ಮಕ್ಕಳೇ—ನೀವು ನಮ್ಮ ಆನಂದವಾಗಿದ್ದೀರಿ!
1 ಎಳೆಯ ಹುಡುಗ ಹುಡುಗಿಯರೇ, ಸಭೆಯ ಚಟುವಟಿಕೆಗಳಲ್ಲಿ ನಿಮ್ಮನ್ನು ಸೇರಿಸಬೇಕೆಂಬ ಯೆಹೋವನ ಆಜ್ಞೆಯೊಂದಿಗೆ ನೀವು ಪರಿಚಿತರಾಗಿದ್ದೀರೊ? (ಧರ್ಮೋ. 31:12; ಕೀರ್ತ. 127:3) ನಾವು ಯೆಹೋವನನ್ನು ಒಟ್ಟಿಗೆ ಆರಾಧಿಸುತ್ತಿರುವಾಗ, ನೀವು ನಮ್ಮ ಪಕ್ಕದಲ್ಲಿರುವುದು ಒಂದು ಆನಂದವಾಗಿದೆ! ಕೂಟಗಳಲ್ಲಿ ನೀವು ಶಾಂತವಾಗಿ ಕುಳಿತುಕೊಂಡು, ಗಮನಕೊಟ್ಟು ಕಿವಿಗೊಡುವಾಗ, ನಮ್ಮ ಹೃದಯಗಳನ್ನು ಉಲ್ಲಾಸಗೊಳಿಸುತ್ತೀರಿ. ನೀವು ನಿಮ್ಮ ಸ್ವಂತ ಮಾತುಗಳಲ್ಲಿ ಉತ್ತರಗಳನ್ನು ಕೊಡಲು ಪ್ರಯತ್ನಿಸುವಾಗ ಅದು ನಮ್ಮನ್ನು ವಿಶೇಷವಾಗಿ ಸಂತೋಷಗೊಳಿಸುತ್ತದೆ. ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ನೇಮಿಸಲ್ಪಟ್ಟ ಭಾಗಗಳನ್ನು ನೀವು ಪ್ರಸ್ತುತಪಡಿಸುವಾಗ, ಕ್ಷೇತ್ರ ಸೇವೆಯಲ್ಲಿ ನೀವು ಉತ್ಸಾಹದಿಂದ ನಮ್ಮೊಂದಿಗೆ ಜೊತೆಗೂಡುವಾಗ, ಮತ್ತು ನೀವು ನಿಮ್ಮ ಸಹಪಾಠಿಗಳಿಗೆ ಮತ್ತು ಶಿಕ್ಷಕರಿಗೆ ಧೈರ್ಯದಿಂದ ಸಾಕ್ಷಿನೀಡುತ್ತೀರೆಂಬುದನ್ನು ನಾವು ಕೇಳಿಸಿಕೊಳ್ಳುವಾಗ, ಇಡೀ ಸಭೆಯು ಹರ್ಷಿಸುತ್ತದೆ.—ಕೀರ್ತ. 148:12, 13.
2 ನಿಮ್ಮ ಒಳ್ಳೆಯ ಶಿಷ್ಟಾಚಾರಗಳು, ನಿಮ್ಮ ನೀಟಾದ ತೋರಿಕೆ, ನಿಮ್ಮ ಶುದ್ಧ ನಡತೆ, ಮತ್ತು ವಯಸ್ಕರಿಗಾಗಿರುವ ನಿಮ್ಮ ಗೌರವವನ್ನು ನೋಡುವಾಗ, ನಾವು ನಿಮ್ಮ ವಿಷಯದಲ್ಲಿ ಹೆಮ್ಮೆಪಡುತ್ತೇವೆಂಬುದನ್ನು ನೀವು ತಿಳಿಯಬೇಕೆಂದು ಬಯಸುತ್ತೇವೆ. ನಿಮಗಾಗಿಯೇ ದೇವಪ್ರಭುತ್ವ ಗುರಿಗಳನ್ನಿಡುವ ಮೂಲಕ ನೀವು ‘ನಿಮ್ಮ ಮಹಾ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳು’ತ್ತೀರಿ (NW) ಎಂಬುದನ್ನು ನೀವು ತೋರಿಸುವಾಗ, ನಮ್ಮ ಆನಂದವು ವಿಶೇಷವಾಗಿ ಮಹತ್ತಾಗಿರುತ್ತದೆ.—ಪ್ರಸಂ. 12:1; ಕೀರ್ತ. 110:3.
3 ನಿಮ್ಮ ಗುರಿಗಳನ್ನು ನಮಗೆ ತಿಳಿಸಿರಿ: ಎಂಟು ವರ್ಷ ಪ್ರಾಯದ ಹುಡುಗನೊಬ್ಬನು ಒಬ್ಬ ಜಿಲ್ಲಾ ಮೇಲ್ವಿಚಾರಕನಿಗೆ ಹೀಗೆ ಹೇಳಿದನು: ‘ಪ್ರಥಮವಾಗಿ ನಾನು ದೀಕ್ಷಾಸ್ನಾನ ಹೊಂದಲು ಇಷ್ಟಪಡುತ್ತೇನೆ, ಅನಂತರ ನಾನು ಧ್ವನಿವ್ಯವಸ್ಥೆ ಮತ್ತು ಮೈಕ್ರೊಫೋನ್ಗಳನ್ನು ನಿರ್ವಹಿಸುವ ಮೂಲಕ, ಒಬ್ಬ ಅಟೆಂಡೆಂಟ್ ಆಗುವ ಮೂಲಕ, ಲಿಟರೇಚರ್ ಇಲಾಖೆಯಲ್ಲಿ ಸಹಾಯಮಾಡುವ ಮೂಲಕ, ಪುಸ್ತಕ ಅಭ್ಯಾಸಗಳಲ್ಲಿ ಮತ್ತು ಕಾವಲಿನಬುರುಜು ಅಭ್ಯಾಸಗಳಲ್ಲಿ ಓದುವ ಮೂಲಕ ಸಭೆಯಲ್ಲಿ ಸಹಾಯಮಾಡಲು ಬಯಸುತ್ತೇನೆ. ಅನಂತರ ನಾನೊಬ್ಬ ಶುಶ್ರೂಷಾ ಸೇವಕನಾಗಲು, ಬಳಿಕ ಒಬ್ಬ ಹಿರಿಯನಾಗಿರಲು ಇಷ್ಟಪಡುತ್ತೇನೆ. ನಾನು ಒಬ್ಬ ಪಯನೀಯರ್ ಆಗಿ, ಪಯನೀಯರ್ ಸ್ಕೂಲ್ಗೂ ಹೋಗಲು ಇಷ್ಟಪಡುತ್ತೇನೆ. ಅನಂತರ ನಾನು ಬೆತೆಲಿಗೆ ಹೋಗಿ, ಒಬ್ಬ ಸರ್ಕಿಟ್ ಮೇಲ್ವಿಚಾರಕನಾಗಲು ಅಥವಾ ಒಬ್ಬ ಜಿಲ್ಲಾ ಮೇಲ್ವಿಚಾರಕನಾಗಲು ಇಷ್ಟಪಡುತ್ತೇನೆ.’ ದೇವರಿಗೆ ಸೇವೆ ಸಲ್ಲಿಸುವ ಸುಯೋಗಕ್ಕಾಗಿ ಅವನು ಎಂತಹ ಉತ್ತಮ ಗಣ್ಯತೆಯನ್ನು ತೋರಿಸಿದನು!
4 ನೀವು ಶಾರೀರಿಕವಾಗಿ ಮತ್ತು ಆತ್ಮಿಕವಾಗಿ ಪ್ರಗತಿಮಾಡಿದಂತೆ, ನಿಮ್ಮ ಗುರಿಗಳನ್ನು ತಲಪುವುದನ್ನು ನೋಡಲು ನಾವು ಹರ್ಷಿಸುತ್ತೇವೆ. (ಲೂಕ 2:52ನ್ನು ಹೋಲಿಸಿರಿ.) ಲೋಕವ್ಯಾಪಕವಾಗಿ ಪ್ರತಿ ವರ್ಷ ಸಾವಿರಾರು ಯುವ ಜನರು ಅಸ್ನಾನಿತ ಪ್ರಚಾರಕರಾಗುತ್ತಾರೆ ಮತ್ತು ಅನಂತರ, ಯೆಹೋವನ ಸಮರ್ಪಿತ ಸೇವಕರಾಗಿ ದೀಕ್ಷಾಸ್ನಾನಕ್ಕೆ ಅರ್ಹರಾಗುತ್ತಾರೆ. ಮುಂದೆ ನೀವು ಆಕ್ಸಿಲಿಯರಿ ಪಯನೀಯರ್ ಸೇವೆ ಮತ್ತು ಪೂರ್ಣ ಸಮಯದ ಸೇವೆಯನ್ನು ಪ್ರವೇಶಿಸುವುದನ್ನು ನಾವು ನೋಡುವಾಗ ನಮ್ಮ ಆನಂದವು ಬೆಳೆಯುತ್ತದೆ. ಮಕ್ಕಳೇ, ನಿಜವಾಗಿಯೂ ನೀವು ನಮ್ಮ ಆನಂದವಾಗಿದ್ದೀರಿ ಮತ್ತು ನಮ್ಮ ಸ್ವರ್ಗೀಯ ತಂದೆಗೆ ಸ್ತುತಿಯ ಅದ್ಭುತ ಮೂಲವಾಗಿದ್ದೀರಿ. ಯೆಹೋವನು ನಿಮ್ಮನ್ನು ಸಮೃದ್ಧವಾಗಿ ಆಶೀರ್ವದಿಸಲಿ!—ಜ್ಞಾನೋ. 23:24, 25.