ಸಭಾ ಪುಸ್ತಕ ಅಧ್ಯಯನ —ನಮಗೆ ಇದರ ಆವಶ್ಯಕತೆ ಏಕಿದೆ?
1. ಯಾವ ರೀತಿಯಲ್ಲಿ ಸಭಾ ಪುಸ್ತಕ ಅಧ್ಯಯನದ ಏರ್ಪಾಡು ಆರಂಭಿಸಲ್ಪಟ್ಟಿತು?
1 ಇಸವಿ 1895ರಲ್ಲಿ ಬೈಬಲ್ ವಿದ್ಯಾರ್ಥಿಗಳ—ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು—ಅಧ್ಯಯನ ಗುಂಪುಗಳು, ಬೈಬಲ್ ಅಧ್ಯಯನಕ್ಕಾಗಿರುವ ಡಾನ್ ವೃಂದಗಳು ಎಂದು ಪ್ರಸಿದ್ಧವಾಗಿದ್ದವು. ಆಗ ಮಿಲೇನಿಯಲ್ ಡಾನ್ ಪುಸ್ತಕದ ಸಂಪುಟಗಳನ್ನು ಅಧ್ಯಯನಕ್ಕೆ ಆಧಾರವಾಗಿ ಉಪಯೋಗಿಸಲಾಗುತ್ತಿತ್ತು. ಕಾಲಾನಂತರ ಈ ಅಧ್ಯಯನ ಗುಂಪುಗಳು, ಬೈಬಲ್ ಅಧ್ಯಯನಕ್ಕಾಗಿರುವ ಬೆರೀಯನ್ ವೃಂದಗಳು ಎಂದು ಕರೆಯಲ್ಪಟ್ಟವು. (ಅ.ಕೃ. 17:11) ಅನೇಕವೇಳೆ ಚಿಕ್ಕ ಸಂಖ್ಯೆಯ ಜನರು ಒಂದು ಗುಂಪಿನೋಪಾದಿ ತಮಗೆ ಅನುಕೂಲಕರವಾದ ಸಾಯಂಕಾಲದಲ್ಲಿ ಖಾಸಗಿ ಮನೆಯೊಂದರಲ್ಲಿ ಕೂಡಿಬರುತ್ತಿದ್ದರು. ಸಭಾ ಪುಸ್ತಕ ಅಧ್ಯಯನದ ಏರ್ಪಾಡು ಆರಂಭಿಸಲ್ಪಟ್ಟದ್ದು ಈ ರೀತಿಯಲ್ಲಿಯೇ.
2. ಪುಸ್ತಕ ಅಧ್ಯಯನದಲ್ಲಿ ನಾವು ಹೇಗೆ ‘ಇನ್ನೊಬ್ಬರ ನಂಬಿಕೆಯಿಂದ ಸಹಾಯಹೊಂದಿ ಧೈರ್ಯಗೊಳ್ಳ’ಸಾಧ್ಯವಿದೆ?
2 ಉತ್ತೇಜನ ಮತ್ತು ಸಹಾಯ: ಉದ್ದೇಶಪೂರ್ವಕವಾಗಿಯೇ ಪುಸ್ತಕ ಅಧ್ಯಯನ ಗುಂಪುಗಳನ್ನು ಚಿಕ್ಕದಾಗಿ ಇಟ್ಟಿರುವುದರಿಂದ, ಹಾಜರಿರುವವರು ತಮ್ಮ ನಂಬಿಕೆಯ ಅಭಿವ್ಯಕ್ತಿಗಳನ್ನು ತಿಳಿಯಪಡಿಸಲು ಅವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಇದರ ಫಲಿತಾಂಶವು, ‘ಒಬ್ಬರು ಇನ್ನೊಬ್ಬರ ನಂಬಿಕೆಯಿಂದ ಸಹಾಯಹೊಂದಿ ಧೈರ್ಯಗೊಳ್ಳುವುದೇ’ ಆಗಿದೆ.—ರೋಮಾ. 1:11.
3, 4. ನಮ್ಮ ಶುಶ್ರೂಷೆಯನ್ನು ಪೂರೈಸಲು ಪುಸ್ತಕ ಅಧ್ಯಯನದ ಏರ್ಪಾಡು ನಮಗೆ ಹೇಗೆ ಸಹಾಯಮಾಡುತ್ತದೆ?
3 ಪುಸ್ತಕ ಅಧ್ಯಯನದ ಮೇಲ್ವಿಚಾರಕನ ಬೋಧನಾ ವಿಧಾನವನ್ನು ಗಮನಿಸುವುದು, ‘ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವಂತೆ’ ನಮಗೆ ಸಹಾಯಮಾಡಬಲ್ಲದು. (2 ತಿಮೊ. 2:15) ವಿಷಯಭಾಗದ ಶಾಸ್ತ್ರೀಯ ಆಧಾರವನ್ನು ಅವನು ಹೇಗೆ ಒತ್ತಿಹೇಳುತ್ತಾನೆ ಎಂಬುದನ್ನು ಗಮನಿಸಿರಿ. ಪರಿಗಣಿಸಲ್ಪಡುತ್ತಿರುವ ಪ್ರಕಾಶನಕ್ಕೆ ಸೂಕ್ತವಾಗಿರುವಲ್ಲಿ, ಕೇವಲ ಬೈಬಲನ್ನು ಮಾತ್ರ ಉಪಯೋಗಿಸಿ ಮುಕ್ತಾಯದ ಪುನರ್ವಿಮರ್ಶೆಯನ್ನು ನಡೆಸುವ ಮೂಲಕ ಅವನು ಮುಖ್ಯಾಂಶಗಳನ್ನು ಎತ್ತಿತೋರಿಸಬಹುದು. ಅವನ ಒಳ್ಳೇ ಮಾದರಿಯು, ಕ್ರೈಸ್ತ ಶುಶ್ರೂಷೆಯಲ್ಲಿನ ನಮ್ಮ ಕಲಿಸುವಿಕೆಯನ್ನು ಉತ್ತಮಗೊಳಿಸಲು ನಮಗೆ ಸಹಾಯಮಾಡಬಲ್ಲದು.—1 ಕೊರಿಂ. 11:1.
4 ಪುಸ್ತಕ ಅಧ್ಯಯನ ಮೇಲ್ವಿಚಾರಕನು ಸಾಪ್ತಾಹಿಕ ಪಾಠವನ್ನು ನಡೆಸುವುದರ ಜೊತೆಗೆ ಸೌವಾರ್ತಿಕ ಕೆಲಸದಲ್ಲಿಯೂ ಮುಂದಾಳತ್ವವನ್ನು ವಹಿಸುತ್ತಾನೆ. ಸೇವಾ ಮೇಲ್ವಿಚಾರಕನೊಂದಿಗೆ ಸಹಕರಿಸುತ್ತಾ ಅವನು ಕ್ಷೇತ್ರ ಸೇವೆಗಾಗಿ ಸೂಕ್ತವಾದ ಏರ್ಪಾಡುಗಳನ್ನು ಮಾಡುತ್ತಾನೆ. ಸುವಾರ್ತೆಯನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ತಮ್ಮ ಕ್ರೈಸ್ತ ಜವಾಬ್ದಾರಿಯನ್ನು ಪೂರೈಸಲು ಅವನು ಗುಂಪಿನಲ್ಲಿರುವ ಎಲ್ಲರಿಗೂ ಸಹಾಯಮಾಡಲು ಪ್ರಯತ್ನಿಸುತ್ತಾನೆ.—ಮತ್ತಾ. 28:19, 20; 1 ಕೊರಿಂ. 9:16.
5. ಪುಸ್ತಕ ಅಧ್ಯಯನದ ಮೂಲಕ ಯಾವ ವೈಯಕ್ತಿಕ ನೆರವು ಲಭ್ಯವಿದೆ?
5 ಗುಂಪಿನಲ್ಲಿರುವ ಪ್ರತಿಯೊಬ್ಬರ ಆಧ್ಯಾತ್ಮಿಕ ಹಿತಕ್ಷೇಮದ ಕುರಿತು ಪುಸ್ತಕ ಅಧ್ಯಯನದ ಮೇಲ್ವಿಚಾರಕನು ಆಸಕ್ತನಾಗಿರುತ್ತಾನೆ. ಅವನು ಈ ಆಸಕ್ತಿಯನ್ನು ಸಭಾ ಕೂಟಗಳಲ್ಲಿ, ಮತ್ತು ಕ್ಷೇತ್ರ ಸೇವೆಯಲ್ಲಿ ಇತರರೊಂದಿಗೆ ಸೇವೆಮಾಡುವಾಗ ತೋರಿಸುತ್ತಾನೆ. ಆಧ್ಯಾತ್ಮಿಕ ಉತ್ತೇಜನವನ್ನು ಕೊಡಲಿಕ್ಕಾಗಿ ಸಹೋದರರನ್ನು ಮನೆಗಳಲ್ಲಿ ಭೇಟಿಮಾಡುವಾಗಲೂ ಅವನು ಈ ಸಂದರ್ಭಗಳನ್ನು ಸದುಪಯೋಗಿಸಿಕೊಳ್ಳುತ್ತಾನೆ. ತಮಗೆ ಅಗತ್ಯವಿರುವಾಗೆಲ್ಲಾ ಆಧ್ಯಾತ್ಮಿಕ ಸಹಾಯವನ್ನು ಪಡೆದುಕೊಳ್ಳಲಿಕ್ಕಾಗಿ ಪುಸ್ತಕ ಅಧ್ಯಯನದ ಮೇಲ್ವಿಚಾರಕನನ್ನು ಸಮೀಪಿಸಲು ಯಾರೂ ಹಿಂಜರಿಯಬಾರದು.—ಯೆಶಾ. 32:1, 2.
6. (ಎ) ನಿರ್ದಿಷ್ಟ ದೇಶಗಳಲ್ಲಿನ ನಮ್ಮ ಸಹೋದರರು ಚಿಕ್ಕ ಚಿಕ್ಕ ಗುಂಪುಗಳಲ್ಲಿ ಕೂಡಿಬರುವುದರಿಂದ ಹೇಗೆ ಬಲಪಡಿಸಲ್ಪಟ್ಟಿದ್ದಾರೆ? (ಬಿ) ಪುಸ್ತಕ ಅಧ್ಯಯನ ಏರ್ಪಾಡಿನಿಂದ ನೀವು ವೈಯಕ್ತಿಕವಾಗಿ ಹೇಗೆ ಪ್ರಯೋಜನ ಪಡೆದಿದ್ದೀರಿ?
6 ಒಬ್ಬರು ಇನ್ನೊಬ್ಬರನ್ನು ಬಲಪಡಿಸುವುದು: ಯೆಹೋವನ ಸಾಕ್ಷಿಗಳ ಚಟುವಟಿಕೆಯು ನಿರ್ಬಂಧಿಸಲ್ಪಟ್ಟಿರುವಂಥ ದೇಶಗಳಲ್ಲಿ, ಸಹೋದರರು ಅನೇಕವೇಳೆ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಕೂಡಿಬರುತ್ತಾರೆ. ಒಬ್ಬ ಸಹೋದರನು ಜ್ಞಾಪಿಸಿಕೊಳ್ಳುವುದು: “ನಮ್ಮ ಕ್ರೈಸ್ತ ಚಟುವಟಿಕೆಗಳು ನಿಷೇಧಿಸಲ್ಪಟ್ಟಿದ್ದವಾದರೂ, ಸಾಧ್ಯವಿರುವಾಗೆಲ್ಲಾ ನಾವು ನಮ್ಮ ಸಾಪ್ತಾಹಿಕ ಕೂಟಗಳನ್ನು ನಡೆಸಿದೆವು ಮತ್ತು ಒಂದೊಂದು ಗುಂಪಿನಲ್ಲೂ 10ರಿಂದ 15 ಜನರು ಇರುತ್ತಿದ್ದರು. ಈ ಕೂಟಗಳಿಂದ, ಅಂದರೆ ನಮ್ಮ ಬೈಬಲ್ ಅಧ್ಯಯನದಿಂದ ಹಾಗೂ ಅಧ್ಯಯನದ ನಂತರದ ನಮ್ಮ ಸಹವಾಸದಿಂದ ನಾವು ಆಧ್ಯಾತ್ಮಿಕ ಬಲವನ್ನು ಪಡೆದುಕೊಂಡೆವು. ನಾವೆಲ್ಲರೂ ನಮ್ಮ ಅನುಭವಗಳನ್ನು ಹೋಲಿಸಿ ನೋಡುತ್ತಿದ್ದೆವು, ಮತ್ತು ಇದು ನಮ್ಮಲ್ಲಿ ಪ್ರತಿಯೊಬ್ಬರೂ ಇದೇ ರೀತಿಯ ಹೋರಾಟವನ್ನು ನಡಿಸುತ್ತಿದ್ದೇವೆ ಎಂಬುದನ್ನು ಮನಗಾಣುವಂತೆ ನಮಗೆ ಸಹಾಯಮಾಡಿತು.” (1 ಪೇತ್ರ 5:9) ತದ್ರೀತಿಯಲ್ಲಿ, ಸಭಾ ಪುಸ್ತಕ ಅಧ್ಯಯನ ಏರ್ಪಾಡನ್ನು ಪೂರ್ಣ ರೀತಿಯಲ್ಲಿ ಬೆಂಬಲಿಸುವ ಮೂಲಕ ನಾವು ಸಹ ಒಬ್ಬರು ಇನ್ನೊಬ್ಬರನ್ನು ಬಲಪಡಿಸೋಣ.—ಎಫೆ. 4:16.