ಜಿಲ್ಲಾ ಅಧಿವೇಶನಗಳು —ಆನಂದದಿಂದ ಆರಾಧಿಸುವ ಸಮಯ
1 ಯೋಸೇಫ ಮರಿಯರು, ಅವರ ಮಕ್ಕಳು ಹಾಗೂ ಇನ್ನೂ ಅನೇಕರು ಹಬ್ಬಗಳನ್ನು ಆಚರಿಸಲು ಪ್ರತಿವರ್ಷ ತಪ್ಪದೆ ಯೆರೂಸಲೇಮಿಗೆ ಹೋಗುತ್ತಿದ್ದರು. ಈ ಸಂದರ್ಭಗಳಲ್ಲಿ ಅವರೆಲ್ಲರೂ ತಮ್ಮ ದೈನಂದಿನ ತಾಪತ್ರಯಗಳನ್ನೆಲ್ಲ ಮೂಲೆಗೊತ್ತಿ, ತಮ್ಮ ಬದುಕಿನಲ್ಲೇ ಹೆಚ್ಚು ಪ್ರಮುಖವಾದ ಆಧ್ಯಾತ್ಮಿಕ ವಿಷಯಗಳಿಗೆ ಅಧಿಕ ಗಮನಕೊಡುತ್ತಿದ್ದರು. ಈ ಹಬ್ಬಗಳು ಯೆಹೋವನ ಒಳ್ಳೇತನದ ಕುರಿತು ಆಲೋಚಿಸಲು, ಮಾತಾಡಲು ಹಾಗೂ ಆತನ ಧರ್ಮಶಾಸ್ತ್ರದ ಕುರಿತು ಕಲಿಯಲು ಅವಕಾಶ ಮಾಡಿಕೊಡುತ್ತಿದ್ದವು. ಅದೇ ರೀತಿ ಮುಂಬರುವ ಜಿಲ್ಲಾ ಅಧಿವೇಶನಗಳು ಯೆಹೋವನನ್ನು ಆನಂದದಿಂದ ಆರಾಧಿಸಲು ನಮಗೆ ಅವಕಾಶ ಮಾಡಿಕೊಡಲಿವೆ.
2 ಪೂರ್ವತಯಾರಿ ಜರೂರಿ: ಯೇಸುವಿನ ಕುಟುಂಬ ನಜರೇತಿನಿಂದ ಯೆರೂಸಲೇಮಿಗೆ ಹೋಗಿಬರಲು ಸುಮಾರು 200 ಕಿ.ಮೀ. ನಡೆಯಬೇಕಿತ್ತು. ಯೇಸುವಿಗೆ ಎಷ್ಟು ಮಂದಿ ಒಡಹುಟ್ಟಿದವರು ಇದ್ದರೆಂದು ನಮಗೆ ತಿಳಿದಿಲ್ಲವಾದರೂ ಯೋಸೇಫ ಮರಿಯರು ಕುಟುಂಬ ಸಮೇತ ಅಷ್ಟೊಂದು ದೂರ ಹೋಗಿಬರಲಿಕ್ಕಾಗಿ ಮಾಡಿದ ಪೂರ್ವಯೋಜನೆ, ಪಟ್ಟ ಶ್ರಮದ ಬಗ್ಗೆ ನಾವು ಸ್ವಲ್ಪ ಯೋಚಿಸಬಹುದು. ಮುಂಬರುವ ಜಿಲ್ಲಾ ಅಧಿವೇಶನದ ಮೂರೂ ದಿನಗಳಿಗೆ ಹಾಜರಾಗಲು ನೀವು ಎಲ್ಲಾ ತಯಾರಿ ಮಾಡಿದ್ದೀರೋ? ನಿಮ್ಮ ರಜೆಗಾಗಿ ಧಣಿಯ ಬಳಿಯೋ ಮಕ್ಕಳ ರಜೆಗಾಗಿ ಅವರ ಟೀಚರ್ರ ಬಳಿಯೋ ಮಾತಾಡಬೇಕಾದೀತು. ರೂಮ್ ಬುಕ್ ಮಾಡಿದ್ದೀರೋ? ವಿಶೇಷ ಅಗತ್ಯವಿರುವ ಯಾರಾದರೂ ಸಭೆಯಲ್ಲಿದ್ದರೆ ಅಧಿವೇಶನಕ್ಕೆ ಹಾಜರಾಗಲು ಅವರಿಗೆ ಬೇಕಾದ ನೆರವು ನೀಡಲು ಮುಂದಾಗಬಲ್ಲಿರೋ?—1 ಯೋಹಾ. 3:17, 18.
3 ಭಕ್ತಿವರ್ಧಕ ಒಡನಾಟ: ಯೆಹೂದ್ಯರು ಜೊತೆ ಆರಾಧಕರ ಒಡನಾಟದಲ್ಲಿ ಆನಂದಿಸಿ ತಮ್ಮ ಭಕ್ತಿವೃದ್ಧಿಗೊಳಿಸಲು ಆ ಹಬ್ಬಗಳು ಅವಕಾಶ ಕಲ್ಪಿಸಿಕೊಟ್ಟವು. ದೂರದ ಸ್ನೇಹಿತರನ್ನು ಪುನಃ ಕಾಣುವ ಅಂಥ ಸಂದರ್ಭಗಳಿಗಾಗಿ ಯೇಸುವಿನ ಕುಟುಂಬ ಎದುರುನೋಡುತ್ತಿತ್ತು ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಅಲ್ಲದೆ, ಯೆರೂಸಲೇಮಿನಲ್ಲಿರುವಾಗ ಮತ್ತು ಪ್ರಯಾಣಿಸುವಾಗ ಯೆಹೂದ್ಯರಲ್ಲಿ ಮತ್ತು ಯೆಹೂದಿ ಧರ್ಮಕ್ಕೆ ಮತಾಂತರಗೊಂಡ ಜನರಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಅವಕಾಶಗಳೂ ಅವರಿಗೆ ಸಿಗುತ್ತಿದ್ದವು.
4 ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ಭಾಷಣಗಳ ಮಾಹಿತಿಯನ್ನು ಮುದ್ರಿಸಿಕೊಡದೆ ಅವುಗಳನ್ನು ನಾವೆಲ್ಲರೂ ಸೇರಿಬಂದು ಕೇಳುವಂತೆ ಜಿಲ್ಲಾ ಅಧಿವೇಶನಗಳ ಏರ್ಪಾಡನ್ನು ಮಾಡಿದೆ. ನಾವು ಪರಸ್ಪರರನ್ನು ಪ್ರೋತ್ಸಾಹಿಸಬೇಕೆಂಬುದು ಇದರ ಒಂದು ಉದ್ದೇಶ. (ಇಬ್ರಿ. 10:24, 25) ಆದ್ದರಿಂದ, ನಿಮ್ಮ ನಿಮ್ಮ ಸೀಟುಗಳಲ್ಲಿ ಕುಳಿತುಕೊಳ್ಳಬೇಕೆಂದು ಸೂಚನೆಕೊಡುವ ಸಂಗೀತ ಆರಂಭವಾಗುವ ಮುಂಚೆಯೇ ಎಲ್ಲರೊಂದಿಗೆ ಒಡನಾಟಮಾಡಲು ಪ್ರತಿದಿನ ಬೇಗನೆ ಬರಲು ಪ್ರಯತ್ನಿಸಿ. ಮಧ್ಯಾಹ್ನದ ಊಟಕ್ಕಾಗಿ ಹೊರಗೆ ಹೋಗುವ ಬದಲು ಬೆಳಗ್ಗೆ ಬರುವಾಗಲೇ ಲಘು ಆಹಾರ ತರುವುದು ಒಳ್ಳೇದು. ಹೀಗೆ ಮಾಡಿದರೆ ಅಧಿವೇಶನ ನಡೆಯುವ ಸ್ಥಳದಲ್ಲಿ ಎಲ್ಲರೊಂದಿಗೆ ಮಾತಾಡಲು ಹೆಚ್ಚು ಸಮಯ ಸಿಗುವುದು. ಐಕ್ಯವಾಗಿರುವ ನಮ್ಮ ಕ್ರೈಸ್ತ ಸಹೋದರತ್ವ ಯೆಹೋವನ ಉಡುಗೊರೆಯಾಗಿದೆ. ಅದನ್ನು ನಾವೆಂದೂ ಹಗುರವೆಂದೆಣಿಸಬಾರದು.—ಮೀಕ 2:12.
5 ಕಲಿತುಕೊಳ್ಳುವ ಸಮಯ: ಯೇಸು ಚಿಕ್ಕಂದಿನಿಂದಲೇ ಹಬ್ಬಗಳ ಸಮಯವನ್ನು ತನ್ನ ಸ್ವರ್ಗೀಯ ತಂದೆಯಾದ ಯೆಹೋವನ ಬಗ್ಗೆ ಕಲಿಯಲು ಬಳಸಿಕೊಂಡನು. (ಲೂಕ 2:41-49) ಅಧಿವೇಶನದ ಪ್ರತಿಯೊಂದು ಭಾಗದಿಂದ ನಮ್ಮ ಇಡೀ ಕುಟುಂಬ ಪ್ರಯೋಜನ ಪಡೆಯಬೇಕಾದರೆ ಏನು ಮಾಡಬೇಕು? ಕಾರ್ಯಕ್ರಮ ನಡೆಯುತ್ತಿರುವಾಗ ಸೀಟಿನಲ್ಲೇ ಕುಳಿತಿರಿ ಮತ್ತು ಸುಮ್ಮಸುಮ್ಮನೆ ಮಾತಾಡುತ್ತಿರಬೇಡಿ. ನಿಮ್ಮ ಸೆಲ್ ಫೋನ್, ಪೇಜರ್ ಅಥವಾ ಬೇರಾವುದೇ ಸಾಧನಗಳಿಂದ ನಿಮ್ಮ ಹಾಗೂ ಇತರರ ಗಮನಭಂಗವಾಗದಂತೆ ನೋಡಿಕೊಳ್ಳಿ. ಭಾಷಣಕಾರನ ಮೇಲೆ ದೃಷ್ಟಿ ನೆಟ್ಟು ಅವರ ಮಾತನ್ನು ಆಲಿಸಿ, ಚುಟುಕಾದ ಟಿಪ್ಪಣಿ ಬರೆಯಿರಿ. ನಿಮ್ಮ ಮಕ್ಕಳು ಕಿವಿಗೊಡುತ್ತಿದ್ದಾರೆಂದು ಖಚಿತಪಡಿಸಿಕೊಳ್ಳಲು ಇಡೀ ಕುಟುಂಬ ಜೊತೆಯಾಗಿ ಕುಳಿತುಕೊಳ್ಳಿ. ಸಂಜೆ ಸ್ವಲ್ಪ ಸಮಯಮಾಡಿ ಕಾರ್ಯಕ್ರಮದಲ್ಲಿ ನಿಮಗಿಷ್ಟವಾದ ವಿಷಯಗಳ ಬಗ್ಗೆ ಒಟ್ಟುಗೂಡಿ ಚರ್ಚಿಸಿ.
6 ಉಡುಪು, ಹೊರತೋರಿಕೆ: ಯೆರೂಸಲೇಮಿಗೆ ಹೋಗುವ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಿದೇಶೀ ವ್ಯಾಪಾರಿಗಳು ಯೇಸುವಿನ ಕುಟುಂಬ ಮತ್ತು ಇತರ ಯೆಹೂದ್ಯರು ಧರಿಸುತ್ತಿದ್ದ ವಸ್ತ್ರಗಳ ಅಂಚುಗಳಲ್ಲಿದ್ದ ಗೊಂಡೆಗಳು ಮತ್ತು ನೀಲಿದಾರಗಳನ್ನು ನೋಡಿ ಅವರು ಯೆಹೂದ್ಯರೆಂದು ಸುಲಭವಾಗಿ ಗುರುತುಹಿಡಿಯುತ್ತಿದ್ದರು. (ಅರ. 15:37-41) ಕ್ರೈಸ್ತರಾಗಿರುವ ನಾವು ಎದ್ದುಕಾಣಲಿಕ್ಕಾಗಿ ವಿಶೇಷ ಉಡುಪುಗಳನ್ನು ಧರಿಸುವುದಿಲ್ಲವಾದರೂ ಸಭ್ಯವಾದ ನೀಟಾದ ಶುದ್ಧ ಬಟ್ಟೆಗಳನ್ನು ಧರಿಸುವ ವಿಷಯದಲ್ಲಿ ಹೆಸರುವಾಸಿಯಾಗಿದ್ದೇವೆ. ಅಧಿವೇಶನಕ್ಕೆ ಹೋಗುವಾಗ, ಅಲ್ಲಿರುವಾಗ ಮತ್ತು ಅಲ್ಲಿಂದ ಹಿಂದಿರುಗುವಾಗ ನಮ್ಮ ತೋರಿಕೆಗೆ ಹೆಚ್ಚು ಗಮನಕೊಡಬೇಕು. ಕಾರ್ಯಕ್ರಮ ನಡೆಯುವಾಗ ಮಾತ್ರವಲ್ಲದೆ ಇತರ ಸಮಯದಲ್ಲೂ ನಮ್ಮ ಉಡುಪು ಗೌರವಯುತವಾಗಿರಬೇಕು, ಅಧಿವೇಶನದ ಬ್ಯಾಜ್ ಕಾರ್ಡನ್ನು ಧರಿಸಬೇಕು. ಹೀಗೆ ನಾವು ಬೇರೆ ಜನರಿಗಿಂತ ಭಿನ್ನರಾಗಿ ತೋರುವೆವು ಮತ್ತು ನಮ್ಮನ್ನು ಗಮನಿಸುವವರಲ್ಲಿ ಸದಭಿಪ್ರಾಯ ಮೂಡಿಸುವೆವು.
7 ಸ್ವಯಂ ಸೇವಕರು ಬೇಕಾಗಿದ್ದಾರೆ: ಅಧಿವೇಶನ ಸುಸೂತ್ರವಾಗಿ ನಡೆಯಲು ತುಂಬ ಜನರು ಕೆಲಸಮಾಡಬೇಕಾಗುತ್ತದೆ. ಆದ್ದರಿಂದ ನೀವು ಸ್ವಯಂ ಸೇವಕರಾಗಿ ಸಹಾಯಮಾಡಬಲ್ಲಿರಾ? (ಕೀರ್ತ. 110:3) ಅಧಿವೇಶನದಲ್ಲಿ ಮಾಡುವ ಕೆಲಸ ಪವಿತ್ರ ಸೇವೆಯಾಗಿದೆ. ಇದು ಉತ್ತಮ ಸಾಕ್ಷಿಯನ್ನೂ ಕೊಡುತ್ತದೆ. ಒಂದು ಅಧಿವೇಶನದ ಕಟ್ಟಡವನ್ನು ಸ್ವಯಂ ಸೇವಕರು ಶುಚಿಗೊಳಿಸಿದ್ದನ್ನು ನೋಡಿ ತುಂಬ ಪ್ರಭಾವಿತರಾದ ಅಲ್ಲಿನ ಮ್ಯಾನೇಜರರು ಹೀಗೆ ಪತ್ರ ಬರೆದರು: “ಇಲ್ಲಿ ನಡೆದಿರುವ ಕಾರ್ಯಕ್ರಮಗಳಲ್ಲೇ ಇದು ಅತ್ಯದ್ಭುತವಾದದ್ದು. ಅದಕ್ಕಾಗಿ ತುಂಬ ಧನ್ಯವಾದ. ಯೆಹೋವನ ಸಾಕ್ಷಿಗಳು ತುಂಬ ವಿಶೇಷ ವ್ಯಕ್ತಿಗಳೆಂದೂ ಅವರು ಯಾವಾಗಲೂ ಕಟ್ಟಡವನ್ನು ಚೆನ್ನಾಗಿ ಶುಚಿಗೊಳಿಸುತ್ತಾರೆಂದೂ ಕೇಳಿದ್ದೆ. ಈಗ ನಾನದನ್ನು ಕಣ್ಣಾರೆ ನೋಡಿದೆ. ನೀವು ಮತ್ತು ನಿಮ್ಮ ಸಂಘಟನೆ ನಮ್ಮ ಕಟ್ಟಡವನ್ನು ಇನ್ನೂ ಉತ್ತಮವಾದದ್ದಾಗಿ ಮಾಡಿದ್ದೀರಿ. ತುಂಬ ಗೌರವಭರಿತ ಜನರಾದ ನಿಮ್ಮೊಂದಿಗೆ ಸಹವಾಸ ಮಾಡಿ ಎಲ್ಲಿಲ್ಲದ ಆನಂದ ಕಂಡುಕೊಂಡೆವು.”
8 ಸಾಕ್ಷಿ ನೀಡಲು ಅವಕಾಶಗಳು: ನಮ್ಮ ನೀಟಾದ ಉಡುಪು ಮತ್ತು ಹೊರತೋರಿಕೆ ಹಾಗೂ ನಾವು ಧರಿಸಿರುವ ಅಧಿವೇಶನದ ಬ್ಯಾಜ್ಗಳನ್ನು ಅಧಿವೇಶನ-ನಗರದ ಜನರು ಗಮನಿಸುತ್ತಾರೆ. ಇದು ಅವರ ಕುತೂಹಲವನ್ನು ಕೆರಳಿಸಿ ಅಧಿವೇಶನದ ಬಗ್ಗೆ ತಿಳಿಸಲು ನಮಗೆ ದಾರಿಮಾಡಬಲ್ಲದು. ಅಧಿವೇಶನದಲ್ಲಿ ಬಿಡುಗಡೆಯಾದ ಹೊಸ ಪ್ರಕಾಶನವೊಂದನ್ನು 4 ವರ್ಷದ ಬಾಲಕನೊಬ್ಬ ರೆಸ್ಟೋರೆಂಟ್ಗೆ ತಂದು ಪರಿಚಾರಿಕೆಯೊಬ್ಬಳಿಗೆ ತೋರಿಸಿದನು. ಇದರಿಂದಾಗಿ ಬಾಲಕನ ಹೆತ್ತವರು ಆಕೆಯನ್ನು ಅಧಿವೇಶನಕ್ಕೆ ಕರೆಯಸಾಧ್ಯವಾಯಿತು.
9 ಸತ್ಕ್ರಿಯೆಗಳು: ಜಿಲ್ಲಾ ಅಧಿವೇಶನಗಳಲ್ಲಿ ನಮ್ಮ “ಸತ್ಕ್ರಿಯೆಗಳು . . . ಬಹಿರಂಗವಾಗಿ ಪ್ರಸಿದ್ಧವಾಗುತ್ತವೆ.” (1 ತಿಮೊ. 5:25) ಉತ್ತರ ಭಾರತದ ಒಂದು ನಗರದಲ್ಲಿ ಹಲವಾರು ಬಾರಿ ಜಿಲ್ಲಾ ಅಧಿವೇಶನಗಳು ನಡೆದಿವೆ. ಅಲ್ಲಿನ ಹೋಟೆಲೊಂದರ ಮ್ಯಾನೇಜರರು, “ನಿಮ್ಮ ಸಭ್ಯವರ್ತನೆಯು ನಮಗೆ ಬಹಳ ಹಿಡಿಸಿತು. ಬೇರೆಯವರಂತೆ ನಿಮ್ಮಲ್ಲಿ ಯಾರೊಬ್ಬರೂ ಉಗುಳಿದ್ದನ್ನಾಗಲಿ ಸುಮ್ಮನೆ ಅಲ್ಲಿಲ್ಲಿ ಅಡ್ಡಾಡುತ್ತಿದ್ದದ್ದನ್ನಾಗಲಿ ಗಲೀಜು ಮಾಡುವುದನ್ನಾಗಲಿ ನಾವು ನೋಡಲಿಲ್ಲ” ಎಂದರು. ಇನ್ನೊಂದು ನಗರದ ಹೋಟೆಲಿನ ಮ್ಯಾನೇಜರರು ತಮ್ಮಲ್ಲಿ ತಂಗುತ್ತಿದ್ದ ಇತರ ಗುಂಪಿನ ಜನರಿಂದಾಗುತ್ತಿದ್ದ ಸಮಸ್ಯೆಗಳ ಬಗ್ಗೆ ತಿಳಿಸಿದ ಬಳಿಕ ನಮ್ಮ ಸಹೋದರರು ತೋರಿಸುತ್ತಿದ್ದ ಸಹಕಾರ ಮನೋಭಾವ ಮತ್ತು ತಾಳ್ಮೆಯ ಬಗ್ಗೆ ಮಾತಾಡಿದರು. “ಇಲ್ಲಿಗೆ ಬರುವ ಎಲ್ಲ ಅತಿಥಿಗಳೂ ಯೆಹೋವನ ಸಾಕ್ಷಿಗಳಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು” ಎಂದರವರು. ಇಂಥ ಶ್ಲಾಘನೀಯ ಮಾತುಗಳಿಗೆ ಕಾರಣವಾದ ನಮ್ಮ ಸಹೋದರರ ಒಳ್ಳೇ ನಡತೆ ನಮ್ಮ ದೇವರಾದ ಯೆಹೋವನಿಗೆಷ್ಟು ಹರ್ಷವನ್ನು ತಂದಿರಬೇಕಲ್ಲ!
10 ಪ್ರಾಚೀನ ಇಸ್ರಾಯೇಲ್ಯ ಹಬ್ಬಗಳು ಎಷ್ಟೊಂದು ಆನಂದದ ಸಮಯವಾಗಿದ್ದವೆಂದರೆ ಆಧ್ಯಾತ್ಮಿಕ ಮನಸ್ಸಿನ ಯೆಹೂದ್ಯರು ಅವುಗಳನ್ನು ಎದುರುನೋಡುತ್ತಿದ್ದರು. (ಧರ್ಮೋ. 16:15) ಯೇಸುವಿನ ಕುಟುಂಬ ಹಬ್ಬಕ್ಕಾಗಿ ಯೆರೂಸಲೇಮಿಗೆ ಹೋಗಲು ಮತ್ತು ಅದರಿಂದ ಸಂಪೂರ್ಣ ಪ್ರಯೋಜನ ಪಡೆಯಲು ಯಾವ ತ್ಯಾಗವನ್ನು ಮಾಡಲೂ ಸಿದ್ಧವಿತ್ತು. ಇಂದು ಅಧಿವೇಶನಗಳ ಕಡೆಗೆ ನಮಗೂ ಅಂಥದ್ದೇ ಕೃತಜ್ಞತಾಭಾವವಿದೆ. ಅವು ನಮ್ಮ ಪ್ರೀತಿಯ ಸ್ವರ್ಗೀಯ ತಂದೆ ನಮಗಾಗಿ ಕೊಟ್ಟಿರುವ ಉಡುಗೊರೆಯೆಂದು ಪರಿಗಣಿಸುತ್ತೇವೆ. (ಯಾಕೋ. 1:17) ಯೆಹೋವನನ್ನು ಆನಂದದಿಂದ ಆರಾಧಿಸುವ ಈ ವಾರ್ಷಿಕ ಅವಕಾಶಕ್ಕಾಗಿ ನಾವು ಈಗಲೇ ತಯಾರಿ ಮಾಡಬೇಕು.
[ಅಧ್ಯಯನ ಪ್ರಶ್ನೆಗಳು]
1. ಇಸ್ರಾಯೇಲ್ಯರ ಹಬ್ಬಗಳಿಗೂ ನಮ್ಮ ಜಿಲ್ಲಾ ಅಧಿವೇಶನಗಳಿಗೂ ಯಾವ ಹೋಲಿಕೆಗಳಿವೆ?
2. ಮುಂಬರುವ ಜಿಲ್ಲಾ ಅಧಿವೇಶನಕ್ಕಾಗಿ ಯಾವೆಲ್ಲಾ ತಯಾರಿ ಮಾಡಬೇಕು?
3. ಇಸ್ರಾಯೇಲ್ಯರ ಹಬ್ಬಗಳು ಭಕ್ತಿವರ್ಧಕ ಒಡನಾಟಕ್ಕಾಗಿ ಅವಕಾಶ ಕಲ್ಪಿಸಿಕೊಟ್ಟವು ಹೇಗೆ?
4. ಕ್ರೈಸ್ತ ಸಹೋದರತ್ವವನ್ನು ನಾವು ಹಗುರವೆಂದೆಣಿಸುವುದಿಲ್ಲ ಎಂದು ಹೇಗೆ ತೋರಿಸಬಲ್ಲೆವು?
5. ಕಾರ್ಯಕ್ರಮದ ಪೂರ್ಣ ಪ್ರಯೋಜನ ಪಡೆಯಲು ಏನು ಮಾಡಬೇಕು?
6. ನಮ್ಮ ಉಡುಪು, ಹೊರತೋರಿಕೆಯ ಬಗ್ಗೆ ಯಾವುದನ್ನೆಲ್ಲಾ ಮನಸ್ಸಿನಲ್ಲಿಡಬೇಕು?
7. ಅಧಿವೇಶನದಲ್ಲಿ ನಾವು ಸ್ವಯಂ ಸೇವಕರಾಗಿ ಕೆಲಸಮಾಡಬೇಕು ಏಕೆ?
8. ಅಧಿವೇಶನ-ನಗರದಲ್ಲಿ ಸಾಕ್ಷಿಕೊಡಲು ಯಾವ ಅವಕಾಶಗಳಿವೆ?
9. ಸಹೋದರರ ಉತ್ತಮ ನಡತೆ ನೋಡಿ ಹೋಟೆಲಿನ ಮ್ಯಾನೇಜರರು ಏನಂದಿದ್ದಾರೆ?
10. ಯೆಹೋವನ ಆಧ್ಯಾತ್ಮಿಕ ಏರ್ಪಾಡುಗಳಿಗಾಗಿ ಯೇಸುವಿನ ಕುಟುಂಬ ತೋರಿಸಿದ ಕೃತಜ್ಞತಾಭಾವವನ್ನು ನಾವು ಹೇಗೆ ಅನುಕರಿಸಬಹುದು?
[ಪುಟ 5,6ರಲ್ಲಿರುವ ಚೌಕ]
ಜಿಲ್ಲಾ ಅಧಿವೇಶನದ ಮರುಜ್ಞಾಪನಗಳು
◼ ಕಾರ್ಯಕ್ರಮದ ಸಮಯಗಳು: ಮೂರು ದಿನಗಳಲ್ಲಿಯೂ ಕಾರ್ಯಕ್ರಮವು ಬೆಳಿಗ್ಗೆ 9:20ಕ್ಕೆ ಆರಂಭವಾಗುವುದು. ಸಭಾಂಗಣದ ಬಾಗಿಲುಗಳನ್ನು ಬೆಳಿಗ್ಗೆ 8:00 ಗಂಟೆಗೆ ತೆರೆಯಲಾಗುವುದು. ಆರಂಭದ ರಾಜ್ಯ ಸಂಗೀತವು ನುಡಿಸಲ್ಪಡುವಾಗ ನಾವೆಲ್ಲರೂ ನಮ್ಮ ಆಸನಗಳಲ್ಲಿ ಕುಳಿತುಕೊಳ್ಳಬೇಕು. ಇದರಿಂದಾಗಿ ಕಾರ್ಯಕ್ರಮವನ್ನು ಗೌರವಾನ್ವಿತ ರೀತಿಯಲ್ಲಿ ಆರಂಭಿಸಲು ಸಾಧ್ಯವಾಗುತ್ತದೆ. ಕಾರ್ಯಕ್ರಮವು ಶುಕ್ರವಾರ, ಶನಿವಾರದಂದು ಸಂಜೆ 4:55ಕ್ಕೆ ಹಾಗೂ ಭಾನುವಾರದಂದು ಸಂಜೆ 3:40ಕ್ಕೆ ಕೊನೆಗೊಳ್ಳುವುದು.
◼ ಪಾರ್ಕಿಂಗ್: ಪಾರ್ಕಿಂಗ್ ಸೌಕರ್ಯಗಳಿರುವ ಎಲ್ಲ ಅಧಿವೇಶನ ಸ್ಥಳಗಳಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆಗನುಸಾರ ವಾಹನಗಳಿಗೆ ಫ್ರೀ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುವುದು. ಪಾರ್ಕಿಂಗ್ ಸ್ಥಳವು ಸೀಮಿತವಾಗಿರುವುದರಿಂದ ಕಾರುಗಳ ಸಂಖ್ಯೆ ಕಡಿಮೆಮಾಡಲು ಒಂದು ಕಾರಿನವರು ಇನ್ನೊಂದು ಕಾರಿನವರನ್ನು ತಮ್ಮೊಂದಿಗೆ ಪ್ರಯಾಣಿಸಲು ಏರ್ಪಾಡು ಮಾಡಬಹುದು.
◼ ಸೀಟು ಹಿಡಿಯುವುದು: ಕಾರ್ನಲ್ಲಿ ನಿಮ್ಮೊಂದಿಗೆ ಪ್ರಯಾಣಿಸುತ್ತಿರುವವರಿಗೆ, ಒಂದೇ ಮನೆಯಲ್ಲಿರುವವರಿಗೆ, ನೀವು ಯಾರೊಂದಿಗೆ ಸದ್ಯಕ್ಕೆ ಬೈಬಲ್ ಅಧ್ಯಯನ ನಡೆಸುತ್ತಿದ್ದೀರೋ ಅವರಿಗೆ ಮಾತ್ರ ಸೀಟುಗಳನ್ನು ಹಿಡಿದಿಡಬಹುದು.—1 ಕೊರಿಂ. 13:5.
◼ ಮಧ್ಯಾಹ್ನದ ಊಟ: ಮಧ್ಯಾಹ್ನದ ವಿರಾಮದಲ್ಲಿ ಊಟಕ್ಕಾಗಿ ಅಧಿವೇಶನ ಸ್ಥಳದಿಂದ ಹೊರಗೆ ಹೋಗುವ ಬದಲು ದಯವಿಟ್ಟು ಲಘು ಆಹಾರವನ್ನು ತನ್ನಿ. ಲಂಚ್ ಬ್ಯಾಗ್ ಸೀಟಿನಡಿ ಇಡುವಷ್ಟು ಚಿಕ್ಕದಿರಲಿ. ದೊಡ್ಡ ದೊಡ್ಡ ಟಿಫಿನ್ಗಳು, ಗಾಜಿನ ಪಾತ್ರೆಗಳನ್ನು ಅಧಿವೇಶನಕ್ಕೆ ತರಬಾರದು. ಅಧಿವೇಶನ ಸಮಿತಿಯು ಆಹಾರಪಾನೀಯಗಳ ಯಾವುದೇ ಏರ್ಪಾಡನ್ನು ಮಾಡುವುದಿಲ್ಲ.
◼ ದಾನಗಳು: ನಮ್ಮ ಲೋಕವ್ಯಾಪಕ ಕಾರ್ಯಕ್ಕಾಗಿ ರಾಜ್ಯ ಸಭಾಗೃಹದಲ್ಲಿ ಅಥವಾ ಅಧಿವೇಶನದಲ್ಲಿ ಸ್ವಯಂ ಪ್ರೇರಿತ ದಾನಗಳನ್ನು ನೀಡುವ ಮೂಲಕ ನಾವು ನಮ್ಮ ಅಧಿವೇಶನ ಏರ್ಪಾಡುಗಳಿಗಾಗಿ ಗಣ್ಯತೆ ತೋರಿಸಬಲ್ಲೆವು. ನೀವು ಅಧಿವೇಶನದಲ್ಲಿ ಕಾಣಿಕೆಯಾಗಿ ಕೊಡುವ ಯಾವುದೇ ಚೆಕ್ಗಳಲ್ಲಿ “ದ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯಾ”ಗೆ ಹಣಸಂದಾಯವಾಗಬೇಕೆಂದು ಗುರುತಿಸಬೇಕು.
◼ ಅಪಘಾತಗಳು ಮತ್ತು ತುರ್ತುಪರಿಸ್ಥಿತಿಗಳು: ಅಧಿವೇಶನದ ಸ್ಥಳದಲ್ಲಿ ಯಾವುದೇ ವೈದ್ಯಕೀಯ ತುರ್ತುಪರಿಸ್ಥಿತಿ ಏಳುವಾಗ ದಯವಿಟ್ಟು ಹತ್ತಿರದಲ್ಲಿರುವ ಅಟೆಂಡೆಂಟ್ನನ್ನು ಸಂಪರ್ಕಿಸಿರಿ. ಅವನು ಕೂಡಲೇ ಪ್ರಥಮ ಚಿಕಿತ್ಸೆಯ ಇಲಾಖೆಗೆ ಅದನ್ನು ತಿಳಿಸುವನು. ಆಗ ಪ್ರಥಮ ಚಿಕಿತ್ಸೆ ನೀಡುವ ನಮ್ಮ ಸಿಬ್ಬಂದಿಯಲ್ಲಿ ಅರ್ಹನಾದ ವ್ಯಕ್ತಿಯೊಬ್ಬನು ಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ಪರೀಕ್ಷಿಸಿ ಬೇಕಾದ ಸಹಾಯ ನೀಡುವನು.
◼ ಪಾದರಕ್ಷೆ: ಪ್ರತಿವರ್ಷವೂ ಅಧಿವೇಶನಗಳಲ್ಲಿ ಅನೇಕರು ತಮ್ಮ ಪಾದರಕ್ಷೆಗಳಿಂದಾಗಿ ಗಾಯಗೊಳ್ಳುತ್ತಿದ್ದಾರೆ. ಕಾಲಿನ ಗಾತ್ರಕ್ಕೆ ಸರಿಹೊಂದುವ ಸಭ್ಯ ಪಾದರಕ್ಷೆಗಳನ್ನು ಧರಿಸಿದರೆ ಮೆಟ್ಟಿಲು ಹತ್ತಿಇಳಿಯುವಾಗ, ಜಾಲರಿ ಹಾಕಿರುವ ನೆಲದಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಸುರಕ್ಷಿತವಾಗಿ ನಡೆಯಲು ಸಾಧ್ಯ.
◼ ಶ್ರವಣ ದೋಷವುಳ್ಳವರಿಗಾಗಿ: ಸನ್ನೆ ಭಾಷೆಯಲ್ಲೂ ಕಾರ್ಯಕ್ರಮವಿರುವ ಅಧಿವೇಶನಗಳು: ಬೆಂಗಳೂರು (ಇಂಗ್ಲಿಷ್); ಕೊಯಮತ್ತೂರು (ತಮಿಳು); ಕೊಚ್ಚಿ-2 (ಮಲೆಯಾಳಂ); ಮತ್ತು ಪುಣೆ-ಚಿಂಚ್ವಡ್(ಇಂಗ್ಲಿಷ್).
◼ ರೆಕಾರ್ಡಿಂಗ್: ನಿಮ್ಮ ರೆಕಾರ್ಡಿಂಗ್ ಉಪಕರಣಗಳನ್ನು ಅಧಿವೇಶನ ಕಟ್ಟಡದ ಎಲೆಕ್ಟ್ರಿಕ್ ಅಥವಾ ಸೌಂಡ್ ಸಿಸ್ಟಮ್ಗೆ ಜೋಡಿಸಬಾರದು. ನೀವು ರೆಕಾರ್ಡಿಂಗ್ ಮಾಡುವಲ್ಲಿ ಬೇರೆಯವರಿಗೆ ಅಡಚಣೆಯಾಗದಿರಲಿ.
◼ ಮಕ್ಕಳ ತಳ್ಳುಕುರ್ಚಿ, ವಿಹಾರಕುರ್ಚಿಗಳು: ಮಕ್ಕಳ ತಳ್ಳುಕುರ್ಚಿ, ವಿಹಾರಕುರ್ಚಿಗಳನ್ನು ಅಧಿವೇಶನ ಸ್ಥಳಕ್ಕೆ ತರಬಾರದು. ಆದರೆ ಹೆತ್ತವರು ತಮ್ಮ ಪಕ್ಕದ ಸೀಟಿಗೆ ಭದ್ರವಾಗಿ ಬಿಗಿಯಸಾಧ್ಯವಿರುವ ಸುರಕ್ಷಿತ ಬೇಬಿ ಸೀಟನ್ನು ತರಬಹುದು.
◼ ಸುಗಂಧ ದ್ರವ್ಯಗಳು: ಹೆಚ್ಚಿನ ಅಧಿವೇಶನಗಳು ಹವಾನಿಯಂತ್ರಿತ ಸಭಾಂಗಣಗಳಲ್ಲಿ ನಡೆಯುತ್ತವೆ. ಆದುದರಿಂದ, ಉಸಿರಾಟ ಅಥವಾ ಅದಕ್ಕೆ ಸಂಬಂಧಿಸಿದ ತೊಂದರೆಗಳಿರುವವರ ಆರೋಗ್ಯಕ್ಕೆ ಹಾನಿಯಾಗದಂತೆ ತೀಕ್ಷ್ಣ ಸುವಾಸನೆಯ ಸೆಂಟ್ಗಳನ್ನು ಮಿತವಾಗಿ ಬಳಸಿ ನಮ್ಮ ಪ್ರೀತಿಯನ್ನು ತೋರಿಸಬಹುದು.—1 ಕೊರಿಂ. 10:24.
◼ ಫಾಲೋ-ಅಪ್ ಫಾರ್ಮ್ಗಳು: ಅಧಿವೇಶನದ ಸಮಯದಲ್ಲಿ ಅನೌಪಚಾರಿಕ ಸಾಕ್ಷಿ ನೀಡಿದಾಗ ಸಿಕ್ಕಿದ ಆಸಕ್ತ ವ್ಯಕ್ತಿಗಳ ಕುರಿತು ಮಾಹಿತಿಯನ್ನು ಒದಗಿಸಲು ಪ್ಲೀಸ್ ಫಾಲೋ ಅಪ್ (S-43) ಫಾರ್ಮ್ಅನ್ನು ಉಪಯೋಗಿಸಬೇಕು. ಅಧಿವೇಶನಕ್ಕೆ ಬರುವಾಗ ಪ್ರಚಾರಕರು ಒಂದೆರಡು ಫಾರ್ಮ್ಗಳನ್ನು ತರಬೇಕು. ಅವನ್ನು ತುಂಬಿಸಿದ ಮೇಲೆ ಅಧಿವೇಶನದ ಬುಕ್ರೂಮ್ಗೆ ಅಥವಾ ನಿಮ್ಮ ಸಭಾ ಸೆಕ್ರಿಟರಿಗೆ ಕೊಡತಕ್ಕದ್ದು.—ನವೆಂಬರ್ 2009ರ ನಮ್ಮ ರಾಜ್ಯ ಸೇವೆಯ ಪುಟ 3ನ್ನು ನೋಡಿ.
◼ ಹೋಟೆಲ್ಗಳು: ಹೋಟೆಲ್ಗಳಲ್ಲಿ ಮತ್ತು ರೆಸ್ಟೋರೆಂಟ್ಗಳಲ್ಲಿ ನಿಮ್ಮ ಸದ್ವರ್ತನೆಯ ಮೂಲಕ ಯೆಹೋವನ ನಾಮವನ್ನು ಮಹಿಮೆಪಡಿಸಿರಿ. ಅನೇಕ ಹೋಟೆಲ್ಗಳಲ್ಲಿ ದೊರೆಯುವ ಸೇವೆಗನುಸಾರ ಟಿಪ್ಸ್ ನೀಡುವ ರೂಢಿಯಿದೆ.
◼ ಲಾಡ್ಜ್ಗಳು: (1) ದಯವಿಟ್ಟು ಅಗತ್ಯಕ್ಕಿಂತ ಹೆಚ್ಚು ರೂಮ್ಗಳನ್ನು ಬುಕ್ ಮಾಡಬೇಡಿ ಮತ್ತು ಅನುಮತಿಸಿದ್ದಕ್ಕಿಂತ ಹೆಚ್ಚು ಮಂದಿ ನಿಮ್ಮ ರೂಮ್ನಲ್ಲಿ ಉಳುಕೊಳ್ಳಬಾರದು. (2) ಬುಕ್ಕಿಂಗ್ ಅನ್ನು ರದ್ದುಗೊಳಿಸಬೇಕಾದಲ್ಲಿ ಕೂಡಲೆ ಅದನ್ನು ಲಾಡ್ಜ್ನವರಿಗೆ ತಿಳಿಸಿರಿ. (3) ಎಲ್ಲ ಸಾಮಾನನ್ನು ಸಿದ್ಧವಾಗಿಟ್ಟ ಬಳಿಕವೇ ಟ್ರಾಲಿಯನ್ನು ತೆಗೆದುಕೊಳ್ಳಿ ಮತ್ತು ಇತರರ ಉಪಯೋಗಕ್ಕಾಗಿ ಕೂಡಲೆ ಹಿಂದಿರುಗಿಸಿ. (4) ರೂಮಿನಲ್ಲಿ ಅಪ್ಪಣೆ ವಿನಃ ಅಡಿಗೆ ಮಾಡಬಾರದು. (5) ನಿಮ್ಮ ಕೋಣೆ ಶುಚಿ ಮಾಡುವವನಿಗೆ ಪ್ರತಿದಿನ ಟಿಪ್ಸ್ ಕೊಡಿರಿ. (6) ಲಾಡ್ಜ್ನ ಅತಿಥಿಗಳಿಗಾಗಿ ಉಚಿತವಾಗಿ ಸಿಗುವ ಉಪಹಾರ, ಕಾಫಿ ಅಥವಾ ಐಸ್ಕ್ಯೂಬ್ಗಳನ್ನು ದುರುಪಯೋಗಿಸಬೇಡಿ. (7) ಲಾಡ್ಜ್ ಸಿಬ್ಬಂದಿಯೊಂದಿಗೆ ವ್ಯವಹರಿಸುವಾಗಲೆಲ್ಲಾ ದೇವರಾತ್ಮದ ಫಲವನ್ನು ತೋರಿಸಿರಿ. ಅವರಿಗೆ ಅನೇಕ ಅತಿಥಿಗಳನ್ನು ನೋಡಿಕೊಳ್ಳಲಿಕ್ಕಿದೆ. ಆದ್ದರಿಂದ ನಾವು ಅವರೊಂದಿಗೆ ದಯೆ, ತಾಳ್ಮೆ ಮತ್ತು ವಿವೇಚನೆಯಿಂದ ನಡಕೊಂಡರೆ ಅವರದನ್ನು ಗಣ್ಯಮಾಡುವರು. (8) ಶಿಫಾರಸ್ಸು ಮಾಡಲ್ಪಟ್ಟಿರುವ ಲಾಡ್ಜಿಂಗ್ ಲಿಸ್ಟ್ನಲ್ಲಿರುವ ರೂಮ್ದರಗಳು ದಿನವೊಂದಕ್ಕೆ ತೆರಬೇಕಾದ ಪೂರ್ಣ ಬೆಲೆಯಾಗಿವೆ. ಇದರಲ್ಲಿ ತೆರಿಗೆಯು ಸೇರಿಲ್ಲ. ನೀವು ವಿನಂತಿಸದ ಅಥವಾ ಬಳಸದ ಯಾವುದಕ್ಕಾದರೂ ಹೆಚ್ಚು ಹಣವನ್ನು ನಿಮ್ಮ ಬಿಲ್ಗೆ ಹಾಕಿದ್ದಲ್ಲಿ ಅದನ್ನು ಕೊಡಬೇಡಿ ಮತ್ತು ಈ ವಿಷಯವನ್ನು ಅಧಿವೇಶನದ ರೂಮಿಂಗ್ ಡಿಪಾರ್ಟ್ಮೆಂಟ್ಗೆ ಆದಷ್ಟು ಬೇಗ ತಿಳಿಸಿರಿ. (9) ಹೋಟೆಲ್ ರೂಮ್ನ ಸಂಬಂಧದಲ್ಲಿ ಯಾವುದೇ ಸಮಸ್ಯೆ ಏಳುವಲ್ಲಿ ಅಧಿವೇಶನದಲ್ಲಿರುವಾಗಲೇ ರೂಮಿಂಗ್ ಡಿಪಾರ್ಟ್ಮೆಂಟ್ಗೆ ತಪ್ಪದೆ ತಿಳಿಸಿರಿ.
◼ ಸ್ವಯಂ ಸೇವೆ: ಸ್ವಯಂ ಸೇವಕರಾಗಿ ಸಹಾಯ ಮಾಡಿದರೆ ಅಧಿವೇಶನಕ್ಕೆ ಹಾಜರಾಗುವುದರಿಂದ ನಮಗೆ ಸಿಗುವ ಆನಂದವು ಇಮ್ಮಡಿಯಾಗುತ್ತದೆ. (ಅ. ಕಾ. 20:35) ಸ್ವಯಂ ಸೇವಕರಾಗಲು ನೀವು ಬಯಸುವಲ್ಲಿ ಸ್ವಯಂ ಸೇವಾ ಇಲಾಖೆಯನ್ನು ಸಂಪರ್ಕಿಸಿ. 16 ವರ್ಷದ ಕೆಳಗಿನವರು ಕೂಡ ಈ ಇಲಾಖೆಯಲ್ಲಿ ಕೆಲಸಮಾಡಬಹುದು. ಆದರೆ ಈ ಮಕ್ಕಳು ತಮ್ಮ ಹೆತ್ತವರ, ಪೋಷಕರ ಇಲ್ಲವೆ ಅವರ ಒಪ್ಪಿಗೆಯಿರುವ ಒಬ್ಬ ಪ್ರೌಢ ವ್ಯಕ್ತಿಯ ನಿರ್ದೇಶನದಡಿಯಲ್ಲಿ ಕೆಲಸಮಾಡುವರು.