ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 3/1 ಪು. 29-31
  • ಒಂದು ದೇವತಾಶಾಸ್ತ್ರೀಯ ಉಭಯ ಸಂಕಟ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಂದು ದೇವತಾಶಾಸ್ತ್ರೀಯ ಉಭಯ ಸಂಕಟ
  • ಕಾವಲಿನಬುರುಜು—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಒಂದು ಉಭಯ ಸಂಕಟದ ಆರಂಭ ಮತ್ತು ವಿಕಸನ
  • ಒಂದು “ಮಧ್ಯವರ್ತಿ ಸ್ಥಿತಿ” ಯಲ್ಲಿ ಪೌಲನು ನಂಬಿಕೆಯಿಟ್ಟನೊ?
  • ಪುನರುತ್ಥಾನ—ಒಂದು ಸೊಗಸಾದ ಬೈಬಲ್‌ ಸತ್ಯ
  • ಪುನರುತ್ಥಾನದಲ್ಲಿ ನಿಮ್ಮ ನಂಬಿಕೆಯು ಎಷ್ಟು ದೃಢವಾಗಿದೆ?
    ಕಾವಲಿನಬುರುಜು—1998
  • ಪುನರುತ್ಥಾನದ ನಿರೀಕ್ಷೆಗೆ ಶಕ್ತಿಯಿದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ‘ಮರಣವು ನಿವೃತ್ತಿಯಾಗುವದು’
    ಕಾವಲಿನಬುರುಜು—1998
  • ಪುನರುತ್ಥಾನದ ನಿರೀಕ್ಷೆಗಿರುವ ಶಕ್ತಿ
    ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
ಇನ್ನಷ್ಟು
ಕಾವಲಿನಬುರುಜು—1995
w95 3/1 ಪು. 29-31

ಒಂದು ದೇವತಾಶಾಸ್ತ್ರೀಯ ಉಭಯ ಸಂಕಟ

“ಆತ್ಮದ ಅಮರತ್ವದ ವಿಚಾರವು ಮತ್ತು ಸತ್ತವರ ಪುನರುತ್ಥಾನದಲ್ಲಿ ನಂಬಿಕೆಯು . . . ಸಂಪೂರ್ಣವಾಗಿ ಭಿನ್ನವಾಗಿರುವ ಮಟ್ಟಗಳ ಎರಡು ಪರಿಕಲ್ಪನೆಗಳಾಗಿವೆ, ಇವುಗಳ ನಡುವೆ ಒಂದು ಆಯ್ಕೆಯನ್ನು ಮಾಡುವ ಅಗತ್ಯವಿದೆ.” ಫೀಲೀಪ್‌ ಮನೂ ಇವರ ಈ ಮಾತುಗಳು, ಸತ್ತವರ ಪರಿಸ್ಥಿತಿಯ ಕುರಿತು ಪ್ರಾಟೆಸ್ಟಂಟ್‌ ಮತ್ತು ಕ್ಯಾತೊಲಿಕ್‌ ದೇವತಾಶಾಸ್ತ್ರಜ್ಞರಿಂದ ಎದುರಿಸಲ್ಪಡುವ ಉಭಯ ಸಂಕಟವನ್ನು ಸಾರಾಂಶಿಸುತ್ತವೆ. ಬೈಬಲು “ಕಡೇದಿನದಲ್ಲಿ” ಪುನರುತ್ಥಾನವೊಂದರ ನಿರೀಕ್ಷೆಯ ಕುರಿತು ಮಾತಾಡುತ್ತದೆ. (ಯೋಹಾನ 6:39, 40, 44, 54) ಆದರೆ ಅನೇಕ ವಿಶ್ವಾಸಿಗಳ ನಿರೀಕ್ಷೆಯು, “ಮರಣದಲ್ಲಿ ದೇಹದಿಂದ ಪ್ರತ್ಯೇಕಿಸಿಕೊಂಡು ದೇವರ ಕಡೆಗೆ ಹಿಂದಿರುಗುವ ಆತ್ಮದ ಅಮರತ್ವದಲ್ಲಿ ಆಧರಿಸಿದೆ, ಮತ್ತು ಪುನರುತ್ಥಾನದಲ್ಲಿ ನಿರೀಕ್ಷೆಯು ಸಂಪೂರ್ಣವಲ್ಲದ್ದಿದರೂ ಬಹುಮಟ್ಟಿಗೆ ಮಾಯವಾಗಿದೆ,” ಎಂದು ದೇವತಾಶಾಸ್ತ್ರಜ್ಞನಾದ ಕೈಸ್‌ಬರ್ಟ್‌ ಕ್ರೆಶಾಗ್‌ ಹೇಳುತ್ತಾನೆ.

ಆ ಸ್ಥಿತಿಯಲ್ಲಿ, ಜಟಿಲವಾದೊಂದು ಸಮಸ್ಯೆಯು ಏಳುತ್ತದೆ ಎಂದು ಬರ್ನಾರ್‌ ಸೇಬೂಏ ವಿವರಿಸುತ್ತಾರೆ: “ತಮ್ಮ ದೈಹಿಕ ಮರಣ ಮತ್ತು ಅಂತಿಮ ಪುನರುತ್ಥಾನದ ನಡುವೆ ಇರುವ ‘ಅಂತರ’ದ ಸಮಯದಲ್ಲಿ ಸತ್ತವರ ಪರಿಸ್ಥಿತಿಯು ಏನಾಗಿರುತ್ತದೆ?” ಆ ಪ್ರಶ್ನೆಯು, ಕಳೆದ ಕೆಲವು ವರ್ಷಗಳಲ್ಲಿ ದೇವತಾಶಾಸ್ತ್ರೀಯ ವಾಗ್ವಾದದ ಮಧ್ಯದಲ್ಲಿರುವಂತೆ ತೋರುತ್ತದೆ. ಯಾವುದು ಅದಕ್ಕೆ ಮುನ್ನಡೆಸಿತು? ಮತ್ತು ಹೆಚ್ಚು ಪ್ರಾಮುಖ್ಯವಾಗಿ, ಸತ್ತವರಿಗಾಗಿರುವ ನಿಜವಾದ ನಿರೀಕ್ಷೆ ಏನು?

ಒಂದು ಉಭಯ ಸಂಕಟದ ಆರಂಭ ಮತ್ತು ವಿಕಸನ

ಪ್ರಥಮ ಕ್ರೈಸ್ತರಿಗೆ ಈ ವಿಷಯದ ಸ್ಪಷ್ಟವಾಗಿದ ತಿಳಿವಳಿಕೆಯಿತ್ತು. ಸತ್ತವರಿಗೆ ಯಾವ ವಿಷಯದ ಪ್ರಜ್ಞೆಯೂ ಇರುವುದಿಲ್ಲವೆಂದು ಅವರಿಗೆ ಶಾಸ್ತ್ರಗಳಿಂದ ತಿಳಿದಿತ್ತು, ಯಾಕೆಂದರೆ ಹೀಬ್ರು ಶಾಸ್ತ್ರವಚನಗಳು ಹೀಗೆ ಹೇಳುತ್ತವೆ: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; . . . ನೀನು ಸೇರಬೇಕಾದ ಪಾತಾಳದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” (ಪ್ರಸಂಗಿ 9:5, 10) ಆ ಕ್ರೈಸ್ತರು ಭವಿಷ್ಯತ್ತಿನ “ಕರ್ತನ ಪ್ರತ್ಯಕ್ಷ” ತೆಯ ಸಮಯದಲ್ಲಿ ಸಂಭವಿಸುವ ಒಂದು ಪುನರುತ್ಥಾನಕ್ಕಾಗಿ ನಿರೀಕ್ಷಿಸಿದರು. (1 ಥೆಸಲೊನೀಕ 4:13-17) ಆ ಗಳಿಗೆಗಾಗಿ ಅವರು ಕಾಯುತ್ತಿರುವಾಗ ಬೇರೆ ಎಲ್ಲೊ ಪ್ರಜ್ಞಾವಂತರಾಗಿರುವುದನ್ನು ಅವರು ನಿರೀಕ್ಷಿಸಲಿಲ್ಲ. ಡಾಕ್ಟ್ರಿನ್‌ ಆಫ್‌ ದ ಫೇತ್‌ಗಾಗಿ ವ್ಯಾಟಿಕನ್‌ ಸಭೆಯ ಸದ್ಯದ ಅಧಿಕಾರಿಯಾದ ಯೋಸೆಫ್‌ ರ್ಯಾಟ್‌ಸಿಂಗರ್‌ ಹೇಳುವುದು: “ಆತ್ಮದ ಅಮರತ್ವದ ಕುರಿತಾಗಿ ಪ್ರಾಚೀನ ಚರ್ಚಿನಲ್ಲಿ ಯಾವುದೇ ತಾತ್ವಿಕ ದೃಢೀಕರಣವು ಅಸ್ತಿತ್ವದಲ್ಲಿರಲಿಲ್ಲ.”

ಹಾಗಿದ್ದರೂ, ನಾಲ್ಕನೆಯ ಶತಮಾನದ ಆಗಸ್ಟೀನ್‌ ಅಥವಾ ಅಮ್‌ರೊಸ್‌ರಂತಹ ಚರ್ಚಿನ ಪಾದ್ರಿಗಳ ಬರಹಗಳನ್ನು ಓದುವಾಗ, “ಬೈಬಲಿನ ಸಂಪ್ರದಾಯದ ಸಂಬಂಧದಲ್ಲಿ ಏನೋ ಹೊಸ ವಿಷಯದ ಕುರಿತು ನಾವು ಅರಿಯುತ್ತೇವೆ, ಅದು ಜುಡಿಯೋ ಕ್ರೈಸ್ತರಿಂದ ಮೂಲಭೂತವಾಗಿ ಭಿನ್ನವಾಗಿರುವ ಒಂದು ಗ್ರೀಕ್‌ ಅಂತಿಮ ಗತಿ ಶಾಸ್ತ್ರದ ತಲೆದೋರುವಿಕೆ” ಎಂದು ನುಆವೊ ಡೀಟ್‌ಸ್ಯಾನಾರ್ಯೊ ಡೇ ಟೇಆಲಾಜೀಆ ವಿವರಿಸುತ್ತದೆ. ಈ ಹೊಸ ಬೋಧನೆಯು, “ಆತ್ಮದ ಅಮರತ್ವ, ಮರಣದ ನಂತರ ಕೂಡಲೆ ಪ್ರತಿಫಲ ಅಥವಾ ದಂಡನೆಯಿಂದ ವೈಯಕ್ತಿಕವಾಗಿ ನ್ಯಾಯವಿಚಾರಿಸಲ್ಪಡುವುದರ” ಮೇಲೆ ಆಧರಿಸಿದೆ. ಹೀಗೆ, “ಮಧ್ಯವರ್ತಿ ಸ್ಥಿತಿ”ಯ ಕುರಿತು ಒಂದು ಪ್ರಶ್ನೆಯು ಎಬ್ಬಿಸಲ್ಪಟ್ಟಿತು: ದೇಹದ ಮರಣಾನಂತರ ಆತ್ಮವು ಬದುಕಿ ಉಳಿದರೆ, ಅದು “ಕಡೇದಿನದಲ್ಲಿ” ಪುನರುತ್ಥಾನಕ್ಕಾಗಿ ಕಾದುಕೊಂಡಿರುವ ಸಮಯದಲ್ಲಿ ಅದಕ್ಕೆ ಏನು ಸಂಭವಿಸುತ್ತದೆ? ದೇವತಾಶಾಸ್ತ್ರಜ್ಞರು ಬಗೆಹರಿಸಲು ಹೆಣಗಾಡಿರುವ ಒಂದು ಉಭಯ ಸಂಕಟವು ಇದಾಗಿದೆ.

ಸಾ.ಶ. ಆರನೆಯ ಶತಮಾನದಲ್ಲಿ, ಮರಣದಲ್ಲಿ ಆತ್ಮಗಳು ತತ್‌ಕ್ಷಣ ತಮ್ಮ ಅದೃಷ್ಟದ ಸ್ಥಾನಕ್ಕೆ ಹೋಗುತ್ತವೆಂದು I ನೆಯ ಪೋಪ್‌ ಗ್ರೆಗರಿ ವಾದಿಸಿದನು. ಸತ್ತವರಿಗೆ ತಮ್ಮ ಕಟ್ಟಕಡೆಯ ಪ್ರತಿಫಲವು ನ್ಯಾಯತೀರ್ಪಿನ ದಿನದಂದು ಸಿಗುವುದೆಂದು, 14 ನೆಯ ಶತಮಾನದ XXII ನೆಯ ಪೋಪ್‌ ಜಾನ್‌ಗೆ ಮನವರಿಕೆಯಾಗಿತ್ತು. ಆದರೆ XII ನೆಯ ಪೋಪ್‌ ಬೆನಡಿಕ್ಟ್‌ ತಮ್ಮ ಪೂರ್ವಾಧಿಕಾರಿಯ ಹೇಳಿಕೆ ತಪ್ಪೆಂದು ಸಿದ್ಧಪಡಿಸಿದನು. ಬೆನಡಿಕಸ್ಟ್‌ ಡೇಅಸ್‌ (1336) ಎಂಬ ಪೋಪರ ಆಜ್ಞೆಯಲ್ಲಿ, ಅವರು ವಿಧಿಸಿದ್ದೇನೆಂದರೆ, “ಸತ್ತವರ ಆತ್ಮಗಳು ಲೋಕದ ಅಂತ್ಯದಲ್ಲಿ ಪುನರುತ್ಥಾನಗೊಂಡ ತಮ್ಮ ದೇಹಗಳೊಂದಿಗೆ ಪುನರ್ಮಿಲನಗೊಳ್ಳಲು, ಮರಣದ ನಂತರ ಕೂಡಲೇ ಪರಮಾನಂದ [ಸ್ವರ್ಗ], ಶುದ್ಧೀಕರಣ [ಪರ್ಗೆಟರಿ], ಅಥವಾ ಖಂಡನೆಯ [ನರಕ] ಪರಿಸ್ಥಿತಿಯೊಳಗೆ ಪ್ರವೇಶಿಸುತ್ತವೆ.”

ಚರ್ಚೆ ಮತ್ತು ವಾಗ್ವಾದದ ಹೊರತೂ, ಪ್ರಾಟೆಸ್ಟಂಟ್‌ ಮತ್ತು ಆರ್ತೊಡಾಕ್ಸ್‌ ಚರ್ಚುಗಳು ಸಾಮಾನ್ಯವಾಗಿ ಪರ್ಗೆಟರಿಯಲ್ಲಿ ನಂಬಿಕೆಯನ್ನಿಡದಿದ್ದರೂ, ಶತಮಾನಗಳಿಂದ ಕ್ರೈಸ್ತಪ್ರಪಂಚದ ಚರ್ಚುಗಳ ಸ್ಥಾನವು ಇದಾಗಿದೆ. ಹಾಗಿದ್ದರೂ, ಕಳೆದ ಶತಮಾನದ ಅಂತ್ಯದಿಂದ, ಹೆಚ್ಚಿನ ಸಂಖ್ಯೆಯಲ್ಲಿ ಪಂಡಿತರು, ಆತ್ಮದ ಅಮರತ್ವದ ಸಿದ್ಧಾಂತದ ಬೈಬಲೇತರ ಆರಂಭದ ಕಡೆಗೆ ಜನರ ಗಮನವನ್ನು ನಿರ್ದೇಶಿಸಿದ್ದಾರೆ, ಮತ್ತು ಇದರ ಪರಿಣಾಮವಾಗಿ, “ಆಧುನಿಕ ದೇವತಾಶಾಸ್ತ್ರವು ಈಗ ಅನೇಕ ವೇಳೆ ಮನುಷ್ಯನನ್ನು ಮರಣದಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗುವ ಒಂದು ಅಖಂಡತೆಯೋಪಾದಿ ವೀಕ್ಷಿಸಲು ಪ್ರಯತ್ನಿಸುತ್ತದೆ.” (ದ ಎನ್‌ಸೈಕ್ಲೊಪೀಡಿಯ ಆಫ್‌ ರಿಲಿಜನ್‌) ಆದುದರಿಂದ ಬೈಬಲಿನ ವ್ಯಾಖ್ಯಾನಗಾರರು, ಒಂದು “ಮಧ್ಯವರ್ತಿ ಸ್ಥಿತಿ”ಯ ಅಸ್ತಿತ್ವವನ್ನು ಸಮರ್ಥಿಸುವುದನ್ನು ಕಷ್ಟಕರವೆಂದು ಕಾಣುತ್ತಾರೆ. ಬೈಬಲ್‌ ಅದರ ಕುರಿತು ಮಾತಾಡುತ್ತದೊ, ಅಥವಾ ಭಿನ್ನವಾದೊಂದು ನಿರೀಕ್ಷೆಯನ್ನು ಅದು ನೀಡುತ್ತದೊ?

ಒಂದು “ಮಧ್ಯವರ್ತಿ ಸ್ಥಿತಿ” ಯಲ್ಲಿ ಪೌಲನು ನಂಬಿಕೆಯಿಟ್ಟನೊ?

ಕ್ಯಾಟಿಕಿಜಮ್‌ ಆಫ್‌ ದ ಕ್ಯಾತೊಲಿಕ್‌ ಚರ್ಚ್‌ ಹೇಳುವುದು: “ಕ್ರಿಸ್ತನೊಂದಿಗೆ ಏಳಲು ನಾವು ಕ್ರಿಸ್ತನೊಂದಿಗೆ ಮರಣಹೊಂದಬೇಕು: ನಾವು ‘ದೇಹದಿಂದ ದೂರವಾಗಿ ಮತ್ತು ಕರ್ತನಿಗೆ ಹತ್ತಿರವಾಗಿ ಇರ’ ಬೇಕು. [2 ಕೊರಿಂಥ 5:8] ಮರಣವಾಗಿರುವ ಆ ‘ನಿರ್ಗಮನ’ ದಲ್ಲಿ, ಆತ್ಮವು ದೇಹದಿಂದ ಬೇರ್ಪಡಿಸಲ್ಪಡುತ್ತದೆ. [ಫಿಲಿಪ್ಪಿ 1:23] ಅದು ಸತ್ತವರ ಪುನರುತ್ಥಾನದ ದಿನದಂದು ದೇಹದೊಂದಿಗೆ ಮತ್ತೆ ಐಕ್ಯಗೊಳ್ಳುವುದು.” ಆದರೆ ಇಲ್ಲಿ ನಮೂದಿಸಲಾದ ವಚನಗಳಲ್ಲಿ, ದೇಹದ ಮರಣಾನಂತರ ಆತ್ಮವು ಬದುಕಿ ಉಳಿದು ನಂತರ ದೇಹದೊಂದಿಗೆ ಮತ್ತೆ ಕೂಡಲು “ಕಡೇ ನ್ಯಾಯತೀರ್ಪಿಗಾಗಿ” ಕಾಯುತ್ತದೆಂದು ಅಪೊಸ್ತಲ ಪೌಲನು ಹೇಳುತ್ತಾನೊ?

ಎರಡನೆಯ ಕೊರಿಂಥ 5:1 ರಲ್ಲಿ, ಪೌಲನು ತನ್ನ ಮರಣವನ್ನು ಸೂಚಿಸುತ್ತಾನೆ ಮತ್ತು ಒಂದು “ಕಿತ್ತುಹಾಕಲ್ಪಟ್ಟ” “ಮನೆಯ” ಕುರಿತು ಮಾತಾಡುತ್ತಾನೆ. ಅದರ ಅಮರ ಆತ್ಮದಿಂದ ತ್ಯಜಿಸಲ್ಪಟ್ಟ ದೇಹದ ಕುರಿತು ಅವನು ಯೋಚಿಸುತ್ತಿದ್ದನೊ? ಇಲ್ಲ. ಮನುಷ್ಯನು ಆತ್ಮವಾಗಿದ್ದಾನೆಂದು, ಅವನಿಗೆ ಒಂದು ಆತ್ಮವು ಇರುವುದಿಲ್ಲವೆಂದು ಪೌಲನು ನಂಬಿದನು. (ಆದಿಕಾಂಡ 2:7; 1 ಕೊರಿಂಥ 15:45) ಪೌಲನು ಆತ್ಮಾಭಿಷಿಕ್ತ ಕ್ರೈಸ್ತನಾಗಿದ್ದನು ಮತ್ತು ಪ್ರಥಮ ಶತಮಾನದ ತನ್ನ ಸಹೋದರರಂತೆ, ಅವನ ನಿರೀಕ್ಷೆಯು ‘ಪರಲೋಕದಲ್ಲಿ ಸಿದ್ಧವಾಗಿತ್ತು.’ (ಕೊಲೊಸ್ಸೆ 1:5; ರೋಮಾಪುರ 8:14-18) ಆದುದರಿಂದ ಅವನ ‘ತೀವ್ರವಾದ ಅಪೇಕ್ಷೆಯು’ ದೇವರ ನಿಯಮಿತ ಸಮಯದಲ್ಲಿ ಅಮರ ಆತ್ಮ ಜೀವಿಯೋಪಾದಿ ಸ್ವರ್ಗಕ್ಕೆ ಪುನರುತ್ಥಾನಗೊಳ್ಳುವುದಾಗಿತ್ತು. (2 ಕೊರಿಂಥ 5:2-4) ಈ ನಿರೀಕ್ಷೆಯ ಕುರಿತು ಮಾತಾಡುತ್ತಾ, ಅವನು ಬರೆದದ್ದು: “ಆದರೆ ಕಡೇ ತುತೂರಿಯ ಧ್ವನಿಯಾಗುವಾಗ ನಾವೆಲ್ಲರೂ . . . ಮಾರ್ಪಡುವೆವು. ತುತೂರಿಯು ಊದಲಾಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ಮಾರ್ಪಡುವೆವು.”—21 ಕೊರಿಂಥ 15:51, 52.

ಎರಡನೆಯ ಕೊರಿಂಥ 5:8 ರಲ್ಲಿ ಪೌಲನು ಹೇಳುವುದು: “ನಾವು ಧೈರ್ಯವುಳ್ಳವರಾಗಿದ್ದು ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿರುವದೇ ಉತ್ತಮವೆಂದು ಎಣಿಸುತ್ತೇವೆ.” ಈ ಮಾತುಗಳು ಕಾಯುವಿಕೆಯ ಮಧ್ಯವರ್ತಿ ಸ್ಥಿತಿಗೆ ಸೂಚಿಸುತ್ತವೆ ಎಂದು ಕೆಲವರು ನಂಬುತ್ತಾರೆ. ‘ತನ್ನ ಬಳಿಗೆ ಸೇರಿಸಿಕೊಳ್ಳಲು’ ಒಂದು ಸ್ಥಳವನ್ನು ಸಿದ್ಧಪಡಿಸಲಿಕ್ಕಾಗಿ ಅವನು ಹೋಗುತ್ತಿದ್ದಾನೆಂದು ತನ್ನ ನಂಬಿಗಸ್ತ ಹಿಂಬಾಲಕರಿಗೆ ಮಾಡಿದ ಯೇಸುವಿನ ವಾಗ್ದಾನವನ್ನೂ ಕೆಲವರು ಸೂಚಿಸುತ್ತಾರೆ. ಆದರೆ ಇಂತಹ ಪ್ರತೀಕ್ಷೆಗಳು ಯಾವಾಗ ನೆರವೇರಲಿದ್ದವು? ಅವನು ತನ್ನ ಭವಿಷ್ಯತ್ತಿನ ಸಾನ್ನಿಧ್ಯದಲ್ಲಿ ‘ಮತ್ತೆ ಬರುವಾಗ’ ಅದಾಗುವುದೆಂದು ಕ್ರಿಸ್ತನು ಹೇಳಿದನು. (ಯೋಹಾನ 14:1-3) ತದ್ರೀತಿಯಲ್ಲಿ, ಅಭಿಷಿಕ್ತ ಕ್ರೈಸ್ತರಿಗೆ ಸಾಮಾನ್ಯವಾಗಿದ್ದ ನಿರೀಕ್ಷೆಯು ಸ್ವರ್ಗೀಯ ವಾಸವನ್ನು ಪಡೆಯುವುದಾಗಿತ್ತೆಂದು ಪೌಲನು 2 ಕೊರಿಂಥ 5:1-10 ರಲ್ಲಿ ಹೇಳಿದನು. ಇದು ಆತ್ಮದ ಅಮರತ್ವವೆಂಬ ಯಾವುದೊ ಪೂರ್ವ ಭಾವನೆಯ ಮುಖಾಂತರವಲ್ಲ, ಆದರೆ ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಪುನರುತ್ಥಾನದ ಮುಖಾಂತರ ನೆರವೇರಲಿರುವುದು. (1 ಕೊರಿಂಥ 15:23, 42-44) ಅರ್ಥಪ್ರತಿಪಾದಕ ಶಾರ್ಲ್‌ ಮಾಸೋನ್‌ ತೀರ್ಮಾನಿಸುವುದೇನೆಂದರೆ, 2 ಕೊರಿಂಥ 5:1-10ನ್ನು “ಹಾಗಾದರೆ ಒಂದು ‘ಮಧ್ಯವರ್ತಿ ಸ್ಥಿತಿ’ಯ ಊಹೆಯನ್ನು ಆಶ್ರಯಿಸದೆಯೇ ಚೆನ್ನಾಗಿ ಅರ್ಥಮಾಡಿಕೊಳ್ಳಸಾಧ್ಯವಿದೆ.”

ಫಿಲಿಪ್ಪಿ 1:21, 23 ರಲ್ಲಿ ಪೌಲನು ಹೇಳುವುದು: “ನನಗಂತೂ ಬದುಕುವದಂದರೆ ಕ್ರಿಸ್ತನೇ, ಸಾಯುವದು ಲಾಭವೇ. ಈ ಎರಡರ ನಡುವೆ ಸಿಕ್ಕಿಕೊಂಡಿದ್ದೇನೆ; ಇಲ್ಲಿಂದ ಹೋಗಿಬಿಟ್ಟು (“ಬಿಡುಗಡೆ ಹೊಂದಿ,” NW) ಕ್ರಿಸ್ತನ ಜೊತೆಯಲ್ಲಿರಬೇಕೆಂಬದೇ ನನ್ನ ಅಭಿಲಾಷೆ, ಅದು ಉತ್ತಮೋತ್ತಮ.” ಇಲ್ಲಿ ಪೌಲನು ಒಂದು “ಮಧ್ಯವರ್ತಿ ಸ್ಥಿತಿ” ಯನ್ನು ಸೂಚಿಸಿ ಮಾತಾಡುತ್ತಿದ್ದಾನೊ? ಕೆಲವರು ಹಾಗೆಂದು ನೆನಸುತ್ತಾರೆ. ಆದರೆ, ಪೌಲನು ಜೀವ ಅಥವಾ ಮರಣ ಎಂಬ ಈ ಎರಡು ಸಾಧ್ಯತೆಗಳ ಮೂಲಕ ಒತ್ತಡದಲ್ಲಿ ಹಾಕಲ್ಪಟ್ಟಿದ್ದನೆಂದು ಹೇಳುತ್ತಾನೆ. ಆದರೆ “ಕ್ರಿಸ್ತನ ಜೊತೆಯಲ್ಲಿರಬೇಕೆಂಬದೇ ನನ್ನ ಅಭಿಲಾಷೆ” ಎಂದು ಸೇರಿಸುವ ಮೂಲಕ ಅವನು ಮೂರನೆಯ ಸಾಧ್ಯತೆಯನ್ನು ಉಲ್ಲೀಖಿಸಿದನು. ಮರಣದ ತರುವಾಯ ಕೂಡಲೇ ಕ್ರಿಸ್ತನೊಂದಿಗೆ ಇರಲು ಒಂದು “ಬಿಡುಗಡೆ”ಯೊ? ಒಳ್ಳೆಯದು, ಈಗಾಗಲೇ ನೋಡಿರುವಂತೆ, ನಂಬಿಗಸ್ತ ಅಭಿಷಿಕ್ತ ಕ್ರೈಸ್ತರು, ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಪುನರುತ್ಥಾನಗೊಳ್ಳುವರೆಂದು ಪೌಲನು ನಂಬಿದನು. ಆದುದರಿಂದ, ಅವನು ಆ ಅವಧಿಯ ಘಟನೆಗಳ ಕುರಿತು ಮಾತಾಡುತ್ತಿದ್ದಿರಬಹುದು.

ಇದನ್ನು ಫಿಲಿಪ್ಪಿ 3:20, 21 ಮತ್ತು 1 ಥೆಸಲೊನೀಕ 4:16 ರಲ್ಲಿ ಕಂಡುಕೊಳ್ಳಲ್ಪಡುವ ಅವನ ಮಾತುಗಳಿಂದ ನೋಡಸಾಧ್ಯವಿದೆ. ಕ್ರಿಸ್ತ ಯೇಸುವಿನ ಸಾನ್ನಿಧ್ಯದ ಸಮಯದಲ್ಲಿ ಇಂತಹ ಒಂದು “ಬಿಡುಗಡೆಯು” ದೇವರು ಅವನಿಗಾಗಿ ಸಿದ್ಧಮಾಡಿದ್ದ ಪ್ರತಿಫಲವನ್ನು ಪಡೆಯುವಂತೆ ಪೌಲನನ್ನು ಶಕ್ತಗೊಳಿಸುವುದು. ಇದು ಅವನ ನಿರೀಕ್ಷೆಯಾಗಿತ್ತು ಎಂಬ ಸಂಗತಿಯು, ಯೌವನಸ್ಥನಾದ ತಿಮೊಥೆಯನಿಗೆ ಬರೆದ ಅವನ ಮಾತುಗಳಲ್ಲಿ ತಿಳಿದುಬರುತ್ತದೆ: “ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗೆ ಸಿದ್ಧವಾಗಿದೆ; ಅದನ್ನು ನೀತಿಯುಳ್ಳ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು; ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು.”—2 ತಿಮೊಥೆಯ 4:8.

ಪುನರುತ್ಥಾನ—ಒಂದು ಸೊಗಸಾದ ಬೈಬಲ್‌ ಸತ್ಯ

ಪುನರುತ್ಥಾನವನ್ನು ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಆರಂಭಗೊಳ್ಳುವ ಒಂದು ಘಟನೆಯೆಂದು ಪ್ರಥಮ ಕ್ರೈಸ್ತರು ಪರಿಗಣಿಸಿದರು, ಮತ್ತು ಈ ಸೊಗಸಾದ ಬೈಬಲ್‌ ಸತ್ಯದಿಂದ ಅವರು ಬಲವನ್ನು ಮತ್ತು ಸಾಂತ್ವನವನ್ನು ಪಡೆದರು. (ಮತ್ತಾಯ 24:3; ಯೋಹಾನ 5:28, 29; 11:24, 25; 1 ಕೊರಿಂಥ 15:19, 20; 1 ಥೆಸಲೊನೀಕ 4:13) ಒಂದು ಅಮರ ಆತ್ಮದ ಕುರಿತಾದ ಧರ್ಮಭ್ರಷ್ಟ ಬೋಧನೆಗಳನ್ನು ತಿರಸ್ಕರಿಸುತ್ತಾ, ಅವರು ನಂಬಿಗಸ್ತಿಕೆಯಿಂದ ಆ ಭವಿಷ್ಯತ್ತಿನ ಆನಂದಕ್ಕಾಗಿ ಕಾದರು.—ಅ. ಕೃತ್ಯಗಳು 20:28-30; 2 ತಿಮೊಥೆಯ 4:3, 4; 2 ಪೇತ್ರ 2:1-3.

ನಿಶ್ಚಯವಾಗಿಯೂ, ಪುನರುತ್ಥಾನವು ಒಂದು ಸ್ವರ್ಗೀಯ ನಿರೀಕ್ಷೆಯಿರುವ ಕ್ರೈಸ್ತರಿಗೆ ಮಾತ್ರ ಸೀಮಿತವಾಗಿಲ್ಲ. (1 ಪೇತ್ರ 1:3-5) ಪೂರ್ವಜರು ಮತ್ತು ಇತರ ಪ್ರಾಚೀನ ದೇವರ ಸೇವಕರು, ಭೂಮಿಯ ಮೇಲೆ ಸತ್ತವರನ್ನು ಪುನಃ ಜೀವಿತಕ್ಕೆ ತರುವ ಯೆಹೋವನ ಸಾಮರ್ಥ್ಯದಲ್ಲಿ ನಂಬಿಕೆಯನ್ನಿಟ್ಟರು. (ಯೋಬ 14:14, 15; ದಾನಿಯೇಲ 12:2; ಲೂಕ 20:37, 38; ಇಬ್ರಿಯ 11:19, 35) ಶತಮಾನಗಳ ಉದ್ದಕ್ಕೂ ಜೀವಿಸಿದ, ದೇವರನ್ನು ಎಂದಿಗೂ ಅರಿಯದಿದ್ದ ಲಕ್ಷಾಂತರ ಜನರಿಗೂ ಒಂದು ಭೂ ಪ್ರಮೋದವನದಲ್ಲಿ ಪುನಃ ಜೀವಿತಕ್ಕೆ ಬರುವ ಅವಕಾಶವಿದೆ, ಯಾಕೆಂದರೆ “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.” (ಅ. ಕೃತ್ಯಗಳು 24:15; ಲೂಕ 23:42, 43) ಇದೊಂದು ರೋಮಾಂಚಕಾರಿ ಪ್ರತೀಕ್ಷೆಯಲ್ಲವೊ?

ಕಷ್ಟಾನುಭವ ಮತ್ತು ಮರಣವು ಎಂದಿಗೂ ಇರುವುವು ಎಂದು ನಾವು ನಂಬುವಂತೆ ಮಾಡುವುದಕ್ಕಿಂತ, “ಕಡೇ ಶತ್ರುವಾದ ಮರಣ”ವು ಎಂದೆಂದಿಗೂ ತೆಗೆದುಹಾಕಲ್ಪಡುವ ಮತ್ತು ನಂಬಿಗಸ್ತ ಮಾನವಕುಲವು ಪ್ರಮೋದವನಕ್ಕೆ ಪುನಃ ಸ್ಥಾಪಿಸಲ್ಪಟ್ಟ ಭೂಮಿಯ ಮೇಲೆ ಅನಂತವಾಗಿ ಜೀವಿಸುವ ಸಮಯದ ಕಡೆಗೆ ನಮ್ಮ ಗಮನವನ್ನು ಯೆಹೋವನು ನಿರ್ದೇಶಿಸುತ್ತಾನೆ. (1 ಕೊರಿಂಥ 15:26; ಯೋಹಾನ 3:16; 2 ಪೇತ್ರ 3:13) ನಮ್ಮ ಪ್ರಿಯರು ಜೀವಿತಕ್ಕೆ ಪುನಃ ಬರುವುದನ್ನು ನೋಡುವುದು ಎಂತಹ ಅದ್ಭುತ ವಿಷಯವಾಗಿರುವುದು! ದೇವರ ವಾಕ್ಯದ ಮೇಲೆ ಆಧರಿಸಿರದ, ಗ್ರೀಕ್‌ ತತ್ವಜ್ಞಾನದ ಮೇಲೆ ಆಧರಿಸಿರುವ ಒಂದು ಸಿದ್ಧಾಂತವಾದ ಮಾನವ ಆತ್ಮದ ಊಹಾತ್ಮಕ ಅಮರತ್ವಕ್ಕಿಂತ ಈ ಖಂಡಿತವಾದ ನಿರೀಕ್ಷೆಯು ಎಷ್ಟೊಂದು ಉತ್ತಮವಾಗಿದೆ! ದೇವರ ನಿಶ್ಚಿತವಾದ ವಾಗ್ದಾನದ ಮೇಲೆ ನಿಮ್ಮ ನಿರೀಕ್ಷೆಯನ್ನು ನೀವು ಆಧರಿಸುವುದಾದರೆ, ಬೇಗನೆ “ಇನ್ನು ಮರಣವಿರುವದಿಲ್ಲ” ಎಂದು ನೀವು ಸಹ ನಿಶ್ಚಿತರಾಗಿರಬಲ್ಲಿರಿ!—ಪ್ರಕಟನೆ 21:3-5.

[ಪುಟ 31 ರಲ್ಲಿರುವ ಚಿತ್ರ]

ಪುನರುತ್ಥಾನವು ಒಂದು ಸೊಗಸಾದ ಬೈಬಲ್‌ ಸತ್ಯವಾಗಿದೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ