ಅಧ್ಯಾಯ 8
ಸುವಾರ್ತೆ ಸಾರುವ ಪ್ರಚಾರಕರು
ನಾವು ಯೇಸುವಿನ ಹಾಗೆ ಇರಬೇಕೆಂಬುದು ಯೆಹೋವನ ಆಸೆ. ಹಾಗಾಗಿಯೇ ಯೇಸುವಿನ ಪರಿಪೂರ್ಣ ಮಾದರಿಯನ್ನು ನಮಗೆ ಕೊಟ್ಟಿದ್ದಾನೆ. (1 ಪೇತ್ರ 2:21) ನಾವು ಯೇಸುವಿನ ಹಿಂಬಾಲಕರಾದಾಗ ದೇವರ ಸೇವಕರಾಗುವ ಮತ್ತು ಸುವಾರ್ತೆಯನ್ನು ಸಾರುವ ಸೌಭಾಗ್ಯ ಸಿಗುತ್ತದೆ. ಆತನನ್ನು ಹಿಂಬಾಲಿಸುವುದು ಸಂತೋಷ, ಚೈತನ್ಯ ತರುತ್ತದೆ. ಆದ್ದರಿಂದ ಯೇಸು ಹೀಗೆ ಮಾತುಕೊಟ್ಟಿದ್ದಾನೆ: “ಕಷ್ಟಪಡುತ್ತಿರುವವರೇ, ಹೊರೆಹೊತ್ತಿರುವವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು. ನಾನು ಸೌಮ್ಯಭಾವದವನೂ ದೀನಹೃದಯದವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿಯಿರಿ; ಆಗ ನೀವು ನಿಮ್ಮ ಪ್ರಾಣಗಳಿಗೆ ಚೈತನ್ಯವನ್ನು ಪಡೆದುಕೊಳ್ಳುವಿರಿ.” (ಮತ್ತಾ. 11:28, 29) ಈ ಆಮಂತ್ರಣವನ್ನು ಕೇಳಿ ಬಂದವರೆಲ್ಲರೂ ನಿಜಕ್ಕೂ ಚೈತನ್ಯ ಪಡೆದುಕೊಂಡಿದ್ದಾರೆ.
2 ಯೆಹೋವನ ಪ್ರಧಾನ ಸೇವಕನಾದ ಯೇಸು ಕೆಲವರಿಗೆ ತನ್ನ ಹಿಂಬಾಲಕರಾಗುವಂತೆ ಆಮಂತ್ರಿಸಿದನು. (ಮತ್ತಾ. 9:9; ಯೋಹಾ. 1:43) ಸಾರುವುದು ಹೇಗೆಂದು ಅವರಿಗೆ ತರಬೇತಿ ಕೊಟ್ಟನು. ತಾನು ಮಾಡುತ್ತಿದ್ದ ಕೆಲಸವನ್ನು ಅವರೂ ಮಾಡುವಂತೆ ಹೇಳಿ ಕಳುಹಿಸಿದನು. (ಮತ್ತಾ. 10:1–11:1; 20:28; ಲೂಕ 4:43) ಸಮಯಾನಂತರ ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ಇನ್ನೂ 70 ಮಂದಿಯನ್ನು ಸಿದ್ಧಗೊಳಿಸಿದನು. (ಲೂಕ 10:1, 8-11) ಅವರನ್ನು ಕಳುಹಿಸುವಾಗ ಹೀಗಂದನು: “ನಿಮಗೆ ಕಿವಿಗೊಡುವವನು ನನಗೂ ಕಿವಿಗೊಡುವವನಾಗಿದ್ದಾನೆ; ನಿಮ್ಮನ್ನು ಅಲಕ್ಷ್ಯಮಾಡುವವನು ನನ್ನನ್ನೂ ಅಲಕ್ಷ್ಯಮಾಡುವವನಾಗಿದ್ದಾನೆ; ಇದಲ್ಲದೆ, ನನ್ನನ್ನು ಅಲಕ್ಷ್ಯಮಾಡುವವನು ನನ್ನನ್ನು ಕಳುಹಿಸಿದಾತನನ್ನೂ ಅಲಕ್ಷ್ಯಮಾಡುವವನಾಗಿದ್ದಾನೆ.” (ಲೂಕ 10:16) ಯೇಸು ಹೀಗೆ ತಿಳಿಸುವ ಮೂಲಕ ತನ್ನ ಶಿಷ್ಯರು ಸುವಾರ್ತೆ ಸಾರುವಾಗ ತನ್ನನ್ನೂ ಮಹೋನ್ನತ ದೇವರಾದ ಯೆಹೋವನನ್ನೂ ಪ್ರತಿನಿಧಿಸುತ್ತಾರೆಂದು ಒತ್ತಿಹೇಳಿದನು. ಇದೊಂದು ಗಂಭೀರ ಜವಾಬ್ದಾರಿ! “ನನ್ನ ಹಿಂಬಾಲಕನಾಗು” ಎಂಬ ಯೇಸುವಿನ ಆಮಂತ್ರಣವನ್ನು ಇಂದು ಸ್ವೀಕರಿಸುವ ಎಲ್ಲರಿಗೂ ಆ ಜವಾಬ್ದಾರಿಯಿದೆ. (ಲೂಕ 18:22; 2 ಕೊರಿಂ. 2:17) ಏಕೆಂದರೆ ಸುವಾರ್ತೆಯನ್ನು ಸಾರಬೇಕು, ಶಿಷ್ಯರನ್ನಾಗಿ ಮಾಡಬೇಕು ಎಂಬ ಆಜ್ಞೆ ಅವರಿಗಿದೆ.—ಮತ್ತಾ. 24:14; 28:19, 20.
3 ಯೇಸುವಿನ ಹಿಂಬಾಲಕರಾದ ಕಾರಣ ನಮಗೆ ದೊಡ್ಡ ಆಶೀರ್ವಾದ ಸಿಕ್ಕಿದೆ. ಅದೇನೆಂದರೆ ಯೆಹೋವನ ಮತ್ತು ಯೇಸುವಿನ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿದೆ. (ಯೋಹಾ. 17:3) ಯೆಹೋವನು ಏನನ್ನು ಮೆಚ್ಚುತ್ತಾನೆಂದು ಕಲಿತಿದ್ದೇವೆ. ಆತನ ಸಹಾಯದಿಂದ ನಮ್ಮ ಮನಸ್ಸನ್ನು ಬದಲಾಯಿಸಿಕೊಂಡಿದ್ದೇವೆ. ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡಿದ್ದೇವೆ. ಯೆಹೋವನ ನೀತಿಯ ಮಟ್ಟಗಳಿಗನುಸಾರ ಜೀವಿಸಲು ಕಲಿತಿದ್ದೇವೆ. (ರೋಮ. 12:1, 2; ಎಫೆ. 4:22-24; ಕೊಲೊ. 3:9, 10) ಇವೆಲ್ಲವುಗಳಿಗಾಗಿ ನಾವು ಯೆಹೋವನಿಗೆ ಮನದಾಳದಿಂದ ಕೃತಜ್ಞರು. ನಮ್ಮ ಜೀವನವನ್ನು ಆತನಿಗೆ ಸಮರ್ಪಿಸಿಕೊಂಡು ನೀರಿನ ದೀಕ್ಷಾಸ್ನಾನ ಪಡೆಯುವ ಮೂಲಕ ಆ ಕೃತಜ್ಞತೆಯನ್ನು ತೋರಿಸಿದ್ದೇವೆ. ದೀಕ್ಷಾಸ್ನಾನ ಪಡೆದಾಗ ಯೆಹೋವನು ನಮ್ಮನ್ನು ಆತನ ಸೇವಕರೆಂದು ಅಂಗೀಕರಿಸಿದ್ದಾನೆ.
4 ಆದುದರಿಂದ ನಾವು ಆತನ ಸೇವೆಯನ್ನು ಯಾವಾಗಲೂ ಶುದ್ಧ ಹಸ್ತದಿಂದ, ನಿರ್ಮಲಮನಸ್ಸಿನಿಂದ ಮಾಡಬೇಕು. (ಕೀರ್ತ. 24:3, 4; ಯೆಶಾ. 52:11; 2 ಕೊರಿಂ. 6:14–7:1) ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟದ್ದರಿಂದ ನಾವು ಶುದ್ಧ ಮನಸ್ಸಾಕ್ಷಿಯನ್ನು ಪಡೆದಿದ್ದೇವೆ. (ಇಬ್ರಿ. 10:19-23, 35, 36; ಪ್ರಕ. 7:9, 10, 14) ನಾವೇನೇ ಮಾಡಿದರೂ ಅದು ದೇವರಿಗೆ ಮಹಿಮೆ ತರಬೇಕು. ನಾವು ಕೆಟ್ಟ ಮಾದರಿಯನ್ನಿಟ್ಟು ಸಹೋದರರು ದೇವರಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಬಾರದು. ನಮ್ಮ ನಡತೆ ಉತ್ತಮವಾಗಿದ್ದರೆ ಸಾಕ್ಷಿಗಳಲ್ಲದ ಜನರೂ ಸತ್ಯವನ್ನು ಕಲಿಯಬಹುದು. (1 ಕೊರಿಂ. 10:31, 33; 1 ಪೇತ್ರ 3:1, 2) ಸುವಾರ್ತೆ ಸಾರಲು ಅರ್ಹರಾಗುವಂತೆ ಇತರರಿಗೆ ಸಹಾಯಮಾಡುವ ಜವಾಬ್ದಾರಿಯೂ ನಮಗಿದೆ. ನಾವದನ್ನು ಹೇಗೆ ಮಾಡಬಹುದು?
ಸಾರಲು ಮೊದಲ ಹೆಜ್ಜೆಯನ್ನಿಡಲಿಕ್ಕಾಗಿ ಸಹಾಯಮಾಡಿ
5 ಒಬ್ಬ ವ್ಯಕ್ತಿ ಬೈಬಲ್ ಅಧ್ಯಯನವನ್ನು ಆರಂಭಿಸಿದಾಗಲೇ ಅವನು ಕಲಿತ ವಿಷಯಗಳನ್ನು ಸಂಬಂಧಿಕರು, ಸ್ನೇಹಿತರು, ಜೊತೆಕೆಲಸಗಾರರೊಂದಿಗೆ ಹಂಚಿಕೊಳ್ಳುವಂತೆ ಪ್ರೋತ್ಸಾಹಿಸಿ. ಈ ಮೂಲಕ ವಿದ್ಯಾರ್ಥಿಯು ಯೇಸು ಕ್ರಿಸ್ತನ ಹಿಂಬಾಲಕನಾಗಿ ಸುವಾರ್ತೆ ಸಾರಲು ಮೊದಲ ಹೆಜ್ಜೆಯಿಡುವಂತೆ ನೀವು ಕಲಿಸುತ್ತೀರಿ. (ಮತ್ತಾ. 9:9; ಲೂಕ 6:40) ವಿದ್ಯಾರ್ಥಿಯು ಬೈಬಲಿನಿಂದ ಕಲಿತದ್ದನ್ನು ಅನ್ವಯಿಸುತ್ತಾ, ಅದನ್ನು ಇತರರಿಗೆ ತಿಳಿಸುತ್ತಿದ್ದರೆ ನಂತರ ಸಭೆಯೊಟ್ಟಿಗೆ ಸೇರಿ ಸುವಾರ್ತೆ ಸಾರಲು ಅವನು ಇಷ್ಟಪಡಬಹುದು.
ಸಭೆಯ ಜೊತೆಸೇರಿ ಸಾರಲು ಅರ್ಹತೆಗಳು
6 ಬೈಬಲ್ ವಿದ್ಯಾರ್ಥಿಯು ಸಭೆಯೊಂದಿಗೆ ಸೇರಿ ಮನೆ-ಮನೆ ಸೇವೆಯಲ್ಲಿ ಭಾಗವಹಿಸಬೇಕಾದರೆ ಅವನಲ್ಲಿ ಕೆಲವು ಅರ್ಹತೆಗಳಿರಬೇಕು. ಏಕೆಂದರೆ ಅವನು ಯೆಹೋವನ ಸಾಕ್ಷಿಗಳೊಟ್ಟಿಗೆ ಹೋಗಿ ಸುವಾರ್ತೆ ಸಾರುವಾಗ ಜನರು ಅವನನ್ನು ಯೆಹೋವನ ಸಾಕ್ಷಿಯೆಂದೇ ನೆನಸುತ್ತಾರೆ. ಆದ್ದರಿಂದ ಅವನು ಯೆಹೋವನ ನೀತಿಯ ಮಟ್ಟಗಳ ಪ್ರಕಾರ ಜೀವಿಸುತ್ತಿರಬೇಕು. ಆಗ ಅವನು ದೀಕ್ಷಾಸ್ನಾನಕ್ಕೆ ಮುಂಚೆಯೇ ಪ್ರಚಾರಕನಾಗಬಹುದು.
7 ಒಬ್ಬರೊಂದಿಗೆ ಬೈಬಲ್ ಅಧ್ಯಯನ ಮಾಡುತ್ತಿರುವಾಗ ಅವನ ಬಗ್ಗೆ ನೀವು ಚೆನ್ನಾಗಿ ತಿಳಿದುಕೊಳ್ಳುತ್ತೀರಿ. ಬೈಬಲ್ ಹೇಳುವ ಪ್ರಕಾರ ಅವನು ಜೀವಿಸುತ್ತಿದ್ದಾನೆಂದು ನಿಮಗೆ ಗೊತ್ತಾಗಬಹುದು. ಹಾಗಿದ್ದರೂ ಸಭಾ ಹಿರಿಯರು ವಿದ್ಯಾರ್ಥಿಯೊಟ್ಟಿಗೆ ಮಾತಾಡಿ ಅವನ ಜೀವನದ ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಹಾಗೆ ಮಾತಾಡುವಾಗ ವಿದ್ಯಾರ್ಥಿಯ ಜೊತೆ ನೀವೂ ಇರುವಂತೆ ಅವರು ಕೇಳಿಕೊಳ್ಳುತ್ತಾರೆ.
8 ನಿಮ್ಮೊಟ್ಟಿಗೆ ಮತ್ತು ನಿಮ್ಮ ಬೈಬಲ್ ವಿದ್ಯಾರ್ಥಿಯೊಟ್ಟಿಗೆ ಸೇವಾ ಸಮಿತಿಯಲ್ಲಿರುವ ಹಿರಿಯನೊಬ್ಬನು ಮತ್ತು ಇನ್ನೊಬ್ಬ ಹಿರಿಯನು ಮಾತಾಡುವಂತೆ ಹಿರಿಯರ ಮಂಡಲಿಯ ಸಂಯೋಜಕನು ಏರ್ಪಾಡು ಮಾಡುತ್ತಾನೆ. ಸಭೆಯಲ್ಲಿ ಹೆಚ್ಚು ಮಂದಿ ಹಿರಿಯರು ಇಲ್ಲದಿದ್ದರೆ ಒಬ್ಬ ಹಿರಿಯನನ್ನು ಮತ್ತು ಸಮರ್ಥ ಸಹಾಯಕ ಸೇವಕನನ್ನು ನೇಮಿಸಲಾಗುತ್ತದೆ. ಮಾತಾಡಲು ಆಯ್ಕೆಯಾದ ಸಹೋದರರು ಇದನ್ನು ಮುಂದೂಡಬಾರದು. ವಿದ್ಯಾರ್ಥಿ ಪ್ರಚಾರಕನಾಗಲು ಬಯಸುತ್ತಾನೆಂದು ಹಿರಿಯರಿಗೆ ಸಭಾ ಕೂಟದಲ್ಲಿ ತಿಳಿದುಬಂದರೆ ಕೂಟ ಮುಗಿದ ನಂತರವೇ ಮಾತಾಡಬಹುದು. ವಿದ್ಯಾರ್ಥಿಯಲ್ಲಿ ಭಯ ಹುಟ್ಟಿಸುವ ಹಾಗೆ ಗಂಭೀರವಾಗಿ ಮಾತಾಡದೆ ಸ್ನೇಹಭಾವದಿಂದ ಮಾತಾಡಬೇಕು. ವಿದ್ಯಾರ್ಥಿಯು ಪ್ರಚಾರಕನಾಗಬೇಕಾದರೆ ಮುಂದಿನ ವಿಷಯಗಳನ್ನು ಮಾಡುತ್ತಿರಬೇಕು:
(1) ಬೈಬಲ್ ದೇವರ ಪ್ರೇರಣೆಯಿಂದ ಬರೆಯಲ್ಪಟ್ಟಿದೆ ಎಂದು ನಂಬಬೇಕು.—2 ತಿಮೊ. 3:16.
(2) ಬೈಬಲಿನ ಮುಖ್ಯ ಬೋಧನೆಗಳನ್ನು ತಿಳಿದಿರಬೇಕು ಮತ್ತು ನಂಬಿರಬೇಕು. ಆಗ ಯಾರಾದರೂ ಪ್ರಶ್ನೆ ಕೇಳಿದರೆ ಅವನು ಸುಳ್ಳು ಧಾರ್ಮಿಕ ಬೋಧನೆಗೆ ಅಥವಾ ತನ್ನ ಸ್ವಂತ ವಿಚಾರಕ್ಕೆ ತಕ್ಕಂತೆ ಉತ್ತರಿಸದೆ ಬೈಬಲಿನಿಂದ ಉತ್ತರ ಕೊಡಲು ಆಗುತ್ತದೆ.—ಮತ್ತಾ. 7:21-23; 2 ತಿಮೊ. 2:15.
(3) ಬೈಬಲಿನಲ್ಲಿರುವ ಆಜ್ಞೆಯಂತೆ ಅವನು ಸಭಾ ಕೂಟಗಳಿಗೆ ಹಾಜರಾಗುತ್ತಾ ಯೆಹೋವನ ಜನರೊಂದಿಗೆ ಸಹವಾಸ ಮಾಡುತ್ತಿರಬೇಕು. (ಅವನು ಕೂಟಗಳಿಗೆ ಬರಲು ಆಗದಂಥ ಸನ್ನಿವೇಶದಲ್ಲಿದ್ದರೆ ಪರಿಗಣನೆ ತೋರಿಸಬಹುದು.) —ಕೀರ್ತ. 122:1; ಇಬ್ರಿ. 10:24, 25.
(4) ಒಬ್ಬರಿಗಿಂತ ಹೆಚ್ಚು ವಿವಾಹ ಸಂಗಾತಿಗಳು ಇರುವುದರ ಬಗ್ಗೆ ಮತ್ತು ವ್ಯಭಿಚಾರ, ಸಲಿಂಗಕಾಮ ಇಂಥ ಲೈಂಗಿಕ ಅನೈತಿಕತೆಯ ಬಗ್ಗೆ ಬೈಬಲ್ ಏನು ಹೇಳುತ್ತದೆಂದು ಅವನಿಗೆ ಗೊತ್ತಿರಬೇಕು ಮತ್ತು ಅದಕ್ಕನುಸಾರ ಜೀವಿಸುತ್ತಿರಬೇಕು. ವಿದ್ಯಾರ್ಥಿಯು ವಿರುದ್ಧ ಲಿಂಗದ ವ್ಯಕ್ತಿಯೊಟ್ಟಿಗೆ ಬಾಳುತ್ತಿದ್ದರೆ ಅವರಿಬ್ಬರು ಮದುವೆಯಾಗಿರಬೇಕು.—ಮತ್ತಾ. 19:9; 1 ಕೊರಿಂ. 6:9, 10; 1 ತಿಮೊ. 3:2, 12; ಇಬ್ರಿ. 13:4.
(5) ಅವನು ಮತ್ತೇರಿಸುವ ಯಾವುದೇ ಅಮಲೌಷಧಗಳನ್ನು (ನೈಸರ್ಗಿಕ ಮತ್ತು ಕೃತಕ) ಸೇವಿಸುತ್ತಿರಬಾರದು, ಕುಡುಕನಾಗಿರಬಾರದು.—2 ಕೊರಿಂ. 7:1; ಎಫೆ. 5:18; 1 ಪೇತ್ರ 4:3, 4.
(6) ಕೆಟ್ಟ ಸಹವಾಸ ಮಾಡದಿರುವುದು ಎಷ್ಟು ಪ್ರಾಮುಖ್ಯವೆಂದು ಅರಿತಿರಬೇಕು.—1 ಕೊರಿಂ. 15:33.
(7) ಮುಂಚೆಯಿದ್ದ ಸುಳ್ಳು ಧರ್ಮದ ಸದಸ್ಯತ್ವಕ್ಕೆ ರಾಜಿನಾಮೆ ಕೊಟ್ಟಿರಬೇಕು. ಅಲ್ಲಿನ ಆರಾಧನೆಗೆ ಹಾಜರಾಗುವುದನ್ನು ಮತ್ತು ಆ ಧರ್ಮದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಅಥವಾ ಬೆಂಬಲಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿರಬೇಕು.—2 ಕೊರಿಂ. 6:14-18; ಪ್ರಕ. 18:4.
(8) ರಾಜಕೀಯಕ್ಕೆ ಸಂಬಂಧಪಟ್ಟ ಯಾವುದೇ ವಿಷಯಗಳಲ್ಲಿ ಒಳಗೂಡಿರಬಾರದು.—ಯೋಹಾ. 6:15; 15:19; ಯಾಕೋ. 1:27.
(9) ಮಿಲಿಟರಿಯಲ್ಲಿ ಸೇರಿರಬಾರದು. ಯುದ್ಧ ಕಾದಾಟಗಳಲ್ಲಿ ಭಾಗವಹಿಸಬಾರದು.—ಯೆಶಾ. 2:4.
(10) ಯೆಹೋವನ ಸಾಕ್ಷಿಯಾಗಲು ಅವನಿಗೆ ನಿಜವಾಗಿಯೂ ಆಸೆಯಿರಬೇಕು.—ಕೀರ್ತ. 110:3.
9 ಈ ವಿಷಯಗಳಲ್ಲಿ ವಿದ್ಯಾರ್ಥಿ ಹೇಗಿದ್ದಾನೆಂದು ಸಭಾ ಹಿರಿಯರಿಗೆ ಸರಿಯಾಗಿ ಗೊತ್ತಿಲ್ಲದಿದ್ದರೆ ಕೊಡಲಾಗಿರುವ ವಚನಗಳನ್ನು ಉಪಯೋಗಿಸಿ ಪ್ರಶ್ನೆ ಕೇಳಬೇಕು. ಆ ವಿಷಯಗಳನ್ನು ಪಾಲಿಸುತ್ತಿದ್ದರೆ ಮಾತ್ರ ಅವನು ಯೆಹೋವನ ಸಾಕ್ಷಿಗಳ ಜೊತೆಯಲ್ಲಿ ಸಾರಲು ಆಗುತ್ತದೆಂದು ವಿದ್ಯಾರ್ಥಿ ತಿಳಿದಿರಬೇಕು. ಯೆಹೋವನು ಬಯಸುವಂತೆ ಅವನು ಜೀವಿಸುತ್ತಿದ್ದಾನಾ, ಸಾರಲು ತಕ್ಕಮಟ್ಟಿಗೆ ಅರ್ಹತೆ ಅವನಲ್ಲಿದೆಯಾ ಎನ್ನುವುದನ್ನು ಅವನು ಕೊಡುವ ಉತ್ತರಗಳಿಂದ ಹಿರಿಯರು ತಿಳಿಯಬಹುದು.
10 ವಿದ್ಯಾರ್ಥಿಯು ಸಾರಲು ಅರ್ಹನಾ ಎಂಬುದನ್ನು ಹಿರಿಯರು ತಡಮಾಡದೆ ಅವನಿಗೆ ತಿಳಿಸಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಚರ್ಚೆಯ ಕೊನೆಯಲ್ಲೇ ತಿಳಿಸಬಹುದು. ಅರ್ಹನಾದರೆ ಅವನಿಗೆ ಶುಭಾಶಯಗಳನ್ನು ತಿಳಿಸಬಹುದು. (ರೋಮ. 15:7) ಆದಷ್ಟು ಬೇಗನೆ ಸೇವೆಯಲ್ಲಿ ಭಾಗವಹಿಸುವಂತೆ ಮತ್ತು ತಿಂಗಳ ಕೊನೆಯಲ್ಲಿ ಕ್ಷೇತ್ರ ಸೇವಾ ವರದಿಯನ್ನು ಕೊಡುವಂತೆ ಆ ಹೊಸ ಪ್ರಚಾರಕನಿಗೆ ತಿಳಿಸಬೇಕು. ಅವನು ಮೊದಲ ಬಾರಿ ಸೇವಾ ವರದಿಯನ್ನು ಕೊಟ್ಟಾಗ ಅವನ ಹೆಸರಿನಲ್ಲಿ ಸಭೆಯ ಪ್ರಚಾರಕನ ದಾಖಲೆ ಮಾಡಿ ಸಭೆಯ ಫೈಲ್‌ಗಳಲ್ಲಿ ಸೇರಿಸಲಾಗುತ್ತದೆ ಮತ್ತು ಅದರಲ್ಲಿ ಅವನು ಕೊಡುವ ವರದಿಯನ್ನು ಬರೆಯಲಾಗುತ್ತದೆ ಎಂದು ತಿಳಿಸಬೇಕು. ಹೊಸ ಪ್ರಚಾರಕ ಕೊಡುವ ವೈಯಕ್ತಿಕ ಮಾಹಿತಿಯನ್ನು ಹಿರಿಯರು ಸಂಗ್ರಹಿಸಿ ಇಡುವುದರಿಂದ ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕೆ ಸಹಾಯ ಆಗುತ್ತೆ. ಅಷ್ಟೇ ಅಲ್ಲ, ಆ ಪ್ರಚಾರಕ ಸಹ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಮತ್ತು ಸಂಘಟನೆಯಿಂದ ಸಿಗುವ ಸಹಾಯ ಪಡೆದುಕೊಳ್ಳಲು ಆಗುತ್ತೆ. ಅವನು ಕೊಡುವ ವೈಯಕ್ತಿಕ ಮಾಹಿತಿಯೆಲ್ಲ jw.orgನಲ್ಲಿ ತಿಳಿಸಿರೋ ಗ್ಲೋಬಲ್ ಡೇಟಾ ಪ್ರೊಟೆಕ್ಶನ್ ಪಾಲಿಸಿ ಪ್ರಕಾರ ಸುರಕ್ಷಿತವಾಗಿರುತ್ತೆ ಅಂತ ಹಿರಿಯರು ಅವನಿಗೆ ಹೇಳಬೇಕು.
11 ಸಭೆಯಲ್ಲಿರುವವರು ಹೊಸ ಪ್ರಚಾರಕನನ್ನು ಚೆನ್ನಾಗಿ ತಿಳಿದುಕೊಳ್ಳಬೇಕು ಮತ್ತು ಅವನು ಮಾಡುವ ಸೇವೆಯಲ್ಲಿ ಆಸಕ್ತಿವಹಿಸಬೇಕು. ಆಗ ಕ್ಷೇತ್ರ ಸೇವೆಯನ್ನು ತಪ್ಪದೆ ಮಾಡಲು ಮತ್ತು ಯೆಹೋವನ ಆರಾಧನೆಗೆ ಮೊದಲ ಸ್ಥಾನ ಕೊಡಲು ಅವನಿಗೆ ಸ್ಫೂರ್ತಿ ಸಿಗುತ್ತದೆ.—ಫಿಲಿ. 2:4; ಇಬ್ರಿ. 13:2.
12 ವಿದ್ಯಾರ್ಥಿ ಸಾರಲು ಅರ್ಹನಾಗಿದ್ದಾನೆಂದು ಹಿರಿಯರಿಗೆ ಗೊತ್ತಾದಾಗ ಅವನಿಗೆ, ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು ಪುಸ್ತಕವನ್ನು ಕೊಡಬೇಕು. ಅವನು ಸೇವಾ ವರದಿಯನ್ನು ಮೊದಲ ಸಲ ಕೊಟ್ಟ ಬಳಿಕ ಅವನು ಹೊಸ ಪ್ರಚಾರಕನಾಗಿದ್ದಾನೆಂದು ಸಭೆಗೆ ಚಿಕ್ಕ ಪ್ರಕಟನೆ ಮಾಡಬೇಕು.
ಪ್ರಚಾರಕರಾಗಲು ಮಕ್ಕಳಿಗೆ ಸಹಾಯ ಮಾಡಿ
13 ಸಭ್ಯ ನಡತೆಯಿರುವ ಚಿಕ್ಕ ಮಕ್ಕಳು ಸಹ ಪ್ರಚಾರಕರಾಗಬಹುದು. ಚಿಕ್ಕ ಮಕ್ಕಳನ್ನು ಯೇಸು ತನ್ನ ಬಳಿಗೆ ಬರಮಾಡಿಕೊಂಡನು ಮತ್ತು ಆಶೀರ್ವದಿಸಿದನು. (ಮತ್ತಾ. 19:13-15; 21:15, 16) ಪುಟ್ಟ ಮಕ್ಕಳಿಗೂ ಸುವಾರ್ತೆ ಸಾರಬೇಕೆಂದು ಮನಸ್ಸಿರುತ್ತದೆ. ಅವರಿಗೆ ಸಹಾಯಮಾಡುವ ಮುಖ್ಯ ಜವಾಬ್ದಾರಿ ಹೆತ್ತವರದ್ದು. ಸಭೆಯಲ್ಲಿರುವ ಇತರರೂ ಸಹಾಯ ಮಾಡಬಹುದು. ಹೆತ್ತವರೇ ನೆನಪಿಡಿ, ಸೇವೆಯಲ್ಲಿ ನೀವಿಡುವ ಉತ್ತಮ ಮಾದರಿಯು ದೇವರ ಸೇವೆಯನ್ನು ಹುರುಪಿನಿಂದ ಮಾಡುವಂತೆ ಮಕ್ಕಳನ್ನು ಪ್ರಚೋದಿಸುತ್ತದೆ. ಬೇರೆ ಯಾವ ವಿಧಗಳಲ್ಲಿ ನೀವು ಮಕ್ಕಳಿಗೆ ಸಹಾಯ ಮಾಡಬಹುದು?
14 ಮಗ/ಮಗಳು ಪ್ರಚಾರಕರಾಗಲು ಬಯಸುವಲ್ಲಿ ಹೆತ್ತವರು ಅದನ್ನು ಸೇವಾ ಸಮಿತಿಯ ಒಬ್ಬ ಹಿರಿಯನಿಗೆ ತಿಳಿಸಬಹುದು. ಆ ಚಿಕ್ಕ ಹುಡುಗನೊಂದಿಗೆ ಮತ್ತು ಸತ್ಯದಲ್ಲಿರುವ ಅವನ ಹೆತ್ತವರೊಂದಿಗೆ ಅಥವಾ ಪೋಷಕರೊಂದಿಗೆ ಇಬ್ಬರು ಹಿರಿಯರು (ಸೇವಾ ಸಮಿತಿಯಲ್ಲಿರುವ ಹಿರಿಯನೊಬ್ಬ ಮತ್ತು ಇನ್ನೊಬ್ಬ ಹಿರಿಯ) ಮಾತಾಡುವಂತೆ ಸಂಯೋಜಕನು ಏರ್ಪಾಡು ಮಾಡುತ್ತಾನೆ. ಬೈಬಲಿನ ಮುಖ್ಯ ಸತ್ಯಗಳು ಆ ಹುಡುಗನಿಗೆ ತಿಳಿದಿದ್ದರೆ ಮತ್ತು ಸಾರಲು ತನಗೆ ಮನಸ್ಸಿದೆ ಎಂದು ಸ್ಪಷ್ಟವಾಗಿ ತೋರಿಸಿದ್ದರೆ ಅವನು ತಕ್ಕಮಟ್ಟಿಗೆ ಪ್ರಗತಿ ಮಾಡಿದ್ದಾನೆ ಎಂದರ್ಥ. ಇದನ್ನು ಪರಿಗಣಿಸಿದ ನಂತರ ಮತ್ತು ಅವನಿಗೆ ಅನ್ವಯಿಸುವ ಅಂಶಗಳನ್ನು ಚರ್ಚಿಸಿದ ಬಳಿಕ ಹುಡುಗನು ಪ್ರಚಾರಕನಾಗಲು ಅರ್ಹನಾ ಇಲ್ಲವಾ ಎಂದು ಇಬ್ಬರು ಹಿರಿಯರು ನಿರ್ಣಯಿಸುವರು. (ಲೂಕ 6:45; ರೋಮ. 10:10) ದೊಡ್ಡವರಿಗೆ ಮಾತ್ರ ಅನ್ವಯಿಸುವ ವಿಷಯಗಳನ್ನು ಹಿರಿಯರು ಮಕ್ಕಳೊಂದಿಗೆ ಚರ್ಚಿಸುವ ಅಗತ್ಯವಿಲ್ಲ.
15 ಮಕ್ಕಳೊಂದಿಗೆ ಚರ್ಚಿಸುವಾಗ ಅವರು ಪ್ರಗತಿ ಮಾಡುತ್ತಿರುವುದಕ್ಕಾಗಿ ಹಿರಿಯರು ಪ್ರಶಂಸಿಸಬೇಕು. ದೀಕ್ಷಾಸ್ನಾನ ಪಡೆಯುವ ಗುರಿಯನ್ನಿಡಲು ಪ್ರೋತ್ಸಾಹಿಸಬೇಕು. ಮಕ್ಕಳ ಹೃದಯದಲ್ಲಿ ಸತ್ಯವನ್ನು ನಾಟಿಸಲು ಶ್ರಮಿಸಿರುವ ಹೆತ್ತವರನ್ನೂ ಪ್ರಶಂಸಿಸಬೇಕು. ಮಕ್ಕಳಿಗೆ ಇನ್ನಷ್ಟು ಸಹಾಯ ಮಾಡಲಿಕ್ಕಾಗಿ ಹೆತ್ತವರು ಈ ಪುಸ್ತಕದ ಪುಟ 175-177ರಲ್ಲಿರುವ “ಹೆತ್ತವರಿಗೆ ಕಿವಿಮಾತು” ಎಂಬ ಲೇಖನ ಓದುವಂತೆ ಹೇಳಿ.
ಸಮರ್ಪಣೆ ಮತ್ತು ದೀಕ್ಷಾಸ್ನಾನ
16 ನೀವು ಯೆಹೋವನ ಬಗ್ಗೆ ತಿಳಿದುಕೊಂಡಿದ್ದೀರಿ. ಆತನನ್ನು ಪ್ರೀತಿಸುತ್ತೀರಿ. ಹಾಗಾಗಿಯೇ ಆತನ ಆಜ್ಞೆಗಳನ್ನು ಪಾಲಿಸುತ್ತಿದ್ದೀರಿ, ಸೇವೆಯನ್ನು ಮಾಡುತ್ತಿದ್ದೀರಿ. ಹೀಗೆ ನೀವು ಆತನೊಂದಿಗೆ ವೈಯಕ್ತಿಕ ಸಂಬಂಧಕ್ಕೆ ಬಂದಿದ್ದೀರಿ. ಈ ಬಂಧವನ್ನು ಇನ್ನೂ ಬಲಪಡಿಸಲು ನೀವೇನು ಮಾಡಬೇಕು? ನಿಮ್ಮ ಜೀವನವನ್ನು ಆತನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯಬೇಕು.—ಮತ್ತಾ. 28:19, 20.
17 ಸಮರ್ಪಣೆ ಅಂದರೆ ಒಂದು ಪವಿತ್ರ ಉದ್ದೇಶಕ್ಕಾಗಿ ಯಾವುದನ್ನಾದರೂ ಪ್ರತ್ಯೇಕವಾಗಿಡುವುದು. ನಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವುದು ಅಂದರೆ ನಮ್ಮ ಜೀವನವನ್ನು ಆತನ ಸೇವೆಗಾಗಿ ಮುಡುಪಾಗಿಡುತ್ತೇವೆಂದು ಮತ್ತು ಆತನು ಹೇಳುವಂತೆ ನಡೆಯುತ್ತೇವೆಂದು ಪ್ರಾರ್ಥನೆಯಲ್ಲಿ ದೇವರಿಗೆ ಮಾತು ಕೊಡುವುದು. (ಧರ್ಮೋ. 5:9) ಇದು ವೈಯಕ್ತಿಕ ವಿಚಾರ. ಇದನ್ನು ನೀವೇ ಮಾಡಬೇಕು, ಬೇರೆ ಯಾರೂ ನಿಮಗಾಗಿ ಮಾಡಲು ಆಗುವುದಿಲ್ಲ.
18 ನೀವು ಯೆಹೋವನಿಗೆ ಸೇರಿದವರೆಂದು ಪ್ರಾರ್ಥನೆಯಲ್ಲಿ ಹೇಳಿದರಷ್ಟೇ ಸಾಲದು. ಸಮರ್ಪಣೆ ಮಾಡಿಕೊಂಡಿದ್ದೀರಿ ಎಂದು ನೀವು ಇತರರಿಗೆ ತೋರಿಸಿಕೊಡಬೇಕು. ಹೇಗೆ? ಯೇಸುವಿನಂತೆ ನೀರಿನ ದೀಕ್ಷಾಸ್ನಾನ ಪಡೆಯುವ ಮೂಲಕ. (1 ಪೇತ್ರ 2:21; 3:21) ನಿಮಗೆ ಯೆಹೋವನ ಸೇವೆ ಮಾಡಲು ಮನಸ್ಸಿದ್ದರೆ ಮತ್ತು ದೀಕ್ಷಾಸ್ನಾನ ಪಡೆಯಲು ಇಷ್ಟವಿದ್ದರೆ ಹಿರಿಯರ ಮಂಡಲಿಯ ಸಂಯೋಜಕನಿಗೆ ತಿಳಿಸಿ. ನೀವು ದೀಕ್ಷಾಸ್ನಾನಕ್ಕೆ ಅರ್ಹರಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಕೆಲವು ಹಿರಿಯರು ನಿಮ್ಮೊಂದಿಗೆ ಮಾತಾಡುವಂತೆ ಅವನು ಏರ್ಪಾಡು ಮಾಡುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಇದೇ ಪುಸ್ತಕದ ಪುಟ 178-180ರಲ್ಲಿರುವ “ದೀಕ್ಷಾಸ್ನಾನವಾಗಿರದ ಪ್ರಚಾರಕರಿಗೆ ಸಲಹೆಗಳು” ಮತ್ತು ಪುಟ 181-188ರಲ್ಲಿರುವ “ದೀಕ್ಷಾಸ್ನಾನ ಪಡೆಯಲು ಬಯಸುವವರಿಗೆ ಕೇಳಲಾಗುವ ಪ್ರಶ್ನೆಗಳು” ಎಂಬ ಲೇಖನಗಳನ್ನು ನೋಡಿ.
ಸಾರುವ ಕಾರ್ಯದ ಪ್ರಗತಿಯನ್ನು ಏಕೆ ದಾಖಲಿಸಲಾಗುತ್ತದೆ?
19 ಲೋಕದಲ್ಲೆಲ್ಲ ನಡೆಯುತ್ತಿರುವ ಸಾರುವ ಕಾರ್ಯವನ್ನು ಅನೇಕ ವರ್ಷಗಳಿಂದ ದಾಖಲಿಸಲಾಗುತ್ತಿದೆ. ಈ ದಾಖಲೆಯು ಯೆಹೋವನ ಜನರಲ್ಲಿ ಸ್ಫೂರ್ತಿ ತುಂಬುತ್ತದೆ. ಸುವಾರ್ತೆಯು ಭೂವ್ಯಾಪಕವಾಗಿ ಸಾರಲ್ಪಡುತ್ತದೆ ಎಂದು ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಹೇಳಿದನು. ಆ ಮಾತು ಹೇಗೆ ನೆರವೇರುತ್ತದೆಂದು ತಿಳಿಯಲು ಅಂದಿನಿಂದ ಇಂದಿನ ವರೆಗೂ ನಿಜ ಕ್ರೈಸ್ತರು ತುಂಬ ಆಸಕ್ತರಾಗಿದ್ದಾರೆ.—ಮತ್ತಾ. 28:19, 20; ಮಾರ್ಕ 13:10; ಅ. ಕಾ. 1:8.
20 ಉದಾಹರಣೆಗೆ, ಯೇಸುವಿನ ಸಮಯದಲ್ಲಿದ್ದ ಶಿಷ್ಯರು ಸಾರುವ ಕಾರ್ಯ ಚೆನ್ನಾಗಿ ಆಗಿದ್ದನ್ನು ಒಬ್ಬರು ಇನ್ನೊಬ್ಬರಿಗೆ ತಿಳಿಸಿ ತುಂಬ ಸಂತೋಷಪಟ್ಟರು. (ಮಾರ್ಕ 6:30) ಕ್ರಿ.ಶ. 33ರ ಪಂಚಾಶತ್ತಮ ಹಬ್ಬದ ದಿನದಂದು ಪವಿತ್ರಾತ್ಮವು ಸುಮಾರು 120 ಮಂದಿಯ ಮೇಲೆ ಸುರಿಸಲ್ಪಟ್ಟಿತು. ಸ್ವಲ್ಪದರಲ್ಲೇ ಶಿಷ್ಯರ ಸಂಖ್ಯೆ ಸುಮಾರು 3,000ಕ್ಕೆ, ಬಳಿಕ ಸುಮಾರು 5,000ಕ್ಕೆ ಏರಿತು. “ರಕ್ಷಿಸಲ್ಪಡುತ್ತಿದ್ದವರನ್ನು ಯೆಹೋವನು ಪ್ರತಿದಿನವೂ ಅವರೊಂದಿಗೆ ಸೇರಿಸುತ್ತಾ ಇದ್ದನು” ಮತ್ತು ‘ಯಾಜಕರಲ್ಲಿಯೂ ಬಹು ಜನರು ಕ್ರಿಸ್ತನಂಬಿಕೆಗೆ ವಿಧೇಯರಾಗಲು ಆರಂಭಿಸಿದರು.’ (ಅ. ಕಾ. 1:15; 2:5-11, 41, 47; 4:4; 6:7) ಪ್ರಗತಿಯ ಕುರಿತಾದ ಈ ರೋಮಾಂಚಕ ವರದಿ ಶಿಷ್ಯರೆಲ್ಲರಲ್ಲಿ ಹೊಸ ಹುರುಪನ್ನು ತುಂಬಿತು. ಹಾಗಾಗಿಯೇ ಯೆಹೂದಿ ಧಾರ್ಮಿಕ ಗುರುಗಳು ತುಂಬ ವಿರೋಧಿಸಿದರೂ ಹಿಂಸಿಸಿದರೂ ಶಿಷ್ಯರು ಸಾರುವುದನ್ನು ನಿಲ್ಲಿಸದೆ ಮುಂದುವರಿಸಿದರು.
21 ಪೌಲನು ವರದಿ ಮಾಡಿದಂತೆ ಸುಮಾರು ಕ್ರಿ.ಶ. 60-61ರಷ್ಟಕ್ಕೆ ಸುವಾರ್ತೆಯು “ಲೋಕದಲ್ಲೆಲ್ಲಾ ಫಲವನ್ನು ಫಲಿಸುತ್ತಾ ಅಭಿವೃದ್ಧಿ ಹೊಂದುತ್ತಾ” ಇತ್ತು ಹಾಗೂ ‘ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೆ ಸಾರಲ್ಪಟ್ಟಿತು.’ (ಕೊಲೊ. 1:5, 6, 23) ಆರಂಭದ ಕ್ರೈಸ್ತರು ದೇವರ ವಾಕ್ಯಕ್ಕೆ ವಿಧೇಯರಾದರು ಮತ್ತು ಪವಿತ್ರಾತ್ಮವು ಅವರಲ್ಲಿ ಬಲವನ್ನು ತುಂಬಿತು. ಹಾಗಾಗಿ ಕ್ರಿ.ಶ. 70ರಲ್ಲಿ ಯೆರೂಸಲೇಮ್ ನಾಶವಾಗುವುದಕ್ಕೆ ಮುಂಚೆಯೇ ಸಾರುವ ಕೆಲಸವನ್ನು ಬಹು ವ್ಯಾಪಕವಾಗಿ ಮಾಡಲು ಅವರಿಂದಾಯಿತು. ಈ ಪ್ರಗತಿಯ ಬಗ್ಗೆ ವರದಿಗಳನ್ನು ಕೇಳಿಸಿಕೊಂಡಾಗ ಆ ಸಮಯದ ನಂಬಿಗಸ್ತ ಕ್ರೈಸ್ತರಿಗೆ ತುಂಬ ಪ್ರೋತ್ಸಾಹ ಸಿಕ್ಕಿತು ಎಂಬುದರಲ್ಲಿ ಸಂಶಯವಿಲ್ಲ.
ಅಂತ್ಯ ಬರುವುದಕ್ಕೆ ಮುಂಚೆ ಸಾರುವ ಕೆಲಸವನ್ನು ಮಾಡಿಮುಗಿಸಲು ನಿಮ್ಮಿಂದ ಆಗುವುದೆಲ್ಲವನ್ನು ಮಾಡುತ್ತಿದ್ದೀರಾ?
22 ಇಂದು ಕೂಡ ಯೆಹೋವನ ಸಂಘಟನೆಯು ಮತ್ತಾಯ 24:14ರ ನೆರವೇರಿಕೆಯಾಗಿರುವ ಸಾರುವ ಕೆಲಸದ ಕುರಿತು ವರದಿಗಳನ್ನು ದಾಖಲಿಸುತ್ತಿದೆ. ಆ ವಚನ ತಿಳಿಸುವುದು: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.” ದೇವರಿಗೆ ಸಮರ್ಪಿಸಿಕೊಂಡಿರುವ ನಾವು ಬೇಗ ಬೇಗನೆ ಮಾಡಬೇಕಾದ ಕೆಲಸ ಸುವಾರ್ತೆ ಸಾರುವುದಾಗಿದೆ. ಅಂತ್ಯ ಬರುವುದಕ್ಕೆ ಮುಂಚೆ ಇದನ್ನು ಮಾಡಿಮುಗಿಸಲು ನಮ್ಮಿಂದ ಆಗುವುದೆಲ್ಲವನ್ನು ಮಾಡಬೇಕು. ಈ ಕೆಲಸವು ಪೂರ್ತಿಯಾಗಿ ಮುಗಿಯುವಂತೆ ಯೆಹೋವನು ಖಂಡಿತ ನೋಡಿಕೊಳ್ಳುತ್ತಾನೆ. ನಾವು ನಮ್ಮ ಪಾಲಿನ ಕೆಲಸವನ್ನು ಚೆನ್ನಾಗಿ ಮಾಡಿದರೆ ಆತನು ನಮ್ಮನ್ನು ಆಶೀರ್ವದಿಸುತ್ತಾನೆ.—ಯೆಹೆ. 3:18-21.
ಸೇವೆಯನ್ನು ವರದಿಸುವುದು ಹೇಗೆ?
23 ಸೇವೆಯ ಕುರಿತು ಏನೆಲ್ಲ ವರದಿ ಮಾಡಬೇಕು? ಸಂಘಟನೆಯು ಕೊಟ್ಟಿರುವ ‘ಕ್ಷೇತ್ರ ಸೇವಾ ವರದಿ’ಯಲ್ಲಿ ಹೇಳಿರುವುದನ್ನೆಲ್ಲ ವರದಿ ಮಾಡಬೇಕು. ಅದನ್ನು ಹೇಗೆ ಭರ್ತಿ ಮಾಡಬೇಕೆಂದು ಕೆಳಗೆ ಕೊಡಲಾಗಿದೆ.
24 ‘ಕ್ಷೇತ್ರ ಸೇವಾ ವರದಿ’ಯಲ್ಲಿ “ನೀಡುವಿಕೆಗಳು (ಮುದ್ರಿತ ಮತ್ತು ಎಲೆಕ್ಟ್ರಾನಿಕ್)” ಎಂಬಲ್ಲಿ ನೀವು ಎಲೆಕ್ಟ್ರಾನಿಕ್ ರೂಪದಲ್ಲಿ ಮತ್ತು ಮುದ್ರಿತ ರೂಪದಲ್ಲಿರುವ ಎಷ್ಟು ಪ್ರಕಾಶನಗಳನ್ನು ದೀಕ್ಷಾಸ್ನಾನವಾಗದ ಜನರಿಗೆ ಕೊಟ್ಟಿದ್ದೀರೋ ಅದರ ಒಟ್ಟು ಸಂಖ್ಯೆಯನ್ನು ಬರೆಯಿರಿ. “ವಿಡಿಯೋ ಪ್ರದರ್ಶನಗಳು” ಎಂಬಲ್ಲಿ ನಮ್ಮ ವಿಡಿಯೋಗಳನ್ನು ಎಷ್ಟು ಸಾರಿ ತೋರಿಸಿದ್ದೀರೋ ಅದರ ಒಟ್ಟು ಸಂಖ್ಯೆಯನ್ನು ಬರೆಯಿರಿ.
25 ಬೈಬಲ್ ಕುರಿತು ಹೆಚ್ಚು ತಿಳಿಯಲು ಬಯಸುವ ಆಸಕ್ತ ಜನರನ್ನು ನಾವೆಷ್ಟು ಸಲ ಭೇಟಿಮಾಡಿದ್ದೇವೆಂದು ಲೆಕ್ಕಿಸಿ ಒಟ್ಟು ಸಂಖ್ಯೆಯನ್ನು “ಪುನರ್ಭೇಟಿಗಳು” ಎಂಬ ಸಾಲಿನಲ್ಲಿ ಬರೆಯಬೇಕು. ಆಸಕ್ತ ವ್ಯಕ್ತಿಯನ್ನು ಅವರ ಮನೆಗೆ ಹೋಗಿ ಭೇಟಿಯಾದರೂ, ಅವರಿಗೆ ಪತ್ರ ಬರೆದರೂ, ಫೋನ್ ಮಾಡಿದರೂ, ಮೊಬೈಲ್‌ನಿಂದ ಒಂದು ಮೆಸೇಜ್ ಕಳುಹಿಸಿದರೂ ಇ-ಮೇಲ್ ಕಳುಹಿಸಿದರೂ ಅದೊಂದು ಪುನರ್ಭೇಟಿಯಾಗುತ್ತದೆ. ಇತರ ಸಾಹಿತ್ಯವನ್ನು ಕೊಡಲಿಕ್ಕೆಂದು ಹೋದರೂ ಒಂದು ಪುನರ್ಭೇಟಿಯೇ. ಪ್ರತಿ ಸಲ ಬೈಬಲ್ ಅಧ್ಯಯನ ನಡೆಸಿದಾಗ ಒಂದೊಂದು ಪುನರ್ಭೇಟಿಯೆಂದು ಲೆಕ್ಕಮಾಡಿ. ದೀಕ್ಷಾಸ್ನಾನ ಪಡೆಯದ ಮಗ/ಮಗಳು ಇರುವಲ್ಲಿ ಪ್ರತಿ ವಾರ ಕುಟುಂಬ ಆರಾಧನೆ ನಡೆಸುವಾಗ ತಂದೆ ಅಥವಾ ತಾಯಿ ಒಂದು ಪುನರ್ಭೇಟಿ ಎಂದು ಲೆಕ್ಕಿಸಬಹುದು.
26 ನಿಮ್ಮ ಬೈಬಲ್ ವಿದ್ಯಾರ್ಥಿಯೊಂದಿಗೆ ಬೈಬಲ್ ಅಧ್ಯಯನವನ್ನು ಪ್ರತಿ ವಾರ ನಡೆಸುವುದಾದರೂ ಪ್ರತಿ ತಿಂಗಳು ಕ್ಷೇತ್ರ ಸೇವಾ ವರದಿಯಲ್ಲಿ ಅದನ್ನು ಒಂದು ಬೈಬಲ್ ಅಧ್ಯಯನ ಎಂದು ಬರೆಯಬೇಕು. ಹೀಗೆ ನೀವು ಒಟ್ಟು ಎಷ್ಟು ಬೈಬಲ್ ಅಧ್ಯಯನ ನಡೆಸುತ್ತಿದ್ದೀರೆಂದು ಬರೆಯಬೇಕು. ದೀಕ್ಷಾಸ್ನಾನ ಪಡೆಯದ ವ್ಯಕ್ತಿಯೊಂದಿಗೆ ಅಥವಾ ಹೊಸದಾಗಿ ದೀಕ್ಷಾಸ್ನಾನ ಪಡೆದಿದ್ದರೂ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕವನ್ನು ಇನ್ನೂ ಮುಗಿಸಿರದ ವ್ಯಕ್ತಿಯೊಂದಿಗೆ ನೀವು ಅಧ್ಯಯನ ಮಾಡಿದರೆ ಅದನ್ನೂ ಲೆಕ್ಕಿಸಿ. ಸೇವಾ ಸಮಿತಿಯ ಮಾರ್ಗದರ್ಶನದ ಪ್ರಕಾರ ನಿಷ್ಕ್ರಿಯ ಸಹೋದರ/ಸಹೋದರಿಯೊಂದಿಗೆ ಅಧ್ಯಯನ ಮಾಡಿದರೆ ಅದೂ ಒಂದು ಬೈಬಲ್ ಅಧ್ಯಯನವೇ.
27 “ತಾಸುಗಳು” ಎಂಬ ಸಾಲಿನಲ್ಲಿ ಏನು ಬರೆಯಬೇಕು? ಮನೆ-ಮನೆ ಸೇವೆ, ಪುನರ್ಭೇಟಿ, ಬೈಬಲ್ ಅಧ್ಯಯನ, ಅನೌಪಚಾರಿಕ ಮತ್ತು ಔಪಚಾರಿಕ ಸಾಕ್ಷಿಕಾರ್ಯದಲ್ಲಿ ನೀವೆಷ್ಟು ಸಮಯವನ್ನು ಕಳೆದಿದ್ದೀರಿ ಎಂಬುದನ್ನು ನಿಖರವಾಗಿ ಲೆಕ್ಕಿಸಿ ಒಟ್ಟು ತಾಸುಗಳನ್ನು ಬರೆಯಬೇಕು. ಇಬ್ಬರು ಪ್ರಚಾರಕರು ಜೊತೆಯಾಗಿ ಸೇವೆ ಮಾಡುತ್ತಿರುವುದಾದರೆ ತಾಸನ್ನು ಇಬ್ಬರೂ ಲೆಕ್ಕಿಸಬಹುದು. ಆದರೆ ಪುನರ್ಭೇಟಿ ಅಥವಾ ಬೈಬಲ್ ಅಧ್ಯಯನವನ್ನು ಒಬ್ಬರು ಮಾತ್ರ ವರದಿಸಬೇಕು. ಪ್ರತಿ ವಾರ ಕುಟುಂಬ ಆರಾಧನೆಯ ಸಮಯದಲ್ಲಿ ಮಕ್ಕಳಿಗೆ ಕಲಿಸುವಾಗ ತಂದೆ ತಾಯಿ ಇಬ್ಬರೂ ವಾರಕ್ಕೆ ಒಂದೊಂದು ತಾಸನ್ನು ಲೆಕ್ಕಿಸಬಹುದು. ಸಹೋದರನು ಸಾರ್ವಜನಿಕ ಭಾಷಣ ಕೊಟ್ಟಾಗ ಅವನೂ ಆ ಭಾಷಣವನ್ನು ಅನುವಾದಿಸುವವನೂ ಆ ಸಮಯವನ್ನು ಲೆಕ್ಕಿಸಬಹುದು. ಆದರೆ ಕ್ಷೇತ್ರ ಸೇವೆಗೆ ಹೋಗಲು ತಯಾರಾಗುವುದು, ಕ್ಷೇತ್ರ ಸೇವಾ ಕೂಟಕ್ಕೆ ಹಾಜರಾಗುವುದು, ಬೇರೆಯವರಿಗೆ ಸಹಾಯಮಾಡುವುದು ಇವುಗಳೆಲ್ಲ ಪ್ರಾಮುಖ್ಯ ಕೆಲಸಗಳಾದರೂ ಅದಕ್ಕಾಗಿ ವ್ಯಯಿಸಿದ ಸಮಯವನ್ನು ಕ್ಷೇತ್ರ ಸೇವೆಯ ತಾಸುಗಳೆಂದು ಲೆಕ್ಕಿಸಬಾರದು.
28 ಸೇವೆಯ ಸಮಯವನ್ನು ಎಲ್ಲಿಂದ ಎಲ್ಲಿಯ ವರೆಗೆ ಲೆಕ್ಕಿಸಬೇಕೆಂದು ನಿರ್ಣಯಿಸಲು ಪ್ರತಿಯೊಬ್ಬ ಪ್ರಚಾರಕನು ಆ ಕುರಿತು ಪ್ರಾರ್ಥಿಸಿ ತನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯನ್ನು ಉಪಯೋಗಿಸಬೇಕು. ಕೆಲವು ಪ್ರದೇಶಗಳಲ್ಲಿ ಮನೆಗಳು ಹತ್ತಿರ ಹತ್ತಿರ ಇದ್ದರೆ ಇನ್ನು ಕೆಲವು ಕಡೆ ದೂರ ದೂರ ಇರುತ್ತವೆ. ಹಾಗಾಗಿ ಪ್ರಚಾರಕರು ಒಂದು ಮನೆಯಿಂದ ಇನ್ನೊಂದಕ್ಕೆ ಹೋಗಲು ತುಂಬ ಪ್ರಯಾಣಿಸಬೇಕಾಗುತ್ತದೆ. ಸೇವಾ ಕ್ಷೇತ್ರಗಳು ಬೇರೆ ಬೇರೆ ರೀತಿ ಇರುವುದರಿಂದ ತಾಸುಗಳನ್ನು ಲೆಕ್ಕಿಸುವುದರ ಬಗ್ಗೆ ಪ್ರಚಾರಕರಿಗೆ ಭಿನ್ನ ಭಿನ್ನ ಅಭಿಪ್ರಾಯವಿರುತ್ತದೆ. ಹಾಗಾಗಿ ತಾಸುಗಳನ್ನು ಹೇಗೆ ಲೆಕ್ಕಿಸಬೇಕೆಂಬ ವಿಷಯದಲ್ಲಿ ಆಡಳಿತ ಮಂಡಲಿಯು ತಮ್ಮ ಮನಸ್ಸಾಕ್ಷಿಗೆ ಅನಿಸಿದ್ದನ್ನೇ ಸಹೋದರರೆಲ್ಲರೂ ಪಾಲಿಸಬೇಕೆಂದು ಒತ್ತಾಯಿಸುವುದಿಲ್ಲ. ಈ ವಿಷಯದಲ್ಲಿ ನಿಯಮಗಳನ್ನು ಮಾಡಲಿಕ್ಕೂ ಯಾರನ್ನೂ ನೇಮಿಸಿಲ್ಲ.—ಮತ್ತಾ. 6:1; 7:1; 1 ತಿಮೊ. 1:5.
29 ಕ್ಷೇತ್ರ ಸೇವಾ ವರದಿಯಲ್ಲಿ ಪೂರ್ಣ ತಾಸುಗಳನ್ನು ಮಾತ್ರ ಬರೆಯಬೇಕು, ನಿಮಿಷಗಳನ್ನು ಬರೆಯಬಾರದು. ಆದರೆ ವಯಸ್ಸಾದವರು, ಹಾಸಿಗೆ ಹಿಡಿದಿರುವವರು, ಆಸ್ಪತ್ರೆಯಲ್ಲಿ ದಾಖಲಾಗಿರುವವರು ಅಥವಾ ನಿರ್ಬಲರು 15, 30 ಅಥವಾ 45 ನಿಮಿಷ ಸೇವೆ ಮಾಡಿದರೂ ಅದನ್ನು ವರದಿಸಬಹುದು. ಆಗ ಅವರು ‘ನಿಯತ ಪ್ರಚಾರಕ’ರಾಗಿಯೇ ಇರುತ್ತಾರೆ. ಕಾಯಿಲೆ, ಅಪಘಾತದಿಂದಾಗಿ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ಹೊರಗೆ ಹೋಗಲು ಇಲ್ಲವೆ ನಡೆಯಲು ಆಗದವರಿಗೂ ಇದು ಅನ್ವಯಿಸುತ್ತದೆ. ತಮ್ಮಿಂದ ಏನೂ ಮಾಡಲು ಆಗದ ಪರಿಸ್ಥಿತಿಯಲ್ಲಿರುವವರು ಮಾತ್ರ ಈ ರೀತಿ ವರದಿ ಮಾಡಬಹುದು. ಯಾರಿಗೆ ಇಂಥ ವಿನಾಯಿತಿಯನ್ನು ಕೊಡಬಹುದೆಂದು ಸೇವಾ ಸಮಿತಿ ನಿರ್ಣಯಿಸುತ್ತದೆ.
‘ಸಭೆಯ ಪ್ರಚಾರಕನ ದಾಖಲೆ’
30 ನೀವು ಪ್ರತಿ ತಿಂಗಳು ಕೊಡುವ ಸೇವಾ ವರದಿಯನ್ನು ನಿಮ್ಮ ಹೆಸರಿನಲ್ಲಿರುವ ‘ಸಭೆಯ ಪ್ರಚಾರಕನ ದಾಖಲೆ’ಯಲ್ಲಿ ಬರೆಯಲಾಗುತ್ತದೆ. ಇದು ಸಭೆಯ ಸ್ವತ್ತು. ಒಂದುವೇಳೆ ನೀವು ಬೇರೆ ಪ್ರದೇಶಕ್ಕೆ ಮನೆ ಬದಲಾಯಿಸಲಿಕ್ಕಿದ್ದರೆ ಮೊದಲೇ ಹಿರಿಯರಿಗೆ ತಿಳಿಸಿ. ನೀವು ಹೋಗಲಿರುವ ಸಭೆಯ ಹಿರಿಯರಿಗೂ ತಿಳಿಸಿ. ಆಗ ಆ ಸಭೆಯ ಕಾರ್ಯದರ್ಶಿಯು ನಿಮ್ಮ ಸಭೆಯಿಂದ ನಿಮ್ಮ (ನಿಮ್ಮ ಕುಟುಂಬದವರ) ದಾಖಲೆಯನ್ನು ಹೊಸ ಸಭೆಗೆ ಕಳುಹಿಸಿದ್ದಾರೆಂದು ಖಚಿತಪಡಿಸಿಕೊಳ್ಳಬೇಕು. ಇದರಿಂದ ಹಿರಿಯರಿಗೆ ನಿಮ್ಮನ್ನು ಸ್ವಾಗತಿಸಲು ಮತ್ತು ನಿಮ್ಮ ನಂಬಿಕೆಯನ್ನು ಬಲವಾಗಿಡಲಿಕ್ಕಾಗಿ ಸಹಾಯ ಕೊಡಲು ಆಗುವುದು. ಆದರೆ ನೀವು ಬೇರೆ ಸ್ಥಳಕ್ಕೆ ಹೋಗಿ ಮೂರು ತಿಂಗಳೊಳಗೆ ವಾಪಸ್ಸು ಬರುವುದಿದ್ದರೆ ಪ್ರತಿ ತಿಂಗಳು ಸೇವಾ ವರದಿಯನ್ನು ನಿಮ್ಮ ಸಭೆಗೇ ತಲುಪಿಸಿ.
ಕ್ಷೇತ್ರ ಸೇವಾ ವರದಿಯನ್ನು ಏಕೆ ಕೊಡಬೇಕು?
31 ಸೇವಾ ವರದಿಯನ್ನು ಕೊಡಲು ನೀವು ಮರೆತುಬಿಡುತ್ತೀರಾ? ಕೆಲವೊಮ್ಮೆ ನಾವೆಲ್ಲರೂ ಮರೆತುಬಿಡುತ್ತೇವೆ. ಆದರೆ ಅದನ್ನು ಕೊಡುವುದು ಏಕೆ ಪ್ರಾಮುಖ್ಯ ಅನ್ನೋದನ್ನು ಅರ್ಥಮಾಡಿಕೊಂಡರೆ ಅದನ್ನು ಸರಿಯಾದ ಸಮಯಕ್ಕೆ ಕೊಡುವ ಒಳ್ಳೇ ರೂಢಿಯನ್ನು ಬೆಳೆಸಿಕೊಳ್ಳಲು ಆಗುತ್ತದೆ.
32 ‘ನಾನೆಷ್ಟು ಸೇವೆ ಮಾಡುತ್ತಿದ್ದೇನೆ ಅನ್ನೋದು ಯೆಹೋವನಿಗೆ ಗೊತ್ತಿದೆಯಲ್ವಾ, ಅಂದಮೇಲೆ ನಾನ್ಯಾಕೆ ಅದನ್ನು ಸಭೆಗೆ ವರದಿಸಬೇಕು?’ ಎಂದು ಕೆಲವರು ಕೇಳಿದ್ದಾರೆ. ನಿಜ, ನಾವೇನು ಮಾಡುತ್ತಿದ್ದೇವೆ ಅಂತ ಯೆಹೋವನಿಗೆ ಗೊತ್ತಿದೆ. ಸೇವೆಯನ್ನು ಪೂರ್ಣ ಮನಸ್ಸಿನಿಂದ ಮಾಡುತ್ತಿದ್ದೇವಾ ಅಥವಾ ಹೆಚ್ಚು ಮಾಡಲು ಆಗುವುದಾದರೂ ವರದಿ ಕೊಡಬೇಕೆಂಬ ಉದ್ದೇಶದಿಂದ ಅಷ್ಟೋ ಇಷ್ಟೋ ಮಾಡುತ್ತಿದ್ದೇವಾ ಎನ್ನುವುದು ಸಹ ಯೆಹೋವನಿಗೆ ಗೊತ್ತಿದೆ. ಆದರೆ ವರದಿ ಇಡುವುದರಲ್ಲಿ ಯೆಹೋವನೇ ಒಳ್ಳೇ ಮಾದರಿ ಇಟ್ಟಿದ್ದಾನೆ. ನೋಹ ಎಷ್ಟು ದಿನ ನಾವೆಯೊಳಗಿದ್ದನು, ಇಸ್ರಾಯೇಲ್ಯರು ಎಷ್ಟು ವರ್ಷ ಅರಣ್ಯದಲ್ಲಿ ಅಲೆದಾಡಿದರು ಇದೆಲ್ಲವನ್ನು ಯೆಹೋವನು ದಾಖಲಿಸಿಟ್ಟನು. ತನಗೆ ಎಷ್ಟು ಮಂದಿ ನಂಬಿಗಸ್ತರಾಗಿ ಇದ್ದರು, ಎಷ್ಟು ಮಂದಿ ಇರಲಿಲ್ಲ ಎನ್ನುವುದನ್ನೂ ಲೆಕ್ಕವಿಟ್ಟನು. ಕಾನಾನ್ ದೇಶವನ್ನು ಇಸ್ರಾಯೇಲ್ಯರು ಸ್ವಲ್ಪ ಸ್ವಲ್ಪವಾಗಿ ವಶಪಡಿಸಿಕೊಂಡದ್ದನ್ನು, ಇಸ್ರಾಯೇಲಿನಲ್ಲಿ ನಂಬಿಗಸ್ತರಾಗಿ ಸೇವೆಮಾಡಿದ ನ್ಯಾಯಾಧಿಪತಿಗಳ ಸಾಧನೆಗಳನ್ನು ಯೆಹೋವನು ದಾಖಲಿಸಿದ್ದಾನೆ. ಹೀಗೆ ತನ್ನ ಸೇವಕರ ಎಷ್ಟೋ ಕೆಲಸಗಳನ್ನು ವಿವರವಾಗಿ ಬರವಣಿಗೆಯಲ್ಲಿ ಇಡುವಂತೆ ಆತನು ತನ್ನ ಸೇವಕರನ್ನು ಪ್ರೇರಿಸಿದನು. ಇದು ನಿಖರವಾದ ದಾಖಲೆ ಇಡುವುದನ್ನು ಆತನು ಎಷ್ಟು ಪ್ರಾಮುಖ್ಯವಾಗಿ ನೆನಸುತ್ತಾನೆಂದು ನಮಗೆ ಕಲಿಸುತ್ತದೆ.
33 ಬೈಬಲಿನಲ್ಲಿರುವ ಐತಿಹಾಸಿಕ ಘಟನೆಗಳನ್ನು ನೋಡುವಲ್ಲಿ ದಾಖಲೆಗಳನ್ನು, ಅಂಕಿಸಂಖ್ಯೆಗಳನ್ನು ನಿಖರವಾಗಿ ಬರೆಯಲಾಗಿದೆ ಎಂದು ಗೊತ್ತಾಗುತ್ತದೆ. ಒಂದುವೇಳೆ ನಿಖರವಾದ ಅಂಕಿಅಂಶಗಳನ್ನು ದಾಖಲಿಸದಿದ್ದರೆ ಬೈಬಲಿನಲ್ಲಿ ತಿಳಿಸಲಾಗಿರುವ ಘಟನೆಗಳ ಪೂರ್ಣ ಒಳನೋಟ ನಮಗೆ ಸಿಗುತ್ತಿರಲಿಲ್ಲ ಮತ್ತು ಅವು ನಮ್ಮ ಮೇಲೆ ಅಷ್ಟೊಂದು ಪ್ರಭಾವ ಬೀರುತ್ತಿರಲಿಲ್ಲ. ಕೆಲವು ಉದಾಹರಣೆಗಳು ಇಲ್ಲಿವೆ: ಆದಿಕಾಂಡ 46:27; ವಿಮೋಚನಕಾಂಡ 12:37; ನ್ಯಾಯಸ್ಥಾಪಕರು 7:7; 2 ಅರಸುಗಳು 19:35; 2 ಪೂರ್ವಕಾಲ 14:9-13; ಯೋಹಾನ 6:10; 21:11; ಅ. ಕಾರ್ಯಗಳು 2:41; 19:19.
34 ಯೆಹೋವನ ಸೇವೆಯಲ್ಲಿ ನಾವು ಮಾಡುವುದನ್ನೆಲ್ಲ ವರದಿಯಲ್ಲಿ ಬರೆಯಲು ಸಾಧ್ಯವಿಲ್ಲ ನಿಜ. ಆದರೆ ನಾವು ವರದಿ ಕೊಡಬೇಕೆಂದು ಯೆಹೋವನ ಸಂಘಟನೆ ಹೇಳಿರುವುದಕ್ಕೆ ಒಂದು ಉದ್ದೇಶವಿದೆ. ಒಂದನೇ ಶತಮಾನದಲ್ಲೂ ಅಪೊಸ್ತಲರು ಸುವಾರ್ತೆ ಸಾರಿ ಹಿಂತಿರುಗಿದಾಗ “ತಾವು ಮಾಡಿದ ಮತ್ತು ಬೋಧಿಸಿದ ಎಲ್ಲ ವಿಷಯಗಳ ಕುರಿತು ಯೇಸುವಿಗೆ ವರದಿಮಾಡಿದರು.” (ಮಾರ್ಕ 6:30) ನಾವು ಕೊಡುವ ವರದಿಯಿಂದ ನಾವು ಸೇವೆಯಲ್ಲಿ ಯಾವುದಕ್ಕೆ ಹೆಚ್ಚು ಗಮನಕೊಡಬೇಕಾಗಿದೆ ಎಂದು ಗೊತ್ತಾಗುತ್ತದೆ. ಮೇಲ್ವಿಚಾರಕರು ಸಭೆಯಲ್ಲಿರುವ ಎಲ್ಲರ ವರದಿಗಳನ್ನು ನೋಡುವಾಗ ಸಭೆಯು ಸೇವೆಯ ಯಾವೆಲ್ಲ ಅಂಶಗಳಲ್ಲಿ ಪ್ರಗತಿಯಾಗಿದೆ, ಯಾವುದರಲ್ಲಿ ಪ್ರಗತಿಯಾಗಿಲ್ಲ ಎಂದು ತಿಳಿಯುತ್ತದೆ. ಉದಾಹರಣೆಗೆ, ಪ್ರಚಾರಕರ ಸಂಖ್ಯೆಯಲ್ಲಿ ಪ್ರಗತಿ ನಿಧಾನಗೊಳ್ಳುತ್ತಿದೆಯಾ ಎಂದು ತಿಳಿಯಬಹುದು. ಆಗ ಪ್ರಚಾರಕರನ್ನು ಪ್ರೋತ್ಸಾಹಿಸಲು, ಸಮಸ್ಯೆಗಳಿದ್ದಲ್ಲಿ ಪರಿಹರಿಸಲು ಆಗುತ್ತದೆ. ಮಾತ್ರವಲ್ಲ ಇಡೀ ಸಭೆ ಅಥವಾ ಒಬ್ಬ ಪ್ರಚಾರಕನು ಪ್ರಗತಿ ಆಗುತ್ತಿಲ್ಲವೆಂದು ಕಂಡುಬಂದರೆ ಅವರು ಅದಕ್ಕೆ ಕಾರಣವೇನೆಂದು ತಿಳಿದು ಅದನ್ನು ಬಗೆಹರಿಸಲು ಶ್ರಮಿಸುತ್ತಾರೆ.
35 ಯಾವ ಸ್ಥಳದಲ್ಲಿ ಹೆಚ್ಚು ಪ್ರಗತಿ ಆಗುತ್ತಿದೆ, ಎಲ್ಲಿ ಆಗುತ್ತಿಲ್ಲ? ಜನರು ಸತ್ಯ ತಿಳಿದುಕೊಳ್ಳಲು ಯಾವ ಸಾಹಿತ್ಯ ಬೇಕಿದೆ? ಎಲ್ಲಿ ಹೆಚ್ಚು ಪ್ರಚಾರಕರ ಅಗತ್ಯವಿದೆ? ಇದನ್ನೆಲ್ಲ ಸಂಘಟನೆಯು ಸೇವಾ ವರದಿಗಳಿಂದ ತಿಳಿದುಕೊಳ್ಳುತ್ತದೆ. ಮಾತ್ರವಲ್ಲ ಬೇರೆ ಬೇರೆ ಸ್ಥಳಗಳಲ್ಲಿ ಸಾರುವ ಕೆಲಸಕ್ಕೆ ಎಷ್ಟೆಷ್ಟು ಸಾಹಿತ್ಯ ಬೇಕೆಂದು ತಿಳಿದು ಅದನ್ನು ಒದಗಿಸಲು ಯೋಜನೆ ಮಾಡಲು ಸಹ ಆಗುತ್ತದೆ.
36 ವರದಿಗಳು ನಮ್ಮೆಲ್ಲರಲ್ಲಿ ಹೊಸ ಹುರುಪನ್ನು ತುಂಬುತ್ತವೆ. ಲೋಕದಲ್ಲೆಲ್ಲ ಸುವಾರ್ತೆ ಸಾರಲು ನಮ್ಮ ಸಹೋದರರು ಏನೆಲ್ಲ ಮಾಡುತ್ತಿದ್ದಾರೆಂದು ಕೇಳಿಸಿಕೊಳ್ಳುವಾಗ ರೋಮಾಂಚನವಾಗುತ್ತದೆ. ಸಾರುವ ಕೆಲಸದಲ್ಲಿ ಆಗುತ್ತಿರುವ ಪ್ರಗತಿಯ ವರದಿಗಳು ಯೆಹೋವನ ಸಂಘಟನೆ ಅಭಿವೃದ್ಧಿಯಾಗುತ್ತಿರುವುದನ್ನು ತಿಳಿಯಲು ನಮಗೆ ಸಹಾಯ ಮಾಡುತ್ತವೆ. ಸಹೋದರರ ಅನುಭವಗಳು ನಮಗೆ ಸಂತೋಷ ತರುತ್ತವೆ, ಹೆಚ್ಚು ಸೇವೆ ಮಾಡಲು ಪ್ರೋತ್ಸಾಹಿಸುತ್ತವೆ. (ಅ. ಕಾ. 15:3) ಆದುದರಿಂದ ಸೇವಾ ವರದಿಯನ್ನು ಸಮಯಕ್ಕೆ ಸರಿಯಾಗಿ ಕೊಡುವುದು ತುಂಬ ಪ್ರಾಮುಖ್ಯ. ಇದು ನಾವು ಬೇರೆ ಸ್ಥಳಗಳಲ್ಲಿರುವ ನಮ್ಮ ಸಹೋದರರ ಬಗ್ಗೆ ಯೋಚಿಸುತ್ತೇವೆಂದು, ಅವರನ್ನು ಪ್ರೋತ್ಸಾಹಿಸಲು ಬಯಸುತ್ತೇವೆಂದು ತೋರಿಸುತ್ತದೆ. ವರದಿ ಕೊಡುವುದು ಚಿಕ್ಕ ಕೆಲಸವಾದರೂ ಅದನ್ನು ಸರಿಯಾಗಿ ಮಾಡುವಾಗ ಯೆಹೋವನ ಸಂಘಟನೆ ಮಾಡಿರುವ ಏರ್ಪಾಡಿಗೆ ನಾವು ಅಧೀನರಾಗುತ್ತೇವೆ.—ಲೂಕ 16:10; ಇಬ್ರಿ. 13:17.
ನೀವು ಗುರಿಗಳನ್ನು ಇಡಿರಿ
37 ನಮ್ಮ ಸೇವಾ ವರದಿಯನ್ನು ಇನ್ನೊಬ್ಬರ ವರದಿಯೊಂದಿಗೆ ಹೋಲಿಸಿ ನೋಡಬಾರದು. (ಗಲಾ. 5:26; 6:4) ಏಕೆಂದರೆ ಪ್ರತಿಯೊಬ್ಬರ ಪರಿಸ್ಥಿತಿ ಬೇರೆಬೇರೆ. ಆದರೆ ನಮ್ಮಿಂದ ಮುಟ್ಟಲು ಆಗುವ ಗುರಿಗಳನ್ನಿಟ್ಟು ಸೇವೆಯಲ್ಲಿ ನಾವೆಷ್ಟು ಪ್ರಗತಿ ಮಾಡುತ್ತಿದ್ದೇವೆಂದು ಪರೀಕ್ಷಿಸಬಹುದು. ಆ ಗುರಿಗಳನ್ನು ಮುಟ್ಟಿದಾಗ ಏನನ್ನೋ ಸಾಧಿಸಿದ್ದೇವೆಂಬ ಸಂತೃಪ್ತಿ ನಮ್ಮದಾಗುತ್ತದೆ.
38 ‘ಮಹಾ ಸಂಕಟದಿಂದ’ ಯಾರನ್ನೆಲ್ಲಾ ಪಾರುಗೊಳಿಸಬೇಕೋ ಆ ಜನರನ್ನೆಲ್ಲ ಯೆಹೋವನು ಇಂದು ಬೇಗ ಬೇಗನೆ ಒಟ್ಟುಗೂಡಿಸುತ್ತಿದ್ದಾನೆ. “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು” ಎಂಬ ಪ್ರವಾದನೆಯು ನೆರವೇರುತ್ತಿರುವ ಕಾಲದಲ್ಲಿ ನಾವಿದ್ದೇವೆ. (ಪ್ರಕ. 7:9, 14; ಯೆಶಾ. 60:22) ಮಹತ್ವಪೂರ್ಣವಾದ ಈ ಕಡೇ ದಿವಸಗಳಲ್ಲಿ ನಮಗೆ ಸುವಾರ್ತೆ ಸಾರುವ ಅವಕಾಶ ಸಿಕ್ಕಿರುವುದು ನಿಜಕ್ಕೂ ದೊಡ್ಡ ಆಶೀರ್ವಾದ.—ಮತ್ತಾ. 24:14.