ಕ್ರೈಸ್ತ ಕುಟುಂಬವು ಕಾರ್ಯಗಳನ್ನು ಒಡಗೂಡಿ ಮಾಡುತ್ತದೆ
“ಸಹೋದರರೇ, . . . ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿದ್ದು ಹೊಂದಿಕೆಯಿಂದಿರಬೇಕು . . . ಎಂಬದಾಗಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ.”—1 ಕೊರಿಂಥ 1:10.
1. ಹೆಚ್ಚಿನ ಕುಟುಂಬಗಳಲ್ಲಿ ಹೊಂದಿಕೆಯ ಸಂಬಂಧದಲ್ಲಿ ಸನ್ನಿವೇಶವೇನಾಗಿದೆ?
ನಿಮ್ಮದು ಒಂದು ಹೊಂದಿಕೆಯುಳ್ಳ ಕುಟುಂಬವೋ? ಅಥವಾ ಪ್ರತಿಯೊಬ್ಬನು ಅವನ ಯಾ ಅವಳ ಸ್ವಂತ ಮಾರ್ಗದಲ್ಲಿ ಹೋಗುತ್ತಿರುವಂತೆ ತೋರುತ್ತದೋ? ನೀವು ಕಾರ್ಯಗಳನ್ನು ಒಂದುಗೂಡಿ ಮಾಡುತ್ತೀರೋ? ಅಥವಾ ನೀವೆಲ್ಲರೂ ಒಂದೇ ಸಮಯದಲ್ಲಿ ಒಂದು ಸ್ಥಳದಲ್ಲಿರುವುದು ವಿರಳವೋ? “ಕುಟುಂಬ” ಎಂಬ ಶಬ್ದವು ತಾನೇ ಒಂದು ಒಕ್ಕಟ್ಟಿನ ಮನೆವಾರ್ತೆಯನ್ನು ಸೂಚಿಸುತ್ತದೆ.a ಆದರೂ, ಎಲ್ಲಾ ಕುಟುಂಬಗಳು ಐಕ್ಯವಾಗಿ ಇಲ್ಲ. ಒಬ್ಬ ಬ್ರಿಟಿಷ್ ಉಪನ್ಯಾಸಕರು ಹೀಗನ್ನುವಷ್ಟೂ ದೂರಹೋದರು: “ಒಳ್ಳೇ ಸಮಾಜದ ಮೂಲಾಧಾರವಾಗಿರುವ ಬದಲಿಗೆ ಕುಟುಂಬವು, . . . ನಮ್ಮೆಲ್ಲಾ ಅಸಂತುಷ್ಟಿಗಳಿಗೆ ಉಗಮವಾಗಿರುತ್ತದೆ.” ಇದು ನಿಮ್ಮ ಕುಟುಂಬದ ವಿಷಯದಲ್ಲಿ ಸತ್ಯವೋ? ಹಾಗಿದ್ದರೆ, ಅದು ಆ ರೀತಿಯಲ್ಲಿ ಇರಲೇಬೇಕೋ?
2. ಯಾವ ಬೈಬಲ್ ವ್ಯಕ್ತಿಗಳು ಒಂದು ಒಳ್ಳೆಯ ಕುಟುಂಬದಿಂದ ಬಂದಿರುವ ರುಜುವಾತನ್ನು ಕೊಡುತ್ತಾರೆ?
2 ಕುಟುಂಬದ ಐಕ್ಯತೆ ಯಾ ಅನೈಕ್ಯತೆಯು ಸಾಮಾನ್ಯವಾಗಿ, ಅದು ಹೆತ್ತವರಿಬ್ಬರಿಂದ ಅಥವಾ ಏಕ ಹೆತ್ತವರಿಂದ ತೋರಿಸಲ್ಪಡಲಿ, ಅದರ ನಾಯಕತ್ವದ ಮೇಲೆ ಆತುಕೊಂಡಿದೆ. ಬೈಬಲ್ ಕಾಲಗಳಲ್ಲಿ, ಐಕ್ಯತೆಯಿಂದ ಒಂದುಗೂಡಿ ಆರಾಧನೆ ನಡಿಸಿದ ಕುಟುಂಬಗಳು ಯೆಹೋವನ ಆಶೀರ್ವಾದದಲ್ಲಿ ಆನಂದಿಸಿದವು. ಎಲ್ಲಿ ಯೆಪ್ತಾಹನ ಮಗಳು, ಸಂಸೋನ, ಮತ್ತು ಸಮುವೇಲರು, ಪ್ರತಿಯೊಬ್ಬನು ತಮ್ಮ ಸ್ವಂತ ತೆರದಲ್ಲಿ, ದೇವ ಭಕ್ತಿಯ ಕುಟುಂಬದಿಂದ ಬಂದವರಾದ ರುಜುವಾತನ್ನು ಕೊಟ್ಟರೋ ಆ ಪುರಾತನ ಇಸ್ರಾಯೇಲಿನಲ್ಲಿ ಇದು ನಿಜವಾಗಿತ್ತು. (ನ್ಯಾಯಸ್ಥಾಪಕರು 11:30-40; 13:2-25; 1 ಸಮುವೇಲ 1:21-23; 2:18-21) ಆದಿಕ್ರೈಸ್ತ ಸಮಯದಲ್ಲಿ, ಪೌಲನ ಕೆಲವು ಮಿಷನೆರಿ ಸಂಚಾರಗಳಲ್ಲಿ ಪೌಲನ ನಂಬಿಗಸ್ತ ಸಂಗಡಿಗನಾಗಿದ್ದಾಗ ತಿಮೊಥೆಯನು, ಅವನ ಅಜಿಯ್ಜಾದ ಲೋವಿ ಮತ್ತು ತಾಯಿಯಾದ ಯೂನೀಕೆಯಿಂದ ಹೀಬ್ರು ಶಾಸ್ತ್ರಗ್ರಂಥದ ಜ್ಞಾನದಲ್ಲಿ ಬೆಳೆಸಲ್ಪಟ್ಟನು. ಅವನು ಎಂತಹ ಮಹತ್ತಾದ ಶಿಷ್ಯನೂ ಮಿಷನೆರಿಯೂ ಆಗಿ ಪರಿಣಮಿಸಿದನು!—ಅ. ಕೃತ್ಯಗಳು 16:1, 2; 2 ತಿಮೊಥೆಯ 1:5; 3:14, 15; ನೋಡಿರಿ ಅ. ಕೃತ್ಯಗಳು 21:8, 9 ನ್ನು ಸಹ.
ಕಾರ್ಯಗಳನ್ನು ಒಂದುಗೂಡಿ ಮಾಡುವುದೇಕೆ?
3, 4. (ಎ) ಐಕ್ಯತೆಯುಳ್ಳ ಕುಟುಂಬದಲ್ಲಿ ಯಾವ ಗುಣಗಳು ಪ್ರತ್ಯಕ್ಷವಾಗಿ ತೋರಿಬರಬೇಕು? (ಬಿ) ಮನೆಯು ಕೇವಲ ಒಂದು ವಾಸಗೃಹಕ್ಕಿಂತ ಹೆಚ್ಚಾಗಿರುವುದು ಹೇಗೆ?
3 ಕುಟುಂಬಗಳು ಕಾರ್ಯಗಳನ್ನು ಒಂದುಗೂಡಿ ಮಾಡುವುದೇಕೆ ಲಾಭದಾಯಕವು? ಯಾಕಂದರೆ ಅದು ಪರಸ್ಪರ ತಿಳಿವಳಿಕೆಯನ್ನು ಮತ್ತು ಗೌರವವನ್ನು ಕಟ್ಟುತ್ತದೆ. ನಮ್ಮನ್ನು ಒಬ್ಬರಿಂದೊಬ್ಬರು ದೂರವಿಟ್ಟುಕೊಳ್ಳುವ ಬದಲಾಗಿ, ನಾವು ಆಪ್ತರಾಗಿ ಉಳಿಯುತ್ತೇವೆ ಮತ್ತು ಬೆಂಬಲವನ್ನು ಕೊಡುತ್ತೇವೆ. ಫ್ಯಾಮಿಲಿ ರಿಲೇಷನ್ಸ್ ಪತ್ರಿಕೆಯ ಇತ್ತೀಚಿಗಿನ ಒಂದು ಲೇಖನವು ಹೇಳಿದ್ದು: “‘ದೃಢವಾದ ಕುಟುಂಬಗಳ’ ವಿಶಿಷ್ಟ ಲಕ್ಷಣಗಳನ್ನು ಬಣ್ಣಿಸುವಾಗ ಒಂದು ತುಲನಾತ್ಮಕವಾದ ಸ್ಪಷ್ಟ ಚಿತ್ರವು ಗೋಚರಕ್ಕೆ ಬಂದಿದೆ. ಅಂತಹ ಗುಣಗಳಲ್ಲಿ ಒಬ್ಬರಿಗೊಬ್ಬರ ಕಟ್ಟುಪಾಡುಗಳು ಮತ್ತು ಒಬ್ಬರಿಗೊಬ್ಬರ ಗಣ್ಯತೆ, ಬೆಚ್ಚಗಾದ, ಸಂತೋಷದ ಆಪ್ತ ಭಾವನೆ, ಒಳ್ಳೆಯ ಸಂಸರ್ಗ, ಸಮಸ್ಯೆ-ನಿಭಾಯಿಸುವ ಸಾಮರ್ಥ್ಯ, ಮತ್ತು ಜೀವನದಲ್ಲಿ ಆತ್ಮಿಕತೆಯ ಬಲವಾದ ಪ್ರಮಾಣವು ಸೇರಿರುತ್ತದೆ.”
4 ಈ ಗುಣಗಳು ಒಂದು ಕುಟುಂಬದಲ್ಲಿ ಅಸ್ತಿತ್ವದಲ್ಲಿರುವಾಗ, ಮನೆಯು ಇನ್ನು ಮುಂದೆ ಇಂಧನಕ್ಕಾಗಿ ತುಸು ನಿಲ್ಲುವ ಒಂದು ಪೆಟ್ರೋಲ್ ಸೇಷ್ಟನ್ನ ಹಾಗಿರದು. ಅದು ಕೇವಲ ಒಂದು ವಾಸಗೃಹಕ್ಕಿಂತ ಹೆಚ್ಚಾಗಿದೆ. ಕುಟುಂಬ ಸದಸ್ಯರನ್ನು ಆಕರ್ಷಿಸುವ ಒಂದು ಮೋಹಕ ಸ್ಥಳವು ಅದಾಗಿದೆ. ಅದು ಹೃತ್ಪೂರ್ವಕತೆ ಮತ್ತು ಮಮತೆ, ಕನಿಕರ ಮತ್ತು ತಿಳಿವಳಿಕೆಯ ಒಂದು ಬೀಡಾಗಿದೆ. (ಜ್ಞಾನೋಕ್ತಿ 4:3, 4) ಅದು ಕುಟುಂಬ ಐಕ್ಯತೆಯು ಕಂಡುಬರುವ ಒಂದು ಗೂಡಾಗಿದೆ, ಘರ್ಷಣೆ ಮತ್ತು ಭಿನ್ನತೆ ಇರುವ ಚೇಳಿನ ಇಕ್ಕೆಯಲ್ಲ. ಆದರೆ ಇದನ್ನು ಗಳಿಸುವುದು ಹೇಗೆ?
ಕುಟುಂಬ ಅಭ್ಯಾಸದಲ್ಲಿ ಒಡಗೂಡಿ ಕಾರ್ಯಗಳನ್ನು ಮಾಡುವುದು
5. ಸತ್ಯಾರಾಧನೆಯನ್ನು ಕಲಿಯಲು ನಾವೇನನ್ನು ಉಪಯೋಗಿಸುತ್ತೇವೆ?
5 ನಮ್ಮ ಯುಕ್ತಾಯುಕ್ತ ಪರಿಜ್ಞಾನದ ಅಥವಾ “ವಿವೇಚಿಸಿ ತಿಳುಕೊಳ್ಳುವ” ಶಕ್ತಿಯ ಉಪಯೋಗದ ಮೂಲಕ ಯೆಹೋವನ ಸತ್ಯಾರಾಧನೆಯು ಕಲಿಯಲ್ಪಡುತ್ತದೆ. (ರೋಮಾಪುರ 12:1) ನಮ್ಮ ನಡವಳಿಕೆಯು, ವಾಕಾತ್ಚುರ್ಯದ ಪ್ರವಚನಗಳ ಮತ್ತು ಚಾಕಚಕ್ಯತೆಯ ಟೀವೀ ಶುಶ್ರೂಷೆಗಳ ಮೂಲಕವಾಗಿ ಎಬ್ಬಿಸಲ್ಪಡುವಂತಹ ಕಣ್ಷಿಕ ಭಾವಾವೇಶಗಳಿಂದ ಆಳಲ್ಪಡಬಾರದು. ಬದಲಾಗಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಮೂಲಕ ಒದಗಿಸಲ್ಪಡುವ ಬೈಬಲ್ ಮತ್ತು ಬೈಬಲ್ ಅಧ್ಯಯನ ಸಾಹಿತ್ಯದ ನಮ್ಮ ಕ್ರಮವಾದ ಅಭ್ಯಾಸ ಮತ್ತು ಮನನದಿಂದ ನಾವು ಪ್ರಚೋದಿಸಲ್ಪಡುತ್ತೇವೆ. (ಮತ್ತಾಯ 24:45) ನಮ್ಮ ಕ್ರೈಸ್ತ ಕ್ರಿಯೆಗಳು, ಏಳಬಹುದಾದ ಯಾವುದೇ ಸನ್ನಿವೇಶ ಯಾ ಶೋಧನೆಯ ಮೇಲೆ ಕ್ರಿಸ್ತನ ಮನಸ್ಸನ್ನು ಪಡೆದುದರ ಫಲವಾಗಿವೆ. ಆ ಸಂಬಂಧದಲ್ಲಿ ಯೆಹೋವನು ನಮ್ಮ ಮಹಾ ಶಿಕ್ಷಕನಾಗಿದ್ದಾನೆ.—ಕೀರ್ತನೆ 25:9; ಯೆಶಾಯ 54:13; 1 ಕೊರಿಂಥ 2:16.
6. ಕುಟುಂಬ ಅಭ್ಯಾಸದ ಯಾವ ಲೋಕವ್ಯಾಪಕ ಮಾದರಿಯು ನಮಗಿದೆ?
6 ಕುಟುಂಬ ಬೈಬಲ್ ಅಧ್ಯಯನವು ಪ್ರತಿಯೊಬ್ಬ ಕ್ರೈಸ್ತ ಕುಟುಂಬದ ಆತ್ಮಿಕತೆಯಲ್ಲಿ ಸಾರಭೂತವಾದ ಪಾತ್ರವನ್ನು ವಹಿಸುತ್ತದೆ. ನಿಮ್ಮ ಕುಟುಂಬ ಅಭ್ಯಾಸವನ್ನು ನೀವು ಯಾವಾಗ ನಡಿಸುತ್ತೀರಿ? ಪೂರ್ವಯೋಜಿಸದೆ ಅಥವಾ ತತ್ಕ್ಷಣದ ನಿರ್ಣಯಕ್ಕೆ ಅದನ್ನು ಬಿಟ್ಟಲ್ಲಿ, ಕುಟುಂಬ ಅಭ್ಯಾಸವು ಪ್ರಾಯಶಃ ಅತಿ ಅಪರೂಪವಾಗಿಯೇ ನಡಿಸಲ್ಪಡುವ ಸಂಭಾವ್ಯತೆ ಇದೆ. ಕುಟುಂಬ ಅಭ್ಯಾಸದಲ್ಲಿ ಒಂದುಗೂಡಿ ಕಾರ್ಯನಡಿಸಲು ಒಂದು ಕ್ರಮದ, ಗೊತ್ತುಮಾಡಲ್ಪಟ್ಟ ಕಾಲತಖ್ತೆಯ ಆವಶ್ಯಕತೆ ಇದೆ. ಆಗ, ಒಂದು ಆತ್ಮಿಕವಾದ ಕುಟುಂಬ ಒಕ್ಕೂಟದಲ್ಲಿ ಆನಂದಿಸಲು ಯಾವ ದಿನದಲ್ಲಿ ಮತ್ತು ಯಾವ ಗಳಿಗೆಯಲ್ಲಿ ಉಪಸ್ಥಿತರಿರುವಂತೆ ಅಪೇಕ್ಷಿಸಲಾಗುತ್ತದೆಂದು ಎಲ್ಲರಿಗೂ ತಿಳಿಯುತ್ತದೆ. ಲೋಕವ್ಯಾಪಕ ಬೆತೆಲ್ ಕುಟುಂಬದ 12,000 ಕ್ಕೂ ಮಿಕ್ಕಿದ ಬೆತೆಲ್ ಸದಸ್ಯರಿಗೆ ತಮ್ಮ ಕುಟುಂಬ ಅಭ್ಯಾಸವು ಸೋಮವಾರ ಸಂಜೆ ಎಂಬದಾಗಿ ಗೊತ್ತಿದೆ. ಆ ದಿನವು ಕೊನೆಗೊಳ್ಳುವಾಗ ಅವರೆಲ್ಲರೂ ಆ ಒಂದೇ ಅಭ್ಯಾಸವನ್ನು, ಫ್ಯಾಸಿಫಿಕ್ ದ್ವೀಪಗಳಲ್ಲಿ ಮತ್ತು ನ್ಯೂಜೀಲೆಂಡ್ನಲ್ಲಿ, ಅನಂತರ ಪ್ರಗತಿಪೂರ್ವಕವಾಗಿ ಆಸ್ಟ್ರೇಲಿಯ, ಜಪಾನ್, ಟೈವಾನ್, ಹಾಂಗ್ಕಾಂಗ್ನಲ್ಲಿ, ಆಮೇಲೆ ಏಷ್ಯಾ, ಆಫ್ರಿಕ, ಮತ್ತು ಯೂರೋಪಿನಲ್ಲಿ, ಮತ್ತು ಕೊನೆಗೆ ಅಮೆರಿಕದಲ್ಲಿ ಪಾಲಿಗರಾಗುತ್ತಿದ್ದಾರೆಂಬದನ್ನು ನೆನಪಿಸುವುದು ಈ ಬೆತೆಲ್ ಸ್ವಯಂ ಸೇವಕರಿಗೆ ಅದೆಷ್ಟು ಭಾವೋತ್ತೇಜಕ ಸಂಗತಿಯಾಗಿರುತ್ತದೆ. ಸಾವಿರಾರು ಕಿಲೊಮೀಟರ್ಗಳಿಂದ ಮತ್ತು ಅನೇಕಾನೇಕ ಭಾಷೆಗಳಿಂದ ಪ್ರತ್ಯೇಕಿಸಲ್ಪಟ್ಟರೂ, ಈ ಕುಟುಂಬ ಅಭ್ಯಾಸವು ಬೆತೆಲ್ ಕುಟುಂಬ ಸದಸ್ಯರಲ್ಲಿ ಒಂದುಗೂಡಿ ಕಾರ್ಯನಡಿಸುವ ಭಾವವನ್ನು ಪ್ರೇರೇಪಿಸುತ್ತದೆ. ಒಂದು ಚಿಕ್ಕ ಪ್ರಮಾಣದಲ್ಲಿ, ನೀವು ಇದೇ ಭಾವವನ್ನು ನಿಮ್ಮ ಕುಟುಂಬ ಅಭ್ಯಾಸದ ಮೂಲಕ ಬೆಳಿಸಿಕೊಳ್ಳಬಲ್ಲಿರಿ.—1 ಪೇತ್ರ 2:17; 5:9.
7. ಪೇತ್ರನಿಗನುಸಾರವಾಗಿ, ನಾವು ಸತ್ಯ ವಾಕ್ಯವನ್ನು ಹೇಗೆ ವೀಕ್ಷಿಸಬೇಕು?
7 ಅಪೊಸ್ತಲ ಪೇತ್ರನು ನಮಗೆ ಬುದ್ಧಿಹೇಳುವುದು: “ಹಸುಮಕ್ಕಳಂತೆ ಪಾರಮಾರ್ಥಿಕವಾದ ಶುದ್ಧ ಹಾಲನ್ನು ಬಯಸಿರಿ. ಅದರಿಂದ ಬೆಳೆಯುತ್ತಾ ರಕ್ಷಣೆಯನ್ನು ಹೊಂದುವಿರಿ; ಕರ್ತನು ದಯಾಳುವೆಂದು ನೀವು ಅನುಭವದಿಂದ ತಿಳಿದುಕೊಂಡಿದ್ದೀರಲ್ಲವೋ?” (1 ಪೇತ್ರ 2:2, 3) ಆ ಮಾತುಗಳಿಂದ ಎಂತಹ ಸುಂದರವಾದ ಬಿಂಬವನ್ನು ಪೇತ್ರನು ಮೇಲೇಳುವಂತೆ ಮಾಡುತ್ತಾನೆ! ಅವನು ಉಪಯೋಗಿಸಿದ ಗ್ರೀಕ್ ಪದವಾದ ಎಪಿಪೊತಿಸೇಟ್, ಲಿಂಗ್ವಿಸ್ಟಿಕ್ ಕೀ ಟು ದ ಗ್ರೀಕ್ ನ್ಯೂ ಟೆಸ್ಟಮೆಂಟ್ ಗೆ ಅನುಸಾರವಾಗಿ, “ಹಂಬಲಿಸು, ಅಪೇಕ್ಷಿಸು, ಅತಿಕಾಂಕ್ಷಿಸು” ಎಂಬರ್ಥವಿರುವ ಒಂದು ಶಬ್ದದಿಂದ ಬಂದಿದೆ. ಅದು ಅತ್ಯಾಪೇಕ್ಷೆಯನ್ನು ಸೂಚಿಸುತ್ತದೆ. ಪ್ರಾಣಿ ಮರಿಯೊಂದು ತನ್ನ ತಾಯಿಯ ಮೊಲೆಯ ತೊಟ್ಟಿಗಾಗಿ ಎಷ್ಟು ಆತುರದಿಂದ ಹುಡುಕುತ್ತದೆಯೆಂದೂ ಮತ್ತು ಮಾನವ ಶಿಶುವು ತನ್ನ ತಾಯಿಯ ಮೊಲೆಯುಣ್ಣುವಾಗ ಎಷ್ಟು ತೃಪ್ತಿಯಿಂದಿರುತ್ತದೆಂದೂ ನೀವು ಗಮನಿಸಿದ್ದೀರೋ? ಸತ್ಯ ವಾಕ್ಯಕ್ಕಾಗಿ ನಮಗೂ ಅದೇ ರೀತಿಯ ಅಪೇಕ್ಷೆಯು ಇರಬೇಕು. ಗ್ರೀಕ್ ವಿದ್ವಾಂಸ ವಿಲ್ಯಮ್ ಬಾರ್ಕ್ಲೆ ಹೇಳಿದ್ದು: “ಪ್ರಾಮಾಣಿಕ ಕ್ರೈಸ್ತನಿಗೆ, ದೇವರ ವಾಕ್ಯದ ಅಧ್ಯಯನವು ಒಂದು ಶ್ರಮೆಯಲ್ಲ, ಬದಲಿಗೆ ಒಂದು ಆನಂದವಾಗಿದೆ, ಯಾಕಂದರೆ ಅವನ ಹೃದಯವು ಯಾವುದಕ್ಕಾಗಿ ಹಂಬಲಿಸುತ್ತದೋ ಆ ಪೋಷಣೆಯನ್ನು ಅದರಲ್ಲಿ ಪಡೆಯುವುದೆಂದು ಅವನಿಗೆ ಗೊತ್ತಿದೆ.”
8. ಕುಟುಂಬ ಅಭ್ಯಾಸವನ್ನು ನಡಿಸುವಾಗ ಕುಟುಂಬ ತಲೆಯು ಯಾವ ಪಂಥಾಹ್ವಾನವನ್ನು ಎದುರಿಸುತ್ತಾನೆ?
8 ಕುಟುಂಬ ಅಭ್ಯಾಸವು ಕುಟುಂಬ ತಲೆಯ ಮೇಲೆ ಒಂದು ದೊಡ್ಡ ಜವಾಬ್ದಾರಿಯನ್ನು ಇಡುತ್ತದೆ. ಅಭ್ಯಾಸವು ಎಲ್ಲರಿಗೆ ಅಭಿರುಚಿಯುಳ್ಳದ್ದಾಗಿರುವಂತೆ ಮತ್ತು ಎಲ್ಲರೂ ಭಾಗವಹಿಸಲಾಗುವಂತೆ ಅವನು ಖಚಿತ ಮಾಡಿಕೊಳ್ಳಬೇಕು. ಅಭ್ಯಾಸವು ನಿಜವಾಗಿ ಕೇವಲ ವಯಸ್ಕರಿಗೆ ಮಾತ್ರವೇ ಎಂದು ಮಕ್ಕಳು ಭಾವಿಸಬಾರದು. ಆವರಿಸಲ್ಪಟ್ಟ ಸಮಾಚಾರದ ಮೊತ್ತಕ್ಕಿಂತ ಅಭ್ಯಾಸದ ಗುಣಮಟ್ಟವು ಹೆಚ್ಚು ಪ್ರಾಮುಖ್ಯವಾಗಿದೆ. ಬೈಬಲು ಸಜೀವವಾಗಿ ಎದ್ದೇಳುವಂತೆ ಮಾಡಿರಿ. ಯುಕ್ತವಾದಲ್ಲಿ, ಚರ್ಚಿಸಲ್ಪಡುತ್ತಿರುವ ಘಟನೆಗಳು ಸಂಭವಿಸಿದ ಸ್ಥಳವಾದ ಪಲೆಸ್ತೀನದ ಕ್ಷೇತ್ರಗಳನ್ನು ಮತ್ತು ವೈಶಿಷ್ಟ್ಯಗಳನ್ನು ನಿಮ್ಮ ಮಕ್ಕಳು ಕಣ್ಣಮುಂದೆ ತಂದುಕೊಳ್ಳುವಂತೆ ಸಹಾಯಮಾಡಿರಿ. ಎಲ್ಲರೂ ತಮ್ಮ ವ್ಯಕ್ತಿಪರ ಸಂಶೋಧನೆಯನ್ನು ಮಾಡುವಂತೆಯೂ ಮತ್ತು ಅದನ್ನು ಕುಟುಂಬದೊಂದಿಗೆ ಪಾಲಿಗರಾಗುವಂತೆಯೂ ಉತ್ತೇಜಿಸಲ್ಪಡಬೇಕು. ಈ ರೀತಿಯಲ್ಲಿ ಮಕ್ಕಳು ಸಹ ‘ಯೆಹೋವನ ಸನ್ನಿಧಿಯಲ್ಲೇ ದೊಡ್ಡವ’ ರಾಗಬಲ್ಲರು.—1 ಸಮುವೇಲ 2:20, 21.
ಸೌವಾರ್ತಿಕ ಸೇವೆಯಲ್ಲಿ ಒಂದುಗೂಡಿ ಕಾರ್ಯನಡಿಸುವುದು
9. ಸಾರುವ ಕಾರ್ಯವನ್ನು ಒಂದು ಸಂತೋಷದ ಕುಟುಂಬ ಅನುಭವವನ್ನಾಗಿ ಹೇಗೆ ಮಾಡ ಸಾಧ್ಯವಿದೆ?
9 ಯೇಸುವಂದದ್ದು: “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು.” (ಮಾರ್ಕ 13:10) ಆ ಮಾತುಗಳು ಅಂತಸ್ಸಾಕಿಯ್ಷಂತೆ ನಡೆಯುವ ಪ್ರತಿಯೊಬ್ಬ ಕ್ರೈಸ್ತನಿಗೆ—ಸೌವಾರ್ತಿಕ ಸೇವೆ ಮಾಡುವ, ದೇವರ ರಾಜ್ಯಾಡಳಿತೆಯ ಸುವಾರ್ತೆಯನ್ನು ಇತರರಿಗೆ ಹಂಚುವ ಒಂದು ನೇಮಕವನ್ನು ಕೊಡುತ್ತದೆ. ಇದನ್ನು ಕುಟುಂಬವಾಗಿ ಒಂದುಗೂಡಿ ಮಾಡುವುದು ಉತ್ತೇಜನಕ ಮತ್ತು ಹರ್ಷಭರಿತ ಅನುಭವವಾಗಿರಬಲ್ಲದು. ತಂದೆ ತಾಯಿಗಳು ತಮ್ಮ ಮಕ್ಕಳ ಸುವಾರ್ತೆ ಸಾದರ ಪಡಿಸುವಿಕೆಯಲ್ಲಿ ಹೆಮ್ಮೆಪಡುತ್ತಾರೆ. ವಯಸ್ಸು 15 ಮತ್ತು 21 ರ ನಡುವಣ ಮೂವರು ಗಂಡು ಮಕ್ಕಳಿರುವ ಒಬ್ಬ ದಂಪತಿಗಳು, ಪ್ರತಿ ಬುಧವಾರ ಶಾಲೆಯ ಅನಂತರ ಮತ್ತು ಪ್ರತಿ ಶನಿವಾರ ಬೆಳಿಗ್ಗೆ, ಸಾರ್ವಜನಿಕ ಸಾರುವ ಕಾರ್ಯದಲ್ಲಿ ಮಕ್ಕಳೊಂದಿಗೆ ಜತೆಗೂಡುವ ಹವ್ಯಾಸವು ತಮಗೆ ಯಾವಾಗಲೂ ಇತ್ತೆಂದು ಹೇಳುತ್ತಾರೆ. ತಂದೆಯು ಹೇಳಿದ್ದು: “ಪ್ರತಿ ಬಾರಿ ನಾವು ಅವರಿಗೆ ಏನನ್ನಾದರೂ ಕಲಿಸುತ್ತೇವೆ. ಮತ್ತು ಅದೊಂದು ಉತ್ತೇಜನೀಯವೂ ಆನಂದಕರವೂ ಆಗಿರುವ ಅನುಭವವಾಗಿರುವಂತೆ ಖಚಿತ ಮಾಡಿಕೊಳ್ಳುತ್ತೇವೆ.”
10. ಹೆತ್ತವರು ತಮ್ಮ ಮಕ್ಕಳಿಗೆ ಶುಶ್ರೂಷೆಯಲ್ಲಿ ಹೇಗೆ ಪ್ರಯೋಜನವಾಗಬಲ್ಲರು?
10 ಸಾರುವುದರಲ್ಲಿ ಮತ್ತು ಕಲಿಸುವುದರಲ್ಲಿ ಕುಟುಂಬದೊಂದಿಗೆ ಒಂದುಗೂಡಿ ಕಾರ್ಯನಡಿಸುವುದು ಅತ್ಯಂತ ಫಲಕಾರಿಯಾಗಿರಬಲ್ಲದು. ಮಗುವಿನ ಸರಳವಾದ ಅದರೂ ಯಥಾರ್ಥವಾದ ಸಂದೇಶಕ್ಕೆ ಕೆಲವೊಮ್ಮೆ ಜನರು ಹೆಚ್ಚು ಸಕಾರಾತ್ಮಕ ಪ್ರತಿಕ್ರಿಯೆ ತೋರಿಸುತ್ತಾರೆ. ಆಮೇಲೆ ಬೇಕಾದಲ್ಲಿ ಸಹಾಯ ಮಾಡಲು ಅಪ್ಪ ಮತ್ತು ಅಮ್ಮ ಇದ್ದಾರೆ. ತಮ್ಮ ಮಕ್ಕಳು ಪ್ರಗತಿಪರ ತರಬೇತಿಯನ್ನು ಪಡೆದು, ಹೀಗೆ “ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ” ಆಗಿರುವ ಶುಶ್ರೂಷಕರಾಗುವಂತೆ ಹೆತ್ತವರು ಖಾತರಿ ಮಾಡಿಕೊಳ್ಳ ಸಾಧ್ಯವಿದೆ. ಈ ರೀತಿಯಲ್ಲಿ ಒಂದುಗೂಡಿ ಸಾರುವುದರಿಂದ, ಶುಶ್ರೂಷೆಯಲ್ಲಿ ತಮ್ಮ ಮಕ್ಕಳ ಮನೋಭಾವ, ಪರಿಣಾಮಕಾರತೆ, ಮತ್ತು ಸ್ವದರ್ತನೆಗಳನ್ನು ಅವಲೋಕಿಸಲು ಹೆತ್ತವರಿಗೆ ಅವಕಾಶ ದೊರೆಯುತ್ತದೆ. ಒಂದು ನಿಯತ ಕ್ರಮವನ್ನು ಇಡುವ ಮೂಲಕ, ಅವರು ಮಗುವಿನ ಪ್ರಗತಿಯನ್ನು ಕಾಣುತ್ತಾರೆ ಮತ್ತು ಅವನ ಯಾ ಅವಳ ನಂಬಿಕೆಯನ್ನು ಬಲಗೊಳಿಸಲು ಹೊಂದಿಕೆಯಾದ ತರಬೇತಿ ಮತ್ತು ಪ್ರೋತ್ಸಾಹನೆ ಕೊಡುತ್ತಾರೆ. ಅದೇ ಸಮಯದಲ್ಲಿ, ತಮ್ಮ ಹೆತ್ತವರು ಶುಶ್ರೂಷೆಯಲ್ಲಿ ಒಳ್ಳೇ ಮಾದರಿಗಳೆಂಬದನ್ನು ಮಕ್ಕಳು ಗಮನಿಸುತ್ತಾರೆ. ಈ ಸಂದುಕಟ್ಟಿನ ಮತ್ತು ಹಿಂಸಾತ್ಮಕ ಕಾಲದಲ್ಲಿ, ಒಂದು ಐಕ್ಯತೆಯುಳ್ಳ ಪರಸ್ಪರ ಪರಿಗಣನೆಯ ಕುಟುಂಬವಾಗಿ ಒಂದುಗೂಡಿ ಕಾರ್ಯನಡಿಸುವುದು ಪಾತಕ-ಪ್ರಧಾನ ನೆರೆಹೊರೆಗಳಲ್ಲಿ ಸ್ವಲ್ಪ ಸುರಕ್ಷೆಯನ್ನು ಒದಗಿಸಲೂಬಹುದು.—2 ತಿಮೊಥೆಯ 2:15; ಫಿಲಿಪ್ಪಿ 3:16.
11. ಸತ್ಯಕ್ಕಾಗಿ ಮಗುವಿನ ಹುರುಪನ್ನು ಯಾವುದು ಸುಲಭವಾಗಿ ಕುಂದಿಸಬಲ್ಲದು?
11 ವಯಸ್ಕರಲ್ಲಿ ಇಬ್ಬಗೆಯ ಮಟ್ಟಗಳನ್ನು ಮಕ್ಕಳು ಸುಲಭವಾಗಿ ಕಂಡುಹಿಡಿಯುತ್ತಾರೆ. ಸತ್ಯಕ್ಕಾಗಿ ಮತ್ತು ಮನೆಮನೆಯ ಶುಶ್ರೂಷೆಗೆ ಹೆತ್ತವರು ನಿಜ ಪ್ರೀತಿಯನ್ನು ತೋರಿಸದಿದ್ದರೆ, ಮಕ್ಕಳು ಹುರುಪುಳ್ಳವರಾಗಿರುವಂತೆ ನಿರೀಕ್ಷಿಸಲಾಗದು. ಹೀಗೆ, ಮಕ್ಕಳೊಂದಿಗೆ ವಾರದ ಬೈಬಲಧ್ಯಯನ ಮಾತ್ರವೇ ಕ್ಷೇತ್ರ ಸೇವೆಯಾಗಿರುವ ಒಬ್ಬ ಸುದೃಢ ಹೆತ್ತವನು, ಅವರು ವಯಸ್ಕರಾದಂತೆ ಅಹಿತಕರವಾದ ಫಲಿತಾಂಶಗಳ ಬೆಲೆತೆತ್ತಾನು.—ಜ್ಞಾನೋಕ್ತಿ 22:6; ಎಫೆಸ 6:4.
12. ಕೆಲವು ಕುಟುಂಬಗಳು ಯೆಹೋವನಿಂದ ಹೇಗೆ ವಿಶೇಷ ಆಶೀರ್ವಾದವನ್ನು ಪಡಕೊಳ್ಳಬಲ್ಲರು?
12 “ಒಂದೇ ಮನಸ್ಸು” ಉಳ್ಳವರಾಗಿ ಇರುವುದರ ಒಂದು ಪ್ರಯೋಜನವು ಏನಂದರೆ ಕಡಿಮೆ ಪಕ್ಷ ಒಬ್ಬ ಸದಸ್ಯನಾದರೂ ಸಭೆಯಲ್ಲಿ ಪೂರ್ಣ ಸಮಯದ ಪಯನೀಯರ ಶುಶ್ರೂಷಕನಾಗಿ ಸೇವೆ ಮಾಡಶಕ್ತನಾಗುವಂತೆ ಪ್ರಾಯಶಃ ಕುಟುಂಬವು ಪರಸ್ಪರ ಸಹಕರಿಸುವುದು. ಭೂಸುತ್ತಲಿನ ಅನೇಕ ಕುಟುಂಬಗಳು ಇದನ್ನು ಮಾಡುತ್ತವೆ, ಮತ್ತು ಅವರ ಪಯನೀಯರ ಸದಸ್ಯನ ಅನುಭವಗಳಿಂದ ಮತ್ತು ಪರಿಣಾಮಕಾರತೆಯ ವೃದ್ಧಿಯಿಂದ ಎಲ್ಲರೂ ಆಶೀರ್ವಾದವನ್ನು ಪಡೆಯುತ್ತಾರೆ.—2 ಕೊರಿಂಥ 13:11; ಫಿಲಿಪ್ಪಿ 2:1-4.
ಸಮಸ್ಯೆಗಳನ್ನು ನಿರ್ವಹಿಸುವುದರಲ್ಲಿ ಒಟ್ಟಿಗೆ ಕಾರ್ಯನಡಿಸುವುದು
13, 14. (ಎ) ಒಂದು ಕುಟುಂಬದ ಹೊಂದಿಕೆಯನ್ನು ಯಾವ ಸನ್ನಿವೇಶಗಳು ಪ್ರಭಾವಿಸಬಲ್ಲವು? (ಬಿ) ಅನೇಕ ಕುಟುಂಬ ಸಮಸ್ಯೆಗಳನ್ನು ಹೇಗೆ ತಡೆಗಟ್ಟಸಾಧ್ಯವಿದೆ?
13 “ಒತ್ತರ” ಮತ್ತು “ಅಪಾಯ” ವಿರುವ ಈ ಕಷ್ಟದ ಸಮಯಗಳಲ್ಲಿ, ನಾವೆಲ್ಲರೂ ಒತ್ತಡವನ್ನು ಅನುಭವಿಸುತ್ತೇವೆ. (2 ತಿಮೊಥೆಯ 3:1, ರಿವೈಸ್ಡ್ ಸ್ಟಾಂಡರ್ಡ್ ವರ್ಷನ್; ಫಿಲಿಪ್ಸ್) ಕೆಲಸದಲ್ಲಿ, ಶಾಲೆಯಲ್ಲಿ, ಬೀದಿಗಳಲ್ಲಿ ಮತ್ತು ಮನೆಯಲ್ಲಿಯೂ ಕೂಡ ಸಮಸ್ಯೆಗಳಿರುತ್ತವೆ. ಕೆಲವರು ಅನಾರೋಗ್ಯದಿಂದ ಯಾ ದೀರ್ಘಾವಧಿಯ ಭಾವನಾತ್ಮಕ ಸಮಸ್ಯೆಗಳಿಂದ ಪೀಡಿತರಾಗಿದ್ದಾರೆ, ಇದು ಕೆಲವೊಮ್ಮೆ ಕುಟುಂಬದಲ್ಲಿ ಮನೋದ್ವೇಗ ಮತ್ತು ತಪ್ಪುತಿಳುವಳಿಕೆಗಳಿಗೆ ನಡಿಸುತ್ತದೆ. ಅಂಥ ಸನ್ನಿವೇಶಗಳನ್ನು ಹೇಗೆ ಬಗೆಹರಿಸ ಸಾಧ್ಯವಿದೆ? ಪ್ರತಿಯೊಬ್ಬನು ಸಂಸರ್ಗರಹಿತನಾಗಿ ಪರಿಣಮಿಸುವ ಮೂಲಕವೋ? ಒಂದೇ ಮನೆಯಲ್ಲಿ ಪಾಲಿಗರಾಗಿರುವಾಗಲೂ ತಮ್ಮನ್ನು ಬೇರ್ಪಡಿಸಿ ಇಡುವ ಮೂಲಕವೋ? ಇಲ್ಲ, ಬದಲಿಗೆ, ನಮ್ಮ ಚಿಂತೆಗಳನ್ನು ಪರಸ್ಪರ ಮಾತಾಡಿಕೊಂಡು, ಸಹಾಯ ಕೇಳುವ ಅಗತ್ಯ ನಮಗಿದೆ. ಮತ್ತು ಇದಕ್ಕೆ ಪ್ರೀತಿಯುಳ್ಳ ಕುಟುಂಬ ಚಕ್ರವಲ್ಲದೆ ಬೇರೆ ಉತ್ತಮ ಸ್ಥಳವು ಯಾವುದು?— 1 ಕೊರಿಂಥ 16:14; 1 ಪೇತ್ರ 4:8.
14 ಯಾವನೇ ವೈದ್ಯನಿಗೆ ತಿಳಿದಿರುವಂತೆ, ಬಂದಮೇಲೆ ಚಿಕಿತ್ಸೆ ಮಾಡುವದಕ್ಕಿಂತ ರೋಗಬಾರದಂತೆ ಮಾಡುವದೇ ಲೇಸು. ಕುಟುಂಬ ಸಮಸ್ಯೆಗಳ ವಿಷಯದಲ್ಲೂ ಇದೇ ಸತ್ಯವಾಗಿರುತ್ತದೆ. ಮನಬಿಚ್ಚಿದ ಮತ್ತು ಮುಚ್ಚುಮರೆಯಿಲ್ಲದ ಚರ್ಚೆಯು ಆಗಿಂದಾಗ್ಗೆ ಸಮಸ್ಯೆಗಳನ್ನು ಗುರುತರವಾಗುವುದರಿಂದ ತಡೆಯಬಲ್ಲದು. ಗಂಭೀರ ಸಮಸ್ಯೆಗಳು ಎದ್ದರೂ ಕೂಡ, ಒಳಗೊಂಡಿರುವ ಬೈಬಲ್ ತತ್ವಗಳನ್ನು ಕುಟುಂಬವು ಒಂದುಗೂಡಿ ಪರಿಗಣಿಸುವುದಾದರೆ, ಅವು ನಿರ್ವಹಿಸಲ್ಪಡಬಲ್ಲವು ಮತ್ತು ಬಗೆಹರಿಸಲ್ಪಡಲೂಬಹುದು. ಕೊಲೊಸ್ಸೆ 3:12-14 ರ ಪೌಲನ ಮಾತುಗಳನ್ನು ಅನ್ವಯಿಸುವ ಮೂಲಕ, ಕೆಲವೊಮ್ಮೆ ಘರ್ಷಣೆಯನ್ನು ಮೃದುವಾದ ಸಂಬಂಧಕ್ಕೆ ತಿರುಗಿಸ ಸಾಧ್ಯವಿದೆ: “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಮತ್ತೊಬ್ಬನ ಮೇಲೆ ತಪ್ಪು ಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. . . . ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”
ಮನೋರಂಜನೆಯಲ್ಲಿ ಒಂದುಗೂಡಿ ಕಾರ್ಯನಡಿಸುವುದು
15, 16. (ಎ) ಯಾವ ಗುಣವು ಕ್ರೈಸ್ತ ಕುಟುಂಬಗಳನ್ನು ಪ್ರತ್ಯೇಕಿಸಿ ತೋರಿಸಬೇಕು? (ಬಿ) ಕೆಲವು ಧರ್ಮಗಳು ಯಾವ ವಿಧದ ಜನರನ್ನು ಉತ್ಪಾದಿಸುತ್ತವೆ, ಮತ್ತು ಏಕೆ?
15 ಯೆಹೋವನು ಸಂತೋಷವುಳ್ಳ ದೇವರು, ಮತ್ತು ಸತ್ಯವು ಸಂತೋಷದ ಸಂದೇಶವಾಗಿದೆ—ಮಾನವ ಕುಲಕ್ಕಾಗಿ ನಿರೀಕ್ಷೆಯದ್ದಾಗಿದೆ. ಅಷ್ಟಲ್ಲದೆ, ಆತ್ಮದ ಫಲಗಳಲ್ಲಿ ಸಂತೋಷವು ಒಂದಾಗಿದೆ. ಈ ಸಂತೋಷವು ಯಾವುದೇ ಸ್ಪರ್ಧಾತ್ಮಕ ಕ್ರೀಡೆಯಲ್ಲಿ ವಿಜಯಿಯಾಗುವ ಆಟಗಾರನ ಕಣ್ಷಿಕ ಅತ್ಯಾನಂದಕ್ಕಿಂತ ತೀರ ಭಿನ್ನವಾಗಿರುತ್ತದೆ. ಅದು ಯೆಹೋವನೊಂದಿಗೆ ಒಂದು ಆಪ್ತ ಸಂಬಂಧವನ್ನು ಬೆಳೆಸಿದುದರ ಫಲವಾಗಿ ಹೃದಯದಲ್ಲಿ ತುಂಬಿತುಳುಕುವ ಆಳವಾದ ನೆಲೆನಿಂತ ಸಂತೃಪ್ತಿಯ ಭಾವನೆಯಾಗಿದೆ. ದೇವರೇ ಮೂಲಾಧಾರವಾಗಿರುವ ಸಂತೋಷವು ಅದಾಗಿದೆ. ಆತ್ಮಿಕ ಮೂಲ್ಯಗಳು ಮತ್ತು ಭಕ್ತಿವರ್ಧಕ ಸಂಬಂಧಗಳ ಮೇಲೆ ಆಧಾರಿತವಾದ ಸಂತೋಷವು ಅದಾಗಿದೆ.—ಗಲಾತ್ಯ 5:22; 1 ತಿಮೊಥೆಯ 1:11.
16 ಆದುದರಿಂದ, ಯೆಹೋವನ ಕ್ರೈಸ್ತ ಸಾಕ್ಷಿಗಳೋಪಾದಿ, ವಿಷಣ್ಣರೂ ಹಾಸ್ಯರಸಹೀನರೂ ಆಗಿರುವುದಕ್ಕೆ ಯಾವ ಕಾರಣವೂ ನಮಗಿಲ್ಲ. ಕೆಲವು ಧರ್ಮಗಳು ಅಂಥ ಜನರನ್ನು ಉತ್ಪಾದಿಸುತ್ತವೆ ಯಾಕಂದರೆ ಅವರ ನಂಬಿಕೆಯ ಬಗೆಯು ನಕಾರಾತ್ಮಕ ವಿಷಯಗಳಿಗೆ ಒತ್ತುಹಾಕುತ್ತದೆ. ಅವರ ಬೋಧನೆಗಳು ಒಂದು ನಿರುತ್ಸಾಹಕರ, ಸಂತೋಷರಹಿತ ಆರಾಧನೆಯಲ್ಲಿ ಫಲಿಸುತ್ತವೆ, ಅದಕ್ಕೆ ಬೈಬಲಾಧಾರವೂ ಇಲ್ಲ, ಸಮತೆಯೂ ಇಲ್ಲ. ದೇವರ ಸೇವೆಯಲ್ಲಿರುವ ಸಂತೋಷವುಳ್ಳ ಕುಟುಂಬಗಳನ್ನು ಅವು ಉತ್ಪಾದಿಸುವುದಿಲ್ಲ. ಯೇಸು ಮನೋರಂಜನೆ ಮತ್ತು ವಿರಾಮದ ಅಗತ್ಯವನ್ನು ಕಂಡುಕೊಂಡನು. ಒಂದು ಸಂದರ್ಭದಲ್ಲಿ, ದೃಷ್ಟಾಂತಕ್ಕಾಗಿ, ಅವನು ತನ್ನ ಶಿಷ್ಯರನ್ನು, “ವಿಂಗಡವಾಗಿ ಅಡವಿಗೆ ಬಂದು ಸ್ವಲ್ಪ ದಣುವಾರಿಸಿ” ಕೊಳ್ಳುವಂತೆ ಆಮಂತ್ರಿಸಿದನು.—ಮಾರ್ಕ 6:30-32; ಕೀರ್ತನೆ 126:1-3; ಯೆರೆಮೀಯ 30:18, 19.
17, 18. ಯಾವ ತಕ್ಕದಾದ ವಿಧಗಳಲ್ಲಿ ಕ್ರೈಸ್ತ ಕುಟುಂಬಗಳು ವಿರಾಮ ಪಡೆಯಬಹುದು?
17 ಅಂತೆಯೇ, ಕುಟುಂಬಗಳಿಗೆ ಮನೋರಂಜನೆಯಲ್ಲಿ ಆನಂದಿಸುವ ಅಗತ್ಯವಿದೆ. ಒಬ್ಬ ಹೆತ್ತವನು ತನ್ನ ಮಕ್ಕಳ ಕುರಿತು ಅಂದದ್ದು: “ಅನೇಕ ಆನಂದದಾಯಕ ಸಂಗತಿಗಳನ್ನು ನಾವು ಒಂದುಗೂಡಿ ನಡಿಸುತ್ತೇವೆ—ಸಮುದ್ರ ತೀರಕ್ಕೆ ಹೋಗುತ್ತೇವೆ, ಉದ್ಯಾನದಲ್ಲಿ ಚೆಂಡಾಟ ಆಡುತ್ತೇವೆ, ಗುಡ್ಡಗಳಲ್ಲಿ ವನಭೋಜನಗಳನ್ನು ಏರ್ಪಡಿಸುತ್ತೇವೆ. ಸಂದರ್ಭಾನುಸಾರ, ಶುಶ್ರೂಷೆಯಲ್ಲಿ ಒಂದುಗೂಡಿ ನಾವು ‘ಪಯನೀಯರ ದಿನ’ ವನ್ನು ಮಾಡುತ್ತೇವೆ; ಅನಂತರ ಒಂದು ವಿಶೇಷ ಊಟದೊಂದಿಗೆ ಆಚರಿಸುತ್ತೇವೆ, ಮತ್ತು ಒಬ್ಬರಿಗೊಬ್ಬರು ನಾವು ಕೊಡುಗೆಗಳನ್ನು ಕೊಡಲೂಬಹುದು.”
18 ಹೆತ್ತವರು ಪರಿಗಣಿಸಬಹುದಾದ ಇತರ ಸಲಹೆಗಳು ಮೃಗಾಲಯಕ್ಕೆ, ವಿನೋದ-ಕ್ರೀಡಾ ವನಗಳಿಗೆ, ವಸ್ತುಸಂಗ್ರಹಾಲಯಗಳಿಗೆ ಮತ್ತು ಇತರ ಮುಗ್ಧಗೊಳಿಸುವ ಸ್ಥಳಗಳಿಗೆ ಕುಟುಂಬ ತಿರುಗಾಟಗಳಾಗಿವೆ. ಕಾಡುಗಳ ಸುತ್ತ ನಡಗೆ, ಪಕ್ಷಿ-ಸಂಚಾರ ವೀಕ್ಷಣೆ, ಮತ್ತು ತೋಟಗಾರಿಕೆಯು ಆನಂದದಿಂದ ಪಾಲಿಗರಾಗಬಲ್ಲ ಚಟುವಟಿಕೆಗಳಾಗಿವೆ. ಮಕ್ಕಳು ಒಂದು ಸಂಗೀತ ಉಪಕರಣವನ್ನು ನುಡಿಸಲು ಕಲಿಯುವುದನ್ನು ಅಥವಾ ಒಂದು ಪ್ರಾಯೋಗಿಕ ಕಸಬಿನಲ್ಲಿ ಭಾಗಿಗಳಾಗುವುದನ್ನು ಸಹ ಹೆತ್ತವರು ಉತ್ತೇಜಿಸ ಸಾಧ್ಯವಿದೆ. ನಿಶ್ಚಯವಾಗಿಯೂ, ಸಮತೆಯುಳ್ಳ ಹೆತ್ತವರು ತಮ್ಮ ಮಕ್ಕಳೊಂದಿಗೆ ಆಟವಾಡಲು ಸಮಯವನ್ನು ತೆಗೆದುಕೊಳ್ಳುವರು. ಕುಟುಂಬಗಳು ಒಂದುಗೂಡಿ ಆಟವಾಡುತ್ತವಾದರೆ, ಅವು ಒಂದುಗೂಡಿ ಜೀವಿಸುವದೂ ಹೆಚ್ಚು ಸಂಭವನೀಯವಾಗಿದೆ!
19. ಯಾವ ಆಧುನಿಕ ಒಲವು ಕುಟುಂಬಕ್ಕೆ ಹಾನಿಮಾಡಬಲ್ಲದು?
19 ವಿಶ್ರಾಂತಿ ವಿನೋದಗಳ ಸಂಬಂಧದಲ್ಲಿ ಯುವ ಜನರ ಒಂದು ಆಧುನಿಕ ಒಲವು ಕುಟುಂಬದಿಂದ ಪ್ರತ್ಯೇಕವಾಗ ಬಯಸುವುದು, ಮತ್ತು ತಮ್ಮ ಸ್ವಂತ ಪ್ರವೃತ್ತಿಗಳನ್ನು ಹಿಂಬಾಲಿಸುವುದಾಗಿದೆ. ಯುವ ವ್ಯಕ್ತಿಯೊಬ್ಬನು ಒಂದು ಅಡ್ಡ ಕಸಬನ್ನು ಅಥವಾ ಅಚ್ಚುಮೆಚ್ಚಿನ ವ್ಯಕ್ತಿಪರ ಚೆಲ್ಲಾಟವನ್ನು ನಡಿಸುವುದರಲ್ಲೇನೂ ಹಾನಿಯಿಲ್ಲವಾದರೂ, ಅಂತಹ ಅಭಿರುಚಿಗಳು ಉಳಿದ ಕುಟುಂಬದಿಂದ ಒಂದು ಖಾಯಂ ಪ್ರತ್ಯೇಕತೆಯನ್ನು ಉಂಟುಮಾಡುವಂತೆ ಬಿಡುವುದು ವಿವೇಕವಾಗಿರದು. ಬದಲಿಗೆ, ಪೌಲನು ಹೇಳಿದ ತತ್ವವನ್ನು ನಾವು ಅನ್ವಯಿಸ ಬಯಸಬೇಕು: “ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.”—ಫಿಲಿಪ್ಪಿ 2:4.
20. ಸಮ್ಮೇಳನಗಳು ಮತ್ತು ಅಧಿವೇಶನಗಳು ಹೇಗೆ ಸಂತೋಷಕರ ಸಮಯಗಳಾಗಿರಬಲ್ಲವು?
20 ಅಧಿವೇಶನಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ಕುಟುಂಬಗಳು ಒಟ್ಟಾಗಿ ಕೂತುಕೊಳ್ಳುವುದನ್ನು ಕಾಣುವುದು ನಮಗೆಲ್ಲರಿಗೆ ಎಷ್ಟು ಸಂತೋಷ! ಆ ರೀತಿಯಲ್ಲಿ ಹಿರಿಯ ಮಕ್ಕಳು ಕಿರಿಯರ ಸಂಬಂಧದಲ್ಲಿ ಆಗಿಂದಾಗ್ಗೆ ಸಹಾಯ ನೀಡ ಸಾಧ್ಯವಿದೆ. ಅಂತಹ ಒಂದು ಏರ್ಪಾಡು, ಬಾಲ್ಯಾವಸ್ಥೆಯ ಕೆಲವರು ಗುಂಪಾಗಿ ಹಿಂಗಡೆಯ ಸಾಲುಗಳ ಕಡೆಗೆ ಅಡ್ಡಾಡಿ, ಆಧಿವೇಶನದ ಕಾರ್ಯಕ್ರಮದ ಕಡೆಗೆ ಕೊಂಚವೇ ಗಮನಕೊಡುವ ಪ್ರವೃತ್ತಿಯನ್ನು ಸಹ ತಡೆಯುತ್ತದೆ. ಸಮ್ಮೇಳನಕ್ಕೆ ಹೋಗುವ ದಾರಿ, ದಾರಿಯಲ್ಲಿ ನೋಡುವ ಸ್ಥಳಗಳು, ಉಳುಕೊಳ್ಳುವ ಜಾಗದ ಮುಂತಾದವುಗಳ ಕುರಿತು ಕುಟುಂಬವನ್ನು ಸಂಪರ್ಕಿಸುವಾಗ, ಸಮ್ಮೇಳನಗಳಿಗೆ ಹೋಗಿಬರುವ ಪ್ರಯಾಣವು ಸಹ ಆನಂದಕರವಾಗಿರಬಲ್ಲದು. ಯೇಸುವಿನ ದಿನಗಳಲ್ಲಿ ಕುಟುಂಬಗಳು ಒಂದುಗೂಡಿ ಯೆರೂಸಲೇಮಿಗೆ ಪ್ರಯಾಣ ಬೆಳೆಸುವುದು ಅದೆಷ್ಟು ರೋಮಾಂಚಕರ ಸಮಯವಾಗಿದ್ದಿರಬೇಕೆಂಬದನ್ನು ಕಲ್ಪಿಸಿಕೊಳ್ಳಿರಿ!—ಲೂಕ 2:41, 42.
ಒಂದುಗೂಡಿ ಕಾರ್ಯನಡಿಸುವುದರ ಆಶೀರ್ವಾದಗಳು
21. (ಎ) ಮದುವೆಯಲ್ಲಿ ಸಾಫಲ್ಯಕ್ಕಾಗಿ ನಾವು ಹೇಗೆ ಪ್ರಯಾಸಪಡ ಸಾಧ್ಯವಿದೆ? (ಬಿ) ಬಾಳುವ ಮದುವೆಗಾಗಿ ನಾಲ್ಕು ಸುಸಲಹೆಗಳು ಯಾವುವು?
21 ಯಶ್ವಸೀ ಮದುವೆಗಳನ್ನು ಮತ್ತು ಐಕ್ಯತೆಯುಳ್ಳ ಕುಟುಂಬಗಳನ್ನು ಹೊಂದುವದೆಂದೂ ಸುಲಭವಾಗಿಲ್ಲ, ಮತ್ತು ಅವು ಆಕಸ್ಮಿಕವಾಗಿ ಸಂಭವಿಸುವುದೂ ಇಲ್ಲ. ಕೆಲವರು ‘ಯಾವುದೇ ಪ್ರಯತ್ನ ಮಾಡುವುದನ್ನು ನಿಲ್ಲಿಸಿ,’ ವಿವಾಹ ವಿಚ್ಛೇದದಲ್ಲೇ ಮದುವೆಯನ್ನು ಮುಗಿಸುವುದು ಸುಲಭವೆಂದು ಕಾಣುತ್ತಾರೆ, ಮತ್ತು ಎಲ್ಲವನ್ನೂ ಪುನೊಮ್ಮೆ ಪ್ರಾರಂಭಿಸಲು ಪ್ರಯತ್ನಿಸುತ್ತಾರೆ. ಆದರೂ, ಅವೇ ಸಮಸ್ಯೆಗಳು ಎರಡನೆಯ ಯಾ ಮೂರನೆಯ ಮದುವೆಯಲ್ಲಿಯೂ ತಮ್ಮನ್ನು ಮುಂತರುತ್ತವೆ. ಎಷ್ಟೋ ಹೆಚ್ಚು ಉತ್ತಮವಾದದ್ದು ಕ್ರಿಸ್ತೀಯ ಉತ್ತರವಾಗಿದೆ: ಬೈಬಲ್ ತತ್ವಗಳಾದ ಪ್ರೀತಿ ಮತ್ತು ಗೌರವವನ್ನು ಅನ್ವಯಿಸಿಕೊಳ್ಳುವ ಮೂಲಕ ಸಾಫಲ್ಯಕ್ಕಾಗಿ ಪ್ರಯಾಸಪಡಿರಿ. ಹೊಂದಿಕೆಯುಳ್ಳ ಕುಟುಂಬಗಳು ಕೊಡು-ಕೊಳ್ಳುವ ಭಾವದ, ನಿಸ್ವಾರ್ಥಪರತೆಯ ಮೇಲೆ ಆತುಕೊಳ್ಳುತ್ತವೆ. ಮದುವೆಯು ಬಾಳುವಂತೆ ಮಾಡುವ ಒಂದು ಸರಳವಾದ ಸೂತ್ರವನ್ನು ಒಬ್ಬ ವಿವಾಹ ಸಲಹೆಗಾರನು ಮುಂತಂದನು. ಅವನು ಬರೆದದ್ದು: “ಬಹುಮಟ್ಟಿಗೆ ಎಲ್ಲಾ ಒಳ್ಳೇ ವಿವಾಹಗಳಲ್ಲಿ ಕಂಡು ಬರುವ ನಾಲ್ಕು ಸಂದಿಗ್ಧ ಘಟಕಗಳು—ಆಲಿಸುವುದಕ್ಕೆ ಇರುವ ಸಿದ್ಧಮನಸ್ಸು, ತಪ್ಪೊಪ್ಪಿಕೊಳ್ಳುವ ಸಾಮರ್ಥ್ಯ, ಹೊಂದಿಕೆಯುಳ್ಳ ಭಾವನಾತ್ಮಕ ಬೆಂಬಲ ವನ್ನು ಒದಗಿಸುವ ಗ್ರಹಣಶಕ್ತಿ, ಮತ್ತು ಪ್ರೀತಿಯಿಂದ ಸ್ಪರ್ಶಿಸುವ ಅಪೇಕ್ಷೆ.” ಆ ವಿಷಯಗಳು ಒಂದು ಮದುವೆಯನ್ನು ನಿಶ್ಚಯವಾಗಿಯೂ ಬಾಳುವಂತೆ ಸಹಾಯ ಮಾಡಬಲ್ಲವು ಯಾಕಂದರೆ ಅವು ಕೂಡ ಯೋಗ್ಯವಾದ ಬೈಬಲ್ ತತ್ವಗಳ ಮೇಲೆ ಆಧಾರಿಸಿವೆ.—1 ಕೊರಿಂಥ 13:1-8; ಎಫೆಸ 5:33; ಯಾಕೋಬ 1:19.
22. ಐಕ್ಯತೆಯುಳ್ಳ ಕುಟುಂಬವನ್ನು ಹೊಂದುವುದರ ಕೆಲವು ಪ್ರಯೋಜನಗಳು ಯಾವುವು?
22 ನಾವು ಬೈಬಲ್ ಹಿತೋಪದೇಶವನ್ನು ಪಾಲಿಸುವುದಾದರೆ, ಐಕ್ಯತೆಯುಳ್ಳ ಕುಟುಂಬಕ್ಕಾಗಿ ದೃಢವಾದ ಬುನಾದಿಯು ನಮಗಿರುವುದು, ಮತ್ತು ಐಕ್ಯತೆಯುಳ್ಳ ಕುಟುಂಬಗಳು, ಒಂದು ಐಕಮತ್ಯದ ಮತ್ತು ಆತ್ಮಿಕವಾಗಿ ಸುದೃಢವಾದ ಸಭೆಯ ಅಸ್ತಿವಾರವಾಗಿವೆ. ಹೀಗೆ, ನಾವು ಐಕ್ಯತೆಯಿಂದ ಯೆಹೋವನಿಗೆ ಹೆಚ್ಚೆಚ್ಚಾದ ಸ್ತುತಿಯನ್ನು ಅರ್ಪಿಸುವಾಗ, ಆತನಿಂದ ಹೇರಳವಾದ ಆಶೀರ್ವಾದಗಳನ್ನು ಪಡೆಯುವೆವು.
[ಅಧ್ಯಯನ ಪ್ರಶ್ನೆಗಳು]
a “ಲ್ಯಾಟಿನ್ ಫ್ಯಮೀಲಿಯ ದಿಂದ ಫ್ಯಾಮಿಲಿ (ಕುಟುಂಬ) ಶಬ್ದ ಬರುತ್ತದೆ. ಮೂಲದಲ್ಲಿ ಒಂದು ದೊಡ್ಡ ಮನೆಯ ಸೇವಕರು ಮತ್ತು ದಾಸರು, ಅನಂತರ ಯಜಮಾನ, ಯಜಮಾನಿ, ಮಕ್ಕಳು ಮತ್ತು ಸಿಬ್ಬಂದಿಯೊಂದಿಗಿನ ಮನೆ ತಾನೇ.”—ಆರಿಜಿನ್ಸ್—ಎ ಷಾರ್ಟ್ ಎಟಿಮಾಲೊಜಿಕಲ್ ಡಿಕ್ಷನರಿ ಆಫ್ ಮಾಡರ್ನ್ ಇಂಗ್ಲಿಷ್, ಎರಿಕ್ ಪಾಟ್ರಿಜ್ರಿಂದ.
ನಿಮಗೆ ನೆನಪಿದೆಯೇ?
▫ ಕುಟುಂಬಗಳು ಕಾರ್ಯಗಳನ್ನು ಒಂದುಗೂಡಿ ಮಾಡುವುದೇಕೆ ಲಾಭದಾಯಕವು?
▫ ಕ್ರಮದ ಬೈಬಲ್ ಅಧ್ಯಯನವು ಯಾಕೆ ಅತ್ಯಾವಶ್ಯಕವಾಗಿದೆ?
▫ ಹೆತ್ತವರು ತಮ್ಮ ಮಕ್ಕಳೊಂದಿಗೆ ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವುದು ಯಾಕೆ ಒಳ್ಳೆಯದು?
▫ ಕುಟುಂಬ ಚಕ್ರದೊಳಗೆ ಸಮಸ್ಯೆಗಳನ್ನು ಚರ್ಚಿಸುವುದು ಯಾಕೆ ಸಹಾಯಮಾಡುತ್ತದೆ?
▫ ಕ್ರೈಸ್ತ ಕುಟುಂಬಗಳು ನಿರುತ್ಸಾಹಕರ ಮತ್ತು ಆನಂದರಹಿತವಾಗಿರಬಾರದೇಕೆ?
[ಪುಟ 17 ರಲ್ಲಿರುವ ಚಿತ್ರ]
ನಿಮ್ಮ ಕುಟುಂಬವು ದಿನವೊಂದಕ್ಕೆ ಕಡಿಮೆಪಕ್ಷ ಒಂದು ಊಟದಲ್ಲಾದರೂ ಒಂದುಗೂಡಿ ಆನಂದಿಸುತ್ತದೋ?
[ಪುಟ 18 ರಲ್ಲಿರುವ ಚಿತ್ರ]
ಕುಟುಂಬ ತಿರುಗಾಟಗಳು ವಿರಾಮಕರವೂ ಆನಂದದಾಯಕವೂ ಆಗಿರಬೇಕು