ದೇವಪ್ರಭುತ್ವಾತ್ಮಕ ಸಾಧನಸಂಪತ್ತಿಗಾಗಿ ಗಣ್ಯತೆಯನ್ನು ತೋರಿಸಿರಿ
1 ದೇವಾಲಯವನ್ನು ದುರಸ್ತಿಗೊಳಿಸಲಿಕ್ಕಾಗಿ ಏರ್ಪಾಡುಗಳನ್ನು ಮಾಡುತ್ತಿರುವಾಗ, ರಾಜ ಯೋಷೀಯನು ಆ ಕೆಲಸಕ್ಕಾಗಿ ನೇಮಿಸಲ್ಪಟ್ಟವರನ್ನು ಶ್ಲಾಘಿಸುತ್ತಾ ಹೀಗಂದನು: “ಅವರು ನಂಬಿಗಸ್ತರಾಗಿರುವದರಿಂದ ಅವರ ವಶಕ್ಕೆ ಕೊಡಲ್ಪಡುವ ಹಣದ ಲೆಕ್ಕವನ್ನು ಕೇಳಬಾರದು.” (ಓರೆ ಅಕ್ಷರಗಳು ನಮ್ಮವು.) (2 ಅರ. 22:3-7) ಪವಿತ್ರ ವಿಷಯಗಳಿಗಾಗಿ ಆ ಪುರುಷರಿಗಿದ್ದ ಗಣ್ಯತೆಯು, ಅವರು ತಮಗೆ ಒಪ್ಪಿಸಲ್ಪಟ್ಟಿದ್ದ ಸಾಧನಸಂಪತ್ತುಗಳನ್ನು ಹೇಗೆ ಉಪಯೋಗಿಸಿದರು ಎಂಬುದರಲ್ಲಿ ವ್ಯಕ್ತವಾಗುತ್ತಿತ್ತು. ಇಂದು, ನಾವು ದೇವರ ಸುವಾರ್ತೆಯ ಪವಿತ್ರ ಸೇವೆಯಲ್ಲಿ ಭಾಗವಹಿಸುತ್ತಿರುವಾಗ, ನಾವು ಕೂಡ ತದ್ರೀತಿಯಲ್ಲಿ ನಮಗೆ ಕೊಡಲ್ಪಟ್ಟಿರುವ ಸಾಧನಸಂಪತ್ತಿನ ಉಪಯೋಗದಲ್ಲಿ ನಂಬಿಗಸ್ತಿಕೆಯನ್ನು ತೋರಿಸಬೇಕು.
2 ಕ್ಷೇತ್ರ ಸೇವೆಯಲ್ಲಿ: ನಮ್ಮ ಪ್ರಕಾಶನಗಳಲ್ಲಿ ಅಡಕವಾಗಿರುವ ಅತಿ ಮುಖ್ಯವಾದ ಸಂದೇಶಕ್ಕಾಗಿರುವ ಗಣ್ಯತೆ ಮತ್ತು ಅವುಗಳನ್ನು ಉತ್ಪಾದಿಸುವುದರಲ್ಲಿ ಒಳಗೂಡಿರುವ ಖರ್ಚಿನ ಅರಿವು, ನಾವು ಅವುಗಳನ್ನು ಅತಿ ಅಮೂಲ್ಯವಾಗಿ ಪರಿಗಣಿಸುವಂತೆ ಮಾಡುತ್ತದೆ. ನಾವು ಸಾಹಿತ್ಯವನ್ನು ಗೊತ್ತುಗುರಿಯಿಲ್ಲದೆ, ಯಾರು ಬೈಬಲಿನ ಸಂದೇಶಕ್ಕೆ ಯಥಾರ್ಥ ರೀತಿಯಲ್ಲಿ ಯಾವುದೇ ಗಣ್ಯತೆಯನ್ನು ತೋರಿಸುವುದಿಲ್ಲವೋ ಅಂಥವರಿಗೆ ನೀಡಬಾರದು. ಒಬ್ಬ ವ್ಯಕ್ತಿಯು ಸುವಾರ್ತೆಯಲ್ಲಿ ಕೊಂಚ ಆಸಕ್ತಿಯನ್ನು ತೋರಿಸುವುದಾದರೆ, ಅವನಿಗೆ ಬೇರಾವುದೇ ಸಾಹಿತ್ಯವನ್ನು ಕೊಡುವ ಬದಲು ಒಂದು ಟ್ರ್ಯಾಕ್ಟನ್ನು ಕೊಡಬಹುದು.
3 ಸಾಹಿತ್ಯವನ್ನು ವಿತರಿಸುವಾಗ, ಅದಕ್ಕಿರುವ ಮೌಲ್ಯಕ್ಕೆ ಗಣ್ಯತೆಯನ್ನು ತೋರಿಸುವ ರೀತಿಯಲ್ಲಿ ಹಾಗೆ ಮಾಡಿರಿ. ಎಲ್ಲಿ ಅವು ಎಲ್ಲ ಕಡೆ ಚೆಲ್ಲಾಪಿಲ್ಲಿಯಾಗಿ ಅತ್ತಿತ್ತ ಹಾರಾಡಬಹುದೋ ಅಂಥ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳನ್ನು ಬಿಟ್ಟುಬರಬೇಡಿ. ಸಾಹಿತ್ಯವು ಉಪಯೋಗಿಸಲ್ಪಡದೇ ವ್ಯರ್ಥವಾಗುವುದನ್ನು ತಪ್ಪಿಸಲಿಕ್ಕಾಗಿ, ಹೆಚ್ಚಿನ ಸಾಹಿತ್ಯವನ್ನು ಪಡೆದುಕೊಳ್ಳುವ ಮುನ್ನ ನಿಮ್ಮ ಮನೆಯಲ್ಲಿ ಎಷ್ಟು ಸಾಹಿತ್ಯವಿದೆ ಎಂಬುದರ ಕುರಿತು ಒಂದು ಪಟ್ಟಿಯನ್ನು ಮಾಡಿಕೊಳ್ಳಿರಿ. ಯಾವಾಗಲೂ ನಿಮ್ಮ ಬಳಿ ಪತ್ರಿಕೆಗಳ ಪ್ರತಿಯೊಂದು ಸಂಚಿಕೆಯ ಪ್ರತಿಗಳು ಉಳಿಯುವುದಾದರೆ, ನಿಮ್ಮ ಆರ್ಡರ್ ಅನ್ನು ಕಡಿಮೆಗೊಳಿಸುವುದರ ಬಗ್ಗೆ ಯೋಚಿಸಿರಿ.
4 ವೈಯಕ್ತಿಕ ಉಪಯೋಗಕ್ಕಾಗಿ ಪ್ರಕಾಶನಗಳು: ನಾವು ಡೀಲಕ್ಸ್ ಬೈಬಲ್ಗಳು, ರೆಫರೆನ್ಸ್ ಬೈಬಲ್ಗಳು, ಮತ್ತು ಇತರ ದೊಡ್ಡ ಪ್ರಕಾಶನಗಳು, ಅಂದರೆ ಕನ್ಕಾರ್ಡನ್ಸ್, ವಿಷಯಸೂಚಿ, ಒಳನೋಟ ಸಂಪುಟಗಳು, ಮತ್ತು ಘೋಷಕರು ಎಂಬ ಪುಸ್ತಕಗಳನ್ನು (ಈ ಪುಸ್ತಕಗಳು ಕನ್ನಡದಲ್ಲಿ ಲಭ್ಯವಿಲ್ಲ.) ಇನ್ನು ಮುಂದೆ ಆರ್ಡರ್ ಮಾಡಲು ಸಾಧ್ಯವಿಲ್ಲದಿರುವುದರಿಂದ, ಇವು ಎಂತಹ ನಿಧಿಗಳಾಗಿವೆ ಎಂಬುದನ್ನು ನಾವು ಈಗ ಪೂರ್ಣವಾಗಿ ಗ್ರಹಿಸುತ್ತೇವೆ. ನೀವು ಇವುಗಳ ಪ್ರತಿಗಳನ್ನು ನಿಮ್ಮ ಲೈಬ್ರರಿಯಲ್ಲಿ ಹೊಂದಿರುವ ಸುಯೋಗವುಳ್ಳವರಾಗಿರುವಲ್ಲಿ, ಅವುಗಳನ್ನು ಜೋಪಾನವಾಗಿ ನೋಡಿಕೊಳ್ಳಿರಿ. ಇತರರು, ರಾಜ್ಯ ಸಭಾಗೃಹದ ಲೈಬ್ರರಿಯಲ್ಲಿ ಇಡಲ್ಪಟ್ಟಿರುವ ಪ್ರತಿಗಳನ್ನು ಉಪಯೋಗಿಸಬೇಕಾಗಬಹುದು. ಇವುಗಳನ್ನು ಸುಸ್ಥಿತಿಯಲ್ಲಿ ಇಡುವುದರಲ್ಲಿ ಮತ್ತು ಇವು ಕಳೆದುಹೋಗದಂತೆ ನೋಡಿಕೊಳ್ಳುವುದರಲ್ಲಿ ಎಲ್ಲರೂ ಸಹಕರಿಸಬೇಕು.
5 ಪ್ರಕಾಶನಗಳ ನಿಮ್ಮ ವೈಯಕ್ತಿಕ ಪ್ರತಿಗಳಲ್ಲಿ ನಿಮ್ಮ ಹೆಸರು ಮತ್ತು ವಿಳಾಸವನ್ನು ಯಾವಾಗಲೂ ತಪ್ಪದೇ ಬರೆಯುತ್ತೀರೋ? ಇದು ಕಳೆದುಹೋಗಿರುವ ಪ್ರಕಾಶನಗಳಿಗಾಗಿ ಬದಲಿಗಳನ್ನು ಪಡೆದುಕೊಳ್ಳುವ ಜರೂರಿಯನ್ನು ಕಡಿಮೆಗೊಳಿಸುವುದರಲ್ಲಿ ಸಹಾಯಕರವಾಗಿದೆ. ನೀವು ಒಂದು ಗೀತೆ ಪುಸ್ತಕವನ್ನೋ, ಬೈಬಲನ್ನೋ, ಅಥವಾ ಒಂದು ಅಧ್ಯಯನ ಪ್ರಕಾಶನವನ್ನೋ ಕಳೆದುಕೊಳ್ಳುವಲ್ಲಿ, ಪ್ರಾಯಶಃ ರಾಜ್ಯ ಸಭಾಗೃಹದಲ್ಲಿ ಅಥವಾ ಸಮ್ಮೇಳನದ ನಿವೇಶನದಲ್ಲಿ ಶೇಖರಿಸಲ್ಪಟ್ಟಿರುವ ಕಳೆದುಹೋದ ವಸ್ತುಗಳಲ್ಲಿ ನೀವದನ್ನು ಕಂಡುಕೊಳ್ಳಬಹುದು.—ಲೂಕ 15:8, 9.
6 ನಮ್ಮ ಸಾಹಿತ್ಯದ ವಿವೇಕಪ್ರದ ಉಪಯೋಗವನ್ನು ಮಾಡಲು ನಾವೆಲ್ಲರೂ ಪ್ರಯಾಸಪಡೋಣ. ಇದು ಯೆಹೋವನು ನಮಗೆ ಒಪ್ಪಿಸಿರುವ ರಾಜ್ಯದ ಸಾಧನಸಂಪತ್ತನ್ನು ಉಪಯೋಗಿಸುವುದರಲ್ಲಿ ನಂಬಿಗಸ್ತಿಕೆಯನ್ನು ಪ್ರದರ್ಶಿಸುವ ಒಂದು ವಿಧವಾಗಿದೆ.—ಲೂಕ 16:10.