ಮಹಾಸಭೆಯಲ್ಲಿ ಯೆಹೋವನನ್ನು ಕೊಂಡಾಡಿರಿ
1, 2. ಜಿಲ್ಲಾ ಅಧಿವೇಶನವು ನಮಗೆ ಯಾವ ಅವಕಾಶವನ್ನು ಒದಗಿಸುತ್ತದೆ, ಮತ್ತು ಯಾವ ವಿಧಗಳಲ್ಲಿ ನಾವು ಈ ಅವಕಾಶವನ್ನು ಸದುಪಯೋಗಿಸಿಕೊಳ್ಳಬಲ್ಲೆವು?
1 ಪ್ರತಿ ವರುಷ ಜರುಗುವ ನಮ್ಮ ಜಿಲ್ಲಾ ಅಧಿವೇಶನಗಳು ಯೆಹೋವನನ್ನು ಘನಪಡಿಸಲು ನಮಗೊಂದು ಅದ್ಭುತಕರ ಅವಕಾಶವನ್ನು ಒದಗಿಸುತ್ತವೆ. ನಮ್ಮ ಭಾವನೆಗಳು ದಾವೀದನ ಭಾವನೆಗಳಂತೆಯೇ ಇವೆ. ಅವನು ಹಾಡಿದ್ದು: “ನಾನು ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರ ಮುಂದೆ ಸ್ತುತಿಸುವೆನು.” (ಕೀರ್ತ. 35:18) ಮುಂಬರಲಿರುವ “ದೈವಿಕ ವಿಧೇಯತೆ” ಎಂಬ ಜಿಲ್ಲಾ ಅಧಿವೇಶನದಲ್ಲಿ, ನಾವು ಐಕ್ಯದಿಂದ ಯೆಹೋವನಿಗೆ ಸ್ತುತಿಯನ್ನು ತರುವ ಜನರಾಗಿದ್ದೇವೆ ಎಂಬುದನ್ನು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು?
2 ಇದನ್ನು ಮಾಡಸಾಧ್ಯವಿರುವ ಒಂದು ವಿಧವು ನಮ್ಮ ನಡತೆಯ ಮೂಲಕವಾಗಿದೆ. ಒಂದು ಅಧಿವೇಶನ ಸೌಕರ್ಯದ ನಿರ್ವಾಹಕರು ಹೀಗೆ ಹೇಳಿದರು: “ಯೆಹೋವನ ಸಾಕ್ಷಿಗಳ ಅಧಿವೇಶನಗಳನ್ನು ನಾವು ನೋಡಿದ್ದೇವೆ. ಅವರು ಸುವ್ಯವಸ್ಥಿತವಾದ ಏರ್ಪಾಡುಗಳನ್ನು ಮಾಡುತ್ತಾರೆ. ಆದುದರಿಂದ ನಮ್ಮ ಸೌಕರ್ಯವನ್ನು ಬಾಡಿಗೆಗೆ ತೆಗೆದುಕೊಳ್ಳುವ ಇತರ ಧಾರ್ಮಿಕ ಗುಂಪುಗಳಿಗೆ, ಯೆಹೋವನ ಸಾಕ್ಷಿಗಳು ತಮ್ಮ ಅಧಿವೇಶನಗಳನ್ನು ಹೇಗೆ ನಡೆಸುತ್ತಾರೆಂಬುದನ್ನು ಬಂದುನೋಡುವಂತೆ ನಾವು ತಿಳಿಸಿದೆವು.” ನಮ್ಮ ತೋರಿಕೆ, ನಮ್ಮ ಸಹಕಾರ ಮತ್ತು ನಮ್ಮ ನಡತೆಯಿಂದ, ನಮ್ಮಲ್ಲಿ ಪ್ರತಿಯೊಬ್ಬರು ದೇವರಿಗೆ ಅರ್ಹವಾಗಿರುವ ಸ್ತುತಿಯನ್ನು ಸಲ್ಲಿಸುವುದರಲ್ಲಿ ಒಂದು ಪಾತ್ರವನ್ನು ವಹಿಸುತ್ತೇವೆ.—1 ಪೇತ್ರ 2:12.
3, 4. ಅಧಿವೇಶನದ ಸಮಯದಲ್ಲಿ ಮತ್ತು ಅದರ ನಂತರವೂ, ಕ್ರೈಸ್ತ ಶುಶ್ರೂಷಕರಿಗೆ ಯುಕ್ತವಾಗಿರುವ ರೀತಿಯಲ್ಲಿ ಉಡುಗೆಯನ್ನು ಧರಿಸಲು ನಿರಾಡಂಬರತೆಯು ನಮಗೆ ಹೇಗೆ ಸಹಾಯಮಾಡುತ್ತದೆ?
3 ವೈಯಕ್ತಿಕ ತೋರಿಕೆ: ನಮ್ಮ ಉಡುಗೆ ಹಾಗೂ ಕೇಶಾಲಂಕಾರವು ಯೆಹೋವನಿಗೆ ಸ್ತುತಿಯನ್ನು ತರುವಂಥ ರೀತಿಯಲ್ಲಿರಬೇಕಾದರೆ ‘ನಿರಾಡಂಬರರಾಗಿ’ ಇರುವುದು ಅಗತ್ಯವಾಗಿದೆ. (1 ತಿಮೊ. 2:9, NW) ಶೂಶ್ರೂಷಾ ಶಾಲೆ ಪುಸ್ತಕದ ಪುಟ 132ರಲ್ಲಿ ಹೀಗೆ ತಿಳಿಸಲಾಗಿದೆ: “ನಿರಾಡಂಬರ ವ್ಯಕ್ತಿಯು ಇತರರನ್ನು ಅನಾವಶ್ಯಕವಾಗಿ ನೋಯಿಸದಿರುವ ವಿಷಯದಲ್ಲಿ ಮತ್ತು ತನ್ನ ಕಡೆಗೇ ಅನುಚಿತವಾದ ಗಮನವನ್ನು ಸೆಳೆಯದಿರುವ ವಿಷಯದಲ್ಲಿ ಆಸಕ್ತಿವಹಿಸುತ್ತಾನೆ.” ಅನೇಕ ದೇಶಗಳಲ್ಲಿ, ಆಡಂಬರದ ಉಡುಗೆತೊಡುಗೆಗಳು ಸರ್ವಸಾಮಾನ್ಯವಾಗಿವೆ. ಹಾಗಿದ್ದರೂ, ಯೆಹೋವನನ್ನು ಯೋಗ್ಯ ರೀತಿಯಲ್ಲಿ ಪ್ರತಿನಿಧಿಸಲು ನಾವು ಮಾಡುವ ಪ್ರಯತ್ನವನ್ನು ಆತನು ಗಣ್ಯಮಾಡುತ್ತಾನೆ. (ಅ. ಕೃ. 15:14) ಅಧಿವೇಶನವು ಒಂದು ಕ್ರೀಡಾಂಗಣದಲ್ಲಿ ಅಥವಾ ಮನೋರಂಜನಾ ಸೌಕರ್ಯದಲ್ಲಿ ಜರುಗಬಹುದಾದರೂ, ಆ ಮೂರು ದಿನಗಳ ಅಧಿವೇಶನದ ಸಮಯದಲ್ಲಿನ ಒಕ್ಕೂಟವು ನಮ್ಮ “ಮಹಾಸಭೆ”ಯಾಗಿರುತ್ತದೆ. ಆದುದರಿಂದ, ವಿಶ್ವದಲ್ಲಿಯೇ ಅತಿ ಉನ್ನತ ವ್ಯಕ್ತಿಯಾದ ಯೆಹೋವನ ಮುಂದೆ ನಾವು ಸೇರುವ ಕಾರಣ, ಅದಕ್ಕೆ ಯೋಗ್ಯವಾದ ಉಡುಗೆಯನ್ನು ಧರಿಸಿರಬೇಕು.—1 ಪೂರ್ವ. 29:11.
4 ಪ್ರತಿ ದಿನದ ಸೆಷನ್ ಮುಗಿದ ನಂತರದ ನಮ್ಮ ತೋರಿಕೆಗೆ ಸಹ ನಾವು ಗಮನವನ್ನು ನೀಡಬೇಕು. ನಮ್ಮ ವಿರಾಮದ ಸಮಯದಲ್ಲಿ ಅಥವಾ ಹೋಟೆಲಿನಲ್ಲಿ ಊಟಮಾಡುವ ಸಮಯದಲ್ಲಿ ನಾವು ಹೆಚ್ಚು ಹಾಯಾದ ಉಡುಪನ್ನು ಧರಿಸಲು ಬಯಸುವುದಾದರೂ, ಆಗಲೂ ನಮ್ಮ ಉಡುಗೆ ಹಾಗೂ ಕೇಶಾಲಂಕಾರ “ದೇವಭಕ್ತೆಯ [ಅಥವಾ, ದೇವಭಕ್ತ]ರೆನಿಸಿಕೊಳ್ಳು”ವವರಿಗೆ ಯುಕ್ತವಾಗಿರಬೇಕು. (1 ತಿಮೊ. 2:10) ಸ್ವೀಕಾರಾರ್ಹವಾದ ಉಡುಗೆ ಎಂಬುದು, ಲೋಕದಲ್ಲಿ ಯಾವುದು ಪ್ರಖ್ಯಾತಿಯಲ್ಲಿದೆ ಎಂಬುದರ ಮೇಲೆ ನಿರ್ಧರಿಸಲ್ಪಡುವುದಿಲ್ಲ. (1 ಯೋಹಾ. 2:16, 17) ನಮ್ಮ ಕ್ರೈಸ್ತ ಪ್ರಕಾಶನಗಳು, ವಿವಿಧ ಸನ್ನಿವೇಶಗಳಲ್ಲಿ ಸ್ತ್ರೀಪುರುಷರು ಧರಿಸಬಹುದಾದ ನಿರಾಡಂಬರದ ಮತ್ತು ಮರ್ಯಾದೆಗೆ ತಕ್ಕ ಉಡುಪಿನ ಬಗ್ಗೆ ಉಪಯುಕ್ತಕರ ಚಿತ್ರಗಳನ್ನು ಒದಗಿಸುತ್ತವೆ. ನಾವು ಅಧಿವೇಶನ ನಡೆಯುವ ನಗರದಲ್ಲಿರುವಾಗ ಬ್ಯಾಡ್ಜ್ ಕಾರ್ಡ್ ಅನ್ನು ಧರಿಸುವುದು, ಎಲ್ಲ ಸಮಯಗಳಲ್ಲಿ ನಾವು ಕ್ರೈಸ್ತ ಶುಶ್ರೂಷಕರಾಗಿದ್ದೇವೆ ಎಂಬುದನ್ನು ನೆನಪಿಗೆ ತರುತ್ತದೆ.—2 ಕೊರಿಂ. 6:3, 4.
5, 6. ಯೆಹೋವನ ಆಧ್ಯಾತ್ಮಿಕ ಮೇಜಿಗೆ ನಾವು ಹೇಗೆ ಗೌರವವನ್ನು ತೋರಿಸಸಾಧ್ಯವಿದೆ?
5 ಯೆಹೋವನ ಮೇಜನ್ನು ಗೌರವಿಸಿರಿ: ವಿಶ್ವದ ಪರಮಾಧಿಕಾರಿ ಕರ್ತನು ನಮ್ಮ ಮುಂದೆ ಮೃಷ್ಟಾನ್ನ ಭೋಜನವನ್ನು ಅಣಿಮಾಡಿದ್ದಾನೆ. (ಯೆಶಾ. 25:6; 1 ಕೊರಿಂ. 10:21) ಯೆಹೋವನ ಆಧ್ಯಾತ್ಮಿಕ ಮೇಜಿನಲ್ಲಿ ಊಟಮಾಡುವ ಸುಯೋಗವನ್ನು ನಾವು ಬಹಳವಾಗಿ ಗಣ್ಯಮಾಡುವುದಾದರೆ, ಅಧಿವೇಶನದ ಎಲ್ಲ ಮೂರು ದಿನಗಳಿಗೆ ಹಾಜರಾಗುವುದು ನಮ್ಮ ಗುರಿಯಾಗಿರುತ್ತದೆ. ನೀವು ಉಳುಕೊಳ್ಳುವ ಸ್ಥಳಕ್ಕಾಗಿ, ವಾಹನಸೌಕರ್ಯಕ್ಕಾಗಿ ಮತ್ತು ಐಹಿಕ ಕೆಲಸದಿಂದ ರಜೆಗಾಗಿ ಏರ್ಪಾಡು ಮಾಡಿದ್ದೀರೊ? ಆಸನಗಳನ್ನು ಕಂಡುಕೊಳ್ಳುವ, ಸಹೋದರರೊಂದಿಗೆ ಸಹವಾಸಿಸುವ ಮತ್ತು ಆರಂಭದ ಗೀತೆ ಹಾಗೂ ಪ್ರಾರ್ಥನೆಯ ಮೂಲಕ ಯೆಹೋವನನ್ನು ಸ್ತುತಿಸುವುದರಲ್ಲಿ ಅವರೊಂದಿಗೆ ಜೊತೆಗೂಡುವ ಸಲುವಾಗಿ ಸಮಯಕ್ಕಿಂತ ಮುಂಚಿತವಾಗಿ ಅಧಿವೇಶನದ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗುವಂತೆ ಸಿದ್ಧತೆಗಳನ್ನು ಮಾಡಲಿಕ್ಕಾಗಿ ಮತ್ತು ಪ್ರಯಾಣಕ್ಕಾಗಿ ಸಾಕಷ್ಟು ಸಮಯವನ್ನು ಬದಿಗಿರಿಸಿದ್ದೀರೊ?—ಕೀರ್ತ. 147:1.
6 ಯೆಹೋವನ ಮೇಜಿಗಾಗಿರುವ ನಮ್ಮ ಗೌರವವು, ಕಾರ್ಯಕ್ರಮಕ್ಕೆ ನಿಕಟ ಗಮನವನ್ನು ಕೊಡುವಂತೆ ಮತ್ತು ಇತರೊಂದಿಗೆ ಅನಗತ್ಯವಾಗಿ ಮಾತಾಡುವುದು, ತಿನ್ನುವುದು ಅಥವಾ ಸಭಾಂಗಣದ ಹೊರಗೆ ಓಡಾಡುವುದನ್ನು ತ್ಯಜಿಸುವಂತೆ ಪ್ರೇರೇಪಿಸುತ್ತದೆ. ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ ಮೂಲಕ ಯೆಹೋವನು ನಮಗೆ ಈಗ ಅಗತ್ಯವಿರುವ ಆಧ್ಯಾತ್ಮಿಕ ಆಹಾರವನ್ನು ಒದಗಿಸುತ್ತಿದ್ದಾನೆ. (ಮತ್ತಾ. 24:45) ಈ ಕಾರ್ಯಕ್ರಮವನ್ನು ತಪ್ಪಿಸಲು ನಮ್ಮಲ್ಲಿ ಯಾರೂ ಬಯಸುವುದಿಲ್ಲ. ಹೆತ್ತವರು ತಮ್ಮ ಮಕ್ಕಳೊಂದಿಗೆ ಕುಳಿತುಕೊಳ್ಳಬೇಕು ಮತ್ತು ಅವರು ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಬೇಕು.—ಧರ್ಮೋ. 31:12.
7. ಮಧ್ಯಾಹ್ನದ ಊಟಕ್ಕಾಗಿ ನಾವು ಏನು ಮಾಡುವಂತೆ ಕೇಳಿಕೊಳ್ಳಲಾಗಿದೆ, ಮತ್ತು ಏಕೆ?
7 ಮಧ್ಯಾಹ್ನದ ಊಟದ ಸಮಯದಲ್ಲಿ ಅಧಿವೇಶನದ ಸ್ಥಳವನ್ನು ಬಿಟ್ಟು ಹೊರಗೆ ಹೋಗಿ ಊಟಮಾಡುವ ಬದಲು ಊಟವನ್ನು ತೆಗೆದುಕೊಂಡು ಬರುವಂತೆ ನಮ್ಮನ್ನು ಕೇಳಿಕೊಳ್ಳಲಾಗಿದೆ. ಕಳೆದ ವರುಷದ ಅಧಿವೇಶನದಲ್ಲಿ ಹೆಚ್ಚಿನ ಪ್ರತಿನಿಧಿಗಳು ಈ ಮಾರ್ಗದರ್ಶನವನ್ನು ಜಾಗರೂಕತೆಯಿಂದ ಪಾಲಿಸಿದ್ದಾರೆ. ಇದು ಪ್ರಶಂಸನೀಯ ಸಂಗತಿ. ಈ ವರುಷವೂ ಅದೇ ರೀತಿ ಎಲ್ಲರೂ ಮಾಡುವುದಾದರೆ ಅದೆಷ್ಟು ಉತ್ತಮವಾಗಿರುವುದು! (ಇಬ್ರಿ. 13:17) ಈ ಏರ್ಪಾಡು, ನಮ್ಮ ಸಹೋದರರೊಂದಿಗೆ ಆತ್ಮೋನ್ನತಿ ಮಾಡುವ ಸಾಹಚರ್ಯದಲ್ಲಿ ಆನಂದಿಸುವಂತೆ ಒಂದು ಉತ್ತಮ ಸಂದರ್ಭವನ್ನು ಒದಗಿಸುತ್ತದೆ ಮತ್ತು ಯೆಹೋವನಿಗೆ ಗೌರವವನ್ನು ತರುವಂಥ ಏಕತೆ ಹಾಗೂ ಶಾಂತಿಯ ವಾತಾವರಣಕ್ಕೆ ಇನ್ನಷ್ಟನ್ನು ಕೂಡಿಸುತ್ತದೆ.—ಕೀರ್ತ. 133:1.
8, 9. ಯೆಹೋವನನ್ನು ಸ್ತುತಿಸುವ ಯಾವ ಹೆಚ್ಚಿನ ಸಂದರ್ಭವನ್ನು ಅಧಿವೇಶನವು ನಮಗೆ ಒದಗಿಸುತ್ತದೆ?
8 ಅನೌಪಚಾರಿಕವಾಗಿ ಸಾಕ್ಷಿನೀಡುವುದು: ಅಧಿವೇಶನಕ್ಕೆ ಪ್ರಯಾಣಿಸುವಾಗ ಮತ್ತು ಅಲ್ಲಿಂದ ಹಿಂತೆರಳುವಾಗ, ನಮ್ಮ ಬಾಯಿಂದ ಯೆಹೋವನನ್ನು ಸ್ತುತಿಸಲು ಅನೇಕ ಸಂದರ್ಭಗಳಿವೆ. (ಇಬ್ರಿ. 13:15) ನಾವು ಹೋಟೆಲ್ನಲ್ಲಿ ಊಟಮಾಡುತ್ತಿರಲಿ ಅಥವಾ ಹೋಟೆಲ್ ಸಿಬ್ಬಂದಿಯೊಂದಿಗೆ ಮಾತಾಡುತ್ತಿರಲಿ ಸಾಕ್ಷಿನೀಡಲಿಕ್ಕಾಗಿ ಮಾರ್ಗಗಳನ್ನು ಹುಡುಕೋಣ. ನಮ್ಮ ಹೃದಮನಗಳು ಅಧಿವೇಶನದಲ್ಲಿ ಪಡೆದ ಆಧ್ಯಾತ್ಮಿಕ ನಿಕ್ಷೇಪಗಳಿಂದ ತುಂಬಿರುತ್ತವೆ. ನಾವು ಅನೌಪಚಾರಿಕವಾಗಿ ಎದುರುಗೊಳ್ಳುವವರೊಂದಿಗೆ ಈ ಉತ್ತಮ ವಿಷಯಗಳನ್ನು ಹಂಚಿಕೊಳ್ಳೋಣ.—1 ಪೇತ್ರ 3:15.
9 “ಕೂಡಿದ ಸಭೆಗಳಲ್ಲಿ” ಯೆಹೋವನನ್ನು ಕೊಂಡಾಡುವ ಈ ಸಂದರ್ಭಕ್ಕಾಗಿ ನಾವು ಆತುರದಿಂದ ಎದುರುನೋಡುತ್ತೇವೆ. (ಕೀರ್ತ. 26:12) ನಾವೆಲ್ಲರು “ದೈವಿಕ ವಿಧೇಯತೆ” ಎಂಬ ಜಿಲ್ಲಾ ಅಧಿವೇಶನದಲ್ಲಿ ಯೆಹೋವನನ್ನು ಐಕ್ಯವಾಗಿ ಕೊಂಡಾಡೋಣ.
[ಪುಟ 5ರಲ್ಲಿರುವಚೌಕ]
ಜಿಲ್ಲಾ ಅಧಿವೇಶನದ ಮರುಜ್ಞಾಪನಗಳು
◼ ಕಾರ್ಯಕ್ರಮದ ಸಮಯಗಳು: ಎಲ್ಲ ಮೂರು ದಿನಗಳಲ್ಲಿಯೂ ಕಾರ್ಯಕ್ರಮವು ಬೆಳ್ಳಿಗೆ 9:30ಕ್ಕೆ ಆರಂಭಿಸುವುದು. ಸಭಾಂಗಣದ ದ್ವಾರಗಳು ಬೆಳಿಗ್ಗೆ 8:00 ಗಂಟೆಗೆ ತೆರೆಯಲ್ಪಡುತ್ತವೆ. ಕಾರ್ಯಕ್ರಮವು ಆರಂಭಗೊಳ್ಳುವ ಕೆಲವು ನಿಮಿಷಗಳ ಮುಂಚೆ, ರಾಜ್ಯ ಸಂಗೀತವು ನುಡಿಸಲ್ಪಡುತ್ತಿರುವಾಗ ಅಧ್ಯಕ್ಷನು ವೇದಿಕೆಯ ಮೇಲೆ ಕುಳಿತಿರುವನು. ಆ ಸಮಯದಲ್ಲಿ ನಾವೆಲ್ಲರೂ ನಮ್ಮ ಆಸನಗಳಿಗೆ ಹೋಗಿ ಕುಳಿತುಕೊಳ್ಳಬೇಕು. ಕಾರ್ಯಕ್ರಮವನ್ನು ಗೌರವಾನ್ವಿತ ರೀತಿಯಲ್ಲಿ ಆರಂಭಿಸಲು ಇದು ಸಾಧ್ಯಗೊಳಿಸುತ್ತದೆ. ಶುಕ್ರವಾರ ಮತ್ತು ಶನಿವಾರದಂದು ಕಾರ್ಯಕ್ರಮವು ಸಂಜೆ 5:05ಕ್ಕೆ ಕೊನೆಗೊಳ್ಳುವುದು ಹಾಗೂ ಭಾನುವಾರದಂದು ಸಂಜೆ 4:10ಕ್ಕೆ ಕೊನೆಗೊಳ್ಳುವುದು.
◼ ಪಾರ್ಕಿಂಗ್: ಎಲ್ಲ ಅಧಿವೇಶನದ ಸ್ಥಳಗಳಲ್ಲಿ ಪಾರ್ಕಿಂಗ್ ಸೌಕರ್ಯಗಳಿರುತ್ತವೆ ಮತ್ತು ಅಲ್ಲಿ ಯಾವುದೇ ಹಣವಿಲ್ಲದೆ ಎಲ್ಲರೂ ತಮ್ಮ ತಮ್ಮ ವಾಹನಗಳನ್ನು ಪಾರ್ಕ್ ಮಾಡಬಹುದು. ಪಾರ್ಕಿಂಗ್ ಅನುಮತಿ ನಿಮಗೆ ದೊರಕಬೇಕಾದರೆ ಕೇವಲ ಅಧಿವೇಶನದ ಬ್ಯಾಡ್ಜ್ ಕಾರ್ಡ್ ನಿಮ್ಮಲ್ಲಿದ್ದರೆ ಸಾಕು. ಪಾರ್ಕಿಂಗ್ ಸ್ಥಳವು ಸಾಮಾನ್ಯವಾಗಿ ಕೊಂಚವೇ ಇರುವ ಕಾರಣ, ಒಂದು ಕಾರಿನಲ್ಲಿ ಒಬ್ಬರು ಅಥವಾ ಇಬ್ಬರು ಬರುವ ಬದಲು ಆದಷ್ಟು ಮಟ್ಟಿಗೆ ಅನೇಕರು ಒಟ್ಟಾಗಿ ಬರಲು ಪ್ರಯತ್ನಿಸಬೇಕು.
◼ ಆಸನಗಳನ್ನು ಕಾದಿರಿಸುವುದು: ನಿಮ್ಮೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿರುವವರಿಗೆ ಮತ್ತು ನಿಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ಮಾತ್ರ ಆಸನಗಳನ್ನು ಕಾದಿರಿಸಬಹುದು.
◼ ದಾನಗಳು: ಒಂದು ಜಿಲ್ಲಾ ಅಧಿವೇಶನವನ್ನು ಏರ್ಪಡಿಸಲು ಬಹಳಷ್ಟು ಖರ್ಚುವೆಚ್ಚವಾಗುತ್ತದೆ. ಲೋಕವ್ಯಾಪಕವಾಗಿ ನಡೆಯುವ ನಮ್ಮ ಕೆಲಸಕ್ಕಾಗಿ ರಾಜ್ಯ ಸಭಾಗೃಹದಲ್ಲಿ ಅಥವಾ ಅಧಿವೇಶನದಲ್ಲಿ ಸ್ವಯಂ ಪ್ರೇರಿತ ದಾನಗಳನ್ನು ನೀಡುವ ಮೂಲಕ ನಾವು ನಮ್ಮ ಗಣ್ಯತೆಯನ್ನು ವ್ಯಕ್ತಪಡಿಸಬಲ್ಲೆವು. ನೀವು ನೀಡುವ ಯಾವುದೇ ಚೆಕ್ಗಳನ್ನು “ವಾಚ್ ಟವರ್”ಗೆ ಸಂದಾಯವಾಗಬೇಕೆಂದು ಗುರುತಿಸಬೇಕು.
◼ ಮಧ್ಯಾಹ್ನದ ಊಟ: ಮಧ್ಯಾಹ್ನದ ವಿರಾಮ ಸಮಯದಲ್ಲಿ ಆಹಾರವನ್ನು ಕೊಂಡುಕೊಳ್ಳಲು ಹೊರಗೆ ಹೋಗುವ ಬದಲಿಗೆ, ಊಟವನ್ನು ನಿಮ್ಮೊಂದಿಗೆ ತನ್ನಿರಿ. ಆಸನದ ಕೆಳಗೆ ಇಡಲು ಸಾಧ್ಯವಾಗುವಷ್ಟು ಚಿಕ್ಕದಾಗಿರುವ ಚೀಲಗಳನ್ನು ಮತ್ತು ಟಿಫಿನ್ ಕ್ಯಾರಿಯರ್ಗಳನ್ನು ತೆಗೆದುಕೊಂಡು ಬರಬಹುದು. ಆದರೆ, ನಡುದಾರಿಯಲ್ಲಿ ಹೋಗಿಬರಲು ಜನರಿಗೆ ಅಡ್ಡಿಯನ್ನು ಉಂಟುಮಾಡಬಹುದಾದ ದೊಡ್ಡ ವಸ್ತುಗಳನ್ನು ಕ್ಲೋಕ್ ರೂಮಿನಲ್ಲಿ ಇಡಬೇಕು.
◼ ರೆಕಾರ್ಡಿಂಗ್: ಯಾವುದೇ ರೀತಿಯ ರೆಕಾರ್ಡಿಂಗ್ ಉಪಕರಣಗಳನ್ನು ಅಧಿವೇಶನ ಸೌಕರ್ಯದ ಇಲೆಕ್ಟ್ರಿಕ್ ಅಥವಾ ಧ್ವನಿವರ್ಧಕ ವ್ಯವಸ್ಥೆಗಳಿಗೆ ಜೋಡಿಸಬಾರದು ಮತ್ತು ಆ ಉಪಕರಣವನ್ನು ಇತರರಿಗೆ ಅಡ್ಡಿಯನ್ನುಂಟುಮಾಡದ ಸ್ಥಳದಲ್ಲಿ ಮಾತ್ರ ಉಪಯೋಗಿಸಬೇಕು.
◼ ಫೋಟೋ ತೆಗೆಯುವುದು: ನೀವು ಫೋಟೋಗಳನ್ನು ತೆಗೆಯುವುದಾದರೆ, ಕಾರ್ಯಕ್ರಮದ ಸಮಯದಲ್ಲಿ ಫ್ಲ್ಯಾಷ್ ಉಪಯೋಗಿಸಬಾರದು.
◼ ಪೇಜರ್ಗಳು ಮತ್ತು ಸೆಲ್ ಫೋನ್ಗಳು: ಇದರಿಂದ ತೊಂದರೆಯಾಗದಂತೆ ಸೈಲೆಂಟ್ ಮೋಡ್ನಲ್ಲಿಡಬೇಕು.
◼ ಅಪಘಾತಗಳು ಮತ್ತು ತುರ್ತುಪರಿಸ್ಥಿತಿಗಳು: ಅಧಿವೇಶನದ ಸ್ಥಳದಲ್ಲಿ ಯಾವುದೇ ವೈದ್ಯಕೀಯ ತುರ್ತುಪರಿಸ್ಥಿತಿ ಎಳುವಾಗ, ಹತ್ತಿರದಲ್ಲಿರುವ ಅಟೆಂಡೆಂಟ್ರನ್ನು ಸಂಪರ್ಕಿಸಿ. ಅವರು ಪ್ರಥಮ ಚಿಕಿತ್ಸೆ ಇಲಾಖೆಗೆ ತಿಳಿಸುವರು ಮತ್ತು ಪ್ರಥಮ ಚಿಕಿತ್ಸೆಯಲ್ಲಿ ತರಬೇತಿಹೊಂದಿರುವ ವ್ಯಕ್ತಿಗಳು ನಿಮ್ಮ ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ನಿಮಗೆ ಬೇಕಾಗಿರುವ ಸಹಾಯವನ್ನು ನೀಡುವರು.
◼ ರೆಸ್ಟರಾಂಟ್ಗಳು: ಅನೇಕ ಸ್ಥಳಗಳಲ್ಲಿ, ತಮಗೆ ನೀಡಲ್ಪಟ್ಟ ಸೇವೆಗೆ ಹೊಂದಿಕೆಯಲ್ಲಿ ಟಿಪ್ ನೀಡುವುದು ಸರ್ವಸಾಮಾನ್ಯವಾಗಿದೆ.
◼ ಹೋಟೆಲ್: (1) ಅಗತ್ಯವಿರುವುದಕ್ಕಿಂತ ಹೆಚ್ಚು ರೂಮ್ಗಳನ್ನು ಕಾದಿರಿಸಿಕೊಳ್ಳಬೇಡಿರಿ ಮತ್ತು ಅನುಮತಿಸಲ್ಪಟ್ಟಿರುವದಕ್ಕಿಂತ ಹೆಚ್ಚು ಮಂದಿಯನ್ನು ರೂಮಿನಲ್ಲಿ ಇರಗೊಡಿಸಬೇಡಿರಿ. (2) ಕಾದಿರಿಸುವಿಕೆಗಳನ್ನು ರದ್ದುಗೊಳಿಸಲೇ ಬೇಕಾದ ಪರಿಸ್ಥಿತಿ ಏಳುವಲ್ಲಿ, ಕೂಡಲೆ ಅದನ್ನು ಹೋಟೆಲ್ಗೆ ತಿಳಿಯಪಡಿಸಿರಿ. (3) ಸಾಮಾನುಗಳನ್ನು ತಳ್ಳಿಕೊಂಡು ಹೋಗುವ ಗಾಡಿಯನ್ನು ನಿಮಗೆ ಅಗತ್ಯವಿರುವಾಗ ಮಾತ್ರ ಉಪಯೋಗಿಸಿರಿ. (4) ರೂಮಿನಲ್ಲಿ ಅಡಿಗೆಮಾಡಲು ಅನುಮತಿಯಿಲ್ಲದಿದ್ದರೆ ಅಡಿಗೆಮಾಡಬೇಡಿರಿ. (5) ಪ್ರತಿದಿನ ನಿಮ್ಮ ಕೋಣೆಯನ್ನು ಶುದ್ಧಮಾಡುವವನಿಗೆ ಟಿಪ್ ಇಟ್ಟುಹೋಗಿರಿ. (6) ಹೋಟೆಲಿನಲ್ಲಿ ತಂಗುವವರಿಗಾಗಿ ಉಚಿತವಾಗಿ ಉಪಹಾರ, ಕಾಫಿ ಅಥವಾ ಐಸ್ಕ್ರೀಮ್ ಒದಗಿಸಲ್ಪಡುವಲ್ಲಿ ಅದನ್ನು ದುರುಪಯೋಗಿಸಬೇಡಿ. (7) ಹೋಟೆಲ್ ರೂಮ್ಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ಮತ್ತು ಖಾಲಿಮಾಡುವ ಕಾರ್ಯನಿರತ ಸಮಯಗಳಲ್ಲಿ ಹೋಟೆಲ್ ಸಿಬ್ಬಂಧಿಯೊಂದಿಗೆ, ನಾವು ದೇವರಾತ್ಮದ ಫಲವನ್ನು ಪ್ರದರ್ಶಿಸುವುದಾದರೆ ಅದು ಹೆಚ್ಚು ಗಣ್ಯಮಾಡಲ್ಪಡುವುದು.