ಸಾಮಾಜಿಕ ಮನೋರಂಜನೆ—ಪ್ರಯೋಜನಗಳಲ್ಲಿ ಆನಂದಿಸಿರಿ, ಪಾಶಗಳನ್ನು ತ್ಯಜಿಸಿರಿ
“ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವುದಕ್ಕಿಂತ ಇನ್ನೇನೂ ಮನುಷ್ಯನಿಗೆ ಮೇಲಿಲ್ಲ.”—ಪ್ರಸಂಗಿ 2:24.
1. ಮನೋರಂಜನೆಯ ಕುರಿತು ಅವನ ಜನರಿಗೆ ದೇವರ ಮಾರ್ಗದರ್ಶನವು ಯಾವ ವಿಧಗಳಲ್ಲಿ ಸಹಾಯಮಾಡುತ್ತದೆ?
ಯೆಹೋವನ ಮಾರ್ಗದರ್ಶನವು ಅವನ ಸೇವಕರಿಗೆ ಅನೇಕ ಪ್ರಯೋಜನಗಳನ್ನು ತರುತ್ತದೆ. ನಾವಿದನ್ನು ಮನೋರಂಜನೆಯ ಕ್ಷೇತ್ರದಲ್ಲಿ ಕಾಣಬಲ್ಲೆವು. ವಿವಿಧ ದೃಷ್ಟಿಕೋನಗಳ ಇಬ್ಬದಿಗಳ ಅತಿರೇಕತೆಗಳನ್ನು ವರ್ಜಿಸಲು ಕ್ರೈಸ್ತರಿಗೆ ಅವನ ಮಾರ್ಗದರ್ಶನವು ಸಹಾಯ ಮಾಡುತ್ತದೆ. ಉಡುಪು ಮತ್ತು ನಡತೆಗಳಲ್ಲಿ ಕಟ್ಟುನಿಟ್ಟನ್ನು ಪಟ್ಟುಹಿಡಿಯುವ ಕೆಲವು ಧಾರ್ಮಿಕಸ್ಥರು ಯಾವುದೇ ರೀತಿಯ ಸುಖಾನುಭವವು ಪಾಪಭರಿತವೆಂದು ವೀಕ್ಷಿಸುತ್ತಾರೆ. ಇನ್ನೊಂದು ಪಕ್ಕದಲ್ಲಿ, ಯೆಹೋವನ ನಿಯಮಗಳು ಮತ್ತು ಸೂತ್ರಗಳೊಂದಿಗೆ ಸಂಘರ್ಷಿಸುವುದಾದರೂ ಅನೇಕ ಜನರು ಸುಖಾನುಭವವನ್ನು ಬೆಂಬತ್ತಿಹೋಗುತ್ತಾರೆ.—ರೋಮಾಪುರ 1:24-27; 13:13, 14; ಎಫೆಸ 4:17-19.
2. ಮನೋರಂಜನೆಯ ಕುರಿತು ದೇವರ ನೋಟದ ಆರಂಭಿಕ ಸೂಚನೆಯನ್ನು ಯಾವುದು ಕೊಟ್ಟಿತು?
2 ಹಾಗಾದರೆ, ದೇವ ಜನರ ಕುರಿತಾಗಿ ಏನು? ಜೀವಿತದಲ್ಲಿ ಆನಂದಿಸುವ ಸಾಮರ್ಥ್ಯದೊಂದಿಗೆ ವಾಸ್ತವದಲ್ಲಿ ಮಾನವರನ್ನು ದೇವರು ಸೃಷ್ಟಿಸಿದನು ಎಂದು ಕಲಿಯುವಾಗ ಬೈಬಲ್ ಅಭ್ಯಾಸವನ್ನು ಮಾಡಲಾರಂಭಿಸಿದ ಅನೇಕರು ಅಚ್ಚರಿಪಡುತ್ತಾರೆ. ನಮ್ಮ ಮೊದಲ ಹೆತ್ತವರಿಗೆ ಅವನು ಮಾಡಲು ಕೆಲಸವನ್ನು ಕೊಟ್ಟನು—ಆದರೆ ಅಧಿಕ ಸಂಖ್ಯಾತವಾಗಿ ಅಪರಿಪೂರ್ಣ ಮಾನವರ ಜೀವಿತಗಳನ್ನು ಗುರುತಿಸುವ ಮನಕುಗ್ಗಿಸುವ ಕತ್ತೆದುಡಿಮೆಯನ್ನಲ್ಲ. (ಆದಿಕಾಂಡ 1:28-30) ಭೂಮಿಯ ಪ್ರಮೋದವನವೊಂದರಲ್ಲಿ ಜೀವಿಸಬಹುದಾದ ಎಲ್ಲರೂ ಆನಂದವನ್ನು ಕಂಡುಕೊಳ್ಳಬಹುದಾದ ಬಹುಸಂಖ್ಯಾತ ಮಾರ್ಗಗಳ ಕುರಿತು ಯೋಚಿಸಿರಿ. ಬೆದರಿಕೆಯನ್ನೊಡ್ಡದ ಕಾಡು ಪ್ರಾಣಿಗಳನ್ನು ಮತ್ತು ದೈನಂದಿನ ಜೀವನದ ಭಾಗವಾಗಬಹುದಾದ ಸಾಕುಪ್ರಾಣಿಗಳನ್ನು ವೀಕ್ಷಿಸುವದರಲ್ಲಿರುವ ಅವರ ಆನಂದವನ್ನು ಊಹಿಸಿರಿ! ಮತ್ತು “ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರಗಳ” ಮೂಲಕ ಅವರಿಗೆ ದೊರಕಬಹುದಾದ ಊಟಗಳು ಯಾವ ರೀತಿಯದ್ದಾಗಿದ್ದಿರಬಹುದು!—ಆದಿಕಾಂಡ 2:9; ಪ್ರಸಂಗಿ 2:24.
3-5. (ಎ) ಮನೋರಂಜನೆಯು ಯಾವ ಉದ್ದೇಶವನ್ನು ಪೂರೈಸತಕ್ಕದ್ದು? (ಬಿ) ಸಂತೋಷವನ್ನು ಹುಡುಕುವುದರಲ್ಲಿ ಇಸ್ರಾಯೇಲ್ಯರನ್ನು ದೇವರು ನಿರುತ್ಸಾಹಗೊಳಿಸಲಿಲ್ಲವೆಂಬುದರ ಕುರಿತು ನಾವು ಯಾಕೆ ಖಚಿತವಾಗಿರಬಲ್ಲೆವು?
3 ವಾಸ್ತವದಲ್ಲಿ ಆ ಚಟುವಟಿಕೆಗಳನ್ನು, ಪರದೈಸದಲ್ಲಿ ಇವುಗಳ ಉದ್ದೇಶವು ಈಗಿನಂತೆಯೇ ಆಗಿರುತ್ತದಾದರಿಂದ, ಒಂದು ಮನೋರಂಜನೆಯಾಗಿ ವೀಕ್ಷಿಸಬಹುದಾಗಿದೆ: ಇನ್ನಷ್ಟು ಹೆಚ್ಚಿನ ಉತ್ಪಾದಕ ಚಟುವಟಿಕೆ (ಕೆಲಸ) ಗಳಲ್ಲಿ ತೊಡಗಲು ಒಬ್ಬನ ಬಲವನ್ನು ನವಚೈತನ್ಯಗೊಳಿಸುವುದು ಮತ್ತು ಪುನರುಜ್ಜೀವನಗೊಳಿಸುವುದು. ಮನೋರಂಜನೆಯು ಇದನ್ನು ಪೂರೈಸುವುದಾದರೆ, ಅದು ಪ್ರಯೋಜನಕಾರಿಯಾಗಿದೆ. ಪರದೈಸದಲ್ಲಿ ಇನ್ನೂ ಜೀವಿಸದೆ ಇರುವುದಾದರೂ, ಸತ್ಯಾರಾಧಕರು ತಮ್ಮ ಜೀವಿತಗಳಲ್ಲಿ ಮನೋರಂಜನೆಗಾಗಿ ಬಿಡುವನ್ನು ಮಾಡಬಹುದು ಎಂದು ಇದರ ಅರ್ಥವೋ? ಹೌದು. ಯೆಹೋವನ ಪುರಾತನ ಕಾಲದ ಜನರ ನಡುವೆ ಇದ್ದ ಮನೋರಂಜನೆಯ ಕುರಿತು ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಹೇಳುವುದು:
4 “ಇಸ್ರಾಯೇಲ್ಯರ ವಿನೋದ ಮತ್ತು ಕಾಲಕ್ಷೇಪಗಳನ್ನು ಬೈಬಲಿನ ದಾಖಲೆಯಲ್ಲಿ ಗಮನಾರ್ಹವಾದ ರೀತಿಯಲ್ಲಿ ಚಿತ್ರಿಸಲ್ಪಟ್ಟಿರುವದಿಲ್ಲ. ಆದಾಗ್ಯೂ, ಜನಾಂಗದ ಧಾರ್ಮಿಕ ಸೂತ್ರಗಳ ಹೊಂದಿಕೆಯಲ್ಲಿರುವಾಗ ಅವರೆಡೂ ಯೋಗ್ಯವೂ, ಅಪೇಕ್ಷಣೀಯವೂ ಎಂದು ದೃಷ್ಟಿಸತಕ್ಕದ್ದೆಂದು ಅದು ತೋರಿಸುತ್ತದೆ. ಸಂಗೀತ ವಾದ್ಯಗಳನ್ನು ಬಾಜಿಸುವುದು, ಹಾಡುವುದು, ನರ್ತಿಸುವುದು, ಸಂಭಾಷಿಸುವುದು, ಹಾಗೂ ಇನ್ನಿತರ ಕೆಲವು ಆಟಗಳು ವಿನೋದದ ಪ್ರಮುಖ ವಿಭಾಗಗಳಾಗಿದ್ದವು. ಒಗಟುಗಳನ್ನು ಮತ್ತು ಕ್ಲಿಷ್ಟಕರ ಪ್ರಶ್ನೆಗಳನ್ನು ಪರ್ಯಾಲೋಚನೆಗಾಗಿ ಮುಂದಿಡುವುದು ಬಹಳ ಗೌರವದಿಂದ ಕಾಣಲ್ಪಡುತ್ತಿತ್ತು.—ಯಾಜ. 14:12.”—ಸಂಪುಟ 1, ಪುಟ 102.
5 ವಿಜಯದೊಂದಿಗೆ ದಾವೀದನು ಹಿಂತೆರಳಿದಾಗ, ಇಬ್ರಿಯ ಹೆಂಗಸರು ಉತ್ಸವ (ಹೀಬ್ರು, ಸ-ಚಕ್) ವನ್ನು ಆಚರಿಸುತ್ತಿರುವಾಗ, ದಮ್ಮಡಿತಾಳಗಳನ್ನು ಬಳಸಿದರು. (1 ಸಮುವೇಲ 18:6, 7) ಮೂಲತಃ ಹೀಬ್ರು ಶಬ್ದದ ಅರ್ಥ “ನಗಾಡು,” ಎಂದಾಗಿದೆ ಮತ್ತು ಕೆಲವು ತರ್ಜುಮೆಗಳು “ಉತ್ಸವಮಗ್ನರಾದ ಹೆಂಗಸರು” ಎಂದು ಮಾತಾಡುತ್ತವೆ. (ಬೈಯಿಂಗನ್ಟ್, ರಾಥರ್ಹಾಮ್, ದ ನ್ಯೂ ಇಂಗ್ಲಿಷ್ ಬೈಬಲ್ ) ಮಂಜೂಷವು ತರಲ್ಪಟ್ಟಾಗ “ದಾವೀದನೂ ಎಲ್ಲಾ ಇಸ್ರಾಯೇಲ್ಯರೂ ಎಲ್ಲಾ ತರದ ವಾದ್ಯಗಳನ್ನು ಬಾರಿಸುತ್ತಾ ಯೆಹೋವನ ಮುಂದೆ ಉತ್ಸವವನ್ನಾಚರಿಸುತ್ತಾ ಹೋದರು.” ದಾವೀದನ ಹೆಂಡತಿ ಮೀಕಲಳು ಒಂದು ಅಸಮತೂಕದ ದೃಷ್ಟಿಯಿದ್ದವಳಾಗಿದ್ದಳು, ಯಾಕಂದರೆ ಈ ವಿನೋದಕರ ಚಟುವಟಿಕೆಗಳಲ್ಲಿ ದಾವೀದನು ಪಾಲಿಗನಾಗಿದದ್ದನ್ನು ಅವಳು ಆಕ್ಷೇಪಿಸಿದಳು. (2 ಸಮುವೇಲ 6:5, 14-20, NW) ತದ್ರೀತಿಯ ಆನಂದಕರ ಚಟುವಟಿಕೆಗಳಲ್ಲಿ ಬ್ಯಾಬಿಲೊನ್ನಿಂದ ಹಿಂತೆರಳುವ ದೇಶಭ್ರಷ್ಟರು ಪಾಲಿಗರಾಗುವರೆಂದು ದೇವರು ಮುನ್ನುಡಿದಿದ್ದನು.—ಯೆರೆಮೀಯ 30:18, 19; 31:4; ಹೋಲಿಸಿರಿ ಕೀರ್ತನೆ 126:2.
6. ಮನೋರಂಜನೆಯ ನಮ್ಮ ನೋಟದಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥವು ನಮಗೆ ಹೇಗೆ ಸಹಾಯ ಮಾಡುತ್ತದೆ?
6 ಮನೋರಂಜನೆಯ ಕುರಿತಾಗಿ ನಾವೂ ಕೂಡ ಸಮತೂಕದವರಾಗಿರಲು ನೋಡತಕ್ಕದ್ದು. ಉದಾಹರಣೆಗೆ, ಯೇಸುವು ಒಬ್ಬ ಸಂನ್ಯಾಸಿಯಾಗಿರಲಿಲ್ಲವೆಂಬುದನ್ನು ನಾವು ಗಣ್ಯಮಾಡುತ್ತೇವೋ? ಲೇವಿಯು ಏರ್ಪಡಿಸಿದ್ದ “ದೊಡ್ಡ ಔತಣ” ದಂತಹ ಉಲ್ಲಾಸದಾಯಕ ಊಟಗಳಲ್ಲಿ ಅವನು ಭಾಗವಹಿಸಿದನು. ತಿಂದುಕುಡಿದಕ್ಕಾಗಿ ಅವನನ್ನು ಸ್ವನೀತಿಯುಳ್ಳವರು ಠೀಕಿಸಿದಾಗ, ಯೇಸುವು ಅವರ ವೀಕ್ಷಣಗಳನ್ನು ಮತ್ತು ಮಾರ್ಗಗಳನ್ನು ನಿರಾಕರಿಸಿದನು. (ಲೂಕ 5:29-31; 7:33-36) ಅವನು ಮದುವೆಯೊಂದಕ್ಕೆ ಹಾಜರಾಗಿದ್ದನು, ಹಾಗೂ ಅದರ ಸಂತೋಷ ಸಮಾರಂಭಕ್ಕೆ ನೀಡಿಕೆಯನ್ನು ಮಾಡಿದ್ದನು ಎಂಬುದನ್ನೂ ನೆನಪಿಸಿರಿ. (ಯೋಹಾನ 2:1-10) ಯೇಸುವಿನ ಮಲತಮ್ಮನಾದ ಯೂದನು “ಪ್ರೇಮಭೋಜನ” ಗಳ ಕುರಿತು ಉಲ್ಲೇಖಿಸುತ್ತಾನೆ, ಇವು ಪ್ರಾಯಶಃ ಆಹಾರ ಮತ್ತು ಆಹ್ಲಾದಕರ, ವಿಶ್ರಾಂತಿಕರ ಸಹವಾಸದಲ್ಲಿ ಬಡವರಾಗಿರುವವರು ಆನಂದಿಸಶಕ್ತರಾಗುವ ಊಟಗಳೆಂದು ತೋರುತ್ತದೆ.—ಯೂದ 12.
ತಕ್ಕ ಸಮಯ ಮತ್ತು ಸ್ಥಾನದಲ್ಲಿ ಸಾಮಾಜಿಕ ಮನೋರಂಜನೆಗಳು
7. ಮನೋರಂಜನೆಯ ವಿಷಯದಲ್ಲಿ ದೇವರ ವಾಕ್ಯವು ಸಮತೂಕವನ್ನು ಹೇಗೆ ಪ್ರೋತ್ಸಾಹಿಸುತ್ತದೆ?
7 ಪ್ರಸಂಗಿ 10:19 ‘ಕಾರ್ಮಿಕನ ನಗುವಿಗಾಗಿ ಔತಣ ಮತ್ತು ದ್ರಾಕ್ಷಾರಸದಿಂದ ಜೀವನಕ್ಕೆ ಆನಂದ’ ದ ಕುರಿತು ಪ್ರಶಂಸನೀಯವಾಗಿ ಮಾತಾಡುತ್ತದೆ. ಮನೋರಂಜನೆಯು ಅಂತರ್ಗತವಾಗಿ ತಪ್ಪು ಯಾ ಕೆಟ್ಟದ್ದು ಎಂದು ಅದು ಧ್ವನಿಸುವುದಿಲ್ಲ, ಅಲ್ಲವೆ? ಆದರೂ, ಅದೇ ಪುಸ್ತಕವು ಹೇಳುವುದು: “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; . . . ಅಳುವ ಸಮಯ, ನಗುವ ಸಮಯ, ಗೋಳಾಡುವ ಸಮಯ, ಕುಣಿದಾಡುವ ಸಮಯ.” (ಪ್ರಸಂಗಿ 3:1, 4) ಹೌದು, ತಕ್ಕದ್ದಾದ ಮನೋರಂಜನೆಯನ್ನು ಖಂಡಿಸದೆ ಇದ್ದರೂ, ಬೈಬಲ್ ಮುಂಜಾಗ್ರತೆಗಳನ್ನು ನಮಗೆ ಕೊಡುತ್ತದೆ. ತಕ್ಕ ಸಮಯ ಮತ್ತು ಪ್ರಮಾಣದಲ್ಲಿ ಸಾಮಾಜಿಕ ಮನೋರಂಜನೆಯನ್ನು ಇಡುವುದರ ಕುರಿತೂ ಬುದ್ಧಿವಾದವು ಅದರಲ್ಲಿ ಒಳಗೂಡಿದೆ. ದೊಡ್ಡ ಸಾಮಾಜಿಕ ಗೋಷ್ಠಿಗಳಲ್ಲಿ ಅತಿ ಸಾಮಾನ್ಯವಾಗಿರುವ ಅಪಾಯಗಳ ಕುರಿತೂ ನಮಗೆ ಅದು ಎಚ್ಚರಿಕೆಯನ್ನು ಕೊಡುತ್ತದೆ.—2 ತಿಮೊಥೆಯ 3:4.
8, 9. ನಾವು ಜೀವಿಸುವ ಸಮಯ ಮತ್ತು ನಮ್ಮ ದೇವದತ್ತ ನೇಮಕವು ಮನೋರಂಜನೆಯ ಮೇಲೆ ಯಾವ ಪ್ರಭಾವ ಬೀರತಕ್ಕದ್ದು?
8 ಬ್ಯಾಬಿಲೊನಿನಿಂದ ಹಿಂತೆರಳಿ ಬರುವ ಯೆಹೂದ್ಯರು—ಬಹಳಷ್ಟು ಶ್ರಮಭರಿತ ಕೆಲಸ ಮಾಡಲಿಕ್ಕಿದ್ದರೂ—ಆನಂದದಾಯಕ ವಿಶ್ರಾಂತಿಯಲ್ಲಿ ಪಾಲಿಗರಾಗಲಿದ್ದರೆಂದು ನಾವು ಗಮನಿಸಿದ್ದೇವೆ. ಆದರೂ, ತಾನು ‘ವಿನೋದಗಾರರ ಕೂಟದಲ್ಲಿ ಕೂತುಕೊಳ್ಳುವದಿಲ್ಲ, ಉಲ್ಲಾಸಪಡುವುದೂ ಇಲ್ಲ’ ಎಂದು ಈ ಮೊದಲೇ ಯೆರೆಮೀಯನು ಹೇಳಿದ್ದನು. (ಯೆರೆಮೀಯ 15:17) ಬರಲಿರುವ ದಂಡನೆಯ ಸಂದೇಶವನ್ನು ನೀಡಲು ಅವನು ದೈವಿಕವಾಗಿ ನೇಮಿಸಲ್ಪಟ್ಟಿದ್ದನು, ಆದುದರಿಂದ ಅವನು ಸಂತೋಷವನ್ನು ಆಚರಿಸುವ ನೇಮಿತ ಸಮಯ ಅದಾಗಿರಲಿಲ್ಲ.
9 ದೇವರ ನಿರೀಕ್ಷೆಯ ಸಂದೇಶವನ್ನು ಘೋಷಿಸಲು ಮತ್ತು ಸೈತಾನನ ದುಷ್ಟ ವ್ಯವಸ್ಥೆಯ ವಿರುದ್ಧವಾಗಿ ಅವನ ನ್ಯಾಯತೀರ್ಪುಗಳನ್ನು ನೀಡಲು ಕ್ರೈಸ್ತರು ಇಂದು ನೇಮಕಗೊಂಡಿದ್ದಾರೆ. (ಯೆಶಾಯ 61:1-3; ಅ. ಕೃತ್ಯಗಳು 17:30, 31) ಆದುದರಿಂದ ನಮ್ಮ ಜೀವಿತದಲ್ಲಿ ಮನೋರಂಜನೆಯು ಪ್ರಧಾನವಾಗಿ ಬರುವಂತೆ ನಾವು ಬಿಡಕೂಡದು ಎಂಬದು ವಿದಿತವಾಗುತ್ತದೆ. ಆಹಾರದ ರುಚಿಯನ್ನು ಹೆಚ್ಚಿಸುವ ಒಂದು ಚಿಟಿಕೆ ಉಪ್ಪು ಯಾ ಒಂದು ವಿಶೇಷ ಮಸಾಲೆಯಿಂದ ಈ ವಿಷಯವನ್ನು ಉದಾಹರಿಸಬಹುದು. ಆಹಾರವನ್ನು ಕೂಡ ಅದುಮಿಬಿಡುವಷ್ಟು ದೊಡ್ಡ ಪ್ರಮಾಣದಲ್ಲಿ ರುಚಿಕಾರಕಗಳನ್ನು ನೀವು ಸುರಿಯುವಿರೋ? ಖಂಡಿತವಾಗಿಯೂ ಇಲ್ಲ. ಯೋಹಾನ 4:34 ಮತ್ತು ಮತ್ತಾಯ 6:33 ರ ಯೇಸುವಿನ ಮಾತುಗಳ ಹೊಂದಾಣಿಕೆಯಲ್ಲಿ ನಮ್ಮ ಪ್ರಥಮ ಅಭಿರುಚಿಯು—ನಮ್ಮ ಆಹಾರ ಕೂಡ—ದೇವರ ಚಿತ್ತವನ್ನು ಮಾಡುವುದಾಗಿರತಕ್ಕದ್ದು. ಆದುದರಿಂದ ಮನೋರಂಜನೆಯು ಒಂದು ರುಚಿಕಾರಕದಂತೆ ಪರಿಣಮಿಸುತ್ತದೆ. ಅದು ನವಚೈತನ್ಯವನ್ನುಂಟುಮಾಡಬೇಕು ಮತ್ತು ಅತಿಶಯಿಸಬೇಕೇ ಹೊರತು, ಬಳಲಿಸಬಾರದು ಯಾ ಪೂರ್ತಿ ಮುಳುಗಿಸಿಬಿಡಬಾರದು.
10. ಸಮಯದ ಕುರಿತಾಗಿ ನಮ್ಮ ಮನೋರಂಜನೆಯನ್ನು ನಾವೆಲ್ಲರೂ ಪುನಃ ಯಾಕೆ ಪರಿಶೀಲಿಸಬೇಕು?
10 ಆದರೂ, ಗಮನಕೊಡಲು ಸ್ವಲ್ಪ ನಿಲ್ಲಿರಿ: ಮನೋರಂಜನೆಗೆ ಅವರು ಕೊಡುವ ಸಮಯ ಮತ್ತು ಗಮನವು ಹಾಳತದಲ್ಲಿದೆ ಎಂದು ಹೆಚ್ಚಿನ ಜನರು ಹೇಳುವದಿಲ್ಲವೆ? ಹಾಗಲ್ಲವೆಂದು ಅವರು ಪರಿಗಣಿಸುವುದಾದರೆ, ಅವರು ಆವಶ್ಯಕವಾದ ಅಳವಡಿಸುವಿಕೆಗಳನ್ನು ಮಾಡುತ್ತಿದ್ದಿರಬಹುದು. ನಮ್ಮ ಜೀವಿತದಲ್ಲಿ ಮನೋರಂಜನೆಯು ನಿಜವಾಗಿಯೂ ಯಾವ ಸ್ಥಾನದಲ್ಲಿದೆ ಎಂದು ನಮ್ಮಲ್ಲಿ ಪ್ರತಿಯೊಬ್ಬನು ಸ್ವಲ್ಪ ನಿಂತು, ಗಂಭೀರವಾಗಿ, ನೇರವಾಗಿ ಪರಿಶೀಲಿಸುವಂತೆ ಇದು ನಮಗೆ ಸೂಚಿಸುವದಿಲ್ಲವೇ? ಕಳ್ಳತನದಿಂದ ಅದು ಪ್ರಧಾನವಾಗಿ ಪರಿಣಮಿಸಿರಬಹುದೇ? ಉದಾಹರಣೆಗೆ, ನಾವು ಮನೆಗೆ ಹಿಂದೆರಳಿದಾಗೆಲ್ಲಾ ರೂಢಿಗತವಾಗಿ ಟೀವೀಯನ್ನು ಆರಂಭಿಸುತ್ತೇವೊ? ಪ್ರತಿ ಶುಕ್ರವಾರ ರಾತ್ರಿ ಯಾ ಶನಿವಾರ ರಾತ್ರಿಗಳನ್ನು ಅಂದರೆ ಪ್ರತಿವಾರದಲ್ಲಿ ದೊಡ್ಡ ಪ್ರಮಾಣದ ಸಮಯವನ್ನು ಮನೋರಂಜನೆಗಾಗಿ ಮೀಸಲಾಗಿಡುವ ಒಂದು ನಮೂನೆಯನ್ನು ನಾವು ರೂಢಿಸಿಕೊಂಡಿದ್ದೇವೊ? ಆ ಸಮಯ ಬಂದಾಗ, ಯಾವುದೇ ಮನೋರಂಜನೆಯನ್ನು ಯೋಜಿಸದೇ ನಾವು ಮನೆಯಲ್ಲಿರುವುದಾದರೆ, ನಿರಾಶೆಯ ಭಾವದವರಾಗುತ್ತೇವೊ? ಇನ್ನೆರಡು ಹೆಚ್ಚಿನ ಪ್ರಶ್ನೆಗಳು: ಒಂದು ಗೋಷ್ಠಿಯ ನಂತರದ ದಿನದಲ್ಲಿ, ನಾವು ಬಹಳ ತಡವಾಗುವ ತನಕ ಹೊರಗೆ ಇದ್ದುದರಿಂದ ಯಾ ಬಹಳ ದೂರದ ತನಕ ಪ್ರಯಾಣಿಸಿದ್ದರಿಂದ ಬಳಲಿದ್ದೇವೆ, ಅದರಿಂದ ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸದಷ್ಟು ಯಾ ನಮ್ಮ ಧಣಿಗೆ ಉತ್ತಮವಾಗಿ ಪೂರ್ಣದಿನದ ಕೆಲಸವನ್ನು ಕೊಡಲಾಗದಷ್ಟು ಶಕಿಯ್ತಿಲ್ಲದವರಾಗಿದ್ದೇವೆಂದು ಕಂಡುಕೊಳ್ಳುತ್ತೇವೊ? ನಮ್ಮ ಮನೋರಂಜನೆಯು ಸಂದರ್ಭಕ್ಕನುಸಾರವಾಗಿ ಯಾ ಆಗಿಂದಾಗ್ಯೆ ಅಂಥ ಪರಿಣಾಮದ್ದಾಗಿರುವುದಾದರೆ, ಅದು ನಿಜವಾಗಿಯೂ ಯೋಗ್ಯ, ಸಮತೂಕದ ವಿನೋದವೊ?—ಹೋಲಿಸಿರಿ ಜ್ಞಾನೋಕ್ತಿ 26:17-19.
11. ನಮ್ಮ ಮನೋರಂಜನೆಯ ಸ್ವರೂಪವನ್ನು ಪರಾಮರ್ಶಿಸುವುದು ಏಕೆ ತಕ್ಕದ್ದಾಗಿದೆ?
11 ನಮ್ಮ ಮನೋರಂಜನೆಯ ಸ್ವರೂಪವನ್ನು ಕೂಡ ಪರಾಮರ್ಶಿಸುವದರಿಂದ ನಮಗೆ ಒಳಿತಾಗಬಹುದು. ದೇವರ ಸೇವಕರಾಗಿರುವದರಿಂದ ನಮ್ಮ ಮನೋರಂಜನೆಯು ಸಮಂಜಸತೆಯದ್ದಾಗಿರುತ್ತದೆ ಎನ್ನುವುದಕ್ಕೇನೂ ಖಾತರಿಯಿಲ್ಲ. ಅಭಿಷಿಕ್ತ ಕ್ರೈಸ್ತರಿಗೆ ಅಪೊಸ್ತಲ ಪೇತ್ರನು ಏನು ಬರೆದನೆಂಬುದನ್ನು ಪರಿಗಣಿಸಿರಿ: “ನೀವು ಬಂಡುತನ ದುರಾಶೆ ಕುಡಿಕತನ ದುಂದೌತನ ಮದ್ಯಪಾನಗೋಷ್ಠಿ ಅಸಹ್ಯವಾದ ವಿಗ್ರಹಾರಾಧನೆ ಈ ಮೊದಲಾದವುಗಳನ್ನು ನಡಿಸುವದರಲ್ಲಿಯೂ ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವದರಲ್ಲಿಯೂ ಕಳೆದು ಹೋದ ಕಾಲವೇ ಸಾಕು.” (1 ಪೇತ್ರ 4:3) ಲೋಕದಲ್ಲಿರುವವರು ಏನು ಮಾಡುತ್ತಿದ್ದರೋ ಅದನ್ನು ತನ್ನ ಸಹೋದರರು ನಕಲು ಮಾಡುತ್ತಿದ್ದರೆಂಬ ಆಪವಾದ ಹೊರಿಸುವ ರೀತಿಯಲ್ಲಿ ತನ್ನ ಬೆರಳನ್ನು ಅವನು ತೋರಿಸಲಿಲ್ಲ. ಆದರೂ, ಕ್ರೈಸ್ತರಿಗೆ (ಅಂದು ಮತ್ತು ಈಗ) ಜಾಗರೂಕತೆಯು ಅತ್ಯಾವಶ್ಯಕ ಯಾಕಂದರೆ ಒಬ್ಬನು ಸುಲಭವಾಗಿಯೇ ಹಾನಿಕರ ಮನೋರಂಜನೆಗಳಿಗೆ ತುತ್ತಾಗಸಾಧ್ಯವಿದೆ.—1 ಪೇತ್ರ 1:2; 2:1; 4:7; 2 ಪೇತ್ರ 2:13.
ಪಾಶಗಳಿಗೆ ಜಾಗರೂಕರಾಗಿರ್ರಿ
12. ಯಾವ ರೀತಿಯ ಪಾಶದ ಕುರಿತು 1 ಪೇತ್ರ 4:3 ಎತ್ತಿತೋರಿಸುತ್ತದೆ?
12 ಯಾವ ರೀತಿಯ ಪಾಶದ ಕುರಿತು ನಾವು ಜಾಗರೂಕರಾಗಿರಬೇಕು? ಒಳ್ಳೇದು, ಪೇತ್ರನು ತಿಳಿಸಿದ್ದು, “ಕುಡಿಕತನ ದುಂದೌತನ ಮದ್ಯಪಾನಗೋಷ್ಠಿ.” ಬಳಸಲ್ಪಟ್ಟ ಗ್ರೀಕ್ ಶಬ್ದಗಳು “ಪ್ರಾಮುಖ್ಯವಾಗಿ ಔತಣ ಸಮಾರಂಭದಲ್ಲಿ ಸಾಮಾಜಿಕ ಕುಡಿಯುವಿಕೆಗೆ ಅನ್ವಯಿಸಲ್ಪಟ್ಟಿವೆ” ಎಂದು ಒಬ್ಬ ಜರ್ಮನ್ ವ್ಯಾಖ್ಯಾನಗಾರನು ವಿವರಿಸಿದ್ದಾನೆ. ಅಂಥ ಪದ್ಧತಿಗಳು ಆ ಕಾಲದಲ್ಲಿ ಸಾಮಾನ್ಯವಾಗಿದ್ದವೆಂದು ಒಬ್ಬ ಸ್ವಿಸ್ ಪ್ರೊಫೆಸರ್ ಬರೆಯುತ್ತಾನೆ: “ಆ ವಿವರಣೆಯು ಒಂದು ಸಂಸ್ಥಾಪಿತ ಗೋಷ್ಠಿಗಳಿಗೆ ಯಾ ವಿವರಿಸಲ್ಪಟ್ಟ ಲಜ್ಜಾಸ್ಪದ ಚಟುವಟಿಕೆಗಳು ನಡೆಸಲ್ಪಡುತ್ತಿದ್ದ ಕ್ರಮದ ಕ್ಲಬ್ಗಳಿಗೂ ಕೂಡ ಅನ್ವಯವಾಗಬೇಕು.”
13. ಗೋಷ್ಠಿಗಳಲ್ಲಿ ಮದ್ಯಪಾನೀಯಗಳ ಬಳಕೆಯು ಹೇಗೆ ಒಂದು ಪಾಶವಾಗಿದೆ? (ಯೆಶಾಯ 5:11, 12)
13 ದೊಡ್ಡ ಸಾಮಾಜಿಕ ಗೋಷ್ಠಿಗಳಲ್ಲಿ ಮದ್ಯ ಪಾನೀಯಗಳು ಇರುವುದು ಅನೇಕರನ್ನು ಪಾಶಕ್ಕೆಳೆದಿದೆ. ಅಂತಹ ಪಾನೀಯಗಳ ಹಾಳತವಾದ ಉಪಯೋಗವನ್ನು ಬೈಬಲು ನಿಷೇಧಿಸುತ್ತದೆ ಎಂದೇನೂ ಅಲ್ಲ, ಯಾಕಂದರೆ ಅದು ಹಾಗೆ ಮಾಡುವುದಿಲ್ಲ. ಇದರ ಒಂದು ಪುರಾವೆಯಾಗಿ, ಕಾನಾದ ಒಂದು ವಿವಾಹದೌತಣದಲ್ಲಿ ಯೇಸು ದ್ರಾಕ್ಷಾಮದ್ಯವನ್ನು ಮಾಡಿದನು. ಆದರೆ ಅಲ್ಲಿ ಮಿತಿಮೀರಿದ ಕುಡಿತ ಇದ್ದಿರಲಿಕ್ಕಿಲ್ಲ, ಯಾಕಂದರೆ ಅಂಥ ಭಾರಿ ಪ್ರಮಾಣದ ಕುಡಿಕರ ನಡುವೆ ಇರಬಾರದೆಂಬ ದೇವರ ಬುದ್ಧಿವಾದವನ್ನು ಯೇಸುವು ಎತ್ತಿಹಿಡಿಯುತ್ತಿದ್ದನು. (ಜ್ಞಾನೋಕ್ತಿ 23:20, 21) ಆದರೆ ಈ ವಿವರಣೆಯನ್ನು ಪರಿಗಣಿಸಿರಿ: ಇತರ ಔತಣಗಳಲ್ಲಿ ಒಳ್ಳೆಯ ದ್ರಾಕ್ಷಾಮದ್ಯವನ್ನು ಮೊದಲು ಕೊಡುತ್ತಾರೆ, ‘ಮತ್ತು ಅಮಲೇರಿದ ಮೇಲೆ ಕಿರಿದಿನ ದ್ರಾಕ್ಷಾಮದ್ಯವನ್ನು’ ಕೊಡುತ್ತಾರೆ ಎಂದು ಔತಣದ ಪಾರುಪತ್ಯಗಾರನು ಹೇಳಿದನು. (ಯೋಹಾನ 2:10) ಹಾಗಾದರೆ, ಎಲ್ಲರಿಗೆ ದ್ರಾಕ್ಷಾಮದ್ಯವು ಎಲ್ಲಿ ಹೇರಳವಾಗಿ ದೊರಕುತ್ತಿತ್ತೊ ಆ ವಿವಾಹಗಳಲ್ಲಿ ಯೆಹೂದ್ಯರು ಅಮಲೇರುವುದು ಸರ್ವೇ ಸಾಮಾನ್ಯವಾಗಿತ್ತು.
14. ಮದ್ಯಪಾನೀಯಗಳು ತರಬಹುದಾದ ಪಾಶದೊಂದಿಗೆ ಕ್ರೈಸ್ತ ಆತಿಥೇಯನೊಬ್ಬನು ಯಾವ ವಿಧಗಳಲ್ಲಿ ನಿಭಾಯಿಸಸಾಧ್ಯವಿದೆ?
14 ತದ್ರೀತಿಯಲ್ಲಿ, ಕೆಲವು ಕ್ರೈಸ್ತ ಆತಿಥೇಯರು, ಅವರ ಅತಿಥಿಗಳಿಗೆ ಏನು ನೀಡಲ್ಪಡುತ್ತದೆ ಯಾ ಕುಡಿಯಲ್ಪಡುತ್ತದೆ ಎನ್ನುವುದರ ಮೇಲೆ ತಾವು ಸ್ವತಃ ಮೇಲ್ವಿಚಾರಣೆ ನಡಿಸಸಾಧ್ಯವಿರುವಲ್ಲಿ ಮಾತ್ರವೇ, ದ್ರಾಕ್ಷಾಮದ್ಯ, ಬಿಯರ್, ಮತ್ತು ಇತರ ಮಾದಕ ಪಾನೀಯಗಳನ್ನು ಒದಗಿಸಲು ನಿರ್ಧರಿಸಿದ್ದಾರೆ. ಯೆಹೂದ್ಯರ ವಿವಾಹಗಳ ಕುರಿತು ತಿಳಿಸಿದಂತೆ, ಆತಿಥೇಯನು ನೇರವಾಗಿ ಮೇಲ್ವಿಚಾರಣೆ ನಡಿಸುವದಕ್ಕಿಂತಲೂ ದೊಡ್ಡದಾದ ಗುಂಪು ಇದ್ದಲ್ಲಿ, ಬಹುಪ್ರಮಾಣದ ಮದ್ಯಪಾನೀಯವು ಒಂದು ಅಪಾಯಕರ ಪಾಶವಾಗಬಲ್ಲದು. ಕುಡಿತದ ಸಮಸ್ಯೆಯನ್ನು ಹೋರಾಡಿ, ಜಯಗಳಿಸಿದ ವ್ಯಕ್ತಿಯೊಬ್ಬನು ಅಲ್ಲಿ ಹಾಜರಿರಬಹುದು. ಸಾಮಾನ್ಯವಾಗಿ, ನಿಯಂತ್ರಣವಿಲ್ಲದ ಮದ್ಯಪಾನೀಯವು ದೊರೆಯುವಂತಿರುವಲ್ಲಿ, ಅದರಲ್ಲಿ ಅತಿಲೋಲುಪನಾಗುವಂತೆ ಮತ್ತು ಎಲ್ಲರಿಗೋಸ್ಕರ ಆ ಸಂದರ್ಭವನ್ನು ಹಾಳುಗೆಡಹುವಂತೆ ಅದು ಅವನನ್ನು ಶೋಧನೆಗೊಳಪಡಿಸಬಹುದು. ಜರ್ಮನಿಯ ಒಬ್ಬ ಮೇಲ್ವಿಚಾರಕನೂ, ತಂದೆಯೂ ಆಗಿರುವನೊಬ್ಬನು, ಜತೆ ವಿಶ್ವಾಸಿಗಳ ಸಾಮಾಜಿಕ ಗೋಷ್ಠಿಗಳಲಿನ್ಲ ಆಹ್ಲಾದಕರ ಸಹವಾಸದಿಂದ ತನ್ನ ಕುಟುಂಬವು ಪ್ರಯೋಜನಗಳನ್ನು ಪಡೆಯುವುದರ ಕುರಿತು ಹೇಳಿಕೆಯನ್ನಿತ್ತನು. ಆದರೂ, ಬಿಯರ್ ಸುಲಭವಾಗಿ ದೊರಕುವಾಗ ಸಮಸ್ಯೆಗಳ ಸಂಭಾವ್ಯತೆಯು ಖಂಡಿತವಾಗಿಯೂ ಹೆಚ್ಚು ಎಂದು ಅವನು ಕೂಡಿಸಿದನು.
15. ಸಾಮಾಜಿಕ ನೆರವಿಗಳ ಯೋಗ್ಯ ಮಾರ್ಗದರ್ಶನವನ್ನು ಹೇಗೆ ಸಾಧಿಸಬಹುದು?
15 ಕಾನಾದ ಮದುವೆಯಲ್ಲಿ “ಔತಣದ ಪಾರುಪತ್ಯಗಾರನು” ಇದ್ದನು. (ಯೋಹಾನ 2:8) ಕುಟುಂಬವೊಂದು ತಮ್ಮ ಮನೆಯಲ್ಲಿ ಊಟಕ್ಕಾಗಿ ಯಾ ಸಹವಾಸದ ಒಂದು ಸಮಯಾವಧಿಗಾಗಿ ಒಂದು ಗುಂಪು ಬರುವಾಗ, ಒಬ್ಬ ಪಾರುಪತ್ಯಗಾರನನ್ನು ನೇಮಿಸಲೇಬೇಕೆಂದು ಇದನ್ನು ಹೇಳುವದಲ್ಲ. ಆ ಸಂದರ್ಭದ ಮೇಲ್ವಿಚಾರಣೆಗೆ ಗಂಡನು ಜವಾಬ್ದಾರನಾಗಿರುವನು. ಆದರೆ ಕೇವಲ ಎರಡು ಕುಟುಂಬಗಳ ಯಾ ದೊಡ್ಡದಾದ ಒಂದು ಗುಂಪಾಗಿರುವುದಾದರೂ, ಏನೆಲ್ಲಾ ನಡೆಯುತ್ತದೊ ಅದಕ್ಕೆ ಒಬ್ಬ ಜವಾಬ್ದಾರನಾಗಿರುವವನು ಇದ್ದಾನೆ ಎಂಬುದು ಸ್ಪಷ್ಟವಾಗಿಗಿರತಕ್ಕದ್ದು. ತಮ್ಮ ಮಗನನ್ನು ಯಾ ಮಗಳನ್ನು ಸಾಮಾಜಿಕ ಗೋಷ್ಠಿಗಾಗಿ ಇತರರು ಆಮಂತ್ರಿಸಿದಾಗ ಹೆತ್ತವರು ಇದರ ಕುರಿತು ಪರಿಶೀಲಿಸುತ್ತಾರೆ. ಅದರ ಮುಕ್ತಾಯದ ತನಕ ಇದ್ದು, ಪೂರ್ಣವಾಗಿ ಆ ಸಂದರ್ಭದಲ್ಲಿ ಯಾರು ಮೇಲ್ವಿಚಾರಣೆ ನಡೆಸುತ್ತಾರೆ ಎಂದು ಅವರು ಆತಿಥೇಯನನ್ನು ಸಂಪರ್ಕಿಸಿ ವಿಚಾರಿಸುತ್ತಾರೆ. ವಯಸ್ಸಾದವರೂ, ಎಳೆಯರೂ ಪರಸ್ಪರ ಸಹವಾಸದಲ್ಲಿ ಆನಂದಿಸಶಕ್ತರಾಗುವಂತೆ ಹಾಜರಿರಲು ಕ್ರೈಸ್ತ ಹೆತ್ತವರು ತಮ್ಮ ಸ್ವಂತ ಕಾರ್ಯತಖ್ತೆಯನ್ನು ಕೂಡ ಅಳವಡಿಸಿಕೊಂಡಿದ್ದಾರೆ.
16. ಗೋಷ್ಠಿಗಳ ಗಾತ್ರದ ಕುರಿತಾಗಿ ತಕ್ಕದ್ದಾದ ಪರಿಗಣನೆಗಳು ಯಾವುವು?
16 ವಾಚ್ ಟವರ್ ಸೊಸೈಟಿಯ ಕೆನಡದ ಬ್ರಾಂಚ್ ಬರೆದದ್ದು: “ಸಾಮಾಜಿಕ ಗೋಷ್ಠಿಗಳ ಸಂಖ್ಯೆಯನ್ನು ಮಿತಗೊಳಿಸುವದಕ್ಕೆ ಸಂಬಂಧಿಸಿದ ಸಲಹೆಯು, ವಿವಾಹ ಸತ್ಕಾರಗೋಷ್ಠಿಯಲ್ಲಿ ಸೇರುವ ದೊಡ್ಡ ಸಂಖ್ಯೆಯ ಸಭೆಗಳೂ ಆ ಸಲಹೆಯನ್ನು ಅತಿಕ್ರಮಿಸಿದಂತಾಗುತ್ತದೆಂಬರ್ಥದಲ್ಲಿ ಕೆಲವು ಹಿರಿಯರು ತಿಳಿದುಕೊಂಡಿದ್ದಾರೆ. ಸಣ್ಣ, ನಿರ್ವಹಿಸಲು ಸಾಧ್ಯವಾದ ಸಂಖ್ಯೆಯಲ್ಲಿ ನಮ್ಮ ಸಾಮಾಜಿಕ ನೆರವಿಗಳನ್ನು ಇಡಬೇಕೆಂದು ನಾವು ಸಲಹೆಯನ್ನಿತ್ತಿರುವುದಾದರೆ, ವಿವಾಹ ಸತ್ಕಾರಗೋಷ್ಠಿಯೊಂದರಲ್ಲಿ 200 ಯಾ 300 ಮಂದಿ ಇರುವುದು ತಪ್ಪಾಗಿದೆ ಎಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ.”a ಒಂದು ಇಚ್ಛಾನುಸಾರವಾಗಿ ಸಂಖ್ಯೆಯನ್ನು ಅತಿಯಾಗಿ ಒತ್ತಿಹೇಳುವದರ ಬದಲು, ಅಲ್ಲಿ ಅನೇಕರು ಇದ್ದಾಗ್ಯೂ, ಯೋಗ್ಯವಾದ ಮೇಲ್ವಿಚಾರಣೆ ಇರತಕ್ಕದ್ದು ಎಂಬುದಕ್ಕೆ ಪ್ರಾಮುಖ್ಯವಾಗಿ ಗಮನಹರಿಸಬೇಕು. ಕಾನಾದ ಮದುವೆಗೆ ಬಹಳಷ್ಟು ದೊಡ್ಡ ಸಂಖ್ಯೆಯ ಗುಂಪು ಹಾಜರಾಗಿತ್ತು ಎಂದು ಯೇಸುವು ಒದಗಿಸಿದ ದ್ರಾಕ್ಷಾಮದ್ಯದ ಪರಿಮಾಣದಿಂದ ಸೂಚಿತವಾಗುತ್ತದೆ, ಆದರೆ ಅಲ್ಲಿ ಯೋಗ್ಯರೀತಿಯ ಮೇಲ್ವಿಚಾರಣೆ ಇತ್ತು ಎಂಬುದು ಸ್ಪಷ್ಟವಾಗಿಗುತ್ತದೆ. ಹಿಂದೆ ಇತರ ಔತಣಗಳು ಹಾಗೆ ಇರಲಿಲ್ಲ; ಅವುಗಳ ಗಾತ್ರವು ಅಸಮರ್ಪಕ ಮೇಲ್ವಿಚಾರಣೆಗೆ ನಡಿಸಬಹುದಾದ ಒಂದು ವಾಸ್ತವಾಂಶವಾಗಿರಬಹುದು. ನೆರವಿಯ ಸಂಖ್ಯೆಯು ಅಧಿಕವಾದಷ್ಟಕ್ಕೆ, ಪಂಥಾಹ್ವಾನವು ಅಧಿಕವಾಗುತ್ತದೆ, ಯಾಕಂದರೆ ಅತಿರೇಕದ ಒಲವು ಇದ್ದವರಿಗೆ, ತಮ್ಮನ್ನು ಸ್ವತಃ ಸಮರ್ಥಿಸಿಕೊಳ್ಳಲು ನಿರ್ಬಲರಾಗಿರುವವರಿಗೆ ಅದು ಸುಲಭವನ್ನಾಗಿ ಮಾಡುತ್ತದೆ. ಮೇಲ್ವಿಚಾರಣೆ ಇಲ್ಲದ ಗೋಷ್ಠಿಗಳಲ್ಲಿ ಅವರು ಆಕ್ಷೇಪಾರ್ಹ ಚಟುವಟಿಕೆಗಳನ್ನು ಪ್ರವರ್ಧಿಸಬಹುದು.—1 ಕೊರಿಂಥ 10:6-8.
17. ಒಂದು ಗೋಷ್ಠಿಯನ್ನು ಯೋಜಿಸುತ್ತಿರುವಾಗ ಕ್ರೈಸ್ತ ಸಮತೂಕವನ್ನು ಹೇಗೆ ತೋರಿಸಸಾಧ್ಯವಿದೆ?
17 ಸಾಮಾಜಿಕ ಗೋಷ್ಠಿಯೊಂದರ ಉತ್ತಮ ಮೇಲ್ವಿಚಾರಣೆಯಲ್ಲಿ ಅದರ ಯೋಜಿಸುವಿಕೆ ಮತ್ತು ಸಿದ್ಧತೆ ಒಳಗೂಡಿರುತ್ತದೆ. ಅದನ್ನು ಅಸದೃಶವನ್ನಾಗಿ ಯಾ ಸ್ಮರಣಯೋಗ್ಯವನ್ನಾಗಿ ಮಾಡಲು ಒಂದು ಚಿತ್ತಾಕರ್ಷಕ ಮುಖ್ಯವಿಷಯವನ್ನು ರೂಪಿಸುವುದೇನೂ ಇದು ಅಪೇಕ್ಷಿಸುವುದಿಲ್ಲ, ಅದು ಹಾಜರಾಗಿದ್ದವರು ಒಂದು ತೆರನಾದ ಪೋಷಾಕು ಧರಿಸಿ ನರ್ತನಕೂಟ ಯಾ ವೇಷಹಾಕಿಕೊಂಡ ಸಮಾಜಗೋಷ್ಠಿಗಳಂತಹ ಲೌಕಿಕ ಸಮಾಜಗೋಷ್ಠಿಗಳನ್ನು ಅನುಕರಿಸಬಹುದು. ಐಗುಪ್ತದ ವಿಧರ್ಮಿಯರಂತೆ ಯಾ ಇನ್ನೊಂದು ದೇಶಗಳವರಂತೆ ಎಲ್ಲರೂ ಪೋಷಾಕು ಧರಿಸಿದ್ದ ಒಂದು ಸಮಾಜಗೋಷ್ಠಿಯನ್ನು ವಾಗ್ದಾನ ದೇಶದಲ್ಲಿ ನಂಬಿಗಸ್ತ ಇಸ್ರಾಯೇಲ್ಯರು ಯೋಜಿಸುವುದರ ಕುರಿತು ನೀವು ಊಹಿಸಬಲ್ಲಿರೊ? ವಿಧರ್ಮಿಯರಲ್ಲಿ ಪ್ರಬಲವಾಗಿದ್ದಿರಬಹುದಾದ ಇಂದ್ರಿಯಗೋಚರದ ನರ್ತನ ಯಾ ಉದ್ರೇಕಗೊಳಿಸುವ ಗಾಯನಗಳನ್ನು ಅವರು ಯೋಜಿಸಿದ್ದಿರಬಹುದೆ? ಹಿಂದೆ ಸೀನಾಯಿ ಪರ್ವತದಲ್ಲಿ, ಐಗುಪ್ತದಲ್ಲಿ ಪ್ರಚಲಿತ ಮತ್ತು ಜನಪ್ರಿಯವಾಗಿರಬಹುದಾದಂತಹ ಗಾಯನ ಮತ್ತು ನರ್ತನಗಳ ಉರುಳಿಗೆ ಅವರು ಬಲಿಯಾದದ್ದು ಸತ್ಯ. ಆ ಮನೋರಂಜನೆಯನ್ನು ದೇವರು ಮತ್ತು ಅವನ ಪ್ರೌಢ ಸೇವಕ ಮೋಶೆಯು ಹೇಗೆ ವೀಕ್ಷಿಸಿದರು ಎಂದು ನಾವು ತಿಳಿದಿದ್ದೇವೆ. (ವಿಮೋಚನಕಾಂಡ 32:5, 6, 17-19) ಆದಕಾರಣ, ಸಾಮಾಜಿಕ ಸಂಭವದ ಆತಿಥೇಯ ಯಾ ಮೇಲ್ವಿಚಾರಕನು, ಅಲ್ಲಿ ಏನಾದರೂ ಹಾಡುವಿಕೆ ಯಾ ನರ್ತನಮಾಡುವಿಕೆ ಇರುವುದೋ ಎಂದು ಪರಿಗಣಿಸತಕ್ಕದ್ದು; ಮತ್ತು ಇರುವುದಾದರೆ, ಅದು ಕ್ರೈಸ್ತ ಸೂತ್ರಗಳಿಗೆ ಹೊಂದಾಣಿಕೆಯಲ್ಲಿರುವದನ್ನು ಅವನು ಖಚಿತಪಡಿಸಿಕೊಳ್ಳತಕ್ಕದ್ದು.—2 ಕೊರಿಂಥ 6:3.
18, 19. ಮದುವೆಗೆ ಯೇಸುವನ್ನು ಆಮಂತ್ರಿಸಲ್ಪಟ್ಟಿರುವದರ ಮೂಲಕ ಯಾವ ಒಳನೋಟವನ್ನು ನಾವು ಪಡೆಯಬಹುದು, ಮತ್ತು ಇದನ್ನು ನಾವು ಹೇಗೆ ಅನ್ವಯಿಸಬಹುದು?
18 ಕೊನೆಗೆ, ‘ಯೇಸುವನ್ನೂ ಆತನ ಶಿಷ್ಯರನ್ನೂ ಮದುವೆಗೆ ಕರೆದರು’ ಎಂಬುದನ್ನು ನಾವು ನೆನಪಿಸುತ್ತೇವೆ. (ಯೋಹಾನ 2:2) ಆಹ್ಲಾದಕರ, ಭಕ್ತಿವರ್ಧಿಸುವ ಸಮಯವೊಂದಕ್ಕಾಗಿ ಒಬ್ಬ ಕ್ರೈಸ್ತನಾಗಲಿ, ಯಾ ಕುಟುಂಬವಾಗಲಿ ಸುಮ್ಮನೆ ಇತರರನ್ನು ಸಂದರ್ಶಿಸಬಹುದು. ಆದರೆ ಯೋಜಿಸಲ್ಪಟ್ಟ ಸಾಮಾಜಿಕ ಸಂಭವಗಳಿಗೆ, ಯಾರು ಅಲ್ಲಿರುವರು ಎಂದು ಮೊದಲೆ ನಿರ್ಧರಿಸುವುದರಿಂದ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ ಎಂದು ಅನುಭವ ತೋರಿಸುತ್ತದೆ. ಅಮೆರಿಕ ಟೆನೆಸಿಯ ಹಿರಿಯನೊಬ್ಬನಿಂದ ಇದರ ಪ್ರಾಮುಖ್ಯತೆಯು ಒತ್ತಿಹೇಳಲ್ಪಟ್ಟಿದೆ, ಪೂರ್ಣ ಸಮಯದ ಶುಶ್ರೂಷೆಯಲ್ಲಿರುವ ಪುತ್ರ, ಪುತ್ರಿಯರನ್ನು ಇವನು ಪೋಷಿಸಿದ್ದನು. ಅವನಾಗಲಿ ಯಾ ಅವನ ಹೆಂಡತಿಯಾಗಲಿ ಆಮಂತ್ರಣವೊಂದನ್ನು ಸ್ವೀಕರಿಸುವ ಮೊದಲು, ಯಾ ಹಾಜರಾಗಲು ಅವರ ಮಕ್ಕಳಿಗೆ ಪರವಾನಗಿ ಕೊಡುವ ಮೊದಲು, ಹಾಜರಾಗುವವರು ಯಾರೆಂದು ಮೊದಲೇ ನಿಶ್ಚಯಿಸಲಾಗಿದೆಯೋ ಎಂದು ಖಚಿತಪಡಿಸಿಕೊಳ್ಳಲು ಅವನು ಆತಿಥೇಯನನ್ನು ಸಂಪರ್ಕಿಸುತ್ತಿದ್ದನು. ಊಟ, ಪಿಕ್ನಿಕ್, ಯಾ ಚೆಂಡನ್ನು ಆಡುವಂಥ ವ್ಯಾಯಾಮವೇ ಆಗಿರಲಿ, ಎಲ್ಲರಿಗೂ ತೆರೆದಿಡಲ್ಪಡುವ ಗೋಷ್ಠಿಗಳಲ್ಲಿ ಕೆಲವರು ಬಲಿಬಿದ್ದ ಪಾಶಗಳಿಂದ ಅವನ ಕುಟುಂಬವು ಸುರಕ್ಷಿತವಾಗಿಡಲ್ಪಟ್ಟಿತು.
19 ಕೇವಲ ಸಂಬಂಧಿಕರನ್ನು, ಹಳೆಯ ಮಿತ್ರರನ್ನು, ಯಾ ತಮ್ಮದೆ ವಯಸ್ಸಿನ ಯಾ ಆರ್ಥಿಕ ಸ್ಥಿತಿಯವರನ್ನು ಗೋಷ್ಠಿಗಾಗಿ ಆಮಂತ್ರಿಸುವದನ್ನು ಯೇಸುವು ನಿರುತ್ತೇಜಿಸಿದನು. (ಲೂಕ 14:12-14; ಹೋಲಿಸಿರಿ ಯೋಬ 31:16-19; ಅ. ಕೃತ್ಯಗಳು 20:7-9.) ಯಾರನ್ನು ಆಮಂತ್ರಿಸುವಿರೆಂದು ನೀವು ಜಾಗ್ರತೆಯಿಂದ ಆಯ್ಕೆಮಾಡುವುದಾದರೆ, ವಿವಿಧ ಪ್ರಾಯ ಮತ್ತು ಪರಿಸ್ಥಿತಿಯ ಕ್ರೈಸ್ತರನ್ನು ಒಳಗೂಡಿಸುವುದು ಸುಲಭವಾಗಿರುತ್ತದೆ. (ರೋಮಾಪುರ 12:13; ಇಬ್ರಿಯ 13:2) ಅವರಲ್ಲಿ ಕೆಲವರು ಆತ್ಮಿಕವಾಗಿ ನಿರ್ಬಲರು ಯಾ ಹೊಸಬರಾಗಿದ್ದು, ಪ್ರೌಢ ಕ್ರೈಸ್ತರೊಂದಿಗಿನ ಸಹವಾಸದಿಂದ ಪ್ರಯೋಜನ ಪಡೆಯಸಾಧ್ಯವಿದೆ.—ಜ್ಞಾನೋಕ್ತಿ 27:17.
ಮನೋರಂಜನೆ ತಕ್ಕ ಸ್ಥಾನದಲ್ಲಿ
20, 21. ನಮ್ಮ ಜೀವಿತದಲ್ಲಿ ಮನೋರಂಜನೆಗೆ ಯೋಗ್ಯವಾಗಿ ಒಂದು ಸ್ಥಾನವಿರಸಾಧ್ಯವಿದೆ ಯಾಕೆ?
20 ದೇವಭೀರು ಜನರಾಗಿರುವ ನಮಗೆ ನಮ್ಮ ಮನೋರಂಜನೆಯಲ್ಲಿ ಆಸಕ್ತಿಯುಳ್ಳವರಾಗಿರುವುದು ಮತ್ತು ಅಂಥದ್ದು ಯೋಗ್ಯವಾಗಿದೆಯೆಂಬುದರ ಕುರಿತು ಚಿಂತೆಯುಳ್ಳವರಾಗಿರುವದು ಮತ್ತು ಅದಕ್ಕಾಗಿ ನಾವು ಉಪಯೋಗಿಸುವ ಸಮಯದ ಪರಿಮಾಣದಲ್ಲಿ ಸಮತೂಕದವರಾಗಿರುವುದು ತಕ್ಕದ್ದಾಗಿದೆ. (ಎಫೆಸ 2:1-4; 5:15-20) ಪ್ರಸಂಗಿಯ ಪ್ರೇರಿತ ಲೇಖಕನು ಅದೇ ರೀತಿ ಭಾವಿಸಿದನು: “ಮನುಷ್ಯನು ಅನ್ನಪಾನಗಳನ್ನು ತೆಗೆದುಕೊಂಡು ಸಂತೋಷಪಡುವದಕ್ಕಿಂತ ಅವನಿಗೆ ಲೋಕದಲ್ಲಿ ಇನ್ನಾವ ಮೇಲೂ ಇಲ್ಲವೆಂದು ಸಂತೋಷವನ್ನೇ ಸ್ತುತಿಸಿದೆನು; ದೇವರು ಅವನಿಗೆ ಲೋಕದಲ್ಲಿ ಅನುಗ್ರಹಿಸುವ ದಿನಗಳಲ್ಲೆಲ್ಲಾ ಅವನು ಪಡುವ ಪ್ರಯಾಸದಲ್ಲಿ ಸಂತೋಷವೇ ಸೇರಿರುವುದು.” (ಪ್ರಸಂಗಿ 8:15) ಅಂಥ ಸಮತೂಕದ ಸಂತೋಷವು ಶರೀರಕ್ಕೆ ನವಚೈತನ್ಯವನ್ನುಂಟುಮಾಡುವದು ಮತ್ತು ಸದ್ಯದ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿರುವ ಸಮಸ್ಯೆಗಳನ್ನು ಮತ್ತು ಹತಾಶೆಗಳನ್ನು ಪರಿಹರಿಸಲು ನೆರವಾಗುವುದು.
21 ಉದಾಹರಿಸಲು, ಆಷ್ಟ್ರಿಯನ್ ಪಯನೀಯರಳೊಬ್ಬಳು ಒಬ್ಬ ಹಳೇ ಮಿತ್ರಳಿಗೆ ಬರೆದದ್ದು: “ಮೊನ್ನೆ ಮೊನ್ನೆ ನಮಗೆಲ್ಲರಿಗೂ ಒಂದು ಉತ್ತಮ ಸಂತೋಷಸಂಚಾರವಿತ್ತು. ಫರ್ಲೆಕ್ ಹತ್ತಿರದ ಒಂದು ಚಿಕ್ಕ ಸರೋವರದ ಬಳಿಗೆ ನಾವು ಸುಮಾರು 50 ಮಂದಿ ಹೊರಟೆವು. ಸುಡಲು ಮೂರು ಸರಳು ಕಾವಲಿಗಳು, ಮಡಚುವ ಕುರ್ಚಿಗಳು, ಮೇಜುಗಳು, ಮತ್ತು ಒಂದು ಟೇಬಲ್ ಟೆನ್ನಿಸ್ ಮೇಜು ಕೂಡ ಒಟ್ಟಿಗೆ ತೆಗೆದುಕೊಂಡು ಸಹೋದರ ಆ—ಅವನ ವ್ಯಾನನ್ನೇ ಮೆರವಣಿಗೆಯ ಮುಂಭಾಗದಲ್ಲಿ ನಡಿಸಿದನು. ನಾವು ಅದರಲ್ಲಿ ಬಹಳವಾಗಿ ಆನಂದಿಸಿದೆವು. ಒಬ್ಬ ಸಹೋದರಿಯ ಹತ್ತಿರ ಅಕಾರ್ಡಿಯನ್ ವಾದ್ಯ ಇತ್ತು, ಆದುದರಿಂದ ಅಲ್ಲಿ ಬಹಳ ರಾಜ್ಯ ಸಂಗೀತಗಳು ಇದ್ದವು. ಎಳೆಯ ಹಾಗೂ ವಯಸ್ಸಾದ ಸಹೋದರರು ಒಡನಾಟದಲ್ಲಿ ಆನಂದಿಸಿದರು.” ಅತಿಕುಡಿಕತನ ಯಾ ಸಡಿಲು ನಡತೆಯಂಥ ಪಾಶಗಳಿಂದ ಮುಕ್ತವಾಗಿಟ್ಟ, ಉತ್ತಮವಾಗಿ ಮೇಲ್ವಿಚಾರಣೆ ಮಾಡಲ್ಪಟ್ಟ ಮನೋರಂಜನೆಯ ಸವಿನೆನಹುಗಳು ಅವಳಿಗಿದ್ದವು.—ಯಾಕೋಬ 3:17, 18.
22. ಸಾಮಾಜಿಕ ಮನೋರಂಜನೆಗಳಲ್ಲಿ ಆನಂದಿಸುವಾಗ, ನಮ್ಮ ಯೋಚನೆಯಲ್ಲಿ ನಮ್ಮಲ್ಲಿ ಪ್ರತಿಯೊಬ್ಬನು ಯಾವ ಎಚ್ಚರಿಕೆಯನ್ನು ಮುಂದುಗಡೆ ಇಡತಕ್ಕದ್ದು?
22 ಅಪರಿಪೂರ್ಣ ಮಾಂಸದಿಚ್ಛೆಗಳಿಗೆ ಶರಣಾಗತರಾಗದಂತೆ ಜಾಗ್ರತರಾಗಿರಲು, ಶೋಧನೆಗಳಿಗೆ ನಮ್ಮನ್ನು ಒಡ್ಡಬಹುದಾದ ಯೋಜನೆಗಳನ್ನೂ ಕೂಡ ಮಾಡದಂತೆ ಪೌಲನು ನಮ್ಮನ್ನು ಒತ್ತಾಯಿಸುತ್ತಾನೆ. (ರೋಮಾಪುರ 13:11-14) ಅದರಲ್ಲಿ ಸಾಮಾಜಿಕ ಮನೋರಂಜನೆಯೂ ಕೂಡಿರುತ್ತದೆ. ಅವನ ಅಂಥ ಸಲಹೆಗಳನ್ನು ನಾವು ಅನ್ವಯಿಸಿದಾಗ, ಕೆಲವರ ಆತ್ಮಿಕ ಹಡಗುನಷ್ಟಕ್ಕೆ ನಡೆಸಿದ ಸನ್ನಿವೇಶಗಳನ್ನು ನಾವು ವರ್ಜಿಸಲು ಶಕ್ತರಾಗುವೆವು. (ಲೂಕ 21:34-36; 1 ತಿಮೊಥೆಯ 1:19) ಬದಲಾಗಿ, ದೇವರೊಂದಿಗೆ ನಮ್ಮ ಸಂಬಂಧವನ್ನು ಕಾಪಾಡಿಕೊಳ್ಳಲು ನಮಗೆ ಸಹಾಯಮಾಡುವ ಆರೋಗ್ಯಕರ ಮನೋರಂಜನೆಯನ್ನು ನಾವು ವಿವೇಕದಿಂದ ಆರಿಸುವೆವು. ಈ ರೀತಿ, ದೇವರ ಒಳ್ಳೇ ದಾನಗಳಲ್ಲಿ ಒಂದೆಂದು ಪರಿಗಣಿಸಲ್ಪಡಸಾಧ್ಯವಿರುವ ಸಾಮಾಜಿಕ ಮನೋರಂಜನೆಯಿಂದ ನಾವು ಪ್ರಯೋಜನವನ್ನು ಪಡೆಯುವೆವು.—ಪ್ರಸಂಗಿ 5:18.
[ಅಧ್ಯಯನ ಪ್ರಶ್ನೆಗಳು]
a ಏಪ್ರಿಲ್ 15, 1984 ರ ದ ವಾಚ್ಟವರ್ ನಲ್ಲಿ ವಿವಾಹ ಮತ್ತು ವಿವಾಹದೌತಣಗಳ ಮೇಲೆ ಸಮತೂಕವಾದ ಸಲಹೆಯು ಇತ್ತು. ಭಾವೀ ಮದುಮಗನು ಮತ್ತು ಅವನ ವಧುವು, ಮತ್ತು ಅವರಿಗೆ ಸಹಾಯ ಮಾಡುವ ಇತರರು ಅವರ ವಿವಾಹದ ಯೋಜನೆಗಳನ್ನು ಮಾಡುವ ಮೊದಲು ಈ ಸಮಾಚಾರವನ್ನು ಲಾಭಕರ ರೀತಿಯಲ್ಲಿ ಪರಾಮರ್ಶಿಸಸಾಧ್ಯವಿದೆ.
ನಾವೇನು ಕಲಿತೆವು?
▫ ಮನೋರಂಜನೆಯಲ್ಲಿ ಆನಂದಿಸುವುದರ ಕುರಿತು ಸಮತೂಕದ ಯಾವ ನೋಟವನ್ನು ನಾವು ಕಂಡುಕೊಳ್ಳುತ್ತೇವೆ?
▫ ಮನೋರಂಜನೆಯ ಸಮಯ ಮತ್ತು ಸ್ವರೂಪದ ಕುರಿತಾಗಿ ಪರಿಗಣನೆಯನ್ನು ಯಾಕೆ ಕೊಡತಕ್ಕದ್ದು?
▫ ಪಾಶಗಳ ವಿರುದ್ಧವಾಗಿ ಜಾಗ್ರತೆವಹಿಸಲು ಕ್ರೈಸ್ತ ಆತಿಥೇಯನೊಬ್ಬನು ಮಾಡಸಾಧ್ಯವಿರುವ ಕೆಲವು ವಿಷಯಗಳು ಯಾವುವು?
▫ ಯೋಗ್ಯವೂ, ಸಮತೂಕದ್ದೂ ಆಗಿರುವುದಾದರೆ, ಮನೋರಂಜನೆಯು ಕ್ರೈಸ್ತರಿಗೆ ಏನನ್ನು ಈಡೇರಿಸಶಕ್ಯವಾಗುತ್ತದೆ?
[ಪುಟ 18 ರಲ್ಲಿರುವ ಚಿತ್ರ]
ಆತಿಥೇಯನು ಯಾ ಪಾರುಪತ್ಯಗಾರನು ನೆರವಿಯೊಂದರಲ್ಲಿ ಅತಿಥಿಗಳು ಪಾಶಕ್ಕೆ ಬಲಿಯಾಗದಂತೆ ನೋಡಿಕೊಳ್ಳಲು ಜವಾಬ್ದಾರನಾಗಿದ್ದಾನೆ