ಬಹುಭಾಷೀಯ ಟೆರಿಟೊರಿಯಲ್ಲಿ ಶಿಷ್ಯರನ್ನು ಮಾಡುವುದು
1 ಸಾ.ಶ. 33ರ ಪಂಚಾಶತ್ತಮದಂದು, ತುಂಬ ದಿಗ್ಭ್ರಮೆಗೊಳಿಸುವಂಥ ಒಂದು ಭಾಷಣವನ್ನು ಕೇಳಿಸಿಕೊಳ್ಳಲಿಕ್ಕಾಗಿ ದೊಡ್ಡ ಬಹುಭಾಷೀಯ ಗುಂಪೊಂದು ಕೂಡಿಬಂದಿತ್ತು. ಅವರು ವರದಿಸಿದ್ದು: “ಇಗೋ, ಮಾತಾಡುತ್ತಿರುವ ಇವರೆಲ್ಲರು ಗಲಿಲಾಯದವರಲ್ಲವೇ. ನಾವು ಪ್ರತಿಯೊಬ್ಬರು ನಮ್ಮನಮ್ಮ ಹುಟ್ಟುಭಾಷೆಯಲ್ಲಿ ಇವರು ಮಾತಾಡುವದನ್ನು ಕೇಳುತ್ತೇವಲ್ಲಾ, ಇದು ಹೇಗೆ?” (ಅ. ಕೃ. 2:7, 8) ಬಹುಶಃ ಅವರು ಗ್ರೀಕ್ ಅಥವಾ ಹೀಬ್ರು ಭಾಷೆಯನ್ನು ಮಾತಾಡುತ್ತಿದ್ದರಾದರೂ, ತಮ್ಮ ಸ್ವಂತ ಭಾಷೆಯಲ್ಲಿ ಸುವಾರ್ತೆಯ ಸಂದೇಶವನ್ನು ಕೇಳಿಸಿಕೊಳ್ಳುವುದನ್ನು ಅವರು ಗಣ್ಯಮಾಡಿದರು ಮತ್ತು ಸುಮಾರು 3,000 ಮಂದಿ ದೀಕ್ಷಾಸ್ನಾನವನ್ನೂ ಪಡೆದುಕೊಂಡರು.
2 ಇಂದು, ಭಾರತದಲ್ಲಿ 50%ಕ್ಕಿಂತಲೂ ಹೆಚ್ಚು ಮಂದಿ ಪ್ರಚಾರಕರು, ಒಂದಕ್ಕಿಂತಲೂ ಹೆಚ್ಚು ಭಾಷೆಗಳು ಉಪಯೋಗಿಸಲ್ಪಡುವಂಥ ದೊಡ್ಡ ನಗರಗಳಲ್ಲಿ ವಾಸಿಸುತ್ತಾರೆ. ಅಷ್ಟುಮಾತ್ರವಲ್ಲ, ಕೆಲವರು ಇಂಗ್ಲಿಷ್ ಭಾಷೆಯಲ್ಲಿ ಅಥವಾ ಇನ್ನೊಂದು ಭಾಷೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುತ್ತಾರೆ, ಮತ್ತು ಆ ಭಾಷೆಗಳಲ್ಲಿ ಸಂವಾದಮಾಡಲು ಇಷ್ಟಪಡುತ್ತಾರೆ. ಬೇರೆ ಭಾಷಾಗುಂಪುಗಳ ಆಸಕ್ತ ವ್ಯಕ್ತಿಗಳು ಪ್ರಗತಿಯನ್ನು ಮಾಡುವಂತೆ ಸಹಾಯಮಾಡಲು ನೀವೇನು ಮಾಡಸಾಧ್ಯವಿದೆ? ಅವರು ತಮ್ಮ ಸ್ವಂತ ಭಾಷೆಯಲ್ಲಿ ಹೇಗೆ ಸಂದೇಶವನ್ನು ಕೇಳಿಸಿಕೊಳ್ಳಸಾಧ್ಯವಿದೆ? ಅವರು ಕೂಟಗಳಿಂದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಯಾವ ಏರ್ಪಾಡುಗಳನ್ನು ಮಾಡುವ ಆವಶ್ಯಕತೆಯಿದೆ?
3 ಪವಿತ್ರಾತ್ಮ ಪ್ರೇರಿತರಾಗಿ ಬೇರೆ ಬೇರೆ ಭಾಷೆಗಳಲ್ಲಿ ಮಾತಾಡುವ ಅದ್ಭುತಕರ ವರದಾನವು ಈಗ ಲಭ್ಯವಿಲ್ಲದಿದ್ದರೂ, ದೇವರ ಭೂಸಂಸ್ಥೆಯ ಮೇಲೆ ಪವಿತ್ರಾತ್ಮವು ಕ್ರಿಯಾಶೀಲವಾಗಿದ್ದು, ಏಕಕಾಲದಲ್ಲೇ ತರ್ಜುಮೆಯಾಗುತ್ತಿರುವ ಪ್ರಕಾಶನಗಳು ಒದಗಿಸಲ್ಪಡುತ್ತಿವೆ. ಹೀಗೆ, ಹೊಸಬರು ಸ್ಥಳಿಕ ಭಾಷೆಯನ್ನು ಸ್ವಲ್ಪಮಟ್ಟಿಗೆ ಗ್ರಹಿಸಶಕ್ತರಾಗಿದ್ದರೂ ಅವರು ಇಡೀ ಕಾರ್ಯಕ್ರಮವನ್ನು ಅರ್ಥಮಾಡಿಕೊಳ್ಳಸಾಧ್ಯವಿದೆ.
4 ಕೆಲವು ಸಭೆಗಳಲ್ಲಿ ಹಿರಿಯರು ಕಾರ್ಯಕ್ರಮದ ಅನುವಾದಕ್ಕಾಗಿ ಏರ್ಪಾಡುಗಳನ್ನು ಮಾಡುವ ಮೂಲಕ ಎರಡು ಭಾಷಾಗುಂಪುಗಳಿಗೆ ನೆರವು ನೀಡಲು ನಿರ್ಧರಿಸಿದ್ದಾರೆ. ಕೂಟಗಳು ಅನುವಾದಿಸಲ್ಪಡುವಾಗ, ಭಾಷಣಕರ್ತನ ವಾದಸರಣಿ ಹಾಗೂ ನಿರರ್ಗಳತೆಗೆ ಭಂಗವುಂಟಾಗುತ್ತದೆ. ತುಂಬ ಅನುಭವೀ ಅನುವಾದಕನು ಇರುವುದಾದರೂ, ಉದ್ದೇಶಿತ ವಿಷಯಭಾಗದ ಸುಮಾರು 60% ವಿಷಯವು ಮಾತ್ರ ಪ್ರಸ್ತುತಪಡಿಸಲ್ಪಡಸಾಧ್ಯವಿದೆ. ಇದರರ್ಥ, ಅಮೂಲ್ಯವಾದ ಆತ್ಮಿಕ ಆಹಾರವು ಪೂರ್ಣ ರೀತಿಯಲ್ಲಿ ಲಭ್ಯವಾಗುವುದಿಲ್ಲ.
5 ಕೆಲವೊಮ್ಮೆ, ಪ್ರಚಾರಕರು ಯಾವುದೇ ಭಾಷೆಯಲ್ಲಿ ಉತ್ತರಗಳನ್ನು ನೀಡುವಂತೆ ಅಥವಾ ಕೂಟದ ಭಾಗಗಳನ್ನು ಸಾದರಪಡಿಸುವಂತೆಯೂ ಕೆಲವರು ಉತ್ತೇಜಿಸುತ್ತಾರೆ. ಇದು ಪ್ರಥಮ ಶತಮಾನದಲ್ಲಿ ಸಂಭವಿಸಿದಂಥ ಈ ಸನ್ನಿವೇಶಕ್ಕೆ ನಡಿಸಬಲ್ಲದು: “ಎಲ್ಲರೂ ವಾಣಿಗಳನ್ನಾಡಿದರೆ ಈ ವರವನ್ನು ಹೊಂದದಿರುವ ಸಭೆಯವರು ಅಥವಾ ಕ್ರಿಸ್ತನಂಬಿಕೆಯಿಲ್ಲದವರು ಒಳಗೆ ಬಂದು ನೋಡಿ—ನಿಮಗೆ ಹುಚ್ಚುಹಿಡಿದದೆ ಎಂದು ಹೇಳುವದಿಲ್ಲವೋ?” (1 ಕೊರಿಂ. 14:23) ಎಲ್ಲರಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಕೂಟಗಳನ್ನು ನಡೆಸುವುದಕ್ಕಾಗಿ ಒಂದು ಸುವ್ಯವಸ್ಥಿತ ಏರ್ಪಾಡಿನ ಕುರಿತು ಪೌಲನು ಮುಂದೆ ವಿವರಿಸಿದನು.—1 ಕೊರಿಂ. 14:26-40.
6 ಇನ್ನೊಂದು ಭಾಷೆಯಲ್ಲಿ ಒಂದು ಹೊಸ ಸಭೆಯನ್ನು ಕ್ರಮೇಣವಾಗಿ ವಿಕಸಿಸುವುದನ್ನು ಉತ್ತೇಜಿಸುವುದು ಅತ್ಯುತ್ತಮ. ಒಬ್ಬ ಅರ್ಹ ಸಹೋದರನು ಒಂದು ನಿರ್ದಿಷ್ಟ ಭಾಷೆಯನ್ನು ಚೆನ್ನಾಗಿ ಮಾತಾಡುವುದಾದರೆ, ಮತ್ತು ಅದೇ ಸಮುದಾಯದ ಅನೇಕ ಜನರು ಕೂಟಗಳಿಗೆ ಹಾಜರಾಗುತ್ತಿರುವುದಾದರೆ, ಇನ್ನೂ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಕೇಳಿಕೊಳ್ಳುತ್ತಾ ಬ್ರಾಂಚ್ ಆಫೀಸಿಗೆ ಹಿರಿಯರು ಪತ್ರವನ್ನು ಬರೆಯಸಾಧ್ಯವಿದೆ.
7 ಆದರೆ ಅನೇಕ ಸಂದರ್ಭಗಳಲ್ಲಿ ಅಂಥ ವ್ಯಕ್ತಿಗಳು ಸ್ಥಳಿಕ ಭಾಷೆಯನ್ನು ಸಹ ಮಾತಾಡುತ್ತಾರೆ ಮತ್ತು ಅವರಿಗೆ ಸಾಕಷ್ಟು ಆತ್ಮವಿಶ್ವಾಸವು ಹುಟ್ಟಿದ ಬಳಿಕ ಅವರು ಆ ಭಾಷೆಯನ್ನು ತುಂಬ ನಿರರ್ಗಳವಾಗಿ ಮಾತಾಡುತ್ತಾರೆ. ಒಂದು ನಿರ್ದಿಷ್ಟ ಭಾಷೆಯಲ್ಲಿನ ಅಭಿಮಾನದ ಕಾರಣದಿಂದ ಅಥವಾ ಬೇರೊಂದು ಭಾಷೆಯನ್ನು ಮಾತಾಡಲು ಮನಸ್ಸಿಲ್ಲದ ಕಾರಣದಿಂದ ಒಂದು ಹೊಸ ಭಾಷಾಗುಂಪನ್ನು ರೂಪಿಸುವುದಕ್ಕೆ ಬದಲಾಗಿ, ಅವರಿಗಿರುವ ಆ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಉತ್ತೇಜಿಸುವುದು ಹೆಚ್ಚು ಒಳ್ಳೇದಾಗಿರುವುದು. ಪ್ರಾಮಾಣಿಕ ಹೃದಯದ ಜನರು ಸತ್ಯದ ಸಂದೇಶದಿಂದ ಆಕರ್ಷಿತರಾಗುತ್ತಾರೆ ಮತ್ತು ಅನೇಕವೇಳೆ ತಾವು ಅರ್ಥಮಾಡಿಕೊಳ್ಳಬಲ್ಲ ಯಾವುದೇ ಭಾಷೆಯಲ್ಲಿ ಅದನ್ನು ಕಲಿಯಲು ಅತ್ಯಾತುರರಾಗಿರುತ್ತಾರೆ.
8 ಬೇರೆ ಭಾಷಾಗುಂಪುಗಳು ರಚಿಸಲ್ಪಟ್ಟ ಬಳಿಕ, ಆಸಕ್ತ ಜನರು ಮಾತಾಡುವಂಥ ಭಾಷೆಯಲ್ಲಿ ನಡೆಯುವ ಕೂಟಗಳಿಗೆ ಅವರನ್ನು ಮಾರ್ಗದರ್ಶಿಸುವುದರಲ್ಲಿ—ಅಂಥ ಸ್ಥಳವು ಸ್ವಲ್ಪ ದೂರವಿರುವುದಾದರೂ—ಸಭೆಯಲ್ಲಿರುವ ಎಲ್ಲರೂ ತಮ್ಮ ಪಾತ್ರವನ್ನು ನಿರ್ವಹಿಸಸಾಧ್ಯವಿದೆ. ನೀವು ಅವರ ಭಾಷೆಯನ್ನು ನಿರರ್ಗಳವಾಗಿ ಮಾತಾಡಬಹುದಾದರೂ, ಅವರ ಭಾಷೆಯನ್ನು ಉಪಯೋಗಿಸುತ್ತಿರುವ ಸಭೆಯೊಂದರಿಂದ ಯೋಗ್ಯ ಪ್ರಚಾರಕನೊಬ್ಬನನ್ನು ನಿಮ್ಮ ಜೊತೆಯಲ್ಲಿ ಬರುವಂತೆ ಆಮಂತ್ರಿಸುವುದು ಒಳ್ಳೇದಾಗಿರಬಹುದು. ಈ ಪ್ರಚಾರಕನು ಅವರು ಪ್ರೌಢತೆಯ ಕಡೆಗೆ ಪ್ರಗತಿಯನ್ನು ಮಾಡುತ್ತಾ ಹೋಗುವಂತೆ ಮತ್ತು ತಮ್ಮ ಸಭೆಯಲ್ಲಿ ಕೂಟಗಳಿಗೆ ಹಾಜರಾಗುವಂತೆ ಸಹಾಯಮಾಡುವುದನ್ನು ಮುಂದುವರಿಸಬಲ್ಲನು.
9 ಟೆರಿಟೊರಿಯ ಒಂದು ಭಾಗದಲ್ಲಿ ಬಹುತೇಕ ಮಂದಿ ಬೇರೊಂದು ಭಾಷೆಯನ್ನು ಮಾತಾಡುವುದನ್ನು ನೀವು ಕಂಡುಕೊಳ್ಳುವಲ್ಲಿ, ನಿಮ್ಮ ಸ್ಥಳಿಕ ಹಿರಿಯರಿಗೆ ವಿಷಯವನ್ನು ತಿಳಿಸಿರಿ. ಈ ಟೆರಿಟೊರಿಯನ್ನು, ಆ ನಿರ್ದಿಷ್ಟ ಭಾಷೆಯನ್ನು ಉಪಯೋಗಿಸುತ್ತಿರುವ ಅತಿ ಸಮೀಪದ ಸಭೆಗೆ ವರ್ಗಾಯಿಸುವುದು ಅತ್ಯುತ್ತಮ ಎಂದು ಅವರು ನಿರ್ಧರಿಸಬಹುದು. ಸಭೆಗಳ ನಡುವೆ ಒಳ್ಳೇ ಸಹಕಾರವು ಇರಬೇಕು. ನಿಮ್ಮ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಅಥವಾ ಇಷ್ಟಪಡುವ ಜನರ ಮೇಲೆ ನೀವು ನಿಮ್ಮ ಸೇವೆಯನ್ನು ಕೇಂದ್ರೀಕರಿಸುವಲ್ಲಿ, ಹೆಚ್ಚು ಉತ್ತಮ ಫಲವು ಸಿದ್ಧಿಸುವುದು.
10 ಕೆಲವೊಮ್ಮೆ ಹೆತ್ತವರು ತಮ್ಮ ಮಾತೃಭಾಷೆಯನ್ನು ಹೆಚ್ಚು ಇಷ್ಟಪಡಬಹುದು, ಆದರೆ ಅವರ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು ಇಂಗ್ಲಿಷ್ ಭಾಷೆಯನ್ನು ಹೆಚ್ಚು ಇಷ್ಟಪಡಬಹುದು. ಈ ಆವಶ್ಯಕತೆಯನ್ನು ಪೂರೈಸಲಿಕ್ಕಾಗಿ, ಕೆಲವು ಸಭೆಗಳು ಕೂಟಗಳನ್ನು ಎರಡು ಭಾಷಾ ಶೈಲಿಯಲ್ಲಿ ನಡೆಸುತ್ತವೆ ಮತ್ತು ಎರಡು ಕಾವಲಿನಬುರುಜು ಅಧ್ಯಯನಗಳನ್ನು ನಡೆಸುತ್ತವೆ. ಆದರೆ ಎಳೆಯ ಮಕ್ಕಳು ಕೂಟಗಳಿಗಾಗಿ ಇನ್ನೊಂದು ಕೋಣೆಯಲ್ಲಿ ಕುಳಿತುಕೊಂಡಿರುವಲ್ಲಿ, ಅವರು ಪೂರ್ಣ ರೀತಿಯಲ್ಲಿ ಭಾಗವಹಿಸುತ್ತಿದ್ದಾರೋ ಇಲ್ಲವೋ ಎಂಬುದು ಹೆತ್ತವರಿಗೆ ಗೊತ್ತಾಗಲಿಕ್ಕಿಲ್ಲ, ಮತ್ತು ಮಕ್ಕಳು ಮಾಡುತ್ತಿರುವ ಆತ್ಮಿಕ ಪ್ರಗತಿಯ ಕುರಿತು ಅವರಿಗೆ ಏನೂ ತಿಳಿಯದಿರಬಹುದು. ಈ ಕಾರಣಗಳಿಂದಾಗಿ, ಆತ್ಮಿಕ ಶಿಕ್ಷಣಕ್ಕಾಗಿ ಒಂದೇ ಭಾಷಾ ಮಾಧ್ಯಮದ ಬಳಕೆಯ ಕುರಿತು ಕುಟುಂಬಗಳು ಒಂದು ನಿರ್ಧಾರವನ್ನು ತೆಗೆದುಕೊಳ್ಳುವ ಅಗತ್ಯವಿದೆ ಮತ್ತು ಆ ಭಾಷೆಯನ್ನು ಉಪಯೋಗಿಸುತ್ತಾ ದೇವಪ್ರಭುತ್ವಾತ್ಮಕ ಚಟುವಟಿಕೆಗಳಲ್ಲಿ ಐಕ್ಯಭಾವದಿಂದ ಪಾಲ್ಗೊಳ್ಳಬೇಕಾಗಿದೆ. ತಮ್ಮ ಮಕ್ಕಳ ಸಲುವಾಗಿ ಕೆಲವು ಕುಟುಂಬಗಳು ಇಂಗ್ಲಿಷ್ ಭಾಷೆಯ ಸಭೆಗೂ ಸ್ಥಳಾಂತರಿಸಿವೆ.
11 ಕೊಡಲ್ಪಟ್ಟ ನಿರ್ದೇಶನಗಳನ್ನು ಅನುಸರಿಸುವ ಮೂಲಕ, ಪ್ರತಿಯೊಬ್ಬರೂ ದೇವಪ್ರಭುತ್ವಾತ್ಮಕ ಶಿಕ್ಷಣದ ಪೂರ್ಣ ಕಾರ್ಯಕ್ರಮದಲ್ಲಿ ಆನಂದಿಸುವರು. ಹೊಸಬರು ತಮ್ಮ ಸ್ವಂತ ಭಾಷೆಯಲ್ಲಿ ಸುವಾರ್ತೆಯನ್ನು ಕೇಳಿಸಿಕೊಳ್ಳುವಾಗ, ಮತ್ತು ಇದರಲ್ಲಿ ಏನು ಒಳಗೂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಾಗ, ಅವರು ಸಹ ನಮ್ಮ ಮಹಾ ಉಪದೇಶಕನಾಗಿರುವ ಯೆಹೋವ ದೇವರನ್ನು ಸ್ತುತಿಸುವಂತೆ ಪ್ರಚೋದಿಸಲ್ಪಡುವರು.