ಟೆಲಿವಿಷನ್ ನಿಮ್ಮನ್ನು ನಿಯಂತ್ರಿಸುವ ಮೊದಲು ಅದನ್ನುನೀವೇ ನಿಯಂತ್ರಿಸಿರಿ
ಟೆಲಿವಿಷನಿಗೆ ತತ್ತರಗುಟ್ಟಿಸುವ ಸಾಮರ್ಥ್ಯವಿದೆ. ಅಮೆರಿಕನ್ ಟೀವೀ ಉದ್ಯಮವು ವಿಕಾಸಹೊಂದುತ್ತಿರುವ ದೇಶಗಳು ಟೀವೀಯನ್ನು ಆಯ್ದುಕೊಳ್ಳುವಂತೆ ಪ್ರಯತ್ನಿಸಿದಾಗ ಅದು ಟೀವೀ ಆದರ್ಶದ ಒಂದು ದರ್ಶನವನ್ನು ನೀಡಿತು. ಪೂರ್ತಿ ದೇಶಗಳು ಕ್ಲಾಸ್ರೂಮುಗಳಾಗುವುವು, ಅತಿ ದೂರದ ಪ್ರದೇಶವು ಸಹ ಬೇಸಾಯದ ನವೀನ ವಿಧಗಳು, ಮಣ್ಣು ರಕ್ಷಣೆ, ಮತ್ತು ಕುಟುಂಬ ಯೋಜನೆಯೇ ಮುಂತಾದ ಮುಖ್ಯ ವಿಷಯಗಳನ್ನು ನೋಡಬಹುದು. ಮತ್ತು ಮಕ್ಕಳು ಭೌತ ವಿಜ್ಞಾನ, ರಸಾಯನ ವಿಜ್ಞಾನಗಳನ್ನು ಕಲಿತು ವಿಸ್ತಾರವಾಗುವ ಸಾಂಸ್ಕೃತಿಕ ವಿನಿಮಯಗಳಿಂದ ಪ್ರಯೋಜನ ಪಡೆಯಬಹುದು ಎಂಬ ದರ್ಶನವನ್ನು ಅದು ನೀಡಿತು.
ಆದರೆ ಇಂಥ ದರ್ಶನಗಳು ತರುವಾಯ ಬಂದ ವಾಣಿಜ್ಯದ ಟೆಲಿವಿಷನಿನೆದುರು ಹೆಚ್ಚಾಗಿ ಇಂಗಿ ಹೋದರೂ ಪೂರ್ತಿಯಾಗಿ ಇಂಗಿಹೋಗಲಿಲ್ಲ. ಟೆಲಿವಿಷನನ್ನು “ಒಂದು ವಿಶಾಲ ಬಂಜರು ಭೂಮಿ” ಎಂದು ಕರೆದ ಫೆಡರಲ್ ಕಮ್ಯುನಿಕೇಶನ್ಸ್ ಕಮಿಷನಿನ ಅಧ್ಯಕ್ಷ ನ್ಯೂಟನ್ ಮಿನೊ ಅವರು ಸಹ ಅವರ 1961ರ ಅದೇ ಭಾಷಣದಲ್ಲಿ ಟೀವೀ ಕೆಲವು ಮಹಾ ಕಾರ್ಯಗಳನ್ನೂ ಆನಂದಕರವಾದ ಮನೋರಂಜನೆಗಳನ್ನೂ ಪೂರೈಸಿದೆ ಎಂದು ಹೇಳಿದರು.
ಇದು ಇಂದು ಸಹ ನಿಜವೆಂಬುದು ನಿಶ್ಚಯ. ಟೀವೀ ವಾರ್ತಾಪ್ರಸಾರ ನಮಗೆ ಲೋಕಘಟನೆಗಳನ್ನು ತಿಳಿಸುತ್ತದೆ. ಟೀವೀ ನೈಸರ್ಗಿಕ ಕಾರ್ಯಕ್ರಮಗಳು, ಅವುಗಳಿಲ್ಲದಿದ್ದರೆ ನಾವೆಂದಿಗೂ ನೋಡದೆ ಇದ್ದಿರಬಹುದಾದ ಸಂಗತಿಗಳನ್ನು ನಮಗೆ ತೋರಿಸಿವೆ: ಝೇಂಕಾರದ ಹಕ್ಕಿ ಗಾಳಿಯಲ್ಲಿ ಈಜಾಡುವಂತೆ ತೋರಿಬರುವ ನಿಧಾನ ಚಲನೆಯ ಚಿತ್ರದಲ್ಲಿರುವ ನಿಷ್ಕೃಷ್ಟ ಲಾವಣ್ಯ; ಟೈಮ್ ಲ್ಯಾಪ್ಸ್ ಫೊಟೋಗ್ರಫಿಯಲ್ಲಿ ಕಂಡುಬರುವ ಬಣ್ಣಗಳ ಮೊಳಗಿನಲ್ಲಿ ಮಣ್ಣಿನಿಂದ ಎದ್ದು ಬರುವ ಪಾತಿಯಲ್ಲಿರುವ ಹೂವುಗಳ ವಿಚಿತ್ರ ನಾಟ್ಯ. ಇನ್ನು ಬ್ಯಾಲೆ ನರ್ತನ, ಸಿಂಫೊನಿ ವಾದ್ಯ ಮೇಳ ಮತ್ತು ಆಪೆರ ನಾಟಕ ಪ್ರದರ್ಶನಗಳಿವೆ. ಮತ್ತು ಕೆಲವು ಅಗಾಧವಾದ ಮತ್ತು ಸೂಕ್ಷ್ಮ ಗ್ರಹಣಶಕ್ತಿಯ ಮತ್ತು ಇನ್ನು ಕೆಲವು ಉತ್ತಮ ಮನೋರಂಜನೆಯ ನಾಟಕ, ಚಲನ ಚಿತ್ರ ಮತ್ತು ಇತರ ಕಾರ್ಯಕ್ರಮಗಳಿವೆ.
ಮಕ್ಕಳ ಶಿಕ್ಷಣ ಕಾರ್ಯಕ್ರಮಗಳೂ ಇವೆ. ಹಿಂಸಾತ್ಮಕವಾದ ಟೀವೀಯಿಂದ ಮಕ್ಕಳು ಜಗಳ ಹೂಡುವುದನ್ನು ಹೇಗೆ ಕಲಿಯಬಲ್ಲರೋ ಹಾಗೆಯೆ ಟೆಲಿವಿಷನಿನ ಉತ್ತಮ ಮಾದರಿಗಳಿಂದ ಅವರು ಪರೋಪಕಾರ ಬುದ್ಧಿ, ಸ್ನೇಹಭಾವ ಮತ್ತು ಆತ್ಮ ನಿಯಂತ್ರಣವನ್ನು ಕಲಿಯಬಲ್ಲರೆಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ವರದಿ ಮಾಡುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಹೇಗೆ ಪ್ರತಿವರ್ತಿಸಬೇಕೆಂಬ ಕಾರ್ಯಕ್ರಮಗಳು ಮಕ್ಕಳ ಜೀವರಕ್ಷಣೆಯನ್ನೂ ಮಾಡಿವೆ. ಔರ್ ಎಂಡೇಂಜರ್ಡ್ ಚಿಲ್ಡ್ರನ್ ಪುಸ್ತಕದಲ್ಲಿ ವ್ಯಾನ್ಸ್ ಪ್ಯಾಕರ್ಡ್ ಬರೆಯುವುದು: “ಟೀವೀ ಸೆಟ್ಟುಗಳನ್ನು ಅಟ್ಟದಲ್ಲಿ ಹಾಕುವ ಬೇಸರ ಮತ್ತು ಕಿರುಕುಳಕ್ಕೊಳಗಾಗಿರುವ ಹೆತ್ತವರು, ತಮ್ಮ ಮಕ್ಕಳನ್ನು ನಿಯಂತ್ರಿಸಲು ಅಸಾಧ್ಯವಾದ ಸ್ಥಿತಿಯಲ್ಲಿ ಇಲ್ಲದಿದ್ದರೆ ಪ್ರಾಯಶಃ ಮಿತಿಮೀರಿದ ಪ್ರತಿವರ್ತನೆಯನ್ನು ತೋರಿಸುತ್ತಾರೆ.”
ನಿಯಂತ್ರಿಸುವುದು
ನಾವು ವಯಸ್ಕರ ವಿಷಯ ಮಾತಾಡಲಿ, ಮಕ್ಕಳ ವಿಷಯ ಮಾತಾಡಲಿ, ಇದಕ್ಕಿರುವ ಕೀಲಿಕೈ ನಿಯಂತ್ರಣವೆಂಬುದು ಸ್ಪಷ್ಟ. ನಾವು ಟೀವೀಯನ್ನು ನಿಯಂತ್ರಿಸುತ್ತೇವೋ, ಯಾ ಅದು ನಮ್ಮನ್ನು ನಿಯಂತ್ರಿಸುತ್ತದೋ? ಶ್ರೀ ಪ್ಯಾಕರ್ಡ್ ಸೂಚಿಸುವಂತೆ, ಕೆಲವರಿಗೆ ಟೀವೀಯನ್ನು ನಿಯಂತ್ರಿಸುವ ಒಂದೇ ಮಾರ್ಗವು ಅದನ್ನು ಹೊರಡಿಸಿ ಬಿಡುವುದೇ, ಆದರೆ ಅನೇಕರು ಅದರ ಪ್ರಯೋಜನಗಳ ಲಾಭ ಪಡೆಯುತ್ತಾ ಅದನ್ನು ನಿಯಂತ್ರಿಸುವ ವಿಧಗಳನ್ನು ಕಂಡುಹಿಡಿದಿದ್ದಾರೆ. ಈ ಕೆಳಗೆ ಕೆಲವು ಸೂಚನೆಗಳಿವೆ.
✔ ಒಂದೆರಡು ವಾರ, ಜಾಗರೂಕತೆಯಿಂದ ನಿಮ್ಮ ಕುಟುಂಬದ ಟೀವೀ ವೀಕ್ಷಣದ ದಾಖಲೆಯನ್ನಿಡಿರಿ. ಆ ಸಮಯಾವಧಿಯ ತಾಸುಗಳನ್ನು ಕೂಡಿಸಿ ಅಷ್ಟು ಸಮಯ ತೆಗೆದುಕೊಳ್ಳುವಾಗ ಟೀವೀಯನ್ನು ಇಟ್ಟುಕೊಳ್ಳುವುದು ಯೋಗ್ಯವೊ ಎಂದು ಕೇಳಿಕೊಳ್ಳಿರಿ.
✔ ಟೀವೀ ಕಾರ್ಯಕ್ರಮಗಳನ್ನು ಪ್ರೇಕ್ಷಿಸಿರಿ, ಕೇವಲ ಟೀವೀಯನ್ನಲ್ಲ. ನೋಡಲು ಯೋಗ್ಯ ವಿಷಯಗಳಿವೆಯೊ ಎಂದು ಟೀವೀ ಕಾರ್ಯಕ್ರಮವನ್ನು ಪರೀಕ್ಷಿಸಿರಿ.
✔ ಕೆಲವು ಸಮಯವನ್ನು ಕುಟುಂಬ ಸಂಭಾಷಣೆ ಮತ್ತು ಒಡನಾಟಕ್ಕಾಗಿ ಬದಿಗಿಟ್ಟು ಅದನ್ನು ಸಂರಕ್ಷಿಸಿರಿ.
✔ ಚಿಕ್ಕ ಮಕ್ಕಳ ಯಾ ಹದಿಪ್ರಾಯದವರ ಕೋಣೆಯಲ್ಲಿ ಟೀವೀಯನ್ನು ಅನುಮತಿಸುವುದರ ವಿರುದ್ಧ ಕೆಲವು ಪರಿಣತರು ಎಚ್ಚರಿಕೆ ನೀಡುತ್ತಾರೆ. ಮಗನು ಏನು ನೋಡುತ್ತಾನೆಂದು ಕಂಡುಹಿಡಿಯಲು ಹೆತ್ತವರಿಗೆ ಹೆಚ್ಚು ಕಷ್ಟವಾದೀತು.
✔ ನಿಮಗೆ ಒಡನೆ ಕೊಂಡುಕೊಳ್ಳಲು ಸಾಧ್ಯವಿರುವಲ್ಲಿ, ವಿಸಿಆರ್ (ವಿಡಿಯೊಕ್ಯಾಸೆಟ್ ರೆಕಾರ್ಡರ್) ಸಹಾಯ ಮಾಡೀತು. ಉತ್ತಮ ವಿಡಿಯೊಟೇಪನ್ನು ಬಾಡಿಗೆಗೆ ತಕ್ಕೊಳ್ಳುವಲ್ಲಿ ಯಾ ಗುಣಮಟ್ಟದ ಕಾರ್ಯಕ್ರಮಗಳನ್ನು ಟೇಪ್ ಮಾಡಿ ಆ ಬಳಿಕ ಅನುಕೂಲ ಸಮಯದಲ್ಲಿ ಅದನ್ನು ನೋಡುವಲ್ಲಿ, ನಿಮ್ಮ ಟೀವೀಯಲ್ಲಿರುವುದನ್ನು ಅದು ತೆರೆದಿರುವಾಗ ವಿಸಿಆರ್ ನಿಯಂತ್ರಿಸುವಂತೆ ನೀವು ಅದನ್ನು ಉಪಯೋಗಿಸಬಹುದು. ಆದರೆ ಒಂದು ಎಚ್ಚರಿಕೆ. ನಿಯಂತ್ರಣವಿಲ್ಲದಿದ್ದರೆ, ಈ ವಿಸಿಆರ್ ನೀವು ಟೀವೀ ಮುಂದೆ ಇರುವ ಸಮಯವನ್ನು ಹೆಚ್ಚಿಸಬಹುದು ಯಾ ಅನೈತಿಕ ವಿಡಿಯೊಟೇಪ್ಗಳಿಗೆ ದಾರಿ ತೆರೆಯಬಹುದು.
ನಿಮ್ಮ ಶಿಕ್ಷಕನಾರು?
ಮಾನವನು ಕಾರ್ಯತಃ ಒಂದು ಕಲಿಯುವ ಯಂತ್ರ. ನಮ್ಮ ಜ್ಞಾನೇಂದ್ರಿಯಗಳು ಸದಾ ಮಾಹಿತಿಯನ್ನು ಹೀರಿಕೊಂಡು ಪ್ರತಿ ಸೆಕೆಂಡಿಗೆ 10,00,00,000 ಮಾಹಿತಿಯ ಅಂಶಗಳ ಪ್ರವಾಹವನ್ನೇ ಮಿದುಳಿಗೆ ಕಳುಹಿಸುತ್ತವೆ. ನಮ್ಮ ಜ್ಞಾನೇಂದ್ರಿಯಗಳಿಗೆ ನಾವು ಏನನ್ನು ತಿನ್ನಿಸುತ್ತೇವೋ ಅದನ್ನು ನಿರ್ಧರಿಸಿ ನಾವು ಸ್ವಲ್ಪ ಮಟ್ಟಿಗೆ ಆ ಪ್ರವಾಹದಲ್ಲಿರುವ ವಿಷಯವನ್ನು ಪ್ರಭಾವಿಸಬಹುದು. ಟೀವೀಯ ಕಥೆ ಸುವ್ಯಕ್ತವಾಗಿ ಚಿತ್ರಿಸುವಂತೆ, ನಾವು ತಿನ್ನುವ ಯಾ ಕುಡಿಯುವ ವಸ್ತುಗಳಿಂದ ದೇಹವು ಮಲಿನಗೊಳ್ಳುವಷ್ಟೇ ಸುಲಭವಾಗಿ ನಾವು ಪ್ರೇಕ್ಷಿಸುವ ವಿಷಯಗಳಿಂದ ಮಾನವ ಮನಸ್ಸು ಮತ್ತು ಆತ್ಮ ಮಲಿನಗೊಳ್ಳಬಹುದು.
ನಮ್ಮ ಸುತ್ತಲಿರುವ ಜಗತ್ತಿನ ಕುರಿತು ನಾವು ಹೇಗೆ ಕಲಿಯುವೆವು? ಮಾಹಿತಿಯ ಯಾವ ಮೂಲವನ್ನು ನಾವು ಆರಿಸಿಕೊಳ್ಳುವೆವು? ಯಾರು ಅಥವಾ ಯಾವುದು ನಮ್ಮ ಶಿಕ್ಷಕನಾಗಿರುವುದು? ಯೇಸು ಕ್ರಿಸ್ತನ ಮಾತುಗಳು ಈ ವಿಷಯದಲ್ಲಿ ಸ್ತಿಮಿತದ ಯೋಚನೆಯನ್ನು ಕೊಡುತ್ತವೆ. “ಶಿಕ್ಷಾರ್ಥಿಯು ಶಿಕ್ಷಕನಿಗಿಂತ ಮೇಲಲ್ಲ, ಆದರೆ ಪೂರ್ತಿ ತರಬೇತು ಹೊಂದಿರುವ ಪ್ರತಿಯೊಬ್ಬನು ತನ್ನ ಶಿಕ್ಷಕನಂತಾಗುವನು.” (ಲೂಕ 6:40, ನ್ಯೂ ಇಂಟರ್ನ್ಯಾಷನಲ್ ವರ್ಷನ್) ನಾವು ಟೆಲಿವಿಷನೇ ನಮ್ಮ ಅಧ್ಯಾಪಕನೆಂದು ಹೇಳಿ ಅದರೊಂದಿಗೆ ಹೆಚ್ಚು ಸಮಯವನ್ನು ಕಳೆಯುವುದಾದರೆ, ನಾವು ಅದನ್ನು ಅನುಕರಿಸಲು, ಅದರ ಮೌಲ್ಯಗಳನ್ನು ಮತ್ತು ಅದು ಪ್ರತಿನಿಧೀಕರಿಸುವ ಮಟ್ಟಗಳನ್ನು ಸ್ವೀಕರಿಸಲು ಪ್ರಾರಂಭಿಸಬಹುದು. ಜ್ಞಾನೋಕ್ತಿ 13:20 ಹೇಳುವಂತೆ: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”
ಟೀವೀಯು ಮೂರ್ಖ ಯಾ ಅನೈತಿಕ ವ್ಯಕ್ತಿಗಳನ್ನು ನಮ್ಮ ಮನೆಯೊಳಗೆ ತರದಿದ್ದರೂ, ಅದು ಇನ್ನೂ ನಿರ್ಣಾಯಕವಾದ ಒಂದು ವಿಷಯವನ್ನು ಮರೆತು ಬಿಡುತ್ತದೆ. ಟೀವೀಯಲ್ಲಿ ಬರುವ ಕೊಂಚವೂ ಪ್ರತಿಯೊಬ್ಬ ಮಾನವನಿಗೆ ಸಾಮಾನ್ಯವಾಗಿರುವ ಒಂದು ಆವಶ್ಯಕತೆಯನ್ನು ಸಂಬೋಧಿಸಿ ಮಾತನಾಡುವುದಿಲ್ಲ: ಆತ್ಮಿಕ ಆವಶ್ಯಕತೆ. ಈ ಜಗತ್ತು ಪ್ರಲಾಪಾತ್ಮಕ ಅವ್ಯವಸ್ಥೆಯಲ್ಲಿದೆ ಎಂದು ತೋರಿಸಲು ಟೀವೀ ಉತ್ತಮ ಮಾಧ್ಯಮವಾಗಿರಬಹುದು. ಆದರೆ ಮನುಷ್ಯನು ತನ್ನನ್ನು ಆಳಿಕೊಳ್ಳುವುದು ಅಸಾಧ್ಯ ಎಂದು ನಮಗೆ ಹೇಳಲು ಅದೇನು ಮಾಡುತ್ತದೆ? ಭೂಮಿಯ ಸೌಂದರ್ಯವನ್ನು ತೋರಿಸಲು ಅದು ಉತ್ತಮ ಮಾಧ್ಯಮವಾಗಿರಬಹುದು, ಆದರೆ ನಮ್ಮ ಸೃಷ್ಟಿಕರ್ತನ ಕಡೆಗೆ ನಮ್ಮನ್ನು ಎಳೆಯಲು ಅದೇನು ಮಾಡುತ್ತದೆ? ಅದು ನಮ್ಮನ್ನು ಭೂಗೋಲದ ನಾಲ್ಕೂ ದಿಕ್ಕುಗಳಿಗೆ ಕೊಂಡೊಯ್ಯಬಹುದು, ಆದರೆ ಮನುಷ್ಯನು ಅಲ್ಲಿ ಸದಾ ಶಾಂತಿಯಿಂದ ಬದಕಬಲ್ಲನೊ ಎಂದು ಅದು ತಿಳಿಸಬಲ್ಲದೆ?
ಇಂಥ ಪ್ರಾಮಖ್ಯ ಆತ್ಮಿಕ ಪ್ರಶ್ನೆಗಳನ್ನು ಉತ್ತರಿಸದಿರುವಲ್ಲಿ “ಜಗತ್ತಿಗೆ” ಇರುವ ಯಾವ “ಕಿಟಿಕಿ”ಯೂ ಪೂರ್ತಿಯಾಗಿರುವುದಿಲ್ಲ. ಬೈಬಲನ್ನು ಅಷ್ಟು ಅಮೂಲ್ಯವಾಗಿ ಮಾಡುವುದು ಇದೇ. ಅದು ಸೃಷ್ಟಿಕರ್ತನ ದೃಷ್ಟಿಕೋನದಲ್ಲಿ “ಜಗತ್ತಿಗೆ ಕಿಟಿಕಿ”ಯನ್ನೊದಗಿಸುತ್ತದೆ. ನಮ್ಮ ಜೀವನದ ಉದ್ದೇಶವನ್ನು ನಾವು ತಿಳಿಯುವಂತೆ ಅದು ರಚಿಸಲ್ಪಟ್ಟಿದ್ದು ಭವಿಷ್ಯತ್ತಿಗೆ ಸ್ಥಿರವಾದ ನಿರೀಕ್ಷೆಯನ್ನು ಅದು ಒದಗಿಸುತ್ತದೆ. ಜೀವನದ ಅತಿ ಉಪದ್ರವಕಾರಿ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರಗಳು ಅದರಲ್ಲಿ ಸಿದ್ಧವಾಗಿವೆ. ಬೈಬಲಿನ ಅನಂತವಾಗಿ ಆಕರ್ಷಕವಾದ ಪುಟಗಳಲ್ಲಿ ಓದಲ್ಪಡಲು ಅವು ಕಾಯುತ್ತಾ ನಿಂತಿವೆ.
ಆದರೆ ನಾವು ಟೀವೀಯನ್ನು ನಿಯಂತ್ರಿಸದಿರುವಲ್ಲಿ ನಮಗೆ ಸಮಯ ಎಲ್ಲಿ ಸಿಕ್ಕೀತು? (g91 5/22)