ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ
ಇಸವಿ 2001ರ ಫೆಬ್ರವರಿ ತಿಂಗಳಿನಲ್ಲಿ ಆರಂಭವಾಗುವ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮದ ಮುಖ್ಯವಿಷಯವು, “ಆಲೋಚನಾ ಸಾಮರ್ಥ್ಯದಲ್ಲಿ ಪ್ರಾಯಸ್ಥರಾಗಿರಿ” (NW) ಎಂಬುದಾಗಿದೆ. (1 ಕೊರಿಂ. 14:20) ನಾವು ಈ ಸಮ್ಮೇಳನಕ್ಕೆ ಹಾಜರಾಗುವುದು ಏಕೆ ಅತ್ಯಮೂಲ್ಯವಾಗಿರುವುದು? ಏಕೆಂದರೆ ನಾವು ಕೆಟ್ಟತನದಿಂದ ತುಂಬಿತುಳುಕುತ್ತಿರುವ ಲೋಕದಲ್ಲಿ ಜೀವಿಸುತ್ತಿದ್ದೇವೆ. ಇದನ್ನು ಎದುರಿಸಿನಿಲ್ಲಲು, ನಾವು ಆತ್ಮಿಕವಾಗಿ ಆಲೋಚಿಸುವ ಸಾಮರ್ಥ್ಯವನ್ನು ವಿಕಸಿಸಿಕೊಳ್ಳಬೇಕು. ಆಗ ನಾವು ಒಳ್ಳೆಯತನದಿಂದ ಕೆಟ್ಟದ್ದನ್ನು ಜಯಿಸಬಲ್ಲೆವು. ಇದನ್ನು ಮಾಡುವುದಕ್ಕಾಗಿಯೇ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮವು ನಮಗೆ ಸಹಾಯಮಾಡುವುದು.
ಆರಂಭದ ಕಾರ್ಯಕ್ರಮದಲ್ಲಿ, ಸರ್ಕಿಟ್ ಮೇಲ್ವಿಚಾರಕರು “ಬೈಬಲಿನ ತಿಳುವಳಿಕೆಯಲ್ಲಿ ಪ್ರಾಯಸ್ಥರಾಗಿರಲು ಸಹಾಯಕಗಳು” ಎಂಬ ವಿಷಯವನ್ನು ಚರ್ಚಿಸುವರು. ಕ್ರೈಸ್ತ ನಂಬಿಕೆಯಲ್ಲಿ ಹೇಗೆ ಸ್ಥಿರರಾಗಿರಬೇಕೆಂಬುದನ್ನು ಅವರು ತಿಳಿಸುವರು. “ನಿಮ್ಮ ಗ್ರಹಣಸಾಮರ್ಥ್ಯಗಳನ್ನು ತರಬೇತಿಗೊಳಿಸುವ ಮೂಲಕ ಆತ್ಮಿಕತೆಯನ್ನು ಕಾಪಾಡಿಕೊಳ್ಳಿರಿ” ಎಂಬ ವಿಷಯದ ಕುರಿತು ಭೇಟಿನೀಡುವ ಭಾಷಣಕರ್ತರು ಮಾತಾಡುವರು. ಆ ಭಾಷಣದಲ್ಲಿ ಒಳ್ಳೆಯ ಗ್ರಹಣಶಕ್ತಿಯನ್ನು ವಿಕಸಿಸಿಕೊಳ್ಳುವುದರಲ್ಲಿ ಬೈಬಲಿನ ತತ್ವಗಳನ್ನು ಉಪಯೋಗಿಸುವುದು ಇಲ್ಲವೆ ಅನ್ವಯಿಸಿಕೊಳ್ಳುವುದು ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ಎತ್ತಿತೋರಿಸುವರು.
ಯುವ ಜನರು ಸಹ ಆಲೋಚನಾ ಸಾಮರ್ಥ್ಯಗಳನ್ನು ವಿಕಸಿಸಿಕೊಳ್ಳತಕ್ಕದ್ದು. “ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿರಬೇಕು ಏಕೆ?” ಹಾಗೂ “ಈಗ ತಿಳುವಳಿಕೆಯನ್ನು ಪಡೆದುಕೊಳ್ಳುವ ಯುವ ಜನರು” ಎಂಬ ಭಾಷಣಗಳಲ್ಲಿ ಇದು ಚರ್ಚಿಸಲ್ಪಡುವುದು. ಲೋಕದ ದುಷ್ಟ ಕಾರ್ಯಗಳಿಗಾಗಿರುವ ಕುತೂಹಲಕ್ಕೆ ಕಡಿವಾಣವನ್ನು ಹಾಕಲು ಹಾಗೂ ಸಮಸ್ಯೆಗಳಿಂದ ದೂರವಿರಲು ಸಾಧ್ಯವಾಗುವಂತೆ, ಆತ್ಮಿಕವಾಗಿ ತಮ್ಮನ್ನು ಹೇಗೆ ಬಲಪಡಿಸಿಕೊಳ್ಳುತ್ತಾರೆ ಎಂಬುದನ್ನು ಯುವ ಜನರು ತಿಳಿಸುವಾಗ ಅದನ್ನು ಕೇಳಿಸಿಕೊಳ್ಳಿ.
ಜೀವನದಲ್ಲಿ ಮಹದಾನಂದವನ್ನು ನಾವು ಹೇಗೆ ಕಂಡುಕೊಳ್ಳಸಾಧ್ಯವಿದೆ? “ತಿಳುವಳಿಕೆಯೊಂದಿಗೆ ಬೈಬಲಿನ ತತ್ವಗಳನ್ನು ಅನ್ವಯಿಸಿಕೊಳ್ಳುವುದರಿಂದ ಪ್ರಯೋಜನಗಳು” ಎಂಬ ಮುಕ್ತಾಯದ ಭಾಷಣದಲ್ಲಿ ಇದನ್ನು ಭೇಟಿನೀಡುವ ಭಾಷಣಕರ್ತರು ವಿವರಿಸುವರು. ದೇವರ ವಾಕ್ಯವನ್ನು ಅನ್ವಯಿಸಿಕೊಳ್ಳುವುದು, ಸಮಸ್ಯೆಗಳನ್ನು ನಿಭಾಯಿಸುವುದಕ್ಕೆ, ನಿರ್ಣಯಗಳನ್ನು ಮಾಡುವುದಕ್ಕೆ ಹಾಗೂ ಯೆಹೋವನು ನಮಗೆ ಕಲಿಸುತ್ತಿರುವ ವಿಷಯಗಳಿಂದ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕೆ ನಮಗೆ ಸಹಾಯಮಾಡುತ್ತದೆ ಎಂಬುದನ್ನು ತೋರಿಸಲು ಅವರು ಉದಾಹರಣೆಗಳನ್ನು ಕೊಡುವರು.
ಸಮ್ಮೇಳನದಲ್ಲಿ ನೀರಿನ ಮೂಲಕ ದೇವರಿಗೆ ತಮ್ಮ ಸಮರ್ಪಣೆಯನ್ನು ಸಂಕೇತಿಸಲು ಇಷ್ಟಪಡುವವರು, ಆದಷ್ಟು ಬೇಗ ಅಧ್ಯಕ್ಷ ಮೇಲ್ವಚಾರಕನಿಗೆ ತಿಳಿಸತಕ್ಕದ್ದು. ವಿಶೇಷ ಸಮ್ಮೇಳನ ದಿನದ ತಾರೀಖನ್ನು ಪ್ರಕಟಿಸಿದ ಕೂಡಲೇ ನಿಮ್ಮ ಕ್ಯಾಲೆಂಡರ್ನಲ್ಲಿ ಅದನ್ನು ಗುರುತುಹಾಕಿಡಿ. ಹೀಗೆ ಈ ಸಮೃದ್ಧವಾದ ಕಾರ್ಯಕ್ರಮದಿಂದ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ ಖಚಿತವಾದ ಯೋಜನೆಗಳನ್ನು ಮಾಡಿರಿ. ವಿಶೇಷ ಸಮ್ಮೇಳನ ದಿನದ ಯಾವುದೇ ಭಾಷಣವನ್ನು ತಪ್ಪಿಸಿಕೊಳ್ಳದಿರಿ! ಏಕೆಂದರೆ ಇದು, ಈ ದುಷ್ಟ ಲೋಕವನ್ನು ಸಹಿಸಿಕೊಂಡಿರುವಂತೆ ಮತ್ತು ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವಂತೆ ಅದು ನಿಮ್ಮನ್ನು ಬಲಪಡಿಸುವುದು.