ವಾಚಕರಿಂದ ಪ್ರಶ್ನೆಗಳು
ಮಾನವ ರಕ್ತದಿಂದ ತೆಗೆದ ಆಲ್‌ಬ್ಯೂಮಿನ್ ಇರುವ ರೋಗವಿಷವನ್ನು ಅಥವಾ ಇನ್ನಿತರ ವೈದ್ಯಕೀಯ ಚುಚ್ಚುಮದ್ದ (ಇಂಜೆಕ್ಷನ್) ನ್ನು ತೆಗೆದುಕೊಳ್ಳುವುದು ಸರಿಯಾಗಿರುವುದೊ?
ಸರಳವಾಗಿ ಹೇಳುವುದಾದರೆ, ಇದರ ವಿಷಯದಲ್ಲಿ ಪ್ರತಿಯೊಬ್ಬ ಕ್ರೈಸ್ತನು ಸ್ವತಃ ನಿರ್ಣಯಿಸಬೇಕು.
ದೇವರ ಸೇವಕರು ಅಪೊಸ್ತಲರ ಕೃತ್ಯಗಳು 15:28, 29ರ ರಕ್ತವನ್ನು ವರ್ಜಿಸುವ ಆದೇಶಕ್ಕೆ ಯೋಗ್ಯವಾಗಿಯೆ ವಿಧೇಯರಾಗಲು ಬಯಸುತ್ತಾರೆ. ಇದಕ್ಕನುಸಾರ, ಕ್ರೈಸ್ತರು ರಕ್ತ ಬಸಿಯದ ಮಾಂಸವನ್ನು ಅಥವಾ ಬ್ಲಡ್ ಸಾಸೆಜ್‌ನಂತಹ ಉತ್ಪನ್ನಗಳನ್ನು ತಿನ್ನುವುದಿಲ್ಲ. ಆದರೆ ದೇವರ ನಿಯಮವು ವೈದ್ಯಕೀಯ ಕ್ಷೇತ್ರದಲ್ಲಿಯೂ ಅನ್ವಯಿಸುತ್ತದೆ. ಯೆಹೋವನ ಸಾಕ್ಷಿಗಳು, ತಾವು ‘ರಕ್ತಪೂರಣಗಳನ್ನು, ಪೂರ್ಣ ರಕ್ತವನ್ನು, ಕೆಂಪುರಕ್ತ ಕಣಗಳನ್ನು, ಬಿಳಿರಕ್ತ ಕಣಗಳನ್ನು, ರಕ್ತ ಪೇಟ್ಲೆಟ್ಲ್‌ಗಳನ್ನು ಮತ್ತು ರಕ್ತರಸ (ಪ್ಲಾಸ್ಮ) ವನ್ನು’ ತೆಗೆದುಕೊಳ್ಳಲು ನಿರಾಕರಿಸುತ್ತೇವೆಂದು ಹೇಳುವ ಪ್ರಮಾಣಪತ್ರವನ್ನು ತಮ್ಮೊಂದಿಗೆ ಒಯ್ಯುತ್ತಾರೆ. ಆದರೆ ಲೇಶ ರಕ್ತ ಸಸಾರಜನಕವಿರುವ ರಕ್ತಸಾರ (ಸೀರಮ್) ಇಂಜೆಕ್ಷನ್‌ಗಳ ಕುರಿತೇನು?
ಇದು ಪ್ರತಿಯೊಬ್ಬನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಗಳನುಸಾರವಾದ ಖಾಸಗಿ ನಿರ್ಣಯದ ಸಂಗತಿಯೆಂದು ಯೆಹೋವನ ಸಾಕ್ಷಿಗಳು ಬಹಳ ಸಮಯದಿಂದ ಗ್ರಹಿಸಿದ್ದಾರೆ. ಇದನ್ನು ಜೂನ್ 1, 1990ರ ದ ವಾಚ್‌ಟವರ್‌ನ “ವಾಚಕರಿಂದ ಪ್ರಶ್ನೆಗಳು” ವಿಭಾಗದಲ್ಲಿ ತೋರಿಸಲಾಗಿತ್ತು. ಇದರಲ್ಲಿ ಹಲವು ಬಗೆಯ ರೋಗಗಳಿಗೆ ಒಬ್ಬನು ಆಹುತಿಯಾದಾಗ ಒಬ್ಬ ಡಾಕ್ಟರನು ಶಿಫಾರಸ್ಸು ಮಾಡಬಹುದಾದ ರಕ್ತಸಾರ ಇಂಜೆಕ್ಷನ್‌ಗಳನ್ನು ಚರ್ಚಿಸಲಾಗಿತ್ತು. ಇಂತಹ ಇಂಜೆಕ್ಷನ್‌ಗಳ ಕ್ರಿಯಾಶೀಲ ಘಟಕಗಳು ವಸ್ತುತಃ ರಕ್ತರಸವಲ್ಲ, ಬದಲಿಗೆ ರೋಗಕ್ಕೆ ಪ್ರತಿಭಟನೆಯನ್ನು ಬೆಳೆಸಿರುವವರ ರಕ್ತರಸದಿಂದ ತೆಗೆಯಲ್ಪಡುವ ಪ್ರತಿವಿಷ ವಸ್ತುಗಳೇ. ಇಂತಹ ಇಂಜೆಕ್ಷನ್‌ಗಳನ್ನು ಶುದ್ಧ ಮನಸ್ಸಾಕ್ಷಿಯಿಂದ ತೆಗೆದುಕೊಳ್ಳಬಲ್ಲೆವೆಂದು ಅಭಿಪ್ರಯಿಸುವ ಕೆಲವು ಕ್ರೈಸ್ತರು, ಒಬ್ಬ ಗರ್ಭಿಣಿ ಸ್ತ್ರೀಯ ರಕ್ತದಿಂದ ಪ್ರತಿವಿಷವಸ್ತುವು ಆಕೆಯ ಗರ್ಭದಲ್ಲಿರುವ ಕೂಸಿನ ರಕ್ತಕ್ಕೆ ದಾಟಿಹೋಗುತ್ತದೆಂಬುದನ್ನು ಗಮನಿಸಿದ್ದಾರೆ. “ವಾಚಕರಿಂದ ಪ್ರಶ್ನೆಗಳು” ಇದನ್ನೂ ತುಸು ಆಲ್‌ಬ್ಯೂಮಿನ್ ಗರ್ಭಿಣಿ ಸ್ತ್ರೀಯಿಂದ ಅವಳ ಮಗುವಿಗೆ ದಾಟಿಹೋಗುವ ನಿಜತ್ವವನ್ನೂ ತಿಳಿಸಿತು.
ಅನೇಕರು ಇದನ್ನು ಗಮನಾರ್ಹವೆಂದು ಕಂಡುಕೊಳ್ಳುತ್ತಾರೆ, ಏಕೆಂದರೆ ರಕ್ತದಿಂದ ತಯಾರಿಸಿಲ್ಲದ ಕೆಲವು ರೋಗವಿಷಗಳಲ್ಲಿ, ತಯಾರಿಕೆಯಲ್ಲಿ ಘಟಕಾಂಶಗಳನ್ನು ಸ್ಥಿರೀಕರಿಸಲು ಬಳಸಿದ ಯಾ ಕೂಡಿಸಿದ ರಕ್ತರಸ ಆಲ್‌ಬ್ಯೂಮಿನ್‌ನ ಸಾಪೇಕ್ಷವಾಗಿ ಕೊಂಚ ಪ್ರಮಾಣವು ಸೇರಿರಬಹುದು. ಪ್ರಸ್ತುತ ಆಲ್‌ಬ್ಯೂಮಿನ್‌ನ ಕೊಂಚ ಪ್ರಮಾಣವನ್ನು ಕೃತಕ ಚೋದಕ ಸ್ರಾವ ಇಪಿಓ (ಇರಿತ್ರೋಪಾಯಿಇಟಿನ್) ಇಂಜೆಕ್ಷನ್‌ಗಳಲ್ಲಿಯೂ ಉಪಯೋಗಿಸಲಾಗುತ್ತದೆ. ಕೆಲವು ಮಂದಿ ಸಾಕ್ಷಿಗಳು ಇಪಿಓ ಇಂಜೆಕ್ಷನ್‌ಗಳನ್ನು ಸ್ವೀಕರಿಸಿದ್ದಾರೆ, ಏಕೆಂದರೆ ಅದು ಕೆಂಪುರಕ್ತ ಕಣಗಳ ಉತ್ಪಾದನೆಯನ್ನು ತರ್ವೆಪಡಿಸುವುದರಿಂದ ಇದು ರಕ್ತಪೂರಣ ಬೇಕಾಗಬಹುದೆಂಬ ವೈದ್ಯನ ಅನಿಸಿಕೆಯನ್ನು ಉಪಶಮನಗೊಳಿಸಬಹುದು.
ಔಷಧ ತಯಾರಿಕೆಯ ಕಂಪನಿಗಳು ಹೊಸ ತಯಾರಿಕೆಗಳನ್ನು ವಿಕಸಿಸುವುದರಿಂದ ಅಥವಾ ಈಗಿರುವ ಸಾಮಗ್ರಿಗಳ ಸೂತ್ರವನ್ನು ಬದಲಾಯಿಸುವುದರಿಂದ, ತುಲನಾತ್ಮಕವಾಗಿ ಕೊಂಚ ಪ್ರಮಾಣದಲ್ಲಿ ಆಲ್‌ಬ್ಯೂಮಿನ್ ಇರುವ ಬೇರೆ ವೈದ್ಯಕೀಯ ತಯಾರಿಕೆಗಳು ಬಳಕೆಗೆ ಬರಬಹುದು. ಹೀಗೆ ಆಲ್‌ಬ್ಯೂಮಿನ್ ರೋಗವಿಷದ ಭಾಗವಾಗಿದೆಯೋ ಅಥವಾ ವೈದ್ಯರು ಶಿಫಾರಸ್ಸು ಮಾಡುವ ಬೇರೆ ಇಂಜೆಕ್ಷನ್‌ನ ಭಾಗವಾಗಿದೆಯೋ ಎಂಬುದನ್ನು ಕ್ರೈಸ್ತರು ಪರಿಗಣಿಸಲು ಇಚ್ಫಿಸಬಹುದು. ಅವರಿಗೆ ಸಂದೇಹವಿರುವಲ್ಲಿ ಅಥವಾ ಆಲ್‌ಬ್ಯೂಮಿನ್ ಘಟಕಾಂಶವಾಗಿದೆಯೆಂದು ನಂಬಲು ಕಾರಣವಿರುವಲ್ಲಿ, ಅವರು ತಮ್ಮ ಡಾಕ್ಟರರನ್ನು ಕೇಳಬಹುದು.
ಮೇಲೆ ಗಮನಿಸಿರುವಂತೆ, ಕೊಂಚ ಪ್ರಮಾಣದ ಆಲ್‌ಬ್ಯೂಮಿನ್ ಸೇರಿರುವ ಇಂಜೆಕ್ಷನ್‌ಗಳನ್ನು ತೆಗೆದುಕೊಳ್ಳುವರೆ ಅನೇಕ ಸಾಕ್ಷಿಗಳು ಆಕ್ಷೇಪಣೆ ಮಾಡಿರುವುದಿಲ್ಲ. ಆದರೂ, ವೈಯಕ್ತಿಕ ನಿರ್ಣಯವನ್ನು ಮಾಡುವ ಮೊದಲಾಗಿ ಈ ವಿಷಯವನ್ನು ಹೆಚ್ಚು ಸಮಗ್ರವಾಗಿ ಅಭ್ಯಸಿಸಲಿಚ್ಫಿಸುವ ಯಾವನೂ ಜೂನ್ 1, 1990ರ ದ ವಾಚ್‌ಟವರ್ ನ “ವಾಚಕರಿಂದ ಪ್ರಶ್ನೆಗಳು” ನೀಡಿರುವ ಮಾಹಿತಿಯನ್ನು ಪುನರ್ವಿಮರ್ಶಿಸಬೇಕು.