ನಮಗೆ ಸದಾ ಸೈನ್ಯಗಳ ಅಗತ್ಯವಿರುವುದೊ?
ಸೈನ್ಯಗಳು, ಮಾನವ ಸಂಪನ್ಮೂಲಗಳ ಬಹ್ವಂಶವನ್ನು ಕಬಳಿಸಿವೆ ಮತ್ತು ಮನುಷ್ಯನ ಹೆಚ್ಚಿನ ಸಂತೋಷವನ್ನು ಹಾಳುಮಾಡಿವೆ. ಹೀಗಿರುವುದರಿಂದ, ‘ಸೈನ್ಯಗಳನ್ನು ಚದರಿಸಲು ಅವಕಾಶ ಕೊಡುವಂತಹ ರೀತಿಯ ಲೋಕ ಭದ್ರತೆಯನ್ನು ಮಾನವಕುಲವು ಎಂದಾದರೂ ಸಾಧಿಸಲು ಸಾಧ್ಯವಾಗುವುದೊ?’ ಎಂದು ಕೆಲವರು ಕುತೂಹಲಪಟ್ಟಿದ್ದಾರೆ. ಸಮೂಹ ಸಂಹಾರದ ಶಸ್ತ್ರಗಳು, ಎಲ್ಲ ಜೀವದ ನಿರ್ಮೂಲವನ್ನು ಸಾಧ್ಯವನ್ನಾಗಿ ಮಾಡಿರುವುದರಿಂದ, ಈ ಪ್ರಶ್ನೆಯು ತುರ್ತಿನ ವಿಷಯವಾಗಿದೆ. ಸೈನ್ಯಗಳಿಲ್ಲದ ಒಂದು ಲೋಕವನ್ನು ನಿರೀಕ್ಷಿಸುವುದು ಎಷ್ಟು ವಾಸ್ತವಿಕವಾಗಿದೆ?
ಒಳ್ಳೆಯ ಅಂತಾರಾಷ್ಟ್ರೀಯ ಸಂಬಂಧಗಳು ಭರವಸೆಯನ್ನು ಉತ್ಪಾದಿಸುವಾಗ, ಅದು ಸ್ವಲ್ಪಮಟ್ಟಿಗೆ ನಿರಸ್ತ್ರೀಕರಣಕ್ಕೆ ನಡಿಸಬಹುದೆಂಬುದನ್ನು ಅಸಂಖ್ಯಾತ ಪೂರ್ವನಿದರ್ಶನಗಳು ರುಜುಪಡಿಸುತ್ತವೆ. ಉದಾಹರಣೆಗಾಗಿ, ಕೆನಡ ಮತ್ತು ಅಮೆರಿಕದ ನಡುವಿನ ಸಾಮಾನ್ಯ ಸ್ನೇಹಭಾವದಿಂದಾಗಿ, 5,000 ಕಿಲೊಮೀಟರುಗಳ ಅಂತರವುಳ್ಳ ಅವರ ಗಡಿಯು, ಒಂದೂವರೆ ಶತಮಾನಕ್ಕಿಂತಲೂ ಹೆಚ್ಚು ಸಮಯದಿಂದ ಸಂರಕ್ಷಿಸಲ್ಪಡದೆ ಇದೆ. ನಾರ್ವೇ ಮತ್ತು ಸ್ವೀಡನ್ ದೇಶಗಳು, ಹಾಗೂ ಇನ್ನೂ ಅನೇಕ ರಾಷ್ಟ್ರಗಳು ತದ್ರೀತಿಯ ಕರಾರನ್ನು ಸಾಧಿಸಿವೆ. ಎಲ್ಲ ರಾಷ್ಟ್ರಗಳ ನಡುವಿನ ಒಂದು ಒಪ್ಪಂದವು, ಸೈನ್ಯಗಳಿಲ್ಲದ ಒಂದು ಜಗತ್ತನ್ನು ಸಾಧಿಸಬಲ್ಲದೊ? Iನೆಯ ಲೋಕ ಯುದ್ಧದ ಭೀಕರತೆಗಳಿಂದಾಗಿ ಆ ವಿಚಾರವು ಹಿಂದೆಂದೂ ಇಲ್ಲದಿದ್ದ ಜನಪ್ರಿಯತೆಯನ್ನು ಗಳಿಸಿತು.
1918ರಲ್ಲಿ ಶಾಂತಿಯು ಏರ್ಪಡಿಸಲ್ಪಟ್ಟಾಗ, ವರ್ಸೈ ಶಾಂತಿ ಕರಾರಿನ ಉದ್ದೇಶಗಳಲ್ಲಿ ಒಂದು, “ಎಲ್ಲ ರಾಷ್ಟ್ರಗಳು ಶಸ್ತ್ರಗಳನ್ನು ಮಿತಗೊಳಿಸಲು ಒಂದು ಸಾಮಾನ್ಯ ಒಪ್ಪಂದವನ್ನು ಸಾಧ್ಯಗೊಳಿಸುವ ಕಾರ್ಯಗತಿಯನ್ನು ಆರಂಭಿಸುವುದು” ಆಗಿತ್ತು. ಮುಂದಿನ ವರ್ಷಗಳಲ್ಲಿ ಶಾಂತಿವಾದವು ಜನಪ್ರಿಯವಾಗಿ ಪರಿಣಮಿಸಿತು. ಯುದ್ಧವು ಒಂದು ರಾಷ್ಟ್ರಕ್ಕೆ ಸಂಭವಿಸಸಾಧ್ಯವಿರುವ ಅತಿ ಕೆಟ್ಟ ವಿಷಯವಾಗಿದೆ ಮತ್ತು ಈ ಕಾರಣದಿಂದ ಸೋಲನ್ನು ಅನುಭವಿಸುವುದಕ್ಕಿಂತಲೂ ಕೆಟ್ಟದ್ದಾಗಿದೆಯೆಂದು ಕೆಲವು ಶಾಂತಿವಾದಿಗಳು ವಾದಿಸಿದರು. ಶಾಂತಿವಾದದ ವಿರೋಧಿಗಳು ಅದನ್ನು ಅಸಮ್ಮತಿಸಿದರು. ಅವರು, ದೊಡ್ಡ ಕ್ಷೇತ್ರಗಳಲ್ಲಿದ್ದ ಯೆಹೂದ್ಯರು ಆಕ್ರಮಣಕಾರರ ಕಡೆಗೆ ಯಾವುದೇ ಶಸ್ತ್ರಸಜ್ಜಿತ ಪ್ರತಿಭಟನೆಯನ್ನು ಮಾಡದಿದ್ದರೂ, ಅವರನ್ನು ನಿರ್ಮೂಲಗೊಳಿಸಲು ಶತಮಾನಗಳಿಂದ ಮಾಡಲ್ಪಟ್ಟ ಕ್ರೂರ ಪ್ರಯತ್ನಗಳಿಗೆ ಕೈತೋರಿಸಿದರು. ಅಮೆರಿಕಕ್ಕೆ ತಮ್ಮನ್ನು ದಾಸರನ್ನಾಗಿ ಕರೆತಂದವರ ವಿರುದ್ಧ ಪ್ರತಿಭಟಿಸಲು ಆಫ್ರಿಕದವರಿಗೆ ಅವಕಾಶವಿರಲಿಲ್ಲವಾದರೂ, ಅವರನ್ನು ಹಲವಾರು ಶತಮಾನಗಳ ವರೆಗೆ ಕ್ರೂರವಾಗಿ ದುರುಪಚರಿಸಲಾಯಿತು.
ಆದರೆ, IIನೆಯ ಲೋಕ ಯುದ್ಧದ ತಲೆದೋರುವಿಕೆಯೊಂದಿಗೆ, ದೇಶಗಳಿಗೆ ಸಂರಕ್ಷಣೆಯ ಅಗತ್ಯವಿದೆಯೆಂದು ಅನೇಕ ಶಾಂತಿವಾದಿಗಳು ತೀರ್ಮಾನಿಸಿದರು. ಆದುದರಿಂದ IIನೆಯ ಲೋಕ ಯುದ್ಧದ ನಂತರ ವಿಶ್ವ ಸಂಸ್ಥೆಯು ಸ್ಥಾಪಿಸಲ್ಪಟ್ಟಾಗ, ನಿರಸ್ತ್ರೀಕರಣದ ಮೇಲಿನ ಒತ್ತು ಕಡಿಮೆಯಾಗಿದ್ದು, ಆಕ್ರಮಣವನ್ನು ತಡೆಗಟ್ಟಲಿಕ್ಕಾಗಿ ಅಂತಾರಾಷ್ಟ್ರೀಯ ಸಹಕಾರದ ಮೇಲೆ ಒತ್ತು ಹೆಚ್ಚಾಗಿತ್ತು. ಈ ರೀತಿಯಲ್ಲಿ ಒದಗಿಸಲ್ಪಡುವ ಭದ್ರತೆಯು, ನಿರಸ್ತ್ರೀಕರಣವನ್ನು ಜಾರಿಗೆ ತರಲು ರಾಷ್ಟ್ರಗಳಿಗೆ ಭರವಸೆಯನ್ನು ಕೊಡುವುದೆಂದು ಸದಸ್ಯ ರಾಷ್ಟ್ರಗಳು ನಿರೀಕ್ಷಿಸಿದವು.
ಇನ್ನೊಂದು ಸಮಸ್ಯೆಯು ಹೆಚ್ಚೆಚ್ಚು ಸ್ಪಷ್ಟವಾಗುತ್ತಾ ಬಂತು. ಒಂದು ರಾಷ್ಟ್ರವು ತನ್ನ ಸುರಕ್ಷೆಗಾಗಿ ಮಾಡುವ ಪ್ರಯತ್ನಗಳು, ಅನೇಕವೇಳೆ ಅದರ ನೆರೆಯ ರಾಷ್ಟ್ರಕ್ಕೆ ಅಸುರಕ್ಷೆಯ ಅನಿಸಿಕೆಯನ್ನು ಉಂಟುಮಾಡುತ್ತಿದ್ದವು. ಈ ವಿಷಮ ವೃತ್ತವು, ಶಸ್ತ್ರಗಳ ಪೈಪೋಟಿಗೆ ನಡಿಸಿತು. ಆದರೆ ತೀರ ಇತ್ತೀಚೆಗೆ, ಪ್ರಮುಖ ರಾಷ್ಟ್ರಗಳ ನಡುವಿನ ಉತ್ತಮಗೊಂಡ ಸಂಬಂಧಗಳು, ನಿರಸ್ತ್ರೀಕರಣದ ನಿರೀಕ್ಷೆಯನ್ನು ಬಲಪಡಿಸಿವೆ. ಆದರೆ ಅಂದಿನಿಂದ ನಡೆದಿರುವ ಕೊಲ್ಲಿ ಯುದ್ಧ ಮತ್ತು ಹಿಂದಿನ ಯುಗೊಸ್ಲಾವಿಯದಲ್ಲಿನ ತೊಂದರೆಗಳು, ಅನೇಕರ ನಿರಸ್ತ್ರೀಕರಣದ ನಿರೀಕ್ಷೆಗಳನ್ನು ನುಚ್ಚುನೂರುಗೊಳಿಸಿವೆ. ಸುಮಾರು ಐದು ವರ್ಷಗಳ ಹಿಂದೆ, ಟೈಮ್ ಪತ್ರಿಕೆಯು ಹೇಳಿಕೆಯನ್ನಿತ್ತದ್ದು: “ಶೀತಲ ಯುದ್ಧವು ಅಂತ್ಯಗೊಂಡಿರುವುದಾದರೂ, ಲೋಕವು ಕಡಿಮೆ ಅಪಾಯಕಾರಿಯಾಗುವ ಬದಲಿಗೆ, ಹೆಚ್ಚು ಅಪಾಯಕಾರಿಯಾದ ಸ್ಥಳವಾಗಿ ಪರಿಣಮಿಸಿದೆ.”
ಒಬ್ಬ ಭೌಗೋಲಿಕ “ಪೊಲೀಸ”ನಿಗಾಗಿ ಬಯಕೆ
ಮಾನವಕುಲಕ್ಕೆ, ಎಲ್ಲರನ್ನೂ ಸಂರಕ್ಷಿಸಲಿಕ್ಕಾಗಿ ಸಾಕಾಗುವಷ್ಟು ಬಲಶಾಲಿಯಾದ ಸೈನ್ಯವುಳ್ಳ ಏಕ ಲೋಕ ಸರಕಾರದ ಅಗತ್ಯವಿದೆಯೆಂದು ಅನೇಕ ಪ್ರೇಕ್ಷಕರು ತೀರ್ಮಾನಿಸುತ್ತಾರೆ. ವಿಶ್ವ ಸಂಸ್ಥೆ ಇಲ್ಲವೆ ಲೋಕದ ಪ್ರಮುಖ ಮಿಲಿಟರಿ ಶಕ್ತಿಗಳು ಇದನ್ನು ಮಾಡಲು ಅಶಕ್ತವಾಗಿರುವ ಕಾರಣದಿಂದ, ಭವಿಷ್ಯತ್ತಿಗಾಗಿ ಯಾವುದೇ ನಿರೀಕ್ಷೆಯಿಲ್ಲವೆಂದು ಕೆಲವರಿಗೆ ಅನಿಸುತ್ತದೆ. ಆದರೆ ನೀವು ಬೈಬಲನ್ನು ದೇವರ ವಾಕ್ಯವಾಗಿ ಸ್ವೀಕರಿಸುತ್ತಿರುವುದಾದರೆ, ಸರ್ವಶಕ್ತನಾದ ದೇವರು ಈ ತುರ್ತು ಅಗತ್ಯವನ್ನು ಪೂರೈಸುವನೊ ಎಂದು ನೀವು ಕುತೂಹಲಪಟ್ಟಿರಬಹುದು.
ಯಾರನ್ನು ಬೈಬಲು “ಪ್ರೀತಿಯನ್ನೂ ಶಾಂತಿಯನ್ನೂ ಕೊಡುವ ದೇವರು” ಎಂದು ಕರೆಯುತ್ತದೊ ಆತನು, ನ್ಯಾಯವನ್ನು ಜಾರಿಗೆ ತರಲು ಮಿಲಿಟರಿ ಶಕ್ತಿಯನ್ನು ಉಪಯೋಗಿಸುವನೊ? ಹಾಗಿರುವಲ್ಲಿ, ಯಾವ ಸೈನ್ಯವನ್ನು ಉಪಯೋಗಿಸುವನು? ಇಂದಿನ ಸೈನ್ಯಗಳಲ್ಲಿ ಹೆಚ್ಚಿನವು, ತಮಗೆ ದೇವರ ಬೆಂಬಲವಿದೆಯೆಂದು ಹೇಳಿಕೊಳ್ಳುತ್ತವೆ, ಆದರೆ ಅವು ನಿಜವಾಗಿಯೂ ದೇವರ ಚಿತ್ತವನ್ನು ನೆರವೇರಿಸುತ್ತಿವೆಯೊ? ಅಥವಾ ದೇವರಿಗೆ, ಹಸ್ತಕ್ಷೇಪಮಾಡಿ, ಶಾಂತಿ ಹಾಗೂ ಭದ್ರತೆಯನ್ನು ಒದಗಿಸುವ ಬೇರೆ ಯಾವುದೇ ಮಾರ್ಗವಿದೆಯೊ?—2 ಕೊರಿಂಥ 13:11.
ಆದಾಮಹವ್ವರನ್ನು ಏದೆನಿನಿಂದ ಹೊರಹಾಕಿ, ಅವರು ಹಿಂದಿರುಗಿ ಬರುವುದನ್ನು ತಡೆಗಟ್ಟಲು ಕೆರೂಬಿಯರನ್ನು ನಿಲ್ಲಿಸುವ ಮೂಲಕ ಸರ್ವಶಕ್ತನಾದ ದೇವರು ಪ್ರಥಮ ದಂಗೆಯೊಂದಿಗೆ ವ್ಯವಹರಿಸಿದನು. ತನ್ನ ಪರಮಾಧಿಕಾರದ ವಿರುದ್ಧ ನಡೆಯುವ ಎಲ್ಲ ದಂಗೆಯನ್ನು ಜಜ್ಜಿಹಾಕುವ ತನ್ನ ಉದ್ದೇಶವನ್ನೂ ಆತನು ಘೋಷಿಸಿದನು. (ಆದಿಕಾಂಡ 3:15) ಇದು, ದೇವರು ಒಂದು ಸೈನ್ಯವನ್ನು ಉಪಯೋಗಿಸುವುದನ್ನು ಒಳಗೂಡಬಹುದೊ?
ದೇವರು ತನ್ನ ನ್ಯಾಯತೀರ್ಪುಗಳನ್ನು ಜಾರಿಗೊಳಿಸಲು ಸೈನ್ಯಗಳನ್ನು ಉಪಯೋಗಿಸಿದಂತಹ ಸಂದರ್ಭಗಳ ಕುರಿತಾಗಿ ಬೈಬಲು ಮಾತಾಡುತ್ತದೆ. ಉದಾಹರಣೆಗಾಗಿ, ಕಾನಾನ್ ದೇಶದಲ್ಲಿನ ರಾಜ್ಯಗಳು, ಪಶುಗಳೊಂದಿಗೆ ಸಂಭೋಗ, ಶಿಶುಬಲಿ, ಮತ್ತು ಹಿಂಸಾನಂದದ ಹೋರಾಟವನ್ನು ನಡಿಸುತ್ತಿದ್ದವು. ದೇವರು ಅವುಗಳಿಗೆ ಸಂಪೂರ್ಣ ನಾಶನವನ್ನು ವಿಧಿಸಿದನು ಮತ್ತು ಆ ದಂಡನೆಯನ್ನು ಬರಮಾಡಲು ಯೆಹೋಶುವನ ಸೈನ್ಯವನ್ನು ಉಪಯೋಗಿಸಿದನು. (ಧರ್ಮೋಪದೇಶಕಾಂಡ 7:1, 2) ತದ್ರೀತಿಯಲ್ಲಿ, ದೇವರು ನ್ಯಾಯತೀರ್ಪಿನ ತನ್ನ ಕೊನೆಯ ದಿನದಲ್ಲಿ ಎಲ್ಲ ದುಷ್ಟತನವನ್ನು ನಾಶಮಾಡುವ ವಿಧದ ಒಂದು ಉದಾಹರಣೆಯೋಪಾದಿ, ರಾಜ ದಾವೀದನ ಸೈನ್ಯವು ಫಿಲಿಷ್ಟಿಯರ ವಿರುದ್ಧ ದೇವರ ನ್ಯಾಯತೀರ್ಪನ್ನು ಜಾರಿಗೊಳಿಸಿತು.
ಆ ಘಟನೆಗಳು ಬೋಧಪ್ರದವಾಗಿದ್ದವು. ಜನರಿಗೆ ಭದ್ರತೆಯನ್ನು ಕೊಡಲಿಕ್ಕಾಗಿ ತಾನು ಒಂದು ಸೈನ್ಯವನ್ನು ಉಪಯೋಗಿಸಬಲ್ಲೆನೆಂಬುದನ್ನು ಯೆಹೋವನು ಪ್ರದರ್ಶಿಸಿದನು. ತನ್ನ ಆಳ್ವಿಕೆಯ ವಿರುದ್ಧ ಸಾರ್ವತ್ರಿಕ ಪ್ರಮಾಣದ ದಂಗೆಯೊಂದಿಗೆ ವ್ಯವಹರಿಸುವ ಒಂದು ಅಸದೃಶವಾದ ಸೈನ್ಯ ಯೆಹೋವನಿಗಿದೆ.
“ಸೇನಾಧೀಶ್ವರನಾದ ಯೆಹೋವನು”
“ಸೇನಾಧೀಶ್ವರನಾದ ಯೆಹೋವನು” ಎಂಬ ಅಭಿವ್ಯಕ್ತಿಯನ್ನು ಬೈಬಲು 250ಕ್ಕಿಂತಲೂ ಹೆಚ್ಚು ಸಲ ಉಪಯೋಗಿಸುತ್ತದೆ. ಆ ಅಭಿವ್ಯಕ್ತಿಯು, ದೇವದೂತರ ಬಹು ದೊಡ್ಡ ಸೇನೆಗಳ ದಳಪತಿಯಾಗಿರುವ ದೇವರ ಸ್ಥಾನವನ್ನು ಮೂಲಭೂತವಾಗಿ ಸೂಚಿಸುತ್ತದೆ. ಒಂದು ಸಂದರ್ಭದಲ್ಲಿ ಪ್ರವಾದಿಯಾದ ಮೀಕಾಯೆಹುವು, ಆಹಾಬ ಮತ್ತು ಯೆಹೋಷಾಫಾಟ ಎಂಬ ರಾಜರಿಗೆ ಹೇಳಿದ್ದು: “ಯೆಹೋವನು ತನ್ನ ಸಿಂಹಾಸನದ ಮೇಲೆ ಕೂತುಕೊಂಡದ್ದನ್ನೂ ಪರಲೋಕಸೈನ್ಯಗಳು ಆತನ ಎಡಬಲಗಡೆಗಳಲ್ಲಿ ನಿಂತದ್ದನ್ನೂ ಕಂಡೆನು.” (1 ಅರಸುಗಳು 22:19) ಇಲ್ಲಿ ದೇವದೂತರ ಸೈನ್ಯಗಳನ್ನು ಸೂಚಿಸಲಾಗಿದೆ. ತನ್ನ ಜನರನ್ನು ಸಂರಕ್ಷಿಸಲಿಕ್ಕಾಗಿ ಯೆಹೋವನು ಈ ಸೈನ್ಯಗಳನ್ನು ಉಪಯೋಗಿಸಿದನು. ದೋತಾನ್ ಪಟ್ಟಣಕ್ಕೆ ಮುತ್ತಿಗೆಹಾಕಲ್ಪಟ್ಟಾಗ, ಎಲೀಷನ ಸೇವಕನು ನಿರೀಕ್ಷೆಯನ್ನು ಕಳೆದುಕೊಂಡನು. ಆದರೆ ಅವನಿಗೆ ಪುನರಾಶ್ವಾಸನೆ ಕೊಡಲು, ದೇವರು ಅವನಿಗೆ ಆತ್ಮಜೀವಿಗಳ ಸೇನೆಯ ಅದ್ಭುತಕರ ದರ್ಶನವನ್ನು ಕೊಟ್ಟನು. “ಯೆಹೋವನು ಅವನ [“ಸೇವಕನ,” NW] ಕಣ್ಣುಗಳನ್ನು ತೆರೆದನು. ಆಗ . . . ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥರಥಾಶ್ವಗಳು ಆ ಸೇವಕನಿಗೆ ಕಂಡವು.”—2 ಅರಸುಗಳು 6:15-17.
ದೇವರು ಇಂದು ಸೈನ್ಯಗಳನ್ನು ಬೆಂಬಲಿಸುತ್ತಾನೆಂದು ಇಂಥ ಘಟನೆಗಳು ಅರ್ಥೈಸುತ್ತವೊ? ಕ್ರೈಸ್ತಪ್ರಪಂಚದ ಕೆಲವು ಸೈನ್ಯಗಳು, ದೇವರ ಸೈನ್ಯಗಳಾಗಿರುವುದಾಗಿ ಹೇಳಿಕೊಳ್ಳಬಹುದು. ವೈದಿಕರು ಅವುಗಳನ್ನು ಆಶೀರ್ವದಿಸುವಂತೆ ಅನೇಕ ಸೈನ್ಯಗಳು ಕೇಳಿಕೊಂಡಿವೆ. ಆದರೆ ಕ್ರೈಸ್ತಪ್ರಪಂಚದ ಸೈನ್ಯಗಳು ಅನೇಕವೇಳೆ ಒಂದು ಇನ್ನೊಂದರ ವಿರುದ್ಧ, ಜೊತೆ ವಿಶ್ವಾಸಿಗಳ ವಿರುದ್ಧ ಹೋರಾಡುತ್ತವೆ. ಈ ಶತಮಾನದ ಎರಡು ಲೋಕ ಯುದ್ಧಗಳು, ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದ ಸೈನ್ಯಗಳ ನಡುವೆ ಆರಂಭವಾದವು. ಇದು ದೇವರ ಕೆಲಸವಾಗಿರಲು ಸಾಧ್ಯವಿಲ್ಲ. (1 ಯೋಹಾನ 4:20) ಅಂತಹ ಮಿಲಿಟರಿ ಶಕ್ತಿಗಳು, ತಾವು ಶಾಂತಿಗಾಗಿ ಹೋರಾಡುತ್ತಿದ್ದೇವೆಂದು ಹೇಳಿಕೊಳ್ಳಬಹುದಾದರೂ, ಲೋಕದಲ್ಲಿನ ಶಾಂತಿಯ ಕದಡಿಸುವಿಕೆಯನ್ನು ತಡೆಗಟ್ಟುವ ಪ್ರಯತ್ನದಲ್ಲಿ, ಅಂತಹ ಸೈನ್ಯಗಳನ್ನು ಸಂಘಟಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಉಪದೇಶಿಸಿದ್ದನೊ?
ಯೇಸು ತನ್ನ ಶಿಷ್ಯರೊಂದಿಗೆ ಪ್ರಾರ್ಥನೆಮಾಡುತ್ತಿದ್ದ ತೋಟವೊಂದರಲ್ಲಿ, ಒಂದು ಶಸ್ತ್ರಸಜ್ಜಿತ ಗುಂಪು ಯೇಸುವಿನ ಮೇಲೆ ಆಕ್ರಮಣಮಾಡಿದಾಗ, ಭಾರಿ ಶಾಂತಿಭಂಗವುಂಟಾಯಿತು. ಶಿಷ್ಯರಲ್ಲಿ ಒಬ್ಬನು ಗುಂಪಿನಲ್ಲಿದ್ದ ಒಬ್ಬ ಮನುಷ್ಯನನ್ನು ಕತ್ತಿಯಿಂದ ಹೊಡೆದನು. ಒಂದು ಪ್ರಾಮುಖ್ಯ ತತ್ವವನ್ನು ವಿವರಿಸಲಿಕ್ಕಾಗಿ ಯೇಸು ಆ ಅವಕಾಶವನ್ನು ಉಪಯೋಗಿಸಿಕೊಂಡನು. ಅವನು ಹೇಳಿದ್ದು: “ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು. ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆಂದೂ ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿ ಕೊಡುವದಿಲ್ಲವೆಂದೂ ನೆನಸುತ್ತೀಯಾ?” ಯೇಸುವಿನ ಅಧೀನದಲ್ಲಿ ಒಂದು ದೊಡ್ಡ ಸೈನ್ಯವಿತ್ತು, ಆದರೆ ಅದರಲ್ಲಿ ಪೇತ್ರನು ಒಬ್ಬ ಸೈನಿಕನಾಗಿ ದಾಖಲುಮಾಡಲ್ಪಟ್ಟಿರಲಿಲ್ಲ, ಅಥವಾ ಬೇರೆ ಯಾವುದೇ ಮನುಷ್ಯನು ದಾಖಲುಮಾಡಲ್ಪಟ್ಟಿಲ್ಲ. ಬದಲಿಗೆ, ಪೇತ್ರನು ಮತ್ತು ಯೇಸುವಿನ ಉಳಿದ ಹಿಂಬಾಲಕರು, “ಮನುಷ್ಯರನ್ನು ಹಿಡಿಯುವ ಬೆಸ್ತ”ರಾಗಿರಲು ಕರೆಯಲ್ಪಟ್ಟಿದ್ದರು. (ಮತ್ತಾಯ 4:19; 26:47-53) ಕೆಲವು ತಾಸುಗಳ ಬಳಿಕ, ಯೇಸು ಪಿಲಾತನಿಗೆ ಸನ್ನಿವೇಶವನ್ನು ಸ್ಪಷ್ಟೀಕರಿಸಿದನು. ಅವನಂದದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ; ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾದಾಡುತ್ತಿದ್ದರು; ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ.” (ಯೋಹಾನ 18:36) ಭೂಮಿಯ ಮೇಲೆ ಸ್ಥಾಪಿಸಲ್ಪಟ್ಟಿದ್ದ ದಾವೀದನ ರಾಜ್ಯಕ್ಕೆ ಅಸದೃಶವಾಗಿ, ದೇವರು ಯೇಸುವಿಗೆ ಕೊಟ್ಟಿರುವ ರಾಜ್ಯವು ಸ್ವರ್ಗದಲ್ಲಿದೆ ಮತ್ತು ಅದು ಭೂಮಿಯ ಮೇಲೆ ಶಾಂತಿಯನ್ನು ತರುವದು.
ದೇವರ ಸೈನ್ಯಗಳು ಹೋರಾಟಕ್ಕೆ ಹೋಗುತ್ತವೆ
ದೇವರ ಸೈನ್ಯಗಳು ಬೇಗನೆ ಕ್ರಿಯೆಗೈಯುವವು. ಮುಂದೆ ನಡೆಯಲಿರುವ ಘರ್ಷಣೆಯನ್ನು ವರ್ಣಿಸುತ್ತಾ, ಪ್ರಕಟನೆ ಪುಸ್ತಕವು ಯೇಸುವನ್ನು “ದೇವರ ವಾಕ್ಯ” ಎಂದು ಕರೆಯುತ್ತದೆ. ನಾವು ಓದುವುದು: “ಪರಲೋಕದಲ್ಲಿರುವ ಸೈನ್ಯದವರು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಹತ್ತಿದವರಾಗಿ ಆತನ ಹಿಂದೆ ಬರುತ್ತಿದ್ದರು. ಜನಾಂಗಗಳನ್ನು ಹೊಡೆಯುವದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಬರುತ್ತದೆ.” ಈ ಹೋರಾಟವು, ‘ಭೂರಾಜರ ಮತ್ತು ಅವರ ಸೈನ್ಯಗಳ’ ಅಂತ್ಯದಲ್ಲಿ ಫಲಿಸುವುದೆಂದು ಬೈಬಲ್ ಹೇಳುತ್ತದೆ. ದೇವರಿಗೆ ತಮ್ಮ ನಿಷ್ಠೆಯನ್ನು ಪ್ರದರ್ಶಿಸಲು ತಪ್ಪಿಹೋಗುವ ಇತರರ ಕುರಿತಾಗಿ ಆ ಪ್ರವಾದನೆಯು ಕೂಡಿಸುವುದು: “ಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದವನ ಬಾಯಿಂದ ಬಂದ ಕತ್ತಿಯಿಂದ ಹತರಾದರು.” ಪಿಶಾಚನಾದ ಸೈತಾನನನ್ನು ಸಹ ನಿಷ್ಕ್ರಿಯನನ್ನಾಗಿ ಮಾಡಲಾಗುವುದು. ಇದು ಸೈನ್ಯಗಳಿಲ್ಲದ, ಶಾಂತಿಭರಿತ ಲೋಕಕ್ಕೆ ಅವಕಾಶ ಮಾಡಿಕೊಡುವುದು.—ಪ್ರಕಟನೆ 19:11-21; 20:1-3.
ಯುದ್ಧವಿಲ್ಲದ ಒಂದು ಲೋಕವನ್ನು ಊಹಿಸಿಕೊಳ್ಳಿರಿ
ಸೈನ್ಯಗಳು ಅಗತ್ಯವಿಲ್ಲದಿರುವಷ್ಟು ಸುರಕ್ಷಿತವಾಗಿರುವ ಒಂದು ಲೋಕವನ್ನು ನೀವು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಲ್ಲಿರೊ? ಒಂದು ಬೈಬಲ್ ಕೀರ್ತನೆಯು ಹೇಳುವುದು: “ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ; ಆತನು ಭೂಲೋಕದಲ್ಲಿ ಎಂಥಾ ಪ್ರಳಯವನ್ನು ನಡಿಸಿದ್ದಾನೆ. ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ.”—ಕೀರ್ತನೆ 46:8, 9.
ಅದು ಎಂತಹ ಒಂದು ಉಪಶಮನವಾಗಿರುವುದು! ಸೈನ್ಯಗಳು ಮತ್ತು ಅವುಗಳ ಸಲಕರಣೆಗಳಿಗಾಗಿ ಹಣವನ್ನು ತೆರುವ ಭಾರವಾದ ಹೊರೆಯಿಂದ ಕೊನೆಗೂ ಬಿಡಿಸಲ್ಪಟ್ಟಿರುವ ಮಾನವ ಸಮಾಜಕ್ಕಿರುವ ಸಾಧ್ಯತೆಗಳನ್ನು ಊಹಿಸಿಕೊಳ್ಳಿರಿ! ಜೀವನಕ್ಕೆ ಸಂಬಂಧಿಸಿದ ಪರಿಸ್ಥಿತಿಗಳನ್ನು ಎಲ್ಲರಿಗಾಗಿ ಉತ್ತಮಗೊಳಿಸುವುದರ ಕಡೆಗೆ—ಭೂಮಿಯನ್ನು ಶುಚಿಗೊಳಿಸುವುದಕ್ಕಾಗಿ ಮತ್ತು ಅದನ್ನು ಪುನಃ ವ್ಯವಸಾಯ ಮಾಡಲಿಕ್ಕಾಗಿ—ಜನರು ತಮ್ಮ ಶಕ್ತಿಸಾಮರ್ಥ್ಯಗಳನ್ನು ಉಪಯೋಗಿಸಲು ಶಕ್ತರಾಗಿರುವರು. ಮಾನವಕುಲಕ್ಕೆ ನಿಜವಾಗಿಯೂ ಉಪಯುಕ್ತವಾಗಿರುವಂತಹ ವಿಷಯಗಳನ್ನು ನಿರ್ಮಿಸಲು ಹೊಸ ಅವಕಾಶಗಳಿರುವವು.
ಈ ವಾಗ್ದಾನವು ಲೋಕವ್ಯಾಪಕವಾಗಿ ನೆರವೇರುವುದು: “ನಿನ್ನ ದೇಶದಲ್ಲಿ ಬಲಾತ್ಕಾರದ ಸುದ್ದಿಯೇ ಕಿವಿಗೆ ಬೀಳದು, ನಿನ್ನ ಪ್ರಾಂತಗಳೊಳಗೆ ಭಂಗನಾಶನಗಳ ವಾರ್ತೆಯೇ ಕೇಳಬರುವದಿಲ್ಲ.” (ಯೆಶಾಯ 60:18) ತಮ್ಮ ಮನೆಮಠಗಳನ್ನು ಮತ್ತು ಆಸ್ತಿಪಾಸ್ತಿಯನ್ನು ಬಿಟ್ಟು, ಸಂಕಟದ ಶಿಬಿರಗಳಲ್ಲಿ ಜೀವಿಸಲು ಒತ್ತಾಯಿಸಲ್ಪಟ್ಟಿರುವ ಲಕ್ಷಾಂತರ ಮಂದಿ ಹತಾಶ ನಿರಾಶ್ರಿತರು, ಇನ್ನೆಂದೂ ಯುದ್ಧ ವಲಯಗಳಿಂದ ಪ್ರವಾಹದೋಪಾದಿ ಹೊರಬರಲಿಕ್ಕಿಲ್ಲ. ರಾಷ್ಟ್ರಗಳ ನಡುವಿನ ಸಂಘರ್ಷಣೆಗಳಲ್ಲಿ ಕೊಲ್ಲಲ್ಪಟ್ಟಿರುವ ಅಥವಾ ಅಂಗಹೀನಗೊಳಿಸಲ್ಪಟ್ಟಿರುವ ಪ್ರಿಯರಿಗಾಗಿ ಜನರು ಇನ್ನು ಮುಂದೆ ಗೋಳಾಡುವುದಿಲ್ಲ. ಯೆಹೋವನ ಸ್ವರ್ಗೀಯ ರಾಜನು ಶಾಶ್ವತ ಲೋಕ ಶಾಂತಿಯನ್ನು ಸ್ಥಾಪಿಸುವನು. “ಅವನ ದಿವಸಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವ ವರೆಗೂ ಪರಿಪೂರ್ಣಸೌಭಾಗ್ಯವಿರಲಿ. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು.”—ಕೀರ್ತನೆ 72:7, 14.
ದ್ವೇಷಿಸಲು ಅಲ್ಲ ಬದಲಾಗಿ ದೇವರ ಪ್ರೀತಿಯ ಮಾರ್ಗಗಳನ್ನು ಅನುಕರಿಸಲು ಕಲಿತುಕೊಂಡಿರುವ ಜನರ ನಡುವೆ ಜೀವನವು ಇನ್ನೂ ಹೆಚ್ಚು ಆಹ್ಲಾದಕರವಾಗಿರುವುದು. ದೇವರ ವಾಕ್ಯವು ಮುಂತಿಳಿಸುವುದು: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” ಯೆಹೋವನನ್ನು ತಿಳಿದಿದ್ದು, ಆತನನ್ನು ಪ್ರೀತಿಸುವ ಜನರ ನಡುವೆ ಜೀವಿಸುವುದು ಹೇಗಿರುವುದು? ಅದೇ ಪುಸ್ತಕವು ಪ್ರವಾದಿಸುವುದು: “ಧರ್ಮದಿಂದ ಸಮಾಧಾನವು ಫಲಿಸುವದು, ಶಾಂತಿ ನಿರ್ಭಯಗಳು ಧರ್ಮದ ನಿತ್ಯಪರಿಣಾಮವಾಗಿರುವವು. ನನ್ನ ಜನರು ಸಮಾಧಾನನಿವಾಸದಲ್ಲಿಯೂ ನಿರ್ಭಯನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.”—ಯೆಶಾಯ 11:9; 32:17, 18.
ಯಾರ ನಂಬಿಕೆಯು ಬೈಬಲ್ ಜ್ಞಾನದ ಮೇಲೆ ಕಟ್ಟಲ್ಪಟ್ಟಿದೆಯೋ ಆ ಜನರು, ದೇವರ ಸೈನ್ಯಗಳು ಈ ಭೂಮಿಯಿಂದ ಶಾಂತಿಯ ಎಲ್ಲ ಶತ್ರುಗಳನ್ನೂ ತೆಗೆದುಹಾಕಲು ಸಿದ್ಧವಾಗಿವೆಯೆಂಬುದನ್ನು ವಿವೇಚಿಸುತ್ತಾರೆ. ಈ ಜ್ಞಾನವು, ಬೈಬಲು ಯಾವುದು “ಅಂತ್ಯಕಾಲದಲ್ಲಿ” ಸಂಭವಿಸಬೇಕೆಂದು ತಿಳಿಸುತ್ತದೊ ಅದಕ್ಕನುಸಾರ ಕ್ರಿಯೆಗೈಯುವಂತೆ ಅವರಿಗೆ ಭರವಸೆಯನ್ನು ಕೊಡುತ್ತದೆ. ಅದು: “ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.”—ಯೆಶಾಯ 2:2-4.
ಯೆಹೋವನ ಸಾಕ್ಷಿಗಳಾಗಿ ಪರಿಣಮಿಸಿರುವ ಅನೇಕ ರಾಷ್ಟ್ರಗಳ ಜನರು ಈಗಾಗಲೇ ‘ಯುದ್ಧಾಭ್ಯಾಸ’ದಿಂದ ದೂರಸರಿದಿದ್ದಾರೆ. ಅವರು ತಮ್ಮ ಭರವಸೆಯನ್ನು ದೇವರ ಸ್ವರ್ಗೀಯ ಸೈನ್ಯಗಳ ಸಂರಕ್ಷಣೆಯಲ್ಲಿರಿಸಿದ್ದಾರೆ. ಅವರೊಂದಿಗೆ ಬೈಬಲನ್ನು ಅಭ್ಯಾಸಿಸುವ ಮೂಲಕ, ನೀವೂ ಅದೇ ರೀತಿಯ ಭರವಸೆಯನ್ನು ವಿಕಸಿಸಿಕೊಳ್ಳಬಲ್ಲಿರಿ.
[ಪುಟ 28 ರಲ್ಲಿರುವ ಚಿತ್ರ ಕೃಪೆ]
U.S. National Archives photo