ಈ ಅಪೂರ್ವವಾದ ಅವಕಾಶವನ್ನು ವಶಪಡಿಸಿಕೊಳ್ಳಿರಿ!
ರಕ್ಷಣೆಯ ಕುರಿತಾದ ಬೈಬಲಿನ ಸಂದೇಶವು ಪೀಟರ್ನ ಆಸಕ್ತಿಯನ್ನು ಸೆರೆಹಿಡಿದಾಗ, ಅವನು ತನ್ನ ವೈದ್ಯಕೀಯ ಅಭ್ಯಾಸಗಳಲ್ಲಿ ತುಂಬ ಮುಂದುವರಿದಿದ್ದನು. ಅವನು ಪದವೀಧರನಾಗಿ ಆಸ್ಪತ್ರೆಯೊಂದರಲ್ಲಿ ಒಬ್ಬ ವೈದ್ಯನಾಗಿ ವೃತ್ತಿಯನ್ನಾರಂಭಿಸಿದಾಗ, ಅವನಿಗಿಂತ ಉಚ್ಚ ಸ್ಥಾನದಲ್ಲಿದ್ದವರು ಒಬ್ಬ ನರತಜ್ಞನಾಗಿ ಪ್ರವೀಣನಾಗುವಂತೆ ಅವನನ್ನು ನಿರಂತರವಾಗಿ ಉತ್ತೇಜಿಸಿದರು. ಅನೇಕ ಹೊಸ ವೈದ್ಯರು ಹಿಂಜರಿಯದೆ ವಶಪಡಿಸಿಕೊಳ್ಳುತ್ತಿದ್ದ ಒಂದು ಅವಕಾಶವು ಇಲ್ಲಿತ್ತು.
ಆದರೂ, ಪೀಟರ್a ಈ ಅವಕಾಶವನ್ನು ಬಿಟ್ಟುಬಿಡಲು ನಿರ್ಣಯಿಸಿದನು. ಯಾಕೆ? ಅಗತ್ಯವಿದ್ದ ಮಹತ್ವಾಕಾಂಕ್ಷೆ ಮತ್ತು ಪ್ರಚೋದನೆಯ ಕೊರತೆ ಅವನಲ್ಲಿತ್ತೊ? ಇಲ್ಲ, ಯಾಕಂದರೆ ಪೀಟರನು ಆ ನೀಡಿಕೆಯನ್ನು ಜಾಗರೂಕತೆಯಿಂದ ಪರಿಗಣಿಸಿದನೆಂಬುದು ನಿಶ್ಚಯ. ಯೆಹೋವನ ಒಬ್ಬ ಸಮರ್ಪಿತ, ದೀಕ್ಷಾಸ್ನಾನಿತ ಸಾಕ್ಷಿಯಾದ ಬಳಿಕ, ಅವನು ಕ್ರೈಸ್ತ ಶುಶ್ರೂಷೆಯ ವಿವಿಧ ರೂಪಗಳಲ್ಲಿ ಸಾಧ್ಯವಿರುವಷ್ಟು ಹೆಚ್ಚು ಸಮಯವನ್ನು ಕಳೆಯಲು ಆಶಿಸಿದನು. ಒಮ್ಮೆ ಅವನು ಒಬ್ಬ ನರತಜ್ಞನಾಗಿ ಅರ್ಹನಾದನೆಂದರೆ, ಅವನ ವೃತ್ತಿಯು, ಅವನ ಸಮಯ ಮತ್ತು ಶಕ್ತಿಯಲ್ಲಿ ಹೆಚ್ಚೆಚ್ಚನ್ನು ನುಂಗುವುದೆಂದು ಅವನು ತರ್ಕಿಸಿದನು. ಈ ವಿಶಿಷ್ಟವಾದ ಪ್ರತೀಕ್ಷೆಯನ್ನು ಬಿಟ್ಟುಬಿಡಲು ಅವನು ಮೂರ್ಖನಾಗಿದ್ದನೊ, ಇಲ್ಲವೇ ವಿವೇಕಿಯಾಗಿದ್ದನೊ?
ಕೆಲವರಿಗೆ ಪೀಟರ್ನ ನಿರ್ಣಯವು ಮೂರ್ಖತನದ್ದಾಗಿ ತೋರಿದ್ದಿರಬಹುದು. ಆದಾಗಲೂ, ಅವನು ಎಫೆಸ 5:15, 16ರಂತಹ ಬೈಬಲ್ ವಚನಗಳನ್ನು ಪರಿಗಣಿಸಿದನು. ಅಲ್ಲಿ ಅಪೊಸ್ತಲ ಪೌಲನು ಜೊತೆ ಕ್ರೈಸ್ತರನ್ನು ಪ್ರೇರೇಪಿಸಿದ್ದು: “ದಿನಗಳು ಕೆಟ್ಟವುಗಳಾಗಿರುವುದರಿಂದ, ನಿಮಗಾಗಿ ಅನುಕೂಲವಾದ ಸಮಯವನ್ನು ಖರೀದಿಸುತ್ತಾ, ನೀವು ನಡೆಯುವ ರೀತಿಯು ಅವಿವೇಕಿಗಳಂತಲ್ಲ ಬದಲಾಗಿ ವಿವೇಕಿಗಳಾದ ವ್ಯಕ್ತಿಗಳಂತೆ ಇರಲು ಕಟ್ಟುನಿಟ್ಟಾದ ನಿಗಾವನ್ನು ಇಡಿರಿ” (NW).
“ಅನುಕೂಲವಾದ ಸಮಯ” ಎಂಬ ಅಭಿವ್ಯಕ್ತಿಯನ್ನು ದಯವಿಟ್ಟು ಗಮನಿಸಿರಿ. ಇದು ಹೆಚ್ಚಾಗಿ, ನಿರ್ದಿಷ್ಟವಾದ ಲಕ್ಷಣಗಳಿಂದ ಗುರುತಿಸಲ್ಪಟ್ಟಿರುವ ಅಥವಾ ಒಂದು ನಿರ್ದಿಷ್ಟವಾದ ಚಟುವಟಿಕೆಗಾಗಿ ಸೂಕ್ತವಾಗಿರುವ ಒಂದು ಸಮಯ ಅಥವಾ ಅವಧಿಗೆ ಸೂಚಿಸಲು ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವ ಒಂದು ಗ್ರೀಕ್ ಶಬ್ದದಿಂದ ಭಾಷಾಂತರಿಸಲ್ಪಟ್ಟಿದೆ. ಕ್ರೈಸ್ತರು ಪ್ರಾಮುಖ್ಯ ವಿಷಯಗಳಿಗಾಗಿ ಸಮಯವನ್ನು ಮಾಡಿಕೊಳ್ಳಬೇಕೆಂಬುದನ್ನು ಪೌಲನು ಇಲ್ಲಿ ಒತ್ತಿಹೇಳಿದನು. ನಿಜವಾಗಿಯೂ, ಅವರು “ಹೆಚ್ಚು ಪ್ರಾಮುಖ್ಯವಾಗಿರುವ ಸಂಗತಿಗಳನ್ನು ಖಚಿತಪಡಿಸಿ”ಕೊಳ್ಳುವ (NW) ಅಗತ್ಯವಿದೆ. (ಫಿಲಿಪ್ಪಿ 1:10) ಇದು ಪ್ರಾಧಾನ್ಯಗಳನ್ನಿಡುವ ಒಂದು ಪ್ರಶ್ನೆಯಾಗಿದೆ.
ಹಾಗಾದರೆ, ನಮ್ಮ ಸಮಯಕ್ಕಾಗಿ ದೈವಿಕ ಉದ್ದೇಶವು ಏನಾಗಿರುತ್ತದೆ? ಆತನನ್ನು ಪ್ರೀತಿಸುವವರಿಗಾಗಿ ದೇವರ ಚಿತ್ತವೇನಾಗಿರುತ್ತದೆ? ಬೈಬಲ್ ಪ್ರವಾದನೆಗಳು ನಮ್ಮ ದಿನವನ್ನು ಸ್ಪಷ್ಟವಾಗಿ “ಅಂತ್ಯಕಾಲ” ಅಥವಾ “ಕಡೇ ದಿವಸಗಳು” ಎಂಬುದಾಗಿ ಗುರುತಿಸುತ್ತವೆ. (ದಾನಿಯೇಲ 12:4; 2 ತಿಮೊಥೆಯ 3:1) ನಮ್ಮ ದಿನಕ್ಕಾಗಿ ಯಾವುದು ಪ್ರಧಾನ ಪ್ರಾಮುಖ್ಯದ ವಿಷಯವಾಗಿರುವುದೆಂಬುದರ ವಿಷಯದಲ್ಲಿ ಕ್ರಿಸ್ತ ಯೇಸು ಯಾವ ಸಂದೇಹವನ್ನು ಬಿಡಲಿಲ್ಲ. ಈ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯಕ್ಕೆ ಮುಂಚೆ “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು” ಎಂದು ಅವನು ನಿರ್ದಿಷ್ಟವಾಗಿ ಹೇಳಿದನು. ಆಗ ಮಾತ್ರ ಅಂತ್ಯವು ಬರುವುದು.—ಮತ್ತಾಯ 24:3, 14.
ಆದುದರಿಂದ, ರಾಜ್ಯದ ಸುವಾರ್ತೆಯನ್ನು ಸಾರಲು ಮತ್ತು ಶಿಷ್ಯರನ್ನಾಗಿ ಮಾಡಲು ನಾವು ಪ್ರತಿಯೊಂದು ಅವಕಾಶವನ್ನು ವಶಪಡಿಸಿಕೊಳ್ಳಬೇಕು. (ಮತ್ತಾಯ 28:19, 20) ಈ ಚಟುವಟಿಕೆಗಳು ಎಂದೂ ಪುನರಾವೃತ್ತಿಸಲ್ಪಡದೇ ಇರುವುದರಿಂದ, ಈ ಜೀವರಕ್ಷಕ ಕಾರ್ಯದಲ್ಲಿ ನಮ್ಮ ಸರ್ವಸ್ವವನ್ನೂ ಕೊಡಲಿಕ್ಕಾಗಿ ಇದು ಕೊನೆಯ ಅವಕಾಶವಾಗಿದೆ. “ಈಗಲೇ ಆ ಸುಪ್ರಸನ್ನತೆಯಕಾಲ.” ಖಂಡಿತವಾಗಿಯೂ, “ಇದೇ ಆ ರಕ್ಷಣೆಯ ದಿನ.”—2 ಕೊರಿಂಥ 6:2.
ಒಂದು ವಿವೇಕಯುತವಾದ ನಿರ್ಣಯವನ್ನು ಮಾಡುವುದು
ಆರಂಭದಲ್ಲಿ ತಿಳಿಸಲ್ಪಟ್ಟಿರುವ ಯುವ ಪುರುಷನಾದ ಪೀಟರ್, ತನ್ನ ನಿರ್ಣಯದ ಕುರಿತಾಗಿ ಜಾಗರೂಕತೆಯಿಂದ ಆಲೋಚಿಸಿ, ತನ್ನ ಆಯ್ಕೆಗಳನ್ನು ತೂಗಿನೋಡಿದನು. ಒಬ್ಬ ನರತಜ್ಞನಾಗುವ ಉದ್ದೇಶದಿಂದ ಅಭ್ಯಾಸಮಾಡುವುದು ತಪ್ಪಲ್ಲವೆಂಬುದನ್ನು ಅವನು ಗ್ರಹಿಸಿದನು. ಆದರೆ ಅವನಿಗೆ ಯಾವುದು ಹೆಚ್ಚು ಪ್ರಾಮುಖ್ಯವಾದ ವಿಷಯವಾಗಿತ್ತು? ಅದು ಕ್ರೈಸ್ತ ಶುಶ್ರೂಷೆಯಲ್ಲಿನ ಅವನ ಚಟುವಟಿಕೆಯಾಗಿತ್ತು. ಯಾಕಂದರೆ ಅದು ಒಂದು ತುರ್ತಿನ ಕೆಲಸವಾಗಿತ್ತು. ಅದೇ ಸಮಯದಲ್ಲಿ, ಪೂರೈಸಬೇಕಾಗಿದ್ದ ಹಂಗುಗಳು ಅವನಿಗಿದ್ದವು. ಅವನು ವಿವಾಹಿತನಾಗಿದ್ದು, ಪೂರ್ಣ ಸಮಯದ ಸಾರುವ ಕಾರ್ಯದಲ್ಲಿ ಭಾಗವಹಿಸುತ್ತಿರುವ ತನ್ನ ಹೆಂಡತಿಗೆ ಒದಗಿಸಬೇಕಿತ್ತು. (1 ತಿಮೊಥೆಯ 5:8) ತನ್ನ ಶಿಕ್ಷಣಕ್ಕೆ ಸಂಬಂಧಿಸಿದ ಸಾಲಗಳನ್ನು ಸಹ ಪೀಟರ್ ಮರುಪಾವತಿ ಮಾಡಬೇಕಾಗಿತ್ತು. ಹಾಗಾದರೆ, ಅವನು ಏನು ಮಾಡಲು ನಿರ್ಣಯಿಸಿದನು?
ಪೀಟರ್ ರೇಡಿಯೊಲಾಜಿಯಲ್ಲಿ ವಿಶೇಷಜ್ಞನಾಗಲು ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್ಗಳನ್ನು ಮಾಡಲು ನಿರ್ಣಯಿಸಿದನು. ಇದು ಒಂದು ಸಾಮಾನ್ಯ ಕೆಲಸದ ದಿನವನ್ನು ಒಳಪಡಿಸುವ ಕೆಲಸವಾಗಿತ್ತು. ಅವನು ಕ್ರಮದ ಕೆಲಸಮಾಡುವ ತಾಸುಗಳಲ್ಲಿಯೇ ತನ್ನ ತರಬೇತಿಯನ್ನೂ ಪಡೆದುಕೊಳ್ಳಲಿದ್ದನು. ಹೌದು, ಕೆಲವರು ಇದನ್ನು ಕಡಿಮೆ ಪ್ರತಿಷ್ಠೆಯ ಸ್ಥಾನವೆಂದು ಪರಿಗಣಿಸಬಹುದು, ಆದರೆ ಇದು ಅವನಿಗೆ ಆತ್ಮಿಕ ಬೆನ್ನಟ್ಟುವಿಕೆಗಳಿಗಾಗಿ ಹೆಚ್ಚು ಸಮಯವನ್ನು ವಿನಿಯೋಗಿಸಲು ಅನುಮತಿಸುವುದು.
ಇನ್ನೊಂದು ಪರಿಗಣನೆಯು ಪೀಟರ್ನ ನಿರ್ಣಯವನ್ನು ಪ್ರಚೋದಿಸಿತು. ಭಿನ್ನವಾಗಿ ನಿರ್ಣಯಿಸಿದ್ದಿರಬಹುದಾದ ಇತರರನ್ನು ಟೀಕಿಸದೆ, ಐಹಿಕ ವಿಷಯಗಳಲ್ಲಿ ಹೆಚ್ಚು ಒಳಗೂಡುವುದು ಒಬ್ಬ ಕ್ರೈಸ್ತನಿಗೆ ಒಂದು ಅಪಾಯವನ್ನು ಒಡ್ಡುತ್ತದೆಂದು ಅವನಿಗೆ ತಿಳಿದಿತ್ತು. ಅವನು ಆತ್ಮಿಕ ಜವಾಬ್ದಾರಿಗಳನ್ನು ಅಲಕ್ಷಿಸುವಂತೆ ಇದು ಮಾಡಬಲ್ಲದು. ಇದು, ಉದ್ಯೋಗದ ಮೇಲೆಯೇ ಕೇಂದ್ರೀಕರಿಸಿದ ಇನ್ನೊಂದು ಉದಾಹರಣೆಯಿಂದ ದೃಷ್ಟಾಂತಿಸಲ್ಪಟ್ಟಿದೆ.
ಒಬ್ಬ ನಿರ್ದಿಷ್ಟ ಪೂರ್ಣ ಸಮಯದ ರಾಜ್ಯ ಪ್ರಚಾರಕನು, ಒಬ್ಬ ತರಬೇತಿಗೊಳಿಸಲ್ಪಟ್ಟ ಕಲಾಕಾರನಾಗಿದ್ದನು. ಅವನು ತನ್ನ ವರ್ಣಚಿತ್ರಗಳನ್ನು ಮಾರುವ ಮೂಲಕ ತನ್ನನ್ನು ಆರ್ಥಿಕವಾಗಿ ಬೆಂಬಲಿಸಿಕೊಳ್ಳಲು ಶಕ್ತನಾಗಿದ್ದನು. ತನ್ನ ಸಮಯದಲ್ಲಿ ಹೆಚ್ಚಿನ ಭಾಗವನ್ನು, ಎಲ್ಲಕ್ಕಿಂತಲೂ ಪ್ರಾಮುಖ್ಯವಾದ ಕ್ರೈಸ್ತ ಶುಶ್ರೂಷೆಗೆ ನೀಡುವ ಮೂಲಕ, ಅವನು ತನ್ನನ್ನು ಆರಾಮವಾಗಿ ಬೆಂಬಲಿಸಿಕೊಳ್ಳಸಾಧ್ಯವಿತ್ತು. ಆದಾಗಲೂ, ಅವನ ಕಲಾತ್ಮಕ ಜೀವನೋದ್ಯೋಗವನ್ನು ಹೆಚ್ಚಿಸುವ ಒಂದು ಆಶೆಯು ಬೆಳೆಯಲಾರಂಭಿಸಿತು. ಅವನು ವರ್ಣಚಿತ್ರ ಬಿಡಿಸುವುದರಲ್ಲಿ ಮತ್ತು ಕಲಾ ಜಗತ್ತಿನಲ್ಲಿ ಹೆಚ್ಚು ಒಳಗೂಡುವವನಾದನು, ಪೂರ್ಣ ಸಮಯದ ಶುಶ್ರೂಷೆಯನ್ನು ಬಿಟ್ಟುಬಿಟ್ಟನು, ಮತ್ತು ಕಟ್ಟಕಡೆಗೆ, ರಾಜ್ಯ ಸಾರುವಿಕೆಯ ಚಟುವಟಿಕೆಯ ವಿಷಯದಲ್ಲಿ ಪೂರ್ಣವಾಗಿ ನಿಷ್ಕ್ರಿಯನಾದನು. ಸಮಯಾನಂತರ, ಅವನು ಅಶಾಸ್ತ್ರೀಯ ನಡತೆಯಲ್ಲಿ ಒಳಗೊಂಡನು. ಇದು, ಅವನು ಇನ್ನು ಮುಂದೆ ಕ್ರೈಸ್ತ ಸಭೆಯ ಭಾಗವಾಗಿರದೇ ಇರುವುದರಲ್ಲಿ ಫಲಿಸಿತು.—1 ಕೊರಿಂಥ 5:11-13.
ನಮ್ಮ ಸಮಯವು ವಿಶೇಷವಾಗಿದೆ
ಯೆಹೋವನನ್ನು ಈಗ ಸೇವಿಸುವವರೋಪಾದಿ, ನಾವು ನಿಶ್ಚಯವಾಗಿಯೂ ಆತನಿಗೆ ನಂಬಿಗಸ್ತರಾಗಿರಲು ಬಯಸುತ್ತೇವೆ. ಮಾನವ ಇತಿಹಾಸದ ಅತಿ ಅಸಾಮಾನ್ಯ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆಂದು ನಮಗೆ ತಿಳಿದಿದೆ. ದೇವರನ್ನು ಸೇವಿಸುತ್ತಾ ಇರಲು ಮತ್ತು ಸದ್ಯದ ದಿನದ ಪರಿಸ್ಥಿತಿಗಳನ್ನು ಪರಿಣಾಮಕರವಾಗಿ ನಿಭಾಯಿಸಲು, ನಾವು ವಿವಿಧ ಅಳವಡಿಸುವಿಕೆಗಳನ್ನು ಮಾಡುವ ಅಗತ್ಯವಿರಬಹುದು. ನಾವು ಇದನ್ನು ಒಬ್ಬ ರೈತನ ಕೊಯ್ಲಿನ ಸಮಯಕ್ಕೆ ಹೋಲಿಸಸಾಧ್ಯವಿದೆ. ಅದು ವಿಶೇಷ ಚಟುವಟಿಕೆಯ ಒಂದು ಅವಧಿಯಾಗಿದೆ, ಆಗ ಹೊಲದ ಕೆಲಸಗಾರರು ಎಂದಿಗಿಂತಲೂ ಹೆಚ್ಚಾಗಿ ತಮ್ಮನ್ನು ಶ್ರಮಿಸಿಕೊಳ್ಳುವಂತೆ ಮತ್ತು ಕೆಲಸದ ದಿನಗಳಂದು ಹೆಚ್ಚು ಸಮಯವನ್ನು ವ್ಯಯಿಸುವಂತೆ ನಿರೀಕ್ಷಿಸಲ್ಪಡುತ್ತಾರೆ. ಯಾಕೆ? ಯಾಕಂದರೆ ಪೈರು ಒಂದು ಸೀಮಿತ ಸಮಯಾವಧಿಯೊಳಗೆ ಒಟ್ಟುಗೂಡಿಸಲ್ಪಡಬೇಕು.
ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಗಾಗಿ ಕೇವಲ ಅತಿ ಸೀಮಿತವಾದ ಸಮಯವು ಉಳಿದಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ, ಒಬ್ಬ ಸತ್ಕ್ರೈಸ್ತನು ಯೇಸುವಿನ ಮಾದರಿಯನ್ನು ಹಿಂಬಾಲಿಸಲು ಮತ್ತು ಆತನ ಹೆಜ್ಜೆಜಾಡುಗಳಲ್ಲಿ ನಡೆಯಲು ತನ್ನನ್ನು ಶ್ರಮಿಸಿಕೊಳ್ಳುವ ಅಗತ್ಯವಿದೆ. ಭೂಮಿಯ ಮೇಲಿನ ಆತನ ಜೀವನಕ್ರಮವು, ಆತನಿಗೆ ಯಾವುದು ಅತಿ ಮಹತ್ವದ ಸಂಗತಿಯಾಗಿತ್ತೆಂಬುದನ್ನು ಸ್ಪಷ್ಟವಾಗಿ ಪ್ರದರ್ಶಿಸಿತು. ಆತನು ಹೇಳಿದ್ದು: “ನನ್ನನ್ನು ಕಳುಹಿಸಿದಾತನ ಕಾರ್ಯಗಳನ್ನು ನಾವು ಹಗಲಿರುವಾಗಲೇ ನಡಿಸಬೇಕು. ರಾತ್ರಿ ಬರುತ್ತದೆ, ಅದು ಬಂದ ಮೇಲೆ ಯಾರೂ ಕೆಲಸ ಮಾಡಲಾರರು.” (ಯೋಹಾನ 9:4) ರಾತ್ರಿಯು ಬರುತ್ತಿದೆಯೆಂದು ಹೇಳುವ ಮೂಲಕ ಯೇಸು, ತನ್ನ ಭೂಶುಶ್ರೂಷೆಯು ಅಂತ್ಯಗೊಂಡು, ತನ್ನ ಸ್ವರ್ಗೀಯ ತಂದೆಯ ಕೆಲಸಗಳಲ್ಲಿ ತಾನು ಒಳಗೂಡಲು ಅಶಕ್ತನಾಗಿರುವ, ತನ್ನ ವಿಚಾರಣೆಯ, ಶೂಲಕ್ಕೇರಿಸುವ, ಮತ್ತು ಮರಣದ ಸಮಯಕ್ಕೆ ಸೂಚಿಸುತ್ತಿದ್ದನು.
ತನ್ನ ಮೂರೂವರೆ ವರ್ಷದ ಶುಶ್ರೂಷೆಯ ಸಮಯದಲ್ಲಿ, ಯೇಸು ತನ್ನ ಸಮಯದಲ್ಲಿ ಸ್ವಲ್ಪ ಸಮಯವನ್ನು ಅದ್ಭುತಕಾರ್ಯಗಳನ್ನು ನಡೆಸುವುದರಲ್ಲಿಯೂ ಅಸ್ವಸ್ಥರನ್ನು ಗುಣಪಡಿಸುವುದರಲ್ಲಿಯೂ ಕಳೆದನೆಂಬುದು ನಿಜ. ಹಾಗಿದ್ದರೂ, ಅವನು ತನ್ನ ಸಮಯದಲ್ಲಿ ಹೆಚ್ಚಿನದ್ದನ್ನು ರಾಜ್ಯ ಸಂದೇಶವನ್ನು ಸಾರಲು ಮತ್ತು ಸುಳ್ಳು ಧರ್ಮದ “ಸೆರೆಯವರಿಗೆ ಬಿಡುಗಡೆಯಾಗುವದನ್ನು . . . ಪ್ರಸಿದ್ಧಿಪಡಿಸುವದಕ್ಕೂ” ಉಪಯೋಗಿಸಿದನು. (ಲೂಕ 4:18; ಮತ್ತಾಯ 4:17) ಯೇಸು ತನ್ನ ಶುಶ್ರೂಷೆಯಲ್ಲಿ ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಹಾಕಿದನು ಮತ್ತು ತನ್ನ ಶಿಷ್ಯರು ತಾನು ಸ್ಥಾಪಿಸಿದ ತಳಪಾಯದ ಮೇಲೆ ಕಟ್ಟಲು ಸಾಧ್ಯವಾಗುವಂತೆ ಮತ್ತು ಪರಿಣಾಮಕಾರಿಯಾಗಿ ಸಾರುವ ಕಾರ್ಯವನ್ನು ಮುಂದುವರಿಸುವಂತೆ ಅವರನ್ನು ತರಬೇತಿಗೊಳಿಸಲು ಸಮಯವನ್ನು ತೆಗೆದುಕೊಂಡನು. ರಾಜ್ಯಾಭಿರುಚಿಗಳನ್ನು ಪ್ರವರ್ಧಿಸಲು ಯೇಸು ಪ್ರತಿಯೊಂದು ಅವಕಾಶವನ್ನು ವಶಪಡಿಸಿಕೊಂಡನು ಮತ್ತು ತನ್ನ ಶಿಷ್ಯರು ಅದನ್ನೇ ಮಾಡಬೇಕೆಂದು ಬಯಸಿದನು.—ಮತ್ತಾಯ 5:14-16; ಯೋಹಾನ 8:12.
ಯೇಸುವಿನಂತೆ, ಆತನ ಆಧುನಿಕ ದಿನದ ಹಿಂಬಾಲಕರಾಗಿರುವ ನಾವು, ಮಾನವಕುಲದ ಪರಿಸ್ಥಿತಿಯನ್ನು ಯೆಹೋವ ದೇವರು ನೋಡುವಂತೆಯೇ ನೋಡುವ ಅಗತ್ಯವಿದೆ. ಈ ವಿಷಯಗಳ ವ್ಯವಸ್ಥೆಗಾಗಿರುವ ಸಮಯವು ಮುಕ್ತಾಯಗೊಳ್ಳುತ್ತಿದೆ, ಮತ್ತು ಎಲ್ಲರೂ ರಕ್ಷಣೆಯನ್ನು ಗಳಿಸಲಿಕ್ಕಾಗಿ ಅವಕಾಶವನ್ನು ಪಡೆಯುವಂತೆ ದೇವರು ಕರುಣಾಪೂರ್ವಕವಾಗಿ ಬಯಸುತ್ತಾನೆ. (2 ಪೇತ್ರ 3:9) ಆದುದರಿಂದ ಯೆಹೋವನ ಚಿತ್ತವನ್ನು ಮಾಡುವ ಸಂಬಂಧದಲ್ಲಿ, ಇತರ ಎಲ್ಲಾ ಬೆನ್ನಟ್ಟುವಿಕೆಗಳನ್ನು ಎರಡನೆಯ ಸ್ಥಾನದಲ್ಲಿ ಇಡುವುದು ವಿವೇಕಯುತವಾಗಿರಲಾರದೊ? (ಮತ್ತಾಯ 6:25-33) ವಿಶೇಷವಾಗಿ ಇದರಂತಹ ವಿಶೇಷ ಸಮಯವೊಂದರಲ್ಲಿ, ಸಾಮಾನ್ಯವಾಗಿ ಪ್ರಾಮುಖ್ಯವೆಂದು ಎಣಿಸಲ್ಪಡಬಹುದಾದ ಸಂಗತಿಯು, ಕ್ರೈಸ್ತರೋಪಾದಿ ನಮ್ಮ ಜೀವಿತಗಳಲ್ಲಿ ಕಡಿಮೆ ಪ್ರಾಮುಖ್ಯದ ವಿಷಯವಾಗಿ ಪರಿಣಮಿಸಬಹುದು.
ದೇವರ ಚಿತ್ತವನ್ನು ನಮ್ಮ ಜೀವಿತಗಳಲ್ಲಿ ಪ್ರಥಮವಾಗಿಟ್ಟದ್ದಕ್ಕಾಗಿ ನಮ್ಮಲ್ಲಿ ಯಾರಾದರೂ ಎಂದಾದರೂ ವಿಷಾದಪಡುವೆವೊ? ಖಂಡಿತವಾಗಿಯೂ ಇಲ್ಲ, ಯಾಕಂದರೆ ಸ್ವತ್ಯಾಗದ ಕ್ರೈಸ್ತ ಮಾರ್ಗಕ್ರಮವು ಅದ್ಭುತಕರವಾಗಿ ಬಹುಮಾನದಾಯಕವಾಗಿರುತ್ತದೆ. ದೃಷ್ಟಾಂತಕ್ಕಾಗಿ ಯೇಸು ತನ್ನ ಶಿಷ್ಯರಿಗೆ ಅಂದದ್ದು: “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ನನ್ನ ನಿಮಿತ್ತವೂ ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟುಬಿಟ್ಟಿರುವನೋ ಅವನಿಗೆ ಈಗಿನ ಕಾಲದಲ್ಲಿ ಮನೆ ಅಣ್ಣ ತಮ್ಮ ಅಕ್ಕ ತಂಗಿ ತಾಯಿ ಮಕ್ಕಳು ಭೂಮಿ ಇವೆಲ್ಲವೂ ಹಿಂಸೆಗಳು ಸಹಿತವಾಗಿ ನೂರರಷ್ಟು ಸಿಕ್ಕೇ ಸಿಕ್ಕುತ್ತವೆ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು.”—ಮಾರ್ಕ 10:29, 30.
ಯೆಹೋವನನ್ನು ಸ್ತುತಿಸಲು ಮತ್ತು ರಾಜ್ಯ ಸಂದೇಶವನ್ನು ಘೋಷಿಸಲು ತಮ್ಮ ಸಮಯವನ್ನು ಉಪಯೋಗಿಸುವವರಿಂದ ಅನುಭವಿಸಲ್ಪಡುವ ಬಹುಮಾನಗಳ ಮೇಲೆ ಯಾರೂ ಆರ್ಥಿಕ ಮೌಲ್ಯವನ್ನು ಕಟ್ಟಸಾಧ್ಯವಿಲ್ಲ. ಅವರು ಎಷ್ಟೊಂದು ಆಶೀರ್ವಾದಗಳನ್ನು ಅನುಭವಿಸುತ್ತಾರೆ! ಇವುಗಳಲ್ಲಿ, ನಿಜ ಸ್ನೇಹಿತರು, ದೈವಿಕ ಚಿತ್ತವನ್ನು ಮಾಡುತ್ತಿರುವ ತೃಪ್ತಿ, ದೇವರ ಮೆಚ್ಚಿಕೆಯ ನಸುನಗೆ, ಮತ್ತು ಅಂತ್ಯರಹಿತ ಜೀವನದ ಪ್ರತೀಕ್ಷೆಗಳು ಸೇರಿರುತ್ತವೆ. (ಪ್ರಕಟನೆ 21:3, 4) ಮತ್ತು ಜನರಿಗೆ ಆತ್ಮಿಕವಾಗಿ ಸಹಾಯಮಾಡುವುದು ಹಾಗೂ ಆತನ ಸಾಕ್ಷಿಗಳೋಪಾದಿ ಯೆಹೋವನ ಪವಿತ್ರ ನಾಮಕ್ಕೆ ಗೌರವವನ್ನು ತರುವುದು ಎಂತಹ ಒಂದು ಆಶೀರ್ವಾದವಾಗಿರುತ್ತದೆ! ನಿಸ್ಸಂದೇಹವಾಗಿ, “ಅನುಕೂಲವಾದ ಸಮಯವನ್ನು ಖರೀದಿಸುವುದು” ನಿಜವಾಗಿಯೂ ಒಂದು ವಿವೇಕಯುತ ಮತ್ತು ಬಹುಮಾನಿತ ಮಾರ್ಗಕ್ರಮವಾಗಿರುತ್ತದೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ದೇವರ ರಾಜ್ಯದ ಸುವಾರ್ತೆಯನ್ನು ಪ್ರಕಟಿಸುವ ಸಮಯವಾಗಿರುತ್ತದೆ. ಈ ಅಪೂರ್ವ ಅವಕಾಶವನ್ನು ನೀವು ವಶಪಡಿಸಿಕೊಂಡು, ಅದಕ್ಕೆ ಅಂಟಿಕೊಂಡಿರುವಿರೊ?
[ಅಧ್ಯಯನ ಪ್ರಶ್ನೆಗಳು]
a ಒಂದು ಬದಲಿ ಹೆಸರು.