ಬೆಳಕಿನ ಬೆಳಗುಗಳು—ದೊಡ್ಡವೂ ಚಿಕ್ಕವೂ—ಭಾಗ ಎರಡು
“ನಿನ್ನಿಂದ ಬರುವ ಬೆಳಕಿನಿಂದ ನಾವು ಬೆಳಕನ್ನು ನೋಡಬಲ್ಲೆವು.”—ಕೀರ್ತನೆ 36:9, NW.
1. ಪ್ರಕಟನೆ ಪುಸ್ತಕದ ಸಂಕೇತ ನಿರೂಪಣೆಯನ್ನು ತಿಳಿದುಕೊಳ್ಳಲಿಕ್ಕಾಗಿ ಆರಂಭದ ಯಾವ ಪ್ರಯತ್ನವು ಮಾಡಲ್ಪಟ್ಟಿತು?
ಆರಂಭದ ಸಮಯಗಳಿಂದಲೂ ಬೈಬಲಿನ ಪ್ರಕಟನೆ ಪುಸ್ತಕವು ಕ್ರೈಸ್ತರ ಕುತೂಹಲವನ್ನು ಕೆರಳಿಸಿದೆ. ಸತ್ಯದ ಬೆಳಕು ಇಂದೆಂದಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿ ಬೆಳೆಯುತ್ತಿರುವ ವಿಧದ ಕುರಿತು ಇದು ಒಂದು ಅತ್ಯುತ್ತಮ ಉದಾಹರಣೆಯನ್ನು ಒದಗಿಸುತ್ತದೆ. 1917 ರಲ್ಲಿ, ಯೆಹೋವನ ಜನರು ದ ಫಿನಿಶ್ಡ್ ಮಿಸ್ಟ್ರಿ ಎಂಬ ಪುಸ್ತಕದಲ್ಲಿ ಪ್ರಕಟನೆಯ ಕುರಿತಾಗಿ ಒಂದು ವಿವರಣೆಯನ್ನು ಪ್ರಕಾಶಿಸಿದರು. ಇದು ಕ್ರೈಸ್ತಪ್ರಪಂಚದ ಧಾರ್ಮಿಕ ಮತ್ತು ರಾಜಕೀಯ ಮುಖಂಡರ ತಪ್ಪುಗಳನ್ನು ನಿರ್ಭಯವಾಗಿ ಹೊರಗೆಡವಿದರೂ, ಇದರ ವಿವರಣೆಗಳಲ್ಲಿ ಅನೇಕವು ವಿವಿಧ ಮೂಲಗಳಿಂದ ತೆಗೆದುಕೊಳ್ಳಲ್ಪಟ್ಟಿದ್ದವು. ಆದರೂ, ದ ಫಿನಿಶ್ಡ್ ಮಿಸ್ಟ್ರಿ ಪುಸ್ತಕವು, ಯೆಹೋವನು ಉಪಯೋಗಿಸುತ್ತಿದ್ದ ದೃಶ್ಯ ಮಾಧ್ಯಮದೆಡೆಗೆ ಬೈಬಲ್ ವಿದ್ಯಾರ್ಥಿಗಳ ನಿಷ್ಠೆಯನ್ನು ಪರೀಕ್ಷಿಸಲಿಕ್ಕಾಗಿ ಕಾರ್ಯನಡಿಸಿತು.
2. “ಬರ್ತ್ ಆಫ್ ದ ನೇಶನ್” ಎಂಬ ಲೇಖನವು ಪ್ರಕಟನೆ ಪುಸ್ತಕದ ಮೇಲೆ ಯಾವ ಬೆಳಕನ್ನು ಬೀರಿತು?
2 1925, ಮಾರ್ಚ್ 1ರ ದ ವಾಚ್ ಟವರ್ ನಲ್ಲಿ “ಬರ್ತ್ ಆಫ್ ದ ನೇಶನ್” ಎಂಬ ಲೇಖನದ ಪ್ರಕಾಶನದೊಂದಿಗೆ ಪ್ರಕಟನೆ ಪುಸ್ತಕದ ಮೇಲೆ ಬೆಳಕಿನ ಗಮನಾರ್ಹವಾದೊಂದು ಬೆಳಗು ಕಂಗೊಳಿಸಿತು. ಪ್ರಕಟನೆ 12 ನೆಯ ಅಧ್ಯಾಯವು, ಗಂಡು ಮಗುವು ಪೋಪ್ಗುರುವಿನ ಅಧಿಕಾರವನ್ನು ಪ್ರತಿನಿಧಿಸುವುದರೊಂದಿಗೆ, ವಿಧರ್ಮಿ ರೋಮ್ ಮತ್ತು ಪೋಪ್ಗುರುವಿನ ಅಧಿಕಾರದ ರೋಮ್ನ ನಡುವಿನ ಒಂದು ಯುದ್ಧವನ್ನು ವಿವರಿಸುತ್ತದೆಂದು ಭಾವಿಸಲ್ಪಟ್ಟಿತ್ತು. ಆದರೆ ಇದು ದೇವರ ರಾಜ್ಯದ ಜನನಕ್ಕೆ ಸಂಬಂಧಿಸುತ್ತದೆಂದು ಸೂಚಿಸುತ್ತಾ, 12 ನೆಯ ಅಧ್ಯಾಯದ ಅರ್ಥದೊಂದಿಗೆ ಪ್ರಕಟನೆ 11:15-18 ಸುಸಂಬದ್ಧತೆಯನ್ನು ಹೊಂದಿತ್ತೆಂದು ಆ ಲೇಖನವು ತೋರಿಸಿತು.
3. ಯಾವ ಪ್ರಕಾಶನಗಳು ಪ್ರಕಟನೆಯ ಮೇಲೆ ಅಧಿಕವಾದ ಬೆಳಕನ್ನು ಬೀರಿದವು?
3 1930 ರಲ್ಲಿ, ಎರಡು ಸಂಪುಟಗಳಲ್ಲಿ ಲೈಟ್ ಎಂಬ ಪ್ರಕಾಶನದೊಂದಿಗೆ ಬಂದ ಈ ಎಲ್ಲಾ ವಿಷಯಗಳು, ಪ್ರಕಟನೆಯ ಹೆಚ್ಚು ಸ್ಪಷ್ಟವಾಗಿದ ತಿಳಿವಳಿಕೆಗೆ ನಡಿಸಿದವು. “ಬ್ಯಾಬಿಲಾನ್ ದ ಗ್ರೇಟ್ ಹ್ಯಾಸ್ ಫಾಲನ್!” ಗಾಡ್ಸ್ ಕಿಂಗ್ಡಮ್ ರೂಲ್ಸ್! (1963) ಮತ್ತು “ದೆನ್ ಈಸ್ ಫಿನಿಶ್ಡ್ ದ ಮಿಸ್ಟ್ರಿ ಆಫ್ ಗಾಡ್” (1969) ಪುಸ್ತಕಗಳಲ್ಲಿ ಇನ್ನೂ ಹೆಚ್ಚಿನ ಸಂಸ್ಕರಣಗಳು ಗೋಚರಿಸಿದವು. ಆದರೂ, ಪ್ರಕಟನೆಯ ಪ್ರವಾದನಾ ಪುಸ್ತಕದ ಕುರಿತಾಗಿ ಇನ್ನೂ ಹೆಚ್ಚಿನ ವಿಷಯವು ಕಲಿಯಲಿಕ್ಕಿತ್ತು. ಹೌದು, 1988 ರಲ್ಲಿ, ಪ್ರಕಟನೆ ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪ್ರಕಾಶನದಿಂದ ಇದರ ಮೇಲೆ ಹೆಚ್ಚು ಪ್ರಕಾಶಮಾನವಾದ ಬೆಳಕು ಕಂಗೊಳಿಸಿತು. 1914 ರಲ್ಲಿ ಆರಂಭಗೊಂಡ “ಕರ್ತನ ದಿನ” ದಲ್ಲಿ ಪ್ರಕಟನೆಯ ಕುರಿತಾದ ಪ್ರವಾದನೆಯು ಅನ್ವಯಿಸುತ್ತದೆಂಬ ವಾಸ್ತವಾಂಶವು, ಈ ಪ್ರಗತಿಪರ ಜ್ಞಾನೋದಯಕ್ಕೆ ಕೀಲಿ ಕೈಯಾಗಿದ್ದಿರಬಹುದೆಂದು ಹೇಳಸಾಧ್ಯವಿದೆ. (ಪ್ರಕಟನೆ 1:10) ಆದುದರಿಂದಲೇ ಆ ದಿನವು ಪ್ರಗತಿಗೊಂಡಂತೆ ಪ್ರಕಟನೆ ಪುಸ್ತಕವನ್ನು ಹೆಚ್ಚು ಸ್ಪಷ್ಟವಾಗಿಗಿ ಅರ್ಥಮಾಡಿಕೊಳ್ಳಸಾಧ್ಯವಿದೆ.
“ಅಧಿಕೋನ್ನತ ಅಧಿಕಾರಗಳ” ಕುರಿತಾದ ತಿಳಿವಳಿಕೆಯು ಸ್ಪಷ್ಟೀಕರಿಸಲ್ಪಟ್ಟದ್ದು
4, 5. (ಎ) ರೋಮಾಪುರ 13:1ನ್ನು ಬೈಬಲ್ ವಿದ್ಯಾರ್ಥಿಗಳು ಹೇಗೆ ವೀಕ್ಷಿಸಿದರು? (ಬಿ) “ಅಧಿಕೋನ್ನತ ಅಧಿಕಾರಗಳ” ಸಂಬಂಧವಾಗಿ ಯಾವುದು ಶಾಸ್ತ್ರೀಯ ಸ್ಥಾನವಾಗಿದೆಯೆಂದು ತದನಂತರ ಗ್ರಹಿಸಲಾಯಿತು?
4 ರೋಮಾಪುರ 13:1 ಕ್ಕೆ ಸಂಬಂಧಿಸಿ, ಬೆಳಕಿನ ಪ್ರಕಾಶಮಾನವಾದ ಒಂದು ಬೆಳಗನ್ನು 1962 ರಲ್ಲಿ ಅವಲೋಕಿಸಲಾಯಿತು, ಅದನ್ನುವುದು: “ಪ್ರತಿ ಮನುಷ್ಯನು ಅಧಿಕೋನ್ನತ ಅಧಿಕಾರ [“ಮೇಲಧಿಕಾರಿಗಳಿಗೆ,” ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್] ಗಳಿಗೆ ಅಧೀನನಾಗಿರಲಿ.” (ಕಿಂಗ್ ಜೇಮ್ಸ್ ವರ್ಷನ್) ಅಲ್ಲಿ ಪ್ರಸ್ತಾಪಿಸಲ್ಪಟ್ಟಿರುವ “ಅಧಿಕೋನ್ನತ ಅಧಿಕಾರಗಳು,” ಲೌಕಿಕ ಅಧಿಕಾರಿಗಳಿಗೆ ಅನ್ವಯಿಸುತ್ತದೆಂದು ಆರಂಭದ ಬೈಬಲ್ ವಿದ್ಯಾರ್ಥಿಗಳು ತಿಳಿದುಕೊಂಡಿದ್ದರು. ಯುದ್ಧಕಾಲದಲ್ಲಿ ಒಬ್ಬ ಕ್ರೈಸ್ತನನ್ನು ಒತ್ತಾಯದಿಂದ ಸೈನ್ಯಕ್ಕೆ ಸೇರಿಸಿಕೊಳ್ಳುವುದಾದರೆ, ಒಂದು ಸಮವಸ್ತ್ರವನ್ನು ಧರಿಸಲು, ಒಂದು ಬಂದೂಕನ್ನು ಹೆಗಲಿಗೇರಿಸಲು, ಮತ್ತು ಯುದ್ಧರಂಗದಲ್ಲಿರುವ ಸೈನ್ಯಕ್ಕೆ ಸೇರಿಕೊಳ್ಳಲು, ಕಂದಕ ತೋಡಲು ಅವನು ನಿರ್ಬಂಧಿಸಲ್ಪಡಸಾಧ್ಯವಿದೆಯೆಂದು ಈ ಶಾಸ್ತ್ರವಚನವು ಅರ್ಥೈಸುತ್ತದೆಂದು ಅವರು ಗ್ರಹಿಸಿದರು. ಕ್ರೈಸ್ತನೊಬ್ಬನು ಒಬ್ಬ ಜೊತೆ ಮಾನವನನ್ನು ಕೊಲ್ಲಸಾಧ್ಯವಿಲ್ಲದ ಕಾರಣದಿಂದ, ಅತ್ಯಂತ ಅನಾನುಕೂಲ್ಯ ಪರಿಸ್ಥಿತಿಯು ಸಂಭವಿಸಿದ್ದಲ್ಲಿ ಅವನು ತನ್ನ ಬಂದೂಕನ್ನು ಗಾಳಿಯಲ್ಲಿ ಹಾರಿಸುವಂತೆ ಒತ್ತಾಯಿಸಲ್ಪಡುವನೆಂದು ಭಾವಿಸಲಾಗಿತ್ತು.a
5 1962, ನವಂಬರ 15 ಮತ್ತು ದಶಂಬರ 1ರ ದ ವಾಚ್ಟವರ್, “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂಬ ಮತ್ತಾಯ 22:21 ರಲ್ಲಿನ ಯೇಸುವಿನ ಮಾತುಗಳನ್ನು ಚರ್ಚಿಸುತ್ತಾ, ವಿಷಯದ ಮೇಲೆ ಸ್ಪಷ್ಟವಾಗಿದ ಬೆಳಕನ್ನು ಬೀರಿತು. ‘ನಾವು ಮನುಷ್ಯರಿಗಿಂತಲೂ ಹೆಚ್ಚಾಗಿ ದೇವರಿಗೆ ವಿಧೇಯರಾಗಿರಬೇಕು,’ ಎಂಬ ಅ. ಕೃತ್ಯಗಳು 5:29 ರಲ್ಲಿರುವ ಅಪೊಸ್ತಲರ ಮಾತುಗಳು ಸುಸಂಬದ್ಧವಾಗಿದ್ದವು. ಎಷ್ಟರ ವರೆಗೆ ಕ್ರೈಸ್ತರು ದೇವರ ನಿಯಮಕ್ಕೆ ಪ್ರತಿಕೂಲವಾಗಿ ಕಾರ್ಯನಡಿಸುವಂತೆ ಇದು ಅಗತ್ಯಪಡಿಸುವುದಿಲ್ಲವೋ ಅಷ್ಟರ ತನಕ ಕ್ರೈಸ್ತರು, ‘ಅಧಿಕೋನ್ನತ ಅಧಿಕಾರಗಳಿಗೆ,’ ಕೈಸರನಿಗೆ ಅಧೀನರಾಗಿದ್ದಾರೆ. ಕೈಸರನಿಗೆ ಅಧೀನತೆಯು ಸಂಪೂರ್ಣವಲ್ಲ, ಸಂಬಂಧ ಸೂಚಕ ವಾದದ್ದಾಗಿದೆಯೆಂದು ಅವಲೋಕಿಸಲಾಯಿತು. ಕ್ರೈಸ್ತರು, ದೇವರ ಆವಶ್ಯಕತೆಗಳೊಂದಿಗೆ ಸಂಘರ್ಷಿಸದ ವಿಷಯಗಳನ್ನು ಮಾತ್ರವೇ ಕೈಸರನಿಗೆ ಸಲ್ಲಿಸಬೇಕು. ಆ ವಿಷಯದ ಮೇಲೆ ಸ್ಪಷ್ಟವಾಗಿದ ಬೆಳಕನ್ನು ಹೊಂದಿರುವುದು ಎಷ್ಟು ಸಂತೃಪ್ತಿಕರವಾಗಿತ್ತು!
ವ್ಯವಸ್ಥಾಪನೆಯ ವಿಷಯಗಳ ಮೇಲೆ ಬೆಳಕಿನ ಬೆಳಗುಗಳು
6. (ಎ) ಕ್ರೈಸ್ತಪ್ರಪಂಚದಲ್ಲಿ ಬಳಕೆಯಲ್ಲಿದ್ದ ಪುರೋಹಿತ ಪ್ರಭುತ್ವ ರಚನೆಯನ್ನು ತ್ಯಜಿಸಲಿಕ್ಕಾಗಿ, ಯಾವ ಸೂತ್ರವನ್ನು ಹೊಂದಿಸಿಕೊಳ್ಳಲಾಯಿತು? (ಬಿ) ಸಭೆಯ ಮೇಲ್ವಿಚಾರಣೆ ಮಾಡುವವರನ್ನು ಆರಿಸಿಕೊಳ್ಳಲು ಸೂಕ್ತವಾದ ಮಾರ್ಗವು ಯಾವುದೆಂದು ಅಂತಿಮವಾಗಿ ಅವಲೋಕಿಸಲಾಯಿತು?
6 ಸಭೆಗಳಲ್ಲಿ ಹಿರಿಯರೋಪಾದಿ ಮತ್ತು ಡೀಕನ್ಗಳಾಗಿ ಯಾರು ಕಾರ್ಯನಡಿಸಬೇಕೆಂಬುದರ ಕುರಿತು ಪ್ರಶ್ನೆಯಿತ್ತು. ಕ್ರೈಸ್ತಪ್ರಪಂಚದಲ್ಲಿ ಬಳಕೆಯಲ್ಲಿದ್ದ ಪುರೋಹಿತ ಪ್ರಭುತ್ವ ರಚನೆಯನ್ನು ಹೋಗಲಾಡಿಸಲು, ಪ್ರತಿಯೊಂದು ಸಭೆಯ ಸದಸ್ಯರ ಮತದ ಮೂಲಕ ಪ್ರಜಾಪ್ರಭುತ್ವಕ್ಕನುಗುಣವಾಗಿ ಇವರನ್ನು ಚುನಾಯಿಸತಕ್ಕದ್ದೆಂದು ತೀರ್ಮಾನಿಸಲಾಯಿತು. ಆದರೆ ಶಾಸ್ತ್ರವಚನಗಳು ಚುನಾಯಿತ ಹಿರಿಯರಿಗಾಗಿ ಒಂದು ಆಧಾರವನ್ನು ಒದಗಿಸುವುದಿಲ್ಲವೆಂದು, 1932, ಸಪ್ಟಂಬರ್ 1 ಮತ್ತು ಅಕ್ಟೋಬರ್ 15ರ ದ ವಾಚ್ಟವರ್ ನಲ್ಲಿ ಒಳಗೊಂಡಿದ್ದ ಅಧಿಕಗೊಳ್ಳುತ್ತಿದ್ದ ಬೆಳಕು ತೋರಿಸಿತು. ಆದುದರಿಂದ ಇವರು ಸೇವಾ ಕಮಿಟಿಯೊಂದರಿಂದ ಸ್ಥಾನಭರ್ತಿ ಮಾಡಲ್ಪಟ್ಟರು, ಮತ್ತು ಸೇವಾ ನಿರ್ದೇಶಕನೊಬ್ಬನು ಸೊಸೈಟಿಯಿಂದ ಆರಿಸಲ್ಪಟ್ಟನು.
7. ಬೆಳಕಿನ ಬೆಳಗುಗಳು, ಸಭೆಯಲ್ಲಿ ಸೇವಕರು ನೇಮಿಸಲ್ಪಡುತ್ತಿದ್ದ ವಿಧದಲ್ಲಿ ಯಾವ ಅಭಿವೃದ್ಧಿಗಳಲ್ಲಿ ಫಲಿಸಿದವು?
7 1938, ಜೂನ್ 1 ಮತ್ತು ಜೂನ್ 15ರ ದ ವಾಚ್ಟವರ್, ಸಭೆಯಲ್ಲಿರುವ ಸೇವಕರು ಚುನಾಯಿಸಲ್ಪಡುವುದಲ್ಲ, ಬದಲಾಗಿ ನೇಮಿಸಲ್ಪಡಬೇಕೆಂದು, ಅಂದರೆ, ದೇವಪ್ರಭುತ್ವಾತ್ಮಕವಾಗಿ ನೇಮಿಸಲ್ಪಡಬೇಕೆಂಬುದನ್ನು, ಒಳಗೊಂಡಿದ್ದ ಬೆಳಕಿನ ಬೆಳಗುಗಳು ತೋರಿಸಿದವು. 1971 ರಲ್ಲಿ ಪ್ರತಿ ಸಭೆಯು ಒಬ್ಬ ಸಭಾ ಸೇವಕನಿಂದ ಮಾತ್ರವೇ ನಿರ್ದೇಶಿಸಲ್ಪಡಬಾರದೆಂದು, ಬೆಳಕಿನ ಇನ್ನೊಂದು ಬೆಳಗು ತೋರಿಸಿತು. ಅದಕ್ಕೆ ಬದಲಾಗಿ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯಿಂದ ನೇಮಿಸಲ್ಪಡುವ ಒಂದು ಹಿರಿಯರ ಮಂಡಳಿ, ಅಥವಾ ಮೇಲ್ವಿಚಾರಕರು ಪ್ರತಿ ಸಭೆಯಲ್ಲಿ ಇರಬೇಕು. ಹೀಗೆ ಸುಮಾರು 40 ವರ್ಷಗಳಿಂದ ಅಧಿಕಗೊಳ್ಳುತ್ತಿರುವ ಬೆಳಕಿನಿಂದ, ಹಿರಿಯರು ಹಾಗೂ ಈಗ ಶುಶ್ರೂಷಾ ಸೇವಕರೆಂದು ಕರೆಯಲ್ಪಡುವ ಡೀಕನ್ಗಳು, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ’ ನಿಂದ, ಅದರ ಆಡಳಿತ ಮಂಡಳಿಯ ಮೂಲಕ ನೇಮಿಸಲ್ಪಡಬೇಕೆಂಬುದು ಸುವ್ಯಕ್ತವಾಯಿತು. (ಮತ್ತಾಯ 24:45-47) ಇದು ಅಪೊಸ್ತಲಿಕ ಸಮಯಗಳಲ್ಲಿ ಏನು ಸಂಭವಿಸಿತೋ ಅದಕ್ಕೆ ಹೊಂದಿಕೆಯಲ್ಲಿತ್ತು. ತಿಮೊಥೆಯ ಮತ್ತು ತೀತರಂತಹ ಪುರುಷರು, ಪ್ರಥಮ ಶತಮಾನದ ಆಡಳಿತ ಮಂಡಳಿಯಿಂದ ಮೇಲ್ವಿಚಾರಕರಾಗಿ ನೇಮಿಸಲ್ಪಟ್ಟಿದ್ದರು. (1 ತಿಮೊಥೆಯ 3:1-7; 5:22; ತೀತ 1:5-9) ಇದೆಲ್ಲವೂ ಯೆಶಾಯ 60:17ರ ಗಮನಾರ್ಹ ನೆರವೇರಿಕೆಯಲ್ಲಿದೆ: “ತಾಮ್ರಕ್ಕೆ ಬದಲಾಗಿ ಚಿನ್ನವನ್ನು, ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನ್ನು, ಮರವಿದ್ದಲ್ಲಿ ತಾಮ್ರವನ್ನು, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು ಒದಗಿಸುವೆನು; ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ ಧರ್ಮವನ್ನು ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು.”
8. (ಎ) ಅಧಿಕಗೊಳ್ಳುತ್ತಿರುವ ಸತ್ಯತೆಯು, ಸಂಸ್ಥೆಯು ಕಾರ್ಯನಡಿಸುತ್ತಿದ್ದ ರೀತಿಯಲ್ಲಿ ಯಾವ ಅಭಿವೃದ್ಧಿಗಳನ್ನು ತಂದಿತು? (ಬಿ) ಆಡಳಿತ ಮಂಡಳಿಯ ಕಮಿಟಿಗಳಾವುವು, ಮತ್ತು ಅವುಗಳ ಚಟುವಟಿಕೆ ಅಥವಾ ಮೇಲ್ವಿಚಾರಣೆಯ ವೈಯಕ್ತಿಕ ಕಾರ್ಯಕ್ಷೇತ್ರಗಳಾವುವು?
8 ವಾಚ್ ಟವರ್ ಸೊಸೈಟಿಯ ಕಾರ್ಯಾಚರಣೆಯ ಕುರಿತಾದ ವಿಷಯವೂ ಅಲ್ಲಿತ್ತು. ಅನೇಕ ವರ್ಷಗಳ ವರೆಗೆ ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯು, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯದ ನಿರ್ದೇಶಕರ ಮಂಡಳಿಯೊಂದಿಗೆ ಸಮಾನಾರ್ಥಕವಾಗಿತ್ತು, ಮತ್ತು ವಿಷಯಗಳು ಬಹುಮಟ್ಟಿಗೆ ಅದರ ಅಧ್ಯಕ್ಷರ ನಿಯಂತ್ರಣದಲ್ಲಿತ್ತು. 1977 ಯಿಯರ್ ಬುಕ್ ಆಫ್ ಜೆಹೋವಾಸ್ ವಿಟ್ನೆಸಸ್ ಪುಸ್ತಕ (258-9ನೇ ಪುಟಗಳು) ದಲ್ಲಿ ತೋರಿಸಲ್ಪಟ್ಟಂತೆ, 1976 ರಲ್ಲಿ, ಪ್ರತಿಯೊಬ್ಬರೂ ಲೋಕವ್ಯಾಪಕವಾದ ಕಾರ್ಯದ ನಿರ್ದಿಷ್ಟ ಅಂಶಗಳನ್ನು ನೋಡಿಕೊಳ್ಳುವಂತೆ ನೇಮಿಸಲ್ಪಟ್ಟಿರುವ ಆರು ಕಮಿಟಿಗಳೊಂದಿಗೆ, ಆಡಳಿತ ಮಂಡಳಿಯು ಕಾರ್ಯನಡಿಸಲಾರಂಭಿಸಿತು. ಲೋಕವ್ಯಾಪಕವಾದ ಬೆತೆಲ್ ಕುಟುಂಬದಲ್ಲಿ ಸೇವೆ ಸಲ್ಲಿಸುವವರೆಲ್ಲರ ಅಭಿರುಚಿಗಳನ್ನು ಒಳಗೊಂಡು, ಸಿಬ್ಬಂದಿಯ ವಿಷಯಗಳೊಂದಿಗೆ ಪರ್ಸನೆಲ್ (ಸಿಬ್ಬಂದಿ) ಕಮಿಟಿಯು ವ್ಯವಹರಿಸುತ್ತದೆ. ಪ್ರಕಾಶಕ ಕಮಿಟಿಯು, ಆಸ್ತಿ ಮತ್ತು ಮುದ್ರಣದಂತಹ ಸ್ಥಳೀಯ ಹಾಗೂ ಶಾಸನಸಮ್ಮತವಾದ ಎಲ್ಲಾ ವಿಷಯಗಳನ್ನು ನಿರ್ವಹಿಸುತ್ತದೆ. ಸೇವಾ ಕಮಿಟಿಯು ತಾನೇ ಸಾಕ್ಷಿ ಕಾರ್ಯದೊಂದಿಗೆ ಆಸಕ್ತಿಯನ್ನು ವಹಿಸುತ್ತದೆ ಮತ್ತು ಸಂಚರಣ ಮೇಲ್ವಿಚಾರಕರು, ಪಯನೀಯರರು, ಮತ್ತು ಸಭಾ ಪ್ರಚಾರಕರ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ಮಾಡುತ್ತದೆ. ಸಭಾ ಕೂಟಗಳು, ವಿಶೇಷ ಸಮ್ಮೇಳನ ದಿನಗಳು, ಸರ್ಕಿಟ್ ಸಮ್ಮೇಳನಗಳು, ಮತ್ತು ಜಿಲ್ಲಾ ಹಾಗೂ ಅಂತಾರಾಷ್ಟ್ರೀಯ ಅಧಿವೇಶನಗಳು ತದ್ರೀತಿಯಲ್ಲಿ ದೇವರ ಜನರ ಆತ್ಮಿಕ ಶಿಕ್ಷಣಕ್ಕಾಗಿ ನಡೆಸಲ್ಪಡುವ ವಿವಿಧ ಶಾಲೆಗಳಿಗೆ ಟೀಚಿಂಗ್ ಕಮಿಟಿಯು ಜವಾಬ್ದಾರವಾಗಿದೆ. ಪ್ರತಿಯೊಂದು ವಿಷಯವು ಶಾಸ್ತ್ರಗಳಿಗೆ ಸಹಮತದಲ್ಲಿದೆಯೆಂಬುದನ್ನು ಖಚಿತಪಡಿಸಿಕೊಳ್ಳುತ್ತಾ, ರೈಟಿಂಗ್ ಕಮಿಟಿಯು ಎಲ್ಲ ವಿಧಗಳಲ್ಲಿ ಪ್ರಕಾಶನಗಳ ಸಿದ್ಧತೆ ಮತ್ತು ಭಾಷಾಂತರದ ಮೇಲ್ವಿಚಾರಣೆ ಮಾಡುತ್ತದೆ. ತುರ್ತುಪರಿಸ್ಥಿತಿಗಳು ಮತ್ತು ಇತರ ತುರ್ತಿನ ವಿಷಯಗಳಿಗಾಗಿ ಅಧ್ಯಕ್ಷರ ಕಮಿಟಿಯು ಹೊಣೆ ಹೊತ್ತುಕೊಳ್ಳುತ್ತದೆ.b ಹಾಗೂ 1970 ಗಳಲ್ಲಿ, ವಾಚ್ ಟವರ್ ಸೊಸೈಟಿಯ ಶಾಖಾ ಆಫೀಸುಗಳು, ಒಬ್ಬ ಮೇಲ್ವಿಚಾರಕನಿಗೆ ಬದಲಾಗಿ ಒಂದು ಕಮಿಟಿಯಿಂದ ನಿರ್ದೇಶಿಸಲ್ಪಡಲಾರಂಭಿಸಿದವು.
ಕ್ರೈಸ್ತ ನಡತೆಗೆ ಸಂಬಂಧಿಸಿದ ಬೆಳಕು
9. ಬೆಳಕಿನ ಸತ್ಯತೆಯು, ಲೋಕದ ಸರಕಾರಗಳ ಕಡೆಗಿನ ಕ್ರೈಸ್ತರ ಸಂಬಂಧವನ್ನು ಹೇಗೆ ಬಾಧಿಸಿತು?
9 ಬೆಳಕಿನ ಅನೇಕ ಬೆಳಗುಗಳು ಕ್ರೈಸ್ತ ನಡತೆಗೆ ಸಂಬದ್ಧವಾಗಿವೆ. ದೃಷ್ಟಾಂತಕ್ಕಾಗಿ, ತಾಟಸ್ಥ್ಯದ ವಿಷಯವನ್ನು ಪರಿಗಣಿಸಿರಿ. ಈ ವಿಷಯದ ಮೇಲೆ, 1939, ನವಂಬರ್ 1ರ ದ ವಾಚ್ಟವರ್ ನಲ್ಲಿ ಕಂಡುಬರುವ “ತಾಟಸ್ಥ್ಯ” ಎಂಬ ಲೇಖನದಲ್ಲಿ, ನಿರ್ದಿಷ್ಟವಾಗಿ ಪ್ರಕಾಶಮಾನವಾದ ಬೆಳಕಿನ ಒಂದು ಬೆಳಗು ಬೀರಲ್ಪಟ್ಟಿತು. II ನೆಯ ಲೋಕ ಯುದ್ಧವು ಆರಂಭವಾದ ಸ್ವಲ್ಪ ಸಮಯದ ಬಳಿಕ ಬಂದದ್ದಾಗಿದ್ದು, ಅದು ಎಷ್ಟು ಸಮಯೋಚಿತವಾಗಿತ್ತು! ಆ ಲೇಖನವು ತಾಟಸ್ಥ್ಯದ ಅರ್ಥ ನಿರೂಪಿಸಿತು ಮತ್ತು ಕ್ರೈಸ್ತರು ರಾಜಕೀಯ ಚಟುವಟಿಕೆಗಳಲ್ಲಿ ಅಥವಾ ಜನಾಂಗಗಳ ನಡುವಣ ಅಭಿಮುಖತೆಗಳಲ್ಲಿ ಒಳಗೂಡಬಾರದೆಂದು ತೋರಿಸಿತು. (ಮೀಕ 4:3, 5; ಯೋಹಾನ 17:14, 16) ಅವರು ಎಲ್ಲಾ ಜನಾಂಗಗಳಿಂದ ದ್ವೇಷಿಸಲ್ಪಡುತ್ತಿರುವುದರಲ್ಲಿ ಇದೂ ಒಂದು ಅಂಶವಾಗಿದೆ. (ಮತ್ತಾಯ 24:9) ಮತ್ತಾಯ 26:52 ರಲ್ಲಿ ಯೇಸು ಸ್ಪಷ್ಟಪಡಿಸಿದಂತೆ, ಪುರಾತನ ಇಸ್ರಾಯೇಲಿನ ಕದನಗಳು ಕ್ರೈಸ್ತರಿಗಾಗಿ ಪೂರ್ವನಿದರ್ಶನವನ್ನು ಒದಗಿಸುವುದಿಲ್ಲ. ಅಲ್ಲದೆ, ಪುರಾತನ ಇಸ್ರಾಯೇಲ್ನಲ್ಲಿದ್ದಂತೆ, ಇಂದು ಒಂದಾದರೂ ರಾಜಕೀಯ ಜನಾಂಗವು ದೇವರಿಂದ ಆಳಲ್ಪಡುವ ದೇವಪ್ರಭುತ್ವವಾಗಿಲ್ಲ.
10. ಕ್ರೈಸ್ತರು ರಕ್ತವನ್ನು ಹೇಗೆ ವೀಕ್ಷಿಸಬೇಕೆಂಬುದರ ಕುರಿತು, ಬೆಳಕಿನ ಬೆಳಗುಗಳು ಏನನ್ನು ಪ್ರಕಟಿಸಿದವು?
10 ರಕ್ತದ ಪವಿತ್ರತೆಯ ಮೇಲೂ ಬೆಳಕು ಕಂಗೊಳಿಸಿತು. ಅ. ಕೃತ್ಯಗಳು 15:28, 29 ರಲ್ಲಿರುವ ರಕ್ತವನ್ನು ತಿನ್ನುವುದರ ವಿರುದ್ಧವಾದ ನಿಷೇಧವು, ಯೆಹೂದಿ ಕ್ರೈಸ್ತರಿಗೆ ಪರಿಮಿತಗೊಳಿಸಲ್ಪಟ್ಟಿತ್ತೆಂದು ಕೆಲವು ಬೈಬಲ್ ವಿದ್ಯಾರ್ಥಿಗಳು ಭಾವಿಸಿದ್ದರು. ಆದಾಗಲೂ, ಈ ಆಜ್ಞೆಯು ಅಪೊಸ್ತಲ ಸಂಬಂಧಿತ ಸಮಯಗಳಲ್ಲಿ ವಿಶ್ವಾಸಿಗಳಾಗಿ ಪರಿಣಮಿಸಿದ ಜನಾಂಗಗಳವರಿಗೂ ಅನ್ವಯಿಸಿತೆಂದು ಅ. ಕೃತ್ಯಗಳು 21:25 ತೋರಿಸುತ್ತದೆ. ಆದುದರಿಂದ, 1945, ಜುಲೈ 1ರ ದ ವಾಚ್ಟವರ್ ನಲ್ಲಿ ತೋರಿಸಲ್ಪಟ್ಟಿರುವಂತೆ, ರಕ್ತದ ಪವಿತ್ರತೆಯು ಎಲ್ಲಾ ಕ್ರೈಸ್ತರಿಗೆ ಅನ್ವಯಿಸುತ್ತದೆ. ಅದರ ಅರ್ಥ ರಕ್ತದ ಸಾಸೆಜ್ನಲ್ಲಿರುವಂತೆ, ಪ್ರಾಣಿಯ ರಕ್ತವನ್ನು ತಿನ್ನಲು ನಿರಾಕರಿಸುವುದು ಮಾತ್ರವಲ್ಲ, ರಕ್ತಪೂರಣಗಳ ವಿದ್ಯಮಾನದಲ್ಲಿರುವಂತೆ, ಮಾನವ ರಕ್ತವನ್ನೂ ವರ್ಜಿಸಬೇಕು.
11. ಹೊಗೆಸೊಪ್ಪಿನ ಕುರಿತಾದ ಕ್ರೈಸ್ತರ ನೋಟದ ಸಂಬಂಧದಲ್ಲಿ ಏನನ್ನು ತಿಳಿದುಕೊಳ್ಳಲಾಯಿತು?
11 ಅಧಿಕಗೊಂಡ ಬೆಳಕಿನ ಫಲಿತಾಂಶವಾಗಿ, ಆರಂಭದಲ್ಲಿ ಕೇವಲ ಅಸಮ್ಮತಿ ತೋರಿಸಲ್ಪಟ್ಟ ಹವ್ಯಾಸಗಳು ತದನಂತರ ಗಂಭೀರವಾದ ತಪ್ಪುನಡೆವಳಿಗಳಾಗಿ ನಿರ್ವಹಿಸಲ್ಪಟ್ಟವು. ಇದರ ಒಂದು ಉದಾಹರಣೆಯು ಹೊಗೆಸೊಪ್ಪಿನ ಉಪಯೋಗಕ್ಕೆ ಸಂಬಂಧಿಸಿದ್ದಾಗಿತ್ತು. 1895, ಆಗಸ್ಟ್ 1ರ ಸೈಅನ್ಸ್ ವಾಚ್ ಟವರ್ ನಲ್ಲಿ, 1 ಕೊರಿಂಥ 10:31 ಮತ್ತು 2 ಕೊರಿಂಥ 7:1ಕ್ಕೆ ಗಮನವನ್ನು ನಿರ್ದೇಶಿಸುತ್ತಾ, ಸಹೋದರ ರಸ್ಸಲ್ ಬರೆದದ್ದು: “ಯಾವನೇ ಕ್ರೈಸ್ತನು ಯಾವುದೇ ರೂಪದಲ್ಲಿ ಹೊಗೆಸೊಪ್ಪನ್ನು ಉಪಯೋಗಿಸುವುದು, ದೇವರ ಮಹಿಮೆಗಾಗಿ ಅಥವಾ ಕ್ರೈಸ್ತನೊಬ್ಬನ ಪ್ರಯೋಜನಕ್ಕಾಗಿ ಹೇಗೆ ಇರಸಾಧ್ಯವಿದೆಯೆಂದು ನಾನು ಅವಲೋಕಿಸಲಾರೆ.” ಹೊಗೆಸೊಪ್ಪನ್ನು ಉಪಯೋಗಿಸುವ ಯಾವನಾದರೂ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರಸಾಧ್ಯವಿಲ್ಲವೆಂದು 1973 ರಿಂದ ಸ್ಪಷ್ಟವಾಗಿಗಿ ಗ್ರಹಿಸಲ್ಪಟ್ಟಿದೆ. ಒಬ್ಬ ಸಾಕ್ಷಿಯು ಜೂಜಿನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಸಭೆಯಲ್ಲಿ ಉಳಿಯಲು ಸಾಧ್ಯವಿಲ್ಲವೆಂದು 1976 ರಲ್ಲಿ ಸ್ಪಷ್ಟೀಕರಿಸಲ್ಪಟ್ಟಿತು.
ಇತರ ಸಂಸ್ಕರಣಗಳು
12. (ಎ) ಪೇತ್ರನಿಗೆ ಒಪ್ಪಿಸಲ್ಪಟ್ಟ ಕೀಲಿ ಕೈಗಳ ಸಂಖ್ಯೆಯ ಕುರಿತು, ಬೆಳಕಿನ ಒಂದು ಬೆಳಗು ಏನನ್ನು ಪ್ರಕಟಿಸಿತು? (ಬಿ) ಪ್ರತಿಯೊಂದು ಕೀಲಿ ಕೈಯನ್ನು ಪೇತ್ರನು ಉಪಯೋಗಿಸಿದಾಗ ಪರಿಸ್ಥಿತಿಗಳೇನಾಗಿದ್ದವು?
12 ಯೇಸುವು ಪೇತ್ರನಿಗೆ ಕೊಟ್ಟಂತಹ ಸಾಂಕೇತಿಕ ಕೀಲಿ ಕೈಗಳ ಸಂಖ್ಯೆಯ ಮೇಲೆಯೂ ಅಧಿಕವಾದ ಬೆಳಕು ಬೀರಲ್ಪಟ್ಟಿದೆ. ಜನರಿಗೆ ರಾಜ್ಯದ ಬಾಧ್ಯಸ್ಥರಾಗಲು ಮಾರ್ಗವನ್ನು ತೆರೆದ ಎರಡು ಕೀಲಿ ಕೈಗಳನ್ನು ಪೇತ್ರನು ಪಡೆದುಕೊಂಡಿದ್ದು, ಸಾ.ಶ. 33ರ ಪಂಚಾಶತ್ತಮದಲ್ಲಿ ಯೆಹೂದ್ಯರಿಗಾಗಿ ಒಂದನ್ನು ಮತ್ತು ಪೇತ್ರನು ಕೊರ್ನೇಲ್ಯನಿಗೆ ಸುವಾರ್ತೆ ಸಾರಿದಾಗ, ಪ್ರಥಮವಾಗಿ ಸಾ.ಶ. 36 ರಲ್ಲಿ ಇನ್ನೊಂದನ್ನು ಉಪಯೋಗಿಸಿದನೆಂದು ಬೈಬಲ್ ವಿದ್ಯಾರ್ಥಿಗಳು ಭಾವಿಸಿದ್ದರು. (ಅ. ಕೃತ್ಯಗಳು 2:14-41; 10:34-48) ಸಕಾಲದಲ್ಲಿ, ಸಮಾರ್ಯದವರೆಂಬ ಮೂರನೆಯ ಗುಂಪೊಂದು ಒಳಗೂಡಿತ್ತೆಂದು ಅವಲೋಕಿಸಲಾಯಿತು. ಅವರಿಗೆ ರಾಜ್ಯದ ಸಂದರ್ಭವನ್ನು ತೆರೆಯುವಾಗ, ಪೇತ್ರನು ಎರಡನೆಯ ಕೀಲಿ ಕೈಯನ್ನು ಉಪಯೋಗಿಸಿದನು. (ಅ. ಕೃತ್ಯಗಳು 8:14-17) ಹೀಗೆ, ಪೇತ್ರನು ಕೊರ್ನೇಲ್ಯನಿಗೆ ಸುವಾರ್ತೆ ಸಾರಿದಾಗ ಮೂರನೆಯ ಕೀಲಿ ಕೈ ಉಪಯೋಗಿಸಲ್ಪಟ್ಟಿತು.—ದ ವಾಚ್ಟವರ್, 1979, ಅಕ್ಟೋಬರ್ 1, ಪುಟಗಳು 16-22, 26.
13. ಯೋಹಾನ 10 ನೆಯ ಅಧ್ಯಾಯದಲ್ಲಿ ಉಲ್ಲೇಖಿಸಲ್ಪಟ್ಟಿರುವ ಕುರಿಹಟ್ಟಿಗಳ ಕುರಿತಾಗಿ ಬೆಳಕಿನ ಬೆಳಗುಗಳು ಏನನ್ನು ಪ್ರಕಟಿಸಿದವು?
13 ಬೆಳಕಿನ ಇನ್ನೊಂದು ಕಿರಣದಿಂದ, ಯೇಸು ಕೇವಲ ಎರಡಲ್ಲ, ಬದಲಾಗಿ ಮೂರು ಕುರಿಹಟ್ಟಿಗಳಿಗೆ ಸೂಚಿಸಿದನೆಂದು ಗ್ರಹಿಸಲಾಯಿತು. (ಯೋಹಾನ, 10 ನೆಯ ಆಧ್ಯಾಯ) ಅವುಗಳಾವುವೆಂದರೆ (1) ಸ್ನಾನಿಕನಾದ ಯೋಹಾನನು ದ್ವಾರಪಾಲಕನಾಗಿದ್ದ ಯೆಹೂದಿ ಕುರಿಹಟ್ಟಿ, (2) ಅಭಿಷಿಕ್ತರಾದ ರಾಜ್ಯ ಬಾಧ್ಯಸ್ಥರ ಹಟ್ಟಿ, ಮತ್ತು (3) ಭೂನಿರೀಕ್ಷೆಯಿರುವ “ಬೇರೆ ಕುರಿಗಳ” ಹಟ್ಟಿ.—ಯೋಹಾನ 10:2, 3, 15, 16; ದ ವಾಚ್ಟವರ್, 1984, ಫೆಬ್ರವರಿ 15, ಪುಟಗಳು 10-20.
14. ಸೂಚಿತರೂಪದ ಜೂಬಿಲಿ ಸಂವತ್ಸರದ ಆರಂಭದ ಕುರಿತಾದ ವಿಷಯಗಳನ್ನು, ಅಧಿಕವಾದ ಬೆಳಕು ಹೇಗೆ ಸ್ಪಷ್ಟೀಕರಿಸಿತು?
14 ಸೂಚಿತರೂಪದ ಜೂಬಿಲಿ ಸಂವತ್ಸರದ ಕುರಿತಾದ ತಿಳಿವಳಿಕೆಯೂ ಸ್ವಲ್ಪ ಸ್ಪಷ್ಟೀಕರಣವನ್ನು ಪಡೆದುಕೊಂಡಿತು. ನಿಯಮ ಶಾಸ್ತ್ರದ ಕೆಳಗೆ, ಪ್ರತಿ 50 ವರ್ಷವು ವೈಭವವಾದ ಒಂದು ಜೂಬಿಲಿ ಸಂವತ್ಸರವಾಗಿದ್ದು, ಆಗ ಸ್ವತ್ತುಗಳು ತಮ್ಮ ಹಿಂದಿನ ಯಜಮಾನರಿಗೆ ಹಿಂದಿರುಗಿಸಲ್ಪಡುತ್ತಿದ್ದವು. (ಯಾಜಕಕಾಂಡ 25:10) ಇದು ಕ್ರಿಸ್ತನ ಸಾವಿರ ವರ್ಷದಾಳಿಕೆಯನ್ನು ಮುನ್ಚಿತ್ರಿಸುತ್ತದೆಂದು ಬಹಳ ದೀರ್ಘ ಸಮಯದಿಂದಲೂ ತಿಳಿಯಲಾಗಿತ್ತು. ಆದರೂ, ಸಾ.ಶ. 33ರ ಪಂಚಾಶತ್ತಮದಲ್ಲಿ ಸುರಿಸಲ್ಪಟ್ಟ ಪವಿತ್ರಾತ್ಮವನ್ನು ಪಡೆದುಕೊಳ್ಳುತ್ತಿದ್ದವರು, ಮೋಶೆಯ ನಿಯಮ ಶಾಸ್ತ್ರದೊಡಂಬಡಿಕೆಯ ಬಂಧನದಿಂದ ಬಿಡುಗಡೆಗೊಳಿಸಲ್ಪಟ್ಟಾಗ, ಸೂಚಿತರೂಪದ ಜೂಬಿಲಿ ಸಂವತ್ಸರವು ವಾಸ್ತವವಾಗಿ ಆರಂಭವಾಯಿತೆಂದು ತೀರ ಇತ್ತೀಚೆಗಿನ ಸಮಯಗಳಲ್ಲಿ ಗ್ರಹಿಸಲಾಯಿತು.—ದ ವಾಚ್ಟವರ್, 1987, ಜನವರಿ 1, ಪುಟಗಳು 18-28.
ಪರಿಭಾಷೆಯ ಮೇಲೆ ಅಧಿಕವಾದ ಬೆಳಕು
15. “ಯೋಜನೆ” ಎಂಬ ಪದದ ಉಪಯೋಗದ ಮೇಲೆ ಯಾವ ಬೆಳಕು ಬೀರಲ್ಪಟ್ಟಿತು?
15 “ಪ್ರಸಂಗಿಯು ಯಥಾರ್ಥಭಾವದಿಂದ ರಚಿಸಿದ ಒಪ್ಪಿಗೆಯ ಸತ್ಯದ ಮಾತುಗಳನ್ನು ಹುಡುಕಿ ಆರಿಸಿದನು.” (ಪ್ರಸಂಗಿ 12:10) ಈ ಮಾತುಗಳು ನಮ್ಮ ಸದ್ಯದ ವಿಷಯಕ್ಕೆ ಸಮರ್ಪಕವಾಗಿ ಅನ್ವಯಿಸಬಹುದು; ಏಕೆಂದರೆ ತತ್ವ ಮತ್ತು ನಡತೆಯಂತಹ ಪ್ರಾಮುಖ್ಯ ವಿಷಯಗಳ ಮೇಲೆ ಮಾತ್ರವಲ್ಲ, ಕ್ರೈಸ್ತ ಪರಿಭಾಷೆ ಮತ್ತು ಅದರ ನಿಷ್ಕೃಷ್ಟವಾದ ಅರ್ಥದ ಮೇಲೂ ಬೆಳಕು ಕಂಗೊಳಿಸಿದೆ. ಉದಾಹರಣೆಗಾಗಿ, ಬೈಬಲ್ ವಿದ್ಯಾರ್ಥಿಗಳ ನಡುವೆ, ಯುಗಗಳ ಕುರಿತಾದ ದೈವಿಕ ಯೋಜನೆ ಎಂಬ ಹೆಸರಿನ, ಶಾಸ್ತ್ರಗಳ ಅಧ್ಯಯನಗಳು (ಇಂಗ್ಲಿಷ್) ಪುಸ್ತಕದ ಒಂದನೆಯ ಸಂಪುಟವು, ಅತ್ಯಂತ ಅಚ್ಚುಮೆಚ್ಚಿನ ಪ್ರಕಾಶನಗಳಲ್ಲಿ ಒಂದಾಗಿತ್ತು. ಆದರೂ, ಯೋಜನೆಗಳನ್ನು ಮಾಡುವವರೋಪಾದಿ ಮಾನವರ ಕುರಿತಾಗಿ ಮಾತ್ರವೇ ದೇವರ ವಾಕ್ಯವು ಮಾತಾಡುತ್ತದೆಂದು ಸಕಾಲದಲ್ಲಿ ಗ್ರಹಿಸಲ್ಪಟ್ಟಿತು. (ಜ್ಞಾನೋಕ್ತಿ 19:21) ಯೋಜನೆ ಮಾಡುತ್ತಿರುವವನೋಪಾದಿ ಯೆಹೋವನ ಕುರಿತು ಶಾಸ್ತ್ರಗಳು ಎಂದೂ ಮಾತಾಡಿಲ್ಲ. ಆತನಿಗೆ ಯೋಜನೆ ಮಾಡುವ ಅಗತ್ಯವಿಲ್ಲ. “ತಾನು ಕಾಲವು ಪರಿಪೂರ್ಣವಾದಾಗ ನಿರ್ವಹಿಸಬೇಕಾದ ಒಂದು ಕೃಪೆಯುಳ್ಳ ಸಂಕಲ್ಪವನ್ನು ಆತನು ಕ್ರಿಸ್ತನಲ್ಲಿ ಮೊದಲೇ ನಿಷ್ಕರ್ಷೆಮಾಡಿಕೊಂಡಿದ್ದನು,” ಎಂದು ಎಫೆಸದವರಿಗೆ 1:9, 10 ರಲ್ಲಿ ನಾವು ಓದುವಂತೆ, ತನ್ನ ಅಪರಿಮಿತವಾದ ಜ್ಞಾನ ಮತ್ತು ಶಕ್ತಿಯ ಕಾರಣದಿಂದ ಆತನು ಏನೇ ಉದ್ದೇಶಿಸಲಿ ಅದು ಯಶಸ್ವಿಯಾಗುವುದು ನಿಶ್ಚಯ. ಆದುದರಿಂದ ಯೆಹೋವನಿಗೆ ನಿರ್ದೇಶಿಸುವಾಗ, “ಉದ್ದೇಶ” ಎಂಬ ಶಬ್ದವು ಹೆಚ್ಚು ಸೂಕ್ತವಾದ ಒಂದು ಶಬ್ದವಾಗಿದೆಯೆಂದು ಕ್ರಮೇಣವಾಗಿ ಅವಲೋಕಿಸಲ್ಪಟ್ಟಿತು.
16. ಲೂಕ 2:14ರ ಸರಿಯಾದ ಅರ್ಥವು ಕ್ರಮೇಣವಾಗಿ ಏನಾಗಿತ್ತೆಂದು ಅವಲೋಕಿಸಲಾಯಿತು?
16 ತದನಂತರ ಲೂಕ 2:14ರ ಕುರಿತಾಗಿ ಹೆಚ್ಚು ಸ್ಪಷ್ಟವಾಗಿದ ತಿಳಿವಳಿಕೆಯನ್ನು ಪಡೆದುಕೊಳ್ಳುವ ವಿಷಯವಿತ್ತು. ಕಿಂಗ್ ಜೇಮ್ಸ್ ವರ್ಷನ್ ಗನುಸಾರವಾಗಿ, ಅದು ಹೇಳುವುದು: “ಅತಿ ಉನ್ನತ ಲೋಕದಲ್ಲಿ ದೇವರಿಗೆ ಮಹಿಮೆ, ಮತ್ತು ಭೂಮಿಯಲ್ಲಿ ಶಾಂತಿ, ಮನುಷ್ಯರ ಕಡೆಗೆ ಪ್ರಸನ್ನತೆ.” ದೇವರ ಪ್ರಸನ್ನತೆಯು ದುಷ್ಟರ ಕಡೆಗೆ ವ್ಯಕ್ತಪಡಿಸಲ್ಪಡದಿರುವುದರಿಂದ, ಇದು ಸರಿಯಾದ ವಿಚಾರವನ್ನು ವ್ಯಕ್ತಪಡಿಸಲಿಲ್ಲವೆಂದು ತಿಳಿದುಕೊಳ್ಳಲಾಯಿತು. ಆದುದರಿಂದ ಸಾಕ್ಷಿಗಳು, ದೇವರ ಕಡೆಗೆ ಪ್ರಸನ್ನತೆಯಿಂದಿದ್ದ ಮನುಷ್ಯರಿಗೆ ಶಾಂತಿಯ ವಿಷಯದೋಪಾದಿ ಇದನ್ನು ವೀಕ್ಷಿಸಿದರು. ಹೀಗೆ ಅವರು ಬೈಬಲಿನಲ್ಲಿ ಆಸಕ್ತಿಯುಳ್ಳವರಿಗೆ ಪ್ರಸನ್ನತೆಯುಳ್ಳ ಜನರೆಂದು ಸೂಚಿಸತೊಡಗಿದರು. ಆದರೆ ಮನುಷ್ಯರ ಕಡೆಯಿಂದಲ್ಲ, ಬದಲಾಗಿ ದೇವರ ಕಡೆಯಿಂದ ಪ್ರಸನ್ನತೆಯು ಅದರಲ್ಲಿ ಒಳಗೊಂಡಿತ್ತೆಂದು ತದನಂತರ ತಿಳಿಯಲಾಯಿತು. ಹೀಗೆ, ಲೂಕ 2:14ರ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಪಾದಟಿಪ್ಪಣಿಯು “ಆತನು [ದೇವರು] ಮೆಚ್ಚುವ ಮನುಷ್ಯರು” ಎಂದು ಉಲ್ಲೇಖಿಸುತ್ತದೆ. ತಮ್ಮ ಸಮರ್ಪಣೆಯ ಪ್ರತಿಜ್ಞೆಗೆ ಅನುಸಾರವಾಗಿ ಜೀವಿಸುತ್ತಿರುವ ಎಲ್ಲಾ ಕ್ರೈಸ್ತರಿಗೆ ದೇವರ ಪ್ರಸನ್ನತೆಯಿದೆ.
17, 18. ಯೆಹೋವನು ಯಾವುದನ್ನು ನಿರ್ದೋಷೀಕರಿಸುವನು, ಮತ್ತು ಆತನು ಏನನ್ನು ಪವಿತ್ರೀಕರಿಸುವನು?
17 ತದ್ರೀತಿಯಲ್ಲಿ, ದೀರ್ಘ ಸಮಯದ ವರೆಗೆ, ಸಾಕ್ಷಿಗಳು ಯೆಹೋವನ ನಾಮದ ನಿರ್ದೋಷೀಕರಣದ ಕುರಿತಾಗಿ ಮಾತಾಡಿದರು. ಆದರೆ ಸೈತಾನನು ಯೆಹೋವನ ನಾಮದ ಮೇಲೆ ಆಕ್ಷೇಪಣೆ ಎತ್ತಿದ್ದನೋ? ಆ ವಿಷಯಕ್ಕೆ ಸಂಬಂಧಿಸಿ, ಆ ಹೆಸರಿನ ಮೇಲೆ ಯೆಹೋವನಿಗೆ ಹಕ್ಕಿರಲಿಲ್ಲವೆಂಬಂತೆ, ಸೈತಾನನ ನಿಯೋಗಿಗಳಲ್ಲಿ ಯಾರಾದರೂ ಯೆಹೋವನ ನಾಮದ ಮೇಲೆ ಆಕ್ಷೇಪಣೆ ಎತ್ತಿದ್ದರೋ? ನಿಶ್ಚಯವಾಗಿ ಇಲ್ಲ. ಪಂಥಾಹ್ವಾನಿಸಲ್ಪಟ್ಟದ್ದು ಮತ್ತು ನಿರ್ದೋಷೀಕರಿಸಲ್ಪಡಬೇಕಾದ ಅಗತ್ಯವುಳ್ಳದ್ದು ಯೆಹೋವನ ನಾಮವಾಗಿರಲಿಲ್ಲ. ಆದುದರಿಂದಲೇ ವಾಚ್ ಟವರ್ ಸೊಸೈಟಿಯ ಇತ್ತೀಚೆಗಿನ ಪ್ರಕಾಶನಗಳು, ಯೆಹೋವನ ನಾಮ ವನ್ನು ನಿರ್ದೋಷೀಕರಿಸ ಲಾಗುತ್ತಿದೆಯೆಂದು ಹೇಳುವುದಿಲ್ಲ. ಯೆಹೋವನ ಸಾರ್ವಭೌಮತೆ ಯನ್ನು ನಿರ್ದೋಷೀಕರಿಸ ಲಾಗುತ್ತಿರುವುದಾಗಿ ಮತ್ತು ಆತನ ನಾಮ ವನ್ನು ಪವಿತ್ರೀಕರಿಸಲಾಗುತ್ತಿರುವುದಾಗಿ ಅವು ಹೇಳುತ್ತವೆ. ಇದು ಪ್ರಾರ್ಥಿಸುವಂತೆ ಯೇಸು ನಮಗೆ ಹೇಳಿದ ವಿಷಯಕ್ಕನುಸಾರವಾಗಿದೆ: “ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ.” (ಮತ್ತಾಯ 6:9, NW) ಅನೇಕಾವರ್ತಿ, ತನ್ನ ನಾಮವನ್ನು ಪವಿತ್ರೀಕರಿಸುವೆನೆಂದು ಯೆಹೋವನು ಹೇಳಿದ್ದಾನೆ; ಇಸ್ರಾಯೇಲ್ಯರು ಅದನ್ನು ಪಂಥಾಹ್ವಾನಿಸಲಿಲ್ಲ, ಆದರೆ ಅದನ್ನು ಅಪವಿತ್ರಗೊಳಿಸಿದ್ದರು.—ಯೆಹೆಜ್ಕೇಲ 20:9, 14, 22; 36:23.
18 ಆಸಕ್ತಿಕರವಾಗಿಯೇ, 1971 ರಲ್ಲಿ, “ನಾನೇ ಯೆಹೋವನೆಂದು ಜನಾಂಗಗಳು ತಿಳಿದುಕೊಳ್ಳುವವು”—ಹೇಗೆ? (ಇಂಗ್ಲಿಷ್) ಎಂಬ ಪುಸ್ತಕವು ಈ ಭೇದವನ್ನು ಮಾಡಿತು: “ಯೆಹೋವನ ವಿಶ್ವ ಸಾರ್ವಭೌಮತೆಯ ನಿರ್ದೋಷೀಕರಣಕ್ಕಾಗಿ ಮತ್ತು ಯೆಹೋವನ ನಾಮದ ಮಹಿಮೆಪಡಿಸುವಿಕೆಗಾಗಿ . . . ಯೇಸು ಕ್ರಿಸ್ತನು ಹೋರಾಡುತ್ತಾನೆ.” (364-5ನೆಯ ಪುಟಗಳು) 1973 ರಲ್ಲಿ, ಸಹಸ್ರ ವರ್ಷಗಳ ದೇವರ ರಾಜ್ಯವು ಸಮೀಪಿಸಿದೆ (ಇಂಗ್ಲಿಷ್) ಹೇಳಿದ್ದು: “ತನ್ನ ವಿಶ್ವ ಸಾರ್ವಭೌಮತೆಯನ್ನು ನಿರ್ದೋಷೀಕರಿಸಲು ಮತ್ತು ತನ್ನ ಯೋಗ್ಯ ನಾಮವನ್ನು ಪವಿತ್ರೀಕರಿಸಲು, ಬರಲಿರುವ ‘ಮಹಾ ಸಂಕಟ’ವು ಸರ್ವಶಕ್ತ ದೇವರಾದ ಯೆಹೋವನಿಗೆ ಸಮಯವಾಗಿದೆ.” (409 ನೆಯ ಪುಟ) ತದನಂತರ, 1975 ರಲ್ಲಿ, ಲೋಕ ಸಂಕಟದಿಂದ ಮನುಷ್ಯನ ರಕ್ಷಣೆಯು ಹತ್ತಿರವಿದೆ! (ಇಂಗ್ಲಿಷ್) ಎಂಬ ಪುಸ್ತಕವು ಹೇಳಿದ್ದು: “ಯೆಹೋವನ ವಿಶ್ವ ಸಾರ್ವಭೌಮತೆಯ ನಿರ್ದೋಷೀಕರಣ ಮತ್ತು ಆತನ ಪವಿತ್ರ ನಾಮದ ಪವಿತ್ರೀಕರಿಸುವಿಕೆಯ, ವಿಶ್ವ ಇತಿಹಾಸದ ಅತ್ಯಂತ ಮಹತ್ತಾದ ಘಟನೆಯು ಆಗ ಪೂರೈಸಲ್ಪಡಲಿರುವುದು.”—281 ನೆಯ ಪುಟ.
19, 20. ಆತ್ಮಿಕ ಬೆಳಕಿನ ಬೆಳಗುಗಳಿಗಾಗಿ ನಮ್ಮ ಗಣ್ಯತೆಯನ್ನು ನಾವು ಹೇಗೆ ತೋರಿಸಬಲ್ಲೆವು?
19 ಈ ಎಲ್ಲಾ ಆತ್ಮಿಕ ಬೆಳಕಿನಲ್ಲಿ ಹಿತವನ್ನು ಅನುಭವಿಸುತ್ತಿರುವುದಕ್ಕಾಗಿ ಯೆಹೋವನ ಜನರು ಎಷ್ಟು ಆಶೀರ್ವದಿತರು! ತೀರ ವ್ಯತಿರಿಕ್ತವಾಗಿ, ಕ್ರೈಸ್ತಪ್ರಪಂಚದ ಮುಖಂಡರು ತಮ್ಮನ್ನು ಕಂಡುಕೊಳ್ಳುವ ಆತ್ಮಿಕ ಅಂಧಕಾರದ ಕುರಿತಾಗಿ ವೈದಿಕನೊಬ್ಬನ ಈ ಹೇಳಿಕೆಯು ವ್ಯಕ್ತಿಗೊಳಿಸುವುದು: “ಪಾಪವು ಏಕಿದೆ? ಕಷ್ಟಾನುಭವವು ಏಕಿದೆ? ಪಿಶಾಚನು ಏಕಿದ್ದಾನೆ? ಎಂಬ ಪ್ರಶ್ನೆಗಳನ್ನು, ನಾನು ಪರಲೋಕಕ್ಕೆ ಹೋದಾಗ ಕರ್ತನ ಬಳಿ ಕೇಳಬೇಕೆಂದಿದ್ದೇನೆ.” ಆದರೆ ಅದರ ಕಾರಣವನ್ನು ಯೆಹೋವನ ಸಾಕ್ಷಿಗಳು ಅವನಿಗೆ ಹೇಳಬಲ್ಲರು: ಯೆಹೋವನ ಸಾರ್ವಭೌಮತೆಯ ಯುಕ್ತತೆಯ ವಾದಾಂಶದ ಕಾರಣದಿಂದ ಹಾಗೂ ಪಿಶಾಚನ ವಿರೋಧದ ಹೊರತಾಗಿಯೂ ಮಾನವ ಜೀವಿಗಳು ದೇವರಿಗೆ ಸಮಗ್ರತೆಯನ್ನು ಕಾಪಾಡಿಕೊಳ್ಳಬಲ್ಲರೋ ಎಂಬ ಪ್ರಶ್ನೆಯ ಕಾರಣದಿಂದಲೇ.
20 ಅನೇಕ ವರ್ಷಗಳಿಂದ, ಬೆಳಕಿನ ದೊಡ್ಡವೂ ಚಿಕ್ಕವೂ ಆದ ಬೆಳಗುಗಳು, ಯೆಹೋವನ ಸಮರ್ಪಿತ ಸೇವಕರ ಕಾಲುಹಾದಿಗೆ ಕಾಂತಿ ಬೀರುತ್ತಿವೆ. ಇದು ಕೀರ್ತನೆ 97:11 ಮತ್ತು ಜ್ಞಾನೋಕ್ತಿ4:18 ರಂತಹ ಶಾಸ್ತ್ರವಚನಗಳ ನೆರವೇರಿಕೆಯಲ್ಲಿ ಇದು ರುಜುವಾಗಿದೆ. ಆದರೆ ಅಧಿಕವಾದ ಬೆಳಕಿಗಾಗಿ ಗಣ್ಯತೆಯನ್ನು ಹೊಂದಿರುವುದು ಮತ್ತು ಅದಕ್ಕೆ ಹೊಂದಿಕೆಯಲ್ಲಿ ಜೀವಿಸುವುದು, ಬೆಳಕಿನಲ್ಲಿ ನಡೆಯುತ್ತಿರುವುದರ ಅರ್ಥವಾಗಿದೆಯೆಂಬುದನ್ನು ನಾವೆಂದಿಗೂ ಮರೆಯದಿರೋಣ. ನಾವು ಅವಲೋಕಿಸಿದಂತೆ, ಅಧಿಕವಾದ ಈ ಬೆಳಕು ನಮ್ಮ ನಡತೆ ಮತ್ತು ಸಾರುವ ನಮ್ಮ ಆದೇಶ, ಎರಡನ್ನೂ ಒಳಗೊಳ್ಳುತ್ತದೆ.
[ಅಧ್ಯಯನ ಪ್ರಶ್ನೆಗಳು]
a ಈ ನೋಟಕ್ಕೆ ಪ್ರತಿವರ್ತನೆಯಾಗಿ, ಜೂನ್ 1 ಮತ್ತು ಜೂನ್ 15, 1929ರ ದ ವಾಚ್ ಟವರ್, “ಅಧಿಕೋನ್ನತ ಅಧಿಕಾರಗಳು” ಯೆಹೋವ ದೇವರು ಮತ್ತು ಯೇಸು ಕ್ರಿಸ್ತರಾಗಿದ್ದಾರೆಂದು ಅರ್ಥವಿವರಣೆ ಮಾಡಿತ್ತು. 1962 ರಲ್ಲಿ ತಿದ್ದಿದ್ದು ಪ್ರಧಾನವಾಗಿ ಈ ನಿಲುವನ್ನೇ.
b ಎಜ್ರನ ದಿನದ ದೇವಸ್ಥಾನದಾಸರಿಗೆ ಅನುರೂಪವಾಗಿ, ಆಡಳಿತ ಮಂಡಳಿಯ ಕಮಿಟಿಗಳಿಗೆ ಬೆಂಬಲ ನೀಡಲಿಕ್ಕಾಗಿ, ಮುಖ್ಯವಾಗಿ “ಬೇರೆ ಕುರಿಗಳ” ಆಯ್ದ ಸಹೋದರರು ನೇಮಿಸಲ್ಪಡುತ್ತಿದ್ದಾರೆಂದು, 1992, ಜುಲೈ 15ರ ಕಾವಲಿನಬುರುಜು ಪ್ರಕಟಿಸಿತು.—ಯೋಹಾನ 10:16; ಎಜ್ರ 2:58.
ನೀವು ನೆನಪಿಸಿಕೊಳ್ಳುತ್ತೀರೊ?
◻ “ಅಧಿಕೋನ್ನತ ಅಧಿಕಾರಗಳಿ”ಗೆ ಅಧೀನತೆಯ ಮೇಲೆ ಯಾವ ಬೆಳಕು ಬೀರಲ್ಪಟ್ಟಿದೆ?
◻ ಯಾವ ವ್ಯವಸ್ಥಾಪನಾ ವಿಕಸನಗಳಲ್ಲಿ ಬೆಳಕಿನ ಬೆಳಗುಗಳು ಫಲಿಸಿವೆ?
◻ ಅಧಿಕಗೊಂಡ ಬೆಳಕು ಕ್ರೈಸ್ತ ನಡತೆಯನ್ನು ಹೇಗೆ ಪ್ರಭಾವಿಸಿದೆ?
◻ ಕೆಲವು ಶಾಸ್ತ್ರೀಯ ಅಂಶಗಳ ಕುರಿತಾದ ನಮ್ಮ ತಿಳಿವಳಿಕೆಯಲ್ಲಿನ ಯಾವ ಸಂಸ್ಕರಣಗಳನ್ನು ಆತ್ಮಿಕ ಬೆಳಕು ಉಂಟುಮಾಡಿದೆ?
[ಪುಟ 25 ರಲ್ಲಿರುವ ಚಿತ್ರ ಕೃಪೆ]
Keys on page 24: Drawing based on photo taken in Cooper-Hewitt, National Design Museum, Smithsonian Institution