ನಮ್ಮ ಸಂಗ್ರಹಾಲಯ
“ಕಾಲ್ಪೋರ್ಟರ್ ಸೇವೆ ಮಾಡ್ತಾ ಮಾಡ್ತಾ ನನಗದು ತುಂಬ ಇಷ್ಟವಾಯಿತು”
ಇಸವಿ 1886. ಅಮೆರಿಕದ ಪೆನ್ಸಿಲ್ವೇನಿಯದಲ್ಲಿದ್ದ ಬೈಬಲ್ ಹೌಸ್ನಿಂದ ಮಿಲೇನಿಯಲ್ ಡಾನ್, ಸಂಪುಟ 1ರ ನೂರು ಪ್ರತಿಗಳನ್ನು ಇಲ್ನಾಯ್ಸ್ನ ಚಿಕಾಗೋ ನಗರಕ್ಕೆ ರವಾನಿಸಲಾಯಿತು. ಈ ಹೊಸ ಸಂಪುಟವನ್ನು ಪುಸ್ತಕದಂಗಡಿಗಳ ಮೂಲಕ ವಿತರಿಸುವುದು ಚಾರ್ಲ್ಸ್ ಟೇಸ್ ರಸಲ್ರ ಅಭಿಲಾಷೆಯಾಗಿತ್ತು. ಅದರಂತೆಯೆ, ಧಾರ್ಮಿಕ ಪುಸ್ತಕಗಳನ್ನು ಮಾರುವ ಅಮೆರಿಕದ ದೊಡ್ಡ ಸಂಸ್ಥೆಯೊಂದು ಈ ಮಿಲೇನಿಯಲ್ ಡಾನ್ ಪುಸ್ತಕವನ್ನು ವಿತರಿಸಲು ಒಪ್ಪಿಕೊಂಡಿತು. ಆದರೆ ಎರಡು ವಾರಗಳ ನಂತರ ಅಷ್ಟೂ ಪುಸ್ತಕಗಳು ಬೈಬಲ್ ಹೌಸ್ಗೆ ವಾಪಸ್ಸಾದವು.
ಕಾರಣ? ಆ ಸಂಸ್ಥೆಗೆ ಬಂದ ಕ್ರೈಸ್ತಪ್ರಪಂಚದ ಹೆಸರಾಂತ ಬೋಧಕನು ತನ್ನ ಪುಸ್ತಕಗಳೊಂದಿಗೆ ಮಿಲೇನಿಯಲ್ ಡಾನ್ ಪುಸ್ತಕ ಇರುವುದನ್ನು ನೋಡಿ ಕಿಡಿಕಿಡಿಯಾದನು. ಈ ಪುಸ್ತಕಗಳನ್ನು ಮತ್ತೆ ಇಲ್ಲಿ ಕಂಡರೆ ತನ್ನ ಪುಸ್ತಕ ಮಾತ್ರವಲ್ಲ ತನಗೆ ಗೊತ್ತಿರುವ ಎಲ್ಲ ಬೋಧಕರ ಪುಸ್ತಕಗಳು ಬೇರೆ ಸಂಸ್ಥೆಯಲ್ಲಿ ಮಾರಾಟವಾಗುತ್ತವೆ ಎಂದು ಗುಡುಗಿದನು. ಬೇರೆ ದಾರಿಕಾಣದೆ ವಿತರಕನು ಡಾನ್ ಪುಸ್ತಕಗಳನ್ನು ಹಿಂದಿರುಗಿಸಿಬಿಟ್ಟನು. ವಾರ್ತಾಪತ್ರಿಕೆಗಳಲ್ಲಿ ಡಾನ್ ಪುಸ್ತಕದ ಕುರಿತು ಪ್ರಕಟಗೊಳ್ಳುತ್ತಿದ್ದ ಜಾಹೀರಾತು ಕೂಡ ರದ್ದಾಗುವಂತೆ ವಿರೋಧಿಗಳು ಮಾಡಿದರು. ಹಾಗಾದರೆ ಈ ಹೊಸ ಪುಸ್ತಕಗಳು ಸತ್ಯಾನ್ವೇಷಕರ ಕೈಗೆ ಹೇಗೆ ಸೇರಲಿದ್ದವು?
ಈ ಮುಂಚೆ ಅಂದರೆ 1881ರಲ್ಲಿ ಝಯನ್ಸ್ ವಾಚ್ ಟವರ್ ಸಂಸ್ಥೆ ಬೈಬಲ್ ಸಾಹಿತ್ಯವನ್ನು ವಿತರಿಸಲು ಪೂರ್ಣಸಮಯ ವ್ಯಯಿಸಬಲ್ಲ 1,000 ಸುವಾರ್ತಿಕರು ಬೇಕೆಂಬ ಕರೆ ನೀಡಿತ್ತು. ಅದಕ್ಕೆ ಓಗೊಟ್ಟ ಸುವಾರ್ತಿಕರನ್ನು ಕಾಲ್ಪೋರ್ಟರ್ ಆಗಿ ನೇಮಿಸಲಾಗಿತ್ತು.a ನಿರೀಕ್ಷಿಸಿದಷ್ಟು ಕಾಲ್ಪೋರ್ಟರ್ಗಳು ದೊರೆಯದಿದ್ದರೂ ನೇಮಿಸಲಾದ ಕೊಂಚ ಮಂದಿ ವಹಿಸಿದ ಪಾತ್ರ ಮಹತ್ವದ್ದಾಗಿತ್ತು. ಮುದ್ರಿತ ಸತ್ಯದ ಬೀಜಗಳನ್ನು ಅವರು ದೂರದೂರದ ಪ್ರದೇಶಗಳಲ್ಲಿ ಬಿತ್ತಿದ್ದರು. ಈ ಕಾಲ್ಪೋರ್ಟರರು ಡಾನ್ ಪುಸ್ತಕವನ್ನು ಸತ್ಯಾನ್ವೇಷಕರ ಕೈಗೆ ತಲುಪಿಸುವ ಯಶಸ್ವೀ ಸಾಧನವಾದರು. 1897ರಷ್ಟಕ್ಕೆ ಬರೋಬ್ಬರಿ ಹತ್ತು ಲಕ್ಷ ಪುಸ್ತಕಗಳನ್ನು ವಿತರಿಸಿದರು. ಅವರಲ್ಲಿ ಹೆಚ್ಚಿನವರು ಪುಸ್ತಕ ವಿತರಣೆ ಅಥವಾ ಕಾವಲಿನ ಬುರುಜು ಚಂದಾ ಹಣದಲ್ಲಿ ತಮಗೆ ದೊರೆಯುತ್ತಿದ್ದ ಚಿಕ್ಕ ಸಂಭಾವನೆಯಿಂದ ಜೀವನ ನಡೆಸುತ್ತಿದ್ದರು.
ಕಾಲ್ಪೋರ್ಟರರಾಗಿ ಧೈರ್ಯದಿಂದ ಸೇವೆ ಸಲ್ಲಿಸಲು ಯಾರೆಲ್ಲ ಮುಂದೆಬಂದರು? ಹದಿವಯಸ್ಸಿನವರು, ಇಳಿವಯಸ್ಸಿನವರು, ಅವಿವಾಹಿತರು, ಮಕ್ಕಳಿಲ್ಲದ ದಂಪತಿಗಳು ಹಾಗೂ ಎಷ್ಟೋ ಕುಟುಂಬಗಳು ತಮ್ಮನ್ನು ನೀಡಿಕೊಂಡರು. ಪೂರ್ಣ ಸಮಯದ ಕಾಲ್ಪೋರ್ಟರರು ಇಡೀ ದಿನವನ್ನು ಸಾರುವ ಕೆಲಸಕ್ಕಾಗಿ ಅರ್ಪಿಸಿಕೊಂಡರೆ ಉಪ ಕಾಲ್ಪೋರ್ಟರರು ದಿನದಲ್ಲಿ ಒಂದೆರಡು ತಾಸು ವ್ಯಯಿಸುತ್ತಿದ್ದರು. ಎಲ್ಲರೂ ಈ ಸೇವೆಗೆ ನೀಡಿಕೊಳ್ಳುವಂಥ ಪರಿಸ್ಥಿತಿಯಲ್ಲಿ ಇರಲಿಲ್ಲ. ಕೆಲವರಿಗೆ ಆರೋಗ್ಯ ಸಮಸ್ಯೆಯಿತ್ತು. 1906ರಲ್ಲಾದ ಅಧಿವೇಶನದಲ್ಲಿ ಈ ಸೇವೆಗೆ ಮತ್ತಷ್ಟು ಉತ್ತೇಜನ ನೀಡಲಾಯಿತು. ಕಾಲ್ಪೋರ್ಟರ್ ಸೇವೆ ಮಾಡಲು ವಿದ್ಯಾವಂತರಾಗಿರಬೇಕಿಲ್ಲ, ನುರಿತವರಾಗಿರಬೇಕಿಲ್ಲ, ದೇವದೂತರಂತೆ ಮಾತಾಡುವ ಸಾಮರ್ಥ್ಯ ಬೇಕಿಲ್ಲ ಎಂದು ತಿಳಿಸಲಾಯಿತು.
ಒಳ್ಳೇ ಪ್ರತಿಸ್ಪಂದನೆ ದೊರೆಯಿತು. ಎಲ್ಲ ಕಡೆಗಳಲ್ಲಿ ಸಾಧಾರಣ ಜನರು ಅಸಾಧಾರಣ ಸೇವೆ ಮಾಡಿದರು. ಒಬ್ಬ ಸಹೋದರರು ಏಳು ವರ್ಷಗಳಲ್ಲಿ ಸುಮಾರು 15,000 ಪ್ರತಿಗಳನ್ನು ವಿತರಿಸಿದರು! ತಮ್ಮ ಸೇವೆಯ ಬಗ್ಗೆ ಅವರ ಮನೋಭಾವ ಹೀಗಿತ್ತು: “ನಾನು ಪುಸ್ತಕ ಮಾರುವ ಉದ್ದೇಶದಿಂದಲ್ಲ, ಯೆಹೋವ ದೇವರ ಕುರಿತು ಮತ್ತು ಸತ್ಯದ ಕುರಿತು ಸಾಕ್ಷಿನೀಡಲು ಸೇವೆ ಮಾಡಿದೆ.” ಕಾಲ್ಪೋರ್ಟರರು ಸೇವೆ ಮಾಡಿದ ಕಡೆಯಲ್ಲೆಲ್ಲ ಸತ್ಯದ ಬೀಜ ಬೇರು ಬಿಟ್ಟು ಬೈಬಲ್ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿತು.
ಪಾದ್ರಿಗಳು ಕಾಲ್ಪೋರ್ಟರರನ್ನು ಚಿಲ್ಲರೆ ವ್ಯಾಪಾರಿಗಳೆಂದು ಹೀಯಾಳಿಸುತ್ತಿದ್ದರು. “ಹೆಚ್ಚಿನ ಜನರು [ಇವರನ್ನು] ಕರ್ತನ ನಿಜ ಪ್ರತಿನಿಧಿಗಳೆಂದು ಗುರುತಿಸಲಿಲ್ಲ. ಅವರ ದೀನತೆ ಮತ್ತು ಸ್ವತ್ಯಾಗವನ್ನು ಕರ್ತನು ಗೌರವಿಸುತ್ತಾನೆ ಎನ್ನುವುದನ್ನು ಅವರು ಮನಗಾಣಲಿಲ್ಲ” ಎಂದು 1892ರ ವಾಚ್ ಟವರ್ ಹೇಳಿತು. ಒಬ್ಬಾಕೆ ಕಾಲ್ಪೋರ್ಟರ್ ಹೇಳಿದಂತೆ, ಕಾಲ್ಪೋರ್ಟರರ ಜೀವನ “ಸುಖದ ಸುಪ್ಪತ್ತಿಗೆಯಾಗಿರಲಿಲ್ಲ.” ಬೇರೆ ಬೇರೆ ಕಡೆ ಪ್ರಯಾಣಿಸಲು ಅವರಿಗಿದ್ದದ್ದು ಗಟ್ಟಿಮುಟ್ಟಾದ ಶೂ ಮತ್ತು ಸೈಕಲ್ ಮಾತ್ರ. ಕೆಲವೊಮ್ಮೆ ಹಣವಿಲ್ಲದಿದ್ದಾಗ ಪುಸ್ತಕದೊಂದಿಗೆ ಆಹಾರ ಪದಾರ್ಥಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ದೂರದ ಸ್ಥಳಗಳಲ್ಲಿ ಸೇವೆ ಮಾಡುವಾಗ ಬಾಡಿಗೆ ಮನೆಯಲ್ಲಿ ಇಲ್ಲವೆ ಟೆಂಟ್ನಲ್ಲಿ ಉಳುಕೊಳ್ಳುತ್ತಿದ್ದರು. ಸವಾಲುಗಳ ಮಧ್ಯೆ ದಿನಪೂರ್ತಿ ಸೇವೆ ಮಾಡಿ ದಣಿದರೂ ಮುಖದಲ್ಲಿ ಮಂದಹಾಸ ಇರುತ್ತಿತ್ತು. ಕಾಲಾನಂತರ ಕುದುರೆಬಂಡಿಯನ್ನೇ ಮನೆಯನ್ನಾಗಿ ಪರಿವರ್ತಿಸಿ ಉಪಯೋಗಿಸತೊಡಗಿದರು. ಇದನ್ನು ಕಾಲ್ಪೋರ್ಟರ್ ವ್ಯಾಗನ್b ಎಂದು ಕರೆಯುತ್ತಿದ್ದರು. ಇದು ಅವರ ಪ್ರಯಾಣದ ಸಮಯ ಖರ್ಚು ಎಲ್ಲವನ್ನೂ ಉಳಿಸಿತು.
1893ರಲ್ಲಿ ಚಿಕಾಗೋದಲ್ಲಿ ನಡೆದ ಅಧಿವೇಶನದಲ್ಲಿ ಕಾಲ್ಪೋರ್ಟರರಿಗೆಂದೇ ವಿಶೇಷ ಕೂಟವನ್ನು ನಡೆಸಲಾಯಿತು. ಈ ಕೂಟದಲ್ಲಿ ಕಾಲ್ಪೋರ್ಟರರು ತಮ್ಮ ಅನುಭವ, ಸಾರುವ ವಿಧಾನ, ಪರಿಣಾಮಕಾರಿ ಸಲಹೆಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು. ಒಮ್ಮೆ ಸಹೋದರ ರಸಲ್ ಈ ಶ್ರಮಭರಿತ ಸುವಾರ್ತಿಕರಿಗೆ ಬೆಳಗ್ಗಿನ ತಿಂಡಿ ಹೊಟ್ಟೆ ತುಂಬ ತಿನ್ನುವಂತೆ, ಸ್ವಲ್ಪ ಸಮಯದ ನಂತರ ಒಂದು ಲೋಟ ಹಾಲು, ಸುಡುಬಿಸಿಲಿದ್ದಲ್ಲಿ ಐಸ್ಕ್ರೀಮ್-ಸೋಡಾ ಸೇವಿಸುವಂತೆ ಪ್ರೋತ್ಸಾಹಿಸಿದರು.
ಸಂಗಡಿಗರಿಲ್ಲದ ಕಾಲ್ಪೋರ್ಟರರು ಅಧಿವೇಶನದಲ್ಲಿ ಹಳದಿ ರಿಬ್ಬನ್ ಧರಿಸಿರುತ್ತಿದ್ದರು. ಹೀಗೆ ಹೊಸ ಕಾಲ್ಪೋರ್ಟರರು ಅನುಭವಿ ಕಾಲ್ಪೋರ್ಟರರ ಜೊತೆಸೇರುತ್ತಿದ್ದರು. ಇಂತಹ ತರಬೇತಿ ಹೊಸಬರಿಗೆ ಅವಶ್ಯವಾಗಿತ್ತು. ಒಮ್ಮೆ ಏನಾಯಿತೆಂದರೆ ಹೊಸ ಕಾಲ್ಪೋರ್ಟರ್ ಸಹೋದರಿಯೊಬ್ಬರು ಹೆದರಿಕೆಯಿಂದ ದಡಬಡಿಸಿ ಒಬ್ಬ ಸ್ತ್ರೀಗೆ ಪುಸ್ತಕ ತೋರಿಸುತ್ತಾ “ಈ ಪುಸ್ತಕ ನಿಮಗೆ ಬೇಡ ಅಲ್ವಾ?” ಎಂದು ಕೇಳಿದರು. ಸಂತೋಷದ ವಿಷಯವೆಂದರೆ ಆ ಸ್ತ್ರೀ ಪುಸ್ತಕವನ್ನು ತೆಗೆದುಕೊಂಡರು, ಸತ್ಯಕ್ಕೂ ಬಂದರು.
ಕಾಲ್ಪೋರ್ಟರ್ ಸೇವೆಯನ್ನು ಬೆಂಬಲಿಸಲು ಬಯಸಿದ ಸಹೋದರರೊಬ್ಬರು “ನಾನು ಲಾಭದಾಯಕ ಉದ್ದಿಮೆಯಲ್ಲೇ ಇದ್ದು ಸುವಾರ್ತೆ ಕೆಲಸಕ್ಕಾಗಿ ಪ್ರತಿವರ್ಷ ಒಂದು ಸಾವಿರ ಡಾಲರನ್ನು ದಾನ ಕೊಡಲಾ? ಅಥವಾ ನಾನೇ ಕಾಲ್ಪೋರ್ಟರ್ ಆಗಲಾ?” ಎಂದು ಕೇಳಿದರು. ಕರ್ತನು ಎರಡನ್ನೂ ಮೆಚ್ಚುತ್ತಾನೆ. ಆದರೆ ತಮ್ಮ ಸಮಯವನ್ನು ನೇರವಾಗಿ ದೇವರ ಸೇವೆಗೆ ಕೊಡುವುದು ಹೆಚ್ಚಿನ ಆಶೀರ್ವಾದಗಳನ್ನು ತರುತ್ತದೆಂದು ಅವರಿಗೆ ಹೇಳಲಾಯಿತು. ಕಾಲ್ಪೋರ್ಟರ್ ಸೇವೆಯ ಬಗ್ಗೆ ಸಹೋದರಿ ಮೇರಿ ಹೈಂಡ್ಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ “ಹೆಚ್ಚು ಜನರಿಗೆ ಒಳ್ಳೇದನ್ನು ಮಾಡಲು ಇದಕ್ಕಿಂತ ಉತ್ತಮ ಮಾರ್ಗವಿಲ್ಲ” ಎಂದರು. ನಾಚಿಕೆ ಸ್ವಭಾವದ ಸಹೋದರಿ ಆಲ್ಬೆರ್ಟ ಕ್ರಾಸ್ಬಿ ಹೀಗಂದರು “ಕಾಲ್ಪೋರ್ಟರ್ ಸೇವೆ ಮಾಡ್ತಾ ಮಾಡ್ತಾ ನನಗದು ತುಂಬ ಇಷ್ಟವಾಯಿತು.”
ಆ ಹುರುಪಿನ ಕಾಲ್ಪೋರ್ಟರರು ದಾಟಿಸಿದ ಆಧ್ಯಾತ್ಮಿಕ ಪರಂಪರೆಯನ್ನು ಇಂದಿಗೂ ಅವರ ಅನೇಕ ಮಕ್ಕಳು, ಮೊಮ್ಮಕ್ಕಳು, ಆಧ್ಯಾತ್ಮಿಕ ಮಕ್ಕಳು ಕಾಪಾಡಿಕೊಂಡಿದ್ದಾರೆ. ನಿಮ್ಮ ಕುಟುಂಬದಲ್ಲಿ ಇದುವರೆಗೂ ಕಾಲ್ಪೋರ್ಟರ್ ಅಥವಾ ಪಯನೀಯರರಾಗಿ ಯಾರೂ ಸೇವೆಮಾಡಿರದಿದ್ದಲ್ಲಿ, ನೀವೇ ಯಾಕೆ ಈಗ ಆ ಪರಂಪರೆಯನ್ನು ಆರಂಭಿಸಬಾರದು? ಈ ಅಮೂಲ್ಯ ಪೂರ್ಣಸಮಯದ ಸೇವೆ ಮಾಡುತ್ತಾ ಮಾಡುತ್ತಾ ನಿಮಗೂ ಅದು ತುಂಬ ಇಷ್ಟವಾಗುವುದು.
[ಪಾದಟಿಪ್ಪಣಿಗಳು]
a 1931ರ ನಂತರ “ಕಾಲ್ಪೋರ್ಟರ್” ಎಂಬ ಹೆಸರನ್ನು “ಪಯನೀಯರ್” ಎಂದು ಬದಲಾಯಿಸಲಾಯಿತು.
b ಇದರ ಕುರಿತು ಹೆಚ್ಚಿನ ಮಾಹಿತಿ ಮುಂದಿನ ಸಂಚಿಕೆಯೊಂದರಲ್ಲಿ ಬರಲಿದೆ.
[ಪುಟ 32ರಲ್ಲಿರುವ ಸಂಕ್ಷಿಪ್ತ ವಿವರಣೆ]
ಕಾಲ್ಪೋರ್ಟರ್ ಸೇವೆ ಮಾಡಲು ವಿದ್ಯಾವಂತರಾಗಿರಬೇಕಿಲ್ಲ, ನುರಿತವರಾಗಿರಬೇಕಿಲ್ಲ, ದೇವದೂತರಂತೆ ಮಾತಾಡುವ ಸಾಮರ್ಥ್ಯ ಬೇಕಿಲ್ಲ
[ಪುಟ 31ರಲ್ಲಿರುವ ಚಿತ್ರ]
ಸುಮಾರು 1930ರಲ್ಲಿ ಘಾನದಲ್ಲಿ ಕಾಲ್ಪೋರ್ಟರ್ ಆಗಿದ್ದ ಆ. ಡಬ್ಲ್ಯೂ. ಆಸೇ
[ಪುಟ 32ರಲ್ಲಿರುವ ಚಿತ್ರಗಳು]
ಒಂದನೇ ಚಿತ್ರ: 1918ರಷ್ಟಕ್ಕೆ ಇಂಗ್ಲೆಂಡ್ನಲ್ಲಿ ಕಾಲ್ಪೋರ್ಟರ್ ಆಗಿದ್ದ ಈಡಿತ್ ಕೀನ್ ಮತ್ತು ಗರ್ಟ್ರೂಡ್ ಮೊರಿಸ್ ಎರಡನೇ ಚಿತ್ರ: ಅಮೆರಿಕದಲ್ಲಿ ತಾವು ವಿತರಿಸಿದ ಪುಸ್ತಕಗಳ ಖಾಲಿ ಬಾಕ್ಸ್ಗಳೊಂದಿಗೆ ಸ್ಟ್ಯಾನ್ಲಿ ಕಾಸಬೂಮ್ ಮತ್ತು ಹೆನ್ರಿ ನಾನ್ಕೀಸ್.