“ಕಿವಿಗೊಡಿ ಮತ್ತು ಹೆಚ್ಚಿನ ಉಪದೇಶವನ್ನು ಪಡೆದುಕೊಳ್ಳಿ”
1 ಜ್ಞಾನೋಕ್ತಿಗಳ ಪುಸ್ತಕವು, ವಿವೇಕವು ಹೀಗೆ ಕರೆಯುತ್ತಿರುವುದಾಗಿ ಚಿತ್ರಿಸುತ್ತದೆ: ‘ಕೇಳಿರಿ, ನಾನು ಶ್ರೇಷ್ಠವಾದ ಸಂಗತಿಗಳನ್ನು ಹೇಳುವೆನು, ಯಥಾರ್ಥಕ್ಕಾಗಿಯೇ ತುಟಿಗಳನ್ನು ತೆರೆಯುವೆನು, ಸದ್ಯೋಚನೆಯೂ ಸುಜ್ಞಾನವೂ ನನ್ನಲ್ಲಿವೆ. ಈಗ ನನ್ನ ಕಡೆಗೆ ಕಿವಿಗೊಡಿರಿ, ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರೇ ಸರಿ. ಯಾವನು ನನ್ನನ್ನು ಹೊಂದುತ್ತಾನೋ ಅವನು ಜೀವವನ್ನು ಹೊಂದುತ್ತಾನೆ; ಯೆಹೋವನ ಕಟಾಕ್ಷಕ್ಕೆ ಗುರಿಯಾಗುವನು.’ (ಜ್ಞಾನೋ. 8:6, 14, 32, 35) ಈ ಮಾತುಗಳು, “ದೇವರ ವಾಕ್ಯದ ಬೋಧಕರು” ಜಿಲ್ಲಾ ಅಧಿವೇಶನದಲ್ಲಿ ನಮಗಾಗಿ ಕಾದಿರುವ ಉಪದೇಶವನ್ನು ಉತ್ತಮವಾಗಿ ವಿವರಿಸುತ್ತವೆ.
2 ಲೋಕವ್ಯಾಪಕ ಸಹೋದರತ್ವದ ಅಗತ್ಯಗಳು ಪರಿಶೀಲಿಸಲ್ಪಟ್ಟಿವೆ, ಮತ್ತು ಅಧಿವೇಶನದ ಕಾರ್ಯಕ್ರಮವು ಆ ಅಗತ್ಯಗಳೆಡೆಗೆ ಗಮನಹರಿಸುವಂಥ ರೀತಿಯಲ್ಲಿ ತಯಾರಿಸಲ್ಪಟ್ಟಿದೆ. ನೀಡಲ್ಪಡಲಿರುವ ಆತ್ಮಿಕ ಉಪದೇಶ ಮತ್ತು ಪ್ರಾಯೋಗಿಕ ಸಲಹೆಗಳನ್ನು ಅನ್ವಯಿಸುವಲ್ಲಿ, ನಾವು ಸಂತೋಷಿತರಾಗಿರಲು, ಯೆಹೋವನೊಂದಿಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳಲು, ಮತ್ತು ನಿತ್ಯಜೀವಕ್ಕೆ ನಡೆಸುವ ದಾರಿಯಲ್ಲಿಯೇ ಉಳಿಯಲು ಇವು ನಮಗೆ ಸಹಾಯಮಾಡುವವು. ಖಂಡಿತವಾಗಿಯೂ, ‘ಕಿವಿಗೊಡಲು ಮತ್ತು ಹೆಚ್ಚಿನ ಉಪದೇಶವನ್ನು ಪಡೆದುಕೊಳ್ಳಲು’ ನಮಗೆ ಸಕಾರಣವಿದೆ.—ಜ್ಞಾನೋ. 1:5, NW.
3 ಕಾರ್ಯಕ್ರಮಕ್ಕೆ ಮುಂಚೆ: ನೀಡಲ್ಪಡುವ ವಿಷಯಗಳಿಂದ ನಾವು ಸಂಪೂರ್ಣವಾದ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ಕಾರ್ಯಕ್ರಮವು ಆರಂಭವಾಗುವ ಮುಂಚೆಯೇ ನಮ್ಮ ಸೀಟ್ಗಳಲ್ಲಿ ಕುಳಿತುಕೊಂಡಿದ್ದು ಸರಿಯಾದ ಮನಸ್ಥಿತಿಯುಳ್ಳವರಾಗಿರಬೇಕು. ಇದು ಒಳ್ಳೇ ವೈಯಕ್ತಿಕ ಸಂಘಟನೆಯನ್ನು ಅಗತ್ಯಪಡಿಸುತ್ತದೆ. ಒಂದು ಮುಖ್ಯ ವಿಷಯವು, ಮನೆಯಿಂದ ಬೇಗನೆ ಹೊರಡುವುದಾಗಿದೆ. ಮುಂಚಿನ ರಾತ್ರಿ ಬೇಗನೆ ನಿದ್ರೆಮಾಡಿ. ನಿಮ್ಮ ಗುಂಪಿನಲ್ಲಿರುವ ಎಲ್ಲರೂ ತಯಾರಾಗಲು ಸಾಕಷ್ಟು ಸಮಯವನ್ನು ಕೊಡಲಿಕ್ಕಾಗಿ ಮತ್ತು ಅವರಿಗೆ ತಿನ್ನಲಿಕ್ಕಾಗಿ ಏನನ್ನಾದರೂ ಸಿದ್ಧಪಡಿಸಲಿಕ್ಕಾಗಿ ಬೇಗನೆ ಏಳಿ. ಕಾಲಕ್ಕೆ ಮುಂಚಿತವಾಗಿ ಅಧಿವೇಶನದ ಸ್ಥಳಕ್ಕೆ ಬರುವ ಮೂಲಕ ನೀವು ನಿಮ್ಮ ಸೀಟನ್ನು ಕಂಡುಕೊಳ್ಳಲು ಹಾಗೂ ಕಾರ್ಯಕ್ರಮಕ್ಕೆ ಮುಂಚೆ ಅವಶ್ಯವಿರುವ ಇನ್ನಿತರ ವಿಚಾರಗಳನ್ನು ನೋಡಿಕೊಳ್ಳಲು ಸಾಧ್ಯವಾಗುವುದು. ಪ್ರತಿದಿನ ಬೆಳಗ್ಗೆ 8:00 ಗಂಟೆಗೆ ಬಾಗಿಲುಗಳನ್ನು ತೆರೆಯಲಾಗುವುದು ಮತ್ತು 9:30ಕ್ಕೆ ಕಾರ್ಯಕ್ರಮವು ಆರಂಭವಾಗುವುದು.
4 “ಕೂಡಿದ ಸಭೆಗಳಲ್ಲಿ” ಯೆಹೋವನನ್ನು ಸ್ತುತಿಸುವುದೇ ನಾವು ಒಟ್ಟುಗೂಡಿಬರುವುದರ ಪ್ರಧಾನ ಉದ್ದೇಶವಾಗಿರುವುದರಿಂದ, ಪ್ರತಿಯೊಂದು ಸೆಷನ್ ದೇವರನ್ನು ಹೊಗಳುವಂಥ ರೀತಿಯಲ್ಲಿ ಆರಂಭವಾಗಬೇಕು. (ಕೀರ್ತ. 26:12) ಈ ಕಾರಣದಿಂದಾಗಿ, ಆರಂಭದ ಗೀತೆಯು ಪ್ರಕಟಿಸಲ್ಪಡುವ ಮುನ್ನ ಎಲ್ಲರೂ ತಮ್ಮ ಸೀಟ್ಗಳಲ್ಲಿ ಕುಳಿತುಕೊಂಡಿರುವಂತೆ ಪ್ರೋತ್ಸಾಹಿಸಲಾಗಿದೆ. ಇದು, “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ” ಎಂಬ ಶಾಸ್ತ್ರೀಯ ಉತ್ತೇಜನಕ್ಕೆ ಹೊಂದಿಕೆಯಲ್ಲಿದೆ. (1 ಕೊರಿಂ. 14:40) ನಮ್ಮಲ್ಲಿ ಪ್ರತಿಯೊಬ್ಬರಿಗೆ ಅದು ಏನನ್ನು ಅರ್ಥೈಸುತ್ತದೆ? ಪೀಠಿಕಾರೂಪದ ಸಂಗೀತದ ಸಮಯದಲ್ಲಿ ಅಧ್ಯಕ್ಷನು ವೇದಿಕೆಯ ಮೇಲೆ ಕುಳಿತುಕೊಂಡಿರುವುದನ್ನು ನೀವು ನೋಡುವಾಗ, ತಡಮಾಡದೆ ನಿಮ್ಮ ಸೀಟ್ಗೆ ಹೋಗಿ ಕುಳಿತುಕೊಳ್ಳಿ. ಇದು ಪ್ರತಿಯೊಂದು ಸೆಷನ್ನ ಆರಂಭದ ಗೀತೆಯಲ್ಲಿ, ಯೆಹೋವನಿಗೆ ಸ್ತುತಿಯನ್ನು ಹಾಡುವುದರಲ್ಲಿ ಹೃತ್ಪೂರ್ವಕವಾಗಿ ಭಾಗವಹಿಸಲು ನಿಮ್ಮನ್ನು ಶಕ್ತರನ್ನಾಗಿ ಮಾಡುವುದು.—ಕೀರ್ತ. 149:1.
5 ಕಾರ್ಯಕ್ರಮವು ನಡೆಯುತ್ತಿರುವಾಗ: ಎಜ್ರನು ‘ಯೆಹೋವನ ಧರ್ಮಶಾಸ್ತ್ರವನ್ನು ಅಭ್ಯಾಸಿಸಲಿಕ್ಕಾಗಿ ಮತ್ತು ಅನುಸರಿಸಲಿಕ್ಕಾಗಿ ತನ್ನ ಹೃದಯವನ್ನು ಸಿದ್ಧಪಡಿಸಿಕೊಂಡನು.’ (ಎಜ್ರ 7:10, NW) ಯೆಹೋವನು ಒದಗಿಸುವ ಉಪದೇಶವನ್ನು ಪಡೆದುಕೊಳ್ಳಲಿಕ್ಕಾಗಿ ನಾವು ನಮ್ಮ ಹೃದಯಗಳನ್ನು ಹೇಗೆ ಸಿದ್ಧಪಡಿಸಬಹುದು? ನೀವು ಮುದ್ರಿತ ಕಾರ್ಯಕ್ರಮದಲ್ಲಿ ಪಟ್ಟಿಮಾಡಲ್ಪಟ್ಟಿರುವ ವಿಭಿನ್ನ ಭಾಗಗಳ ಮುಖ್ಯ ವಿಷಯಗಳನ್ನು ಪರಿಶೀಲಿಸುವಾಗ, ಹೀಗೆ ಕೇಳಿಕೊಳ್ಳಿ, ‘ಈ ಕಾರ್ಯಕ್ರಮದ ಮೂಲಕ ಯೆಹೋವನು ನನಗೆ ಏನನ್ನು ಹೇಳುತ್ತಿದ್ದಾನೆ? ನಾನು ಮತ್ತು ನನ್ನ ಕುಟುಂಬವು ಪ್ರಯೋಜನ ಹೊಂದುವಂತಹ ರೀತಿಯಲ್ಲಿ ಈ ಮಾಹಿತಿಯನ್ನು ಹೇಗೆ ಉಪಯೋಗಿಸಬಲ್ಲೆ?’ (ಯೆಶಾ. 30:21; ಎಫೆ. 5:17) ಅಧಿವೇಶನದುದ್ದಕ್ಕೂ ಈ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಇರ್ರಿ. ನೀವು ಉಪಯೋಗಿಸಲು ಯೋಜಿಸುವಂತಹ ಅಂಶಗಳನ್ನು ಟಿಪ್ಪಣಿಮಾಡಿಕೊಳ್ಳಿ. ಪ್ರತಿದಿನದ ಸೆಷನ್ಗಳು ಮುಗಿದ ನಂತರ ಇವುಗಳನ್ನು ಚರ್ಚಿಸಲು ಸಮಯವನ್ನು ತೆಗೆದುಕೊಳ್ಳಿ. ಇದು ನೀವು ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಹಾಗೂ ಅನ್ವಯಿಸಲು ನಿಮಗೆ ಸಹಾಯಮಾಡುವುದು.
6 ಒಂದೇ ಸಮಯ ಹಲವಾರು ಗಂಟೆಗಳ ವರೆಗೆ ಗಮನವನ್ನು ಕೇಂದ್ರೀಕರಿಸುವುದು ಪಂಥಾಹ್ವಾನದಾಯಕವಾಗಿರಬಹುದು. ಮನಸ್ಸು ಬೇರೆ ಕಡೆ ಅಲೆಯದಂತೆ ಮಾಡಲು ನಮಗೆ ಯಾವುದು ಸಹಾಯಮಾಡಬಲ್ಲದು? ನಿಮ್ಮ ಕಣ್ಣಿನ ಶಕ್ತಿಯನ್ನು ಸದುಪಯೋಗಿಸಿಕೊಳ್ಳಿ. ಹೆಚ್ಚಾಗಿ, ನಮ್ಮ ಕಣ್ಣನ್ನು ನಾವು ಯಾವುದರ ಮೇಲೆ ಕೇಂದ್ರೀಕರಿಸುತ್ತೇವೊ, ಅಲ್ಲಿಯೇ ನಮ್ಮ ಗಮನವು ನೆಲೆಸಿರುತ್ತದೆ. (ಮತ್ತಾ. 6:22) ಆದುದರಿಂದ, ಯಾವುದಾದರೂ ಶಬ್ದವನ್ನು ಕೇಳಿಸಿಕೊಂಡಾಗ ಅಥವಾ ಇತರರು ಓಡಾಡುವಾಗ, ತಿರುಗಿ ನೋಡುವ ಪ್ರಚೋದನೆಯನ್ನು ಪ್ರತಿಭಟಿಸಿರಿ. ನಿಮ್ಮ ಕಣ್ಣುಗಳನ್ನು ಭಾಷಣಕರ್ತನ ಮೇಲೆ ಕೇಂದ್ರೀಕರಿಸಿರಿ. ಒಂದು ವಚನವು ಓದಲ್ಪಡುವಾಗ ನಿಮ್ಮ ಬೈಬಲಿನಲ್ಲಿ ಅದನ್ನು ಹಿಂಬಾಲಿಸಿ, ಮತ್ತು ಆ ವಚನವು ಚರ್ಚಿಸಲ್ಪಡುವಾಗ ನಿಮ್ಮ ಬೈಬಲನ್ನು ತೆರೆದೇ ಇಡಿ.
7 ಕಾರ್ಯಕ್ರಮವು ಮುಂದುವರಿಯುತ್ತಿರುವಾಗ ಇತರರ ಗಮನವನ್ನು ಅಪಕರ್ಷಿಸದಂತೆ ಕ್ರೈಸ್ತ ಪ್ರೀತಿಯು ನಮ್ಮನ್ನು ಪ್ರಚೋದಿಸುವುದು. (1 ಕೊರಿಂ. 13:5) ಇದು ‘ಸುಮ್ಮನಿದ್ದು’ ಕೇಳಿಸಿಕೊಳ್ಳುವ ಸಮಯವಾಗಿದೆ. (ಪ್ರಸಂ. 3:7) ಆದುದರಿಂದ, ಅನಾವಶ್ಯಕ ಮಾತುಕತೆ ಮತ್ತು ಓಡಾಟವನ್ನು ಮಾಡಬೇಡಿ. ಮುಂಚಿತವಾಗಿ ಯೋಜಿಸುವ ಮೂಲಕ ಶೌಚಾಲಯಕ್ಕೆ ಅನೇಕಬಾರಿ ಹೋಗುವುದನ್ನು ಕಡಿಮೆಮಾಡಿ. ಗಂಭೀರವಾದ ಆರೋಗ್ಯ ಸಮಸ್ಯೆಗಳು ಇಲ್ಲದಿರುವಲ್ಲಿ, ನಿಯೋಜಿತ ಸಮಯಕ್ಕೆ ಮುಂಚಿತವಾಗಿ ತಿನ್ನಬೇಡಿ ಅಥವಾ ಕುಡಿಯಬೇಡಿ. ಸೆಲ್ಯುಲರ್ ಫೋನ್ಗಳು, ಪೇಜರ್ಗಳು, ಕ್ಯಾಮ್ಕಾರ್ಡರ್ಗಳು, ಮತ್ತು ಕ್ಯಾಮರಾಗಳನ್ನು ತರುವವರು, ಬೇರೆಯವರಿಗೆ ಅಪಕರ್ಷಣೆಯಾಗದ ರೀತಿಯಲ್ಲಿ ಅವುಗಳನ್ನು ಉಪಯೋಗಿಸಬೇಕು. ಹದಿವಯಸ್ಕರೂ ಸೇರಿ ಕುಟುಂಬದಲ್ಲಿರುವ ಎಲ್ಲರೂ ಒಟ್ಟಿಗೆ ಕುಳಿತುಕೊಳ್ಳುವಂತೆ ಹೆತ್ತವರು ನೋಡಿಕೊಳ್ಳಬೇಕು. ಹೀಗೆ ಅವರು ಯೋಗ್ಯ ರೀತಿಯಲ್ಲಿ ತಮ್ಮ ಮಕ್ಕಳ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುವುದು.—ಜ್ಞಾನೋ. 29:15.
8 ಹಲವಾರು ದಶಕಗಳಿಂದ ಅಧಿವೇಶನಗಳಿಗೆ ಹಾಜರಾಗುತ್ತಿದ್ದ ಒಬ್ಬ ಹಿರಿಯನು ಕಳೆದ ವರ್ಷ ಗಮನಿಸಿದ್ದು: “ಈ ಅಧಿವೇಶನವು ಮತ್ತೊಂದು ಕಾರಣಕ್ಕಾಗಿ ಎದ್ದುಕಾಣುವಂಥದ್ದಾಗಿತ್ತು ಎಂದು ನನಗೆ ಅನಿಸಿತು. ಚಿಕ್ಕ ಮಕ್ಕಳನ್ನೂ ಸೇರಿಸಿ, ಸಭಿಕರಲ್ಲಿ ಬಹುಮಟ್ಟಿಗೆ ಎಲ್ಲರೂ ಟಿಪ್ಪಣಿಗಳನ್ನು ಬರೆದುಕೊಳ್ಳುತ್ತಿದ್ದರು. ಇದನ್ನು ನೋಡುವುದು ಆನಂದದಾಯಕವಾಗಿತ್ತು. ಕೆಲವು ಶಾಸ್ತ್ರವಚನಗಳನ್ನು ತೆರೆಯುವಂತೆ ಭಾಷಣಕರ್ತನು ಕೇಳಿಕೊಂಡಾಗ, ಬೈಬಲ್ಗಳನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಲಾಯಿತು.” ಈ ರೀತಿಯಲ್ಲಿ ಗಮನಕೊಟ್ಟು ಕೇಳುವುದು ನಿಜವಾಗಿಯೂ ಪ್ರಶಂಸಾರ್ಹ ವಿಷಯವಾಗಿದೆ. ಇದು ನಮಗೆ ಮತ್ತು ಅಧಿವೇಶನದಲ್ಲಿ ಕೂಡಿಬಂದಿರುವ ನಮ್ಮ ಜೊತೆ ಪ್ರತಿನಿಧಿಗಳಿಗೆ ಪ್ರಯೋಜನಗಳನ್ನು ತರುವುದು ಮಾತ್ರವಲ್ಲದೆ, ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮ ಮಹಾನ್ ಉಪದೇಶಕನಾದ ಯೆಹೋವ ದೇವರನ್ನು ಮಹಿಮೆಪಡಿಸುವುದು.—ಯೆಶಾ. 30:20, NW.