ನನ್ನ ಹೃದಯವು ಕೃತಜ್ಞತೆಯಿಂದ ತುಂಬಿತುಳುಕುತ್ತದೆ
ಜಾನ್ ವಿನ್ ಅವರಿಂದ ಹೇಳಲ್ಪಟ್ಟಂತೆ
ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹೋಗುವುದನ್ನು ನಾನು ಎಷ್ಟು ಬಾರಿ ಪ್ರತಿರೋಧಿಸಿದ್ದೇನೆ! ಕೂಟಗಳಿಗೆ ಹಾಜರಾಗುವುದನ್ನು ತಪ್ಪಿಸಿಕೊಳ್ಳಲಿಕ್ಕಾಗಿ, ಹೊಟ್ಟೆನೋವಿನ ಅಥವಾ ತಲೆನೋವಿನ—ಯಾವುದಾದರೊಂದು ಕಾರಣ—ಸೋಗುಹಾಕುತ್ತಿದ್ದೆ. ಆದರೆ ನನ್ನ ತಾಯಿಯ ದೃಢಚಿತ್ತವು, ಯಾವಾಗಲೂ ಆ ಕಾಯಿಲೆಗಳನ್ನು ತತ್ಕ್ಷಣವೇ ಮಾಯಮಾಡಿತು. ಮತ್ತು ಅವರು ಒಬ್ಬ ವೃದ್ಧ ಸಂಗಾತಿಯೊಂದಿಗೆ ದೇವರ ವಾಕ್ಯವನ್ನು ಚರ್ಚಿಸುತ್ತಾ ಹೋಗುತ್ತಿದ್ದಾಗ, ಅದಕ್ಕೆ ಕಿವಿಗೊಡುತ್ತಾ ನಾನು ಅವರೊಂದಿಗೆ ಮೂರು ಕಿಲೊಮೀಟರ್ಗಳಷ್ಟು ದೂರದಲ್ಲಿದ್ದ ರಾಜ್ಯ ಸಭಾಗೃಹಕ್ಕೆ ಹೋಗುತ್ತಿದ್ದದ್ದು ನನಗೆ ಗೊತ್ತು.
ಇದು ನನಗೆ ಒಂದು ಅಮೂಲ್ಯವಾದ ಪಾಠವನ್ನು ಕಲಿಸಿತು: ದೇವರ ದೃಷ್ಟಿಯಲ್ಲಿ ಯಾವುದು ಸರಿಯಾಗಿದೆಯೋ ಅದಕ್ಕಾಗಿ ಹೆತ್ತವರು, ದೃಢಚಿತ್ತರಾಗಿರುವುದನ್ನು—ಒಂದು ಪ್ರೀತಿಪೂರ್ಣ ವಿಧದಲ್ಲಿ—ಎಂದಿಗೂ ನಿಲ್ಲಿಸಬಾರದು. (ಜ್ಞಾನೋಕ್ತಿ 29:15, 17) ‘ನಾವು ಸಭೆಯಾಗಿ ಕೂಡಿಕೊಳ್ಳುವದನ್ನು ಬಿಟ್ಟುಬಿಡಬಾರದು’ ಎಂಬ ಕಟ್ಟಳೆಯನ್ನು ಅವರು ಎಂದಿಗೂ ಮರೆಯಬಾರದು. (ಇಬ್ರಿಯ 10:25) ನನ್ನ ಜೀವಿತದ ಕಡೆಗೆ ನಾನು ಹಿನ್ನೋಟ ಬೀರುವಾಗ, ನಾನು ಅತ್ಯುತ್ತಮವಾದುದನ್ನು ಮಾಡುವಂತೆ ತಾಯಿಯು ನನ್ನನ್ನು ಹುರಿದುಂಬಿಸಿದ್ದಕ್ಕಾಗಿ ನಾನೆಷ್ಟು ಕೃತಜ್ಞನು!
ಉತ್ತಮ ಮಾದರಿಗಳಿಗಾಗಿ ಕೃತಜ್ಞನು
ನನ್ನ ತಂದೆ ಒಬ್ಬ ಅವಿಶ್ವಾಸಿಯಾಗಿದ್ದರೂ, ನನ್ನ ತಾಯಿ ಒಬ್ಬ ಬೈಬಲ್ ವಿದ್ಯಾರ್ಥಿಯಾದಾಗ—ಆಗ ಯೆಹೋವನ ಸಾಕ್ಷಿಗಳು ಹೀಗೆ ಪ್ರಸಿದ್ಧರಾಗಿದ್ದರು—ತಾಯಿಯ ನಂಬಿಕೆಯ ವಿಷಯದಲ್ಲಿ ಅವರು ಸಹನಶೀಲರಾಗಿದ್ದರು. 1913ರಲ್ಲಿ ವಾಚ್ ಟವರ್ ಸೊಸೈಟಿಯ ಮೊದಲ ಅಧ್ಯಕ್ಷರಾದ ಚಾರ್ಲ್ಸ್ ಟಿ. ರಸಲ್ರಿಂದ ಕೊಡಲ್ಪಟ್ಟ “ಸಮಾಧಿಯ ಆಚೆ” ಎಂಬ ಭಾಷಣವನ್ನು ಕೇಳಲು ಹೋದರು. ಆದರೂ, ಅವರು ತಡವಾಗಿ ತಲಪಿದ್ದರು ಮತ್ತು ಎಲ್ಲ ಆಸನಗಳು ಭರ್ತಿಯಾಗಿದ್ದವು. ಆದುದರಿಂದ, ತಡವಾಗಿ ಬಂದ ಇತರರೊಂದಿಗೆ ಅವರು ವೇದಿಕೆಯ ಬಳಿ, ಪಾಸ್ಟರ್ ರಸಲರ ಪಕ್ಕದಲ್ಲಿಯೇ ಕುಳಿತುಕೊಳ್ಳುವಂತೆ ಆಮಂತ್ರಿಸಲ್ಪಟ್ಟರು. ಆ ಭಾಷಣವು ಅವರನ್ನು ಬಹಳವಾಗಿ ಪ್ರಭಾವಿಸಿತು. ಮರುದಿನ ಅದು ಸ್ಥಳಿಕ ವಾರ್ತಾಪತ್ರಿಕೆಯಲ್ಲಿ ಪ್ರಕಾಶಿಸಲ್ಪಟ್ಟಿತು, ಮತ್ತು ಅವರು ಅದರ ಒಂದು ಪ್ರತಿಯನ್ನು ಇಟ್ಟುಕೊಂಡು, ಪುನಃ ಪುನಃ ಅದನ್ನು ಓದಿದರು.
ಕೂಟದ ಬಳಿಕ ತಾಯಿಯವರು ಒಂದು ಚೂರು ಕಾಗದದಲ್ಲಿ ತಮ್ಮ ಹೆಸರನ್ನು ಬರೆದುಕೊಟ್ಟು ಬಂದರು, ಮತ್ತು ಬೇಗನೆ ಒಬ್ಬ ಬೈಬಲ್ ವಿದ್ಯಾರ್ಥಿಯು ಅವರನ್ನು ಸಂಪರ್ಕಿಸಿದನು. ಸಕಾಲದಲ್ಲಿ, ಇಂಗ್ಲೆಂಡ್ನ ಗ್ಲಾಸ್ಟರ್ನಲ್ಲಿರುವ ನಮ್ಮ ಊರಿನಲ್ಲಿ ಅವರು ಮನೆಯಿಂದ ಮನೆಗೆ ಬೈಬಲ್ ಟ್ರ್ಯಾಕ್ಟ್ಗಳನ್ನು ಹಂಚಲಾರಂಭಿಸಿದರು. ನನ್ನ ಇಬ್ಬರು ಅಕ್ಕಂದಿರು ಹಾಗೂ ನಾನು ತುಂಬ ಚಿಕ್ಕವರಾಗಿದ್ದ ಸಮಯದಿಂದಲೂ, ನಾವು ತಾಯಿಯೊಂದಿಗೆ ಸಾರುವ ಕೆಲಸದಲ್ಲಿ ಪಾಲ್ಗೊಂಡೆವು.
ಒಬ್ಬ ಅತ್ಯುತ್ಸಾಹಿ ಬೈಬಲ್ ವಿದ್ಯಾರ್ಥಿಯಾದ ಹ್ಯಾರಿ ಫ್ರಾನ್ಸಿಸ್, ಗ್ಲಾಸ್ಟರ್ಗೆ ಸ್ಥಳಾಂತರಿಸಿದಾಗ, ತಾಯಿಯವರು ಅವರಿಗೆ ಹೃತ್ಪೂರ್ವಕವಾದ ಸ್ವಾಗತವನ್ನು ಕೋರಿದರು. ಬೇಗನೆ, ಅವರು ನನ್ನಲ್ಲಿ ವೈಯಕ್ತಿಕ ಆಸಕ್ತಿಯನ್ನು ತೆಗೆದುಕೊಂಡರು, ಮತ್ತು ಅವರ ಉತ್ತೇಜನವು, ನಾನು ಅನಂತರ ಒಬ್ಬ ಪಯನೀಯರನಾಗಿ—ಪೂರ್ಣ ಸಮಯದ ಶುಶ್ರೂಷಕರು ಹೀಗೆ ಕರೆಯಲ್ಪಡುತ್ತಾರೆ—ಪರಿಣಮಿಸುವುದರಲ್ಲಿ ಒಂದು ಪ್ರಮುಖ ಅಂಶವಾಗಿತ್ತು. ಸಹೋದರ ಫ್ರಾನ್ಸಿಸರ ಮಾದರಿಯು ನನಗೆ ಒಂದು ಪ್ರಮುಖ ಪಾಠವನ್ನು ಕಲಿಸಿತು: ದೊಡ್ಡವರು ಯಾವಾಗಲೂ ಚಿಕ್ಕವರನ್ನು ಪ್ರೋತ್ಸಾಹಿಸುವ ಮಾರ್ಗಗಳಿಗಾಗಿ ಹುಡುಕಬೇಕು.
ನನ್ನ ತಾಯಿ ಒಬ್ಬ ಬೈಬಲ್ ವಿದ್ಯಾರ್ಥಿಯಾದಾಗ, ಗ್ಲಾಸ್ಟರ್ನಲ್ಲಿದ್ದ ಇನ್ನಿತರರೂ ಬೈಬಲ್ ವಿದ್ಯಾರ್ಥಿಗಳಾದರು. ಆದರೂ, ಸಭೆಯಲ್ಲಿದ್ದ ಕೆಲವು ಹಿರಿಯರು ತಮ್ಮ ಕುರಿತಾಗಿ ತೀರ ಹೆಮ್ಮೆಪಟ್ಟುಕೊಳ್ಳಲಾರಂಭಿಸಿದ್ದು, ಕ್ಲಾಸಿನ—ಆಗ ಸಭೆಯು ಹೀಗೆ ಕರೆಯಲ್ಪಡುತ್ತಿತ್ತು—ಸದಸ್ಯರು ಒಬ್ಬೊಬ್ಬ ವ್ಯಕ್ತಿಯನ್ನು ಅನುಸರಿಸಲಾರಂಭಿಸಿದರು. ಒಂದು ಕೂಟದಲ್ಲಿ, ಕೆಲವು ಹಿರಿಯರಿಗೆ ಬೆಂಬಲಕೊಡಲಿಕ್ಕಾಗಿ ಕೈಯೆತ್ತುವಂತೆ ಪ್ರಚೋದಿಸುತ್ತಾ, ಕೆಲವರು ತಾಯಿಯವರಿಗೆ ಹಿಂದಿನಿಂದ ತಿವಿಯುತ್ತಿದ್ದರು. ಆದರೆ ಆ ಹಿರಿಯರು ಸರಿಯಾದ ಮಾದರಿಯನ್ನು ಇಡುತ್ತಿರಲಿಲ್ಲವೆಂಬುದು ತಾಯಿಗೆ ತಿಳಿದಿತ್ತು, ಮತ್ತು ಅವರಿಗೆ ಮತಹಾಕುವ ಬೆದರಿಕೆಗೆ ಮಣಿಯಲು ತಾಯಿ ನಿರಾಕರಿಸಿದರು. ಆ ಸಮಯದಲ್ಲಿ, 1920ಗಳ ಅಂತ್ಯಭಾಗದಲ್ಲಿ, ಅನೇಕರು ನಂಬಿಕೆಯಿಂದ ಬಿದ್ದುಹೋಗಿ, ಸತ್ಯದ ಮಾರ್ಗದಲ್ಲಿ ಇನ್ನೆಂದಿಗೂ ಮುಂದುವರಿಯಲಿಲ್ಲ. (2 ಪೇತ್ರ 2:2) ಆದರೂ, ಸಂಸ್ಥೆಯನ್ನು ನಿಷ್ಠೆಯಿಂದ ಬೆಂಬಲಿಸುವುದರಿಂದ ತಾಯಿಯವರು ಎಂದೂ ವಿಮುಖರಾಗಲಿಲ್ಲ; ಹೀಗೆ ನನಗಾಗಿ ಒಂದು ಉತ್ತಮ ಮಾದರಿಯನ್ನಿಟ್ಟರು.
ಸತ್ಯಕ್ಕಾಗಿ ನನ್ನ ನಿಲುವು
ಕಟ್ಟಕಡೆಗೆ, 1939ರ ಜೂನ್ ತಿಂಗಳಿನಲ್ಲಿ, ನಾನು 18 ವರ್ಷ ಪ್ರಾಯದವನಾಗಿದ್ದಾಗ, ರಿವರ್ ಸೆವರ್ನ್ನಲ್ಲಿ ನನಗೆ ದೀಕ್ಷಾಸ್ನಾನವಾಯಿತು. ಅದೇ ವರ್ಷ ನಾನು ಸೌಂಡ್ (ಧ್ವನಿವರ್ಧಕ) ಸೇವಕನಾಗಿಯೂ ನೇಮಿಸಲ್ಪಟ್ಟೆ. ಆ ದಿನಗಳಲ್ಲಿ ನಾವು ಒಂದು ದೊಡ್ಡ ಟ್ರಾನ್ಸ್ಕ್ರಿಪ್ಶನ್ ಯಂತ್ರವನ್ನು ಉಪಯೋಗಿಸುತ್ತಿದ್ದೆವು. ಅದು ಸಾರ್ವಜನಿಕ ಸ್ಥಳಗಳಲ್ಲಿ “ಧರ್ಮವು ಉರುಲು ಮತ್ತು ಮೋಸವಾಗಿದೆ” ಎಂಬ ಸಂದೇಶವನ್ನು ದೊಡ್ಡ ಶಬ್ದದಿಂದ ಧ್ವನಿಸುತ್ತಿತ್ತು. ಆ ಸಮಯದಲ್ಲಿ ಒತ್ತು, ಕ್ರೈಸ್ತ ಪ್ರಪಂಚದ ಕಪಟತೆ ಹಾಗೂ ಸುಳ್ಳು ಬೋಧನೆಗಳನ್ನು ಬಯಲುಪಡಿಸುವುದರ ಮೇಲಿತ್ತು.
ಒಮ್ಮೆ ನಾನು, ಒಂದು ಕಡೆಯಲ್ಲಿ “ಧರ್ಮವು ಉರುಲು ಮತ್ತು ಮೋಸವಾಗಿದೆ” ಎಂಬುದನ್ನೂ ಇನ್ನೊಂದು ಕಡೆಯಲ್ಲಿ “ದೇವರನ್ನೂ ರಾಜನಾದ ಕ್ರಿಸ್ತನನ್ನೂ ಸೇವಿಸಿರಿ” ಎಂಬುದನ್ನೂ ಘೋಷಿಸಿದ ಬ್ಯಾನರನ್ನು ಕೊಂಡೊಯ್ಯುತ್ತಿದ್ದ ಒಂದು ಮೆರವಣಿಗೆಯ ಮುಂಭಾಗದಲ್ಲಿದ್ದೆ. ತನ್ನ ಬೆನ್ನಿನ ಮೇಲೆ ಎರಡೂ ಕಡೆಗಳಲ್ಲಿ ಸಾರ್ವಜನಿಕ ಭಾಷಣವನ್ನು ಜಾಹೀರುಪಡಿಸಿದ ದೊಡ್ಡ ಪ್ರಕಟನಾ ಫಲಕ (ಪೋಸ್ಟರ್)ಗಳನ್ನು ಹೊಂದಿದ್ದ ಒಂದು ಚಿಕ್ಕ ಕುದುರೆಯು ನಮ್ಮನ್ನು ಹಿಂಬಾಲಿಸುತ್ತಿತ್ತು. ತೀರ ಧಾರ್ಮಿಕವಾಗಿದ್ದ ಗ್ಲಾಸ್ಟರ್ ನಗರದಲ್ಲಿಯೇ ಆ ಮೆರವಣಿಗೆಯು ಎಂತಹ ಒಂದು ದೃಶ್ಯವಾಗಿದ್ದಿರಬಹುದು!
ಮನೆಯಲ್ಲಿ ಹಣಕಾಸಿನ ತೊಂದರೆಗಳು ಇದ್ದರೂ, ತಾಯಿಯವರು ನನ್ನನ್ನು ಒಬ್ಬ ಪಯನೀಯರನಾಗುವಂತೆ ಪ್ರೋತ್ಸಾಹಿಸಿದರು. ಹೀಗೆ, 1939ರ ಸೆಪ್ಟೆಂಬರ್ ತಿಂಗಳಿನಲ್ಲಿ, IIನೆಯ ಲೋಕ ಯುದ್ಧದ ಆರಂಭದಲ್ಲಿ, ವಾರಿಕ್ಶರ್ನಲ್ಲಿರುವ ಒಂದು ಚಿಕ್ಕ ಪಟ್ಟಣವಾದ ಲೆಮಿಂಗ್ಟನ್ನಲ್ಲಿ ನಾನು ನನ್ನ ಪ್ರಥಮ ಪಯನೀಯರ್ ನೇಮಕಕ್ಕೆ ಆಗಮಿಸಿದೆ. ಆ ಪಟ್ಟಣವು ಅನೇಕ ನಿವೃತ್ತ ವೈದಿಕರ ವಾಸಸ್ಥಾನವಾಗಿತ್ತು.
ಆಗ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಅಧ್ಯಕ್ಷರಾಗಿದ್ದ, ಜೋಸೆಫ್ ಎಫ್. ರದರ್ಫರ್ಡರ ಭಾಷಣಗಳನ್ನು ನುಡಿಸುತ್ತಾ, ನಾವು ನಮ್ಮ ಮನೆಮನೆಯ ಶುಶ್ರೂಷೆಯಲ್ಲಿ ಕಡಿಮೆ ತೂಕವುಳ್ಳ ಫೋನೋಗ್ರಾಫ್ಗಳನ್ನು ಉಪಯೋಗಿಸಿದೆವು. ಇನ್ನೊಂದು ಕಡೆಯಲ್ಲಿ, ನಮ್ಮ ಟ್ರಾನ್ಸ್ಕ್ರಿಪ್ಶನ್ ಯಂತ್ರ (ಅದನ್ನು ಹೆಚ್ಚು ಪ್ರೇಕ್ಷಕರಿಗಾಗಿ ಮಾತ್ರ ಉಪಯೋಗಿಸಸಾಧ್ಯವಿತ್ತು)ವು ಬಹಳ ಭಾರವಾಗಿದ್ದು, ನಾವು ಅದನ್ನು ಪ್ರ್ಯಾಮ್ನಲ್ಲಿ, ಅಥವಾ ಮಕ್ಕಳ ತಳ್ಳುಬಂಡಿಯಲ್ಲಿ ಕೊಂಡೊಯ್ಯುತ್ತಿದ್ದೆವು. ಕೆಲವೊಮ್ಮೆ ಸುಳ್ಳು ಧರ್ಮವನ್ನು ಬಯಲುಪಡಿಸುತ್ತಿದ್ದ ಸಂದೇಶವನ್ನು ಕೇಳಿ ವೈದಿಕರು ಕೋಪಗೊಂಡು, ತಮ್ಮ ಕಟ್ಟಡಗಳಿಂದ ನಮ್ಮನ್ನು ಹೊರಗಟ್ಟಿದರು. ಆದರೆ ನಾವು ಎದೆಗುಂದಲಿಲ್ಲ. ಯೆಹೋವನು ನಮ್ಮ ಕೆಲಸವನ್ನು ಆಶೀರ್ವದಿಸಿದನು. ಮತ್ತು ಇಂದು ಲೆಮಿಂಗ್ಟನ್ನಲ್ಲಿ ನೂರಕ್ಕಿಂತಲೂ ಹೆಚ್ಚು ಸಾಕ್ಷಿಗಳುಳ್ಳ ಒಂದು ಸಭೆಯನ್ನು ನೋಡಸಾಧ್ಯವಿದೆ.
1941ರಲ್ಲಿ, IIನೆಯ ಲೋಕ ಯುದ್ಧವು ಪ್ರಬಲವಾದಂತೆ, ನಾನು ವೇಲ್ಸ್ಗೆ ಸ್ಥಳಾಂತರಿಸಿದೆ, ಅಲ್ಲಿ ಹಾವರ್ಫರ್ಡ್ವೆಸ್ಟ್, ಕಾರ್ಮಾರ್ತೆನ್, ಮತ್ತು ರೆಕ್ಸಮ್ ಪಟ್ಟಣಗಳಲ್ಲಿ ನಾನು ಪಯನೀಯರ್ ಸೇವೆ ಮಾಡಿದೆ. ಒಬ್ಬ ಪೂರ್ಣ ಸಮಯದ ಶುಶ್ರೂಷಕನೋಪಾದಿ ನನಗೆ ಮಿಲಿಟರಿ ಸೇವೆಯಿಂದ ವಿನಾಯಿತಿ ದೊರೆಯಿತು, ಆದರೆ ಜನರು ನಮ್ಮ ತಟಸ್ಥ ಸ್ಥಾನವನ್ನು ಗಣ್ಯಮಾಡಲಿಲ್ಲ. ಹೀಗೆ, ನನ್ನ ಸಹಭಾಗಿಯೂ ನಾನೂ, ಪಂಚಮದಳದ ಗೂಢಚಾರರೆಂದು ಆಪಾದಿಸಲ್ಪಟ್ಟೆವು. ಒಂದು ರಾತ್ರಿ, ಪೊಲೀಸರು ನಮ್ಮ ಟ್ರೈಲರ್ಗೆ ಮುತ್ತಿಗೆಹಾಕಿದರು. ಕಲ್ಲಿದ್ದಲನ್ನು ಸಲಿಕೆಯಿಂದ ದೂಡುವ ತನ್ನ ಕೆಲಸದಿಂದ ಆಗ ತಾನೇ ಹಿಂದಿರುಗಿದ್ದ ನನ್ನ ಸಹಭಾಗಿಯು, ಯಾರು ಬಂದಿದ್ದಾರೆಂಬುದನ್ನು ನೋಡಲಿಕ್ಕಾಗಿ ತನ್ನ ತಲೆಯನ್ನು ಥಟ್ಟನೆ ಹೊರಹಾಕಿದನು. ಅವನ ಮುಖವು ಕಲ್ಲಿದ್ದಲ ಧೂಳಿನಿಂದ ತುಂಬಿತ್ತು, ಮತ್ತು ಅವನು ಕಮಾಂಡೊ ಮಾದರಿಯ ದಾಳಿಗೆ ಸಿದ್ಧನಾಗಿದ್ದನೋ ಎಂಬಂತೆ ಪೊಲೀಸರಿಗೆ ಕಂಡುಬಂದನು. ಆ ಸನ್ನಿವೇಶವನ್ನು ನಾವು ವಿವರಿಸಬೇಕಾಗಿತ್ತು!
ನಾವು ನಮ್ಮ ನೇಮಕಗಳಲ್ಲಿ ಬಹಳವಾಗಿ ಆಶೀರ್ವದಿಸಲ್ಪಟ್ಟೆವು. ಒಂದು ಸಲ, ನಾವು ಕಾರ್ಮಾರ್ತೆನ್ನಲ್ಲಿದ್ದಾಗ, ಲಂಡನಿನ ಬ್ರಾಂಚ್ ಆಫೀಸಿನ ಜಾನ್ ಬಾರ್ (ಈಗ ಅವರು ಆಡಳಿತ ಮಂಡಳಿಯ ಒಬ್ಬ ಸದಸ್ಯರು) ನಮಗೆ ಉತ್ತೇಜನದಾಯಕ ಭೇಟಿಯನ್ನಿತ್ತರು. ಆ ಸಮಯದಲ್ಲಿ, ಕಾರ್ಮಾರ್ತೆನ್ನಲ್ಲಿ ಕೇವಲ ಇಬ್ಬರು ಪ್ರಚಾರಕರಿದ್ದರು; ಪ್ರಸ್ತುತ ಅಲ್ಲಿ ನೂರಕ್ಕಿಂತಲೂ ಹೆಚ್ಚು ಪ್ರಚಾರಕರಿದ್ದಾರೆ. ಪ್ರಚಲಿತವಾಗಿ ರೆಕ್ಸಮ್ ಮೂರು ಸಭೆಗಳನ್ನು ಒಳಗೊಂಡಿದೆ, ಮತ್ತು ಇತ್ತೀಚೆಗೆ ಹಾವರ್ಫರ್ಡ್ವೆಸ್ಟ್ನಲ್ಲಿ ಒಂದು ಒಳ್ಳೆಯ ರಾಜ್ಯ ಸಭಾಗೃಹವನ್ನು ಪ್ರತಿಷ್ಠಾಪಿಸುವ ಸುಯೋಗ ನನಗಿತ್ತು.—1 ಕೊರಿಂಥ 3:6.
ನನ್ನ ಶುಶ್ರೂಷೆಗಾಗಿ ಕೃತಜ್ಞನು
ನಾವು ಸೌತ್ ವೇಲ್ಸ್ನ ಸ್ವಾನ್ಸೀಯಲ್ಲಿದ್ದಾಗ, ನನ್ನ ಸಹಭಾಗಿಯಾದ ಡಾನ್ ರೆಂಡೆಲ್ಗೆ ಮಿಲಿಟರಿ ವಿನಾಯಿತಿ ದೊರೆಯಲಿಲ್ಲ. ಬೇರೆ ದೇಶಗಳಲ್ಲಿರುವ ಜೊತೆ ಕ್ರೈಸ್ತರ ವಿರುದ್ಧ ತಾನು ಆತ್ಮಸಾಕ್ಷಿಕವಾಗಿ ಯುದ್ಧ ಮಾಡುವುದಕ್ಕೆ ಹೋಗಲು ಸಾಧ್ಯವಿಲ್ಲವೆಂದು ಅವನು ವಿವರಿಸಿ ಹೇಳಿದರೂ, ಅವನನ್ನು ಸೆರೆಮನೆಗೆ ಹಾಕಲಾಯಿತು. (ಯೆಶಾಯ 2:2-4; ಯೋಹಾನ 13:34, 35) ಅವನನ್ನು ಪ್ರೋತ್ಸಾಹಿಸಲಿಕ್ಕಾಗಿ, ಹಾಗೂ ನೆರೆಹೊರೆಯವರಿಗೆ ಸಾಕ್ಷಿ ನೀಡಲಿಕ್ಕಾಗಿ, ನಾನು ಸೆರೆಮನೆಯ ಸಮೀಪದಲ್ಲಿ ಟ್ರಾನ್ಸ್ಕ್ರಿಪ್ಶನ್ ಯಂತ್ರವನ್ನಿಟ್ಟು, ಬೈಬಲ್ ಭಾಷಣಗಳನ್ನು ನುಡಿಸಿದೆ.
ಹಾಗಿದ್ದರೂ, ಸ್ಥಳಿಯ ಸ್ತ್ರೀಯರು ಇದನ್ನು ಇಷ್ಟಪಡಲಿಲ್ಲ, ಮತ್ತು ನನ್ನ ಸಂಗಡಿಗನನ್ನೂ ನನ್ನನ್ನೂ ಚೆನ್ನಾಗಿ ಥಳಿಸಲು ಸೈನಿಕರಿಗೆ ಹಣವನ್ನು ಕೊಡಲಿಕ್ಕಾಗಿ, ಚಂದಾ ಎತ್ತಿ, ಹಣವನ್ನು ಸಂಗ್ರಹಿಸಿದರು. ರಾಜ್ಯ ಸಭಾಗೃಹದಲ್ಲಿ ರಕ್ಷಣೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾ, ನಮ್ಮಿಂದ ಸಾಧ್ಯವಿರುವಷ್ಟು ವೇಗವಾಗಿ—ನಾನು ಟ್ರಾನ್ಸ್ಕ್ರಿಪ್ಶನ್ ಯಂತ್ರವಿದ್ದ ಪ್ರ್ಯಾಮನ್ನು ಸಹ ತಳ್ಳಿಕೊಂಡು ಹೋಗುತ್ತಿದ್ದೆ—ಓಡಿ, ನಾವು ಅಲ್ಲಿಂದ ತಪ್ಪಿಸಿಕೊಂಡೆವು. ಆದರೆ ನಾವು ಅಲ್ಲಿಗೆ ತಲಪಿದಾಗ, ಅದಕ್ಕೆ ಬೀಗಹಾಕಲಾಗಿತ್ತು! ಪೊಲೀಸರ ಕಾಲೋಚಿತ ಅಡ್ಡಬರುವಿಕೆಯು ಮಾತ್ರವೇ ನಮ್ಮನ್ನು ಗುರುತರವಾದ ಹೊಡೆತದಿಂದ ಕಾಪಾಡಿತು.
ಆ ಘಟನೆಯು ಪ್ರಸಿದ್ಧವಾಯಿತೆಂಬುದು ಸುವ್ಯಕ್ತ. ಸ್ವಲ್ಪ ಸಮಯಾನಂತರ ಸ್ವಾನ್ಸೀಯ ಸಮೀಪವಿರುವ ದೇಶವೊಂದರಲ್ಲಿ ನಾನು ಸಾರುತ್ತಿದ್ದಾಗ, ಒಬ್ಬ ವ್ಯಕ್ತಿಯು ಸಮ್ಮತಿಸೂಚಕವಾಗಿ ನನಗೆ ಹೇಳಿದ್ದು: “ಸ್ವಾನ್ಸೀಯಲ್ಲಿ, ತಾನು ನಂಬಿದ ವಿಷಯವನ್ನು ಧೈರ್ಯವಾಗಿ ಘೋಷಿಸಿ, ತನ್ನ ಸಂರಕ್ಷಣೆಗಾಗಿ ಪಲಾಯನಗೈಯಬೇಕಾಗಿ ಬಂದ ಆ ಯುವ ವ್ಯಕ್ತಿಯಂತೆ, ನೀವು ಯಾವುದರ ಪಕ್ಷವಹಿಸುತ್ತೀರೋ ಅದೇ ಕ್ರೈಸ್ತತ್ವವಾಗಿದೆ.” ಆ ಯುವ ವ್ಯಕ್ತಿಯು ನಾನೇ ಆಗಿದ್ದೆ ಎಂಬುದನ್ನು ತಿಳಿದು ಅವನು ಎಷ್ಟು ಆಶ್ಚರ್ಯಚಕಿತನಾದನು!
ಆ ಯುದ್ಧ ವರ್ಷಗಳಲ್ಲಿ ಪಯನೀಯರ್ ಸೇವೆಯನ್ನು ಮಾಡುವುದು ಸುಲಭವಾದದ್ದಾಗಿರಲಿಲ್ಲ. ನಮ್ಮ ಬಳಿ ಹೆಚ್ಚು ಲೌಕಿಕ ಸ್ವತ್ತುಗಳು ಇರಲಿಲ್ಲವಾದರೂ, ನಮ್ಮಲ್ಲಿ ಏನಿತ್ತೋ ಅದನ್ನು ಗಣ್ಯಮಾಡಿ, ಅದರಲ್ಲಿಯೇ ಆನಂದಿಸಿದೆವು. ನಾವು ಯಾವಾಗಲೂ ಆತ್ಮಿಕ ಆಹಾರದ ಸರಬರಾಯಿಯನ್ನು ಕ್ರಮವಾಗಿ ಪಡೆದುಕೊಂಡೆವು, ಮತ್ತು ನಾವು ಅಸ್ವಸ್ಥರಾಗಿದ್ದಾಗ ಬಿಟ್ಟು ಬೇರಾವ ಸಮಯದಲ್ಲೂ ಕೂಟಗಳಿಗೆ ತಪ್ಪಿಸಿಕೊಳ್ಳಲಿಲ್ಲ. ನಾನು ಒಂದು ಹಳೆಯ ಬೈಸಿಕಲನ್ನು ಖರೀದಿಸಿದೆ, ಮತ್ತು ಒಂದು ಫೋನೋಗ್ರಾಫನ್ನೂ ಬೈಬಲ್ ಸಾಹಿತ್ಯವನ್ನೂ ಕೊಂಡೊಯ್ಯಲಿಕ್ಕಾಗಿ ಅದರ ಮೇಲೆ ದೊಡ್ಡ ಬಾಸ್ಕೆಟ್ಗಳನ್ನು ಇರಿಸಿದೆವು. ಕೆಲವೊಮ್ಮೆ ನಾನು ಬೈಸಿಕಲ್ನ ಮೇಲೆ ದಿನವೊಂದಕ್ಕೆ 80 ಕಿಲೊಮೀಟರ್ಗಳಷ್ಟು ದೂರ ಪ್ರಯಾಣಿಸಿದೆ! ನಾನು ಸುಮಾರು ಏಳು ವರ್ಷಗಳ ವರೆಗೆ ಪಯನೀಯರ್ ಸೇವೆಯನ್ನು ಮಾಡಿದೆ, ಮತ್ತು ಆ ದಿವಸಗಳನ್ನು ಅಕ್ಕರೆಯಿಂದ ಜ್ಞಾಪಿಸಿಕೊಳ್ಳುತ್ತೇನೆ.
IIನೆಯ ಲೋಕ ಯುದ್ಧವು ಕೊನೆಗೊಂಡಾದ ಬಳಿಕ, 1946ರಲ್ಲಿ, ಬೆತೆಲ್—ತಮ್ಮ ವೈಯಕ್ತಿಕ ದೇಶಗಳಲ್ಲಿ ಯೆಹೋವನ ಸಾಕ್ಷಿಗಳ ಪ್ರಮುಖ ಸೌಕರ್ಯಗಳು ಹೀಗೆ ಕರೆಯಲ್ಪಡುತ್ತವೆ—ನಲ್ಲಿ ಕೆಲಸಮಾಡಲಿಕ್ಕಾಗಿ ಆಮಂತ್ರಿಸಲ್ಪಟ್ಟೆ. ಆಗ ನಮ್ಮ ಬೆತೆಲ್ 34 ಕ್ರೇವನ್ ಟೆರೆಸ್ನಲ್ಲಿ, ಲಂಡನ್ ಟ್ಯಾಬರ್ನ್ಯಾಕ್ಲ್ನ ಪಕ್ಕದಲ್ಲೇ ಇತ್ತು. ಅಲ್ಲಿದ್ದ ವೃದ್ಧರೊಂದಿಗಿನ ಸಹವಾಸದಲ್ಲಿ ನಾನು ಆನಂದಿಸಿದೆ. ಅವರಲ್ಲಿ ಆಲಿಸ್ ಹಾರ್ಟ್ ಅವರೂ ಸೇರಿದ್ದು, ಇವರ ತಂದೆಯಾದ ಟಾಮ್ ಹಾರ್ಟ್ ಇಂಗ್ಲೆಂಡ್ನಲ್ಲಿ ಮೊತ್ತಮೊದಲ ಸಾಕ್ಷಿಯಾಗಿದ್ದರೆಂದು ನಂಬಲಾಗುತ್ತದೆ.
ಒಬ್ಬ ನಂಬಿಗಸ್ತ ಸಂಗಾತಿಯನ್ನು ಪಡೆದುಕೊಳ್ಳುವುದು
1956ರಲ್ಲಿ, ಒಬ್ಬ ಪಯನೀಯರಳಾದ ಎಟೀಯನ್ನು ವಿವಾಹವಾಗಲಿಕ್ಕಾಗಿ ನಾನು ಬೆತೆಲನ್ನು ಬಿಟ್ಟೆ. ಲಂಡನಿನಲ್ಲಿ ವಾಸಿಸುತ್ತಿದ್ದ ತನ್ನ ಅಕ್ಕನನ್ನು ಭೇಟಿಮಾಡಲಿಕ್ಕಾಗಿ ಎಟೀ ನೆದರ್ಲೆಂಡ್ಸ್ನಿಂದ ಬಂದಿದ್ದಾಗ, ನಾನು ಅವಳೊಂದಿಗೆ ಪರಿಚಿತನಾಗಿದ್ದೆ. ಯುದ್ಧದ ಅಂತ್ಯದ ಸಮಯದಲ್ಲಿ, ದಕ್ಷಿಣ ನೆದರ್ಲೆಂಡ್ಸ್ನ ಟಿಲ್ಬರ್ಗ್ನಲ್ಲಿದ್ದ ವಾಣಿಜ್ಯ ಕಾಲೇಜೊಂದರಲ್ಲಿ, ಎಟೀ ಟೈಪಿಂಗ್ ಹಾಗೂ ಶಾರ್ಟ್ಹ್ಯಾಂಡ್ (ಶೀಘ್ರಲಿಪಿ) ಕಲಿಸಿದಳು. ಒಂದು ದಿನ, ಅವಳು ಸುರಕ್ಷಿತವಾಗಿ ತಲಪುವಳೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಇನ್ನೊಬ್ಬ ಅಧ್ಯಾಪಕನು ಅವಳೊಂದಿಗೆ ಸೈಕಲಿನಲ್ಲಿ ಮನೆಯ ತನಕ ಬರಲು ಒಪ್ಪಿಕೊಂಡನು. ಅವನು ಒಬ್ಬ ರೋಮನ್ ಕ್ಯಾತೊಲಿಕನಾಗಿದ್ದನು. ಅವರು ಮನೆಗೆ ತಲಪಿದಾಗ, ಎಟೀಯ ಪ್ರಾಟೆಸ್ಟಂಟ್ ಹೆತ್ತವರೊಂದಿಗೆ ಒಂದು ಚರ್ಚೆಯು ನಡೆಯಿತು. ಅವರ ಮಧ್ಯೆ ಗೆಳೆತನವು ಬೆಳೆಯಿತು, ಮತ್ತು ಆ ಅಧ್ಯಾಪಕನು ಅವರ ಮನೆಗೆ ಆಗಿಂದಾಗ್ಗೆ ಭೇಟಿ ನೀಡುವ ಭೇಟಿಗಾರನಾದನು.
ಯುದ್ಧವು ಕೊನೆಗೊಂಡ ಕೂಡಲೆ, “ನಾನು ಸತ್ಯವನ್ನು ಕಂಡುಕೊಂಡಿದ್ದೇನೆ!” ಎಂದು ಕೂಗುತ್ತಾ ಈ ಅಧ್ಯಾಪಕನು ಎಟೀಯ ಮನೆಗೆ ಬಂದನು.
“ನೀನು ರೋಮನ್ ಕ್ಯಾತೊಲಿಕನಾಗಿದ್ದಾಗ ನಿನ್ನಲ್ಲಿ ಸತ್ಯವಿತ್ತೆಂದು ನೀನು ಹೇಳಿದಿಯೆಂದು ನಾನು ಭಾವಿಸಿದೆ!” ಎಂದು ಎಟೀಯ ತಂದೆ ಉತ್ತರಿಸಿದರು.
“ಇಲ್ಲ!” ಎಂದು ಅವನು ಉದ್ರೇಕದಿಂದ ಪ್ರತ್ಯುತ್ತರಿಸಿದನು. “ಸತ್ಯವಿರುವುದು ಯೆಹೋವನ ಸಾಕ್ಷಿಗಳ ಬಳಿಯೇ!”
ಆ ಸಂಜೆ ಹಾಗೂ ಅದರ ಆನಂತರದ ಸಂಜೆಗಳು ಗಹನವಾದ ಬೈಬಲ್ ಚರ್ಚೆಯಲ್ಲಿ ಕಳೆಯಲ್ಪಟ್ಟವು. ತದನಂತರ ಬೇಗನೆ ಎಟೀ ಪಯನೀಯರಳಾದಳು. ತನ್ನ ಶುಶ್ರೂಷೆಯಲ್ಲಿ ಅವಳು ತೀವ್ರ ವಿರೋಧವನ್ನು ಸಹ ಎದುರಿಸಿದಳು; ನೆದರ್ಲೆಂಡ್ಸ್ನಲ್ಲಿ ಆ ವಿರೋಧವು ರೋಮನ್ ಕ್ಯಾತೊಲಿಕ್ ಚರ್ಚಿನಿಂದ ಬಂತು. ಅವಳು ಮನೆಯಿಂದ ಮನೆಗೆ ಹೋಗುತ್ತಿದ್ದಾಗ, ಪಾದ್ರಿಗಳಿಂದ ಪ್ರಚೋದಿತರಾದ ಮಕ್ಕಳು, ಅವಳ ಸಂಭಾಷಣೆಗಳಿಗೆ ಭಂಗತರುತ್ತಿದ್ದರು, ಮತ್ತು ಒಂದು ಸಂದರ್ಭದಲ್ಲಿ ಅವರು ಅವಳ ಬೈಸಿಕಲನ್ನು ಮುರಿದುಹಾಕಿದರು. ಆ ಬೈಸಿಕಲನ್ನು ಅವಳು ರಿಪೇರಿಮಾಡುವವನ ಬಳಿಗೆ ಕೊಂಡೊಯ್ದಳು; ಈ ಮುಂಚೆ ಅವನು ಅವಳಿಂದ ಒಂದು ಪುಸ್ತಿಕೆಯನ್ನು ಪಡೆದುಕೊಂಡಿದ್ದನು. “ಈ ಮಕ್ಕಳು ಏನು ಮಾಡಿದ್ದಾರೆಂದು ನೋಡಿ!” ಎಂದು ಅವಳು ಕಣ್ಣೀರುಭರಿತಳಾಗಿ ಹೇಳಿದಳು.
“ನೀವೆಂದೂ ಬಿಟ್ಟುಕೊಡಬೇಡಿ” ಎಂದು ಆ ಮನುಷ್ಯನು ದಯಾಪರನಾಗಿ ಉತ್ತರಿಸಿದನು. “ನೀವು ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಿ. ನಾನು ನಿಮ್ಮ ಬೈಸಿಕಲನ್ನು ಹಣಪಡೆದುಕೊಳ್ಳದೆ ರಿಪೇರಿಮಾಡಿಕೊಡುವೆ.” ಮತ್ತು ಅವನು ಹಣಪಡೆದುಕೊಳ್ಳದೆ ರಿಪೇರಿಮಾಡಿಕೊಟ್ಟನು.
ಪಾದ್ರಿಗಳ ಮಂದೆಯಲ್ಲಿರುವ ಕೆಲವರೊಂದಿಗೆ ತಾನು ಬೈಬಲನ್ನು ಅಭ್ಯಾಸಿಸಲು ಆರಂಭಿಸುವ ವರೆಗೆ, ಪಾದ್ರಿಗಳಿಗೆ ತಮ್ಮ ಮಂದೆಗಳಲ್ಲಿ ಯಾವುದೇ ಆಸಕ್ತಿಯಿರಲಿಲ್ಲವೆಂಬುದನ್ನು ಎಟೀ ಕಂಡುಕೊಂಡಳು. ತದನಂತರ ಪಾದ್ರಿಗಳು ಹಾಗೂ ನನ್ಗಳು, ಬೈಬಲಿನಲ್ಲಿ ಹಾಗೂ ಯೆಹೋವನಲ್ಲಿ—ಎರಡರಲ್ಲಿಯೂ—ಜನರಿಗಿದ್ದ ನಂಬಿಕೆಯನ್ನು ಶಿಥಿಲಗೊಳಿಸಲು ಬರುತ್ತಿದ್ದರು. ಅವರು ಶಿಥಿಲಗೊಳಿಸಿದರೂ, ಅವಳು ಅನೇಕ ಫಲಭರಿತ ಬೈಬಲ್ ಅಭ್ಯಾಸಗಳಲ್ಲಿ ಆನಂದಿಸಿದಳು.
ನಮ್ಮ ಜೊತೆ ಜೀವನಕ್ಕಾಗಿ ಕೃತಜ್ಞನು
ನಮ್ಮ ವಿವಾಹದ ನಂತರ, ಎಟೀಯನ್ನೂ ನನ್ನನ್ನೂ, ಇಂಗ್ಲೆಂಡ್ನಲ್ಲಿ ಸಂಚರಣ ಕೆಲಸಕ್ಕೆ ನೇಮಿಸಲಾಯಿತು. ಮತ್ತು ಸುಮಾರು ಐದು ವರ್ಷಗಳ ವರೆಗೆ ನಾವು ಸಭೆಗಳನ್ನು ಆತ್ಮಿಕವಾಗಿ ಬಲಪಡಿಸಲಿಕ್ಕಾಗಿ ಅವುಗಳನ್ನು ಸಂದರ್ಶಿಸಿದೆವು. ಆ ಬಳಿಕ ನ್ಯೂ ಯಾರ್ಕಿನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯದಲ್ಲಿ ನಡೆದ 36ನೆಯ ಗಿಲ್ಯಡ್ ಕ್ಲಾಸಿಗೆ ಹಾಜರಾಗುವ ಆಮಂತ್ರಣವನ್ನು ನಾನು ಪಡೆದುಕೊಂಡೆ. 1961ರ ನವೆಂಬರ್ ತಿಂಗಳಿನಲ್ಲಿ ಪೂರ್ಣಗೊಂಡ ಆ ಹತ್ತು ತಿಂಗಳ ಕೋರ್ಸ್, ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸುಗಳಲ್ಲಿ ಕೆಲಸವನ್ನು ನಿರ್ವಹಿಸುವಂತೆ ಪುರುಷರನ್ನು ತರಬೇತುಗೊಳಿಸಲಿಕ್ಕಾಗಿ ವಿಶೇಷವಾಗಿ ವಿನ್ಯಾಸಿಸಲ್ಪಟ್ಟಿತ್ತು. ನಾನು ಅಲ್ಲಿಗೆ ಹೋಗಿದ್ದಾಗ, ಎಟೀ ಇಂಗ್ಲೆಂಡ್ನ ಲಂಡನ್ ಬೆತೆಲಿನಲ್ಲಿಯೇ ಉಳಿದಳು. ನಾನು ಪದವಿಪಡೆದಾದ ಬಳಿಕ, ನಾವು ಬೆತೆಲಿಗೆ ಒಟ್ಟಿಗೆ ನೇಮಿಸಲ್ಪಟ್ಟೆವು.
ಮುಂದಿನ 16 ವರ್ಷಗಳ ವರೆಗೆ, ಸಭಾ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುತ್ತಾ, ನಾನು ಸರ್ವಿಸ್ ಡೆಸ್ಕ್ನಲ್ಲಿ ಕೆಲಸಮಾಡಿದೆ. ತದನಂತರ, 1978ರಲ್ಲಿ, ಬೆತೆಲ್ ಗೃಹ ಮೇಲ್ವಿಚಾರಕರಾದ ಪ್ರೈಸ್ ಹ್ಯೂಸ್ ಮೃತಪಟ್ಟ ಬಳಿಕ, ನಾನು ಅವರ ಸ್ಥಾನಕ್ಕೆ ನೇಮಿತನಾದೆ. ಬೆಳೆಯುತ್ತಿದ್ದ ನಮ್ಮ ಬೆತೆಲ್ ಕುಟುಂಬದ—ಈಗ ನಮ್ಮ ಕುಟುಂಬದಲ್ಲಿ 260ಕ್ಕಿಂತಲೂ ಹೆಚ್ಚು ಮಂದಿ ಇದ್ದೇವೆ—ಹಿತಕ್ಷೇಮಕ್ಕಾಗಿ ಜವಾಬ್ದಾರನಾಗಿರುವುದು, ಅನೇಕ ವರ್ಷಗಳಿಂದ ಒಂದು ಪ್ರತಿಫಲದಾಯಕ ನೇಮಕವಾಗಿದೆ.
1971ರಲ್ಲಿ, 85ರ ಪ್ರಾಯದಲ್ಲಿ ನನ್ನ ಪ್ರಿಯ ತಾಯಿ ಮೃತಪಟ್ಟರು. ಎಟೀ ಹಾಗೂ ನಾನು, ಶವಸಂಸ್ಕಾರಕ್ಕಾಗಿ ಗ್ಲಾಸ್ಟರ್ಗೆ ಹಿಂದಿರುಗಿದೆವು. ಅಲ್ಲಿ ತಾಯಿಯವರು ಆಶ್ರಯಿಸಿದ್ದ ಸ್ವರ್ಗೀಯ ನಿರೀಕ್ಷೆಯ ಕುರಿತು ಒಬ್ಬ ಸಹೋದರನು ತುಂಬ ಚೆನ್ನಾಗಿ ವಿವರಿಸಿದನು. (ಫಿಲಿಪ್ಪಿ 3:14) ನನ್ನ ತಾಯಿಯ ವೃದ್ಧ ಪ್ರಾಯದಲ್ಲಿ ಅವರಿಗೆ ಒದಗಿಸಿದ ಪ್ರೀತಿಪೂರ್ಣ ಆರೈಕೆಗಾಗಿ, ಮತ್ತು ಹೀಗೆ ಎಟೀ ಮತ್ತು ನಾನು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಮುಂದುವರಿಯಲು ಶಕ್ತರಾಗುವಂತೆ ಮಾಡಿದ್ದಕ್ಕಾಗಿ, ನನ್ನ ಅಕ್ಕಂದಿರಾದ ಡಾರಿಸ್ ಹಾಗೂ ಗ್ರೇಸ್ಗೆ ನಾನು ಕೃತಜ್ಞನಾಗಿದ್ದೇನೆ.
ನಮ್ಮ ಹೆತ್ತವರ ಕುರಿತಾಗಿ ಮತ್ತು ಅವರು ಎಷ್ಟು ಪ್ರೀತಿಪೂರ್ಣವಾಗಿ, ದೃಢಚಿತ್ತದಿಂದ ನಮ್ಮನ್ನು ಬೆಳೆಸಿದರೆಂಬುದರ ಕುರಿತಾಗಿ, ಎಟೀ ಹಾಗೂ ನಾನು ಅನೇಕವೇಳೆ ಆಲೋಚಿಸುತ್ತೇವೆ. ನಾವು ಅವರಿಗೆ ಎಂತಹ ಅಪರಿಮಿತವಾದ ಸಾಲಕ್ಕೆ ಋಣಿಗಳು! ವಿಶೇಷವಾಗಿ ನನ್ನ ತಾಯಿಯವರು ನನಗಾಗಿಯೂ ನನ್ನ ಅಕ್ಕಂದಿರಿಗಾಗಿಯೂ ಒಂದು ಅದ್ಭುತಕರವಾದ ಮಾದರಿಯನ್ನಿಟ್ಟಿದ್ದಾರೆ—ಯೆಹೋವನಿಗಾಗಿಯೂ ಆತನ ಸಂಸ್ಥೆಗಾಗಿಯೂ ನಮ್ಮಲ್ಲಿ ಗಣ್ಯತೆಯನ್ನು ಕಟ್ಟುವುದು.
ನಿಜವಾಗಿಯೂ, ನಮ್ಮ ಸ್ವರ್ಗೀಯ ಪಿತನಾದ ಯೆಹೋವನಿಗೆ ಸೇವೆಯ ಪ್ರತಿಯೊಂದು ಹೊಸ ದಿನವನ್ನು ಅವಲೋಕಿಸುವಾಗ, ನಮ್ಮ ಹೃದಯಗಳು ಕೃತಜ್ಞತೆಯಿಂದ ತುಂಬಿತುಳುಕುತ್ತವೆ. ಆತನು ಎಷ್ಟು ಅದ್ಭುತಕರ, ಪ್ರೀತಿಪೂರ್ಣ ದೇವರಾಗಿದ್ದಾನೆ! “ನನ್ನ ದೇವರೇ, ಒಡೆಯನೇ, ನಿನ್ನನ್ನು ಘನಪಡಿಸುವೆನು; ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡುವೆನು. ದಿನಂಪ್ರತಿ ನಿನ್ನನ್ನು ಕೀರ್ತಿಸುವೆನು; ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಸ್ತುತಿಸುವೆನು” ಎಂದು ಬರೆದಾಗ, ಬೈಬಲ್ ಕೀರ್ತನೆಗಾರನು ನಮ್ಮ ಭಾವಾಭಿಪ್ರಾಯಗಳನ್ನು ವ್ಯಕ್ತಪಡಿಸಿದನು.—ಕೀರ್ತನೆ 145:1, 2.
[ಪುಟ 26 ರಲ್ಲಿರುವ ಚಿತ್ರ]
ನನ್ನ ಹೆಂಡತಿ ಎಟೀಯೊಂದಿಗೆ