ಮನವೊಪ್ಪಿಸುವ ಕಲೆಯಿಂದ ಹೃದಯಗಳನ್ನು ತಲಪುವುದು
“ಮನವೊಪ್ಪಿಸುವಿಕೆ” ಎಂಬ ಪದವನ್ನು ಅನೇಕ ಜನರು ಸಂದೇಹದಿಂದ ಕಾಣುತ್ತಾರೆ. ಅದು ಒಬ್ಬನ ಮನಸ್ಸಿಗೆ, ಒತ್ತಾಯಪಡಿಸುವ ಮಾರಾಟಗಾರನನ್ನು ಇಲ್ಲವೆ ಗ್ರಾಹಕನನ್ನು ಮೋಸಗೊಳಿಸಲು ಇಲ್ಲವೆ ಕುತಂತ್ರದಿಂದ ಉಪಯೋಗಿಸಿಕೊಳ್ಳಲು ರಚಿಸಲ್ಪಟ್ಟ ಒಂದು ಜಾಹೀರಾತನ್ನು ಸೂಚಿಸಬಹುದು. ಬೈಬಲಿನಲ್ಲಿಯೂ, ಮನವೊಪ್ಪಿಸುವ ವಿಚಾರಕ್ಕೆ ಕೆಲವೊಮ್ಮೆ ನಕಾರಾತ್ಮಕ ಅರ್ಥಗಳಿದ್ದು, ಅದು ನಡತೆಗೆಡಿಸುವ ಇಲ್ಲವೆ ದಾರಿತಪ್ಪಿಸುವ ವಿಷಯವನ್ನು ಸೂಚಿಸುತ್ತದೆ. ಉದಾಹರಣೆಗೆ, ಕ್ರೈಸ್ತ ಅಪೊಸ್ತಲ ಪೌಲನು ಗಲಾತ್ಯದವರಿಗೆ ಬರೆದುದು: “ಚೆನ್ನಾಗಿ ಓಡುತ್ತಾ ಇದ್ದಿರಿ; ನೀವು ಸತ್ಯವನ್ನು ಅನುವರ್ತಿಸದಂತೆ ಯಾರು ನಿಮ್ಮನ್ನು ತಡೆದರು? ಈ ಬೋಧನೆಯು [“ಮನವೊಪ್ಪಿಸುವಿಕೆಯು,” NW] ನಿಮ್ಮನ್ನು ಕರೆದಾತನಿಂದ ಹುಟ್ಟಿದ್ದಲ್ಲ.” (ಗಲಾತ್ಯ 5:7, 8) ಯಾರಾದರೂ ‘ಮನವೊಪ್ಪಿಸುವ ವಾಗ್ವಾದಗಳಿಂದ ತಮ್ಮನ್ನು ಮೋಸಗೊಳಿಸುವಂತೆ’ ಬಿಟ್ಟುಕೊಡುವುದರ ವಿರುದ್ಧ ಪೌಲನು ಸಹ ಕೊಲೊಸ್ಸೆಯವರಿಗೆ ಎಚ್ಚರಿಕೆ ನೀಡಿದನು. (ಕೊಲೊಸ್ಸೆ 2:4) ಅಂತಹ ಮನವೊಪ್ಪಿಸುವಿಕೆ, ಸುಳ್ಳು ಆಧಾರಗಳ ಮೇಲೆ ಹೆಣೆಯಲ್ಪಟ್ಟ ಬುದ್ಧಿವಂತಿಕೆಯ ವಾಗ್ವಾದಗಳ ಮೇಲೆ ಅವಲಂಬಿಸುತ್ತದೆ.
ಹಾಗಿದ್ದರೂ, ತಿಮೊಥೆಯನಿಗೆ ಬರೆದ ತನ್ನ ಎರಡನೆಯ ಪತ್ರದಲ್ಲಿ ಅಪೊಸ್ತಲ ಪೌಲನು, ಮನವೊಪ್ಪಿಸುವ ವಿಚಾರವನ್ನು ಭಿನ್ನವಾದೊಂದು ಅರ್ಥದಲ್ಲಿ ಉಪಯೋಗಿಸಿದನು. ಅವನು ಬರೆದುದು: “ನೀನಾದರೋ ಕಲಿತು ದೃಢವಾಗಿ ನಂಬಿದ [“ನಂಬುವಂತೆ ಮನವೊಪ್ಪಿಸಲ್ಪಟ್ಟ,” NW] ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬದನ್ನು ಆಲೋಚಿಸು.” (2 ತಿಮೊಥೆಯ 3:14) “ನಂಬುವಂತೆ ಮನವೊಪ್ಪಿ”ಸಲ್ಪಟ್ಟಿರುವುದರಲ್ಲಿ, ತಿಮೊಥೆಯನು ಯಾರ ಮುಖಾಂತರ ಶಾಸ್ತ್ರೀಯ ಸತ್ಯಗಳನ್ನು ಕಲಿತುಕೊಂಡನೊ ಆ ತನ್ನ ತಾಯಿ ಮತ್ತು ಅಜ್ಜಿಯ ಯುಕ್ತಿಯಿಂದ ನಿಯಂತ್ರಿಸಲ್ಪಟ್ಟಿರಲಿಲ್ಲ.—2 ತಿಮೊಥೆಯ 1:5.a
ರೋಮ್ನಲ್ಲಿ ಗೃಹಬಂಧನದಲ್ಲಿದ್ದಾಗ, ಪೌಲನು ಅನೇಕರಿಗೆ ಸಂಪೂರ್ಣ ಸಾಕ್ಷಿಯನ್ನು ಕೊಟ್ಟು, “ಬೆಳಗಿನಿಂದ ಸಾಯಂಕಾಲದ ವರೆಗೂ . . . ಮೋಶೆಯ ಧರ್ಮಶಾಸ್ತ್ರವನ್ನೂ ಪ್ರವಾದಿಗಳ ಗ್ರಂಥಗಳನ್ನೂ ಆಧಾರಮಾಡಿಕೊಂಡು ಯೇಸುವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ [“ಮನವೊಪ್ಪಿಸುತ್ತಾ,” NW] ಇದ್ದನು.” (ಅ. ಕೃತ್ಯಗಳು 28:23) ಪೌಲನು ತನ್ನ ಸಭಿಕರನ್ನು ಮೋಸಗೊಳಿಸುತ್ತಿದ್ದನೊ? ಖಂಡಿತವಾಗಿಯೂ ಇಲ್ಲ! ಹಾಗಾದರೆ, ಸ್ಪಷ್ಟವಾಗಿಯೇ, ಮನವೊಪ್ಪಿಸುವಿಕೆಯು ಯಾವಾಗಲೂ ಕೆಟ್ಟ ವಿಷಯವಾಗಿರುವುದಿಲ್ಲ.
ಸಕಾರಾತ್ಮಕ ಅರ್ಥದಲ್ಲಿ ಬಳಸಲ್ಪಟ್ಟಾಗ, “ಮನವೊಪ್ಪಿಸು” ಎಂಬುದಾಗಿ ಭಾಷಾಂತರಿಸಲ್ಪಟ್ಟ ಮೂಲ ಗ್ರೀಕ್ ಪದವು, ಮನಗಾಣಿಸುವುದನ್ನು, ಸದೃಢವಾದ, ತರ್ಕಬದ್ಧ ವಾದದ ಮೂಲಕ ಮನಸ್ಸನ್ನು ಬದಲಾಯಿಸುವುದನ್ನು ಅರ್ಥೈಸುತ್ತದೆ. ಹೀಗೆ ಒಬ್ಬ ಶಿಕ್ಷಕನು, ಇತರರಲ್ಲಿ ಬೈಬಲ್ ಸತ್ಯದ ದೃಢನಂಬಿಕೆಯನ್ನು ಮೂಡಿಸಲು ಮನವೊಪ್ಪಿಸುವಿಕೆಯನ್ನು ಉಪಯೋಗಿಸುತ್ತಾ, ಶಾಸ್ತ್ರೀಯ ಆಧಾರದ ಮೇಲೆ ಕಟ್ಟಬಲ್ಲನು. (2 ತಿಮೊಥೆಯ 2:15) ನಿಶ್ಚಯವಾಗಿಯೂ, ಇದು ಪೌಲನ ಶುಶ್ರೂಷೆಯ ಒಂದು ಚಿಹ್ನೆಯಾಗಿತ್ತು. ಕ್ರೈಸ್ತ ಬೋಧನೆಗಳನ್ನು ಸುಳ್ಳೆಂದು ಪರಿಗಣಿಸಿದ ಅಕ್ಕಸಾಲಿಗ ದೇಮೇತ್ರಿಯನು ಗಮನಿಸಿದ್ದೇನೆಂದರೆ: “ಕೈಯಿಂದ ಮಾಡಿದ ಮೂರ್ತಿಗಳು ದೇವರುಗಳಲ್ಲವೆಂದು ಆ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಸ್ವಲ್ಪ ಕಡಿಮೆ ಆಸ್ಯಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ [“ಮನವೊಪ್ಪಿಸಿ,” NW] ತಿರುಗಿಸಿಬಿಟ್ಟಿದ್ದಾನೆ.”—ಅ. ಕೃತ್ಯಗಳು 19:26.
ಶುಶ್ರೂಷೆಯಲ್ಲಿ ಮನವೊಪ್ಪಿಸುವಿಕೆಯನ್ನು ಉಪಯೋಗಿಸುವುದು
ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಉಪದೇಶ ನೀಡಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾಯ 28:19, 20) 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ, ಯೆಹೋವನ ಸಾಕ್ಷಿಗಳು ಈ ಆಜ್ಞೆಗೆ ವಿಧೇಯರಾಗುತ್ತಿದ್ದಾರೆ. ತಮ್ಮ 1997ನೆಯ ಸೇವಾ ವರ್ಷದ ಪ್ರತಿ ತಿಂಗಳು, ಅವರು ಲೋಕವ್ಯಾಪಕವಾಗಿ ಸರಾಸರಿ 45,52,589 ಮನೆ ಬೈಬಲ್ ಅಧ್ಯಯನಗಳನ್ನು ನಡೆಸಿದರು.
ಒಂದು ಮನೆ ಬೈಬಲ್ ಅಧ್ಯಯನವನ್ನು ನಡೆಸುವ ಸುಯೋಗ ನಿಮಗಿರುವುದಾದರೆ, ಮನವೊಪ್ಪಿಸುವ ಕಲೆಯನ್ನು ಉಪಯೋಗಿಸಲು ಬೇಕಾಗುವ ಪಂಥಾಹ್ವಾನಗಳನ್ನು ನೀವು ಎದುರುನೋಡಲು ಶಕ್ತರಾಗಿರಬಹುದು. ಉದಾಹರಣೆಗೆ, ನಿಮ್ಮ ಮುಂದಿನ ಅಧ್ಯಯನ ಅವಧಿಯಲ್ಲಿ, ತ್ರಯೈಕ್ಯದ ಕುರಿತಾದ ಪ್ರಶ್ನೆಯೊಂದು ಏಳಬಹುದೆಂದು ಭಾವಿಸಿರಿ. ನಿಮ್ಮ ವಿದ್ಯಾರ್ಥಿಯು ಈ ಸಿದ್ಧಾಂತವನ್ನು ನಂಬುತ್ತಾನೆಂದು ನಿಮಗೆ ತಿಳಿಯುವಲ್ಲಿ ಆಗೇನು? ಆ ವಿಷಯದ ಕುರಿತು ಚರ್ಚಿಸುವ ಒಂದು ಪ್ರಕಾಶನವನ್ನು ನೀವು ಅವನಿಗೆ ಕೊಡಸಾಧ್ಯವಿದೆ. ಅವನು ಅದನ್ನು ಓದಿದ ನಂತರ, ದೇವರು ಮತ್ತು ಯೇಸು ಒಂದೇ ವ್ಯಕ್ತಿಯಲ್ಲವೆಂಬುದರ ಕುರಿತು ಅವನು ಮನವೊಪ್ಪಿಸಲ್ಪಟ್ಟಿರುವುದನ್ನು ನೀವು ಕಂಡುಕೊಳ್ಳಬಹುದು. ಆದರೆ ಕೆಲವು ಪ್ರಶ್ನೆಗಳು ಉಳಿಯುವಲ್ಲಿ, ನೀವು ಹೇಗೆ ಮುಂದುವರಿಯಬಲ್ಲಿರಿ?
ಜಾಗರೂಕತೆಯಿಂದ ಆಲಿಸಿರಿ. ಒಂದು ವಿಷಯದ ಕುರಿತು ನಿಮ್ಮ ವಿದ್ಯಾರ್ಥಿಯು ಈಗಾಗಲೇ ನಂಬಿರುವಂತಹ ವಿಚಾರವನ್ನು ಕಂಡುಹಿಡಿಯಲು ಇದು ನಿಮಗೆ ಸಹಾಯ ಮಾಡುವುದು. ಉದಾಹರಣೆಗೆ, ನಿಮ್ಮ ವಿದ್ಯಾರ್ಥಿಯು “ನಾನು ತ್ರಯೈಕ್ಯವನ್ನು ನಂಬುತ್ತೇನೆ” ಎಂದು ಹೇಳುವಲ್ಲಿ, ಈ ಸಿದ್ಧಾಂತವನ್ನು ಸುಳ್ಳೆಂದು ರುಜುಪಡಿಸಲು ನೀವು ಬೇಗನೆ ಒಂದು ಶಾಸ್ತ್ರೀಯ ಚರ್ಚೆಯನ್ನು ಆರಂಭಿಸಸಾಧ್ಯವಿದೆ. ಆದರೆ ತ್ರಯೈಕ್ಯದ ಕುರಿತು ಹಲವಾರು ನಂಬಿಕೆಗಳಿವೆ. ನೀವು ಯಾವುದನ್ನು ತ್ರಯೈಕ್ಯದ ಸಿದ್ಧಾಂತವೆಂದು ನಿರೂಪಿಸುವಿರೊ ಅದರಿಂದ ತೀರ ಭಿನ್ನವಾದ ಯಾವುದೊ ಒಂದು ವಿಷಯವನ್ನು ನಿಮ್ಮ ವಿದ್ಯಾರ್ಥಿಯು ನಂಬಬಹುದು. ಪುನರವತಾರ, ಆತ್ಮದ ಅಮರತ್ವ, ಮತ್ತು ರಕ್ಷಣೆಯಂತಹ ಇತರ ನಂಬಿಕೆಗಳ ವಿಷಯದಲ್ಲಿಯೂ ಇದನ್ನೇ ಹೇಳಬಹುದು. ಆದುದರಿಂದ ಮಾತಾಡುವುದಕ್ಕೆ ಮುಂಚೆ ಜಾಗರೂಕತೆಯಿಂದ ಆಲಿಸಿರಿ. ವಿದ್ಯಾರ್ಥಿಯು ನಂಬುವಂತಹ ವಿಷಯಗಳ ಕುರಿತು ಊಹೆಗಳನ್ನು ಮಾಡಬೇಡಿರಿ.—ಜ್ಞಾನೋಕ್ತಿ 18:13.
ಪ್ರಶ್ನೆಗಳನ್ನು ಕೇಳಿರಿ. ಇವುಗಳಲ್ಲಿ ಕೆಳಗಿನಂತಹ ಪ್ರಶ್ನೆಗಳು ಒಳಗೂಡಿರಬಹುದು: ‘ನೀವು ಯಾವಾಗಲೂ ತ್ರಯೈಕ್ಯದಲ್ಲಿ ನಂಬಿಕೆಯನ್ನಿಟ್ಟಿದ್ದೀರೊ? ಈ ವಿಷಯದ ಕುರಿತು ಬೈಬಲ್ ಏನು ಹೇಳುತ್ತದೆಂಬುದರ ಬಗ್ಗೆ ನೀವು ಎಂದಾದರೂ ಸಮಗ್ರವಾದ ಅಧ್ಯಯನವನ್ನು ಮಾಡಿದ್ದೀರೊ? ದೇವರು ತ್ರಯೈಕ್ಯದ ಭಾಗವಾಗಿರುತ್ತಿದ್ದಲ್ಲಿ, ಆತನ ವಾಕ್ಯವಾದ ಬೈಬಲು ಅದನ್ನು ನಮಗೆ ಸ್ಪಷ್ಟವಾಗಿ ಹಾಗೂ ನೇರವಾಗಿ ಹೇಳುತ್ತಿರಲಿಲ್ಲವೊ?’ ವಿದ್ಯಾರ್ಥಿಗೆ ಕಲಿಸುವ ಸಂದರ್ಭದಲ್ಲಿ, ಈ ಕೆಳಗಿನಂತಹ ಪ್ರಶ್ನೆಗಳನ್ನು ಕೇಳಲು ಆಗಾಗ ಅಧ್ಯಯನವನ್ನು ನಿಲ್ಲಿಸಿರಿ: ‘ಇಷ್ಟರ ವರೆಗೆ ನಾವು ಪರಿಗಣಿಸಿದ ವಿಷಯವು ನಿಮಗೆ ತರ್ಕಸಮ್ಮತವಾದದ್ದಾಗಿ ತೋರುತ್ತದೊ?’ ‘ಈ ವಿವರಣೆಯೊಂದಿಗೆ ನೀವು ಒಪ್ಪುತ್ತೀರೊ?’ ಪ್ರಶ್ನೆಗಳನ್ನು ಕೌಶಲಪೂರ್ಣವಾಗಿ ಉಪಯೋಗಿಸುವ ಮೂಲಕ, ನೀವು ವಿದ್ಯಾರ್ಥಿಯನ್ನು ಕಲಿಯುವ ಪ್ರಕ್ರಿಯೆಯಲ್ಲಿ ಒಳಗೂಡಿಸುತ್ತೀರಿ. ನೀವು ಒಂದು ವಿಷಯವನ್ನು ವಿವರಿಸುತ್ತಿರುವಾಗ, ಅವನು ಕೇವಲ ಆಲಿಸುವವನಾಗಿರಬಾರದು.
ತರ್ಕಬದ್ಧವಾದ ವಿವೇಚನೆಯನ್ನು ಉಪಯೋಗಿಸಿರಿ. ಉದಾಹರಣೆಗೆ, ತ್ರಯೈಕ್ಯ ಸಿದ್ಧಾಂತವನ್ನು ಚರ್ಚಿಸುವಾಗ, ನೀವು ನಿಮ್ಮ ವಿದ್ಯಾರ್ಥಿಗೆ ಹೀಗೆ ಹೇಳಸಾಧ್ಯವಿದೆ: ‘ಯೇಸು ದೀಕ್ಷಾಸ್ನಾನ ಪಡೆದುಕೊಂಡಾಗ, ಸ್ವರ್ಗದಿಂದ ಬಂದ ಧ್ವನಿಯು, “ನೀನು ಪ್ರಿಯನಾಗಿರುವ ನನ್ನ ಮಗನು” ಎಂದು ಹೇಳಿತು. ದೇವರು ನಿಜವಾಗಿಯೂ ಭೂಮಿಯ ಮೇಲಿದ್ದು ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಲ್ಲಿ, ಆತನು ತನ್ನ ಧ್ವನಿಯನ್ನು ಸ್ವರ್ಗಕ್ಕೆ ಮತ್ತು ಪುನಃ ಭೂಮಿಗೆ—ಭೂಮಿಯ ಮೇಲಿರುವ ಜನರು ಆ ಮಾತುಗಳನ್ನು ಕೇಳಿಸಿಕೊಳ್ಳಸಾಧ್ಯವಾಗುವಂತೆ—ಧ್ವನಿಸುವಂತೆ ಮಾಡುತ್ತಿದ್ದನೊ? ಅದು ದಾರಿತಪ್ಪಿಸುವಂತಹ ವಿಷಯವಾಗಿರುವುದಿಲ್ಲವೊ? “ಸುಳ್ಳಾಡದ” ದೇವರು ಅಂತಹ ಒಂದು ಮೋಸಕರ ವಿಷಯವನ್ನು ಮಾಡುವನೊ?’—ಲೂಕ 3:21, 22; ತೀತ 1:1, 2.
ಜಾಣ್ಮೆಯಿಂದ ತಿಳಿಸಲ್ಪಟ್ಟ ತರ್ಕಬದ್ಧವಾದ ವಿವೇಚನೆಯು, ಅನೇಕ ವೇಳೆ ಬಹಳ ಪರಿಣಾಮಕಾರಿಯಾಗಿರುತ್ತದೆ. ಬಾರ್ಬ್ರಳೆಂಬ ಹೆಸರಿನ ಸ್ತ್ರೀಯೊಬ್ಬಳ ಉದಾಹರಣೆಯನ್ನು ಪರಿಗಣಿಸಿರಿ. ತನ್ನ ಜೀವನಪೂರ್ತಿ ಅವಳು, ಯೇಸು ದೇವರೆಂದು ಮತ್ತು ಪವಿತ್ರಾತ್ಮನನ್ನು ಒಳಗೊಂಡಿರುವ ತ್ರಯೈಕ್ಯದ ಭಾಗವೆಂದು ನಂಬಿದ್ದಳು. ಆದರೆ ದೇವರು ಮತ್ತು ಯೇಸು ಇಬ್ಬರು ಬೇರೆ ಬೇರೆ ವ್ಯಕ್ತಿಗಳೆಂದು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು ಅವಳಿಗೆ ಹೇಳಿದನು. ಮತ್ತು ತನ್ನ ಹೇಳಿಕೆಯನ್ನು ಬೆಂಬಲಿಸಲು ಅವಳಿಗೆ ಶಾಸ್ತ್ರವಚನಗಳನ್ನು ತೋರಿಸಿದನು.b ಬಾರ್ಬ್ರಳಿಗೆ ಬೈಬಲನ್ನು ತಪ್ಪೆಂದು ರುಜುಪಡಿಸಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ ಅವಳು ಆಶಾಭಂಗಗೊಂಡಿದ್ದಳು. ಎಷ್ಟೆಂದರೂ, ತ್ರಯೈಕ್ಯ ಸಿದ್ಧಾಂತವು ಅವಳಿಗೆ ಇಷ್ಟಕರವಾಗಿತ್ತು.
ಸಾಕ್ಷಿಯು ತಾಳ್ಮೆಯಿಂದ ಬಾರ್ಬ್ರಳೊಂದಿಗೆ ತರ್ಕಿಸಿದನು. “ಇಬ್ಬರು ವ್ಯಕ್ತಿಗಳು ಸರಿಸಮಾನರಾಗಿದ್ದಾರೆಂದು ನೀನು ನನಗೆ ಕಲಿಸಲು ಪ್ರಯತ್ನಿಸುತ್ತಿರುವಲ್ಲಿ, ಅದನ್ನು ದೃಷ್ಟಾಂತಿಸಲು ಯಾವ ಕುಟುಂಬ ಸಂಬಂಧವನ್ನು ನೀನು ಉಪಯೋಗಿಸುವಿ?” ಎಂದು ಅವನು ಕೇಳಿದನು. ಅವಳು ಒಂದು ಕ್ಷಣ ಯೋಚಿಸಿ, “ನಾನು ಇಬ್ಬರು ಸಹೋದರರನ್ನು ಉಪಯೋಗಿಸಬಲ್ಲೆ” ಎಂದು ಉತ್ತರಿಸಿದಳು. “ಖಂಡಿತವಾಗಿಯೂ ಸರಿ” ಎಂದು ಸಾಕ್ಷಿಯು ಪ್ರತ್ಯುತ್ತರಿಸಿದನು. “ಬಹುಶಃ ತದ್ರೂಪವುಳ್ಳ ಅವಳಿಜವಳಿಗಳು. ಆದರೆ ದೇವರನ್ನು ತಂದೆಯಾಗಿ ಮತ್ತು ತನ್ನನ್ನು ಪುತ್ರನಾಗಿ ವೀಕ್ಷಿಸುವಂತೆ ಕಲಿಸುವುದರಲ್ಲಿ, ಯಾವ ಸಂದೇಶವನ್ನು ಯೇಸು ತಿಳಿಯಪಡಿಸುತ್ತಿದ್ದನು?” “ಹಾಗೋ” ಎಂದು ಕಣ್ಣರಳಿಸುತ್ತಾ ಬಾರ್ಬ್ರ ಉತ್ತರಿಸಿದಳು. “ಅವನು ಒಬ್ಬನನ್ನು ದೊಡ್ಡವನಾಗಿ ಮತ್ತು ಹೆಚ್ಚು ಅಧಿಕಾರವಿರುವವನಾಗಿ ವರ್ಣಿಸುತ್ತಿದ್ದಾನೆ.”
“ಹೌದು, ಪುರುಷ ಪ್ರಧಾನ ಸಮಾಜದಲ್ಲಿ ಜೀವಿಸುತ್ತಿದ್ದ ಯೇಸುವಿನ ಯೆಹೂದಿ ಸಭಿಕರು, ವಿಶೇಷವಾಗಿ ಆ ತೀರ್ಮಾನಕ್ಕೆ ಬಂದಿದ್ದಿರಸಾಧ್ಯವಿದೆ” ಎಂದು ಆ ಸಾಕ್ಷಿಯು ಉತ್ತರಿಸಿದನು. ತನ್ನ ಮುಖ್ಯಾಂಶವನ್ನು ಒತ್ತಿಹೇಳಲಿಕ್ಕಾಗಿ, ಆ ಸಾಕ್ಷಿಯು ಹೀಗೆ ಸಮಾಪ್ತಿಗೊಳಿಸಿದನು: “ಸರಿಸಮಾನತೆಯನ್ನು ಕಲಿಸಲು ನಾವು ಇಂತಹ ಯೋಗ್ಯವಾದ ದೃಷ್ಟಾಂತ—ಸಹೋದರರ ಇಲ್ಲವೆ ತದ್ರೂಪವುಳ್ಳ ಅವಳಿಜವಳಿಗಳ ದೃಷ್ಟಾಂತ—ವನ್ನು ಬಳಸುವಲ್ಲಿ, ಮಹಾ ಬೋಧಕನಾದ ಯೇಸು ಖಂಡಿತವಾಗಿಯೂ ಹಾಗೆ ಮಾಡಿದ್ದಿರಸಾಧ್ಯವಿತ್ತು. ಬದಲಿಗೆ, ತನ್ನ ಮತ್ತು ದೇವರ ನಡುವಣ ಸಂಬಂಧವನ್ನು ವರ್ಣಿಸಲು, ಅವನು ‘ತಂದೆ’ ಮತ್ತು ‘ಪುತ್ರ’ ಎಂಬ ಪದಗಳನ್ನು ಉಪಯೋಗಿಸಿದನು.”
ಬಾರ್ಬ್ರ ವಿಷಯವನ್ನು ಕೊನೆಗೂ ಅರ್ಥಮಾಡಿಕೊಂಡು, ಅದನ್ನು ಸ್ವೀಕರಿಸಿದಳು. ಮನವೊಪ್ಪಿಸುವ ಕಲೆಯಿಂದ ಅವಳ ಹೃದಯವು ತಲಪಲ್ಪಟ್ಟಿತ್ತು.
ಭಾವನೆಗಳನ್ನು ನಿರ್ವಹಿಸುವುದು
ಭದ್ರವಾಗಿ ಬೇರೂರಿರುವ ಧಾರ್ಮಿಕ ನಂಬಿಕೆಗಳು ಅನೇಕ ವೇಳೆ ಒಂದು ಭಾವನಾತ್ಮಕ ಅಂಶವನ್ನು ಒಳಗೊಂಡಿರುತ್ತವೆ. ಒಬ್ಬ ಧರ್ಮನಿಷ್ಠ ಕ್ಯಾತೊಲಿಕಳಾದ ಎಡ್ನಳ ವಿಷಯವನ್ನು ತೆಗೆದುಕೊಳ್ಳಿ. ದೇವರು ಮತ್ತು ಯೇಸು ಒಂದೇ ವ್ಯಕ್ತಿಯಲ್ಲ ಎಂಬ ಸ್ಪಷ್ಟವಾದ ಶಾಸ್ತ್ರೀಯ ಪುರಾವೆಯನ್ನು ಅವಳ ಹದಿವಯಸ್ಕ ಮೊಮ್ಮಕ್ಕಳು ಅವಳಿಗೆ ನೀಡಿದರು. ತಾನು ಕೇಳಿಸಿಕೊಂಡ ವಿಚಾರವನ್ನು ಎಡ್ನ ಅರ್ಥಮಾಡಿಕೊಂಡಳು. ಅವಳು ದಯಾಪರತೆಯಿಂದ ಆದರೆ ದೃಢನಿಶ್ಚಯದಿಂದ ಹೇಳಿದ್ದು: “ನಾನು ಪವಿತ್ರ ತ್ರಯೈಕ್ಯವನ್ನು ನಂಬುತ್ತೇನೆ.”
ನಿಮಗೂ ತದ್ರೀತಿಯ ಅನುಭವ ಆಗಿರಬಹುದು. ಅನೇಕರು ತಮ್ಮ ಧರ್ಮದ ಸಿದ್ಧಾಂತಗಳನ್ನು, ಅವು ತಮ್ಮ ವ್ಯಕ್ತಿತ್ವದ ಭಾಗವಾಗಿವೆಯೋ ಎಂಬಂತೆ ವೀಕ್ಷಿಸುತ್ತಾರೆ. ಅಂತಹ ಬೈಬಲ್ ವಿದ್ಯಾರ್ಥಿಗಳ ಮನವೊಪ್ಪಿಸಲು, ಭಾವಶೂನ್ಯವಾದ ತರ್ಕ ಇಲ್ಲವೆ ಆ ವ್ಯಕ್ತಿಯ ದೃಷ್ಟಿಕೋನವನ್ನು ತಪ್ಪೆಂದು ರುಜುಪಡಿಸಲು ಅನೇಕ ಶಾಸ್ತ್ರವಚನಗಳ ಉಪಯೋಗಕ್ಕಿಂತಲೂ ಹೆಚ್ಚಿನ ವಿಷಯವು ಬೇಕಾಗಿರುತ್ತದೆ. ಮನವೊಪ್ಪಿಸುವ ಕಲೆಯನ್ನು ಸಹಾನುಭೂತಿಯೊಂದಿಗೆ ಸರಿದೂಗಿಸುವ ಮೂಲಕ, ಅಂತಹ ಸನ್ನಿವೇಶಗಳನ್ನು ಉತ್ತಮವಾಗಿ ನಿರ್ವಹಿಸಸಾಧ್ಯವಿದೆ. (ಹೋಲಿಸಿ ರೋಮಾಪುರ 12:15; ಕೊಲೊಸ್ಸೆ 3:12.) ಒಬ್ಬ ಪರಿಣಾಮಕಾರಿಯಾದ ಬೋಧಕನಿಗೆ ಬಲವಾದ ನಿಶ್ಚಿತಾಭಿಪ್ರಾಯಗಳಿರಬೇಕು. ಉದಾಹರಣೆಗೆ, ಪೌಲನು “ನನಗೆ ನಿಶ್ಚಯ ಉಂಟು” ಮತ್ತು “ಕರ್ತನಾದ ಯೇಸುವಿನಲ್ಲಿದ್ದುಕೊಂಡು ದೃಢವಾಗಿ ನಂಬಿದ್ದೇನೆ” ಎಂಬಂತಹ ವಾಕ್ಸರಣಿಗಳನ್ನು ಉಪಯೋಗಿಸಿದನು. (ರೋಮಾಪುರ 8:38; 14:14) ಹಾಗಿದ್ದರೂ, ನಮ್ಮ ನಿಶ್ಚಿತಾಭಿಪ್ರಾಯಗಳನ್ನು ವ್ಯಕ್ತಪಡಿಸುವುದರಲ್ಲಿ, ನಾವು ಅಹಂಕಾರದ, ಸ್ವನೀತಿಯ ಶೈಲಿಯನ್ನು ಬಳಸಬಾರದು, ಇಲ್ಲವೆ ಬೈಬಲ್ ಸತ್ಯಗಳನ್ನು ಪ್ರಸ್ತುತಪಡಿಸುವುದರಲ್ಲಿ ನಾವು ವ್ಯಂಗ್ಯಭಾವದವರು ಇಲ್ಲವೆ ಹೀನೈಸುವವರು ಆಗಿರಬಾರದು. ನಾವು ಖಂಡಿತವಾಗಿಯೂ ವಿದ್ಯಾರ್ಥಿಯ ಮನನೋಯಿಸಲು ಇಲ್ಲವೆ ಅವನನ್ನು ಅಪಮಾನಗೊಳಿಸಲು ಸಹ ಬಯಸುವುದಿಲ್ಲ.—ಜ್ಞಾನೋಕ್ತಿ 12:18.
ವಿದ್ಯಾರ್ಥಿಯ ನಂಬಿಕೆಗಳಿಗೆ ಮಾನ್ಯತೆ ಕೊಟ್ಟು, ಅವುಗಳನ್ನು ಪಡೆದಿರುವ ಹಕ್ಕು ಅವನಿಗಿದೆ ಎಂಬುದನ್ನು ಗ್ರಹಿಸುವುದು ಹೆಚ್ಚು ಪರಿಣಾಮಕಾರಿಯಾದದ್ದಾಗಿದೆ. ದೀನಭಾವವು ಕೀಲಿ ಕೈಯಾಗಿದೆ. ದೀನಭಾವವನ್ನು ಪಡೆದಿರುವ ಒಬ್ಬ ಶಿಕ್ಷಕನು, ಸ್ವಾಭಾವಿಕವಾಗಿಯೇ ತಾನು ತನ್ನ ವಿದ್ಯಾರ್ಥಿಗಿಂತ ಶ್ರೇಷ್ಠನೆಂದು ಭಾವಿಸುವುದಿಲ್ಲ. (ಲೂಕ 18:9-14; ಫಿಲಿಪ್ಪಿ 2:3, 4) ದೈವಿಕ ಮನವೊಪ್ಪಿಸುವಿಕೆಯಲ್ಲಿ ದೀನಭಾವವು ಒಳಗೂಡಿದ್ದು, ಕಾರ್ಯತಃ ಅದು ಹೀಗೆ ಹೇಳುತ್ತದೆ: ‘ಇದನ್ನು ನಾನು ತಿಳಿದುಕೊಳ್ಳುವಂತೆ ಯೆಹೋವನು ನನಗೆ ಕರುಣಾಪೂರ್ಣನಾಗಿ ಸಹಾಯಮಾಡಿದ್ದಾನೆ. ನಾನು ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.’
ಕೊರಿಂಥದಲ್ಲಿದ್ದ ತನ್ನ ಜೊತೆ ಕ್ರೈಸ್ತರಿಗೆ ಪೌಲನು ಬರೆದುದು: “ನಾವು ಉಪಯೋಗಿಸುವ ಆಯುಧಗಳು ಲೋಕಸಂಬಂಧವಾದ ಆಯುಧಗಳಲ್ಲ; ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ. ನಾವು ವಿತರ್ಕಗಳನ್ನೂ ದೇವಜ್ಞಾನವನ್ನು ವಿರೋಧಿಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದ ಎಲ್ಲಾ ಕೊತ್ತಲಗಳನ್ನೂ ಕೆಡವಿಹಾಕಿ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ” ಮಾಡುತ್ತಿದ್ದೇವೆ. (2 ಕೊರಿಂಥ 10:4, 5) ಇಂದು ಯೆಹೋವನ ಸಾಕ್ಷಿಗಳು, ಬಲವಾಗಿ ಬೇರೂರಿರುವ ಸುಳ್ಳು ಸಿದ್ಧಾಂತಗಳನ್ನು ಮಾತ್ರವಲ್ಲ, ದೇವರನ್ನು ಅಪ್ರಸನ್ನಗೊಳಿಸುವಂತಹ ಆಳವಾಗಿ ಬೇರೂರಿರುವ ಆಚರಣೆಗಳು ಮತ್ತು ಗುಣಗಳನ್ನು ಕಿತ್ತುಹಾಕಲು ದೇವರ ವಾಕ್ಯವನ್ನು ಉಪಯೋಗಿಸುತ್ತಿದ್ದಾರೆ. (1 ಕೊರಿಂಥ 6:9-11) ಇದನ್ನು ಮಾಡುವಾಗ, ಯೆಹೋವನು ತಮ್ಮೊಂದಿಗೆ ಪ್ರೀತಿಪೂರ್ಣವಾಗಿ ತಾಳ್ಮೆಯಿಂದ ವರ್ತಿಸಿದ್ದಾನೆಂಬುದನ್ನು ಸಾಕ್ಷಿಗಳು ಜ್ಞಾಪಿಸಿಕೊಳ್ಳುತ್ತಾರೆ. ಆತನ ವಾಕ್ಯವಾದ ಬೈಬಲನ್ನು ಪಡೆದಿರಲು ಮತ್ತು ಸುಳ್ಳು ಬೋಧನೆಗಳನ್ನು ಬೇರುಸಮೇತ ಕಿತ್ತುಹಾಕಲು ಹಾಗೂ ಮನವೊಪ್ಪಿಸುವ ಕಲೆಯಿಂದ ಹೃದಯಗಳನ್ನು ತಲಪುವುದಕ್ಕೆ ಈ ಶಕ್ತಿಶಾಲಿಯಾದ ಸಾಧನವನ್ನು ಉಪಯೋಗಿಸಲು ಅವರು ಎಷ್ಟೊಂದು ಸಂತೋಷಪಡುತ್ತಾರೆ!
[ಅಧ್ಯಯನ ಪ್ರಶ್ನೆಗಳು]
a ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯ, 7-9ನೆಯ ಪುಟಗಳಲ್ಲಿರುವ, “ಯೂನೀಕೆ ಮತ್ತು ಲೋವಿ—ಆದರ್ಶಪ್ರಾಯ ಶಿಕ್ಷಕಿಯರು” ಎಂಬ ಲೇಖನವನ್ನು ನೋಡಿರಿ.
b ಯೋಹಾನ 14:28; ಫಿಲಿಪ್ಪಿ 2:5, 6; ಕೊಲೊಸ್ಸೆ 1:13-15ನ್ನು ನೋಡಿರಿ. ಹೆಚ್ಚಿನ ಮಾಹಿತಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ, ನೀವು ತ್ರಯೈಕ್ಯವನ್ನು ನಂಬ ಬೇಕೊ? ಎಂಬ ಬ್ರೋಷರನ್ನು ನೋಡಿರಿ.
[ಪುಟ 34 ರಲ್ಲಿರುವ ಚೌಕ]
ನಿಮ್ಮ ವಿದ್ಯಾರ್ಥಿಯ ಹೃದಯವನ್ನು ತಲಪುವುದು
◻ ಬೈಬಲ್ ವಿದ್ಯಾರ್ಥಿಯ ಹೃದಯವನ್ನು ತಲಪುವುದರಲ್ಲಿ ಯೆಹೋವನ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಿರಿ. —ನೆಹೆಮೀಯ 2:4, 5; ಯೆಶಾಯ 50:4.
◻ ವಿದ್ಯಾರ್ಥಿಯು ನಂಬುವಂತಹ ವಿಷಯವನ್ನು ಮತ್ತು ಸುಳ್ಳು ನಂಬಿಕೆಯೊಂದನ್ನು ಅವನು ಆಕರ್ಷಕವಾಗಿ ಕಂಡುಕೊಳ್ಳಬಹುದಾದ ಕಾರಣವನ್ನು ವಿವೇಚಿಸಿ ತಿಳಿದುಕೊಳ್ಳಿರಿ.—ಅ. ಕೃತ್ಯಗಳು 17:22, 23.
◻ ದಯಾಪರವಾದ, ತಾಳ್ಮೆಭರಿತ ವಿಧದಲ್ಲಿ, ಒಂದು ತರ್ಕಬದ್ಧವಾದ, ಶಾಸ್ತ್ರೀಯ ವಾದವನ್ನು ವಿಕಸಿಸಿರಿ, ಅದೇ ಸಮಯದಲ್ಲಿ ವಾದವಿವಾದವನ್ನು ದೂರವಿಡಿರಿ.—ಅ. ಕೃತ್ಯಗಳು 17:24-34.
◻ ಸಾಧ್ಯವಿರುವಲ್ಲಿ, ಪರಿಣಾಮಕಾರಿ ದೃಷ್ಟಾಂತಗಳಿಂದ ಬೈಬಲ್ ಸತ್ಯಗಳನ್ನು ದೃಢಪಡಿಸಿರಿ.—ಮಾರ್ಕ 4:33, 34.
◻ ಬೈಬಲಿನಿಂದ ನಿಷ್ಕೃಷ್ಟ ಜ್ಞಾನವನ್ನು ಸ್ವೀಕರಿಸುವುದರ ಪ್ರಯೋಜನಗಳನ್ನು ವಿದ್ಯಾರ್ಥಿಗೆ ತೋರಿಸಿಕೊಡಿರಿ.—1 ತಿಮೊಥೆಯ 2:3, 4; 2 ತಿಮೊಥೆಯ 3:14, 15.