ಯೂನೀಕೆ ಮತ್ತು ಲೋವಿ—ಆದರ್ಶಪ್ರಾಯ ಶಿಕ್ಷಕಿಯರು
ಯೆಹೋವನ ಸೇವಕರೋಪಾದಿ, ನಮ್ಮ ಮಕ್ಕಳಿಗೆ ಒಂದು ಪರಿಣಾಮಕಾರಿ ಧಾರ್ಮಿಕ ಶಿಕ್ಷಣವನ್ನು ಒದಗಿಸುವುದು ಗಂಭೀರವಾದೊಂದು ಜವಾಬ್ದಾರಿಯಾಗಿದೆ ಎಂಬುದು ನಮಗೆ ಗೊತ್ತು. ಅತ್ಯಂತ ಅನುಕೂಲಕರ ಪರಿಸರದಲ್ಲಿಯೂ, ಈ ಕೆಲಸವು ಎಲ್ಲ ರೀತಿಯ ಅಡೆತಡೆಗಳು ಮತ್ತು ಕಷ್ಟಗಳಿಂದ ಕೂಡಿರಬಹುದು. ಧಾರ್ಮಿಕವಾಗಿ ವಿಭಜನೆಗೊಂಡ ಮನೆವಾರ್ತೆಯಲ್ಲಿ ಕ್ರೈಸ್ತ ಹೆತ್ತವರೊಬ್ಬರು ಆ ಪಂಥಾಹ್ವಾನವನ್ನು ಎದುರಿಸುತ್ತಿರುವಾಗ, ಇದು ಇನ್ನೂ ಕಷ್ಟಕರವಾಗಿದೆ. ಅಂತಹ ಒಂದು ಸನ್ನಿವೇಶವು ಹೊಸದೇನೂ ಅಲ್ಲ. ಸಾ.ಶ. ಒಂದನೆಯ ಶತಮಾನದಲ್ಲಿ ತನ್ನನ್ನು ತದ್ರೀತಿಯ ಸನ್ನಿವೇಶದಲ್ಲಿ ಕಂಡುಕೊಂಡ ಒಬ್ಬ ಹೆತ್ತವಳ ಕುರಿತು ಶಾಸ್ತ್ರಗಳು ನಮಗೆ ತಿಳಿಸುತ್ತವೆ.
ಯೂನೀಕೆ ಎಂಬ ಸ್ತ್ರೀಯ ಕುಟುಂಬವು ಲುಸ್ತ್ರದಲ್ಲಿ ವಾಸಿಸಿತು. ಈ ನಗರವು ದಕ್ಷಿಣ-ಮಧ್ಯ ಏಷಿಯ ಮೈನರ್ನ ಲೈಕೋನಿಯ ಪ್ರಾಂತದಲ್ಲಿತ್ತು. ಲುಸ್ತ್ರ ಯಾವ ಪ್ರಸಿದ್ಧಿಯೂ ಇಲ್ಲದ ಒಂದು ಚಿಕ್ಕ ಪ್ರಾಂತೀಯ ನಗರವಾಗಿತ್ತು. ಇದು, ಸುತ್ತಮುತ್ತಲಿನ ಕ್ಷೇತ್ರಗಳಲ್ಲಿನ ಡಕಾಯಿತರ ಚಟುವಟಿಕೆಗಳನ್ನು ಪ್ರತಿರೋಧಿಸಲು ಅಗಸ್ಟಸ್ ಸೀಸರ್ನಿಂದ ಸ್ಥಾಪಿಸಲ್ಪಟ್ಟ, ಯೂಲ್ಯಾ ಫೇಲಿಕ್ಸ್ ಜೆಮಿನಾ ಲುಸ್ಟ್ರಾ ಎಂದು ಕರೆಯಲ್ಪಟ್ಟ ರೋಮನ್ ವಸಾಹತಾಗಿತ್ತು. ಯೂನೀಕೆಯು ಒಬ್ಬ ಯೆಹೂದಿ ಕ್ರೈಸ್ತಳಾಗಿದ್ದು, ಧಾರ್ಮಿಕವಾಗಿ ವಿಭಜನೆಗೊಂಡ ಮನೆವಾರ್ತೆಯಲ್ಲಿ ತನ್ನ ಗ್ರೀಕ್ ಗಂಡ, ಮಗ ತಿಮೊಥೆಯ, ಮತ್ತು ತಾಯಿ ಲೋವಿಯೊಂದಿಗೆ ವಾಸಿಸಿದಳು.—ಅ. ಕೃತ್ಯಗಳು 16:1-3.
ಲುಸ್ತ್ರದಲ್ಲಿ ಕೆಲವೇ ಯೆಹೂದ್ಯರಿದ್ದಿರಬಹುದು, ಏಕೆಂದರೆ ಅಲ್ಲಿ ಒಂದು ಸಭಾಮಂದಿರ ಇತ್ತೆಂದು ಬೈಬಲು ಹೇಳುವುದೇ ಇಲ್ಲ. ಆದರೆ ಸುಮಾರು 30 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಇಕೋನ್ಯದಲ್ಲಿ ಯೆಹೂದಿ ಜನಸಂಖ್ಯೆಯಿತ್ತು. (ಅ. ಕೃತ್ಯಗಳು 14:19) ಆದುದರಿಂದ ತನ್ನ ನಂಬಿಕೆಯನ್ನು ಪಾಲಿಸುವುದು ಯೂನೀಕೆಗೆ ಸುಲಭವಾಗಿದ್ದಿರಲಿಕ್ಕಿಲ್ಲ. ಜನಿಸಿದ ತರುವಾಯ ತಿಮೊಥೆಯನ ಸುನ್ನತಿಯಾಗಿರಲಿಲ್ಲವೆಂಬ ವಾಸ್ತವಾಂಶವು, ಯೂನೀಕೆಯ ಗಂಡನು ಆ ವಿಚಾರವನ್ನು ವಿರೋಧಿಸಿದ್ದನೆಂದು ಕೆಲವು ವಿದ್ವಾಂಸರು ಊಹಿಸುವಂತೆ ಮಾಡಿದೆ.
ಆದರೆ ಯೂನೀಕೆ ತನ್ನ ನಂಬಿಕೆಯಲ್ಲಿ ಒಬ್ಬೊಂಟಿಗಳಾಗಿರಲಿಲ್ಲ. ತನ್ನ ತಾಯಿ ಹಾಗೂ ತನ್ನ ತಾಯಿಯ ತಾಯಿಯಾದ ಲೋವಿಯಿಂದ—ಇಬ್ಬರಿಂದಲೂ—ತಿಮೊಥೆಯನು “ಪರಿಶುದ್ಧಗ್ರಂಥಗಳ”ಲ್ಲಿನ ಉಪದೇಶವನ್ನು ಪಡೆದನೆಂದು ತೋರುತ್ತದೆ.a ಅಪೊಸ್ತಲ ಪೌಲನು ತಿಮೊಥೆಯನಿಗೆ ಬುದ್ಧಿಹೇಳಿದ್ದು: “ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬದನ್ನು ಆಲೋಚಿಸು. ಚಿಕ್ಕಂದಿನಿಂದಲೂ [“ಶೈಶವಾವಸ್ಥೆಯಿಂದಲೂ,” NW] ನಿನಗೆ ಪರಿಶುದ್ಧಗ್ರಂಥಗಳ ಪರಿಚಯವಾಯಿತಲ್ಲಾ. ಆ ಗ್ರಂಥಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.”—2 ತಿಮೊಥೆಯ 3:14, 15.
“ಶೈಶವಾವಸ್ಥೆಯಿಂದ” ಶಿಕ್ಷಣ
ತಿಮೊಥೆಯನ “ಪರಿಶುದ್ಧಗ್ರಂಥಗಳ”ಲ್ಲಿನ ಶಿಕ್ಷಣವು “ಶೈಶವಾವಸ್ಥೆಯಿಂದ” ನೀಡಲ್ಪಟ್ಟಿತ್ತೆಂದು ಪೌಲನು ಹೇಳಿದಾಗ, ಇದು ಬಾಲ್ಯದಿಂದ ಎಂಬುದನ್ನು ಅರ್ಥೈಸಿತೆಂಬುದು ಸುಸ್ಪಷ್ಟ. ಇದು ಅವನು ಉಪಯೋಗಿಸಿದ ಗ್ರೀಕ್ ಪದ (ಬ್ರೀಫೋಸ್)ಕ್ಕೆ ಅನುರೂಪವಾಗಿದೆ. ಆ ಪದವು ಸಾಮಾನ್ಯವಾಗಿ ನವಜಾತ ಶಿಶುವಿಗೆ ಸೂಚಿತವಾಗಿದೆ. (ಹೋಲಿಸಿ ಲೂಕ 2:12, 16.) ಯೂನೀಕೆ ತನ್ನ ದೇವದತ್ತ ಕರ್ತವ್ಯವನ್ನು ಗಂಭೀರವಾಗಿ ತೆಗೆದುಕೊಂಡು, ತಿಮೊಥೆಯನು ದೇವರ ನಿಷ್ಠಾವಂತ ಸೇವಕನಾಗಿ ಬೆಳೆಯುವಂತೆ ಅವನಿಗೆ ಸಹಾಯಮಾಡುವ ತರಬೇತಿಯನ್ನು ಬೇಗನೆ ಕೊಡಲಾರಂಭಿಸಿದಳು.—ಧರ್ಮೋಪದೇಶಕಾಂಡ 6:6-9; ಜ್ಞಾನೋಕ್ತಿ 1:8.
ತಿಮೊಥೆಯನು ಶಾಸ್ತ್ರೀಯ ಸತ್ಯಗಳನ್ನು “ನಂಬುವಂತೆ ಮನವೊಪ್ಪಿಸಲ್ಪಟ್ಟಿ”ದ್ದನು (NW). ಒಂದು ಗ್ರೀಕ್ ಶಬ್ದಕೋಶಕ್ಕನುಸಾರ, ಪೌಲನು ಇಲ್ಲಿ ಉಪಯೋಗಿಸಿದ ಪದದ ಅರ್ಥವು, ಯಾವುದೊ ವಿಷಯದ ಕುರಿತು “ದೃಢವಾಗಿ ಮನವೊಪ್ಪಿಸಲ್ಪಟ್ಟಿರುವುದು, ಆಶ್ವಾಸನೆಯುಳ್ಳವರಾಗಿರುವುದು” ಎಂದಾಗಿದೆ. ತಿಮೊಥೆಯನು ದೇವರ ವಾಕ್ಯದ ಕುರಿತು ತರ್ಕಿಸುವಂತೆ ಮತ್ತು ಅದರಲ್ಲಿ ನಂಬಿಕೆಯನ್ನಿಡುವಂತೆ ಸಹಾಯ ಮಾಡುತ್ತಾ, ಅವನ ಹೃದಯದಲ್ಲಿ ಇಂತಹ ದೃಢವಾದ ಮನವರಿಕೆಯನ್ನು ಮೂಡಿಸಲು ಗಣನೀಯ ಸಮಯ ಮತ್ತು ಪ್ರಯತ್ನವು ಬೇಕಾಗಿತ್ತೆಂಬುದರಲ್ಲಿ ಸಂಶಯವಿಲ್ಲ. ಹಾಗಾದರೆ ಶಾಸ್ತ್ರಗಳಿಂದ ತಿಮೊಥೆಯನಿಗೆ ಕಲಿಸಲು, ಯೂನೀಕೆ ಮತ್ತು ಲೋವಿ—ಇಬ್ಬರೂ—ಕಷ್ಟಪಟ್ಟು ಶ್ರಮಿಸಿದರೆಂಬುದು ಸುವ್ಯಕ್ತ. ಮತ್ತು ಆ ದೈವಭಕ್ತಿಯುಳ್ಳ ಸ್ತ್ರೀಯರು ಎಂತಹ ಪ್ರತಿಫಲವನ್ನು ಪಡೆದರು! ಪೌಲನು ತಿಮೊಥೆಯನ ಕುರಿತು ಹೀಗೆ ಬರೆಯಬಹುದಿತ್ತು: “ನಿನ್ನಲ್ಲಿರುವ ನಿಷ್ಕಪಟವಾದ ನಂಬಿಕೆಯು ನನ್ನ ನೆನಪಿಗೆ ಬಂತು. ಆ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಲ್ಲಿಯೂ ನಿನ್ನ ತಾಯಿಯಾದ ಯೂನೀಕೆಯಲ್ಲಿಯೂ ವಾಸವಾಗಿತ್ತು; ಹಾಗೆಯೇ ನಿನ್ನಲ್ಲಿಯೂ ವಾಸವಾಗಿದೆ ಎಂದು ದೃಢವಾಗಿ ನಂಬಿದ್ದೇನೆ.”—2 ತಿಮೊಥೆಯ 1:5.
ತಿಮೊಥೆಯನ ಜೀವಿತದಲ್ಲಿ ಯೂನೀಕೆ ಮತ್ತು ಲೋವಿ ಎಂತಹ ಒಂದು ಪ್ರಮುಖ ಪಾತ್ರವನ್ನು ವಹಿಸಿದರು! ಈ ಸಂಬಂಧದಲ್ಲಿ, ಬರಹಗಾರನಾದ ಡೇವಿಡ್ ರೀಡ್ ಹೇಳುವುದು: “ತಿಮೊಥೆಯನ ಮತಾಂತರದ ಕುರಿತಾದ ಅವನ ಸ್ವಂತ ವೈಯಕ್ತಿಕ ಅನುಭವವನ್ನು ಬಿಟ್ಟು ಬೇರೆ ಯಾವ ವಿಷಯವೂ ಗಣ್ಯವಾದದ್ದಲ್ಲವೆಂದು ಅಪೊಸ್ತಲನು ನಂಬಿದ್ದರೆ, ಅವನು ಅದರ ಕುರಿತು ನೇರವಾಗಿ ತಿಮೊಥೆಯನಿಗೆ ಜ್ಞಾಪಕಹುಟ್ಟಿಸುತ್ತಿದ್ದನು. ಆದರೆ ತಿಮೊಥೆಯನ ನಂಬಿಕೆಯ ಕುರಿತು ಅವನು ಹೇಳಬೇಕಾದ ಪ್ರಥಮ ವಿಷಯವು ಯಾವುದೆಂದರೆ, ಅದು ಈಗಾಗಲೇ ‘ಲೋವಿ . . . ಮತ್ತು ಯೂನೀಕೆಯಲ್ಲಿ ಜೀವಂತ’ವಾಗಿತ್ತು.” ಲೋವಿ, ಯೂನೀಕೆ ಮತ್ತು ತಿಮೊಥೆಯರ ನಂಬಿಕೆಯ ಕುರಿತಾದ ಪೌಲನ ಹೇಳಿಕೆಯು, ಮನೆಯಲ್ಲಿ ಹೆತ್ತವರು ಮತ್ತು ಅಜ್ಜಅಜ್ಜಿಯರಿಂದಲೂ ಕೊಡಲ್ಪಡುವ ಮುಂಚಿತವಾದ ಶಾಸ್ತ್ರೀಯ ಶಿಕ್ಷಣವು, ಒಬ್ಬ ಯುವ ವ್ಯಕ್ತಿಯ ಭಾವೀ ಆತ್ಮಿಕ ಪ್ರತೀಕ್ಷೆಗಳನ್ನು ನಿರ್ಧರಿಸುವುದರಲ್ಲಿ ಅತ್ಯಾವಶ್ಯಕವಾಗಿದೆ ಎಂಬುದನ್ನು ತೋರಿಸುತ್ತದೆ. ದೇವರ ಮತ್ತು ತಮ್ಮ ಮಕ್ಕಳ ಕಡೆಗೆ ಈ ಜವಾಬ್ದಾರಿಯನ್ನು ನೆರವೇರಿಸಲು ತಾವು ಏನು ಮಾಡುತ್ತಿದ್ದೇವೆಂಬುದರ ಕುರಿತು ಕುಟುಂಬದ ಸದಸ್ಯರು ಗಂಭೀರವಾಗಿ ಯೋಚಿಸುವಂತೆ ಅದು ಮಾಡಬಾರದೊ?
ಲೋವಿ ಮತ್ತು ಯೂನೀಕೆಯರು ಸೃಷ್ಟಿಸಿದ್ದ ಮನೆಯ ಪರಿಸರದ ಕುರಿತಾಗಿಯೂ ಪೌಲನು ಯೋಚಿಸಿದ್ದಿರಬಹುದು. ಸಾ.ಶ. 47/48ರ ಸುಮಾರಿಗೆ ಲುಸ್ತ್ರದಲ್ಲಿ ಪ್ರಥಮ ಬಾರಿ ತಂಗಿದ್ದಾಗ, ಅಪೊಸ್ತಲನು ಅವರ ಮನೆಯನ್ನು ಸಂದರ್ಶಿಸಿದ್ದಿರಬಹುದು. ಆ ಇಬ್ಬರು ಸ್ತ್ರೀಯರು ಬಹುಶಃ ಆ ಸಮಯದಲ್ಲಿ ಕ್ರೈಸ್ತತ್ವಕ್ಕೆ ಮತಾಂತರಗೊಂಡರು. (ಅ. ಕೃತ್ಯಗಳು 14:8-20) ಲೋವಿಯನ್ನು ತಿಮೊಥೆಯನ “ಅಜ್ಜಿ” ಎಂಬುದಾಗಿ ಸೂಚಿಸಿ ಮಾತಾಡುವಾಗ, ಆ ಮನೆವಾರ್ತೆಯಲ್ಲಿ ಅನುಭವಿಸಲ್ಪಟ್ಟ ಆದರದ, ಸಂತೋಷದ ಸಂಬಂಧಗಳು, ಬಹುಶಃ ಪೌಲನು ಉಪಯೋಗಿಸಿದ ಪದಗಳ ಆಯ್ಕೆಯನ್ನು ಪ್ರಭಾವಿಸಿದವು. ಸೆಸ್ಲಾ ಸ್ಪೀಕ್ ಎಂಬ ವಿದ್ವಾಂಸನಿಗನುಸಾರ, ಪೌಲನು ಬಳಸಿದ ಗ್ರೀಕ್ ಪದವು (ಸಾಹಿತ್ಯಾತ್ಮಕ ಮತ್ತು ಗೌರವಪೂರ್ಣ ಟೆಥೆಗೆ ವೈದೃಶ್ಯವಾಗಿ ಮ್ಯಾಮೆ), ತನ್ನ ಅಜ್ಜಿಗಾಗಿ “ಒಂದು ಮಗುವಿನ ಮುದ್ದಿನ ಮಾತಾಗಿದೆ.” ಈ ಸಂದರ್ಭದಲ್ಲಿ ಅದು “ಸಲಿಗೆ ಹಾಗೂ ಮಮತೆಯ ಭಾವನೆಯಲ್ಲಿ ಸೂಕ್ಷ್ಮ ವ್ಯತ್ಯಾಸವನ್ನು” ತಿಳಿಯಪಡಿಸುತ್ತದೆ.
ತಿಮೊಥೆಯನ ನಿರ್ಗಮನ
ಪೌಲನು ಲುಸ್ತ್ರವನ್ನು ಎರಡನೆಯ ಬಾರಿ (ಸಾ.ಶ. 50ರ ಸುಮಾರಿಗೆ) ಸಂದರ್ಶಿಸಿದಾಗ, ಯೂನೀಕೆಯ ವೈವಾಹಿಕ ಸ್ಥಾನಮಾನವು ಏನಾಗಿತ್ತೆಂಬುದು ಸ್ಪಷ್ಟವಾಗಿಲ್ಲ. ಅವಳು ವಿಧವೆಯಾಗಿದ್ದಳೆಂದು ಅನೇಕ ವಿದ್ವಾಂಸರು ಊಹಿಸುತ್ತಾರೆ. ವಿಷಯವು ಏನೇ ಆಗಿರಲಿ, ತನ್ನ ತಾಯಿ ಮತ್ತು ಅಜ್ಜಿಯ ಮಾರ್ಗದರ್ಶನದ ಕೆಳಗೆ, ತಿಮೊಥೆಯನು ಒಬ್ಬ ಉತ್ತಮ ಯುವ ಪುರುಷನಾಗಿ—ಆ ಸಮಯದಷ್ಟಕ್ಕೆ ಸುಮಾರು 20 ವರ್ಷ ಪ್ರಾಯದವನಾಗಿದ್ದಿರಬಹುದು—ಬೆಳೆದಿದ್ದನು. ಅವನ ಕುರಿತು “ಲುಸ್ತ್ರದಲ್ಲಿಯೂ ಇಕೋನ್ಯದಲ್ಲಿಯೂ ಇದ್ದ ಸಹೋದರರು ಒಳ್ಳೇ ಸಾಕ್ಷಿಹೇಳುತ್ತಿದ್ದರು.” (ಅ. ಕೃತ್ಯಗಳು 16:2) ರಾಜ್ಯದ ಸುವಾರ್ತೆಯನ್ನು ಹಬ್ಬಿಸುವ ಬಯಕೆಯು ತಿಮೊಥೆಯನ ಹೃದಯದಲ್ಲಿ ಸ್ಪಷ್ಟವಾಗಿ ಬೇರೂರಿಸಲ್ಪಟ್ಟಿತ್ತು. ಏಕೆಂದರೆ, ಪೌಲ ಮತ್ತು ಸೀಲರ ಮಿಷನೆರಿ ಸಂಚಾರದಲ್ಲಿ ಜೊತೆಗೂಡಲಿಕ್ಕಾಗಿ ಪೌಲನು ಅವನನ್ನು ಕರೆದಾಗ, ಅವನು ಆ ಆಮಂತ್ರಣವನ್ನು ಸ್ವೀಕರಿಸಿದನು.
ತಿಮೊಥೆಯನು ಮನೆಬಿಟ್ಟು ಹೋಗಲಿದ್ದಾಗ, ಯೂನೀಕೆ ಮತ್ತು ಲೋವಿಗೆ ಹೇಗನಿಸಿದ್ದಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಿ! ಪೌಲನು ಪ್ರಥಮ ಬಾರಿ ತಮ್ಮ ನಗರಕ್ಕೆ ಬಂದಿದ್ದಾಗ, ಆ ಅಪೊಸ್ತಲನನ್ನು ಕೊಲ್ಲುವುದಕ್ಕಾಗಿ ಅವನ ಮೇಲೆ ಕಲ್ಲೆಸೆದು, ಅವನು ಸತ್ತನೆಂದು ಭಾವಿಸಿ ಜನರು ಬಿಟ್ಟುಹೋಗಿದ್ದರೆಂದು ಅವರಿಗೆ ಗೊತ್ತಿತ್ತು. (ಅ. ಕೃತ್ಯಗಳು 14:19) ಆದುದರಿಂದ ಯುವ ತಿಮೊಥೆಯನನ್ನು ಹೋಗಗೊಡುವುದು ಅವರಿಗೆ ಸುಲಭವಾಗಿದ್ದಿರಲಿಕ್ಕಿಲ್ಲ. ಹಾಗೆಯೇ, ಅವನು ಎಷ್ಟು ಸಮಯದ ವರೆಗೆ ಮನೆಯಿಂದ ದೂರ ಇರುವನು ಮತ್ತು ಅವನು ಸುರಕ್ಷಿತವಾಗಿ ಹಿಂದಿರುಗುವನೊ ಎಂದೂ ಅವರು ಯೋಚಿಸಿದ್ದಿರಬಹುದು. ಅಂತಹ ಸಂಭವನೀಯ ಆತಂಕಗಳ ಎದುರಿನಲ್ಲೂ, ಯೆಹೋವನನ್ನು ಹೆಚ್ಚು ಪೂರ್ಣವಾಗಿ ಸೇವಿಸುವಂತೆ ಅವನನ್ನು ಶಕ್ತಗೊಳಿಸಲಿದ್ದ ಈ ವಿಶೇಷ ಸುಯೋಗವನ್ನು ಸ್ವೀಕರಿಸುವಂತೆ, ಅವನ ತಾಯಿ ಮತ್ತು ಅಜ್ಜಿಯು ಅವನನ್ನು ಉತ್ತೇಜಿಸಿದರೆಂಬುದರಲ್ಲಿ ಸಂದೇಹವಿಲ್ಲ.
ಅಮೂಲ್ಯವಾದ ಪಾಠಗಳು
ಯೂನೀಕೆ ಮತ್ತು ಲೋವಿಯರ ಜಾಗರೂಕತೆಯ ಪರಿಗಣನೆಯಿಂದ ಹೆಚ್ಚಿನದ್ದನ್ನು ಕಲಿತುಕೊಳ್ಳಸಾಧ್ಯವಿದೆ. ತಿಮೊಥೆಯನಿಗೆ ಆತ್ಮಿಕವಾಗಿ ಸ್ವಸ್ಥಕರವಾದ ಪೋಷಣೆಯನ್ನು ನೀಡುವಂತೆ, ನಂಬಿಕೆಯು ಅವರನ್ನು ಪ್ರಚೋದಿಸಿತು. ಅಜ್ಜಅಜ್ಜಿಯರು ತಮ್ಮ ಮೊಮ್ಮಕ್ಕಳು ಮತ್ತು ಇತರರಿಗಾಗಿ ಇಡುವ ದೈವಭಕ್ತಿಯ ಪ್ರೌಢ, ಸ್ಥಿರವಾದ ಮಾದರಿಯು, ಖಂಡಿತವಾಗಿಯೂ ಇಡೀ ಕ್ರೈಸ್ತ ಸಭೆಗೆ ಪ್ರಯೋಜನಕರವಾಗಿರಬಲ್ಲದು. (ತೀತ 2:3-5) ತದ್ರೀತಿಯಲ್ಲಿ ಯೂನೀಕೆಯ ಮಾದರಿಯು, ಅವಿಶ್ವಾಸಿ ಗಂಡಂದಿರಿರುವ ತಾಯಂದಿರು ತಮ್ಮ ಮಕ್ಕಳಿಗೆ ಆತ್ಮಿಕ ಉಪದೇಶವನ್ನು ಕೊಡುವುದರ ಜವಾಬ್ದಾರಿ ಮತ್ತು ಪ್ರತಿಫಲಗಳ ಕುರಿತು ಜ್ಞಾಪಕ ಹುಟ್ಟಿಸುತ್ತದೆ. ಹೀಗೆ ಮಾಡುವುದು ಕೆಲವೊಮ್ಮೆ—ವಿಶೇಷವಾಗಿ ತಂದೆಯು ತನ್ನ ಪತ್ನಿಯ ಧಾರ್ಮಿಕ ನಂಬಿಕೆಯ ಕಡೆಗೆ ಒಳ್ಳೆಯ ಮನೋಭಾವ ಇಲ್ಲದವನಾಗಿರುವಾಗ—ಬಹಳಷ್ಟು ಧೈರ್ಯವನ್ನು ಅಗತ್ಯಪಡಿಸುತ್ತದೆ. ಕ್ರೈಸ್ತ ಹೆಂಡತಿಯು ತನ್ನ ಗಂಡನ ತಲೆತನವನ್ನು ಗೌರವಿಸಬೇಕಾದ ಕಾರಣ, ಅದು ಜಾಣ್ಮೆಯನ್ನೂ ಕೇಳಿಕೊಳ್ಳುತ್ತದೆ.
ಲೋವಿ ಮತ್ತು ಯೂನೀಕೆಯರ ನಂಬಿಕೆ, ಪ್ರಯತ್ನ ಮತ್ತು ಸ್ವತ್ಯಾಗವು, ತಿಮೊಥೆಯನು ಒಬ್ಬ ಅತ್ಯುತ್ಕೃಷ್ಟ ಮಿಷನೆರಿ ಹಾಗೂ ಮೇಲ್ವಿಚಾರಕನಾಗುವ ಹಂತದ ವರೆಗೆ ಆತ್ಮಿಕ ಪ್ರಗತಿಯನ್ನು ಮಾಡುವುದನ್ನು ನೋಡುವ ಮೂಲಕ ಬಹುಮಾನಿಸಲ್ಪಟ್ಟಿತು. (ಫಿಲಿಪ್ಪಿ 2:19-22) ತದ್ರೀತಿಯಲ್ಲಿ ಇಂದು, ನಮ್ಮ ಮಕ್ಕಳಿಗೆ ಶಾಸ್ತ್ರೀಯ ಸತ್ಯಗಳನ್ನು ಕಲಿಸುವುದು, ಸಮಯ, ತಾಳ್ಮೆ, ಮತ್ತು ದೃಢನಿರ್ಧಾರವನ್ನು ಕೇಳಿಕೊಳ್ಳುತ್ತದೆ. ಆದರೆ ಒಂದು ಒಳ್ಳೆಯ ಫಲಿತಾಂಶವು ಎಲ್ಲ ಪ್ರಯತ್ನವನ್ನು ನಿಜವಾಗಿಯೂ ಸಾರ್ಥಕವಾಗಿ ಮಾಡುತ್ತದೆ. ಧಾರ್ಮಿಕವಾಗಿ ವಿಭಜಿತವಾಗಿರುವ ಮನೆವಾರ್ತೆಯಲ್ಲಿ, ‘ಶೈಶವಾವಸ್ಥೆಯಿಂದ ಪರಿಶುದ್ಧಗ್ರಂಥಗಳ’ ಕುರಿತು ಕಲಿಸಲ್ಪಟ್ಟಿರುವ ಅನೇಕ ಆದರ್ಶಪ್ರಾಯ ಕ್ರೈಸ್ತ ಯುವ ಜನರು, ದಿವ್ಯಭಕ್ತಿಯುಳ್ಳ ತಮ್ಮ ಹೆತ್ತವರಿಗೆ ಮಹಾ ಆನಂದವನ್ನು ತರುತ್ತಾರೆ. ‘ಜ್ಞಾನಿಯನ್ನು ಹೆತ್ತವಳು ಆನಂದಪಡುವಳು’ ಎಂಬುದಾಗಿ ಹೇಳುವ ಜ್ಞಾನೋಕ್ತಿಯು ಎಷ್ಟು ಸತ್ಯವಾಗಿದೆ!—ಜ್ಞಾನೋಕ್ತಿ 23:23-25.
ಅಪೊಸ್ತಲ ಯೋಹಾನನು ತನ್ನ ಆತ್ಮಿಕ ಮಕ್ಕಳ ಕುರಿತಾಗಿ ಹೇಳಿದ್ದು: “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.” (3 ಯೋಹಾನ 4) ನಿಶ್ಚಯವಾಗಿಯೂ, ಇಬ್ಬರು ಆದರ್ಶಪ್ರಾಯ ಶಿಕ್ಷಕಿಯರಾದ ಯೂನೀಕೆ ಹಾಗೂ ಲೋವಿಯರಂತೆ ಪರಿಣಮಿಸಿರುವ ಅನೇಕರು, ಆ ಮಾತುಗಳಲ್ಲಿ ವ್ಯಕ್ತಗೊಳಿಸಲ್ಪಟ್ಟ ಭಾವನೆಯಲ್ಲಿ ಪಾಲಿಗರಾಗಿದ್ದಾರೆ.
[ಪಾದಟಿಪ್ಪಣಿ]
a ಲೋವಿಯು ತಿಮೊಥೆಯನ ತಂದೆಯ ತಾಯಿ ಆಗಿರಲಿಲ್ಲವೆಂಬ ವಿಷಯವು, 2 ತಿಮೊಥೆಯ 1:5ರಲ್ಲಿರುವ “ನಿನ್ನ ತಾಯಿಯ ತಾಯಿ” ಎಂಬ ಸಿರಿಯನ್ ಭಾಷೆಯ ತರ್ಜುಮೆಯಿಂದ ಸೂಚಿಸಲ್ಪಟ್ಟಿದೆ.