ಕ್ರೈಸ್ತ ಕೂಡಿಬರುವಿಕೆಗಳನ್ನು ಗಣ್ಯಮಾಡುವುದು
“ನಾವು ಒಟ್ಟಾಗಿ ಕೂಡಿಬರುವುದನ್ನು ಬಿಟ್ಟುಬಿಡದೆ, ಪ್ರೀತಿಸುವಂತೆ ಮತ್ತು ಸತ್ಕಾರ್ಯಗಳಿಗೆ ಹುರಿದುಂಬಿಸುವಂತೆ ನಾವು ಒಬ್ಬರನ್ನೊಬ್ಬರು ಪರಿಗಣಿಸೋಣ.”—ಇಬ್ರಿಯ 10:24, 25, NW.
1, 2. (ಎ) ನಿಜ ಕ್ರೈಸ್ತರ ಕೂಡಿಬರುವಿಕೆಗಳಿಗೆ ಹಾಜರಾಗುವುದು ಒಂದು ಸುಯೋಗವಾಗಿದೆ ಏಕೆ? (ಬಿ) ಯಾವ ಅರ್ಥದಲ್ಲಿ ಯೇಸು ತನ್ನ ಹಿಂಬಾಲಕರ ಕೂಡಿಬರುವಿಕೆಗಳಲ್ಲಿ ಉಪಸ್ಥಿತನಿರುತ್ತಾನೆ?
ಕ್ರೈಸ್ತ ಕೂಡಿಬರುವಿಕೆಯು ಯೆಹೋವನ ಆರಾಧಕರಲ್ಲಿ ಹತ್ತು ಮಂದಿಗಿಂತಲೂ ಕಡಿಮೆ ಜನರಿಂದ ರಚಿತವಾಗಿರಲಿ ಅಥವಾ ಸಾವಿರಾರು ಜನರಿಂದ ರಚಿತವಾಗಿರಲಿ, ಅದಕ್ಕೆ ಹಾಜರಾಗುವುದು ಎಂತಹ ಒಂದು ಸುಯೋಗವಾಗಿದೆ! ಏಕೆಂದರೆ ಯೇಸು ಹೇಳಿದ್ದು: “ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ.” (ಮತ್ತಾಯ 18:20) ನಿಜ, ಆ ವಾಗ್ದಾನವನ್ನು ಮಾಡುವಾಗ, ಸಭೆಯಲ್ಲಿ ಮುಂದಾಳತ್ವವನ್ನು ವಹಿಸುವವರಿಂದ ಸರಿಯಾಗಿ ನಿರ್ವಹಿಸಲ್ಪಡಬೇಕಾದ ನ್ಯಾಯಸಂಬಂಧವಾದ ವಿಷಯಗಳನ್ನು ಯೇಸು ಚರ್ಚಿಸುತ್ತಿದ್ದನು. (ಮತ್ತಾಯ 18:15-19) ಆದರೆ ಯೇಸುವಿನ ಹೆಸರಿನಲ್ಲಿ ಪ್ರಾರ್ಥನೆಯೊಂದಿಗೆ ಆರಂಭವಾಗಿ ಕೊನೆಗೊಳ್ಳುವ ಎಲ್ಲ ಕ್ರೈಸ್ತ ಕೂಡಿಬರುವಿಕೆಗಳಿಗೆ, ಅವನ ಮಾತುಗಳ ಮುಖ್ಯಾಂಶವನ್ನು ಅನ್ವಯಿಸಸಾಧ್ಯವಿದೆಯೊ? ಹೌದು. ಯೇಸು ತನ್ನ ಹಿಂಬಾಲಕರಿಗೆ ಶಿಷ್ಯರನ್ನಾಗಿ ಮಾಡುವ ಕಾರ್ಯವನ್ನು ಮಾಡುವಂತೆ ಆದೇಶಿಸಿದಾಗ, “ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂದು ಅವನು ವಾಗ್ದಾನಿಸಿದನೆಂಬುದನ್ನು ಜ್ಞಾಪಕದಲ್ಲಿಡಿ.—ಮತ್ತಾಯ 28:20.
2 ಕ್ರೈಸ್ತ ಸಭೆಯ ಶಿರಸ್ಸಾಗಿರುವ, ಕರ್ತನಾದ ಯೇಸು ಕ್ರಿಸ್ತನು ತನ್ನ ನಂಬಿಗಸ್ತ ಹಿಂಬಾಲಕರ ಎಲ್ಲ ಕೂಡಿಬರುವಿಕೆಗಳಲ್ಲಿ ತೀವ್ರವಾಗಿ ಆಸಕ್ತನಾಗಿದ್ದಾನೆಂಬುದರಲ್ಲಿ ಸಂದೇಹವಿರಸಾಧ್ಯವಿಲ್ಲ. ಇದಲ್ಲದೆ, ದೇವರ ಪವಿತ್ರಾತ್ಮದ ಮೂಲಕ ಅವನು ಅವರೊಂದಿಗೆ ಉಪಸ್ಥಿತನಿದ್ದಾನೆಂದು ನಾವು ಖಾತ್ರಿಯಿಂದಿರಸಾಧ್ಯವಿದೆ. (ಅ. ಕೃತ್ಯಗಳು 2:33; ಪ್ರಕಟನೆ 5:6) ನಾವು ಕೂಟವಾಗಿ ಕೂಡಿಬರುವುದರಲ್ಲಿ ಯೆಹೋವ ದೇವರು ಸಹ ಆಸಕ್ತನಾಗಿದ್ದಾನೆ. ಅಂತಹ ಕೂಟಗಳ ಮೂಲ ಉದ್ದೇಶವು, “ಕೂಡಿದ ಸಭೆಗಳಲ್ಲಿ” ದೇವರಿಗೆ ಧ್ವನಿಯೆತ್ತಿ ಸ್ತುತಿಸುವುದೇ ಆಗಿದೆ. (ಕೀರ್ತನೆ 26:12) ನಾವು ಸಭಾ ಕೂಟಗಳಿಗೆ ಹಾಜರಾಗುವುದು, ಆತನಿಗಾಗಿರುವ ನಮ್ಮ ಪ್ರೀತಿಯ ಒಂದು ಪುರಾವೆಯಾಗಿದೆ.
3. ಯಾವ ಪ್ರಮುಖ ಕಾರಣಗಳಿಗಾಗಿ ನಾವು ಕ್ರೈಸ್ತ ಕೂಡಿಬರುವಿಕೆಗಳನ್ನು ಗಣ್ಯಮಾಡುತ್ತೇವೆ?
3 ನಾವು ಕ್ರೈಸ್ತ ಕೂಡಿಬರುವಿಕೆಗಳನ್ನು ಏಕೆ ಗಣ್ಯಮಾಡುತ್ತೇವೆಂಬುದಕ್ಕೆ ಇನ್ನೂ ಒಳ್ಳೆಯ ಕಾರಣಗಳಿವೆ. ಯೇಸು ಕ್ರಿಸ್ತನು ಭೂಮಿಯನ್ನು ಬಿಟ್ಟುಹೋಗುವುದಕ್ಕೆ ಮೊದಲು, ನಂಬಿಕೆಯುಳ್ಳ ಮನೆವಾರ್ತೆಗೆ ಸಮಯೋಚಿತವಾದ ಆತ್ಮಿಕ ಆಹಾರವನ್ನು ಒದಗಿಸಲಿಕ್ಕಾಗಿ, ಅವನು ತನ್ನ ಅಭಿಷಿಕ್ತ ಶಿಷ್ಯರನ್ನು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಾಗಿ’ ಕಾರ್ಯನಿರ್ವಹಿಸುವಂತೆ ನೇಮಿಸಿದನು. (ಮತ್ತಾಯ 24:45) ಅಂತಹ ಆತ್ಮಿಕ ಉಣಿಸುವಿಕೆಯು ಸಂಭವಿಸುವ ಒಂದು ಪ್ರಮುಖ ವಿಧವು, ಸಭಾ ಕೂಟಗಳು ಹಾಗೂ ಸಮ್ಮೇಳನಗಳು ಮತ್ತು ಅಧಿವೇಶನಗಳಂತಹ ದೊಡ್ಡ ಕೂಡಿಬರುವಿಕೆಗಳ ಮೂಲಕವಾಗಿದೆ. ಈ ದುಷ್ಟ ವ್ಯವಸ್ಥೆಯ ಅಂತ್ಯವನ್ನು ಪಾರಾಗಲು ಮತ್ತು ದೇವರ ನೀತಿಯ ನೂತನ ಲೋಕದಲ್ಲಿ ಜೀವವನ್ನು ಪಡೆಯಲು ಬಯಸುವವರೆಲ್ಲರಿಗೆ, ಅಂತಹ ಕೂಡಿಬರುವಿಕೆಗಳಲ್ಲಿ ಅತ್ಯಗತ್ಯವಾದ ಮಾಹಿತಿಯನ್ನು ಒದಗಿಸಲಾಗುವಂತೆ, ಕರ್ತನಾದ ಯೇಸು ಕ್ರಿಸ್ತನು ಈ ನಂಬಿಗಸ್ತ ಆಳನ್ನು ಮಾರ್ಗದರ್ಶಿಸುತ್ತಾನೆ.
4. ಯಾವ ಅಪಾಯಕರ “ರೂಢಿ”ಯು ಬೈಬಲಿನಲ್ಲಿ ತಿಳಿಸಲ್ಪಟ್ಟಿದೆ, ಮತ್ತು ಅದನ್ನು ತಡೆಗಟ್ಟಲು ಯಾವುದು ನಮಗೆ ಸಹಾಯ ಮಾಡುತ್ತದೆ?
4 ಆದುದರಿಂದ, ಅಪೊಸ್ತಲ ಪೌಲನಿಂದ ದಾಖಲಿಸಲ್ಪಟ್ಟ ಅಪಾಯಕರ ರೂಢಿಯನ್ನು ಬೆಳೆಸಿಕೊಳ್ಳಲು ಯಾವನೇ ಕ್ರೈಸ್ತನು ಪ್ರಯತ್ನಿಸಸಾಧ್ಯವಿಲ್ಲ. ಅವನು ಬರೆದುದು: “ನಾವು ಒಟ್ಟಾಗಿ ಕೂಡಿಬರುವುದನ್ನು ಬಿಟ್ಟುಬಿಡದೆ, ಪ್ರೀತಿಸುವಂತೆ ಮತ್ತು ಸತ್ಕಾರ್ಯಗಳಿಗೆ ಹುರಿದುಂಬಿಸುವಂತೆ ನಾವು ಒಬ್ಬರನ್ನೊಬ್ಬರು ಪರಿಗಣಿಸೋಣ. ಕೆಲವರು ಅದನ್ನು ರೂಢಿಯಾಗಿ ಬಿಟ್ಟುಬಿಟ್ಟಿದ್ದಾರೆ, ಆದರೆ ನಾವು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರೋಣ, ಮತ್ತು ಆ ದಿನವು ಸಮೀಪಿಸುತ್ತಾ ಇರುವುದನ್ನು ನೋಡುವುದರಿಂದ ಇನ್ನೂ ಹೆಚ್ಚಾಗಿ ಮಾಡುತ್ತಾ ಇರೋಣ.” (ಇಬ್ರಿಯ 10:24, 25, NW) ಕ್ರೈಸ್ತ ಕೂಡಿಬರುವಿಕೆಗಳಿಗೆ ಹಾಜರಾಗುವ ಸುಯೋಗ ಮತ್ತು ಪ್ರಯೋಜನಗಳ ಕುರಿತು ಮನನಮಾಡುವುದು, ಅಂತಹ ಕೂಡಿಬರುವಿಕೆಗಳನ್ನು ನಿಷ್ಠೆಯಿಂದ ಹಾಗೂ ಮನಃಪೂರ್ವಕವಾಗಿ ಬೆಂಬಲಿಸಲು ನಮಗೆ ಸಹಾಯ ಮಾಡುವುದು.
ಭಕ್ತಿವೃದ್ಧಿಯನ್ನುಂಟುಮಾಡುವ ಕೂಟಗಳು
5. (ಎ) ನಮ್ಮ ಮಾತು ಕೂಟಗಳಲ್ಲಿ ಯಾವ ಪರಿಣಾಮವನ್ನು ಬೀರಬೇಕು? (ಬಿ) ಆಸಕ್ತರನ್ನು ಕೂಟಗಳಿಗೆ ಹಾಜರಾಗುವಂತೆ ಆಮಂತ್ರಿಸುವುದರಲ್ಲಿ ನಾವು ಏಕೆ ತಡಮಾಡಬಾರದು?
5 ಕ್ರೈಸ್ತ ಕೂಟಗಳಲ್ಲಿ ಯೆಹೋವನ ಪವಿತ್ರಾತ್ಮವು ಕ್ರಿಯಾಶೀಲವಾಗಿರುವಂತೆ ಕ್ರೈಸ್ತರು ಪ್ರಾರ್ಥಿಸುವುದರಿಂದ, ಹಾಜರಾಗುವ ಪ್ರತಿಯೊಬ್ಬ ವ್ಯಕ್ತಿಯು, ಆ ಆತ್ಮಕ್ಕೆ ಹೊಂದಿಕೆಯಲ್ಲಿ ಕಾರ್ಯನಡಿಸಲು ಮತ್ತು “ದೇವರ ಪವಿತ್ರಾತ್ಮನನ್ನು ದುಃಖಪಡಿಸ”ದಿರಲು ತನ್ನಿಂದಾದುದೆಲ್ಲವನ್ನೂ ಮಾಡಬೇಕು. (ಎಫೆಸ 4:30) ಅಪೊಸ್ತಲ ಪೌಲನು ಆ ಪ್ರೇರಿತ ಮಾತುಗಳನ್ನು ಬರೆದಾಗ, ಅವನು ಮಾತಿನ ಸೂಕ್ತವಾದ ಉಪಯೋಗವನ್ನು ಚರ್ಚಿಸುತ್ತಿದ್ದನು. ನಾವು ಏನು ಹೇಳುತ್ತೇವೂ ಅದು ಯಾವಾಗಲೂ “ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು” ಆಗಿದ್ದು, ‘ಕೇಳುವವರ ಹಿತಕ್ಕಾಗಿ ಅದನ್ನು ಆಡ’ಲು ಉಪಯೋಗಿಸಬೇಕು. (ಎಫೆಸ 4:29) ಕ್ರೈಸ್ತ ಕೂಡಿಬರುವಿಕೆಗಳಲ್ಲಿ ಇದು ವಿಶೇಷವಾಗಿ ಪ್ರಾಮುಖ್ಯವಾದದ್ದಾಗಿದೆ. ಕೊರಿಂಥದವರಿಗೆ ಬರೆದ ತನ್ನ ಪತ್ರದಲ್ಲಿ, ಕೂಟಗಳು ಭಕ್ತಿವೃದ್ಧಿಯನ್ನುಂಟುಮಾಡುವವುಗಳೂ, ಬೋಧಪ್ರದವಾದವುಗಳೂ, ಉತ್ತೇಜನದಾಯಕವಾದವುಗಳೂ ಆಗಿರುವ ಅಗತ್ಯವನ್ನು ಪೌಲನು ಎತ್ತಿಹೇಳಿದನು. (1 ಕೊರಿಂಥ 14:5, 12, 19, 26, 31) “ದೇವರು ನಿಜವಾಗಿ ನಿಮ್ಮಲ್ಲಿ”ದ್ದಾನೆಂದು ನಿರ್ಣಯಿಸಬಹುದಾದ ಹೊಸದಾಗಿ ಹಾಜರಾಗುವವರನ್ನೂ ಸೇರಿಸಿ, ಹಾಜರಿರುವವರೆಲ್ಲರೂ ಅಂತಹ ಕೂಟಗಳಿಂದ ಪ್ರಯೋಜನಪಡೆದುಕೊಳ್ಳುತ್ತಾರೆ. (1 ಕೊರಿಂಥ 14:25) ಈ ಕಾರಣಕ್ಕಾಗಿ, ಹೊಸದಾಗಿ ಆಸಕ್ತರಾಗಿರುವವರನ್ನು ನಮ್ಮೊಂದಿಗೆ ಕೂಟಕ್ಕೆ ಬರುವಂತೆ ಆಮಂತ್ರಿಸುವುದರಲ್ಲಿ ನಾವು ತಡಮಾಡಬಾರದು. ಏಕೆಂದರೆ ಹಾಗೆ ಮಾಡುವುದು ಅವರ ಆತ್ಮಿಕ ಪ್ರಗತಿಯನ್ನು ವೇಗಗೊಳಿಸುವುದು.
6. ಕೂಟವನ್ನು ಭಕ್ತಿವೃದ್ಧಿದಾಯಕವಾಗಿ ಮಾಡಲು ಸಹಾಯ ಮಾಡುವ ಕೆಲವು ಅಂಶಗಳು ಯಾವುವು?
6 ಕ್ರೈಸ್ತ ಕೂಟದಲ್ಲಿ ಭಾಷಣಗಳು, ಇಂಟರ್ವ್ಯೂಗಳು, ಅಥವಾ ಪ್ರತ್ಯಕ್ಷಾಭಿನಯಗಳ ನೇಮಕವನ್ನು ಪಡೆದಿರುವವರೆಲ್ಲರೂ, ಅವರ ಮಾತು ಭಕ್ತಿವೃದ್ಧಿಮಾಡುವಂತಹದ್ದೂ ದೇವರ ಲಿಖಿತ ವಾಕ್ಯವಾದ ಬೈಬಲಿನೊಂದಿಗೆ ಹೊಂದಿಕೆಯುಳ್ಳದ್ದೂ ಆಗಿದೆಯೆಂಬ ವಿಷಯದಲ್ಲಿ ಖಚಿತರಾಗಿರಲು ಬಯಸುತ್ತಾರೆ. ನಿಷ್ಕೃಷ್ಟವಾದ ಮಾತುಗಳನ್ನು ನುಡಿಯುವುದರ ಜೊತೆಗೆ, ದೇವರ ಹಾಗೂ ಕ್ರಿಸ್ತನ ಪ್ರೀತಿಪೂರ್ಣ ವ್ಯಕ್ತಿತ್ವಗಳೊಂದಿಗೆ ಹೊಂದಿಕೆಯಲ್ಲಿರುವ ಅನಿಸಿಕೆಗಳು ಹಾಗೂ ಭಾವನೆಗಳನ್ನು ನಾವು ವ್ಯಕ್ತಪಡಿಸಬೇಕು. ಒಂದು ಕೂಟದ ಕಾರ್ಯಕ್ರಮದಲ್ಲಿ ಭಾಗಗಳನ್ನು ಮಾಡುವವರೆಲ್ಲರೂ, ಸಂತೋಷ, ದೀರ್ಘಶಾಂತಿ, ಮತ್ತು ನಂಬಿಕೆಯಂತಹ ‘ದೇವರಾತ್ಮನಿಂದ ಉಂಟಾಗುವ ಫಲ’ವನ್ನು ಪ್ರತಿಫಲಿಸುವ ಪ್ರಜ್ಞೆಯುಳ್ಳವರಾಗಿರುವುದಾದರೆ, ಹಾಜರಿರುವವರೆಲ್ಲರಿಗೂ ಭಕ್ತಿವೃದ್ಧಿಯನ್ನುಂಟುಮಾಡಿದ ಅನಿಸಿಕೆಯಾಗುತ್ತದೆಂಬುದು ನಿಶ್ಚಯ.—ಗಲಾತ್ಯ 5:22, 23.
7. ಹಾಜರಾಗುವವರೆಲ್ಲರೂ ಭಕ್ತಿವೃದ್ಧಿಮಾಡುವ ಕೂಡಿಬರುವಿಕೆಗೆ ಹೇಗೆ ನೆರವು ನೀಡಸಾಧ್ಯವಿದೆ?
7 ಸಭಾ ಕೂಟಗಳಲ್ಲಿನ ಕಾರ್ಯಕ್ರಮದಲ್ಲಿ ಕೇವಲ ಕೆಲವರಿಗೆ ನೇಮಕಗಳು ಇರುವುದಾದರೂ, ಭಕ್ತಿವೃದ್ಧಿಯನ್ನುಂಟುಮಾಡುವ ಕೂಡಿಬರುವಿಕೆಗೆ ಎಲ್ಲರೂ ನೆರವನ್ನೀಯಬಲ್ಲರು. ಅನೇಕವೇಳೆ ಸಭಿಕರಿಗೆ ಪ್ರಶ್ನೆಗಳನ್ನು ಉತ್ತರಿಸುವಂತಹ ಅವಕಾಶಗಳಿರುತ್ತವೆ. ಇವು ನಮ್ಮ ನಂಬಿಕೆಯನ್ನು ಸಾರ್ವಜನಿಕವಾಗಿ ಘೋಷಿಸಲಿಕ್ಕಾಗಿರುವ ಸಂದರ್ಭಗಳಾಗಿವೆ. (ರೋಮಾಪುರ 10:9) ನಮ್ಮ ವೈಯಕ್ತಿಕ ವಿಚಾರಗಳನ್ನು ಪ್ರವರ್ಧಿಸಲು, ನಮ್ಮ ವೈಯಕ್ತಿಕ ಸಾಧನೆಗಳ ಕುರಿತು ಜಂಬಕೊಚ್ಚಿಕೊಳ್ಳಲು, ಅಥವಾ ಜೊತೆವಿಶ್ವಾಸಿಯೊಬ್ಬನನ್ನು ಟೀಕಿಸಲಿಕ್ಕಾಗಿರುವ ಒಂದು ಅವಕಾಶದೋಪಾದಿ ಅವುಗಳನ್ನು ಎಂದಿಗೂ ಉಪಯೋಗಿಸಬಾರದು. ಅದು ದೇವರ ಆತ್ಮಕ್ಕೆ ದುಃಖವನ್ನುಂಟುಮಾಡಲಾರದೊ? ಜೊತೆವಿಶ್ವಾಸಿಗಳೊಂದಿಗಿನ ಭಿನ್ನಾಭಿಪ್ರಾಯಗಳನ್ನು, ಪ್ರೀತಿಯ ಆತ್ಮದಲ್ಲಿ ಖಾಸಗಿಯಾಗಿ ನಿರ್ವಹಿಸುವುದು ಅತ್ಯುತ್ತಮವಾದದ್ದು. ಬೈಬಲು ಹೇಳುವುದು: “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ.” (ಎಫೆಸ 4:32) ಈ ಒಳ್ಳೆಯ ಸಲಹೆಯನ್ನು ಅನ್ವಯಿಸಿಕೊಳ್ಳಲು ಕ್ರೈಸ್ತ ಕೂಡಿಬರುವಿಕೆಗಳು ನಮಗೆ ಎಂತಹ ಅತ್ಯುತ್ತಮ ಅವಕಾಶವನ್ನು ಒದಗಿಸಿಕೊಡುತ್ತವೆ! ಇತರರಿಗೆ ದಯಾಭಾವವನ್ನು ತೋರಿಸಲಿಕ್ಕಾಗಿ, ಅನೇಕರು ಕೂಟಗಳಿಗೆ ಬೇಗನೆ ಬರುತ್ತಾರೆ ಮತ್ತು ಅದು ಮುಗಿದ ಅನಂತರ ತಡವಾಗಿ ಹೋಗುತ್ತಾರೆ. ಇದು ಹೊಸದಾಗಿ ಆಸಕ್ತರಾಗಿರುವವರಿಗೂ ಸಹಾಯ ಮಾಡುತ್ತದೆ—ವಿಶೇಷವಾಗಿ ಅವರಿಗೆ, ತಮ್ಮನ್ನು ಸ್ವಾಗತಿಸಲಾಗುತ್ತದೆ ಎಂಬ ಅನಿಸಿಕೆಯಾಗುವ ಅಗತ್ಯವಿರುತ್ತದೆ. ಹೀಗೆ ಎಲ್ಲ ಸಮರ್ಪಿತ ಕ್ರೈಸ್ತರಿಗೆ, ‘ಒಬ್ಬರನ್ನೊಬ್ಬರು ಪರಿಗಣಿಸುವ ಮೂಲಕ ಹಾಗೂ ಪ್ರೀತಿಸುವಂತೆ ಮತ್ತು ಸತ್ಕಾರ್ಯಗಳನ್ನು ಮಾಡುವಂತೆ ಒಬ್ಬರನ್ನೊಬ್ಬರು ಹುರಿದುಂಬಿಸುವ’ ಮೂಲಕ ಕೂಟಗಳನ್ನು ಭಕ್ತಿವೃದ್ಧಿದಾಯಕವಾಗಿ ಮಾಡುವುದರಲ್ಲಿ ಒಂದು ಪಾತ್ರವನ್ನು ನಿರ್ವಹಿಸಲಿಕ್ಕಿದೆ.
ಚೆನ್ನಾಗಿ ತಯಾರಿಸಿರಿ
8. (ಎ) ಕೂಟಗಳಿಗೆ ಹಾಜರಾಗಲಿಕ್ಕಾಗಿ ಕೆಲವರು ಯಾವ ಪ್ರಶಂಸಾರ್ಹ ತ್ಯಾಗಗಳನ್ನು ಮಾಡುತ್ತಾರೆ? (ಬಿ) ಒಬ್ಬ ಕುರುಬನೋಪಾದಿ ಯೆಹೋವನು ಯಾವ ಮಾದರಿಯನ್ನಿಡುತ್ತಾನೆ?
8 ಕ್ರೈಸ್ತ ಕೂಡಿಬರುವಿಕೆಗಳಿಗೆ ಹಾಜರಾಗುವುದು ಕೆಲವರಿಗೆ ಸಂಬಂಧಸೂಚಕವಾಗಿ ಸುಲಭವಾಗಿರಬಹುದಾದರೂ, ಇತರರಿಗೆ ಅದು ಸತತವಾದ ತ್ಯಾಗವನ್ನು ಅಗತ್ಯಪಡಿಸುತ್ತದೆ. ಉದಾಹರಣೆಗೆ, ತನ್ನ ಮನೆವಾರ್ತೆಯ ಆವಶ್ಯಕತೆಗಳಿಗಾಗಿ ಒದಗಿಸುವಂತೆ ಸಹಾಯ ಮಾಡಲಿಕ್ಕಾಗಿ ಐಹಿಕವಾಗಿ ಕೆಲಸಮಾಡಬೇಕಾಗಿರುವ ಕ್ರೈಸ್ತ ತಾಯಿಯೊಬ್ಬಳು, ಸಾಮಾನ್ಯವಾಗಿ ಕೆಲಸದಿಂದ ಸುಸ್ತಾಗಿ ಮನೆಗೆ ಬರುತ್ತಾಳೆ. ಆಗ ಅವಳು ಊಟವನ್ನು ತಯಾರಿಸಿ, ಕೂಟಗಳಿಗಾಗಿ ತನ್ನ ಮಕ್ಕಳನ್ನು ಸಿದ್ಧಪಡಿಸಲು ಸಹಾಯ ಮಾಡಬೇಕಾಗಿರಬಹುದು. ಇನ್ನಿತರ ಕ್ರೈಸ್ತರಿಗೆ, ಕೂಟಗಳಿಗೆ ಬರಲಿಕ್ಕಾಗಿ ಬಹಳ ದೂರ ಪ್ರಯಾಣಿಸಿ ಬರಬೇಕಾಗಿರಬಹುದು, ಅಥವಾ ಅವರು ರೋಗಗಳು ಇಲ್ಲವೆ ವೃದ್ಧಾಪ್ಯದಿಂದ ತಡೆಯಲ್ಪಟ್ಟಿರಬಹುದು. ನಿಶ್ಚಯವಾಗಿಯೂ, ತನ್ನ ಮಂದೆಯಲ್ಲಿರುವ ಪ್ರತಿಯೊಂದು ಕುರಿಯ ವಿಶೇಷ ಆವಶ್ಯಕತೆಗಳನ್ನು ಪ್ರೀತಿಪರ ಕುರುಬನೊಬ್ಬನು ಅರ್ಥಮಾಡಿಕೊಳ್ಳುವಂತೆಯೇ, ಕೂಟಗಳಿಗೆ ಹಾಜರಾಗುವ ಪ್ರತಿಯೊಬ್ಬ ನಂಬಿಗಸ್ತ ವ್ಯಕ್ತಿಯ ಸನ್ನಿವೇಶವನ್ನು ಯೆಹೋವನು ಅರ್ಥಮಾಡಿಕೊಳ್ಳುತ್ತಾನೆ. “ಆತನು [ಯೆಹೋವನು] ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು. ಹಾಲು ಕುಡಿಸುವ ಕುರಿಗಳನ್ನು ಮೆಲ್ಲಗೆ ನಡಿಸುವನು” ಎಂದು ಬೈಬಲು ಹೇಳುತ್ತದೆ.—ಯೆಶಾಯು 40:11.
9, 10. ನಾವು ಕೂಟಗಳಿಂದ ಅತ್ಯಧಿಕ ಪ್ರಯೋಜನವನ್ನು ಹೇಗೆ ಪಡೆಯಸಾಧ್ಯವಿದೆ?
9 ಕೂಟಗಳಿಗೆ ಕ್ರಮವಾಗಿ ಹಾಜರಾಗುವುದಕ್ಕಾಗಿ ದೊಡ್ಡ ತ್ಯಾಗಗಳನ್ನು ಮಾಡಬೇಕಾಗಿರುವವರು, ಪರಿಗಣಿಸಬೇಕಾದ ವಸ್ತುವಿಷಯವನ್ನು ತಯಾರಿಸುವುದರಲ್ಲಿ ತಾವು ವ್ಯಯಿಸಸಾಧ್ಯವಿರುವ ಸಮಯದ ವಿಷಯದಲ್ಲಿ ತೀರ ಪರಿಮಿತರಾಗಿರಬಹುದು. ಬೈಬಲ್ ವಾಚನದ ಸಾಪ್ತಾಹಿಕ ಕಾಲತಖ್ತೆಯನ್ನು ಅನುಸರಿಸುವುದು, ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿನ ಹಾಜರಿಯನ್ನು ಹೆಚ್ಚು ಪ್ರತಿಫಲದಾಯಕವಾಗಿ ಮಾಡುತ್ತದೆ. ತದ್ರೀತಿಯಲ್ಲಿ, ಕಾವಲಿನಬುರುಜು ಅಭ್ಯಾಸ ಮತ್ತು ಸಭಾ ಪುಸ್ತಕಾಭ್ಯಾಸಗಳಂತಹ ಇತರ ಕೂಟಗಳಿಗೆ ಮುಂದಾಗಿಯೇ ತಯಾರಿಮಾಡುವುದು, ಈ ಕೂಟಗಳನ್ನು ಇನ್ನೂ ಹೆಚ್ಚು ಪ್ರಯೋಜನದಾಯಕವಾದದ್ದಾಗಿ ಮಾಡುತ್ತದೆ. ಸಮಯವನ್ನು ಕಬಳಿಸುವ ಕೌಟುಂಬಿಕ ಜವಾಬ್ದಾರಿಗಳಿರುವವರು, ಅಭ್ಯಾಸದ ವಸ್ತುವಿಷಯವನ್ನು ಮುಂಚಿತವಾಗಿಯೇ ಓದುವ ಮೂಲಕ, ಉಲ್ಲೇಖಿತ ಬೈಬಲ್ ವಚನಗಳಲ್ಲಿ ಕಡಿಮೆಪಕ್ಷ ಕೆಲವು ವಚನಗಳಿಗೆ ಪರಿಗಣನೆಯನ್ನು ಕೊಡುವ ಮೂಲಕ, ಈ ಪ್ರಮುಖ ಬೈಬಲ್ ಚರ್ಚೆಗಳಲ್ಲಿ ಅರ್ಥಪೂರ್ಣವಾದ ಪಾಲನ್ನು ಹೊಂದಿರಲು ಹೆಚ್ಚು ಸಿದ್ಧರಾಗಿರುವರು.
10 ಯಾರಿಗೆ ಹೆಚ್ಚು ಬಿಡುವಿನ ಸಮಯವು ಸಿಗುತ್ತದೋ ಅಂತಹ ಇನ್ನಿತರರು, ಕೂಟದ ತಯಾರಿಯಲ್ಲಿ ಹೆಚ್ಚು ಸಮಯವನ್ನು ಕಳೆಯಸಾಧ್ಯವಿದೆ. ಉದಾಹರಣೆಗೆ, ಉಲ್ಲೇಖಿಸಲ್ಪಟ್ಟಿರುವ ಆದರೆ ಉದ್ಧರಿಸಲ್ಪಟ್ಟಿರದ ಶಾಸ್ತ್ರವಚನಗಳ ಕುರಿತು ಅವರು ಗಹನವಾಗಿ ಅಭ್ಯಾಸಿಸಸಾಧ್ಯವಿದೆ. ಹೀಗೆ ಎಲ್ಲರೂ ಕೂಟಗಳಿಂದ ಅತ್ಯಧಿಕ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ ಮತ್ತು ತಮ್ಮ ಭಾಷಣಗಳು ಹಾಗೂ ಹೇಳಿಕೆಗಳಿಂದ ಸಭೆಯನ್ನು ಕಟ್ಟುವುದರಲ್ಲಿ ಉತ್ತಮವಾದ ಒಂದು ಪಾಲನ್ನು ಹೊಂದಿರಸಾಧ್ಯವಿದೆ. ಚೆನ್ನಾಗಿ ತಯಾರಿಸುವ ಮೂಲಕ, ಹಿರಿಯರು ಹಾಗೂ ಶುಶ್ರೂಷಾ ಸೇವಕರು, ಚುಟುಕಾದ, ಸಂಕ್ಷಿಪ್ತ ಉತ್ತರಗಳನ್ನು ಕೊಡುವುದರಲ್ಲಿ ಒಂದು ಉತ್ತಮ ಮಾದರಿಯನ್ನು ಇಡುವರು. ಯೆಹೋವನ ಒದಗಿಸುವಿಕೆಗಳ ಕಡೆಗಿನ ಗೌರವದಿಂದ, ಕೂಟಗಳಲ್ಲಿ ಹಾಜರಿರುವವರು, ಅವು ಇನ್ನೂ ನಡೆಯುತ್ತಿರುವಾಗಲೇ ಅಪಕರ್ಷಣೆಯನ್ನುಂಟುಮಾಡುವ ಯಾವುದೇ ಅಭ್ಯಾಸಗಳನ್ನು ತೊರೆಯುವರು.—1 ಪೇತ್ರ 5:3.
11. ಕೂಟಗಳಿಗೆ ತಯಾರಿಮಾಡಿರಲಿಕ್ಕಾಗಿ ಆತ್ಮಸಂಯಮವು ಏಕೆ ಅಗತ್ಯವಾಗಿದೆ?
11 ನಮ್ಮ ಆತ್ಮಿಕ ಆರೋಗ್ಯಕ್ಕೆ ಅನಗತ್ಯವಾದ ಚಟುವಟಿಕೆಗಳು ಹಾಗೂ ವಿನೋದಗಳು, ನಮ್ಮ ಸಮಯದಲ್ಲಿ ಹೆಚ್ಚಿನದ್ದನ್ನು ಕಬಳಿಸಿಬಿಡಬಹುದು. ಹಾಗಿರುವಲ್ಲಿ, ನಾವು ನಮ್ಮನ್ನು ಪರೀಕ್ಷಿಸಿಕೊಳ್ಳುವ ಅಗತ್ಯವಿದೆ ಮತ್ತು ನಮ್ಮ ಸಮಯದ ಉಪಯೋಗದ ವಿಷಯದಲ್ಲಿ “ಬುದ್ಧಿಹೀನರಾಗಿ ನಡೆಯು”ವುದನ್ನು ನಿಲ್ಲಿಸಬೇಕಾಗಿದೆ. (ಎಫೆಸ 5:17) ವೈಯಕ್ತಿಕ ಬೈಬಲ್ ಅಭ್ಯಾಸ ಹಾಗೂ ಕೂಟದ ತಯಾರಿಯಲ್ಲಿ, ಅಲ್ಲದೆ ರಾಜ್ಯ ಸೇವೆಯಲ್ಲಿ ಹೆಚ್ಚು ಸಮಯವನ್ನು ಕಳೆಯಲಿಕ್ಕಾಗಿ, ಕಡಿಮೆ ಪ್ರಮುಖತೆಯುಳ್ಳ ವಿಷಯಗಳಿಂದ ‘ಸಮಯವನ್ನು ಕೊಂಡುಕೊಳ್ಳು’ವುದು (NW) ನಮ್ಮ ಗುರಿಯಾಗಿರತಕ್ಕದ್ದು. (ಎಫೆಸ 5:16) ಇದು ಯಾವಾಗಲೂ ಸುಲಭವಲ್ಲ ಮತ್ತು ಇದು ಆತ್ಮಸಂಯಮವನ್ನು ಕೇಳಿಕೊಳ್ಳುತ್ತದೆಂಬುದು ಒಪ್ಪತಕ್ಕದ್ದೇ. ತಮ್ಮ ಸಮಯದ ಸದುಪಯೋಗವನ್ನು ಮಾಡುವ ಯುವ ಜನರು, ಭವಿಷ್ಯತ್ತಿನ ಪ್ರಗತಿಗಾಗಿ ಒಂದು ಒಳ್ಳೆಯ ಅಸ್ತಿವಾರವನ್ನು ಹಾಕುತ್ತಿದ್ದಾರೆ. ತನ್ನ ಚಿಕ್ಕ ಪ್ರಾಯದ ಸಂಗಡಿಗನಾದ ತಿಮೊಥೆಯನಿಗೆ ಪೌಲನು ಬರೆದುದು: “ಈ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು [ತಿಮೊಥೆಯನಿಗೆ ಪೌಲನ ಬುದ್ಧಿವಾದ]. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು.”—1 ತಿಮೊಥೆಯ 4:15.
ದೇವರ ವಾಕ್ಯದಿಂದ ಮಾದರಿಗಳು
12. ಸಮುವೇಲನ ಕುಟುಂಬದಿಂದ ಎದ್ದುಕಾಣುವಂತಹ ಯಾವ ಮಾದರಿಯು ಇಡಲ್ಪಟ್ಟಿತು?
12 ಸಮುವೇಲನ ಕುಟುಂಬದಿಂದ ಇಡಲ್ಪಟ್ಟ ಅತ್ಯುತ್ತಮ ಮಾದರಿಯನ್ನು ಪರಿಗಣಿಸಿರಿ. ಶೀಲೋವಿನಲ್ಲಿ ದೇವರ ಆಲಯವು ಇದ್ದಾಗ, ಜೊತೆ ಆರಾಧಕರೊಂದಿಗೆ ಕೂಡಿಬರಲಿಕ್ಕಾಗಿದ್ದ ಏರ್ಪಾಡುಗಳಲ್ಲಿ ಅವರು ಕ್ರಮವಾಗಿ ಭಾಗವಹಿಸಿದರು. ಹಬ್ಬಾಚರಣೆಗಳಿಗೆ ಕೇವಲ ಪುರುಷರು ಮಾತ್ರವೇ ವಾರ್ಷಿಕ ಭೇಟಿಗಳನ್ನು ಮಾಡುವಂತೆ ಅಗತ್ಯಪಡಿಸಲ್ಪಟ್ಟಿದ್ದರು. ಆದರೆ ಸಮುವೇಲನ ತಂದೆಯಾದ ಎಲ್ಕಾನನು, “ಪ್ರತಿವರುಷವೂ ಸೈನ್ಯಾಧೀಶ್ವರನಾದ ಯೆಹೋವನಿಗೆ ಯಜ್ಞವನ್ನು ಸಮರ್ಪಿಸಿ ಆತನನ್ನು ಆರಾಧಿಸುವದಕ್ಕೋಸ್ಕರ ತನ್ನ ಊರಿನಿಂದ ಶೀಲೋವಿಗೆ ಹೋಗುತ್ತಿ”ದ್ದಾಗ, ತನ್ನ ಇಡೀ ಕುಟುಂಬವನ್ನು ತನ್ನೊಂದಿಗೆ ಕರೆದೊಯ್ದನು. (1 ಸಮುವೇಲ 1:3-5) ಸಮುವೇಲನ ಸ್ವಂತ ಊರಾದ ರಾಮಾತಯಿಮ್ ಚೋಫೀಮ್, “ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿನ” ಬೆಟ್ಟದ ಅಡಿಯಲ್ಲಿರುವ ಗುಡ್ಡದಲ್ಲಿ, ಆಧುನಿಕ ದಿನದ ರೆಂಟಿಸ್ನ ತೀರದ ಬಳಿ ಇದ್ದಿರಬಹುದು. (1 ಸಮುವೇಲ 1:1) ಹೀಗೆ ಶೀಲೋವಿಗೆ ಹೋಗುವ ಪ್ರಯಾಣವು, ಆ ದಿವಸಗಳಲ್ಲಿ ಆಯಾಸಗೊಳಿಸುವಂತಹ ಒಂದು ಪ್ರಯಾಣವಾಗಿದ್ದು, ಸುಮಾರು 30 ಕಿಲೊಮೀಟರುಗಳಷ್ಟು ದೂರದ ಪ್ರವಾಸವನ್ನು ಒಳಗೊಂಡಿದ್ದಿರಬಹುದು. ಎಲ್ಕಾನನ ಕುಟುಂಬವು ನಿಷ್ಠೆಯಿಂದ ಮಾಡಿದ್ದು ಇದನ್ನೇ—“ಪ್ರತಿವರ್ಷವೂ [ಅವರು] ಯೆಹೋವನ ಮಂದಿರಕ್ಕೆ” ಹೋದರು.—1 ಸಮುವೇಲ 1:7.
13. ಯೇಸು ಭೂಮಿಯಲ್ಲಿದ್ದಾಗ ನಂಬಿಗಸ್ತ ಯೆಹೂದ್ಯರಿಂದ ಯಾವ ಮಾದರಿಯು ಇಡಲ್ಪಟ್ಟಿತು?
13 ಯೇಸು ಸಹ ಒಂದು ದೊಡ್ಡ ಕುಟುಂಬದ ಭಾಗವಾಗಿ ಬೆಳೆದನು. ಯೆರೂಸಲೇಮಿನಲ್ಲಿನ ಪಸ್ಕ ಹಬ್ಬಕ್ಕೆ ಹಾಜರಾಗಲಿಕ್ಕಾಗಿ, ಪ್ರತಿ ವರ್ಷ ಆ ಕುಟುಂಬವು, ನಜರೇತಿನಿಂದ ಸುಮಾರು 100 ಕಿಲೊಮೀಟರುಗಳಷ್ಟು ದಕ್ಷಿಣಕ್ಕೆ ಪ್ರಯಾಣಿಸಿತು. ಅವರು ಪ್ರವಾಸ ಮಾಡಿದ್ದಿರಬಹುದಾದ ಎರಡು ಮಾರ್ಗಗಳಿವೆ. ಒಂದು ಹೆಚ್ಚು ನೇರವಾದ ಮಾರ್ಗವಾಗಿದ್ದು, ಮೆಗಿದ್ದೋ ಕಣಿವೆಯ ಇಳಿಹಾದಿಯಲ್ಲಿ ಹೋಗಿ, ಅನಂತರ ಸಮಾರ್ಯದ ಕ್ಷೇತ್ರದ ಮೂಲಕ ಸುಮಾರು 600 ಮೀಟರುಗಳಷ್ಟು ಏರಿಹೋಗಿ, ಯೆರೂಸಲೇಮನ್ನು ತಲಪುವುದನ್ನು ಒಳಗೊಂಡಿತ್ತು. ಇನ್ನೊಂದು ಜನಪ್ರಿಯ ಮಾರ್ಗವು, ಸಾ.ಶ. 33ರಲ್ಲಿ ಯೆರೂಸಲೇಮಿಗೆ ಮಾಡಿದ ತನ್ನ ಕೊನೆಯ ಪ್ರಯಾಣದಲ್ಲಿ ಯೇಸು ಹಿಡಿದ ಮಾರ್ಗವಾಗಿತ್ತು. ಅವನು ‘ಯೂದಾಯ ಪ್ರಾಂತ್ಯವನ್ನೂ ಯೊರ್ದನ್ ಹೊಳೆಯ ಆಚೆಯ ಸೀಮೆಯನ್ನೂ’ ತಲಪುವ ತನಕ, ಯೊರ್ದನ್ ಕಣಿವೆಯ ಮೂಲಕ ಸಮುದ್ರ ಮಟ್ಟಕ್ಕಿಂತ ಕೆಳಗಿನ ವರೆಗೆ ನಡೆದುಹೋಗುವುದನ್ನು ಇದು ಒಳಗೂಡಿತ್ತು. (ಮಾರ್ಕ 10:1) ಈ ಹಂತದಿಂದ, “ಯೆರೂಸಲೇಮಿನ ದಾರಿಯು” ಸುಮಾರು 30 ಕಿಲೊಮೀಟರುಗಳಷ್ಟು ದೂರದಲ್ಲಿದ್ದು, 1,100 ಮೀಟರುಗಳಿಗಿಂತಲೂ ಹೆಚ್ಚು ಮೇಲೇರುವ ಹಾದಿಯನ್ನು ಒಳಗೂಡಿತ್ತು. (ಮಾರ್ಕ 10:32) ಕ್ರಮವಾಗಿ, ಹಬ್ಬವನ್ನು ಆಚರಿಸುವ ನಂಬಿಗಸ್ತ ಜನರ ಗುಂಪುಗಳು, ಗಲಿಲಾಯದಿಂದ ಯೆರೂಸಲೇಮಿಗೆ ಕಷ್ಟಸಾಧ್ಯವಾದ ಪ್ರಯಾಣವನ್ನು ಮಾಡಿದವು. (ಲೂಕ 2:44) ಇಂದು ಸಂಪದ್ಭರಿತ ದೇಶಗಳಲ್ಲಿರುವ ಯೆಹೋವನ ಸೇವಕರಿಗೆ—ಅವರಲ್ಲಿ ಅನೇಕರು, ಸಂಚಾರಸಾರಿಗೆಯ ಆಧುನಿಕ ವಿಧಗಳ ಫಲವಾಗಿ, ಸಂಬಂಧಸೂಚಕವಾಗಿ ಕ್ರೈಸ್ತ ಕೂಡಿಬರುವಿಕೆಗಳಿಗೆ ಸುಲಭವಾಗಿ ಹಾಜರಾಗಸಾಧ್ಯವಿದೆ—ಎಂತಹ ಒಂದು ಉತ್ತಮ ಮಾದರಿ!
14, 15. (ಎ) ಅನ್ನಳು ಯಾವ ಮಾದರಿಯನ್ನಿಟ್ಟಳು? (ಬಿ) ಹೊಸದಾಗಿ ಕೂಟಕ್ಕೆ ಹಾಜರಾಗುವ ಕೆಲವರಿಂದ ತೋರಿಸಲ್ಪಟ್ಟ ಒಳ್ಳೆಯ ಮನೋಭಾವದಿಂದ ನಾವೇನು ಕಲಿಯಸಾಧ್ಯವಿದೆ?
14 ಇನ್ನೊಂದು ಮಾದರಿಯು, 84 ವರ್ಷ ಪ್ರಾಯದ ವಿಧವೆಯಾದ ಅನ್ನಳದ್ದಾಗಿದೆ. ಅವಳು “ದೇವಾಲಯವನ್ನು ಬಿಟ್ಟುಹೋಗದೆ” ಇದ್ದಳೆಂದು ಬೈಬಲು ಹೇಳುತ್ತದೆ. (ಲೂಕ 2:37) ಇದಲ್ಲದೆ, ಅನ್ನಳು ಇತರರಲ್ಲಿ ಪ್ರೀತಿಪೂರ್ಣ ಆಸಕ್ತಿಯನ್ನು ತೋರಿಸಿದಳು. ಶಿಶುವಾದ ಯೇಸುವನ್ನು ನೋಡಿ, ಅವನೇ ವಾಗ್ದತ್ತ ಮೆಸ್ಸೀಯನಾಗಿದ್ದನೆಂಬುದನ್ನು ತಿಳಿದುಕೊಂಡಾಗ, ಅವಳೇನು ಮಾಡಿದಳು? ಅವಳು ದೇವರಿಗೆ ಉಪಕಾರ ಸಲ್ಲಿಸಿ, “ಯೆರೂಸಲೇಮಿನ ಬಿಡುಗಡೆಯನ್ನು ಹಾರೈಸುತ್ತಿದ್ದವರೆಲ್ಲರ ಸಂಗಡ ಆತನ [ಆ ಮಗುವಿನ] ವಿಷಯವಾಗಿ” ಮಾತಾಡಲು ಆರಂಭಿಸಿದಳು. (ಲೂಕ 2:38) ಇಂದು ಕ್ರೈಸ್ತರಿಗಾಗಿ ಎಂತಹ ಒಂದು ಒಳ್ಳೆಯ ಮನೋಭಾವ, ಒಂದು ಮಾದರಿ!
15 ಹೌದು, ನಮ್ಮ ಕೂಟಗಳಲ್ಲಿನ ಹಾಜರಿ ಹಾಗೂ ಭಾಗವಹಿಸುವಿಕೆಯು ನಮಗೆ ಎಂತಹ ಒಂದು ಆನಂದವಾಗಿರಬೇಕೆಂದರೆ, ಅನ್ನಳಂತೆ ನಾವೆಂದೂ ಕೂಟಗಳಿಗೆ ಗೈರುಹಾಜರಾಗಲು ಬಯಸಬಾರದು. ಅನೇಕ ಹೊಸಬರು ಕೂಟಗಳ ವಿಷಯದಲ್ಲಿ ಇದೇ ಗಣ್ಯಭಾವವನ್ನು ಅನುಭವಿಸುತ್ತಾರೆ. ಅಂಧಕಾರದಿಂದ ದೇವರ ಅದ್ಭುತಕರ ಬೆಳಕಿಗೆ ಬಂದವರಾಗಿದ್ದು, ತಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಕಲಿತುಕೊಳ್ಳಲು ಅವರು ಬಯಸುತ್ತಾರೆ, ಮತ್ತು ಕ್ರೈಸ್ತ ಕೂಟಗಳಿಗಾಗಿ ಅನೇಕರು ಅತಿಯಾದ ಉತ್ಸಾಹವನ್ನು ವ್ಯಕ್ತಪಡಿಸುತ್ತಾರೆ. ಇನ್ನೊಂದು ಕಡೆಯಲ್ಲಿ, ಸತ್ಯದಲ್ಲಿ ಬಹಳ ದೀರ್ಘ ಸಮಯದಿಂದ ಇರುವವರು, ‘ಮೊದಲು ತಮ್ಮಲ್ಲಿದ್ದ ಪ್ರೀತಿಯನ್ನು ಬಿಟ್ಟು’ಬಿಡುವುದರ ವಿರುದ್ಧ ತಮ್ಮನ್ನು ಕಾಪಾಡಿಕೊಳ್ಳಬೇಕು. (ಪ್ರಕಟನೆ 2:4) ಗುರುತರವಾದ ಆರೋಗ್ಯ ಸಮಸ್ಯೆಗಳು ಅಥವಾ ವ್ಯಕ್ತಿಯೊಬ್ಬನ ನಿಯಂತ್ರಣಕ್ಕೆ ನಿಲುಕದ ಇತರ ಅಂಶಗಳು, ಅನೇಕವೇಳೆ ಕೂಟದ ಹಾಜರಿಯನ್ನು ತಡೆಯಬಹುದು. ಆದರೆ ಪ್ರಾಪಂಚಿಕತೆ, ಮನೋರಂಜನೆ, ಅಥವಾ ಆಸಕ್ತಿಯ ಕೊರತೆಯು, ನಮ್ಮನ್ನು ತಯಾರಿಮಾಡದವರು, ನಿರುತ್ಸಾಹಿಗಳು, ಅಥವಾ ಅಕ್ರಮವಾಗಿ ಕೂಟಕ್ಕೆ ಹಾಜರಾಗುವವರು ಆಗಿ ಮಾಡುವಂತೆ ಎಂದಿಗೂ ಬಿಡಬಾರದು.—ಲೂಕ 8:14.
ಅತ್ಯುತ್ತಮ ಮಾದರಿ
16, 17. (ಎ) ಆತ್ಮಿಕ ಕೂಡಿಬರುವಿಕೆಗಳ ಕಡೆಗೆ ಯೇಸುವಿನ ಮನೋಭಾವವೇನಾಗಿತ್ತು? (ಬಿ) ಎಲ್ಲ ಕ್ರೈಸ್ತರು ಯಾವ ಒಳ್ಳೆಯ ರೂಢಿಯನ್ನು ಅನುಸರಿಸಲು ಪ್ರಯತ್ನಿಸಬೇಕು?
16 ಆತ್ಮಿಕ ಕೂಡಿಬರುವಿಕೆಗಳಿಗಾಗಿ ಗಣ್ಯತೆಯನ್ನು ತೋರಿಸುವುದರಲ್ಲಿ ಯೇಸು ಎದ್ದುಕಾಣುವಂತಹ ಒಂದು ಮಾದರಿಯನ್ನಿಟ್ಟನು. 12ರ ಎಳೆಯ ಪ್ರಾಯದಲ್ಲಿ, ಯೆರೂಸಲೇಮಿನಲ್ಲಿರುವ ದೇವರ ಮನೆಗಾಗಿ ಅವನು ತನ್ನ ಪ್ರೀತಿಯನ್ನು ತೋರಿಸಿದನು. ಅವನು ಎಲ್ಲಿದ್ದಾನೆಂಬುದು ಅವನ ಹೆತ್ತವರಿಗೆ ಗೊತ್ತಿರಲಿಲ್ಲ. ಆದರೆ ಕೊನೆಗೆ ಅವನು ದೇವಾಲಯದಲ್ಲಿನ ಬೋಧಕರೊಂದಿಗೆ ದೇವರ ವಾಕ್ಯವನ್ನು ಚರ್ಚಿಸುತ್ತಿರುವುದನ್ನು ಅವರು ಕಂಡುಕೊಂಡರು. ತನ್ನ ಹೆತ್ತವರ ಚಿಂತೆಗೆ ಪ್ರತ್ಯುತ್ತರವಾಗಿ, ಯೇಸು ಗೌರವಭರಿತನಾಗಿ ಕೇಳಿದ್ದು: “ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದದ್ದು ನಿಮಗೆ ತಿಳಿಯಲಿಲ್ಲವೇ?” (ಲೂಕ 2:49) ಅಧೀನತೆಯಿಂದ, ಎಳೆಯ ಪ್ರಾಯದ ಯೇಸು ತನ್ನ ಹೆತ್ತವರೊಂದಿಗೆ ನಜರೇತಿಗೆ ಹಿಂದಿರುಗಿದನು. ಅಲ್ಲಿ ಅವನು, ಸಭಾಮಂದಿರದಲ್ಲಿ ಕ್ರಮವಾಗಿ ಹಾಜರಾಗುವ ಮೂಲಕ ಆರಾಧನೆಯ ಕೂಟಗಳಿಗಾಗಿರುವ ತನ್ನ ಪ್ರೀತಿಯನ್ನು ತೋರಿಸುತ್ತಾ ಮುಂದುವರಿದನು. ಹೀಗೆ, ಅವನು ತನ್ನ ಶುಶ್ರೂಷೆಯನ್ನು ಆರಂಭಿಸಿದಾಗ, ಬೈಬಲು ವರದಿಸುವುದು: “ಆತನು ತಾನು ಬೆಳೆದ ನಜರೇತಿಗೆ ಬಂದು ತನ್ನ ವಾಡಿಕೆಯ ಪ್ರಕಾರ ಸಬ್ಬತ್ದಿನದಲ್ಲಿ ಸಭಾಮಂದಿರಕ್ಕೆ ಹೋಗಿ ಓದುವದಕ್ಕಾಗಿ ಎದ್ದುನಿಂತನು.” (ಓರೆಅಕ್ಷರಗಳು ನಮ್ಮವು.) ಯೇಸು, ಯೆಶಾಯ 61:1, 2ನ್ನು ಓದಿ, ಅದನ್ನು ವಿವರಿಸಿದ ಬಳಿಕ, ಸಭಿಕರು “ಆತನನ್ನು ಹೊಗಳಿ ಆತನ ಬಾಯಿಂದ ಹೊರಡುವ ಇಂಪಾದ ಮಾತುಗಳಿಗೆ ಆಶ್ಚರ್ಯ”ಪಡಲಾರಂಭಿಸಿದರು.—ಲೂಕ 4:16, 22.
17 ಇಂದು ಕ್ರೈಸ್ತ ಕೂಟಗಳು ಇದೇ ರೀತಿಯ ಮೂಲಭೂತ ಮಾದರಿಯನ್ನು ಅನುಸರಿಸುತ್ತವೆ. ಕೂಟವು ಒಂದು ಸ್ತುತಿಯ ಗೀತೆ ಹಾಗೂ ಪ್ರಾರ್ಥನೆಯೊಂದಿಗೆ ಆರಂಭಿಸಲ್ಪಟ್ಟ ಬಳಿಕ, ಬೈಬಲಿನಿಂದ ಆಯ್ದ ವಚನಗಳನ್ನು (ಅಥವಾ ಬೈಬಲ್ ಅಭ್ಯಾಸದ ವಸ್ತುವಿಷಯದಲ್ಲಿ ಉದ್ಧರಿಸಲ್ಪಟ್ಟ ವಚನಗಳನ್ನು) ಓದಿ, ವಿವರಿಸಲಾಗುತ್ತದೆ. ನಿಜ ಕ್ರೈಸ್ತರು, ಯೇಸು ಕ್ರಿಸ್ತನ ಒಳ್ಳೆಯ ರೂಢಿಯನ್ನು ಅನುಕರಿಸುವ ಹಂಗಿಗೊಳಗಾಗಿದ್ದಾರೆ. ಅವರ ಪರಿಸ್ಥಿತಿಗಳು ಅನುಮತಿಸುವ ತನಕ, ಕ್ರೈಸ್ತ ಕೂಡಿಬರುವಿಕೆಗಳಲ್ಲಿ ಕ್ರಮವಾಗಿ ಹಾಜರಿರುವುದರಲ್ಲಿ ಅವರು ಆನಂದವನ್ನು ಕಂಡುಕೊಳ್ಳುತ್ತಾರೆ.
ಆಧುನಿಕ ದಿನದ ಮಾದರಿಗಳು
18, 19. ಕಡಿಮೆ ಸಂಪದ್ಭರಿತ ದೇಶಗಳಲ್ಲಿನ ಸಹೋದರರು, ಕೂಟಗಳು, ಸಮ್ಮೇಳನಗಳು, ಮತ್ತು ಅಧಿವೇಶನಗಳ ವಿಷಯದಲ್ಲಿ ಯಾವ ಅತ್ಯುತ್ತಮ ಮಾದರಿಗಳನ್ನು ಇಟ್ಟಿದ್ದಾರೆ?
18 ಭೂಮಿಯ ಕಡಿಮೆ ಸಂಪದ್ಭರಿತ ಭಾಗಗಳಲ್ಲಿ, ನಮ್ಮ ಸಹೋದರ ಸಹೋದರಿಯರಲ್ಲಿ ಅನೇಕರು, ಕ್ರೈಸ್ತ ಕೂಡಿಬರುವಿಕೆಗಳಿಗಾಗಿ ಗಣ್ಯತೆಯ ಅತ್ಯುತ್ತಮ ಮಾದರಿಯನ್ನು ಇಡುತ್ತಾರೆ. ಮೊಸಾಂಬೀಕ್ನಲ್ಲಿ, ಓರ್ಲಾಂಡೂ, ಮತ್ತು ಅವರ ಹೆಂಡತಿಯಾದ ಆಮೇಲ್ಯ ಎಂಬ ಜಿಲ್ಲಾ ಮೇಲ್ವಿಚಾರಕರಿಗೆ, ಒಂದು ಸಮ್ಮೇಳನದ ನೇಮಕವನ್ನು ಪೂರೈಸಲಿಕ್ಕಾಗಿ ಒಂದು ದೊಡ್ಡ ಬೆಟ್ಟದ ಆಚೆ ಸುಮಾರು 90 ಕಿಲೊಮೀಟರುಗಳಷ್ಟು ದೂರ ನಡೆಯಲು ಸುಮಾರು 45 ತಾಸುಗಳು ಹಿಡಿದವು. ತದನಂತರ ಇನ್ನೊಂದು ಸಮ್ಮೇಳನದ ನೇಮಕವನ್ನು ಪೂರೈಸಲಿಕ್ಕಾಗಿ ಅವರು ಅಷ್ಟೇ ದೂರ ಹಿಂದಿರುಗಿ ಪ್ರಯಾಣಿಸಬೇಕಾಗಿತ್ತು. ಓರ್ಲಾಂಡೂ ವಿನಯಶೀಲತೆಯಿಂದ ವರದಿಸಿದ್ದು: “ಬಾವ ಸಭೆಯಿಂದ ಬಂದಿದ್ದ ಸಹೋದರರಿಗೆ ಹೋಲಿಸುವಾಗ, ನಾವೇನೂ ಮಾಡಿಲ್ಲವೆಂಬ ಅನಿಸಿಕೆ ನಮಗಾಯಿತು. ಅವರು ಸಮ್ಮೇಳನಕ್ಕೆ ಹಾಜರಾಗಿ, ತಮ್ಮ ಮನೆಗಳಿಗೆ ಹಿಂದಿರುಗುವುದು, ಕಾಲ್ನಡಿಗೆಯಲ್ಲಿ ಆರು ದಿವಸಗಳ ಪ್ರಯಾಣವನ್ನು—ಸುಮಾರು 400 ಕಿಲೊಮೀಟರುಗಳಷ್ಟು ದೂರ—ಒಳಗೂಡಿತ್ತು, ಮತ್ತು ಅವರಲ್ಲಿ 60 ವರ್ಷ ಪ್ರಾಯದ ಒಬ್ಬ ಸಹೋದರನೂ ಇದ್ದನು!”
19 ಸಾಪ್ತಾಹಿಕ ಸಭಾ ಕೂಟಗಳಿಗಾಗಿರುವ ಗಣ್ಯತೆಯ ಕುರಿತಾಗಿ ಏನು? ಕಾಶ್ವಾಶ್ವಾ ಜಾಂಬಾ, ತನ್ನ 70ರ ಪ್ರಾಯದಲ್ಲಿರುವ ಒಬ್ಬ ದುರ್ಬಲ ಸಹೋದರಿಯಾಗಿದ್ದಾಳೆ. ನಮೀಬಿಯದ ರುಂಡುವಿನಲ್ಲಿರುವ ರಾಜ್ಯ ಸಭಾಗೃಹದಿಂದ ಸುಮಾರು ಐದು ಕಿಲೊಮೀಟರುಗಳಷ್ಟು ದೂರವಿರುವ ಕೈಸೋಸೋಸಿ ಎಂಬ ಚಿಕ್ಕ ಹಳ್ಳಿಯಲ್ಲಿ ಆಕೆ ಜೀವಿಸುತ್ತಾಳೆ. ಕೂಟಗಳಿಗೆ ಹಾಜರಾಗಲಿಕ್ಕಾಗಿ—ಹೋಗಿಬರಲು—ಮರಗಾಡುಗಳ ಮೂಲಕ ಆಕೆ ಹತ್ತು ಕಿಲೊಮೀಟರುಗಳಷ್ಟು ನಡೆಯುತ್ತಾಳೆ. ಈ ದಾರಿಯಲ್ಲಿ ಬರುವಾಗ ಇತರರನ್ನು ದೋಚಲಾಗಿದೆ, ಆದರೆ ಕಾಶ್ವಾಶ್ವಾ ಕ್ರಮವಾಗಿ ಕೂಟಗಳಿಗೆ ಹಾಜರಾಗುತ್ತಾಳೆ. ಅಧಿಕಾಂಶ ಕೂಟಗಳು, ಅವಳಿಗೆ ಅರ್ಥವಾಗದಿರುವ ಭಾಷೆಗಳಲ್ಲಿ ನಡೆಸಲ್ಪಡುತ್ತವೆ. ಹಾಗಾದರೆ ಆಕೆ ಹಾಜರಾಗುವುದರಿಂದ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುತ್ತಾಳೆ? “ಶಾಸ್ತ್ರವಚನಗಳನ್ನು ಅನುಸರಿಸುವ ಮೂಲಕ, ಆ ಭಾಷಣವು ಯಾವುದರ ಕುರಿತಾಗಿದೆ ಎಂದು ಕಂಡುಕೊಳ್ಳಲು ನಾನು ಪ್ರಯತ್ನಿಸುತ್ತೇನೆ” ಎಂದು ಕಾಶ್ವಾಶ್ವಾ ಹೇಳುತ್ತಾಳೆ. ಆದರೆ ಆಕೆ ಅನಕ್ಷರಸ್ಥೆಯಾಗಿರುವುದರಿಂದ, ಶಾಸ್ತ್ರವಚನಗಳನ್ನು ಹೇಗೆ ಅನುಸರಿಸುತ್ತಾಳೆ? “ನನಗೆ ಬಾಯಿಪಾಠವಾಗಿ ಗೊತ್ತಿರುವ ಶಾಸ್ತ್ರವಚನಗಳಿಗೆ ನಾನು ಕಿವಿಗೊಡುತ್ತೇನೆ” ಎಂದು ಆಕೆ ಹೇಳುತ್ತಾಳೆ. ಮತ್ತು ಅನೇಕ ವರ್ಷಗಳಿಂದ, ಆಕೆ ಅನೇಕ ಶಾಸ್ತ್ರವಚನಗಳನ್ನು ತನ್ನ ಸ್ಮರಣೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾಳೆ. ಬೈಬಲನ್ನು ಉಪಯೋಗಿಸಲಿಕ್ಕಾಗಿರುವ ತನ್ನ ಸಾಮರ್ಥ್ಯವನ್ನು ಉತ್ತಮಗೊಳಿಸಿಕೊಳ್ಳಲು, ಸಭೆಯಿಂದ ಏರ್ಪಡಿಸಲ್ಪಟ್ಟ ಸಾಕ್ಷರತಾ ತರಗತಿಗೆ ಆಕೆ ಹಾಜರಾಗುತ್ತಾಳೆ. “ಕೂಟಗಳಿಗೆ ಹಾಜರಾಗಲು ನಾನು ಇಷ್ಟಪಡುತ್ತೇನೆ” ಎಂದು ಆಕೆ ಹೇಳುತ್ತಾಳೆ. “ಅಲ್ಲಿ ಯಾವಾಗಲೂ ಕಲಿಯಲು ಹೊಸ ವಿಷಯಗಳಿರುತ್ತವೆ. ಸಹೋದರ ಸಹೋದರಿಯರೊಂದಿಗೆ ಕೂಡಿಬರಲು ನಾನು ಇಷ್ಟಪಡುತ್ತೇನೆ. ನನಗೆ ಅವರೆಲ್ಲರೊಂದಿಗೆ ಮಾತಾಡಲು ಸಾಧ್ಯವಿಲ್ಲದಿರುವುದಾದರೂ, ಅವರು ಯಾವಾಗಲೂ ನನ್ನ ಬಳಿಗೆ ಬಂದು, ನನ್ನನ್ನು ಅಭಿವಂದಿಸುತ್ತಾರೆ. ಮತ್ತು ಅತಿ ಪ್ರಾಮುಖ್ಯವಾಗಿ, ಕೂಟಗಳಿಗೆ ಹಾಜರಾಗುವ ಮೂಲಕ, ನಾನು ಯೆಹೋವನ ಹೃದಯವನ್ನು ಸಂತೋಷಪಡಿಸುತ್ತಿದ್ದೇನೆ ಎಂದು ನನಗೆ ತಿಳಿದಿದೆ.”
20. ನಾವು ನಮ್ಮ ಕ್ರೈಸ್ತ ಕೂಡಿಬರುವಿಕೆಗಳನ್ನು ಏಕೆ ಬಿಟ್ಟುಬಿಡಬಾರದು?
20 ಕಾಶ್ವಾಶ್ವಾಳಂತೆ, ಭೂಮಿಯಾದ್ಯಂತವಿರುವ ಲಕ್ಷಾಂತರ ಮಂದಿ ಯೆಹೋವನ ಆರಾಧಕರು, ಕ್ರೈಸ್ತ ಕೂಡಿಬರುವಿಕೆಗಳಿಗಾಗಿ ಪ್ರಶಂಸಾರ್ಹ ಗಣ್ಯತೆಯನ್ನು ತೋರಿಸುತ್ತಾರೆ. ಸೈತಾನನ ಲೋಕವು ತನ್ನ ನಾಶನದ ಕಡೆಗೆ ಮುನ್ನುಗ್ಗುತ್ತಿರುವಾಗ, ನಾವು ಒಟ್ಟಾಗಿ ಕೂಡಿಬರುವುದನ್ನು ಬಿಟ್ಟುಬಿಡಲು ಪ್ರಯತ್ನಿಸಸಾಧ್ಯವಿಲ್ಲ. ಅದಕ್ಕೆ ಬದಲಾಗಿ, ನಾವು ಆತ್ಮಿಕವಾಗಿ ಎಚ್ಚರವಾಗಿದ್ದು, ಕೂಟಗಳು, ಸಮ್ಮೇಳನಗಳು, ಮತ್ತು ಅಧಿವೇಶನಗಳಿಗೆ ಆಳವಾದ ಗಣ್ಯತೆಯನ್ನು ತೋರಿಸೋಣ. ಅದು ಯೆಹೋವನ ಹೃದಯವನ್ನು ಸಂತೋಷಗೊಳಿಸುತ್ತದೆ ಮಾತ್ರವಲ್ಲ, ನಿತ್ಯಜೀವಕ್ಕೆ ನಡೆಸುವ ದೈವಿಕ ಬೋಧನೆಯಲ್ಲಿ ನಾವು ಪಾಲಿಗರಾಗುವಾಗ, ಅದು ನಮಗೆ ಸಮೃದ್ಧವಾಗಿ ಪ್ರಯೋಜನವನ್ನು ತರುವುದು.—ಜ್ಞಾನೋಕ್ತಿ 27:11; ಯೆಶಾಯ 48:17, 18; ಮಾರ್ಕ 13:35-37.
ಪುನರ್ವಿಮರ್ಶೆಯ ಪ್ರಶ್ನೆಗಳು
◻ ಕ್ರೈಸ್ತ ಕೂಡಿಬರುವಿಕೆಗಳಿಗೆ ಹಾಜರಾಗುವುದು ಒಂದು ಸುಯೋಗವಾಗಿದೆ ಏಕೆ?
◻ ಹಾಜರಿರುವವರೆಲ್ಲರೂ ಭಕ್ತಿವೃದ್ಧಿಮಾಡುವ ಕೂಟಕ್ಕೆ ಹೇಗೆ ನೆರವನ್ನು ನೀಡಸಾಧ್ಯವಿದೆ?
◻ ಯೇಸು ಕ್ರಿಸ್ತನು ಎದ್ದುಕಾಣುವಂತಹ ಯಾವ ಮಾದರಿಯನ್ನಿಟ್ಟನು?
◻ ಕಡಿಮೆ ಸಂಪದ್ಭರಿತ ದೇಶಗಳಲ್ಲಿನ ಸಹೋದರರಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?
[ಪುಟ 17 ರಲ್ಲಿರುವ ಚೌಕ]
ಅವರು ಸಾಪ್ತಾಹಿಕ ಕೂಟಗಳನ್ನು ಗಣ್ಯಮಾಡುತ್ತಾರೆ
ಕೋಟಿಗಟ್ಟಲೆ ಜನರು, ಬಡತನ ಹಾಗೂ ದುಷ್ಕೃತ್ಯದಿಂದ ಬಾಧಿಸಲ್ಪಟ್ಟಿರುವ ನಗರಗಳಲ್ಲಿ ಜೀವಿಸುತ್ತಾರೆ. ಅಂತಹ ಪರಿಸ್ಥಿತಿಗಳ ಎದುರಿನಲ್ಲಿಯೂ, ಅವರ ನಡುವೆಯಿರುವ ನಿಜ ಕ್ರೈಸ್ತರು, ಕ್ರೈಸ್ತ ಕೂಡಿಬರುವಿಕೆಗಳಿಗಾಗಿ ಪ್ರಶಂಸಾರ್ಹ ಗಣ್ಯತೆಯನ್ನು ತೋರಿಸುತ್ತಾರೆ. ದಕ್ಷಿಣ ಆಫ್ರಿಕದ ಕಾವ್ಟೆಂಗ್ನ ಸಾವೆಟೊ ಸಭೆಗಳಲ್ಲೊಂದರಲ್ಲಿ ಸೇವೆಮಾಡುತ್ತಿರುವ ಹಿರಿಯನೊಬ್ಬನು ವರದಿಸುವುದು: “60 ಮಂದಿ ಸಾಕ್ಷಿಗಳು ಹಾಗೂ ಅಸ್ನಾನಿತ ಪ್ರಚಾರಕರಿರುವ ಒಂದು ಸಭೆಯಲ್ಲಿ, ನಮ್ಮ ಕೂಟಗಳಿಗೆ 70 ಮತ್ತು 80ರ ಮಧ್ಯೆ ಮತ್ತು ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಹಾಜರಿಯು ಇರುತ್ತದೆ. ಕೂಟಗಳಿಗೆ ಹಾಜರಾಗಲಿಕ್ಕಾಗಿ ಸಹೋದರ ಸಹೋದರಿಯರು ಬಹಳ ದೂರ ಪ್ರಯಾಣಿಸುವುದಿಲ್ಲವಾದರೂ, ಸಾವೆಟೊದ ಈ ಭಾಗದಲ್ಲಿರುವ ಪರಿಸ್ಥಿತಿಯು ಭಯಾನಕವಾಗಿದೆ. ಕೂಟವೊಂದಕ್ಕೆ ನಡೆದು ಬರುತ್ತಿದ್ದಾಗ, ಸಹೋದರನೊಬ್ಬನಿಗೆ ಬೆನ್ನಿನ ಭಾಗದಲ್ಲಿ ಇರಿಯಲಾಯಿತು. ಕಡಿಮೆಪಕ್ಷ ಇಬ್ಬರು ಸಹೋದರಿಯರನ್ನು ಎಳೆದುಕೊಂಡುಹೋಗಿ, ಅವರನ್ನು ದೋಚುವ ಪ್ರಯತ್ನವನ್ನು ಮಾಡಲಾಯಿತು. ಆದರೆ ಇದು ಅವರನ್ನು ಕೂಟಗಳಿಗೆ ಬರುವುದರಿಂದ ತಡೆಯುವುದಿಲ್ಲ. ಆದಿತ್ಯವಾರಗಳಂದು, ಕೂಟಗಳನ್ನು ಪ್ರಾರ್ಥನೆಯೊಂದಿಗೆ ಮುಕ್ತಾಯಗೊಳಿಸಿದ ಬಳಿಕ, ಸ್ವಲ್ಪ ಸಮಯದ ವರೆಗೆ ರಾಜ್ಯ ಸಂಗೀತ ಅಭ್ಯಾಸವನ್ನು ನಾವು ನಡಿಸುತ್ತೇವೆ. ಕಡಿಮೆಪಕ್ಷ 95 ಪ್ರತಿಶತ ಮಂದಿ ಕ್ರಮವಾಗಿ ಉಳಿಯುತ್ತಾರೆ ಮತ್ತು ಮುಂದಿನ ವಾರದ ಕೂಟಗಳಲ್ಲಿ ಉಪಯೋಗಿಸಲ್ಪಡಲಿರುವ ಎಲ್ಲ ಸಂಗೀತಗಳನ್ನು ಹಾಡುತ್ತಾರೆ. ಇದು ಹೊಸದಾಗಿ ಆಸಕ್ತರಾದವರಿಗೆ, ಸಂಗೀತಗಳನ್ನು ಕಲಿಯಲು ಮತ್ತು ಜೊತೆಗೂಡಿ ಹಾಡಲು ಸಹಾಯ ಮಾಡುತ್ತದೆ.”
ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರಿಗೆ, ಬೇರೆ ಅಡಚಣೆಗಳಿವೆ—ಒಂದು ವಾರಕ್ಕೆ ಮೂರು ಸಲ ಕೂಟಗಳಿಗೆ ಹಾಜರಾಗಲಿಕ್ಕಾಗಿ, ಅವರು ಬಹಳ ದೂರ ಪ್ರಯಾಣಿಸಬೇಕಾಗಿದೆ. ಬಾಟ್ಸ್ವಾನದ ಲೊಬಾಟ್ಸೀಯಲ್ಲಿರುವ ರಾಜ್ಯ ಸಭಾಗೃಹದಿಂದ 15 ಕಿಲೊಮೀಟರುಗಳಷ್ಟು ದೂರದಲ್ಲಿ ಒಬ್ಬ ಆಸಕ್ತ ದಂಪತಿಗಳು ವಾಸಿಸುತ್ತಾರೆ. ಕಳೆದ ವರ್ಷದಿಂದ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಕೂಟಗಳಿಗೆ ಕ್ರಮವಾಗಿ ಹಾಜರಾಗಿದ್ದಾರೆ. ಕುಟುಂಬಕ್ಕೆ ಬೆಂಬಲ ನೀಡಲಿಕ್ಕಾಗಿ ಗಂಡನು ಪಾದರಕ್ಷೆಗಳನ್ನು ರಿಪೇರಿ ಮಾಡುತ್ತಾನೆ. ಅವರು ಕೂಟಗಳಿಗೆ ಹೋಗಿಬರುವ ಖರ್ಚನ್ನು ಸರಿದೂಗಿಸಿ, ಕುಟುಂಬದ ಆದಾಯಕ್ಕೆ ಹೆಚ್ಚಿನ ಸಹಾಯ ಮಾಡಲಿಕ್ಕಾಗಿ, ಹೆಂಡತಿಯು ಚಿಕ್ಕಪುಟ್ಟ ಸಾಮಾನುಗಳನ್ನು ಮಾರುತ್ತಾಳೆ.
ಇತ್ತೀಚಿನ ಬೇಸಗೆಯ ಒಂದು ಸಂಜೆ, ಸರ್ಕಿಟ್ ಮೇಲ್ವಿಚಾರಕರೊಂದಿಗಿನ ಕೂಟವೊಂದರ ಬಳಿಕ, ರಾತ್ರಿ 9:00 ಗಂಟೆಗೆ ಬಸ್ ಸ್ಟಾಪಿನಲ್ಲಿ ಈ ಕುಟುಂಬವು ಒಂಟಿಯಾಗಿ ನಿಂತಿತ್ತು. ಪ್ರತಿಕೂಲ ಹವಾಮಾನದ ಕಾರಣದಿಂದ, ಬಸ್ಗಳು ಮುಂಚಿತವಾಗಿಯೇ ನಿಂತುಹೋಗಿದ್ದವು. ಪೊಲೀಸ್ ಅಧಿಕಾರಿಯೊಬ್ಬನು ತನ್ನ ವ್ಯಾನನ್ನು ನಿಲ್ಲಿಸಿ, ಏನಾಯಿತೆಂದು ಅವರನ್ನು ಕೇಳಿದನು. ಅವರ ಅವಸ್ಥೆಯ ಕುರಿತು ಕೇಳಿಸಿಕೊಂಡ ಬಳಿಕ, ಅವನು ಅವರ ಮೇಲೆ ಕರುಣೆ ತೋರಿಸಿ, 15 ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸಿ, ಅವರನ್ನು ಮನೆಗೆ ತಲಪಿಸಿದನು. ಅಸ್ನಾನಿತ ಪ್ರಚಾರಕಳಾಗಿರುವ ಆ ಹೆಂಡತಿಯು ತನ್ನ ಗಂಡನಿಗೆ ಹೇಳಿದ್ದು: “ನೋಡಿ, ನಾವು ಕೂಟಗಳಿಗೆ ಪ್ರಥಮ ಸ್ಥಾನವನ್ನು ಕೊಡುವಲ್ಲಿ, ಯೆಹೋವನು ಯಾವಾಗಲೂ ಒದಗಿಸುವಿಕೆಯನ್ನು ಮಾಡುತ್ತಾನೆ.” ಈಗ ಗಂಡನು ಸಹ, ಸುವಾರ್ತೆಯ ಒಬ್ಬ ಪ್ರಚಾರಕನಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ.
[ಪುಟ 18 ರಲ್ಲಿರುವ ಚಿತ್ರ]
ರೊಮೇನಿಯದಲ್ಲಿರುವ ಈ ಸಾಕ್ಷಿಗಳಂತಹ ಸಾಕ್ಷಿಗಳು, ಕ್ರೈಸ್ತ ಕೂಡಿಬರುವಿಕೆಗಳಿಗಾಗಿ ಗಣ್ಯತೆಯ ಒಂದು ಅತ್ಯುತ್ತಮ ಮಾದರಿಯನ್ನಿಟ್ಟರು