ನ ವಿಚಾರಣೆಯು ಒಂದು ತಿಂಗಳಿನ ಅನಂತರ ನಡೆಯಿತು. ನನ್ನ ರಕ್ಷಣಾರ್ಥವಾಗಿ, ನಾನು ಸಾರಲಿಕ್ಕಿರುವ ಕ್ರಿಸ್ತನ ಆಜ್ಞೆಗೆ ಬರಿಯ ವಿಧೇಯತೆ ತೋರಿಸುತ್ತಿದ್ದೆ ಎಂದು ಸೂಚಿಸಿದೆ. (ಮತ್ತಾಯ 28:19, 20) ಆ ನ್ಯಾಯಾಧೀಶನು ವ್ಯಂಗ್ಯಾತ್ಮಕವಾಗಿ ಉತ್ತರಿಸಿದ್ದು: “ನನ್ನ ಮಗನೇ, ಆ ಆಜ್ಞೆಯನ್ನು ಕೊಟ್ಟವನು ಶಿಲುಬೆಗೇರಿಸಲ್ಪಟ್ಟನು. ಅಸಂತೋಷಕರವಾಗಿ, ತದ್ರೀತಿಯ ಶಿಕ್ಷೆಯನ್ನು ನಿನ್ನ ಮೇಲೆ ವಿಧಿಸಲು ನನಗೆ ಅಧಿಕಾರವಿಲ್ಲ.” ಹಾಗಿದ್ದರೂ, ನನ್ನ ಸಮರ್ಥನೆಗೆ, ನನಗೆ ಗೊತ್ತಿರದ ಒಬ್ಬ ಯುವ ನ್ಯಾಯವಾದಿಯು ಎದ್ದುನಿಂತು, ಸುತ್ತಮುತ್ತ ಇಷ್ಟೊಂದು ಸಮತಾವಾದ ಮತ್ತು ನಾಸ್ತಿಕತೆಯಿರುವಾಗ, ದೇವರ ವಾಕ್ಯವನ್ನು ಸಮರ್ಥಿಸುವುದಕ್ಕೆ ಸಿದ್ಧರಿರುವ ಯುವ ಪುರುಷರಿದ್ದಾರೆಂಬುದಕ್ಕಾಗಿ ನ್ಯಾಯಾಲಯವು ಹೆಮ್ಮೆಪಡಬೇಕೆಂದು ಹೇಳಿದನು. ಅನಂತರ ಅವನು ಮೇಲೆ ಬಂದು, ನನ್ನ ಫೈಲ್ನಲ್ಲಿದ್ದ ನನ್ನ ಲಿಖಿತ ಸಮರ್ಥನೆಯ ಸಂಬಂಧದಲ್ಲಿ ನನ್ನನ್ನು ಪ್ರಾಮಾಣಿಕವಾಗಿ ಅಭಿನಂದಿಸಿದನು. ನಾನು ತುಂಬ ಚಿಕ್ಕವನಾಗಿದ್ದ ವಿಷಯದಿಂದ ಪ್ರಭಾವಿಸಲ್ಪಟ್ಟು, ಅವನು ನನ್ನನ್ನು ಉಚಿತವಾಗಿ ಸಮರ್ಥಿಸಲು ಸಿದ್ಧನಾದನು. ಕನಿಷ್ಠ ಮಟ್ಟಿಗೆ ಮೂರು ತಿಂಗಳುಗಳ ಸಜೆಗೆ ಬದಲಾಗಿ, ನನಗೆ ಸೆರೆಮನೆಯಲ್ಲಿ ಕೇವಲ ಹತ್ತು ದಿವಸಗಳಿಗೆ ಮತ್ತು 300 ಡ್ರ್ಯಾಕ್ಮ (ಗ್ರೀಕ್ ನಾಣ್ಯ) ಜುಲ್ಮಾನೆ ಹಾಕಲಾಯಿತು. ಅಂಥ ವಿರೋಧವು ಯೆಹೋವನನ್ನು ಸೇವಿಸಲು ಮತ್ತು ಸತ್ಯವನ್ನು ಸಮರ್ಥಿಸಿಲು ನನಗಿದ್ದ ದೃಢಸಂಕಲ್ಪವನ್ನು ಬಲಪಡಿಸಿತಷ್ಟೇ.
ಮತ್ತೊಂದು ಸಂದರ್ಭದಲ್ಲಿ ನಾನು ಬಂಧಿಸಲ್ಪಟ್ಟಾಗ, ಬೈಬಲನ್ನು ಉದ್ಧರಿಸುವುದರಲ್ಲಿನ ನನ್ನ ನಿಪುಣತೆಯನ್ನು ನ್ಯಾಯಾಧೀಶನು ಗಮನಿಸಿದನು. “ನೀನು ನಿನ್ನ ಕೆಲಸವನ್ನು ಮಾಡಿದ್ದೀ. ನಾನು ಅವನನ್ನು ವಿಚಾರಿಸಿಕೊಳ್ಳುತ್ತೇನೆ” ಎಂದು ಹೇಳುತ್ತಾ ಅವನು ತನ್ನ ಕಛೇರಿಯನ್ನು ಬಿಟ್ಟುಹೋಗುವಂತೆ ಬಿಷಪನಿಗೆ ಕೇಳಿಕೊಂಡನು. ಅನಂತರ ಅವನು ತನ್ನ ಬೈಬಲನ್ನು ಹೊರತೆಗೆದನು ಮತ್ತು ನಾವು ಇಡೀ ಅಪರಾಹ್ಣ ದೇವರ ರಾಜ್ಯದ ಕುರಿತಾಗಿ ಮಾತಾಡಿದೆವು. ಅಂಥ ಘಟನೆಗಳು ಕಷ್ಟಕರವಾದ ಪರಿಸ್ಥಿತಿಗಳ ಹೊರತೂ ಮುಂದೆ ಸಾಗುವಂತೆ ನನ್ನನ್ನು ಪ್ರೋತ್ಸಾಹಿಸಿದವು.
ಮರಣದಂಡನೆ
1940ರಲ್ಲಿ, ನಾನು ಮಿಲಿಟರಿ ಸೇವೆಗೆ ಸೇರಿಕೊಳ್ಳುವಂತೆ ಒತ್ತಾಯಿಸಲ್ಪಟ್ಟೆ ಮತ್ತು ಮಿಲಿಟರಿ ಸೇವೆಗಾಗಿ ಏಕೆ ಹೆಸರನ್ನು ನಮೂದಿಸಿಕೊಳ್ಳಲು ಸಮ್ಮತಿಸಸಾಧ್ಯವಿಲ್ಲ ಎಂಬುದನ್ನು ವಿವರಿಸುತ್ತಾ ನಾನು ಪತ್ರವೊಂದನ್ನು ಬರೆದೆ. ಎರಡು ದಿವಸಗಳ ಅನಂತರ ನಾನು ಬಂಧಿಸಲ್ಪಟ್ಟು, ಪೊಲೀಸರಿಂದ ಅತ್ಯಂತ ಕ್ರೂರವಾಗಿ ಹೊಡೆಯಲ್ಪಟ್ಟೆ. ಅನಂತರ ನಾನು ಆ್ಯಲ್ಬೇನಿಯದಲ್ಲಿನ ರಣರಂಗಕ್ಕೆ ಕಳುಹಿಸಲ್ಪಟ್ಟೆ, ಅಲ್ಲಿ ನಾನು ಹೋರಾಡಲು ನಿರಾಕರಿಸಿದ ಕಾರಣ, ನಾನು ಸೈನಿಕ ನ್ಯಾಯಾಲಯದಲ್ಲಿ ವಿಚಾರಣೆಗೊಳಗಾದೆ. ಮಿಲಿಟರಿ ಅಧಿಕಾರಿಗಳು, ಸೈನಿಕರ ಮೇಲೆ ಬೀರಬಹುದಾದ ನನ್ನ ಮಾದರಿಯ ಕುರಿತಾಗಿ ಚಿಂತಿತರಾಗಿದ್ದರೆಂದೂ, ನಾನು ಮಾಡಿದ್ದು ಸರಿಯೋ ತಪ್ಪೋ ಎಂಬುದರಲ್ಲಿ ತಾವು ಆಸಕ್ತಿಯುಳ್ಳವರಾಗಿಲ್ಲವೆಂದು ನನಗೆ ಹೇಳಿದರು. ನಾನು ಮರಣದಂಡನೆಗೆ ಗುರಿಮಾಡಲ್ಪಟ್ಟೆನಾದರೂ ಕಾನೂನಿನ ತಪ್ಪೊಂದರ ಕಾರಣ, ನನ್ನ ಮಹಾ ಉಪಶಮನಕ್ಕೆ ಈ ಸಜೆಯು ಹತ್ತು ವರುಷಗಳ ಕಠಿನ ಪರಿಶ್ರಮಕ್ಕೆ ಬದಲಾಯಿಸಲ್ಪಟ್ಟಿತು. ನಾನು ನನ್ನ ಜೀವನದ ಮುಂದಿನ ಕೆಲವೊಂದು ತಿಂಗಳುಗಳನ್ನು ಅತಿ ಕಷ್ಟಕರವಾದ ಪರಿಸ್ಥಿತಿಗಳ ಕೆಳಗೆ, ಗ್ರೀಸ್ನಲ್ಲಿನ ಒಂದು ಮಿಲಿಟರಿ ಸೆರೆಮನೆಯಲ್ಲಿ ಕಳೆದೆ; ಆ ಕಾರಣದಿಂದ ನಾನು ಇನ್ನೂ ಶಾರೀರಿಕ ಪರಿಣಾಮಗಳ ಕಷ್ಟಾನುಭವಿಸುತ್ತೇನೆ.
ಸೆರೆಮನೆಯಾದರೋ, ಸಾರುವುದರಿಂದ ನನ್ನನ್ನು ತಡೆಯಲಿಲ್ಲ. ಖಂಡಿತವಾಗಿಯೂ ಇಲ್ಲ! ಒಬ್ಬ ಪೌರನು ಏಕೆ ಒಂದು ಮಿಲಿಟರಿ ಸೆರೆಮನೆಯಲ್ಲಿದ್ದಾನೆಂದು ಅನೇಕರು ಕುತೂಹಲಪಟ್ಟದ್ದರಿಂದ, ಸಂಭಾಷಣೆಗಳು ಪ್ರಾರಂಭಿಸಲು ಬಹು ಸುಲಭವಾಗಿದ್ದವು. ಒಬ್ಬ ಪ್ರಾಮಾಣಿಕ ಯುವ ಮನುಷ್ಯನೊಂದಿಗಿನ ಈ ಚರ್ಚೆಗಳಲ್ಲಿ ಒಂದು, ಸೆರೆಮನೆಯಂಗಳದಲ್ಲಿ ಬೈಬಲ್ ಅಭ್ಯಾಸವೊಂದಕ್ಕೆ ನಡೆಸಿತು. ಮೂವತ್ತೆಂಟು ವರುಷಗಳ ತರುವಾಯ ನಾನು ಈ ಮನುಷ್ಯನನ್ನು ಪುನಃ ಸಮ್ಮೇಳನವೊಂದರಲ್ಲಿ ಸಂಧಿಸಿದೆ. ಅವನು ಸತ್ಯವನ್ನು ಸ್ವೀಕರಿಸಿದ್ದನು ಮತ್ತು ಲೆಫ್ಕಾಸ್ನ ದ್ವೀಪದಲ್ಲಿ ಒಬ್ಬ ಸಭಾ ಮೇಲ್ವಿಚಾರಕನೋಪಾದಿ ಸೇವೆ ಸಲ್ಲಿಸುತ್ತಿದ್ದನು.
1941ರಲ್ಲಿ ಹಿಟ್ಲರ್ನ ಸೇನೆಗಳು ಯುಗೊಸ್ಲಾವಿಯದ ಮೇಲೆ ದಾಳಿಯಿಟ್ಟಾಗ, ನಾವು ಬಹು ದೂರ ದಕ್ಷಿಣಕ್ಕೆ, ಪ್ರೆವಸಾದಲ್ಲಿನ ಒಂದು ಸೆರೆಮನೆಗೆ ಸ್ಥಳಾಂತರಿಸಲ್ಪಟ್ಟೆವು. ಆ ಪ್ರಯಾಣದ ಅವಧಿಯಲ್ಲಿ, ನಮ್ಮ ಬೆಂಗಾವಲು ದಳವು ಜರ್ಮನ್ ಬಾಂಬ್ದಾಳಿ ವಿಮಾನದಿಂದ ಆಕ್ರಮಿಸಲ್ಪಟ್ಟಿತು ಮತ್ತು ಸೆರೆಯಾಳುಗಳಾದ ನಮಗೆ ಆಹಾರವು ನೀಡಲ್ಪಡಲಿಲ್ಲ. ನನ್ನಲ್ಲಿದ್ದ ಆ ಸ್ವಲ್ಪ ರೊಟ್ಟಿಯು ಮುಗಿದಿದ್ದಾಗ, ನಾನು ದೇವರಿಗೆ ಹೀಗೆ ಪ್ರಾರ್ಥಿಸಿದೆ: “ಮರಣ ದಂಡನೆಯಿಂದ ನನ್ನನ್ನು ಕಾಪಾಡಿದ ಅನಂತರ, ಹಸಿವಿನಿಂದ ನಾನು ಸಾಯುವುದು ನಿನ್ನ ಚಿತ್ತವಾಗಿರುವಲ್ಲಿ, ನಿನ್ನ ಚಿತ್ತದಂತೆಯೇ ನೆರವೇರಲಿ.”
ಮರುದಿನ ಹಾಜರಿ ಕೂಗುವ ಸಮಯದಲ್ಲಿ ಒಬ್ಬ ಅಧಿಕಾರಿಯು ನನ್ನನ್ನು ಪಕ್ಕಕ್ಕೆ ಕರೆದನು ಮತ್ತು ನಾನು ಎಲ್ಲಿಯವನು, ನನ್ನ ಹೆತ್ತವರು ಯಾರು, ಹಾಗೂ ಸೆರೆಮನೆಯಲ್ಲಿ ನಾನು ಏಕಿದ್ದೆನೆಂಬುದನ್ನು ಅರಿತುಕೊಂಡ ಬಳಿಕ, ತನ್ನನ್ನು ಹಿಂಬಾಲಿಸುವಂತೆ ನನಗೆ ಹೇಳಿದನು. ಅವನು ಅಧಿಕಾರಿಗಳ ತಂಡದೂಟಕ್ಕೆ ನನ್ನನ್ನು ಕರೆದುಕೊಂಡುಹೋಗಿ, ರೊಟ್ಟಿ, ಚೀಸ್, ಮತ್ತು ಸುಟ್ಟ ಕುರಿಮರಿಯ ಮಾಂಸವಿದ್ದ ಮೇಜೊಂದರೆಡೆಗೆ ನನ್ನನ್ನು ನಿರ್ದೇಶಿಸಿ, ನನಗೆ ತಿನ್ನಲು ಹೇಳಿದನು. ಆದರೆ ಇತರ 60 ಸೆರೆಯಾಳುಗಳಿಗೆ ತಿನ್ನಲಿಕ್ಕೆ ಏನೂ ಇಲ್ಲದಿರುವುದರಿಂದ, ತಿನ್ನುವಂತೆ ನನ್ನ ಮನಸ್ಸಾಕ್ಷಿಯು ನನ್ನನ್ನು ಅನುಮತಿಸುವುದಿಲ್ಲವೆಂದು ನಾನು ವಿವರಿಸಿದೆ. ಆ ಅಧಿಕಾರಿಯು ಉತ್ತರಿಸಿದ್ದು: “ನಾನು ಪ್ರತಿಯೊಬ್ಬರಿಗೂ ಆಹಾರ ಕೊಡಲು ಸಾಧ್ಯವಿಲ್ಲ! ನಿನ್ನ ತಂದೆಯು ನನ್ನ ತಂದೆಗೆ ಬಹಳ ಉದಾರಿಗಳಾಗಿದ್ದರು. ನಿನ್ನ ಮೇಲೆ ನನಗೆ ನೈತಿಕ ಹಂಗಿದೆ, ಇತರರ ಮೇಲಲ್ಲ.” “ವಿಷಯವು ಹಾಗಿರುವುದಾದರೆ ನಾನು ಹಿಂದಿರುಗಿಹೋಗುತ್ತೇನೆ,” ಎಂದು ನಾನು ಉತ್ತರಿಸಿದೆ. ಅವನು ಒಂದು ಕ್ಷಣ ಯೋಚಿಸಿ, ಅನಂತರ ನನಗೆ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಆಹಾರವನ್ನು ಹಾಕಿಕೊಳ್ಳಲಿಕ್ಕಾಗಿ ಒಂದು ದೊಡ್ಡ ಚೀಲವನ್ನು ಕೊಟ್ಟನು.
ಸೆರೆಮನೆಗೆ ಹಿಂದಿರುಗಿದಾಗ, ನಾನು ಚೀಲವನ್ನು ಕೆಳಗೆ ಇಟ್ಟು ಹೇಳಿದ್ದು: “ಮಹನೀಯರೆ, ಇದು ನಿಮಗಾಗಿ.” ಏಕಕಾಲಿಕವಾಗಿ, ಆ ಸಂಜೆಯ ಹಿಂದಿನ ದಿನದಂದು, ಅವರು ಮಾಡಿದ ಕನ್ಯೆ ಮರಿಯಳ ಪ್ರಾರ್ಥನೆಯಲ್ಲಿ ನಾನು ಜತೆಗೂಡದ ಕಾರಣ, ಇತರ ಸೆರೆಯಾಳುಗಳ ಸ್ಥಿತಿಗಾಗಿ ನಾನು ಜವಾಬ್ದಾರನಾಗಿದ್ದೆನೆಂದು ಆಪಾದಿಸಲ್ಪಟ್ಟಿದ್ದೆ. ಆದರೂ, ಒಬ್ಬ ಕಮ್ಯೂನಿಸ್ಟ್ ನನ್ನ ಸಮರ್ಥನೆಗೆ ಬಂದಿದ್ದನು. ಈಗ ಆಹಾರವನ್ನು ನೋಡಿದಾಗ, ಅವನು ಇತರರಿಗೆ ಹೇಳಿದ್ದು: “ನಿಮ್ಮ ‘ಕನ್ಯೆ ಮರಿಯ’ಳು ಎಲ್ಲಿದ್ದಾಳೆ? ಈ ಮನುಷ್ಯನಿಂದ ನಾವು ಸಾಯುವೆವು ಎಂದು ನೀವು ಹೇಳಿದಿರಿ, ಆದರೂ ನಮಗೆ ಆಹಾರವನ್ನು ತರುವವನು ಈತನೇ.” ಅನಂತರ ಅವನು ನನ್ನೆಡೆಗೆ ತಿರುಗಿ ಹೇಳಿದ್ದು: “ಎಮಾನ್ವೀಲ್! ಬಂದು, ಉಪಕಾರದ ಒಂದು ಪ್ರಾರ್ಥನೆಯನ್ನು ಹೇಳು.”
ಸ್ವಲ್ಪ ಸಮಯದ ತರುವಾಯ, ಜರ್ಮನ್ ಸೇನೆಯ ಮುಂಬರುವಿಕೆಯು, ಸೆರೆಯಾಳುಗಳನ್ನು ಬಿಡುಗಡೆಗೊಳಿಸುತ್ತಾ, ಸೆರೆಯ ಪಹರೆಗಾರರು ಓಡಿಹೋಗುವಂತೆ ಮಾಡಿತು. ನಾನು 1941, ಮೇ ತಿಂಗಳಿನ ಅಂತ್ಯಭಾಗದಲ್ಲಿ ಅಥೇನ್ಸ್ಗೆ ಹೋಗುವ ಮುನ್ನ ಇತರ ಸಾಕ್ಷಿಗಳನ್ನು ಕಂಡುಕೊಳ್ಳುವ ಸಲುವಾಗಿ ಪಟ್ರಸ್ಗೆ ಹೋದೆ. ಅಲ್ಲಿ, ನಾನು ಕೆಲವು ಉಡುಗೆಗಳು ಮತ್ತು ಷೂಗಳನ್ನು ಪಡೆದುಕೊಳ್ಳಲು ಹಾಗೂ ಒಂದಕ್ಕಿಂತಲೂ ಹೆಚ್ಚಿನ ವರ್ಷಾವಧಿಯಲ್ಲಿ ಮೊದಲ ಬಾರಿಗೆ ಸ್ನಾನಮಾಡಲು ಶಕ್ತನಾದೆ. ಸ್ವಾಧೀನಾನುಭವದ ಅಂತ್ಯದ ತನಕ, ಜರ್ಮನರು ನಾನು ಸಾರುತ್ತಿರುವಾಗ ಕ್ರಮವಾಗಿ ನನ್ನನ್ನು ನಿಲ್ಲಿಸಿದರಾದರೂ, ಅವರು ನನ್ನನ್ನೆಂದೂ ಬಂಧಿಸಲಿಲ್ಲ. ಅವರಲ್ಲಿ ಒಬ್ಬನು ಹೇಳಿದ್ದು: “ಜರ್ಮನಿಯಲ್ಲಿ ನಾವು ಯೆಹೋವನ ಸಾಕ್ಷಿಗಳನ್ನು ಗುಂಡಿಟ್ಟು ಕೊಲ್ಲುತ್ತೇವೆ. ಆದರೆ ಇಲ್ಲಿ ನಮ್ಮ ಎಲ್ಲ ಶತ್ರುಗಳು ಸಾಕ್ಷಿಗಳಾಗಿದ್ದಿರಬೇಕೆಂದು ನಾವು ಆಶಿಸುತ್ತೇವೆ!”
ಯುದ್ಧಾನಂತರದ ಚಟುವಟಿಕೆಗಳು
ಗ್ರೀಸ್ ದೇಶಕ್ಕೆ ಹೋರಾಟವು ಸಾಕಾಗಿದ್ದಿರಲಿಲ್ಲವೋ ಎಂಬಂತೆ, ಸಾವಿರಾರು ಮೃತ್ಯುಗಳಿಗೆ ಕಾರಣವಾಗುತ್ತಾ, 1946ರಿಂದ 1949ರ ವರೆಗಿನ ಅಂತರ್ಯುದ್ಧದಿಂದ ಅದು ಇನ್ನೂ ಛಿದ್ರವಾಯಿತು. ಕೇವಲ ಕೂಟಗಳಿಗೆ ಹಾಜರಾಗುವುದು ತಾನೇ ಬಂಧನಕ್ಕೆ ನಡೆಸಸಾಧ್ಯವಿದ್ದಂತಹ ಆ ಒಂದು ಸಮಯದಲ್ಲಿ, ದೃಢವಾಗಿ ಉಳಿಯಲು ಸಹೋದರರಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿತ್ತು. ಹಲವಾರು ಸಹೋದರರು ತಮ್ಮ ತಟಸ್ಥ ನಿಲುವಿಗಾಗಿ ಮರಣಕ್ಕೆ ಗುರಿಮಾಡಲ್ಪಟ್ಟರು. ಆದರೆ ಇದರ ಹೊರತಾಗಿಯೂ, ಅನೇಕ ಜನರು ರಾಜ್ಯದ ಸಂದೇಶಕ್ಕೆ ಪ್ರತಿಕ್ರಿಯಿಸಿದರು, ಮತ್ತು ಪ್ರತಿ ವಾರ ಒಂದು ಅಥವಾ ಎರಡು ದೀಕ್ಷಾಸ್ನಾನಗಳು ಇರುತ್ತಿದ್ದವು. 1947ರಲ್ಲಿ, ನಾನು ದಿನದಲ್ಲಿ ಅಥೇನ್ಸ್ನಲ್ಲಿನ ಸೊಸೈಟಿಯ ಆಫೀಸುಗಳಲ್ಲಿ ಕೆಲಸಮಾಡಲು ಮತ್ತು ರಾತ್ರಿಯಲ್ಲಿ ಒಬ್ಬ ಸಂಚರಣ ಮೇಲ್ವಿಚಾರಕನೋಪಾದಿ ಸಭೆಗಳಿಗೆ ಭೇಟಿನೀಡಲು ಪ್ರಾರಂಭಿಸಿದೆ.
1948ರಲ್ಲಿ, ಅಮೆರಿಕದಲ್ಲಿನ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ ಅನ್ನು ಹಾಜರಾಗುವಂತೆ ಆಮಂತ್ರಿಸಲ್ಪಡುವ ಹರ್ಷವು ನನಗಿತ್ತು. ಆದರೆ ಅಲ್ಲಿ ಒಂದು ಸಮಸ್ಯೆಯಿತ್ತು. ನನ್ನ ಹಿಂದಿನ ಅಪರಾಧಿ ನಿರ್ಣಯಗಳ ಕಾರಣ, ನಾನು ಒಂದು ಪಾಸ್ಪೋರ್ಟನ್ನು ಪಡೆದುಕೊಳ್ಳಲು ಅಶಕ್ತನಾದೆ. ಹಾಗಿದ್ದರೂ, ನನ್ನ ಬೈಬಲ್ ವಿದ್ಯಾರ್ಥಿಗಳಲ್ಲಿ ಒಬ್ಬನಿಗೆ, ಸೇನಾಪತಿಯೊಬ್ಬನೊಂದಿಗೆ ಪರಸ್ಪರ ಮೈತ್ರಿಪೂರ್ಣ ಸಂಬಂಧಗಳಿದ್ದವು. ಈ ವಿದ್ಯಾರ್ಥಿಯಿಂದಾಗಿ, ಕೇವಲ ಕೆಲವೊಂದು ವಾರಗಳಲ್ಲಿ ನಾನು ನನ್ನ ಪಾಸ್ಪೋರ್ಟನ್ನು ಪಡೆದುಕೊಂಡೆ. ಆದರೆ ನಾನು ಗ್ರೀಸ್ ದೇಶವನ್ನು ಬಿಟ್ಟು ಹೊರಡುವ ಮುನ್ನ ಸ್ವಲ್ಪ ಸಮಯದಲ್ಲೇ, ನಾನು ಕಾವಲಿನಬುರುಜು ಪತ್ರಿಕೆಯನ್ನು ವಿತರಿಸಿದುದಕ್ಕಾಗಿ ಬಂಧಿಸಲ್ಪಟ್ಟಾಗ ಚಿಂತೆಗೊಂಡೆ. ಒಬ್ಬ ಪೋಲೀಸ್ ನನ್ನನ್ನು ಅಥೇನ್ಸ್ನಲ್ಲಿರುವ ರಾಜ್ಯ ಭದ್ರತಾ ಪೊಲೀಸ್ನ ಮುಖ್ಯಾಧಿಕಾರಿಯ ಹತ್ತಿರ ಕರೆದುಕೊಂಡುಹೋದನು. ನನ್ನ ತೀರ ಆಶ್ಚರ್ಯಕ್ಕೆ ಅವನು ನನ್ನ ನೆರೆಯವರಲ್ಲಿ ಒಬ್ಬನಾಗಿದ್ದನು! ಆ ಪೊಲೀಸನು, ನಾನು ಏಕೆ ಬಂಧಿಸಲ್ಪಟ್ಟಿದ್ದೆನೆಂಬುದನ್ನು ವಿವರಿಸಿ, ಪತ್ರಿಕೆಗಳ ಕಟ್ಟನ್ನು ಅವನಿಗೆ ನೀಡಿದನು. ನನ್ನ ನೆರೆಯವನು ತನ್ನ ಡೆಸ್ಕ್ನಿಂದ ಕಾವಲಿನಬುರುಜು ಪತ್ರಿಕೆಗಳ ಒಂದು ರಾಶಿಯನ್ನು ಹೊರತೆಗೆದು, ನನಗೆ ಹೇಳಿದ್ದು: “ನನ್ನಲ್ಲಿ ಇತ್ತೀಚಿನ ಸಂಚಿಕೆಯಿಲ್ಲ. ನಾನು ಒಂದು ಪ್ರತಿಯನ್ನು ತೆಗೆದುಕೊಳ್ಳಬಹುದೋ?” ಅಂಥ ವಿಷಯಗಳಲ್ಲಿ ಯೆಹೋವನ ಹಸ್ತವನ್ನು ನೋಡಿ, ನಾನೆಷ್ಟು ಉಪಶಮನಗೊಂಡಿದ್ದೆ!
1950ರಲ್ಲಿ ಗಿಲ್ಯಡ್ನ 16ನೇ ತರಗತಿಯು ಸಂಪದ್ಯುಕ್ತಮಾಡುವ ಒಂದು ಅನುಭವವಾಗಿತ್ತು. ಅದರ ಸಮಾಪ್ತಿಯಲ್ಲಿ, ನಾನು ಸೈಪ್ರೆಸ್ಗೆ ನೇಮಿಸಲ್ಪಟ್ಟೆ, ಅಲ್ಲಿ ವೈದಿಕ ವಿರೋಧವು ಗ್ರೀಸ್ ದೇಶದಲ್ಲಿ ಎಷ್ಟು ತೀಕ್ಷ್ಣವಾಗಿತ್ತೋ ಅಷ್ಟೇ ತೀಕ್ಷ್ಣವಾಗಿ ಇರುವುದನ್ನು ನಾನು ಬೇಗನೆ ಕಂಡುಹಿಡಿದೆ. ನಾವು ಆಗಾಗ್ಗೆ, ಆರ್ತೊಡಾಕ್ಸ್ ಪಾದ್ರಿಗಳಿಂದ ಉನ್ಮಾದಾವೇಗಕ್ಕೆ ಚಿತಾಯಿಸಲ್ಪಟ್ಟ ಧಾರ್ಮಿಕ ಮತಭ್ರಾಂತರ ಗುಂಪುಗಳನ್ನು ಎದುರಿಸಬೇಕಾಗಿತ್ತು. 1953ರಲ್ಲಿ ಸೈಪ್ರೆಸ್ಗಾಗಿನ ನನ್ನ ವೀಸಾ ನವೀಕರಿಸಲ್ಪಡಲಿಲ್ಲ, ಮತ್ತು ನಾನು ಟರ್ಕಿ, ಇಸ್ಟನ್ಬೂಲ್ಗೆ ಪುನರ್ನೇಮಿಸಲ್ಪಟ್ಟೆ. ಇಲ್ಲಿ ಪುನಃ ನನ್ನ ತಂಗುವಿಕೆಯು ಅಲ್ಪಕಾಲದ್ದಾಗಿತ್ತು. ಟರ್ಕಿ ಮತ್ತು ಗ್ರೀಸ್ನ ನಡುವಿನ ರಾಜಕೀಯ ಬಿಗುಪುಗಳು, ಸಾರುವ ಕಾರ್ಯದಲ್ಲಿನ ಸುಫಲಿತಾಂಶಗಳ ಹೊರತಾಗಿಯೂ ನಾನು ಮತ್ತೊಂದು ನೇಮಕಕ್ಕೆ—ಈಜಿಪ್ಟ್—ಹೊರಡಬೇಕಾಗಿತ್ತು ಎಂಬುದನ್ನು ಅರ್ಥೈಸಿದವು.
ನಾನು ಗ್ರೀಸ್ ದೇಶದಲ್ಲಿ ಸೆರೆಮನೆಯಲ್ಲಿದ್ದಾಗ, ಕೀರ್ತನೆ 55:6, 7ನ್ನು ನಾನು ಜ್ಞಾಪಿಸಿಕೊಳ್ಳುತ್ತಿದ್ದೆ. ಅಲ್ಲಿ ದಾವೀದನು ಮರುಭೂಮಿಗೆ ಓಡಿಹೋಗಲು ಹಾತೊರೆಯುವಿಕೆಯನ್ನು ವ್ಯಕ್ತಪಡಿಸಿದನು. ನಾನು ಒಂದು ದಿನ ನಿಖರವಾಗಿ ಅಲ್ಲಿಯೇ ಇರಲಿದ್ದೆನೆಂಬುದನ್ನು ನಾನು ಎಂದೂ ಕಲ್ಪಿಸಿಕೊಳ್ಳಲಿಲ್ಲ. 1954ರಲ್ಲಿ, ರೈಲಿನ ಮತ್ತು ನೈಲ್ ನದಿದೋಣಿಯ ಮೂಲಕ ಹಲವಾರು ದಿವಸಗಳ ಒಂದು ಆಯಾಸಗೊಳಿಸಿದ ಪ್ರಯಾಣದ ಅನಂತರ, ನಾನು ಕಟ್ಟಕಡೆಗೆ ನನ್ನ ಗಮ್ಯಸ್ಥಾನವನ್ನು—ಸೂಡನ್ನ ಕಾರ್ಟೂಮನ್ನು—ತಲಪಿದೆ. ನಾನು ಕೇವಲ ಸ್ನಾನಮಾಡಿ, ಮಲಗುವುದೊಂದನ್ನೇ ಬಯಸಿದೆ. ಆದರೆ ಅದು ನಡುಹಗಲಾಗಿತ್ತು ಎಂಬುದನ್ನು ನಾನು ಮರೆತೆ. ಚಾವಣಿಯ ಮೇಲಿನ ತೊಟ್ಟಿಯೊಂದರಲ್ಲಿ ಶೇಖರಿಸಿಡಲ್ಪಟ್ಟಿದ್ದ ನೀರು, ನನ್ನ ನೆತ್ತಿಯ ಭಾಗವು ಗುಣವಾಗುವ ತನಕ ಹಲವಾರು ತಿಂಗಳುಗಳ ವರೆಗೆ ಬೆಂಡಿನ ಶಿರಸ್ತ್ರಾಣವನ್ನು ಧರಿಸಲು ನನ್ನನ್ನು ಕಟ್ಟುಪಡಿಸುತ್ತಾ, ನನ್ನನ್ನು ಸುಟ್ಟುಬಿಟ್ಟಿತು.
ನನಗೆ ಅಲ್ಲಿ ಆಗಾಗ್ಗೆ ಪ್ರತ್ಯೇಕಿಸಲ್ಪಟ್ಟಂತೆ, ಅತಿ ಸಮೀಪದ ಸಭೆಯಿಂದ ಹದಿನಾರು ನೂರು ಕಿಲೊಮೀಟರುಗಳ ದೂರದಲ್ಲಿ, ಸಹಾರಾ ಮರುಭೂಮಿಯ ಮಧ್ಯಭಾಗದಲ್ಲಿ ಏಕಾಂಗಿಯಾದಂತೆ ಅನಿಸಿತು, ಆದರೆ ಯೆಹೋವನು ನನ್ನನ್ನು ಪೋಷಿಸಿ, ಮುಂದುವರಿಯಲು ನನಗೆ ಬಲವನ್ನು ನೀಡಿದನು. ಕೆಲವೊಮ್ಮೆ ಅತಿ ಅನಿರೀಕ್ಷಿತ ಮೂಲಗಳಿಂದ ಪ್ರೋತ್ಸಾಹನೆಯು ಬಂತು. ಒಂದು ದಿನ ನಾನು ಕಾರ್ಟೂಮ್ನ ಮ್ಯೂಸಿಯಮ್ನ ನಿರ್ದೇಶಕನನ್ನು ಭೇಟಿಯಾದೆ. ಅವನು ಬಿಚ್ಚುಮನಸ್ಸಿನವನಾಗಿದ್ದನು ಮತ್ತು ನಾವು ಒಂದು ಆಸಕ್ತಿಕರವಾದ ಚರ್ಚೆಯನ್ನು ಮಾಡಿದೆವು. ನಾನು ಒಬ್ಬ ಗ್ರೀಕ್ ಮೂಲದವನಾಗಿದ್ದೆನು ಎಂಬುದನ್ನು ತಿಳಿದುಕೊಂಡಾಗ, ಆರನೇ ಶತಮಾನದ ಚರ್ಚಿನಲ್ಲಿ ಕಂಡುಕೊಳ್ಳಲ್ಪಟ್ಟ ಹಸ್ತಕೃತಿಗಳ ಮೇಲಿನ ಕೆತ್ತನೆಗಳಲ್ಲಿ ಕೆಲವನ್ನು ಭಾಷಾಂತರಿಸಲಿಕ್ಕಾಗಿ ಮ್ಯೂಸಿಯಮ್ಗೆ ಹೋಗುವ ಮೂಲಕ ನಾನು ಅವನಿಗೆ ಸಹಕರಿಸುವೆನೋ ಎಂದು ಅವನು ನನ್ನನ್ನು ಕೇಳಿದನು. ಉಸಿರುಕಟ್ಟಿಸುವ ನೆಲಮಾಳಿಗೆಯಲ್ಲಿ ಐದು ತಾಸುಗಳನ್ನು ಕಳೆದ ತರುವಾಯ, ನಾಲ್ಕಕ್ಷರದಲ್ಲಿ ಬರೆಯಲ್ಪಟ್ಟಿದ್ದ, ಯೆಹೋವನ ಹೆಸರನ್ನು ಹೊಂದಿದ್ದ ಬಟ್ಟಲ ತಟ್ಟೆಯನ್ನು ನಾನು ಕಂಡುಕೊಂಡೆ. ನನ್ನ ಹರ್ಷವನ್ನು ಊಹಿಸಿಕೊಳ್ಳಿರಿ! ಯೂರೋಪಿನ ಚರ್ಚುಗಳಲ್ಲಿ ದೈವಿಕ ನಾಮವನ್ನು ನೋಡುವುದು ವಿರಳವೇನೂ ಆಗಿರುವುದಿಲ್ಲ, ಆದರೆ ಸಹಾರಾದ ನಡುವಿನಲ್ಲಿ ಕಂಡುಕೊಳ್ಳುವುದು ತುಂಬ ಅಸಾಮಾನ್ಯವಾದ ವಿಷಯ!
1958ರಲ್ಲಿನ ಅಂತಾರಾಷ್ಟ್ರೀಯ ಸಮ್ಮೇಳನದ ಅನಂತರ, ಮಧ್ಯ ಮತ್ತು ಸಮೀಪ ಪೂರ್ವದ ಹಾಗೂ ಮೆಡಿಟೆರೇನಿಯನ್ ಸುತ್ತಲಿನ 26 ದೇಶಗಳ ಮತ್ತು ಟೆರಿಟೊರಿಗಳ ಸಹೋದರರನ್ನು ಭೇಟಿಮಾಡಲು, ಸೋನ್ ಮೇಲ್ವಿಚಾರಕನೋಪಾದಿ ನಾನು ನೇಮಿಸಲ್ಪಟ್ಟೆ. ಅನೇಕ ವೇಳೆ, ಒಂದು ಕಷ್ಟಕರವಾದ ಪರಿಸ್ಥಿತಿಯಿಂದ ಹೇಗೆ ಹೊರಬರುವುದೆಂದು ನನಗೆ ತಿಳಿದಿರಲಿಲ್ಲ, ಆದರೆ ಯೆಹೋವನು ಸದಾ ಹೊರಬರುವ ಒಂದು ಮಾರ್ಗವನ್ನು ಒದಗಿಸಿದನು.
ನಿರ್ದಿಷ್ಟ ದೇಶಗಳಲ್ಲಿ ಪ್ರತ್ಯೇಕಿತರಾಗಿರುವ ಸಾಕ್ಷಿಗಳಿಗಾಗಿ ಯೆಹೋವನ ಸಂಸ್ಥೆಯು ತೋರಿಸುವ ಕಾಳಜಿಯಿಂದ ನಾನು ಯಾವಾಗಲೂ ಪ್ರಭಾವಿಸಲ್ಪಟ್ಟೆ. ಒಂದು ಸಂದರ್ಭದಲ್ಲಿ, ತೈಲ ಕಣವೊಂದರಲ್ಲಿ ಕೆಲಸಮಾಡುತ್ತಿದ್ದ ಒಬ್ಬ ಭಾರತೀಯನನ್ನು ನಾನು ಭೇಟಿಯಾದೆ. ಸ್ಫುಟವಾಗಿ ಆ ದೇಶದಲ್ಲಿ ಅವನು ಏಕಮಾತ್ರ ಸಾಕ್ಷಿಯಾಗಿದ್ದನು. ಅವನ ಕಪಾಟಿನಲ್ಲಿ ಅವನು 18 ವಿವಿಧ ಭಾಷೆಗಳ ಪ್ರಕಾಶನಗಳನ್ನು ಪಡೆದಿದ್ದನು; ಅದನ್ನು ಅವನು ತನ್ನ ಸಹೋದ್ಯೋಗಿಗಳಿಗೆ ನೀಡಿದನು. ಸಕಲ ವಿದೇಶೀ ಧರ್ಮಗಳು ಕಟ್ಟುನಿಟ್ಟಾಗಿ ನಿಷೇಧಿಸಲ್ಪಟ್ಟಿದ್ದ ಈ ದೇಶದಲ್ಲಿಯೂ ನಮ್ಮ ಸಹೋದರನು ಸುವಾರ್ತೆಯನ್ನು ಪ್ರಚಾರಮಾಡಲಿಕ್ಕಾಗಿರುವ ತನ್ನ ಜವಾಬ್ದಾರಿಯನ್ನು ಮರೆಯಲಿಲ್ಲ. ಅವನ ಧರ್ಮದ ಒಬ್ಬ ಪ್ರತಿನಿಧಿಯು ಅವನನ್ನು ಭೇಟಿಯಾಗಲು ಕಳುಹಿಸಲ್ಪಟ್ಟಿರುವುದನ್ನು ಕಾಣಲು ಅವನ ಸಹೋದ್ಯೋಗಿಗಳು ಮನತಾಕಿಸಲ್ಪಟ್ಟರು.
ಇಸವಿ 1959ರಲ್ಲಿ ನಾನು ಸ್ಪೆಯ್ನ್ ಮತ್ತು ಪೋರ್ಚುಗಲ್ ದೇಶಗಳನ್ನು ಭೇಟಿಮಾಡಿದೆ. ಆ ಸಮಯದಲ್ಲಿ ಎರಡೂ ದೇಶಗಳು, ಯೆಹೋವನ ಸಾಕ್ಷಿಗಳ ಕೆಲಸದ ಕುರಿತಾಗಿ ಕಟ್ಟುನಿಟ್ಟಾದ ನಿಷೇಧದೊಂದಿಗೆ ಮಿಲಿಟರಿ ನಿರಂಕುಶಾಧಿಕಾರಿಗಳ ಕೆಳಗಿದ್ದವು. ಕಷ್ಟಗಳ ಹೊರತೂ ಬಿಟ್ಟುಬಿಡದಂತೆ ಸಹೋದರರನ್ನು ಪ್ರೋತ್ಸಾಹಿಸುತ್ತಾ, ಒಂದು ತಿಂಗಳಿನಲ್ಲಿ ಒಂದು ನೂರಕ್ಕಿಂತಲೂ ಹೆಚ್ಚು ಕೂಟಗಳನ್ನು ನಡೆಸಲು ನಾನು ಶಕ್ತನಾದೆ.
ಇನ್ನು ಮುಂದೆ ಏಕಾಂಗಿಯಾಗಿಲ್ಲ
20ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ, ಒಬ್ಬ ಅವಿವಾಹಿತ ಪುರುಷನೋಪಾದಿ ನಾನು ಯೆಹೋವನನ್ನು ಪೂರ್ಣ ಸಮಯದ ಸೇವೆಯಲ್ಲಿ ಸೇವಿಸುತ್ತಿದ್ದೆ, ಆದರೆ ಹಠಾತ್ತನೆ ಯಾವುದೇ ಸ್ಥಾಯಿ ನೆಲೆಯಿಲ್ಲದಿರುವ ನನ್ನ ನಿರಂತರ ಪ್ರಯಾಣಗಳಿಂದ ಬಳಲಿಹೋದಂತೆ ನನಗನಿಸಿತು. ಈ ಸಮಯದಲ್ಲಿಯೇ ನಾನು ಟುನೀಸ್ಯದ ಒಬ್ಬ ವಿಶೇಷ ಪಯನೀಯರಳಾದ, ಆ್ಯನಿ ಬ್ಯಾನ್ಯೂಚೀ ಅನ್ನು ಭೇಟಿಯಾದೆ. ನಾವು 1963ರಲ್ಲಿ ವಿವಾಹವಾದೆವು. ಯೆಹೋವನಿಗಾಗಿ ಮತ್ತು ಸತ್ಯಕ್ಕಾಗಿರುವ ಆಕೆಯ ಪ್ರೀತಿ, ಕಲಿಸುವ ಕಲೆಯೊಂದಿಗೆ ಸಂಯೋಜಿಸಲ್ಪಟ್ಟ ಶುಶ್ರೂಷೆಗಾಗಿನ ಆಕೆಯ ಭಕ್ತಿ, ಹಾಗೂ ಭಾಷೆಗಳ ಆಕೆಯ ಜ್ಞಾನವು, ನಿಜವಾಗಿಯೂ ಉತ್ತರ ಮತ್ತು ಪಶ್ಚಿಮ ಆಫ್ರಿಕ ಹಾಗೂ ಇಟಲಿಯಲ್ಲಿನ ನಮ್ಮ ಮಿಷನೆರಿ ಮತ್ತು ಸರ್ಕಿಟ್ ಕೆಲಸದಲ್ಲಿ ಒಂದು ಆಶೀರ್ವಾದವಾಗಿ ಪರಿಣಮಿಸಿತು.
1965ರ ಆಗಸ್ಟ್ ತಿಂಗಳಿನಲ್ಲಿ ನನ್ನ ಪತ್ನಿ ಮತ್ತು ನಾನು ಸೆನಿಗಲ್ನ ಡಾಕಾರ್ಗೆ ನೇಮಿಸಲ್ಪಟ್ಟೆವು, ಅಲ್ಲಿ ಸ್ಥಳಿಕ ಶಾಖಾ ಕಚೇರಿಯನ್ನು ಸಂಘಟಿಸುವ ಸುಯೋಗವು ನನಗಿತ್ತು. ಸೆನಿಗಲ್ ಅದರ ಧಾರ್ಮಿಕ ಸಹನೆಗಾಗಿ ಗಮನಾರ್ಹ ದೇಶವಾಗಿದ್ದುದು ನಿಸ್ಸಂಶಯವಾಗಿ ಅದರ ರಾಷ್ಟ್ರಾಧ್ಯಕ್ಷರಾದ ಲೆಪಾಲ್ ಸೆಂಗಾರ್ರ ಕಾರಣದಿಂದಲೇ. 1970ಗಳಲ್ಲಿ ಮಲಾವಿಯಲ್ಲಿ ನಡೆದ ಭೀಕರ ಹಿಂಸಾಚಾರದ ಅವಧಿಯಲ್ಲಿ ಯೆಹೋವನ ಸಾಕ್ಷಿಗಳ ಬೆಂಬಲದಲ್ಲಿ, ಮಲಾವಿಯ ರಾಷ್ಟ್ರಾಧ್ಯಕ್ಷರಾದ ಬಂಡಾ ಅವರಿಗೆ ಪತ್ರ ಬರೆದ ಕೆಲವೇ ಆಫ್ರಿಕನ್ ರಾಜ್ಯನಾಯಕರಲ್ಲಿ ಅವರೊಬ್ಬರು.
ಯೆಹೋವನ ಪುಷ್ಕಳ ಆಶೀರ್ವಾದ
1951ರಲ್ಲಿ, ನಾನು ಸೈಪ್ರೆಸ್ಗೆ ಹೋಗಲಿಕ್ಕಾಗಿ ಗಿಲ್ಯಡನ್ನು ಬಿಟ್ಟಾಗ, ನಾನು ಏಳು ಸೂಟ್ಕೇಸ್ಗಳೊಂದಿಗೆ ಪ್ರಯಾಣಿಸಿದೆ. ಟರ್ಕಿಗೆ ಹೋಗುವಾಗ, ನನ್ನಲ್ಲಿ ಬರೇ ಐದು ಸೂಟ್ಕೇಸ್ಗಳಿದ್ದವು. ಆದರೆ ಇಷ್ಟೊಂದು ಹೆಚ್ಚು ಪ್ರಯಾಣ ಮಾಡುವುದರಿಂದ, ನನ್ನ ಫೈಲ್ಗಳು ಮತ್ತು ನನ್ನ “ಪುಟ್ಟ” ಟೈಪ್ರೈಟರ್ ಅನ್ನು ಒಳಗೊಂಡ, 20 ಕಿಲೊಗ್ರಾಮ್ (44 ಪೌಂಡ್) ಸಾಮಾನುಗಳ ಮಿತಿಗೆ ನಾನು ಒಗ್ಗಿಕೊಳ್ಳಬೇಕಾಗಿತ್ತು. ನಾನು ಒಂದು ದಿನ, ಆಗ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ಸಹೋದರ ನಾರ್ ಅವರಿಗೆ ಹೇಳಿದ್ದು: “ನೀವು ನನ್ನನ್ನು ಪ್ರಾಪಂಚಿಕತೆಯಿಂದ ಕಾಪಾಡುತ್ತೀರಿ. ನಾನು 20 ಕಿಲೋಗ್ರಾಮ್ಗಳೊಂದಿಗೆ ಜೀವಿಸುವಂತೆ ಮಾಡುತ್ತೀರಿ, ಮತ್ತು ನಾನು ಅದಕ್ಕಾಗಿ ತೃಪ್ತನು.” ಅನೇಕ ವಸ್ತುಗಳಿಲ್ಲದಿರುವ ಕಾರಣ ನನಗೆಂದೂ ಅನುಭೋಗ ತಪ್ಪಿಸಲ್ಪಟ್ಟಂತೆ ಅನಿಸಲಿಲ್ಲ.
ನನ್ನ ಪ್ರಯಾಣಗಳ ಸಮಯದಲ್ಲಿ ನನ್ನ ಮುಖ್ಯ ಸಮಸ್ಯೆಯು ದೇಶಗಳ ಪ್ರವೇಶ ಮತ್ತು ನಿಷ್ಕ್ರಮಣವೇ ಆಗಿತ್ತು. ಒಂದು ದಿನ, ಕೆಲಸವು ನಿಷೇಧಿಸಲ್ಪಟ್ಟ ಒಂದು ದೇಶದಲ್ಲಿ, ಒಬ್ಬ ಕಸ್ಟಮ್ಸ್ ಅಧಿಕಾರಿಯು ನನ್ನ ಫೈಲ್ಗಳನ್ನು ಚೆಲ್ಲಾಪಿಲ್ಲಿಮಾಡುತ್ತಾ ಶೋಧವನ್ನು ಪ್ರಾರಂಭಿಸಿದನು. ಇದು ಆ ದೇಶದಲ್ಲಿನ ಸಾಕ್ಷಿಗಳಿಗೆ ಒಂದು ಗಂಡಾಂತರವನ್ನು ಮುಂದಿಟ್ಟಿತು, ಆದುದರಿಂದ ನನ್ನ ಪತ್ನಿಯಿಂದ ಬಂದಿದ್ದ ಒಂದು ಪತ್ರವನ್ನು ನನ್ನ ನಡುವಂಗಿಯಿಂದ ಹೊರತೆಗೆದು, ಆ ಕಸ್ಟಮ್ಸ್ ಅಧಿಕಾರಿಗೆ ಹೇಳಿದ್ದು: “ಪತ್ರವನ್ನು ಓದುವುದು ನಿಮಗೆ ಇಷ್ಟವೆಂದು ನನಗೆ ತೋರುತ್ತದೆ. ಫೈಲ್ನಲ್ಲಿ ಇಲ್ಲದ, ನನ್ನ ಪತ್ನಿಯಿಂದ ಬಂದ ಈ ಪತ್ರವನ್ನು ಸಹ ಓದಲು ನೀವು ಇಷ್ಟಪಡುವಿರೋ?” ತಬ್ಬಿಬ್ಬುಗೊಂಡು, ತನ್ನನ್ನು ಬಿಡಿಸಿಕೊಳ್ಳುತ್ತಾ, ಅವನು ನನ್ನನ್ನು ಹೋಗುವಂತೆ ಅನುಮತಿಸಿದನು.
1982ರಿಂದ ನನ್ನ ಪತ್ನಿ ಮತ್ತು ನಾನು, ಫ್ರಾನ್ಸ್ನ ದಕ್ಷಿಣ ಭಾಗದಲ್ಲಿನ ನೈಸ್ನಲ್ಲಿ ಮಿಷನೆರಿಗಳಾಗಿ ಸೇವೆಸಲ್ಲಿಸುತ್ತಿದ್ದೇವೆ. ನನ್ನ ಕ್ಷೀಣಿಸುತ್ತಿರುವ ಆರೋಗ್ಯದ ಕಾರಣ, ನಾನು ಮುಂಚೆ ಮಾಡುತ್ತಿದ್ದಷ್ಟು ಹೆಚ್ಚು ಕೆಲಸವನ್ನು ಇನ್ನು ಮುಂದೆ ಮಾಡಸಾಧ್ಯವಿಲ್ಲ. ಆದರೆ ಅದು ನಮ್ಮ ಹರ್ಷವು ಕುಂದಿಹೋಗಿದೆ ಎಂಬುದನ್ನು ಅರ್ಥೈಸುವುದಿಲ್ಲ. ‘ನಮ್ಮ ಪ್ರಯಾಸವು ನಿಷ್ಫಲವಾಗಿಲ್ಲ’ ಎಂಬುದನ್ನು ನಾವು ನೋಡಿದ್ದೇವೆ. (1 ಕೊರಿಂಥ 15:58) ಗತ ವರ್ಷಗಳಿಂದ ನಾನು ಯಾರೊಂದಿಗೆ ಅಭ್ಯಾಸಿಸುವ ಸುಯೋಗವನ್ನು ಪಡೆದಿದ್ದೆನೋ, ಆ ಅನೇಕ ಜನರನ್ನು ನೋಡುವ ಹಾಗೂ ನನ್ನ ಕುಟುಂಬದ 40ಕ್ಕಿಂತಲೂ ಹೆಚ್ಚಿನ ಸದಸ್ಯರು ನಂಬಿಗಸ್ತಿಕೆಯಿಂದ ಯೆಹೋವನನ್ನು ಸೇವಿಸುತ್ತಿರುವುದನ್ನು ನೋಡುವ ಹರ್ಷವು ನನಗಿದೆ.
‘ಮುನ್ನಡಿಯಿಟ್ಟ’ ನನ್ನ ಜೀವನವು ನಿಷ್ಕರ್ಷಿಸಿರುವ ತ್ಯಾಗಗಳ ಕುರಿತಾಗಿ ನಾನು ನಿಶ್ಚಯವಾಗಿಯೂ ವಿಷಾದಿಸುವುದಿಲ್ಲ. ಎಷ್ಟೆಂದರೂ, ನಾವು ಮಾಡುವಂಥ ಯಾವುದೇ ತ್ಯಾಗಗಳು, ನಮಗಾಗಿ ಯೆಹೋವ ಮತ್ತು ಆತನ ಪುತ್ರನಾದ ಕ್ರಿಸ್ತ ಯೇಸು ಮಾಡಿರುವ ತ್ಯಾಗಗಳಿಗೆ ಹೋಲಿಸಲ್ಪಡಸಾಧ್ಯವಿಲ್ಲ. ಸತ್ಯವನ್ನು ತಿಳಿದಂಥ, ಕಳೆದ 60ಕ್ಕಿಂತಲೂ ಹೆಚ್ಚಿನ ವರ್ಷಗಳ ಹಿಂದಿನದ್ದನ್ನು ನಾನು ಆಲೋಚಿಸುವಾಗ, ಯೆಹೋವನು ನನ್ನನ್ನು ಹೇರಳವಾಗಿ ಆಶೀರ್ವದಿಸಿದ್ದಾನೆಂಬುದನ್ನು ನಾನು ಹೇಳಬಲ್ಲೆ. ಜ್ಞಾನೋಕ್ತಿ 10:22 (NW) ಹೇಳುವಂತೆ, “ಯೆಹೋವನ ಆಶೀರ್ವಾದ—ಅದು ತಾನೇ ಐಶ್ವರ್ಯವಂತನನ್ನಾಗಿ ಮಾಡುತ್ತದೆ.”
ನಿಸ್ಸಂದೇಹವಾಗಿ, ಯೆಹೋವನ “ಪ್ರೀತಿ-ದಯೆಯು ಜೀವಕ್ಕಿಂತಲೂ ಹೆಚ್ಚು ಉತ್ತಮವಾದದ್ದಾಗಿದೆ.” (ಕೀರ್ತನೆ 63:3, NW) ವೃದ್ಧಾಪ್ಯದ ಅನನುಕೂಲಗಳು ಬಹುಸಂಖ್ಯಾಕವಾಗುತ್ತಿರುವಂತೆ, ನನ್ನ ಪ್ರಾರ್ಥನೆಗಳಲ್ಲಿ ಪ್ರೇರಿತ ಕೀರ್ತನೆಗಾರನ ಮಾತುಗಳು ಅನೇಕ ವೇಳೆ ಉಲ್ಲೇಖಿಸಲ್ಪಡುತ್ತವೆ: “ಯೆಹೋವನೇ ನಿನ್ನ ಮರೆಹೊಕ್ಕಿದ್ದೇನೆ; ಎಂದಿಗೂ ಆಶಾಭಂಗಪಡಿಸಬೇಡ. ಕರ್ತನಾದ ಯೆಹೋವನೇ, ಬಾಲ್ಯಾರಭ್ಯ ನನ್ನ ನಿರೀಕ್ಷೆಯೂ ಭರವಸವೂ ನೀನಲ್ಲವೋ? ದೇವರೇ, ನೀನು ಬಾಲ್ಯಾರಭ್ಯ ನನ್ನನ್ನು ಉಪದೇಶಿಸುತ್ತಾ ಬಂದಿದ್ದೀ; ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರಪಡಿಸುತ್ತಿದ್ದೇನೆ. ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ.”—ಕೀರ್ತನೆ 71:1, 5, 17, 18.
[ಪುಟ 25 ರಲ್ಲಿರುವ ಚಿತ್ರ]
ಇಂದು ನನ್ನ ಪತ್ನಿಯಾದ ಆ್ಯನಿಯೊಂದಿಗೆ