ರಕ್ಷಣೆ ಅದು ನಿಜವಾಗಿ ಅರ್ಥೈಸುವ ಸಂಗತಿ
‘ನೀವು ರಕ್ಷಿಸಲ್ಪಟ್ಟಿದ್ದೀರೊ?’ ಅನೇಕವೇಳೆ, ಈ ಪ್ರಶ್ನೆಯನ್ನು ಕೇಳುವವರು, ತಾವು ‘ಯೇಸುವನ್ನು ತಮ್ಮ ವೈಯಕ್ತಿಕ ರಕ್ಷಕನೋಪಾದಿ ಅಂಗೀಕರಿಸಿ’ರುವ ಕಾರಣದಿಂದ ತಾವು ರಕ್ಷಿಸಲ್ಪಟ್ಟಿದ್ದೇವೆಂದು ನೆನಸುತ್ತಾರೆ. ಆದರೂ ರಕ್ಷಣೆಗೆ ವಿಭಿನ್ನ ಹಾದಿಗಳಿವೆ, ಮತ್ತು ‘ಯೇಸು ನಿಮ್ಮ ಹೃದಯದಲ್ಲಿರುವ’ ತನಕ, ನೀವು ಏನನ್ನೇ ನಂಬಲಿ ಅಥವಾ ನೀವು ಯಾವುದೇ ಚರ್ಚಿಗೆ ಸೇರಿರಲಿ, ಅದು ಪ್ರಾಮುಖ್ಯವಾದದ್ದಲ್ಲವೆಂದು ಇನ್ನಿತರರು ನೆನಸುತ್ತಾರೆ.
“ಎಲ್ಲಾ ಮನುಷ್ಯರು ರಕ್ಷಣೆಯನ್ನು” ಹೊಂದಬೇಕೆಂಬುದೇ ದೇವರ ಚಿತ್ತವಾಗಿದೆಯೆಂದು ಬೈಬಲು ಹೇಳುತ್ತದೆ. (1 ತಿಮೊಥೆಯ 2:3, 4) ಹೀಗೆ ರಕ್ಷಣೆಯು, ಅದನ್ನು ಅಂಗೀಕರಿಸುವವರೆಲ್ಲರಿಗೆ ದೊರೆಯುತ್ತದೆ. ಆದರೆ ರಕ್ಷಿಸಲ್ಪಡುವುದು ಎಂದರೇನು? ನಿಮ್ಮ ವತಿಯಿಂದ ಸ್ವಲ್ಪ ಅಥವಾ ಯಾವುದೇ ಪ್ರಯತ್ನವಿಲ್ಲದೆ, ಇದು ನಿಜವಾಗಿಯೂ ನಿಮಗೆ ಸುಮ್ಮನೆ ಸಂಭವಿಸುವ ಯಾವುದೋ ಒಂದು ವಿಷಯವಾಗಿದೆಯೊ?
“ರಕ್ಷಣೆ” ಎಂಬ ಪದದ ಅರ್ಥವು, “ಅಪಾಯ ಅಥವಾ ನಾಶನದಿಂದ ಬಿಡುಗಡೆ” ಎಂದಾಗಿದೆ. ಹೀಗೆ, ನಿಜ ರಕ್ಷಣೆಯು ಪ್ರಶಾಂತ ಮಾನಸಿಕ ಸ್ಥಿತಿಗಿಂತಲೂ ಹೆಚ್ಚಿನದ್ದನ್ನು ಒಳಗೊಳ್ಳುತ್ತದೆ. ಈ ಪ್ರಸ್ತುತ ದುಷ್ಟ ವಿಷಯಗಳ ವ್ಯವಸ್ಥೆಯ ನಾಶನದಿಂದ ಹಾಗೂ ಅಂತಿಮವಾಗಿ ಮರಣದಿಂದಲೇ ರಕ್ಷಿಸಲ್ಪಡುವುದು ಇದರ ಅರ್ಥವಾಗಿದೆ! ಆದರೆ ದೇವರು ಯಾರನ್ನು ರಕ್ಷಿಸುವನು? ಉತ್ತರವಾಗಿ, ಈ ವಿಷಯದ ಕುರಿತಾಗಿ ಯೇಸು ಕ್ರಿಸ್ತನು ಕಲಿಸಿದ ವಿಚಾರವನ್ನು ನಾವು ಪರೀಕ್ಷಿಸೋಣ. ನಮ್ಮ ವಿಚಾರಣೆಯ ಫಲಿತಾಂಶಗಳು ನಿಮ್ಮನ್ನು ಬೆರಗುಗೊಳಿಸಬಹುದು.
ರಕ್ಷಣೆ—ಎಲ್ಲ ಧರ್ಮಗಳಲ್ಲಿ ಕಂಡುಬರುತ್ತದೊ?
ಒಂದು ಸಂದರ್ಭದಲ್ಲಿ, ಒಬ್ಬ ಸಮಾರ್ಯದ ಸ್ತ್ರೀಯೊಂದಿಗೆ ಯೇಸು ಒಂದು ಸಂಭಾಷಣೆಯನ್ನು ನಡಿಸಿದ್ದನು. ಅವಳು ಒಬ್ಬ ಯೆಹೂದ್ಯಳಾಗಿರದಿದ್ದರೂ, “ಕ್ರಿಸ್ತನೆಂದು ಕರೆಯಲ್ಪಡುವ” (NW) ಮೆಸ್ಸೀಯನು ಬರುವನೆಂದು ಅವಳು ಬಹುಮಟ್ಟಿಗೆ ಸರಿಯಾಗಿ ನಂಬಿದಳು. (ಯೋಹಾನ 4:25) ರಕ್ಷಿಸಲ್ಪಡಲು ಅಂತಹ ನಂಬಿಕೆ ಅವಳಿಗೆ ಸಾಕಾಗಿತ್ತೊ? ಇಲ್ಲ, ಏಕೆಂದರೆ ಯೇಸು ಧೈರ್ಯದಿಂದ ಆ ಸ್ತ್ರೀಗೆ ಹೇಳಿದ್ದು: “ನೀವು ಅರಿಯದೆ ಇರುವಂಥದನ್ನು ಆರಾಧಿಸುವವರು.” ಈ ಸ್ತ್ರೀಯು ರಕ್ಷಣೆಯನ್ನು ಪಡೆಯಬೇಕಿದ್ದಲ್ಲಿ, ಅವಳು ತನ್ನ ಆರಾಧನಾ ವಿಧವನ್ನು ಸರಿಹೊಂದಿಸಿಕೊಳ್ಳಬೇಕೆಂಬುದು ಯೇಸುವಿಗೆ ತಿಳಿದಿತ್ತು. ಆದುದರಿಂದಲೇ ಯೇಸು ವಿವರಿಸಿದ್ದು: “ಅದಿರಲಿ; ಸತ್ಯಭಾವದಿಂದ ದೇವಾರಾಧನೆಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ; ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ.”—ಯೋಹಾನ 4:22, 23.
ಇನ್ನೊಂದು ಸಂದರ್ಭದಲ್ಲಿ ಯೇಸು ರಕ್ಷಣೆಯ ಕುರಿತಾದ ತನ್ನ ದೃಷ್ಟಿಕೋನವನ್ನು ಪ್ರಕಟಪಡಿಸಿದನು. ಅದು ಯೆಹೂದ್ಯಮತದ ಪ್ರಧಾನ ಧಾರ್ಮಿಕ ಪಂಥವಾದ ಫರಿಸಾಯರನ್ನು ಒಳಗೊಂಡಿತ್ತು. ಫರಿಸಾಯರು ಒಂದು ಆರಾಧನಾ ವ್ಯವಸ್ಥೆಯನ್ನು ನಿರ್ಮಿಸಿಕೊಂಡಿದ್ದು, ಅದಕ್ಕೆ ದೇವರ ಒಪ್ಪಿಗೆಯಿತ್ತೆಂದು ನಂಬಿದ್ದರು. ಆದರೆ ಯೇಸು ಫರಿಸಾಯರಿಗೆ ಹೇಳಿದ ಮಾತುಗಳನ್ನು ಆಲಿಸಿರಿ: “ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ; ಅವನು ಬರೆದದ್ದೇನಂದರೆ—ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಮನಸ್ಸು ನನಗೆ ದೂರವಾಗಿದೆ. ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ ಭಕ್ತಿ ತೋರಿಸುವದು ವ್ಯರ್ಥ.”—ಮತ್ತಾಯ 15:7-9.
ಇಂದು ಕ್ರಿಸ್ತನಲ್ಲಿ ನಂಬಿಕೆಯಿಡುತ್ತೇವೆಂದು ಪ್ರತಿಪಾದಿಸುವ ಅನೇಕ ಧಾರ್ಮಿಕ ಗುಂಪುಗಳ ಕುರಿತಾಗಿ ಏನು? ರಕ್ಷಣೆಯನ್ನು ಪಡೆದುಕೊಳ್ಳಲಿಕ್ಕಾಗಿರುವ ನ್ಯಾಯಸಮ್ಮತವಾದ ಮಾರ್ಗಗಳೋಪಾದಿ ಯೇಸು ಎಲ್ಲ ಧಾರ್ಮಿಕ ಗುಂಪುಗಳನ್ನು ಅನುಮೋದಿಸುವನೊ? ಈ ವಿಷಯದ ಕುರಿತಾಗಿ ನಾವು ಊಹಿಸಿಕೊಳ್ಳಬೇಕಾಗಿಲ್ಲ, ಏಕೆಂದರೆ ಯೇಸು ಸ್ಪಷ್ಟವಾಗಿ ಹೇಳಿದ್ದು: “ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ [“ಮಾಡುವವನೇ,” NW] ಪರಲೋಕರಾಜ್ಯಕ್ಕೆ ಸೇರುವನು. ಸ್ವಾಮೀ, ಸ್ವಾಮೀ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ—ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.”—ಮತ್ತಾಯ 7:21-23.
ಯೇಸುವಿನ ಕುರಿತಾದ ನಿಷ್ಕೃಷ್ಟ ಜ್ಞಾನವು ರಕ್ಷಣೆಗೆ ಅತ್ಯಾವಶ್ಯಕ
ಯೇಸುವಿನ ಈ ಮಾತುಗಳಿಗೆ ಸ್ತಿಮಿತವಾದ ಸೂಚಿತಾರ್ಥಗಳಿವೆ. ಅನೇಕ ಧರ್ಮನಿಷ್ಠ ಜನರು, ‘ತಂದೆಯ ಚಿತ್ತವನ್ನು ಮಾಡಲು’ ತಪ್ಪಿಹೋಗುತ್ತಿದ್ದಾರೆಂದು ಆ ಮಾತುಗಳು ಸೂಚಿಸುತ್ತವೆ. ಹಾಗಾದರೆ, ಒಬ್ಬನು ನಿಜ ರಕ್ಷಣೆಯನ್ನು ಹೇಗೆ ಪಡೆದುಕೊಳ್ಳಬಲ್ಲನು? ಒಂದನೆಯ ತಿಮೊಥೆಯ 2:3, 4 ಉತ್ತರಿಸುವುದು: “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ [“ನಿಷ್ಕೃಷ್ಟ,” NW] ಜ್ಞಾನಕ್ಕೆ ಸೇರಬೇಕೆಂಬದು ಆತನ [ದೇವರ] ಚಿತ್ತವಾಗಿದೆ.” (ಓರೆಅಕ್ಷರಗಳು ನಮ್ಮವು.)—ಕೊಲೊಸ್ಸೆ 1:9, 10ನ್ನು ಹೋಲಿಸಿರಿ.
ರಕ್ಷಣೆಯನ್ನು ಪಡೆಯಲಿಕ್ಕಾಗಿ ಅಂತಹ ಜ್ಞಾನವು ನಿರ್ಣಾಯಕವಾಗಿದೆ. ರೋಮನ್ ಸೆರೆಯ ಯಜಮಾನನು, ಅಪೊಸ್ತಲ ಪೌಲನಿಗೂ ಅವನ ಸಂಗಡಿಗನಾದ ಸೀಲನಿಗೂ “ನಾನು ರಕ್ಷಣೆಹೊಂದುವದಕ್ಕೆ ಏನು ಮಾಡಬೇಕು” ಎಂದು ಕೇಳಿದಾಗ, ಅವರು ಉತ್ತರಿಸಿದ್ದು: “ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು.” (ಅ. ಕೃತ್ಯಗಳು 16:30, 31) ಆ ಸೆರೆಯ ಯಜಮಾನನೂ ಅವನ ಕುಟುಂಬದವರೆಲ್ಲರೂ ತಮ್ಮ ಹೃದಯಗಳಲ್ಲಿ ನಿರ್ದಿಷ್ಟ ಭಾವನೆಯನ್ನು ಹೊಂದಿರುವುದು ಮಾತ್ರ ಅಗತ್ಯವಾಗಿತ್ತೆಂಬುದನ್ನು ಅದು ಅರ್ಥೈಸಿತೊ? ಇಲ್ಲ, ಒಂದು ಕಾರಣವೇನೆಂದರೆ, ಯೇಸು ಯಾರಾಗಿದ್ದನು, ಅವನು ಏನು ಮಾಡಿದನು, ಹಾಗೂ ಅವನು ಏನನ್ನು ಕಲಿಸಿದನು ಎಂಬುದರ ಕುರಿತಾದ ಸ್ವಲ್ಪ ತಿಳುವಳಿಕೆಯಾದರೂ ಅವರಿಗೆ ಇರದಿದ್ದರೆ, ಅವರು ನಿಜವಾಗಿಯೂ “ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡ”ಲು ಸಾಧ್ಯವಿರಲಿಲ್ಲ.
ಉದಾಹರಣೆಗಾಗಿ, ಯೇಸು ಒಂದು ಸ್ವರ್ಗೀಯ ಸರಕಾರ—“ದೇವರ ರಾಜ್ಯ”—ದ ಸ್ಥಾಪನೆಯ ಕುರಿತಾಗಿ ಕಲಿಸಿದನು. (ಲೂಕ 4:43) ಕ್ರೈಸ್ತ ನೈತಿಕತೆ ಹಾಗೂ ವರ್ತನೆಯ ವಿಷಯದಲ್ಲಿ ಸಹ ಅವನು ಮೂಲತತ್ವಗಳನ್ನು ಸ್ಥಾಪಿಸಿದನು. (ಮತ್ತಾಯ, 5-7ನೆಯ ಅಧ್ಯಾಯಗಳು) ರಾಜಕೀಯ ವಿಚಾರಗಳಲ್ಲಿ ತನ್ನ ಶಿಷ್ಯರು ತೆಗೆದುಕೊಳ್ಳಲಿದ್ದ ಸ್ಥಾನವನ್ನು ಅವನು ರೇಖಿಸಿದನು. (ಯೋಹಾನ 15:19) ಅವನು ಒಂದು ಭೌಗೋಲಿಕ ಬೋಧನಾ ಕಾರ್ಯಕ್ರಮವನ್ನು ಸ್ಥಾಪಿಸಿ, ಅದರಲ್ಲಿ ಪಾಲ್ಗೊಳ್ಳುವಂತೆ ತನ್ನ ಹಿಂಬಾಲಕರಿಗೆ ನಿಯೋಗಿಸಿದನು. (ಮತ್ತಾಯ 24:14; ಅ. ಕೃತ್ಯಗಳು 1:8) ಹೌದು, ‘ಯೇಸುವಿನ ಮೇಲೆ ನಂಬಿಕೆ’ಯಿಡುವುದರ ಅರ್ಥ, ಅನೇಕ ವಿಷಯಗಳನ್ನು ಅರ್ಥಮಾಡಿಕೊಳ್ಳುವುದೇ! ಆದುದರಿಂದ, ಈ ಹೊಸ ವಿಶ್ವಾಸಿಗಳು ದೀಕ್ಷಾಸ್ನಾನ ಪಡೆದುಕೊಳ್ಳುವ ಮುಂಚೆ, ಪೌಲ ಮತ್ತು ಸೀಲರು “ಅವನಿಗೂ [ಸೆರೆಯ ಯಜಮಾನನಿಗೂ] ಅವನ ಮನೆಯಲ್ಲಿದ್ದವರೆಲ್ಲರಿಗೂ ದೇವರ [“ಯೆಹೋವನ,” NW] ವಾಕ್ಯವನ್ನು ತಿಳಿಸಿ”ರುವುದರಲ್ಲಿ ಆಶ್ಚರ್ಯವೇನಿಲ್ಲ.—ಅ. ಕೃತ್ಯಗಳು 16:32, 33.
ದೇವರ ಕುರಿತಾದ ನಿಷ್ಕೃಷ್ಟ ಜ್ಞಾನವೂ ಅತ್ಯಾವಶ್ಯಕ
ಯೇಸುವಿನಲ್ಲಿ ನಿಜವಾಗಿಯೂ ನಂಬಿಕೆಯಿಡುವುದರ ಆವಶ್ಯಕ ಭಾಗವು, ಸ್ವತಃ ಯೇಸುವೇ ಆರಾಧಿಸುವ ದೇವರನ್ನು ಆರಾಧಿಸುವುದನ್ನು ಒಳಗೊಳ್ಳುತ್ತದೆ. ಯೇಸು ಪ್ರಾರ್ಥಿಸಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”—ಯೋಹಾನ 17:3.
ತನ್ನ ಭೂಶುಶ್ರೂಷೆಯ ಸಮಯದಲ್ಲಿ, ದೇವಕುಮಾರನು ಯಾವಾಗಲೂ ತನ್ನ ತಂದೆಯ ಕಡೆಗೆ—ತನ್ನ ಕಡೆಗಲ್ಲ—ಗಮನವನ್ನು ನಿರ್ದೇಶಿಸಿದನು. ತಾನು ಸರ್ವಶಕ್ತ ದೇವರೆಂದು ಅವನು ಎಂದೂ ಪ್ರತಿಪಾದಿಸಲಿಲ್ಲ. (ಯೋಹಾನ 12:49, 50) ಅನೇಕ ಸಂದರ್ಭಗಳಲ್ಲಿ ಯೇಸು, ತಾನು ತನ್ನ ತಂದೆಯ ಕೈಕೆಳಗಿನವನಾಗಿದ್ದೇನೆಂದು ಹೇಳುವ ಮೂಲಕ, ದೇವರ ಏರ್ಪಾಡಿನಲ್ಲಿರುವ ತನ್ನ ಸ್ಥಾನವನ್ನು ಸ್ಪಷ್ಟಪಡಿಸಿದನು. (ಲೂಕ 22:41, 42; ಯೋಹಾನ 5:19) ಅಷ್ಟೇಕೆ, ಯೇಸು ಉದ್ಗರಿಸಿದ್ದು: “ತಂದೆಯು ನನಗಿಂತ ದೊಡ್ಡವನು.” (ಯೋಹಾನ 14:28) ನಿಮ್ಮ ಚರ್ಚು, ದೇವರ ಹಾಗೂ ಕ್ರಿಸ್ತನ ನಡುವಿನ ನೈಜ ಸಂಬಂಧವನ್ನು ನಿಮಗೆ ಕಲಿಸಿದೆಯೊ? ಅಥವಾ ಸ್ವತಃ ಯೇಸುವೇ ಸರ್ವಶಕ್ತ ದೇವರಾಗಿದ್ದಾನೆಂದು ನಂಬುವಂತೆ ನಿಮ್ಮನ್ನು ಮಾರ್ಗದರ್ಶಿಸಲಾಗಿದೆಯೊ? ಸರಿಯಾದ ತಿಳುವಳಿಕೆಯನ್ನು ಪಡೆದುಕೊಂಡಿರುವುದರ ಮೇಲೆ ನಿಮ್ಮ ರಕ್ಷಣೆಯು ಅವಲಂಬಿಸುತ್ತದೆ.
ಕರ್ತನ ಪ್ರಾರ್ಥನೆಯಲ್ಲಿ, “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ” ಎಂದು ಪ್ರಾರ್ಥಿಸುವಂತೆ, ಯೇಸು ತನ್ನ ಶಿಷ್ಯರನ್ನು ಪ್ರಚೋದಿಸಿದನು. (ಮತ್ತಾಯ 6:9) ಬೈಬಲಿನ ಅಧಿಕಾಂಶ ಭಾಷಾಂತರಗಳು, ದೇವರ ಹೆಸರನ್ನು “ಕರ್ತ”ನು ಎಂದು ಭಾಷಾಂತರಿಸುವ ಮೂಲಕ ಅದನ್ನು ದೃಷ್ಟಿಗೆ ಮರೆಮಾಡಿವೆ. ಆದರೆ “ಹಳೆಯ ಒಡಂಬಡಿಕೆ”ಯ ಪುರಾತನ ಪ್ರತಿಗಳಲ್ಲಿ, ದೇವರ ಹೆಸರು ಆರು ಸಾವಿರಕ್ಕಿಂತಲೂ ಹೆಚ್ಚು ಬಾರಿ ಕಂಡುಬಂದಿತು! ಕೀರ್ತನೆ 83:18ನ್ನು ಹೀಗೆ ಓದಲಾಗುತ್ತದೆ: “ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.” (ಓರೆಅಕ್ಷರಗಳು ನಮ್ಮವು.) ಯೆಹೋವ ಎಂಬ ದೇವರ ಹೆಸರನ್ನು ಉಪಯೋಗಿಸುವಂತೆ ನಿಮಗೆ ಕಲಿಸಲಾಗಿದೆಯೊ? ಇಲ್ಲದಿರುವಲ್ಲಿ, ನಿಮ್ಮ ರಕ್ಷಣೆಯು ಗಂಡಾಂತರದಲ್ಲಿದೆ, ಏಕೆಂದರೆ “ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರು ರಕ್ಷಿಸಲ್ಪಡುವರು”!—ಅ. ಕೃತ್ಯಗಳು 2:21, NW; ಯೋವೇಲ 2:32ನ್ನು ಹೋಲಿಸಿರಿ.
ಆತ್ಮದಿಂದ ಹಾಗೂ ಸತ್ಯದಿಂದ
ಯೇಸು ಕ್ರಿಸ್ತನು ದೇವರ ವಾಕ್ಯವಾದ ಬೈಬಲಿನ ಕಡೆಗೆ ಸಹ ಗಮನವನ್ನು ನಿರ್ದೇಶಿಸಿದನು. ನಿರ್ದಿಷ್ಟ ವಿಷಯಗಳ ಕುರಿತಾದ ದೇವರ ದೃಷ್ಟಿಕೋನವನ್ನು ವಿವರಿಸುವಾಗ, ಅವನು ಅನೇಕವೇಳೆ ‘ಎಂಬುದಾಗಿ ಬರೆದದೆ’ ಎಂದು ಹೇಳುತ್ತಿದ್ದನು. (ಮತ್ತಾಯ 4:4, 7, 10; 11:10; 21:13) ತಾನು ಸಾಯುವುದಕ್ಕೆ ಮುಂಚಿನ ರಾತ್ರಿ, ಯೇಸು ತನ್ನ ಶಿಷ್ಯರ ಕುರಿತಾಗಿ ಪ್ರಾರ್ಥಿಸಿದ್ದು: “ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆ ಪಡಿಸು; ನಿನ್ನ ವಾಕ್ಯವೇ ಸತ್ಯವು.”—ಯೋಹಾನ 17:17.
ಹೀಗೆ, ದೇವರ ವಾಕ್ಯವಾದ ಬೈಬಲಿನ ಬೋಧನೆಗಳ ಕುರಿತಾದ ತಿಳುವಳಿಕೆಯನ್ನು ಹೊಂದಿರುವುದು, ರಕ್ಷಣೆಗಾಗಿರುವ ಇನ್ನೊಂದು ಆವಶ್ಯಕತೆಯಾಗಿದೆ. (2 ತಿಮೊಥೆಯ 3:16) ಬೈಬಲು ಮಾತ್ರವೇ ಇಂತಹ ಪ್ರಶ್ನೆಗಳಿಗೆ ಉತ್ತರಕೊಡುತ್ತದೆ: ಜೀವಿತದ ಅರ್ಥವೇನು? ಇಷ್ಟು ದೀರ್ಘ ಸಮಯದ ವರೆಗೆ ದುಷ್ಟತನವು ಮುಂದುವರಿಯುವಂತೆ ದೇವರು ಏಕೆ ಅನುಮತಿಸಿದ್ದಾನೆ? ವ್ಯಕ್ತಿಯೊಬ್ಬನು ಮೃತಪಟ್ಟಾಗ ಅವನಿಗೆ ಏನು ಸಂಭವಿಸುತ್ತದೆ? ನಿಜವಾಗಿಯೂ ದೇವರು ಜನರಿಗೆ ನರಕಾಗ್ನಿಯಲ್ಲಿ ಚಿತ್ರಹಿಂಸೆ ಕೊಡುತ್ತಾನೊ? ಭೂಮಿಗಾಗಿರುವ ದೇವರ ಉದ್ದೇಶವು ಏನಾಗಿದೆ?a ಆ ವಾದಾಂಶಗಳ ಸರಿಯಾದ ತಿಳುವಳಿಕೆಯಿಲ್ಲದೆ, ಒಬ್ಬನು ದೇವರನ್ನು ಸೂಕ್ತವಾಗಿ ಆರಾಧಿಸಸಾಧ್ಯವಿಲ್ಲ; ಏಕೆಂದರೆ ಯೇಸು ಹೇಳಿದ್ದು: “ಸತ್ಯಭಾವದಿಂದ ದೇವಾರಾಧನೆಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ [“ಆತ್ಮದಿಂದಲೂ ಸತ್ಯದಿಂದಲೂ,” NW] ತಂದೆಯನ್ನು ಆರಾಧಿಸು”ವರು.—ಯೋಹಾನ 4:23.
ನಂಬಿಕೆಯು ಕ್ರಿಯೆಗೈಯುವಂತೆ ಪ್ರೇರೇಪಿಸುತ್ತದೆ
ರಕ್ಷಣೆಯು ಕೇವಲ ಸಮಾಚಾರವನ್ನು ಪಡೆದುಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೊಳ್ಳುತ್ತದೆ. ಪ್ರತಿಕ್ರಿಯಾತ್ಮಕ ಹೃದಯವೊಂದರಲ್ಲಿ, ದೇವರ ನಿಷ್ಕೃಷ್ಟ ಜ್ಞಾನವು ನಂಬಿಕೆಯನ್ನು ಉತ್ಪಾದಿಸುತ್ತದೆ. (ರೋಮಾಪುರ 10:10, 17; ಇಬ್ರಿಯ 11:6) ಅಂತಹ ನಂಬಿಕೆಯು ಒಬ್ಬನನ್ನು ಕ್ರಿಯೆಗೈಯುವಂತೆ ಪ್ರಚೋದಿಸುತ್ತದೆ. ಉದಾಹರಣೆಗಾಗಿ, ಬೈಬಲ್ ಬುದ್ಧಿವಾದ ನೀಡುವುದು: ‘ದೇವರು ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ತಿರುಗಿದರೆ ದೇವರ ಸನ್ನಿಧಾನದಿಂದ ವಿಶ್ರಾಂತಿಕಾಲಗಳು ಒದಗುವವು.’—ಅ. ಕೃತ್ಯಗಳು 3:19.
ಹೌದು, ನಡವಳಿಕೆ ಹಾಗೂ ನೈತಿಕತೆಯ ವಿಷಯದಲ್ಲಿ ದೇವರ ಮಟ್ಟಗಳಿಗೆ ಒಬ್ಬನನ್ನು ಸರಿಹೊಂದಿಸಿಕೊಳ್ಳುವುದು ಸಹ ರಕ್ಷಣೆಯಲ್ಲಿ ಒಳಗೂಡಿದೆ. ದೇವರ ವಾಕ್ಯದ ರೂಪಾಂತರಿಸುವ ಪ್ರಭಾವದ ಕೆಳಗೆ, ಸುಳ್ಳಾಡುವಿಕೆ ಹಾಗೂ ವಂಚನೆಯ ಜೀವನಪರ್ಯಂತರದ ರೂಢಿಗಳು, ಪ್ರಾಮಾಣಿಕತೆ ಹಾಗೂ ಸತ್ಯತೆಯಿಂದ ಸ್ಥಾನಾಂತರಿಸಲ್ಪಡುತ್ತವೆ. (ತೀತ 2:10) ಸಲಿಂಗಿಕಾಮ, ವ್ಯಭಿಚಾರ ಹಾಗೂ ಹಾದರಗಳಂತಹ ಅನೈತಿಕ ಅಭ್ಯಾಸಗಳು ತೊರೆಯಲ್ಪಟ್ಟು, ಪರಿಶುದ್ಧವಾದ ನೈತಿಕ ನಡವಳಿಕೆಯಿಂದ ಸ್ಥಾನಭರ್ತಿಮಾಡಲ್ಪಡುತ್ತವೆ. (1 ಕೊರಿಂಥ 6:9-11) ಇದು ಭಾವೋದ್ವೇಗದ ಮೇಲೆ ಆಧಾರಿತವಾದ ತಾತ್ಕಾಲಿಕ ವರ್ಜಿಸುವಿಕೆಯಾಗಿರದೆ, ದೇವರ ವಾಕ್ಯದ ಜಾಗರೂಕವಾದ ಅಧ್ಯಯನ ಹಾಗೂ ಅನ್ವಯದಿಂದ ಫಲಿಸುವ ಒಂದು ಶಾಶ್ವತವಾದ ಬದಲಾವಣೆಯಾಗಿದೆ.—ಎಫೆಸ 4:22-24.
ಸಕಾಲದಲ್ಲಿ, ದೇವರಿಗಾಗಿರುವ ಪ್ರೀತಿ ಹಾಗೂ ಗಣ್ಯತೆಯು, ದೇವರಿಗೆ ಪೂರ್ಣ ಸಮರ್ಪಣೆಯನ್ನು ಮಾಡುವಂತೆ, ಹಾಗೂ ಅದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸುವಂತೆ, ಪ್ರಾಮಾಣಿಕ ಹೃದಯದ ಒಬ್ಬ ವ್ಯಕ್ತಿಯನ್ನು ಪ್ರಚೋದಿಸುತ್ತದೆ. (ಮತ್ತಾಯ 28:19, 20; ರೋಮಾಪುರ 12:1) ದೀಕ್ಷಾಸ್ನಾನ ಪಡೆದುಕೊಂಡಿರುವ ಕ್ರೈಸ್ತರು ದೇವರ ದೃಷ್ಟಿಯಲ್ಲಿ ರಕ್ಷಿಸಲ್ಪಟ್ಟವರಾಗಿದ್ದಾರೆ. (1 ಪೇತ್ರ 3:21) ಈ ದುಷ್ಟ ಲೋಕದ ಮುಂಬರುತ್ತಿರುವ ನಾಶನದಲ್ಲಿ, ಆ ಸಂಕಟದಿಂದ ಅವರನ್ನು ಕಾಪಾಡುವ ಮೂಲಕ ದೇವರು ಅವರನ್ನು ಸಂಪೂರ್ಣವಾಗಿ ರಕ್ಷಿಸುವನು.—ಪ್ರಕಟನೆ 7:9, 14.
ರಕ್ಷಣೆಯು ನಿಮಗೆ ಅರ್ಥೈಸಬಲ್ಲ ಸಂಗತಿ
ಈ ಸಂಕ್ಷಿಪ್ತ ಚರ್ಚೆಯಿಂದ ಸ್ಪಷ್ಟವಾಗುವುದೇನೆಂದರೆ, ರಕ್ಷಣೆಯನ್ನು ಪಡೆದುಕೊಳ್ಳುವುದರಲ್ಲಿ ‘ಕರ್ತನಾದ ಯೇಸು ಕ್ರಿಸ್ತನನ್ನು ಹೃದಯದಲ್ಲಿಟ್ಟುಕೊಂಡಿರು’ವುದಕ್ಕಿಂತಲೂ ಹೆಚ್ಚಿನದ್ದು ಸೇರಿದೆ. ಇದರ ಅರ್ಥ, ಯೆಹೋವ ದೇವರು ಹಾಗೂ ಯೇಸು ಕ್ರಿಸ್ತನ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವುದು ಹಾಗೂ ಒಬ್ಬನ ಜೀವಿತದಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಮಾಡುವುದೇ ಆಗಿದೆ. ಇದನ್ನು ಮಾಡುವುದು ಕಷ್ಟಸಾಧ್ಯವೆಂದು ಕಂಡುಬರಬಹುದಾದರೂ, ಈ ಪ್ರಯತ್ನದಲ್ಲಿ ನಿಮಗೆ ಸಹಾಯ ಮಾಡಲು ಯೆಹೋವನ ಸಾಕ್ಷಿಗಳು ಸಿದ್ಧಮನಸ್ಕರಾಗಿದ್ದಾರೆ. ಒಂದು ಉಚಿತ ಗೃಹ ಬೈಬಲ್ ಅಭ್ಯಾಸದ ಮೂಲಕ, ನಿಜ ರಕ್ಷಣೆಯ ಮಾರ್ಗದಲ್ಲಿ ನಡೆಯಲಾರಂಭಿಸುವಂತೆ ಅವರು ನಿಮಗೆ ಸಹಾಯ ಮಾಡಬಲ್ಲರು.b
ದೇವರ ಮುಂಬರಲಿರುವ ನ್ಯಾಯತೀರ್ಪಿನ ದಿನದ ಸಾಮೀಪ್ಯದ ನೋಟದಲ್ಲಿ, ನಿಜ ರಕ್ಷಣೆಯ ಮಾರ್ಗದಲ್ಲಿ ನಡೆಯುತ್ತಿರುವುದು ಹಿಂದೆಂದಿಗಿಂತಲೂ ಹೆಚ್ಚು ಜರೂರಿಯದ್ದಾಗಿದೆ! ಪ್ರವಾದಿಯ ಮಾತುಗಳಿಗೆ ಲಕ್ಷ್ಯಕೊಡುವ ಸಮಯವು ಇದೇ ಆಗಿದೆ: “ಯೆಹೋವನ ಸಿಟ್ಟಿನ ದಿನವು ನಿಮ್ಮನ್ನು ಮುಟ್ಟುವದಕ್ಕೆ ಮೊದಲು . . . ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ, ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.”—ಚೆಫನ್ಯ 2:2, 3.
[ಅಧ್ಯಯನ ಪ್ರಶ್ನೆಗಳು]
a ಈ ವಿಷಯಗಳ ಕುರಿತಾದ ಚರ್ಚೆಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವನ್ನು ದಯವಿಟ್ಟು ನೋಡಿರಿ.
b ನೀವು ಒಂದು ಗೃಹ ಬೈಬಲ್ ಅಭ್ಯಾಸವನ್ನು ಅಪೇಕ್ಷಿಸುವಲ್ಲಿ, ದಯವಿಟ್ಟು ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯನ್ನು ಸಂಪರ್ಕಿಸಿರಿ. ಅಥವಾ ನೀವು ಈ ಪತ್ರಿಕೆಯ ಪ್ರಕಾಶಕರಿಗೆ ಪತ್ರ ಬರೆಯಬಹುದು.
[ಪುಟ 6 ರಲ್ಲಿರುವ ಚೌಕ]
ಇದರಿಂದ ರಕ್ಷಣೆಯು ಫಲಿಸುತ್ತದೆ
◻ ದೇವರ ಹಾಗೂ ಯೇಸುವಿನ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವುದು.—ಯೋಹಾನ 17:3.
◻ ನಂಬಿಕೆಯನ್ನು ಅಭ್ಯಾಸಿಸುವುದು.—ರೋಮಾಪುರ 10:17; ಇಬ್ರಿಯ 11:6.
◻ ಪಶ್ಚಾತ್ತಾಪಪಟ್ಟು, ತಿರುಗಿಕೊಳ್ಳುವುದು.—ಅ. ಕೃತ್ಯಗಳು 3:19; ಎಫೆಸ 4:22-24.
◻ ಸಮರ್ಪಣೆ ಮತ್ತು ದೀಕ್ಷಾಸ್ನಾನ.—ಮತ್ತಾಯ 16:24; 28:19, 20.
◻ ಸಾರ್ವಜನಿಕ ಘೋಷಣೆಯನ್ನು ಮಾಡುತ್ತಾ ಮುಂದುವರಿಯುವುದು.—ಮತ್ತಾಯ 24:14; ರೋಮಾಪುರ 10:10.
[ಪುಟ 7 ರಲ್ಲಿರುವ ಚಿತ್ರ]
ಬೈಬಲನ್ನು ಅಭ್ಯಾಸಿಸುವುದು, ಕಲಿತ ವಿಷಯವನ್ನು ಅನ್ವಯಿಸಿಕೊಳ್ಳುವುದು, ಸಮರ್ಪಣೆ, ಹಾಗೂ ದೀಕ್ಷಾಸ್ನಾನಗಳು ರಕ್ಷಣೆಗೆ ನಡಿಸುವ ಹೆಜ್ಜೆಗಳಾಗಿವೆ