“ಕೃತಜ್ಞತೆಯುಳ್ಳವರಾಗಿರಿ”
1 ನಮ್ಮಲ್ಲಿ ಹೆಚ್ಚಿನವರಿಗೆ ಬಾಲ್ಯಾವಸ್ಥೆಯಲ್ಲಿ, “ದಯವಿಟ್ಟು” ಎಂದು ಹೇಳಲು ಮತ್ತು ಯಾರಾದರೂ ನಮಗೆ ಸೌಜನ್ಯವನ್ನು ಅಥವಾ ದಯೆಯನ್ನು ತೋರಿಸಿದಾಗ “ಉಪಕಾರ” ಎಂದು ಹೇಳಲು ತರಬೇತು ನೀಡಲಾಗಿತ್ತು. ನಾವು ಯಾವಾಗಲೂ “ಕೃತಜ್ಞತೆಯುಳ್ಳವರಾಗಿ”ರುವಂತೆ ಪೌಲನು ನಮಗೆ ಬುದ್ಧಿವಾದವನ್ನು ನೀಡುತ್ತಾನೆ ಮತ್ತು ನಾವು ವಿಶೇಷವಾಗಿ ಯೆಹೋವನಿಗೆ ಆಭಾರಿಗಳಾಗಿರಬೇಕು. (ಕೊಲೊ. 3:15, 16) ಆದರೆ ನಾವು ನಮ್ಮ ಮಹಾ ಸೃಷ್ಟಿಕರ್ತನಿಗೆ ಕೃತಜ್ಞತೆಯನ್ನು ಹೇಗೆ ವ್ಯಕ್ತಪಡಿಸಸಾಧ್ಯವಿದೆ? ಮತ್ತು ಆತನಿಗೆ ಕೃತಜ್ಞರಾಗಿರಲು ಯಾವ ವಿಶೇಷ ಕಾರಣಗಳು ನಮಗಿವೆ?
2 ಅಪೊಸ್ತಲ ಪೌಲನು ಬರೆದುದು: “ದೇವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ; ಆತನಿಗೆ ಸ್ತೋತ್ರ [“ಉಪಕಾರ,” NW].” (1 ಕೊರಿಂ. 15:57) ಪ್ರತಿ ವರ್ಷ ಜ್ಞಾಪಕದ ಸಮಯದಲ್ಲಿ, ನಮಗೆ ನಿತ್ಯ ಜೀವದ ನಿರೀಕ್ಷೆಯನ್ನು ಕೊಡುವ ಪ್ರಾಯಶ್ಚಿತ್ತವನ್ನು ಒದಗಿಸಿ, ದೇವರು ಮತ್ತು ಕ್ರಿಸ್ತನು—ಇಬ್ಬರೂ—ತೋರಿಸಿದಂತಹ ಅಪರಿಮಿತವಾದ ಪ್ರೀತಿಯನ್ನು ನಮ್ಮ ಜ್ಞಾಪಕಕ್ಕೆ ತರಲಾಗುತ್ತದೆ. (ಯೋಹಾ. 3:16) ನಮ್ಮಲ್ಲಿ ಬಹುಮಟ್ಟಿಗೆ ಎಲ್ಲರೂ ಮರಣದಲ್ಲಿ ಪ್ರಿಯ ಜನರನ್ನು ಕಳೆದುಕೊಂಡಿರುವುದರಿಂದ, ಪುನರುತ್ಥಾನದ ಕುರಿತಾದ ಯೇಸುವಿನ ವಾಗ್ದಾನಕ್ಕಾಗಿ ನಾವೆಷ್ಟು ಕೃತಜ್ಞರಾಗಿದ್ದೇವೆ! ಎಂದಿಗೂ ಸಾಯದೇ ಈ ವ್ಯವಸ್ಥೆಯ ಅಂತ್ಯವನ್ನು ಪಾರಾಗುವ ಪ್ರತೀಕ್ಷೆಯ ಕುರಿತಾಗಿ ನಾವು ಆಲೋಚಿಸಿದಂತೆ, ನಮ್ಮ ಹೃದಯಗಳು ಕೃತಜ್ಞತೆಯಿಂದ ತುಂಬಿತುಳುಕುತ್ತವೆ. (ಯೋಹಾ. 11:25, 26) ಬರಲಿರುವ ಭೂಪ್ರಮೋದವನದಲ್ಲಿ ಯೆಹೋವನ ಕೈಯಿಂದ ನಾವು ಇನ್ನೂ ಅನುಭವಿಸಲಿರುವ ಅದ್ಭುತಕರವಾದ ಆಶೀರ್ವಾದಗಳಿಗಾಗಿ ಉಪಕಾರವನ್ನು ವ್ಯಕ್ತಪಡಿಸಲು ಮಾತುಗಳು ಸಾಕಾಗುವುದಿಲ್ಲ. (ಪ್ರಕ. 21:4) ದೇವರಿಗೆ “ಕೃತಜ್ಞತೆಯುಳ್ಳವರಾಗಿ”ರಲು ಒಬ್ಬನಿಗೆ ಇದಕ್ಕಿಂತ ಹೆಚ್ಚು ಉತ್ತಮವಾದ ಇನ್ಯಾವ ಕಾರಣಗಳಿರಸಾಧ್ಯವಿದೆ?
3 ದೇವರಿಗೆ ಉಪಕಾರವನ್ನು ವ್ಯಕ್ತಪಡಿಸುವ ವಿಧ: ಯೆಹೋವನ ಒಳ್ಳೆಯತನಕ್ಕಾಗಿ ಆತನಿಗೆ ಪ್ರಾರ್ಥನೆಯಲ್ಲಿ ನಮ್ಮ ಉಪಕಾರವನ್ನು ವ್ಯಕ್ತಪಡಿಸುವುದು ಯಾವಾಗಲೂ ಸೂಕ್ತವಾದದ್ದಾಗಿದೆ. (ಕೀರ್ತ. 136:1-3) ಇತರ ಸಕಾರಾತ್ಮಕ ವಿಧಗಳಲ್ಲೂ ನಮ್ಮ ಉಪಕಾರವನ್ನು ಪ್ರದರ್ಶಿಸಲು ನಾವು ಪ್ರಚೋದಿಸಲ್ಪಡುತ್ತೇವೆ. ಉದಾಹರಣೆಗಾಗಿ, ಆದಿತ್ಯವಾರ, ಮಾರ್ಚ್ 23ರಂದು ಕ್ರಿಸ್ತನ ಮರಣದ ಜ್ಞಾಪಕಕ್ಕಾಗಿ ನಾವು ನಿಶ್ಚಯವಾಗಿಯೂ ಹಾಜರಿರುವೆವು. ಸ್ಥಳಿಕ ಸಭೆಯ ಮತ್ತು ಲೋಕವ್ಯಾಪಕ ಕಾರ್ಯದ ಭೌತಿಕ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡಲಿಕ್ಕಾಗಿ ನಾವು ಸಂತೋಷದಿಂದ ‘ನಮ್ಮ ಆದಾಯದಿಂದ ಯೆಹೋವನನ್ನು ಸನ್ಮಾನಿಸು’ತ್ತೇವೆ. (ಜ್ಞಾನೋ. 3:9) ನಾವು ಹಿರಿಯರನ್ನು ಪೂರ್ಣವಾಗಿ ಬೆಂಬಲಿಸುತ್ತೇವೆ ಮತ್ತು ಅವರೊಂದಿಗೆ ಸಹಕರಿಸುತ್ತೇವೆ. ಹೀಗೆ ಯೆಹೋವನು ಅವರ ಮೂಲಕ ಒದಗಿಸುವ ಸಹಾಯಕ್ಕಾಗಿ ನಾವು ನಮ್ಮ ಕೃತಜ್ಞತೆಯನ್ನು ತೋರಿಸುತ್ತೇವೆ. (1 ಥೆಸ. 5:12, 13) ಪ್ರತಿ ದಿನವೂ, ನಾವು ದೇವರ ನಾಮವನ್ನು ಮಹಿಮೆಗೊಳಿಸುವ ನೆಟ್ಟನೆಯ ನಡತೆಯನ್ನು ಕಾಪಾಡಿಕೊಳ್ಳಲು ಶ್ರಮಿಸುತ್ತೇವೆ. (1 ಪೇತ್ರ 2:12) ನಮ್ಮ ಕೃತಜ್ಞತೆಯ ಈ ಎಲ್ಲಾ ಪುರಾವೆಗಳಿಂದ ಯೆಹೋವನು ಪ್ರಸನ್ನಗೊಳ್ಳುತ್ತಾನೆ.—1 ಥೆಸ. 5:18.
4 ನಮ್ಮ ಉಪಕಾರದ ಅತ್ಯುತ್ತಮ ವ್ಯಕ್ತಪಡಿಸುವಿಕೆ: ರಾಜ್ಯ ಸಾರುವಿಕೆಯ ಕೆಲಸದಲ್ಲಿ ಪೂರ್ಣ ಪ್ರಾಣದ ಪಾಲನ್ನು ಹೊಂದಿರುವುದು, ಯೆಹೋವನ ನಾಮವನ್ನು ಗೌರವಿಸುವುದು, ಪ್ರಾರ್ಥನೆಯಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು, ಮತ್ತು ಸತ್ಯವನ್ನು ನಿಷ್ಠೆಯಿಂದ ಸಮರ್ಥಿಸುವುದು—ಇವೆಲ್ಲವೂ ನಮ್ಮ ಸೃಷ್ಟಿಕರ್ತನು ನಮ್ಮ ಪರವಾಗಿ ಮಾಡಿರುವ ಎಲ್ಲ ವಿಷಯಗಳಿಗಾಗಿ ನಾವು ಕೊಡಬಹುದಾದ ಹೃತ್ಪೂರ್ವಕ ಉಪಕಾರದ ಅತ್ಯುತ್ತಮ ವ್ಯಕ್ತಪಡಿಸುವಿಕೆಗಳಲ್ಲಿ ಕೆಲವಾಗಿರುತ್ತವೆ. ‘ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಬೇಕು’ ಎಂಬ ಆತನ ಚಿತ್ತದ ಬೆಂಬಲದಲ್ಲಿ, ನಾವು ಆತನಿಗೆ ಪವಿತ್ರ ಸೇವೆಯ ಕೃತ್ಯಗಳನ್ನು ಸಲ್ಲಿಸುತ್ತಿರುವುದನ್ನು ನೋಡಲು ಯೆಹೋವನು ಹರ್ಷಿಸುತ್ತಾನೆ. (1 ತಿಮೊ. 2:3, 4) ಆದುದರಿಂದಲೇ, ಇದನ್ನು ಮಾಡಲು ಏರ್ಪಡಿಸಸಾಧ್ಯವಿರುವ ಅನೇಕ ಪ್ರಚಾರಕರು, ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಒಂದರಲ್ಲಿ ಅಥವಾ ಹೆಚ್ಚು ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರರೋಪಾದಿ ನಮೂದಿಸಿಕೊಳ್ಳಲು ಫೆಬ್ರವರಿ ತಿಂಗಳಿನ ನಮ್ಮ ರಾಜ್ಯದ ಸೇವೆಯಲ್ಲಿ ಕೊಡಲ್ಪಟ್ಟ ಕರೆಗೆ ಪ್ರತಿಕ್ರಿಯಿಸುತ್ತಿದ್ದಾರೆ. ಶುಶ್ರೂಷೆಯಲ್ಲಿ ಹೆಚ್ಚಿನ ಪ್ರಯತ್ನವನ್ನು ಹಾಕುವುದು, ದೇವರಿಗೆ ‘ಕೃತಜ್ಞತೆಯುಳ್ಳವರಾಗಿ’ದ್ದೇವೆಂಬುದನ್ನು ತೋರಿಸುವ ಒಂದು ಉತ್ತಮ ಮಾರ್ಗವಾಗಿದೆ. ಎಪ್ರಿಲ್, ಮೇ ತಿಂಗಳುಗಳಲ್ಲಿ ಪಯನೀಯರರ ಪಂಕ್ತಿಗಳಲ್ಲಿ ಸೇರಲು ನೀವು ಶಕ್ತರಾಗಿರುವಿರೊ?
5 ನಮಗೆ ಸದಾಕಾಲ ಜೀವಿಸುವ ಒಂದು ಖಚಿತವಾದ ನಿರೀಕ್ಷೆಯು ಕೊಡಲ್ಪಟ್ಟಿದೆ. ಅದು ನೆರವೇರುವುದನ್ನು ನಾವು ನೋಡುವಾಗ, ಪ್ರತಿದಿನವೂ ಯೆಹೋವನಿಗೆ ಆನಂದಕರವಾದ ಉಪಕಾರಗಳನ್ನು ಕೊಡುತ್ತಾ ಮುಂದುವರಿಯಲು ನಮಗೆ ಇನ್ನೂ ಹೆಚ್ಚಿನ ಹೇರಳವಾದ ಕಾರಣಗಳಿರುವವು.—ಕೀರ್ತ. 79:13.