ಯೆಹೋವನಿಗೆ ಏಕೆ ಕೊಡಬೇಕು?
ಚಾರೆಪ್ತ ಊರಿನ ಚಿಕ್ಕ ಚೀದೋನ್ಯ ಪಟ್ಟಣದ ಮೇಲೆ ಸೂರ್ಯನು ಹೊಳೆದಂತೆ, ಒಬ್ಬ ವಿಧವೆಯು ಕಡ್ಡಿಪುಳ್ಳೆಗಳನ್ನು ಒಟ್ಟುಗೂಡಿಸಲು ಬಗ್ಗಿದಳು. ಸಾರವಿಲ್ಲದ ಒಂದು ಊಟ—ಅವಳು ಮತ್ತು ಅವಳ ಎಳೆಯ ಮಗನು ತಿನ್ನಲಿದ್ದ ಬಹುಶಃ ಕೊನೆಯ ಊಟ—ವನ್ನು ತಯಾರಿಸಲಿಕ್ಕಾಗಿ ಆಕೆ ಬೆಂಕಿ ಹೊತ್ತಿಸಲು ಸೌದೆಜೋಡಿಸಬೇಕಾಗಿತ್ತು. ದೀರ್ಘಸಮಯದ ಅನಾವೃಷ್ಟಿ ಮತ್ತು ಕ್ಷಾಮದ ಸಮಯದಲ್ಲಿ ತನ್ನನ್ನು ಮತ್ತು ತನ್ನ ಹುಡುಗನನ್ನು ಜೀವಂತವಾಗಿರಿಸಿಕೊಳ್ಳಲು ಅವಳು ಹೋರಾಡಿದ್ದಳು, ಮತ್ತು ಅದೆಲ್ಲವು ಈಗ ಈ ಸಂಕಟಕರ ಅಂತ್ಯಕ್ಕೆ ಬಂದಿತ್ತು. ಅವರು ಹೊಟ್ಟೆಗಿಲ್ಲದಿದ್ದರು.
ಒಬ್ಬ ಮನುಷ್ಯನು ಸಮೀಪಿಸಿದನು. ಅವನ ಹೆಸರು ಎಲೀಯ, ಮತ್ತು ಅವನು ಯೆಹೋವನ ಒಬ್ಬ ಪ್ರವಾದಿಯಾಗಿದ್ದನೆಂದು ವಿಧವೆಯು ಬೇಗನೆ ಕಂಡಳು. ಅವಳು ಈ ದೇವರ ಕುರಿತಾಗಿ ಕೇಳಿರುವಂತೆ ತೋರುತ್ತದೆ. ತನ್ನ ದೇಶವಾದ ಚೀದೋನಿನಲ್ಲಿ ಯಾರ ಕ್ರೂರ ಮತ್ತು ವಕ್ರವಾದ ಆರಾಧನೆಯು ಚಾಲ್ತಿಯಲ್ಲಿತ್ತೊ, ಆ ಬಾಳನಿಗಿಂತ ಯೆಹೋವನು ಭಿನ್ನನಾಗಿದ್ದನು. ಆದುದರಿಂದ ಎಲೀಯನು ಅವಳಿಗೆ ಕುಡಿಯಲು ನೀರನ್ನು ಕೇಳಿದಾಗ, ಅವಳು ಸಹಾಯ ಮಾಡಲು ಆತುರಳಾಗಿದ್ದಳು. ಹಾಗೆ ಮಾಡುವುದರಿಂದ ತಾನು ಯೆಹೋವನೊಂದಿಗೆ ಅನುಗ್ರಹವನ್ನು ಗಳಿಸುವೆನೆಂದು ಪ್ರಾಯಶಃ ಅವಳಿಗನಿಸಿರಬೇಕು. (ಮತ್ತಾಯ 10:41, 42) ಆದರೆ ಆಗ ಎಲೀಯನು ಇನ್ನೂ ಹೆಚ್ಚಿನ ವಿಷಯಕ್ಕಾಗಿ—ಸ್ವಲ್ಪ ಆಹಾರವನ್ನು—ಕೇಳಿಕೊಂಡನು. ಒಂದು ಕೊನೆಯ ಊಟಕ್ಕಾಗಿ ಮಾತ್ರ ಸಾಕಾಗುವಷ್ಟು ಆಹಾರವು ತನ್ನಲ್ಲಿದೆಯೆಂದು ಅವಳು ವಿವರಿಸಿದಳು. ಆದರೂ, ಅನಾವೃಷ್ಟಿಯು ಮುಗಿಯುವ ತನಕ ಯೆಹೋವನು ಅವಳಿಗೆ ಅದ್ಭುತಕರವಾಗಿ ಆಹಾರವನ್ನು ಒದಗಿಸುವನೆಂದು ಅವಳಿಗೆ ಆಶ್ವಾಸನೆ ನೀಡುತ್ತಾ, ಎಲೀಯನು ಪಟ್ಟುಹಿಡಿದನು. ಅವಳೇನು ಮಾಡಿದಳು? ಬೈಬಲ್ ಹೇಳುವುದು: “ಆಕೆಯು ಹೋಗಿ ಅವನು [“ಎಲೀಯನು,” NW] ಹೇಳಿದಂತೆಯೇ ಮಾಡಿದಳು.” (1 ಅರಸುಗಳು 17:10-15) ಈ ಸರಳವಾದ ಮಾತುಗಳು, ಮಹಾನ್ ನಂಬಿಕೆಯ ಒಂದು ಕೃತ್ಯವನ್ನು ವರ್ಣಿಸುತ್ತವೆ, ಎಷ್ಟು ಮಹಾನ್ ಅಂದರೆ, ಬಹುಮಟ್ಟಿಗೆ ಒಂದು ಸಾವಿರ ವರ್ಷಗಳ ನಂತರ ಯೇಸು ಕ್ರಿಸ್ತನು ಆ ವಿಧವೆಯನ್ನು ಹೊಗಳಿದನು!—ಲೂಕ 4:25, 26.
ಹಾಗಿದ್ದರೂ, ಯೆಹೋವನು, ಇಷ್ಟು ಬಡವಳಾಗಿದ್ದ ಒಬ್ಬ ಸ್ತ್ರೀಯಿಂದ ಇಷ್ಟು ಹೆಚ್ಚನ್ನು ಕೇಳುವನೆಂಬುದು ವಿಲಕ್ಷಣವಾಗಿ ತೋರಬಹುದು. ತುಂಬ ಪ್ರಖ್ಯಾತನಾದ ಒಬ್ಬ ಮನುಷ್ಯನಿಂದ ಒಮ್ಮೆ ಅರ್ಪಿಸಲ್ಪಟ್ಟ ಒಂದು ಪ್ರಾರ್ಥನೆಯನ್ನು ನಾವು ಪರಿಗಣಿಸುವಾಗ ಇದು ನಿರ್ದಿಷ್ಟವಾಗಿ ಹಾಗೆ ತೋರುತ್ತದೆ. ದೇವಾಲಯದ ನಿರ್ಮಾಣದಲ್ಲಿ ಉಪಯೋಗಿಸಲಿಕ್ಕಾಗಿ, ತನ್ನ ಮಗನಾದ ಸೊಲೊಮೋನನಿಗಾಗಿ ರಾಜನಾದ ದಾವೀದನ ಕಾಣಿಕೆಗಳ ಸಂಗ್ರಹಿಸುವಿಕೆಯು ಮಹತ್ತಾದ ಉದಾರಭಾವವನ್ನು ಪ್ರಚೋದಿಸಿತು. ಆಧುನಿಕ ಪರಿಮಾಣದಲ್ಲಿ, ಕಾಣಿಕೆ ನೀಡಲ್ಪಟ್ಟ ಕೊಡುಗೆಗಳು ನೂರಾರು ಕೋಟಿ ಡಾಲರುಗಳಷ್ಟು ಬೆಲೆಯುಳ್ಳವುಗಳಾಗಿದ್ದವು! ಆದರೂ, ದಾವೀದನು ಪ್ರಾರ್ಥನೆಯಲ್ಲಿ ಯೆಹೋವನಿಗೆ ಹೇಳಿದ್ದು: “ನಾವು ಈ ಪ್ರಕಾರ ಸ್ವೇಚ್ಛೆಯಿಂದ ಕಾಣಿಕೆಗಳನ್ನು ಸಮರ್ಪಿಸಲು ಶಕ್ತಿಹೊಂದಿದ್ದಕ್ಕೆ ನಾನಾಗಲಿ ನನ್ನ ಪ್ರಜೆಗಳಾಗಲಿ ಎಷ್ಟರವರು? ಸಮಸ್ತವು ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು.” (1 ಪೂರ್ವಕಾಲವೃತ್ತಾಂತ 29:14) ದಾವೀದನು ಹೇಳಿದಂತೆ ಎಲ್ಲವೂ ಯೆಹೋವನಿಗೆ ಸೇರಿದಂಥದ್ದಾಗಿದೆ. ಆದುದರಿಂದ ಶುದ್ಧಾರಾಧನೆಯನ್ನು ಮುಂದುವರಿಸುವ ಸಲುವಾಗಿ ನಾವು ಕೊಡುವಾಗಲೆಲ್ಲಾ, ನಾವು ಯೆಹೋವನಿಗೆ, ಈಗಾಗಲೇ ಆತನದ್ದಾಗಿರುವುದನ್ನು ಸಲ್ಲಿಸುತ್ತಿದ್ದೇವಷ್ಟೆ. (ಕೀರ್ತನೆ 50:10) ಹೀಗಿರುವುದರಿಂದ, ಮೊದಲನೆಯದಾಗಿ ನಾವು ಕೊಡಬೇಕೆಂದು ಯೆಹೋವನು ಏಕೆ ಬಯಸುತ್ತಾನೆ? ಎಂಬ ಪ್ರಶ್ನೆಯು ಏಳುತ್ತದೆ.
ಸತ್ಯಾರಾಧನೆಯ ಒಂದು ಅತ್ಯಾವಶ್ಯಕ ಭಾಗ
ಆರಂಭದ ಸಮಯಗಳಿಂದಲೇ ಯೆಹೋವನು ಕೊಡುವಿಕೆಯನ್ನು ಶುದ್ಧಾರಾಧನೆಯ ಒಂದು ಅತ್ಯಾವಶ್ಯಕ ಭಾಗವನ್ನಾಗಿ ಮಾಡಿದ್ದಾನೆ ಎಂಬುದು ತೀರ ಸರಳವಾದ ಉತ್ತರವಾಗಿದೆ. ನಂಬಿಗಸ್ತ ಪುರುಷನಾದ ಹೇಬೆಲನು, ತನ್ನ ಅಮೂಲ್ಯವಾದ ಜಾನುವಾರುಗಳಲ್ಲಿ ಕೆಲವನ್ನು ಯೆಹೋವನಿಗೆ ಬಲಿಯರ್ಪಿಸಿದನು. ಮೂಲಪಿತೃಗಳಾದ ನೋಹ, ಅಬ್ರಹಾಮ, ಇಸಾಕ, ಯಾಕೋಬ, ಮತ್ತು ಯೋಬರು ತದ್ರೀತಿಯು ಅರ್ಪಣೆಗಳನ್ನು ಮಾಡಿದರು.—ಆದಿಕಾಂಡ 4:4; 8:20; 12:7; 26:25; 31:54; ಯೋಬ 1:5.
ಯೆಹೋವನಿಗೆ ಕಾಣಿಕೆಗಳ ಕೊಡುವಿಕೆಯನ್ನು ಮೋಶೆಯ ಧರ್ಮಶಾಸ್ತ್ರವು ಆಜ್ಞಾಪಿಸಿತು ಮತ್ತು ವಿಧಿಬದ್ಧಮಾಡಿತು ಸಹ. ಉದಾಹರಣೆಗಾಗಿ, ಎಲ್ಲಾ ಇಸ್ರಾಯೇಲ್ಯರು ದಶಮಾಂಶವನ್ನು ಕೊಡಲು, ಅಥವಾ ಭೂಮಿಯ ಉತ್ಪನ್ನ ಮತ್ತು ತಮ್ಮ ಜಾನುವಾರುಗಳಲ್ಲಿನ ವೃದ್ಧಿಯ ಭಾಗದಲ್ಲಿ ಹತ್ತಂಶವನ್ನು ದಾನಮಾಡಲು ಆಜ್ಞಾಪಿಸಲ್ಪಟ್ಟರು. (ಅರಣ್ಯಕಾಂಡ 18:25-28) ಇತರ ಕಾಣಿಕೆಗಳು ಇಷ್ಟು ಕಟ್ಟುನಿಟ್ಟಾಗಿ ವಿಧಿಬದ್ಧಗೊಳಿಸಲ್ಪಟ್ಟಿರಲಿಲ್ಲ. ದೃಷ್ಟಾಂತಕ್ಕಾಗಿ, ಪ್ರತಿಯೊಬ್ಬ ಇಸ್ರಾಯೇಲ್ಯನು, ತನ್ನ ಜಾನುವಾರು ಮತ್ತು ಉತ್ಪನ್ನದ ಪ್ರಥಮಫಲಗಳನ್ನು ಯೆಹೋವನಿಗೆ ಕೊಡಲು ಅವಶ್ಯಪಡಿಸಲ್ಪಟ್ಟನು. (ವಿಮೋಚನಕಾಂಡ 22:29, 30; 23:19) ಆದರೂ, ಒಬ್ಬ ವ್ಯಕ್ತಿಯು ತನ್ನ ಪ್ರಥಮಫಲಗಳಲ್ಲಿ, ಎಷ್ಟರ ಮಟ್ಟಿಗೆ ಅತ್ಯುತ್ತಮವಾದುದನ್ನು ಕೊಟ್ಟನೊ, ಅಷ್ಟರ ವರೆಗೆ ತನ್ನ ಪ್ರಥಮಫಲಗಳಲ್ಲಿ ಎಷ್ಟನ್ನು ಕೊಡಬೇಕೆಂಬುದನ್ನು ಪ್ರತಿಯೊಬ್ಬನು ತಾನೇ ನಿರ್ಣಯಿಸುವಂತೆ ಧರ್ಮಶಾಸ್ತ್ರವು ಅನುಮತಿಸಿತು. ಧರ್ಮಶಾಸ್ತ್ರವು, ಪೂರ್ತಿಯಾಗಿ ಸ್ವಯಂಪ್ರೇರಿತವಾಗಿ ಮಾಡಲ್ಪಡುತ್ತಿದ್ದ ಉಪಕಾರಸ್ತುತಿ ಮತ್ತು ಹರಕೆ ಅರ್ಪಣೆಗಳಿಗಾಗಿಯೂ ಏರ್ಪಾಡನ್ನು ಮಾಡಿತು. (ಯಾಜಕಕಾಂಡ 7:15, 16) ಯೆಹೋವನು ಅವರನ್ನು ಆಶೀರ್ವದಿಸಿದ ರೀತಿಗೆ ಅನುಪಾತದಲ್ಲಿ ಕೊಡುವಂತೆ ಯೆಹೋವನು ತನ್ನ ಜನರನ್ನು ಉತ್ತೇಜಿಸಿದನು. (ಧರ್ಮೋಪದೇಶಕಾಂಡ 16:17) ದೇವದರ್ಶನದ ಗುಡಾರ ಮತ್ತು ಅನಂತರ ದೇವಾಲಯದ ಕಟ್ಟುವಿಕೆಯಲ್ಲಿ ಆದಂತೆ, ಪ್ರತಿಯೊಬ್ಬನು ತನ್ನ ಹೃದಯವು ಅವನಿಗೆ ಕೊಡುವಂತೆ ಪ್ರಚೋದಿಸಿದ್ದನ್ನು ಕೊಟ್ಟನು. (ವಿಮೋಚನಕಾಂಡ 35:21; 1 ಪೂರ್ವಕಾಲವೃತ್ತಾಂತ 29:9) ಖಚಿತವಾಗಿಯೂ ಅಂತಹ ಸ್ವಯಂಪ್ರೇರಿತ ಕಾಣಿಕೆಗಳು ಯೆಹೋವನಿಗೆ ಅತಿ ಸಂತೋಷಗೊಳಿಸುವಂಥವುಗಳಾಗಿದ್ದವು!
“ಕ್ರಿಸ್ತನ ನಿಯಮ”ದ ಕೆಳಗೆ, ಎಲ್ಲಾ ಕೊಡುವಿಕೆಯು ಸ್ವಯಂಪ್ರೇರಿತವಾಗಿರಲಿತ್ತು. (ಗಲಾತ್ಯ 6:2; 2 ಕೊರಿಂಥ 9:7) ಕ್ರಿಸ್ತನ ಹಿಂಬಾಲಕರು ಕೊಡುವುದನ್ನು ನಿಲ್ಲಿಸಿದರು ಅಥವಾ ಕಡಿಮೆ ಕೊಟ್ಟರೆಂಬುದನ್ನು ಅದು ಅರ್ಥೈಸಲಿಲ್ಲ. ತದ್ವಿರುದ್ಧವಾಗಿ! ಯೇಸು ಮತ್ತು ಅವನ ಅಪೊಸ್ತಲರು ಇಸ್ರಾಯೇಲಿನಲ್ಲಿ ಸಾರುತ್ತಿದ್ದಂತೆ, ಹೆಂಗಸರ ಒಂದು ಗುಂಪು ಅವರನ್ನು ಹಿಂಬಾಲಿಸಿ, ತಮ್ಮ ಸ್ವಂತ ಸ್ವತ್ತುಗಳಿಂದ ಅವರ ಸೇವೆಮಾಡಿತು. (ಲೂಕ 8:1-3) ಅಪೊಸ್ತಲ ಪೌಲನು ತದ್ರೀತಿಯಲ್ಲಿ ತನ್ನ ಮಿಷನೆರಿ ಕೆಲಸವನ್ನು ಬೆಂಬಲಿಸಿದ ಕೊಡುಗೆಗಳನ್ನು ಪಡೆದನು, ಮತ್ತು ಅವನು ಪ್ರತಿಯಾಗಿ, ಅಗತ್ಯದ ಸನ್ನಿವೇಶಗಳಲ್ಲಿರುವ ಇತರರಿಗೆ ಹಣವನ್ನು ಕೊಡಲು ಕೆಲವು ಸಭೆಗಳನ್ನು ಉತ್ತೇಜಿಸಿದನು. (2 ಕೊರಿಂಥ 8:14; ಫಿಲಿಪ್ಪಿ 1:3-5) ಕಾಣಿಕೆಯಾಗಿ ನೀಡಲ್ಪಟ್ಟ ಸಾಧನ ಸಂಪತ್ತುಗಳು, ಕೊರತೆಯುಳ್ಳವರಿಗೆ ವಿತರಿಸಲ್ಪಟ್ಟಿರುವುದನ್ನು ಖಚಿತಪಡಿಸಿಕೊಳ್ಳಲು, ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಳಿಯು ಜವಾಬ್ದಾರಿಯುತ ಪುರುಷರನ್ನು ನೇಮಿಸಿತು. (ಅ. ಕೃತ್ಯಗಳು 6:2-4) ಸ್ಪಷ್ಟವಾಗಿ, ಆದಿ ಕ್ರೈಸ್ತರು ಇಂತಹ ವಿಧಗಳಲ್ಲಿ ಶುದ್ಧಾರಾಧನೆಯನ್ನು ಬೆಂಬಲಿಸುವುದನ್ನು ಒಂದು ಸುಯೋಗವಾಗಿ ಕಂಡರು.
ಇನ್ನೂ, ಯೆಹೋವನು ಕೊಡುವಿಕೆಯನ್ನು ತನ್ನ ಆರಾಧನೆಯ ಒಂದು ಭಾಗವನ್ನಾಗಿ ಏಕೆ ಮಾಡುತ್ತಾನೆಂದು ನಾವು ಕುತೂಹಲಪಡಬಹುದು. ನಾಲ್ಕು ಕಾರಣಗಳನ್ನು ಪರಿಗಣಿಸಿರಿ.
ನಾವು ಕೊಡುವ ಕಾರಣ
ಪ್ರಥಮವಾಗಿ, ಯೆಹೋವನು ಕೊಡುವಿಕೆಯನ್ನು ಸತ್ಯಾರಾಧನೆಯ ಒಂದು ಭಾಗವನ್ನಾಗಿ ಮಾಡುತ್ತಾನೆ ಯಾಕಂದರೆ, ಹಾಗೆ ಮಾಡುವುದು ನಮಗೆ ಒಳ್ಳೆಯದಾಗಿದೆ. ಅದು ದೇವರ ಒಳ್ಳೇತನದ ಕುರಿತಾದ ನಮ್ಮ ಗಣ್ಯತೆಯ ಮೇಲೆ ಒತ್ತು ಹಾಕುತ್ತದೆ. ಉದಾಹರಣೆಗಾಗಿ, ಒಂದು ಮಗುವು ಹೆತ್ತವರಲ್ಲೊಬ್ಬರಿಗಾಗಿ ಒಂದು ಕೊಡುಗೆಯನ್ನು ಖರೀದಿಸುವುದಾದರೆ ಅಥವಾ ಮಾಡುವುದಾದರೆ, ಆ ಹೆತ್ತವನು ಏಕೆ ಆಹ್ಲಾದವನ್ನು ಸೂಸುತ್ತಾನೆ? ಅನ್ಯಥಾ, ಆ ಹೆತ್ತವನು ತೃಪ್ತಿಪಡಿಸಲಾರದ ಯಾವುದೊ ತೀವ್ರ ಅಗತ್ಯವನ್ನು ಆ ಕೊಡುಗೆಯು ಪೂರೈಸುತ್ತದೊ? ಬಹುಶಃ ಇಲ್ಲ. ಬದಲಾಗಿ, ಮಗುವು ಗಣ್ಯತಾಭಾವ ಮತ್ತು ಕೊಡುವಂತಹ ಮನೋಭಾವವನ್ನು ವಿಕಸಿಸಿಕೊಳ್ಳುವುದನ್ನು ಕಾಣಲು ಹೆತ್ತವನು ಹರ್ಷಗೊಳ್ಳುತ್ತಾನೆ. ತದ್ರೀತಿಯ ಕಾರಣಗಳಿಗಾಗಿ ಯೆಹೋವನು ಕೊಡುವಂತೆ ನಮ್ಮನ್ನು ಉತ್ತೇಜಿಸುತ್ತಾನೆ ಮತ್ತು ನಾವು ಹಾಗೆ ಮಾಡುವಾಗ ಹರ್ಷಿತನಾಗುತ್ತಾನೆ. ನಮಗಾಗಿರುವ ಆತನ ಮೇರೆಯಿಲ್ಲದ ಎಲ್ಲ ದಯೆ ಮತ್ತು ಉದಾರತೆಯನ್ನು ನಾವು ನಿಜವಾಗಿಯೂ ಗಣ್ಯಮಾಡುತ್ತೇವೆಂಬುದನ್ನು ನಾವು ಆತನಿಗೆ ತೋರಿಸುವ ವಿಧ ಇದಾಗಿದೆ. ಆತನು “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳ” ದಾತನಾಗಿದ್ದಾನೆ, ಆದುದರಿಂದ ನಾವು ಆತನಿಗೆ ಉಪಕಾರ ಹೇಳಲಿಕ್ಕಾಗಿರುವ ಕಾರಣಗಳು ಎಂದೂ ಕೊನೆಗೊಳ್ಳಲಿಕ್ಕಿಲ್ಲ. (ಯಾಕೋಬ 1:17) ಎಲ್ಲಕ್ಕಿಂತಲೂ ಮಿಗಿಲಾಗಿ, ಯೆಹೋವನು ತನ್ನ ಸ್ವಂತ ಪ್ರಿಯ ಮಗನನ್ನು ಕೊಟ್ಟು, ನಾವು ಸದಾಕಾಲ ಜೀವಿಸಲು ಶಕ್ತರಾಗುವಂತೆ ಅವನನ್ನು ಸಾಯುವಂತೆ ಅನುಮತಿಸಿದನು. (ಯೋಹಾನ 3:16) ನಾವು ಎಂದಾದರೂ ಆತನಿಗೆ ಸಾಕಷ್ಟು ಉಪಕಾರ ಹೇಳಬಲ್ಲೆವೊ?
ಎರಡನೆಯದಾಗಿ, ನಾವು ಕೊಡುವ ಒಂದು ಅಭ್ಯಾಸವನ್ನು ಮಾಡಿಕೊಳ್ಳುವಲ್ಲಿ, ಅದರ ಪರಿಣಾಮವಾಗಿ ನಾವು ಯೆಹೋವನನ್ನು ಮತ್ತು ಆತನ ಮಗನಾದ ಯೇಸು ಕ್ರಿಸ್ತನನ್ನು ಒಂದು ಅತಿ ಪ್ರಾಮುಖ್ಯ ವಿಧದಲ್ಲಿ ಅನುಕರಿಸಲು ಕಲಿಯುತ್ತೇವೆ. ಯೆಹೋವನು ಸುಸಂಗತವಾಗಿ ಕೊಡುತ್ತಾ ಇದ್ದಾನೆ, ಸತತವಾಗಿ ಉದಾರಿಯಾಗಿದ್ದಾನೆ. ಬೈಬಲ್ ಹೇಳುವಂತೆ, ಆತನು ನಮ್ಮ ಮೇಲೆ “ಜೀವಶ್ವಾಸ ಮುಂತಾದದ್ದೆಲ್ಲವನ್ನೂ” ದಯಪಾಲಿಸುತ್ತಾನೆ. (ಅ. ಕೃತ್ಯಗಳು 17:25) ನಾವು ಎಳೆದುಕೊಳ್ಳುವ ಪ್ರತಿಯೊಂದು ಶ್ವಾಸ, ನಾವು ಆನಂದಿಸುವ ಆಹಾರದ ಪ್ರತಿಯೊಂದು ತುಣುಕು, ಜೀವನದಲ್ಲಿನ ಪ್ರತಿಯೊಂದು ಸಂತೋಷದ ಮತ್ತು ಸಾಧನೆಯ ಕ್ಷಣಕ್ಕಾಗಿ ನಾವು ಆತನಿಗೆ ಯೋಗ್ಯವಾಗಿಯೇ ಉಪಕಾರ ಹೇಳಬಹುದು. (ಅ. ಕೃತ್ಯಗಳು 14:17) ತನ್ನ ತಂದೆಯಂತೆಯೇ ಯೇಸು, ಕೊಡುವಂತಹ ಮನೋಭಾವವನ್ನು ತೋರಿಸಿದನು. ಅವನು ತನ್ನನ್ನು ಅಮಿತವಾಗಿ ನೀಡಿಕೊಂಡನು. ಯೇಸು ಅದ್ಭುತಕಾರ್ಯಗಳನ್ನು ನಡಿಸಿದಾಗ, ಅವನು ಸ್ವತಃ ಒಂದಿಷ್ಟು ನಷ್ಟವನ್ನು ಅನುಭವಿಸಿ ಅದನ್ನು ಮಾಡುತ್ತಿದ್ದನೆಂದು ನಿಮಗೆ ತಿಳಿದಿತ್ತೊ? ಅವನು ಅಸ್ವಸ್ಥ ಜನರನ್ನು ಗುಣಪಡಿಸಿದಾಗ, ಶಕ್ತಿಯು ‘ಅವನಿಂದ ಹೊರಟು’ಹೋದದ್ದರ ಕುರಿತಾಗಿ ಶಾಸ್ತ್ರಗಳು ನಮಗೆ ಒಂದಕ್ಕಿಂತಲೂ ಹೆಚ್ಚು ಸಲ ಹೇಳುತ್ತವೆ. (ಲೂಕ 6:19; 8:45, 46) ಯೇಸು ಎಷ್ಟು ಉದಾರಿಯಾಗಿದ್ದನೆಂದರೆ, ಅವನು ತನ್ನ ಸ್ವಂತ ಪ್ರಾಣ, ತನ್ನ ಜೀವವನ್ನು ಮರಣಕ್ಕೂ ಧಾರೆಯೆರೆದನು.—ಯೆಶಾಯ 53:12.
ಆದುದರಿಂದ ನಾವು ನಮ್ಮ ಸಮಯವನ್ನಾಗಲಿ, ನಮ್ಮ ಶಕ್ತಿಯನ್ನಾಗಲಿ ಅಥವಾ ನಮ್ಮ ಸ್ವತ್ತುಗಳನ್ನಾಗಲಿ ಕೊಡುವಾಗ, ನಾವು ಯೆಹೋವನನ್ನು ಅನುಕರಿಸುತ್ತೇವೆ ಮತ್ತು ಆತನ ಹೃದಯವನ್ನು ಸಂತೋಷಪಡಿಸುತ್ತೇವೆ. (ಜ್ಞಾನೋಕ್ತಿ 27:11; ಎಫೆಸ 5:1) ನಮಗಾಗಿ ಯೇಸು ಕ್ರಿಸ್ತನಿಂದ ಬಿಡಲ್ಪಟ್ಟಿರುವ, ಮಾನವ ನಡತೆಗಾಗಿರುವ ಪರಿಪೂರ್ಣ ಮಾದರಿಯನ್ನೂ ನಾವು ಅನುಸರಿಸುತ್ತೇವೆ.—1 ಪೇತ್ರ 2:21.
ಮೂರನೆಯದಾಗಿ, ಕೊಡುವಿಕೆಯು ನಿಜವಾದ ಮತ್ತು ಪ್ರಾಮುಖ್ಯವಾದ ಅಗತ್ಯಗಳನ್ನು ಪೂರೈಸುತ್ತದೆ. ವಾಕ್ಯವನ್ನು ಸಾರಲು ನಮ್ಮನ್ನು ಉಪಯೋಗಿಸುವ ಬದಲಿಗೆ, ಕಲ್ಲುಗಳು ಕೂಗಾಡುವಂತೆ ಆತನು ಏರ್ಪಡಿಸಲು ಸಾಧ್ಯವಿರುವಂತೆಯೇ, ನಮ್ಮ ಸಹಾಯವಿಲ್ಲದೆ ಯೆಹೋವನು ರಾಜ್ಯಾಭಿರುಚಿಗಳ ಅಗತ್ಯಗಳನ್ನು ಸುಲಭವಾಗಿ ಪೂರೈಸಸಾಧ್ಯವಿತ್ತು ನಿಜ. (ಲೂಕ 19:40) ಆದರೆ ಆತನು ಈ ಸುಯೋಗಗಳೊಂದಿಗೆ ನಮ್ಮನ್ನು ಘನತೆಗೇರಿಸಲು ಆರಿಸಿಕೊಂಡಿದ್ದಾನೆ. ಆದುದರಿಂದ ರಾಜ್ಯಾಭಿರುಚಿಗಳನ್ನು ಮುಂದುವರಿಸಲಿಕ್ಕಾಗಿ ನಾವು ನಮ್ಮ ಸಾಧನಸಂಪತ್ತುಗಳನ್ನು ಕೊಡುವಾಗ, ಈ ಲೋಕದಲ್ಲಿ ನಡಿಯುತ್ತಿರುವ ಅತಿ ಪ್ರಾಮುಖ್ಯ ಕೆಲಸದಲ್ಲಿ ನಾವು ಒಂದು ನಿಜವಾದ ಪಾತ್ರವನ್ನು ವಹಿಸುತ್ತಿದ್ದೇವೆಂದು ತಿಳಿಯುವ ಮಹಾ ತೃಪ್ತಿಯು ನಮಗಿರುತ್ತದೆ.—ಮತ್ತಾಯ 24:14.
ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸದ ಖರ್ಚನ್ನು ನಿರ್ವಹಿಸಲು ಹಣದ ಆವಶ್ಯಕತೆ ಇದೆಯೆಂಬುದು ಸ್ಫುಟ. 1995ರ ಸೇವಾ ವರ್ಷದ ಸಮಯದಲ್ಲಿ ಸೊಸೈಟಿಯು, ಕೇವಲ ವಿಶೇಷ ಪಯನೀಯರರು, ಮಿಷನೆರಿಗಳು, ಮತ್ತು ಸಂಚರಣಾ ಮೇಲ್ವಿಚಾರಕರನ್ನು ಅವರ ಕ್ಷೇತ್ರ ಸೇವಾ ನೇಮಕಗಳಲ್ಲಿ ಪರಾಮರಿಸಲು ಸುಮಾರು 6 ಕೋಟಿ ಡಾಲರುಗಳನ್ನು ಖರ್ಚುಮಾಡಿತು. ಆದಾಗಲೂ, ಲೋಕದ ಸುತ್ತಲೂ ಬ್ರಾಂಚ್ ಆಫೀಸುಗಳು ಮತ್ತು ಮುದ್ರಣ ಸೌಕರ್ಯಗಳ ನಿರ್ಮಾಣ ಮತ್ತು ಕಾರ್ಯಾಚರಣೆಯೊಂದಿಗೆ ಹೋಲಿಸುವಾಗ ಅದು ಸಂಬಂಧಿತವಾಗಿ ಒಂದು ಚಿಕ್ಕ ಖರ್ಚಾಗಿರುತ್ತದೆ. ಆದರೂ, ಅದೆಲ್ಲವೂ ಸ್ವಯಂಪ್ರೇರಿತ ಕಾಣಿಕೆಗಳಿಂದ ಸಾಧ್ಯಮಾಡಲ್ಪಡುತ್ತದೆ!
ತಾವು ಸ್ವತಃ ಅನುಕೂಲಸ್ಥರಾಗಿರದಿದ್ದಲ್ಲಿ, ಇತರರು ಹೊರೆಯನ್ನು ಹೊರುವಂತೆ ಬಿಟ್ಟುಬಿಡಬಹುದೆಂದು ಯೆಹೋವನ ಜನರು ಸಾಮಾನ್ಯವಾಗಿ ಭಾವಿಸಿಕೊಳ್ಳುವುದಿಲ್ಲ. ಅಂತಹ ಒಂದು ಮನೋಭಾವವು, ನಾವು ನಮ್ಮ ಆರಾಧನೆಯ ಈ ಅಂಶವನ್ನು ತಪ್ಪಿಸುವಂತೆ ನಮ್ಮನ್ನು ನಡಿಸಸಾಧ್ಯವಿದೆ. ಅಪೊಸ್ತಲ ಪೌಲನಿಗನುಸಾರ, ಮಕೆದೋನ್ಯದಲ್ಲಿನ ಕ್ರೈಸ್ತರು “ವಿಪರೀತವಾದ ಬಡತನ”ದಿಂದ ಕಷ್ಟಾನುಭವಿಸುತ್ತಿದ್ದರು. ಆದರೂ, ಅವರು ಕೊಡುವಿಕೆಯ ಸುಯೋಗಕ್ಕಾಗಿ ಬೇಡಿಕೊಂಡರು. ಮತ್ತು ಅವರೇನನ್ನು ಕೊಟ್ಟರೊ, ಅದು ಅವರ “ಶಕ್ತಿಯನ್ನು ಮೀರಿ”ದಂತಹದ್ದು ಆಗಿತ್ತೆಂಬುದಕ್ಕೆ ಪೌಲನು ಸಾಕ್ಷ್ಯಕೊಟ್ಟನು!—2 ಕೊರಿಂಥ 8:1-4.
ನಾಲ್ಕನೆಯದಾಗಿ, ಯೆಹೋವನು ಕೊಡುವಿಕೆಯನ್ನು ಸತ್ಯಾರಾಧನೆಯ ಒಂದು ಭಾಗವನ್ನಾಗಿ ಮಾಡಿದ್ದಾನೆ ಯಾಕಂದರೆ, ಕೊಡುವಿಕೆಯು ಸಂತೋಷಿತರಾಗಿರಲು ನಮಗೆ ಸಹಾಯ ಮಾಡುವುದು. ಸ್ವತಃ ಯೇಸು ಹೇಳಿದ್ದು: “ತೆಗೆದುಕೊಳ್ಳುವದಕ್ಕಿಂತ ಕೊಡುವದರಲ್ಲಿ ಹೆಚ್ಚಿನ ಸಂತೋಷವಿದೆ.” (ಅ. ಕೃತ್ಯಗಳು 20:35, NW) ಯೆಹೋವನು ನಮ್ಮನ್ನು ರಚಿಸಿದ್ದೇ ಆ ರೀತಿಯಲ್ಲಿ. ನಾವು ಆತನಿಗೆ ಎಷ್ಟನ್ನು ಕೊಟ್ಟರೂ, ಆತನಿಗಾಗಿ ನಮ್ಮ ಹೃದಯದಲ್ಲಿ ನಮಗನಿಸುವ ಗಣ್ಯತೆಯನ್ನು ನಾವು ಎಂದೂ ಸರಿಹೊಂದಿಸಲಾರೆವು ಎಂದು ನಮಗನಿಸಬಹುದಾಗಿರುವದಕ್ಕೆ ಇದು ಮತ್ತೊಂದು ಕಾರಣವಾಗಿದೆ. ಸಂತೋಷಕರವಾಗಿಯಾದರೊ, ನಮಗೆ ಕೊಡಲು ಸಾಧ್ಯವಿರುವುದಕ್ಕಿಂತಲೂ ಹೆಚ್ಚನ್ನು ಯೆಹೋವನು ನಮ್ಮಿಂದ ಅಪೇಕ್ಷಿಸುವುದಿಲ್ಲ. ನಮಗೆ ಸಾಧ್ಯವಿರುವಂತಹದ್ದನ್ನು ನಾವು ಆನಂದಪೂರ್ವಕವಾಗಿ ಕೊಡುವಾಗ, ಆತನು ಸಂತೋಷಿಸುತ್ತಾನೆಂದು ನಾವು ಭರವಸೆಯಿಂದಿರಬಲ್ಲೆವು!—2 ಕೊರಿಂಥ 8:12; 9:7.
ಕೊಡುವಿಕೆಯ ಆತ್ಮವನ್ನು ತೋರಿಸುವುದರಿಂದ ಆಶೀರ್ವಾದಗಳು ಫಲಿಸುತ್ತವೆ
ನಮ್ಮ ಹಿಂದಿನ ಉದಾಹರಣೆಗೆ ಹಿಂದಿರುಗಲು, ಚಾರೆಪ್ತ ಊರಿನ ವಿಧವೆಯು, ಬೇರೆ ಯಾರಾದರೂ ಎಲೀಯನ ಆಹಾರದ ಅಗತ್ಯದ ಕಾಳಜಿವಹಿಸಸಾಧ್ಯವಿತ್ತೆಂದು ಬುದ್ಧಿಗೊಪ್ಪುವಂತೆ ತರ್ಕಿಸಿದ್ದಳೆಂದು ಊಹಿಸಿಕೊಳ್ಳಿರಿ. ಆಗ ಅವಳು ಎಂತಹ ಒಂದು ಆಶೀರ್ವಾದವನ್ನು ತಪ್ಪುತ್ತಿದ್ದಳು!
ಕೊಡುವಂತಹ ಮನೋಭಾವವನ್ನು ತೋರಿಸುವವರನ್ನು ಯೆಹೋವನು ಆಶೀರ್ವದಿಸುತ್ತಾನೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. (ಜ್ಞಾನೋಕ್ತಿ 11:25) ಚಾರೆಪ್ತ ಊರಿನ ವಿಧವೆಯು, ಅವಳು ಯಾವುದನ್ನು ತನ್ನ ಕೊನೆಯ ಊಟವೆಂದು ನೆನಸಿದ್ದಳೊ ಅದನ್ನು ಕೊಟ್ಟುಬಿಟ್ಟದ್ದಕ್ಕಾಗಿ ಕಷ್ಟಾನುಭವಿಸಬೇಕಾಗಿರಲಿಲ್ಲ. ಯೆಹೋವನು ಒಂದು ಅದ್ಭುತಕಾರ್ಯದೊಂದಿಗೆ ಅವಳನ್ನು ಬಹುಮಾನಿಸಿದನು. ಎಲೀಯನು ವಾಗ್ದಾನಿಸಿದಂತೆ, ಅನಾವೃಷ್ಟಿಯು ಮುಗಿಯುವ ತನಕ, ಹಿಟ್ಟು ಮತ್ತು ಎಣ್ಣೆಯ ಅವಳ ಪಾತ್ರೆಗಳು ಬರಿದಾಗಲಿಲ್ಲ. ಆದರೆ ಅವಳು ಇನ್ನೂ ಮಹಾನ್ ಆದ ಬಹುಮಾನವನ್ನು ಪಡೆದಳು. ಅವಳ ಮಗನು ಅಸ್ವಸ್ಥನಾಗಿ ಸತ್ತುಹೋದಾಗ, ಸತ್ಯ ದೇವರ ಪುರುಷನಾದ ಎಲೀಯನು, ಅವನನ್ನು ಅವಳಿಗೆ ಉಜ್ಜೀವಿಸುವಂತೆ ಮಾಡಿದನು. ಅದು ಅವಳನ್ನು ಆತ್ಮಿಕವಾಗಿ ಎಷ್ಟು ಆತ್ಮೋನ್ನತಿಮಾಡಿರಬೇಕು!—1 ಅರಸುಗಳು 17:16-24.
ಇಂದು ನಾವು ಅದ್ಭುತಕಾರ್ಯಗಳೊಂದಿಗೆ ಆಶೀರ್ವದಿಸಲ್ಪಡುವುದನ್ನು ನಿರೀಕ್ಷಿಸುವುದಿಲ್ಲ. (1 ಕೊರಿಂಥ 13:8) ಆದರೆ ತನ್ನನ್ನು ಪೂರ್ಣ ಪ್ರಾಣದಿಂದ ಸೇವಿಸುವವರನ್ನು ತಾನು ಪೋಷಿಸುವೆನೆಂದು ಯೆಹೋವನು ನಮಗೆ ಆಶ್ವಾಸನೆ ನೀಡುತ್ತಾನೆ. (ಮತ್ತಾಯ 6:33) ಆದುದರಿಂದ ನಾವು, ಯೆಹೋವನು ನಮ್ಮ ಕಾಳಜಿ ವಹಿಸುವನೆಂಬ ಭರವಸೆಯಿಂದ ಧಾರಾಳವಾಗಿ ಕೊಡುತ್ತಾ, ಆ ವಿಧದಲ್ಲಿ ಚಾರೆಪ್ತ ಊರಿನ ವಿಧವೆಯಂತೆ ಇರಸಾಧ್ಯವಿದೆ. ತದ್ರೀತಿಯಲ್ಲಿ, ನಾವು ಮಹಾನ್ ಆತ್ಮಿಕ ಬಹುಮಾನಗಳನ್ನು ಅನುಭವಿಸಬಲ್ಲೆವು. ನಮ್ಮ ಕೊಡುವಿಕೆಯು, ಒಂದು ಆಕಸ್ಮಿಕ, ಪೂರ್ವಾಲೋಚನೆಯಿಲ್ಲದ ವ್ಯವಹಾರವಾಗಿರದೆ, ಕ್ರಮವಾದ ನಿಯತಕ್ರಮದ ಒಂದು ಭಾಗವಾಗಿರುವುದಾದರೆ, ಯೇಸು ಶಿಫಾರಸ್ಸು ಮಾಡಿದಂತೆ, ಅದು ನಮಗೆ ನಮ್ಮ ಕಣ್ಣನ್ನು ಸರಳವಾಗಿಡುವಂತೆ ಮತ್ತು ರಾಜ್ಯಾಭಿರುಚಿಗಳ ಮೇಲೆ ಕೇಂದ್ರೀಕರಿಸುವಂತೆ ಸಹಾಯ ಮಾಡುವುದು. (ಲೂಕ 11:34; 1 ಕೊರಿಂಥ 16:1, 2ನ್ನು ಹೋಲಿಸಿರಿ.) ಅದು ನಮಗೆ, ಯೆಹೋವ ಮತ್ತು ಯೇಸುವಿನ ಕಡೆಗೆ, ಅವರ ಸಹಕರ್ಮಿಗಳೋಪಾದಿ ಹೆಚ್ಚು ನಿಕಟವಾಗಿರುವಂತೆ ಭಾವಿಸಿಕೊಳ್ಳಲು ಸಹಾಯ ಮಾಡುವುದು. (1 ಕೊರಿಂಥ 3:9) ಮತ್ತು ಅದು ಈಗಾಗಲೇ ಲೋಕವ್ಯಾಪಕವಾಗಿ ಯೆಹೋವನ ಆರಾಧಕರನ್ನು ಗುರುತಿಸುವ ಉದಾರಭಾವದ, ಕೊಡುವಿಕೆಯ ಮನೋಭಾವವನ್ನು ವರ್ಧಿಸುವುದು.
[ಪುಟ 31 ರಲ್ಲಿರುವ ಚೌಕ]
ಕೆಲವರು ಕೊಡಲು ಆಯ್ಕೆಮಾಡಿಕೊಳ್ಳುವ ವಿಧಗಳು
ಲೋಕವ್ಯಾಪಕ ಕಾರ್ಯಕ್ಕೆ ಕಾಣಿಕೆಗಳು
“ಸೊಸೈಟಿಯ ಲೋಕವ್ಯಾಪಕ ಕಾರ್ಯಕ್ಕೋಸ್ಕರ ಕಾಣಿಕೆಗಳು—ಮತ್ತಾಯ 24:14” ಎಂಬುದಾಗಿ ಗುರುತುಮಾಡಲ್ಪಟ್ಟ ಕಾಣಿಕೆ ಪೆಟ್ಟಿಗೆಗಳಲ್ಲಿ ಹಾಕುವ ಒಂದು ಮೊಬಲಗನ್ನು ಅನೇಕರು ಬದಿಗಿರಿಸುತ್ತಾರೆ ಅಥವಾ ಆಯವ್ಯಯದ ಅಂದಾಜುಪಟ್ಟಿಮಾಡುತ್ತಾರೆ. ಪ್ರತಿ ತಿಂಗಳು ಸಭೆಗಳು ಈ ಮೊಬಲಗನ್ನು ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಜಾಗತಿಕ ಮುಖ್ಯಕಾರ್ಯಾಲಯಕ್ಕೆ ಅಥವಾ ಅತಿ ಸಮೀಪದ ಬ್ರಾಂಚ್ ಆಫೀಸಿಗೆ ಕಳುಹಿಸುತ್ತವೆ.
ಸ್ವಯಂ ಪ್ರೇರಿತ ಹಣದ ದಾನಗಳನ್ನು ನೇರವಾಗಿ Watch Tower Bible and Tract Society of India, H-58, Old Khandala Road, Lonavla, 410 401, Mah.,ಗೆ ಅಥವಾ ನಿಮ್ಮ ದೇಶದಲ್ಲಿ ಸೇವೆಸಲ್ಲಿಸುತ್ತಿರುವ ಸೊಸೈಟಿಯ ಆಫೀಸಿಗೆ ಕೂಡ ಕಳುಹಿಸಬಹುದು. ಆಭರಣಗಳನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಈ ದಾನಗಳೊಂದಿಗೆ, ಇದು ನೇರವಾಗಿ ಕೊಟ್ಟಿರುವ ದಾನ ಎಂದು ಹೇಳುವ ಸಂಕ್ಷಿಪ್ತ ಪತ್ರವು ಜತೆಗೂಡಿರಬೇಕು.
ಷರತ್ತು ದಾನದ ಏರ್ಪಾಡು
ದಾನಿಗೆ ಒಂದುವೇಳೆ ವೈಯಕ್ತಿಕ ಅಗತ್ಯಬಿದ್ದರೆ ಅದನ್ನು ಅವನಿಗೆ ಹಿಂದೆಕೊಡುವ ಷರತ್ತಿನೊಂದಿಗೆ, ವಾಚ್ ಟವರ್ ಸೊಸೈಟಿಗೆ ದಾನಿಯ ಮರಣದ ತನಕ ಟ್ರಸ್ಟಿನಲ್ಲಿ ಇಟ್ಟುಕೊಳ್ಳುವಂತೆ ಹಣವನ್ನು ಕೊಡಬಹುದು. ಹೆಚ್ಚಿನ ಮಾಹಿತಿಗಾಗಿ ಮೇಲೆ ನಮೂದಿಸಿದ ವಿಳಾಸದಲ್ಲಿ ಸೊಸೈಟಿಯನ್ನು ದಯವಿಟ್ಟು ಸಂಪರ್ಕಿಸಿರಿ.
ಯೋಜಿತ ಕೊಡುವಿಕೆ
ನೇರವಾದ ಹಣದ ಕೊಡುಗೆಗಳು ಮತ್ತು ಹಣದ ಷರತ್ತು ದಾನಗಳಿಗೆ ಕೂಡಿಸಿ, ಲೋಕವ್ಯಾಪಕವಾದ ರಾಜ್ಯ ಸೇವೆಯ ಪ್ರಯೋಜನಕ್ಕಾಗಿ ಕೊಡುವಿಕೆಯ ಇತರ ವಿಧಾನಗಳಿವೆ. ಇವು ಕೆಳಗಿನವುಗಳನ್ನು ಒಳಗೂಡುತ್ತವೆ:
ವಿಮೆ: ವಾಚ್ ಟವರ್ ಸೊಸೈಟಿಯನ್ನು ಒಂದು ಜೀವ ವಿಮಾ ಪಾಲಿಸಿ ಅಥವಾ ನಿವೃತ್ತಿ/ಪೆನ್‌ಷನ್ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು. ಇಂತಹ ಯಾವುದೇ ಏರ್ಪಾಡನ್ನು ಸೊಸೈಟಿಗೆ ತಿಳಿಸತಕ್ಕದ್ದು.
ಬ್ಯಾಂಕ್ ಖಾತೆಗಳು: ಬ್ಯಾಂಕ್ ಖಾತೆಗಳು, ಠೇವಣಾತಿ ಸರ್ಟಿಫಿಕೇಟುಗಳು ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ಸ್ಥಳಿಕ ಬ್ಯಾಂಕ್ ಆವಶ್ಯಕತೆಗೆ ಹೊಂದಿಕೆಯಲ್ಲಿ, ವಾಚ್ ಟವರ್ ಸೊಸೈಟಿಗೆ ಟ್ರಸ್ಟಿನಲ್ಲಿಟ್ಟುಕೊಳ್ಳುವಂತೆ ಅಥವಾ ದಾನಿಯು ಮರಣ ಹೊಂದುವಲ್ಲಿ ವಾಚ್ ಟವರ್ ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು. ಇಂತಹ ಯಾವುದೇ ಏರ್ಪಾಡುಗಳ ಕುರಿತಾಗಿ ಸೊಸೈಟಿಗೆ ತಿಳಿಸಬೇಕು.
ಸ್ಟಾಕ್‌ಗಳು ಮತ್ತು ಬಾಂಡ್‌ಗಳು: ಸ್ಟಾಕ್‌ಗಳು ಮತ್ತು ಬಾಂಡ್‌ಗಳನ್ನು ಒಂದು ನೇರವಾದ ಕೊಡುಗೆಯಾಗಿ, ಇಲ್ಲವೇ ಆದಾಯವು ದಾನಿಗೆ ಸಲ್ಲುತ್ತಾ ಇರುವಂತಹ ಒಂದು ಏರ್ಪಾಡಿನ ಕೆಳಗೆ ವಾಚ್ ಟವರ್ ಸೊಸೈಟಿಗೆ ದಾನಮಾಡಬಹುದು.
ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಒಂದು ಕೊಡುಗೆಯಾಗಿ, ಇಲ್ಲವೇ ದಾನಿಯು ಅವನ ಅಥವಾ ಅವಳ ಜೀವಮಾನಕಾಲದಲ್ಲಿ ಅಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ವಾಚ್ ಟವರ್ ಸೊಸೈಟಿಗೆ ದಾನಮಾಡಬಹುದು. ಒಬ್ಬನು ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ಕರಾರುಪತ್ರ ಮಾಡುವ ಮೊದಲು ಸೊಸೈಟಿಯನ್ನು ಸಂಪರ್ಕಿಸಬೇಕು.
ಉಯಿಲುಗಳು ಮತ್ತು ಟ್ರಸ್ಟ್‌ಗಳು: ಆಸ್ತಿ ಅಥವಾ ಹಣವನ್ನು ಕಾನೂನುಬದ್ಧವಾಗಿ ನಿರ್ವಹಿಸಿದ ಇಚ್ಛಾಪತ್ರಗಳ ಮೂಲಕ, ವಾಚ್ ಟವರ್ ಸೊಸೈಟಿಗೆ ಬಿಟ್ಟುಬಿಡಬಹುದು. ಅಥವಾ ಸೊಸೈಟಿಯನ್ನು ಒಂದು ಟ್ರಸ್ಟ್ ಕರಾರುಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಒಂದು ಧಾರ್ಮಿಕ ಸಂಸ್ಥೆಗೆ ಪ್ರಯೋಜನವನ್ನು ನೀಡುವ, ಟ್ರಸ್ಟು ನಿರ್ದಿಷ್ಟ ತೆರಿಗೆ ಸೌಲಭ್ಯಗಳನ್ನು ಒದಗಿಸಬಹುದು. ಉಯಿಲಿನ ಅಥವಾ ಟ್ರಸ್ಟಿನ ಒಪ್ಪಿಗೆ ಪತ್ರದ ನಕಲುಪ್ರತಿಯು ಸೊಸೈಟಿಗೆ ಕಳುಹಿಸಲ್ಪಡಬೇಕು.
ಈ ಯೋಜಿತ ಕೊಡುವಿಕೆಯ ಏರ್ಪಾಡುಗಳಲ್ಲಿ ಯಾವುದರಲ್ಲಾದರೂ ಆಸಕ್ತರಾಗಿರುವವರು, ಮೇಲೆ ನಮೂದಿಸಿದ ವಿಳಾಸದಲ್ಲಿ ಸೊಸೈಟಿಯನ್ನು ಅಥವಾ ನಿಮ್ಮ ದೇಶದಲ್ಲಿ ಸೇವೆಸಲ್ಲಿಸುತ್ತಿರುವ ಸೊಸೈಟಿಯ ಆಫೀಸನ್ನು ಸಂಪರ್ಕಿಸಬೇಕು. ಈ ಯಾವುದೇ ಏರ್ಪಾಡುಗಳಿಗೆ ಅನ್ವಯಿಸುವ ಪ್ರಸಕ್ತ ದಾಖಲೆ ಪತ್ರಗಳ ಒಂದು ನಕಲಿ ಪ್ರತಿಯನ್ನು ಸೊಸೈಟಿಯು ಪಡೆಯಬೇಕು.