ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಪು. 13-ಪು. 16 ಪ್ಯಾ. 5
  • “ನೀವು ಕಿವಿಗೊಡುವ ವಿಧಕ್ಕೆ ಗಮನ ಕೊಡಿರಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನೀವು ಕಿವಿಗೊಡುವ ವಿಧಕ್ಕೆ ಗಮನ ಕೊಡಿರಿ”
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಮ್ಮ ಹೃದಯವನ್ನು ಸಿದ್ಧಪಡಿಸಿಕೊಳ್ಳಿರಿ
  • ನಿಮ್ಮ ಗಮನವನ್ನು ಕೇಂದ್ರೀಕರಿಸಿರಿ
  • ಭಾಷಣಗಳಿಗೆ ಕಿವಿಗೊಡುವುದು
  • ಚರ್ಚೆಗಳ ಸಮಯದಲ್ಲಿ ಕಿವಿಗೊಡುವುದು
  • ಸಮ್ಮೇಳನಗಳು ಮತ್ತು ಅಧಿವೇಶನಗಳಲ್ಲಿ ಕಿವಿಗೊಡುವುದು
  • ಕಿವಿಗೊಡಲು ಮಕ್ಕಳಿಗೆ ತರಬೇತಿ ನೀಡುವುದು
  • ಚೆನ್ನಾಗಿ ಕಿವಿಗೊಡುವವರಾಗಿರಿ
    2001 ನಮ್ಮ ರಾಜ್ಯದ ಸೇವೆ
  • ಯೆಹೋವನು ನಮ್ಮನ್ನು ಹೇಗೆ ನಡೆಸುತ್ತಿದ್ದಾನೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • “ಕಿವಿಗೊಡಿ ಮತ್ತು ಹೆಚ್ಚಿನ ಉಪದೇಶವನ್ನು ಪಡೆದುಕೊಳ್ಳಿ”
    2001 ನಮ್ಮ ರಾಜ್ಯದ ಸೇವೆ
  • ಪ್ರೀತಿಯಿಂದ ಕಿವಿಗೊಡುವ ಕಲೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಪು. 13-ಪು. 16 ಪ್ಯಾ. 5

“ನೀವು ಕಿವಿಗೊಡುವ ವಿಧಕ್ಕೆ ಗಮನ ಕೊಡಿರಿ”

ಕಲಿಕೆಯಲ್ಲಿ ಕಿವಿಗೊಡುವುದು ಒಂದು ಪ್ರಮುಖ ಅಂಶವಾಗಿದೆ. ಒಬ್ಬನು ಬದುಕಿ ಉಳಿಯುವ ಪ್ರತೀಕ್ಷೆಗಳ ಮೇಲೂ ಅದು ಪ್ರಭಾವ ಬೀರಬಲ್ಲದು. ಯೆಹೋವನು ತನ್ನ ಜನರನ್ನು ಐಗುಪ್ತದ ದಾಸತ್ವದಿಂದ ಬಿಡುಗಡೆ ಮಾಡಲು ಸಿದ್ಧಪಡಿಸುತ್ತಿದ್ದಾಗ, ಆತನು ಮೋಶೆಗೆ ಮಾಹಿತಿಯನ್ನು ನೀಡಿದನು; ಮೋಶೆಯು ಇಸ್ರಾಯೇಲಿನ ಹಿರೀಪುರುಷರಿಗೆ, ಅವರು ತಮ್ಮ ಚೊಚ್ಚಲುಮಕ್ಕಳನ್ನು ಸಂಹಾರಕ ದೂತನಿಂದ ತಪ್ಪಿಸಿ ರಕ್ಷಿಸಬೇಕಾದರೆ ಏನು ಮಾಡಬೇಕೆಂದು ತಿಳಿಸಿದನು. (ವಿಮೋ. 12:21-23) ಆ ಹಿರೀಪುರುಷರು ಪ್ರತಿಯೊಂದು ಕುಟುಂಬಕ್ಕೆ ಈ ಮಾಹಿತಿಯನ್ನು ತಿಳಿಸಿದರು. ಇದನ್ನು ತಿಳಿಸಿದ್ದು ಬಾಯಿಮಾತಿನ ಮೂಲಕ. ಆಗ ಜನರು ಅದನ್ನು ಬಹಳ ಜಾಗರೂಕತೆಯಿಂದ ಕಿವಿಗೊಡಬೇಕಾಗಿತ್ತು. ಅವರ ಪ್ರತಿವರ್ತನೆ ಏನಾಗಿತ್ತು? “ಇಸ್ರಾಯೇಲ್ಯರು . . . ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದ ಪ್ರಕಾರವೇ ನಡಿಸಿದರು,” ಎಂದು ಬೈಬಲು ವರದಿಸುತ್ತದೆ. (ವಿಮೋ. 12:28, 50, 51) ಇದರ ಪರಿಣಾಮವಾಗಿ, ಇಸ್ರಾಯೇಲ್ಯರು ಒಂದು ಭಯಾಶ್ಚರ್ಯ ಪ್ರೇರಕ ಬಿಡುಗಡೆಯನ್ನು ಅನುಭವಿಸಿದರು.

ಇಂದು, ಯೆಹೋವನು ಅದಕ್ಕಿಂತಲೂ ದೊಡ್ಡದಾದ ಬಿಡುಗಡೆಗಾಗಿ ನಮ್ಮನ್ನು ಸಿದ್ಧಗೊಳಿಸುತ್ತಿದ್ದಾನೆ. ಆದುದರಿಂದ, ಆತನು ಕೊಡುವ ಮಾಹಿತಿಯು ನಮ್ಮ ಶ್ರದ್ಧಾಪೂರ್ವಕ ಗಮನಕ್ಕೆ ಅರ್ಹವಾಗಿದೆ. ಇಂತಹ ಮಾಹಿತಿಯನ್ನು ಸಭಾ ಕೂಟಗಳಲ್ಲಿ ನೀಡಲಾಗುತ್ತದೆ. ಇಂತಹ ಕೂಟಗಳಿಂದ ನೀವು ಪೂರ್ಣವಾಗಿ ಪ್ರಯೋಜನ ಪಡೆಯುತ್ತಿದ್ದೀರೊ? ಏಕೆಂದರೆ, ಹೆಚ್ಚಿನ ಪ್ರಯೋಜನವು ನೀವು ಹೇಗೆ ಕಿವಿಗೊಡುತ್ತೀರೊ ಅದರ ಮೇಲೆ ಹೊಂದಿಕೊಂಡಿದೆ.

ಕೂಟಗಳಲ್ಲಿ ಕೊಡಲಾಗುವ ಮಾಹಿತಿಯ ಮುಖ್ಯಾಂಶಗಳನ್ನು ನೀವು ಮನಸ್ಸಿನಲ್ಲಿಟ್ಟುಕೊಳ್ಳುತ್ತೀರೊ? ಪ್ರತಿ ವಾರ ಕೊಡಲ್ಪಡುವ ಮಾಹಿತಿಯನ್ನು ನಿಮ್ಮ ಸ್ವಂತ ಜೀವಿತದಲ್ಲಿ ಅನ್ವಯಿಸಿಕೊಳ್ಳುವ ಇಲ್ಲವೆ ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಮಾರ್ಗಗಳನ್ನು ಹುಡುಕುವುದು ನಿಮ್ಮ ಅಭ್ಯಾಸವಾಗಿದೆಯೊ?

ನಿಮ್ಮ ಹೃದಯವನ್ನು ಸಿದ್ಧಪಡಿಸಿಕೊಳ್ಳಿರಿ

ಕ್ರೈಸ್ತ ಕೂಟಗಳಲ್ಲಿ ಕೊಡಲಾಗುವ ಮಾಹಿತಿಯಿಂದ ಪೂರ್ಣ ಪ್ರಯೋಜನ ಪಡೆಯಬೇಕಾದರೆ, ನಾವು ನಮ್ಮ ಹೃದಯಗಳನ್ನು ಸಿದ್ಧಪಡಿಸಿಕೊಳ್ಳುವ ಅಗತ್ಯವಿದೆ. ಹಾಗೆ ಮಾಡುವುದರ ಪ್ರಮುಖತೆಯು, ಯೆಹೂದದ ರಾಜನಾಗಿದ್ದ ಯೆಹೋಷಾಫಾಟನ ಆಳಿಕೆಯ ಸಮಯದಲ್ಲಿ ಏನು ನಡೆಯಿತೊ ಅದರಿಂದ ಎತ್ತಿತೋರಿಸಲ್ಪಟ್ಟಿತು. ಯೆಹೋಷಾಫಾಟನು ಸತ್ಯಾರಾಧನೆಯ ಪರವಾಗಿ ಧೈರ್ಯದ ನಿಲುವನ್ನು ತೆಗೆದುಕೊಂಡನು. ಅವನು “ಯೆಹೂದದೇಶದಲ್ಲಿದ್ದ ಪೂಜಾಸ್ಥಳಗಳನ್ನೂ ಅಶೇರವಿಗ್ರಹಸ್ತಂಭಗಳನ್ನೂ ತೆಗೆದುಹಾಕಿಸಿದನು.” ಇದಲ್ಲದೆ, ಅವನು ಯೆಹೂದದ ಎಲ್ಲ ನಗರಗಳಲ್ಲಿ ಯೆಹೋವನ ಧರ್ಮಶಾಸ್ತ್ರವನ್ನು ಜನರಿಗೆ ಕಲಿಸಲಿಕ್ಕಾಗಿ ಸರದಾರರನ್ನು, ಲೇವಿಯರನ್ನು ಮತ್ತು ಯಾಜಕರನ್ನು ನೇಮಿಸಿದನು. ಆದರೂ, ‘ಪೂಜಾಸ್ಥಳಗಳು’ ಇಲ್ಲದೆ ಹೋಗಲಿಲ್ಲ. (2 ಪೂರ್ವ. 17:6-9; 20:33) ಮಿಥ್ಯ ದೇವತೆಗಳ ಆರಾಧನೆ ಮತ್ತು ವಿಧರ್ಮಿ ಪೂಜಾಸ್ಥಳಗಳಲ್ಲಿ ನಡೆಯುತ್ತಿದ್ದ ಅನಧಿಕೃತ ರೀತಿಯ ಯೆಹೋವನ ಆರಾಧನೆ ಎಷ್ಟು ಬಲವಾಗಿ ಬೇರೂರಿತ್ತೆಂದರೆ, ಅದು ಪೂರ್ತಿಯಾಗಿ ನಿರ್ಮೂಲನವಾಗಲಿಲ್ಲ.

ಯೆಹೋಷಾಫಾಟನು ಏರ್ಪಡಿಸಿದ್ದ ಶಿಕ್ಷಣ ಕಾರ್ಯಕ್ರಮವು ಜನರ ಮೇಲೆ ಶಾಶ್ವತ ಪ್ರಭಾವವನ್ನು ಬೀರುವುದರಲ್ಲಿ ವಿಫಲಗೊಂಡದ್ದೇಕೆ? ಆ ದಾಖಲೆಯು ಮುಂದುವರಿಸುವುದು: “ಜನರು ಇನ್ನೂ ತಮ್ಮ ಪಿತೃಗಳ ದೇವರಿಗಾಗಿ ಹೃದಯವನ್ನು ಸಿದ್ಧಪಡಿಸಿಕೊಂಡಿರಲಿಲ್ಲ.” (NW) ಅಂದರೆ ಅವರು ಕೇಳಿಸಿಕೊಂಡದ್ದೇನೊ ನಿಜ, ಆದರೆ ಅದರಂತೆ ನಡೆಯಲು ತಪ್ಪಿಹೋದರು. ಯಜ್ಞಗಳನ್ನು ಅರ್ಪಿಸಲಿಕ್ಕಾಗಿ ಯೆರೂಸಲೇಮಿನಲ್ಲಿರುವ ದೇವಾಲಯದ ವರೆಗೆ ಪ್ರಯಾಣ ಬೆಳೆಸುವುದು ಅನನುಕೂಲವೆಂದು ಪ್ರಾಯಶಃ ಅವರು ಎಣಿಸಿದ್ದರು. ಹೇಗಿದ್ದರೂ, ಅವರ ಹೃದಯಗಳು ನಂಬಿಕೆಯಿಂದ ಪ್ರಚೋದಿತವಾಗಿರಲಿಲ್ಲ. ಸ್ವಲ್ಪದರಲ್ಲೇ, ಅವರು ತಮ್ಮ ಹಳೆಯ ಮಾರ್ಗಗಳಿಗೆ ಹಿಂದಿರುಗಿದರು.

ಆದುದರಿಂದ, ಸೈತಾನನ ಲೋಕದ ಮಾರ್ಗಗಳಿಗೆ ಹಿಂದಿರುಗುವುದನ್ನು ತಪ್ಪಿಸಬೇಕಾದರೆ, ನಾವು ಯೆಹೋವನು ಇಂದು ಒದಗಿಸುತ್ತಿರುವ ಶಿಕ್ಷಣವನ್ನು ಪಡೆದುಕೊಳ್ಳಲಿಕ್ಕಾಗಿ ನಮ್ಮ ಹೃದಯಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಹೇಗೆ? ಪ್ರಾರ್ಥನೆಯು ಒಂದು ಪ್ರಮುಖ ವಿಧಾನವಾಗಿದೆ. ದೈವಿಕ ಶಿಕ್ಷಣವನ್ನು ನಾವು ಕೃತಜ್ಞತಾ ಮನೋಭಾವದಿಂದ ಅಂಗೀಕರಿಸುವೆವು ಎಂದು ನಾವು ಪ್ರಾರ್ಥಿಸಬೇಕು. (ಕೀರ್ತ. 27:4; 95:2) ಇದು, ಅಪರಿಪೂರ್ಣರಾದರೂ ಯೆಹೋವನು ತನ್ನ ಜನರಿಗೆ ಬೋಧಿಸುವುದರಲ್ಲಿ ಉಪಯೋಗಿಸಲಿಕ್ಕಾಗಿ ತಮ್ಮನ್ನು ನೀಡಿಕೊಂಡಿರುವ ನಮ್ಮ ಸಹೋದರರ ಪ್ರಯತ್ನಗಳನ್ನು ನಾವು ಮಾನ್ಯಮಾಡುವಂತೆ ಸಹಾಯಮಾಡುವುದು. ನಾವು ಯೆಹೋವನಿಗೆ, ಈಗ ಕಲಿಯುತ್ತಿರುವ ಹೊಸ ವಿಷಯಗಳಿಗಾಗಿ ಮಾತ್ರವಲ್ಲ, ಹಿಂದೆ ಕಲಿತಿರುವ ವಿಷಯಗಳಿಗಾಗಿ ನಮ್ಮ ಗಣ್ಯತೆಯನ್ನು ಆಳಗೊಳಿಸುವ ಸಂದರ್ಭಗಳಿಗಾಗಿಯೂ ಕೃತಜ್ಞತೆ ಸಲ್ಲಿಸುವಂತೆ ನಮ್ಮನ್ನು ಪ್ರಚೋದಿಸುವುದು. ದೇವರ ಚಿತ್ತವನ್ನು ಪೂರ್ಣವಾಗಿ ಮಾಡುವ ಬಯಕೆಯುಳ್ಳವರಾಗಿ ನಾವು, “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; . . . ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು” ಎಂದು ಪ್ರಾರ್ಥಿಸುತ್ತೇವೆ.—ಕೀರ್ತ. 86:11.

ನಿಮ್ಮ ಗಮನವನ್ನು ಕೇಂದ್ರೀಕರಿಸಿರಿ

ಗಮನಕೊಟ್ಟು ಕೇಳುವುದಕ್ಕೆ ಅನೇಕ ಅಡ್ಡಿತಡೆಗಳಿವೆ. ನಮ್ಮ ಮನಸ್ಸು ಚಿಂತೆಗಳಿಂದ ತುಂಬಿರಬಹುದು. ಸಭೆಯಲ್ಲಿ ಇಲ್ಲವೆ ಸಭಾಗೃಹದ ಹೊರಗೆ ಗದ್ದಲ ಮತ್ತು ಜನರ ಚಲನೆಗಳು ನಮ್ಮನ್ನು ಅಪಕರ್ಷಿಸಬಹುದು. ಶಾರೀರಿಕ ಅಸೌಖ್ಯವು ಗಮನ ಕೊಡುವುದನ್ನು ಕಷ್ಟಕರವಾಗಿ ಮಾಡಬಹುದು. ಚಿಕ್ಕ ಮಕ್ಕಳಿರುವವರು ತಮ್ಮ ಗಮನ ಅನೇಕ ಸಲ ಅತ್ತಿತ್ತ ಹೋಗುತ್ತದೆಂದು ಕಂಡುಕೊಳ್ಳುತ್ತಾರೆ. ಹೀಗಿರುವಾಗ, ನಮ್ಮ ಗಮನವು ಕಾರ್ಯಕ್ರಮದ ಮೇಲೆ ಕೇಂದ್ರೀಕೃತವಾಗಿರುವಂತೆ ನಮಗೆ ಯಾವುದು ಸಹಾಯಮಾಡಬಲ್ಲದು?

ನಮ್ಮ ಕಣ್ಣುಗಳನ್ನು ನಾವು ಎಲ್ಲಿ ಕೇಂದ್ರೀಕರಿಸುತ್ತೇವೋ ಅಲ್ಲಿಯೇ ನಮ್ಮ ಗಮನವೂ ಹೆಚ್ಚು ಕೇಂದ್ರೀಕರಿಸುವುದು. ಆದುದರಿಂದ, ಭಾಷಣಕಾರನ ಮೇಲೆ ನಿಮ್ಮ ಕಣ್ಣುಗಳನ್ನು ನೆಡುವ ಮೂಲಕ, ಗಮನವನ್ನು ಕೇಂದ್ರೀಕರಿಸಲು ನಿಮಗೆ ಸಹಾಯಮಾಡುವಂತೆ ಅವುಗಳನ್ನು ಉಪಯೋಗಿಸಿರಿ. ಅವನು ಒಂದು ಬೈಬಲ್‌ ವಚನವನ್ನು ಉದ್ಧರಿಸುವಲ್ಲಿ, ಅದು ಚಿರಪರಿಚಿತವಾದದ್ದಾದರೂ ಚಿಂತಿಲ್ಲ, ಅದನ್ನು ತೆರೆದು ನೋಡಿ ಮತ್ತು ಅವನು ಅದನ್ನು ಓದುವಾಗ ಅದನ್ನನುಸರಿಸಿ. ಆಗುವಂಥ ಪ್ರತಿಯೊಂದು ಸದ್ದು ಮತ್ತು ಚಲನೆಯ ದಿಕ್ಕಿನಲ್ಲಿ ತಲೆಯನ್ನು ತಿರುಗಿಸಿ ನೋಡುವ ಪ್ರೇರೇಪಣೆಯನ್ನು ತಡೆಯಿರಿ. ಕಣ್ಣುಗಳು ಅಪಕರ್ಷಿಸುವಂಥ ವಿಷಯಗಳನ್ನು ನಿಮ್ಮ ಮನಸ್ಸಿಗೆ ತುಂಬಿಸುವಲ್ಲಿ, ವೇದಿಕೆಯಿಂದ ಹೇಳಲ್ಪಡುವ ವಿಷಯಗಳಲ್ಲಿ ಹೆಚ್ಚಿನದ್ದು ನಿಮಗೆ ನಷ್ಟವಾಗುವುದು.

ಯಾವುದೇ ‘ಚಿಂತೆಗಳು,’ ನೀವು ಕಾರ್ಯಕ್ರಮಕ್ಕೆ ಗಮನ ಕೊಡುವುದನ್ನು ಕಷ್ಟಕರವಾಗಿ ಮಾಡುವಲ್ಲಿ, ಗಮನಕೊಡಲು ಬೇಕಾಗಿರುವ ಮನ ಮತ್ತು ಹೃದಯದ ಶಾಂತಿಗಾಗಿ ಯೆಹೋವನಿಗೆ ಪ್ರಾರ್ಥಿಸಿರಿ. (ಕೀರ್ತ. 94:19; ಫಿಲಿ. 4:6, 7) ಅಗತ್ಯ ಬೀಳುವಲ್ಲಿ ಪದೇ ಪದೇ ಪ್ರಾರ್ಥಿಸಿರಿ. (ಮತ್ತಾ. 7:7, 8) ಸಭಾ ಕೂಟಗಳು ಯೆಹೋವನು ಮಾಡಿರುವ ಒಂದು ಒದಗಿಸುವಿಕೆಯಾಗಿವೆ. ನೀವು ಅವುಗಳಿಂದ ಪ್ರಯೋಜನ ಪಡೆಯುವಂತೆ ಆತನು ಬಯಸುತ್ತಾನೆಂದು ನೀವು ಖಾತ್ರಿಯಿಂದಿರಬಹುದು.—1 ಯೋಹಾ. 5:14, 15.

ಭಾಷಣಗಳಿಗೆ ಕಿವಿಗೊಡುವುದು

ಭಾಷಣಗಳಲ್ಲಿ ಕೇಳಿಸಿಕೊಂಡಿರುವ ಅಚ್ಚುಮೆಚ್ಚಿನ ಅಂಶಗಳು ಪ್ರಾಯಶಃ ನಿಮ್ಮ ನೆನಪಿಗೆ ಬರಸಾಧ್ಯವಿದೆ. ಆದರೆ ಭಾಷಣಗಳಿಗೆ ಕಿವಿಗೊಡುವುದರಲ್ಲಿ ಕೇವಲ ಎದ್ದು ಕಾಣುವಂಥ ಅಂಶಗಳನ್ನು ಸಂಗ್ರಹಿಸುವುದಕ್ಕಿಂತಲೂ ಹೆಚ್ಚಿನದ್ದು ಅಡಕವಾಗಿದೆ. ಒಂದು ಭಾಷಣವು ಒಂದು ಪ್ರಯಾಣದಂತಿದೆ. ದಾರಿಯಲ್ಲಿ ನೋಡಲು ಆಸಕ್ತಿಕರವಾದ ವಿಷಯಗಳು ಇರಬಹುದಾದರೂ, ಮುಖ್ಯ ವಿಷಯವು ಗಮ್ಯಸ್ಥಾನವಾಗಿದೆ, ಅಂದರೆ ಅದರ ಉದ್ದೇಶವಾಗಿದೆ. ಭಾಷಣಕಾರನು ಸಭಿಕರನ್ನು ಒಂದು ನಿರ್ದಿಷ್ಟ ತೀರ್ಮಾನವನ್ನು ತೆಗೆದುಕೊಳ್ಳುವಂತೆ ಅಥವಾ ಅವರು ಕ್ರಿಯೆಗೈಯುವಂತೆ ನಡೆಸಲು ಪ್ರಯತ್ನಿಸುತ್ತಿರಬಹುದು.

ಯೆಹೋಶುವನು ಇಸ್ರಾಯೇಲ್‌ ಜನಾಂಗಕ್ಕೆ ಕೊಟ್ಟ ಭಾಷಣವನ್ನು ಪರಿಗಣಿಸಿರಿ. ಅದು ಯೆಹೋಶುವ 24:1-15 ರಲ್ಲಿ ದಾಖಲಿಸಲ್ಪಟ್ಟಿದೆ. ಅವನ ಉದ್ದೇಶವು, ಆ ಜನರು ಸತ್ಯಾರಾಧನೆಯ ಸಂಬಂಧದಲ್ಲಿ ದೃಢವಾದ ನಿಲುವನ್ನು ತೆಗೆದುಕೊಳ್ಳುವಂತೆ ಅವರನ್ನು ಪ್ರಚೋದಿಸುವುದೇ ಆಗಿತ್ತು. ಇದನ್ನು ಮಾಡಲು ಅವರು ಸುತ್ತಲಿನ ಜನಾಂಗಗಳ ವಿಗ್ರಹಾರಾಧನೆಯಿಂದ ತಮ್ಮನ್ನು ಪೂರ್ತಿಯಾಗಿ ಪ್ರತ್ಯೇಕಿಸಿಕೊಳ್ಳಬೇಕಿತ್ತು. ಅದು ಏಕೆ ಅಷ್ಟು ಪ್ರಾಮುಖ್ಯವಾಗಿತ್ತು? ಏಕೆಂದರೆ ಮಿಥ್ಯಾರಾಧನೆಯ ವ್ಯಾಪನೆಯು ಯೆಹೋವನೊಂದಿಗೆ ಆ ಜನಾಂಗಕ್ಕಿದ್ದ ಉತ್ತಮ ನಿಲುವಿಗೆ ಗಂಭೀರವಾದ ಧಕ್ಕೆಯನ್ನು ಉಂಟುಮಾಡಲಿಕ್ಕಿತ್ತು. ಯೆಹೋಶುವನ ಯಾಚನೆಗೆ ಆ ಜನರು, “ಯೆಹೋವನ ಸೇವೆಯನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸುವದು ನಮಗೆ ದೂರವಾಗಿರಲಿ; . . . ನಾವೂ ಯೆಹೋವನನ್ನೇ ಸೇವಿಸುವೆವು” ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಿದರು. ಮತ್ತು ಹಾಗೆಯೇ ಮಾಡಿದರು!—ಯೆಹೋ. 24:16, 18, 31.

ನೀವು ಒಂದು ಭಾಷಣಕ್ಕೆ ಕಿವಿಗೊಡುವಾಗ, ಅದರ ಉದ್ದೇಶವನ್ನು ವಿವೇಚಿಸಿ ತಿಳಿದುಕೊಳ್ಳಲು ಪ್ರಯತ್ನಿಸಿರಿ. ಭಾಷಣಕಾರನು ತಿಳಿಸುವಂತಹ ವಿಷಯಗಳು, ಆ ಉದ್ದೇಶವನ್ನು ಮುಟ್ಟಲು ಹೇಗೆ ಸಹಾಯಮಾಡುತ್ತವೆಂಬುದನ್ನು ಪರಿಗಣಿಸಿರಿ. ಕೊಡಲ್ಪಡುತ್ತಿರುವ ಮಾಹಿತಿಯು ನಿಮ್ಮಿಂದ ಏನನ್ನು ಕೇಳಿಕೊಳ್ಳುತ್ತದೆಂದು ಸ್ವತಃ ನಿಮ್ಮನ್ನೇ ಪ್ರಶ್ನಿಸಿಕೊಳ್ಳಿರಿ.

ಚರ್ಚೆಗಳ ಸಮಯದಲ್ಲಿ ಕಿವಿಗೊಡುವುದು

ಕಾವಲಿನಬುರುಜು ಅಧ್ಯಯನ, ಸಭಾ ಪುಸ್ತಕ ಅಧ್ಯಯನ, ಮತ್ತು ಸೇವಾ ಕೂಟದ ಕೆಲವು ಭಾಗಗಳು, ಮುದ್ರಿತ ಬೈಬಲಾಧಾರಿತ ವಿಷಯಗಳ ಪ್ರಶ್ನೋತ್ತರ ಚರ್ಚೆಗಳಾಗಿ ನಡೆಸಲ್ಪಡುತ್ತವೆ.

ಒಂದು ಚರ್ಚೆಯ ಸಮಯದಲ್ಲಿ ಕಿವಿಗೊಡುವುದು, ಕೆಲವು ವಿಧಗಳಲ್ಲಿ ಒಂದು ಸಂಭಾಷಣೆಯಲ್ಲಿ ಭಾಗವಹಿಸಿದಂತಿರುತ್ತದೆ. ಅದರಿಂದ ಪೂರ್ಣವಾಗಿ ಪ್ರಯೋಜನ ಪಡೆಯಬೇಕಾದರೆ, ಜಾಗರೂಕತೆಯಿಂದ ಕಿವಿಗೊಡಿರಿ. ಆ ಚರ್ಚೆ ಯಾವ ದಿಕ್ಕಿನಲ್ಲಿ ಮುಂದುವರಿಯುತ್ತಿದೆ ಎಂಬುದನ್ನು ಅವಲೋಕಿಸಿರಿ. ಅದನ್ನು ನಡೆಸುವವನು ಅದರ ಮುಖ್ಯ ವಿಷಯವನ್ನೂ ಮುಖ್ಯ ಅಂಶಗಳನ್ನೂ ಹೇಗೆ ಒತ್ತಿಹೇಳುತ್ತಾನೆಂಬುದನ್ನು ಗಮನಿಸಿರಿ. ಅವನ ಪ್ರಶ್ನೆಗಳನ್ನು ಮಾನಸಿಕವಾಗಿ ಉತ್ತರಿಸಿರಿ. ಇತರರು ಆ ವಿಷಯವನ್ನು ವಿವರಿಸಿ ಅನ್ವಯಿಸುವಾಗ ಕಿವಿಗೊಟ್ಟು ಕೇಳಿರಿ. ಇತರರ ದೃಷ್ಟಿಕೋನದಿಂದ ಮಾಹಿತಿಯನ್ನು ನೋಡುವುದು, ಒಂದು ಚಿರಪರಿಚಿತ ವಿಷಯದ ಬಗ್ಗೆ ನಿಮಗೆ ಒಂದು ಹೊಸ ಒಳನೋಟವನ್ನು ನೀಡಬಹುದು. ಮತ್ತು ನಿಮ್ಮ ಸ್ವಂತ ನಂಬಿಕೆಯ ಹೇಳಿಕೆಗಳನ್ನು ತಿಳಿಸುವ ಮೂಲಕ, ಈ ಪರಸ್ಪರ ಅಭಿಪ್ರಾಯ ವಿನಿಮಯಕ್ಕೆ ಹೆಚ್ಚನ್ನು ಕೂಡಿಸಿರಿ.—ರೋಮಾ. 1:12.

ನೇಮಿತ ವಿಷಯಭಾಗವನ್ನು ಮುಂದಾಗಿಯೇ ಅಧ್ಯಯನ ಮಾಡುವುದು, ನೀವು ಚರ್ಚೆಯಲ್ಲಿ ತಲ್ಲೀನರಾಗುವಂತೆ ಮತ್ತು ಇತರರು ನೀಡುವ ಹೇಳಿಕೆಗಳನ್ನು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವುದು. ನಿಮ್ಮ ಸ್ಥಿತಿಗತಿಗಳಿಂದಾಗಿ ಪೂರ್ತಿಯಾಗಿ ವಿಷಯಭಾಗವನ್ನು ಅಧ್ಯಯನ ಮಾಡುವುದು ಕಷ್ಟಕರವಾಗಿರುವುದಾದರೆ, ಕೂಟಕ್ಕೆ ಮೊದಲು ಆ ಮಾಹಿತಿಯನ್ನು ಮೇಲಿಂದ ಮೇಲೆ ಓದಿ, ಅದರ ಹೊರನೋಟವನ್ನು ಪಡೆದುಕೊಳ್ಳಲು ಕಡಿಮೆಪಕ್ಷ ಕೆಲವು ನಿಮಿಷಗಳನ್ನಾದರೂ ತೆಗೆದುಕೊಳ್ಳಿರಿ. ಹೀಗೆ ಮಾಡುವ ಮೂಲಕ, ಚರ್ಚೆಯಿಂದ ನೀವು ಹೆಚ್ಚು ಪ್ರಯೋಜನವನ್ನು ಪಡೆಯಲು ಶಕ್ತರಾಗುವಿರಿ.

ಸಮ್ಮೇಳನಗಳು ಮತ್ತು ಅಧಿವೇಶನಗಳಲ್ಲಿ ಕಿವಿಗೊಡುವುದು

ಸಮ್ಮೇಳನಗಳು ಮತ್ತು ಅಧಿವೇಶನಗಳಲ್ಲಿ, ಸಭಾ ಕೂಟಗಳಿಗಿಂತಲೂ ಹೆಚ್ಚು ಅಪಕರ್ಷಣೆಗಳಿರಬಹುದು. ಇದು ಕಿವಿಗೊಡುವುದನ್ನು ಇನ್ನೂ ದೊಡ್ಡ ಪಂಥಾಹ್ವಾನವಾಗಿ ಮಾಡಬಹುದು. ನಮಗೆ ಯಾವುದು ಸಹಾಯಮಾಡಬಲ್ಲದು?

ಒಂದು ಪ್ರಮುಖ ಸಂಗತಿಯು, ರಾತ್ರಿ ಸಾಕಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳುವುದೇ ಆಗಿದೆ. ಪ್ರತಿದಿನ ಕಾರ್ಯಕ್ರಮವು ಆರಂಭವಾಗುವುದಕ್ಕೆ ಮೊದಲು, ಮುಖ್ಯ ವಿಷಯವನ್ನು ಮನಸ್ಸಿನಲ್ಲಿ ಸ್ಥಿರವಾಗಿಟ್ಟುಕೊಳ್ಳಿರಿ. ಪ್ರತಿಯೊಂದು ಭಾಷಣದ ಶೀರ್ಷಿಕೆಯನ್ನು ನೋಡಿ, ಅದರಲ್ಲಿ ನೀಡಲ್ಪಡಬಹುದಾದ ವಿಷಯಗಳನ್ನು ಎದುರುನೋಡಲು ಪ್ರಯತ್ನಿಸಿ. ನಿಮ್ಮ ಬೈಬಲಿನ ಸದುಪಯೋಗವನ್ನು ಮಾಡಿರಿ. ಮುಖ್ಯ ಅಂಶಗಳ ಸಂಕ್ಷಿಪ್ತ ಟಿಪ್ಪಣಿಗಳನ್ನು ಬರೆದುಕೊಳ್ಳುವುದು, ಕಾರ್ಯಕ್ರಮದ ಮೇಲೆ ತಮ್ಮ ಮನಸ್ಸುಗಳನ್ನು ಕೇಂದ್ರೀಕರಿಸಲು ಸಹಾಯಮಾಡುತ್ತದೆಂದು ಅನೇಕರು ಕಂಡುಕೊಳ್ಳುತ್ತಾರೆ. ನಿಮ್ಮ ಸ್ವಂತ ಜೀವನದಲ್ಲಿ ಮತ್ತು ಶುಶ್ರೂಷೆಯಲ್ಲಿ ಅನ್ವಯಿಸಲು ಯೋಜಿಸುವ ವಿಷಯಗಳನ್ನು ಬರೆದಿಡಿರಿ. ಸಮ್ಮೇಳನದ ನಿವೇಶನಕ್ಕೆ ಪ್ರಯಾಣಿಸುತ್ತಿರುವಾಗ ಮತ್ತು ಅಲ್ಲಿಂದ ಬರುತ್ತಿರುವಾಗ ಕೆಲವು ಅಂಶಗಳನ್ನು ಚರ್ಚಿಸಿರಿ. ಕೇಳಿಸಿಕೊಂಡ ಮಾಹಿತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಇದು ನಿಮಗೆ ಸಹಾಯಮಾಡುವುದು.

ಕಿವಿಗೊಡಲು ಮಕ್ಕಳಿಗೆ ತರಬೇತಿ ನೀಡುವುದು

ಮಕ್ಕಳನ್ನು—ಶಿಶುಗಳನ್ನು ಸಹ—ಸಭಾ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳಿಗೆ ಕರೆದೊಯ್ಯುವುದರಿಂದ, ಕ್ರೈಸ್ತ ಹೆತ್ತವರು “ರಕ್ಷಣೆಹೊಂದಿಸುವ ಜ್ಞಾನವನ್ನು” ಪಡೆದುಕೊಳ್ಳಲು ಅವರಿಗೆ ಸಹಾಯಮಾಡಬಲ್ಲರು. (2 ತಿಮೊ. 3:15) ಎಲ್ಲ ಮಕ್ಕಳ ಸ್ವಾಭಾವಿಕ ಪ್ರವೃತ್ತಿ ಮತ್ತು ಗಮನಾವಧಿಯು ಒಂದೇ ರೀತಿಯದ್ದಾಗಿರದ ಕಾರಣ, ಅವರು ಗಮನಕೊಟ್ಟು ಕೇಳಿಸಿಕೊಳ್ಳಲು ಕಲಿಯುವಂತೆ ಸಹಾಯಮಾಡಲು ವಿವೇಚನೆಯ ಅಗತ್ಯವಿದೆ. ಈ ಕೆಳಗಿನ ಸಲಹೆಗಳನ್ನು ನೀವು ಸಹಾಯಕರವಾದದ್ದಾಗಿ ಕಂಡುಕೊಳ್ಳಬಹುದು.

ಮನೆಯಲ್ಲಿ ನಿಮ್ಮ ಚಿಕ್ಕ ಮಕ್ಕಳು ಸುಮ್ಮನೆ ಕುಳಿತು ನಮ್ಮ ಕ್ರೈಸ್ತ ಪ್ರಕಾಶನಗಳನ್ನು ಓದಲು ಅಥವಾ ಚಿತ್ರಗಳನ್ನು ನೋಡಲು ಸಮಯಗಳನ್ನು ಏರ್ಪಡಿಸಿರಿ. ಕೂಟಗಳಲ್ಲಿ ಮಕ್ಕಳು ತಲ್ಲೀನರಾಗಿರುವಂತೆ ಮಾಡಲಿಕ್ಕಾಗಿ ಆಟದ ಸಾಮಾನುಗಳನ್ನು ಉಪಯೋಗಿಸಬೇಡಿ. ಪುರಾತನ ಇಸ್ರಾಯೇಲಿನಲ್ಲಿ ನಿಜವಾಗಿದ್ದಂತೆಯೇ ಇಂದು ಸಹ ಮಕ್ಕಳು ಕೂಟಗಳಿಗೆ ಹಾಜರಾಗುವುದು “ಕೇಳಿ ತಿಳಿದುಕೊಳ್ಳುವ” ಕಾರಣಕ್ಕಾಗಿಯೇ. (ಧರ್ಮೋ. 31:12) ಪ್ರಾಯೋಗಿಕವಾಗಿರುವಲ್ಲಿ, ಕೆಲವು ಮಂದಿ ಹೆತ್ತವರು ಅತಿ ಚಿಕ್ಕ ಮಕ್ಕಳಿಗೂ ಚರ್ಚಿಸಲ್ಪಡುವ ಪುಸ್ತಕಗಳ ವೈಯಕ್ತಿಕ ಪ್ರತಿಗಳನ್ನು ಒದಗಿಸುತ್ತಾರೆ. ಮಕ್ಕಳು ಸ್ವಲ್ಪ ದೊಡ್ಡವರಾದಂತೆ, ಸಭಿಕರ ಭಾಗವಹಿಸುವಿಕೆಯಿರುವ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿಕ್ಕಾಗಿ ತಯಾರಿ ಮಾಡುವಂತೆ ಅವರಿಗೆ ಸಹಾಯಮಾಡಿರಿ.

ಯೆಹೋವನಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದರ ಮಧ್ಯೆ ನಿಕಟ ಸಂಬಂಧವಿರುವುದನ್ನು ಶಾಸ್ತ್ರವಚನಗಳು ಪ್ರಕಟಪಡಿಸುತ್ತವೆ. ಇದನ್ನು, ಮೋಶೆ ಇಸ್ರಾಯೇಲ್‌ ಜನಾಂಗಕ್ಕೆ ಹೇಳಿದ ಮಾತುಗಳಲ್ಲಿ ನಾವು ನೋಡಬಲ್ಲೆವು: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; . . . ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ [“ಕಿವಿಗೊಡಿರಿ,” NW]. ಆತನನ್ನು ಹೊಂದಿಕೊಂಡೇ ಇರ್ರಿ.” (ಓರೆ ಅಕ್ಷರಗಳು ನಮ್ಮವು.) (ಧರ್ಮೋ. 30:19, 20) ಇಂದು ಯೆಹೋವನು ಒದಗಿಸುವ ಉಪದೇಶಕ್ಕೆ ಕಿವಿಗೊಟ್ಟು, ಅದನ್ನು ವಿಧೇಯತೆಯಿಂದ ನಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳುವುದು, ದೇವರ ಒಪ್ಪಿಗೆಯನ್ನು ಮತ್ತು ನಿತ್ಯಜೀವದ ಆಶೀರ್ವಾದವನ್ನು ಪಡೆಯಲು ಅತ್ಯಾವಶ್ಯಕವಾದ ವಿಷಯವಾಗಿದೆ. ಆದುದರಿಂದ, “ನೀವು ಕಿವಿಗೊಡುವ ವಿಧಕ್ಕೆ ಗಮನ ಕೊಡಿರಿ” ಎಂಬ ಯೇಸುವಿನ ಬುದ್ಧಿವಾದವನ್ನು ಪಾಲಿಸುವುದು ಎಷ್ಟು ಮಹತ್ವವುಳ್ಳದ್ದಾಗಿದೆ!—ಲೂಕ 8:18, NW.

ಪರಿಣಾಮಕಾರಿಯಾದ ಕಿವಿಗೊಡುವಿಕೆಗೆ ಸೂಚನೆಗಳು

  • ಕಾರ್ಯಕ್ರಮದ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಹಾಯಕ್ಕಾಗಿ ಪ್ರಾರ್ಥಿಸಿ

  • ನಿಮ್ಮ ಕಣ್ಣುಗಳನ್ನು ಭಾಷಣಕಾರನ ಮೇಲೆ ನೆಡಿರಿ

  • ಶಾಸ್ತ್ರವಚನಗಳು ಉದ್ಧರಿಸಲ್ಪಡುವಾಗ ಅವುಗಳನ್ನು ನಿಮ್ಮ ಬೈಬಲಿನಲ್ಲಿ ತೆರೆದು ನೋಡಿರಿ ಮತ್ತು ಅನುಸರಿಸಿ

  • ಭಾಷಣದ ಉದ್ದೇಶವೇನೆಂಬದನ್ನು ಕಂಡುಕೊಳ್ಳಲು ಪ್ರಯತ್ನಿಸಿ

  • ಕೇಳಲ್ಪಡುವ ಪ್ರಶ್ನೆಗಳನ್ನು ಮಾನಸಿಕವಾಗಿ ಉತ್ತರಿಸಿ; ಕೊಡಲ್ಪಡುವ ಹೇಳಿಕೆಗಳಿಗೆ ಜಾಗರೂಕತೆಯಿಂದ ಕಿವಿಗೊಡಿರಿ

  • ಸಂಕ್ಷಿಪ್ತ ಟಿಪ್ಪಣಿಗಳನ್ನು ಬರೆದುಕೊಳ್ಳಿ

  • ನೀವು ಸ್ವತಃ ಅನ್ವಯಿಸಿಕೊಳ್ಳಲು ಯೋಜಿಸುವ ವಿಷಯಗಳನ್ನು ಬೇರ್ಪಡಿಸಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ