ನೀವು ತಪ್ಪೊಪ್ಪಿಕೊಳ್ಳುವುದು ನಿಜವಾಗಿ ಅವಶ್ಯವೊ?
‘ನಾನು ಎಂದೂ ತಪ್ಪೊಪ್ಪಿಕೊಳ್ಳುವುದಿಲ್ಲ’ ಎಂದು ಜಾರ್ಜ್ ಬರ್ನಾರ್ಡ್ ಶಾ ಬರೆದರು. ‘ಮಾಡಿದ್ದು ಮಾಡಿಯಾಯಿತು’ ಎಂದು ಇತರರು ಹೇಳಬಹುದು.
ಸ್ವಗೌರವವನ್ನು ಕಳೆದುಕೊಳ್ಳುವ ಭಯದಿಂದಾಗಿ, ನಾವೇ ಒಂದು ತಪ್ಪನ್ನು ಒಪ್ಪಿಕೊಳ್ಳುವ ಪ್ರವೃತ್ತಿಯಿಲ್ಲದವರಾಗಿರಬಹುದು. ಸಮಸ್ಯೆಯು ಇತರ ವ್ಯಕ್ತಿಯೊಂದಿಗಿದೆ ಎಂದು ನಾವು ಬಹುಶಃ ವಿಷಯವನ್ನು ತೇಲಿಸಿಬಿಡುತ್ತೇವೆ. ಅಥವಾ ನಾವು ತಪ್ಪೊಪ್ಪಿಕೊಳ್ಳಲು ಉದ್ದೇಶಿಸಿ, ಆ ವಿಷಯವು ಅಂತಿಮವಾಗಿ ಅಲಕ್ಷಿಸಲ್ಪಟ್ಟಿದೆಯೆಂದು ನಾವು ನೆನಸುವ ತನಕ ಅದನ್ನು ಮುಂದೂಡಬಹುದು.
ಹಾಗಾದರೆ, ತಪ್ಪೊಪ್ಪಿಕೊಳ್ಳುವಿಕೆಗಳು ಆವಶ್ಯಕವಾಗಿವೆಯೊ? ಅವು ನಿಜವಾಗಿಯೂ ಏನನ್ನಾದರೂ ಪೂರೈಸಬಲ್ಲವೊ?
ತಪ್ಪೊಪ್ಪಿಕೊಳ್ಳುವಂತೆ ಪ್ರೀತಿಯು ನಮ್ಮನ್ನು ಹಂಗಿಗೊಳಪಡಿಸುತ್ತದೆ
ಯೇಸು ಕ್ರಿಸ್ತನ ನಿಜ ಹಿಂಬಾಲಕರನ್ನು ಗುರುತಿಸುವ ಒಂದು ಚಿಹ್ನೆಯು, ಸಹೋದರ ಪ್ರೀತಿಯಾಗಿದೆ. ಆತನು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) “ಒಬ್ಬರನ್ನೊಬ್ಬರು ಹೃದಯಪೂರ್ವಕವಾಗಿಯೂ . . . ಪ್ರೀತಿಸಿರಿ” ಎಂದು ಶಾಸ್ತ್ರವಚನಗಳು ಕ್ರೈಸ್ತರನ್ನು ಪ್ರಚೋದಿಸುತ್ತವೆ. (1 ಪೇತ್ರ 1:22) ಗಾಢವಾದ ಪ್ರೀತಿಯು ತಪ್ಪೊಪ್ಪಿಕೊಳ್ಳುವಂತೆ ನಮ್ಮನ್ನು ಹಂಗಿಗೊಳಪಡಿಸುತ್ತದೆ. ಏಕೆ? ಏಕೆಂದರೆ ಮಾನವ ಅಪರಿಪೂರ್ಣತೆಯು ಅನಿವಾರ್ಯವಾಗಿ ನೋವಿನ ಅನಿಸಿಕೆಗಳನ್ನು ಉಂಟುಮಾಡುತ್ತದೆ; ನೋವಿನ ಅನಿಸಿಕೆಗಳು ವಾಸಿಮಾಡಲ್ಪಡದಿದ್ದಲ್ಲಿ ಅವು ಪ್ರೀತಿಯನ್ನು ಪ್ರತಿಬಂಧಿಸುತ್ತವೆ.
ಉದಾಹರಣೆಗಾಗಿ, ಕ್ರೈಸ್ತ ಸಭೆಯಲ್ಲಿರುವ ಯಾರಾದರೊಂದಿಗಿನ ವೈಯಕ್ತಿಕ ಭಿನ್ನತೆಗಳ ಕಾರಣದಿಂದ, ನಾವು ಅವನೊಂದಿಗೆ ಮಾತನಾಡದಿರಲು ಇಷ್ಟಪಡಬಹುದು. ನಾವು ಅಸಮಾಧಾನವನ್ನು ಉಂಟುಮಾಡಿರುವುದಾದರೆ, ಒಂದು ಪ್ರೀತಿಪೂರ್ಣವಾದ ಸಂಬಂಧವು ಹೇಗೆ ಪುನಸ್ಸ್ಥಾಪಿಸಲ್ಪಡಸಾಧ್ಯವಿದೆ? ಅಧಿಕಾಂಶ ವಿದ್ಯಮಾನಗಳಲ್ಲಿ, ತಪ್ಪೊಪ್ಪಿಕೊಳ್ಳುವ ಮೂಲಕ ಹಾಗೂ ತದನಂತರ ಒಂದು ಆದರಣೀಯ ರೀತಿಯಲ್ಲಿ ಸಂಭಾಷಿಸಲು ಪ್ರಯತ್ನವನ್ನು ಮಾಡುವ ಮೂಲಕವೇ. ನಾವು ನಮ್ಮ ಜೊತೆ ವಿಶ್ವಾಸಿಗಳಿಗೆ ಪ್ರೀತಿಯನ್ನು ತೋರಿಸುವ ಹಂಗಿನಲ್ಲಿದ್ದೇವೆ, ಮತ್ತು ಅಸಮಾಧಾನವನ್ನು ಉಂಟುಮಾಡಿರುವುದಕ್ಕಾಗಿ ನಮ್ಮಿಂದ ತಪ್ಪಾಯಿತೆಂದು ನಾವು ಹೇಳುವಾಗ, ನಾವು ಆ ಸಾಲದಲ್ಲಿ ಸ್ವಲ್ಪ ಭಾಗವನ್ನು ರದ್ದುಮಾಡುತ್ತೇವೆ.—ರೋಮಾಪುರ 13:8.
ದೃಷ್ಟಾಂತಕ್ಕಾಗಿ: ಮಾರೀ ಕಾರ್ಮಿನ್ ಮತ್ತು ಪಾಕಿ ಎಂಬವರು ಇಬ್ಬರು ಕ್ರೈಸ್ತ ಸ್ತ್ರೀಯರಾಗಿದ್ದು, ಅವರಲ್ಲಿ ದೀರ್ಘ ಸಮಯದ ಗೆಳೆತನವಿತ್ತು. ಹಾಗಿದ್ದರೂ, ಮಾರೀ ಕಾರ್ಮಿನ್ ಯಾವುದೋ ಹಾನಿಕರ ಹರಟೆಮಾತನ್ನು ನಂಬಿದ್ದರಿಂದ, ಪಾಕಿಯೊಂದಿಗಿನ ಅವಳ ಗೆಳೆತನವು ಕುಂದಿಹೋಯಿತು. ವಿವರಣೆಯಿಲ್ಲದೆ, ಅವಳು ಪಾಕಿಯನ್ನು ಸಂಪೂರ್ಣವಾಗಿ ದೂರವಿರಿಸಿದಳು. ಬಹುಮಟ್ಟಿಗೆ ಒಂದು ವರ್ಷದ ಬಳಿಕ, ಆ ಹರಟೆಮಾತು ಅಸತ್ಯವಾಗಿತ್ತೆಂದು ಮಾರೀ ಕಾರ್ಮಿನ್ ತಿಳಿದುಕೊಂಡಳು. ಅವಳ ಪ್ರತಿಕ್ರಿಯೆಯು ಏನಾಗಿತ್ತು? ಪಾಕಿಯ ಬಳಿಗೆ ಹೋಗಿ, ಅಷ್ಟು ಕೆಟ್ಟದ್ದಾಗಿ ವರ್ತಿಸಿದುದಕ್ಕಾಗಿ ತನ್ನ ಗಾಢವಾದ ವಿಷಾದವನ್ನು ದೈನ್ಯದಿಂದ ವ್ಯಕ್ತಪಡಿಸುವಂತೆ ಪ್ರೀತಿಯು ಅವಳನ್ನು ಪ್ರಚೋದಿಸಿತು. ಅವರಿಬ್ಬರೂ ಬಹಳವಾಗಿ ಅಳಲಾರಂಭಿಸಿದರು, ಮತ್ತು ಅಂದಿನಿಂದ ಅವರು ದೃಢ ನಿಷ್ಠೆಯ ಗೆಳತಿಯರಾಗಿದ್ದಾರೆ.
ನಾವು ಯಾವುದೋ ತಪ್ಪನ್ನು ಮಾಡಿದ್ದೇವೆ ಎಂಬ ಅನಿಸಿಕೆ ನಮಗಾಗದಿರಬಹುದಾದರೂ, ತಪ್ಪೊಪ್ಪಿಕೊಳ್ಳುವಿಕೆಯು ಒಂದು ಅಪಾರ್ಥವನ್ನು ಬಗೆಹರಿಸಬಹುದು. ಮ್ಯಾನ್ವೆಲ್ ಜ್ಞಾಪಿಸಿಕೊಳ್ಳುವುದು: “ಅನೇಕ ವರ್ಷಗಳ ಹಿಂದೆ, ನಮ್ಮ ಆತ್ಮಿಕ ಸಹೋದರಿಯರಲ್ಲಿ ಒಬ್ಬಳು ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದಾಗ, ನಾನೂ ನನ್ನ ಹೆಂಡತಿಯೂ ಅವಳ ಮನೆಯಲ್ಲಿ ಉಳಿದೆವು. ಅವಳ ಅಸೌಖ್ಯದ ಸಮಯದಲ್ಲಿ ಅವಳಿಗೆ ಮತ್ತು ಅವಳ ಮಕ್ಕಳಿಗೆ ಸಹಾಯ ಮಾಡಲಿಕ್ಕಾಗಿ ನಮ್ಮಿಂದಾದುದೆಲ್ಲವನ್ನೂ ನಾವು ಮಾಡಿದೆವು. ಆದರೆ ಅವಳು ಮನೆಗೆ ಹಿಂದಿರುಗಿದ ಬಳಿಕ, ನಾವು ಮನೆವಾರ್ತೆಯ ವೆಚ್ಚಗಳನ್ನು ಸರಿಯಾಗಿ ನಿರ್ವಹಿಸಿರಲಿಲ್ಲವೆಂದು ಅವಳು ಒಬ್ಬ ಗೆಳೆಯನಿಗೆ ದೂರಿದಳು.
“ಆ ದೂರನ್ನು ಕೇಳಿಸಿಕೊಂಡ ನಂತರ ನಾವು ಅವಳನ್ನು ಭೇಟಿಮಾಡಿ, ಬಹುಶಃ ನಮ್ಮ ಯುವಪ್ರಾಯ ಹಾಗೂ ಅನುಭವದ ಕೊರತೆಯ ಕಾರಣದಿಂದ, ಅವಳು ವಿಷಯಗಳ ಜಾಗ್ರತೆ ವಹಿಸಿದ್ದಿರುವಂತೆ ನಾವು ಜಾಗ್ರತೆ ವಹಿಸಿರಲಿಲ್ಲವೆಂಬುದನ್ನು ವಿವರಿಸಿದೆವು. ಆ ಕೂಡಲೆ ಅವಳು, ನಮಗೆ ಅವಳು ಋಣಿಯಾಗಿದ್ದಳೆಂದೂ ನಾವು ಅವಳಿಗಾಗಿ ಮಾಡಿರುವ ಎಲ್ಲಾ ಸಂಗತಿಗಳಿಗಾಗಿ ಅವಳು ನಿಜವಾಗಿಯೂ ಕೃತಜ್ಞಳಾಗಿದ್ದಾಳೆಂದು ಹೇಳುವ ಮೂಲಕ ಪ್ರತಿಕ್ರಿಯಿಸಿದಳು. ಸಮಸ್ಯೆಯು ಪರಿಹರಿಸಲ್ಪಟ್ಟಿತು. ಅಪಾರ್ಥಗಳು ಸಂಭವಿಸುವಾಗ, ದೈನ್ಯಭಾವದಿಂದ ಕ್ಷಮೆಯನ್ನು ಕೇಳಿಕೊಳ್ಳುವುದರ ಪ್ರಮುಖತೆಯನ್ನು ಆ ಅನುಭವವು ನನಗೆ ಕಲಿಸಿತು.”
ಪ್ರೀತಿಯನ್ನು ತೋರಿಸಿದುದಕ್ಕಾಗಿಯೂ ‘ಸಮಾಧಾನಕ್ಕೆ ನಡಿಸುವ ವಿಷಯಗಳನ್ನು ಬೆನ್ನಟ್ಟುತ್ತಿರುವುದಕ್ಕಾಗಿ’ (NW)ಯೂ, ಯೆಹೋವನು ಈ ದಂಪತಿಗಳನ್ನು ಆಶೀರ್ವದಿಸಿದನು. (ರೋಮಾಪುರ 14:19) ಪ್ರೀತಿಯು, ಇತರರ ಅನಿಸಿಕೆಗಳ ಅರಿವನ್ನೂ ಒಳಗೊಳ್ಳುತ್ತದೆ. “ಸಹಭಾವನೆ” (NW)ಯನ್ನು ತೋರಿಸುವಂತೆ ಪೇತ್ರನು ನಮಗೆ ಸಲಹೆ ನೀಡುತ್ತಾನೆ. (1 ಪೇತ್ರ 3:8) ನಮ್ಮಲ್ಲಿ ಸಹಭಾವನೆಯಿರುವುದಾದರೆ, ಒಂದು ಅವಿಚಾರದ ನುಡಿ ಅಥವಾ ಕೃತ್ಯದಿಂದ ನಾವು ಉಂಟುಮಾಡಿರುವ ನೋವನ್ನು ನಾವು ವಿವೇಚಿಸುವುದು ಹೆಚ್ಚು ಸಂಭವನೀಯ; ಇದರಿಂದಾಗಿ ನಾವು ತಪ್ಪೊಪ್ಪಿಕೊಳ್ಳುವಂತೆ ಪ್ರಚೋದಿಸಲ್ಪಡುವೆವು.
‘ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾ ಕಟ್ಟಿಕೊಳ್ಳಿರಿ’
ನಂಬಿಗಸ್ತ ಕ್ರೈಸ್ತ ಹಿರಿಯರು ಸಹ ಸಾಂದರ್ಭಿಕವಾಗಿ ಒಂದು ಉದ್ರೇಕದ ಮಾತುಕತೆಯನ್ನು ನಡಸಬಹುದು. (ಅ. ಕೃತ್ಯಗಳು 15:37-39ನ್ನು ಹೋಲಿಸಿರಿ.) ಇವು ತಪ್ಪೊಪ್ಪಿಕೊಳ್ಳುವಿಕೆಯು ಬಹಳ ಪ್ರಯೋಜನಕರವಾಗಿರುವಂತಹ ಸಂದರ್ಭಗಳಾಗಿವೆ. ಆದರೆ ತಪ್ಪೊಪ್ಪಿಕೊಳ್ಳುವಿಕೆಯನ್ನು ಕಷ್ಟಕರವಾದದ್ದಾಗಿ ಕಂಡುಕೊಳ್ಳುವ ಒಬ್ಬ ಹಿರಿಯನಿಗೆ ಅಥವಾ ಇತರ ಯಾವುದೇ ಕ್ರೈಸ್ತನಿಗೆ ಯಾವುದು ಸಹಾಯ ಮಾಡುವುದು?
ದೈನ್ಯಭಾವವು ಕೀಲಿ ಕೈಯಾಗಿದೆ. ಅಪೊಸ್ತಲ ಪೇತ್ರನು ಸಲಹೆ ನೀಡಿದ್ದು: “ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ.” (1 ಪೇತ್ರ 5:5) ಹೆಚ್ಚಿನ ವಾಗ್ವಾದಗಳಲ್ಲಿ ಇಬ್ಬರೂ ವ್ಯಕ್ತಿಗಳು ದೋಷಾರೋಪಕ್ಕೆ ಹೊಣೆಯಾಗುತ್ತಾರೆಂಬುದು ಸತ್ಯವಾಗಿದೆಯಾದರೂ, ದೀನ ಕ್ರೈಸ್ತನು ತನ್ನ ಸ್ವಂತ ಕುಂದುಗಳ ಕುರಿತಾಗಿ ಚಿಂತಿಸುತ್ತಾನೆ ಹಾಗೂ ಅವುಗಳನ್ನು ಒಪ್ಪಿಕೊಳ್ಳಲು ಸಿದ್ಧಮನಸ್ಕನಾಗಿರುತ್ತಾನೆ.—ಜ್ಞಾನೋಕ್ತಿ 6:1-5.
ಒಂದು ತಪ್ಪೊಪ್ಪಿಕೊಳ್ಳುವಿಕೆಯನ್ನು ಸ್ವೀಕರಿಸುತ್ತಿರುವ ವ್ಯಕ್ತಿಯು ಅದನ್ನು ದೀನ ರೀತಿಯಲ್ಲಿ ಅಂಗೀಕರಿಸಬೇಕಾಗಿದೆ. ಒಂದು ದೃಷ್ಟಾಂತವನ್ನು ಉಪಯೋಗಿಸುತ್ತಾ, ಸಂವಾದಿಸುವ ಅಗತ್ಯವಿರುವ ಇಬ್ಬರು ಪುರುಷರು, ಎರಡು ವಿಭಿನ್ನ ಪರ್ವತಗಳ ತುದಿಯ ಮೇಲೆ ನಿಂತಿದ್ದಾರೆಂದಿಟ್ಟುಕೊಳ್ಳೋಣ. ಅವರಿಬ್ಬರನ್ನೂ ವಿಭಾಗಿಸುವ ದೊಡ್ಡ ಬಿರುಕಿನ ಆಚೆ ಕಡೆ, ಸಂಭಾಷಣೆಮಾಡುವುದು ಅಸಾಧ್ಯವಾಗಿ ಪರಿಣಮಿಸುತ್ತದೆ. ಆದರೂ, ಅವರಲ್ಲಿ ಒಬ್ಬನು ಕೆಳಗಿರುವ ಕಣಿವೆಗೆ ಇಳಿದುಬರುವಾಗ ಮತ್ತು ಇನ್ನೊಬ್ಬನು ಅವನ ಮಾದರಿಯನ್ನು ಅನುಸರಿಸುವಾಗ, ಅವರು ಸುಲಭವಾಗಿ ಸಂಭಾಷಿಸಬಲ್ಲರು. ತದ್ರೀತಿಯಲ್ಲಿ, ಇಬ್ಬರು ಕ್ರೈಸ್ತರು ತಮ್ಮ ನಡುವೆ ಇರುವ ಭಿನ್ನತೆಯನ್ನು ಬಗೆಹರಿಸುವ ಅಗತ್ಯವಿರುವಲ್ಲಿ, ಸಾಂಕೇತಿಕವಾಗಿ ಮಾತಾಡುವುದಾದರೆ, ಪ್ರತಿಯೊಬ್ಬನೂ ಮತ್ತೊಬ್ಬನನ್ನು ದೈನ್ಯಭಾವದಿಂದ ಕಣಿವೆಯಲ್ಲಿ ಸಂಧಿಸಲಿ, ಹಾಗೂ ಸೂಕ್ತವಾದ ತಪ್ಪೊಪ್ಪಿಕೊಳ್ಳುವಿಕೆಗಳನ್ನು ಮಾಡಲಿ.—1 ಪೇತ್ರ 5:6.
ವಿವಾಹದಲ್ಲಿ ತಪ್ಪೊಪ್ಪಿಕೊಳ್ಳುವಿಕೆಗಳು ಬಹಳಷ್ಟನ್ನು ಅರ್ಥೈಸುತ್ತವೆ
ಇಬ್ಬರು ಅಪರಿಪೂರ್ಣ ಜನರ ಒಂದು ವಿವಾಹವು, ತಪ್ಪೊಪ್ಪಿಕೊಳ್ಳಲು ಅನಿವಾರ್ಯವಾಗಿ ಸಂದರ್ಭಗಳನ್ನು ಒದಗಿಸುತ್ತದೆ. ಮತ್ತು ಗಂಡನೂ ಹೆಂಡತಿಯೂ—ಇಬ್ಬರಿಗೂ ಸಹಭಾವನೆಯಿರುವಲ್ಲಿ, ಅವರು ಒಂದುವೇಳೆ ದಯಾದಾಕ್ಷಿಣ್ಯರಹಿತವಾಗಿ ಮಾತಾಡುವುದಾದರೆ ಅಥವಾ ಕ್ರಿಯೆಗೈಯುವುದಾದರೆ, ಇದು ಅವರನ್ನು ತಪ್ಪೊಪ್ಪಿಕೊಳ್ಳುವಂತೆ ಪ್ರಚೋದಿಸುವುದು. ಜ್ಞಾನೋಕ್ತಿ 12:18 (NW) ಹೀಗೆ ಸೂಚಿಸುತ್ತದೆ: “ಒಂದು ಕತ್ತಿಯ ತಿವಿತಗಳೋಪಾದಿ ನಿರ್ಲಕ್ಷ್ಯದಿಂದ ಮಾತಾಡುವವರಿದ್ದಾರೆ, ಆದರೆ ವಿವೇಕಿಗಳ ಮಾತೇ ವಾಸಿಮಾಡುವಿಕೆಯಾಗಿದೆ.” ‘ನಿರ್ಲಕ್ಷ್ಯದ ತಿವಿತಗಳ’ನ್ನು ಇಲ್ಲದಂತೆ ಮಾಡಸಾಧ್ಯವಿಲ್ಲ, ಆದರೆ ಯಥಾರ್ಥವಾದ ಒಂದು ತಪ್ಪೊಪ್ಪಿಕೊಳ್ಳುವಿಕೆಯ ಮೂಲಕ ಅವುಗಳನ್ನು ವಾಸಿಮಾಡಸಾಧ್ಯವಿದೆ. ಇದು ಸತತವಾದ ಅರಿವು ಹಾಗೂ ಪ್ರಯತ್ನವನ್ನು ಅಗತ್ಯಪಡಿಸುತ್ತದೆಂಬುದು ನಿಶ್ಚಯ.
ತನ್ನ ವಿವಾಹದ ಕುರಿತಾಗಿ ಮಾತಾಡುತ್ತಾ, ಸೂಸನ್a ಹೀಗೆ ಹೇಳುತ್ತಾಳೆ: “ಜ್ಯಾಕ್* ಮತ್ತು ನಾನು 24 ವರ್ಷಗಳಿಂದ ವಿವಾಹಿತರಾಗಿದ್ದೇವೆ, ಆದರೂ ನಾವು ಇನ್ನೂ ಒಬ್ಬರಿನ್ನೊಬ್ಬರ ಕುರಿತು ಹೊಸ ವಿಷಯಗಳನ್ನು ಕಲಿಯುತ್ತಿದ್ದೇವೆ. ದುಃಖಕರವಾಗಿಯೇ, ಸ್ವಲ್ಪ ಸಮಯದ ಹಿಂದೆ, ನಾವು ಪ್ರತ್ಯೇಕಿತರಾದೆವು ಹಾಗೂ ಕೆಲವು ವಾರಗಳ ವರೆಗೆ ದೂರವಾಗಿ ಜೀವಿಸಿದೆವು. ಹಾಗಿದ್ದರೂ, ನಾವು ಹಿರಿಯರಿಂದ ಕೊಡಲ್ಪಟ್ಟ ಶಾಸ್ತ್ರೀಯ ಸಲಹೆಗೆ ಕಿವಿಗೊಟ್ಟು, ಪುನಃ ಒಂದುಗೂಡಿದೆವು. ನಮಗೆ ಬಹಳ ಭಿನ್ನವಾದ ವ್ಯಕ್ತಿತ್ವಗಳಿರುವುದರಿಂದ, ಭಿನ್ನಾಭಿಪ್ರಾಯಗಳು ಸಂಭವಿಸುವುದು ಸಂಭವನೀಯವೆಂಬುದನ್ನು ಈಗ ನಾವು ಗ್ರಹಿಸುತ್ತೇವೆ. ಇದು ಸಂಭವಿಸುವಾಗ, ನಾವು ಆ ಕೂಡಲೆ ತಪ್ಪೊಪ್ಪಿಕೊಳ್ಳುತ್ತೇವೆ ಹಾಗೂ ಇನ್ನೊಬ್ಬ ವ್ಯಕ್ತಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ನಿಜವಾಗಿಯೂ ಬಹಳಷ್ಟು ಪ್ರಯತ್ನಿಸುತ್ತೇವೆ. ನಮ್ಮ ವಿವಾಹವು ಗಮನಾರ್ಹವಾಗಿ ಉತ್ತಮಗೊಂಡಿದೆ ಎಂದು ಹೇಳಲು ನಾನು ಸಂತೋಷಿಸುತ್ತೇನೆ.” ಜ್ಯಾಕ್ ಕೂಡಿಸುವುದು: “ಕ್ಷೋಭೆಗೊಳ್ಳುವ ಪ್ರವೃತ್ತಿಯಿರುವಂತಹ ಆ ಕ್ಷಣಗಳನ್ನು ಗುರುತಿಸಲೂ ನಾವು ಕಲಿತಿದ್ದೇವೆ. ಅಂತಹ ಸಮಯಗಳಲ್ಲಿ ನಾವು ಪರಸ್ಪರವಾಗಿ ಹೆಚ್ಚು ಸಂವೇದನಾಶೀಲತೆಯಿಂದ ಉಪಚರಿಸಿಕೊಳ್ಳುತ್ತೇವೆ.”—ಜ್ಞಾನೋಕ್ತಿ 16:23.
ನೀವು ತಪ್ಪುಮಾಡಿಲ್ಲವೆಂದು ಅಭಿಪ್ರಯಿಸುವುದಾದರೆ, ನೀವು ತಪ್ಪೊಪ್ಪಿಕೊಳ್ಳಬೇಕೊ? ಗಾಢವಾದ ಅನಿಸಿಕೆಗಳು ಒಳಗೂಡಿರುವಾಗ, ದೋಷವು ಎಲ್ಲಿ ಅಡಗಿದೆ ಎಂಬುದರ ಕುರಿತು ವಾಸ್ತವಿಕವಾಗಿರುವುದು ಕಷ್ಟಕರವಾಗಿರುತ್ತದೆ. ಆದರೆ ವಿವಾಹದಲ್ಲಿ ಪ್ರಮುಖವಾದ ವಿಷಯವು ಶಾಂತಿಯೇ. ಯಾರ ಗಂಡನು ದಾವೀದನನ್ನು ಕೆಟ್ಟದಾಗಿ ಉಪಚರಿಸಿದನೋ, ಆ ಇಸ್ರಾಯೇಲ್ಯ ಸ್ತ್ರೀಯಾದ ಅಬೀಗೈಲಳನ್ನು ಪರಿಗಣಿಸಿರಿ. ತನ್ನ ಗಂಡನ ಮೂರ್ಖತನಕ್ಕಾಗಿ ಅವಳನ್ನು ದೋಷಿಯಾಗಿ ದೃಷ್ಟಿಸಸಾಧ್ಯವಿಲ್ಲದಿರುವುದಾದರೂ, ಅವಳು ತಪ್ಪೊಪ್ಪಿಕೊಂಡಳು. “ನಿನ್ನ ದಾಸಿಯ ಅಪರಾಧಕ್ಕೆ ಕ್ಷಮಾಪಣೆಯಾಗಲಿ” ಎಂದು ಅವಳು ಬೇಡಿಕೊಂಡಳು. ಅವಳನ್ನು ವಿಚಾರಪರವಾಗಿ ಉಪಚರಿಸಿ, ಅವಳು ಎದುರುಗೊಳ್ಳದಿರುತ್ತಿದ್ದಲ್ಲಿ, ತಾನು ನಿರ್ದೋಷ ರಕ್ತವನ್ನು ಸುರಿಸುತ್ತಿದ್ದೆನೆಂದು ಒಪ್ಪಿಕೊಳ್ಳುವ ಮೂಲಕ ದಾವೀದನು ಪ್ರತಿಕ್ರಿಯಿಸಿದನು.—1 ಸಮುವೇಲ 25:24-28, 32-35.
ತದ್ರೀತಿಯಲ್ಲಿ, 45 ವರ್ಷಗಳಿಂದ ವಿವಾಹಿತಳಾಗಿರುವ, ಜೂನ್ ಎಂಬ ಹೆಸರಿನ ಕ್ರೈಸ್ತ ಸ್ತ್ರೀಯೊಬ್ಬಳು, ಒಂದು ಯಶಸ್ವಿಕರ ವಿವಾಹವು, ತಪ್ಪೊಪ್ಪಿಕೊಳ್ಳಲು ಮೊದಲನೆಯವರಾಗಿರುವ ಒಂದು ಸಿದ್ಧಮನಸ್ಸನ್ನು ಅಗತ್ಯಪಡಿಸುತ್ತದೆ ಎಂಬುದಾಗಿ ಭಾವಿಸುತ್ತಾಳೆ. ಅವಳು ಹೇಳುವುದು: “ಒಬ್ಬ ವ್ಯಕ್ತಿಯೋಪಾದಿ ನನ್ನ ಅನಿಸಿಕೆಗಳಿಗಿಂತಲೂ ನಮ್ಮ ವಿವಾಹವು ಹೆಚ್ಚು ಪ್ರಾಮುಖ್ಯವಾದುದ್ದಾಗಿದೆ ಎಂದು ನಾನು ನನ್ನಷ್ಟಕ್ಕೇ ಹೇಳಿಕೊಳ್ಳುತ್ತೇನೆ. ಆದುದರಿಂದ ನಾನು ತಪ್ಪೊಪ್ಪಿಕೊಳ್ಳುವಾಗ, ನಾನು ವಿವಾಹಕ್ಕೆ ನೆರವನ್ನೀಯುತ್ತಿದ್ದೇನೆಂದು ನನಗನಿಸುತ್ತದೆ.” ಜಿಮ್ ಎಂಬ ಹೆಸರಿನ ವೃದ್ಧ ಪುರುಷನೊಬ್ಬನು ಹೀಗೆ ಹೇಳುತ್ತಾನೆ: “ಅಲ್ಪ ವಿಷಯಗಳಿಗಾಗಿಯೂ ನಾನು ನನ್ನ ಹೆಂಡತಿಯ ಬಳಿ ತಪ್ಪೊಪ್ಪಿಕೊಳ್ಳುತ್ತೇನೆ. ಅವಳಿಗೆ ಒಂದು ಗಂಭೀರವಾದ ಶಸ್ತ್ರಚಿಕಿತ್ಸೆಯಾಗಿರುವ ಸಮಯದಂದಿನಿಂದ, ಅವಳು ಸುಲಭವಾಗಿ ನಿರುತ್ಸಾಹಗೊಳ್ಳುತ್ತಾಳೆ. ಆದುದರಿಂದ ನಾನು ಕ್ರಮವಾಗಿ ಅವಳನ್ನು ನನ್ನ ಕೈಗಳಲ್ಲಿ ಬಳಸಿ, ‘ಕ್ಷಮಿಸು, ಪ್ರಿಯೆ. ನನಗೆ ನಿನ್ನನ್ನು ಕ್ಷೋಭೆಗೊಳಿಸುವ ಉದ್ದೇಶವಿರಲಿಲ್ಲ’ ಎಂದು ಹೇಳುತ್ತೇನೆ. ನೀರು ಹಾಯಿಸಲ್ಪಟ್ಟ ಒಂದು ಗಿಡದಂತೆ, ಅವಳು ಆ ಕೂಡಲೆ ಹಸನ್ಮುಖಿಯಾಗುತ್ತಾಳೆ.”
ನಾವು ಬಹಳ ಹೆಚ್ಚು ಪ್ರೀತಿಸುವ ವ್ಯಕ್ತಿಗೆ ನಾವು ನೋವನ್ನುಂಟುಮಾಡಿರುವಲ್ಲಿ, ತಡವಿಲ್ಲದ ತಪ್ಪೊಪ್ಪಿಕೊಳ್ಳುವಿಕೆಯು ಹೆಚ್ಚು ಪರಿಣಾಮಕರವಾಗಿರುತ್ತದೆ. ಮೀಲಾಗ್ರೋಸ್ ಹೃತ್ಪೂರ್ವಕವಾಗಿ ಒಪ್ಪಿಕೊಳ್ಳುತ್ತಾ, ಹೀಗೆ ಹೇಳುತ್ತಾಳೆ: “ನಾನು ಆತ್ಮವಿಶ್ವಾಸದ ಕೊರತೆಯಿಂದ ಕಷ್ಟಾನುಭವಿಸುತ್ತೇನೆ, ಮತ್ತು ನನ್ನ ಗಂಡನ ಒಂದು ಕಟು ನುಡಿಯು ನನ್ನನ್ನು ಕ್ಷೋಭೆಗೊಳಿಸುತ್ತದೆ. ಆದರೆ ಅವನು ತಪ್ಪೊಪ್ಪಿಕೊಳ್ಳುವಾಗ, ಆ ಕೂಡಲೆ ನನಗೆ ಹಾಯೆನಿಸುತ್ತದೆ.” ಸೂಕ್ತವಾಗಿಯೇ ಶಾಸ್ತ್ರವಚನಗಳು ನಮಗೆ ಹೀಗೆ ಹೇಳುತ್ತವೆ: “ಸವಿನುಡಿಯು ಜೇನುಕೊಡ; ಅದು ಆತ್ಮ [“ಪ್ರಾಣ,” NW]ಕ್ಕೆ ಸಿಹಿ, ಎಲುಬಿಗೆ ಕ್ಷೇಮ.”—ಜ್ಞಾನೋಕ್ತಿ 16:24.
ತಪ್ಪೊಪ್ಪಿಕೊಳ್ಳುವಿಕೆಯ ಕಲೆಯನ್ನು ರೂಢಿಸಿಕೊಳ್ಳಿರಿ
ಅಗತ್ಯವಿರುವಾಗ ತಪ್ಪೊಪ್ಪಿಕೊಳ್ಳುವುದನ್ನು ನಾವು ಒಂದು ರೂಢಿಯನ್ನಾಗಿ ಮಾಡಿಕೊಳ್ಳುವಾಗ, ಜನರು ಅನುಕೂಲಕರ ಮನೋಭಾವದಿಂದ ಪ್ರತಿಕ್ರಿಯಿಸುವರೆಂಬುದನ್ನು ನಾವು ಕಂಡುಕೊಳ್ಳುವುದು ಸಂಭವನೀಯ. ಮತ್ತು ಬಹುಶಃ ಅವರೂ ಸ್ವತಃ ತಪ್ಪೊಪ್ಪಿಕೊಳ್ಳುವರು. ನಾವು ಯಾರಾದರೊಬ್ಬರಿಗೆ ಕ್ಷೋಭೆಯನ್ನುಂಟುಮಾಡಿದ್ದೇವೆಂದು ನಾವು ಸಂದೇಹಪಡುವುದಾದರೆ, ಯಾವುದೇ ತಪ್ಪನ್ನು ಒಪ್ಪಿಕೊಳ್ಳುವುದನ್ನು ದೂರೀಕರಿಸಲಿಕ್ಕಾಗಿ ಅಧಿಕ ಸಮಯ ಹಾಗೂ ಪ್ರಯತ್ನವನ್ನು ವ್ಯಯಿಸುವುದಕ್ಕೆ ಬದಲಾಗಿ, ತಪ್ಪೊಪ್ಪಿಕೊಳ್ಳುವುದನ್ನು ಒಂದು ವಾಡಿಕೆಯನ್ನಾಗಿ ಏಕೆ ಮಾಡಿಕೊಳ್ಳಬಾರದು? ತಪ್ಪೊಪ್ಪಿಕೊಳ್ಳುವಿಕೆಯು ಒಂದು ದೌರ್ಬಲ್ಯದ ಸೂಚನೆಯಾಗಿದೆ ಎಂದು ಈ ಲೋಕವು ಭಾವಿಸಬಹುದಾದರೂ, ಇದು ನಿಜವಾಗಿಯೂ ಕ್ರೈಸ್ತ ಪ್ರೌಢತೆಯ ಪುರಾವೆಯನ್ನು ಕೊಡುತ್ತದೆ. ನಿಶ್ಚಯವಾಗಿ, ಯಾವುದೇ ತಪ್ಪನ್ನು ಅಂಗೀಕರಿಸಿ, ತದನಂತರ ತಮ್ಮ ಜವಾಬ್ದಾರಿಯನ್ನು ಕಡಿಮೆಗೊಳಿಸುವವರಂತೆ ನಾವಿರಲು ಬಯಸುವುದಿಲ್ಲ. ಉದಾಹರಣೆಗಾಗಿ, ನಾವು ಎಂದಾದರೂ ತಪ್ಪಾಯಿತು—ಅದರ ಅರ್ಥವನ್ನು ಗ್ರಹಿಸದೆ—ಎಂದು ಹೇಳುತ್ತೇವೊ? ನಾವು ತಡವಾಗಿ ಆಗಮಿಸಿ, ಅತಿ ಧಾರಾಳವಾದ ತಪ್ಪೊಪ್ಪಿಕೊಳ್ಳುವಿಕೆಗಳನ್ನು ಮಾಡುವುದಾದರೆ, ನಮ್ಮ ಕಾಲನಿಷ್ಠೆಯನ್ನು ಉತ್ತಮಗೊಳಿಸಲು ನಾವು ನಿರ್ಧರಿಸುತ್ತೇವೊ?
ಹಾಗಾದರೆ, ನಾವು ತಪ್ಪೊಪ್ಪಿಕೊಳ್ಳುವುದು ನಿಜವಾಗಿ ಅವಶ್ಯವೊ? ಹೌದು, ಅವಶ್ಯವಾಗಿದೆ. ಹಾಗೆ ಮಾಡುವುದು ಸ್ವತಃ ನಮಗೂ ಇತರರಿಗೂ ಒಂದು ಹಂಗಾಗಿದೆ. ಅಪರಿಪೂರ್ಣತೆಯಿಂದ ಉಂಟುಮಾಡಲ್ಪಟ್ಟ ನೋವನ್ನು ಶಮನಗೊಳಿಸಲು, ಒಂದು ತಪ್ಪೊಪ್ಪಿಕೊಳ್ಳುವಿಕೆಯು ಸಹಾಯ ಮಾಡಬಲ್ಲದು, ಮತ್ತು ಇದು ವಿಷಮ ಸಂಬಂಧಗಳನ್ನು ವಾಸಿಮಾಡಬಲ್ಲದು. ನಾವು ಮಾಡುವ ಪ್ರತಿಯೊಂದು ತಪ್ಪೊಪ್ಪಿಕೊಳ್ಳುವಿಕೆಯು ದೈನ್ಯಭಾವದಲ್ಲಿನ ಒಂದು ಪಾಠವಾಗಿದೆ, ಹಾಗೂ ಇದು ನಮ್ಮನ್ನು ಇತರರ ಅನಿಸಿಕೆಗಳಿಗೆ ಹೆಚ್ಚು ಸಂವೇದನಾಶೀಲರಾಗುವಂತೆ ತರಬೇತುಗೊಳಿಸುತ್ತದೆ. ಫಲಿತಾಂಶವಾಗಿ, ಜೊತೆ ವಿಶ್ವಾಸಿಗಳು, ವಿವಾಹ ಸಂಗಾತಿಗಳು, ಮತ್ತು ಇತರರು ನಮ್ಮನ್ನು, ತಮ್ಮ ಮಮತೆ ಹಾಗೂ ಭರವಸೆಗೆ ಅರ್ಹರಾದವರಂತೆ ವೀಕ್ಷಿಸುವರು. ನಮಗೆ ಮನಶ್ಶಾಂತಿಯು ಇರುವುದು, ಹಾಗೂ ಯೆಹೋವ ದೇವರು ನಮ್ಮನ್ನು ಆಶೀರ್ವದಿಸುವನು.
[ಪಾದಟಿಪ್ಪಣಿ]
a ಅವರ ನಿಜವಾದ ಹೆಸರುಗಳಲ್ಲ.
[ಪುಟ 23 ರಲ್ಲಿರುವ ಚಿತ್ರಗಳು]
ಯಥಾರ್ಥವಾದ ತಪ್ಪೊಪ್ಪಿಕೊಳ್ಳುವಿಕೆಗಳು ಕ್ರೈಸ್ತ ಪ್ರೀತಿಯನ್ನು ಪ್ರವರ್ಧಿಸುತ್ತವೆ