ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w17 ಫೆಬ್ರವರಿ ಪು. 23-28
  • ಇಂದು ಯೆಹೋವನ ಜನರನ್ನು ಯಾರು ನಡೆಸುತ್ತಿದ್ದಾರೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇಂದು ಯೆಹೋವನ ಜನರನ್ನು ಯಾರು ನಡೆಸುತ್ತಿದ್ದಾರೆ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೇಸು ಆಡಳಿತ ಮಂಡಲಿಯನ್ನು ನಡೆಸಿದನು
  • “ಇದು ಮನುಷ್ಯನ ಕೆಲಸವಲ್ಲ, ದೇವರ ಕೆಲಸ”
  • “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು?”
  • “ಮುಂದಾಳುತ್ವ ವಹಿಸುತ್ತಿರುವವರನ್ನು ಜ್ಞಾಪಕಮಾಡಿಕೊಳ್ಳಿರಿ”
  • ಆಡಳಿತ ಮಂಡಲಿಯೊಂದಿಗೆ ಇಂದು ಸಹಕರಿಸುವುದು
    ಕಾವಲಿನಬುರುಜು—1990
  • “ನಂಬಿಗಸ್ತ, ವಿವೇಕಿ ಆದ ಆಳು” ಯಾರು ಮತ್ತು ಯಾವ ಕೆಲಸ ಮಾಡುತ್ತಿದೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಆಡಳಿತ ಮಂಡಲಿಯ ಕಾರ್ಯವೇನು?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
  • ‘ನಂಬಿಗಸ್ತ ಆಳು’ ಮತ್ತು ಅದರ ಆಡಳಿತ ಮಂಡಲಿ
    ಕಾವಲಿನಬುರುಜು—1990
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
w17 ಫೆಬ್ರವರಿ ಪು. 23-28
ಒಂದನೇ ಶತಮಾನದ ಆಡಳಿತ ಮಂಡಲಿ

ಇಂದು ಯೆಹೋವನ ಜನರನ್ನು ಯಾರು ನಡೆಸುತ್ತಿದ್ದಾರೆ?

“ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರನ್ನು ಜ್ಞಾಪಕಮಾಡಿಕೊಳ್ಳಿರಿ.”—ಇಬ್ರಿ. 13:7.

ಗೀತೆಗಳು: 125, 43

ದಯವಿಟ್ಟು ವಿವರಿಸಿ

ಮುಂದಾಳುತ್ವ ವಹಿಸುವವರಿಗೆ ಒಂದನೇ ಶತಮಾನದಲ್ಲಿ ಮತ್ತು ಇಂದು ಹೇಗೆ . . .

  • ಪವಿತ್ರಾತ್ಮದ ಸಹಾಯ ಸಿಕ್ಕಿದೆ?

  • ದೇವದೂತರ ಸಹಾಯ ಸಿಕ್ಕಿದೆ?

  • ದೇವರ ವಾಕ್ಯದ ಸಹಾಯ ಸಿಕ್ಕಿದೆ?

1, 2. ಯೇಸು ಸ್ವರ್ಗಕ್ಕೆ ಹೋದ ಮೇಲೆ ಅಪೊಸ್ತಲರು ಏನು ನೆನಸಿರಬಹುದು?

ಯೇಸುವಿನ ಅಪೊಸ್ತಲರು ಆಲೀವ್‌ಮರಗಳ ಗುಡ್ಡದ ಮೇಲೆ ನಿಂತಿದ್ದಾರೆ. ತಮ್ಮ ಸ್ನೇಹಿತನೂ ಗುರುವೂ ಆದ ಯೇಸು ಸ್ವರ್ಗಕ್ಕೆ ಏರಿಹೋಗುವುದನ್ನು ನೋಡುತ್ತಿದ್ದಾರೆ. ಅವರು ನೋಡುತ್ತಿದ್ದಂತೆ ಆತನು ಮೋಡಗಳಲ್ಲಿ ಮರೆಯಾಗಿಬಿಟ್ಟನು. (ಅ. ಕಾ. 1:9, 10) ಸುಮಾರು ಎರಡು ವರ್ಷ ಅವರಿಗೆ ಕಲಿಸಿದ, ಪ್ರೋತ್ಸಾಹಿಸಿದ, ನಡೆಸಿದ ಯೇಸು ಈಗ ಅವರ ಜೊತೆಯಲ್ಲಿಲ್ಲ. ಅವರು ಮುಂದೇನು ಮಾಡುವರು?

2 ಯೇಸು ಸ್ವರ್ಗಕ್ಕೆ ಹೋಗುವ ಮುಂಚೆ ತನ್ನ ಶಿಷ್ಯರಿಗೆ, ನೀವು “ಯೆರೂಸಲೇಮಿನಲ್ಲಿಯೂ ಯೂದಾಯ ಸಮಾರ್ಯಗಳಲ್ಲಿಯೂ ಮತ್ತು ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಎಂದು ಹೇಳಿದ್ದನು. (ಅ. ಕಾ. 1:8) ಇಷ್ಟು ದೊಡ್ಡ ಕೆಲಸವನ್ನು ಶಿಷ್ಯರು ಹೇಗೆ ಮಾಡಲಿದ್ದರು? ಪವಿತ್ರಾತ್ಮ ಸಹಾಯ ಮಾಡುತ್ತದೆ ಎಂದು ಯೇಸು ಅವರಿಗೆ ಹೇಳಿದ್ದನು. (ಅ. ಕಾ. 1:5) ಆದರೆ ಲೋಕದೆಲ್ಲೆಡೆ ಸಾರುವ ಕೆಲಸವನ್ನು ಮಾಡಬೇಕಾಗಿದ್ದರಿಂದ ಅದನ್ನು ಎಲ್ಲಿ, ಹೇಗೆ ಮಾಡಬೇಕು ಎಂಬ ನಿರ್ದೇಶನಗಳನ್ನು ಯಾರು ನೀಡುತ್ತಾರೆ? ಹಿಂದೆ ಇಸ್ರಾಯೇಲ್ಯರನ್ನು ಕೆಲವು ಪುರುಷರ ಮೂಲಕ ಯೆಹೋವನು ನಡೆಸಿದ್ದನೆಂದು ಅಪೊಸ್ತಲರಿಗೆ ಗೊತ್ತಿತ್ತು. ಅದೇ ರೀತಿ ಈಗ ಆತನು ಒಬ್ಬ ಹೊಸ ನಾಯಕನನ್ನು ಆಯ್ಕೆ ಮಾಡಿ ತಮ್ಮನ್ನು ನಡೆಸಬಹುದು ಎಂದು ಅವರು ನೆನಸಿರಬಹುದು.

3. (ಎ) ಯೇಸು ಸ್ವರ್ಗಕ್ಕೆ ಹೋದ ನಂತರ ಅಪೊಸ್ತಲರು ಯಾವ ಪ್ರಾಮುಖ್ಯ ನಿರ್ಧಾರ ಮಾಡಿದರು? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

3 ಯೇಸು ಸ್ವರ್ಗಕ್ಕೆ ಹೋದ ಎರಡು ವಾರಗಳೊಳಗೆ ಅಪೊಸ್ತಲರು ಒಂದು ಪ್ರಾಮುಖ್ಯ ನಿರ್ಧಾರ ಮಾಡಿದರು. ಅವರು ದೇವರ ವಾಕ್ಯದ ಮಾರ್ಗದರ್ಶನ ಪಡೆದು, ಪ್ರಾರ್ಥನೆ ಮಾಡಿ ಮತ್ತೀಯನನ್ನು ಇಸ್ಕರಿಯೋತ ಯೂದನ ಜಾಗಕ್ಕೆ ಆಯ್ಕೆ ಮಾಡಿದರು. (ಅ. ಕಾ. 1:15-26) ಈ ಆಯ್ಕೆ ಮಾಡುವುದು ಪ್ರಾಮುಖ್ಯ ಎಂದು ಯೆಹೋವನು ಮತ್ತು ಅಪೊಸ್ತಲರು ಯಾಕೆ ನೆನಸಿದರು? 12 ಅಪೊಸ್ತಲರ ಅಗತ್ಯವಿದೆ ಎಂದು ಶಿಷ್ಯರು ಅರ್ಥಮಾಡಿಕೊಂಡರು.a ಯೇಸು ಅಪೊಸ್ತಲರನ್ನು ಪ್ರಾಮುಖ್ಯವಾದ ಒಂದು ಪಾತ್ರವನ್ನು ನಿರ್ವಹಿಸಲಿಕ್ಕಾಗಿ ಆರಿಸಿಕೊಂಡಿದ್ದನು. ಆ ಪಾತ್ರ ಏನಾಗಿತ್ತು? ಇಂದು ಅದೇ ರೀತಿಯ ಯಾವ ಏರ್ಪಾಡಿದೆ? ನಮ್ಮ “ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರನ್ನು” ಅದರಲ್ಲೂ ‘ನಂಬಿಗಸ್ತ ಮತ್ತು ವಿವೇಚನೆಯುಳ್ಳ ಆಳನ್ನು’ ನಾವು ಜ್ಞಾಪಕಮಾಡಿಕೊಳ್ಳುವುದು ಹೇಗೆ?—ಇಬ್ರಿ. 13:7; ಮತ್ತಾ. 24:45.

ಯೇಸು ಆಡಳಿತ ಮಂಡಲಿಯನ್ನು ನಡೆಸಿದನು

4. ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಮತ್ತು ಬೇರೆ ಹಿರಿಯರು ಯಾವ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು?

4 ಕ್ರಿ.ಶ. 33⁠ರ ಪಂಚಾಶತ್ತಮದಂದು ಅಪೊಸ್ತಲರು ಕ್ರೈಸ್ತ ಸಭೆಯ ಮುಂದಾಳುತ್ವ ವಹಿಸಲು ಆರಂಭಿಸಿದರು. “ಪೇತ್ರನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎದ್ದುನಿಂತು” ಒಂದು ದೊಡ್ಡ ಜನಸಮೂಹಕ್ಕೆ ಜೀವರಕ್ಷಕ ಸತ್ಯಗಳನ್ನು ಬೋಧಿಸಿದನು. (ಅ. ಕಾ. 2:14, 15) ಆ ಸಮೂಹದಲ್ಲಿದ್ದ ಅನೇಕರು ಕ್ರೈಸ್ತರಾದರು. ಈ ಹೊಸ ಕ್ರೈಸ್ತರು ಮುಂದಕ್ಕೂ ‘ಅಪೊಸ್ತಲರ ಬೋಧನೆಗೆ ತಮ್ಮನ್ನು ಮೀಸಲಾಗಿಟ್ಟುಕೊಂಡರು.’ (ಅ. ಕಾ. 2:42) ಅಪೊಸ್ತಲರು ಸಭೆಯ ಹಣಕಾಸಿನ ವ್ಯವಹಾರವನ್ನು ಕೂಡ ನೋಡಿಕೊಳ್ಳುತ್ತಿದ್ದರು. (ಅ. ಕಾ. 4:34, 35) ಅವರು ದೇವಜನರಿಗಾಗಿ ಪ್ರಾರ್ಥಿಸುತ್ತಿದ್ದರು ಮತ್ತು ಬೋಧಿಸುತ್ತಿದ್ದರು. ಇದು ಅವರ ಈ ಮಾತಿನಿಂದ ಗೊತ್ತಾಗುತ್ತದೆ: “ನಾವಾದರೋ ಪ್ರಾರ್ಥನೆಯಲ್ಲಿಯೂ ವಾಕ್ಯಕ್ಕೆ ಸಂಬಂಧಿಸಿದ ಶುಶ್ರೂಷಾ ಕಾರ್ಯದಲ್ಲಿಯೂ ನಿರತರಾಗಿರುವೆವು.” (ಅ. ಕಾ. 6:4) ಅಷ್ಟೇ ಅಲ್ಲ, ಅನುಭವಸ್ಥ ಕ್ರೈಸ್ತರನ್ನು ಹೊಸ ಹೊಸ ಕ್ಷೇತ್ರಕ್ಕೆ ಸಾರಲು ಕಳುಹಿಸುತ್ತಿದ್ದರು. (ಅ. ಕಾ. 8:14, 15) ಸಮಯ ಕಳೆದಂತೆ ಅಭಿಷಿಕ್ತರಾದ ಬೇರೆ ಹಿರಿಯರು ಸಭೆಯ ಮುಂದಾಳುತ್ವ ವಹಿಸುವುದರಲ್ಲಿ ಅಪೊಸ್ತಲರೊಂದಿಗೆ ಸೇರಿದರು. ಇವರೆಲ್ಲರೂ ಸೇರಿ ಆಡಳಿತ ಮಂಡಲಿಯಾದರು. ಈ ಆಡಳಿತ ಮಂಡಲಿ ಎಲ್ಲ ಸಭೆಗಳಿಗೆ ನಿರ್ದೇಶನಗಳನ್ನು ಕಳುಹಿಸುತ್ತಿತ್ತು.—ಅ. ಕಾ. 15:2.

5, 6. (ಎ) ಆಡಳಿತ ಮಂಡಲಿಗೆ ಪವಿತ್ರಾತ್ಮ ಹೇಗೆ ಸಹಾಯ ಮಾಡಿತು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ದೇವದೂತರು ಹೇಗೆ ಸಹಾಯ ಮಾಡಿದರು? (ಸಿ) ದೇವರ ವಾಕ್ಯ ಹೇಗೆ ಸಹಾಯ ಮಾಡಿತು?

5 ಯೆಹೋವನು ಯೇಸು ಕ್ರಿಸ್ತನ ಮೂಲಕ ಆಡಳಿತ ಮಂಡಲಿಯನ್ನು ನಡೆಸುತ್ತಿದ್ದಾನೆ ಎಂದು ಒಂದನೇ ಶತಮಾನದ ಕ್ರೈಸ್ತರಿಗೆ ಗೊತ್ತಿತ್ತು. ಹೇಗೆ? ಒಂದನೇ ಕಾರಣ, ಆಡಳಿತ ಮಂಡಲಿಗೆ ಪವಿತ್ರಾತ್ಮ ಸಹಾಯ ಮಾಡುತ್ತಿತ್ತು. (ಯೋಹಾ. 16:13) ಆಗ ಇದ್ದ ಎಲ್ಲ ಅಭಿಷಿಕ್ತ ಕ್ರೈಸ್ತರು ಪವಿತ್ರಾತ್ಮವನ್ನು ಪಡೆದಿದ್ದರೂ ಯೆರೂಸಲೇಮಿನಲ್ಲಿದ್ದ ಅಪೊಸ್ತಲರಿಗೆ ಮತ್ತು ಹಿರಿಯರಿಗೆ ಮೇಲ್ವಿಚಾರಕರಾಗಿ ತಮ್ಮ ಪಾತ್ರವನ್ನು ನಿರ್ವಹಿಸಲು ಪವಿತ್ರಾತ್ಮ ಹೆಚ್ಚಿನ ಸಹಾಯ ನೀಡುತ್ತಿತ್ತು. ಉದಾಹರಣೆಗೆ, ಕ್ರಿ.ಶ. 49⁠ರಲ್ಲಿ, ಸುನ್ನತಿಯ ವಿಷಯದಲ್ಲಿ ಬಹುಮುಖ್ಯವಾದ ತೀರ್ಮಾನವೊಂದನ್ನು ತೆಗೆದುಕೊಳ್ಳಲು ಆಡಳಿತ ಮಂಡಲಿಗೆ ಪವಿತ್ರಾತ್ಮ ಮಾರ್ಗದರ್ಶನ ನೀಡಿತು. ಈ ತೀರ್ಮಾನವನ್ನು ಪತ್ರದ ಮೂಲಕ ಎಲ್ಲ ಸಭೆಗಳಿಗೆ ತಿಳಿಸಲಾಯಿತು. ಸಭೆಗಳು ಇದಕ್ಕನುಸಾರ ನಡೆದಾಗ, “ನಂಬಿಕೆಯಲ್ಲಿ ಬಲಗೊಳಿಸಲ್ಪಡುತ್ತಾ ದಿನೇ ದಿನೇ ಸಂಖ್ಯೆಯಲ್ಲಿ ಹೆಚ್ಚುತ್ತಾ ಬಂದವು.” (ಅ. ಕಾ. 16:4, 5) ಆಡಳಿತ ಮಂಡಲಿಗೆ ಪವಿತ್ರಾತ್ಮ ಸಹಾಯ ಮಾಡುತ್ತಿದೆ ಎಂದು ಸುನ್ನತಿಯ ವಿಷಯದಲ್ಲಿ ಅವರು ಬರೆದ ಪತ್ರದಿಂದ ಗೊತ್ತಾಯಿತು. ಪ್ರೀತಿ ಮತ್ತು ನಂಬಿಕೆಯಂಥ ಪವಿತ್ರಾತ್ಮದ ಗುಣಗಳನ್ನು ತೋರಿಸುತ್ತಿದ್ದಾರೆ ಎಂದು ಸಹ ಈ ಪತ್ರದಿಂದ ಗೊತ್ತಾಯಿತು.—ಅ. ಕಾ. 15:11, 25-29; ಗಲಾ. 5:22, 23.

6 ಎರಡನೇ ಕಾರಣ, ಆಡಳಿತ ಮಂಡಲಿಗೆ ದೇವದೂತರು ಸಹಾಯ ಮಾಡುತ್ತಿದ್ದರು. ಉದಾಹರಣೆಗೆ, ಅಪೊಸ್ತಲ ಪೇತ್ರನನ್ನು ಹುಡುಕಿ ಮನೆಗೆ ಕರೆಸಿಕೊಳ್ಳುವಂತೆ ಕೊರ್ನೇಲ್ಯನಿಗೆ ಹೇಳಿದ್ದು ಒಬ್ಬ ದೇವದೂತನೇ. ಕೊರ್ನೇಲ್ಯನಿಗೆ ಮತ್ತು ಅವನ ಸಂಬಂಧಿಕರಿಗೆ ಪೇತ್ರ ಸಾರಿದನು. ಅವರಲ್ಲಿದ್ದ ಗಂಡಸರಿಗೆ ಸುನ್ನತಿ ಆಗಿರದಿದ್ದರೂ ಪವಿತ್ರಾತ್ಮವನ್ನು ಪಡೆದುಕೊಂಡರು. ಸುನ್ನತಿಯಾಗದ ಅನ್ಯಜನಾಂಗದವರಲ್ಲಿ ಕ್ರೈಸ್ತನಾದ ಮೊದಲ ವ್ಯಕ್ತಿ ಕೊರ್ನೇಲ್ಯ. ಅಪೊಸ್ತಲರಿಗೆ ಮತ್ತು ಬೇರೆ ಸಹೋದರರಿಗೆ ಈ ವಿಷಯ ತಿಳಿದುಬಂದಾಗ ಇದು ದೇವರ ಚಿತ್ತ ಎಂದು ಅವರು ಅರ್ಥಮಾಡಿಕೊಂಡು ಅನ್ಯಜನಾಂಗದವರನ್ನು ಕ್ರೈಸ್ತ ಸಭೆಯೊಳಗೆ ಸ್ವೀಕರಿಸಿದರು. (ಅ. ಕಾ. 11:13-18) ಆಡಳಿತ ಮಂಡಲಿ ನಿರ್ದೇಶಿಸುತ್ತಿದ್ದ ಸಾರುವ ಕೆಲಸಕ್ಕೆ ದೇವದೂತರು ಸಂಪೂರ್ಣ ಬೆಂಬಲ ನೀಡುತ್ತಿದ್ದರೆಂದು ಇದರಿಂದ ಗೊತ್ತಾಗುತ್ತದೆ. (ಅ. ಕಾ. 5:19, 20) ಮೂರನೇ ಕಾರಣ, ಆಡಳಿತ ಮಂಡಲಿಗೆ ದೇವರ ವಾಕ್ಯ ಸಹಾಯ ಮಾಡುತ್ತಿತ್ತು. ಕ್ರೈಸ್ತರ ನಂಬಿಕೆಗಳು ಏನಾಗಿರಬೇಕು ಮತ್ತು ಸಭೆಗಳಿಗೆ ಯಾವ ನಿರ್ದೇಶನಗಳನ್ನು ನೀಡಬೇಕು ಎನ್ನುವ ವಿಷಯಗಳಲ್ಲಿ ಅವರು ದೇವರ ವಾಕ್ಯದ ಆಧಾರದ ಮೇಲೆ ನಿರ್ಣಯಗಳನ್ನು ಮಾಡುತ್ತಿದ್ದರು.—ಅ. ಕಾ. 1:20-22; 15:15-20.

7. ಒಂದನೇ ಶತಮಾನದಲ್ಲಿ ಕ್ರೈಸ್ತರನ್ನು ಯೇಸುವೇ ನಡೆಸುತ್ತಿದ್ದನು ಎಂದು ನಮಗೆ ಹೇಗೆ ಗೊತ್ತು?

7 ಸಭೆಯನ್ನು ನಡೆಸುವ ಅಧಿಕಾರ ಆಡಳಿತ ಮಂಡಲಿಗಿದ್ದರೂ ಯೇಸುವೇ ತಮ್ಮ ನಾಯಕ ಎಂದು ಸಭೆಯವರಿಗೆ ಗೊತ್ತಿತ್ತು. ಇದು ನಮಗೆ ಹೇಗೆ ಗೊತ್ತು? ಅಪೊಸ್ತಲರನ್ನು ನೇಮಕ ಮಾಡಿದ್ದು ಯೇಸು ಎಂದು ಅಪೊಸ್ತಲ ಪೌಲ ಹೇಳಿದನು. ಕ್ರಿಸ್ತನೇ ಸಭೆಯ “ಶಿರಸ್ಸು” ಅಂದರೆ ನಾಯಕ ಎಂದೂ ಹೇಳಿದನು. (ಎಫೆ. 4:11, 15) ಅಷ್ಟುಮಾತ್ರವಲ್ಲ, ಒಂದನೇ ಶತಮಾನದಲ್ಲಿದ್ದ ದೇವರ ಜನರು ‘ದೈವಾನುಗ್ರಹದಿಂದ ಕ್ರೈಸ್ತರು ಎಂದು ಕರೆಯಲ್ಪಟ್ಟರೇ’ ವಿನಾ ಒಬ್ಬ ಅಪೊಸ್ತಲನ ಹೆಸರನ್ನು ಇಟ್ಟುಕೊಳ್ಳಲಿಲ್ಲ. (ಅ. ಕಾ. 11:26) ಮುಂದಾಳುತ್ವ ವಹಿಸುತ್ತಿದ್ದ ಅಪೊಸ್ತಲರು ಮತ್ತು ಬೇರೆ ಪುರುಷರು ದೇವರ ವಾಕ್ಯದ ಆಧಾರದ ಮೇಲೆ ಮಾಡುತ್ತಿದ್ದ ಬೋಧನೆಗಳನ್ನು ಸಭೆಯವರು ಪಾಲಿಸಬೇಕು ಎಂದು ಪೌಲನಿಗೆ ಗೊತ್ತಿತ್ತು. ಆದರೂ “ಈ ವಿಷಯವನ್ನು ನೀವು ತಿಳಿದಿರಬೇಕೆಂಬುದು ನನ್ನ ಬಯಕೆ, ಅದೇನೆಂದರೆ ಪ್ರತಿ ಪುರುಷನಿಗೆ ಕ್ರಿಸ್ತನು ತಲೆ” ಎಂದು ಹೇಳಿದನು. ಪ್ರತಿ ಪುರುಷ ಎಂದು ಹೇಳುವಾಗ ಆಡಳಿತ ಮಂಡಲಿಯ ಪ್ರತಿ ಸದಸ್ಯನಿಗೂ ಕ್ರಿಸ್ತನೇ ತಲೆ. ನಂತರ ಪೌಲ ಹೇಳಿದ್ದು: “ಕ್ರಿಸ್ತನಿಗೆ ದೇವರು ತಲೆ.” (1 ಕೊರಿಂ. 11:2, 3) ಸಭೆಯನ್ನು ನಡೆಸಲು ಯೆಹೋವನು ತನ್ನ ಮಗನಾದ ಕ್ರಿಸ್ತ ಯೇಸುವನ್ನು ನೇಮಿಸಿದ್ದನು ಎನ್ನುವುದು ಸ್ಪಷ್ಟವಾಗಿತ್ತು.

“ಇದು ಮನುಷ್ಯನ ಕೆಲಸವಲ್ಲ, ದೇವರ ಕೆಲಸ”

8, 9. ಸಹೋದರ ರಸಲ್‌ ಯಾವ ಪಾತ್ರ ನಿರ್ವಹಿಸಿದರು?

8 ಇಸವಿ 1870⁠ರಿಂದ ಚಾರ್ಲ್ಸ್‌ ಟೇಸ್‌ ರಸಲ್‌ ಮತ್ತು ಅವರ ಕೆಲವು ಸ್ನೇಹಿತರು ಬೈಬಲ್‌ ಹೇಳುವ ರೀತಿಯಲ್ಲಿ ದೇವರನ್ನು ಆರಾಧಿಸಲು ಪ್ರಯತ್ನಿಸಿದರು. ತಾವು ಮಾತ್ರವಲ್ಲ ಬೇರೆ ಬೇರೆ ಭಾಷೆಯ ಜನರೂ ಇದೇ ರೀತಿ ಆರಾಧಿಸಬೇಕು ಎನ್ನುವುದು ಅವರ ಆಸೆಯಾಗಿತ್ತು. ಆದ್ದರಿಂದ 1884⁠ರಲ್ಲಿ ಝಯನ್ಸ್‌ ವಾಚ್‌ ಟವರ್‌ ಟ್ರ್ಯಾಕ್ಟ್‌ ಸೊಸೈಟಿಯನ್ನು ಆರಂಭಿಸಿದರು. ಸಹೋದರ ರಸಲ್‌ ಆ ಸಂಸ್ಥೆಯ ಅಧ್ಯಕ್ಷರಾದರು.b ಇವರು ಬೈಬಲನ್ನು ತುಂಬ ಶ್ರದ್ಧೆಯಿಂದ ಅಧ್ಯಯನ ಮಾಡಿದರು. ತ್ರಿಯೇಕ ದೇವರು, ಅಮರ ಆತ್ಮ ಮುಂತಾದ ಚರ್ಚ್‌ ಬೋಧನೆಗಳು ಬೈಬಲಲ್ಲಿ ಇಲ್ಲ ಎಂದು ಧೈರ್ಯದಿಂದ ಜನರಿಗೆ ಹೇಳಿದರು. ಕ್ರಿಸ್ತನ ಬರೋಣ ನಮ್ಮ ಕಣ್ಣಿಗೆ ಕಾಣುವುದಿಲ್ಲ ಮತ್ತು “ಅನ್ಯಜನಾಂಗಗಳ ನೇಮಿತ ಕಾಲಗಳು” 1914⁠ರಲ್ಲಿ ಕೊನೆಯಾಗುತ್ತವೆ ಎಂದು ಅವರು ಬೈಬಲಿನಿಂದ ತಿಳಿದುಕೊಂಡರು. (ಲೂಕ 21:24) ಬೈಬಲ್‌ ಸತ್ಯಗಳನ್ನು ಬೇರೆಯವರಿಗೆ ತಿಳಿಸಲು ಅವರು ತಮ್ಮ ಶಕ್ತಿ, ಸಮಯ, ಹಣ ಎಲ್ಲವನ್ನೂ ಮುಡಿಪಾಗಿಟ್ಟರು. ಆ ಸಮಯದಲ್ಲಿ ಮುಂದಾಳುತ್ವ ವಹಿಸಲು ಯೆಹೋವ ಮತ್ತು ಯೇಸು ಸಹೋದರ ರಸಲ್‌ ಅನ್ನು ಬಳಸಿದರು ಎನ್ನುವುದರಲ್ಲಿ ಸಂಶಯವಿಲ್ಲ.

9 ಜನರು ತನ್ನನ್ನು ವಿಶೇಷ ವ್ಯಕ್ತಿಯಾಗಿ ನೋಡುವುದು ಸಹೋದರ ರಸಲ್‌ಗೆ ಇಷ್ಟವಿರಲಿಲ್ಲ. ಅವರು 1896⁠ರಲ್ಲಿ ಒಂದು ಲೇಖನದಲ್ಲಿ ತಿಳಿಸಿದ್ದೇನೆಂದರೆ, ಯಾರೂ ತಮಗೆ ಮತ್ತು ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಸಹೋದರರಿಗೆ ವಿಶೇಷ ಗೌರವ ಕೊಡಬೇಕಾಗಿಲ್ಲ. ಬಿರುದುಗಳನ್ನು ಕೊಡಬೇಕಾಗಿಲ್ಲ. ತಮ್ಮಲ್ಲಿ ಯಾರ ಹೆಸರನ್ನೂ ಯಾವುದೇ ಗುಂಪಿಗೆ ಇಟ್ಟುಕೊಳ್ಳಬಾರದು ಎಂದು ಹೇಳಿದರು. ಯಾಕೆ? “ಇದು ಮನುಷ್ಯನ ಕೆಲಸವಲ್ಲ, ದೇವರ ಕೆಲಸ” ಎಂದು ಮುಂದೊಂದು ದಿನ ಹೇಳಿದರು.

10. (ಎ) ‘ನಂಬಿಗಸ್ತನು, ವಿವೇಚನೆಯುಳ್ಳವನು ಆದ ಆಳನ್ನು’ ಯೇಸು ಯಾವಾಗ ನೇಮಿಸಿದನು? (ಬಿ) ಆಡಳಿತ ಮಂಡಲಿ ಮತ್ತು ವಾಚ್‌ ಟವರ್‌ ಸೊಸೈಟಿ ಬೇರೆ ಬೇರೆ ಎಂಬ ವಿಷಯ ಹೇಗೆ ಸ್ಪಷ್ಟವಾಯಿತು?

10 ಸಹೋದರ ರಸಲ್‌ ತೀರಿಹೋಗಿ ಮೂರು ವರ್ಷಗಳ ನಂತರ ಅಂದರೆ 1919⁠ರಲ್ಲಿ ‘ನಂಬಿಗಸ್ತನು, ವಿವೇಚನೆಯುಳ್ಳವನು ಆದ ಆಳನ್ನು’ ಯೇಸು ನೇಮಿಸಿದನು. ಯಾಕೆ? ತನ್ನ ಹಿಂಬಾಲಕರಿಗೆ “ತಕ್ಕ ಸಮಯಕ್ಕೆ ಆಹಾರವನ್ನು ಕೊಡಲಿಕ್ಕಾಗಿ.” (ಮತ್ತಾ. 24:45) ಆ ಸಮಯದಿಂದಲೇ, ಬ್ರೂಕ್ಲಿನ್‌ನ ಮುಖ್ಯಕಾರ್ಯಾಲಯದಲ್ಲಿದ್ದ ಅಭಿಷಿಕ್ತ ಸಹೋದರರ ಚಿಕ್ಕ ಗುಂಪು ಯೇಸುವಿನ ಹಿಂಬಾಲಕರಿಗೆ ಆಧ್ಯಾತ್ಮಿಕ ಆಹಾರವನ್ನು ನೀಡುತ್ತಿತ್ತು. 1940⁠ರ ನಂತರ ನಮ್ಮ ಪ್ರಕಾಶನಗಳಲ್ಲಿ “ಆಡಳಿತ ಮಂಡಲಿ” ಎನ್ನುವ ಪದಗುಚ್ಛವನ್ನು ಬಳಸಲಾಯಿತು. ಈ ಆಡಳಿತ ಮಂಡಲಿಯ ಸದಸ್ಯರೇ ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯ ನಿರ್ದೇಶಕರು ಎಂದು ಆಗ ನೆನಸಲಾಗುತ್ತಿತ್ತು. ಆದರೆ ಆಡಳಿತ ಮಂಡಲಿಯೇ ಬೇರೆ, ವಾಚ್‌ ಟವರ್‌ ಸೊಸೈಟಿಯೇ ಬೇರೆ ಎಂದು 1971⁠ರಲ್ಲಿ ಸ್ಪಷ್ಟವಾಗಿ ತಿಳಿಸಲಾಯಿತು. ಯಾಕೆಂದರೆ ವಾಚ್‌ ಟವರ್‌ ಸೊಸೈಟಿ ಕಾನೂನಿಗೆ ಸಂಬಂಧಪಟ್ಟ ವಿಷಯಗಳನ್ನು ಮಾತ್ರ ನೋಡಿಕೊಳ್ಳುತ್ತಿತ್ತು. ಅಂದಿನಿಂದ ಆಡಳಿತ ಮಂಡಲಿಯಲ್ಲಿ ಇರುವ ಅಭಿಷಿಕ್ತ ಸಹೋದರರು ಸೊಸೈಟಿಯ ನಿರ್ದೇಶಕರಾಗಿ ಕೆಲಸಮಾಡಲಿಲ್ಲ. ಇತ್ತೀಚೆಗೆ ಸೊಸೈಟಿಯ ಮತ್ತು ಸೊಸೈಟಿಗೆ ಸಂಬಂಧಪಟ್ಟ ಸಂಸ್ಥೆಗಳ ನಿರ್ದೇಶಕರಾಗಿ “ಬೇರೆ ಕುರಿ” ವರ್ಗದ ಜವಾಬ್ದಾರಿಯುತ ಸಹೋದರರು ಕೆಲಸಮಾಡುತ್ತಿದ್ದಾರೆ. ಇದರಿಂದಾಗಿ ಆಡಳಿತ ಮಂಡಲಿ ಇಂದು ದೇವರ ಜನರಿಗೆ ಆಧ್ಯಾತ್ಮಿಕ ಮಾರ್ಗದರ್ಶನ, ನಿರ್ದೇಶನಗಳನ್ನು ಕೊಡುವ ಕೆಲಸದ ಮೇಲೆ ಸಂಪೂರ್ಣ ಗಮನ ಕೊಡಲು ಸಾಧ್ಯವಾಗಿದೆ. (ಯೋಹಾ. 10:16; ಅ. ಕಾ. 6:4) ಆಡಳಿತ ಮಂಡಲಿಯೇ “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಎಂದು 2013 ಜುಲೈ 15⁠ರ ಕಾವಲಿನಬುರುಜುವಿನಲ್ಲಿ ವಿವರಿಸಲಾಯಿತು. ಈ ಆಡಳಿತ ಮಂಡಲಿ ಅಭಿಷಿಕ್ತ ಸಹೋದರರ ಒಂದು ಚಿಕ್ಕ ಗುಂಪು ಆಗಿದೆ.

1950⁠ರ ದಶಕದಲ್ಲಿ ಆಡಳಿತ ಮಂಡಲಿ

1950ರ ದಶಕದಲ್ಲಿ ಆಡಳಿತ ಮಂಡಲಿ

11. ಆಡಳಿತ ಮಂಡಲಿ ಹೇಗೆ ಕೆಲಸ ಮಾಡುತ್ತದೆ?

11 ಮುಖ್ಯವಾದ ತೀರ್ಮಾನಗಳನ್ನು ತೆಗೆದುಕೊಳ್ಳಲು ಆಡಳಿತ ಮಂಡಲಿಯ ಸದಸ್ಯರೆಲ್ಲರೂ ಪ್ರತಿವಾರ ಸೇರಿಬರುತ್ತಾರೆ. ಇದರಿಂದಾಗಿ ಅವರಲ್ಲಿ ಒಳ್ಳೇ ಮಾತುಕತೆ ಮತ್ತು ಒಗ್ಗಟ್ಟು ಇದೆ. (ಜ್ಞಾನೋ. 20:18) ಅವರಲ್ಲಿ ಒಬ್ಬರು ಇನ್ನೊಬ್ಬರಿಗಿಂತ ಶ್ರೇಷ್ಠರಲ್ಲ. ಹಾಗಾಗಿ ವರ್ಷಕ್ಕೆ ಒಬ್ಬರಂತೆ ಪ್ರತಿಯೊಬ್ಬ ಸದಸ್ಯ ಕೂಟದ ಅಧ್ಯಕ್ಷತೆ ವಹಿಸುತ್ತಾರೆ. (1 ಪೇತ್ರ 5:1) ಆಡಳಿತ ಮಂಡಲಿಯ ಆರು ಸಮಿತಿಗಳು ಕೂಡ ಇದೇ ವಿಧಾನವನ್ನು ಅನುಸರಿಸುತ್ತವೆ. ತಾನೇ ಎಲ್ಲರ ನಾಯಕ ಎಂದು ಆಡಳಿತ ಮಂಡಲಿಯ ಯಾವ ಸದಸ್ಯನೂ ನೆನಸುವುದಿಲ್ಲ. ಒಬ್ಬೊಬ್ಬ ಸದಸ್ಯನೂ ‘ಮನೆಯವರ’ ಭಾಗವಾಗಿದ್ದು ಆಧ್ಯಾತ್ಮಿಕ ಆಹಾರ ತೆಗೆದುಕೊಳ್ಳುತ್ತಾನೆ ಮತ್ತು ನಂಬಿಗಸ್ತ ಆಳಿನ ನಿರ್ದೇಶನವನ್ನು ಪಾಲಿಸುತ್ತಾನೆ.

19⁠ನೇ ಶತಮಾನದಿಂದ ಇಂದಿನ ತನಕದ ಕಾವಲಿನಬುರುಜು ಪತ್ರಿಕೆಗಳು; ಇಂದಿನ ಆಡಳಿತ ಮಂಡಲಿ

1919ರಲ್ಲಿ ನೇಮಕವಾದ ಸಮಯದಿಂದ ನಂಬಿಗಸ್ತ ಆಳು ದೇವಜನರಿಗೆ ಆಧ್ಯಾತ್ಮಿಕ ಆಹಾರ ಕೊಡುತ್ತಾ ಬಂದಿದೆ (ಪ್ಯಾರ 10, 11 ನೋಡಿ)

“ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು?”

12. ಮುಂದಿನ ಪ್ಯಾರಗಳಲ್ಲಿ ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲಿದ್ದೇವೆ?

12 ಆಡಳಿತ ಮಂಡಲಿಗೆ ದೈವಿಕ ಮೂಲದಿಂದ ಪ್ರಕಟನೆಗಳು ಸಿಗುವುದಿಲ್ಲ. ಅವರು ಪರಿಪೂರ್ಣರೂ ಅಲ್ಲ. ಹಾಗಾಗಿ ಬೈಬಲ್‌ ಬಗ್ಗೆ ವಿವರಿಸುವಾಗ ಅಥವಾ ನಿರ್ದೇಶನಗಳನ್ನು ನೀಡುವಾಗ ಕೆಲವೊಮ್ಮೆ ತಪ್ಪುಗಳು ಆಗಬಹುದು. ಉದಾಹರಣೆಗೆ, 1870⁠ರಿಂದ ಬೈಬಲ್‌ ವಚನಗಳ ನಮ್ಮ ತಿಳುವಳಿಕೆಯಲ್ಲಿ ಆದ ಬದಲಾವಣೆಗಳನ್ನು ನಮ್ಮ ಪ್ರಕಾಶನಗಳಲ್ಲಿ ಪಟ್ಟಿಮಾಡಲಾಗಿದೆ.c ನಂಬಿಗಸ್ತ ಆಳು ತಯಾರಿಸಿ ಕೊಡುವ ಆಧ್ಯಾತ್ಮಿಕ ಆಹಾರದಲ್ಲಿ ಎಲ್ಲವೂ ಸರಿಯಾಗಿರುತ್ತದೆ ಎಂದು ಯೇಸು ಸಹ ಹೇಳಲಿಲ್ಲ. ಹೀಗಿರುವಾಗ “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು” ಎನ್ನುವ ಪ್ರಶ್ನೆಗೆ ಉತ್ತರ ಏನು? (ಮತ್ತಾ. 24:45) ಆಡಳಿತ ಮಂಡಲಿಯೇ ನಂಬಿಗಸ್ತ ಆಳು ಎಂದು ಹೇಳಲು ಯಾವ ಆಧಾರವಿದೆ? ಅಪೊಸ್ತಲರ ಕಾಲದಲ್ಲಿದ್ದ ಆಡಳಿತ ಮಂಡಲಿಗೆ ಸಹಾಯ ಮಾಡಿದ ಆ ಮೂರು ವಿಷಯಗಳನ್ನೇ ನಾವು ಈಗ ಪುನಃ ನೋಡೋಣ.

13. ಆಡಳಿತ ಮಂಡಲಿಗೆ ಪವಿತ್ರಾತ್ಮ ಹೇಗೆ ಸಹಾಯ ಮಾಡುತ್ತಿದೆ?

13 ಆಡಳಿತ ಮಂಡಲಿಗೆ ಪವಿತ್ರಾತ್ಮ ಸಹಾಯ ಮಾಡುತ್ತಿದೆ. ಈ ಮುಂಚೆ ಅರ್ಥವಾಗದಿದ್ದ ಬೈಬಲ್‌ ಸತ್ಯಗಳನ್ನು ಈಗ ಅರ್ಥಮಾಡಿಕೊಳ್ಳಲು ಆಡಳಿತ ಮಂಡಲಿಗೆ ಪವಿತ್ರಾತ್ಮ ಸಹಾಯ ಮಾಡುತ್ತಿದೆ. ಉದಾಹರಣೆಗೆ, “ನಮ್ಮ ನಂಬಿಕೆಗಳ ಕುರಿತ ಸ್ಪಷ್ಟೀಕರಣ” ವಿಭಾಗದಲ್ಲಿ ಪಟ್ಟಿಮಾಡಿರುವ ವಿಷಯಗಳನ್ನೇ ತೆಗೆದುಕೊಳ್ಳಿ. ಯಾವ ಮಾನವನಿಗೂ ತನ್ನ ಸ್ವಂತ ಬುದ್ಧಿಯಿಂದ ‘ದೇವರ ಅಗಾಧವಾದ ವಿಷಯಗಳನ್ನು’ ಅರ್ಥಮಾಡಿಕೊಳ್ಳಲು ಮತ್ತು ವಿವರಿಸಲು ಸಾಧ್ಯವಿಲ್ಲ. (1 ಕೊರಿಂಥ 2:10 ಓದಿ.) ಪೌಲ ಹೇಳಿದ್ದು: “ನಾವು ಈ ವಿಷಯಗಳನ್ನು ಮಾನವ ವಿವೇಕದಿಂದ ಬೋಧಿಸಲ್ಪಟ್ಟ ಮಾತುಗಳಿಂದ ವಿವರಿಸದೆ, ಪವಿತ್ರಾತ್ಮದಿಂದ . . . ವಿವರಿಸುತ್ತೇವೆ.” (1 ಕೊರಿಂ. 2:13) ಆಡಳಿತ ಮಂಡಲಿಯೂ ಇದನ್ನೇ ಮಾಡುತ್ತದೆ. ನೂರಾರು ವರ್ಷಗಳಿಂದ ಸುಳ್ಳು ಬೋಧನೆಗಳನ್ನು ನಂಬಲಾಗುತ್ತಿತ್ತು ಮತ್ತು ಬೇರೆ ಯಾವುದೇ ಸ್ಪಷ್ಟ ನಿರ್ದೇಶನಗಳು ಇರಲಿಲ್ಲ. ಆದರೆ 1919⁠ರಿಂದ ಬೈಬಲಿನ ತಿಳುವಳಿಕೆ ಹೆಚ್ಚಾಗಿದೆ. ಇದಕ್ಕೆ ಕಾರಣ, ದೇವರು ಪವಿತ್ರಾತ್ಮದ ಮೂಲಕ ಕೊಡುತ್ತಿರುವ ಸಹಾಯ!

14. ಪ್ರಕಟನೆ 14:6, 7 ಹೇಳುವಂತೆ ದೇವದೂತರು ಆಡಳಿತ ಮಂಡಲಿಗೆ ಮತ್ತು ದೇವಜನರಿಗೆ ಹೇಗೆ ಸಹಾಯ ಮಾಡುತ್ತಿದ್ದಾರೆ?

14 ಆಡಳಿತ ಮಂಡಲಿಗೆ ದೇವದೂತರು ಸಹಾಯ ಮಾಡುತ್ತಿದ್ದಾರೆ. ಲೋಕದೆಲ್ಲೆಡೆ ಸುವಾರ್ತೆ ಸಾರಲು 80 ಲಕ್ಷಕ್ಕೂ ಹೆಚ್ಚು ಪ್ರಚಾರಕರಿಗೆ ನಿರ್ದೇಶನಗಳನ್ನು ನೀಡುವ ದೊಡ್ಡ ಜವಾಬ್ದಾರಿ ಆಡಳಿತ ಮಂಡಲಿಗಿದೆ. ಈ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ. ಕಾರಣವೇನು? ದೇವದೂತರು ನೀಡುತ್ತಿರುವ ಬೆಂಬಲ ಇದಕ್ಕೆ ಒಂದು ಕಾರಣ. (ಪ್ರಕಟನೆ 14:6, 7 ಓದಿ.) ದೇವರ ಸಹಾಯಕ್ಕಾಗಿ ಬೇಡಿಕೊಂಡ ವ್ಯಕ್ತಿಗಳನ್ನು ಪ್ರಚಾರಕರು ಭೇಟಿಯಾಗುವಂತೆ ದೇವದೂತರು ಮಾರ್ಗದರ್ಶಿಸಿದ ಎಷ್ಟೋ ಅನುಭವಗಳಿವೆ.d ತೀವ್ರ ವಿರೋಧವಿರುವ ಸ್ಥಳಗಳನ್ನೂ ಸೇರಿಸಿ ಎಲ್ಲ ಕಡೆಗಳಲ್ಲಿ ಸಾರುವ ಮತ್ತು ಬೋಧಿಸುವ ಕೆಲಸ ನಿಲ್ಲದೆ ನಡೆಯುತ್ತಾ ಇದೆ. ಇದು ಕೂಡ ದೇವದೂತರ ಸಹಾಯದಿಂದಲೇ ಸಾಧ್ಯವಾಗಿದೆ.

15. ಚರ್ಚಿನ ನಾಯಕರಿಗೂ ನಮ್ಮ ಆಡಳಿತ ಮಂಡಲಿಗೂ ಇರುವ ವ್ಯತ್ಯಾಸವೇನು? ಉದಾಹರಣೆ ಕೊಡಿ.

15 ಆಡಳಿತ ಮಂಡಲಿಗೆ ದೇವರ ವಾಕ್ಯ ಸಹಾಯ ಮಾಡುತ್ತಿದೆ. (ಯೋಹಾನ 17:17 ಓದಿ.) 1973⁠ರಲ್ಲಿ ಏನಾಯಿತು ಎಂದು ನೋಡಿ. ಜೂನ್‌ 1⁠ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯಲ್ಲಿ “ತಂಬಾಕಿನ ಚಟವನ್ನು ಬಿಟ್ಟುಬಿಡದವರು ದೀಕ್ಷಾಸ್ನಾನ ಪಡೆಯಲು ಅರ್ಹರಾ?” ಎಂದು ಕೇಳಲಾಗಿತ್ತು. ಅರ್ಹರಲ್ಲ ಎನ್ನುವ ಉತ್ತರವನ್ನು ಬೈಬಲಿನ ಆಧಾರದಿಂದ ಕೊಡಲಾಗಿತ್ತು. ದೀಕ್ಷಾಸ್ನಾನ ಪಡೆದಿರುವವರು ಧೂಮಪಾನ ಬಿಟ್ಟುಬಿಡದಿದ್ದರೆ ಯಾಕೆ ಬಹಿಷ್ಕಾರ ಮಾಡಬೇಕು ಎನ್ನುವುದಕ್ಕೆ ಹಲವಾರು ವಚನಗಳನ್ನು ಕೊಟ್ಟು ವಿವರಿಸಲಾಗಿತ್ತು. (1 ಕೊರಿಂ. 5:7; 2 ಕೊರಿಂ. 7:1) ಇಂಥ ಕಟ್ಟುನಿಟ್ಟಿನ ಮಟ್ಟ ಯಾವ ಮನುಷ್ಯನಿಂದಲ್ಲ ಬದಲಾಗಿ “ತನ್ನ ವಾಕ್ಯದಲ್ಲಿ ತನ್ನ ಆಲೋಚನೆಗಳನ್ನು ತಿಳಿಸಿರುವ ದೇವರಿಂದ” ಬಂದಿದೆ ಎಂದು ಆ ಪತ್ರಿಕೆಯಲ್ಲಿ ಹೇಳಲಾಯಿತು. ಈ ರೀತಿ ದೇವರ ಮಟ್ಟಗಳನ್ನು ಎತ್ತಿಹಿಡಿಯುವ ಮತ್ತು ಕಷ್ಟವಾದರೂ ಆತನ ನೀತಿನಿಯಮಗಳನ್ನು ಪಾಲಿಸುವ ಸಂಘಟನೆ ಭೂಮಿಯ ಮೇಲೆ ಬೇರೊಂದಿಲ್ಲ. ಆದರೆ ಅಮೆರಿಕದಲ್ಲಿನ ಧರ್ಮದ ಕುರಿತ ಇತ್ತೀಚಿನ ಪುಸ್ತಕವೊಂದು ಹೀಗೆ ಹೇಳಿತು: “ಚರ್ಚ್‌ ನಾಯಕರು ತಮ್ಮ ಸದಸ್ಯರ ಮತ್ತು ಸಮಾಜದ ಬೆಂಬಲ ಪಡೆಯುವ ಉದ್ದೇಶದಿಂದ ತಮ್ಮ ಬೋಧನೆಗಳನ್ನು ಆ ಸದಸ್ಯರ ಅಭಿಪ್ರಾಯ, ನಂಬಿಕೆಗಳಿಗೆ ತಕ್ಕಂತೆ ಬದಲಾಯಿಸುತ್ತಲೇ ಇದ್ದಾರೆ.” ಆದರೆ ನಮ್ಮ ಆಡಳಿತ ಮಂಡಲಿ ಜನರ ಇಷ್ಟಗಳಿಗೆ ತಕ್ಕಂತೆ ತೀರ್ಮಾನಗಳನ್ನು ಮಾಡುವುದಿಲ್ಲ. ದೇವರ ವಾಕ್ಯ ಏನು ಹೇಳುತ್ತದೋ ಅದರಂತೆ ಮಾಡುತ್ತದೆ. ಇಂದು ತನ್ನ ಜನರನ್ನು ಯೆಹೋವನೇ ನಡೆಸುತ್ತಿದ್ದಾನೆ ಎನ್ನುವುದಕ್ಕೆ ಇದೇ ಆಧಾರ!

“ಮುಂದಾಳುತ್ವ ವಹಿಸುತ್ತಿರುವವರನ್ನು ಜ್ಞಾಪಕಮಾಡಿಕೊಳ್ಳಿರಿ”

16. ಆಡಳಿತ ಮಂಡಲಿಯನ್ನು ಜ್ಞಾಪಿಸಿಕೊಳ್ಳುವ ಒಂದು ವಿಧ ಯಾವುದು?

16 ಇಬ್ರಿಯ 13:7 ಓದಿ. “ಮುಂದಾಳುತ್ವ ವಹಿಸುತ್ತಿರುವವರನ್ನು ಜ್ಞಾಪಕಮಾಡಿಕೊಳ್ಳಿರಿ” ಎಂದು ಬೈಬಲ್‌ ಹೇಳುತ್ತದೆ. ಇದನ್ನು ಮಾಡುವ ಒಂದು ವಿಧ, ಆಡಳಿತ ಮಂಡಲಿಗಾಗಿ ಪ್ರಾರ್ಥನೆ ಮಾಡುವುದು. (ಎಫೆ. 6:18) ಅವರ ಮೇಲೆ ದೊಡ್ಡ ಜವಾಬ್ದಾರಿಗಳಿವೆ. ಆಧ್ಯಾತ್ಮಿಕ ಆಹಾರ ಕೊಡಬೇಕು, ಸಾರುವ ಕೆಲಸವನ್ನು ನೋಡಿಕೊಳ್ಳಬೇಕು ಮತ್ತು ಕಾಣಿಕೆಗಳನ್ನು ಹೇಗೆ ಬಳಸಬೇಕೆಂದು ತೀರ್ಮಾನಿಸಬೇಕು. ಹಾಗಾಗಿ ನಾವು ಅವರಿಗಾಗಿ ಪ್ರಾರ್ಥನೆ ಮಾಡಲು ಮರೆಯಬಾರದು.

17, 18. (ಎ) ಆಡಳಿತ ಮಂಡಲಿಗೆ ನಾವು ಹೇಗೆ ಸಹಕಾರ ನೀಡುತ್ತೇವೆ? (ಬಿ) ನಾವು ಯಾಕೆ ಆದಷ್ಟು ಹೆಚ್ಚು ಸುವಾರ್ತೆ ಸಾರಬೇಕು?

17 ಎರಡನೇ ವಿಧ, ಆಡಳಿತ ಮಂಡಲಿ ನಮಗೆ ಕೊಡುವ ಸಲಹೆಸೂಚನೆಗಳನ್ನು, ನಿರ್ದೇಶನಗಳನ್ನು ಪಾಲಿಸುವುದು. ಪ್ರಕಾಶನಗಳು, ಕೂಟಗಳು, ಸಮ್ಮೇಳನಗಳು, ಅಧಿವೇಶನಗಳ ಮೂಲಕ ನಮಗೆ ಆಡಳಿತ ಮಂಡಲಿ ನಿರ್ದೇಶನಗಳನ್ನು ಕೊಡುತ್ತದೆ. ಅಷ್ಟೇ ಅಲ್ಲ, ಸಂಚರಣ ಮೇಲ್ವಿಚಾರಕರನ್ನು ನೇಮಿಸುತ್ತದೆ. ಇವರು ಹಿರಿಯರನ್ನು ನೇಮಿಸುತ್ತಾರೆ. ಸಂಚರಣ ಮೇಲ್ವಿಚಾರಕರು ಮತ್ತು ಹಿರಿಯರು ಕೂಡ ನಿರ್ದೇಶನಗಳನ್ನು ಪಾಲಿಸುವ ಮೂಲಕ ಆಡಳಿತ ಮಂಡಲಿಯನ್ನು ಜ್ಞಾಪಿಸಿಕೊಳ್ಳುತ್ತಾರೆ. ಇಂದು ಮುಂದಾಳುತ್ವ ವಹಿಸಲು ಯೇಸು ಬಳಸುತ್ತಿರುವ ಪುರುಷರಿಗೆ ವಿಧೇಯತೆ ತೋರಿಸುವ ಮೂಲಕ ನಾವೆಲ್ಲರೂ ನಮ್ಮ ನಾಯಕನಾದ ಯೇಸುವಿಗೆ ಗೌರವ ಕೊಡುತ್ತೇವೆ.—ಇಬ್ರಿ. 13:17.

18 ಮೂರನೇ ವಿಧ, ಆದಷ್ಟು ಹೆಚ್ಚು ಸುವಾರ್ತೆ ಸಾರುವುದು. ಮುಂದಾಳುತ್ವ ವಹಿಸುತ್ತಿರುವವರ ನಂಬಿಕೆಯನ್ನು ಅನುಕರಿಸುವಂತೆ ಇಬ್ರಿಯ 13:7 ಹೇಳುತ್ತದೆ. ಆಡಳಿತ ಮಂಡಲಿ ಹುರುಪಿನಿಂದ ಸಾರುವ ಮೂಲಕ ಮತ್ತು ಸುವಾರ್ತೆಯನ್ನು ಹಬ್ಬಿಸಲು ಬೇಕಾದದ್ದೆಲ್ಲವನ್ನೂ ಮಾಡುವ ಮೂಲಕ ಅಪಾರ ನಂಬಿಕೆಯನ್ನು ತೋರಿಸಿದೆ. ಈ ಪ್ರಾಮುಖ್ಯ ಕೆಲಸ ಮಾಡುವುದರಲ್ಲಿ ನಾವು ಆ ಸಹೋದರರಿಗೆ ಬೆಂಬಲ ಕೊಡುತ್ತಿದ್ದೇವಾ? ಕೊಡುತ್ತಿರುವಲ್ಲಿ, “ನೀವು ಈ ನನ್ನ ಸಹೋದರರಲ್ಲಿ ಅಲ್ಪನಾದವನೊಬ್ಬನಿಗೆ ಏನೆಲ್ಲ ಮಾಡಿದಿರೋ ಅದನ್ನು ನನಗೆ ಕೂಡ ಮಾಡಿದಿರಿ” ಎಂದು ಯೇಸು ಹೇಳುವ ಮಾತು ನಮಗೆ ಸಂತೋಷ ತರುವುದು.—ಮತ್ತಾ. 25:34-40.

19. ನಾಯಕನಾದ ಯೇಸುವನ್ನು ಹಿಂಬಾಲಿಸುತ್ತಾ ಇರಲು ನೀವು ದೃಢತೀರ್ಮಾನ ಮಾಡಿರುವುದಕ್ಕೆ ಕಾರಣವೇನು?

19 ಯೇಸು ಸ್ವರ್ಗಕ್ಕೆ ಹೋದ ಮೇಲೆ ತನ್ನ ಶಿಷ್ಯರ ಕೈಬಿಡಲಿಲ್ಲ. (ಮತ್ತಾ. 28:20) ಭೂಮಿಯಲ್ಲಿದ್ದಾಗ ಮುಂದಾಳುತ್ವ ವಹಿಸಲು ಯೇಸುವಿಗೆ ಪವಿತ್ರಾತ್ಮ ಮತ್ತು ದೇವರ ವಾಕ್ಯ ಸಹಾಯ ಮಾಡಿತ್ತು. ದೇವದೂತರು ಸಹ ಸಹಾಯ ಮಾಡಿದ್ದರು. ಇದೇ ಸಹಾಯವನ್ನು ಇಂದು ನಂಬಿಗಸ್ತ ಆಳಿಗೂ ಕೊಡುತ್ತಿದ್ದಾನೆ. ಆಡಳಿತ ಮಂಡಲಿಯು ಯೇಸು ‘ಎಲ್ಲಿ ಹೋದರೂ ಅವನನ್ನು ಹಿಂಬಾಲಿಸುತ್ತಿದೆ.’ (ಪ್ರಕ. 14:4) ಹಾಗಾಗಿ ನಾವು ಅದರ ನಿರ್ದೇಶನಗಳನ್ನು ಪಾಲಿಸುವಾಗ ನಮ್ಮ ನಾಯಕನಾದ ಯೇಸುವನ್ನು ಹಿಂಬಾಲಿಸುತ್ತಿದ್ದೇವೆ. ಯೇಸು ನಮ್ಮನ್ನು ಬಲುಬೇಗನೆ ನಿತ್ಯಜೀವಕ್ಕೆ ನಡೆಸಲಿದ್ದಾನೆ. (ಪ್ರಕ. 7:14-17) ಇಂಥ ಜೀವನವನ್ನು ಯಾವ ಮಾನವ ನಾಯಕನಿಂದಲೂ ಕೊಡಲಿಕ್ಕಾಗಲ್ಲ!

a ಈ ಹನ್ನೆರಡು ಅಪೊಸ್ತಲರನ್ನು ಯೆಹೋವನು ಹೊಸ ಯೆರೂಸಲೇಮಿನ ‘ಅಸ್ತಿವಾರದ ಹನ್ನೆರಡು ಕಲ್ಲುಗಳಾಗಿ’ ಉಪಯೋಗಿಸಲಿದ್ದನು ಎಂದು ತೋರುತ್ತದೆ. (ಪ್ರಕ. 21:14) ಹಾಗಾಗಿ ಉಳಿದ ನಂಬಿಗಸ್ತ ಅಪೊಸ್ತಲರು ತೀರಿಹೋದಾಗ ಅವರ ಜಾಗಕ್ಕೆ ಬೇರೆ ಯಾರನ್ನೂ ಯೆಹೋವನು ಆಯ್ಕೆ ಮಾಡಲಿಲ್ಲ.

b ಈ ಸಂಸ್ಥೆಗೆ 1955ರಿಂದ ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್ವೇನಿಯ ಎಂದು ಹೆಸರಾಯಿತು.

c ದ ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ನಲ್ಲಿ “ಬಿಲೀಫ್ಸ್‌ ಕ್ಲಾರಿಫೈಡ್‌” ಎಂಬ ವಿಭಾಗ ಮತ್ತು ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಪುಸ್ತಕದಲ್ಲಿ “ನಮ್ಮ ನಂಬಿಕೆಗಳ ಕುರಿತ ಸ್ಪಷ್ಟೀಕರಣ” ಎಂಬ ವಿಭಾಗವನ್ನು ನೋಡಿ.

d ಕಾವಲಿನಬುರುಜು 1995 ಅಕ್ಟೋಬರ್‌ 15⁠ರ ಪುಟ 12 ಪ್ಯಾರ 18 ಮತ್ತು 2008 ಅಕ್ಟೋಬರ್‌ 15⁠ರ ಪುಟ 11 ಪ್ಯಾರ 16 ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ