ಶಾಲಾ ಮೇಲ್ವಿಚಾರಕರಿಗಾಗಿ ಮಾರ್ಗದರ್ಶನಗಳು
ಪ್ರತಿಯೊಂದು ಸಭೆಯಲ್ಲಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಮೇಲ್ವಿಚಾರಕನಾಗಿ ಒಬ್ಬ ಹಿರಿಯನನ್ನು ನೇಮಿಸಲಾಗುತ್ತದೆ. ನಿಮಗೆ ಈ ಜವಾಬ್ದಾರಿಯು ವಹಿಸಲ್ಪಟ್ಟಿರುವಲ್ಲಿ, ಶಾಲೆಗಾಗಿ ನಿಮಗಿರುವ ಉತ್ಸುಕತೆ ಮತ್ತು ಪ್ರತಿ ವಿದ್ಯಾರ್ಥಿಯ ಪ್ರಗತಿಯಲ್ಲಿ ನಿಮಗಿರುವ ವೈಯಕ್ತಿಕ ಆಸಕ್ತಿಯು, ಶಾಲೆಯು ಸ್ಥಳಿಕವಾಗಿ ಏನನ್ನು ಸಾಧಿಸುತ್ತದೊ ಅದರ ಗಮನಾರ್ಹ ಅಂಶವಾಗಿರಬಲ್ಲದು.
ನಿಮ್ಮ ನೇಮಕದ ಒಂದು ಪ್ರಮುಖ ಭಾಗವು, ನಿಮ್ಮ ಸಭೆಯ ಸಾಪ್ತಾಹಿಕ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯನ್ನು ನಡೆಸುವುದೇ ಆಗಿದೆ. ಒಂದು ನಿರ್ದಿಷ್ಟ ಸಮಯದಲ್ಲಿ ನೇಮಕ ದೊರೆತಿರುವ ವಿದ್ಯಾರ್ಥಿಗಳ ಜೊತೆಗೆ ಇತರರೂ ಅಲ್ಲಿ ಉಪಸ್ಥಿತರಿದ್ದಾರೆ ಎಂಬುದು ನಿಮ್ಮ ನೆನಪಿನಲ್ಲಿರಲಿ. ಇಡೀ ಸಭೆಯು, ಈ ಪಠ್ಯಪುಸ್ತಕದ 5ರಿಂದ 8ನೆಯ ಪುಟಗಳಲ್ಲಿ ತಿಳಿಸಲ್ಪಟ್ಟಿರುವ ಶಾಲಾ ಉದ್ದೇಶಗಳಲ್ಲಿ ಕಡಿಮೆಪಕ್ಷ ಒಂದು ಉದ್ದೇಶಕ್ಕಾದರೂ ಸಂಬಂಧಿಸಲ್ಪಟ್ಟಿರುವ ಪ್ರಚೋದಕವಾದ, ಪ್ರಾಯೋಗಿಕ ಮರುಜ್ಞಾಪನಗಳನ್ನು ಪಡೆಯುವಂಥ ರೀತಿಯಲ್ಲಿ ಶಾಲೆಯನ್ನು ನಡೆಸಿರಿ.
ವಿದ್ಯಾರ್ಥಿಗಳಿಗೆ ವಾಚನ ನೇಮಕಗಳನ್ನು ನಿರ್ವಹಿಸಲಿಕ್ಕಿರಲಿ, ಪ್ರತ್ಯಕ್ಷಾಭಿನಯದ ಶೈಲಿಯ ನಿರೂಪಣೆಗಳನ್ನು ಕೊಡಲಿಕ್ಕಿರಲಿ, ಅಥವಾ ಭಾಷಣಗಳನ್ನು ಕೊಡಲಿಕ್ಕಿರಲಿ, ಎಲ್ಲ ವಿದ್ಯಾರ್ಥಿಗಳಲ್ಲಿ ಆಸಕ್ತಿ ವಹಿಸಿರಿ. ಅವರು ತಮ್ಮ ಭಾಗಗಳನ್ನು ಕೇವಲ ಒಂದು ನೇಮಕವಾಗಿ ಪರಿಗಣಿಸದೆ, ಯೆಹೋವನಿಗೆ ಅವರು ಮಾಡುವ ಸೇವೆಯಲ್ಲಿ ಪ್ರಗತಿಯನ್ನು ತೋರಿಸುವ ಅವಕಾಶವಾಗಿ ಪರಿಗಣಿಸುವಂತೆ ಸಹಾಯಮಾಡಿರಿ. ಅವರ ಪ್ರಗತಿಯಲ್ಲಿ ಅವರು ಮಾಡುವ ವೈಯಕ್ತಿಕ ಪ್ರಯತ್ನವು ಒಂದು ಪ್ರಮುಖ ಅಂಶವೆಂಬುದೇನೊ ನಿಜ. ಆದರೆ ನೀವು ದಯಾಭರಿತ ಆಸಕ್ತಿಯನ್ನು ತೋರಿಸಿ, ಸಲಹಾ ಅಂಶಗಳ ಮಹತ್ವವನ್ನು ಅವರು ತಿಳಿಯುವಂತೆ ಸಹಾಯಮಾಡಿ, ಅಂತಹ ಸಲಹೆಯನ್ನು ಅನ್ವಯಿಸಿಕೊಳ್ಳುವ ವಿಧವನ್ನು ಅವರಿಗೆ ವಿವರಿಸುವುದು ಸಹ ಪ್ರಾಮುಖ್ಯವಾದದ್ದಾಗಿದೆ. ಇದನ್ನು ಸಾಧಿಸಲಿಕ್ಕಾಗಿ, ಅಮೂಲ್ಯವಾದ ಸಲಹೆಯನ್ನು ಕೊಡಸಾಧ್ಯವಾಗುವಂತೆ, ಪ್ರತಿಯೊಂದು ಭಾಷಣವನ್ನು ತುಂಬ ಜಾಗರೂತೆಯಿಂದ ಕೇಳಿಸಿಕೊಳ್ಳಿ.
ಶಾಲೆಯನ್ನು ತಕ್ಕ ಸಮಯದಲ್ಲಿ ಪ್ರಾರಂಭಿಸಲು ಮತ್ತು ಮುಗಿಸಲು ದೃಢನಿಶ್ಚಿತರಾಗಿರಿ. ನಿಮ್ಮ ಸ್ವಂತ ಹೇಳಿಕೆಗಳನ್ನು, ಅವುಗಳಿಗೆ ನಿಗದಿತವಾಗಿರುವ ಸಮಯದಲ್ಲಿ ಮುಗಿಸುವ ಮೂಲಕ ಒಳ್ಳೆಯ ಮಾದರಿಯನ್ನಿಡಿರಿ. ಒಂದು ವಿದ್ಯಾರ್ಥಿ ಭಾಷಣವು ಸಮಯವನ್ನು ಮೀರಿಹೋಗುವಲ್ಲಿ, ನೀವೊ ನಿಮ್ಮ ಸಹಾಯಕನೋ ಅದನ್ನು ಸೂಚಿಸಲು ಸಿಗ್ನಲ್ ಕೊಡಬೇಕು. ಆಗ ವಿದ್ಯಾರ್ಥಿಯು ತಾನು ಹೇಳುತ್ತಿರುವ ವಾಕ್ಯದೊಂದಿಗೆ ಮುಗಿಸುತ್ತಾ ವೇದಿಕೆಯಿಂದ ಕೆಳಗಿಳಿಯಬೇಕು. ಕಾರ್ಯಕ್ರಮದ ಬೇರೆ ಯಾವುದೇ ಭಾಗವು ಸಮಯವನ್ನು ಮೀರಿಹೋಗುವಲ್ಲಿ, ನಿಮ್ಮ ಸ್ವಂತ ಹೇಳಿಕೆಗಳನ್ನು ಕಡಿಮೆಮಾಡಿ, ಕೂಟವು ಮುಗಿದ ಮೇಲೆ ಆ ವಿಷಯವನ್ನು ಆ ಸಹೋದರನೊಂದಿಗೆ ಚರ್ಚಿಸಿರಿ.
ನೀವು ಉಪಸ್ಥಿತರಿರುವಾಗ, ನೀವೇ ಶಾಲೆಯನ್ನು ನಡೆಸಬೇಕು. ಒಮ್ಮೊಮ್ಮೆ ನೀವು ಉಪಸ್ಥಿತರಿರಲು ಸಾಧ್ಯವಿಲ್ಲದಿರುವಲ್ಲಿ, ಶಾಲೆಯನ್ನು ನಡೆಸಲಿಕ್ಕಾಗಿ ಹಿರಿಯರ ಮಂಡಲಿಯು ಈ ಮೊದಲೇ ನೇಮಿಸಿರುವ ಇನ್ನೊಬ್ಬ ಹಿರಿಯನು ಅದನ್ನು ನಡೆಸಬೇಕು. ಶೆಡ್ಯೂಲನ್ನು ತಯಾರಿಸಲು, ನೇಮಕದ ಸ್ಲಿಪ್ಗಳನ್ನು ಬರೆದು ವಿತರಿಸಲು ಅಥವಾ ಕಾರ್ಯಕ್ರಮದಲ್ಲಿ ಬದಲಿ ವಿದ್ಯಾರ್ಥಿಗಳನ್ನು ಏರ್ಪಡಿಸಲು ನಿಮಗೆ ಸಹಾಯವು ಬೇಕಾಗಿರುವಲ್ಲಿ, ಹಿರಿಯರ ಮಂಡಲಿಯಿಂದ ನೇಮಿಸಲ್ಪಟ್ಟಿರುವ ಒಬ್ಬ ಶುಶ್ರೂಷಾ ಸೇವಕನು ಈ ಕೆಲಸಗಳಲ್ಲಿ ನೆರವನ್ನು ನೀಡಬಹುದು.
ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುವುದು. ಶಾಲೆಗೆ ಸೇರಿಕೊಳ್ಳುವಂತೆ ಎಲ್ಲ ಪ್ರಚಾರಕರನ್ನೂ ಪ್ರೋತ್ಸಾಹಿಸಿರಿ. ಸಭೆಯೊಂದಿಗೆ ಕ್ರಿಯಾಶೀಲರಾಗಿ ಸಹವಾಸಮಾಡುತ್ತಿರುವ ಇತರರು ಬೈಬಲಿನ ಬೋಧನೆಗಳನ್ನು ಸಮ್ಮತಿಸುವಲ್ಲಿ ಮತ್ತು ಅವರ ಜೀವನವು ಕ್ರೈಸ್ತ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿರುವಲ್ಲಿ, ಅವರು ಸಹ ಶಾಲೆಗೆ ಸೇರಬಹುದು. ಶಾಲೆಗೆ ಸೇರುವ ಅಪೇಕ್ಷೆಯನ್ನು ಒಬ್ಬನು ವ್ಯಕ್ತಪಡಿಸುವಲ್ಲಿ, ಅವನನ್ನು ಹೃತ್ಪೂರ್ವಕವಾಗಿ ಪ್ರಶಂಸಿಸಿರಿ. ಆ ವ್ಯಕ್ತಿಯು ಇನ್ನೂ ಪ್ರಚಾರಕನಾಗಿರದಿರುವಲ್ಲಿ, ಶಾಲಾ ಮೇಲ್ವಿಚಾರಕರಾಗಿರುವ ನೀವು, ಒಬ್ಬನು ಶಾಲೆಗೆ ಸೇರಲಿಕ್ಕಾಗಿರುವಂಥ ಆವಶ್ಯಕತೆಗಳನ್ನು ಅವನೊಂದಿಗೆ ಚರ್ಚಿಸಬೇಕು. ಇದನ್ನು ಅವನೊಂದಿಗೆ ಬೈಬಲ್ ಅಧ್ಯಯನ ನಡೆಸುತ್ತಿರುವಂಥ ವ್ಯಕ್ತಿಯ ಸಮ್ಮುಖದಲ್ಲಿ (ಅಥವಾ ವಿಶ್ವಾಸಿ ಹೆತ್ತವರ ಸಮ್ಮುಖದಲ್ಲಿ) ಚರ್ಚಿಸುವುದು ಮೇಲು. ಈ ಆವಶ್ಯಕತೆಗಳು, ಒಬ್ಬನು ಅಸ್ನಾತ ಪ್ರಚಾರಕನಾಗಲು ಇರುವ ಆವಶ್ಯಕತೆಗಳಿಗೆ ಸಮಾನವಾಗಿವೆ. ಅವುಗಳನ್ನು ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕದ 97ರಿಂದ 99ನೆಯ ಪುಟಗಳಲ್ಲಿ ಕಂಡುಕೊಳ್ಳುವಿರಿ. ಶಾಲೆಗೆ ಸೇರಿರುವವರೆಲ್ಲರ ಸದ್ಯೋಚಿತವಾದ ಪಟ್ಟಿಯನ್ನು ಇಟ್ಟುಕೊಳ್ಳಿರಿ.
ಭಾಷಣ ಸಲಹಾ ಪಟ್ಟಿಯನ್ನು ಉಪಯೋಗಿಸುವುದು. ಪ್ರತಿ ವಿದ್ಯಾರ್ಥಿಯ ಭಾಷಣದ ಸಲಹಾ ಪಟ್ಟಿಯು ಅವನ ಸ್ವಂತ ಪಠ್ಯಪುಸ್ತಕದ 79ರಿಂದ 81ನೆಯ ಪುಟಗಳಲ್ಲಿದೆ. ಒಬ್ಬ ವಿದ್ಯಾರ್ಥಿಗೆ ಒಂದು ವಾಚನ ನೇಮಕವು ಕೊಡಲ್ಪಟ್ಟಾಗ, ಬಣ್ಣದ ಸಂಕೇತದ ಮೂಲಕ ಸೂಚಿಸಲ್ಪಟ್ಟಿರುವಂತೆ, ಸಲಹಾ ಪಟ್ಟಿಯಲ್ಲಿರುವ 1ರಿಂದ 17 ರ ವರೆಗಿರುವ ಯಾವುದೇ ಸಲಹಾ ಅಂಶವನ್ನು ಉಪಯೋಗಿಸಬಹುದು. ಪ್ರತ್ಯಕ್ಷಾಭಿನಯ ಶೈಲಿಯಿಂದ ಕೂಡಿರುವ ನೀಡಿಕೆಗೆ 7, 52, ಮತ್ತು 53 ನ್ನು ಬಿಟ್ಟು ಇನ್ನಾವುದೇ ಸಲಹಾ ಅಂಶವನ್ನು ಉಪಯೋಗಿಸಬಹುದು. ಭಾಷಣಗಳಿಗೆ ಉಪಯೋಗಿಸಲ್ಪಡುವ ಸಲಹಾ ಅಂಶಗಳಲ್ಲಿ 7, 18 ಮತ್ತು 30 ನ್ನು ಬಿಟ್ಟು ಬೇರೆಲ್ಲ ಅಂಶಗಳು ಸೇರಿರುತ್ತವೆ.
ಸಲಹೆಯ ಒಂದು ಅಂಶವು ನೇಮಿಸಲ್ಪಟ್ಟಾಗ, ಆ ವಿದ್ಯಾರ್ಥಿಯ ಪುಸ್ತಕದಲ್ಲಿರುವ ಭಾಷಣ ಸಲಹಾ ಪಟ್ಟಿಯಲ್ಲಿ “ನೇಮಿಸಿದ ತಾರೀಖು” ಎಂಬುದರ ಕೆಳಗೆ ಆ ಅಂಶದ ಪಕ್ಕದಲ್ಲಿ ಕೊಡಲ್ಪಟ್ಟಿರುವ ಜಾಗದಲ್ಲಿ ಶಾಲಾ ಮೇಲ್ವಿಚಾರಕನು ಪೆನ್ಸಿಲಿನಲ್ಲಿ ಗುರುತು ಹಾಕಬೇಕು. ವಿದ್ಯಾರ್ಥಿಯು ಆ ನೇಮಕವನ್ನು ಮಾಡಿ ಮುಗಿಸಿದ ಬಳಿಕ, ಆ ಸಲಹಾ ಅಂಶದ ಲೇಖನದ ಅಂತ್ಯದಲ್ಲಿ ಕೊಡಲ್ಪಟ್ಟಿರುವ ಅಭ್ಯಾಸಪಾಠವನ್ನು(ಗಳನ್ನು) ಅವನು ಮಾಡಿದನೊ ಎಂದು ಮೇಲ್ವಿಚಾರಕನು ಖಾಸಗಿಯಾಗಿ ಕೇಳುವನು. ಹಾಗೆ ಮಾಡಿರುವಲ್ಲಿ, ಅವನ ಸಲಹಾ ಪಟ್ಟಿಯಲ್ಲಿರುವ ರೇಖಾಚೌಕದಲ್ಲಿ ರೈಟ್ ಗುರುತನ್ನು ಹಾಕಬೇಕು. ಆದರೆ ವಿದ್ಯಾರ್ಥಿಯು ಸಲಹೆಯ ಅದೇ ಅಂಶದಲ್ಲಿ ಪ್ರಗತಿಮಾಡಬೇಕೆಂದು ನೀವು ಶಿಫಾರಸ್ಸು ಮಾಡುವಲ್ಲಿ, ಸಲಹಾ ಪಟ್ಟಿಯಲ್ಲಿ ಹೆಚ್ಚಿನ ಯಾವ ಗುರುತನ್ನೂ ಮಾಡುವ ಅಗತ್ಯವಿಲ್ಲ; ಅಂದರೆ “ಮುಗಿಸಿದ ತಾರೀಖು” ಎಂಬಲ್ಲಿರುವ ಖಾಲಿ ಸ್ಥಳವನ್ನು ತುಂಬಿಸಬೇಡಿರಿ. ಆ ಸ್ಥಳವನ್ನು ತುಂಬಿಸುವುದು, ಅವನು ಇನ್ನೊಂದು ಸಲಹಾ ಅಂಶಕ್ಕೆ ಹೋಗಲು ಸಿದ್ಧನಾಗಿರುವಾಗ ಮಾತ್ರ. ಇದಲ್ಲದೆ, ವಿದ್ಯಾರ್ಥಿಯ ಪುಸ್ತಕದ 82ನೆಯ ಪುಟದಲ್ಲಿ, ಉಪಯೋಗಿಸಲ್ಪಟ್ಟ ಸನ್ನಿವೇಶದ ಎಡಭಾಗದಲ್ಲಿ, ಪ್ರತಿ ವಿದ್ಯಾರ್ಥಿ ಭಾಷಣದ ಬಳಿಕ ತಾರೀಖನ್ನು ಬರೆದಿಡಬೇಕು. ಸಲಹಾ ಪಟ್ಟಿಯಲ್ಲಿ ಮತ್ತು ಸನ್ನಿವೇಶಗಳ ಪಟ್ಟಿಯಲ್ಲಿ, ಅವುಗಳಲ್ಲಿ ಪ್ರತಿಯೊಂದನ್ನು ಎರಡು ಬಾರಿ ಉಪಯೋಗಿಸಲು ಸ್ಥಳಾವಕಾಶವು ಕೊಡಲ್ಪಟ್ಟಿದೆ. ಕಾರ್ಯಕ್ರಮದ ಸಮಯದಲ್ಲಿ ವಿದ್ಯಾರ್ಥಿಗಳ ಬಳಿ ಅವರ ಸ್ವಂತ ಪುಸ್ತಕಗಳಿರಬೇಕು.
ಭಾಷಣ ಸಲಹಾ ಅಂಶವನ್ನು ಒಮ್ಮೆಗೆ ಒಂದರಂತೆ ಮಾತ್ರ ನೇಮಿಸಿರಿ. ಸಾಮಾನ್ಯವಾಗಿ, ಅಲ್ಲಿ ಪಟ್ಟಿಮಾಡಿರುವ ಕ್ರಮದಲ್ಲೇ ಸಲಹಾ ಅಂಶಗಳನ್ನು ನೇಮಿಸುವುದು ಉತ್ತಮ. ಆದರೂ, ಕೆಲವು ಮಂದಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಮರ್ಥ್ಯವನ್ನು ತೋರಿಸುವಲ್ಲಿ, ಕೆಲವು ಪಾಠಗಳನ್ನು ಅವರಾಗಿಯೇ ಅಧ್ಯಯನ ಮಾಡಿ ಅನ್ವಯಿಸಿಕೊಳ್ಳುವಂತೆ ನೀವು ಅವರನ್ನು ಪ್ರೋತ್ಸಾಹಿಸಬಹುದು. ಆ ಬಳಿಕ, ಪರಿಣಾಮಕಾರಿಯಾದ ಭಾಷಣಕಾರರೂ ಬೋಧಕರೂ ಆಗಿ ಬೆಳೆಯಲು ಅವರಿಗೆ ನೆರವು ನೀಡಬಹುದೆಂದು ನೀವು ನೆನಸುವ ಅಂಶಗಳಲ್ಲಿ ಅವರಿಗೆ ಸಹಾಯ ನೀಡಬಲ್ಲಿರಿ.
ಒಬ್ಬ ವಿದ್ಯಾರ್ಥಿಯು ಶಾಲೆಗೆ ಸೇರಿ ಅನೇಕ ವರುಷಗಳಾಗಿದ್ದರೂ, ಅವನು ಪ್ರತಿಯೊಂದು ಪಾಠವನ್ನು ಅಧ್ಯಯನ ಮಾಡಿ ಅನ್ವಯಿಸಿಕೊಳ್ಳುವುದರಿಂದ ತುಂಬ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ. ನಿರ್ದಿಷ್ಟ ರೀತಿಯ ಆವಶ್ಯಕತೆಗಳುಳ್ಳ ವಿದ್ಯಾರ್ಥಿಗಳಿಗೆ ಸಹಾಯ ನೀಡಲಿಕ್ಕಾಗಿ, ಸಲಹಾ ಪಟ್ಟಿಯಲ್ಲಿ ಕೊಡಲ್ಪಟ್ಟಿರುವ ಕ್ರಮಕ್ಕನುಸಾರ ಸಲಹಾ ಅಂಶಗಳನ್ನು ನೇಮಿಸುತ್ತಾ ಹೋಗುವ ಬದಲು, ನೀವು ಅವರಿಗಾಗಿ ನಿರ್ದಿಷ್ಟ ಭಾಷಣ ಗುಣಗಳನ್ನು ಆರಿಸಿಕೊಳ್ಳಬಹುದು.
ಸಲಹೆ ನೀಡುವುದು. ಸಲಹೆ ನೀಡುವಾಗ ಬೈಬಲ್ ಉದಾಹರಣೆಗಳ ಮತ್ತು ಮೂಲತತ್ತ್ವಗಳ ಸದುಪಯೋಗವನ್ನು ಮಾಡಿರಿ. ಕೊಡಲ್ಪಟ್ಟ ಸಲಹೆಯೂ ಅದು ನೀಡಲ್ಪಟ್ಟ ವಿಧವೂ ದೇವರ ವಾಕ್ಯದ ಉಚ್ಚ ಮೂಲತತ್ತ್ವಗಳಿಗೆ ಬದ್ಧವಾಗಿದೆ ಎಂಬುದನ್ನು ವಿದ್ಯಾರ್ಥಿಗಳು ಗ್ರಹಿಸಬೇಕು.
ನೀವು, ನಿಮ್ಮ ಸಹೋದರ ಸಹೋದರಿಯರಿಗೆ ‘ಜೊತೆಕೆಲಸಗಾರರು’ ಆಗಿದ್ದೀರಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. (2 ಕೊರಿಂ. 1:24, NW) ಅವರಂತೆ, ನೀವೂ ಭಾಷಣಕಾರರೂ ಬೋಧಕರೂ ಆಗಿ ಪ್ರಗತಿಹೊಂದುವಂತೆ ವಿಷಯಗಳನ್ನು ಅನ್ವಯಿಸಿಕೊಳ್ಳುತ್ತಾ ಮುಂದುವರಿಯುವ ಅಗತ್ಯವಿದೆ. ನೀವು ವೈಯಕ್ತಿಕವಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಎಂಬ ಈ ಪುಸ್ತಕವನ್ನು ಅಧ್ಯಯನ ಮಾಡಿರಿ. ಅದರ ಸಲಹೆಯನ್ನು ನಿಮಗೆ ಅನ್ವಯಿಸಿಕೊಂಡು, ಇತರರೂ ಹಾಗೆ ಮಾಡುವಂತೆ ಒಳ್ಳೆಯ ಮಾದರಿಯನ್ನಿಡಿರಿ.
ನೀವು ಹಾಗೆ ಮಾಡುತ್ತಿರುವಾಗ, ವಿದ್ಯಾರ್ಥಿಗಳು ಉತ್ತಮ ಓದುಗರೂ, ಸಮರ್ಥ ಭಾಷಣಕಾರರೂ, ಪರಿಣಾಮಕಾರಿ ಬೋಧಕರೂ ಆಗುವಂತೆ ಅವರಿಗೆ ನೆರವಾಗುವುದನ್ನು ನಿಮ್ಮ ಗುರಿಯಾಗಿ ಮಾಡಿಕೊಳ್ಳಿರಿ. ಆ ಉದ್ದೇಶದಿಂದ, ಭಾಷಣದ ವಿವಿಧ ಗುಣ ವೈಶಿಷ್ಟ್ಯಗಳು ಯಾವುವು, ಅವು ಏಕೆ ಪ್ರಾಮುಖ್ಯವಾಗಿವೆ ಮತ್ತು ಅವುಗಳನ್ನು ಹೇಗೆ ಬೆಳೆಸಿಕೊಳ್ಳುವುದು ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವಂತೆ, ಬೇಕಾಗಿರುವ ಯಾವುದೇ ಸಹಾಯವನ್ನು ಅವರಿಗೆ ನೀಡಲು ಪ್ರಯತ್ನಿಸಿರಿ. ಈ ಪಠ್ಯಪುಸ್ತಕವು ನೀವು ಹಾಗೆ ಮಾಡಲು ನಿಮಗೆ ಸಹಾಯಮಾಡುವಂಥ ರೀತಿಯಲ್ಲಿ ರಚಿಸಲ್ಪಟ್ಟಿದೆ. ಆದರೂ, ನೀವು ಪುಸ್ತಕದಲ್ಲಿರುವ ಮಾತುಗಳನ್ನು ಕೇವಲ ಓದುತ್ತಾ ಹೋಗುವುದಕ್ಕಿಂತ ಹೆಚ್ಚನ್ನು ಮಾಡುವುದು ಅನೇಕವೇಳೆ ಅಗತ್ಯವಾಗಿರುತ್ತದೆ. ಆ ಮಾತುಗಳು ಏನನ್ನು ವ್ಯಕ್ತಪಡಿಸುತ್ತವೋ ಆ ವಿಚಾರವನ್ನು ಮತ್ತು ಅದನ್ನು ಹೇಗೆ ಅನ್ವಯಿಸುವುದೆಂಬುದನ್ನು ಚರ್ಚಿಸಿರಿ.
ಒಂದು ಸಲಹಾ ಅಂಶವನ್ನು ಒಬ್ಬ ವಿದ್ಯಾರ್ಥಿಯು ಉತ್ತಮವಾಗಿ ಮಾಡಿಮುಗಿಸುವಲ್ಲಿ, ಅವನನ್ನು ಶ್ಲಾಘಿಸಿರಿ. ಅದನ್ನು ಯಾವುದು ಪರಿಣಾಮಕಾರಿಯಾಗಿ ಮಾಡಿತೆಂಬುದನ್ನು ಅಥವಾ ಅವನು ಏನನ್ನು ಮಾಡಿದನೊ ಅದು ಏಕೆ ಪ್ರಾಮುಖ್ಯವೆಂಬುದನ್ನು ಸಂಕ್ಷಿಪ್ತವಾಗಿ ತಿಳಿಸಿರಿ. ಒಂದು ವಿಷಯಕ್ಕೆ ಅವನು ಪ್ರಯೋಜನದಾಯಕವಾಗಿ ಇನ್ನೂ ಹೆಚ್ಚು ಗಮನವನ್ನು ಕೊಡುವ ಸಾಧ್ಯತೆ ಇರುವಲ್ಲಿ, ಅದು ಏಕೆಂದು ಅವನಿಗೆ ಅರ್ಥವಾಗುವುದನ್ನು ಖಚಿತಪಡಿಸಿಕೊಳ್ಳಿರಿ. ಆ ಗುರಿಯನ್ನು ತಲಪುವ ವಿಧವನ್ನು ಚರ್ಚಿಸಿರಿ. ಅದನ್ನು ನಿಶ್ಚಿತ ಮಾತುಗಳಲ್ಲಿ ಹೇಳಿರಿ, ಮತ್ತು ಅದೇ ಸಮಯದಲ್ಲಿ ದಯಾಭಾವದಿಂದ ಹೇಳಿರಿ.
ಅನೇಕರಿಗೆ ಜನರ ಒಂದು ಗುಂಪಿನ ಎದುರು ಮಾತಾಡುವುದು ತೀರ ಕಷ್ಟಕರವೆಂಬುದನ್ನು ಗ್ರಹಿಸಿರಿ. ತಾನು ಒಳ್ಳೆಯದಾಗಿ ಭಾಷಣ ಕೊಡಲಿಲ್ಲ ಎಂದು ಒಬ್ಬ ವ್ಯಕ್ತಿಯು ನೆನಸುವಲ್ಲಿ, ಇನ್ನು ಮೇಲೆ ಪ್ರಗತಿಯನ್ನು ಮಾಡಲು ಪ್ರಯತ್ನಿಸುವುದರಲ್ಲಿ ಪ್ರಯೋಜನವಿದೆಯೊ ಎಂದು ಅವನು ಯೋಚಿಸಬಹುದು. ಆದುದರಿಂದ, ಯೇಸುವನ್ನು ಅನುಕರಿಸಿರಿ. ಅವನು “ಜಜ್ಜಿದ ದಂಟನ್ನು” ಇನ್ನೂ ಹೆಚ್ಚು ಜಜ್ಜಲಿಲ್ಲ; “ಆರಿಹೋಗುತ್ತಿರುವ ದೀಪವನ್ನು” ನಂದಿಸಲಿಲ್ಲ. (ಮತ್ತಾ. 12:20) ಆ ವಿದ್ಯಾರ್ಥಿಯ ಭಾವನಾತ್ಮಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಿರಿ. ಸಲಹೆ ನೀಡುವಾಗ, ಆ ವಿದ್ಯಾರ್ಥಿಯು ಹೊಸಬನೊ ಅಥವಾ ಅನುಭವಸ್ಥ ಪ್ರಚಾರಕನೊ ಎಂಬುದರ ಆಧಾರದ ಮೇಲೆ ಮುಂದುವರಿಯಿರಿ. ಹೃತ್ಪೂರ್ವಕವೂ ನೈಜವೂ ಆದ ಪ್ರಶಂಸೆಯು, ಜನರು ತಮ್ಮ ಕೈಲಾಗುವಷ್ಟು ಪ್ರಯತ್ನವನ್ನು ಮಾಡುವಂತೆ ಅವರನ್ನು ಬಲಪಡಿಸಬಲ್ಲದು.
ಪ್ರತಿಯೊಬ್ಬ ವಿದ್ಯಾರ್ಥಿಯೊಂದಿಗೂ ಗೌರವಭಾವದಿಂದ ವ್ಯವಹರಿಸಿರಿ. ರೋಮಾಪುರ 12:10 ನಮಗೆ ಹೇಳುವುದು: “ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” ಇದು, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಸಲಹೆಗಾರನಿಗೆ ಎಷ್ಟು ಸೂಕ್ತವಾದ ಬುದ್ಧಿವಾದವಾಗಿದೆ! ವಿದ್ಯಾರ್ಥಿಯು ನಿಮಗಿಂತ ಹೆಚ್ಚು ಪ್ರಾಯಸ್ಥನಾಗಿರುವಲ್ಲಿ, 1 ತಿಮೊಥೆಯ 5:1, 2 ರ ನಿರ್ದೇಶನವನ್ನು ಜಾಗರೂಕತೆಯಿಂದ ಅನ್ವಯಿಸಿರಿ. ಆದರೂ, ಒಬ್ಬ ವ್ಯಕ್ತಿಯ ವಯಸ್ಸು ಎಷ್ಟೇ ಆಗಿರಲಿ, ಅವನು ವಿಷಯಗಳನ್ನು ಮಾಡುವ ವಿಧದಲ್ಲಿ ಹೊಂದಾಣಿಕೆಗಳನ್ನು ಮಾಡುವುದನ್ನು ಒಳಗೂಡಿರುವ ಸಲಹೆಯು ದಯಾಭಾವದಿಂದ ಕೊಡಲ್ಪಡುವಾಗ, ಅದು ಅನೇಕವೇಳೆ ಸಿದ್ಧಮನಸ್ಸಿನಿಂದ ಅಂಗೀಕರಿಸಲ್ಪಡುತ್ತದೆ.—ಜ್ಞಾನೋ. 25:11.
ಸಲಹೆ ನೀಡುವಾಗ, ಈ ತರಬೇತಿಯ ಉದ್ದೇಶವನ್ನು ವಿದ್ಯಾರ್ಥಿಗೆ ಒತ್ತಿಹೇಳಿರಿ. ಆ ಉದ್ದೇಶವು, ಉತ್ತಮವಾಗಿ ಮಾತಾಡಿದ್ದಕ್ಕಾಗಿ ಪ್ರಶಂಸೆಯನ್ನು ಪಡೆದು ಮುಂದಿನ ಸಲಹಾ ಅಂಶಕ್ಕೆ ಹೋಗುವುದಷ್ಟೇ ಅಲ್ಲ. ಇತರರು ಮೆಚ್ಚುವಂಥ ಭಾಷಣಕಾರರೂ ಬೋಧಕರೂ ಆಗಿ ಪರಿಣಮಿಸುವುದೂ ಅದರ ಗುರಿಯಲ್ಲ. (ಜ್ಞಾನೋ. 25:27) ನಮ್ಮ ಮಾತಿನ ವರದಾನವನ್ನು ಯೆಹೋವನ ಸ್ತುತಿಗಾಗಿ ಮತ್ತು ಇತರರು ಆತನ ಕುರಿತು ತಿಳಿದು ಆತನನ್ನು ಪ್ರೀತಿಸುವಂತೆ ಸಹಾಯಮಾಡಲಿಕ್ಕಾಗಿ ಉಪಯೋಗಿಸುವುದೇ ನಮ್ಮ ಬಯಕೆಯಾಗಿದೆ. ನಮ್ಮ ತರಬೇತಿಯು, ಮತ್ತಾಯ 24:14 ಮತ್ತು 28:19, 20 ರಲ್ಲಿ ಕೊಡಲ್ಪಟ್ಟಿರುವ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ನಮ್ಮನ್ನು ಸನ್ನದ್ಧರಾಗಿಸಲಿಕ್ಕಾಗಿಯೇ ಆಗಿದೆ. ಹೀಗೆ ಕ್ರಮೇಣ ಅರ್ಹರಾಗುವ ಸ್ನಾತ ಸಹೋದರರು, ಸಾರ್ವಜನಿಕ ಭಾಷಣಕಾರರೂ ಬೋಧಕರೂ ಆಗಿ “ದೇವರ ಮಂದೆಯನ್ನು” ಕಾಯುವ ಕೆಲಸದಲ್ಲಿ ಪಾಲ್ಗೊಳ್ಳಲು ಆಮಂತ್ರಿಸಲ್ಪಡಬಹುದು.—1 ಪೇತ್ರ 5:2, 3.
ವಿದ್ಯಾರ್ಥಿ ಭಾಷಣವು ನೇಮಿಸಲ್ಪಟ್ಟ ಕೆಲವೇ ದಿನಗಳೊಳಗೆ ಅದರ ಸಲಹಾ ಅಂಶದ ಕುರಿತು ಪಠ್ಯಪುಸ್ತಕದಲ್ಲಿರುವ ಚರ್ಚೆಯನ್ನು ವಿದ್ಯಾರ್ಥಿಗಳು ಓದುವಂತೆ ಕೇಳಿಕೊಳ್ಳಿ. ಅವರು ಏನನ್ನು ಕಲಿತುಕೊಳ್ಳುತ್ತಾರೋ ಅದನ್ನು ಶಾಲಾ ಭಾಗಗಳನ್ನು ತಯಾರಿಸುವುದರಲ್ಲಿ, ದೈನಂದಿನ ಸಂಭಾಷಣೆಯಲ್ಲಿ, ಕೂಟಗಳಲ್ಲಿ ಹೇಳಿಕೆಗಳನ್ನು ನೀಡುವುದರಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ಅನ್ವಯಿಸುವಂತೆ ಅವರನ್ನು ಪ್ರೋತ್ಸಾಹಿಸಿರಿ.
ನೇಮಕಗಳನ್ನು ನೀಡುವುದು. ಇದನ್ನು ಸಾಮಾನ್ಯವಾಗಿ ಕಡಿಮೆಪಕ್ಷ ಮೂರು ವಾರಗಳಿಗೆ ಮುಂಚಿತವಾಗಿಯೇ ಮಾಡಬೇಕು. ಇಂತಹ ಎಲ್ಲ ನೇಮಕಗಳನ್ನು ಸಾಧ್ಯವಿರುವಲ್ಲಿ ಲಿಖಿತ ರೂಪದಲ್ಲಿ ಮಾಡಬೇಕು.
ಸಭೆಗೆ ಉಪದೇಶವನ್ನು ನೀಡುವಂಥ ಭಾಗಗಳನ್ನು ಹಿರಿಯರಿಗೆ, ಅದರಲ್ಲೂ ಅಂತಹ ಭಾಗಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವವರಿಗೆ, ಮತ್ತು ಉತ್ತಮ ಬೋಧಕರಾಗಿರುವ ಶುಶ್ರೂಷಾ ಸೇವಕರಿಗೆ ನೇಮಿಸಬೇಕು.
ಯಾವ ವಿದ್ಯಾರ್ಥಿ ಭಾಷಣಗಳನ್ನು ಸಹೋದರರಿಗೆ, ಯಾವ ಭಾಷಣಗಳನ್ನು ಸಹೋದರಿಯರಿಗೆ ನೇಮಿಸಬೇಕು ಎಂಬುದನ್ನು ನಿರ್ಧರಿಸುವುದರಲ್ಲಿ, ಶಾಲಾ ಶೆಡ್ಯೂಲಿನೊಂದಿಗೆ ಒದಗಿಸಲ್ಪಡುವ ಸೂಚನೆಗಳನ್ನು ಅನುಸರಿಸಿರಿ. ವಿದ್ಯಾರ್ಥಿ ಭಾಷಣಗಳನ್ನು ಕೊಡುವ ಸಹೋದರರು ಕೆಲವರೇ ಇದ್ದು, ಸಹೋದರಿಯರು ಅನೇಕ ಮಂದಿ ಇರುವಲ್ಲಿ, ಕೇವಲ ಬೈಬಲ್ ವಾಚನಕ್ಕಿಂತಲೂ ಹೆಚ್ಚಿನದ್ದನ್ನು ಒಳಗೂಡುವಂಥ ಭಾಷಣಗಳನ್ನು ನೀಡಲು ಸಹೋದರರಿಗೆ ಸಾಕಷ್ಟು ಅವಕಾಶಗಳನ್ನು ಕೊಡಲು ಜಾಗ್ರತೆ ವಹಿಸಿರಿ.
ನೇಮಕಗಳನ್ನು ನೀಡುವಾಗ ವ್ಯಕ್ತಿಗಳ ಪರಿಸ್ಥಿತಿಗಳನ್ನು ಪರಿಗಣಿಸಿರಿ. ಒಬ್ಬ ಹಿರಿಯನಿಗೆ ಅಥವಾ ಶುಶ್ರೂಷಾ ಸೇವಕನಿಗೆ ಸೇವಾ ಕೂಟದಲ್ಲಿ ಭಾಗವಿರುವ ರಾತ್ರಿಯಂದೇ ಅಥವಾ ಸಭೆಯಲ್ಲಿ ಸಾರ್ವಜನಿಕ ಭಾಷಣವಿರುವ ವಾರದಲ್ಲಿಯೇ, ಶಾಲೆಯಲ್ಲಿಯೂ ಭಾಷಣವನ್ನು ನೇಮಿಸುವುದು ಆವಶ್ಯಕವೊ? ಒಬ್ಬ ಸಹೋದರಿಗೆ ತನ್ನ ಚಿಕ್ಕ ಮಕ್ಕಳಲ್ಲಿ ಒಬ್ಬರಿಗೆ ಭಾಷಣವಿರುವ ರಾತ್ರಿಯಂದೇ—ಅವಳು ಆ ಮಗುವಿಗೆ ಸಹಾಯಮಾಡುವ ಆವಶ್ಯಕತೆ ಇರುವಾಗ—ಆಕೆಯೂ ನಿರೂಪಣೆಯನ್ನು ನೀಡಲು ನೇಮಿಸುವುದು ಆವಶ್ಯಕವೊ? ವಿಶೇಷವಾಗಿ, ಒಬ್ಬ ಚಿಕ್ಕ ಹುಡುಗನ ಅಥವಾ ಇನ್ನೂ ದೀಕ್ಷಾಸ್ನಾನ ಹೊಂದಿಲ್ಲದಂಥ ಒಬ್ಬ ಬೈಬಲ್ ವಿದ್ಯಾರ್ಥಿಯ ಸಂಬಂಧದಲ್ಲಿ, ಅವನಿಗೆ ನೇಮಿಸಲ್ಪಟ್ಟಿರುವ ವಿಷಯವಸ್ತುವು ಸೂಕ್ತವಾಗಿದೆಯೊ? ವಿದ್ಯಾರ್ಥಿಯು ಉತ್ತಮಗೊಳಿಸಲು ಪ್ರಯತ್ನಿಸುತ್ತಿರುವ ಸಲಹಾ ಅಂಶಕ್ಕೆ ಆ ನೇಮಕವು ಸೂಕ್ತವಾಗಿದೆಯೋ ಎಂಬುದನ್ನು ಪರೀಕ್ಷಿಸಿ ಖಚಿತಪಡಿಸಿಕೊಳ್ಳಿರಿ.
ಸಹೋದರಿಯರಿಗೆ ಕೊಡಲ್ಪಡುವ ನೇಮಕಗಳಿಗೆ, 78 ಮತ್ತು 82ನೆಯ ಪುಟಗಳಲ್ಲಿರುವ ಸೂಚನೆಗಳಿಗೆ ಹೊಂದಿಕೆಯಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿನಿಯೇ ತನ್ನ ಸ್ವಂತ ಸನ್ನಿವೇಶವನ್ನು ಆರಿಸಿಕೊಳ್ಳುವಳು. ಒಬ್ಬಳನ್ನು ಸಹಾಯಕಳನ್ನಾಗಿ ನೇಮಿಸಲಾಗುತ್ತದಾದರೂ ಇನ್ನೊಬ್ಬ ಸಹಾಯಕಳನ್ನೂ ಉಪಯೋಗಿಸಬಹುದು. ಒಂದು ನಿರ್ದಿಷ್ಟ ಸನ್ನಿವೇಶಕ್ಕಾಗಿ ವಿಶೇಷವಾಗಿ ಸೂಕ್ತವಾಗಿರುವ ಒಬ್ಬ ಸಹಾಯಕಳನ್ನು ಒಬ್ಬ ವಿದ್ಯಾರ್ಥಿನಿಯು ಕೇಳಿಕೊಳ್ಳುವಲ್ಲಿ, ಆ ಬಿನ್ನಹಕ್ಕೆ ಪರಿಗಣನೆಯನ್ನು ತೋರಿಸಬೇಕು.
ಉಪಕ್ಲಾಸುಗಳು. ಶಾಲೆಯಲ್ಲಿ 50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವಲ್ಲಿ, ವಿದ್ಯಾರ್ಥಿಗಳಿಂದ ನಿರ್ವಹಿಸಲ್ಪಡುವ ಭಾಗಗಳನ್ನು ಇನ್ನೂ ಹೆಚ್ಚು ಸ್ಥಳಗಳಲ್ಲಿ ನಡೆಸಲು ನೀವು ಬಯಸಬಹುದು. ಸ್ಥಳಿಕ ಆವಶ್ಯಕತೆಗಳ ಮೇಲೆ ಹೊಂದಿಕೊಂಡು, ಈ ಏರ್ಪಾಡನ್ನು ಎಲ್ಲ ವಿದ್ಯಾರ್ಥಿ ಭಾಷಣಗಳಿಗೆ ಇಲ್ಲವೆ ಕೊನೆಯ ಎರಡು ಭಾಷಣಗಳಿಗೆ ಮಾತ್ರ ಉಪಯೋಗಿಸಬಹುದು.
ಪ್ರತಿಯೊಂದು ಉಪಕ್ಲಾಸಿನಲ್ಲಿ ಅರ್ಹನಾದ ಸಲಹೆಗಾರನು—ಹಿರಿಯನಿದ್ದರೆ ಒಳ್ಳೇದು—ಇರಬೇಕು. ಅಗತ್ಯವಿರುವಲ್ಲಿ, ಒಳ್ಳೆಯ ಅರ್ಹತೆಯಿರುವ ಒಬ್ಬ ಶುಶ್ರೂಷಾ ಸೇವಕನು ಆ ಸ್ಥಾನವನ್ನು ವಹಿಸಿಕೊಳ್ಳಬಹುದು. ಈ ಸಲಹೆಗಾರರಿಗೆ ಹಿರಿಯ ಮಂಡಲಿಯು ಒಪ್ಪಿಗೆಯನ್ನು ಕೊಡಬೇಕು. ಶಾಲಾ ಮೇಲ್ವಿಚಾರಕನು ಈ ಉಪಸಲಹೆಗಾರರೊಂದಿಗೆ ನಿಕಟವಾಗಿ ಕಾರ್ಯನಡಿಸಬೇಕು. ಹೀಗೆ, ವಿದ್ಯಾರ್ಥಿಗಳ ಮುಂದಿನ ಭಾಷಣವು ಯಾವ ಶಾಲೆಯಲ್ಲೇ ನೇಮಿಸಲ್ಪಟ್ಟಿರಲಿ, ಅವರು ತಮ್ಮ ಮುಂದಿನ ಭಾಷಣದಲ್ಲಿ ಯಾವ ಸಲಹಾ ಅಂಶದ ವಿಷಯದಲ್ಲಿ ಕಾರ್ಯನಡಿಸಬೇಕು ಎಂಬುದರ ಬಗ್ಗೆ ಹೆಚ್ಚಿನ ಗಮನವನ್ನು ಕೊಡುವಂತಾಗುವುದು.
ವಿಶೇಷ ವಾಚನ ಕ್ಲಾಸು. ಸಭೆಯಲ್ಲಿರುವ ಅನೇಕ ವ್ಯಕ್ತಿಗಳಿಗೆ, ಸಭೆಯಲ್ಲಿ ಆಡಲ್ಪಡುವ ಭಾಷೆಯಲ್ಲಿ ಮೂಲಭೂತ ವಾಚನ ಶಿಕ್ಷಣದ ಅಗತ್ಯವಿದೆಯೆಂದು ಹಿರಿಯರ ಮಂಡಲಿಯು ನಿರ್ಧರಿಸುವಲ್ಲಿ, ನೀವು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಒಟ್ಟಿಗೆ ಇದಕ್ಕಾಗಿ ಏರ್ಪಾಡುಗಳನ್ನು ಮಾಡಬಹುದು. ಈ ಶಿಕ್ಷಣದಲ್ಲಿ ಮೂಲಭೂತ ಸಾಕ್ಷರತೆಯ ಕೌಶಲಗಳು ಒಳಗೂಡಿರಬಹುದು ಅಥವಾ ವಾಚನವನ್ನು ಉತ್ತಮಗೊಳಿಸುವುದು ಅದರ ಉದ್ದೇಶವಾಗಿರಬಹುದು.
ಇಂತಹ ಕ್ಲಾಸುಗಳನ್ನು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ವಿದ್ಯಾರ್ಥಿ ಭಾಷಣಗಳು ಕೊಡಲ್ಪಡುವ ಸಮಯದಲ್ಲೇ ನಡೆಸಬೇಕೆಂದಿಲ್ಲ. ಸಾಕಷ್ಟು ಸಹಾಯವನ್ನು ಒದಗಿಸಲಿಕ್ಕಾಗಿ, ಶಾಲೆಯ ಅವಧಿಯಲ್ಲಿ ಸಾಧ್ಯವಿರುವುದಕ್ಕಿಂತಲೂ ಹೆಚ್ಚಿನ ಸಮಯವು ಬೇಕಾದೀತು. ಯಾವುದರ ಆವಶ್ಯಕತೆಯಿದೆ ಮತ್ತು ಇಂತಹ ಶಿಕ್ಷಣವನ್ನು ಯಾವಾಗ ನೀಡಬೇಕು ಎಂಬುದನ್ನು ಸ್ಥಳಿಕ ಹಿರಿಯರು ನಿರ್ಣಯಿಸಬಹುದು. ಅಗತ್ಯಕ್ಕನುಸಾರ, ಗುಂಪು ಶಿಕ್ಷಣಕ್ಕೊ ಒಬ್ಬನಿಗೆ ಇನ್ನೊಬ್ಬನು ವೈಯಕ್ತಿಕವಾಗಿ ಕಲಿಸುವ ವಿಧಾನಕ್ಕೊ ಏರ್ಪಾಡುಗಳನ್ನು ಮಾಡಬಹುದು.
ಒಬ್ಬ ಅರ್ಹ ಶಿಕ್ಷಕನ ಅಗತ್ಯವಿದೆ. ಈ ನೇಮಕವನ್ನು ಉತ್ತಮ ವಾಚಕನಾಗಿರುವ ಮತ್ತು ಸ್ಥಳಿಕ ಭಾಷೆಯ ವಿಷಯದಲ್ಲಿ ಸುಪರಿಚಿತನಾಗಿರುವಂಥ ಒಬ್ಬ ಸಹೋದರನಿಗೆ ನೀಡುವುದು ಮೇಲು. ಒಬ್ಬ ಸಹೋದರನು ಲಭ್ಯವಿಲ್ಲದಿರುವಲ್ಲಿ, ಸಮರ್ಥಳೂ ಆದರ್ಶಪ್ರಾಯಳೂ ಆಗಿರುವಂಥ ಒಬ್ಬ ಸಹೋದರಿಯು ಸಹಾಯಮಾಡುವಂತೆ ಹಿರಿಯರು ಕೇಳಿಕೊಳ್ಳಬಹುದು. ಒಂದು ಕ್ಲಾಸಿಗೆ ಕಲಿಸುತ್ತಿರುವಾಗ ಅವಳು ತಲೆಗೆ ಮುಸುಕನ್ನು ಹಾಕಿಕೊಳ್ಳಬೇಕು.—1 ಕೊರಿಂ. 11:3-10; 1 ತಿಮೊ. 2:11, 12.
ವಾಚನಕ್ಕೂ ಬರವಣಿಗೆಗೂ ಶ್ರದ್ಧಾಪೂರ್ವಕವಾದ ಗಮನವನ್ನು ಕೊಡಿರಿ (ಇಂಗ್ಲಿಷ್) ಎಂಬ ಪುಸ್ತಿಕೆಯು ಅನೇಕ ಭಾಷೆಗಳಲ್ಲಿ ಲಭ್ಯಗೊಳಿಸಲ್ಪಟ್ಟಿದೆ. ಮೂಲ ಸಾಕ್ಷರತಾ ಕೌಶಲಗಳನ್ನು ಕಲಿಸಲಿಕ್ಕಾಗಿ ಇದನ್ನು ರಚಿಸಲಾಗಿದೆ. ಈ ಕ್ಲಾಸಿಗೆ ಸೇರಿರುವವರ ವಾಚನ ಸಾಮರ್ಥ್ಯ ಮಟ್ಟದ ಮೇಲೆ ಹೊಂದಿಕೊಂಡು, ಶಿಕ್ಷಣಕ್ಕೆ ಅನುಕೂಲವಾದ ಬೇರೆ ಮಾಹಿತಿಯನ್ನೂ ಉಪಯೋಗಿಸಬಹುದು. ವಿದ್ಯಾರ್ಥಿಗಳು ಸಾಕಷ್ಟು ಪ್ರಗತಿಯನ್ನು ಮಾಡಿದ ನಂತರ, ಅವರು ಕ್ರಮಬದ್ಧವಾದ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲ್ಪಡಬೇಕು.
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಮೇಲ್ವಿಚಾರಕರ ಸ್ಥಾನದಲ್ಲಿರುವ ನೀವು ಸಭೆಯ ಪ್ರಯೋಜನಾರ್ಥವಾಗಿ ಹೆಚ್ಚನ್ನು ಮಾಡಬಲ್ಲಿರಿ. ಚೆನ್ನಾಗಿ ತಯಾರಿಸಿರಿ ಮತ್ತು ರೋಮಾಪುರ 12:6-8 ರಲ್ಲಿರುವ ಸಲಹೆಗೆ ಹೊಂದಿಕೆಯಲ್ಲಿ, ನಿಮಗಿರುವ ನೇಮಕವನ್ನು ದೇವರಿಂದ ಬಂದಿರುವ ಅಮೂಲ್ಯ ಹೊಣೆಗಾರಿಕೆಯಾಗಿ ನಿರ್ವಹಿಸಿರಿ.