ಅವರು ನಂಬಿಗಸ್ತಿಕೆಯ ಮಾದರಿಯನ್ನಿಟ್ಟಿದ್ದಾರೆ
1 ಇಸವಿ 1937ರಲ್ಲಿ ಪೂರ್ಣಸಮಯದ ಸೇವೆಯ ಒಂದು ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಲಾಯಿತು. ಅದು ವಿಶೇಷ ಪಯನೀಯರರ ಚಟುವಟಿಕೆಯೇ. ಕ್ರೈಸ್ತ ಶುಶ್ರೂಷೆಯಲ್ಲಿ ಅನುಭವವಿದ್ದ ಅರ್ಹ ಸ್ತ್ರೀಪುರುಷರು ಸಂಘಟನೆಯು ನಿರ್ದೇಶಿಸಿದ ಸ್ಥಳದಲ್ಲೆಲ್ಲಾ ಸೇವೆಸಲ್ಲಿಸಲು ಇಚ್ಛಾಪೂರ್ವಕವಾಗಿ ನೇಮಕಗಳನ್ನು ಸ್ವೀಕರಿಸಿದರು. ದಶಕಗಳ ನಂತರ ಈಗಲೂ, ವಿಶೇಷ ಪಯನೀಯರರು ಅನುಸರಿಸಲು ಯೋಗ್ಯವಾದ ನಂಬಿಗಸ್ತಿಕೆಯ ಮಾದರಿಯನ್ನಿಡುತ್ತಾ ಇದ್ದಾರೆ.—ಇಬ್ರಿ. 6:12.
2 ಮುಂದಾಳುತ್ವವನ್ನು ವಹಿಸಿದರು: ಆರಂಭದಲ್ಲಿ ವಿಶೇಷ ಪಯನೀಯರರು ಜನರ ಮನೆಯ ಬಳಿ ಸುಲಭವಾಗಿ ಒಯ್ಯಾಲಾಗುವಂತಹ ಫೊನೊಗ್ರಾಫ್ಗಳನ್ನು ಉಪಯೋಗಿಸುವ ಮೂಲಕ ಸಾರುವ ಕೆಲಸದಲ್ಲಿ ಮುಂದಾಳುತ್ವವನ್ನು ವಹಿಸಿದರು. ಪುನರ್ಭೇಟಿಗಳಲ್ಲಿ ಬೈಬಲ್ ಚರ್ಚೆಗಳಿಗೆ ಆಧಾರವಾಗಿ ಅವರು ರೆಕಾರ್ಡಿಂಗ್ಗಳನ್ನು ಸಹ ಉಪಯೋಗಿಸಿದರು. ಈಗಾಗಲೇ ಸಭೆಗಳು ಸ್ಥಾಪಿತವಾಗಿದ್ದಂತಹ ದೊಡ್ಡ ನಗರಗಳಲ್ಲಿ ಹೀಗೆ ಮಾಡಲಾಯಿತು. ತದನಂತರ ಹೆಚ್ಚು ರಾಜ್ಯ ಘೋಷಕರು ಅಗತ್ಯವಿದ್ದ ಸ್ಥಳಗಳಿಗೆ ಅವರನ್ನು ಕಳುಹಿಸಲಾಯಿತು. ಎಲ್ಲ ಆಸಕ್ತ ಜನರನ್ನು ಅವರು ಪುನರ್ಭೇಟಿ ಮಾಡಿ ಬೈಬಲ್ ಅಧ್ಯಯನಗಳನ್ನು ನಡೆಸಿದರು. ಅವರ ಶ್ರದ್ಧಾಪೂರ್ವಕ ಪ್ರಯತ್ನಗಳ ಫಲಿತಾಂಶವಾಗಿ ನೂರಾರು ಹೊಸ ಸಭೆಗಳು ಸ್ಥಾಪಿಸಲ್ಪಟ್ಟವು. ನಾವಿಂದು ನೋಡುತ್ತಿರುವ ಸಂಘಟನೆಯ ಮಹತ್ತರವಾದ ವಿಸ್ತರಣೆಯಲ್ಲಿ ಅವರ ಅವಿರತ ಸೌವಾರ್ತಿಕ ಕೆಲಸವು ಅಧಿಕ ನೆರವನ್ನು ನೀಡಿದೆ. (ಯೆಶಾ. 60:22) “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸುವಾರ್ತೆಯನ್ನು ಪ್ರಸರಿಸುವ ಕಾರ್ಯದಲ್ಲಿ ವಿಶೇಷ ಪಯನೀಯರರು ಪ್ರಮುಖ ಪಾತ್ರವಹಿಸುವುದನ್ನು ಇಂದಿಗೂ ಮುಂದುವರಿಸುತ್ತಿದ್ದಾರೆ.—ಕೊಲೊ. 1:23.
3 ಅನುಕರಣೆಗೆ ಯೋಗ್ಯರು: ಕೆಲವು ವಿಶೇಷ ಪಯನೀಯರರು ಅನೇಕ ದಶಕಗಳಿಂದ ಪೂರ್ಣ ಸಮಯದ ಶುಶ್ರೂಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ವರ್ಷಗಳು ದಾಟಿದಂತೆ ವಿಭಿನ್ನ ಪರಿಸ್ಥಿಗಳ ಕೆಳಗೆ ಈ ನಿಷ್ಠಾವಂತ ಸ್ತ್ರೀಪುರುಷರ ನಂಬಿಕೆಯು ಶೋಧಿತವಾಗಿದೆ. (1 ಪೇತ್ರ 1:6, 7) ವಿಶೇಷ ಅಗತ್ಯತೆಯ ಸ್ಥಳಗಳಲ್ಲಿ ಸೇವೆಸಲ್ಲಿಸಲು ಅವರು ಭೌತಿಕ ಸೌಕರ್ಯಗಳನ್ನು ತ್ಯಾಗಮಾಡಲು ಸಹ ಸಿದ್ಧಮನಸ್ಸನ್ನು ತೋರಿಸಿದ್ದಾರೆ. ಕೆಲವರು ಈಗ ವೃದ್ಧರಾಗಿದ್ದಾರೆ ಮತ್ತು ಅವರು ಆರೋಗ್ಯ ಸಮಸ್ಯೆಯನ್ನು ಅಥವಾ ಇತರ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. (2 ಕೊರಿಂ. 4:16, 17) ಅಂಥವರಲ್ಲಿ ಅನೇಕರು ಭಾರತದಲ್ಲಿ ಆರ್ಥಿಕ ಸ್ಥಿತಿಗತಿಯಲ್ಲಾದ ಬದಲಾವಣೆಯಿಂದಾಗಿ ತಮ್ಮ ಅಮೂಲ್ಯ ಸೇವಾ ಸುಯೋಗವನ್ನು ಬಿಟ್ಟುಬಿಡಬೇಕಾಯಿತು. ಆದರೂ, ಅವರು ‘ಮುಪ್ಪಿನಲ್ಲಿಯೂ ಫಲಿಸುತ್ತಿದ್ದಾರೆ.’ (ಕೀರ್ತ. 92:14) ಅವರು ಯೆಹೋವನ ಮೇಲೆ ತಮ್ಮ ಭರವಸೆಯನ್ನಿಟ್ಟು ಆತನ ಆರ್ಶೀವಾದಗಳನ್ನು ಅನುಭವಿಸುತ್ತಿದ್ದಾರೆ.—ಕೀರ್ತ. 34:8; ಜ್ಞಾನೋ. 10:22.
4 ವಿಶೇಷ ಪಯನೀಯರರು ನಮ್ಮ ಮನಃಪೂರ್ವಕ ಪ್ರಶಂಸೆಗೆ ನಿಜವಾಗಿಯೂ ಅರ್ಹರು. ನಿಮ್ಮ ಸಭೆಯಲ್ಲಿ ವಿಶೇಷ ಪಯನೀಯರರು ಇರುವುದಾದರೆ ಅಥವಾ ಈ ಮುಂಚೆ ವಿಶೇಷ ಪಯನೀಯರರಾಗಿದ್ದವರು ನಿಮ್ಮ ಸಭೆಗೆ ನೇಮಿಸಲ್ಪಟ್ಟಿರುವುದಾದರೆ, ಅವರೊಂದಿಗೆ ಸಮಯವನ್ನು ವ್ಯಯಿಸುವ ಅವಕಾಶವನ್ನು ಸದುಪಯೋಗಿಸಿಕೊಳ್ಳಿರಿ ಮತ್ತು ಅವರ ಅನುಭವದಿಂದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿರಿ. ನಂಬಿಗಸ್ತ ರಾಜ್ಯ ಘೋಷಕರಾಗಿ ಅವರು ಸಲ್ಲಿಸಿದ ಸೇವೆಗೋಸ್ಕರ ಗಣ್ಯತೆಯನ್ನು ವ್ಯಕ್ತಪಡಿಸಿರಿ. ಅವರ ಸ್ಥಿರಚಿತ್ತತೆಯಿಂದ ಬಲವನ್ನು ಪಡೆದುಕೊಳ್ಳಿರಿ. ಅವರ ನಂಬಿಕೆಯನ್ನು ಅನುಸರಿಸುವ ಎಲ್ಲರೂ ಅವರಂತೆಯೇ ಯೆಹೋವನ ಅನುಗ್ರಹವನ್ನೂ ಆಶೀರ್ವಾದಗಳನ್ನೂ ಪಡೆದುಕೊಳ್ಳುವರು, ಏಕೆಂದರೆ “ಸತ್ಯದಿಂದ” ಇಲ್ಲವೆ ನಂಬಿಗಸ್ತಿಕೆಯಿಂದ “ನಡೆದುಕೊಳ್ಳುವವರು ಆತನಿಗೆ ಆನಂದ ತರುತ್ತಾರೆ.”—ಜ್ಞಾನೋ. 12:22.