ಮನ್ನಣೆಯ ಮುಖಾಂತರ ಒಂದು ಮೂಲಭೂತವಾದ ಮಾನವ ಅಗತ್ಯವನ್ನು ಪೂರೈಸುವುದು
“ಶಾಭಾಸ್!” “ನಿನ್ನ ಸಾಧನೆಯಿಂದ ನನಗೆ ಸಂತೋಷವಾಯಿತು!” ಅಥವಾ “ನಿನ್ನ ಕೈಲಾದುದನ್ನೆಲ್ಲ ಮಾಡಿರುವೆ; ನಿನ್ನ ಮೇಲೆ ನಮಗೆ ಬಹಳ ಅಭಿಮಾನವಿದೆ” ಎಂಬ ಪ್ರಾಮಾಣಿಕವಾದ ಅಭಿವ್ಯಕ್ತಿಗಳು, ವಿಶೇಷವಾಗಿ ಅವು ನೀವು ಗೌರವಿಸುವ ಯಾರಿಂದಾದರೂ ಬರುವಾಗ ಆತ್ಮ ಗೌರವವನ್ನು ವರ್ಧಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತವೆ. ಮಾನವರು ಮನ್ನಣೆಯಿಂದ ವೃದ್ಧಿಹೊಂದುತ್ತಾರೆ. ಅದರಿಂದ, ಅವರು ಕೆಲಸಗಳನ್ನು ಉತ್ತಮವಾಗಿ ಮಾಡುತ್ತಾರೆ ಮತ್ತು ಹೆಚ್ಚು ಸಂತೋಷದಿಂದಿರುತ್ತಾರೆ. ನಿಶ್ಚಯವಾಗಿ, ದೇಹಕ್ಕೆ ಹಿತಕರವಾದ ಆಹಾರವು ಪ್ರಾಮುಖ್ಯವಾಗಿರುವಂತೆಯೇ, ಅರ್ಹವಾದ ಮನ್ನಣೆಯು ಮನಸ್ಸಿಗೆ ಮತ್ತು ಹೃದಯಕ್ಕೆ ಪ್ರಾಮುಖ್ಯವಾಗಿದೆ.
ಒಂದು ಶಬ್ದಕೋಶವು ಮನ್ನಣೆಯನ್ನು, “ಪರಿಗಣನೆ ಯಾ ಗಮನಕ್ಕೆ ಅರ್ಹನಾಗಿರುವವನಂತೆ ಒಬ್ಬ ವ್ಯಕ್ತಿಯ ಸ್ವೀಕರಣೆ” ಮತ್ತು “ವಿಶೇಷ ಲಕ್ಷ್ಯ ಯಾ ಗಮನ” ಎಂಬುದಾಗಿ ವಿಶದೀಕರಿಸುತ್ತದೆ. ಅದು ಮರ್ಯಾದೆ, ಗೌರವದ ಭಾವನೆಗೆ ನಿಕಟವಾಗಿ ಸಂಬಂಧಿಸಿದೆ, ಮತ್ತು ಅದು ನೀಡಲ್ಪಟ್ಟಾಗ ವ್ಯಕ್ತಿಯೊಬ್ಬನ ಕಂಡುಹಿಡಿಯಲಾದ ಅಂದಾಜನ್ನು ಯಾ ಮೌಲ್ಯವನ್ನು ಮತ್ತು ಆ ವ್ಯಕ್ತಿ ಅರ್ಹನಾಗಿರುವ ಮನ್ನಣೆಯ ಮಟ್ಟವನ್ನು ಅದು ಸೂಚಿಸುತ್ತದೆ.
ಮನ್ನಣೆ—ಮೂಲಭೂತವಾದ ಒಂದು ಅಗತ್ಯ
ಸಲ್ಲತಕ್ಕ ಸ್ಥಳದಲ್ಲಿ ಪ್ರಶಸ್ತಿಯನ್ನು ನೀಡುವುದು ವಿವೇಚನಾಯುಕ್ತವೂ ನ್ಯಾಯವೂ ಆಗಿದೆ. ಯಜಮಾನನು ತನ್ನ ಸ್ವತ್ತುಗಳನ್ನು ದಾಸರಿಗೆ ವಹಿಸಿದ ತನ್ನ ದೃಷ್ಟಾಂತದಲ್ಲಿ ಯೇಸು ನಮೂನೆಯನ್ನು ಸ್ಥಾಪಿಸಿದನು. ತನ್ನ ಸ್ವತ್ತುಗಳ ಯೋಗ್ಯವಾದ ನಿರ್ವಹಣೆಯನ್ನು ಅಂಗೀಕರಿಸುವಲ್ಲಿ, ಅವನಂದದ್ದು: “ಭಲಾ, ನಂಬಿಗಸ್ತನಾದ ಒಳ್ಳೇ ಆಳು.” (ಮತ್ತಾಯ 25:19-23) ಅನೇಕ ವೇಳೆಯಾದರೂ, ಅರ್ಹವಾಗಿರುವ ಈ ಆದರಣೆಯು ಕಡೆಗಣಿಸಲ್ಪಡುತ್ತದೆ. ಮನ್ನಣೆಯನ್ನು ಕೊಡಲು ತಪ್ಪಿಹೋಗುವುದು ಉತ್ಸಾಹ ಮತ್ತು ಆರಂಭ ಶಕ್ತಿಯನ್ನು ಅದುಮುತ್ತದೆ. ಐಓನ ಅದನ್ನು ಈ ರೀತಿಯಲ್ಲಿ ಹೇಳುತ್ತಾಳೆ: “ಮನ್ನಣೆಯು ನಿಮ್ಮನ್ನು ಅಗತ್ಯವಿರುವವರಂತೆ, ಬೇಕಾಗಿರುವವರಂತೆ, ಮತ್ತು ಗಣ್ಯಮಾಡಲ್ಪಡುವವರಂತೆ ಅನಿಸುವ ಹಾಗೆ ಮಾಡುತ್ತದೆ. . . . ಅದು ನಿಮಗೆ ಆರಂಭ ಶಕ್ತಿಯನ್ನು ಕೊಡುತ್ತದೆ. ನೀವು ಅಲಕ್ಷಿಸಲ್ಪಡುವುದಾದರೆ, ನೀವು ಖಿನ್ನರಾಗುತ್ತೀರಿ ಮತ್ತು ಆಶಾಭಂಗಗೊಳ್ಳುತ್ತೀರಿ.” ಪ್ಯಾಟ್ರಿಕ್ ಕೂಡಿಸುವುದು: “ಆಗ ಗುಣಮಟ್ಟದ ಮತ್ತು ಮೊತ್ತದ ಉನ್ನತ ಮಟ್ಟವನ್ನು ಕಾಪಾಡುವುದು ಕಠಿನವಾಗಿರುತ್ತದೆ.” ಆದುದರಿಂದ ಮನ್ನಣೆಯನ್ನು ಹೇಗೆ ಮತ್ತು ಯಾವಾಗ ಕೊಡಬೇಕೆಂಬುದನ್ನು ಕಲಿಯುವುದು ಎಷ್ಟು ಪ್ರಾಮುಖ್ಯವಾಗಿದೆ. ನಮ್ಮ ಸುತ್ತಲೂ ಇರುವ ಜನರಿಂದ ನಾವು ಸ್ವೀಕರಿಸಲ್ಪಡುತ್ತೇವೆ ಎಂಬ ಅರಿವಿನ ಭದ್ರತೆಗಾಗಿ ನಾವೆಲ್ಲರೂ ಹಾತೊರೆಯುತ್ತೇವೆ. ಅದು ಮೂಲಭೂತವಾದ ಮಾನವ ಅಗತ್ಯವಾಗಿದೆ.
ಹೊಗಳಿಕೆಯ ಒಂದು ಮಾತು, ಹೆಚ್ಚಿನ ಜವಾಬ್ದಾರಿ, ಯಾ ಒಂದು ಭೌತಿಕ ಕೊಡುಗೆಯೂ, ಅತ್ಯುತ್ತಮವಾದದ್ದನ್ನು ಮಾಡಲು ಮುಂದುವರಿಯುವಂತೆ ನಿಮ್ಮನ್ನು ಪ್ರಚೋದಿಸುತ್ತದೆ. ನೀವು ಏನೇ ಆಗಿರಲಿ—ಹೆತ್ತವರಲ್ಲೊಬ್ಬರು, ಗಂಡ, ಹೆಂಡತಿ, ಮಗು, ಸಭಾ ಸದಸ್ಯ, ಯಾ ಮೇಲ್ವಿಚಾರಕ—ಇದು ಸತ್ಯವಾಗಿದೆ. ಮಾರ್ಗ್ರೆಟ್ ಹೇಳುವುದು, “ಮನ್ನಣೆಯು ನೀಡಲ್ಪಟ್ಟಾಗ, ನನಗೆ ಸಂತೋಷವಾಗುತ್ತದೆ, ನನ್ನ ಅಗತ್ಯವಿರುವಂತೆ ಅನಿಸುತ್ತದೆ ಮತ್ತು ಉತ್ತಮವಾಗಿ ಮಾಡುವ ಬಯಕೆ ನನ್ನಲ್ಲಿ ಉಂಟಾಗುತ್ತದೆ.” ಆ್ಯಂಡ್ರೂ ಹೀಗೆ ಹೇಳುತ್ತಾ ಒಪ್ಪುತ್ತಾನೆ: “ಇನ್ನೂ ಕಷ್ಟಪಟ್ಟು ಕೆಲಸಮಾಡುವ ಪ್ರಚೋದನೆಯನ್ನು ಒದಗಿಸುತ್ತಾ, ನನ್ನ ಆತ್ಮವು ಉಲ್ಲಾಸಗೊಳ್ಳುತ್ತದೆ.” ಹಾಗಿದ್ದರೂ, ಯಾರಿಗಾದರೂ ಮನ್ನಣೆ ಮತ್ತು ಗೌರವವನ್ನು ಅನುಗ್ರಹಿಸುವಾಗ, ಜಾಗರೂಕವಾದ ಯೋಚನೆ ಮತ್ತು ಸರಿಯಾದ ತೀರ್ಮಾನದ ಅಗತ್ಯವಿರುತ್ತದೆ.
ಮನ್ನಣೆಯನ್ನು ದಯಪಾಲಿಸುವುದರಲ್ಲಿ ಯೆಹೋವನ ನಮೂನೆಯನ್ನು ಅನುಕರಿಸಿರಿ
ಇತರರ ಮೌಲ್ಯವನ್ನು ಗುರುತಿಸುವ ಪ್ರಧಾನ ಉದಾಹರಣೆಯು ಯೆಹೋವ ದೇವರಾಗಿದ್ದಾನೆ. ಮನ್ನಣೆಗೆ ಅರ್ಹರಾಗಿರುವವರನ್ನು ಆತನು ಅಂಗೀಕರಿಸುತ್ತಾನೆ. ಹೇಬೆಲ, ಹನೋಕ, ಮತ್ತು ನೋಹರಂತಹ ಮನುಷ್ಯರನ್ನು ಆತನು ಗಮನಿಸಿದನು. (ಆದಿಕಾಂಡ 4:4; 6:8; ಯೂದ 14) ಅವನ ಎದ್ದುಕಾಣುವ ನಂಬಿಗಸ್ತಿಕೆಗಾಗಿ ಯೆಹೋವನು ದಾವೀದನನ್ನು ಅಂಗೀಕರಿಸಿದನು. (2 ಸಮುವೇಲ 7:16) ಅನೇಕ ವರ್ಷಗಳ ಕಾಲ ಪ್ರವಾದಿಯೋಪಾದಿ ಯೆಹೋವನನ್ನು ಘನಪಡಿಸಿದ ಸಮುವೇಲನು, ಫಿಲಿಷ್ಟಿಯರನ್ನು ಸೋಲಿಸಲು ಸಹಾಯಕ್ಕಾಗಿ ಮಾಡಿದ ತನ್ನ ಪ್ರಾರ್ಥನೆಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ ದೇವರಿಂದ ಸರದಿಯಾಗಿ ಗೌರವಿಸಲ್ಪಟ್ಟನು. (1 ಸಮುವೇಲ 7:7-13) ಇಂತಹ ದೈವಿಕ ಮನ್ನಣೆಯನ್ನು ಪಡೆಯುವುದು ನಿಮಗೆ ಹೆಮ್ಮೆಯನಿಸುವುದಿಲ್ಲವೊ?
ಕೃತಜ್ಞತೆ ಮತ್ತು ಗಣ್ಯತೆ ಮನ್ನಣೆಯೊಂದಿಗೆ ನಿಕಟವಾಗಿ ಸೇರಿವೆ. ‘ಕೃತಜ್ಞತೆಯುಳ್ಳವರಾಗಿ ತೋರಿಸಿ’ ಕೊಳ್ಳುವಂತೆ ಮತ್ತು ನಮ್ಮ ಪರವಾಗಿ ಮಾಡಲ್ಪಟ್ಟಿರುವ ವಿಷಯಕ್ಕಾಗಿ ಕೃತಜ್ಞರಾಗಿರುವಂತೆ ಬೈಬಲ್ ನಮ್ಮನ್ನು ಪ್ರೇರಿಸುತ್ತದೆ. (ಕೊಲೊಸ್ಸೆ 3:15; 1 ಥೆಸಲೊನೀಕ 5:18) ಇದು ನಿರ್ದಿಷ್ಟವಾಗಿ ಯೆಹೋವನಿಗೆ ನೀಡುವ ಉಪಕಾರಸ್ಮರಣೆಗೆ ಅನ್ವಯಿಸುತ್ತದಾದರೂ, ಜೀವಿತದ ಪ್ರತಿನಿತ್ಯದ ವಿಷಯಗಳಲ್ಲಿ ಅದೇ ವಿಷಯವು ಸತ್ಯವಾಗಿದೆ. ಅಪೊಸ್ತಲ ಪೌಲನು ಇದನ್ನು ಗಣ್ಯಮಾಡಿದನು. ಅವನು ಫೊಯಿಬೆಗೆ “ಅನೇಕರಿಗೂ ಸಹಾಯಮಾಡಿ” ದವಳೋಪಾದಿ ಮತ್ತು ಪ್ರಿಸ್ಕ ಮತ್ತು ಅಕ್ವಿಲರಿಗೆ ತನ್ನ ಪರವಾಗಿ ಮತ್ತು ಇತರರ ಪರವಾಗಿ ‘ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿದ’ ವರೋಪಾದಿ ಮನ್ನಣೆ ಸಲ್ಲಿಸಿದನು. (ರೋಮಾಪುರ 16:1-4) ಬಹಿರಂಗವಾಗಿ ಅಭಿವ್ಯಕ್ತಿಸಲ್ಪಟ್ಟ ಇಂತಹ ಕೃತಜ್ಞತೆಯನ್ನು ಪಡೆಯುವಾಗ ಅವರಿಗೆ ಹೇಗೆ ಅನಿಸಿರಬಹುದೆಂದು ಊಹಿಸಿರಿ. ಮನ್ನಣೆ, ಘನತೆ, ಮತ್ತು ಉತ್ತೇಜನವನ್ನು ನೀಡುವುದರ ಸಂತೋಷವನ್ನು ಅನುಭವಿಸಿದ್ದು ಪೌಲನಿಗೂ ಒಳ್ಳೆಯದ್ದಾಗಿತ್ತು. ಸಲ್ಲತಕ್ಕವರಿಗೆ ಯೋಗ್ಯವಾದ ಮನ್ನಣೆಯನ್ನು ತೋರಿಸುವ ಮೂಲಕ ನಾವು ಕೂಡ ಯೆಹೋವನನ್ನು ಮತ್ತು ಆತನ ಗುಣಗ್ರಾಹಿ ಆರಾಧಕರನ್ನು ಅನುಕರಿಸಬಲ್ಲೆವು.—ಅ. ಕೃತ್ಯಗಳು 20:35.
ಕುಟುಂಬ ವೃತ್ತದೊಳಗೆ ಮನ್ನಣೆ
“ಜೀವಿತವನ್ನು ಆನಂದದಾಯಕವಾಗಿ ಮಾಡುವುದರಲ್ಲಿ ಒಂದಿಷ್ಟು ಮನ್ನಣೆಯು ಬಹಳ ಸಹಾಯ ಮಾಡುತ್ತದೆ,” ಎಂದು ಗಂಡನೂ ಒಬ್ಬ ಕ್ರೈಸ್ತ ಹಿರಿಯನೂ ಆಗಿರುವ ಮಿಚೆಲ್ ಹೇಳುತ್ತಾನೆ. “ನಿಮಗೆ ಇಂತಹ ಮನ್ನಣೆಯನ್ನು ಕೊಡುವವನನ್ನು ಇದು ಪ್ರಾಯಶಃ ಸದಾಕಾಲ ಪ್ರೀತಿಪಾತ್ರನಾಗುವಂತೆ ಮಾಡುತ್ತದೆ.” ದೃಷ್ಟಾಂತಕ್ಕೆ, ಒಬ್ಬ ಕ್ರೈಸ್ತ ಗಂಡನು ಜವಾಬ್ದಾರಿಯ ಒಂದು ದೊಡ್ಡ ಹೊರೆಯನ್ನು ಹೊತ್ತುಕೊಳ್ಳುತ್ತಾನೆ ಮತ್ತು ಕುಟುಂಬದ ಕ್ಷೇಮವನ್ನು ಒಳಗೊಳ್ಳುವ ಪ್ರಾಮುಖ್ಯವಾದ ನಿರ್ಣಯಗಳನ್ನು ಮಾಡುತ್ತಾನೆ. ಅವನು ಕುಟುಂಬದ ಆತ್ಮಿಕ, ಭೌತಿಕ, ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸಬೇಕು. (1 ತಿಮೊಥೆಯ 5:8) ಕುಟುಂಬದ ತಲೆಯೋಪಾದಿ ಅವನ ದೇವದತ್ತ ನೇಮಕಕ್ಕೆ ಯೋಗ್ಯವಾದ ಮನ್ನಣೆ ತೋರಿಸಲ್ಪಡುವಾಗ ಮತ್ತು ಅವನ ಹೆಂಡತಿ ಅವನಿಗೆ “ಆಳವಾದ ಗೌರವವನ್ನು” ತೋರಿಸುವಾಗ, ಅವನೆಷ್ಟು ಕೃತಜ್ಞನಾಗಿದ್ದಾನೆ!—ಎಫೆಸ 5:33, NW.
ಕಡೆಗಣಿಸಲ್ಪಡಬಾರದ ಇನ್ನೊಂದು ವಿಷಯವು, ಅನೇಕ ಜನರಿಂದ ಗಮನಿಸಲ್ಪಡದ ಗೃಹಿಣಿಯ ಕೆಲಸವಾಗಿದೆ. ಆಧುನಿಕ ಕಲ್ಪನೆಗಳು ಅಂತಹ ಕೆಲಸವನ್ನು ಕಡೆಗಣಿಸಿ ಅದರ ಘನತೆ ಮತ್ತು ಮೌಲ್ಯವನ್ನು ಅದರಿಂದ ಕಿತ್ತುಕೊಳ್ಳುತ್ತವೆ. ಆದರೂ, ಅದು ದೇವರನ್ನು ಮೆಚ್ಚಿಸುವಂಥದ್ದಾಗಿದೆ. (ತೀತ 2:4, 5) ವಿವೇಚನಾ ಶಕ್ತಿಯುಳ್ಳ ಗಂಡನೊಬ್ಬನು ತನ್ನ ಹೆಂಡತಿಯನ್ನು ಆಕೆ ಅತಿಶಯಿಸುವ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಹೊಗಳುವಾಗ, ತನ್ನ ತಲೆತನದ ಕೆಳಗೆ ಆಕೆಗೆ ಇಂತಹ ಮನ್ನಣೆಯನ್ನು ನೀಡುವಾಗ ಅದು ಎಷ್ಟು ಚೈತನ್ಯದಾಯಕವಾಗಿದೆ! (ಜ್ಞಾನೋಕ್ತಿ 31:28) ರೊವೀನ ಆಕೆಯ ಗಂಡನ ಕುರಿತು ಹೇಳುವುದು: “ನಾನು ಮಾಡುವುದನ್ನು ಅವನು ಅಂಗೀಕರಿಸುವಾಗ, ಅವನಿಗೆ ಅಧೀನಳಾಗಿರುವುದು ಮತ್ತು ಅವನಿಗೆ ಮಾನಮರ್ಯಾದೆ ತೋರಿಸುವುದು ಸುಲಭವೆಂದು ನಾನು ಕಂಡುಕೊಳ್ಳುತ್ತೇನೆ.”
ಅಮೆರಿಕನ್ ಶಿಕ್ಷಕ ಕ್ರಿಶ್ಚನ್ ಬೊವೀ ಒಮ್ಮೆ ಹೇಳಿದ್ದು: “ಹೂವುಗಳಿಗೆ ಸೂರ್ಯನ ಅಗತ್ಯವಿರುವಂತೆಯೇ, ಯಶಸ್ವಿಯಾಗಿರಲು ಮಕ್ಕಳಿಗೆ ವಿವೇಚನಾಯುಕ್ತವಾದ ಪ್ರಶಂಸೆಯ ಅಗತ್ಯವಿದೆ.” ಹೌದು, ಬಹಳ ಎಳೆಯ ಮಗುವಿಗೂ ತಾನೊಬ್ಬ ಕುಟುಂಬದ ಉಪಯುಕ್ತ ಸದಸ್ಯನೆಂಬ ಸತತವಾದ ಪುನರಾಶ್ವಾಸನೆಯ ಅಗತ್ಯವಿದೆ. ರೂಪುಗೊಳ್ಳುತ್ತಿರುವ ಹದಿ ವಯಸ್ಸಿನಲ್ಲಿ, ಹೊಸ ಭಾವನಾತ್ಮಕ ಹಾಗೂ ಶಾರೀರಿಕ ಬದಲಾವಣೆಗಳಿಂದ ತುಂಬಿದವರಾಗಿ, ಸ್ವಾತಂತ್ರ್ಯ ಮತ್ತು ಮನ್ನಣೆಗಾಗಿ ಹಾತೊರೆಯುವಿಕೆಯೊಂದಿಗೆ ಜೊತೆಗೂಡಿ ವೈಯಕ್ತಿಕ ತೋರಿಕೆಯ ಕುರಿತು ಹೆಚ್ಚಿನ ಆತ್ಮತಾಪ್ರಜ್ಞೆಯುಳ್ಳವರಾಗಿರುತ್ತಾರೆ. ವಿಶೇಷವಾಗಿ ಈ ಸಮಯದಲ್ಲಿ ಹದಿವಯಸ್ಕನೊಬ್ಬನು ತನ್ನ ಹೆತ್ತವರಿಂದ ಪ್ರೀತಿಸಲ್ಪಡುವ ಮತ್ತು ತಿಳಿವಳಿಕೆಯಿಂದ ಹಾಗೂ ಮಾನವ ದಯೆಯಿಂದ ನಡೆಸಿಕೊಳ್ಳಲ್ಪಡುವ ಅಗತ್ಯವಿದೆ. ತದ್ರೀತಿಯಲ್ಲಿ ವೃದ್ಧರಾಗುತ್ತಿರುವ ಹೆತ್ತವರಿಗೆ ಮತ್ತು ಅಜ್ಜಅಜಿಯ್ಜರಿಗೆ ತಾವು ಇನ್ನೂ ಉಪಯುಕ್ತರೂ ಪ್ರೀತಿಸಲ್ಪಡುತ್ತಿರುವವರೂ ಮತ್ತು ‘ವೃದ್ಧಾಪ್ಯದಲ್ಲಿ ಧಿಕ್ಕರಿಸಲ್ಪಡ’ ದವರೂ ಎಂಬ ಪುನರಾಶ್ವಾಸನೆಯ ಅಗತ್ಯವಿದೆ. (ಕೀರ್ತನೆ 71:9; ಯಾಜಕಕಾಂಡ 19:32; ಜ್ಞಾನೋಕ್ತಿ 23:22) ಮನ್ನಣೆಗಾಗಿರುವ ಅಗತ್ಯವನ್ನು ಸರಿಯಾಗಿ ಪೂರೈಸುವುದು, ಕುಟುಂಬ ವೃತ್ತಕ್ಕೆ ಹೆಚ್ಚಿನ ಸಂತೋಷವನ್ನು ಮತ್ತು ಸಫಲತೆಯನ್ನು ತರುತ್ತದೆ.
ಕ್ರೈಸ್ತ ಸಭೆಯೊಳಗೆ ಮನ್ನಣೆ
ಕ್ರೈಸ್ತ ಸಭೆಯಲ್ಲಿರುವ ಇತರರಲ್ಲಿ ಪ್ರಾಮಾಣಿಕವಾದ ಆಸಕ್ತಿಯನ್ನು ಬೆಳೆಸುವುದರಲ್ಲಿ ಮತ್ತು ಅವರ ಕೃತ್ಯಗಳಿಗಾಗಿ ಹಾಗೂ ಪ್ರಯತ್ನಗಳಿಗಾಗಿ ಗಣ್ಯತೆಯನ್ನು ಉದಾರವಾಗಿ ವ್ಯಕ್ತಪಡಿಸುವುದರಲ್ಲಿ ಮಹಾ ಮೌಲ್ಯವಿದೆ. ಸಭೆಯಲ್ಲಿರುವ ಇತರರ ಸಾಧನೆಗಳನ್ನು ಮತ್ತು ಪ್ರಯತ್ನಗಳನ್ನು ಅಂಗೀಕರಿಸುವ ಮೂಲಕ ಕ್ರೈಸ್ತ ಹಿರಿಯರು ನಾಯಕತ್ವವನ್ನು ವಹಿಸತಕ್ಕದ್ದು. “ಉತ್ತೇಜನ, ಸಂತೃಪ್ತಿ, ಮತ್ತು ಸಂತೋಷದ ಸಂಬಂಧದಲ್ಲಿ ಮನ್ನಣೆಯ ಮಾತುಗಳು ಎಷ್ಟನ್ನು ಅರ್ಥೈಸುತ್ತವೆ ಎಂಬುದನ್ನು ನಾನು ಹಲವಾರು ಕುರಿಪಾಲನೆಯ ಭೇಟಿಗಳನ್ನು ಪಡೆಯುವ ತನಕ ಗ್ರಹಿಸಲಿಲ್ಲ,” ಎಂದು ಮಾರ್ಗ್ರೆಟ್ ಹೇಳಿದಳು. “ಸಾಮಾನ್ಯವಾದ ಮನ್ನಣೆ ಕೊಡಲ್ಪಡದಿರುವಾಗ, ಒಬ್ಬನಿಂದ ಏನನ್ನು ಕಿತ್ತುಕೊಳ್ಳಲಾಗುತ್ತದೆ ಎಂಬುದನ್ನು ನಾನು ಗ್ರಹಿಸಿದೆ.” ಸಭೆಯಲ್ಲಿರುವ ಎಲ್ಲರಲ್ಲಿ ಯಥಾರ್ಥವಾದ, ಪ್ರೀತಿಯ ವೈಯಕ್ತಿಕ ಆಸಕ್ತಿಯನ್ನು ತೋರಿಸುವುದಕ್ಕಾಗಿ ಇದು ಎಂತಹ ಒಳ್ಳೆಯ ಕಾರಣವಾಗಿದೆ! ಅವರ ಒಳ್ಳೆಯ ಕೆಲಸವನ್ನು ಗುರುತಿಸಿರಿ. ಬಹಿರಂಗವಾಗಿ ಪ್ರಶಂಸಿರಿ ಮತ್ತು ಉತ್ತೇಜಿಸಿರಿ. ತಮ್ಮ ಮಕ್ಕಳಲ್ಲಿ ಆತ್ಮಿಕ ಮೌಲ್ಯಗಳನ್ನು ಬೋಧಿಸಲು ಕಷ್ಟಪಡುತ್ತಿರುವ ಒಂಟಿ ಹೆತ್ತವರ ಕುಟುಂಬಗಳು ಅನೇಕ ಸಭೆಗಳಲ್ಲಿವೆ. ಅಂಥವರು ವಿಶೇಷ ಹೊಗಳಿಕೆಗೆ ಅರ್ಹರಾಗಿದ್ದಾರೆ. ನಕಾರಾತ್ಮಕಗಳಿಗಿಂತ ಸಕಾರಾತ್ಮಕಗಳನ್ನು ಎತ್ತಿತೋರಿಸಿರಿ. ಅವರಿಗಾಗಿರುವ ನಿಮ್ಮ ಸಹೋದರ ಸ್ನೇಹವನ್ನು ಇತರರು ನೋಡಲಿ. ನೀವು ಚಿಂತಿಸುತ್ತೀರೆಂದು ಅವರು ಮನಗಾಣಲಿ. ಈ ರೀತಿಯಲ್ಲಿ, ಪ್ರೀತಿಯ ಮೇಲ್ವಿಚಾರಕರು ಸಭೆಯ ಭಕ್ತಿವೃದ್ಧಿಯ ಕೆಲಸಮಾಡುತ್ತಾರೆ. (2 ಕೊರಿಂಥ 10:8) ತಮ್ಮ ಪರವಾಗಿ ಕಷ್ಟಪಟ್ಟು ಕೆಲಸಮಾಡುವ ಇಂತಹ ನಂಬಿಗಸ್ತ ವ್ಯಕ್ತಿಗಳಿಗೆ ಯೋಗ್ಯವಾದ ಮನ್ನಣೆ ಮತ್ತು ಗೌರವವನ್ನು ಕೊಟ್ಟು ಒಬ್ಬೊಬ್ಬ ಸದಸ್ಯನು ಪ್ರತಿಕ್ರಿಯೆಯನ್ನು ತೋರಿಸುತ್ತಾರೆ.—1 ತಿಮೊಥೆಯ 5:17; ಇಬ್ರಿಯ 13:17.
ಆದರೆ ಈ ವಿಷಯಕ್ಕೆ ಇನ್ನೊಂದು ಮುಖ ಯಾ ಕೋನವಿದೆ. ಮನ್ನಣೆಗಾಗಿರುವ ಬಯಕೆಯು ಸರ್ವಸಮ್ಮತವಾಗಿ ಬಹಳ ಬಲವಾಗಿದೆ. ಯೇಸುವಿನ ದಿನದಲ್ಲಿ ಧಾರ್ಮಿಕ ನಾಯಕರೊಳಗೆ ಅದೊಂದು ಮುನ್ನೊಲವಾಗಿತ್ತು. ಈ ವಿಷಯದಲ್ಲಿ ತನ್ನ ಶಿಷ್ಯರ ತಪ್ಪಾದ ದೃಷ್ಟಿಕೋನವನ್ನು ಯೇಸು ತಿದ್ದಬೇಕಾಯಿತು. (ಮಾರ್ಕ 9:33-37; ಲೂಕ 20:46) ಕ್ರೈಸ್ತರಿಗೆ ವಿವೇಚನೆಯ ಮತ್ತು ಸಮತೂಕದ ಅಗತ್ಯವಿದೆ. ತಡೆಯದೆ ಹೋದಲ್ಲಿ, ಮನ್ನಣೆಗಾಗಿರುವ ಬಯಕೆಯು ಆತ್ಮಿಕವಾಗಿ ಅಪಾಯಕರವಾಗಿರಬಹುದು. (ಯಾಕೋಬ 3:14-16) ಹಿರಿಯನೊಬ್ಬನು ಅಹಂಕಾರಿಯಾಗಿ ತನ್ನ ಕುರಿತು ತನ್ನದೇ ಆದ ಮೇಲೇರಿಸಲ್ಪಟ್ಟ ಅಂದಾಜನ್ನು ಇತರರು ಸ್ವೀಕರಿಸುವಂತೆ ತಗಾದೆ ಮಾಡುವುದಾದರೆ, ಅದು ಎಷ್ಟು ದುಃಖಕರವಾಗಿರುವುದು!—ರೋಮಾಪುರ 12:3.
ರೋಮ್ನಲ್ಲಿದ್ದ ಜೊತೆ ಕ್ರೈಸ್ತರನ್ನು ಅಪೊಸ್ತಲ ಪೌಲನು ವಿವೇಕದಿಂದ ಎಚ್ಚರಿಸಿದ್ದು: “ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ರೋಮಾಪುರ 12:10) ಎಲ್ಲ ಸಮಯಗಳಲ್ಲಿ ಕ್ರಿಸ್ತನನ್ನು ಸಭೆಯ ತಲೆಯೋಪಾದಿ ಗುರುತಿಸಬೇಕಾದ ಕ್ರೈಸ್ತ ಹಿರಿಯರಿಗೆ ಈ ಮಾತುಗಳು ಪ್ರಧಾನವಾಗಿ ಅನ್ವಯಿಸುತ್ತವೆ. ಪವಿತ್ರ ಆತ್ಮನ ಮೂಲಕ, ಬೈಬಲ್ ತತ್ವಗಳ ಮೂಲಕ, ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ”ನ ಆಡಳಿತ ಮಂಡಲಿಯಿಂದ ಕೊಡಲ್ಪಡುವ ಮಾರ್ಗದರ್ಶನದ ಮೂಲಕ ಕ್ರಿಸ್ತನ ನಿರ್ದೇಶನವನ್ನು ಹುಡುಕುವುದರಿಂದ ಅವನ ಅಧಿಕಾರಯುಕ್ತ ನಿರ್ದೇಶನಕ್ಕೆ ಅಧೀನತೆಯು ಪ್ರದರ್ಶಿಸಲ್ಪಡುತ್ತದೆ.—ಮತ್ತಾಯ 24:45-47; ನೋಡಿ ಪ್ರಕಟನೆ 1:16, 20; 2:1.
ಹೀಗೆ, ಹಿರಿಯರು ಕೂಡಿಬರುವಾಗ, ಮತ್ತು ದೇವರ ಮಂದೆಯನ್ನು ಕಾಯಲು ಯೆಹೋವನ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸುವಾಗ, ಶಾಸ್ತ್ರೀಯವಾಗಿ ಸರಿಯಾಗಿರುವ ನಿರ್ಣಯಗಳನ್ನು ಮಾಡಲು ಅವರು ಪ್ರಯತ್ನಿಸುವರು. ಕ್ರೈಸ್ತ ಅಭಿಮಾನಮಿತಿ, ನಮ್ರತೆ, ಮತ್ತು ದೈನ್ಯವು ಯಾವುದೇ ಹಿರಿಯನು ತನ್ನನ್ನು ಮೇಲೇರಿಸಿಕೊಳ್ಳಲು ಪ್ರಯತ್ನಿಸುವುದರಿಂದ, ತನ್ನ ಸಹೋದರರ ಮೇಲೆ ಅಧಿಕಾರ ಚಲಾಯಿಸುವುದರಿಂದ, ಮತ್ತು ಈ ಕೂಟಗಳಲ್ಲಿ ತನ್ನ ಅಭಿಪ್ರಾಯವನ್ನು ಹೇರುವುದರಿಂದ ತಡೆಯುವದು. (ಮತ್ತಾಯ 20:25-27; ಕೊಲೊಸ್ಸೆ 3:12) ಸಾಧ್ಯವಿರುವಾಗಲೆಲ್ಲಾ, ಹಿರಿಯ ಮಂಡಲಿಯ ಅಧ್ಯಕ್ಷನು ಜೊತೆ ಹಿರಿಯರಿಂದ ಮುಂಚಿತವಾಗಿ ವಿಚಾರಗಳ ಅಭಿವ್ಯಕ್ತಿಯನ್ನು ಆಮಂತ್ರಿಸುವುದು ಮತ್ತು ತದನಂತರ ಗುರುತುಮಾಡಲ್ಪಟ್ಟ ಪ್ರತಿಯೊಂದು ಅಂಶಕ್ಕೆ, ಜಾಗರೂಕವಾದ ಹಾಗೂ ಪ್ರಾರ್ಥನಾಪೂರ್ವಕವಾದ ಯೋಚನೆಗಾಗಿ ಸಮಯವನ್ನು ಅನುಮತಿಸಲು ಸಾಕಾಷ್ಟು ಮುಂಚಿತವಾಗಿ ಕಾರ್ಯ ಸೂಚಿಯನ್ನು ಒದಗಿಸುವುದು ಒಳ್ಳೆಯದಾಗಿರುವುದು. ಹಿರಿಯರ ಕೂಟದ ಸಂದರ್ಭದಲ್ಲಿ, ಹಿರಿಯರ ಅಭಿಪ್ರಾಯವನ್ನು ರೂಪಿಸಲು ಪ್ರಯತ್ನಿಸುವ ಬದಲಿಗೆ ಚರ್ಚೆಯ ವಿಷಯಗಳ ಮೇಲೆ “ಮಾತಾಡುವ ಸ್ವಾತಂತ್ರ್ಯ” ವನ್ನು ಅಭ್ಯಸಿಸುವಂತೆ ಅವರನ್ನು ಉತ್ತೇಜಿಸಬೇಕು. (1 ತಿಮೊಥೆಯ 3:13, NW) ಸರದಿಯಾಗಿ, ಜೊತೆ ಹಿರಿಯರು ಒಬ್ಬರು ಇನ್ನೊಬ್ಬರ ಅಭಿವ್ಯಕ್ತಿಗಳನ್ನು ಜಾಗರೂಕವಾಗಿ ಆಲಿಸಬೇಕು ಮತ್ತು ಅನೇಕ ವರ್ಷಗಳ ಕ್ರೈಸ್ತ ಅನುಭವವಿರುವ ಹಿರಿಯರ ಒಳನೋಟದಿಂದ ಸಂತೋಷಕರವಾಗಿ ಪ್ರಯೋಜನಪಡೆಯಬೇಕು.—ವಿಮೋಚನಕಾಂಡ 18:21, 22.
ಹಾಗಿದ್ದರೂ, ಸನ್ನಿವೇಶದೊಂದಿಗೆ ನಿಭಾಯಿಸಲು ಯಾ ಪ್ರಾಮುಖ್ಯವಾದೊಂದು ನಿರ್ಣಯವನ್ನು ಮಾಡಲು ಅಗತ್ಯವಿರುವ ಬೈಬಲ್ ತತ್ವಗಳನ್ನು ಒದಗಿಸಲಿಕ್ಕಾಗಿ ಕ್ರಿಸ್ತನು ಮಂಡಲಿಯ ಯಾವುದೇ ಹಿರಿಯನನ್ನು ಉಪಯೋಗಿಸಬಲ್ಲನೆಂದು ಮೇಲ್ವಿಚಾರಕರು ತಿಳಿದುಕೊಳ್ಳುತ್ತಾರೆ. ಸಭೆಯ ಆತ್ಮಿಕ ಅಭಿರುಚಿಗಳಿಗಾಗಿ ಕಾಳಜಿವಹಿಸುವುದರಲ್ಲಿ ತನ್ನ ನೆರವಿಗಾಗಿ ಪ್ರತಿಯೊಬ್ಬ ಹಿರಿಯನಿಗೆ ಯೋಗ್ಯವಾದ ಮನ್ನಣೆ ಕೊಡಲ್ಪಡುವಾಗ, ಮಂಡಲಿಯಲ್ಲಿ ಒಳ್ಳೆಯ ಮನೋಭಾವವು ಇರುವುದು.—ಅ. ಕೃತ್ಯಗಳು 15:6-15; ಫಿಲಿಪ್ಪಿ 2:19, 20.
ಅರ್ಹವಾದ ಮನ್ನಣೆಯನ್ನು ನೀಡುವ ಮತ್ತು ಪಡೆಯುವ ಪ್ರಯತ್ನವನ್ನು ಮಾಡಿರಿ
ಮನ್ನಣೆಯು ಆತ್ಮೋನ್ನತಿ ಮಾಡುತ್ತದೆ. ಅದು ಉತ್ತೇಜಿಸುತ್ತದೆ ಮತ್ತು ಪ್ರೀತಿಗೆ ಪಾತ್ರರಾಗುವಂತೆ ಮಾಡುತ್ತದೆ. “ನಾವು ಕೇವಲ ಸಾಧಾರಣರೆಂದು ನಮಗನಿಸಿದರೂ,” ಮೇರಿ ಹೇಳುವುದು, “ನಮ್ಮ ಸ್ವಂತ ಮೌಲ್ಯಕ್ಕಾಗಿ ನಮಗೆ ಉತ್ತೇಜನದ ಅಗತ್ಯವಿದೆ.” ಇತರರ ಪ್ರತಿನಿತ್ಯದ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಅಂಗೀಕರಿಸಿರಿ. ಹಾಗೆ ಮಾಡುವುದು ಅವರಿಗೆ ಜೀವನವನ್ನು ಅಧಿಕ ಸಾರ್ಥಕವಾಗಿಯೂ ಮನೋಹರವಾಗಿಯೂ ಮಾಡುತ್ತದೆ. ಹೆತ್ತವರೇ, ಮಕ್ಕಳೇ, ಮೇಲ್ವಿಚಾರಕರೇ, ಮತ್ತು ಕ್ರೈಸ್ತ ಸಭೆಯ ಸದಸ್ಯರೇ, ನೀವು ಮಾತಾಡುವ ಹಾಗೂ ಕ್ರಿಯೆಗೈಯುವ ವಿಧದಿಂದ ಮನ್ನಣೆಯನ್ನು ಪಡೆಯಬಲ್ಲಿರಿ. ಶ್ರಮಶೀಲ, ಅಭಿಮಾನಮಿತಿಯ, ಮತ್ತು ದೀನ ವ್ಯಕ್ತಿಗಳ ಕುರಿತು ಬೈಬಲ್ ಸಮ್ಮತಿಸೂಚಕವಾಗಿ ಮಾತಾಡುತ್ತದೆ. (ಜ್ಞಾನೋಕ್ತಿ 11:2; 29:23; ಇಬ್ರಿಯ 6:1-12) ಇತರರ ಮೌಲ್ಯವನ್ನು ವಿನಯಶೀಲವಾಗಿ ಅಂಗೀಕರಿಸಲು ಕಲಿಯಿರಿ. ಅವರೊಂದಿಗೆ ನೀವು ಕೆಲಸಮಾಡಿದಂತೆ ಇತರರ ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಿರಿ. ಅಪೊಸ್ತಲ ಪೇತ್ರನು ಈ ಬುದ್ಧಿವಾದವನ್ನು ನೀಡಿದನು: “ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ; ಅಣತ್ಣಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆಯೂ ದೀನಭಾವವೂ ಉಳ್ಳವರಾಗಿರಿ. (1 ಪೇತ್ರ 3:8) ಹೀಗೆ ಮೂಲಭೂತವಾದ ಮಾನವ ಅಗತ್ಯವನ್ನು ಪೂರೈಸುತ್ತಾ, ಇತರರಿಗೆ ಮನ್ನಣೆಯನ್ನು ದಯಪಾಲಿಸುವುದಕ್ಕೆ ಇದು ಕರೆಯನ್ನು ನೀಡುತ್ತದೆ.