ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು
ಭಾಗ 11: ಪುನರ್ಭೇಟಿಗಳನ್ನು ಮಾಡುವಂತೆ ವಿದ್ಯಾರ್ಥಿಗಳಿಗೆ ಸಹಾಯಮಾಡುವುದು
1 ಬೈಬಲ್ ವಿದ್ಯಾರ್ಥಿಯು ಸಾರುವ ಕೆಲಸದಲ್ಲಿ ಭಾಗವಹಿಸಲು ಆರಂಭಿಸುವಾಗ, ಸುವಾರ್ತೆಯಲ್ಲಿ ಆಸಕ್ತಿಯನ್ನು ತೋರಿಸುವಂಥ ಜನರನ್ನು ಅವನು ಭೇಟಿಯಾಗುತ್ತಾನೆ. ಪರಿಣಾಮಕಾರಿಯಾದ ಪುನರ್ಭೇಟಿಗಳನ್ನು ಮಾಡುವಂತೆ ಮತ್ತು ಕಂಡುಕೊಂಡ ಆಸಕ್ತಿಯನ್ನು ಬೆಳೆಸುವಂತೆ ನಾವು ಹೊಸ ಪ್ರಚಾರಕರಿಗೆ ಹೇಗೆ ಸಹಾಯಮಾಡಬಲ್ಲೆವು?
2 ಪುನರ್ಭೇಟಿಗಾಗಿ ಸಿದ್ಧತೆಯು ಪ್ರಥಮ ಭೇಟಿಯಲ್ಲಿಯೇ ಆರಂಭಗೊಳ್ಳುತ್ತದೆ. ವಿದ್ಯಾರ್ಥಿಯು ಯಾರೊಂದಿಗೆ ಮಾತಾಡುತ್ತಾನೊ ಅವರಲ್ಲಿ ಯಥಾರ್ಥ ಆಸಕ್ತಿಯನ್ನು ತೋರಿಸುವಂತೆ ಅವನನ್ನು ಉತ್ತೇಜಿಸಿರಿ. (ಫಿಲಿ. 2:4) ಮನೆಯವರ ಹೃದಯದಲ್ಲಿರುವ ವಿಚಾರವನ್ನು ಹೊರಗೆಳೆಯಲು, ಅವರ ಹೇಳಿಕೆಯನ್ನು ಗಮನಕೊಟ್ಟು ಆಲಿಸಲು ಮತ್ತು ಅವರಿಗೆ ಯಾವ ವಿಷಯಗಳು ಆಸಕ್ತಿಯನ್ನು ಉಂಟುಮಾಡುತ್ತವೆ ಎಂಬುದನ್ನು ಗುರುತಿಸಲು ವಿದ್ಯಾರ್ಥಿಗೆ ಪ್ರಗತಿಪರವಾಗಿ ತರಬೇತಿ ನೀಡಿರಿ. ಯಾರಾದರೂ ಆಸಕ್ತಿಯನ್ನು ತೋರಿಸುವಲ್ಲಿ, ಆ ಭೇಟಿಯ ಕುರಿತು ಉಪಯುಕ್ತಕರ ಮಾಹಿತಿಯನ್ನು ಬರೆದುಕೊಳ್ಳುವಂತೆ ಹೊಸ ಪ್ರಚಾರಕನಿಗೆ ತಿಳಿಸಿರಿ. ಮುಂದಿನ ಚರ್ಚೆಗಳಿಗೆ ಸಿದ್ಧತೆಯನ್ನು ಮಾಡಲು ಅವನಿಗೆ ಸಹಾಯಮಾಡುವಾಗ ಆ ಮಾಹಿತಿಯನ್ನು ಉಪಯೋಗಿಸಿರಿ.
3 ಹಿಂದಿರುಗಿ ಹೋಗಲು ತಯಾರಿಮಾಡುವುದು: ಆರಂಭದ ಭೇಟಿಯನ್ನು ಪುನರ್ವಿಮರ್ಶಿಸಿರಿ ಮತ್ತು ಮನೆಯವನ ಆಸಕ್ತಿಯನ್ನು ಕೆರಳಿಸುವಂಥ ರಾಜ್ಯದ ಸಂದೇಶದ ಒಂದು ಅಂಶವನ್ನು ಹೇಗೆ ಆರಿಸಿಕೊಳ್ಳುವುದು ಎಂಬುದನ್ನು ವಿದ್ಯಾರ್ಥಿಗೆ ತೋರಿಸಿಕೊಡಿ. (1 ಕೊರಿಂ. 9:19-23) ಅಧ್ಯಯನಕ್ಕಾಗಿ ಉಪಯೋಗಿಸುವ ಸಾಹಿತ್ಯದಲ್ಲಿರುವ ಯಾವುದಾದರೊಂದು ಪ್ಯಾರಗ್ರಾಫ್ನೊಂದಿಗೆ ಒಂದು ಬೈಬಲ್ ವಚನವನ್ನು ಎತ್ತಿತೋರಿಸುವ ಒಂದು ಸಂಕ್ಷಿಪ್ತ ನಿರೂಪಣೆಯನ್ನು ಒಟ್ಟಿಗೆ ತಯಾರಿಸಿರಿ. ಮಾತ್ರವಲ್ಲದೆ, ಚರ್ಚೆಯ ಕೊನೆಯಲ್ಲಿ ಕೇಳಸಾಧ್ಯವಿರುವ ಒಂದು ಪ್ರಶ್ನೆಯನ್ನು ತಯಾರಿಸಿರಿ. ಇದು ಮುಂದಿನ ಪುನರ್ಭೇಟಿಗೆ ಅಡಿಪಾಯವನ್ನು ಹಾಕಲು ಸಹಾಯಮಾಡುತ್ತದೆ. ಪ್ರತಿಯೊಂದು ಪುನರ್ಭೇಟಿಯಲ್ಲಿ ದೇವರ ವಾಕ್ಯದ ಕುರಿತಾದ ಮನೆಯವನ ಜ್ಞಾನವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಹೊಸ ಪ್ರಚಾರಕನಿಗೆ ತೋರಿಸಿಕೊಡಿ.
4 ಪುನರ್ಭೇಟಿಯ ಸಮಯದಲ್ಲಿ ಮಾತಾಡಲು ಒಂದು ಸರಳ ಪೀಠಿಕೆಯನ್ನು ವಿದ್ಯಾರ್ಥಿಗೆ ತಯಾರಿಸಿಕೊಡುವುದು ಕೂಡ ಸಹಾಯಕರವಾಗಿದೆ. ಮನೆಯವನಿಗೆ ವಂದಿಸಿದ ಅನಂತರ, ಅವನು ಹೀಗೆ ಹೇಳಬಹುದು: “ಹಿಂದಿನ ಬಾರಿ ನಿಮ್ಮೊಂದಿಗೆ ಮಾತಾಡಿ ನನಗೆ ಬಹಳ ಸಂತೋಷವಾಯಿತು ಮತ್ತು [ಮಾತಾಡುವ ವಿಷಯವನ್ನು ತಿಳಿಸಿ] ಕುರಿತಾಗಿ ಇನ್ನೂ ಹೆಚ್ಚಿನ ಬೈಬಲ್ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಂದಿದ್ದೇನೆ.” ಒಂದುವೇಳೆ ಪುನರ್ಭೇಟಿಯ ಸಮಯದಲ್ಲಿ ಬೇರೊಬ್ಬ ವ್ಯಕ್ತಿಯನ್ನು ಭೇಟಿಯಾಗುವುದಾದರೆ ಆಗೇನು ಮಾತಾಡಬೇಕೆಂಬುದನ್ನು ಸಹ ಹೊಸ ಪ್ರಚಾರಕನಿಗೆ ಕಲಿಸಿರಿ.
5 ತಪ್ಪದೆ ಹಿಂದಿರುಗಿರಿ: ಯಾರೆಲ್ಲ ಆಸಕ್ತಿಯನ್ನು ತೋರಿಸುತ್ತಾರೊ ಅವರನ್ನು ತಪ್ಪದೆ ಪುನಃ ಭೇಟಿಯಾಗುವ ವಿಷಯದಲ್ಲಿ ಒಂದು ಉತ್ತಮ ಮಾದರಿಯನ್ನಿಡುವಂತೆ ವಿದ್ಯಾರ್ಥಿಯನ್ನು ಉತ್ತೇಜಿಸಿರಿ. ಜನರನ್ನು ಮನೆಯಲ್ಲಿ ಕಂಡುಕೊಳ್ಳಲು ಪಟ್ಟುಹಿಡಿದು ಹಿಂದಿರುಗುವ ಅಗತ್ಯವಿರಬಹುದು. ಪುನರ್ಭೇಟಿಗೆ ಸಮಯವನ್ನು ಹೇಗೆ ನಿಶ್ಚಯಿಸಿಕೊಳ್ಳುವುದು ಎಂಬುದನ್ನು ವಿದ್ಯಾರ್ಥಿಗೆ ಕಲಿಸಿರಿ ಮತ್ತು ಮಾತುಕೊಟ್ಟ ಪ್ರಕಾರವೇ ಹಿಂದಿರುಗುವ ಅಗತ್ಯವನ್ನು ಮನಗಾಣಲು ಅವನಿಗೆ ಸಹಾಯಮಾಡಿರಿ. (ಮತ್ತಾ. 5:37) ಕುರಿಸದೃಶ ಜನರನ್ನು ಹುಡುಕುವಾಗ ಮತ್ತು ಅವರ ಆಸಕ್ತಿಯನ್ನು ಬೆಳೆಸುವಾಗ ದೀನತೆ, ಪರಿಗಣನೆ ಮತ್ತು ಗೌರವವನ್ನು ತೋರಿಸುವಂತೆ ಹೊಸ ಪ್ರಚಾರಕರಿಗೆ ತರಬೇತಿ ನೀಡಿರಿ.—ತೀತ 3:2.