ಅಮ್ಮೋನಿಯರು—ದಯೆಗೆ ದ್ವೇಷಭಾವವನ್ನು ಹಿಂದಿರುಗಿಕೊಟ್ಟ ಒಂದು ಜನಾಂಗ
ಯೊರ್ದನಿನ ಹಾಶಮೈಟ್ ರಾಜ್ಯದ ರಾಜಧಾನಿಯಾಗಿರುವ, ಆಮ್ಮಾನ್ ಎಂದು ಹೆಸರಿಸಲ್ಪಟ್ಟಿರುವ ಆಧುನಿಕ ನಗರವು, ಭೂದೃಶ್ಯದಿಂದ ಅಳಿದುಹೋದಂತಹ ಒಂದು ಜನಾಂಗದ ನೆನಪನ್ನು ಸಂರಕ್ಷಿಸುತ್ತದೆ. ಅವರು ಅಮ್ಮೋನಿಯರೆಂದು ಕರೆಯಲ್ಪಟ್ಟಿದ್ದರು. ಅವರು ಯಾರಾಗಿದ್ದರು, ಮತ್ತು ಅವರ ಪತನದಿಂದ ನಾವು ಯಾವ ಪಾಠಗಳನ್ನು ಕಲಿಯಬಲ್ಲೆವು?
ಅಮ್ಮೋನಿಯರು ನೀತಿವಂತ ಮನುಷ್ಯನಾದ ಲೋಟನ ವಂಶಜರಾಗಿದ್ದರು. (ಆದಿಕಾಂಡ 19:35-38) ಲೋಟನು ಅಬ್ರಹಾಮನ ಸೋದರಳಿಯನಾಗಿದುದ್ದರಿಂದ, ಅಮ್ಮೋನಿಯರು ಇಸ್ರಾಯೇಲ್ಯರ ಸೋದರಸಂಬಂಧಿಗಳಾಗಿದ್ದರೆಂದು ನೀವು ಹೇಳಬಹುದು. ಆದಾಗಲೂ, ಲೋಟನ ಸಂತತಿಯು ಸುಳ್ಳು ದೇವರುಗಳ ಆರಾಧನೆಗೆ ತಿರುಗಿತು. ಆದರೂ, ಯೆಹೋವ ದೇವರು ಅವರಲ್ಲಿ ಆಸಕ್ತಿಯನ್ನು ಕಾಪಾಡಿಕೊಂಡನು. ಇಸ್ರಾಯೇಲ್ ಜನಾಂಗವು ವಾಗ್ದಾನಿತ ದೇಶವನ್ನು ಸಮೀಪಿಸಿದಂತೆ, ದೇವರು ಅವರನ್ನು ಎಚ್ಚರಿಸಿದ್ದು: “ನೀವು ಅಮ್ಮೋನಿಯರ ಹತ್ತಿರಕ್ಕೆ ಬರುವಾಗ ಅವರಿಗೆ ವೈರಿಗಳಾಗಿ ನಡೆದು ಯುದ್ಧಮಾಡಬೇಡಿರಿ. ನಾನು ಆ ದೇಶವನ್ನು ಲೋಟನ ವಂಶದವರಾದ ಅಮ್ಮೋನಿಯರಿಗೆ ಸ್ವಾಸ್ತ್ಯವಾಗಿ ಕೊಟ್ಟಿರು”ವೆನು.—ಧರ್ಮೋಪದೇಶಕಾಂಡ 2:19.
ಅಮ್ಮೋನಿಯರು ಅಂತಹ ದಯೆಯನ್ನು ಗಣ್ಯಮಾಡಿದರೋ? ವ್ಯತಿರಿಕ್ತವಾಗಿ, ಯೆಹೋವನು ಅವರಿಗೆ ಏನನ್ನು ಕೊಟ್ಟಿದ್ದಾನೆಂಬುದನ್ನು ಅಂಗೀಕರಿಸಲು ಅವರು ನಿರಾಕರಿಸಿದರು. ದೇವರು ಅವರಲ್ಲಿ ತೋರಿಸಿದ ದಯಾಪರ ಆಸಕ್ತಿಗೆ ಪ್ರತಿಯಾಗಿ ಅವರು, ದೇವರ ಜನರಾದ ಇಸ್ರಾಯೇಲ್ಯರ ಕಡೆಗೆ ನಿರಂತರವಾದ ದ್ವೇಷಭಾವವನ್ನು ಹಿಂದಿರುಗಿಕೊಟ್ಟರು. ಇಸ್ರಾಯೇಲ್ಯರು ಯೆಹೋವನ ಆಜ್ಞೆಯನ್ನು ಗೌರವಿಸುತ್ತಾ ಅವರ ವಿರುದ್ಧ ಯಾವುದೇ ಆಕ್ರಮಣಕಾರಿ ಚಲನೆಗಳನ್ನು ಮಾಡದಿದ್ದರೂ, ಅಮ್ಮೋನಿಯರು ಮತ್ತು ಅವರ ಮೋವಾಬ್ಯ ಸಹೋದರರಿಗೆ ಬೆದರಿಕೆಯ ಅನಿಸಿಕೆಯಾಗುತ್ತಿತ್ತು. ಅಮ್ಮೋನಿಯರು ಯಾವುದೇ ಮಿಲಿಟರಿ ಆಕ್ರಮಣವನ್ನು ಮಾಡಲಿಲ್ಲ ನಿಜ, ಆದರೆ ಅವರು ಬಿಳಾಮನೆಂಬ ಹೆಸರಿನ ಪ್ರವಾದಿಯನ್ನು ಗೊತ್ತುಮಾಡಿಕೊಂಡು, ಅವನು ಇಸ್ರಾಯೇಲನ್ನು ಶಪಿಸುವಂತೆ ಅವನನ್ನು ಕೇಳಿಕೊಂಡರು!—ಅರಣ್ಯಕಾಂಡ 22:1-6; ಧರ್ಮೋಪದೇಶಕಾಂಡ 23:3-6.
ಅನಂತರ ವಿಚಿತ್ರವಾದ ಒಂದು ಸಂಗತಿ ನಡೆಯಿತು. ಬಿಳಾಮನು ತನ್ನ ಶಾಪವನ್ನು ಉಚ್ಚರಿಸಲು ಅಶಕ್ತನಾಗಿದ್ದನು ಎಂದು ಬೈಬಲ್ ವರದಿಸುತ್ತದೆ. ಅವನು ಅವರ ಮೇಲೆ ಕೇವಲ ಆಶೀರ್ವಾದಗಳನ್ನು ಘೋಷಿಸುತ್ತಾ, ಹೀಗನ್ನಶಕ್ತನಾದನು: “ನಿಮ್ಮನ್ನು ಆಶೀರ್ವದಿಸುವವನಿಗೆ ಆಶೀರ್ವಾದವೂ ಶಪಿಸುವವನಿಗೆ ಶಾಪವೂ ಉಂಟಾಗುವದು.” (ಅರಣ್ಯಕಾಂಡ 24:9) ಅಮ್ಮೋನಿಯರನ್ನು ಸೇರಿಸಿ, ಅದರಲ್ಲಿ ಒಳಗೂಡಿರುವವರು, ಇದರಿಂದ ಒಂದು ಶಕ್ತಿಶಾಲಿಯಾದ ಪಾಠವನ್ನು ಕಲಿಯಬೇಕಿತ್ತು: ದೇವರ ಜನರು ಒಳಗೂಡಿದ್ದಾಗ, ಅವರ ಪರವಾಗಿ ಹಸ್ತಕ್ಷೇಪಮಾಡಲು ಆತನು ಚೆನ್ನಾಗಿ ತಯಾರಾಗಿದ್ದನು!
ಅಮ್ಮೋನಿಯರಾದರೋ, ಇಸ್ರಾಯೇಲನ್ನು ವಿರೋಧಿಸಲು ಮಾರ್ಗಗಳನ್ನು ಹುಡುಕುತ್ತಾ ಮುಂದುವರಿದರು. ನ್ಯಾಯಸ್ಥಾಪಕರ ಶಕದಲ್ಲಿ, ಅಮ್ಮೋನ್, ಮೋವಾಬ್ ಮತ್ತು ಅಮಾಲ್ಯೇಕ್ಯರೊಂದಿಗೆ ಜೊತೆಗೂಡಿ, ಯೆರಿಕೋವಿನಷ್ಟು ದೂರ ಮುಂದುವರಿಯುತ್ತಾ ವಾಗ್ದಾನಿತ ದೇಶವನ್ನು ಆಕ್ರಮಿಸಿತು. ಆದಾಗಲೂ, ಇಸ್ರಾಯೇಲಿನ ನ್ಯಾಯಸ್ಥಾಪಕ ಏಹೂದನು ಆ ಆಕ್ರಮಣಗಾರರನ್ನು ಹಿಮ್ಮೆಟ್ಟಿದಾಗ ಜಯವು ಅಲ್ಪಕಾಲದ್ದಾಗಿತ್ತು. (ನ್ಯಾಯಸ್ಥಾಪಕರು 3:12-15, 27-30) ನ್ಯಾಯಸ್ಥಾಪಕ ಯೆಫಾಹ್ತನ ದಿನಗಳ ತನಕ ಒಂದು ಆತಂಕದ ವಿರಾಮವು ಉಳಿಯಿತು. ಅಷ್ಟರಲ್ಲಿ ಇಸ್ರಾಯೇಲ್ ಜನಾಂಗವು ಮೂರ್ತಿಪೂಜೆಗೆ ಬಲಿಬಿದ್ದಿತ್ತು, ಆದುದರಿಂದ ಯೆಹೋವನು ತನ್ನ ಸಂರಕ್ಷಣೆಯನ್ನು ಹಿಂತೆಗೆದನು. ಹೀಗೆ ಸುಮಾರು 18 ವರ್ಷಗಳ ವರೆಗೆ, ದೇವರು ಅವರನ್ನು “ಅಮ್ಮೋನಿಯರ ಕೈಗೆ ಒಪ್ಪಿಸಿಬಿಟ್ಟನು.” (ನ್ಯಾಯಸ್ಥಾಪಕರು 10:6, 9) ಇಸ್ರಾಯೇಲ್ಯರು ಮೂರ್ತಿಪೂಜೆಯನ್ನು ತ್ಯಜಿಸಿ, ಯೆಫಾಹ್ತನ ನಾಯಕತ್ವದ ಕೆಳಗೆ ಒಟ್ಟುಗೂಡಿದಾಗ ಅಮ್ಮೋನಿಯರು ಪುನಃ ತೀವ್ರ ಪರಾಜಯವನ್ನು ಅನುಭವಿಸಿದರು.—ನ್ಯಾಯಸ್ಥಾಪಕರು 10:16–11:33.
ತನ್ನ ಪ್ರಥಮ ಅರಸನಾದ, ಸೌಲನ ಕಿರೀಟಧಾರಣೆಯೊಂದಿಗೆ, ನ್ಯಾಯಸ್ಥಾಪಕರಿಂದ ಆಳಿಕ್ವೆಯ ಇಸ್ರಾಯೇಲಿನ ಶಕವು ಮುಗಿಯಿತು. ಸೌಲನು ಆಳಲು ಆರಂಭಿಸಿದ ಸ್ವಲ್ಪ ಸಮಯದೊಳಗೆ ಅಮ್ಮೋನಿಯರ ವೈರತ್ವವು ಪುನಃ ಸ್ಫೋಟಗೊಂಡಿತು. ಯಾಬೇಷ್ ಗಿಲ್ಯಾದ್ ಎಂಬ ಇಸ್ರಾಯೇಲ್ ಪಟ್ಟಣದ ಮೇಲೆ ಅರಸನಾದ ನಾಹಾಷನು ಒಂದು ಅನಿರೀಕ್ಷಿತ ಆಕ್ರಮಣವನ್ನು ಮಾಡಿದನು. ಆ ಪಟ್ಟಣದ ಪುರುಷರು ಶಾಂತಿಗಾಗಿ ಬೇಡಿಕೊಂಡಾಗ, ಅಮ್ಮೋನಿಯನಾದ ನಾಹಾಷನು ಈ ಘೋರ ಬೇಡಿಕೆಯನ್ನು ಮಾಡಿದನು: “ನಿಮ್ಮಲ್ಲಿ ಪ್ರತಿಯೊಬ್ಬರ ಬಲಗಣ್ಣನ್ನು ಕಿತ್ತುಹಾಕುತ್ತೇನೆ. ಇದಕ್ಕೆ ನೀವು ಒಪ್ಪುವಿರಾದರೆ ನಿಮ್ಮ ಸಂಗಡ ಒಡಂಬಡಿಕೆಮಾಡಿಕೊಳ್ಳುತ್ತೇನೆ.” ಇತಿಹಾಸಕಾರನಾದ ಫಾವ್ಲೀಯುಸ್ ಜೋಸೀಫಸನು ವಾದಿಸುವುದೇನಂದರೆ, “ಅವರ ಎಡಗಣ್ಣುಗಳು ತಮ್ಮ ಗುರಾಣಿಗಳಿಂದ ಮುಚ್ಚಲ್ಪಟ್ಟಿದ್ದಾಗ, ಅವರು ಯುದ್ಧದಲ್ಲಿ ಸಂಪೂರ್ಣವಾಗಿ ಉಪಯೋಗವಿಲ್ಲ”ದವರಾಗುವಂತೆ, ಇದು ಆಂಶಿಕವಾಗಿ ಒಂದು ರಕ್ಷಣಾ ಕ್ರಮವಾಗಿ ಮಾಡಲ್ಪಟ್ಟಿತ್ತು. ಆದರೂ, ಈ ನಿರ್ದಯದ ಘೋಷಣೆಯ ಉದ್ದೇಶವು, ಈ ಇಸ್ರಾಯೇಲ್ಯರನ್ನು ಒಂದು ಅವಮಾನಕಾರಿ ಉದಾಹರಣೆಯಾಗಿ ಮಾಡುವುದೇ ಆಗಿತ್ತು.—1 ಸಮುವೇಲ 11:1, 2.
ಪುನಃ ಒಮ್ಮೆ ಅಮ್ಮೋನಿಯರು ಯೆಹೋವನ ದಯೆಗೆ ದ್ವೇಷಭಾವವನ್ನು ಹಿಂದಿರುಗಿಸಿದ್ದರು. ಈ ಕುತ್ಸಿತ ಬೆದರಿಕೆಯನ್ನು ಯೆಹೋವನು ಅಲಕ್ಷಿಸಲಿಲ್ಲ. “[ನಾಹಾಷನ] ಈ ಮಾತುಗಳನ್ನು ಕೇಳಿದಾಗ ದೇವರ ಆತ್ಮವು ಸೌಲನ ಮೇಲೆ ಬಂತು, ಮತ್ತು ಅವನು ಅತ್ಯಂತ ಕುಪಿತನಾದನು.” ದೇವರ ಆತ್ಮದ ಮಾರ್ಗದರ್ಶನೆಯ ಕೆಳಗೆ, ಸೌಲನು 3,30,000 ಹೋರಾಡುವ ಪುರುಷರ ಒಂದು ದಳವನ್ನು ಒಟ್ಟುಗೂಡಿಸಿದನು. ಇವರು ಅಮ್ಮೋನಿಯರನ್ನು ಎಷ್ಟು ಪೂರ್ಣವಾಗಿ ಸೋಲಿಸಿದರೆಂದರೆ “ಅವರೊಳಗೆ ಇಬ್ಬರು ಜೊತೆಯಾಗಿರಲಿಲ್ಲ.”—1 ಸಮುವೇಲ 11:6, 11, NW.
ತಮ್ಮ ಸ್ವಂತ ಅಭಿರುಚಿಗಳೊಂದಿಗಿನ ಅಮ್ಮೋನಿಯರ ಸ್ವಾರ್ಥಮಗ್ನತೆ, ಅವರ ಕಠೋರತೆ, ಮತ್ತು ಲೋಭವು, ಕಟ್ಟಕಡೆಗೆ ಅವರ ಸಂಪೂರ್ಣ ವಿನಾಶಕ್ಕೆ ನಡಿಸಿತು. ಯೆಹೋವನ ಪ್ರವಾದಿಯಾದ ಚೆಫನ್ಯನು ಮುಂತಿಳಿಸಿದಂತೆ, ಅವರಿಗೆ “ಗೊಮೋರದ ದುರ್ದಶೆಯೇ . . . ಸಂಭವಿಸುವದು; . . . ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯ ನಾಶನಕ್ಕೆ ಈಡಾಗುವವು; . . . ಸೇನಾಧೀಶ್ವರ ಯೆಹೋವನ ಜನರನ್ನು ದೂಷಿಸಿ ಅವರ ಮೇಲೆ ಉಬ್ಬಿಕೊಂಡು ಬಂದದರಿಂದ ಅವರ ಹೆಮ್ಮೆಯ ನಿಮಿತ್ತವೇ ಅವರಿಗೆ ಈ ಗತಿ”ಯಾಯಿತು.—ಚೆಫನ್ಯ 2:9, 10.
ಅಮ್ಮೋನಿಗೆ ಏನು ಸಂಭವಿಸಿತೊ ಅದನ್ನು ಇಂದಿನ ಲೋಕದ ಮುಖಂಡರು ಗಮನಕ್ಕೆ ತೆಗೆದುಕೊಳ್ಳಬೇಕು. ತನ್ನ ಪಾದಪೀಠವಾದ ಭೂಮಿಯ ಮೇಲೆ ಜೀವಿಸಲು ಅವರನ್ನು ಅನುಮತಿಸುವ ಮೂಲಕ ದೇವರು ತದ್ರೀತಿಯಲ್ಲಿ ಜನಾಂಗಗಳಿಗೆ ಸ್ವಲ್ಪ ಮಟ್ಟಿಗಿನ ದಯೆಯನ್ನು ತೋರಿಸಿದ್ದಾನೆ. ಆದರೆ ಭೂಮಿಯನ್ನು ಪರಾಮರಿಸುವ ಬದಲಿಗೆ, ಸ್ವಾರ್ಥಪರ ಜನಾಂಗಗಳು ಅವುಗಳನ್ನು ಹಾಳುಗೆಡವುತ್ತಾ, ಭೂಗ್ರಹವನ್ನು ನ್ಯೂಕ್ಲಿಯರ್ ನಾಶನದೊಂದಿಗೂ ಬೆದರಿಸಿದ್ದಾರೆ. ಭೂಮಿಯ ಮೇಲಿರುವ ಯೆಹೋವನ ಆರಾಧಕರಿಗೆ ದಯೆಯನ್ನು ತೋರಿಸುವ ಬದಲಿಗೆ, ಅನೇಕ ವೇಳೆ ಜನಾಂಗಗಳು, ಅವರನ್ನು ಕಠಿನವಾದ ಹಿಂಸೆಗೆ ಗುರಿಪಡಿಸುತ್ತಾ, ದ್ವೇಷಭಾವವನ್ನು ತೋರಿಸುತ್ತವೆ. ಆದುದರಿಂದ ಅಮ್ಮೋನಿಯರ ಕುರಿತಾದ ಪಾಠವೇನೆಂದರೆ, ತನ್ನ ದಯೆಗೆ ದ್ವೇಷಭಾವವನ್ನು ಹಿಂದಿರುಗಿಸುವುದನ್ನು ಯೆಹೋವನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಮತ್ತು ತನ್ನ ತಕ್ಕ ಸಮಯದಲ್ಲಿ, ಆತನು ಪುರಾತನ ಸಮಯಗಳಲ್ಲಿ ಮಾಡಿದಂತೆಯೇ ಕಾರ್ಯವೆಸಗುವನು.—ಹೋಲಿಸಿ ಕೀರ್ತನೆ 2:6-12.
[ಪುಟ 8 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 9 ರಲ್ಲಿರುವ ಚಿತ್ರ]
ಅಮ್ಮೋನಿಯರ ರಾಜಧಾನಿಯಾಗಿದ್ದ ರಬ್ಬಾದ ನಿವೇಶನವಾಗಿರುವ, ಅಮ್ಮಾನ್ನಲ್ಲಿ ರೋಮನ್ ಅವಶೇಷಗಳು
[ಕೃಪೆ]
Pictorial Archive (Near Eastern History) Est.
[ಪುಟ 10 ರಲ್ಲಿರುವ ಚಿತ್ರ]
ಅಮ್ಮೋನಿಯರು ಈ ಕ್ಷೇತ್ರದಲ್ಲಿ ಜೀವಿಸಿದರು
[ಕೃಪೆ]
Pictorial Archive (Near Eastern History) Est.