ಕಷ್ಟಾನುಭವವು ಇನ್ನಿಲ್ಲದಿರುವಾಗ
ಕಷ್ಟಾನುಭವವು, ಮಾನವ ಕುಟುಂಬಕ್ಕಾಗಿದ್ದ ದೇವರ ಮೂಲ ಉದ್ದೇಶದ ಭಾಗವಾಗಿರಲಿಲ್ಲ. ಆತನು ಅದನ್ನು ವಿನ್ಯಾಸಿಸಲೂ ಇಲ್ಲ, ಅದನ್ನು ಬಯಸುವುದೂ ಇಲ್ಲ. ‘ಹಾಗಿದ್ದರೆ, ಅದು ಹೇಗೆ ಆರಂಭವಾಯಿತು, ಮತ್ತು ಇಂದಿನ ವರೆಗೆ ಅದು ಮುಂದುವರಿಯುವಂತೆ ದೇವರು ಅನುಮತಿಸಿರುವುದೇಕೆ?’ ಎಂದು ನೀವು ಕೇಳಬಹುದು.—ಯಾಕೋಬ 1:13ನ್ನು ಹೋಲಿಸಿರಿ.
ಮಾನವ ಇತಿಹಾಸದ ಆತಿ ಆರಂಭದ ದಾಖಲೆಯಾಗಿರುವ ಬೈಬಲ್ನಲ್ಲಿ, ವಿಶೇಷವಾಗಿ ಆದಿಕಾಂಡ ಪುಸ್ತಕದಲ್ಲಿ ಉತ್ತರವು ಸಿಗುತ್ತದೆ. ನಮ್ಮ ಪ್ರಥಮ ಹೆತ್ತವರಾದ ಆದಾಮಹವ್ವರು, ದೇವರ ವಿರುದ್ಧವಾದ ಪಿಶಾಚನಾದ ಸೈತಾನನ ದಂಗೆಯಲ್ಲಿ ಅವನನ್ನು ಹಿಂಬಾಲಿಸಿದರೆಂದು ಅದು ಹೇಳುತ್ತದೆ. ಅವರ ಕೃತ್ಯಗಳು, ವಿಶ್ವದ ನ್ಯಾಯಪರಿಪಾಲನೆ ಮತ್ತು ಶಿಸ್ತಿನ ತಳಪಾಯದ ಮೇಲೆ ಆಕ್ರಮಣ ಮಾಡಿದ ಮೂಲಭೂತ ವಿವಾದಾಂಶಗಳನ್ನು ಎಬ್ಬಿಸಿದವು. ತಮಗಾಗಿ ಯಾವುದು ಒಳ್ಳೇದು ಮತ್ತು ಯಾವುದು ಕೆಟ್ಟದ್ದು ಎಂಬುದನ್ನು ನಿರ್ಣಯಿಸುವ ಹಕ್ಕು ತಮಗೆ ಸೇರಿದ್ದೆಂದು ಅವರು ವಾದಿಸಿದಾಗ, ಅವರು ದೇವರ ಪರಮಾಧಿಕಾರವನ್ನು ಪಂಥಾಹ್ವಾನಿಸಿದರು. ಆಳುವ ಹಾಗೂ “ಒಳ್ಳೇದರ ಕೆಟ್ಟದ್ದರ” ಏಕಮಾತ್ರ ನಿರ್ಣಯಕಾರನಾಗಿರುವ ಆತನ ಹಕ್ಕನ್ನು ಅವರು ಪ್ರಶ್ನಿಸಿದರು.—ಆದಿಕಾಂಡ 2:15-17; 3:1-5.
ಆತನ ಚಿತ್ತವನ್ನು ತತ್ಕ್ಷಣವೇ ಏಕೆ ಜಾರಿಗೆ ತರಬಾರದು?
‘ಹಾಗಾದರೆ ದೇವರು ತನ್ನ ಚಿತ್ತವನ್ನು ತತ್ಕ್ಷಣವೇ ಜಾರಿಗೆ ತರಲಿಲ್ಲವೇಕೆ?’ ಎಂದು ನೀವು ಕೇಳಬಹುದು. ಅನೇಕರಿಗೆ, ವಿಷಯವು ತೀರ ಸರಳವಾಗಿ ತೋರುತ್ತದೆ. ‘ದೇವರಿಗೆ ಶಕ್ತಿಯಿತ್ತು. ಆತನು ಅದನ್ನು ದಂಗೆಕೋರರನ್ನು ನಾಶಮಾಡಲು ಉಪಯೋಗಿಸಬೇಕಾಗಿತ್ತು,’ ಎಂದು ಅವರು ಹೇಳುತ್ತಾರೆ. (ಕೀರ್ತನೆ 147:5) ಆದರೆ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿರಿ, ‘ತಮ್ಮ ಚಿತ್ತವನ್ನು ಜಾರಿಗೆ ತರಲು ಉಚ್ಚ ದರ್ಜೆಯ ಶಕ್ತಿಯನ್ನು ಉಪಯೋಗಿಸುವವರೆಲ್ಲರನ್ನು ನಾನು ಹಿಂಜರಿಯದೆ ಮೆಚ್ಚುತ್ತೇನೊ? ಒಬ್ಬ ನಿರಂಕುಶಾಧಿಕಾರಿಯು, ತನ್ನ ಶತ್ರುಗಳನ್ನು ಅಳಿಸಿಹಾಕಲು ಮೃತ್ಯು ದಳಗಳನ್ನು ಉಪಯೋಗಿಸುವಾಗ, ನನಗೆ ಸಹಜವಾಗಿಯೇ ಹೇವರಿಕೆಯ ಅನಿಸಿಕೆಯಾಗುವುದಿಲ್ಲವೊ?’ ಹೆಚ್ಚಿನ ವಿವೇಚನಾಶೀಲ ಜನರು ಅಂತಹ ಒಂದು ಸಂಗತಿಯನ್ನು ಹೇಸುತ್ತಾರೆ.
‘ಆದರೆ ದೇವರು ಆ ಶಕ್ತಿಯನ್ನು ಚಲಾಯಿಸುತ್ತಿದ್ದಲ್ಲಿ, ಯಾರೊಬ್ಬರೂ ಆತನ ಕೃತ್ಯಗಳನ್ನು ಪ್ರಶ್ನಿಸುತ್ತಿರಲಿಲ್ಲ’ ಎನ್ನುತ್ತೀರಿ ನೀವು. ಇದು ಖಂಡಿತವೊ? ದೇವರ ಶಕ್ತಿಯ ಪ್ರಯೋಗವನ್ನು ಜನರು ಪ್ರಶ್ನಿಸುತ್ತಾರೆಂಬುದು ನಿಜವಲ್ಲವೊ? ದುಷ್ಟತನವನ್ನು ಆತನು ಸಹಿಸಿಕೊಳ್ಳುವುದರ ವಿಷಯದಂತೆ, ಕೆಲವೊಮ್ಮೆ ಆತನು ಅದನ್ನು ಏಕೆ ಉಪಯೋಗಿಸಿಲ್ಲ ಎಂದು ಅವರು ಪ್ರಶ್ನಿಸುತ್ತಾರೆ. ಮತ್ತು ಬೇರೆ ಸಮಯಗಳಲ್ಲಿ ಆತನು ಅದನ್ನು ಏಕೆ ಉಪಯೋಗಿಸಿದ್ದಾನೆ ಎಂದು ಅವರು ಪ್ರಶ್ನಿಸುತ್ತಾರೆ. ದೇವರು ತನ್ನ ಶತ್ರುಗಳ ವಿರುದ್ಧ ಮಾಡಲಿದ್ದ ಶಕ್ತಿಯ ಉಪಯೋಗದ ಕುರಿತಾಗಿ, ನಂಬಿಗಸ್ತನಾದ ಅಬ್ರಹಾಮನಿಗೂ ಒಂದು ಸಮಸ್ಯೆಯಿತ್ತು. ದೇವರು ಸೊದೋಮನ್ನು ನಾಶಮಾಡಲು ನಿರ್ಧರಿಸಿದ ಸಮಯವನ್ನು ಜ್ಞಾಪಿಸಿಕೊಳ್ಳಿರಿ. ಕೆಟ್ಟ ಜನರೊಂದಿಗೆ ಒಳ್ಳೇ ಜನರು ಕೂಡ ಸಾಯುವರೆಂದು ಅಬ್ರಹಾಮನು ತಪ್ಪಾಗಿ ಭಯಪಟ್ಟನು. ಅವನು ಕೂಗಿ ಹೇಳಿದ್ದು: “ದುಷ್ಟರ ಸಂಗಡ ನೀತಿವಂತರನ್ನೂ ಸಂಹರಿಸುವುದು ನಿನ್ನಿಂದ ಎಂದಿಗೂ ಆಗಬಾರದು.” (ಆದಿಕಾಂಡ 18:25) ಸಂಪೂರ್ಣವಾದ ಶಕ್ತಿಯು ದುರುಪಯೋಗಿಸಲ್ಪಡದು ಎಂಬ ಆಶ್ವಾಸನೆಯು, ಅಬ್ರಹಾಮನಂತಹ ಸುಮನಸ್ಕ ಜನರಿಗೂ ಬೇಕು.
ಖಂಡಿತವಾಗಿಯೂ ದೇವರು, ಆದಾಮ, ಹವ್ವ ಮತ್ತು ಸೈತಾನನನ್ನು ತತ್ಕ್ಷಣವೇ ನಾಶಮಾಡಸಾಧ್ಯವಿತ್ತು. ಆದರೆ ಅದು ಇತರ ದೇವದೂತರನ್ನು ಅಥವಾ ಆತನ ಕೃತ್ಯಗಳ ಕುರಿತಾಗಿ ಅನಂತರ ಅರಿಯಲಿದ್ದ ಮುಂದಿನ ಸೃಷ್ಟಿಗಳನ್ನು ಹೇಗೆ ಬಾಧಿಸಸಾಧ್ಯವಿತ್ತೆಂಬುದರ ಕುರಿತಾಗಿ ಯೋಚಿಸಿರಿ. ದೇವರ ಆಳ್ವಿಕೆಯ ಯುಕ್ತತೆಯ ಕುರಿತಾಗಿ ಇದು ಅವರಲ್ಲಿ ಕಾಡುವಂತಹ ಪ್ರಶ್ನೆಗಳನ್ನು ಬಿಡಬಹುದಿತ್ತೊ? ವಾಸ್ತವದಲ್ಲಿ ಆತನು, ನೀಟ್ಚ ವರ್ಣಿಸಿದಂತೆ, ಒಂದು ವಿಧದ ನಿರಂಕುಶಪ್ರಭುವಾಗಿದ್ದು, ತನ್ನನ್ನು ವಿರೋಧಿಸುವ ಯಾರನ್ನೂ ಕನಿಕರದಯೆಯಿಲ್ಲದೆ ಅಳಿಸಿಬಿಡುವ ಒಬ್ಬ ದೇವರಾಗಿದ್ದಾನೆಂಬ ಅಪವಾದಕ್ಕೆ ಅದು ದೇವರನ್ನು ಒಡ್ಡುತ್ತಿರಲಿಲ್ಲವೆ?
ಸರಿಯಾದುದನ್ನು ಮಾಡುವಂತೆ ಜನರನ್ನು ಒತ್ತಾಯಿಸಬಾರದೇಕೆ?
‘ಜನರು ಸರಿಯಾದುದನ್ನು ಮಾಡುವಂತೆ ದೇವರು ಒತ್ತಾಯಿಸಲು ಸಾಧ್ಯವಿರಲಿಲ್ಲವೊ?’ ಎಂದು ಕೆಲವರು ಕೇಳಬಹುದು. ಒಳ್ಳೇದು, ಇದನ್ನೂ ಪರಿಗಣಿಸಿರಿ. ಇತಿಹಾಸದಾದ್ಯಂತ, ಜನರು ತಮ್ಮ ಆಲೋಚನಾ ವಿಧಾನಕ್ಕೆ ಹೊಂದಿಕೊಳ್ಳುವಂತೆ ಮಾಡಲು ಸರಕಾರಗಳು ಪ್ರಯತ್ನಿಸಿವೆ. ಕೆಲವು ಸರಕಾರಗಳು ಅಥವಾ ವ್ಯಕ್ತಿಗತ ಅಧಿಪತಿಗಳು, ಪ್ರಾಯಶಃ ಅಮಲೌಷಧಗಳು ಅಥವಾ ಶಸ್ತ್ರಚಿಕಿತ್ಸೆಯನ್ನು ಉಪಯೋಗಿಸುತ್ತಾ, ಮನಸ್ಸನ್ನು ನಿಯಂತ್ರಿಸುವ ವಿವಿಧ ರೂಪಗಳನ್ನು ಪ್ರಯೋಗಿಸಿದ್ದಾರೆ. ಹೀಗೆ ಅವರು ತಮ್ಮ ಬಲಿಗಳಿಂದ ಸ್ವತಂತ್ರ ಇಚ್ಛೆಯ ಅದ್ಭುತವಾದ ಕೊಡುಗೆಯನ್ನು ಕಸಿದುಕೊಂಡಿದ್ದಾರೆ. ಆ ಕೊಡುಗೆಯನ್ನು ದುರುಪಯೋಗಿಸುವ ಸಂಭವವಿರುವುದಾದರೂ, ಸ್ವತಂತ್ರ ನೈತಿಕ ಕಾರ್ಯಕರ್ತರಾಗಿರುವುದನ್ನು ನಾವು ಅಮೂಲ್ಯವೆಂದೆಣಿಸುವುದಿಲ್ಲವೊ? ಆ ಸ್ವಾತಂತ್ರ್ಯವನ್ನು ತೆಗೆದುಹಾಕುವ ಯಾವುದೇ ಸರಕಾರದ ಅಥವಾ ಆಡಳಿತಗಾರನ ಪ್ರಯತ್ನಗಳನ್ನು ನಾವು ಮನ್ನಿಸುತ್ತೇವೊ?
ಹಾಗಿರುವಲ್ಲಿ, ನಿಯಮವನ್ನು ಜಾರಿಗೆ ತರಲು ದೇವರು ಶಕ್ತಿಯನ್ನು ತತ್ಕ್ಷಣ ಉಪಯೋಗಮಾಡುವುದಕ್ಕೆ ಯಾವ ಅನ್ಯಮಾರ್ಗವಿತ್ತು? ತನ್ನ ನಿಯಮಗಳನ್ನು ತಿರಸ್ಕರಿಸಿದವರಿಗೆ, ತನ್ನ ಆಳ್ವಿಕೆಯಿಂದ ಸ್ವಾತಂತ್ರ್ಯದ ಒಂದು ತಾತ್ಕಾಲಿಕ ಅವಧಿಯನ್ನು ಅನುಮತಿಸುವುದು, ಆ ದಂಗೆಯೊಂದಿಗೆ ನಿರ್ವಹಿಸುವ ಅತ್ಯುತ್ತಮ ವಿಧವೆಂದು ಯೆಹೋವ ದೇವರು ನಿರ್ಧರಿಸಿದನು. ಇದು, ಆದಾಮಹವ್ವರಿಂದ ಬಂದಿರುವ ಮಾನವ ಕುಟುಂಬಕ್ಕೆ, ದೇವರ ನಿಯಮಕ್ಕೆ ಅಧೀನರಾಗದೆ ತಮ್ಮನ್ನು ನಿಯಂತ್ರಿಸಿಕೊಳ್ಳಲು ಸೀಮಿತ ಸಮಯವನ್ನು ಅನುಮತಿಸುವುದು. ಆತನು ಇದನ್ನು ಮಾಡಿದ್ದೇಕೆ? ಯಾಕೆಂದರೆ, ತನ್ನ ಚಿತ್ತವನ್ನು ಜಾರಿಗೆ ತರಲು ಆತನು ತನ್ನ ಅಪರಿಮಿತ ಶಕ್ತಿಯನ್ನು ಉಪಯೋಗಿಸುವಾಗಲೂ, ಆಳ್ವಿಕೆ ನಡಿಸುವ ತನ್ನ ವಿಧವು ಯಾವಾಗಲೂ ಯೋಗ್ಯವೂ ನ್ಯಾಯಯುಕ್ತವೂ ಆಗಿದೆ, ಮತ್ತು ತನ್ನ ವಿರುದ್ಧವಾದ ಯಾವುದೇ ದಂಗೆಯು, ಇಂದೊ ಮುಂದೊ ವಿಪತ್ತಿನಲ್ಲಿ ಫಲಿಸುವುದೆಂಬುದನ್ನು ರುಜುಪಡಿಸುತ್ತಾ, ಸಕಾಲದಲ್ಲಿ ನಿರ್ವಿವಾದದ ರುಜುವಾತು ಶೇಖರವಾಗುವುದೆಂದು ಆತನಿಗೆ ತಿಳಿದಿತ್ತು.—ಧರ್ಮೋಪದೇಶಕಾಂಡ 32:4; ಯೋಬ 34:10-12; ಯೆರೆಮೀಯ 10:23.
ಆ ಎಲ್ಲ ಮುಗ್ಧ ಬಲಿಗಳ ಕುರಿತಾಗಿ ಏನು?
‘ಅಷ್ಟರತನಕ, ಎಲ್ಲಾ ಮುಗ್ಧ ಬಲಿಗಳ ಕುರಿತಾಗಿ ಏನು?’ ಎಂದು ನೀವು ಕೇಳಬಹುದು. ‘ನಿಯಮದ ಯಾವುದೊ ವಿವರಣೆಯನ್ನು ರುಜುಪಡಿಸಲಿಕ್ಕಾಗಿ ಅವರು ಅಷ್ಟೊಂದು ವೇದನೆಗೊಳಗಾಗುವುದು ನಿಜವಾಗಿಯೂ ಸಾರ್ಥಕವೊ?’ ಒಳ್ಳೇದು, ನಿಯಮದ ಯಾವುದೊ ಒಂದು ಅಗೋಚರವಾದ ಅಂಶವನ್ನು ರುಜುಪಡಿಸಲಿಕ್ಕಾಗಿ ಮಾತ್ರ ದೇವರು ದುಷ್ಟತನವನ್ನು ಅನುಮತಿಸಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಆತನೊಬ್ಬನೇ ಪರಮಾಧಿಕಾರಿಯಾಗಿದ್ದಾನೆ ಮತ್ತು ಆತನ ಎಲ್ಲಾ ಸೃಷ್ಟಿಗಳ ಶಾಂತಿ ಮತ್ತು ಸಂತೋಷಕ್ಕಾಗಿ, ಆತನ ನಿಯಮಗಳಿಗೆ ವಿಧೇಯತೆಯು ಅತ್ಯಾವಶ್ಯಕವೆಂಬ ಮೂಲಭೂತ ಸತ್ಯವನ್ನು ಅಂತಿಮವಾಗಿ ಸ್ಥಾಪಿಸಲಿಕ್ಕಾಗಿ ಆತನದನ್ನು ಅನುಮತಿಸಿದ್ದಾನೆ.
ಇದು ಮಾನವ ಕುಟುಂಬಕ್ಕೆ ತರಬಹುದಾದ ಯಾವುದೇ ಹಾನಿಯನ್ನು, ಸಂಪೂರ್ಣವಾಗಿ ಇಲ್ಲದಂತೆಮಾಡಲು ತನಗೆ ಸಾಧ್ಯವಿದೆಯೆಂದು ದೇವರಿಗೆ ತಿಳಿದಿದೆ. ಇದು ಮನಸ್ಸಿನಲ್ಲಿಡಬೇಕಾದ ಒಂದು ನಿರ್ಣಾಯಕ ಸಂಗತಿಯಾಗಿದೆ. ಕಟ್ಟಕಡೆಗೆ, ನೋವು ಮತ್ತು ಕಷ್ಟಾನುಭವದ ತಾತ್ಕಾಲಿಕ ಅವಧಿಗೆ ಒಂದು ಉಪಯುಕ್ತ ಫಲಿತಾಂಶವಿರುವುದೆಂದು ಆತನಿಗೆ ತಿಳಿದಿದೆ. ಲಸಿಕೆಯನ್ನು ಕೊಡದಿದ್ದಲ್ಲಿ ಮಗುವನ್ನು ಕೊಲ್ಲಬಹುದಾದ ಯಾವುದೊ ರೋಗದ ವಿರುದ್ಧ ಸಂರಕ್ಷಣೆಯನ್ನು ಕೊಡಲಿಕ್ಕಾಗಿ, ಲಸಿಕೆಯನ್ನು ಚುಚ್ಚಿ ಒಳಹೊಗಿಸುವ ನೋವನ್ನು ವೈದ್ಯನೊಬ್ಬನು ಉಂಟುಮಾಡುವಾಗ, ಮಗುವನ್ನು ಭದ್ರವಾಗಿ ಹಿಡಿದುಕೊಳ್ಳುವ ತಾಯಿಯ ಕುರಿತಾಗಿ ಯೋಚಿಸಿರಿ. ಯಾವ ತಾಯಿಯೂ ತನ್ನ ಮಗುವಿಗೆ ನೋವಾಗಬೇಕೆಂದು ಬಯಸುವುದಿಲ್ಲ. ಯಾವ ವೈದ್ಯನೂ ತನ್ನ ರೋಗಿಗೆ ಸಂಕಟವನ್ನು ಉಂಟುಮಾಡಲು ಬಯಸುವುದಿಲ್ಲ. ಆ ಸಮಯದಲ್ಲಿ ಆ ಮಗು, ನೋವಿಗಾಗಿರುವ ಕಾರಣವನ್ನು ಗಣ್ಯಮಾಡುವುದಿಲ್ಲ, ಆದರೆ ಅದು ಏಕೆ ಅನುಮತಿಸಲ್ಪಟ್ಟಿತ್ತೆಂದು ಅವನಿಗೆ ಅನಂತರ ಅರ್ಥವಾಗುವುದು.
ಕಷ್ಟಾನುಭವಿಸುತ್ತಿರುವವರಿಗೆ ನಿಜವಾದ ದುಃಖೋಪಶಮನವೊ?
ಈ ವಿಷಯಗಳ ಕುರಿತಾಗಿ ಕೇವಲ ತಿಳಿದಿರುವುದು, ಕಷ್ಟಾನುಭವಿಸುತ್ತಿರುವವರಿಗೆ ತುಸು ದುಃಖೋಪಶಮನವನ್ನು ಮಾತ್ರ ತಂದೀತೆಂದು ಕೆಲವರು ಭಾವಿಸಬಹುದು. ಕಷ್ಟಾನುಭವದ ಅಸ್ತಿತ್ವಕ್ಕಾಗಿರುವ ಒಂದು ತರ್ಕಸಮ್ಮತವಾದ ವಿವರಣೆಯು “ಕಷ್ಟಾನುಭವಿಗೆ, ಆಹಾರ ವಸ್ತುಗಳ ಪದಾರ್ಥ ರಚನೆಯ ಕುರಿತಾದ ಒಂದು ಭಾಷಣವು ಹೊಟ್ಟೆಗಿಲ್ಲದವನಿಗೆ ಎಷ್ಟು ಸಹಾಯಕಾರಿಯಾಗಿರುತ್ತದೊ ಸುಮಾರು ಅಷ್ಟೇ ಸಹಾಯಕರ” ಎಂದು ಹಾನ್ಸ್ ಕುಂಗ್ ತಿಳಿಸುತ್ತಾರೆ. ಅವರು ಕೇಳುವುದು: “ಕಷ್ಟಾನುಭವದಿಂದ ಬಹುಮಟ್ಟಿಗೆ ಮುಳುಗಿಹೋಗಿರುವ ಮನುಷ್ಯನಿಗೆ, ಬುದ್ಧಿವಂತಿಕೆಯ ತರ್ಕವು ನಿಜವಾಗಿಯೂ ಉತ್ತೇಜನವನ್ನು ಕೊಡಸಾಧ್ಯವಿದೆಯೊ?” ದೇವರ ವಾಕ್ಯವಾದ ಬೈಬಲನ್ನು ಅಲಕ್ಷಿಸುವ ಮನುಷ್ಯರ ಎಲ್ಲಾ “ಬುದ್ಧಿವಂತಿಕೆಯ ತರ್ಕವು,” ಕಷ್ಟಾನುಭವಿಸುತ್ತಿರುವವರಿಗೆ ಉತ್ತೇಜನವನ್ನು ಕೊಟ್ಟಿಲ್ಲ. ಮನುಷ್ಯನು ಕಷ್ಟಾನುಭವಿಸಬೇಕೆಂದು ದೇವರು ಉದ್ದೇಶಿಸಿದನೆಂಬುದಾಗಿ ಮತ್ತು ಭೂಮಿಯು ಕಣ್ಣೀರಿನ ಕಣಿವೆಯೋಪಾದಿ ಅಥವಾ ಸ್ವರ್ಗದಲ್ಲಿ ಕಟ್ಟಕಡೆಗೆ ಜೀವವನ್ನು ಗಳಿಸಲಿರುವವರಿಗಾಗಿ ಒಂದು ಶೋಧನಾ ನೆಲದೋಪಾದಿ ರಚಿಸಲ್ಪಟ್ಟಿತ್ತೆಂದು ಸೂಚಿಸುವ ಮೂಲಕ, ಅಂತಹ ಮಾನವೀಯ ತರ್ಕವು ಸಮಸ್ಯೆಗೆ ಕೂಡಿಸಿದೆ, ಅಷ್ಟೇ. ಎಂತಹ ದೇವದೂಷಣೆ!
ಆದರೂ, ಬೈಬಲ್ ತಾನೇ ನಿಜವಾದ ದುಃಖೋಪಶಮನವನ್ನು ಕೊಡುತ್ತದೆ. ಅದು ಕಷ್ಟಾನುಭವದ ಅಸ್ತಿತ್ವಕ್ಕಾಗಿ ಒಂದು ಸುಸಂಗತವಾದ ವಿವರಣೆಯನ್ನು ಒದಗಿಸುತ್ತದೆ ಮಾತ್ರವಲ್ಲ, ಕಷ್ಟಾನುಭವದ ಈ ತಾತ್ಕಾಲಿಕ ಅನುಮತಿಸುವಿಕೆಯು ಉಂಟುಮಾಡಿರುವ ಎಲ್ಲಾ ಹಾನಿಯನ್ನು ಇಲ್ಲದಂತೆಮಾಡುವೆನೆಂಬ ದೇವರ ನಿಶ್ಚಿತ ವಾಗ್ದಾನದಲ್ಲಿ ಭರವಸೆಯನ್ನು ಕಟ್ಟುತ್ತದೆ ಕೂಡ.
“ಎಲ್ಲಾ ವಿಷಯಗಳ ಪುನಸ್ಸ್ಥಾಪನೆ”
ಬಲು ಬೇಗನೆ ದೇವರು, ತನ್ನ ಪ್ರಥಮ ಮಾನವ ಸೃಷ್ಟಿಗಳು ದಂಗೆಯೇಳುವ ಮುಂಚೆ ಆತನು ಉದ್ದೇಶಿಸಿದಂತಹ ರೀತಿಗೆ ವಿಷಯಗಳನ್ನು ಪುನಸ್ಸ್ಥಾಪಿಸುವನು. ಮಾನವನ ಸ್ವತಂತ್ರ ಆಳ್ವಿಕೆಗಾಗಿರುವ ಆತನ ನೇಮಿತ ಸಮಯವು ಬಹುಮಟ್ಟಿಗೆ ಮುಗಿದುಹೋಗಿದೆ. “ದೇವರು ಪ್ರಾಚೀನ ಕಾಲದ ತನ್ನ ಪವಿತ್ರ ಪ್ರವಾದಿಗಳ ಮೂಲಕ ಹೇಳಿಸಿದ ಎಲ್ಲಾ ವಿಷಯಗಳ ಪುನಸ್ಸ್ಥಾಪನಾ ಸಮಯಗಳ ತನಕ, ಯಾರನ್ನು ಸ್ವರ್ಗವು ನಿಶ್ಚಯವಾಗಿ ತನ್ನೊಳಗೆ ಹಿಡಿದುಕೊಂಡಿರಬೇಕೊ, ಆ ಯೇಸು”ವನ್ನು (NW) ಆತನು ಕಳುಹಿಸಲಿರುವ ಒಂದು ಸಮಯದಲ್ಲಿ ನಾವು ಜೀವಿಸುತ್ತಾ ಇದ್ದೇವೆ.—ಅ. ಕೃತ್ಯಗಳು 3:20, 21.
ಯೇಸು ಕ್ರಿಸ್ತನು ಏನು ಮಾಡುವನು? ಅವನು ಭೂಮಿಯಿಂದ ದೇವರ ಎಲ್ಲ ಶತ್ರುಗಳನ್ನು ತೆಗೆದುಹಾಕುವನು. (2 ಥೆಸಲೊನೀಕ 1:6-10) ಇದು ಮಾನವ ನಿರಂಕುಶಾಧಿಕಾರಿಗಳಿಂದ ವಿಧಿಸಲ್ಪಟ್ಟು ಕೊಡಲ್ಪಡುವ, ಕ್ಷಿಪ್ರಕ್ರಮದ ಹತಿಸುವಿಕೆಯಾಗಿರದು. ಮಾನವನ ಅವ್ಯವಸ್ಥ ಆಳ್ವಿಕೆಯ ವಿಪತ್ಕಾರಿ ಫಲಿತಾಂಶಗಳನ್ನು ರುಜುಪಡಿಸುವ, ಬೆಟ್ಟದಷ್ಟು ಎತ್ತರವಾದ ರುಜುವಾತಿನ ರಾಶಿಯು, ದೇವರು ತನ್ನ ಚಿತ್ತವನ್ನು ಜಾರಿಗೆ ತರಲು ತನ್ನ ಅಪರಿಮಿತ ಶಕ್ತಿಯನ್ನು ಬೇಗನೆ ಉಪಯೋಗಿಸುವುದರಲ್ಲಿ ಪೂರ್ಣವಾಗಿ ನ್ಯಾಯವಂತನೆಂಬುದನ್ನು ತೋರಿಸುವುದು. (ಪ್ರಕಟನೆ 11:17, 18) ಆರಂಭದಲ್ಲಿ ಇದು, ಭೂಮಿಯು ಹಿಂದೆಂದೂ ಅನುಭವಿಸಿರದಂತಹ ರೀತಿಯ “ಸಂಕಟ”ವನ್ನು ಅರ್ಥೈಸುವುದು. ಇದು ನೋಹನ ದಿನದ ಜಲಪ್ರಳಯಕ್ಕೆ ತದ್ರೀತಿಯದ್ದಾಗಿರುವುದು, ಆದರೆ ಅದಕ್ಕಿಂತಲೂ ಹೆಚ್ಚು ದೊಡ್ಡದು. (ಮತ್ತಾಯ 24:21, 29-31, 36-39) ಈ “ಮಹಾ ಸಂಕಟವನ್ನು” ಪಾರಾಗುವವರು, “ತನ್ನ ಪರಿಶುದ್ಧ ಪ್ರವಾದಿಗಳ ಬಾಯಿಂದ ಹೇಳಿಸಿ”ದ ದೇವರ ಎಲ್ಲಾ ವಾಗ್ದಾನಗಳ ನೆರವೇರಿಕೆಯನ್ನು ಕಾಣುವಾಗ, “ವಿಶ್ರಾಂತಿಕಾಲಗಳ”ನ್ನು ಅನುಭವಿಸುವರು. (ಅ. ಕೃತ್ಯಗಳು 3:19; ಪ್ರಕಟನೆ 7:14-17) ದೇವರು ಏನನ್ನು ವಾಗ್ದಾನಿಸಿದ್ದಾನೆ?
ಒಳ್ಳೇದು, ಯುದ್ಧದಿಂದ ಉಂಟುಮಾಡಲ್ಪಟ್ಟಿರುವ ಕಷ್ಟಾನುಭವ ಮತ್ತು ರಕ್ತಪಾತಕ್ಕೆ ಅಂತ್ಯವಿರುವುದೆಂದು, ದೇವರ ಪುರಾತನ ಕಾಲದ ಪ್ರವಾದಿಗಳು ಹೇಳುತ್ತಾರೆ. ಉದಾಹರಣೆಗಾಗಿ, ಕೀರ್ತನೆ 46:9 ನಮಗನ್ನುವುದು: “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ.” ಇನ್ನು ಮುಂದೆ, ಕ್ರೂರವಾದ ಯುದ್ಧಗಳಲ್ಲಿ ಬಲತ್ಕಾರ ಸಂಭೋಗ ಮಾಡಲ್ಪಟ್ಟ, ಅಂಗಹೀನಮಾಡಲ್ಪಟ್ಟ ಮತ್ತು ಕೊಲ್ಲಲ್ಪಟ್ಟ, ಮುಗ್ಧ ಬಲಿಗಳು ಮತ್ತು ದುರಂತಮಯ ನಿರಾಶ್ರಿತರು ಇರುವುದಿಲ್ಲ! ಪ್ರವಾದಿಯಾದ ಯೆಶಾಯನು ಹೇಳುವುದು: “ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವುದೇ ಇಲ್ಲ.”—ಯೆಶಾಯ 2:4.
ಪಾತಕ ಮತ್ತು ಅನ್ಯಾಯದಿಂದ ಉಂಟುಮಾಡಲ್ಪಟ್ಟಿರುವ ಕಷ್ಟಾನುಭವಕ್ಕೂ ಇರುವ ಅಂತ್ಯದ ಕುರಿತಾಗಿ ಪ್ರವಾದಿಗಳು ಮುಂತಿಳಿಸುತ್ತಾರೆ. “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು,” ಮತ್ತು ನೋವು ಹಾಗೂ ಕಷ್ಟಾನುಭವವನ್ನು ಉಂಟುಮಾಡುವವರು “ನಿರ್ಮೂಲರಾಗುವರು” ಎಂದು ಜ್ಞಾನೋಕ್ತಿ 2:21, 22 ವಾಗ್ದಾನಿಸುತ್ತದೆ. ಇನ್ನು ಮುಂದೆ “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು”ಮಾಡನು. (ಪ್ರಸಂಗಿ 8:9) ಎಲ್ಲಾ ದುಷ್ಟರು ಸದಾಕಾಲಕ್ಕೂ ತೆಗೆದುಹಾಕಲ್ಪಡುವರು. (ಕೀರ್ತನೆ 37:10, 38) ಪ್ರತಿಯೊಬ್ಬರೂ ಕಷ್ಟಾನುಭವದಿಂದ ಮುಕ್ತರಾಗಿ, ಶಾಂತಿ ಮತ್ತು ಭದ್ರತೆಯಲ್ಲಿ ಜೀವಿಸಲು ಶಕ್ತರಾಗುವರು.—ಮೀಕ 4:4.
ಇನ್ನೂ ಹೆಚ್ಚಾಗಿ, ದೈಹಿಕ ಮತ್ತು ಭಾವನಾತ್ಮಕ ವ್ಯಾಧಿಗಳಿಂದ ಉಂಟಾಗುವ ಕಷ್ಟಾನುಭವಕ್ಕೆ ಅಂತ್ಯವಿರುವುದೆಂದು ಕೂಡ ಪ್ರವಾದಿಗಳು ವಾಗ್ದಾನಿಸುತ್ತಾರೆ. (ಯೆಶಾಯ 33:24) ಕುರುಡರು, ಕಿವುಡರು, ಅಂಗವಿಕಲರು, ಮತ್ತು ಅಸ್ವಸ್ಥತೆ ಹಾಗೂ ರೋಗದಿಂದ ಬಾಧಿತರಾಗಿರುವವರೆಲ್ಲರೂ ಗುಣಪಡಿಸಲ್ಪಡುವರೆಂದು ಯೆಶಾಯನು ವಾಗ್ದಾನಿಸುತ್ತಾನೆ. (ಯೆಶಾಯ 35:5, 6) ದೇವರು ಮರಣದ ಪರಿಣಾಮಗಳನ್ನೂ ಇಲ್ಲದಂತೆಮಾಡುವನು. “ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ”ರು ಎಂದು ಯೇಸು ಮುಂತಿಳಿಸಿದನು. (ಯೋಹಾನ 5:28, 29) ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ದ ಕುರಿತಾದ ಅಪೊಸ್ತಲ ಯೋಹಾನನ ದರ್ಶನದಲ್ಲಿ, “ದೇವರು ತಾನೇ . . . ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ” ಎಂದು ಅವನಿಗೆ ತಿಳಿಸಲ್ಪಟ್ಟಿತು. (ಪ್ರಕಟನೆ 21:1-4) ಊಹಿಸಿಕೊಳ್ಳಿರಿ! ನೋವಿಲ್ಲ, ಕಣ್ಣೀರಿಲ್ಲ, ಗೋಳಾಟವಿಲ್ಲ, ಮರಣವಿಲ್ಲ—ಇನ್ನು ಮುಂದೆ ಕಷ್ಟಾನುಭವವೇ ಇಲ್ಲ!
ದುಷ್ಟತನದ ಈ ತಾತ್ಕಾಲಿಕ ಸಹಿಸುವಿಕೆಯ ಸಮಯದಲ್ಲಿ ಸಂಭವಿಸಿರಬಹುದಾದ ಯಾವುದೇ ದುರಂತಗಳು, ಎಲ್ಲವೂ ಸರಿಪಡಿಸಲ್ಪಡುವವು. ದೇವರಿಂದ ಎಂದೂ ಉದ್ದೇಶಿಸಲ್ಪಟ್ಟಿರದ ಮಾನವ ನೋವು ಮತ್ತು ಕಷ್ಟಾನುಭವದ ಸ್ಮರಣೆಗಳೂ, ಸಂಪೂರ್ಣವಾಗಿ ಅಳಿಸಿಹಾಕಲ್ಪಡುವವು. ‘ಪೂರ್ವದ ಕಷ್ಟಗಳು . . . ಮರೆತುಹೋಗಿರುವವು . . . ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು’ ಎಂದು ಯೆಶಾಯನು ಪ್ರವಾದಿಸಿದನು. (ಯೆಶಾಯ 65:16, 17) ಒಂದು ಪ್ರಮೋದವನ ಭೂಮಿಯಲ್ಲಿ, ಸಂಪೂರ್ಣ ಶಾಂತಿ ಮತ್ತು ಸಂತೋಷದಿಂದ ಜೀವಿಸುವ ಒಂದು ಪರಿಪೂರ್ಣ ಮಾನವ ಕುಟುಂಬಕ್ಕಾಗಿದ್ದ ದೇವರ ಮೂಲ ಉದ್ದೇಶವು ಪೂರ್ಣವಾಗಿ ನಿಜವಾಗುವುದು. (ಯೆಶಾಯ 45:18) ಆತನ ಪರಮಾಧಿಕಾರದಲ್ಲಿ ಭರವಸೆಯು ಸಂಪೂರ್ಣವಾಗಿರುವುದು. ದೇವರು ಎಲ್ಲಾ ಮಾನವ ಕಷ್ಟಾನುಭವವನ್ನು ಅಂತ್ಯಗೊಳಿಸುವ ಒಂದು ಸಮಯದಲ್ಲಿ, ಮತ್ತು ನೀಟ್ಚ ಅಪವಾದ ಹೊರಿಸಿದಂತೆ, ಆತನು ಯಾವುದೊ ರೀತಿಯ “ನಿರಂಕುಶಪ್ರಭು, ಸೋಗುಗಾರ, ವಂಚಕ, ವಧಕಾರನ”ಲ್ಲ, ಬದಲಾಗಿ ಯಾವಾಗಲೂ ಪ್ರೀತಿಪರನೂ, ವಿವೇಕಿಯೂ, ಸಂಪೂರ್ಣ ಶಕ್ತಿಯ ತನ್ನ ಪ್ರಯೋಗದಲ್ಲಿ ನ್ಯಾಯವಂತನೂ ಆಗಿದ್ದಾನೆಂಬುದನ್ನು ತೋರಿಸುವ ಒಂದು ಸಮಯದಲ್ಲಿ ಜೀವಿಸುವುದು ಎಂತಹ ಒಂದು ಸುಯೋಗ!
[ಪುಟ 5 ರಲ್ಲಿರುವ ಚಿತ್ರ]
ಕೆಲವು ಅಧಿಪತಿಗಳು, ತಮ್ಮ ಬಲಿಗಳಿಂದ ಸ್ವತಂತ್ರ ಇಚ್ಛೆಯನ್ನು ಕಸಿದುಕೊಳ್ಳುತ್ತಾ, ಮನಸ್ಸು ನಿಯಂತ್ರಣವನ್ನು ಪ್ರಯೋಗಿಸಿದ್ದಾರೆ
[ಕೃಪೆ]
UPI/Bettmann
[ಪುಟ 7 ರಲ್ಲಿರುವ ಚಿತ್ರ]
ಕಷ್ಟಾನುಭವವು ಇನ್ನಿಲ್ಲದಿರುವಾಗ, ಎಲ್ಲರೂ ಜೀವನದಲ್ಲಿ ಪೂರ್ತಿಯಾಗಿ ಆನಂದಿಸುವರು