ಅಪರಿಚಿತರಿಗೆ ದಯೆ ತೋರಿಸುವುದನ್ನು ಮರೆಯಬೇಡಿ
“ಅತಿಥಿಸತ್ಕಾರಮಾಡುವುದನ್ನು [ಅಂದರೆ, ಅಪರಿಚಿತರಿಗೆ ದಯೆ ತೋರಿಸುವುದನ್ನು] ಮರೆಯಬೇಡಿ.”—ಇಬ್ರಿ. 13:2.
1, 2. (ಎ) ಬೇರೆ ದೇಶ, ಹಿನ್ನೆಲೆಯಿಂದ ಬಂದವರು ಎದುರಿಸುವಂಥ ಸವಾಲುಗಳೇನು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಸತ್ಕ್ರೈಸ್ತರಿಗೆ ಬೈಬಲ್ ಏನೆಂದು ಹೇಳುತ್ತದೆ? (ಸಿ) ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?
ಇದು ನಡೆದು ಸುಮಾರು 30 ವರ್ಷಗಳೇ ಆಯ್ತು. ಓಸೇ[1] ಎಂಬವನು ತನ್ನ ದೇಶವಾದ ಘಾನವನ್ನು ಬಿಟ್ಟು ಯೂರೋಪಿಗೆ ಬಂದಿಳಿದ. ಆಗಿನ್ನೂ ಅವನು ಯೆಹೋವನ ಸಾಕ್ಷಿಯಾಗಿರಲಿಲ್ಲ. ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ ಅವನು ಹೇಳುವುದು: “ಅಲ್ಲಿದ್ದ ಜನರು ನನ್ನ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಅಂತ ನನ್ಗೆ ಬೇಗ ಗೊತ್ತಾಯ್ತು. ಅಲ್ಲಿನ ಚಳಿ ನನ್ನನ್ನ ನಡುಗಿಸಿಬಿಡ್ತು. ಜೀವನದಲ್ಲೇ ಮೊದ್ಲ ಸಲ ಅಂಥ ಚಳಿಯನ್ನ ನಾನು ಅನುಭವಿಸಿದ್ದು. ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಸಂಕಟದಿಂದ ನನಗೆ ಅಳುನೇ ಬಂತು.” ಓಸೇಗೆ ಆ ಊರಿನ ಭಾಷೆ ಬರದಿದ್ದ ಕಾರಣ ಒಂದು ಒಳ್ಳೇ ಕೆಲಸ ಹುಡುಕಿಕೊಳ್ಳಲು ವರ್ಷವೇ ಹಿಡಿಯಿತು. ಕುಟುಂಬದಿಂದ ದೂರ ಇದ್ದಿದ್ದರಿಂದ ಮನೆ ನೆನಪು, ಒಂಟಿತನ ಅವನನ್ನು ತುಂಬ ಕಾಡುತ್ತಿತ್ತು.
2 ಯೋಚಿಸಿ, ಓಸೇ ಜಾಗದಲ್ಲಿ ನೀವಿದ್ದಿದ್ದರೆ ಜನರು ನಿಮ್ಮನ್ನು ಹೇಗೆ ಉಪಚರಿಸಬೇಕಿತ್ತು ಅಂತ ನೀವು ಇಷ್ಟಪಡ್ತಿದ್ರಿ? ನೀವು ರಾಜ್ಯ ಸಭಾಗೃಹಕ್ಕೆ ಹೋದಾಗ ನಿಮ್ಮ ದೇಶ, ಬಣ್ಣ ಯಾವುದೇ ಆಗಿರಲಿ ಅಲ್ಲಿನ ಜನರು ನಿಮ್ಮನ್ನು ಪ್ರೀತಿಯಿಂದ ಸ್ವಾಗತಿಸಬೇಕು ಅಂತ ಖಂಡಿತ ಬಯಸುತ್ತೀರ. ಅದಕ್ಕೇ ಬೈಬಲ್ “ಅತಿಥಿಸತ್ಕಾರಮಾಡುವುದನ್ನು [ಅಂದರೆ, ಅಪರಿಚಿತರಿಗೆ ದಯೆ ತೋರಿಸುವುದನ್ನು] ಮರೆಯಬೇಡಿ” ಎಂದು ಸತ್ಕ್ರೈಸ್ತರಿಗೆ ಹೇಳುತ್ತದೆ. (ಇಬ್ರಿ. 13:2) ಹಾಗಾಗಿ ಈ ಮುಂದಿನ ಪ್ರಶ್ನೆಗಳನ್ನು ಪರಿಗಣಿಸೋಣ: ಅಪರಿಚಿತರ ಕಡೆಗೆ ಯೆಹೋವನಿಗೆ ಯಾವ ಮನೋಭಾವವಿದೆ? ಅಪರಿಚಿತರ ಕಡೆಗೆ ನಮಗಿರುವ ಮನೋಭಾವವನ್ನು ಹೊಂದಿಸಿಕೊಳ್ಳಬೇಕಾ? ಬೇರೆ ದೇಶ, ಹಿನ್ನೆಲೆಯಿಂದ ನಮ್ಮ ಸಭೆಗೆ ಯಾರಾದರೂ ಬಂದಾಗ ಅವರಿಗೆ ಒಂಟಿತನ ಕಾಡದಂತೆ ಹೇಗೆ ನೆರವಾಗಬಹುದು?
ಅಪರಿಚಿತರ ಕಡೆಗೆ ಯೆಹೋವನಿಗಿರುವ ನೋಟ
3, 4. ವಿಮೋಚನಕಾಂಡ 23:9ರ ಪ್ರಕಾರ ಅನ್ಯಜನರನ್ನು ಹೇಗೆ ಉಪಚರಿಸಬೇಕೆಂದು ದೇವರು ಬಯಸಿದನು? ಏಕೆ?
3 ಐಗುಪ್ತದ ಸೆರೆಯಿಂದ ಯೆಹೋವನು ತನ್ನ ಜನರನ್ನು ಬಿಡಿಸಿ ಹಲವಾರು ನಿಯಮಗಳನ್ನು ಕೊಟ್ಟನು. ಅವುಗಳಲ್ಲಿ ಐಗುಪ್ತವನ್ನು ಬಿಟ್ಟುಬಂದಿದ್ದ ಅನ್ಯಜನರನ್ನು ದಯೆಯಿಂದ ಉಪಚರಿಸಬೇಕೆನ್ನುವ ನಿಯಮಗಳೂ ಇದ್ದವು. (ವಿಮೋ. 12:38, 49; 22:21) ಪರದೇಶಿಯರಿಗೆ ಬೇರೆ ದೇಶದಲ್ಲಿ ಜೀವನ ಅಷ್ಟು ಸುಲಭವಾಗಿರುವುದಿಲ್ಲ. ಹಾಗಾಗಿ ಯೆಹೋವನು ಪ್ರೀತಿಯಿಂದ ಅವರ ಕಾಳಜಿ ವಹಿಸಿದನು. ಉದಾಹರಣೆಗೆ, ಪೈರುಗಳನ್ನು ಹಕ್ಕಲಾಯುವಂತೆ ಅವರಿಗೆ ಅನುಮತಿ ಕೊಟ್ಟನು.—ಯಾಜ. 19:9, 10.
4 ಯೆಹೋವನು ಇಸ್ರಾಯೇಲ್ಯರಿಗೆ ಅನ್ಯಜನರನ್ನು ಗೌರವಿಸಿ ಎಂದಷ್ಟೇ ಹೇಳದೆ, ಒಂದು ಕಾಲದಲ್ಲಿ ತಾವೂ ಪರದೇಶಿಯರಾಗಿದ್ದೇವು ಎನ್ನುವುದನ್ನು ನೆನಪಿಸಿಕೊಳ್ಳುವಂತೆ ಹೇಳಿದನು. (ವಿಮೋಚನಕಾಂಡ 23:9 ಓದಿ.) ಇಸ್ರಾಯೇಲ್ಯರು ಐಗುಪ್ತದಲ್ಲಿ ದಾಸತ್ವಕ್ಕೆ ಒಳಗಾಗುವ ಮುಂಚೆಯೇ, ಐಗುಪ್ತ್ಯರು ಅವರನ್ನು ದ್ವೇಷಿಸುತ್ತಿದ್ದರು. ಏಕೆಂದರೆ ಇಸ್ರಾಯೇಲ್ಯರು ಅವರಿಗಿಂತ ಬಹಳಷ್ಟು ಭಿನ್ನರಾಗಿದ್ದರು. (ಆದಿ. 43:32; 46:34; ವಿಮೋ. 1:11-14) ಇಸ್ರಾಯೇಲ್ಯರು ಪರದೇಶಿಯರಾಗಿದ್ದಾಗ ಅವರ ಜೀವನ ಮುಳ್ಳಿನ ಹಾದಿಯಾಗಿತ್ತು. ಅದನ್ನು ಅವರು ಮರೆಯದೆ, ತಮ್ಮ ಮಧ್ಯೆಯಿದ್ದ ಅನ್ಯಜನರಿಗೆ ದಯೆ ತೋರಿಸಬೇಕೆಂದು ಯೆಹೋವನು ಬಯಸಿದನು.—ಯಾಜ. 19:33, 34.
5. ಯೆಹೋವನಂತೆ ನಾವೂ ಪರದೇಶಿಯರಿಗೆ ದಯೆ ತೋರಿಸಲು ಯಾವುದು ಸಹಾಯಮಾಡುತ್ತದೆ?
5 ಯೆಹೋವನು ಬದಲಾಗಿಲ್ಲ. ಹಾಗಾಗಿ ಆತನು ಪರದೇಶಿಯರಿಗೆ ಈಗಲೂ ದಯೆ ತೋರಿಸುತ್ತಾನೆಂದು ನಾವು ಮರೆಯಬಾರದು. (ಧರ್ಮೋ. 10:17-19; ಮಲಾ. 3:5, 6) ಬೇರೆ ದೇಶದಿಂದ ಬಂದವರು ಯಾವ ಸವಾಲುಗಳನ್ನು ಎದುರಿಸುತ್ತಾರೆಂದು ಯೋಚಿಸಿ. ಉದಾಹರಣೆಗೆ, ಹೊಸ ಭಾಷೆ ಕಲಿಯಲು ಅವರಿಗೆ ಕಷ್ಟವಾಗಬಹುದು ಅಥವಾ ಜನರು ಅವರೊಂದಿಗೆ ಸರಿಯಾಗಿ ನಡೆದುಕೊಳ್ಳದಿರಬಹುದು. ಹಾಗಾಗಿ ನಾವು ಅವರಿಗೆ ಸಹಾಯ ಹಸ್ತ ನೀಡೋಣ, ದಯೆ ತೋರಿಸೋಣ.—1 ಪೇತ್ರ 3:8.
ಅಪರಿಚಿತರ ಕಡೆಗೆ ನಮಗಿರುವ ಮನೋಭಾವವನ್ನು ಹೊಂದಿಸಿಕೊಳ್ಳಬೇಕಾ?
6, 7. ಅನ್ಯಜನರ ಬಗ್ಗೆ ಇದ್ದ ಪೂರ್ವಗ್ರಹದಿಂದ ಒಂದನೇ ಶತಮಾನದ ಕ್ರೈಸ್ತರು ಹೊರಬಂದಿದ್ದರೆಂದು ಹೇಗೆ ಗೊತ್ತಾಗುತ್ತದೆ?
6 ಒಂದನೇ ಶತಮಾನದ ಯೆಹೂದಿಗಳಲ್ಲಿ ಅನ್ಯಜನರ ಬಗ್ಗೆ ಪೂರ್ವಗ್ರಹ ಸಾಮಾನ್ಯವಾಗಿತ್ತು. ಆದರೆ ಆಗಿನ ಕ್ರೈಸ್ತರು ಅದರಿಂದ ಹೊರಬಂದರು. ಕ್ರಿ.ಶ. 33ರ ಪಂಚಾಶತ್ತಮದಲ್ಲಿ ಯೆರೂಸಲೇಮಿನಲ್ಲಿದ್ದ ಯೆಹೂದಿ ಕ್ರೈಸ್ತರು ಬೇರೆ ದೇಶಗಳವರಿಗೆ ಅಥಿತಿಸತ್ಕಾರ ತೋರಿಸಿದರು ಮತ್ತು ಪ್ರೀತಿಯಿಂದ ಅವರ ಕಾಳಜಿ ವಹಿಸಿದರು. (ಅ. ಕಾ. 2:5, 44-47) “ಅತಿಥಿಸತ್ಕಾರ” ತೋರಿಸುವುದೆಂದರೆ “ಅಪರಿಚಿತರಿಗೆ ದಯೆ ತೋರಿಸುವುದು” ಅಂತ ಯೆಹೂದಿ ಕ್ರೈಸ್ತರು ಅರ್ಥ ಮಾಡಿಕೊಂಡಿದ್ದರು.
7 ಆದರೆ ಅದೇ ಸಮಯದಲ್ಲಿ ಗ್ರೀಕ್ ಭಾಷೆಯನ್ನು ಆಡುತ್ತಿದ್ದ ಯೆಹೂದಿಗಳು ತಮ್ಮಲ್ಲಿದ್ದ ವಿಧವೆಯರನ್ನು ಸರಿಯಾಗಿ ಉಪಚರಿಸುತ್ತಿಲ್ಲ ಎಂದು ದೂರಿದರು. (ಅ. ಕಾ. 6:1) ಈ ಸಮಸ್ಯೆಯನ್ನು ಸರಿಪಡಿಸಲು ಅಪೊಸ್ತಲರು ಏಳು ಮಂದಿಯನ್ನು ಆರಿಸಿ, ಯಾರಿಗೂ ಅನ್ಯಾಯವಾಗದಂತೆ ನೋಡಿಕೊಂಡರು. ಆ ಕೆಲಸಕ್ಕೆ ಗ್ರೀಕ್ ಹೆಸರಿದ್ದವರನ್ನೇ ಆರಿಸಿಕೊಂಡದ್ದರಿಂದ ವಿಧವೆಯರು ನಿರಾಳವಾಗಿದ್ದರು.—ಅ. ಕಾ. 6:2-6.
8, 9. (ಎ) ನಮ್ಮಲ್ಲಿ ಪೂರ್ವಗ್ರಹವಿದೆಯಾ ಎಂದು ತಿಳಿಯಲು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು? (ಬಿ) ಯಾವುದನ್ನು ನಾವು ಸಂಪೂರ್ಣವಾಗಿ ನಮ್ಮ ಹೃದಯದಿಂದ ಕಿತ್ತೆಸೆಯಬೇಕು? (1 ಪೇತ್ರ 1:22)
8 ತಿಳಿದೋ, ತಿಳಿಯದೆಯೋ ನಾವೆಲ್ಲರೂ ನಮ್ಮನಮ್ಮ ಸಂಸ್ಕೃತಿಗಳಿಂದ ಪ್ರಭಾವಿಸಲ್ಪಟ್ಟಿರುತ್ತೇವೆ. (ರೋಮ. 12:2) ಅಲ್ಲದೆ ಬೇರೆ ಹಿನ್ನೆಲೆ, ಜನಾಂಗ, ದೇಶ ಅಥವಾ ಬಣ್ಣದವರ ಬಗ್ಗೆ ಅಕ್ಕಪಕ್ಕದವರು, ಜೊತೆಕೆಲಸದವರು, ಸಹಪಾಠಿಗಳು ತಪ್ಪಾಗಿ ಮಾತಾಡುವುದನ್ನು ಕೇಳಿಸಿಕೊಂಡಿರುತ್ತೇವೆ. ಇಂಥ ನಕಾರಾತ್ಮಕ ವಿಷಯಗಳಿಂದ ನಾವು ಪ್ರಭಾವಿತರಾಗಿದ್ದೇವಾ? ಯಾರಾದರೂ ನಮ್ಮ ದೇಶ ಸಂಸ್ಕೃತಿಯ ಬಗ್ಗೆ ತಮಾಷೆ ಮಾಡಿದರೆ ಹೇಗೆ ಪ್ರತಿಕ್ರಿಯಿಸುತ್ತೇವೆ?
9 ಯೆಹೂದಿಗಳಲ್ಲದ ಜನರನ್ನು ಪೇತ್ರನು ಕೀಳಾಗಿ ನೋಡುತ್ತಿದ್ದ ಸಮಯವಿತ್ತು. ಆದರೆ ನಿಧಾನವಾಗಿ ಅವನು ಅದರಿಂದ ಹೊರಬಂದನು. (ಅ. ಕಾ. 10:28, 34, 35; ಗಲಾ. 2:11-14) ನಮ್ಮಲ್ಲೂ ಬೇರೆಯವರ ಬಗ್ಗೆ ಪೂರ್ವಗ್ರಹವಿದ್ದರೆ ಅಥವಾ ನಮ್ಮ ಜಾತಿ, ಭಾಷೆಯ ಮೇಲೆ ಅತಿಯಾದ ಅಭಿಮಾನವಿದ್ದರೆ ಅದನ್ನು ಸಂಪೂರ್ಣವಾಗಿ ನಮ್ಮ ಹೃದಯದಿಂದ ಕಿತ್ತೆಸೆಯಬೇಕು. (1 ಪೇತ್ರ 1:22 ಓದಿ.) ಹೇಗೆ? ನಾವು ಯಾವುದೇ ದೇಶಕ್ಕೆ ಸೇರಿದವರಾಗಿರಲಿ, ನಾವೆಲ್ಲರೂ ಅಪರಿಪೂರ್ಣರಾಗಿರುವುದರಿಂದ ನಮ್ಮಲ್ಲಿ ಯಾರೂ ರಕ್ಷಣೆಗೆ ಅರ್ಹರಲ್ಲ ಎನ್ನುವುದನ್ನು ಮರೆಯಬಾರದು. (ರೋಮ. 3:9, 10, 21-24) ಬೇರೆಯವರಿಗಿಂತ ಶ್ರೇಷ್ಠರೆಂದು ಭಾವಿಸಲು ನಮಗೆ ಯಾವುದೇ ಕಾರಣಗಳಿಲ್ಲ. (1 ಕೊರಿಂ. 4:7) ಅಪೊಸ್ತಲ ಪೌಲನಂತೆ ನಾವೂ ಯೋಚಿಸಬೇಕು. ಅವನು ಕ್ರೈಸ್ತ ಹಿಂಬಾಲಕರಿಗೆ ‘ಇನ್ನು ಮುಂದೆ ನೀವು ಅಪರಿಚಿತರೂ ಪರದೇಶದ ನಿವಾಸಿಗಳೂ ಆಗಿರದೆ ದೇವರ ಮನೆವಾರ್ತೆಯ ಸದಸ್ಯರಾಗಿದ್ದೀರಿ’ ಎಂದನು. (ಎಫೆ. 2:19) ಅಪರಿಚಿತರನ್ನು ಕೀಳಾಗಿ ನೋಡದಿರಲು ಕಠಿಣ ಪ್ರಯತ್ನ ಮಾಡಬೇಕು. ಆಗ ನಮಗೆ ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ಸಾಧ್ಯವಾಗುತ್ತದೆ.—ಕೊಲೊ. 3:10, 11.
ಅಪರಿಚಿತರಿಗೆ ದಯೆ ತೋರಿಸುವುದು ಹೇಗೆ?
10, 11. ಬೋವಜನು ಯೆಹೋವನನ್ನು ಹೇಗೆ ಅನುಕರಿಸಿದನು?
10 ಬೋವಜನು ಯೆಹೋವನನ್ನು ಅನುಕರಿಸಿದನು. ಹೇಗೆ? ಕೊಯ್ಲಿನ ಸಮಯದಲ್ಲಿ ಬೋವಜನು ತನ್ನ ಹೊಲಕ್ಕೆ ಹೋದಾಗ ರೂತಳನ್ನು ಕಂಡನು. ಆಕೆ ಮೋವಾಬ್ ದೇಶದವಳು. ಅವಳು ಶ್ರಮಪಟ್ಟು ಹೊಲಗಳಲ್ಲಿ ಹಕ್ಕಲಾಯುತ್ತಿದ್ದಳು. ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಹೊಲಗಳಲ್ಲಿ ಹಕ್ಕಲಾಯುವ ಹಕ್ಕು ರೂತಳಿಗಿತ್ತು. ಆದರೂ ಅಪ್ಪಣೆ ಪಡೆದು ಅವನ ಹೊಲಗಳಲ್ಲಿ ಹಕ್ಕಲಾಯುತ್ತಿದ್ದಾಳೆಂದು ಕೇಳಿ ಬೋವಜನಿಗೆ ಸಂತೋಷವಾಯಿತು. ಆಗ ಅವನು ಕಟ್ಟುಗಳಿಂದ ಸಹ ತೆನೆಗಳನ್ನು ತೆಗೆದುಕೊಳ್ಳುವಂತೆ ರೂತಳಿಗೆ ಅನುಮತಿಕೊಟ್ಟನು.—ರೂತಳು 2:5-7, 15, 16 ಓದಿ.
11 ಇದಾದ ನಂತರ ನಡೆದ ವಿಷಯಗಳು ರೂತಳ ಬಗ್ಗೆ ಬೋವಜನಿಗೆ ಕಾಳಜಿಯಿತ್ತೆಂದು ಮತ್ತು ಅವಳ ಕಷ್ಟಗಳನ್ನು ಅವನು ಅರ್ಥ ಮಾಡಿಕೊಂಡನೆಂದು ತೋರಿಸುತ್ತವೆ. ತನ್ನ ಹೊಲದಲ್ಲಿ ಕೆಲಸ ಮಾಡುವ ಯಾವುದೇ ಗಂಡಸರಿಂದ ರೂತಳಿಗೆ ತೊಂದರೆ ಆಗಬಾರದೆಂದು ಬೋವಜನು ತನ್ನ ಹೆಣ್ಣಾಳುಗಳೊಂದಿಗೆ ಕೆಲಸ ಮಾಡುವಂತೆ ಅವಳಿಗೆ ಹೇಳಿದನು. ಅಲ್ಲದೆ, ತನ್ನ ಸ್ವಂತ ಆಳುಗಳಿಗೆ ಸಿಗುವಂತೆ ಅವಳಿಗೂ ಸಾಕಷ್ಟು ಆಹಾರ ಮತ್ತು ನೀರು ಸಿಗುವ ಹಾಗೆ ನೋಡಿಕೊಂಡನು. ಹೀಗೆ ಬೋವಜನು ಅನ್ಯ ದೇಶದವಳಾಗಿದ್ದ ಆ ಬಡ ಸ್ತ್ರೀಯನ್ನು ಗೌರವಿಸಿದನು, ಪ್ರೋತ್ಸಾಹಿಸಿದನು.—ರೂತ. 2:8-10, 13, 14.
12. ನಾವು ತೋರಿಸುವ ದಯೆ ಅಪರಿಚಿತರನ್ನು ಹೇಗೆ ಪ್ರಭಾವಿಸುತ್ತದೆ?
12 ರೂತಳಿಗೆ ತನ್ನ ಅತ್ತೆ ನೊವೊಮಿಯ ಮೇಲೆ ತುಂಬ ಪ್ರೀತಿಯಿತ್ತು. ಕೇವಲ ಈ ನಿಷ್ಠಾವಂತ ಪ್ರೀತಿ ನೋಡಿ ಬೋವಜನು ಅವಳಿಗೆ ದಯೆ ತೋರಿಸಲಿಲ್ಲ. ಬದಲಿಗೆ, ರೂತಳು ಯೆಹೋವನ ಆರಾಧನೆಯನ್ನು ಆರಿಸಿಕೊಂಡದ್ದಕ್ಕೆ ಮತ್ತು ರಕ್ಷಣೆಗಾಗಿ ದೇವರ ಮೇಲೆ ಆತುಕೊಂಡದ್ದಕ್ಕೆ ದಯೆ ತೋರಿಸಿದನು. ನಿಜವೇನೆಂದರೆ ಬೋವಜನು ದಯೆ ತೋರಿಸುವ ಮೂಲಕ ಯೆಹೋವನ ನಿಷ್ಠಾವಂತ ಪ್ರೀತಿಯನ್ನು ಅನುಕರಿಸುತ್ತಿದ್ದನು. (ರೂತ. 2:12, 20; ಜ್ಞಾನೋ. 19:17) ಹಾಗೆಯೇ ನಾವು ದಯೆ ತೋರಿಸಿದರೆ “ಎಲ್ಲ ರೀತಿಯ ಜನರು” ಸತ್ಯವನ್ನು ಕಲಿಯಲು ನೆರವಾಗಬಹುದು. ಇದರಿಂದ ಯೆಹೋವನು ಅವರನ್ನು ಎಷ್ಟೊಂದು ಪ್ರೀತಿಸುತ್ತಾನೆಂದು ಅವರು ತಿಳಿದುಕೊಳ್ಳುತ್ತಾರೆ.—1 ತಿಮೊ. 2:3, 4.
ಹೊಸದಾಗಿ ರಾಜ್ಯ ಸಭಾಗೃಹಗಳಿಗೆ ಬರುವವರನ್ನು ನಾವು ಹಾರ್ದಿಕವಾಗಿ ಸ್ವಾಗತಿಸುತ್ತೇವಾ? (ಪ್ಯಾರ 13, 14 ನೋಡಿ)
13, 14. (ಎ) ಅಪರಿಚಿತರು ರಾಜ್ಯ ಸಭಾಗೃಹಕ್ಕೆ ಬಂದಾಗ ನಾವೇಕೆ ಅವರನ್ನು ಹಾರ್ದಿಕವಾಗಿ ಸ್ವಾಗತಿಸಬೇಕು? (ಬಿ) ಬೇರೆ ಸಂಸ್ಕೃತಿಯವರನ್ನು ಮಾತನಾಡಿಸಲು ಮುಜುಗರವಿದ್ದರೆ ಏನು ಮಾಡಬೇಕು?
13 ನಮ್ಮ ರಾಜ್ಯ ಸಭಾಗೃಹಕ್ಕೆ ಬರುವ ಅಪರಿಚಿತರನ್ನು ಹಾರ್ದಿಕವಾಗಿ ಸ್ವಾಗತಿಸುವ ಮೂಲಕ ಅವರಿಗೆ ದಯೆ ತೋರಿಸಬಹುದು. ಹಾಗೇ ಯಾರಾದರೂ ಇತ್ತೀಚೆಗಷ್ಟೆ ನಿಮ್ಮ ಸಭೆಗೆ ಬಂದಿದ್ದರೆ ಅವರಿಗೆ ಎಲ್ಲ ಹೊಸದಾಗಿರುವ ಕಾರಣ ಕೆಲವೊಮ್ಮೆ ಮುಜುಗರವಾಗಬಹುದು ಅಥವಾ ಯಾರೊಂದಿಗೂ ಸೇರದೆ ಅವರು ತಮ್ಮ ಪಾಡಿಗೆ ತಾವು ಇದ್ದುಬಿಡಬಹುದು. ಅವರ ಸಂಸ್ಕೃತಿ, ಸಾಮಾಜಿಕ ಸ್ಥಾನಮಾನದಿಂದಾಗಿ ಬೇರೆ ದೇಶದ ಅಥವಾ ಜಾತಿಯ ಜನರನ್ನು ನೋಡಿದಾಗ ಅವರಲ್ಲಿ ಕೀಳರಿಮೆ ಹುಟ್ಟಬಹುದು. ಹಾಗಾಗಿ ಮೊದಲು ಅವರನ್ನು ಸ್ವಾಗತಿಸಿ, ದಯೆಯಿಂದ ವರ್ತಿಸಿ ಮತ್ತು ನಿಜ ಆಸಕ್ತಿ ತೋರಿಸಿ. ಅವರ ಭಾಷೆಯಲ್ಲಿ ಅವರನ್ನು ವಂದಿಸಲು JW ಲ್ಯಾಂಗ್ವೇಜ್ ಆ್ಯಪ್ ಇದ್ದರೆ ಅದನ್ನು ಬಳಸಿಕೊಳ್ಳಿ.—ಫಿಲಿಪ್ಪಿ 2:3, 4 ಓದಿ.
14 ಬೇರೆ ಸಂಸ್ಕೃತಿಯವರನ್ನು ಮಾತನಾಡಿಸಲು ನಿಮಗೆ ಮುಜುಗರವಾಗಬಹುದು. ಅದರಿಂದ ಹೊರಬರಲು, ಮೊದಲು ನಿಮ್ಮ ಬಗ್ಗೆ ಏನಾದರೂ ಅವರೊಂದಿಗೆ ಹಂಚಿಕೊಳ್ಳಿ. ಆಗ ನಿಮ್ಮ ವಿಚಾರಗಳನ್ನೇ ಹೋಲುವಂಥ ವಿಚಾರಗಳು ಅವರಲ್ಲೂ ಇವೆ ಎಂದು ನಿಮಗೆ ಗೊತ್ತಾಗುತ್ತದೆ. ಪ್ರತಿಯೊಂದು ಸಂಸ್ಕೃತಿಗೂ ಅದರದ್ದೇ ಆದ ವಿಶೇಷತೆಗಳು, ಬಲಹೀನತೆಗಳು ಇರುತ್ತವೆಂದು ಮರೆಯಬೇಡಿ.
ಅಪರಿಚಿತರಿಗೆ ಒಂಟಿತನ ಕಾಡದಂತೆ ಸಹಾಯಮಾಡಿ
15. ಬೇರೆ ದೇಶದಿಂದ ಬಂದು ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿರುವವರನ್ನು ಅರ್ಥಮಾಡಿಕೊಳ್ಳಲು ಯಾವುದು ಸಹಾಯಮಾಡುತ್ತದೆ?
15 ಅಪರಿಚಿತರಿಗೆ ಒಂಟಿತನ ಕಾಡದಂತೆ ಸಹಾಯಮಾಡಲು ಹೀಗೆ ಕೇಳಿಕೊಳ್ಳಬೇಕು: ‘ನಾನೇದ್ರೂ ಬೇರೆ ದೇಶಕ್ಕೆ ಹೋದ್ರೆ, ಆ ದೇಶದವ್ರು ನನ್ನನ್ನ ಹೇಗೆ ನೋಡಿಕೊಳ್ಳಬೇಕು ಅಂತ ನಾನ್ ಬಯಸ್ತಿದ್ದೆ?’ (ಮತ್ತಾ. 7:12) ಬೇರೆ ದೇಶದಿಂದ ಬಂದು ಇಲ್ಲಿನ ವಿಷಯಗಳಿಗೆ ಹೊಂದಿಕೊಳ್ಳುತ್ತಾ ಇರುವವರೊಂದಿಗೆ ತಾಳ್ಮೆಯಿಂದಿರಿ. ಮೊದಮೊದಲಿಗೆ ಅವರು ಹೇಗೆ ಯೋಚಿಸುತ್ತಾರೆ, ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನಮಗೆ ಅರ್ಥವಾಗಲಿಕ್ಕಿಲ್ಲ. ನಮ್ಮ ಹಿನ್ನೆಲೆ ಮತ್ತು ಸಂಸ್ಕೃತಿಯ ಜನರಂತೆ ಅವರೂ ಯೋಚಿಸಬೇಕು, ನಡೆದುಕೊಳ್ಳಬೇಕೆಂದು ನೆನಸದೆ ಅವರು ಹೇಗಿದ್ದಾರೋ ಹಾಗೇ ಅವರನ್ನು ಒಪ್ಪಿಕೊಳ್ಳಿ.—ರೋಮನ್ನರಿಗೆ 15:7 ಓದಿ.
16, 17. (ಎ) ಬೇರೆ ಸಂಸ್ಕೃತಿಯಿಂದ ಬಂದವರ ಸ್ನೇಹವನ್ನು ಬೆಳೆಸಲು ನಾವೇನು ಮಾಡಬೇಕು? (ಬಿ) ಅಪರಿಚಿತರಿಗೆ ನಾವು ಯಾವ ಪ್ರಾಯೋಗಿಕ ನೆರವುಗಳನ್ನು ನೀಡಬಹುದು?
16 ಬೇರೆ ದೇಶದಿಂದ ಬಂದವರ ಸಂಸ್ಕೃತಿ ಮತ್ತು ದೇಶದ ಬಗ್ಗೆ ತಿಳಿದುಕೊಂಡಾಗ, ಅವರ ಬಗ್ಗೆ ತಿಳಿದುಕೊಳ್ಳಲು ಸುಲಭವಾಗುತ್ತದೆ. ಹಾಗಾಗಿ ನಮ್ಮ ಸಭೆ ಅಥವಾ ಟೆರಿಟೊರಿಯಲ್ಲಿ ಹೊರದೇಶದವರಿದ್ದರೆ ಅವರ ಸಂಸ್ಕೃತಿಯ ಬಗ್ಗೆ ಕುಟುಂಬ ಆರಾಧನೆಯಲ್ಲಿ ಸಂಶೋಧನೆ ಮಾಡಬಹುದು. ಅಲ್ಲದೆ, ಅವರನ್ನು ಮನೆಗೆ ಊಟಕ್ಕೆ ಕರೆದು ಅವರ ಬಗ್ಗೆ ಹೆಚ್ಚು ತಿಳಿಯಬಹುದು. ಯೆಹೋವನು “ಅನ್ಯಜನಾಂಗಗಳವರಿಗೆ ನಂಬಿಕೆಯ ದ್ವಾರವನ್ನು” ತೆರೆದನು. ನಾವು ಆತನನ್ನು ಅನುಕರಿಸಬೇಕು ಮತ್ತು “ನಂಬಿಕೆಯಲ್ಲಿ ನಮ್ಮ ಸಂಬಂಧಿಕರಂತಿರುವ” ಅಪರಿಚಿತರಿಗಾಗಿ ನಮ್ಮ ಮನೆಯ ಬಾಗಿಲು ಯಾವಾಗಲೂ ತೆರೆದಿರಬೇಕು.—ಅ. ಕಾ. 14:27; ಗಲಾ. 6:10; ಯೋಬ 31:32.
ಬೇರೆ ದೇಶದಿಂದ ಬರುವ ಹೊಸಬರಿಗೆ ನಾವು ಧಾರಾಳವಾಗಿ ಅತಿಥಿಸತ್ಕಾರ ತೋರಿಸುತ್ತಿದ್ದೇವಾ? (ಪ್ಯಾರ 16, 17 ನೋಡಿ)
17 ಅವರೊಂದಿಗೆ ನಾವು ಸಮಯ ಕಳೆದರೆ, ನಮ್ಮ ಸಂಸ್ಕೃತಿಗೆ ಹೊಂದಿಕೊಳ್ಳಲು ಅವರು ಏನೆಲ್ಲಾ ಮಾಡುತ್ತಿದ್ದಾರೆಂದು ಅರ್ಥಮಾಡಿಕೊಳ್ಳಲು ಮತ್ತು ಅವರ ಪ್ರಯತ್ನವನ್ನು ಅಮೂಲ್ಯವಾಗಿ ಕಾಣಲು ಸಹಾಯವಾಗುತ್ತದೆ. ಇಲ್ಲಿಯ ಭಾಷೆಯನ್ನು ಕಲಿಯಲು ಅವರಿಗೆ ನೆರವಿನ ಅಗತ್ಯವಿದೆಯೆಂದು ನಮಗೆ ಗೊತ್ತಾಗಬಹುದು. ಒಳ್ಳೇ ಮನೆಯನ್ನು, ಕೆಲಸವನ್ನು ಹುಡುಕಿಕೊಳ್ಳಲು ನಾವು ಅವರಿಗೆ ನೆರವು ನೀಡಬಹುದು. ಇಂಥ ಚಿಕ್ಕಪುಟ್ಟ ಪ್ರಾಯೋಗಿಕ ನೆರವುಗಳು ಬೇರೆ ದೇಶದಿಂದ ಬರುವ ನಮ್ಮ ಸಹೋದರ ಸಹೋದರಿಯರಿಗೆ ಬಹು ದೊಡ್ಡ ಸಹಾಯವಾಗಿರುತ್ತವೆ.—ಜ್ಞಾನೋ. 3:27.
18. ಗೌರವ ಮತ್ತು ಕೃತಜ್ಞತೆಯನ್ನು ತೋರಿಸುವ ವಿಷಯದಲ್ಲಿ ಪರದೇಶಿಯರಿಗೆ ಯಾರ ಮಾದರಿಯಿದೆ?
18 ಬೇರೆ ದೇಶಕ್ಕೆ ಹೋಗುವವರು ಅಲ್ಲಿನ ಸಂಸ್ಕೃತಿಗೆ ಹೊಂದಿಕೊಳ್ಳಲು ತಮ್ಮ ಕೈಲಾಗುವ ಎಲ್ಲ ಪ್ರಯತ್ನವನ್ನು ಮಾಡೇ ಮಾಡುತ್ತಾರೆ. ಈ ವಿಷಯದಲ್ಲಿ ರೂತಳು ಒಂದು ಒಳ್ಳೇ ಮಾದರಿ. ಮೊದಲನೇದಾಗಿ, ಅವಳು ಹಕ್ಕಲಾಯಲು ಅಪ್ಪಣೆಯನ್ನು ಕೇಳುವ ಮೂಲಕ ಆ ದೇಶದ ಸಂಸ್ಕೃತಿಗೆ ಗೌರವವನ್ನು ತೋರಿಸಿದಳು. (ರೂತ. 2:7) ಹಕ್ಕಲಾಯುವುದು ತನಗಿರುವ ಹಕ್ಕೆಂದು ಅದನ್ನು ಹಗುರವಾಗಿ ಕಾಣಲಿಲ್ಲ. ಅಲ್ಲದೆ, ಹಕ್ಕಲಾಯಲು ಅಲ್ಲಿನ ಜನರು ಬಿಡಲೇಬೇಕು, ಅದು ಅವರ ಕರ್ತವ್ಯ ಎಂದು ಸಹ ಎಣಿಸಲಿಲ್ಲ. ಎರಡನೇದಾಗಿ, ಅಲ್ಲಿನ ಜನರು ಅವಳಿಗೆ ದಯೆ ತೋರಿಸಿದಾಗ ಕೂಡಲೇ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದಳು. (ರೂತ. 2:13) ಇದೇ ರೀತಿಯಲ್ಲಿ ಪರದೇಶಿಯರು ಸಹ ತಾವು ಹೋದಂಥ ಹೊಸ ಜಾಗದಲ್ಲಿ ಒಳ್ಳೇ ರೀತಿಯಲ್ಲಿ ನಡೆದುಕೊಂಡರೆ ಅಲ್ಲಿನ ಸಹೋದರ ಸಹೋದರಿಯರು ಮತ್ತು ಬೇರೆ ಜನರು ಅವರನ್ನು ಗೌರವದಿಂದ ಕಾಣಲು ಸಹಾಯವಾಗುತ್ತದೆ.
19. ಅಪರಿಚಿತರನ್ನು ನಮ್ಮಲ್ಲಿ ಒಬ್ಬರನ್ನಾಗಿ ಮಾಡಿಕೊಳ್ಳಲು ನಮಗೆ ಯಾವೆಲ್ಲ ಕಾರಣಗಳಿವೆ?
19 ಯೆಹೋವನು ಎಲ್ಲ ರೀತಿಯ ಜನರಿಗೆ ಅಪಾತ್ರ ದಯೆ ತೋರಿಸಿ ತನ್ನ ಸುವಾರ್ತೆಯನ್ನು ಕೇಳುವಂತೆ ಮಾಡಿರುವುದಕ್ಕಾಗಿ ನಾವು ಬಹಳ ಸಂತೋಷಿತರು. ಕೆಲವರಿಗೆ ತಮ್ಮ ಸ್ವಂತ ದೇಶದಲ್ಲಿ ಯೆಹೋವನ ಜನರೊಂದಿಗೆ ಬೈಬಲ್ ಅಧ್ಯಯನ ಮಾಡಲು ಅಥವಾ ಕೂಟಗಳಿಗೆ ಹಾಜರಾಗಲು ಆಗದಿರಬಹುದು. ಆದರೆ ಈಗ ಅವರಿಗೆ ಆ ಅವಕಾಶ ಸಿಕ್ಕಿರುವಲ್ಲಿ ನಾವು ಅವರಿಗೆ ಸಹಾಯಮಾಡಬೇಕು. ಒಂಟಿತನ ಅವರನ್ನು ಕಾಡದಂತೆ ನೋಡಿಕೊಳ್ಳಬೇಕು. ನಮ್ಮಲ್ಲಿ ಹೆಚ್ಚು ಹಣವಿಲ್ಲದಿರಬಹುದು ಅಥವಾ ಅವರಿಗೆ ಪ್ರಾಯೋಗಿಕ ನೆರವು ನೀಡುವಂಥ ಪರಿಸ್ಥಿತಿಯಲ್ಲಿ ನಾವಿಲ್ಲದಿರಬಹುದು, ಆದರೆ ಅಪರಿಚಿತರನ್ನು ದಯೆಯಿಂದ ಕಾಣುವ ಮೂಲಕ ಯೆಹೋವನ ಪ್ರೀತಿಯನ್ನು ನಾವು ಅನುಕರಿಸುತ್ತೇವೆ. ‘ದೇವರನ್ನು ಅನುಕರಿಸುವವರಾಗುವ’ ಮೂಲಕ ಅಪರಿಚಿತರನ್ನು ನಮ್ಮಲ್ಲಿ ಒಬ್ಬರನ್ನಾಗಿ ಮಾಡಿಕೊಳ್ಳಲು ನಮ್ಮ ಕೈಲಾಗುವ ಸಕಲ ಪ್ರಯತ್ನವನ್ನು ಮಾಡೋಣ.—ಎಫೆ. 5:1, 2.
^ [1] (ಪ್ಯಾರ 1) ಹೆಸರನ್ನು ಬದಲಾಯಿಸಲಾಗಿದೆ.